ಒಬ್ಬ ಲೇಖಕ ಇಂಡಿಯಾದ ಸಾಮಾಜಿಕ ಸಂದರ್ಭದಲ್ಲಿ ಸಹಜವಾಗಿಯೇ ಯಾವುದಾದರೊಂದು ಜಾತಿ, ಧರ್ಮದಲ್ಲಿ ಹುಟ್ಟಿರುತ್ತಾನೆ. ಅವನು ಬಯಸಲಿ ಅಥವಾ ಬಯಸದೇ ಇರಲಿ ಅವನು ಆ ಸಮುದಾಯದ ಪ್ರತಿನಿಧಿಯಾಗಿರುತ್ತಾನೆ. ಅವನು ಜಾತಿ, ಧರ್ಮ, ಸಾಮಾಜಿಕ ಸಂಕೀರ್ಣತೆ, ವೈರುಧ್ಯತೆ, ಜಟಿಲತೆಗಳ ಮಧ್ಯೆ ಬದುಕಿರುತ್ತಾನೆ. ಕುವೆಂಪುರವರು ಬದುಕಿದಂತಹ ಚಾರಿತ್ರಿಕ ಸಂದರ್ಭದಲ್ಲಿ ಮಲೆನಾಡಿನ ಕಣಿವೆಗಳಲ್ಲಿ ಸಿಕ್ಕುವ ಮುಸ್ಲಿಂ ಜನಾಂಗದ ಅಲ್ಪ ಪ್ರಮಾಣದ ಪಾತ್ರಗಳಿವೆ. ಡಿ.ಆರ್. ನಾಗರಾಜರವರು ಹೇಳುವಂತೆ “ಕುವೆಂಪು ಹಾದಿಬದಿಯ ಹೂವನ್ನು ಬಾಗಿ ಎತ್ತಿಕೊಳ್ಳುತ್ತಾರೆ.” ಅತ್ಯಂತ ನಿಕೃಷ್ಟ, ನಿರ್ಲಕ್ಷಿತ ಪಾತ್ರಗಳನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸುತ್ತಾರೆ. “ಮಲೆಗಳಲ್ಲಿ ಮದುಮಗಳು” (೧೯೬೭) ಕೃತಿಯನ್ನು ಆಕರವಾಗಿಟ್ಟುಕೊಂಡು ಇಲ್ಲಿಯ ಮುಸ್ಲಿಂ ಪಾತ್ರಗಳನ್ನು ವಿಶ್ಲೇಷಿಸಲಾಗಿದೆ.

“ಮಲೆಗಳಲ್ಲಿ ಮದುಮಗಳು” ಕಾದಂಬರಿಯಲ್ಲಿ ಬರುವ ಮುಸ್ಲಿಂ ಪಾತ್ರಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಕುವೆಂಪು ಅವರು ತಮ್ಮ ಕಾದಂಬರಿಯಲ್ಲಿ ಮುಸ್ಲಿಂ ಗಂಡಸರ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅಲ್ಲಿ ಮುಸ್ಲಿಂ ಗಂಡಸರ ಪಾತ್ರಗಳು, ವಸೂಲಿ ಸಾಬರೋ, ಉಂಡಾಡಿ ಪುಂಡರ ಪಾತ್ರಗಳೋ ಆಗಿವೆ. ಈ ವಸೂಲಿ ಸಾಬಿಗಳಿಗೆ ಸ್ವತಂತ್ರ  ಅಸ್ತಿತ್ವವಿಲ್ಲ.  ದೈಹಿಕವಾಗಿ ಶಕ್ತಿಯಿಲ್ಲದ ಮಂಜುಭಟ್ಟರಂತಹ ಕಲ್ಲೂರು ಸಾವುಕಾರರ ಇಶಾರೆಯ ಮೇಲೆ ನಡೆಯುವ ಈ ಪಾತ್ರಗಳು “ವಸೂಲಿ ಸಾಬರು” ಆಗಿ ನೇಮಕವಾಗುತ್ತಾರೆ. ಈ ಕಾದಂಬರಿಯಲ್ಲಿ ಅವರು ಬದುಕಿನ ಅನೇಕ ಆಯಾಮಗಳನ್ನು ಚಿತ್ರಿಸುತ್ತಾರೆ. ಅದರಲ್ಲಿ ಮುಸ್ಲಿಮರ ಪಾತ್ರಗಳಿರುವಂತೆ, ಕ್ರಿಶ್ಚಿನ್‌ರ ಹಾಗೂ ಹೊಲೆಯರ ಆಳುಗಳ ಪಾತ್ರಗಳೂ ಇವೆ. ಆದರೆ ‘ಕುವೆಂಪು ದಲಿತ, ಮುಸ್ಲಿಮರ ಮತ್ತು ಕ್ರಿಶ್ಚಿಯನ್‌ಪಾತ್ರಗಳ ದುಃಖ ದುಮ್ಮಾನಗಳನ್ನು ಆಳವಾಗಿ ಚಿತ್ರಿಸುವುದಿಲ್ಲ’ ಎಂಬ ಆಪಾದನೆಯೂ ಅವರ ಮೇಲಿದೆ. ಅದರ ಮುಂದೆ ಮತ್ತೊಂದು ಪ್ರಶ್ನೆಯೂ ನಮಗೆ ಕಾಡುತ್ತದೆ. ಕುವೆಂಪು ಮುಸ್ಲಿಮರನ್ನು ಚಿತ್ರಿಸಿದ್ದು ಕೇವಲ, ಕಳ್ಳರು, ದರೋಡೆಕೋರರು, ಕೊಲೆ, ಸುಲಿಗೆ ಮಾಡುವ ಪಾತ್ರಗಳನ್ನಾಗಿ ಮಾತ್ರ. ಅವರಿಗೆ ಮುಸ್ಲಿಂ ಸಾತ್ವಿಕೆ ಬದುಕು ನಡೆಸುವ, ಸಾಚಾ ವ್ಯಕ್ತಿತ್ವದ ಒಬ್ಬ ಸಾಬನೂ ಸಿಗಲಿಲ್ಲವೆ? ಎಂಬ ಸಾಬರು ಕಳ್ಳರು, ದರೋಡೆಕೋರರೇ? ಎಂಬ ಪ್ರಶ್ನೆ ಏಳುತ್ತದೆ. ಕುವೆಂಪು ಅವರು “ದಲಿತ ಹೆಂಗಸರನ್ನು ದಡ್ಡು ಹಿಡಿದ ಕಂತ್ರಿ ನಾಯಿಗಳಿಗೂ ಹೋಲಿಸುವ ಕುವೆಂಪು ಅವರ ಮನೋಭಾವವನ್ನು ದಲಿತ ನಾಯಕರಾದ ಬಿ. ಕೃಷ್ಣಪ್ಪನವರು ಹಿಂದೊಮ್ಮೆ ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಅದೇ ಮುಸ್ಲಿಂ ಪಾತ್ರಗಳನ್ನು ಈ ರೀತಿ ಚಿತ್ರಿಸಿರುವುದನ್ನು ಆಗಿನ ಮುಸ್ಲಿಂ ಸಾಂಸ್ಕೃತಿಕ ಲೋಕವಾಗಲಿ, ಸಾಕ್ಷರ ಲೋಕವಾಗಲಿ, ಮುಸ್ಲಿಂ ರಾಜಕೀಯ ಲೋಕವಾಗಲಿ ಪ್ರಶ್ನಿಸಲಿಲ್ಲ.

ಬಹುಶಃ ಇದಕ್ಕೆ ಅವರಲ್ಲಿರುವ ಅನಕ್ಷರತೆ, ಕನ್ನಡ ಓದಿದ ಕೆಲವರು ಮಲೆಗಳಲ್ಲಿ ಮದುಮಗಳು ಇಂತಹ ಬೃಹತ್ ಕಾದಂಬರಿ ಓದದೇ ಇರಬಹುದು ಅಥವಾ ಓದಿದ ಕೆಲವರು ನಮಗೇಕೆ ಬಿಡು ಎಂದು ಸುಮ್ಮನಾಗಿರಲೂ ಬಹುದು. ಆದರೆ, ಇಲ್ಲಿ ಕ್ರೈಸ್ತರ ಮತಾಂತರ ಪ್ರಸಂಗವೂ ಇದೆ. ಆದರೆ, ಅವರನ್ನು ಕೀಳಾಗಿ ಚಿತ್ರಿಸಿಲ್ಲ. ವಸೂಲಿ ಸಾಬರು, ದರೋಡೆಕೋರ ಸಾಬರು, ಕೊಲೆಗಡುಕ ಸಾಬರು, ಜಾನುವಾರು, ಫಸಲು ಕಳ್ಳತನ ಮಾಡುವ ಸಾಬರನ್ನು ಅವರು ಕಾದಂಬರಿ ಚಿತ್ರಿಸಿದೆ. ಅವರು ಮಲೆನಾಡಿನ ಸಾಮಾಜಿಕ ಬದಲಾವಣೆಗಳಿಗೆ ನಿಷ್ಠರಾಗಿಯೇ ಬರೆದಿರಬಹುದು. ಆದರೂ ದಲಿತರ ಬದುಕುಗಳು ಇಲ್ಲಿ ಅನಾವರಣಗೊಂಡಿರುವುದು ಆರೋಗ್ಯಕರವಾದರೂ ಅಲ್ಪಸಂಖ್ಯಾತ ಸಮುದಾಯದ ಬದುಕಿನ ನೆಲೆಗಳು ಅಂತಹ ಆರೋಗ್ಯಪೂರ್ಣ ನೆಲೆಗಳಲ್ಲಿ ಬಿಚ್ಚಿಕೊಳ್ಳುವುದಿಲ್ಲ.

ಕುವೆಂಪುರವರು ವಸಾಹತುಶಾಹಿ ಪತನದ ಚಾರಿತ್ರಿಕ ಸಂದರ್ಭದಲ್ಲಿ ಬದುಕಿದ್ದ ಅವರು ಇಲ್ಲಿನ ಜಮೀನ್ದಾರಿ ಭೂಮಾಲಿಕ ವ್ಯವಸ್ಥೆಯಡಿಯಲ್ಲಿ ಸಮಾಜವನ್ನು ಗ್ರಹಿಸಿದವರು. ಒಕ್ಕಲಿಗ ಸಮಾಜದವರೇ ಹೆಚ್ಚಾಗಿರುವ ಇಲ್ಲಿಯ ಬ್ರಾಹ್ಮಣರೂ ಪ್ರತ್ಯೇಕವಾಗಿಯೇ ಉಳಿಯುತ್ತಾರೆ. ಇಲ್ಲಿ ದಲಿತರು ಮುಸ್ಲಿಮರು ಒಬ್ಬರಿಗೊಬ್ಬರು ಪೂರಕವಾಗಿಯೂ, ವಿರುದ್ಧವಾಗಿಯೂ ನಿರೂಪಿತರಾಗುತ್ತಾರೆ. ಜಮೀನ್ದಾರರು ಇಜಾರದ ಸಾಖಿ, ಲುಂಗಿ ಸಾಬಿಯನ್ನು ದಲಿತರಿಗೆ ಶಿಕ್ಷಿಸಲು ಬಳಸುತ್ತಾರೆ. ಇಲ್ಲಿ ದಲಿತರ ಸಿಟ್ಟು ಮುಸ್ಲಿಮರ ಮೇಳೆ ತಿರುಗುತ್ತದೆಯೇ ವಿನಃ, ಈ ರೀತಿ ಹೊಡೆಸಿದ ಜಮೀನ್ದಾರರ ಮೇಲೆ ಅಲ್ಲ. ಮುಸ್ಲಿಮರು, ಕ್ರೈಸ್ತರ ಮತ್ತು ದಲಿತರ ವಿರುದ್ಧವಾಗಿ ಎಂದೂ ನಡೆದುಕೊಳ್ಳುವುದಿಲ್ಲ. ಆದರೆ, ಅವರೆಲ್ಲ ಜಮೀನ್ದಾರರ ಆಜ್ಞಾ ಪಾಲಕರಾಗಿರುತ್ತಾರೆ. ಈ ರೀತಿ ಹೊಡೆಯುವ ಸಾಬರ ಹೊಡೆತಕ್ಕೆ “ಹೊನ್ನಾಳಿ ಹೊಡ್ತ” ಎಂದು ಹೇಳುತ್ತಾರೆ.

ಮಲೆನಾಡಿನ ಮಾತುಕತೆಯಲ್ಲಿ “ಹೊನ್ನಾಳಿ ಹೊಡ್ತ” ಪದ ಪ್ರಯೋಗ ೧೯ನೇ ಶತಮಾನದ ಆದಿಯಲ್ಲಿ ಬಂದಿತು. ಈಗಲೂ ಹಳಬರ ಬಾಯಿಯಲ್ಲಿ ಈ ಪದ ಬಳಕೆಗೆ ಬರುವುದುಂಟು. ಇದಕ್ಕೆ ಪರ್ಯಾಯ ಶಬ್ದವೆಂದರೆ “ರುಸ್ತುಂ ಹೊಡೆತ” ಹತ್ತೊಂಭತ್ತನೇ ಶತಮಾನದ ಕೊನೆಯಲ್ಲಿ ಆಗುಂಬೆ, ಮೇಗರವಳ್ಳಿ, ತೀರ್ಥಹಳ್ಳಿ, ಮುತ್ತೂರು, ಮುಂಡಾಕಾರು, ಮಂಡಗದ್ದೆ ಮುಂತಾದ ಮಲೆನಾಡಿನ ಹಳ್ಳಿಗರಿಗೆ “ಹೊನ್ನಾಳ್ಳಿ ಹೊಡ್ತದ” ಅರ್ಥ ಚೆನ್ನಾಗಿ ತಿಲಿದಿದೆ. ಅಷ್ಟೇ ಅಲ್ಲ- ಅದರಲ್ಲಿ ಅನೇಕ ಬಡ ಬಗ್ಗರಿಗೆ ಅದರ ಅನುಭವವೂ ಇದೆ. ಕೆಲವರು ಅದರ ಸಾಕ್ಷಾತ್ಕಾರದ ಸ್ವಾನುಭವದಿಂದಗಿ ಸಮಾಧಿಸ್ಥರಾಗಿಯೂ ಇದ್ದಾರೆ. ದೈಹಿಕವಾಗಿ ಶಕ್ತಿಯಿಲ್ಲದ ಮಂಜುಭಟ್ಟರಂತಹ ಕಲ್ಲೂರಿನ ಸಾಹುಕಾರರು ಹೊನ್ನಾಳಿಯ ಕೆಲವು ಉಂಡಾಡಿ ಪುಂಡ ಸಾಬರನ್ನು ಕರೆಸಿ ತಮ್ಮ ಸಾಲವನ್ನು ವಸೂಲಿ ಮಾಡಿಕೊಡುವ ಕೆಲಸಕ್ಕೆ ನೇಮಿಸುತ್ತಿದ್ದರು. ಇದೇ ಕಾರಣಕ್ಕೆ ಈ ಸಾಬರ ಹೊಡ್ತಕ್ಕೆ “ಹೊನ್ನಾಳ್ಳಿ ಹೊಡ್ತ” ಎಂದು ಕರೆಯುತ್ತಿದ್ದರು. ಸಾಬರನ್ನು ವಸೂಲಿ ಕೆಲಸಕ್ಕೆ ಹಚ್ಚುತ್ತಿದ್ದುದರಿಂದ ಅವರನ್ನು “ವಸೂಲಿ ಸಾಬ”ರೆಂದೂ ಕರೆಯತ್ತಿದ್ದರು.

ಮಂಜುಭಟ್ಟರಂತವರಿಗೆ ದೈಹಿಕ ಶಕ್ತಿಯಿಲ್ಲದಿದ್ದರೂ, ಬುದ್ಧಿಗೇನು ಕೊರತೆಯಿರಲಿಲ್ಲ. ಸ್ಥಳೀಯರನ್ನು ವಸೂಲಿಗೆ ನೇಮಿಸಿದರೆ ಮುಲಾಜಿನ ಮಾತು ಅಡ್ಡಬರಬಹುದು. ಅವನು ವಸೂಲಿ ಕಾರ್ಯವನ್ನು ನಿರ್ಬಿಡೆಯಿಂದ ನಿರ್ದಾಕ್ಷಿಣ್ಯದಿಂದ ವರ್ತಿಸಲು ಸಾಧ್ಯವಾಗಲಿಕ್ಕಿಲ್ಲವೆಂದು ಹೊನ್ನಾಳ್ಳಿಯಿಂದ ಸಾಬರನ್ನು ಕರೆಸಿ ಈ ಕೆಲಸಕ್ಕೆ ನೇಮಿಸಿಕೊಂಡಿದ್ದನು. ತಲೆತಲಾಂತರದಿಂದ ಗುರುತು ಪರಿಚಯದವರನ್ನು, ದೂರವೂ, ಹತ್ತಿರವೂ ಆದ ಸಂಬಂಧಿಕರನ್ನೂ, ಹಿಂದೆ ಪ್ರತಿಷ್ಠಿತರಾಗಿದ್ದು ತಮಗೆ ನೆರವಾಗಿದ್ದು. ಗೌರವಕ್ಕೆ ಪಾತ್ರರೂ ಆಗಿದ್ದು, ಈಗ ಅವನತಿಗಿಳಿದಿದ್ದವರನ್ನು ದಯೇ, ಕರುಣೆ, ದಾಕ್ಷಿಣ್ಯಗಳಿಲ್ಲದೇ, ಮುಖ ಮೋರೆ ನೋಡದೇ ಸ್ಥಾನಮಾನ ಗಣನೆಗೆ ತೆಗೆದುಕೊಳ್ಳದೇ ‘ವಸೂಲಿ’ ಕೆಲಸವನ್ನು ಈ ಸಾಬರು ಮಾಡಬೇಕಾಗುತ್ತಿತ್ತು. ಈ ವಸೂಲಿ ಕೆಲಸಕ್ಕೆ ಜಾತಿ ಮತಗಳಿಂದಲೂ ದೂರವಾಗಿರುವ ಸಾಬರೇ ಈ ಕೆಲಸಕ್ಕೆ ತಕ್ಕವರೆಂದು ಭಟ್ಟರು ನಿರ್ಣಯಿಸಿದ್ದರು.

ಭಟ್ಟರು ರಾಜಕೀಯ ಅರ್ಥಶಾಸ್ತ್ರವನ್ನು ಅರಗಿಸಿ ಕುಡಿದಿದ್ದರು. ಚಾಣಕ್ಯನ ಬುದ್ಧಿ ಅವರದಾಗಿತ್ತು. ಸಾಬರು ದುಡ್ಡು ಕೊಟ್ಟವರಿಗೆಲ್ಲ ‘ವಸೂಲಿ ಸಾಬರಾಗಿ’ ಕೆಲಸ ಮಾಡುತ್ತಿದ್ದರು. ಶ್ರೀಮಂತರಾಗಿದ್ದು, ಒಕ್ಕಲುಗಳಿಗೂ, ಇತರರಿಗೂ ಸಾಲ ಕೊಟ್ಟಿದ್ದವರೆಲ್ಲ ಇಂತಹ ವಸೂಲಿ ಸಾಬರನ್ನು ಇಟ್ಟುಕೊಳ್ಳುತ್ತಿದ್ದರು. ಅಂತಹ ಸಾಹುಕಾರರೆಂದರೆ ಬೆಟ್ನಳ್ಳಿ ಕಲ್ಲಯ್ಯ ಗೌಡರು, ಹಳೆಮನೆ ಸುಬ್ಬಣ್ಣ ಹೆಗ್ಗಡೆ, ಸಿಂಭಾವಿ ಭರಮೈ ಹೆಗ್ಗಡೆ, ಲಕ್ಕುಂಡಡ ಹಳೆಪೈಕದ ಸೇಸನಾಯಕ ಮುಮತಾದವರೆಲ್ಲ ತಮ್ಮ ತಮ್ಮ ಯೋಗ್ಯತೆಗೆ ತಕ್ಕಂತೆ ದುಡ್ಡಿಗೋ, ಭತ್ತಕ್ಕೋ ಅಡಿಕೆಗೋ ವಸೂಲಿ ಸಾಬರ ಸೇವೆಯನ್ನು ಪಡೆಯುತ್ತಿದ್ದರು. ಈ ಸೇವೆಯ ಕಾರಣಕ್ಕೇನೇ ಹುಟ್ಟಿದ ಶಬ್ದ “ಹೊನ್ನಳ್ಳಿ ಹೊಡ್ತ”

ದನದ ಚರ್ಮ ಖರೀದಿಸುವ ಮೇಗರವಳ್ಳಿಯ ‘ಕಮೀನು ಸಾಬರ’ ಕಡೆಯ ‘ಅಜ್ಜೀ ಸಾಬರ’ ಪಾತ್ರವೂ ಕಾದಂಬರಿಯಲ್ಲಿ ಬರುತ್ತದೆ. ಕರಿಮೀನು ಸಾಬು, ಪುಡೀ ಸಾಬು, ಅಜ್ಜೀ ಸಾಬು, ಲುಂಗಿ ಸಾಬು, ಇಜಾರದ ಸಾಬು ಈ ಐದು ಮುಸ್ಲಿಂ ಪಾತ್ರಗಳು ಕಾದಂಬರಿಯಲ್ಲಿವೆ. ‘ಕರೀಂಸಾಬು’ ಹೆಸರು ಹಳ್ಳಿಯ ಜನರ ಬಾಯಿಯಲ್ಲಿ ತದ್ಭವವಾಗಿ ‘ಕರಿಮೀನು ಸಾಬು’ ಆಗಿತ್ತು.

ಒಂದು ಮಾಪಿಳ್ಳೆ ಪಾತ್ರವೂ ಬರುತ್ತದೆ ಕೇರಳದ ಕಡೆಯ ಈ ಮಾಪಿಳೈ ಮೇಗರವಳ್ಳಿಯಲ್ಲಿ ಕಿರಾಣಿಯನ್ನಿಟ್ಟುಕೊಂಡಿದ್ದನು. ಈ ಮಾಪಿಳೈ ಮಂಗಳೂರಿನಿಂದ ನಶ್ಯ ತರಿಸಿ ಸುತ್ತಲ ಹಳ್ಳಿಗಳೂ ಮಾರುತ್ತಿದ್ದ. ಅವನನ್ನು ನಶ್ಯಪುಡಿ ಮಾಡುವುದರಿಂದ ಗುರುತಿಸಿದ್ದ ಹಳ್ಳಿಯ ಜನ ‘ಪುಡೀಸಾಬು’ ಎಂದೇ ಕರೆಯುತ್ತಿದ್ದರು. ಆಗುಂಬೆ ಘಾಟಿನಲ್ಲಿ ನಡೆಯುತ್ತಿದ್ದ ಕೊಲೆ, ದರೋಡೆಗಳಲ್ಲಿ ಅವನ ಪಾಲೂ ಇದ್ದೀತೆಂದು ಕೆಲವರು ಆಡಿಕೊಳ್ಳುತ್ತಿದ್ದರು. ಎತ್ತರವಾಗಿಯೂ, ಧಾಂಡಿಗನಾಗಿಯೂ, ಕ್ರೂರವಾಗಿಯೂ ಕಾಣುತ್ತಿದ್ದ ಇಜಾರದಸಾಬು ಧರಿಸುತ್ತಿದ್ದ ದೊಗಳೆ ಷರಾಯಿಯಿಂದಲೇ ಅವನಿಗೆ ‘ಇಜಾರದ ಸಾಬು’ ಎಂಬ ಹೆಸರು ಬಂದಿತು. ಇನ್ನು ಕುಳ್ಳಗೆ, ಗುಜ್ಜಾಗಿದ್ದ, ಸಿಂಡಮೂಗಿನ ಸಾಬು ಯಾವಾಗಲೂ ಸಣ್ಣ ಸಣ್ಣ ಚೌಕದ ಕಣ್ಣಿನ ಕೆಂಗಪ್ಪಿನ ಪಂಚೆಯನ್ನು ಸೊಂಟಕ್ಕೆ ಸುತ್ತಿರುತ್ತಿದ್ದುದರಿಂದ ಅವನಿಗೆ ‘ಲುಂಗಿ ಸಾಬು’ ಎಂಬ ಹೆಸರು ಬಂದಿತ್ತು. ಹೋತದ ಗಡ್ಡ ಬಿಟ್ಟಿದ ‘ಅಜೀಜ್’ ಸಾಬರಿಗೆ ಹಳ್ಳಿಯ ಜನರ ಬಾಯಿಯಲ್ಲಿ ಅಜೀಜ್‌ಸಾಬು, “ಅಜ್ಜಿಸಾಬು” ವೇ ಆಗಿದ್ದರು.

ಇಲ್ಲಿ ದಲಿತರ ಮತ್ತು ಮುಸ್ಲಿಂರನ್ನು ಒಂದಾಗದಂತೆ ನೋಡಿಕೊಳ್ಳಲಾಗಿದೆ. ವಸೂಲಿಗಾಗಿ ನೇಮಿಸಿ ಹಿಂಸೆ ಕೊಡಿಸುವವರು ಮಾಲೀಕರಾದರೆ, ದಲಿತರ ಸಿಟ್ಟು ಮಾಲೀಕರ ವಿರುದ್ಧವಾಗದೇ ಸಾಬರ ವಿರುದ್ಧವಾಗುವಂತೆ ಮಾಡಲಾಗಿದೆ. ಸಣ್ಣ ಬೀರ, ಗುತ್ತಿ ಮುಂತಾದ ದಲಿತರು ಸಾಬರ ವಿರುದ್ಧ ಪ್ರತೀಕರಾದ ಧೋರಣೆವುಳ್ಳವರಾಗಿದ್ದಾರೆ. ಮನೆ ಗೆಲಸ ಮಾಡುವ ದೊಳ್ಳನು, ಮರಾಟಿ ಮಂಜನು ಗೌಡರ ಅಡಿಕೆ ಕದಿಯುತ್ತಾರೆ. ಬಾಡುಗಳ್ಳ ಸೋಮನು ತಿಮ್ಮನು ಕೋಳುಹುಂಜ ಕದಿಯುತ್ತಾರೆ. ಬೇಲರ ಭೈರ ಕದ್ದು ಬಹನಿ ಕಟ್ಟುತ್ತಾನೆ. ಭಯರವ ಮಗ ಗಂಗನು ನಿಂಗನ ಸಾಮಾನುಗಳನ್ನು ಕಳ್ಳಂಗಡಿಗೆ ಮಾರುತ್ತಾನೆ. ಹೀಗೆ ಕಳ್ಳತನ ಮಾಡುವ ದಲಿತರನ್ನೂ ಅವರು ಚಿತ್ರಿಸಿದ್ದಾರೆ. ಕಳ್ಳತನ ಮಾಡುವವರು ದಲಿತರು ಬಿಟ್ಟರೆ, ಸಾಬರು ಎಂಬ ಧೋರಣೆಯಿದೆ- ಈ ಲೂಟಿ, ದರೋಡೆಗಳ ಕಾರಣವಲ್ಲದೆ ಇಂತಹ ಚಿಕ್ಕಪುಟ್ಟ ಕಳ್ಳತನಗಳ ಕಾರಣದಿಂದಲೂ ಕಾದಂಬರಿ ಬೃಹತ್ತಾಗಿ ಬೆಳೆಯುತ್ತಾ ಹೋಗುತ್ತದೆ. ವಸೂಲಿ ಸಾಬರು, ವಸೂಲಿ ಬೇಟೆಗೆ ಹೋದಾಗ ಸ್ವಂತ ಪ್ರಯೋಜನಕ್ಕಾಗಿಯೂ ಬೇಟೆಯಾಡುತ್ತಿದ್ದರು. ಅಧಿಕೃತ ವಸೂಲಿಯೊಂದಿಗೆ ಅನಧಿಕೃತ ವಸೂಲಿಯನ್ನೂ ಮಾಡುತ್ತಿದ್ದರು. ಅದು ಬಾಳೆಗೊನೆ, ಅಡಿಕೆ, ಭತ್ತ, ಮೆಣಸಿನಕಾಯಿ, ಅಕ್ಕಿ ರೂಪದಲ್ಲಿ ವಸೂಲಿ ಮಾಡಿಸುತ್ತಾರೆ. ಹೊಲೆಯರಿಂದ ಚರ್ಮ, ಹೆಗ್ಗಡತಮ್ಮನಿಂದ ಮೆಣಸಿನಕಾಳು ತೆಗೆದುಕೊಂಡು ಕಮ್ಮಾರಸಾಲೆಯ ಕಳ್ಳಂಗಡಿಗೆ ಬರುತ್ತಿದ್ದರೆಂದು ಹೇಳುತ್ತಾರೆ.

ಇಜಾರದಸಾಬು ಪುಟ್ಟಾಷಾರಿಯ ಕೈಯಿಂದ ಹಲವು ಬಗೆಯ ಚಾಕು, ಚೂರಿಗಳನ್ನು ತನಗೆ ಬೇಕಾದ ಆಕಾರದಲ್ಲಿ ಮಾಡಿಸುತ್ತಾನೆ. ಆಗುಂಬೆ ಘಾಟಿನಲ್ಲಿ ಆಗುತ್ತಿದ್ದ ಕೊಲೆಗಳಿಗೆಲ್ಲ ಈ ಸಾಬಿಯನ್ನೇ ಹೊಣೆಗಾರನನ್ನಾಗಿ ಮಾಡುತ್ತಾರೆ. ಸಣ್ಣಬೀರನ ತಂಗಿ ತಿಮ್ಮಿಯನ್ನು ಗುತ್ತಿ ಓಡಿಸಿಕೊಂಡು ಹೋಗಿ ಮದುವೆಯಾದ. ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಕಲ್ಲಯ್ಯಗೌಡರು, ಸಣ್ಣ ಬೀರನ್ನ ಹೊನ್ನಾಳಿ ಹೊಡ್ತಕ್ಕೆ ಕರೆಸುತ್ತಾರೆ. “ಈವತ್ತು ಗೊತ್ತಾಗ್ರದೋ ನಿಮ್ಮಿಬ್ಬರಿಗೂ ಹೊನ್ನಾಳ್ಳಿ ಹೊಡೆತದ ರುಚಿ! ಮದುವೆ ಮಾಡಿ ಕೊಡುತ್ತೇನೆ ಎಂದು ಹುಡುಗೀನೇ ಪರಾರಿ ಮಾಡಿಸಿದ್ದಿಯಲ್ಲಾ ನೀನೆಂಥ ದಗಲಬಾಜಿ?” ಎಂದು ಹೇಳಿದ ಲುಂಗಿ ಸಾಬಿಗೆ ಹಸುವಿಗೆ ಔಷಧಿ ಹಾಕಿ ಬಂದಿದ್ದ ಕಲ್ಲಯ್ಯ ಗೌಡರ ಮೈಯಿಂದ ಸೆಗಣಿ ಗಂಜಲವಾಸನೆ ಇರುಸು ಮುರುಸಾಯಿತ್ತು. ಅದರ ಪರಿವೆಯೇ ಇಲ್ಲದ ಹೊಲೆಯರ ದೊಡ್ಡ ಬೀರ, ಸಣ್ಣಬೀರರು ದುಗಡ, ಭಯದಿಂದ ಕಳಿತ್ತಿದ್ದರು. “ಜೀವವಿರುವ ದನ ಕೊಂಡು ತಿನ್ನುವವರಿಗೂ, ಸತ್ತ ಬಾಡು ತಿನ್ನುವವರಿಗೂ ಇಷ್ಟಾದರೂ ವ್ಯತ್ಯಾಸ ಬೇಡವೇ?” ಎಂದು ಮಾತನಾಡಿಸುತ್ತಾರೆ ಲೇಖಕರು.

ಹೊಲೆಯರ ದೊಡ್ಡ ಬೀರ ಅಜೀಬು ಚಮಡಕ್ಕಾಗಿ ಕುದುರೆ ತಟ್ಟು ತೆಗೆದುಕೊಂಡು ಹೊಲೆಯರ ಕೇರಿಗೆ ಹೋದಾಗ “ನೀವು ಕೇರಿಯ ಒಳಗೆಲ್ಲ  ಬರಬಾರದು ನಮಗೂ ದೇವರು ದಿಂಡರು ಇದಾವೆ. ನಮ್ಮ ಜಾತಿ ಕೆಟ್ಟು ಹೋಗ್ತದೆ” ಎಂದು ಹೇಳುತ್ತಾನೆ. “ಈ ಸಾಬರ ತಂಡದ ದೆಸೆಯಿಂದ ಸುಖಾ ಇಲ್ಲ” ಎನ್ನುವ ಸಣ್ಣ ಬೀರ. “ನಾನೇನು ಹಗಲು ಹನ್ನೆರಡು ಗಂಟೆಗೆ ರಾಜ್ಯ ಕಳಕೊಂಡವರ ಜಾತಿ ಅಲ್ಲ” ಎನ್ನುವ ಹಮೀರ ನಾಯ್ಕ. ಶ್ರೀರಂಗಪಟ್ಟಣವನ್ನು ಟಿಪ್ಪುಸುಲ್ತಾನರನ್ನು ಕೊಂದು ಬ್ರಿಟೀಷರು ವಶಪಡಿಸಿಕೊಂಡಿದ್ದನ್ನು ಹೀಯಾಳಿಸಿ ಆಡಿದ್ದ ಮಾತು ಅದಾಗಿತ್ತು.

ಇಲ್ಲಿ ಹೊಲೆಯರೂ ಸಾಬರೂ ಹೊಟ್ಟೆಪಾಡಿಗಾಗಿ ಈ ಸಾಹುಕಾರರನ್ನೇ ಅವಲಂಭಿಸಿರುತ್ತಾರೆ. ಆದರೆ, ಅವರಿಬ್ಬರೂ ಒಂದಾಗದಂತೆ ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಕತ್ತಿಮಸೆಯುವಂತಹ ಸಂದರ್ಭಗಳನ್ನು ಕಾಣಬಹುದು. ಸಾಬರು ಗಬ್ಬದ ಆಡನ್ನು ಕದ್ದು, ಕೊಂದು ತಿನ್ನುವ ಸನ್ನಿವೇಶವನ್ನು ನಿರ್ಮಿಸಲಾಗಿದೆ. ಕಳ್ಳತನ ಮಾಡುವವರು ಎಲ್ಲಾ ಜಾತಿಯಲ್ಲೂ ಇದ್ದಾರೆ. ಆದರೆ, ಕಳ್ಳತನ ಹೊಲೆಯರ ಮತ್ತು ಸಾಬರ ಕಸುಬಿನಂತೆ ಕಾಣಿಸಲಾಗಿದೆ. ನಾಯಿ ಗುತ್ತಿಯಿಂದ ‘ದನಾತಿನ್ನಾ ಸೂಳೆ ಮಕ್ಕಳು’ ಎಂದು ಹೀಗಳೆಯುವ ಮಾತನ್ನೂ ಆಡಿಸುತ್ತಾರೆ. ಕೊನೆಯಲ್ಲಿ ಸಾಬರಿಗೂ ಹೊಲೆಯರಿಗೂ ದೊಡ್ಡ ಜಗಳವೇ ನಡೆಯಿತು. ಕೆಳಜಾತಿಯ, ಕೆಳಸ್ಥರದ ಜನರು ಜಮೀನ್ದಾರ ಭೂ ಮಾಲೀಕರ ವಿರುದ್ಧವಾಗುವ ಸನ್ನಿವೇಶಗಳನ್ನು ತಪ್ಪಿಸಿ ಅವರವರಲ್ಲಿಯೇ ಜಗಳ ತಂದಿಡಲಾಗಿದೆ ಎನಿಸುತ್ತದೆ. ಅನೇಕ ಬಾರಿ ಹೊನ್ನಾಳಿ ಸಾಬರಿಗೆ ಕೆಟ್ಟದಾದರೆ ಮಾಪಿಳ್ಳೆಗಳಿಗೆ ನೋವಾಗುವುದಿಲ್ಲ. ಮಾಪಿಳ್ಳೆಗಳಿಗೆ ನೋವಾದರೆ ಹೊನ್ನಾಳ್ಳಿ ಸಾಬರಿಗೆ ನೋವಾಗುವುದಿಲ್ಲ. ಮಾಪಿಳ್ಳೆ ಲೆಬ್ಬೆಬ್ಯಾರಿ, ಕೇರಳ ಮೂಲದವರಾಗಿದ್ದರು.

ಕೆಲವರಿಗೆ ಉರ್ದು ಭಾಷೆ ಬರುತ್ತಿರಲಿಲ್ಲ. ಕೇರಳ ಮೂಲಕ ಮಾಪಿಳ್ಳೆಗಳಿಗೆ ಮಲೆಯಾಳಿ ಬರುತ್ತೇ ವಿನಃ ಉರ್ದು ಬರುತ್ತಿರಲಿಲ್ಲ. ಹೊನ್ನಾಳ್ಳಿ ಸಾಬರಿಗೆ ಮಲೆಯಾಳಿ ಅರ್ಥವಾಗುತ್ತಿತ್ತೇ ವಿನಃ ಮಾತನಾಡಲು ಬರುತ್ತಿರಲಿಲ್ಲ. ಸಾಬರ ಸಾಬರ ಮಧ್ಯದಲ್ಲಿ ಹೊಂದಾಣಿಕೆ ಇರಲಿಲ್ಲವೆಂಬ ವಿಷಯವನ್ನು ಕುವೆಂಪು ಹೀಗೆ ಗುರುತಿಸುತ್ತಾರೆ. “ಹೊನ್ನಳ್ಳಿ ಸಾಬರಿಗೆ ಶಿಕ್ಷೆಯಾದರೆ ಮಲೆಯಾಳಿ ಮಾಪಿಳ್ಳೆಗಳು ಅಷ್ಟೇನೂ ಕಣ್ಣೀರು ಕರೆಯುವುದಿಲ್ಲ” ಎನ್ನುತ್ತಾರೆ.

ಮಲೆನಾಡಿನ ಕಾಡುಹಳ್ಳಿಯ ಹುಡುಗರಿಗೆ ಮೇಗರವಳ್ಳಿಯ ಕರ್ಮೀನ್‌ಸಾಬರ ಕುದುರೆಯ ಆಗಮನ ಒಂದು ಮಹತ್ತಾದ ಐತಿಹಾಸಿಕ ಘಟನೆಯೇ ಆಗಿತ್ತು. ಆ ಅಪೂರ್ವ ಪ್ರಾಣಿಯನ್ನು ನೋಡುವುದೇ ಒಂದು ಮಹತ್ತಾದ ಜೀವನಾನುಭವವಾಗಿತ್ತು. ಕ್ರಿಶ್ಚಿಯನ್ನರ ಜೀವರತ್ನಯ್ಯ ಪಾದ್ರಿ ಮಲೆನಾಡಿಗೆ ಸೈಕಲ್ಲು ತಂದ ವಿಷಯವೂ ಅತೀಂದ್ರಿಯ ವಸ್ತುವಾಗಿ ಕಂಡಿತ್ತು. ಜನರೆಲ್ಲ ಬೈಸಿಕಲ್ಲನ್ನು ‘ಬಿಸೇಕಲ್ಲು’ ಎಂದು ಹೇಳುತ್ತಾ, ಹಿಂದಿನ ಜನ ಜಮಖಾನೆ ಮೇಲೆ, ಕೀಲುಕುದುರೆಯ ಮೇಲೆ ಮಂತ್ರಶಕ್ತಿಯಿಂದ ಆಕಾಶದಲ್ಲಿ ಸಂಚಾರ ಮಾಡಿದಂತೆ ಪಾದ್ರಿ ಬೀಸೇಕಲ್ಲಿನ ಮೇಲೆ ಕುಳಿತು ಮಂತ್ರಶಕ್ತಿಯಿಂದ ಸಂಚರಿಸುತ್ತಾನೆಂದು ನಂಬಿದ್ದರು. ಮಲೆನಾಡಿಗೆ ಕುದುರೆ ಬಂದದ್ದು, ಬೈಸೀಕಲ್ಲಿನ ಪ್ರವೇಶವಾದ ವಿಷಯವನ್ನು ಕುವೆಂಪು ಸ್ವಾರಸ್ಯಕರವಾಗಿ ಚಿತ್ರಿಸುತ್ತಾರೆ. ಅರಸು, ಪಾಳೆಗಾರರು ಮಣ್ಣು ಪಾಲಾದ ಮೇಲೆ ಸಹ್ಯಾದ್ರಿ ಶ್ರೇಣಿಯ ಅರಣ್ಯದಲ್ಲಿ ಸ್ಮಶಾನ ಮೌನ ನೆಲೆಸಿತ್ತು.

ಕುದುರೆ ಅಲ್ಲಿ ಅಪೂರ್ವ ವಸ್ತುವಾಗಿತ್ತು. ಅದನ್ನು ತಮ್ಮ ಸಾಮ್ರಾಜ್ಯ ಕಳೆದುಕೊಂಡಿದ್ದರೂ, ಅವರ ದೌಲತ್ತಿನ ಅವಶೇಷವಾಗಿ ಸಾಬರು ಮಾತ್ರವೇ ವಿಶೇಷವಾಗು ಕುದುರೆ ಬಳಸುತ್ತಿದ್ದರು. ಕುದುರೆಯನ್ನು ಜನರು “ಸಾಬರತಟ್ಟು” ಎಂದೂ ಕರೆಯುತ್ತಿದ್ದರು. ಈ ಸಾಬಿಗಳು ತೊಡುವ ಮೆಟ್ಟುಗಳು ಮಂಗಳೂರಿನ ಕಡೆಯವು. ಗೌಡರ, ಸಾಹುಕಾರರರ ಕಾಲಲ್ಲಿ ಮೆಟ್ಟುಗಳಿರುತ್ತಿದ್ದವು. ಅವು ಸಾಬರ ಮತ್ತೆ ಪಾದ್ರಿಯ ಕಾಲಲ್ಲಿರುವುದನ್ನು ಮಲೆನಾಡ ಜನ ಕಂಡಿದ್ದರು.

ಇಲ್ಲಿ ದಲಿತರು, ಸಾಮಾನ್ಯರು ಕಾಲಲ್ಲಿ ಚಪ್ಪಲಿ ಹಾಕುತ್ತಿರಲಿಲ್ಲವೆಂದು ಗೊತ್ತಾಗುತ್ತದೆ. ಕಾಲಲ್ಲಿ ಚಪ್ಪಲಿ ಧರಿಸುವುದೂ ಕೂಡ ದೌಲತ್ತಿನ ವಿಷಯವಾಗಿತ್ತು. ಕುವೆಂಪು ಚಿತ್ರಿಸುವ ಸಾಬರು ರಾಜ್ಯ ಕಳಕೊಂಡವರು. ಕೊಲೆ, ಸುಲಿಗೆ, ದೌರ್ಜನ್ಯ ನಡೆಸುವವರಾಗಿದ್ದಾರೆ. ಹಮೀರ ನಾಯ್ದ ತರುತ್ತಿದ್ದ ಹಲಸಿನ ಹಣ್ಣನ್ನೂ ಸಾಬರು ಕಸಿದು ತಿನ್ನುವುದನ್ನೂ ಅವರು ಚಿತ್ರಿಸಿದ್ದಾರೆ. ಸಾಬರದ್ದು ಪುಂಡಾಟಿಕೆಯ ಬದುಕು ಎನ್ನುತ್ತಾರೆ.

ಧೈರ್ಯ, ಧೂರ್ತತೆ, ಕ್ರೌರ್ಯ, ನಿಷ್ಠುರತೆ, ನಿರ್ದಾಕ್ಷಿಣ್ಯತೆಗಳನ್ನು ರೂಢಿಸಿಕೊಂಡವರಾಗಿ ಚಿತ್ರಿಸುತ್ತಾರೆ. ದಾರಿಹೋಕರನ್ನು ದರೋಡೆ ಮಾಡುವ ಸಾಬರು ಚೀಂಕ್ರನಂತಹ ಸ್ಥಳೀಯರ ಸಹಾಯವನ್ನು ಪಡೆಯುತ್ತಿದ್ದರು.

ಕಾದಂಬರಿಯ ಕೊನೆಯಲ್ಲಿ ಜಗಳವಾಗುವುದಾದರೆ, ಹೊಡೆದಾಟವಾಗುವುದಾದರೆ, ಅದು ಸಾಹುಕಾರರ ಮತ್ತು ಬಡವರ ಮಧ್ಯೆ ಆಗುವುದಿಲ್ಲ. ಅದು ಬಡವರೇ ಆದ ಬಡವರ ಮಧ್ಯ ಆಗುತ್ತದೆ. ದಲಿತರು ಮತ್ತು ಸಾಬರು ಜಗಳವಾಡಿ ರಕ್ತಮಯವಾಗುತ್ತಾರೆ. ಇಲ್ಲಿ ಗೌಡರು, ಸಾಹುಕಾರರು ಸೇಫ್ ಜೋನ್‌ನಲ್ಲಿಯೇ ಇರುತ್ತಾರೆ. “ಮಲೆಗಳಲ್ಲಿ ಮದುಮಗಳು”  ಕಾದಂಬರಿಯ-ಜೀವಾಳವೇ ಸಾಬರಾಗಿದ್ದಾರೆ. ಆದರೂ ಅವರ ಬೇರುಗಳು ಮಲೆನಾಡಿನಲ್ಲಿಲ್ಲ- ಹೊನ್ನಳಿ, ಮಂಗಳೂರು, ಕೇರಳದ ಕಡೆಯವರು. ಸಾಬರ ಬದುಕಿಗೆ ಸ್ವತಂತ್ರ ಅಸ್ತಿತ್ವವನ್ನೇ ಕುವೆಂಪುರವರು ಕಾದಂಬರಿಯಲ್ಲಿ ನೀಡಿಲ್ಲ.

* * *