ಸ್ತ್ರೀಶಕ್ತಿ ಎಂಬುದು ನೈಸರ್ಗಿಕ ಶಕ್ತಿ, ಉತ್ಪಾದನೆ ಮತ್ತು ಸಂರಕ್ಷಣೆಯ ಘಟಕ. ಹೀಗಿದ್ದು ನಮ್ಮ ಪರಂಪರೆಯ ಪುರುಷ ಮನಸುಗಳು ಈ ಸ್ತ್ರೀ ಶಕ್ತಿಯನ್ನು ಗಂಡನ್ನೇ ಅವಲಂಬಿಸಿ ಬಾಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು; ಗಂಡಿನ ಬೇಕು ಬೇಡಗಳ ಸಾಧನವೆಂದೇ ಗ್ರಹಿಸಿತು. ಪರಿಣಾಮ ಗಂಡಿನ ಅಗತ್ಯಗಳನ್ನು ಪೂರೈಸುವಂಥ ಸ್ತ್ರೀ ಮಾದರಿಗಳು ರೂಪಿತವಾದವು. ಉದಾ: ಸೀತೆ, ಸಾವಿತ್ರಿ ಇತ್ಯಾದಿ. ಹೀಗಾಗಿ ಹೆಣ್ಣು ಅಸ್ತಿತ್ವವಿಲ್ಲದವಳಾದಳು. ತನ್ನದೇ ಆದ ಬದುಕನ್ನು ಪುರುಷನ ಬದುಕಿನಲ್ಲಿ, ನೆರಳಿನಲ್ಲೇ ಹುಡುಕಾಡುವಂತಾಯಿತು. ಅದಕ್ಕೆ ತಕ್ಕಂತೆ ನಮ್ಮ ಸಾಮಾಜಿಕ ವ್ಯವಸ್ಥೆಗಳು ಪುರುಷ ಪರವಾಗೇ ಇದ್ದುದರ ಕಾರಣವಾಗಿ, ಸದ್ದಿಲ್ಲದೆ ಹೆಣ್ಣಿಗೆ ಬೌದ್ಧಿಕತೆಯನ್ನು ನಿರಾಕರಿಸಲಾಯಿತು. ಇದರಿಂದ ತನಗಾದ, ಆಗುತ್ತಿರುವ ಅನ್ಯಾಯ, ಅವಹೇಳನ, ದೌರ್ಜನ್ಯಗಳನ್ನೂ ಹೇಳಲಾರದ ಮೂಗುಬ್ಬಸದ ಸ್ಥಿತಿಯಲ್ಲಿ ಹೆಣ್ಣು ಬದುಕಬೇಕಾಯಿತು.

ಅಧೀನ ಸಂಸ್ಕೃತಿಯ ಇಲ್ಲವೆ ಯಜಮಾನ ಸಂಸ್ಕೃತಿಯಲ್ಲಾಗಲಿ, ಪ್ರಭುತ್ವ ಸಂಸ್ಕೃತಿಯ ನೆಲೆಯಲ್ಲಾಗಲಿ, ಸ್ತ್ರೀಯ ಪಾತ್ರ ಬದಲಾಗಲೇ ಇಲ್ಲ. ಎಲ್ಲಾ ಕಾಲದಲ್ಲೂ ಹೆಣ್ಣು ಪುರುಷನ ನೆರಳು ಮಾತ್ರವಾದಳು. ಹಾಗೆಂದೇ ನಮ್ಮ ವ್ಯವಸ್ಥೆ ನಿರ್ಧರಿಸಿಬಿಟ್ಟಿತು. ಇದೆಲ್ಲ ನಿನ್ನೆಯ ಇತಿಹಾಸ ಮಾತ್ರವಲ್ಲ, ಹೆಚ್ಚು ಕಡಿಮೆ ಇಂದಿನ ವರ್ತಮಾನವೂ ಹೌದು.

ಈಗ ಕಾಲ ಬದಲಾಗಿದೆ, ಹೆಣ್ಣು ಅಕ್ಷರ ಜ್ಞಾನಕ್ಕೆ ಕಣ್ಣು ತೆರೆಯುತ್ತಿದ್ದಾಳೆ. ಆರ್ಥಿಕವಾಗಿಯೂ ಕೊಂಚ ಬಲಾಢ್ಯಗಳಾಗುತ್ತಿದ್ದಾಳೆ. ನಿಧಾನವಾಗಿಯಾದರೂ ದೃಢವಾದ ಹೆಜ್ಜೆಯನ್ನು ಇಡುತ್ತಿದ್ದಾಳೆ. ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳುವ ಭರವಸೆಯಲ್ಲಿದ್ದಾಳೆ. ಹೀಗಾಗಿ ಅವಳಲ್ಲಿ ಎರಡು ಪ್ರಕ್ರಿಯೆಗಳು ಏಕಕಾಲದಲ್ಲಿ ತುಡಿತಾ ಇವೆ. ೧. ಅಧೀನ ಅಥವಾ ಅವಲಂಬನೆಯ ನೆಲೆಯಿಂದ ಬಿಡುಗಡೆಗೊಳ್ಳುವುದು. ೨. ತನ್ನೊಳಗಿನ ಸ್ತ್ರೀ ಶಕ್ತಿಯನ್ನು ಮುಕ್ತವಾಗಿಸುವುದು. ಈ ಹಿನ್ನೆಲೆಯಲ್ಲಿ ನಾವು ಕುವೆಂಪು ಸಾಹಿತ್ಯದಲ್ಲಿನ ಮಹಿಳಾಪರ ನಿಲುವುಗಳೇನು? ಅವಳು ಹೇಗೆ ಕಾಣಿಸಿಕೊಂಡಿದ್ದಾಳೆ? ಎಂಬುದಕ್ಕೆ ಉತ್ತರ ಹುಡುಕಬೇಕಿದೆ.

ಕುವೆಂಪು ಅವರು ಸಂಸ್ಕೃತಿ ಚಿಂತಕರು ಮಾತ್ರವಲ್ಲ. ದಾರ್ಶನಿಕರೂ ಕೂಡ. ಸಂಸ್ಕೃತಿಯೊಳಗಿನ ಎಲ್ಲಾ ರೇಖೆಗಳನ್ನು ತಲಸ್ಪರ್ಶಿಯಾಗಿ ಬಲ್ಲವರು. ಭಾರತೀಯ ಸಂಸ್ಕೃತಿ ಹೆಣ್ಣಿನ ಮೈ ಮನಸುಗಳ ಮೇಲೆ ನಡೆಸಿದ ಪ್ರಹಾರ, ಮಾಡಿದ ಶೋಷಣೆ, ವಿಧಿಸಿದ ವಿಧಿ, ನಿಷೇಧ, ಕಟ್ಟುಪಾಡುಗಳು, ಆಕೆ ಅನುಭವಿಸಿದ ಆತಂಕ, ತಲ್ಲಣ, ಕೀಳರಿಮೆಗಳು ಎಲ್ಲಕ್ಕೂ ಹೆಚ್ಚಾಗಿ ಮನುಷ್ಯ ಬದುಕಿನ ಐಪರೀತ್ಯಗಳನ್ನು ತಿಳಿದುಕೊಂಡಿದ್ದರು. ಧರ್ಮ, ಮತಧರ್ಮ, ದೇವರ ಪರಿಕಲ್ಪನೆಗಳು, ಮತ್ತವುಗಳ ಪರಿಣಾಮಗಳು ಸೃಷ್ಟಿಸಿದ ಅವಸ್ಥಾಂತರಗಳನ್ನು ಅರಿತಿದ್ದರು.

ಹೀಗಾಗಿ ಅವರಿಗೆ ಸಾಹಿತ್ಯಕ್ಕಾಗಿ ಸಾಹಿತ್ಯ ಸೃಷ್ಟಿಸುವಲ್ಲಿ ಹೆಚ್ಚು ಒಲವಿರಲಿಲ್ಲ. ಸಾಮಾಜಿಕ ಜವಾಬ್ದಾರಿಯ ಬದ್ಧತೆ ಮತ್ತು ಅದರ ನಿರ್ವಹಣೆ ಅವರಿಗೆ ಮುಖ್ಯವಾಗಿತ್ತು. ಸಮಾಜ ಮುಖಿಯಾದ ಬರಹಗಾರ ಮಾತ್ರ ವ್ಯಸ್ಟಿಯಲ್ಲಿ ಸಮಷ್ಟಿ, ಹಿತವನ್ನು, ಸಮಷ್ಟಿಯಲ್ಲಿ ವ್ಯಸ್ಟಿಹಿತವನ್ನು ಕಾಯಬಲ್ಲ. ಇದೊಂದು ವಿಶೇಷ ಮನಸ್ಥಿತಿ. ಸಾಂಸ್ಕೃತಿಕವಾದ ಮನಸ್ಸು. ಇಂಥ ಮನಸ್ಸಿಗೆ ಕಾವ್ಯನ್ಯಾಯ, ಸಾಮಾಜಿಕ ನ್ಯಾಯ ಎನ್ನುವುದು ಬೇರೆ ಅಲ್ಲ. ಅವೆರಡನ್ನು ಒಂದುಗೂಡಿಸುವಂತಹ ಕೆಲಸವನ್ನು ಸಾಮಾಜಿಕ ಬರಹಗಾರ ಮಾಡುತ್ತಾನೆ. ಕುವೆಂಪು ಅವರು ಸಾಧಿಸಿದ್ದು ಇದನ್ನೇ. ಆ ಕಾರಣಕ್ಕೆ ಅವರು ಸಾಂಸ್ಕೃತಿಕ ನಾಯಕ ಎನಿಸಿದರು. ಅವರು ಸೃಷ್ಟಿಸಿದ ಸ್ತ್ರೀಪಾತ್ರ ಚಿತ್ರಗಣಲ್ಲಿ ಇದೇ ಆಶಯ ಸಾಕಷ್ಟು ಗಟ್ಟಿಯಾಗಿಯೇ ಕಾಣಿಸಿಕೊಂಡಿದೆ. ಅದನ್ನು ಒಂದು ನಿರ್ದಿಷ್ಟ ತಾತ್ವಿಕತೆಯಲ್ಲಿ ಕಾಣಿಸುತ್ತಾರೆ. ಪ್ರಧಾನವಾಗಿ ಪೂರ್ಣದೃಷ್ಟಿ ಕೆಲಸ ಮಾಡುತ್ತದೆ. ಜೊತೆ ಜೊತೆಯಲ್ಲಿ ಸರ್ವೋದಯ ಸಮಾನತಾ ತತ್ವಗಳು ಹೆಜ್ಜೆ ಹಾಕುತ್ತವೆ. ಇದರಿಂದಾಗಿ ಕುವೆಂಪು ದೃಷ್ಟಿಯಲ್ಲಿ ಸಮಗ್ರತೆಯ ನೋಟವಿದೆ.

ಕುವೆಂಪು ಅವರ ಸೃಷ್ಟಿಸಿದ ಸ್ತ್ರೀಲೋಕ ವೈವಿಧ್ಯಮಯ. ವಿಸ್ತೃತ. ಎಲ್ಲಾ ಜಾತಿಯ, ಎಲ್ಲಾ ವರ್ಗದ, ಎಲ್ಲಾ ಸ್ವಭಾವದ, ಎಲ್ಲಾ ಸ್ತರದ ಸ್ತ್ರೀಪಾತ್ರಗಳನ್ನು ಕಾಣಬಹುದು. ಇವೆಲ್ಲ ಒಂದೇ ಎರಕದಲ್ಲಿ ಹೊಯ್ದಂಥವುಗಳಲ್ಲ. ಸಂದರ್ಭ, ಸನ್ನಿವೇಶಕ್ಕೆ ಅನುಗುಣವಾಗಿ ಬೇರೆ ಬೇರೇಯದೇ ಆದ ನೆಲೆಯಿಂದ ಬಂಧಥಂವು. ಅದೇ ಸಂದರ್ಭದಲ್ಲಿ ಈ ವೈವಿಧ್ಯತೆ ಬದಲಾದ ಸ್ತ್ರೀ ಜೀವನಕ್ಕೆ ತಕ್ಕಂತಹ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇದನ್ನು ಕುವೆಂಪು ಮೂರು ನೆಲೆಯಲ್ಲಿ ಸಾಧಿಸುತ್ತಾರೆ.

೧. ಚರಿತ್ರೆಯೇ ಇಲ್ಲದವರಿಗೆ ಚರಿತ್ರೆಯನ್ನು ಕಟ್ಟಿಕೊಡುತ್ತಾರೆ. ಉದಾಹರಣೆಗೆ ಮಂಥರೆ.

೨. ದನಿಯೇ ಇಲ್ಲದವರಿಗೆ ದನಿಯನನ್ನು ಕೊಡಿಸುತ್ತಾರೆ. ಉದಾಹರಣೆಗೆ ಊರ್ಮಿಳೆ.

೩. ಅತ್ಯಂತ ತಳ ಸಮುದಾಯದವರನ್ನು ಪ್ರಧಾನ ಭೂಮಿಕೆಗೆ ತಂದು ನಿಲ್ಲಿಸುತ್ತಾರೆ. ಉದಾಹರಣೆಗೆ ತಿಮ್ಮಿ, ಸೇಸಿ. ಇವರೆಲ್ಲಾ ತಮ್ಮ ವ್ಯಕ್ತಿಗತ ಮಿತಿಯೊಳಗೇ ಹೊಸತನ್ನು ಸಾಧಿಸ ಬಯಸಿದವರು ಎಂಬುದು ವಿಶೇಷ.

ಕುವೆಂಪು ಅವರು ಎಲ್ಲಿಯೂ ಹೆಣ್ಣನ್ನೂ ಪ್ರತಿಭನಾತ್ಮಕ ನೆಲೆಯಲ್ಲಿ ದುಡಿಸಿಕೊಳ್ಳುವುದಿಲ್ಲ. ಅಪವಾದವಿದ್ದರೂ ಅದು ತೆಳುವಾಗಿ ಕಾಣಿಸಿಕೊಳ್ಳುತ್ತದೆ ಹೊರತು ದೃಢವಾಗಿ ಅಲ್ಲ. ಅಂದರೆ ಬಂಡಾಯವನ್ನು ಹಠತೊಟ್ಟು ಸಾಧಿಸುವುದಿಲ್ಲ. ಬದಲಾವಣೆ ಮಾತ್ರ ತರುತ್ತಾರೆ. ಒಂದರ್ಥದಲ್ಲಿ, ಬದಲಾವಣೆಗಿಂತ ಸುಧಾರಣೆಯೇ ಅವರಿಗೆ ಪ್ರಧಾನವಾಗುತ್ತದೆ. ಅದಕ್ಕೂ ಮಿಗಿಲಾಗಿ ಹೆಣ್ಣಿನ ಆಶೋತ್ತರಗಳಿಗೆ ನ್ಯಾಯ ಕಲ್ಪಿಸುವುದು ಹೆಚ್ಚು ಮುಖ್ಯವಾಗುತ್ತದೆ. ಕುವೆಂಪು ಅವರ ಈ ಬಗೆಯ ತಿಳಿವಳಿಕೆಗೆ ಕಾರಣ ಅವರು ಸಂಸ್ಕೃತಿಯನ್ನು ಪುನಾರಚಿಸುವ ದೃಷ್ಟಿಕೋನ. ನಮ್ಮ ಸಂಸ್ಕೃತಿಯನ್ನು ನೇರವಾಗಿ ಪ್ರತಿನಿಧಿಸುವುದೇ ಸಾಮಾಜಿಕ ವ್ಯವಸ್ಥೆ. ಅದರಲ್ಲಿನ ಹಾಗೂ ಮನುಷ್ಯ ತಿಳಿವಳಿಕೆಯಲ್ಲಿರುವ ದೋಷಗಳನ್ನು ಕುವೆಂಪು ಶೋಧಿಸಿ ಪರಿಶೀಲಿಸುತ್ತಾರೆ. ಪರಿಶೀಲಿಸಿ ಸಮಕಾಲೀನ ಅಪೇಕ್ಷೆಗಳಿಗೆ ಹೊಂದಿಸುತ್ತಾರೆ. ಹೊಂದಿಸಿ ಪುನರ್‌ ರಚಿಸುತ್ತಾರೆ; ಪುನರ್‌ ವ್ಯಾಖ್ಯಾನಿಸುತ್ತಾರೆ. ಇದನ್ನು ಕುವೆಂಪು ಕ್ರಾಂತಿಕಾರಿಯಂತೆ ಸಾಧಿಸುವುದಿಲ್ಲ. ಹೆಣ್ಣಿಗೆಂದೇ ಹೊಸ ವೇದಿಕೆಯನ್ನೇನೂ ನಿರ್ಮಿಸುವುದಿಲ್ಲ. ಬದಲಾಗಿ ವ್ಯವಸ್ಥೆಯಲ್ಲಿ ಹೆಣ್ಣನ್ನು ಇರಿಸಿದ್ದ ಇರುವಿಕೆಯನ್ನು ಅನಾವರಣ ಮಾಡುತ್ತಾ, ಬದಲಾದ ಕಾಲಘಟ್ಟದಲ್ಲಿ ಹೆಣ್ಣಿನ ಚಲನೆಯ ಗತಿಯನ್ನು ನಿರ್ದೇಶಿಸುತ್ತಾ, ಆಗುವಿಕೆಯನ್ನು ದೃಢಪಡಿಸುತ್ತಾರೆ. ಇರುವಿಕೆ-ಆಗುವಿಕೆಗಳು ಮುಂದಣ ಬದುಕಿನಲ್ಲಿ ಮಾಗುತ್ತಾ, ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡರೆ ಒಳಿತನ್ನು ಹೊಂದಬಹುದೆಂಬ ಭರವಸೆಯನ್ನು ಇಹಪರ ಸುಖದಲ್ಲಿ ತುಂಬುತ್ತಾರೆ.

ಕುವೆಂಪು ಅವರು ಮೂಲತಃ ಸ್ತ್ರೀಪರ ಕಾಳಜಿಯುಳ್ಳುವರು; ಸ್ತ್ರೀವಾದಿ, ಆಧುನಿಕವಾದ ಈ ಕಾಲಘಟ್ಟದಲ್ಲಿ ಸ್ತ್ರೀವರ್ಗಕ್ಕೆ ಹೊಸ ಭರವಸೆ. ಹೊಸ ಚೈತನ್ಯ, ಬೆಳಕು ಮೂಡಿಸುವ ತಾತ್ವಿಕ ಚಿಂತನೆಯೇ ಸ್ತ್ರೀವಾದ. ಇದೊಂದು ತಾಯ್ತನದ ಮನಸ್ಥಿತಿ. ಬದುಕನ್ನು ತಾಯಿಯಂತೆ ತಣ್ಣಗೆ ನೋಡುವ, ಸಾವಧಾನದಿಂದ ಗ್ರಹಿಸುವ, ಎಚ್ಚರಿಕೆ ನೀಡುವ, ತಾಯಿಯಂತೆ ರಮಿಸುವ ಪ್ರೀತಿಯ ಮನಸ್ಸು. ಈ ಕಾರಣಕ್ಕೇನೋ ಕುವೆಂಪು ಅವರ ಸಾಹಿತ್ಯ ದೃಷ್ಟಿಯಲ್ಲಿ ಬಹುತೇಕವನ್ನು ಆಕ್ರಮಿಸಿಕೊಂಡಿರುವುದೇ ಸ್ತ್ರೀಪಾತ್ರವರ್ಗ. ಅವರ ಎರಡೂ ಬೃಹತ್ ಕಾದಂಬರಿಗಳು ಸ್ತ್ರೀ ಅಂಕಿತದವೇ ಆಗಿವೆ. ಇದು ಆಕಸ್ಮಿಕವಾದುದಲ್ಲ. ಇವುಗಳಲ್ಲಿ ಬದುಕಿನ ವಿವಿಧ ಪ್ರಕ್ರಿಯೆಗಳ ಹೆಣ್ಣಿನ ಹೋರಾಟದ ಅಭಿವ್ಯಕ್ತಿ ಇದೆ. ಇಲ್ಲೆಲ್ಲ ನಮ್ಮ ಗ್ರಹಿಕೆಗೆ ಬರುವುದೇ ಅವರ ಸ್ತ್ರೀಪರ ನಿಲುವುಗಳು.

ಈ ಹೊತ್ತು ಸ್ತ್ರೀವಾದ ಸಾಹಿತ್ಯಿಕ, ತಾತ್ವಿಕ ಪರಿಕಲ್ಪನೆಯಾಗಿ ಬಹುದೊಡ್ಡದಾಗಿ ಬೆಳೆದಿದೆ. ಆದರೆ, ಅದು ಭಾರತವನ್ನು ಪ್ರವೇಶಿಸುವ ಪೂರ್ವದಲ್ಲೇ ಕುವೆಂಪು ಅವರು ಅದರ ಉದ್ಘಾಟಕರಾಗಿ ನಿರ್ವಹಿಸಿದ ರೀತಿನೀತಿಗಳು ಇವೆಯಲ್ಲ, ಅದನ್ನು ಎಲ್ಲಾ ಕಾಲಕ್ಕೂ ಆಧುನಿಕ ಸ್ತ್ರೀ ಮನಸುಗಳು ಕೃತಜ್ಞತೆ, ಅಭಿನಾನದಿಂದ ಗೌರವಿಸಲೇಬೇಕು. ಅದೇ ಸಂದರ್ಭದಲ್ಲಿ ಇದು ಪರಮಹಂಸ, ಶಾರದಾದೇವಿಯರ ಗರಡಿ ಮನೆಯಲ್ಲಿ ಕುವೆಂಪು ಅವರ ಮನಸು ವಿಕಾಸಗೊಂಡದ್ದರ ಫಲಶೃತಿಯೂ ಆಗಿದೆ ಎಂಬುದನ್ನು ಒಪ್ಪಬೇಕಾಗುತ್ತದೆ.

ಬೇಂದ್ರೆ ಅವರು ಒಂದು ಕಡೆ ಕುವೆಂಪು ಅವರನ್ನು “ಜಗದಕವಿ ಯುಗದ ಕವಿ” ಎಂದು ಕೊಂಡಾಡಿದ್ದಾರೆ. ಈ ಪುರಸ್ಕಾರದಲ್ಲಿ ಅವರ ಸಾಹಿತ್ಯ ಸೃಷ್ಟಿ ಮಾತ್ರವಲ್ಲ ಗೊಮ್ಮಟ ಸದೃಶ ವ್ಯಕ್ತಿತ್ವವೂ ತುಂಬಿದೆ. ಬದುಕು-ಬರಹ ಒಂದಾಗಿಸಿಕೊಂಡಿದ್ದ ಶುಚಿ-ರುಚಿಯ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದವರು ಮಹಾತಾತ್ವಿಕರಲ್ಲ, ವಿದ್ವಾಂಸರಲ್ಲ, ಚಿಂತಕರಲ್ಲ, ಒಬ್ಬ ಹೆಣ್ಣು. ಆ ಹೆಣ್ಣೇ ಊರ್ಮಿಳೆ. ‘ಕೃತ್ತಿಕೆ’ ಕವನಸಂಕಲನದಲ್ಲಿ ‘ಊರ್ಮಿಳಾದೇವಿ’ ಎಂಬೊಂದು ಪದ್ಯವಿದೆ. ಅಲ್ಲಿ ತನ್ನ ಜೀವನ ಆದರ್ಶ, ಜೀವನದೃಷ್ಟಿಗೆ ಕಾರಣ ಯಾರೆಂಬುದನ್ನು ಊರ್ಮಿಳೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ನನ್ನ ಜೀವನ ನೇತ್ರ
ನಿತ್ಯ ಬಾಳಂತಿರ್ಕೆ ಹೇ ಗೋಚರಾತೀತೆ

ಇದು ಆಡಂಬರದ ಮಾತಲ್ಲ; ವ್ಯವಹಾರಿಕವಾದದ್ದೂ ಅಲ್ಲ. ಹೆಣ್ಣಿನಲ್ಲಿರುವ ಔನ್ನತ್ಯವನ್ನು ಕಂಡುಕೊಂಡ ಬಗೆ. ಹೆಣ್ಣನ್ನು ಗ್ರಹಿಸಿದ ರೀತಿ; ಸ್ಥಾನ ನಿರ್ದೇಶನದ ಸೂಚಕ. ಇದಕ್ಕೆ ಪೂರಕವಾಗಿ ‘ಸ್ವರ್ಗದ್ವಾರದಿ ಯಕ್ಷಪ್ರಶ್ನೆ; ಕವನವನ್ನಿಟ್ಟು ನೋಡಬಹುದು. ಇದೊಂದು ವ್ಯಕ್ತಿನಿಷ್ಠ ಪದ್ಯ. ಕವಿಯ ವೈಯಕ್ತಿಕವಾದ ಭಾವನಾತ್ಮಕ ತುಡಿತದ ದಾಖಲೂ ಕೂಡ. ಇದರಲ್ಲಿ ಕನಸಿನಲ್ಲಿ ಸ್ವರ್ಗಕ್ಕೆ ಹೋದ ಈ ಕವಿಯನ್ನು ದ್ವಾರಪಾಲಕ ಯಾರು? ಎಂದು ಪ್ರಶ್ನಿಸುತ್ತಾನೆ. ಕವಿ ತನ್ನ ಹೆಸರು, ಗಳಿಸಿದ ಪದವಿ, ಅಲಂಕರಿಸಿದ ಸ್ಥಾನ ಇತ್ಯಾದಿಗಳನ್ನು ಹೇಳುತ್ತಾ ಹೋದರೂ ದ್ವಾರಪಾಲಕ ಬಾಗಿಲು ತೆರೆಯುವುದಿಲ್ಲ. ಒಳಗನ್ನು ಶೋಧಿಸಿ ಉತ್ತರಿಸುವಂತೆ ಕಟ್ಟು ವಿಧಿಸುತ್ತಾನೆ. ತೀರಾ ಯೋಚಿಸಿ ಯೋಚಿಸಿ ಕವಿ ಕೊನೆಗೆ ತಾನು “ಹೇಮಿಗಂಡ” ಎನ್ನುತ್ತಾನೆ. ಸ್ವರ್ಗದ ಬಾಗಿಲು ತೆರೆದುಕೊಳ್ಳುತ್ತದೆ. ಹೊರನೋಟಕ್ಕೆ ಕವಿತೆ ಅತ್ಯಂತ ಸರಳವಾಗಿದೆ. ಒಳನೋಟಕ್ಕೆ ಕವಿಯ ಅಂತಃಸತ್ವ, ಅಂತರಂಗ ಸ್ತ್ರೀಯಾತ್ಮಕವಾಗಿದೆ ಎಂಬುದನ್ನು ಅರ್ಥಪೂರ್ಣವಾಗಿ ಧ್ವನಿಸುತ್ತದೆ. ಇದು ಅವರ ಕಾವ್ಯಧ್ವನಿ ಮಾತ್ರವಲ್ಲ ಜೀವನ ಧ್ವನಿ. ಪತ್ನಿ ಹೇಮಾವತಿಯ ಸಾವಿನಾಚೆಗೆ ಕುವೆಂಪು ಸ್ಫೂರ್ತಿಯ ನೆಲೆಯೇ ಬತ್ತಿ ಹೋಯಿತು ಎಂಬ ಸತ್ಯ ತಿಳಿದಾಗ, ಅವರ ಸ್ತ್ರೀಪರ ಕಾಳಜಿಯೊಳಗಿರುವ ನಿಷ್ಠುರ ಜೀವನ ದರ್ಶನ ಸತ್ಯ ಎಂಥವರ ಅರಿವಿಗೂ ಬರುತ್ತದೆ. ಆ ಮೂಲಕ, ಬದುಕು-ಬರಹ, ಸಾಮಾಜಿಕ ಬದ್ಧತೆ ಮತ್ತು ಸಾಹಿತ್ಯ ನಿರ್ವಹಣೆಯಲ್ಲಿನ ಅನನ್ಯತೆಯ ದರ್ಶನವಾಗುತ್ತದೆ. ಅದನ್ನು ‘ಹೆಣ್ಣು’ (ಕೃತ್ತಿಕೆ) ಎಂಬ ಮತ್ತೊಂದು ಪದ್ಯದಲ್ಲಿ ದಾಖಲು ಮಾಡುತ್ತಾರೆ.

ಸಂಸ್ಕೃತಿಯ ರಸಿಕತೆಯ ಕಲೆಯ ಕಾವ್ಯದ ತೆಂಪು
ನೀನಿರಲ್ಕೆಲ್ಲ, ಸಾಧನೆಗೆ ನೀ ಫಲಂ, ಸಿದ್ಧಿಂ
ನೀನಿಲ್ಲದಿಹ ತಪಕಿಹುದೆ ಶುದ್ಧಿ ಮೇಣ್‌ ಬುದ್ಧಿ…

ಕುವೆಂಪು ಅವರು ಹೆಣ್ಣನ್ನು ಕುರಿತು ಆಲೋಚಿಸುವಾಗ ಒಂದೆಡೆ, ಪರಂಪರೆಯ ಶ್ರದ್ಧೆಯ ಮನಸ್ಸು ಇನ್ನೊಂದೆಡೆ ಆಧುನಿಕ ಮನಸ್ಸು-ಎರಡೂ ಒಟ್ಟೊಟ್ಟಿಗೆ ಕೆಲಸ ಮಾಡುತ್ತವೆ. ಪರಿಣಾಮವಾಗಿ ಸರ್ವಸಮ್ಮತವಾದ ತಿಳಿವಳಿಕೆಯ ವಿಸ್ತಾರವನ್ನು ತೆರೆದಿಟ್ಟಿದೆ. ಕುವೆಂಪು ಅವರಿಗೆ ಮಹಿಳೆ ಅನೇಕ ಮುಖದಲ್ಲಿ ಕಂಡಿದ್ದಾಳೆ. ಆ ಬಗ್ಗೆ ಕುವೆಂಪು “ನನ್ನ ದೃಷ್ಟಿಯಲ್ಲಿ ಹೆಣ್ಣು ಕೇವಲ ಮಾನುಷಿಯಲ್ಲ; ಅಬಲೆಯೂ ಅಲ್ಲ; ಅವಳೊಂದು ಮಹಾಶಕ್ತಿ” ಎನ್ನುತ್ತಾರೆ. ಆ ಮಹಾಶಕ್ತಿ ಅವರಿಗೆ ಹಲವಾರು ರೂಪಭೇದ, ಪಾತ್ರಭೇದಗಳ ಮೂಲಕ ಕಾಣಿಸಿಕೊಳ್ಳುತ್ತಾ ಹೋಗಿರುವುದನ್ನು ಅವರು ಚಿತ್ರಿಸಿರುವ ಸ್ತ್ರೀಲೋಕದ ವೈವಿಧ್ಯಗಳಲ್ಲೇ ಗುರುತಿಸಬಹುದು.

ಕುವೆಂಪು ಅವರು ಹೆಣ್ಣನ್ನು ಸಮಗ್ರ ನೆಲೆಯಲ್ಲಿ ಪರಿಭಾವಿಸುತ್ತಾರೆ. ಆಕೆಯನ್ನು ಪ್ರಕೃತಿಯೊಂದಿಗೆ ಸಮೀಕರಿಸುವ ಮೂಲಕ ಹೊಸ ವ್ಯಾಖ್ಯಾನವನ್ನು ಮಾಡುತ್ತಾರೆ. ಕುವೆಂಪು ಅವರ ಪಾಲಿಗೆ ಪ್ರಕೃತಿ ಬದುಕಿನ ಜೀವನಮೌಲ್ಯ, ಅಭಿವ್ಯಕ್ತಿಯ ಮೂಲಧಾತು, ಚೈತನ್ಯ, ಸ್ಫೂರ್ತಿ ಎಲ್ಲಾ ಅವರಿಗೆ ಪ್ರಕೃತಿ ಬೇರೆ ಅಲ್ಲ, ಹೆಣ್ಣು ಬೇರೆ ಅಲ್ಲ. ನಿಸರ್ಗ, ಭೂಮಿ, ನದಿ, ಭಾಷೆ, ಶಾರದೇವಿ, ಭಾರತಾಂಬೆ ಎಲ್ಲದರಲ್ಲೂ ಹೆಣ್ಣನ್ನು ಕಾಣುತ್ತಾರೆ. ತಳಿರು, ಹಣ್ಣು, ಹೂ ಎಲ್ಲವೂ ತಾಯಿಯ ಪ್ರತೀಕಗಳೇ. ಇದು ಕುವೆಂಪು ಹೆಣ್ಣನ್ನು ಹೇಗೆ ಅಖಂಡ ನೆಲೆಯಲ್ಲಿ ಕಾಣಿಸುತ್ತಾರೆಂಬುದಕ್ಕೆ ಸಾಕ್ಷಿಗಳಾಗುತ್ತವೆ.

ಪ್ರಕೃತಿಗೆ ಜಗತ್ತನ್ನು ಪೊರೆಯುವಂಥ ಶಕ್ತಿ ಇರುವಂತೆ; ಹೆಣ್ಣಿಗೆ ಮನುಕುಲವನ್ನು ಬೆಳೆಸುವ, ಸಂರಕ್ಷಿಸುವ ಶಕ್ತಿಯೂ ಇದೆ. ಪ್ರಕೃತಿ ಋತುಮಾನಕ್ಕನುಗುಣವಾಗಿ ಅನೇಕ ಆಯಾಮಗಳನ್ನು ಪಡೆದುಕೊಂಡರೆ; ಹೆಣ್ಣು ವಯೋಮಾನಕ್ಕನುಸಾರವಾಗಿ ಅನೇಕ ಸ್ಥಿತ್ಯಂತರಗಳನ್ನು ಪಡೆದುಕೊಳ್ಳುತ್ತಾಳೆ. ಮೂಲತಃ ಆಕೆ ಉತ್ಪಾದನೆಯ ಶಕ್ತಿಯಾಗಿದ್ದಾಳೆ. ಒಟ್ಟು ನೆಲೆಯಲ್ಲಿ ದೈವೀಶಕ್ತಿಯಾಗಿ ಬದುಕಿನ ಒಳಿತಿನ ಸಂಕೇತವಾಗಿದ್ದಾಳೆ; ಕುವೆಂಪು ವ್ಯಕ್ತಿತ್ವದ ಮೊತ್ತವಾಗಿದ್ದಾಳೆ. ‘ಜೇನಾಗುವಾ’ ಪದ್ಯದಲ್ಲಿ ಅದನ್ನು ಕುವೆಂಪು ಮುಕ್ತವಾಗಿಯೇ ಕಂಡರಿಸಿದ್ದಾರೆ.

“ದೇವಿ, ಪ್ರತಿಭೆಗೆ ನೀನೇ ಭಾವ ವಿದ್ಯುಚ್ಛಕ್ತಿ,
ಕಲೆಗೆ ವಿದ್ಯಾಶಕ್ತಿ; ಪ್ರಾಣಕ್ಕೆ ಪ್ರೇಮಶಕ್ತಿ
ಕವಿಗೆ ಸ್ವರ್ಗಸ್ಫೂರ್ತಿ”

ಇಲ್ಲಿ ನಾವು ಗ್ರಹಿಸಬೇಕಾದ್ದು, ಕುವೆಂಪು ಅವರ ಸಮಾನತಾ ತತ್ವ. ಪ್ರಕೃತಿಗೆ ಪರ್ಯಾಯವಾಗಿ ಹೆಣ್ಣನ್ನು ಅವರು ಪ್ರತಿಷ್ಠಾಪಿಸುವ ಹೊತ್ತಿನಲ್ಲೂ ಗಂಡು ಹೆಣ್ಣಿನ ಸಂಬಂಧವನ್ನು ಪ್ರಜಾಸತ್ತಾತ್ಮಕವಾಗಿ ಪ್ರಕೃತಿ ಪುರುಷ ತತ್ವದ ಮೂಲಕವೇ ಕಾಣಿಸುತ್ತಾರೆ. ಅವರ ದೃಷ್ಟಿಯಲ್ಲಿ ಪ್ರಕೃತಿ ತನಗೆ ತಾನೇ ಮಹತ್ತಲ್ಲ; ಪುರುಷ ಸ್ಪರ್ಶವೂ ಬೇಕು. ಅವೆರಡೂ ಬೇರೆ ಬೇರೆ ಅಲ್ಲ, ಪರಸ್ಪರ ಪೂರಕವಾದಂಥವು. ಸಮಾನ ರೇಖೆಯಲ್ಲಿ ಚಲಿಸುತ್ತಾ ಗೌರವದಿಂದ ಕೂಡಿಕೊಳ್ಳುವಂತಾಗಬೇಕೆಂಬುದು ಅವರ ಮೂಲ ಅಪೇಕ್ಷೆ ಮತ್ತು ನಿರೀಕ್ಷೆ.

ಸರ್ವಜೀವ ಜಡಗಳಲ್ಲಿ
ನೀವೇ ಗಂಡು ನಾನೇ ಹೆಣ್ಣು
ಸಕಲಸೃಷ್ಟಿ, ಮೂಲದಲ್ಲಿ
ಪುರು, ಪ್ರಕೃತಿ ಎರಡೂ ಕಣ್ಣು
ಶಿವಶಕ್ತಿ; ಶಕ್ತಿಶಿವ
ಮಿಲನದಾಟವದುವೆ ಭವ

‘ಹರಿಗಿರಿಜಾ’ ಪದ್ಯಭಾಗವಿದು. ಇಲ್ಲಿ ಕವಿ ಸ್ತ್ರೀತ್ವವನ್ನು ತನ್ನ ಮೇಲೆ ಆರೋಪಿಸಿಕೊಂಡಿರುವುದನ್ನು ವಿಶೇಷವಾಗಿ ಗಮನಿಸಬೇಕು. ಪ್ರೀತಿಯ ಅಧಿಕ್ಯವನ್ನು, ಪ್ರೇಮದ ಸಾಕ್ಷಾತ್ಕಾರವನ್ನು, ತ್ಯಾಗದ ಮಹತ್ತನ್ನು ಸ್ತ್ರೀಯಾತ್ಮಕತೆಯ ಮೂಲಕ ಕುವೆಂಪು ಅವರು ದೃಢಪಡಿಸಿರುವುದಕ್ಕೆ ಇದೇ ಕಾರಣವಿರಬೇಕು. ಹಾಗೆ ಧ್ವನಿಸುವ ಮೂಲಕ ಸ್ತ್ರೀ ಪುರುಷಾಧೀನ ಎಂಬ ಪರಂಪರೆಯ ತಪ್ಪನ್ನು ಕುವೆಂಪು ಅವರು ತಿದ್ದಿ ಸರಿಪಡಿಸುತ್ತಾರೆ.

ಕುವೆಂಪು ಅವರ ಜೀವನಶೃದ್ಧೆ, ಬದುಕನ್ನು, ಬದುಕಿನ ಕ್ರಿಯೆಯನ್ನು ಎಲ್ಲೂ ನಿಷೇಧಾತ್ಮಕವಾಗಿ ನೋಡುವುದೇ ಇಲ್ಲ. ವಾಸ್ತವದಲ್ಲಿ ನಮ್ಮ ಪರಂಪರೆ ಹೆಣ್ಣಿನ ಅಸ್ತಿತ್ವವನ್ನು ಗೃಹಕೃತ್ಯ ಮತ್ತು ಮಕ್ಕಳನ್ನು ಹೆರುವುದಕ್ಕಷ್ಟೆ ಸೀಮಿತಗೊಳಿಸಿತ್ತು. ಇದನ್ನು ಕುವೆಂಪು ಅವರು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಆದರೆ, ಯಾವ ನೆಲೆಯಿಂದ ಹೆಣ್ಣು ಗಂಡಿನ ಸಂಬಂಧವನ್ನು, ಹೆಣ್ಣಿನ ಅಸ್ತಿತ್ವವನ್ನು, ಹೆಣ್ಣಿನ ದುಡಿಮೆಯನ್ನು, ಹೆಣ್ಣಿನ ತಾಯ್ತನವನ್ನು ಆಳೆಂಬ ಭಾವಕ್ಕೆ ಒಳಗುಮಾಡಿತ್ತೋ, ಅದೇ ವರ್ತುಲದಲ್ಲಿ ನಿಂತು ಕುವೆಂಪು ಅತ್ಯಂತ ಗಂಭೀರವಾಗಿ, ಅತ್ಯಂತ ಕಾಳಜಿಯಿಂದ, ಅಭಿಮಾನದಿಂದ ಸ್ತ್ರೀ ಬದುಕನ್ನು ಕಟ್ಟುತ್ತಾರೆ; ದಾರ್ಶನಿಕವಾಗಿ ಗ್ರಹಿಸುತ್ತಾರೆ. “ಆಧ್ಯಾತ್ಮಿಕವಾಗಿ ಪುರುಷನಿಗಿಂತ ಸ್ತ್ರೀ ಹೆಚ್ಚು ವಿಕಾಸಗೊಂಡಿದ್ದಾಳೆ” ಎಂಬುದನ್ನು ಸಾಬೀತು ಮಾಡುತ್ತಾರೆ. ಅಡುಗೆಮನೆಯನ್ನು ಯಜ್ಞ ಶಾಲೆಯಾಗಿಸುವಲ್ಲಿ, ಆಕೆಯನ್ನು ಮನೆ ಮನೆಯ ತಪಸ್ವಿನಿ, ಅನ್ನಪೂರ್ಣ ಎಂದು ಪರಿಭಾವಿಸುವಲ್ಲಿ, ತಾಯ ಬಸಿರನ್ನು ರೂಕ್ಷತೆ ಮತ್ತು ಸಹಿಷ್ಣುತೆಯ ಸಂಕೇತವಾಗಿಸುವಲ್ಲಿ. ಅವರ ಸ್ತ್ರೀಪರ ನಿಲುವು ಸ್ಪಷ್ಟವಾಗುತ್ತಾ ಹೋಗುತ್ತದೆ. ಉದಾಹರಣೆಗೆ ಕುವೆಂಪು ಅವರು ತಾಯ್ತನವನ್ನು ಗ್ರಹಿಸುವ ರೀತಿಯನ್ನು ನೋಡಬೇಕು. ಅವರ ದೃಷ್ಟಿಯಲ್ಲಿ ತಾಯ್ತನ ಎನ್ನುವುದು.

ಬಯಲು ಭ್ರಾಂತಿಯದಲ್ಲ
ಹೆಸರಿನಾಸೆಯದಲ್ಲ
ಆತ್ಮ ಸ್ವಾತಂತ್ರ್ಯಮ ಠಿ ಕೊಂಡದ್ದಲ್ಲ
ಮೌಲ್ಯ ಬಿಟ್ಟು ದಿಕ್ಕೆಟ್ಟು ಅಲೆಯುವುದಲ್ಲ

ಲೋಕಹಿತ ಸಾಧಿಸುವಂಥದು; ಕುಟುಂಬದ ಉನ್ನತಿ ನಿರೀಕ್ಷಿಸುವಂಥದು. ಆಕೆಯ ಕಷ್ಟ ಸಹಿಷ್ಣುತೆಯೇ ವಿಸ್ಮಯದ ಗೂಡು. ಇಲ್ಲೆಲ್ಲ ಕುವೆಂಪು ಅವರು ವಸಾಹತು ಪ್ರಭುತ್ವದ ವಿರೋಧದ ಸಂಕೇತವಾಗಿ ತಾಯ್ತನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದೆನ್ನಿಸುತ್ತದೆ. ಏಕೆಂದರೆ ಭಾರತದ ಉನ್ನತ ಸಂಸ್ಕೃತಿಗೆ ಕುವೆಂಪು ಪರ್ಯಾಯವಾಗಿ ಕಾಣಿಸಿದ್ದು, ಉತ್ತರಿಸಿದ್ದು ತಾಯ್ತನವನ್ನೇ. ಬಹುಶಃ ತಾಯ್ತನಕ್ಕೆ ಕುವೆಂಪು ಕೊಟ್ಟಷ್ಟು ಪ್ರಾಮುಖ್ಯತೆ, ಕನ್ನಡದ ಬೇರೊಬ್ಬ ಕವಿ ಕೊಟ್ಟಿಲ್ಲ ಎನ್ನಬೇಕು. ‘ತಾಯಿ’ ಅವರಿಗೆ ಮಾತ್ರ ಭಾಷೆಯೇ ಅಲ್ಲ; ಸಂಸ್ಕೃತಿಯ ಒಟ್ಟು ಮೊತ್ತ.

ಅದೇ ತಾಯಿ ಅದೇ ತಾಯಿ
ಇಲ್ಲಿರುವವಳು ಅದೇ ತಾಯಿ

ಎಲ್ಲದರಲ್ಲೂ, ಎಲ್ಲರಲ್ಲೂ ತಾಯಿ ಹೃದಯವನ್ನು ಕುವೆಂಪು ಅರಸುವುದು, ನಿರೀಕ್ಷಿಸುವುದು ಇದೇ ಕಾರಣಕ್ಕೆ. ಮಗನಿಗಾಗಿ ಬದುಕನ್ನೇ ಮುಡುಪಿಟ್ಟ ಚಿತ್ರಾಂಗದೆಯ ವಾತ್ಸವ್ಯದಲ್ಲಿ, ಗಂಡ ಮಗನಿಗಾಗಿ ಜೀವನವನ್ನೇ ಸಮರ್ಪಿಸಿಕೊಂಡ ಆಕೆಯ ತ್ಯಾಗದಲ್ಲಿ, ಏಕಲವ್ಯನ ಅಬ್ಬೆ ದ್ರೋಣನಿಗೆ ಕೊಟ್ಟ ‘ಬೆರಳ್ಗೆ ಕೊರಳ್‌’ ಶಾಪದಲ್ಲಿ, ಮತ್ತದರ ಫಲಿತದಲ್ಲಿ ತಾಯ್ತನದ ಶ್ರೇಷ್ಠತೆಯನ್ನು ಬದುಕಿನ ಮಾನದಂಡವಾಗಿಸುತ್ತಾರೆ ಕುವೆಂಪು.

ನಮ್ಮ ಪರಂಪರೆ ಹೆಣ್ಣನ್ನು ಉಪಭೋಗದ ವಸ್ತುವೆಂದೇ ಪರಿಗ್ರಹಿಸಿದೆ. ಇದರಿಂದಾಗಿ ಆಕೆ ಕಾಮಕ್ಕೆ ಪರ್ಯಾಯವಾದಳು. ಸೂಟ್‌ಕೇಸಿನ ಬೊಂಬೆಯಂತೆ ಮನರಂಜನೆಯ ತಾಣವಾದಳು. ಆಕೆಯ ದೇಹ ಮತ್ತು ಚೆಲುವಿನ ಮೇಲೆ ನಿರಂತರವಾದ ಆಕ್ರಮಣ ಡೆಯಿತು. ಖಾಸಗಿ ವಸ್ತುವಾಗಿ ಸ್ವಂತ ಎಂಬ ಘೋಷಣೆಗೊಳಪಟ್ಟು, ವಿಧಿ ನಿಷೇಧಗಳ ಅಡಿಯಲ್ಲಿ ಹೂತುಹೋದಳು. ಶೀಲ, ಪಾತಿವ್ರತ್ಯ, ವ್ರತಗಳ ಮೂಲಕ ಆಕೆಯ ಮನಸ್ಸಿನ ಮೇಲೆ ದಾಳಿ ನಡೆಯಿತು. ನೈತಿಕತೆಯ, ನೀತಿಬೋಧನೆಯ ಮಾದರಿಯ ರೂಪಕಲ್ಪನೆಗಳು ಹುಟ್ಟಿಕೊಂಡವು. ಕುವೆಂಪು ಇವಾವನ್ನೂ ನೇರವಾಗಿ ತಿರಸ್ಕರಿಸುವುದಿಲ್ಲ. ಆದರೆ, ಅಂಥ ಭಾವನೆಗೆ ಹೊಸ ದೃಷ್ಟಿಕೋನವನ್ನು ತುಂಬುತ್ತಾರೆ. ಮನಶ್ಯಾಸ್ತ್ರೀಯ ನೆಲೆಯಲ್ಲಿ ಪರಿಷ್ಕರಿಸುತ್ತಾರೆ. ಶೀಲ, ಪಾತಿವ್ರತ್ಯ ಪದಗಳಿಗೆ ಹೊಸ ವ್ಯಾಖ್ಯಾನವನ್ನು ಕೊಡುತ್ತಾರೆ; ಅರ್ಥವಿಸ್ತಾರಗೊಳಿಸುತ್ತಾರೆ. ಕುವೆಂಪು ಅವರ ಆಧುನಿಕವಾದ ಇಂಥ ಮನಸ್ಸು ನೈತಿಕತೆ ಹೆಣ್ಣಿಎ ಮಾತ್ರ ಸೀಮಿತವಾದುದಲ್ಲ, ಗಂಡಿಗೂ ಅನ್ವಯವಾಗುತ್ತದೆ ಎಂದೇ ಯೋಚಿಸುತ್ತದೆ. ಅವರ ಆಲೋಚನೆಯಲ್ಲಿ ಸತೀಧರ್ಮ ಪತಿಧರ್ಮ ಎರಡೂ ಅಭಿನ್ನವೇ. ಅದಕ್ಕೆಂದೇ ಸೀತೆಯಂತೆ ರಾಮನಿಗೂ ಅಗ್ನಿ ಪ್ರವೇಶವಾಗುತ್ತದೆ. ಈ ಅಗ್ನಿಪ್ರವೇಶಗಳು, ಶಿಕ್ಷೆಗಳು, ತನ್ನ ಸ್ತ್ರೀತತ್ವ ಪುರುಷತತ್ವದ ಶೌಚಗುಣ ಪ್ರಕಟಣೆಯ ಮಾಧ್ಯಮ ಮಾತ್ರ. ಇಲ್ಲಿ ಸೀತೆಯ ಅಗ್ನಿಪ್ರವೇಶವನ್ನೇ ತಪ್ಪಿಸಬಹುದಿತ್ತಲ್ಲ? ಎಂಬ ಪ್ರಶ್ನೆ ಕಾಡುವುದು ಸಹಜ. ನಿಜ, ಆದರೆ, ಯಾವೊಬ್ಬ ಕವಿ ತನ್ನ ಸಮಕಾಲೀನ ಜೀವನ ಮೌಲ್ಯವನ್ನು ಪೂರ್ಣನೆಲೆಯಲ್ಲಿ ಧಿಕ್ಕರಿಸಲಾಗುವುದಿಲ್ಲ ಎಂಬ ಸತ್ಯವನ್ನು ನಾವು ಗ್ರಹಿಸಬೇಕು.

ಆ ಕಾರಣಕ್ಕಾಗೇ ಕಾಮಕ್ಕೆ ಎದುರಾಗಿ ಒಲವನ್ನು ನಿಲ್ಲಿಸಿ ಗೆಲ್ಲಿಸುವಂತೆ ಕುವೆಂಪು ಪಾತಿವ್ರತ್ಯ ಪರಿಕಲ್ಪನೆಯ ಮೂಲ ಆಶಯವನ್ನೇ ಸುಧಾರಿಸುತ್ತಾರೆ. ದೇಹ, ಮನಸ್ಸುಗಳ ಸಂಬಂಧದ ಪರಿಣಾಮಗಳನ್ನು ಭಿನ್ನ ನೆಲೆಯಲ್ಲಿ ಭೇದಿಸುತ್ತಾರೆ. ಅವರ ದೃಷ್ಟಿಯಲ್ಲಿ ಪಾತಿವ್ರತ್ಯ ಎನ್ನುವುದು ಮನಸ್ಸಿಗೆ ಸಂಬಂಧಿಸಿದ್ದೇ ಹೊರತು ದೇಹಕ್ಕಲ್ಲ. ಇದು ಮೇಲ್ವರ್ಗಕ್ಕೆ ಮಾತ್ರ ಸೀಮಿತವಾದ ಪರಿಕಲ್ಪನೆಯಂತೂ ಅಲ್ಲ. ಇದಕ್ಕೆ ಧ್ಯಾನಮಾಲಿನಿಯ ಪ್ರಸಂಗವನ್ನು ನೋಡಬಹುದು. ರಾವಣ, ಧ್ಯಾನಮಾಲಿನಿಯ ಪತಿಯನ್ನು ಕೊಂದು ಅವಳನ್ನು ತನ್ನ ಮನದನ್ನೆಯಾಗಿಸಿಕೊಂಡು ವಿಶೇಷ ಪ್ರೀತಿ ಕಾಳಜಿಯಿಂದಲೇ ಆಕೆಯನ್ನು ನೋಡಿಕೊಳ್ಳುತ್ತಿದ್ದ. ರಾವಣ-ರಾಮರ ಯುದ್ಧ ನಡೆದು, ಧ್ಯಾನಮಾಲಿನಿಯ ಮಗ ಅತಿಕಾಯ ಅಸುನೀಗಿದ. ಮಗನ ಆ ಶವವನ್ನು ತನ್ನ ತೊಡೆಯ ಮೇಲಿಟ್ಟು ಆ ಮಾತೃಹೃದಯ ಶೋಕಿಸುತ್ತಾ ಹೇಳುವ ಮಾತುಗಳನ್ನು ಗಮನಿಸಿ;

ಆ ರಾವಣಂಗೆ ಮೈಯನಲ್ಲದೆ ಮನವನಿತ್ತನೆ
ಮನವನಲ್ಲದೆ ತನುವ ನೋಡುವನೆ ಜಗದೀಶ

ಧ್ಯಾನಮಾಲಿನಿ ರಕ್ಕಸ ಸ್ತ್ರೀ. ಅವರ ಸಂಸ್ಕೃತಿಯಲ್ಲಿ ಶೀಲದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೂ ಗತಿಸಿದ ಗಂಡನೊಡನಾಟದ ಪ್ರೀತಿಯಾನ್ನಾಕೆ ಮರೆಯದೆ ಹೋದಳು. ಬದುಕಿನ ಅನಿವಾರ್ಯತೆ ರಾವಣನನ್ನು ಸ್ವೀಕರಿಸುವಂತೆ ಮಾಡಿತ್ತು. ಬದುಕಿನ ಹೋರಾಟವೇ ಹಾಗೆ! ಆದರೆ, ಆಕೆಯ ಮನಸ್ಸಿನ ತೊಯ್ದಾಟ, ಅಪೇಕ್ಷೆ ಬೇರೆಯದೇ ಆಗಿತ್ತು. ಮನಸ್ಸಿಗೆ ಮಾತ್ರ ಸತ್ಯ ಗೊತ್ತಿರುತ್ತದೆ. ಆಕೆಯ ಮನಸಾಕ್ಷಿಯ ಸತ್ಯದ ಮಾತುಗಳಿವು. ಇಲ್ಲೇ ನಾವು ಕರಿಸಿದ್ದ “ಒಬ್ಬೊಬ್ಬ ಹೆಂಡತಿಯ ಎದೆಯೊಳಿರುವಳು ಸೀತೆ” ಎಂದು ಹೇಳಿದ ಮಾತುಗಳನ್ನೂ ನೆನಪಿಸಿಕೊಳ್ಳಬೇಕು. ಅಧಿಕಾರ, ಅಂತಸ್ತು, ರೂಪ, ಮೈಕಟ್ಟು ಇತ್ಯಾದಿ ಬಾಹ್ಯ ಸ್ವರೂಪ ಲಕ್ಷಣಗಳಿಗೆ ಹೆಣ್ಣು ಒಲಿಯುತ್ತಾಳೆ ಎಂಬ ರೂಢಿಗತ ಪುರುಷ ತಿಳಿವಳಿಕೆಯನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಹೀಗೆ ನಿರಾಕರಿಸುತ್ತಾ ಹೋಗುತ್ತಾರೆ. ಮನಸ್ಸಿನ ಶುಚಿತ್ವವನ್ನು ಕಾಯ್ದುಕೊಳ್ಳುವ ಅಪೇಕ್ಷೆ ಉನ್ನತ ವ್ಯಕ್ತಿತ್ವದ ಸಹಜ ಗುಣಕೂಡ ಎಂಬುದನ್ನು ಧ್ಯಾನಮಾಲಿನಿಯ ಪಾತ್ರದಲ್ಲಿ ಪ್ರಕಟಿಸಿ, ಸೀತೆಯನ್ನು ಮುಖಾಮುಖಿಯಾಗಿ ನಿಲ್ಲಿಸಿ, ಸ್ತ್ರೀ ಮನಸ್ಸನ್ನು ಓದುತ್ತಾರೆ. ಆ ಮೂಲಕ ರಾವಣನ ಸಾಂಪ್ರದಾಯಿಕ ಮನಸ್ಸನ್ನು ಪರಿವರ್ತಿಸುತ್ತಾರೆ. ಪೂರ್ಣ ದೃಷ್ಟಿಯೆಂದರೆ ಇದೇ. ಪೂರ್ಣದೃಷ್ಟಿಗೆ ಮಾತ್ರ ಬದುಕನ್ನೂ ಉದಾರವಾಗಿ ನೋಡುವ, ಉದಾತ್ತ ನೆಲೆಯಲ್ಲಿ ಗ್ರಹಿಸುವ ಶಕ್ತಿ ಇರುತ್ತದೆ. ಬಹುತೇಕ ಸ್ತ್ರೀಪಾತ್ರಗಳಿಗೆ ಆ ದೃಷ್ಟಿಯಿಂದಲೇ ಸಾಮಾಜಿಕ ನ್ಯಾಯ ಒದಗಿಸುಕೊಡುತ್ತಾರೆ. ವ್ಯಕ್ತಿತ್ವದ ಔನ್ಯತ್ಯವನ್ನು ಪೃಥಕ್ಕರಿಸುತ್ತಾರೆ ಕುವೆಂಪು.

‘ಶ್ರೀ ರಾಮಾಯಣ ದರ್ಶನಂ’ ಕಾವ್ಯದ ಆರಂಭದಲ್ಲಿ ಕುವೆಂಪು ಅವರು “ಪಾಪಿಗುಮುದ್ಧಾರವಿಹುದೌ ಸೃಷ್ಟಿಯ ಮಹದ್‌ ವ್ಯೂಹರಚನೆಯೋಳ್‌” ಎಂದು ಉದ್ಘರಿಸಿದ್ದಾರೆ. ಈ ಮಾತು ನೈಜ ಅರ್ಥದಲ್ಲಿ ಫಲಿಸಿರುವುದು ಸ್ತ್ರೀ ಪಾತ್ರಗಳಲ್ಲಿ ದುಷ್ಟ ಮಂಥರೆಯನ್ನು ‘ಮಮತೆಯ ಸುಳಿ ಮಂಥರೆ’ಯಾಗಿ ಕಡೆದು ರಾಮಾಯಣ ಸೃಷ್ಟಿಗೆ ‘ಕಾರಣಮಲ್ತು ಕರಣಂ’ ಆಗಿಸಿ, ರಾಮನ ಶ್ರೇಯಸ್ಸಿಗೆ ರಾಮನ ಬರುವಿಕೆಯ ಪುಣ್ಯಲಕ್ಷ್ಮೀಯಾಗಿಸುವಲ್ಲಿ ಮಂಥರೆಯ ಪಾತ್ರವೂ ಪುಣ್ಯಮುಖಿಯಾಗಿ ಚಲಿಸುವುದನ್ನು ನೋಡುತ್ತೇವೆ. ಕಾವ್ಯದ ಅನಾದರಕ್ಕೆ ತುತ್ತಾಗಿದ್ದ ಊರ್ಮಿಳೆ “ತನ್ನ ತಾನ್‌ ಇಲ್ಲಗೈಯುವುದೇ ಎಲ್ಲಾ ಸಾಧನೆಯ ಗುರಿ” ಎಂಬ ವಿಕಾಸ ತತ್ವಕ್ಕೆ ಸಾಕ್ಷಿಯಾಗುತ್ತಾಳೆ. ರಾಮನ ರೋಗವನ್ನು ತನಗೆ ಆಹ್ವಾನಿಸಿಕೊಂಡು ರಾಮನ ಪ್ರಾಣಕ್ಕೆ ಹೊಣೆಯಾಗಿ ಶಬರಿ, ಸೇವಾತತ್ವಕ್ಕೆ ಹೊಸಷರಾ ಬರೆಯುತ್ತಾಳೆ. ತ್ರಿಜಟೆಯ ಗಂಡನ ಪ್ರಾಣಕ್ಕೆ ತನ್ನ ಮಾಂಗಲ್ಯವನ್ನು ಪಣವಾಗಿಡುವ ಸೀತೆ, ಪಾತಿವ್ರತ್ಯ ಕಾಪಾಡುವ ಶಕ್ತಿತತ್ವಕ್ಕೆ ದೃಷ್ಟಾಂತವಾಗುತ್ತಾಳೆ. ರಾವಣ ಹೊತ್ತು ಒಯ್ದದ್ದು ಸೀತೆಯನ್ನಲ್ಲ, ಸತೀತನವನ್ನು.. ಅದು ಶಾಪವಾಗಿ ಅವನನ್ನೇ ಆವರಿಸಿಕೊಳ್ಳುವಲ್ಲಿ ಸತೀತ್ವದ ಪ್ರಶ್ನೆ ಮತ್ತು ನೈತಿಕತೆಯ ಮಹತ್ವವನ್ನು ಮುಂದಿಡುವಲ್ಲಿ ಕುವೆಂಪು ಅವರು ಧರ್ಮಶಾಸ್ತ್ರ ಸಂಪ್ರದಾಯಗಳ ಗಡಿಗಳನ್ನು ದಾಟಿ ಅನುಭವವನ್ನು ಪ್ರಮಾಣೀಕರಿಸುವ ಮೂಲಕ ಸ್ತ್ರೀಲೋಕದ ಬಗ್ಗೆ ಹೊಸರೀತಿಯ ಚಿಂತನೆ ನಡೆಸುತ್ತಾರೆ. ಹೊಸ ಸಂವೇದನೆಗಳಿಗೆ ಓದುಗರನ್ನು ಶ್ರುತಿಗೊಳಿಸುತ್ತಾರೆ. ಅರಿವಿನ ವಿವೇಕವನ್ನು ವಿಸ್ತಾರಗೊಳಿಸುತ್ತಾರೆ.

‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗಳು ಕುವೆಂಪು ಸೃಜನಶೀಲತೆಯನ್ನು ಪರಾಕಾಷ್ಠೆಯಲ್ಲಿ ಕಡೆದಿರುವಂತೆ, ಕನ್ನಡಕ್ಕೆ ಅಪಾರ ಗೌರವ ತಂದುಕೊಟ್ಟ ಕಾದಂಬರಿಗಳೂ ಆಗಿವೆ. ಜೊತೆಗೆ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಗೆ ಯಾವ ಸ್ವಾತಂತ್ರ್ಯವೂ ಇಲ್ಲ ಎಂಬುದನ್ನು ಅಮೋಘವಾಗಿ ದಾಖಲಿಸುತ್ತವೆ. ಸುಬ್ಬಮ್ಮ, ಸೀತೆ, ಚೆನ್ನಮ್ಮ, ಪೀಂಚಲು ಇಂಥ ಕೆಲವು ಮುಖ್ಯ ಮಹಿಳಾ ಪಾತ್ರಗಳ ವೈಯಕ್ತಿಕ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ಗಮನಿಸಿದರೆ ಸಕು ಕುವೆಂಪು ಮಹಿಳೆ ದೃಷ್ಟಿಯಲ್ಲಿ ಸಾಂಪ್ರದಾಯಿಕ ಪರಂಪರೆ ದೊಡ್ಡದಾಗಿದೆ ಎಂದು ಅನ್ನಿಸಿಯೂ ಈ ಮಾತನ್ನು ಹೇಳುತ್ತಿದ್ದೇನೆ. ಕುವೆಂಪು ಕಾರಂತರಂತೆ ಸೃಜನಶೀಲರಾಗಿ ಚಲನಶೀಲ ಗುಣವನ್ನು ತೋರುವ ಪ್ರಧಾನ ಧಾರೆಯ ಲೇಖಕರು. ಪುರುಷ ಮತ್ತು ಮಹಿಳೆಯ ನಡುವೆ ಗಾಢ ವಯತ್ಯಾಸವನ್ನು ತೋರುವುದಿಲ್ಲ. ಈ ಮಾದರಿ ಇಂದೂ ನಮಗೆ ಮುಖ್ಯವಾಗಿರುವುದು ಗಮನಾರ್ಹ. ಹೂವಯ್ಯನಿಗೆ ಒಲಿದು ರಾಮಯ್ಯನನ್ನು ಮದುವೆಯಾಗಲು ನಿರಾಕರಿಸುವ ಸೀತೆಯ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಪುರುಷ ಪ್ರಧಾನ ಸಮಾಜ ಕಾರಣ ಎಂದು ಹೇಳುವಂತೆ, ಲೇಖಕನ ಒಳದನಿ ಇಂಥ ಅಸಹಾಯಕರ ಪರವಾಗಿರುವುಂತೆ ನೋಡಿಕೊಳ್ಳುವುದು ಅನಿವಾರ್ಯ. ಎಂಬುದನ್ನು ಕುವೆಂಪು ಅನುಭವಗಳನ್ನು ದಾಖಲಿಸುವ ಸಂದರ್ಭದಲ್ಲಿ ಸೂಕ್ಷ್ಮವಾಗಿ ದಾಖಲಿಸುತ್ತಾರೆ. ಪುರುಷನ ಹಲವು ರೀತಿಯ ಹೊಂಚುಗಳಿಂದಗಿ ಸುಬ್ಬಮ್ಮ ಪಡುವ ಯಾತನೆಯನ್ನು ಕಾದಂಬರಿಕಾರರು ನೀಡುವ ರೀತಿಯಲ್ಲೇ ವ್ಯವಸ್ಥೆಯನ್ನು ವಿರೋಧಿಸುವ ದನಿ ಇದೆ. ಈ ಎರಡು ಕಾದಂಬರಿಗಳ ಮಹಿಳಾ ಲೋಕ ಸಾಂಪ್ರದಾಯಿಕ ಅರಿವಿನ ನೆಲೆಯಿಂದ ಆಧುನಿಕ ಅರಿವಿನ ಕಡೆಗೆ ಚಲಿಸುತ್ತದೆ.

ಇಲ್ಲೆಲ್ಲ ಕುವೆಂಪು ಭೂತವನ್ನು ಶೋಧಿಸುತ್ತ, ವರ್ತಮಾನವನ್ನು ಹೊಸದಾಗಿ ಕಟ್ಟುತ್ತಾರೆ. ಸಂಸ್ಕೃತಿಯಲ್ಲಿ ಹೆಣ್ಣಿಗಾದ ಅನ್ಯಾಯಗಳನ್ನು ಸರಿಪಡಿಸುತ್ತಲೇ, ಸ್ತ್ರೀತ್ವದ ಸಾಧ್ಯತೆಯನ್ನು ಉನ್ನತೀಕರಿಸುತ್ತಾರೆ. ಮನಶಾಸ್ತ್ರೀಯವಾದ ಮುನ್ನೋಟ ಹರಿಸುತ್ತಲೇ ವ್ಯವಸ್ಥೆಯೊಳಗಿನ ತಲ್ಲಣ, ಆತಂಕಗಳಿಂದ ತಳಮಳಿಸುವ ಸ್ತ್ರೀ ಮನಸ್ಸಿಗೆ ಬದುಕು ಭರವಸೆಯನ್ನು ತುಂಬುತ್ತಾರೆ.

* * *