“ಕನ್ನಡ ಸಾಹಿತ್ಯ ಕ್ಷೇತ್ರದ ಬರಹಗಾರ್ತಿಯರು ಕುವೆಂಪು ಅವರ ಸಾಹಿತ್ಯವನ್ನು ಯಾವ ಯಾವ ಭಿನ್ನ ನಿಲುವುಗಳಿಂದ ನೋಡಬಹುದು ಅಥವಾ ಅವರಿಂದ ಪಡೆದ ಪ್ರಭಾವ, ಪ್ರೇರಣೆಗಳೇನು, ಇಲ್ಲವೇ ಒಟ್ಟಾರೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕುವೆಂಪು ಅವರ ಸಾಹಿತ್ಯಕ್ಕೆ ಮಹಿಳೆಯರು ನೀಡುವ ಸ್ಥಾನ ಯಾವುದು? ಎನ್ನುವುದಕ್ಕೆ ಈ ‘ಕುವೆಂಪು: ಮಹಿಳಾ ಮಂಥನ’ ಕಾರ್ಯಕ್ರಮದಲ್ಲಿ ವಿಶ್ಲೇಷಿಸುವುದು ಈ ಎರಡು ದಿನ ಚಿಂತನ ಸಮಾವೇಶದ ಮುಖ್ಯ ಉದ್ದೇಶ. ಅದಕ್ಕೆ ಕುವೆಂಪು ಅವರ ಯಾವುದಾದರೂ ಸಾಹಿತ್ಯ ಪ್ರಕಾರ ಅಥವಾ ಬರಹದ ಭಾಗವನ್ನು ಆಯ್ಕೆ ಮಾಡಿಕೊಂಡು ಕಿರು ಟಿಪ್ಪಣಿ  ತಯಾರಿಸಿಕೊಂಡು ಬರಬೇಕು” ಎಂದು ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರದಿಂದ ಪತ್ರ ಬಂದಾಗ ನಾನು ಯೋಚಿಸುವಂತಾಯ್ತು.

ಯಾಕೆಂದರೆ ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯವನ್ನು ಯಾವ ಅಕಾಡೆಮಿಕ್‌ ಹಿನ್ನಲೆಯೂ ಇಲ್ಲವೇ ಕೇವಲ ಸಾಹಿತ್ಯದ ಮೇಲಿನ ಪ್ರೀತಿಯಿಂದ ನನ್ನ ಖುಷಿಗಾಗಿ ಇಷ್ಟವಾದದ್ದನ್ನ, ಇಷ್ಟ ಬಂದ ರೀತಿಯಲ್ಲಿ ಓದ್ತಾ ಬಂದವಳು. ಯಾವುದನ್ನೂ ಇಷ್ಟೇ ಹೀಗೇ ಎಂದು ಸ್ಪಷ್ಟೀಕರಿಸಿ, ಪ್ರಮಾಣೀಕರಿಸೋ ಅವಶ್ಯಕತೆ ನನಗೆ ಬಂದಿಲ್ಲ. ಅದು ಅಕಾಡೆಮಿಕ್ ದೃಷ್ಟಿಯಲ್ಲಿ ನನ್ನ ಮಿತಿ. ಆದರೆ, ಮೂಲತಃ ನಾನೊಬ್ಬ ಕವಿಯಾದ್ದರಿಂದ ಅದು ನನ್ನ ದೃಷ್ಟಿಕೋನವನ್ನು ವಿಸ್ತರಿಸುವ, ಬಹುತ್ವವನ್ನು ಒಳಗೊಳ್ಳುವ ಸಾಧ್ಯತೆಯೂ ಇರಬಹುದು. ಹೀಗಾಗಿ ಕುವೆಂಪು ಸಾಹಿತ್ಯದ ಕುರಿತು ಅಕಾಡೆಮಿಕ್ ನೆಲೆಗಳಲ್ಲೇ ಇಲ್ಲಿ ಹೆಚ್ಚು ಚರ್ಚೆ ಆಗುವುದರಿಂದ ಕುವೆಂಪು ನನ್ನ ಮೇಲೆ ಬೀರಿದ ಪ್ರಭಾವದ ಕುರಿತು ಏನು ಹೇಳಲಿ? ಎಂಬ ಆತಂಕ ನನಗಿದೆ.

ಹಾಗೇ ಕುವೆಂಪು ಅವರದಿರಬಹುದು ಅಥವಾ ಬೇರೆ ಯಾರೇ ಕವಿಗಳ ಕವಿತೆಗಳಿರಬಹುದು ಅದನ್ನು ಪ್ರವೇಶಿಸುವುದಕ್ಕೆ ಎರಡು ಹಂತಗಳಿವೆ ಎಂದು ನನ್ನ ಭಾವನೆ. ಮೊದಲ ಹಂತ ಸೃಹನ ಮೂಲಕ ಮೂಲಕ ಕವಿತೆಯನ್ನು ‘ಅನುಭವಿಸುವುದು’. ಎರಡನೆಯ ಹಂತದಲ್ಲಿ ವಿಮರ್ಶಾತ್ಮಕವಾಗಿ ಕವಿತೆಯನ್ನು ‘ವಿಶ್ಲೇಷಿಸಿಕೊಳ್ಳುವುದು’. ಬಹಳಷ್ಟು ಬಾರಿ ನಾವು ಮೊದಲ ಹಂತವನ್ನು ಪ್ರವೇಶಿಸದೇ ಎರಡನೆಯ ಹಂತಕ್ಕೆ ನುಗ್ಗಿ ಬಿಡುತ್ತೇವೆ. ಆಗ ಕವಿತೆಯನ್ನು ನಿಜವಾದ ರಸಾನುಭೂತಿಯಿಂದ, ಸಹಜತೆಯಿಂದ ಅನುಭವಿಸಲು ಸಾಧ್ಯವಾಗುವುದಿಲ್ಲ. ಈ ಮೊದಲ ಹಂತದಲ್ಲಿ ತೆರೆದ ಮನಸ್ಸಿನ ಮೂಲಕ ಕವಿತೆಯನ್ನು ಪರಿಭಾವಿಸುವಂತಹ, ಕವಿತೆಯಲ್ಲಿ ಆವರಿಸಿರುವ ಭಾವನೆ ಸಹೃದಯದ ಮನಸ್ಸಿನಲ್ಲಿ ಬೆಳೆಯುವಂತಹ ಸಾಧ್ಯತೆಗಳಿರುತ್ತದೆ. ಕವಿತೆಯನ್ನೂ ಮೀರಿದ ಸಹೃದಯನ ಮನಸ್ಸಿನಲ್ಲಿ ಬೆಳೆಯುವಂತಹ ಸಾಧ್ಯತೆಗಳಿರುತ್ತದೆ. ಕವಿತೆಯನ್ನೂ ಮೀರಿದ ಅನೂಹ್ಯ ಹೊಳಹುಗಳನ್ನು, ಧ್ಯಾನಸ್ಥ ಸ್ಥಿತಿಯನ್ನು ಪಡೆಯುವುದಕ್ಕೆ ಸಾಧ್ಯವಿರುತ್ತದೆ. ಒಂದು ಸಂಗೀತವನ್ನು, ಒಂದು ನೃತ್ಯವನ್ನು, ಒಂದು ಚಿತ್ರವನ್ನು ನಾವು ಮೊದಲಿಗೆ ಅನುಭವಿಸುತ್ತೇವೆ.

ಅನೂಹ್ಯ ಸಾಧ್ಯತೆಗಳೆಡೆಗೆ ವಿಸ್ತರಿಸಿಕೊಳ್ಳುತ್ತೇವೆ. ಅಂತಹ ಆಧ್ಯಾತ್ಮ ಕಾವ್ಯದಿಂದಲೂ ಸಾಧ್ಯವಿದೆ ಮತ್ತು ಕವಿತೆಯೊಮದು ನಮ್ಮನ್ನು ಪ್ರಭಾವಿಸುವುದು ಕೂಡ ಆಗಲೇ. ಇದು ಕವಿತೆಯೊಂದಿಗಿನ ಹೃದಯ ಸಂವಾದ. ಈ ಹಂತವನ್ನು ನಾವು ನಿರಾಕರಿಸಿದರೆ ಯಾವ ಕವಿತೆಯೂ ಮನಸ್ಸನ್ನು ತಟ್ಟುವುದಿಲ್ಲ. ಮುಟ್ಟುವುದಿಲ್ಲ. ಪ್ರಭಾವಿಸುವುದು ದೂರವೇ ಉಳಿಯಿತು. ಹೊರಗಿನ ಯಾವ ಕೃತಕ ಆಮಿಷಗಳೂ ಸಹಜವಾಗಿ ಅರಲುವ ನಮ್ಮ ನೈಜ ಸಂವೇದನೆಗಳನ್ನು ಮುರುಟಿಸಬಾರದು. ಈ ಸೂಕ್ಷ್ಮತೆಯನ್ನು ನಾವು ಕಳೆದುಕೊಳ್ಳಬಾರದು ಎನ್ನುವ ಕಾಳಜಿ ನನ್ನದು. ಹಾಗೆಂದು ನಾನು ಬೌದ್ಧಿಕ, ವೈಚಾರಿಕ ನೆಲೆಗಳನ್ನು ಖಂಡಿತಾ ನಿರಾಕರಿಸುತ್ತಿಲ್ಲ. ಕವಿತೆಯ ಈ ಮತ್ತೊಂದು ಆಯಾಮದಲ್ಲಿ ವಿಮರ್ಶೆಯೊಂದಿಗೆ ವಿಶ್ಲೇಷಣೆ ಖಂಡಿತಾ ನಡೆಯಬೇಕು. ಅದು ಬೌದ್ಧಿಕ ತರ್ಕದ ನಂತರದ ಹಂತ. ಕವಿತೆಯೊಂದಿಗೆ ಮೊದಲ ಹಂತದಲ್ಲಿ ಒಂದು ಹೃದಯ ಸಂವಾದ, ಎರಡನೆಯ ಹಂತದಲ್ಲಿ ಬೌದ್ಧಿಕ ವಿಶ್ಲೇಷಣೆ ಎರಡೂ ಸಾಧ್ಯವಾಗಬೇಕು ಎಂಬುದು ನನ್ನ ನಂಬಿಕೆ.

ಯಾವುದೇ ವ್ಯಕ್ತಿಯ ಬದುಕು-ಬರಹಗಳನ್ನು ಅವರು ಬದುಕಿದ ಕಾಲಘಟ್ಟ, ಪರಿಸರ, ಪ್ರಭಾವ ಮತ್ತುಅ ವರ ಮನಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ಲೆಷಿಸಬೇಕಾಗುತ್ತದೆ. ಆಗ ವ್ಯಕ್ತಿಯನ್ನು ಪರಿಭಾವಿಸುವ ಅನೇಕ ಇನ್ನಿತರ ಅಂಶಗಳು ನಮ್ಮ ಗಮನಕ್ಕೆ ಬರುತ್ತದೆ. ವ್ಯಕ್ತಿತ್ವದ ದೋಷಗಳು, ಅವರು ಏನೇನಾಗಿರಲಿಲ್ಲ. ಕೊಡಬೇಕಾಗಿದ್ದ ಯಾವುದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ…. ಇತ್ಯಾದಿ ನೇತ್ಯಾತ್ಮಕ ಅಂಶಗಳನ್ನೂ ಒಳಗೊಂಡಂತೆ ಅವರ ಬರವಣಿಗೆ ಹಾಗೂ ಇತಿಹಾಸ, ಅವರೇನಾಗಿದ್ದರೋ ಅದನ್ನು ಇದ್ದಂತೆ ದಾಖಲಿಸುತ್ತದೆ. ಮಾಧ್ಯಮಗಳು ಅವುಗಳನ್ನು ವೈಭವೀಕರಿಸುತ್ತವೆ. ಏಕೆಂದರೆ ಅವಕ್ಕೆ ರೋಚಕತೆ ಮುಖ್ಯವಾಗಿರುತ್ತದೆ. ಆದರೆ, ಒಬ್ಬ ಸಹೃದಯ ಓದುಗನಿಗೆ ಅವರು ಏನಾಗಿರಲಿಲ್ಲ? ಯಾಕಾಗಿರಲಿಲ್ಲ? ಎಂಬ ರೋಚಕ ಅಂಶಗಳನ್ನು ಹುಡುಕುವುದು ಮುಖ್ಯವಾಗುವುದಿಲ್ಲ. ಅವರು ಏನಾಗಿದ್ದರು? ಅವರ ವಿಚಾರಗಳು ನಮಗೆ ಏಕೆ ಮತ್ತು ಹೇಗೆ ಇಂದಿನ ಕಾಲಘಟ್ಟದಲ್ಲಿ, ನಮ್ಮ ಸಾಮಾಜಿಕ ಸಂರಚನೆಯಲ್ಲಿ ಪ್ರಸ್ತುತ? ಎಂಬುದನ್ನು ಸೂಕ್ಷ್ಮತೆಯಿಂದ, ಇತ್ಯಾತ್ಮಕ ದೃಷ್ಟಿಯಿಂದ ಅರಿಯುವುದು, ಅಧ್ಯಯನ ಮಾಡುವುದು ಸಾಹಿತ್ಯಾಭ್ಯಾಸಿಗಳಿಗೆ ಪ್ರಧಾನ ಅಂಶವಾಗಿರುತ್ತದೆ. ಏನು ಆಗಿರಲಿಲ್ಲವೋ, ಏನಾಗಬೇಕಿತ್ತೋ ಅದನ್ನು ಇಂದಿನ ಕಾಲಘಟ್ಟಕ್ಕೆ ಅನ್ವಯಿಸುವಂತೆ ತುಂಬಿಕೊಳ್ಳುವುದು ನಮ್ಮ ಪ್ರಯತ್ನವಾಗಬೇಕಿರುವುದೂ ಅಷ್ಟೇ ಮುಖ್ಯ.

ಈ ಹಿನ್ನೆಲೆಯಲ್ಲಿಯೇ ನಮ್ಮ ವೈಚಾರಿಕ ಎಚ್ಚರ ಕೆಲಸ ಮಾಡಬೇಕು. ಯಾವುದೇ ಸಾಹಿತಿಯೂ, ಮೊದಲಿಗೆ ಮನುಷ್ಯ. ಅವನಿಗೂ ಅವನದೇ ಆಗ ಮಿತಿಗಳಿರುತ್ತವೆ ಎಂಬ ಮನುಷ್ಯ ಪ್ರೀತಿಯ ಮೂಲ ಆಧಾರದಿಂದಲೇ ಇದನ್ನು ವಿವರಿಸಿಕೊಳ್ಳಬೇಕು ಎಂಬುದು ನನ್ನ ಭಾವನೆ. ಏಕೆಂದರೆ ಯಾವುದೇ ಸಾಹಿತ್ಯ ಕೃತಿ ಬಯಸುವುದು ಸಂವೇದನಾಶೀಲ ಸಹೃದಯತೆಯನ್ನು, ಅವರು ಏನಾಗಿರಲಿಲ್ಲ ಎಂಬುದನ್ನು ಆಧಾರವಾಗಿಟ್ಟುಕೊಂಡು ನಾವು ಯಾವುದನ್ನೇ ಆಗಲಿ ತಾರ್ಕಿಕ ವಿಶ್ಲೇಷಣೆಯಿಂದ ಸಿದ್ಧ ಮಾಡಿ ತೋರಿಸಬಹುದು. ಆದರೆ, ಆ ನಂತರ ಏನು? ಎಂಬ ಪ್ರಶ್ನೆ ಉಳಿಯುತ್ತದೆ.

ಕುವೆಂಪು ಅವರೊಬ್ಬ ಸೂಕ್ಷ್ಮ ಕವಿಯಾಗಿ, ವಿಚಾರವಾದಿಯಾಗಿ, ವಿಶ್ವಮಾನವ ತತ್ವ ಸಾರಿದ ಮಾನವೀಯ ವ್ಯಕ್ತಿಯಾಗಿ. ಜಾತಿ ಮತಗಳ ಬೇಧವನ್ನು ಧಿಕ್ಕರಿಸಿದ ಬಂಡಾಯಗಾರರಾಗಿ…. ಅನೇಕ ರೀತಿಯಲ್ಲಿ ನನ್ನನ್ನು ಪ್ರಭಾವಿಸಿದ್ದಾರೆ. ಅವರನ್ನು ಪ್ರತ್ಯಕ್ಷವಾಗಿ ಕಂಡಿಲ್ಲದ, ನನಗೂ ಅವರಿಗೂ ಐದಾರು ದಶಕಗಳ ಅಂತರವಿದ್ದರೂ ನನ್ನಂತಹ ಅನೇಕರನ್ನೂ ತಮ್ಮ ವಿಚಾರಗಳಿಂದಲೇ ಪ್ರಭಾವಿಸುವ ಶಕ್ತಿ ಅವರ ಬರಹಕ್ಕಿರುವುದೇ ಅವರ ವಿಚಾರಗಳ ಘನೆಯನ್ನೂ, ಪ್ರಸ್ತುತತೆ ಹಾಗೂ ಸಾರ್ವಕಾಲಿಕತೆಯನ್ನ ಸಾಬೀತುಪಡಿಸುತ್ತದೆ.

ನಾನೊಬ್ಬ ಕವಿ ಆಗಿರುವುದರಿಂದ ಹಿರಿಯ ಕವಿಗಳು ‘ಕವಿ’ಯನ್ನು ಕುಡಿತು ಏನು ಬರೆದಿರಬಹುದು? ಎನ್ನುವ ಕುತೂಹಲ ನನಗೆ. ಈ ಹಿನ್ನೆಲೆಯಲ್ಲಿ ಹಲವಾರು ಹಿರಿಯ, ಸಮಕಾಲೀನ ಕವಿಗಳ ಕವಿತೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಕುವೆಂಪು, ಬೇಂದ್ರೆ, ಕೆ.ಎಸ್. ನರಸಿಂಹಸ್ವಾಮಿ, ಗಂಗಾಧರ ಚಿತ್ತಾಲ, ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರ ಕವಿತೆಗಳಲ್ಲಿ ಕವಿಯನ್ನು ಕುರಿತು ಹೇಗೆಲ್ಲಾ ಪದ್ಯ ಬರೆದಿದ್ದಾರೆ ಎನ್ನುವುದನ್ನು ವಿಶ್ಲೇಷಿಸುವಾಗ ಒಂದು ಅನೂಹ್ಯ ಸಾಧ್ಯತೆ, ಒಂದು ಬೆರಗು, ಸಂತಸ ನಮ್ಮನ್ನು ಆವರಿಸುತ್ತದೆ. ಹಾಗೇ ಕುವೆಂಪು ಕವಿತೆಗಳನ್ನು ‘ಕವಿ’ಯನ್ನು ಕುರಿತೇ ರಚಿಸಿರೋದು ಗಮನಕ್ಕೆ ಬಂತು. ಯಾರಾದರೂ ಬಯಸಿದರೆ ಇದನ್ನು ಕುರಿತೇ ದೊಡ್ಡ ಪ್ರಬಂಧವನ್ನು ರಚಿಸಬಹುದೇನೋ.

ಕಾವ್ಯದ ಕುರಿತು, ಅದರ ಹುಟ್ಟು, ನಿಗೂಢತೆ, ಸ್ಫೂರ್ತಿ, ವ್ಯುತ್ಪತ್ತಿ ಇತ್ಯಾದಿಗಳ ಬಗ್ಗೆ ಕವನಗಳನ್ನು ಬರೆಯದೇ ಇರೋ ಕವಿ ಬಹುಶಃ ಇರಲಾರ. ಕವಿ ಎಂದರೆ ಯಾರು? ಅವರ ಮಿತಿಯೇನು? ಅವನು ಆರಿಸಿಕೊಳ್ಳುವ ವಸ್ತು, ಅವನ ಸ್ವಾಭಿಮಾನ, ಅವನ ವಿಭಿನ್ನ ವ್ಯಕ್ತಿತ್ವ ಇತ್ಯಾದಿಗಳ ಬಗ್ಗೆ ಹಲವಾರು ಕವಿಗಳು ಕಾವ್ಯ ರಚಿಸಿದ್ದಾರೆ. ನಮ್ಮ ಪರಂಪರೆಯನ್ನು ಗಮನಿಸುತ್ತಾ ಬಂದರೆ ಸಾಹಿತ್ಯ ಕ್ಷೇತ್ರದಲ್ಲಿ ಬೇರೆಲ್ಲರಿಗಿಂತ ಕವಿಗೆ ವಿಶೇಷ ಸ್ಥಾನವಿರುವುದು ಗಮನಾರ್ಹವಾದಂತದ್ದು. ಕವಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವನಿಗೆ ಬದುಕಿನ ಬಗ್ಗೆ ತನ್ನದೇ ಆದ ಒಳನೋಟಗಳಿರುತ್ತದೆ. ಸೂಕ್ಷ್ಮ ಸಂವೇದನೆಗಳಿರುತ್ತದೆ. ಕವಿ ಸದಾ ಸಮುದಾಯದ ಒಳತಿನ ಕುರಿತು ಚಿಂತಿಸುತ್ತಾ ಬಂದಿದ್ದಾನೆ.

ಆದರ್ಶಗಳನ್ನು ಮೌಲ್ಯಗಳನ್ನು ಎತ್ತಿ ಹಿಡಿದು ಬದುಕಿಗೊಂದು ಅರ್ಥ ಕೊಟ್ಟಿದ್ದಾನೆ. ಹೀಗಾಗೇ ಕವಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಕವಿ ಹೇಗೆ ಇತರ ವ್ಯಕ್ತಿಗಳಿಗಿಂತ ಭಿನ್ನ ಎನ್ನುವುದನ್ನು ಕುವೆಂಪು ಅವರು ತುಂಬಾ ಸೂಕ್ಷ್ಮವಾಗಿ, ವೈವಿಧ್ಯಮಯವಾಗಿ ಮತ್ತು ಅಷ್ಟೇ ಆಪ್ತವಾಗಿ ಕವಿಯನ್ನು ಕುರಿತ ತಮ್ಮ ಪದ್ಯಗಳಲ್ಲಿ ಹೇಳಿದ್ದಾರೆ. ಅದು ನನ್ನಂಥಾ ಕವಿಗೆ, ಉದಯೋನ್ಮುಖ ಕವಿಗಳಿಗೆ ನಮ್ಮ ನಿಲುವು ಹೇಗಿರಬೇಕು ಎನ್ನುವುದನ್ನು ದೃಢಗೊಳಿಸುವಂತಹುದು.

ವಸಂತವನದಲಿ ಕೂಗುವ ಕೋಗಿಲೆ
ರಾಜನ ಬಿರುದನು ಬಯಸುವುದಿಲ್ಲ
ಹೂವಿನ ಮರದಲಿ ಜೇನುಂಬುಳುಗಳು
ಮೊರೆವುದು ರಾಜನ ಭಯದಿಂದಲ್ಲ. (ಕವಿ)
ಎಂದು ಪ್ರಾರಂಭವಾಗುವ ಕವಿತೆ, ಕೊನೆಯಲ್ಲಿ

ವಿಪ್ಲವ ಮೂರ್ತಿಯ ಸಖನಾಗಿಹನೈ
ಕವಿಗರಸುಗಿರಸುಗಳ ಋಣವಿಲ್ಲ!
ಅವನಗ್ನಿಮುಖಿ!
ಪ್ರಲಯಶಿಖಿ!

ಎಂದು ಹೇಳುತ್ತಾರೆ. ಈ ಪದ್ಯದಲ್ಲಿ ಕುವೆಂಪುಅ ವರು ಕವಿ ಎಂದರೆ ಎಷ್ಟು ಸ್ವಾಭಿಮಾನಿ, ಅವನ ವ್ಯಕ್ತಿತ್ವ ಎಷ್ಟು ಗಟ್ಟಿಯಾದ್ದು ಎನ್ನುವುದನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ. ಕೋಗಿಲೆ, ನವಿಲು, ಜೇನುಹುಳ, ಮೋಡ, ಗಾಳಿ, ಬೆಳದಿಂಗಳು, ನಕ್ಷತ್ರ ಯಾವುದೂ ರಾಜನ ಅಣತಿಗಾಗಿ ಕಾಯಾವುದಿಲ್ಲ. ಅವನನ್ನು ಒಲಿಸಿಕೊಳ್ಳಲು ತಮ್ಮ ಸ್ವಾಭಿಮಾನವನ್ನು ಬಿಡುವುದಿಲ್ಲ. ಹಾಗೇ ಕವಿಗೆ ಸ್ವಾಮಿತ್ವದ ಅಪ್ಪಣೆಯನ್ನು ಪಾಲಿಸಬೇಕಾದ ಅವಶ್ಯಕತೆಯೂ ಇಲ್ಲ. ಅವನು ‘ಅಗ್ನಿಮುಖಿ, ಪ್ರಲಯಶಿಖಿ’ ಎಂಬ ಎರಡು ಪದಗಳಲ್ಲಿ ಕವಿ ಯಾರಿಗೂ ತಲೆ ಬಾಗದವನು, ಧೀಮಂತ, ದಿಟ್ಟ ಎಂಬ ನಿಲುವನ್ನು ಪ್ರತಿಪಾದಿಸುತ್ತಾರೆ.

ಅವರ ಇನ್ನೊಂದು ಕವಿತೆ ‘ಪತಿತ ಕವಿಯ ಪ್ರಾರ್ಥನೆ’ ಅದರಲ್ಲಿ, ಪೀಠಸ್ಥರಾದವರ ಕೈಕೆಳಗೆ ಕೆಲಸ ಮಾಡುವ ಕೆಲಸಗಾರರ ಕವಿ ಹೇಗೆ ಅಸಹಾಯಕನಾಗಿರುತ್ತಾನೆ ಎನ್ನುವುದನ್ನು ಕಟ್ಟಿಕೊಟ್ಟಿದ್ದಾರೆ.

ಎಂಜಲಿಗಂಜಲಿಯೊಡ್ಡಿದ ಕವಿಯಿಂ
ಬಯಸುವಿರೇನನ್ನು?
ತಿಂಗಳ ತಲುಬಿಗೆ ತೊತ್ತಾದವನಿಂ
ಪಡೆಯುವಿರೇನನ್ನು?
ಎಂದು ಮುಂದುವರಿಸುತ್ತಾ…..
ತನ್ನೊಳಗಿಟ್ಟಾ ನಾಡಿನ ಬಯಕೆಗೆ
ಚಿತೆಯುರಿ ಇಟ್ಟುವನು.
ಕಲೆಯ ಹಿರಿಮೆಯನು ತಿರೆಬಾಳೇಳ್ಗೆಗೆ
ಕೊಲೆಬಲಿಕೊಟ್ಟವನು!

(ಪತಿತ ಕವಿಯ ಪ್ರಾರ್ಥನೆ)

ಯಾವುದೋ ವೃತ್ತಿಯಲ್ಲಿದ್ದಾಗ ಇಷ್ಟವಿರಲಿ ಬಿಡಲಿ ಒತ್ತಡಕ್ಕೆ ಸಿಕ್ಕಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ನಡೆದುಕೊಳ್ಳಬೇಕಾಗುತ್ತದೆ. ಎಷ್ಟೋ ಬಾರಿ ತನ್ನ ಆದರ್ಶಗಳನ್ನು ಬಲಿಕೊಡಬೇಕಾಗುತ್ತದೆ. ಕವಿಯ ಸ್ಥಾನ ಅತ್ಯಂತ ಉನ್ನತವಾದದ್ದು. ಅವನಿಂದ ಸಮಾಜ ಹೆಚ್ಚಿನದನ್ನು ನಿರೀಕ್ಷಿಸುತ್ತದೆ. ಹಣ, ಹೆಸರು, ಸ್ಥಾನದ ಆಸೆಗೆ ತನ್ನತನವನ್ನೇ ಬಲಿಕೊಟ್ಟ ಕವಿಯಿಂದ ಯಾವ ನಿರೀಕ್ಷೆಗಳನ್ನೂ ಇರಿಸಿಕೊಳ್ಳಬಾರದು ಎಂದು ಕುವೆಂಪು ಇಲ್ಲಿ ಮಾರ್ಮಿಕವಾಗಿ ನುಡಿಯುತ್ತಾರೆ. ಕವಿಯ ಸ್ವಾಭಿಮಾನಕ್ಕೆ ಎಂತಹ ಬೆಲೆ ಎಂಬುದನ್ನು ಈ ಕವಿತೆ ತಿಳಿಸುತ್ತದೆ.

‘ಕ್ರಾಂತಿಕಾಳಿ’ ಅವರ ತುಂಬಾ ಪ್ರಸಿದ್ಧವಾದ ಸಾನೆಟ್. ಇದರಲ್ಲಿ ಅವರು ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಕವಿತೆಯ ವಸ್ತುವೂ ಬದಲಾಗಬೇಕು ಎನ್ನುವುದನ್ನು ಕಟ್ಟಿಕೊಟ್ಟಿದ್ದಾರೆ. ಈ ಕವಿತೆ ಕ್ರಾಂತಿಕಾಳಿ ಕವಿಯನ್ನು ಉದ್ದೇಶಿಸಿ ಆಡಿದ ಮಾತಿನಂತೆ ಇದೆ.

……………………………….
ಓ ದ್ರೋಹಿ ಕವಿಯೆ, ನಿನಗಿತ್ತಾಣತಿಯ ಮರೆತು
ಕ್ಲೀಬತನದಲಿ ಹೆಣ್ಣು ಸೋಬಾನೆಗಳ ಹಾಡಿ
ಪಾಳ್ಗಯ್ದೆ ಕಜ್ಜಮಂ! ಶುಕ, ಪಿಕ, ವಸಂತ, ಲತೆ
ಮುಂಗುರುಳು, ತಂಗಾಳಿ, ದೊರೆಗಿರೆಗಳಜ್ಜಿ ಕಥೆ
ಬೆಳ್ದಿಂಗಳೆಂಬುವಂ ನೂಕಾಚೆ, ಹೆಂಬೇಡಿ!
ಬಡತನ, ಗೊಬ್ಬರಂ, ಕತ್ತಿ, ಗುದ್ದಲಿ, ಹಾರೆ
ಬೆವರು, ನೆತ್ತರ್ಗಳಂ ಗಾನಗೈವುದು ನಿನ್ನ
ಕರ್ತವ್ಯವಿಂದು, ಹಾ! ಹೊಟ್ಟೆಗಿಲ್ಲದೆ ಅನ್ನ
ಬಡಜನರು ಸಾಯಿತಿರೆ, ರಸಗಂಧವನು ತೋರೆ
ತಣಿವಹುದೇ? ಕ್ರಾಂತಿಕಾಳಿಯು ನಾನು, ಕೈಬೀಸಿ
ಕರೆಯೆ, ಬಾ, ಪೂಜೈಗೈ ಹೃದಯ ರಕ್ತವ ಸೂಸಿ!

ದಂತೆಗೋಪುರದಲ್ಲಿ ಕುಳಿತು, ಭ್ರಮಾ ಲೋಕದಲ್ಲಿ ವಿಹರಿಸುತ್ತಾ ತನಗೂ ಸಮಾಜಕ್ಕೂ ಸಂಬಂಧವೇ ಇಲ್ಲವೆಂಬಂತೆ, ಪ್ರಕೃತಿ, ಹೆಣ್ಣು, ಪ್ರೀತಿ ಸೌಂದರ್ಯಗಳ ಕುರಿತೇ ಶಬ್ದಾಡಂಬರದಿಂದ ಕವಿತೆ ಕಟ್ಟುವುದನ್ನು, ರಮ್ಯತೆಯ ಆಡಂಬರ ಬಿಟ್ಟು, ವಾಸ್ತವದಲ್ಲಿ ಕಿತ್ತು ತಿನ್ನುತ್ತಿರುವ ಬಡತನ, ಬೆವರು, ರಕ್ತವನ್ನು ಚಿತ್ರಿಸುವ ಜವಾಬ್ದಾರಿ ಕವಿಯ ಮೇಲಿದೆ ಎನ್ನುವುದನ್ನು ಈ ಕವಿತೆಯ ಮೂಲಕ ಸಮರ್ಥವಾಗಿ ಹೇಳಿದ್ದಾರೆ. ಈ ಕವಿತೆ ಸಮಕಾಲೀನ ಸತ್ಯದ ಕುರಿತು ಹೇಳುತ್ತಲೇ ಸಾರ್ವಕಾಲಿಕವಾಗಿ ಬಿಡುತ್ತದೆ. ಕವಿ ಸದಾ ವಾಸ್ತವದ ಸಮಸ್ಯೆಗಳಿಗೆ ಸ್ಪಂದಸಬೇಕು. ಸಮಾಜ ಮುಖಿಯಾಗಿರಬೇಕು. ಕವಿತೆ ಅಂತರಂಗದ ಸ್ವಗತ ಮಾತ್ರ ಅಲ್ಲ, ಅದು ಬದುಕಿನ ಬಹುಮುಖಗಳನ್ನು ಎಚ್ಚರಿಕೆಯಿಂದ ಹಿಡಿದಿರುವ ಒಂದು ಪ್ರತಿಸ್ಪಂದನವೂ ಹೌದು ಎನ್ನುತ್ತಾರೆ ಕುವೆಂಪು.

ಸಿಕ್ಕಸಿಕ್ಕದ್ದನ್ನೆಲ್ಲಾ ಆತುರವಾಗಿ ಕವಿತೆಯಾಗಿಸುವ ಕವಿಗಳಿಗೆ, ಕವಿ ಸದಾ ಹೇಳಲೋ ಬೇಡವೋ ಎನ್ನುವ ‘ಉಭಯ ಸಂಕಟ’ದ ಮೂಸೆಯಲ್ಲಿ ಹದವಾಗಿ ಬೇಯಬೇಕು ಎನ್ನುತ್ತಾರೆ ಕುವೆಂಪು, ತಮ್ಮ ‘ಉಭಯ ಸಂಕಟ’ ಎನ್ನುವ ಸಾನೆಟ್‌ನಲ್ಲಿ.

ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು
ಹೇಳದಿರೆ ತಾಳಲಾರನೋ ಕವಿಯು
ನುಡಿಗಳು ತೊಡಗಿದರೆ ತೊದಲುವುದು ನಾಲಗೆಯು
ಕಳ್ಳರಂದದೊಳೋಡುವುವು ಪದಗಳೆಲ್ಲಾ.
ತನ್ನಧಿಕತೆಗೆ ತಾನೇ ಮೂರ್ಛೆ ಹೋಹುದು ಭಾವ
ಮಾತ ಮೀರಿದ ಮೌನದೊಳು ಮಗ್ನವಾಗಿ
ಒಲುವೆಯಪ್ಪುಗೆಯಂತೆ ಎನಲು ಸಾಧಾರಣ
ಯೋಗಿಯ ಸಮಾಧಿ ಎನೆ ಅತಿ ಅಪೂರ್ವ
ಕವಿಯ ರಸರತಿ ಎನಲು ಕವಿರ್ಗೋನಿಗೆ ವೇದ್ಯ
ಮೃತ್ಯು ಮಾಧುರ್ಯಮೆನೆ ಬದುಕಿಹರಿಗರಿದಯ್ಯ!
(ಉಭಯ ಸಂಕಟ)

ಕವಿಯ ಅನುಭವ ತುಂಬಾ ವಿಶೇಷವಾದದ್ದು. ಹಾಗೇ ಅವನು ಮೂಡಿಸುವ, ಬಳಸುವ ಪ್ರತಿಯೊಂದು ಪದಕ್ಕೂ ಅವರದ್ದೇ ಆದ ವಿಶೇಷ ಅರ್ಥವೂ ಇರುತ್ತದೆ. ಅಮೂರ್ತ ಭಾವಗಳು ಮೂರ್ತ ರೂಪವನ್ನು ಪಡೆದು ಕಾವ್ಯವಾಗುವ ಪ್ರಕ್ರಿಯೆ ನಿಗೂಢವಾದದ್ದು. ಕಾವ್ಯ ಹೆಚ್ಚು ಗಂಭೀರವೂ ಆಗಬಾರದು, ಹಾಗೇ ಹಗುರವೂ ಆಗಬಾರದು. ಸಮತೂಕದ ಪದಗಳಲ್ಲಿ ಅನುಭವವನ್ನು ಹಿಡಿದಿಡುವಾಗ ಉಭಯ ಸಂಕಟದಲ್ಲಿ ಬೇಯುವ ಕವಿಯ ಸಂಕಟವನ್ನು ಇಲ್ಲಿ ಕುವೆಂಪು ಅವರು ಚಿತ್ರಿಸಿದ್ದಾರೆ. ಒಂದು ಕವಿತೆಗಾಗಿ ಕವಿ ಹೇಗೆ ತಪಸ್ಸು ಹಿಡಿದು ಕಾಯಬೇಕು, ಧ್ಯಾನಸ್ಥ ಸ್ಥಿತಿಯಲ್ಲಿ ಹದವಾಗಿ ಬೇಯಬೇಕು ಎನ್ನುವುದನ್ನು ಈ ಕವಿತೆ ಅತ್ಯಂತ ಸಮರ್ಥವಾಗಿ ಹಿಡಿದಿಟ್ಟಿದೆ.

‘ನಾನು ಕವಿಯಲ್ಲ’ ಎನ್ನುವ ಮತ್ತೊಂದು ಪದ್ಯದಲ್ಲಿ ಸಾಹಿತ್ಯ, ಕಲೆ ಎಲ್ಲಕ್ಕಿಂತಾ ಬದುಕು ಹೇಗೆ ಮುಖ್ಯ ಎನ್ನುವುದನ್ನು ಚಿತ್ರಿಸಿದ್ದಾರೆ.

ನನ್ನ ಕೃತಿ ಕಲೆಯಲ್ಲ
ನಾನು ಕವಿಯಲ್ಲ
ಕೆಲೆಗಾಗಿ ಕಲೆಯೆಂಬ
ಹೊಳ್ಳು ನೆಲೆಯಿಲ್ಲ.
ಮೆಚ್ಚುಗೆಯೆ ನನಗೆ ಕೊಲೆ
ಬದುಕುವುದೇ ನನಗೆ ಬೆಲೆ
ಸಾಧನೆಯ ಛಾಯೆ ಕಲೆ
ವಿಶ್ವಾತ್ಮವದಕೆ ನೆಲೆ.
(ನಾನು ಕವಿಯಲ್ಲ)

ಬದುಕೇ ಕಾವ್ಯವಾದಾಗ ಅಥವಾ ಕಾವ್ಯವೇ ಬದುಕಾದಾಗ ಇಂತಹ ನಿಲುವನ್ನು ಕಾಣಲು ಸಾಧ್ಯ. ಕುವೆಂಪು ಅವರಿಗೆ ಬದುಕು-ಕಾವ್ಯ ಬೇರೆ ಬೇರೆಯಲ್ಲ. ಎರಡೂ ಒಂದೇ. ಬದುಕಿಗೆ ಬದ್ಧವಾದ ನಿರ್ಮಲವಾದ ಮನಸ್ಸಿಗೆ ಮಾತ್ರ ಕವಿತೆಯೆಂಬ ಮಾಯೆ ಒಲಿಯಲು ಸಾಧ್ಯ. ಕಲೆಗಾಗಿ ಕಲೆ ಎಂಬ ನೀತಿಯಿಂದ ಮೆಚ್ಚುಗೆಯನ್ನು ಪಡೆಯಬಹುದಷ್ಟೇ. ಬದುಕಿನ ಬೆಲೆಯನ್ನಲ್ಲ ಎನ್ನುತ್ತಾರೆ ಅವರು. ಕವಿತೆಯನ್ನು ಹೀಗೆ ಉತ್ಕಟವಾಗಿ ಪ್ರೀತಿಸಿದ್ದರಿಂದಲೇ ಅವರು ರಸ ಋಷಿಯಾದರು. ‘ನಾನು ಕವಿಯಲ್ಲ’ ಎಂದು ಹೇಳುತ್ತಲೇ ಅಮರ ಕವಿಯಾದರು.

‘ಸತ್ಯ ಸೌಂದರ್ಯ’ ಎಂಬ ಅವರ ಕವನ ನನ್ನ ಮೇಲೆ ಪ್ರಭಾವ ಬೀರಿದ ಮತ್ತೊಂದು ಕವಿತೆ. ಇದರಲ್ಲಿ ಸೌಂದರ್ಯದ ಹಿಂದಿನ ಸತ್ಯವನ್ನು ಬಗೆದು ನೋಡಿದಾಗ ಮಾತ್ರ ಬದುಕಿನ ಅರ್ಥ ತಿಳಿಯುತ್ತದೆ ಎನ್ನುತ್ತಾರೆ.

ಹೂವಿನ ಸೊಬಗನ್ನು ನೋಡುತ್ತ ನೀನು
ಕೋಮಲವೆನ್ನುತ್ತ ಮುತ್ತಿಡುವೆ
ಹೂವಿನ ಪೆಂಪಿಗೆ ಬಾಳನು ಕೊಟ್ಟ
ಮೊಳಕೆಯ ಗೋಳನು ನೀನರಿಯೆ!
ಯುಗ ಯುಗ ಯುಗಗಳ ಯಾತನೆಯಿಂದ
ಜನಿಸಿತು ನಲಿವೀ ಬ್ರಹ್ಮಾಂಡ
ನಲಿಯುವ ಒಂದೊಂದಲರಿನ ಹೃದಯದಿ
ಬ್ರಹ್ಮವು ಮೌನದಿ ನರಳುತಿದೆ.
ಮುಂದಕೆ ನೋಡುವ ಕವಿಗಳ ಕಣ್ಣಿಗೆ
ಬ್ರಹ್ಮವು ಹರ್ಷದಿ ಕುಣಿಯುತಿದೆ.
ಹಿಂದಕೆ ನೋಡುವ ಋಷಿಗಳ ಕಣ್ಣಿಗೆ
ಯಾತನೆಯಿಂದದು ಹೊರಳುತಿದೆ!
(ಸತ್ಯ ಮತ್ತು ಸೌಂದರ್ಯ)

ಮೇಲೆ ಕಾಣುವುದಷ್ಟೇ ಎಂದಿಗೂ ಸತ್ಯವಾಗಿರುವುದಿಲ್ಲ. ಆಳಗಳಲ್ಲಿ ಇಳಿದು ನೋಡಿದಾಗ ಅದರ ಹಿಂದಿರುವ ಯಾತನೆ, ನೋವು ಅರ್ಥವಾಗುತ್ತದೆ. ಬರೀ ಹೊರ ನೋಟವನ್ನು ಹಿಡಿದುಕೊಟ್ಟವ ಕವಿಯಾಗಬಲ್ಲ. ಆದರೆ, ಒಳ ನಿಗೂಡವನ್ನು ಬಿಡಿಸಿಕೊಟ್ಟವ ಋಷಿಯಾಗುತ್ತಾನೆ ಎನ್ನುತ್ತಾರೆ ಕುವೆಂಪು. ಪರಕಾಯ ಪ್ರವೇಶ ಮಾಡಿ ಆಳಗಳನ್ನು ಅರ್ಥೈಸಿಕೊಂಡಾಗ ಮಾತ್ರ ಸೂಕ್ಷ್ಮತೆ ದಕ್ಕುತ್ತದೆ. ಇತರರಿಗಿಲ್ಲದ ಒಂದು ಒಳಗಣ್ಣು ಕವಿಗೆ ಇರುವುದರಿಂದ ಸೂಕ್ಷ್ಮತೆಯಿಂದ ಋಷಿಯೇ ಆಗಿ ಸಾಧಿಸಬಹುದು ಎಂಬುದನ್ನು ಸೂಚ್ಯವಾಗಿ ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಹಾಗೇ ಕುವೆಂಪು ಅವರ ‘ಕಬ್ಬಿಗರು’ ಎನ್ನುವ ಕವನದಲ್ಲಿ ಕವಿಯ ವಿಶೇಷತೆಯನ್ನು ಕುರಿತು ಸೊಗಸಾಗಿ ವಿವರಿಸಿದ್ದಾರೆ. ‘ಕವಿಯ ಕೀರ್ತಿ’ ಎಂಬ ಕವನದಲ್ಲಿ ಸತ್ತ ಕವಿಯೊಬ್ಬ ಮತ್ತೆ ಇಳೆಗೆ ವಾಪಾಸಾಗಿ ತನ್ನ ಬಗ್ಗೆ ಲೋಕ ಏನೇನು ಮಾತಾಡಿಕೊಳ್ಳುತ್ತದೆ, ತನ್ನ ಕೀರ್ತಿ ಎಂಥದೆಂಬುದನ್ನು ಪರೀಕ್ಷಿಸುವ ನಾಟಕೀಯವಾದ ಪ್ರಸಂಗವೊಂದನ್ನು ಕಟ್ಟಿಕೊಟ್ಟಿದ್ದಾರೆ. ಕವಿಯ ಹೃದಯವೊಂದು ವೀಣೆ, ಕವಿಯ ಮನಸ್ಸು, ನನ್ನ ಕವಿತೆ ತನ್ನ ವಿಮರ್ಶಕನಿಗೆ, ಕವನ ಕೇಳುವವನಿಗೆ, ಕವಿಯ ತೃಪ್ತಿ, ಕವಿಯ ಪ್ರೇಮ, ದಿವಂಗತ ಕವಿಗೆ ಜಯಶ್ರೀ ಸ್ಮಾರಕ (ಗೋವಿಂದ ಪೈ ಕುರಿತು), ಪಂಪ, ರನ್ನ, ಓ ನನ್ನ ಕನ್ನಡವೇ ಇನ್ನೂ ಮುಂತಾದ ಕವನಗಳಲ್ಲಿ ಕವಿಯ ಕುರಿತ ವಿಭಿನ್ನ ನೆಲೆಯ ದರ್ಶನಗಳನ್ನು ಮಾಡಿಸಿದ್ದಾರೆ.

ನಾನೂ ಒಬ್ಬ ಕವಿಯಾಗಿ, ಸಹೃದಯ ಓದುಗಳಾಗಿ ಕುವೆಂಪು ಅವರಂತ ರಸಋಷಿಯ ಉನ್ನತ ವ್ಯಕ್ತಿತ್ವವನ್ನು, ಮನಸ್ಸನ್ನು, ಉದಾತ್ತ ನಿಲುವನ್ನು ಅರ್ಥೈಸಿಕೊಳ್ಳುವ ನೆಲೆಯಲ್ಲಿ ಈ ಪದ್ಯಗಳು ನನಗೆ ಸಹಕಾರಿಯಾಗಿವೆ. ಕುವೆಂಪು ಅವರು ಈ ಕವಿತೆಯಲ್ಲಿ ಕವಿಯ ನಿಲುವು, ವ್ಯಕ್ತಿತ್ವದ ಕುರಿತು ಏನನ್ನು ಹೇಳಿದ್ದಾರೋ ಅದು ಅವರೇ ಆಗಿದ್ದಾರೆ.

ತಾವು ಏನಾಗಿದ್ದಾರೋ ಕವಿಯನ್ನು ಕುರಿತು ಅದನ್ನೇ ದಾಖಲಿಸಿದ್ದಾರೆ ಎನ್ನುವಷ್ಟು ಸಾಮ್ಯತೆ ಅವರಿಗೆ ಮತ್ತು ಅವರ ಕವಿತೆಯ ‘ಕವಿ’ಗೆ ಇರುವುದು ಗೋಚರಿಸುತ್ತದೆ. ಪ್ರಾಮಾಣಿಕ ಕವಿಯೊಬ್ಬ ಹೇಗಿರಬೇಕು ಎಂಬ ಸಾರ್ವಕಾಲಿಕ ಸತ್ಯವನ್ನು ಕಟ್ಟಿಕೊಡುವ ಮೂಲಕ ಕವಿಯ ಉದಾತ್ತತೆಗೆ ಚೌಕಟ್ಟನ್ನು ಈ ಮೂಲಕ ಹಾಕಿಕೊಟ್ಟಿದ್ದಾರೆ. ಜೊತೆಗೆ ಕವಿಯ ಕುರಿತ ಈ ಕವಿತೆಗಳು ನನ್ನೊಳಗಿನ ಕವಿಯನ್ನು ಪ್ರೇರೇಪಿಸಿರುವುದೂ ಅಷ್ಟೇ ಸತ್ಯ.

ಕವಿಯ ವ್ಯಕ್ತಿತ್ವ, ನಿಲುವು ಹೇಗೆ ಅನನ್ಯವೂ, ಸ್ವಾಭಿಮಾನಿಯೂ ಆಗಿರುವಂತದ್ದು ಎಂಬುದನ್ನು ಮತ್ತೆ ಮತ್ತೆ ಅವರ ಕವಿತೆಗಳ ಮೂಲಕ ನಾನು ಮನನ ಮಾಡಿಕೊಳ್ಳುತ್ತಲೇ ಇರುತ್ತೇನೆ. ಅವರೊಬ್ಬ ಆದರ್ಶ ಕವಿಯಾಗಿ, ಆದರ್ಶ ವ್ಯಕ್ತಿಯಾಗಿ ಸದಾ ಕಾಲ ನನ್ನನ್ನು ಪ್ರಭಾವಿಸುತ್ತಲೇ ಇರುತ್ತಾರೆ.

* * *