ಕುವೆಂಪು ಅವರ ಸಾಹಿತ್ಯದಿಂದಲೇ ಅವರ ವ್ಯಕ್ತಿತ್ವವನ್ನು ತಾನು ಕಟ್ಟಿಕೊಂಡಿರುವುದು. ಅವರನ್ನು ನಾಲ್ಕೈದು ಸಲ ನೋಡಿದ್ದರೂ ಅವೆಲ್ಲ ಅವರ ಭೌತಿಕ ರೂಪವನ್ನು ಗ್ರಹಿಸುವಷ್ಟರ ಮಟ್ಟಿಗೆ ಸೀಮಿತ ಅನ್ನಬಹುದೇನೋ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ. ಎ. ಓದುತ್ತಿದ್ದಾಗ ಕುವೆಂಪು ಬೆಳಗಿನ ಹೊತ್ತು ಮಾನಸ ಗಂಗೋತ್ರಿಯ ಮೂಲಕ ವಾಕಿಂಗ್‌ ಹೋಗ್ತಾರಂತೆ ಎಂಬ ವಿಷಯ ತಿಳಿಯಿತು. ನನ್ನ ಹಾಸ್ಟೆಲ್‌ ಎದುರಿಗೆ ಇದ್ದ ಜಯಲಕ್ಷ್ಮಿ ವಿಲಾಸ ಅರಮನೆ ಅಡ್ಮಿನಿಸ್ಟ್ರೇಟಿವ್‌ ಆಫೀಸ್‌ ಆಗಿತ್ತು. ಈ ಕಟ್ಟಡಕ್ಕೆ ನಾಲ್ಕು ದಿಕ್ಕಿಗೂ ಪ್ರವೇಶ ದ್ವಾರಗಳಿದ್ದವು. ಉತ್ತರದ ಕಡೆಯ ಪ್ರವೇಶ ದ್ವಾರವನ್ನು ಸಂಪರ್ಕಿಸುವ ಕೆಂಪು ಮಣ್ಣಿನ ರಸ್ತೆಯ ಎರಡೂ ಕಡೆ ಹುಣಸೆ ಮರಗಳಿದ್ದವು. ಈ ರಸ್ತೆ ಜಯಲಕ್ಷಿಪುರಂನ್ನು ಸಂಪರ್ಕಿಸುತ್ತಿತ್ತು.

ಕುವೆಂಪು ವಿ. ವಿ. ಪುರಂನ ತಮ್ಮ ಮನೆಯ ಬಳಿಯಿಂದ ಗೋಕುಲಂ ರಸ್ತೆಯಲ್ಲಿ ನೇರವಾಗಿ ಬಂದು ಈ ಹುಣಸೆ ಮರದ ರಸ್ತೆಯ ಮೂಲಕ ನಮ್ಮ ಹಾಸ್ಟೆಲ್‌ ಬಳಿ ಇರುವ ಜಯಲಕ್ಷ್ಮಿ ವಿಲಾಸದ ಎದುರಿನಿಂದ ಹಾದು ಹೋಗುತ್ತಿದ್ದರು. ಬೆಳಿಗ್ಗೆ ಆರು ಗಂಟೆ ಸಮಯಕ್ಕೆ ಸರಿಯಾಗಿ ಅವರು ಅಲ್ಲಿ ಕೈಲಿ ವಾಕಿಂಗ್‌ ಸ್ಟಿಕ್‌ ಹಿಡಿದು ಜುಬ್ಬಾ ಪೈಜಾಮಧಾರಿಯಾಗಿ ಹೋಗುತ್ತಿದ್ದರು. ಆ ಸಮಯವನ್ನೇ ಕಾದು ಅವರ ಎದುರಿನಿಂದ ಹಾದು ಹೋಗಿ ಅವರನ್ನು ಸಮೀಪದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಅವರು ಬರುತ್ತಿರಲಿಲ್ಲ. ಬೇರೆ ದಾರಿಯಲ್ಲಿ ಹೋಗುತ್ತಿದ್ದಿರಬೇಕು. ಗಂಗೋತ್ರಿಯ ಹಸಿರಿನ ನಡುವೆ ಶ್ವೆತವಸನಧಾರಿ ಕುವೆಂಪು ಕೈಲಿ ವಾಕಿಂಗ್‌ ಸ್ಟಿಕ್‌ ಹಿಡಿದು ಹೋಗುತ್ತಿದ್ದ ಚಿತ್ರವೇ ನನಗೆ ನೆನಪಿರುವುದು.

ಕುವೆಂಪು ಅವರ ಮನೆಯಿಂದ ಬರುತ್ತಿದ್ದ ಸಹಪಾಠಿ ಅನಲಾ ಒಮ್ಮೆ ಮನೆಗೆ ಆಹ್ವಾನಿಸಿದ್ದಳು. ಆಗ ಕುವೆಂಪು ಆಡಿದ್ದು ಎರಡೇ ವಾಕ್ಯ ‘ಯಾವ ಊರು? ಯಾರ ಮಗಳು?’ ಮತ್ತೊಮ್ಮೆ ಗಣಪತಿ ಹಬ್ಬದ ದಿನ ದೊಡ್ಡಮ್ಮ ನಿನ್ನನ್ನು ಕರೆತರಲು ಹೇಳಿದ್ದಾರೆ ಎಂದು ಆಹ್ವಾನಿಸಿದಳು. ಕುವೆಂಪು ತಮ್ಮ ಪತ್ನಿ, ಪುತ್ರಿ ತಾರಿಣಿ, ಮೊಮ್ಮಗಳು ಪ್ರಾರ್ಥನೆಯ ಜತೆ ದೇವರು ಮನೆಯ ಬಾಗಿಲಿನಲ್ಲಿ ಕುಳಿತು ‘ಗಣೇಶಗಾಥಾ’ ಎಂಬ ಹೆಸರಿನ ಅವರೇ ಬರೆದ ಕವಿತೆಯನ್ನು ಪ್ರಾರ್ಥನೆಯ ರೀತಿಯಲ್ಲಿ ಹೇಳಿದರು. ಅವರ ಜತೆ ಪುಟ್ಟ ಪ್ರಾರ್ಥನಾ ಕೂಡ ತನ್ನ ಬಾಲ ಭಾಷೆಯಲ್ಲಿ ಅಸ್ಪಷ್ಟವಾಗಿ ತೊದಲು ಮಾತಾಡುತ್ತಿದ್ದಳು. ಕುವೆಂಪು ‘ಗಣೇಶಗಾಥಾ’ ಮುಗಿದರೂ ಪ್ರಾರ್ಥನಾ ಹೇಳುತ್ತಲೇ ಇದ್ದಳು. ಅವಳಿಗೆ ತಕ್ಷಣ ನಿಲ್ಲಿಸಲಾಗಲಿಲ್ಲ. ಕುವೆಂಪುಗೆ ನಗೆ ತಡೆಯಲಾಗಲಿಲ್ಲ ನಕ್ಕರು. ಪ್ರಾರ್ಥನಾಗೆ ಅವಮಾನವಾಗಿ ಅಳತೊಡಗಿದಾಗ ‘ಕುವೆಂಪು’ ಇಈಗ ನಿಜವಾದ ‘ಗಣೇಶಗಾಥಾ’ ಅಂದರು.

ಇನ್ನೊಮ್ಮೆ ಹೋದಾಗ ತಾರಿಣಿ ಮತ್ತು ಅನಲಾ ಕೆಲವು ಸ್ಲೈಡ್‌ಗಳನ್ನು ಪ್ರೊಜೆಕ್ಟರ್‌ ಮೂಲಕ ಗೋಡೆಯ ಮೇಲೆ ಬಿಟ್ಟು ತೋರಿಸುತ್ತಿದ್ದರು. ಕುವೆಂಪು ಅವರ ಮೊದಲ ಮಗಳ ಮದುವೆ ದೃಶ್ಯಗಳು ನನಗೆ ಪರಿಚಿತರಾದ ಕೆಲವು ವ್ಯಕ್ತಿಗಳನ್ನು ಅನಲಾ ಆ ಫೋಟೊಗಳಲ್ಲಿ ತೋರಿಸುತ್ತಿದ್ದಾಗ ಕುವೆಂಪು ಏನು ಮಾಡ್ತಾ ಇದೀರಿ? ಊರಿನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಿರಾ ಎಂದು ಕುತೂಹಲದಿಂದ ಮತನಾಡುತ್ತಾ ಅವರು ಸಹ ಬಂದು ನಿಂತು ನೋಡತೊಡಗಿದರು.

ಮತ್ತೊಂದು ಸಲ ಅವರು ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆದ ಲೇಖಕಿಯರ ಕಾರ್ಯಕ್ರಮದ ಉದ್ಘಾಟನೆಗೆ ಬಂದಿದ್ದರು. ಸಭಾಂಗಣದಲ್ಲಿ ಕುಳಿತುಕೊಳ್ಳಲು ಜಾಗವಿಲ್ಲದೆ ವಿದ್ಯಾರ್ಥಿಗಳು ಕಿಕ್ಕಿರಿದು ನಿಂತಿದ್ದರು. ಕುವೆಂಪು ಸಭಾಂಗಣ ಪ್ರವೇಶಿಸುವ ಮುನ್ನವೇ ಕುಳಿತವರೂ ಎದ್ದು ನಿಂತರು ಗೌರವ ಸೂಚಿಸಲು. ಅವರು ವೇದಿಕೆಯ ಮೇಲೆ ಆಸೀನರಾಗುವವರೆಗೂ ಎಲ್ಲರೂ ನಿಂತೇ ಇದ್ದರು. ಸೂಜಿ ಬಿದ್ದರೂ ಕೇಳಬಹುದಾದಷ್ಟು ನಿಶ್ಯಬ್ದವಿತ್ತು. ಕುವೆಂಪು ತಮ್ಮ ಭಾಷಣದಲ್ಲಿ ಲೇಖಕಿಯರ ಬರವಣಿಗೆ ಕುರಿತು ಮಾತನಾಡುತ್ತ ‘ಒಬ್ಬ ಲೇಖಕಿ ನೂರು ಕಾದಂಬರಿ ಬರೆದಿದ್ದಾರೆಂದು ಹೇಳಿದರು. ಅಷ್ಟೆಲ್ಲ ಬರೆಯಲು ಅನುಭವ ಎಲ್ಲಿರುತ್ತದೆ ಎಂದು ಆಶ್ಚರ್ಯವಾಗುತ್ತದೆ. ನನಗೆ ಎರಡು ಕಾದಂಬರಿ ಬರೆದಿದ್ದಕ್ಕೇ ಅನುಭವದ್ರವ್ಯ ಮುಗಿದು ಹೋದಂತೆನಿಸುತ್ತದೆ’ ಎಂದರು. ಹೀಗೆ ಕೆಲವು ಸಲ ಚೂರು ಚೂರು ಕುವೆಂಪು ಅವರನ್ನು ನೋಡಿದ ನಾನು ಇಡಿಯಾಗಿ ಅವರನ್ನು ನೋಡಿದ್ದು ಅವರ ಕೃತಿಗಳಲ್ಲೇ…

ಕವಿಯೊಬ್ಬನ ವ್ಯಕ್ತಿತ್ವ ಬರಹಗಳು ಒಂದು ಪರಿಸರದಲ್ಲಿ ತಮ್ಮ ಪ್ರಭಾವ ವಲಯವನ್ನು ನಿರ್ಮಿಸುತ್ತವೆ ಎಂಬುದು ಕುವೆಂಪು ವಿಚಾರದಲ್ಲಿ ನಿಜವಾಗಿದೆ.

ಕುವೆಂಪು ಕವಿತೆಗಳಲ್ಲಿ ಆದರ್ಶ ಮತ್ತು ವಾಸ್ತವ ಕವಿಯ ಪರಿಸರ  ಮತ್ತು ಬಾಲ್ಯ ಅವನ/ಳ ಅನುಭವವನ್ನು ಅರಿವನ್ನು ಶ್ರೀಮಂತಗೊಳಿಸುವ ಅಂಶಗಳು. ಕುವೆಂಪು ಅವರ ಸೃಜನಶೀಲ ಬರಹಗಳಲ್ಲಿ ಹೆಚ್ಚಿನವು. ಅವರ ಬಾಲ್ಯದ ಅನುಭವಗಳನ್ನಾಧರಿಸಿಯೇ ರಚನೆಗೊಂಡಿವೆ. ಈ ಕೃತಿಗಳನ್ನು ಅವರು ತಮ್ಮ ಕವಿತೆಗಳಲ್ಲಿ ರೂಪಕವಾಗಿ, ಪ್ರತಿಮೆಯಾಗಿ, ಹಲವು ಬಗೆಗಳಲ್ಲಿ ಬಳಸಿಕೊಂಡಿದ್ದಾರೆ. (ಕಾದಂಬರಿಗಳಲ್ಲಂತೂ ಅವರ ಬಾಲ್ಯ ಲೋಕ ಜೀವಂತವಾಗಿ ಮೈತಳೆದಿದೆ). ಒಂದೆಡೆ ಅದು ಸಂತೋಷ ಉಲ್ಲಾಸಗಳನ್ನು ಹೊಮ್ಮಿಸುವ ನೆನಪಾಗಿ, ಹೊಸಕಾಣ್ಕೆಗೆ ಕಾರಣವಾಗಿದ್ದರೆ, ಇನ್ನೊಂದೆಡೆ ವಿಷಾದ, ನೋವು, ದುಗುಡಗಳಿಂದ ತುಂಬಿದ ಕೃತಿಗಳನ್ನು ಸೃಷ್ಟಿಸಿದೆ.

ಈ ಎರಡು ಬಗೆಯ ಕವಿತೆಗಳಲ್ಲಿ ಪ್ರಾತಿನಿಧಿಕವಾಗಿ ನಾನು ‘ಹಾಳೂರು’, ‘ಹೋಗುವೆನು ನಾ,’ ‘ಮಲೆನಾಡಿಗೆ ಮನ ಓಡುವುದು’ ಕವಿತೆಗಳನ್ನು ಆಯ್ದುಕೊಂಡಿದ್ದೇನೆ.

ಕುವೆಂಪು ಕವಿತೆಗಳಲ್ಲಿ ಬಾಲ್ಯದ ಸೃತಿಗಳನ್ನಾಧರಿಸಿ-ರಚಿಸಿದ ಹಲವು ಕವಿತೆಗಳಿವೆ. ಈ ಮೂರು ಕವಿತೆಗಳೂ ನನಗಿಷ್ಟವಾದವುಗಳು. ‘ಹೋಗುವೆನು ನಾ’ ಈ ಬಗೆಯ ಕವಿತೆಗಳಲ್ಲಿ ಒಂದು ‘ಮಾದರಿ’ ಕವಿತೆಯಾಗಿದೆ. ಕುವೆಂಪು ಅವರ ಜೀವನ ದರ್ಶನ., ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳು ಈ ಕವಿತೆಯಲ್ಲಿವೆ.

ಹೋಗುವೆನು ನಾ ಕವಿತೆಗೆ ಹೋಗುವ ಮೊದಲು ‘ಹಾಳೂರು’ ಕವಿತೆಯನ್ನು ಪರಿಭಾವಿಸೋಣ. ‘ಹಾಳೂರು’ ಹೆಸರೇ ಹೇಳುವಂತೆ ಜೀವಂತಿಕೆಯನ್ನು ಕಳೆದುಕೊಂಡ ಊರು. ಆಧುನಿಕತೆಯ ಆಕರ್ಷಣೆಗೆ ವಿದ್ಯಾವಂತರೆಲ್ಲ ಪಟ್ಟಣ ಸೇರಿದರು. ಊರಿನ ಸಮುದಾಯದ ಬದುಕೇ ಪಲ್ಲಟಗೊಂಡಿತು. ಸರಳವಾದ ಕಥನ ಕವಿತೆಯ ದಾಟಿಯಲ್ಲಿ ನಿರೂಪಣೆಯಲ್ಲಿದೆ. ಆದರೆ, ಸಂಕೀರ್ಣವಾದ ಕಹಿಸತ್ಯಗಳ ವಾಸ್ತವ ಚಿತ್ರಣವಿದೆ.

ಊರ ಜಾಣರು ಪುರದ ಪಾಲಾಗಲೆಲ್ಲ
ಊರಿನೊಳಗುಳಿವರೈ ಮಂಕರೇ ಎಲ್ಲ

ಸಿದ್ದಣ್ಣನಂತಹ ‘ಬಿದಿರು ಬುಟ್ಟಿಯ, ಸಂಚಾರಿ ವ್ಯಾಪಾರಿ ಪಟ್ಟಣದಲ್ಲಿ ಅಂಗಡಿ ತೆರೆದಾಗ ಲಾಭದ ಲೋಭ ಮುದುಡಿ ಬದಲಾಗುತ್ತಾನೆ. ಆಧುನಿಕ ಬಿದುರಿನ ಏಕಮುಖಿ ಬೆಳವಣಿಗೆಗೆ… ಕವಿತೆ ಚಿತ್ರಿಸುವುದು ಹೀಗೆ

ಪುರವ ಸಿಂಗರಿಸಿದೊಡೆ ಬಡಜನಗಳೆಲ್ಲ
ಶೃಂಗಾರವನು ತಿಂದು ಜೀವಿಸುವುದಿಲ್ಲ

ಜಾಗತೀಕರಣದ ನೇತ್ಯಾತ್ಮಕ ಅಂಶಗಳನ್ನು ಕುರಿತು ಈಗ ನಾವು ಚರ್ಚಿಸುವ ಅಂಶಗಳು ಈ ಕವಿತೆಯಲ್ಲಿ ಆಗಲೇ ಬಂದಿವೆ. ಆಧುನಿಕ ಬದುಕು ನಗರಮುಖಿ, ನಗರ ಕೇಂದ್ರಿತ. ಸಮುದಾಯದ ಬದುಕಿಗೆ ನೆಮ್ಮದಿ ತರಬಲ್ಲ ಹಲವು ಅಂಶಗಳು ಹಳ್ಳಿಗಳಿಂದ ಮರೆಯಾಗಿ ಕವಿಯ ಕಣ್ಣಿಗೆ ಊರು ಹಾಳೂರಾಗಿ ಕಂಡಿದೆ.

ಅಕ್ಕಸಾಲಿಗರೆಲ್ಲಿ? ಕಮ್ಮಾರರೆಲ್ಲಿ?
ನಿನಗೆ ವಸನವನಿತ್ತ ನೇಯ್ಗೆಯವರೆಲ್ಲಿ?
ದೇಶವೆಲ್ಲಿವ ತುಂಬೆ ಅತಿಭೋಗ ರೋಗ
ಕುಶಲ ಕಲೆಗಳು ಮಾಯವಾದುವೈ ಬೇಗ

ಗ್ರಾಮದ ಜೀವನ ಬಹಳ ಬೇಗ ಬದಲಾವಣೆಯ ಗಾಳಿಗೆ ಸಿಲುಕಿ, ಆಧುನಿಕ ವಸ್ತುವಾಗಿ ಧೋರಣೆಯೇ ಎಲ್ಲೆಲ್ಲೂ ತುಂಬಿ ಭಾವನಾತ್ಮಕ ವಿಷಯಗಳಿಗೆ ಮಹತ್ವ ಕಡಿಮೆಯಾಗಿದೆ ಎನ್ನುವುದನ್ನು ಕವಿ “ಪತಿಯ ಸೇರುವ ಮಗಳಿಗಾಗಳುವವರಿಲ್ಲ” ಎಂದು ಒಂದೇ ಮಾತಿನಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಉಜಿರೆಯಲ್ಲಿ ನಡೆದ ತುಳು ಸಮ್ಮೇಳನದಲ್ಲಿ ನಿರ್ಮಿಸಿದ ಕೃತಕವಾದ ಹಳ್ಳಿಯ ಪರಿಸರದಿಂದ ಕೂಡಿದ ‘ತುಳುಗ್ರಾಮ’ ಗೋವಾದಲ್ಲಿ ನೂರು ರೂ. ಟಿಕೆಟ್‌ ತಗೆದುಕೊಂಡು ನೋಡಿದ ಕಳೆದ ಶತಮಾನದ ‘ಗೋವಾದ ಹಳ್ಳಿ’ಯ ‘ಮದರಿ’ ಮ್ಯೂಸಿಯಂ ನೆನಪಾಗುತ್ತದೆ.

ಗ್ರಾಮ, ಸಮುದಾಯ, ಅಲ್ಲಿನ ಸಾಂಸ್ಕೃತಿಕ ಚಿತ್ರಗಳನ್ನು, ಹೀಗೆ ಮನರಂಜನೆಯ ಉದ್ದೇಶಗಳಿಗಾಗಿ ಕೃತಕವಾಗಿ ಮ್ಯೂಸಿಯಂಗಳಂತೆ ರಕ್ಷಿಸಿಡುವುದು ವಿಷಾದನೀಯ. (ಚಂದ್ರಶೇಖರ ಕಂಬಾರರ ಜನಪದ ರಾಕ್ಷಸ ಕವಿತೆ ಇದೇ ಆಶಯವನ್ನು ಹೊಂದಿದೆ).

ಹಾಳೂರು ಕವಿತೆಯ ವಿಷಾದಕ್ಕೆ ವ್ಯತಿರಿಕ್ತವಾಗಿ ವಿಭಿನ್ನವಾಗಿರುವ ಕವಿತೆ ‘ಹೋಗುವೆನು ನಾ’. ಈ ಕವಿತೆಯಲ್ಲಿ ವಾಸ್ತವವು, ಆದರ್ಶದ ಉನ್ನತಿಗೇರಿದೆ. ‘ಕಾವ್ಯ’ವು ಸೃತಿಯ ಆಧಾರದಿಂದಲೇ ಹೊಸದನ್ನು ಕಾಣಿಸಬಲ್ಲದು ಎಂಬುದಕ್ಕೆ ಈ ಕವಿತೆ ನಿದರ್ಶನವಾಗಿದೆ. ಇಲ್ಲಿ ಹಾಳೂರಿನಂತೆ ‘ದೆಲ್ಲ’ ಕಳೆದುಹೋಯಿತು. ಎಂಬ ಹಳಹಳಿಕೆಯಲ್ಲ. ನಿರೂಪಕನ ಸೃತಿಕೋಶದಲ್ಲಿ ‘ಕಳೆದುಹೋದ ಕಾಲ’ ಸೃತಿಯಾಗಿ ಜೀವಂತವಾಗಿದೆ.

ಕವಿ ಮಲೆನಾಡಿಗೆ ಹೋಗುವ ಹಂಬಲದ ಮೂಲಕ ಕವಿತೆ ಆರಂಭವಾದರೂ ಕವಿತೆ ಬೇರೊಂದು ನೆಲಗೆ ಏರುತ್ತದೆ. ೧೯೩೫ರಲ್ಲಿ ಬರೆದ ಈ ಕವಿತೆಯ ಆರಂಭದಲ್ಲಿ ವಾಚ್ಯಾರ್ಥದ ‘ಮಲೆನಾಡು’ ಎಂಬ ಪರಿಸರಕ್ಕೆ ಹೋಗುವ ಹಂಬಲದ, ವಿವರಗಳಿವೆ. ಈ ಸಾಲುಗಳು ಧ್ವನಿಸುವುದು ಕವಿಯು ಉದ್ದೇಶಿಸಿರುವ ಆದರ್ಶದ ಪ್ರಪಂಚವನ್ನು. ‘ಅಲ್ಲಿ ಹೊರೆ ಹೊಣೆಯಿಲ್ಲ ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ!… ಜಾತಿಗೀತಿಯ ವೇದ ಭೇದದ ಕಟ್ಟು ಕಟ್ಟಳೆ ನಿಲ್ಲದೈ’ ಅನ್ನುವಾಗಲೇ ಕವಿಯ ಕಲ್ಪನೆಯ ನಿರೀಕ್ಷೆಯ ಜಗತ್ತಿ ಇದು ಎಂದು ತಿಳಿಯುತ್ತದೆ.

ಮಲೆನಾಡಿನ ರೂಕ್ಷ ಮುಖಗಳನ್ನು ತಮ್ಮ ವಾಸ್ತವವಾದಿ ಕಾದಂಬರಿಗಳಲ್ಲಿ ಚಿತ್ರಿಸಿರುವ ಕುವೆಂಪು ಅವರು, ತಮ್ಮ ಕಾವ್ಯದಲ್ಲಿ ಮಲೆನಾಡಿನ ಸುಕುಮಾರತೆಯನ್ನು ಚಿತ್ರಿಸುವುದರ ಮೂಲಕವೇ ಕಾವ್ಯದ ಆಸೀಮ ಸಾಧ್ಯತೆಗಳ ಕುರಿತು ತಮ್ಮ ಕಾವ್ಯ ಮೀಮಾಂಸೆಯನ್ನು ಕಟ್ಟಿದ್ದಾರೆ.

ಸುಂದರ ಮನೆಲಾಡಿನ ಕಾಡು, ಬೆಟ್ಟ, ಗಿಡ, ಹೂಹಣ್ಣು ಹೀಗೆ ಎಲ್ಲ ಚಿತ್ರಗಳನ್ನೂ ವರ್ಣನಾತ್ಮಕವಾಗಿ ನಿರೂಪಿಸುತ್ತಾ,

‘ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವೆ
ಕಾವ್ಯಕನ್ಯಾ ಶ್ರಾವ್ಯಕಂಠದೊಳಾತ್ಮೆ ಭೂತಿಯ ಸಾರುವೆ’

ಎಂದು ತಮ್ಮ ಸೃತಿಕೋಶದಲ್ಲಿ ಮಲೆನಾಡನ್ನು ಪುನಸೃಷ್ಟಿಸಿಕೊಂಡು ಲೌಕಿಕತೆಯ ಎಲ್ಲ ಉಪಾಧಿಗಳನ್ನು ಮೀರಿ, ಕಾಲ, ದೇಶ, ಚಿಂತೆಯಾಚೆಗೆ ಹೋಗಿ ಕಾವ್ಯ ಪ್ರಪಂಚದಲ್ಲಿ ಆತ್ಮಭೂತಿಯನ್ನು ಅನುಭವಿಸುವ, ಅಭಿವ್ಯಕ್ತಿಸುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳುತ್ತಾರೆ. ಈ ಕವಿತೆಯನ್ನು ಓದಿದಾಗ ಕುವೆಂಪು ಅವರ ಕಾವ್ಯ ಸೃಷ್ಟಿಗೆ ಅವರು ಹುಟ್ಟಿ ಬೆಳೆದ ಪರಿಸರ ಹೇಗೆ ಕಾರಣವಾಗಿದೆ ಎಂದು ತಿಳಿಯುತ್ತದೆ.

ಪ್ರಸ್ತುತ ಕವಿತೆ ‘ಹೋಗುವೆನು ನಾ’ ‘ಕಾಲದೇಶ’ಗಳನ್ನು ಮೀರಿ ಓದುಗ ತನ್ನ ಭಾವಕೋಶದೊಳಗೆ ಹೊಸ ಲೋಕವೊಂದನ್ನು ಸೃಷ್ಟಿಸಿಕೊಳ್ಳುವಂತೆ ಮಾಡುತ್ತದೆ. ಹಾಗೆಯೇ ಹೊಸ ಅಂತರ್‌ ದೃಷ್ಟಿಯೊಂದನ್ನು ಸಹೃದಯನಿಗೆ ನೀಡುವ ಈ ಕವಿತೆ ಕುವೆಂಪು ಅವರ ಕಾವ್ಯಮೀಮಾಂಸೆ ಮತ್ತು ಅವರ ಜೀವನ ದೃಷ್ಟಿಯನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಿರುವ ಒಂದು ಉತ್ತಮ ಕವಿತೆಯೆಂದೇ ಹೇಳಬಹುದು.

ಈ ಸಂದರ್ಭದಲ್ಲಿ ಕುವೆಂಪು ನೆನಪಿನ ದೋಣಿಯಲ್ಲಿ ಉಲ್ಲೇಖಿಸಿರುವ ಮಾತೊಂದು ನೆನಪಿಗೆ ಬರುತ್ತದೆ. “ಮಹಿಮೆ ಮನಸ್ಸಿಗೆ ಬರಬೇಕಾದರೆ ನಾವು ಘಟನೆಯಿಂದ ಸ್ವಲ್ಪ ದೂರಕ್ಕೆ ಸರಿಯಬೇಕಾಗುತ್ತದೆ. ಕಾಲದಲ್ಲಿಯೂ ಮತ್ತು ದೇಶದಲ್ಲಿಯೂ” (ಪುಟ ೧೧೦೮) ಕುವೆಂಪು ಅವರ ಕಾದಂಬರಿಗಳು, ಕಾವ್ಯದಲ್ಲಿ ಕಾಣುವ ಮಲೆನಾಡಿನಂತೆಯೆ ಇನ್ನೋರ್ವ ಜ್ಞಾನಪೀಠ ಪುರಸ್ಕೃತ ಲೇಖಕಿ ಇಂದಿರಾ ಗೋಸ್ವಾಮಿಯವರ ಕಾದಂಬರಿಯಲ್ಲೂ ಜಮೀನ್ದಾರಿಕೆಯಲ್ಲೂ ಜಮೀನ್ದಾರಿಕೆಯ ಅವನತಿಯ ಚಿತ್ರಣವಿದೆ. ಕುವೆಂಪು ಅವರ ಈ ಮೇಲಿನ ಮಾತಿನಂತೆ ಇಂದಿರಾ ಗೋಸ್ವಾಮಿ ಕೂಡಾ”- “I always believe that distance purifies on’s feelings’’ (Indian Literature-255 page no 196)ಎಂದು ಹೇಳುತ್ತಾರೆ.

ಕುವೆಂಪು ಕಾಲ ದೇಶಗಳಿಂದ ದೂರ ನಿಂತು ಮಲೆನಾಡನ್ನು ತಮ್ಮ ಸೃತಿಕೋಶದಲ್ಲಿ ಕಾಪಾಡಿಕೊಂಡು ಅದನ್ನು ಸೃಜನಶೀಲವಾಗಿ ಅಭಿವ್ಯಕ್ತಿಸಿರುವ ಪರಿ ಅನನ್ಯ. ಕಾಲದಿಂದ ದೂರವಾದರೂ, ದೇಶ ಅದೇ ಆಗಿ ಬದುಕುತ್ತಿರುವ ನನಗೆ ಕುವೆಂಪು ಕೃತಿಗಳು ಪ್ರಿಯವಾಗಲು ಇದೂ ಒಂದು ಕಾರಣವಾಗಿದೆ.

* * *