ಕುವೆಂಪು ಅವರ ಸಾಹಿತ್ಯಕ್ಕೆ ಪ್ರತಿಕ್ರಿಯಿಸುವುದು ಎಂದೊಡನೆ ದಿಗಿಲಾಗುತ್ತದೆ. ಏಕೆಂದರೆ ಅವರ ಸಾಹಿತ್ಯ ಎಂಬ ಸಾಗರದ ಮುಂದೆ ನಿಂತೊಡನೆ ನನಗೆ ಅಲ್ಪತೆಯ ಅರಿವಾಗುತ್ತದೆ. ಕತೆ, ಪ್ರಬಂಧ, ಕವನ, ಮಹಾಕಾವ್ಯ, ಕಾದಂಬರಿ, ನಾಟಕ, ವಿಚಾರ ಸಾಹಿತ್ಯ, ಜೀವನ ಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಕುವೆಂಪು, ಪ್ರತಿಯೊಂದರಲ್ಲೂ ತಮ್ಮ ಅನನ್ಯತೆಯನ್ನು, ಛಾಪನ್ನು ಮುದ್ರಿಸಿ ಬಿಟ್ಟಿದ್ದಾರೆ. ಹೀಗಾಗಿ ಅವರ ಸಾಹಿತ್ಯಕ್ಕೆ ಪ್ರತಿಕ್ರಿಯಿಸುವುದು ಎಂದೊಡನೆ, ಯಾವುದನ್ನು ಎತ್ತಿಕೊಳ್ಳಬೇಕು ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಲ್ಲುತ್ತದೆ. ಒಂದನ್ನು ಎತ್ತಿಕೊಂಡೊಡನೆ, ಉಳಿದವುಗಳನ್ನು ಬಿಟ್ಟದ್ದು ಯಾಕೆ? ಎಂಬ ಪ್ರಶ್ನೆ ನನ್ನೊಳಗೇ ಒಡಮೂಡುತ್ತದೆ.

ಪ್ರತಿಕ್ರಿಯೆಗಿರುವ ಎರಡನೇ ಸಾಧ್ಯತೆ ಕುವೆಂಪು ಅವರ ಪ್ರಭಾವ ನನ್ನ ಮೇಲೆ ಆದ ಬಗೆಗ ಉತ್ತರಿಸುವುದು. ನಮ್ಮ ಮೇಲೆ ಯಾರ ಪ್ರಭಾವ ಇದೆ ಅಥವಾ ಇಲ್ಲ ಎಂದು ಶೋಧಿಸುವುದೂ ಸುಲಭದ ಕೆಲಸವಲ್ಲ. ಕೆಲವು ಪ್ರಭಾವಗಳು ಸ್ಪಷ್ಟವಾಗಿ ನಮಗೇ ಗೋಚರವಾಗುವ ಸಂಗತಿಗಳಾದರೆ, ಇನ್ನು ಕೆಲವು ನಮ್ಮನ್ನು ನೋಡುವವರ ಗಮನಕ್ಕೆ ಗೋಚರವಾಗುತ್ತಿರುತ್ತವೆ. ಅದೇ ರೀತಿ ಒಬ್ಬರಿಂದ ಪ್ರಭಾವಿತರಾಗಿದ್ದೇವೆ ಎಂಬ ಅರಿವು ಇರುವಂತೆಯೇ, ಅರಿಯದೆಯೇ ಆಗುವುದೂ ಇದೆ. ನಾವು ಒಬ್ಬರ ಅನೇಕ ಸಂಗತಿಗಳನ್ನು ಮತ್ತು ಮೌಲ್ಯಗಳನ್ನು ಮೆಚ್ಚಬಹುದು. ಮೆಚ್ಚಿದ ಮಾತ್ರಕ್ಕೆ ಅನುಕರಿಸುತ್ತೇವೆ ಅಥವಾ ಪ್ರೇರಣೆಗೆ ಒಳಗಾಗುತ್ತೇವೆ ಎಂದು ಕೊಂಡರೆ ಅದೊಂದು ಭ್ರಮೆಯಾಗಿ ಬಿಡಬಹುದು. ಹೀಗಿರುವಾಗ ಕುವೆಂಪು ಅವರ ಕುರಿತು ಮಾತನಾಡುವುದು ಎಂದರೆ, ಅವರನ್ನು, ಅವರ ಸಾಹಿತ್ಯವನ್ನು ಕಾಲಕಾಲಕ್ಕೆ ನಾನು ಕಂಡ, ಪರಿಭಾವಿಸಿದ ನೆಲೆಯನ್ನು ನೆನಪಿಸಿಕೊಳ್ಳುವುದು ಎಂದುಕೊಂಡಿದ್ದೇನೆ. ಈ ನೆಲೆಯ ಕೆಲವು ನೆನಪುಗಳನ್ನು ಇಲ್ಲಿ ತೆರೆದಿಡುವ ಪ್ರಯತ್ನ ಮಾಡುತ್ತಿದ್ದೇನೆ.

ಎಳವೆಯಿಂದ ಇಲ್ಲಿಯವರೆಗೆ ಕುವೆಂಪು ಅವರ ವ್ಯಕ್ತಿತ್ವ ಮತ್ತು ಸಾಹಿತ್ಯಗಳು ತಮ್ಮ ಮಹತ್ವ, ವೈವಿಧ್ಯ ಮತ್ತು ವ್ಯಾಪ್ತಿಗಾಗಿ ಭಿನ್ನ ಭಿನ್ನ ನೆಲೆಯಲ್ಲಿ ನನಗೆ ಕಂಡಿವೆ. ಕರಾವಳಿ ಭಾಗದ ಜನರಿಗೆ ಮಲೆನಾಡಿನ ಮತ್ತು ಮೈಸೂರಿನ ಜನರಂತೆ ಕುವೆಂಪು ಅವರ ಕುರಿತು ಆಪ್ತತೆ, ಆರಾಧನಾ ಭಾವ ಅಷ್ಟಾಗಿ ಇಲ್ಲ. ಕುವೆಂಪು ಅವರನ್ನು ಹತ್ತಿರದಿಂದ ಕಾಣಬೇಕೆಂದು ಮೈಸೂರಿನ ಹಲವರು ಹಂಬಲಿಸುತ್ತಿದ್ದ ರೀತಿ ನನಗೊಂದು ವಿಸ್ಮಯ. ರಾಜೇಶ್ವರಿ ತೇಜಸ್ವಿ ಅವರನ್ನೂ ಒಳಗೊಂಡಂತೆ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಎಲ್ಲ ಶಿಸ್ತಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೂ ಕುವೆಂಪು ಅವರ ಆಗಮನ-ನಿರ್ಗಮನದ ಹೊತ್ತಲ್ಲಿ ದಾರಿಯ ಸುತ್ತಮುತ್ತ ಮೈಯೆಲ್ಲಾ ಕಣ್ಣಾಗಿ ಕಾಯುತ್ತಿದ್ದ ಘಟನೆಗಳನ್ನು ಕೇಳಿದಾಗ, ಹೌದೇ ಎಂದು ಅಚ್ಚರಿಯಾಗುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳ ಜನರು-ಅದರಲ್ಲೂ ವಿಶೇಷವಾಗಿ ಸಾಮಾನ್ಯ ಜನರು-ಜೀವನದಲ್ಲಿ ಒಮ್ಮೆಯಾದರೂ ಕುವೆಂಪು ಅವರನ್ನು ಪ್ರತ್ಯಕ್ಷ ನೋಡಬೇಕೆಂದು, ಸೀದಾ ಅವರ ಮನೆಗೆ ಭೇಟಿಗೆ ಹೋಗುತ್ತಿದ್ದುದನ್ನು ಓದಿದಾಗ, ಕೇಳಿದಾಗಲೂ, ನನ್ನ ನಿರ್ಭಾವುಕತೆ ಕುರಿತು ಪಿಚ್ಚೆನಿಸಿದೆ. ನನ್ನ ವಾರಿಗೆಯವರು ಮೈಸೂರಿನ ಅವರ ಮನೆಸುತ್ತ ಓಡಾಡುತ್ತ ಅವರ ದರ್ಶನಕ್ಕಾಗಿ ಕಾಯುತ್ತಿದ್ದ ಘಟನೆಗಳನ್ನು ತನ್ಮಯತೆಯಿಂದ ಮೆಲುಕು ಹಾಕುವುದನ್ನು ಹೇಳಿದಾಗಲೂ ಅದೊಂದು ಹೊಸ ಜಗತ್ತನ್ನು ತೆರೆದಿಟ್ಟಂತಾಗಿದೆ. ಎಳೆಯರಿಗೆ ಪ್ರಿಯವಾಗುವ ಕುವೆಂಪು ಯುವಕರಿಗೆ ಗೆಲುವು ತುಂಬುವ ಕುವೆಂಪು, ಜನಸಾಮಾನ್ಯರಿಗೆ ಆದರ್ಶವೆನಿಸುವ ಕುವೆಂಪು, ಪ್ರೇಮಿಗಳಿಗೆ ಪ್ರಿಯವಾಗುವ ಕುವೆಂಪು, ದಮನಿತ ಸ್ತರದಿಂದ ಎದ್ದು ನಿಂತವರಿಗೆ ಆದರ್ಶವೆನಿಸುವ ಕುವೆಂಪು, ಸಾಹಿತ್ಯವಲಯದವರಿಗೆ ಮುಖ್ಯವೆನಿಸುವ ಕುವೆಂಪು, ಗೌಡರಿಗೆ ಪ್ರಿಯವಾಗುವ ಕುವೆಂಪು, ವಿಚಾರಕ್ರಾಂತಿಗೆ ಕರೆಕೊಡುವ ಕುವೆಂಪು, ಜಾತ್ಯತೀತ ಹೋರಾಟಗಾರರಿಗೆ ಆದರ್ಶವೆನಿಸುವ ಕುವೆಂಪು ಎಲ್ಲ ಒಬ್ಬರೆಯೇ! ಎಲ್ಲರೂ ಅವರವರ ಭಾವಕ್ಕೆ ಕುವೆಂಪು ಅವರನ್ನು ಅರ್ಥ ಮಾಡಿಕೊಂಡಿದ್ದಾರೆ, ಸ್ವೀಕರಿಸಿದ್ದಾರೆ, ಅನುಸರಿಸಿದ್ದಾರೆ. ಒಂದರ್ಥದಲ್ಲಿ ಯಾರನ್ನೇ ಆಗಲಿ ನಾವು ನಮಗೆಷ್ಟು ಬೇಕೋ ಅಷ್ಟೇ ಅಥವಾ ಅಧ್ಯಾಪಕಳಾಗಿಯೂ ಇದುವರೆಗೂ ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ನಾನು ಓದಿಲ್ಲ. ಅದರರ್ಥ ಓದಬೇಕಾಗಿಲ್ಲ ಅಂತಲ್ಲ; ಕೆಲವು ಮಾದರಿಗಾಗಿ ಓದಿರುವುದು ಸಾಕು ಎಂಬ ಭಾವ. ನಮ್ಮ ಪುಟ್ಟ ಜೀವಮಾನದಲ್ಲಿ ಯಾರದೇ ಬರಹವನ್ನು ಅಮೂಲಾಗ್ರ ಓದುತ್ತೇವೆ ಅಂದರೆ ಸಾಧ್ಯವೂ ಇಲ್ಲ ಅಂತ ಅನ್ನಿಸುತ್ತದೆ. ಇದರ ಇನ್ನೊಂದು ರೂಪ ಅಥವಾ ಮಗ್ಗುಲು ಅಂದರೆ, ಕುವೆಂಪು ಅವರ ಕೃತಿಗಳಷ್ಟೇ ಅವುಗಳ ಕುರಿತು ಬಂದಿರುವ ವಿಮರ್ಶಾ ಸಾಹಿತ್ಯದ ಅಗಾಧೆಯೂ ನನ್ನನ್ನು ದಿಗಿಲುಗೊಳಿಸುತ್ತದೆ. ಏಕೆಂದರೆ ಇಷ್ಟೆಲ್ಲ ವಿದ್ವಾಂಸರು ಶೋಧಿಸಿ, ವಿಶ್ಲೇಷಿಸಿ, ಬಗೆದಿಟ್ಟ ಅವರ ಸಾಹಿತ್ಯವನ್ನು ಕುರಿತು ಹೊಸತು ಏನಾದರೂ ಹೇಳಲು ಬಾಕಿ ಉಳಿದಿದೆಯೇ ಎಂಬ ಅನುಮಾನವೂ ಮೊದಲ ಆತಂಕವಾಗಿ ನನ್ನನ್ನು ಕಾಡುತ್ತದೆ. ಹೀಗಾಗಿ, ಹಂತಹಂತವಾಗಿ ಕುವೆಂಪು ನನ್ನ ಸೃತಿಯಲ್ಲಿ ಮತ್ತು ಬದುಕಲ್ಲಿ ವ್ಯಾಪಿಸಿದ ಬಗೆಯನ್ನು ಮಾತ್ರ ಇಲ್ಲಿ ಹೇಳಬಯಸುತ್ತೇನೆ.

‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ…’ ಈ ಪದ್ಯ ಸಿನಿಮಾ ಹಾಡು ಎಂದು ಕೊಂಡಿದ್ದೆ. ಕುವೆಂಪು ಬರೆದದ್ದು ಎಂದು ನನಗೆ ತಿಳಿದದ್ದು ಅನಂತರ. ‘ಅರೇ ಹೌದಾ?’ ಅಂತ ಅಚ್ಚರಿ. ‘ಜೈ ಭಾರತ ಜನನಿಯ ತನುಜಾತೆ…’ ಪದ್ಯವನ್ನು ಶಾಲೆಗಳಲ್ಲಿ ಹಾಡುತ್ತಿದ್ದಾಗಲೂ ಹಾಡು ಬಾಯಿಪಾಠ ಹಾಕುವ, ಅದನ್ನು ಹಾಡುವ ಕಡೆಗೆ ಗಮನವೇ ಹೊರತು, ಬರೆವರ್ಯಾರು ಎಂಬ ಕುತೂಹಲ ನನ್ನಲ್ಲಿ ಇರಲಿಲ್ಲ. ಕವಿ ಕುರಿತು ಇಂಥ ದಿವ್ಯನಿರ್ಲಕ್ಷ ಇಟ್ಟುಕೊಂಡ ಕಾಲದಿಂದಲೂ ಕುವೆಂಪು ಹಾಡಿನ ರೂಪದಲ್ಲಿ ನನ್ನೊಂದಿಗಿದ್ದರು ಎಂಬುದು ತಿಳಿದದ್ದು ಅನಂತರ. ನನ್ನ ಹೈಸ್ಕೂಲ್ ದಿನಗಳಲ್ಲಿ ಬಹುಶಃ ಕುವೆಂಪು ವ್ಯಕ್ತಿಯಾಗಿ, ಕವಿಯಾಗಿ, ಪರಿಚಿತರಾದರು. ನನ್ನ ತಂದೆ ಕುವೆಂಪು ಅವರ ಎರಡೂ ಕಾದಂಬರಿಗಳನ್ನು ತಂದು ಓದಿದ ನೆನಪು; ನಮಗೂ ‘ಈಗಲ್ಲದಿದ್ರೂ ಮುಂದಾದ್ರೂ ನೀವು ಓದಬೇಕು’ ಎಂದು ಹೇಳಿದ್ದರು. ಆ ಕಾದಂಬರಿಗಳ ಗಾತ್ರ ನೋಡಿಯೇ ಗಾಬರಿಕೊಂಡ ನಾನು ಅವುಗಳನ್ನು ಓದಲು ದಶಕಗಳನ್ನೇ ತೆಗೆದುಕೊಂಡೆ. ಹೈಸ್ಕೂಲ್‌ನಲ್ಲಿ ಕುವೆಂಪು ಅವರ ಕೆಲವು ಭಾವಗೀತೆಗಳು, ಅವರಲ್ಲೂ ಮುಖ್ಯವಾಗಿ ಪ್ರಕೃತಿಗೀತೆಗಳು, ಪ್ರೇಮಗೀತೆಗಳು ನನ್ನ ಗಮನಸೆಳೆದವು. ವಯೋ ಸಹಜ ರಂಗುರಂಗಿನ ಕನಸುಗಳಿಗೆ ಇವರ ಕವನಗಳ ಪಠಣ (ಅದೆಷ್ಟು ಅರ್ಥ ಆಗುತ್ತಿತ್ತೋ ಗೊತ್ತಿಲ್ಲ) ಒಂದು ಖಯಾಲಿ ಆಗಿತ್ತು.

“ಚಂದ್ರಮಂಚಕೆ ಬಾ ಚಕೋರಿ….’, ‘ಎನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ’ ಇವೇ ಮುಂತಾದ ಪ್ರೇಮಕವನಗಳನ್ನು ಓದುವ ಹೊತ್ತಿಗೆ, ನಾನು ಸ್ನಾತಕೋತ್ತರ ಪದವಿಗೆ ಬಂದಿದ್ದೆ. ಆಗ ಕುವೆಂಪು ಓರ್ವ ಆರ್ದ್ರ ಪ್ರೇಮಿಯಾಗಿ, ರಸಿಕ ಸಂಗಾತಿಯಾಗಿ, ಎಲ್ಲ ಪ್ರೇಮಿಗಳ ಎದೆಯ ಭಾವಕ್ಕೆ ಸುಂದರ ಶಬ್ದಚಿತ್ರವನ್ನು ಕಟ್ಟಿಕೊಟ್ಟ ಕಲಾವಿದರಾಗಿ ನನಗೆ ಕಂಡಿದ್ದರು. ಇಂತಹ ಪ್ರೇಮಕವಿ, ಶೃಂಗಾರಕವಿಯ ಖಾಸಗಿ ಬದುಕಿನ ಬಗ್ಗೆ ಯೋಚಿಸುವಾಗಲೆಲ್ಲ ಅವರ ಗಂಭೀರ ಮುದ್ರೆಯ  ಭಾವಚಿತ್ರವೇ ನನಗೆ ನೆನಪಾಗುತ್ತಿದ್ದುದು. ಇವೆರಡೂ ತಾಳೆಯಾಗದ ಸಂಗತಿಗಳೆಂಬಂತೆ ಬಹುಕಾಲ ನನ್ನನ್ನು ಕಾಡಿವೆ. ಅದೇ ರೀತಿಯಲ್ಲಿ ಅವರ ಪ್ರಕೃತಿ ಗೀತೆಗಳನ್ನು ಓದುವಾಗ, ಇಂಥ ನಿಸರ್ಗಪ್ರಿಯ, ಮಲೆನಾಡನ್ನು ಉಸಿರಾಡುವ ಕವಿ ಮೈಸೂರಲ್ಲೇ ಯಾಕೆ ಉಳಿದರು ಎಂಬ ಪ್ರಶ್ನೆ ಕಾಡಿದ್ದಿದೆ. ‘ಎಲ್ಲಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು…’ ಹಾಗೆ ಆದಲ್ಲಿ ‘… ನೀನ್‌ ಎಲ್ಲಿದ್ದರೆ ಏನ್‌ ಎಂತಿದ್ದರೆ ಎನ್‌ ಅದೇ ಕರ್ನಾಟಕ’ ಎಂಬ ಅವರ ಕವನದ ಸಾಲಿನ ಅರ್ಥ ಮನವರಿಕೆ ಆದಾಗಲೇ ಅವರು ಮೈಸೂರಲ್ಲಿ ನೆಲೆಸಿಯೂ ಮಲೆನಾಡಿನಲ್ಲಿ ವಾಸಿಸಿದರು ಎಂಬುದು ಅರಿವಿಗೆ ಬಂತು. ಹೀಗೆ ಲೇಟ್‌ ಲತೀಫ್ ಆಗಿಯೇ ಕುವೆಂಪು ಅವರನ್ನು, ಅವರ ಸಾಹಿತ್ಯವನ್ನು ಓದುವ, ಅರ್ಥ ಮಾಡಿಕೊಳ್ಳುವ ಹಾದಿಯಲ್ಲಿ ಸಾಗಿದ್ದೇನೆ.

‘ರಾಮಾಯಣ ದರ್ಶನಂ’ ಕಾವ್ಯ ನಮಗೆ ಸ್ನಾತಕೋತ್ತರ ಪದವಿಯಲ್ಲಿ ಪಠ್ಯವಾಗಿತ್ತು. ಇದೊಂದು ಸುವರ್ಣ ಅವಕಾಶ ಎಂದು ನನಗೆ ಅನಿಸುತ್ತದೆ. ಈ ಮಹಾಕಾವ್ಯದ ಕೆಲವು ಭಾಗಗಳು ಮಾತ್ರ ಪಠ್ಯಕ್ಕೆ ನಿಗದಿಯಾಗಿದ್ದವು. ಮಹಾಕಾವ್ಯದ ಈ ಪರಿಚಯ ಉಣಬಡಿಸಿದ ‘ರುಚಿ’ ಅದನ್ನು ಅಮೂಲಾಗ್ರ ಓದುವಂತೆ ಒತ್ತಯಿಸಿತು. ಎಳವೆಯಿಂದಲೇ ರಾಮಾಯಣದ ಪಾತ್ರಗಳಿಗೆ ಪರಿಚಿತಳಾದ ನನಗೆ ಕುವೆಂಪು ಅವರ ‘ರಾಮಾಯಣ ದರ್ಶನಂ’ ಹೊಸ ಚಿಂತನಾಕ್ರಮವನ್ನೇ ಮುಂದಿಟ್ಟಿತು. ಪುರಾಣವನ್ನು ಪ್ರಶ್ನಾತೀತವಾಗಿ ಒಪ್ಪಿ ಮುಂದುವರಿಯುತ್ತಿದ್ದ; ಆಗೊಮ್ಮೆ ಈಗೊಮ್ಮೆ ಅಲ್ಲಿನ ಅತಿಮಾನುಷ ಘಟನೆಗಳ ಚಿತ್ರಣಕ್ಕೆ ಲೇವಡಿ ಮಾಡುತ್ತಿದ್ದ ನನಗೆ, ಅದನ್ನು ನೋಡಬೇಕಾದ ಮತ್ತು ಅರ್ಥೈಸಿಕೊಳ್ಳಬೇಕಾದ ರೀತಿಯನ್ನು ಈ ಮಹಾಕಾವ್ಯದ ಓದು ಕಲಿಸಿಕೊಟ್ಟಿತು. ‘ಕವಿ ಅಥವಾ ಬರಹಗಾರರು ಪರಕಾಯ ಪ್ರವೇಶ ಮಾಡಬೇಕು’ ಎಂಬ ವಿಚಾರ ಅಲ್ಲಿಯವರೆಗೆ ಚಿಂತನಾಸ್ತರದಲ್ಲಿ ಪರಿಚಿತವಾಗಿದ್ದುದು, ಈ ಕಾವ್ಯದ ಓದಿನಿಂದ ಅನುಭವಕ್ಕೆ ಬಂದಿತು. ಹೀಗಾಗಿ ಅವರು ಚಿತ್ರಿಸಿದ ಮಂಥರೆ, ಚಂದ್ರನಖಿ, ಮಂಡೋದರಿ, ಊರ್ಮಿಳೆ, ಅನಲೆ ಇವರೆಲ್ಲ ಅಂತರಂಗಕ್ಕೆ ಆಪ್ತರಾದರು. ‘ಅಂಚಿಗೆ ಉಳಿದ ಜೀವಗಳ ಉಸಿರಿಗೆ ದನಿಯಾಗಬೇಕು, ಅವರ ಅಂತರಂಗದ ತುಡಿತಕ್ಕ ಸ್ಪಂದಿಸಬೇಕು, ಇದಕ್ಕೆ ಗಂಡು ಹೆಣ್ಣು ಎಂಬ ಭೇದವಿಲ್ಲ’ ಎಂಬ ಅರಿವು ನನ್ನಲ್ಲಿ ಮೂಡಿದ್ದೇ ಈ ಕಾವ್ಯದ ಓದಿನಿಂದ. ಇಷ್ಟು ಚೆನ್ನಾಗಿ ಹೆಣ್ಣಿನ ಮನೋವ್ಯಾಪಾರವನ್ನು ಚಿತ್ರಿಸುವ ಮತ್ತು ದಮನಿತ ಜೀವಗಳಿಗೆ ಉಸಿರು ನೀಡುದ, ಅಸ್ತಿತ್ವ ನೀಡುವ ಕವಿಯ ಕುರಿತು ಮೊದಲ ಬಾರಿಗೆ ಅಂತಃಕರಣದ ಕಾಳಜಿ ಆರಂಭವಾಯಿತು. ಹೀಗಾಗಿ ಬಹುಶಃ ಹೊರಗಿನ ಯಾರ ಒತ್ತಡವೂ ಇಲ್ಲದೆ ಕುವೆಂಪು ಕುರಿತ ಓದು ಅಂದಿನಿಂದ ನನ್ನಲ್ಲಿ ಆರಂಭವಾಯ್ತು ಎಂದು ನನಗನಿಸುತ್ತದೆ. ಕುವೆಂಪು ದಮನಿತ ಸಮುದಾಯದ ಸ್ವಾಭಿಮಾನದ ಸಂಕೇತ ಎಂಬ ವಿಚಾರ ನನ್ನನ್ನು ಆಕರ್ಷಿಸಿದ ಇನ್ನೊಂದು ಸಂಗತಿ.

ಅವರ ‘ಶೂದ್ರತಪಸ್ವಿ’ ಮತ್ತು ‘ಬೆರಳ್ಗೆ ಕೊರಳ್’ ನಾಟಕಗಳನ್ನು ನಾನು ಓದಿದ್ದು ಇನ್ನೂ ತಡವಾಗಿ. ಆ ವೇಳೆಗೆ ನಾನು ಅಧ್ಯಾಪಕಳಾಗಿ ಸೇರಿದ್ದೆ. ದಲಿತ- ಬಂಡಾಯ ಚಳುವಳಿ, ತಾತ್ವಿಕತೆ ಕುರಿತು ಒಂದಿಷ್ಟು ಅರಿತಿದ್ದೆ. ಆ ಹಿನ್ನೆಲೆಯಿಂದ ನೋಡಿದಾಗ, ಕುವೆಂಪು ಅವರ ಈ ಕೃತಿಗಳು ಹೊಸ ಮಾದರಿಗಳಾಗಿ ಕಂಡವು. ಯಾವ ಚಳುವಳಿಯ ಅಥವಾ ಸಮುದಾಯದ  ಓಘದ ಬಲವೂ ಇಲ್ಲದೆ, ಕೇವಲ ಆತ್ಮಬಲದಿಂದ, ಒಂದು ಬಗೆಯ ನಿಷ್ಠೆಯಿಂದ ದಲಿತ ಮತ್ತು ದಮನಿತ  ಹೋರಾಟಕ್ಕಿಂತ, ದೊಡ್ಡದಾದ ಕಿರುಚಾಟಕ್ಕಿಂತ ಅಥವಾ ಸನಾತನವಾದ ಎಲ್ಲವುಗಳನ್ನೂ ಕುಟ್ಟಿಪುಡಿ ಮಾಡುವ ಧ್ವಂಸ ಸಂಸ್ಕೃತಿಗಿಂತ, ಪುನರ್ ನಿರ್ಮಾಣದ ಸಾಧ್ಯತೆಗಳನ್ನು ಅವರು ತೋರಿಸಿಕೊಟ್ಟ ಕ್ರಮ ಸಂಸ್ಕೃತಿಗಿಂದ, ಪುನರ್ ನಿರ್ಮಾಣದ ಸಾಧ್ಯತೆಗಳನ್ನು ಅವರು ತೋರಿಸಿಕೊಟ್ಟ ಕ್ರಮ ಬೆರಗು ಮೂಡಿಸುತ್ತದೆ. ‘ಹಿರಿಯರ ಬಂಗಾರದ ಒಡವೆಗಳನ್ನು ಈ ಕಾಲಕ್ಕೆ ನವೀಕರಿಸಿ ತೊಡಬೇಕೇ ಹೊರತು ಎಸೆಯುವುದಲ್ಲ; ಎಂಬ ಅವರ ಮಾತಿನ ಅರ್ಥ ಅವರ ಬರಹಗಳನ್ನೇ ಧಾರಾಳವಾಗಿ ದೊರೆಯುತ್ತದೆ. ಅವರಿಗೆ ಏಕಲವ್ಯ, ಶಂಭೂಕ, ಬೆಸ್ತ ಮುಖ್ಯವಾಗಲು ಸಾಧ್ಯವಾದದ್ದೇ, ಅವರು ಹಿಂದಿನದನ್ನು ಅಮೂಲಾಗ್ರ ಅಭ್ಯಾಸ ಮಾಡಿದ್ದರಿಂದ! ಯಾವುದನ್ನೇ ಆಗಲಿ ಸಾರಾಸಗಟಾಗಿ ಮೆಚ್ಚುವ ಅಥವಾ ತಿರಸ್ಕರಿಸುವ ಮೊದಲು ಅದರ ಬಗೆಗಿನ ಪ್ರಾಥಮಿಕ ಅರಿವು ನಮಗಿರಬೇಕು ಎಂಬುದನ್ನು ಕಲಿಸಿದವರು ಕುವೆಂಪು.

ಕುವೆಂಪು ಅವರ ವೈಚಾರಿಕ ಬರಹಗಳನ್ನು ಪರಿಚಯಿಸಿದವರೂ ನನ್ನ ಗುರುಗಳು. ಜಾತಿ ಮತ್ತು ಧರ್ಮದ ಗಡಿಗಳ ಕುರಿತಂತೆ ಎಳವೆಯಿಂದ ನನ್ನಲ್ಲಿಯೇ ಇದ್ದ ತಟಸ್ಥ ನಿಲುವು ಈ ಅಧ್ಯಾಪಕರಿಂದ ಚುರುಕಾಯಿತು; ಅದನ್ನು ಬದುಕಿನಲ್ಲಿ ಮೀರಿ ತೋರಿಸುವ ಅವಕಾಶ ದೊರೆತರೆ…. ಎಂಬ ಕನಸೂ ಆರಂಭವಾಯಿತು. ಆಡಂಬರದ ಮದುವೆ, ಸಾಂಪ್ರದಾಯಿಕ ಮದುವೆ ಇತ್ಯಾದಿಗಳ ಕುರಿತ ಛಾಪು ಮೂಡಿಸಬೇಕು, ವಿಶಿಷ್ಟವಾದುದನ್ನು ಸಾಧಿಸಬೇಕು ಎಂಬ ಹಂಬಲಕ್ಕೆ ಕುವೆಂಪು ಅವರ ವಿಚಾರ ಸಾಹಿತ್ಯ ಪುಷ್ಟಿ ನೀಡಿದ್ದು ಮರೆಯುವಂತಿಲ್ಲ. ‘ಗಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ’ ಎಂಬ ಅವರ ಕರೆ ಆಪ್ತವಾದಂತೆಯೇ, ಹಿರಿಯರು ಆರಿಸಿದ ಸಂಗಾತಿಗಿಂದ ನನ್ನ ಸಂಗಾತಿಯನ್ನು ನಾನೇ ಆಯ್ದುಕೊಳ್ಳಬೇಕು ಎಂಬ ಹುರುಪು ಮೂಡಿದ್ದಕ್ಕೆ ನನ್ನ ಅಧ್ಯಾಪಕರು ಪ್ರೇರಣೆ ನೀಡಿದರೂ, ಅಂತಹ ಕ್ರಿಯೆಗಳ ಮೂಲಕ ಎಲ್ಲೋ ಸಣ್ಣ ಸಣ್ಣ ರೂಪದಲ್ಲಿ ಕುವೆಂಪು ನನ್ನೊಳಗೂ ಸ್ಥಾನ ಪಡೆಯತೊಡಗಿದ್ದರು.

ವಾಸ್ತವಿಕವಾಗಿ ತೇಜಸ್ವಿ ಅವರ ಬರಹಗಳನ್ನು ಹೆಚ್ಚು ಹೆಚ್ಚಾಗಿ ಓದುತ್ತಾ ಹೋದಂತೆ, ಅವರ ಕೃತಿಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಅವಕಾಶ ದೊರೆತಂತೆ ಕುವೆಂಪು ಅವರನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ಕುವೆಂಪು ಮತ್ತು ತೇಜಸ್ವಿ ಇಬ್ಬರ ನಡುವಿನ ಸಾಮ್ಯ ಮತ್ತು ವೈಷಮ್ಯ ಗುಣಗಳ ಅವಲೋಕನ ಈ ಅವಧಿಯಲ್ಲಿ ನನ್ನಿಂದ ಸಾಧ್ಯವಾಯಿತು. ಕುವೆಂಪು ಅವರ ಬಹುತೇಕ ಆದರ್ಶಗಳನ್ನು ತೇಜಸ್ವಿ ಪ್ರಾಯೋಗಿಕ ನೆಲೆಯಲ್ಲಿ ಅಳವಡಿಸಿಕೊಳ್ಳುತ್ತ, ಮೈಗೂಡಿಸಿಕೊಳ್ಳುತ್ತ ಬದುಕಿದ್ದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾದದ್ದು ಈ ಅವಧಿಯಲ್ಲಿ.

ಕುವೆಂಪು ಅಂಥ ಬೃಹತ್ ಬುಡದಲ್ಲೇ ಬೆಳೆದ ತೇಜಸ್ವಿ ಎಂಬ ಸಸಿ ಮತ್ತೊಂದು ಆಳವಾದ ಬಗೆಯಂತೂ ನನಗೆ ಬೆರಗು. ಇದರಲ್ಲಿ ಯಾರ ಕೊಡುಗೆ ಎಷ್ಟು ಎಂಬುದು ಅರಿವಾದದ್ದೇ “ಅಣ್ಣನ ನೆನಪು” ಕೃತಿಯ ಓದಿನಿಂದ. ಒಂದರ್ಥದಲ್ಲಿ “ಅಣ್ಣನ ನೆನಪು” ಮತ್ತು “ಮಗಳು ಕಂಡ ಕುವೆಂಪು” ಇವೆರಡೂ ಕೃತಿಗಳು ಕುವೆಂಪು ಅವರ ವ್ಯಕ್ತಿತ್ವದ ಅಜ್ಞಾತ ಮುಖಗಳು ಅತ್ಯಂತ ನವಿರಾಗಿ ಮತ್ತು ಸಮೃದ್ಧವಾಗಿ ತೆರೆದಿಟ್ಟವು. ನನಗಂತೂ ಕುವೆಂಪು ಭಾವನಾತ್ಮಕವಾಗಿ ಹತ್ತಿರವಾದದ್ದು ಈ ಎರಡು ಕೃತಿಗಳಿಂದ. ಇಂತಹ ಹಿರಿಯ ಕವಿ, ‘ರಾಶಿ ರಾಶಿ ಕೃತಿಗಳನ್ನು ಬರೆದು ಸಾಧ್ಯವಿದ್ದರೆ ಓದಿ, ಬದುಕಿ’ ಎಂದು ಸವಾಲು ಹಾಕಿದ ಕವಿ, ಸದಾ ಘನಗಂಭೀರ ಹಾವ-ಭಾವದ ಕವಿ, ಜನರಿಂದ ಆದಷ್ಟೂ ದೂರವಾಗೇ ಇದ್ದು ರಸ ಋಷಿ ಎನಿಸಿದ ಕವಿಯೂ ಈ ಪರಿಯ ಮಾರ್ದವತೆ, ಮುಕ್ತತೆ, ಮುಗ್ಧತೆ, ಸಹನಶೀಲತೆ, ಭಯ, ಆತಂಕ, ಜೀವಪರ ಕಾಳಜಿ ಮುಂತಾದ ಹಲವು ಮಗ್ಗುಲುಗಳನ್ನು ಹೊಂದಿದ್ದರೇ ಎಂಬ ಅಚ್ಚರಿ ಮತ್ತು ಬೆರಗು! ಅಪ್ಪ ಎಂದರೆ ಶಿಸ್ತು, ಭಯ, ಅಧಿಕಾರ, ದರ್ಪ, ಗಾಂಭೀರ್ಯ ಮುಂತಾದ ಭಾವಗಳೇ ಅಚ್ಚೊತ್ತಿದ್ದ ನನ್ನಲ್ಲಿ ಕುವೆಂಪು ಅವರ ‘ತಂದೆತನ’ ಕಂಡು ಖುಚಿ, ಸಂಭ್ರಮ, ಪುಲಕ, ತನ್ನ ಸ್ಥಾನಮಾನ, ಪ್ರಸಿದ್ಧಿ ಮುಂತಾದವುಗಳ ಕಾರಣಕ್ಕೆ ಮಕ್ಕಳ ಆಸಕ್ತಿ, ಇಚ್ಛೆ ಮತ್ತು ಉದ್ದೇಶಗಳನ್ನು ಬಲಿಕೊಡದಂತೆ ಕಾಪಾಡಿದ ಅವರ ರೀತಿ ಅತ್ಯಂತ ಅಪರೂಪದ್ದಾಗಿ ಕಂಡಿತು. ಅವರ ಬಗೆಗೆ ಮನಸ್ಸು ತುಂಬಿ ಬಂದಿತು.

ಸಾಹಿತ್ಯದ ವಿದ್ಯಾರ್ಥಿಯಾಗಿ ನನಗೆ ಕುವೆಂಪು ಅವರ ಸಾಹಿತ್ಯಕ್ಕೆ ಅವರ ಸಮಕಾಲೀನರು ಮತ್ತು ಅನಂತರದಲ್ಲಿ ಕಾಲಕಾಲಗಳನ್ನು ಬಂದ ವಿಮರ್ಶಕರು ಪ್ರತಿಕ್ರಿಯಿಸಿದ ಬಗೆಯನ್ನು ಚರ್ಚಿಸದೆ ಇರಲು ಸಾಧ್ಯವಿಲ್ಲ. ನಾನು ಕೇಳಿದಂತೆ ಕುವೆಂಪು ಒಂಟಿಸಲಗದಂತೆ ಸಾಹಿತ್ಯಲೋಕದಲ್ಲಿ ಬದುಕಿದವರು. ಅವರ ಜೀವನಚರಿತ್ರೆ ಓದುವಾಗಲೂ ಈ ಅಂಶ ಗೋಚರಕ್ಕೆ ಬರುತ್ತದೆ. ಸ್ನೇಹಿತರು ಅಷ್ಟಾಗಿ ಇಲ್ಲದೆ, ಇದ್ದವರೂ ಅವರಿಗಿಂದ ವಯಸ್ಸಿನಲ್ಲಿ ಒಂದೋ ಹಿರಿಯರಾಗಿದ್ದುದು ಇಲ್ಲವೇ ಅವರ ಪ್ರತಿಭೆಯ ಪ್ರಭಾವಳಿಗೆ ಸಿಲುಕಿ ಕೇವಲ ಅವರು ಹೂಗಳ ಭಟರಾಗಿ ಉಳಿದವರೇ ಆಗಿದ್ದರು. ಇದು ಅವರ ಬಾಲ್ಯ ಮತ್ತು ಯೌವನದ ಬಹುಮುಖ್ಯ ಕಾಲದಲ್ಲಿ ಪ್ರಭಾವಿಸಿ ಕುವೆಂಪು ಅವರನ್ನು ಗಾಂಭೀರ್ಯಕ್ಕೆ ತಳ್ಳಿತು ಎನಿಸುತ್ತದೆ.

ಈ ಬಾಹ್ಯಕಾರಣದಿಂದ ಅವರ ಮನೋಲೋಕ ಅಥವಾ ಒಳಲೋಕ ತೆರೆದುಕೊಳ್ಳಲು ಸಾಧ್ಯವಾಗಿರಬೇಕು ಹಾಗೂ ಅಂತಹ ಒಂದು ಖಾಸಗಿ ಲೋಕದಲ್ಲಿ ಮಲೆನಾಡು, ಅವರ ಬಾಲ್ಯದ ಜೀವನಕ್ರಮ, ಆ ಬದುಕಿನ ಶ್ರೀಮಂತಿಕೆ ಅವರನ್ನು ಆವರಿಸಿಕೊಂಡಿವೆ. ಇಂತಹ ಖಾಸಗಿ ಲೋಕದ, ಖಾಸಗಿ ರಂಗದ ಏಕಾಂಗಿತನದ ವಿರುದ್ಧದ ಹೋರಾಟ ಅವರ ಆರಂಭದ ಬರಹಗಳ ಹಿಂದೆ ಇದ್ದಿರಬೇಕು. ಸಾಮಾನ್ಯವಾಗಿ ಮನುಷ್ಯರು ಋಣಾತ್ಮಕ ಪ್ರಭಾವದಿಂದ ಕುಗ್ಗುವುದು ಸಹಜ. ಆದರೆ, ಕುವೆಂಪು ತಮ್ಮ ಏಕಾಂಗಿತನವನ್ನು ಧನಾತ್ಮಕವಾಗಿ ದುಡಿಸಿಕೊಂಡ ಪ್ರಯತ್ನದ ಫಲವಾಗಿ ಅವರ ರಚನೆಗಳು ನಿಂತಿವೆ ಎಂದು ನನಗನಿಸುತ್ತದೆ.

ಧಾನ್ಯ, ತಪಸ್ಸು, ಅಂತರ್‌ಮುಖತೆ, ಪೂಜೆ, ಮನನ ಮುಂತಾದುವು ಕುವೆಂಪು ಅವರ ಚಿಂತನೆಯಲ್ಲಿ ನವೀನ ಅರ್ಥವನ್ನು ಮತ್ತು ಛಾಪನ್ನು ಪಡೆದವು. ಪೌರೋಹಿತ್ಯದ ಯಜಮಾನಿಕೆಯನ್ನು ಎಲ್ಲ ನೆಲೆಗಳಲ್ಲಿ ವಿರೋಧಿಸಿದ, ನಿಯಂತ್ರಿಸಿದ ಮತ್ತು ನಿರಾಕರಿಸಿದ ಕುವೆಂಪು ಬಗೆಗೆ ಅಪಾರ ಗೌರವ ಹುಟ್ಟುತ್ತದೆ. ಮಂಡ್ಯ ಜಿಲ್ಲೆಯ ಸೊಸೆಯಾಗಿ, ಅಲ್ಲಿಯ ಜನರೋಂದಿಗೆ ಒಡನಾಡುವ ಅವಕಾಶ ಒದಗಿದಾಗ, ಮಂತ್ರಮಾಂಗಲ್ಯ ಮದುವೆಗಳನ್ನು ಜನಪ್ರಿಯಗೊಳಿಸುವ ಮೂಲಕ ಅಲ್ಲಿನ ಜನರು ಕುವೆಂಪು ಅವರನ್ನು ಸ್ವೀಕರಿಸಿದ ಬಗೆ ಅಚ್ಚರಿ ಮತ್ತು ಸಂಭ್ರಮವನ್ನು ಉಂಟು ಮಾಡಿದವು. ನನ್ನ ವಾರಿಗೆಯ ಹಲವರು ಇಂಥ ಮಂತ್ರಮಾಂಗಲ್ಯ ವಿವಾಹದ ನೇತೃತ್ವ ವಹಿಸಿದ್ದನ್ನು ಕಂಡಾಗ ಅಭಿಮಾನವೂ ಆಗಿತ್ತು. ಆದರೆ, ಮಂತ್ರ ಮಾಂಗಲ್ಯದ ವಿವಾಹವನ್ನು ಮೊದಲ ಬಾರಿಗೆ ನೋಡಿದಾಗ, ಏಕೋ ಪಿಚ್ಚೆನಿಸಿತು. ಗಂಡು-ಹೆಣ್ಣಿನ ಸಂಬಂಧದಲ್ಲಿ  ಸಮಾನತೆಗಿಂತ ಹೆಣ್ಣನ್ನು ದೈವತ್ವಕ್ಕೆ ಏರಿಸುವ ಕುವೆಂಪು ಕಲ್ಪನೆ ಯಾಕೋ ಕಿರಿಕಿರಿ ಉಂಟುಮಾಡಿದ್ದಂತೂ ನಿಜ. ಇಂದು ಜನರಿಂದ ಪುನರ್ ರೂಪಣೆಗೊಳ್ಳುವ ಹಂತದಲ್ಲಿವೆ ಎಂಬುದು ಸಮಾಧಾನದ ಸಂಗತಿ. ಎಂದರೆ ಯಾವ ಆವಿಷ್ಕಾರವೂ ಎಲ್ಲ ಕಾಲಕ್ಕೂ ಒಂದೇ ರೀತಿಯಾಗಿ ತಟ್ಟುತ್ತದೆ ಎಂದು ಭಾವಿಸುವುದು ಸರಿಯಲ್ಲ. ಅಂತೆಯೇ ಕುವೆಂಪು ಚಿಂತನೆಗಳೂ ವಿಮರ್ಶಾತೀತವಾಗಿ ಉಳಿಯುವುದು ಸಾಧ್ಯವಿಲ್ಲ.

ಹೀಗೆ ಹೇಳುವಾಗ ಇನ್ನೊಂದು ಸಂಗತಿ ಎಂದರೆ, ಮಾಸ್ತಿ, ಬೇಂದ್ರೆ ಮುಂತಾದ ಹಿಡಿಯ ಲೇಖಕರು ಕುವೆಂಪು ಸಾಹಿತ್ಯಕ್ಕೆ ತೋರಿದ ಪ್ರತಿಕ್ರಿಯೆ ನೆನಪಾಗುತ್ತದೆ. ಹಿರಿಯರೊಳಗೂ ಇರುವ ಲೋಪಗಳಿಗೆ ಅವು ನಿದರ್ಶನ ಎಂದು ಕೈಬಿಡಬೇಕು ಅಷ್ಟೆ. ಕುವೆಂಪು ತಮ್ಮ ಸಮಕಾಲೀನರನ್ನು ಮಾತ್ರ ಕಾಡಿದವರಲ್ಲ. ದಲಿತ-ಬಂಡಾಯ ಚಳವಳಿಯ ಬಿ. ಕೃಷ್ಣಪ್ಪ ಅವರು ಕುವೆಂಪು ಚಿತ್ರಿಸಿದ ದಲಿತ ಪಾತ್ರಗಳ ಬಗ್ಗೆ ಬರೆದ ವಿಮರ್ಶೆ, ಬೊಳುವಾರು ಮಹಮ್ಮದ್ ಕುಂಞ ಅವರು ಕುವೆಂಪು ಕಾದಂಬರಿಗಳಲ್ಲಿ ಮುಸ್ಲಿಂ ಪಾತ್ರ ಚಿತ್ರಣದ ಕುರಿತು ಎತ್ತಿದ ಆಕ್ಷೇಪ ಅಥವಾ ಹೆಚ್. ನಾಗವೇಣಿಯವರು ಸಂವಾದವೊಂದರಲ್ಲಿ ಕುವೆಂಪು ಕಾರಂಬರಿಗಳಲ್ಲಿ ಕರಾವಳಿಯ ಶೂದ್ರ ಪಾತ್ರ ಚಿತ್ರಣದ ಕುರಿತು ಎತ್ತಿದ ಆಕ್ಷೇಪ ಇಂಥವನ್ನು ಮರೆಯುವಂತಿಲ್ಲ. ಅವರ ಆಕ್ಷೇಪಗಳೆಲ್ಲ ಹುಸಿ ಎಂದು ಹೇಳುವುದು ನನ್ನ ನಿಲುವಲ್ಲ. ಬದಲಾಗಿ ಅವರೆಲ್ಲ ನಿರ್ದಿಷ್ಟ ನೆಲೆಗಳಲ್ಲಿ ಎಂದರೆ ದಲಿತ, ಮುಸ್ಲಿಂ ಕರಾವಳಿ ಭಾಗದ ಪ್ರತಿನಿಧಿಗಳಾಗಿ ಗುರುತಿಸಿಕೊಂಡಾಗ ಇಂಥ ಪ್ರಶ್ನೆಗಳು ಅವರನ್ನು ಕಾಡಿದಂತಿವೆ.

ಇಲ್ಲೇ ಹೇಳಬೇಕಾದ ಇನ್ನೊಂದು ಮಾತೆಂದರೆ, ಇನ್ನೊಂದು ಅರ್ಥದಲ್ಲಿ ಇವರೆಲ್ಲ ಕುವೆಂಪು ಅವರನ್ನು ‘ಸಂಪೂರ್ಣ’ ಅಥವಾ ‘ಪರಿಪೂರ್ಣ’ ನೆಲೆಯಲ್ಲಿ ಗ್ರಹಿಸಿದ್ದಾರೆ. ಹೀಗಾಗಿ ಅವರಿಂದ ಅಗತ್ಯಕ್ಕಿಂತ ಹೆಚ್ಚು ಜಾಗರೂಕತೆಯ ಪಾತ್ರಚಿತ್ರಣವನ್ನು ಆಪೇಕ್ಷಿಸಿದಂತಿದೆ. ಎಂತಹ ಮಹತ್ವದ ಬರಹಗಾರರೂ ತಮ್ಮ ಅನುಭವಗಳಿಗೆ ನಿಷ್ಠರು ಎಂಬುದನ್ನು ನಾವು ಮರೆಯಬಾರದು. ಒಂದು ವೇಳೆ ಎಲ್ಲ ವರ್ಗ ಮತ್ತು ಜಾತಿಯವರನ್ನೂ ತೃಪ್ತಗೊಳಿಸುವಂತೆ ಬರೆಯಬೇಕೆಂದರೆ ಬಹುಶಃ ಯಾರಿಗೂ ಬರೆಯಲು ಸಾಧ್ಯವೇ ಆಗಲಾರದು ಎಂದುಕೊಂಡಿದ್ದೇನೆ. ಏಕೆಂದರೆ ಬದುಕಲ್ಲಿ ತಟಸ್ಥ ಎಂಬುದು ಇಲ್ಲವೇ ಇಲ್ಲ. ಅದು ಕೂಡ ಒಂದು ಬಗೆಯ ಪೂರ್ವ ನಿರ್ಧಾರ. ಹೀಗಾಗಿ ಕನ್ನಡದ ಎಲ್ಲ ಕಾಲದ ವಿಮರ್ಶಕರನ್ನೂ ಆಕರ್ಷಿಸಿದ್ದು, ವಿಮರ್ಶೆಗೆ ಒತ್ತಾಯಿಸಿದ್ದು, ಅವರನ್ನು ಚಿಂತಿಸುವಂತೆ ಮಾಡಿದ್ದೇ ಕುವೆಂಪು ಕಾದಂಬರಿಗಳ ಹೆಚ್ಚುಗಾರಿಕೆ ಎಂದೂ ಕರೆಯಬಹುದೇನೋ.

ಬರಹ ಹರಟೆಯ ರೂಪಕ್ಕೆ ತಿರುಗುತ್ತದೆ ಎಂಬ ಭಯ ನನ್ನೊಳಗೂ ಹುಟ್ಟಿಕೊಂಡ ಈ ಹೊತ್ತಿನಲ್ಲಿ ಕೊನೆಯ ಒಂಡೆರಡು ಅನಿಸಿಕೆಗೆ ಬಂದು ಬಿಡುತ್ತೇನೆ. ಈ ಹೊತ್ತು ಕುವೆಂಪು ಅವರನ್ನು ನೆನಪಿಸಿಕೊಳ್ಳುವಾಗ ನನಗೆ ಪುಟ್ಟ ಅಸೂಯೆ ಮತ್ತು ಅಸಮಾಧಾನ ಎರಡೂ ಎದುರಾಗುತ್ತವೆ. ಅಸೂಯೆ ಏಕೆಂದರೆ, ಅವರು ಯಾವ ಯಾವ ವೇಳೆಯಲ್ಲಿ ಬರೆಯುತ್ತಿದ್ದರು, ಅವರ ಬರವಣಿಗೆಯ ಹೊತ್ತಿನಲ್ಲಿ ಹೇಮಾವತಿಯವರು ಹೇಗೆಲ್ಲ ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದರು ಎಂಬುದನ್ನು ಕೇಳಿದಾಗ, ಓದಿದಾಗ ಅಸೂಯೆ ಸಹಜವಾಗಿ ಆಗುತ್ತದೆ. ಹೆಂಗಸರಿಗೆ ಇಂತಹ ಒಂದು ಸ್ವಾತಂತ್ರ್ಯ, ಒಂದು ಮುಕ್ತ ಮತ್ತು ಪೂರಕ ಪರಿಸರ ದೊರೆಯಲು ಇನ್ನೂ ಎಷ್ಟು ಕಾಲ ಕಾಯಬೇಕು ಎಂಬುದು ನನ್ನ ಅಸೂಯೆಗೆ ಕಾರಣ. ಇಂಥ ಒಂದು ಸಹಕಾರದ ಬಗ್ಗೆ ಸ್ವತಃ ಕುವೆಂಪು ಅವರಿಗೂ ಕೃತಜ್ಞತೆ, ಧನ್ಯತಾಭಾವ ಸಾಕಷ್ಟು ಇದ್ದಿರಬೇಕು. ಅದು ‘ಹೇಮಿಗಂಡ’ ಎಂದಾಗಲೇ ಸ್ವರ್ಗದ ಬಾಗಿಲು ತನಗೆ ತೆರೆಯಿತು ಎಂದು ಹೇಳಿರುವುದರಲ್ಲಿ ಪಡಿ ಪೂಡಿದೆ. ಇನ್ನು ಅಸಮಾಧಾನ ಯಾಕೆ ಎಂಬುದನ್ನೂ ಹೇಳಬೇಕು. ಕುವೆಂಪು ಅವರ ವ್ಯಕ್ತಿ ವಿತ್ರಣವನ್ನು ತೇಜಸ್ವಿ ಬಿಟ್ಟರೆ, ಅಷ್ಟೇ ಅನ್ನುವುದಕ್ಕೆ ಒಂದಿಷ್ಟು ಹೆಚ್ಚೇ ಎನ್ನುವಂತೆ ಚಿತ್ರಿಸಿದವರು ತಾರಿಣಿ ಚಿದಾನಂದ. ತೇಜಸ್ವಿ ಏನೋ ಕುವೆಂಪು ಅವರ ಪ್ರಭಾವಲಯದಿಂದ ತಪ್ಪಿಸಿಕೊಂಡು ಸ್ವತಂತ್ರ ಮತ್ತು ಅವರಷ್ಟೇ ಧೀಮಂತ ವ್ಯಕ್ತಿತ್ವವನ್ನು ಬರಹ ಮತ್ತು ಬದುಕಲ್ಲಿ ಕಟ್ಟಿಕೊಂಡರು.

ಆದರೆ, ಹೇಮಾವತಿ ಅವರಂತೆ ತಾರಿಣಿ ಅವರೂ ತಮ್ಮ ಬದುಕಿನ ಮುಖ್ಯ ಕಾಲವನ್ನು ತಂದೆಯ ಸೇವೆಯಲ್ಲಿ ಕಳೆದವರು. ಜೊತೆಗೆ ತಾರಿಣಿಯವರು ಬರೆದ ಮೊದಲ ಕೃತಿಯಲ್ಲೇ ಅವರ ಪ್ರತಿಭೆ ವ್ಯಕ್ತಗೊಂಡಿದೆ. ಕುವೆಂಪು ಬಾಲ್ಯದಲ್ಲೇ ತಾರಿಣಿಯವರ ಪ್ರತಿಭೆ ಗುರುತಿಸಿ, ಅದನ್ನು ವಿಕಸಿಸಲು ಬಿಟ್ಟಿದ್ದರೆ…. ಅದೇ ಮಾತು ರಾಜೇಶ್ವರಿ ತೇಜಸ್ವಿ ಅವರ ಸಂದರ್ಭಕ್ಕೂ ಅನ್ವಯವಾಗುತ್ತದೆ. ಕುವೆಂಪು ಅಂಥ ಹಿರಿಯ ಚೇತನ ಇಂಥ ಸಂಗತಿಗಳಿಗೂ ಗಮನಹರಿಸಬೇಕಿತ್ತು ಎಂಬ ನನ್ನ ನಿರೀಕ್ಷೆಯೂ ಅತಿ ಆಸೆ ಎನಿಸಿದರೂ, ಒಂದೊಮ್ಮೆ ಅದು ಸಾಧ್ಯ ಆಗಿದ್ದರೆ, ಈ ಮೊದಲೇ ಇಬ್ಬರು ಮುಖ್ಯ ಬರಹಗಾರ್ತಿಯರನ್ನು ಬೆಳೆಸಿಕ ಕುಟುಂಬ ಎಂಬ ಕೀರ್ತಿಗೆ ಅವರು ಭಾಜನರಾಗುತ್ತಿದ್ದರು.

ಎತ್ತಣ ಮಾಮರ ಎತ್ತಣ ಕೋಗಿಲೆ…. ಎಂಬಂತೆ, ಕರಾವಳಿ ಭಾಗದಲ್ಲಿ ಬದುಕಿದ ನನಗೆ, ಕುವೆಂಪು ಪ್ರತಿಷ್ಠಾನದ ಸದಸ್ಯರ ಜೊತೆಗಿನ ಒಡನಾಟ, ಶ್ರೀಮತಿ ತಾರಿಣಿ ಮತ್ತು ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರ ಒಡನಾಟ ದೊರೆತದ್ದು ಒಂದು ಅದ್ಭುತ ಆಕಸ್ಮಿ. ಅದು ಉಂಟು ಮಾಡಿರುವ ಸಂಭ್ರಮ, ಖುಚಿ ಮತ್ತು ಪುಲಕಗಳು ಕುವೆಂಪು ಬರಹಗಳು ಕುರಿತು ಮರಳಿ ನೋಡುವಂತೆ ಮಾಡಿವೆ. ಇಂತಹ ಅವಕಾಶವನ್ನು ಒದಗಿಸಿಕೊಟ್ಟ ಎಲ್ಲ ಹಿರಿಯರಿಗೂ ಕೃತಜ್ಞತೆಗಳು ಮತ್ತು ಈ ವಿಚಾರಸಂಕಿರಣದ ನೆಪದಲ್ಲಿ ನನ್ನೊಳಗೆ ನಾನೇ ಸಂವಾದ ಮಾಡುವಂತೆ ಮಾಡಿದ ಪ್ರೊ. ಹಿ. ಚಿ. ಬೋರಲಿಂಗಯ್ಯ ಅವರಿಗೂ ನನ್ನ ಕೃತಜ್ಞತೆಗಳು.

* * *