ರಾಷ್ಟ್ರಕವಿ, ಯುಗದ ಕವಿ, ದಾರ್ಶನಿಕ, ಸಾಂಸ್ಕೃತಿಕ ನಾಯಕ ಮುಂತಾದಿ ಗುರಿತಿಸಲ್ಪಟ್ಟ ಕುವೆಂಪು ಕನ್ನಡ ಸಾಹಿತ್ಯ ಕನ್ನಡ ದೈತ್ಯ ಪ್ರತಿಭೆ ಹಾಗೂ ವಿಸ್ಮಯವೂ ಹೌದು. ಕುವೆಂಪು ಕೃತಿಗಳನ್ನು ಓದುವಾಗ ಯಾವ ಹಿನ್ನೆಲೆಯಲ್ಲಿ ಗ್ರಹಿಸಬೇಕೆಂಬುದು ಕೂಡ ಜವಾಬ್ದಾರಿಯುತ ಪ್ರಶ್ನೆಯೇ. ಇದು ಎಲ್ಲ ಬರಹಗಾರರ ಕೃತಿಗಳನ್ನು ಓದುವಾಗ ಹುಟ್ಟುವ ಪ್ರಶ್ನೆಯಲ್ಲ. ಯಾರು ಸಾಹಿತ್ಯರಚನೆಯ ಜೊತೆ ಜೊತೆಗೆ ಸಾಂಸ್ಕೃತಿಕವಾಗಿ ಹೊಸದೇನಾದರೂ ಸೃಷ್ಟಿಸಬೇಕು ಎಂಬ ಯುಗ ನಿರ್ಮಾಣದ ಜವಾಬ್ದಾರಿ ಹೊತ್ತಿರುತ್ತಾರೋ ಅಂಥವರ ಮತ್ತು ಅವರ ಕೃತಿಗಳನ್ನು ಓದುವಾಗ ಮಾತ್ರ ಹುಟ್ಟುವ ಪ್ರಶ್ನೆಯಾಗಿರುತ್ತದೆ. ಮೊಟ್ಟ ಮೊದಲ ಬಾರಿಗೆ ಶೂದ್ರ ವರ್ಗದಿಂದ ಬಂದ ವ್ಯಕ್ತಿಯೊಬ್ಬ ಅಲಕ್ಷ್ಯಕ್ಕೆ ಒಳಗಾಗಿದ್ದ ತಳಸಮುದಾಯಗಳ ಸುಖ-ದುಃಖ, ಕಷ್ಟ ಕೋಟಲೆಗಳನ್ನು ಅದರ ಜೀವಂತಿಕೆಯೊಂದಿಗೆ ಸಾಹಿತಿಕವಾಗಿ ಕಟ್ಟಿಕೊಟ್ಟಿದ್ದರಿಂದ ಮತ್ತೆ ಮತ್ತೆ ಮರು ವಿಶ್ಲೇಷಣೆಗೆ ಒಳಗಾಗುವ ಅವಶ್ಯಕತೆಯಿದೆ.

ನವೋದಯ ಸಾಹಿತ್ಯ ಸಂದರ್ಭದಲ್ಲಿ ಕಾವ್ಯ, ನಾಟಕ, ಕಾದಂಬರಿಗಳಂತಹ ಸೃಜನಾತ್ಮಕ ಪ್ರಕಾರಗಳಲ್ಲಿನ ಒಂದು ದೊಡ್ಡ ಹೆಸರು ಕುವೆಂಪುರವರದು. ಒಂದು ವಿಶೇಷವಾದ ಯುಗ ಪ್ರವರ್ತಕ ಗುಣ ಹಾಗೂ ವ್ಯಕ್ತಿತ್ವಗಳನ್ನು ಬಹು ಎಚ್ಚರದಿಂದ ಬೆಳೆಸಿಕೊಂಡವರು ಶ್ರೀ ಕುವೆಂಪು. ಕುವೆಂಪು ಅವರ ವೈಚಾರಿಕತೆಯ ಮೂರು ಮೂಲ ಮಂತ್ರಗಳು ಸಮನ್ವಯ, ಸರ್ವೋದಯ ಮತ್ತು ಪೂರ್ಣ ದೃಷ್ಟಿಗಳಾಗಿವೆ.ಕುವೆಂಪು ಹೆಚ್ಚು ಒತ್ತು ಕೊಟ್ಟ ಪ್ರತಿಮಾ, ಪ್ರತಿಕೃತಿ, ದರ್ಶನ ಧ್ವನಿ, ಭೂಮಾನುಭೂತಿ, ವೈಜ್ಞಾನಿಕ ದೃಷ್ಟಿಕೋನ, ಸಮರಸ, ಸಮನ್ವಯತೆ ಮುಂತಾದವು ವಿಮರ್ಶೆಯ ಮಾನದಂಗಳಾಗಿವೆ. ವಿಶ್ವಮಾನವತೆಯ ಕನಸು ಕುವೆಂಪುರವರ ದೊಡ್ಡಪರಿಕಲ್ಪನೆ. ಯುಗದ ಧ್ವನಿಯೆಂಬಂತೆ ಮೂಡಿದ ಕುವೆಂಪುರವರ ಕಾವ್ಯ ನಾಟಕಗಳಿಗೆ ತಮ್ಮದೇ ಆದ ಚಾರಿತ್ರಿಕ ಮಹತ್ವಗಳಿವೆ.

ಕುವೆಂಪುರವರು ಬರೆಯಲಾರಂಭಿಸಿದಾಗ ಎಲ್ಲರೂ ಗುರ್ತಿಸಿರುವಂತೆ ಅವರ ಮುಂದೆ ವಿಶೇಷವಾದ ಸವಾಲು ಹಾಗೂ ಸಮಸ್ಯೆಗಳಿದ್ದವು. ಶೂದ್ರವರ್ಗದಿಂದ ಬಂದ ಲೇಖಕನೊಬ್ಬ ಬೇಂದ್ರೆ, ಮಾಸ್ತಿ, ಕೈಲಾಸಂ, ಶ್ರೀರಂಗರಂತಹ ನಾಟಕಕಾರರ ಜೊತೆಯಲ್ಲಿ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಿತ್ತು. ಮಲೆನಾಡಿನಿಂದ ಬಂದಂತಹ ವ್ಯಕ್ತಿಯೊಬ್ಬರು ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ವಾತಾವರಣದಲ್ಲಿ ತಮ್ಮನ್ನು ಕಡೆದು, ಸ್ಥಾಪಿಸಿಕೊಳ್ಳಬೇಕಾದ ಚಾರಿತ್ರಿಕ ಅಗತ್ಯವೂ ಇತ್ತು. ಇದು ಕುವೆಂಪುರವರಂತಹ ದೈತ್ಯ ಪ್ರತಿಭೆ ಮಾತ್ರ ಎದುರಿಸಬಲ್ಲ ಸವಾಲಾಗಿತ್ತು.

ಆರಂಭದಲ್ಲಿ ಇಂಗ್ಲಿಷ್‌ ಕವಿತೆಗಳನ್ನು ಬರೆದರೂ ನಂತರ ಕನ್ನಡದ ಕಡೆಗೆ ವಾಲಿದ ಕುವೆಂಪುರವರ ನಡಿಗೆ ಸ್ವಾಭಿಮಾನದ ನಡಿಗೆಯೂ ಆಗಿತ್ತು. ಕುವೆಂಪುರವರು ವಿದ್ಯಾಥಿ ದೆಸೆಯಲ್ಲಿ ಭೆಟ್ಟಿ ಮಾಡಿದ ಜೇಮ್ಸ್‌ ಎಚ್‌. ಕಸಿನ್ಸ್‌ ಅವರ ವಿವೇಕದ ಮಾತುಗಳಿಗೂ ಕುವೆಂಪುರವರ ಆತ್ಮವಿಕಾಸದ ಪಥದಲ್ಲಿ ವಿಶೇಷ ಸ್ಥಾನವಿದೆ. ಅವರು ಹೇಳಿದ ‘ಹಾಗಲ್ಲ, ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವ ತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು ಅಸಮರ್ಥರಿಗೆ. ಸಮರ್ಥನು ಬಂದೊಡನೆ ಅವನ ಕೈಯೆಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು’ ಎಂಬ ಮಾತು ಕುವೆಂಪುರವರ ಸಿದ್ಧಿಯನ್ನು ಗುರ್ತಿಸುವಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ. ಯಾವ ಭಾಷೆಯಲ್ಲಿ ಬರೆಯಬೇಕು ಎನ್ನುವುದು ಅಭಿವ್ಯಕ್ತಿಯ ಸಮಸ್ಯೆಯಾದರೂ ಅದನ್ನು ನೀಗಿಕೊಂಡು ಯಾವ ವರ್ಗವನ್ನು ತಾನು ಪ್ರತಿನಿಧಿಸಬೇಕು ಎಂಬ ಆಯ್ಕೆಯೇ ಸವಾಲಿನದಾಗಿತ್ತು. ಈ ಸವಾಲನ್ನು ಎದುರಿಸಲು ಕುವೆಂಪುರಂತಹ ದೈತ್ಯ ಪ್ರತಿಭೆಗೆ ಮಾತ್ರವೇ ಸಾಧ್ಯವಾಗಿತ್ತು.

ಕುವೆಂಪು ತಮ್ಮ ಕವಿತೆಗಳ ಸಂಕಲನ ಕೊಳ್ಳಲು ಪ್ರಕಟಮಾಡುವುದಕ್ಕಿಂತ ಮುಂಚೆಯೇ ಜಲಗಾರ, ಯಮನಸೋಲು, ಚಂದ್ರಹಾಸ, ಬಿರುಗಾಳಿ ಮುಂತಾದ ನಾಟಕಗಳನ್ನು ರಚಿಸಿದ್ದರು. ಆರಂಭದ ನಾಟಕಗಳಲ್ಲಿಯೇ. ತಮ್ಮ ವಿಸ್ತೃತವಾದ ವಿಚಾರಗಳನ್ನು ರೂಪಿಸತೊಡಗಿದ್ದರು. ೧೯೨೬ ರಿಂದ೧೯೩೨ರವರೆಗಿನ ಅವಧಿಯಲ್ಲಿ ಒಟ್ಟು ಒಂಭತ್ತು ನಾಟಕಗಳನ್ನು ರಚಿಸಿದ್ದಾರೆ. ೧೯೩೨ ರಿಂದ ೧೯೪೪ರವರೆಗೆ ಮೂರು ನಾಟಕಗಳನ್ನು, ಉಳಿದಂತೆ ೧೯೬೩ ಮತ್ತು ೧೯೭೪ರಲ್ಲಿ ಒಂದೊಂದು ನಾಟಕವನ್ನು ಬರೆದಿದ್ದಾರೆ.

ಕಾವ್ಯದಲ್ಲಿ ವೈಚಾರಿಕತೆಯ, ಹೊಸ ಸಮಾಜವನ್ನು ಕಟ್ಟುವ ಕನಸನ್ನು ಕಂಡಂತೆ ನಾಟಕ ಪ್ರಕಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೆ ನೋಡುವುದಾದರೆ ಕವಿತೆಗಿಂತಲೂ ನಾಟಕಗಳಲ್ಲಿ ಅವರ ವೈಚಾರಿಕ ಪ್ರಜ್ಞೆ ಶಕ್ತವಾಗಿ ರೂಪುಗೊಂಡಿದೆ. ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ನಾಟಕದ ಇತಿಹಾಸ ಗುರುತಿಸುವಾಗ ಕುವೆಂಪು ಇಟ್ಟ ಹೆಜ್ಜೆ, ತೊಟ್ಟ ನಿಲುವು ತಳ್ಳು ಹಾಕುವಂತಿಲ್ಲ. ಅಲಕ್ಷ್ಯಕ್ಕೆ ಒಳಗಾದ ಪುರಾಣ ಪಾತ್ರಗಳನ್ನೆ ತಮ್ಮ ನಾಟಕದ ನಾಯಕರನ್ನಾಗಿಸಿ ಚಿತ್ರಿಸಿದ ಕುವೆಂಪುರವರ ಪ್ರಯತ್ನ ಅಲ್ಪತೆಯಲ್ಲೂ ಭವ್ಯತೆಯನ್ನು ಕಾಣುವಂತದ್ದು.

ಕುವೆಂಪುರವರ ನಾಟಕಗಳಲ್ಲಿ ಮುಖ್ಯವಾಗಿ ಅವರು ಎದುರಾಗುವುದು ಜಾತಿ ಪದ್ಧತಿ, ವರ್ಣಾಶ್ರಮ ವ್ಯವಸ್ಥೆ, ಮೌಢ್ಯತೆ, ದಾಸ್ಯಗಳಂತ ಅವ್ಯವಸ್ಥೆಯ ಸಮಾಜಕ್ಕೆ ವಿಶ್ವಮಾನವನ ಕಲ್ಪನೆಯಲ್ಲಿ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ ಸಮನ್ವಯ, ಪೂರ್ಣದೃಷ್ಟಿಗಳನ್ನು ವಿಶ್ವಮಾನವರಾಗಲು ಸಾಧಿಸಬೇಕಾದ ಮೂಲಭೂತ ಸ್ವರೂಪದ ಸಪ್ತಸೂತ್ರಗಳ ಪ್ರಣಾಳಿಕೆಯನ್ನಾಗಿ ಕಟ್ಟಿಕೊಟ್ಟರು. ಈ ಕಟ್ಟುವ ಕ್ರಿಯೆಯ ಹಿಂದೆ ಅವರು ಗಂಭೀರವಾಗಿ ಯೋಚಿಸಿದ್ದು, ಈಗಾಗಲೇ ಇರುವ ಪ್ರಧಾನ ಸಂಸ್ಕೃತಿಗೆ ಪರ್ಯಾಯವನ್ನು ಸೃಷ್ಟಿಸುವ ಬಗ್ಗೆ ಈ ಪರ್ಯಾಯ ಸಂಸ್ಕೃತಿಯಲ್ಲಿ ಜನ್ಮತಳೆಯುವವನು ವಿಶ್ವಮಾನವನಾಗಿದ್ದು ಇವನಿಗೆ ಮತ, ಜಾತಿ, ಧರ್ಮಗಳ ಬಂಧನವಿಲ್ಲ. ವಿಶ್ವಮಾನವ ಗೀತೆಯಲ್ಲಿ ಅನಿಕೇತನವಾಗುವ ಅಗತ್ಯವನ್ನು ಸೂಚಿಸುತ್ತಾರೆ.

ನೂರು ಮತದ ಹೊಟ್ಟ ತುರಿ
ಎಲ್ಲ ತತ್ತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ
ಆಗು ನೀ ಅನಿಕೇತನ

ಪರ್ಯಾಯ ಸಂಸ್ಕೃತಿಯ ಬಗ್ಗೆ ಆಲೋಚಿಸುವುದು ಸಾಮಾನ್ಯರಿಗೆ ಸಾಧ್ಯವಾಗುವಂತದ್ದಲ್ಲ. ಅದು ಈಗಾಗಲೇ ಭದ್ರವಾಗಿ ಬೇರೂರಿವ ಪುರೋಹಿತಶಾಹಿ ವ್ಯವಸ್ಥೆಗೆ ಎದುರಾಗುವುದು, ಅದರಲ್ಲಿನ ಜೊಳ್ಳುಪೊಳ್ಳುಗಳನ್ನು ತೂರಿ ಹೊಸದೊಂದು ವ್ಯವಸ್ಥೆ ಜಾರಿಗೆ ತರುವುದಾಗಿದೆ. ಈ ಹೊಸ ಸಮಾಜ, ಸಂಸ್ಕೃತಿಯ ಕನಸು ಕಾಣುವವರು ಮೊದಲು ತಮ್ಮನ್ನು ಆವರಿಸಿರುವ ಅಂಧಕಾರದಿಂದ ಹೊರಬರಬೇಕಾಗಿದೆ. ಅದನ್ನು ಕುವೆಂಪು ಈ ಮುಂದಿನಂತೆ ಹುಲಿಬೇಟೆಯನ್ನಾಗಿ ಚಿತ್ರಿಸುತ್ತಾರೆ. “ನೀವು ಇದಕ್ಕೆಲ್ಲ ಸಿದ್ಧರಾಗಿರಬೇಕು. ಹುಲಿಯನ್ನು ಕೊಲ್ಲುತ್ತೇವೆ ಎಂದು ಹುಲಿ ಅಲ್ಲಿ ಇರುವಾಗ ಒಂದಷ್ಟು ಕಲ್ಲು ತೆಗೆದುಕೊಂಡು ಸರಿಯಾಗಿ ತಲೆಗೆ ಗುರಿಯಿಟ್ಟು ಹೊಡೆಯುತ್ತೇನೆಂದರೆ ಏಟು ಬಿದ್ದ ಕೂಡಲೇ ಅದು ಬಂದು ಆಮ್‌ ಅಂತ ನಿಮ್ಮನ್ನು ಅಪ್ಪಳಿಸಿ ಒಂದೇ ಬಾರಿಗೆ ಪೂರೈಸುತ್ತದೆ. ಅದನ್ನು ಹೊಡೆಯಬೇಕಾದರೆ ನೀವು ಜೋಡುನಳಿಗೆ ತೋಟಾ ಕೋವಿ ಇಟ್ಟುಕೊಂಡು ಬಿಲ್ಲೆತ್ತಿ ಎಳೆಯಬೇಕು. ಹಾಗೆ ಗುರಿಕಟ್ಟಿ ತಲೆಗೆ ಹೊಡೆದರೆ ಒಂದೇ ಹೊಡೆತಕ್ಕೆ ಅದು ಬೀಳಬೇಕು. ಅದು ಬಿಟ್ಟು ಗಾಯ ಮಾಡಿ ಬಿಡೋದಲ್ಲ. ಹಾಗೆಯೇ ಈ ಪುರೋಹಿತಶಾಹಿ ಹುಲಿಯಂತೆ.” ಮುಂದುವರೆದು ಗುಂಡು ತಗುಲಬೇಕಾಗಿರುವುದು ಮೊದಲು ನಿಮ್ಮ ತಲೆಗೆ, ಇದೊಂದು ವಿಚಿತ್ರ ಬೇಟೆ ಎನ್ನುತ್ತಾರೆ. ಮೊದಲು ಜನರ ತಲೆಯಲ್ಲಿರುವ ಅಜ್ಞಾನ ಹೋಗದೆ ಪುರೋಹಿತಶಾಹಿ ವ್ಯವಸ್ಥೆಯ ಮೇಲೆ ದಾಳಿ ಮಾಡುವಂತಿಲ್ಲ ಎಂಬುದು ಅವರ ನಿಲುವು.

ಪರ್ಯಾಯ ವ್ಯವಸ್ಥೆಯ ಕನಸು ಇಂದಿನದಲ್ಲ. ಹಲವಾರು ಜನ ವಿಚಾರವಾದಿಗಳು, ಬುದ್ಧ, ಬಸವ, ಗಾಂಧಿ ಮುಂತಾದವರನ್ನೇ ಈ ವ್ಯವಸ್ಥೆ ಬಲಿ ತೆಗೆದುಕೊಳ್ಳದೆ ಬಿಟ್ಟಿಲ್ಲ. ಹೀಗಾಗಿ ಹೊಸ ವ್ಯವಸ್ಥೆಯು ನಿಲ್ಲಬೇಕೆಂದರೆ ಹಳೆಯ ವ್ಯವಸ್ಥೆಯ ಮೇಲೆ ಪೂರ್ಣಸಿದ್ಧತೆಯಿಂದ ದಾಳಿ ಮಾಡಬೇಕು ಎಂಬ ಆಲೋಚನೆ ದೂರದೃಷ್ಟಿಯುಳ್ಳದ್ದು. ಕುವೆಂಪು ನಾಟಕಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕುರಿತು ಚಿಂತಿಸಿದಾಗ ನಮ್ಮ ಕಣ್ಣು ಮುಂದೆ ನಿಲ್ಲುವ ನಾಟಕಗಳೆಂದರೆ ‘ಜಲಗಾರ, ಶೂದ್ರತಪಸ್ವಿ ಮತ್ತು ಬೆರಳ್‌ಗೆ ಕೊರಳ್‌. ಇಲ್ಲಿನ ನಾಯಕರಾದ ಜಲಗಾರ, ಶಂಭೂಕ ಮತ್ತು ಏಕಲವ್ಯ ಪುರಾಣ ಕಾವ್ಯಗಳಲ್ಲಿನ ಅಲಕ್ಷಿತ ಪಾತ್ರಗಳು. ಸಾಮಾನ್ಯರನ್ನೇ ಬಲಿಷ್ಟ ಸಮಾಜದೆದುರಿಗೆ ಅಸಮಾನ್ಯರೆನ್ನುವಂತೆ ಸೃಷ್ಟಿಸಿದ್ದಲ್ಲದೆ ಪುರಾಣದಲ್ಲಿ ವಂಚನೆಗೀಡಾಗಿದ್ದ ಇವರು ಇಲ್ಲ ನ್ಯಾಯ ಪಡೆಯುತ್ತಾರೆ. ಬಿ. ಎಂ. ಶ್ರೀಯವರ ಗ್ರೀಕ್‌ ಟ್ರಾಜೆಡಿಯ ದುರಂತ ನಾಯಕರಂತೆ ಇವರು ಇಲ್ಲಿ ಚಿತ್ರಿತರಾಗಿದ್ದಾರೆ. ಜಲಗಾರ ಸಾಮಾಜಿಕ ಪಾತ್ರವಾದರೂ ಪುರಾಣದ ಛಾಯೆಯನ್ನು ಪಡೆಯುತ್ತದೆ.

ಹೊಸ ಬಾಳಿನ ಗೀತೆ ಎಂಬ ಕವಿತೆಯಲ್ಲಿ ಕುವೆಂಪು ‘ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು’ ಎಂಬ ನವಯುಗವಾಣಿಯ ಘೋಷಣೆಯನ್ನು ಮೊಳಗಿಸುತ್ತಾರೆ. ಮೇಲುಕೀಳಿಲ್ಲದ ಪೂರ್ವದ ಕಲ್ಪನೆಗಳನ್ನೆಲ್ಲ ಕಿತ್ತೊಗೆದು ಹೊಸಯುಗಚಕ್ರ ಪರಿವರ್ತನೆಗೆ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ. ಇದಕ್ಕೆ ಯಂತ್ರರ್ಷಿಗಳ ವಿಜ್ಞಾನ ದೀವಿಗೆಯ ಅಗತ್ಯವಿದೆ ಎಂಬ ಮಾತನ್ನು ಒತ್ತಿ ಒತ್ತಿ ಹೇಳುತ್ತಾರೆ.

ಇಂದ್ರ ಸಿಂಹಾಸನಕೆ ಬಂದಿಹುದು ಕೊನೆಗಾಲ
ಕಳಚಿ ಬೀಳುವುದಿಂದು ನಂದನದ ಬೇಲಿ!
ದೇವತೆಗಳ ಶ್ಲೀಲಮೋದಕ್ಕೆ ಬದಲಾಗಿ
ಗೋಚರಿಪುದಿಲ್ಲಿ ಮರ್ತ್ಯರ ಕೃಷಿಯ ಕೇಲಿ!
ದ್ರವ್ಯಾನುಕೂಲತೆಯ ಜಾತಿಯಾ ನೀತಿಯಾ
ಪಕ್ಷಪಾತವನ್ನೆಲ್ಲ ಕೊಚ್ಚುವುದು ಬುದ್ಧಿ
ಮತ್ತೊಂದು ನಾಕವನೆ ನೆಯ್ಯುವರು ಲೋಕದಲಿ
ದೇವರ ನ್ಯಾಯವನೆ ಮಾನವರೆ ತಿದ್ದಿ!

‘ಜಲಗಾರ’ ಎಂಬ ನಾಟಕವನ್ನು ಈ ಹೊಸ ಸಮಾಜದ ಕಟ್ಟುವಿಕೆಯ ಕನಸಿನ ಹಿನ್ನೆಲೆಯಲ್ಲಿ ನೋಡುವುದು ಸೂಕ್ತವೆನಿಸುತ್ತದೆ. ಸಾಮಾಜಿಕ ನಾಟಕವಾದರೂ ಅದು ಕೊನೆಗೊಳ್ಳುವುದು ಪುರಾಣದ ಚೌಕಟ್ಟಿನಲ್ಲಿಯೇ ವಚನ ಸಾಹಿತ್ಯದಲ್ಲಿನ ಕಾಯಕ ಜೀವಿಗಳನ್ನು ಶಿವ ಮತ್ತೆ ಮತ್ತೆ ಮರು ಪರೀಕ್ಷೆಗೆ ಒಳಪಡಿಸಿ, ಅದರಲ್ಲಿ ಗೆದ್ದ ನಂತರ ಭಕ್ತರಿಗೆ ಒಲಿದು ದರ್ಶನ ನೀಡುವಂತೆ ಶಿವ ಜಲಗಾರನೆದುರು ಪ್ರತ್ಯಕ್ಷನಾಗುತ್ತಾನೆ. ಜಲಗಾರನ ಕಾರ್ಯನಿಷ್ಠೆಗೆ ಒಲಿಯುತ್ತಾನೆ. ಜಗದ ಜಲಗಾರ ತನ್ನ ಕಣ್ಣಿಂದ ಕಂಡ ಜಗತ್ತನ್ನು ಇಲ್ಲಿ ಚಿತ್ರಿಸಲಾದರೂ ಜಲಗಾರ ಮತ್ತು ಶಿವನ ನಡುವೆ ನಡೆಯುವ ಸಂಭಾಷಣೆ ಕುತೂಹಲಕಾರಿಯಾದುದು. ಜಲಗಾರನಿಗೆ ತನ್ನನ್ನು ಪರಿಚಯಿಸಿಕೊಂಡು ದೇವಲೋಕದ ಮನೋಹರ ಆಕಾರಗಳ ಮುಂದೆ ತನ್ನ ಅಸ್ಪೃಶ್ಯವಾದ ರೂಪವನ್ನು ಚಿತ್ರಿಸುತ್ತಾನೆ. ಶಾಸ್ತ್ರಿಗಳ ಕಣ್ಣಿಗೆ ಕುರೂಪಿಯಾಗಿದ್ದ ತನ್ನನ್ನು ಸಹ್ಯವಾಗಿ ಕಾಣುವಂತೆ ಅಲಂಕರಿಸಲಾಯಿತು ಎನ್ನುತ್ತಾರೆ.

ಜೋಯಿಸರ ಭಾಗಕ್ಕೆ ಶಿವನು
ಮುಟ್ಟದವನಾಗಿದ್ದನು. ಚಂದ್ರನಿಲ್ಲದೆ, ಗಂಗೆ
ಇಲ್ಲದೆಯೆ, ಹಣೆಗಣ್ಣು ಹಾವುಗಳು ಇಲ್ಲದೆಯೆ,
ಜನಿವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ
ಸೇರಿಸರು ಶಿವನಾದ ಎನ್ನ. ಅದರಿಂದ
ನಿಜವಾದ ಶಿವನು ಜಲಗಾರ ಶಿವನು
ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ.!

ಈ ಶಿವ ಜನಸಾಮಾನ್ಯನಾದ ಜಲಗಾರನ ಮುಂದೆ ಪ್ರತ್ಯಕ್ಷವಾದ ಬಗೆಯನ್ನು ಡಾ. ಕೆ. ಮರಳಸಿದ್ದಪ್ಪ ಅವರು ಕೃಷ್ಣ ಕನಕನಿಗೆ ಭೇಟಿಕೊಟ್ಟ ಸಂದರ್ಭಕ್ಕೆ ಹೋಲಿಸುತ್ತಾರೆ.

ಒಂದು ದಿನದ ಕಾಲಾವಧಿಯಲ್ಲಿ ನಡೆಯುವ ಈ ನಾಟಕವನ್ನು ಉಷಾಕಾಲ ಮತ್ತು ಸಾಯಂಕಾಲ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಉಷಾಕಾಲದಲ್ಲಿ ಕಸ ಗುಡಿಸುವ ಜಲಗಾರನನ್ನು ಶಿವಗುಡಿಯ ಜಾತ್ರೆಗೆ ಹೊರಟ ರೈತ, ಪಾರ್ವರು, ತಿರುಕ, ಭಟ್ಟ, ತರುಣರು ಭೇಟಿಯಾಗುತ್ತಾರೆ. ಸಾಯಂಕಾಲದಲ್ಲಿ ಹಾಡುತ್ತಾ ಬರುವ ಹುಡುಗಿ, ಬಾಲಕರ ಗುಂಪು, ಮಾತನಾಡುತ್ತಾ ಬರುವ ಬ್ರಾಹ್ಮಣರ ಗುಂಪು ಮರೆಯಾಗುತ್ತದೆ. ಇವರ್ಯಾರಿಗೂ ಜಲಗಾರನ ಅರಿವೇ ಇಲ್ಲ.

ಕಬ್ಬಿಗನೊಬ್ಬ ಮಾತ್ರ ಬದಲಾಗಬೇಕಾದ ಜಗತ್ತನ್ನು ಕುರಿತು ಹಾಡುತ್ತಾನೆ. ನಂತರ ಶಿವನೇ ಸಾಕ್ಷಾತ್ಕಾರಗೊಂಡು ಜಲಗಾರನೊಂದಿಗೆ ಮಾತಿಗೆ ಇಳಿಯುತ್ತಾನೆ. ಎರಡು ದೃಶ್ಯಗಳ ಈ ನಾಟಕ ಲೆಕ್ಕಾಚಾರದಿಂದಲೇ ನಿರ್ಮಿತಗೊಂಡಿದ್ದು, ಪಾತ್ರಗಳ ಪ್ರವೇಶ ಮತ್ತು ನಿರ್ಗಮನದಿಂದೆಂಬಂತೆ ಮುಗಿಯುತ್ತದೆ. ರಂಗಸ್ಥಳದಲ್ಲಿ ಪ್ರೇಕ್ಷಕನೂ, ಪಾತ್ರಧಾರಿಯೂ ಆಗಿ ಜಲಗಾರ ನಿಲ್ಲುತ್ತಾನೆ. ಲೇಖಕರು ಕಾಯಕನಿಷ್ಠೆಯಿದ್ದಲ್ಲಿ ದೈವವೇ ಕೆಳಗಿಳಿದು ಬರುತ್ತದೆ ಎಂಬುದನಿಲ್ಲಿ ಸರಳವಾಗಿ ಕಾಣಿಸುವ ಪ್ರಯತ್ನ ಮಾಡಿದ್ದಾರೆ. ಉಳಿದ ನಾಟಕಗಳಲ್ಲಿ ಆದಂತೆ ‘ಜಲಗಾರ’ ಸದ್ಯದ ಅವಸ್ಥೆಯಿಂದ ಬಿಡುಗಡೆಗೊಳಿಸುವ ಪ್ರಯತ್ನಗಳಿಲ್ಲ. ಅವಸರದ ರಸಾವೇಶದ ರಚನೆಯಾಗಿ ತೋರುವ ಈ ಕಿರುನಾಟಕವನ್ನು ಕುರಿತಂತೆ ಕುವೆಂಪುರವರು “ಜಲಗಾರ, ಯಮನ ಸೋಲು ಮತ್ತು ಮಹಾರಾತ್ರಿ ಈ ಮೂರು ಸರಳ ರಗಳೆಯ ನಾಟಕಗಳನ್ನು ನಾನು ಮೂರು ನಾಲ್ಕು ದಿನಗಳಲ್ಲಿ ಒಂದರ ಮೇಲೊಂದರಂತೆ ಬರೆದೆ. ಆ ಕಾಲದಲ್ಲಿ ಒಂದು ರಸಾವೇಶ ನನ್ನ ಚೇತನವನ್ನೆಲ್ಲ ವ್ಯಾಪಿಸಿ ದೀಪ್ತಗೊಳಿದಂತಿರುತ್ತಿತ್ತು… ಮಹಾತ್ಮಾ ಗಾಂಧೀಜಿಯ ಅಸ್ಪೃಶ್ಯತಾ ನಿವಾರಣಾ ಮತ್ತು ಹರಿಜನ ದೇವಸ್ಥಾನ ಪ್ರವೇಶದ ಚಳವಳಿಗಳೂ ತಮ್ಮ ಪ್ರಭಾವ ಬೀರಿದ್ದವು” ಎಂದು ತಮ್ಮ ಆತ್ಮಕತೆಯಲ್ಲಿ ನಿರೂಪಿಸುತ್ತಾರೆ.

ಒಂದು ರೀತಿಯ ರಸಾವೇಶದಲ್ಲಿ ಬರೆದ ಈ ನಾಟಕದಲ್ಲಿ ಸಮಾಜದ ವಿವಿಧ ವರ್ಗದವರ ಮನಸ್ಥಿತಿಗಳನ್ನು ಜಲಗಾರನ ಮಾತಿನ ಮೂಲಕ ಪ್ರಕಟಪಡಿಸಿದ್ದಾರೆ. ನಿಜ. ಆದರೆ, ಯಾವ ಪಾತ್ರಗಳ ನಡುವೆಯೂ ಬದಲಾಗಬೇಕೆನ್ನುವ ಸಂಘರ್ಷಗಳಲ್ಲ. ಸ್ವತಃ ಜಲಗಾರನು ಕಾಯಕದಲ್ಲೇ ದೈವ ಕಾಣುವ ನಿಷ್ಠೆ ಪ್ರಕಟಪಡಿಸುತ್ತಾನೆಯೋ ಹೊರತು ತನ್ನ ವರ್ಣನಿಷ್ಠೆ ಹಾಗೂ ವರ್ಗನಿಷ್ಠೆ ಮೀರುವ ಪ್ರಯತ್ನ ಮಾಡುವುದಿಲ್ಲ. ದೇವಸ್ಥಾನವೆಂಬ ಕೇಂದ್ರವನ್ನು ಬೀದಿಗೆ ವರ್ಗಾಯಿಸಿದ ಲೇಖಕರು ಕಬ್ಬಿಗನ ಮುಖಾಂತರವು ಹೇಳಲೆತ್ನಿಸುವುದು ಈ ಕರ್ಮತತ್ವವನ್ನೇ.

ಕೊರಗಲೇನು? ಮರುಗಲೇನು?
ಬಿಗಿದ ಬಂಧನ ಹರಿವುದೇನು?
ಸುಖವೇ ಬರಲಿ, ದುಃಖ ಬರಲಿ
ಜೀವವೆಡರುಗಳೇನೆ ಇರಲಿ.
ಭಕ್ತಿಯಿಂದ ಶಕ್ತಿಯಿಂದ
ಮುಕ್ತಿಗೇರು ಧೈರ್ಯದಿಂದ
ಕೊರಗಲೇಕೆ? ಮರುಗಲೇಕೆ?
ಬಂದ ಬಾಳನು ಹಳಿಯಲೇಕೆ?

ಜಲಗಾರದಲ್ಲಿ ಹಲವು ತತ್ವಗಳಿಂದ, ವಿಚಾರಗಳಿಂದ ಪ್ರೇರೇಪಿತವಾದ ಲೇಖಕರು ವರ್ಣಾಶ್ರಮವನ್ನು ಪ್ರಶ್ನಿಸಲೆತ್ನಿಸಿದ್ದಾರೆ. ಪರ್ಯಾಯ ಸಂಸ್ಕೃತಿಯ ಮೂಲ ಬೀಜಗಳು ಇಲ್ಲಿವೆ. ಆದರೆ, ಬೀಜ ತಳೆಯಲು ಕಥೆಯ ಸಾಮಾಜಿಕ ಹಂದರ ಶಕ್ತವಾಗಿಲ್ಲದ ಕಾರಣ ಜಲಗಾರನೊಬ್ಬನ ಜಿಜ್ಞಾಸೆಯಾಗಿ, ದೈವದೊಲುಮೆಯೇ ಫಲವಾಗಿ ನಾಟಕ ಅವಸರದಲ್ಲಿ ಮುಗಿಯುತ್ತದೆ. ತರುಣರಿಬ್ಬರ ಪ್ರಶ್ನೆಗಳಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ನಡೆನುಡಿಯೆ ಬಗ್ಗೆ ಇರುವ ಗೊಂದಲಗಳ, ದೇವರ ಅಸ್ತಿತ್ವದ ಬಗ್ಗೆ ಚರ್ಚೆ ನಡೆಯುತ್ತದೆ ಮತ್ತು ಯಾವ ನಿರೀಕ್ಷಿತ ಪರಿಣಾಮವಿಲ್ಲದೆ ಅದು ಮೊಟಕುಗೊಳ್ಳುತ್ತದೆ.

ನಾಟಕ ಅಂತಿಮದಲ್ಲಿ ಪರಿಗಣಿಸುವ ಮೌಲ್ಯಗಳೇನೇ ಇದ್ದರೂ ಇಲ್ಲಿಂದ ವರ್ಣಾಶ್ರಮ, ಕರ್ಮತತ್ವ, ಪುರೋಹಿತಶಾಹಿಯ ಬಗ್ಗೆ ಆರಂಭವಾದ ಪ್ರಶ್ನೆಗಳು ಮುಂದೆ ಶೂದ್ರತಪಸ್ವಿ, ಬೆರಳ್ಗೆ ಕೊರಳ್‌ನಲ್ಲಿ ಶಕ್ತವಾಗಿ ಮುಂದುವರೆಯುತ್ತವೆ. ಆರಂಭದ ನಾಟಕಕಾರರನ್ನು ಒಳಗೊಂಡಂತೆ ಚಂದ್ರಶೇಖರ ಕಂಬಾರ, ಲಂಕೇಶ್‌, ಗಿರೀಶ್‌ ಕಾರ್ನಾಡ್‌, ಶಿವಪ್ರಕಾಶ್‌, ಇಲ್ಲಿಯವರೆಗಿನ ನಾಟಕಗಳನ್ನು ಗಮನಿಸಿದರೆ ಚಾರಿತ್ರಿಕ ಹಾಗೂ ಪೌರಾಣಿಕ ವಸ್ತುವನ್ನೊಳಗೊಂಡ ಕೃತಿಗಳು ಯಶಸ್ವಿಯಾದಷ್ಟು ಸಾಮಾಜಿಕ ಕೃತಿಗಳು ಯಶಸ್ವಿಯಾಗಿಲ್ಲ. ಭದ್ರವಾದ ಕಥೆಯ ತಳಹದಿಯಿಲ್ಲದ ನಾಟಕಗಳಲ್ಲಿ ಸಮಕಾಲೀನ ಸಂವೇದನೆಗಳನ್ನು, ಸಮಸ್ಯೆಯನ್ನು ಅಭಿವ್ಯಕ್ತಿಸುವುದು ಸವಾಲೇ ಆಗಿರುತ್ತದೆ. ಈ ಅಭಿವ್ಯಕ್ತಿಯ ಸಾಧ್ಯತೆಗಳನ್ನು ‘ಪ್ರತಿಕೃತಿ ಹಾಗೂ ಪ್ರತಿಮಾ ವಿಧಾನ’ಗಳೆಂದು ಕುವೆಂಪು ಕರೆಯುತ್ತಾರೆ. “ಸಾಮಾಜಿಕ ನಾಟಕಗಳು ಮುಕ್ಕಾಲು ಮೂರುವೀಸ ಪಾಲು ಪ್ರತಿಕೃತಿಯ ದೃಷ್ಟಿಗೂ ವಿಧಾನಕ್ಕೂ ಒಳಗಾಗುತ್ತವೆ. ಅದಕ್ಕೆ ಹತ್ತಿರ ಹತ್ತಿರವಾಗಿ ಐತಿಹಾಸಿಕ ನಾಟಕಗಳು ಬರುತ್ತವೆ. ಪುರಾಣಗಳ ಪ್ರಪಂಚವೇ ಪ್ರತಿಮಾ ಪ್ರಪಂಚವಾಗಿರುವುದರಿಂದ ಪೌರಾಣಿಕ ನಾಟಕಗಳೆಲ್ಲ ಅನಿವಾರ್ಯವಾಗಿ ಪ್ರತಿಮಾದೃಷ್ಟಿಯಿಂದ ಪ್ರಚೋದಿತವಾಗಿ ಪ್ರತಿಮಾ ವಿಧಾನದಿಂದ ಮೈಗೊಂಡಿರುತ್ತವೆ”.

ಪುರಾಣದ ಪಾತ್ರ ನಿರ್ಮಿತಿಗಳಲ್ಲಿ ‘ಶೂದ್ರತಪಸ್ವಿಯ’ ಶಂಭೂಕ ಸಾಕಷ್ಟು ಚರ್ಚೆಗೆ ಒಳಗಾದ ಪಾತ್ರ. ೧೯೪೪ರಲ್ಲಿ ಬರೆದ ಶೂದ್ರತಪಸ್ವಿ ರಾಮಾಯಣದಲ್ಲಿನ ಉತ್ತರಕಾಂಡದ ಹಲವು ಪ್ರಕ್ಷಿಪ್ತಗಳಲ್ಲಿ ಒಂದಾದ ಶಂಭೂಕವಧ ಪ್ರಸಂಗವನ್ನು ಕುರಿತದ್ದಾಗಿದೆ. ಸೀತಾ ಪರಿತ್ಯಾಗದ ನಂತರ ಬ್ರಾಹ್ಮಣನೊಬ್ಬ ಮೃತ ಬಾಲಕನನ್ನು ಹೊತ್ತು ಶ್ರೀರಾಮನ ಅರಮನೆಯ ಬಳಿ ಕುಳಿತು ಪರಿಪರಿಯಾಗಿ ರೋಧಿಸುತ್ತಾರೆ. ಮಗನ ಅಕಾಲ ಮೃತ್ಯುವಿಗೆ ಕಾರಣ ಶೂದ್ರನಾದ ಶಂಭೂಕ ತಪಸ್ಸು ಮಾಡುತ್ತಿರುವುದು. ಪುಷ್ಪಕ ವಿಮಾನವನ್ನೇರಿ ಹೊರಟ ರಾಮ ತಪಸ್ಸು ಮಾಡುತ್ತಿದ್ದ ಶಂಭೂಕನನ್ನು ಹುಡುಕಿ ‘ನೀನು ಯಾವ ವರ್ಣದಲ್ಲಿ ಸಂಭವಿಸಿದವನು’? ಎಂದು ಕೇಳುತ್ತಾನೆ. ಶೂದ್ರನೆಂದು ಅವನು ಮಾತು ಮುಗಿಸುವುದಕ್ಕೆ ಮೊದಲೇ ರಾಮನು ಖಡ್ಗದಿಂದ ಅವನ ತಲೆಯನ್ನು ಉರುಳಿಸುತ್ತಾನೆ. ದೇವತೆಗಳೆಲ್ಲ ರಾಮನ ಕಾರ್ಯವನ್ನು ಹೊಗಳುತ್ತಿದ್ದಂತೆ ಬ್ರಾಹ್ಮಣಕುಮಾರ ಎದ್ದು ಕೂಡುತ್ತಾನೆ ಇದು ಮೂಲದ ಕತೆ.

ಮುಖ್ಯವಾಗಿ ಕುವೆಂಪು ರಾಮಾಯಣದ ಮೂಲ ಸ್ವರೂಪದ ಶುದ್ಧತೆಯ ಬಗ್ಗೆಯೇ ಸಕಾರಣವಾಗಿ ಅನುಮಾನ ವ್ಯಕ್ತಪಡಿಸುತ್ತಾರೆ. “ಉತ್ತಮ ಶಿಲ್ಪಿ ಕಟ್ಟಿದ ದೇವಾಲಯದಲ್ಲಿ ಅದು ಹಳತಾಗುತ್ತ ಬಂದಂತೆಲ್ಲ. ಇಲಿ ಹಲ್ಲಿ ಬಾವಲಿ ಮೊದಲಾದ ಅನಾಹುತ ಜೀವಜಂತುಗಳೂ ಗೂಡು ಬೀಡು ಮಾಡುವುದುಂಟು. ವಾಲ್ಮೀಕಿಯ ಮಹಾಕೃತಿಗೂ ಅಂತಹ ಗತಿ ಒದಗಿದರೆ ಅದು ಅದರ ಪುರಾತನತ್ವಕ್ಕೆ ಒಂದು ಅನಿವಾರ್ಯ ಲಕ್ಷಣವಾಗುತ್ತದೆ”. ಈ ಹಿನ್ನೆಲೆಯಲ್ಲಿಯೇ ಕುವೆಂಪುರವರ ಕೈಯಲ್ಲಿ ‘ಶೂದ್ರತಪಸ್ವಿ’ಯಾಗಿ ಶಂಭೂಕ ಆಗಿಹೋದ ತಪ್ಪನ್ನು ಸರಿಪಡಿಸುವಂತೆ ಮೈ ತೋರುತ್ತಾನೆ. ರಾಮಾಯಣದ ವಾಲ್ಮೀಕಿ ವಾಲ್ಮೀಕದಿಂದ ಜನ್ಮ ತಳೆದವನು. ಬೇಡರ ಜಾತಿಗೆ ಸೇರಿದವನಾಗಿದ್ದು, ಅವನು ಬರೆದ ಕತೆಯಲ್ಲಿ ಶೂದ್ರನೊಬ್ಬ ತಪಸ್ಸು ಮಾಡಿದ ಕಾರಣಕ್ಕೆ ರಾಮನಿಂದ ಹತನಾದ ಎಂಬುದು ಎಷ್ಟರ ಮಟ್ಟಿಗೆ ಸಂಭವನೀಯ ಎಂಬ ಪ್ರಶ್ನೆಯೂ ಇಲ್ಲಿ ಏಳುತ್ತದೆ. ಇದಲ್ಲದೆ ಕ್ಷತ್ರಿಯನಾದ ರಾಮ, ಎಂತಹ ಕಾಲದಲ್ಲೂ ಧರ್ಮವನ್ನು ಪಲಿಸುವ ರಾಮ ಹೀಗೆ ಶಂಭೂಕನನ್ನು ಕೊಲ್ಲುವುದು ಸಾಧ್ಯವೇ ಎಂಬ ಪ್ರಶ್ನೆಯೂ ಇಲ್ಲಿ ಹುಟ್ಟುತ್ತದೆ. ವರ್ಣಾಶ್ರಮ ಧರ್ಮದ ಈ ಪೋಷಕ ಅಂಶ ಅಮಾನವೀಯವಾಗಿದ್ದು, ಕುವೆಂಪು ಈ ಕಲ್ಪನೆಯ ಬಗ್ಗೆ ಮರುಚಿಂತನೆ ಮಾಡುವುದಲ್ಲದೇ ರಾಮನನ್ನು ಮಾನವೀಯವಾಗಿಯೂ, ಶಂಭೂಕನನ್ನು ಜೀವಂತವಾಗಿಯೂ ಉಳಿಸುವುದರ ಮೂಲಕ ಸನಾತನ ನಂಬಿಕೆಗಳಿಗೆ ಎದುರಾಗುವ ಪ್ರಯತ್ನ ಮಾಡುತ್ತಾನೆ. ಇಲ್ಲೆಲ್ಲಾ ಕುವೆಂಪುರವರ ಗಮನ ಈಗಾಗಲೇ ಬೆಳೆದ ಪುರೋಹಿತಶಾಹಿಗೆ ಎದುರಾಗಿ ನಿಲ್ಲುವುದಲ್ಲ. ಆದ ಪ್ರಮಾದವನ್ನು ಸರಿಪಡಿಸುವ ಪರ್ಯಾಯದ ಕಡೆಗೆ.

ನಾಲ್ಕು ಪಾತ್ರಗಳು, ಮೂರು ದೃಶ್ಯಗಳನ್ನೊಳಗೊಂಡ ಈ ನಾಟಕ ಗಾತ್ರದಲ್ಲಿ ಕಿರಿದಾದರೂ ಒಳಗೊಂಡಿರುವ ಸಂಘರ್ಷದಿಂದಾಗಿಯೇ ಸಂಕೀರ್ಣವಾದದ್ದಾಗಿದೆ. ಶೂದ್ರನಾದ ಶಂಭೂಕ ತನ್ನ ವರ್ಣದ ಮಿತಿಯನ್ನು ಮೀರಿ ವೈದಿಕ ಧರ್ಮದವನಂತೆ ತಪಸ್ಸಿಗೆ ನಿಲ್ಲುತ್ತಾನೆ. ಯಶಸ್ಸನ್ನು ಪಡೆದಿದ್ದಾನೆ. ಆದರೆ, ಜಾತಿ ವ್ಯವಸ್ಥೆಗೆ ಅಸಾಧುವಾದ ಈ ತಪಸ್ಸು ಬ್ರಾಹ್ಮಣ ಬಾಲಕನನ್ನು ಬಲಿ ತೆಗೆದುಕೊಂಡಿದೆ. ಕಲಿಯುವ ಆಸೆಯನ್ನು ಮುರುಟಿಸುವ ವ್ಯವಸ್ಥೆಯಲ್ಲಿ ಶಂಭೂಕ, ಕರ್ಣ, ಏಕಲವ್ಯ ಮತ್ತೆ ಮತ್ತೆ ಬಲಿಪಶುವಾಗುತ್ತಾರೆ. ಜಲಗಾರ ನಾಟಕದಲ್ಲಿ ಎರಡನೆಯ ಪಾರ್ವನಾಡುವ ಮಾತು ಶೂದ್ರರಲ್ಲಿ ಸಾಧಕರು ಹುಟ್ಟುವುದಿಲ್ಲ ಎಂಬ ಮಾತನ್ನು ಸಿದ್ಧಿಸಿ ತೋರುವಂತೆ ಶಂಭೂಕ ಬರುತ್ತಾನೆ.

ಜಲಗಾರದಲ್ಲಿ ವರ್ಣ ಸಮಸ್ಯೆಯನ್ನು ಕರ್ಮತತ್ವ ಎಂಬ ಆವರಣದಲ್ಲಿ ಒಪ್ಪಿಕೊಂಡ ಕುವೆಂಪು ಇಲ್ಲಿ ಅದೇ ಆವರಣವನ್ನು ಒಡೆದು ಶಂಭೂಕನನ್ನು ತಪಸ್ವಿಯಾಗಿಸುತ್ತಾರೆ. ವೈದಿಕರನ್ನು ತೃಪ್ತಪಡಿಸಬೇಕಾದ ಕ್ಷತ್ರೀಯ ರಾಮ ಶಂಭೂಕನ ಬಗ್ಗೆ ಉದಾರವಾದಿಯಾಗುತ್ತಾನೆ. ನಿಜವಾದ ತಪ್ಪಿತಸ್ಥನಿಗೆ ಶಿಕ್ಷೆಯಾಗುವಂತೆ ಮಾಡುತ್ತಾನೆ. ವೈದಿಕನೊಬ್ಬ ಶಿಕ್ಷೆಗೆ ಒಳಗಾಗುವುದು, ಶೂದ್ರ ತಪಸ್ವಿಯ ಕಾಲವನ್ನು ಜೀವನದಾನಕ್ಕಾಗಿ ಹಿಡಿಯುವುದು ಸನಾತನ ಧರ್ಮವನ್ನು ಕೆರಳುವಂತೆ ಮಾಡುತ್ತದೆ. ಈ ಕುರಿತ ವಿವರಗಳನ್ನು ‘ಶೂದ್ರತಪಸ್ವಿ-ಮಾರ್ನುಡಿಯಲ್ಲಿ’ ಗಮನಿಸಬಹುದು.

ಮೊದಲನೆಯ ದೃಶ್ಯದಲ್ಲಿ ಭೈರವ ಮತ್ತು ಮೃತ್ಯು ಶಂಭೂಕನಿಗೆ ಬೆಂಗಾವಲಾಗಿ ನಿಂತಿದ್ದಾರೆ. ಭೈರವ ಮತ್ತು ಮೃತ್ಯುವಿನ ಸಂಭಾಷಣೆಯಲ್ಲಿ ಶಂಭೂಕನ ತಪಸ್ಸಿಗೆ ಕಾವಲಾಗಿ ನಿಂತಿದ್ದಾರೆ. ವೃದ್ಧ ಬ್ರಾಹ್ಮಣ ಶಂಭೂಕನಿಗೆ ನಮಸ್ಕರಿಸ ಹೋದ ತನ್ನ ಮಗನನ್ನು ತಡೆದಿದ್ದಾನೆ. ಅದು ಅವನು ಮಾಡಿದ ಅಧರ್ಮ. ಈ ಅಧರ್ಮದಿಂದಾಗಿಯೇ ಅವನ ಮಗ ಸತ್ತು ಬಿದ್ದಿದ್ದಾನೆ. ಶೂದ್ರನಿಗೆ ನಮಸ್ಕರಿಸಿದಂತೆ ತಡೆದದ್ದರಿಂದ ವೃದ್ಧ ಬ್ರಾಹ್ಮಣನ ಬಗ್ಗೆ, ಅವನ ಅಪರಾಧದ ಬಗ್ಗೆ ಇಬ್ಬರಿಗೂ ಬೇಸರವಿದೆ. ಈ ಬೇಸರವನ್ನು ಭೈರವ ಈ ಮುಂದಿನಂತೆ ಸೂಚಿಸುತ್ತಾನೆ.

ಭೈರವ: (ತಟಕ್ಕನೆ ಬೇಲಿಗಟ್ಟಿದ್ದ ಶೂಲಪಂಕ್ತಿಯನ್ನೆತ್ತಿ)
ಶಿವ ಶಿವಾ! ಎನ್‌ ಭಯಂಕರ ಪಾಪಂ
ಶ್ರೀರಾಮನಾಳುತಿರ್ಪ್ಪೀ ಧರ್ಮರಾಜ್ಯದೊಳ್‌!

ಎರಡನೆಯ ದೃಶ್ಯದಲ್ಲಿ ತನ್ನಿಂದಾದ ಅಪರಾಧವನ್ನು ಯೋಚಿಸದ ಬ್ರಾಹ್ಮಣ ಇದು ರಾಮನ ಆಳ್ವಿಕೆಯಲ್ಲಾದ ದೋಷವೆಂದೆ ಎಣಿಸುತ್ತಾನೆ. ಶೂದ್ರನಿಗೆ ತಪಸ್ಸು ಮಾಡಲು ಅವಕಾಶ ಮಾಡಿಕೊಟ್ಟ ತಪ್ಪನ್ನು ರಾಮನದೇ ಎಂದು ನಿರ್ಧರಿಸುತ್ತಾನೆ.

ಶ್ರೀರಾಮನಾಳ್ವಿಂದೆ ರಾಮಪ್ರಜೆಗೆ ಕುಂದೆ?
ದೊರೆಯ ದೋಷಮೆ ಕಾರಣಂ ಪ್ರಜಾಸಂಕಟಕೆ!
ಪೆರತಲ್ತು! ಪೆರತಲ್ತು!
ಏನೊ ಒಂದಿರಲ್‌ವೆಳ್ಕುಮಾ ರಾಮಪಾಪಂ
(ಆಲೋಚಿಸಿ ತರಿಸಂದು)
ಪೆರತೇನ್‌?
ಸಾಲದೇನಾ ಶೂದ್ರನ ತಪಕೆ ಮುನಿದ ಧರ್ಮಶಾಪಂ.

ಮೂಲದಲ್ಲಿದ್ದಂತೆ ಇಲ್ಲಿ ಬ್ರಾಹ್ಮಣ ಮಗನ ಹೆಣದ ಸಮೇತ ಬಂದಿಲ್ಲ. ತಾನೊಬ್ಬನೆ ಅರಮನೆಯ ಮುಂದೆ ರೋಧಿಸುತ್ತಿದ್ದಾನೆ. ಈ ರೋಧನವನ್ನೇ ರಾಮ ತನ್ನ ಬಾಳಿನ ಸಂಗೀತವೆಂದು, ಅವತಾರಿಯಾದ ತಾನು ಉಣ್ಣುವ ಕೂಳು, ಕುಡಿವ ಕಣ್ಣೀರು ಎಂದು ಬೇಸರಗೊಳ್ಳುತ್ತಾನೆ. ವೈದಿಕರ ಹೊಗಳಿಕೆ ರಾಮನಿಗೆ ಗತದ ನೋವನ್ನು ಕೆರಳಿಸುತ್ತದೆ. ಸೀತೆಯನ್ನು ಲೋಕಪವಾಡಕ್ಕೆ ಹೆದರಿ ಅಗ್ನಿಪ್ರವೇಶ ಮಾಡಿಸಿದ, ತುಂಬು ಬಸಿರಿಯನ್ನು ಕಾಡಿಗಟ್ಟಿದ ಪರಾಕ್ರಮಿಯಲ್ಲವೆ ಎಂದು ಹೊಗಳಿದಾಗ ರಾಮನಿಗೆ ನಿಟ್ಟುಸಿರು ಬಿಡುವಂತಾಗುತ್ತದೆ.

ಸಾಲ್ಗುಮಾ ಕಥನಂ, ದ್ವಿಜನ್ಮ
ಕಾಳ್ಗಿಚ್ಚಿಗೊರ್ಗಿಚ್ಚನಿದಿರೊಡ್ಡಿ ನಂದಿಪ್ಪವೋಲ್‌
ನಿನ್ನಳಲ್ಗೆನ್ನಳಲ್‌ ಪರಿಹಾರಮೇನ್‌?

ಮುಂದಿನ ಸಂಭಾಷಣೆಯಲ್ಲಿ ಕುವೆಂಪು ಭಾಷೆಯಲ್ಲಿ ಕಟಕಿ, ವ್ಯಂಗ್ಯ, ರೂಕ್ಷತೆಯನ್ನು ಸಹಜವಾಗಿಯೇ ಬಳಸುತ್ತಾರೆ. ರಾಮ ಮತ್ತು ಶಂಭೂಕನ ಮಧ್ಯೆ ನಡೆಯುವ ಸಂಭಾಷಣೆಯೇ ರಾಮನ ಮಾನವತಾವಾದದ ನಿಲುವನ್ನು, ಬ್ರಾಹ್ಮಣನ ಸನಾತನ ನಿಲುವನ್ನು ವ್ಯಕ್ತಪಡಿಸುತ್ತದೆ. ಇಬ್ಬರ ಮಾತುಕತೆಯೂ ಶ್ರೇಷ್ಠವಾದ ನಾಟಕೀಯತೆಯನ್ನು ಒಳಗೊಳ್ಳುತ್ತಾ ಹೋಗುತ್ತದೆ. ರಾಮ ಬ್ರಾಹ್ಮಣನ ಪಾಷಾಂಡಿತನವನ್ನು ಕಂಡು ಒಳಗೊಳಗೇ ಬೇಸರಗೊಳ್ಳುತ್ತಾನೆ. ಅದನ್ನು ಅರಿಯಲಾರದಷ್ಟು ಬ್ರಾಹ್ಮಣ ಮೂರ್ಖನಾಗಿದ್ದಾನೆ. ಕನಿಕರದಿಂದಲೂ ಕೋಪದಿಂದಲೂ ಇರುವ ರಾಮನ ಸ್ವಗತ ಈ ಮುಂದಿನಂತಿದೆ.

ಈ ವರ್ಣ ಗರ್ವಾಂಧಂಗೆ
ಈ ಶಾಸ್ತ್ರರ್ಮೂಂಗೆಂತೊ ಬುದ್ಧಿಗಂಪೆನ್‌
ಶಂಭೂಕನ್‌ ಮಹಾಯೋಗಿ
ತಪಸ್ವಿಯ ತಿರಸ್ಕೃತಿಗೆ ಮುನಿದ ಧರಂ
ಕಂದುದೀತನ ಮುದ್ದು ಕಂದಂಗೆ
ನನ್ನ ರಾಜ್ಯದೊಳುಂ ಅಕಾಲ ಮೃತ್ಯುವಂ
ತನ್ನ ತಪ್ಪನೆ ತಿಳಿಯಲಾರದೀತನ್‌,
ಮರೆಯಿಂದಮೆನ್ನನ್‌
ಬಹಿರಂಗವಾ ಶಂಭೂಕ ಯೋಗಿಯನ್‌
ನಿಂದಿಸುತ್ತಿರ್ಪನ್‌.

ಬ್ರಾಹ್ಮಣನಾದರೂ ರಾಮನನ್ನು ರಾಮನಿಗೆ ಸಂಬಂಧಿಸಿದ ಚಹರೆಗಳನ್ನು ಚುಚ್ಚುವಂತೆ ಒಳಗೆ ಆಡುತ್ತಾನೆ. ರಾಮನ ಬೇಸರವೆಂದರೆ ‘ಏನ್‌ ಜಿಹ್ವೆ ಈ ಪಾರ್ವನದು? ಮಾತು ಮಾತಿನೊಳೆನ್ನ ಮರ್ಮಮಂ ಚುಚ್ಚುವನ್’. ಮೂರನೆಯ ದೃಶ್ಯದಲ್ಲಿ ಬ್ರಾಹ್ಮಣನೊಂದಿಗೆ ಬಂದು ಬ್ರಾಹ್ಮಣನ ಕೋರಿಕೆಯ ಮೇಲೆ ಬ್ರಹ್ಮಾಸ್ತ್ರವನ್ನು ಬಿಡುತ್ತಾನೆ. ಬಿಡುವ ಮುನ್ನವೆ ರಾಮನಿಗೆ ತಿಳಿದಿತ್ತು. ಆ ಬ್ರಹ್ಮಾಸ್ತ್ರಾ ಶಂಭೂಕನಿಗೆ ನಮಸ್ಕರಿಸಿ ಬ್ರಾಹ್ಮಣನೆಡೆಗೆ ಬಂದು ಅವನನ್ನೇ ವಧಿಸುವುದೆಂದು. ತನ್ನ ಜೀವವುಳಿಸಿಕೊಳ್ಳಬೇಕಾದರೆ ಮಗ ಬದುಕಬೇಕಾದರೆ ಬ್ರಾಹ್ಮಣ ಶಂಭೂಕನಿಗೆ ನಮಸ್ಕರಿಸಲೇ ಬೇಕಾಗುತ್ತದೆ. ಕೊನೆಗೆ ಬ್ರಾಹ್ಮಣನ ಬಾಯಿಂದಲೇ ತಪ್ಪೊಪ್ಪಿಗೆಯ ಮಾತುಗಳು ಬರುತ್ತವೆ.

ಬುದ್ಧಿಗಲಿಸಿದೆಯ್‌ ಸಂಪ್ರದಾಯಬದ್ಧಂತೆ
ಶಾಸ್ತ್ರಸಂಮೂಢಂಗೆ, ಜಾತಿಗರ್ವಾಂಧಂಕೆ,
ಆವ ಜಾತಿಯ ತರುವೋ? ಇಂಧನಕೆ ಹೊರತುಂಟೆ
ಬೆಂಕೆಗೇಂ ಭೇದಮೆ? ದಳ್ಳುರಿಗೆ ದಾಕ್ಷಿಣ್ಯವೆ?
ಆರಾದರೇನ್‌? ಆರಾಧ್ಯರ್‌ ತಪೋಧನರ್‌!
ನಮಸ್ಕಾರಮೆ ಪುಣ್ಯಂ; ತಿರಸ್ಕಾರಮೆ ಪಾಪಂ.

ಈ ತಪ್ಪೊಪ್ಪಿಗೆಯ ಮಾತುಗಳ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ಅಧಿಕಾರಿಶಾಯಿಗಳೂ, ರಾಜಕಾರಣಿಗಳೂ, ಪುರೋಹಿತಶಾಹಿಗಳೂ ಆಡುವ ಮಾತುಗಳಾಗಿವೆ. ಆಗ ಮಾತ್ರವೆ ಹಳೆಯ ಅರ್ಥಹೀನ ಜಗತ್ತು ತನ್ನ ಹೊಸತತ್ವದೊಂದಿಗೆ ಮರುಹುಟ್ಟು ಪಡೆಯುತ್ತದೆ. ನವೋದಯ ಸಾಹಿತ್ಯದ ಬಹುಮುಖ್ಯ ಆಶಯವೆಂದರೆ ಪತಿತರಲ್ಲೂ ಮಾನವನ್ನು ಶೋಧಿಸುವುದು, ಉದಾತತ್ತತೆಗೆ ಏರಿಸುವುದು ಆಗಿತ್ತು. ಈ ಆಶಯವನ್ನು ಪ್ರತಿ ಅಥವಾ ಪರ್ಯಾ ಸಂಸ್ಕೃತಿಯ ಮೂಲಕ ಕುವೆಂಪು ತಮ್ಮ ನಾಟಕಗಳಲ್ಲಿ ಆಗು ಮಾಡುತ್ತಾರೆ. ಶೂದ್ರ ತಪಸ್ವಿಯಲ್ಲಿ ಶಂಭೂಕ ಒಂದು ಪ್ರತಿಮೆ ಮಾತ್ರ. ಅವನೆದುರಲ್ಲಿ ಬ್ರಾಹ್ಮಣನ ತಪ್ಪೊಪ್ಪಿಗೆ ನಡೆಯುತ್ತದೆ. ಒಟ್ಟಾರೆಯಾಗಿ ಕುವೆಂಪು ತಮ್ಮ ನಾಟಕದಲ್ಲಿ ವರ್ಣಾಶ್ರಮ, ವರ್ಗ, ಹಿತಾಸಕ್ತಿಗಳಲ್ಲಿ, ಪುರಾಣಗಳಲ್ಲಿ ಸೇರ್ಪಡೆಯಂತೆ ಆದ ತಪ್ಪನ್ನು ನವಯುಗದ, ನವಹತಾರಗಳಿಂದ ಸರಿಪಡಿಸುವ ಪ್ರಯತ್ನ ಮಾಡುತ್ತಾರೆ. ಬೃಹತ್‌ ಪ್ರತಿಮೆಯಾದ ರಾಮಾಯಣದಲ್ಲಿ ಪ್ರತಿಪಾದಿಸಲ್ಪಟ್ಟ ಸನಾತನ ಧರ್ಮವನ್ನು ವಾಲ್ಮೀಕಿ, ಶಂಭೂಕನಂತಹ ಸಣ್ಣ ಸಣ್ಣ ಪ್ರತಿಮೆಗಳ ಮೂಲಕ ಒಡೆದು ಪ್ರವೇಶಿಸುವ, ಆ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಮರು ಚಿಂತನೆಯನ್ನು ಮತ್ತೆ ಮತ್ತೆ ಮಾಡುತ್ತಾರೆ. ಇಂತಹದೇ ಒಂದು ದೃಷ್ಟಿಕೋನ ಅವೈದಿಕ ಚಳುವಳಿಯಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ನಡೆದಿದ್ದು ನಾರಾಯಣಗುರು ಮತ್ತು ಪೆರಿಯಾರ್‌ ಅವರು ಅದರ ನೇತೃತ್ವ ವಹಿಸಿದ್ದರು.

ಪ್ರಧಾನ ಸಂಸ್ಕೃತಿಯೆದುರು ಪ್ರತಿ ಸಂಸ್ಕೃತಿಯೊಂದನ್ನು ಸೃಷ್ಟಿಸಲು ಅವರು ಕೈಹಾಕಿದ್ದು ಈ ಪುರಾಣದ ಪ್ರತಿಮೆಗಳನ್ನು ಒಡೆದ ಕೆಲಸಕ್ಕೆ. ರಾಮ, ರಾವಣ, ದ್ರೌಪದಿ, ಸೀತೆ, ಲಕ್ಷ್ಮಣ…. ಇವರೆಲ್ಲರೂ ಸಾಮಾನ್ಯ ಮಾನವರಂತೆ, ಮನುಷ್ಯ ಸಹಜ ಗುಣ, ದೋಷಗಳಿಂದ ಮರುಚಿಂತನೆಗೆ ಒಳಗಾದರು. ಈ ಹಿನ್ನೆಲೆಯಲ್ಲಿ ಕುವೆಂಪು ಪ್ರಧಾನ ಸಂಸ್ಕೃತಿಯೊಂದನ್ನು ವಿರೋಧಿಸುವುದಕ್ಕಿಂತಲೂ ಅದನ್ನು ಶುದ್ಧೀಕರಿಸಿಕೊಂಡು ಅದು ಜನಸಾಮಾನ್ಯರಾಗುವ ಕಡೆ ಹೆಚ್ಚು ಗಮನ ಹರಿಸಿದರು ಎಂದೇ ಹೇಳಬಹುದಾಗಿದೆ.

ತಮ್ಮ ನಾಟಕಗಳನ್ನು ಕುರಿತಂತೆ ಕುವೆಂಪು, ಅದರಲ್ಲೂ ಮುಖ್ಯವಾಗಿ ಶೂದ್ರ ತಪಸ್ವಿಯನ್ನು ಕುರಿತಂತೆ ಈ ಮುಂದಿನಂತೆ ಹೇಳುತ್ತಾರೆ “ಈ ನಾಟಕ ಆಡುವ ದೃಷ್ಟಿಯಿಂದ ನಿಷ್ಪ್ರಯೋಜಕ. ಅದರ ಚಿತ್ರಗಳ ಬೃಹತ್ತನ್ನೂ, ಮಹತ್ತನ್ನೂ ಹೊರಗಡೆಯ ಅಲ್ಪವೇದಿಕೆಯ ಮೇಲೆ ಕೃತಕಾಭಿನಯದಿಂದ ಪ್ರದರ್ಶಿಸುವುದೂ ಅಸಾಧ್ಯ. ಆದ್ದರಿಂದ ಕಲ್ಪನಾ ತಪಸ್ಸಾಧ್ಯವಾದ ಮನೋರಂಭ ಭೂಮಿಯಲ್ಲಿಯೆ ಅದನ್ನು ಸೃಷ್ಟಿಸಿ ದೃಷ್ಟಿಸಬೇಕು” ಕುವೆಂಪುರವರ ಈ ಸ್ಪಷ್ಟನೆಯನ್ನು ಮೀರಿಯೂ ಯಶಸ್ವಿಯಾಗಬಲ್ಲ ಇದೊಂದು ಉತ್ತಮ ರಂಗಪಠ್ಯವಾಗಬಲ್ಲ ಸಾಮರ್ಥ್ಯ ಪಡೆದುಕೊಂಡಿದೆ.

ವಾಲ್ಮೀಕಿ ‘ಶಂಭೂಕನನ್ನು’ ಶೂದ್ರರಿಗೆ ಅಸಾಧ್ಯವಾದ ತಪಸ್ಸನ್ನು ಮಾಡಲೆತ್ನಿಸಿ ವರ್ಣಧರ್ಮ ಮೀರಿದನೆಂಬ ಆಪಾದನೆಗೆ ಗುರಿಯಾಗಿ ರಾಮನ ಖಡ್ಗದಿಂದ ಹತನಾದ ಎಂಬಂತೆ ಚಿತ್ರಿಸುತ್ತಾನೆ. ಮುಂದೆ ಭವಭೂತಿಯ ಉತ್ತರರಾಮಚರಿತೆಯಲ್ಲಿ ಶಂಭೂಕನನ್ನು ಕೊಲ್ಲುವ ಮುನ್ನ ರಾಮ ತನ್ನ ಬಲಗೈಯನ್ನು ಕುರಿತು “ತುಂಬು ಬಸಿರಿಯಾದ ಸೀತೆಯನ್ನು ಕಾಡಿಗೆ ಅಟ್ಟುವಲ್ಲಿ ಪಟುತ್ವವನ್ನು ತೋರಿದ ರಾಮನ ಅಂಗವಲ್ಲವೆ ನೀನು, ಶೂದ್ರ ಮುನಿಯ ಮೇಲೆ ಕೃಪಾಣು ಪ್ರಯೋಗಮಾಡು” ಎಂದು ಮನಸ್ಸಿಲ್ಲದೆ ಶಂಭೂಕನ ತಲೆ ಕತ್ತರಿಸುತ್ತಾನೆ. ಮುಂದುವರೆದು ಭವಭೂತಿ ಶಂಭೂಕನ ಮೃತ ಶರೀರದಿಂದ ಶಾಪ ವಿಮೋಚಿತ ಗಂಧರ್ವ ಮೈ ತಳೆಯುವಂತೆ ಮಾಡಿ ಕ್ರೌರ್ಯದ ಪರಿಣಾಮವನ್ನು ತಗ್ಗಿಸಲು ಪ್ರಯತ್ನಿಸುತ್ತಾನೆ. ಶೂದ್ರ ತಪಸ್ವಿಯಲ್ಲಿ ಕುವೆಂಪು ಈ ವರ್ಣಭ್ರಾಂತಿಯನ್ನು ಸರಿಸಿ ಶಂಭೂಕನಿಗೆ ಶೂದ್ರನಾಗಿಯೂ ಸಿದ್ಧಿಸಾಧಿಸಬಲ್ಲ ಅವಕಾಶ ಹಾಗೂ ತಪ್ಪಿತಸ್ತರಿಗೂ (ಅವನು ಯಾರೇ ಆಗಿರಲಿ) ಶಿಕ್ಷೆಯುಂಟು ಎಂಬ ಹೊಸ ಚಿಂತನೆಯನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಮುಂದೆ ಯಾರಾದರೂ ಮತ್ತೆ ಈ ವಸ್ತುವನ್ನು ಕೈಗೆತ್ತಿಕೊಂಡರೆ ಅದು ಮರಳಿ ಆ ಯುಗದ ಸಂವೇದನೆಗಳಿಗೆ ಪ್ರತಿಮೆಯಂತೆಯೇ ಚಿತ್ರಿತವಾಗುವುದಂತೂ ನಿಜ.

ಈ ನಾಟಕ ಪ್ರಕಟವಾದ ನಂತರ ಮಾಸ್ತಿಯವರನ್ನೂ ಒಳಗೊಂಡಂತೆ ಹಲವು ವರ್ಗಗಳಲ್ಲಿ ಅಸಮಾಧಾನ ಉಂಟಾದಾಗ ಮಾರ್ನುಡಿಯೊಂದನ್ನು ಎರಡನೆಯ ಮುದ್ರಣದಲ್ಲಿ ಕುವೆಂಪು ಪ್ರಕಟಿಸಿದ್ದಾರೆ. ಅದರಲ್ಲಿ ಹಳೆಯ ಕಥೆಯನ್ನು ಬಳಸಿಕೊಳ್ಳುವಲ್ಲಿ ಮಾರ್ಪಾಡು ಮಾಡಿಕೊಳ್ಳುವುದು ಪರಂಪರೆಯಿಂದಲೇ ಬಂದುದಾಗಿದೆ ಎಂದು ಮುಂದಿನಂತೆ ಬರೆಯುತ್ತಾರೆ. “ಅಲ್ಲದೆ ಹಳೆಯ ಕಥೆಯನ್ನು ಹೊಸ ಸಾಹಿತಿ ತನ್ನ ಕೃತಿಗೆ ತನ್ನಿಷ್ಟ ಬಂದಂತೆ ಬಳಸಿಕೊಳ್ಳುವ ಪದ್ಧತಿಯು ಮಹಾಕವಿ ಸಿದ್ಧವಾದುದು. ನಾನು ತಪ್ಪಿದ್ದರೂ ಕಾಳಿದಾಸ, ಭಾಸ, ಪಂಪ, ಕುಮಾರವ್ಯಾಸಾದಿಗಳೊಡನೆ ತಪ್ಪಿದ್ದೇನೆ. ಮಹಿಮರೊಡನೆ ತಪ್ಪಿದ್ದರೆ ಆ ತಪ್ಪ ನನಗೊಪ್ಪು. ‘ಸತ್ಸಂಗಜಾನಿ ವಿಧನನ್ಯಾಪಿ ತಾರಯಂತಿ’ ಎಂದಿಲ್ಲವೆ ಭವಭೂತಿ”.

ವ್ಯಾಸ ಮಹಾಭಾರತದ ಆದಿಪರ್ವದ ೧೩೩ನೇ ಅಧ್ಯಾಯದಲ್ಲಿ ಬರುವ ಏಕಲವ್ಯನ ಕಥೆ ಶಂಭೂಕ ಪರಂಪರೆಯ ಮತ್ತೊಂದು ಕಥನವಾಗುತ್ತದೆ. ದ್ರೋಣನ ಕೀರ್ತಿಯನ್ನು ಕೇಳಿದ ವ್ಯಾಧರಾಜನಾದ ಹಿರಣ್ಯಧನುವಿನ ಮಗ ಏಕಲವ್ಯ ಹೆಚ್ಚಿನ ಬಿಲ್ವಿದ್ಯೆಯ ಆಸೆಯಿಂದ ದ್ರೋಣನ ಬಳಿ ಬರುತ್ತಾನೆ. ನಿಷಾದ ಕುಲದವನೆಂದೂ, ಮಿಕ್ಕಶಿಷ್ಯರಿಗೆ ಗಮನ ಕೊಡಬೇಕೆಂಬ ಉದ್ದೇಶದಿಂದಲೂ ದ್ರೋಣ ಏಕಲವ್ಯನ ಶಿಷ್ಯತ್ವ ನಿರಾಕರಿಸುತ್ತಾನೆ. ನಿರಾಶನಾಗದ ಏಕಲವ್ಯ ಕಾಡಿಗೆ ಹಿಂತಿರುಗಿ ದ್ರೋಣನ ಪ್ರತಿಮೆಯ ಮುಂದೆ ನಿಂತು ಗುರುಮುಖೇನ ಕಲಿಯಬೇಕಾದುದೆಲ್ಲವನ್ನೂ ಶ್ರದ್ಧೆಯಿಂದಲೇ ಕಲಿತು ವೀರನಾಗುತ್ತಾನೆ. ಒಮ್ಮೆ ಪಾಂಡವರು, ಕೌರವರೂ ದ್ರೋಣನೊಂದಿಗೆ ಬೇಟೆಯ ನಾಯಿಯ ಸಮೇತ ಕಾಡಿಗೆ ಬರುತ್ತಾರೆ. ಬೊಗಳುವ ನಾಯಿಯ ಬಾಯನ್ನು ತನ್ನ ಬಾಣಗಳಿಂದಲೇ ಮುಚ್ಚಿಸಿದ ಏಕಲವ್ಯ ತಾನು ದ್ರೋಣನ ಶಿಷ್ಯನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅರ್ಜುನನ ಅಸೂಯೆ ಮತ್ತು ಅರ್ಜುನನಿಗೆ ಕೊಟ್ಟ ಮಾತು ಏಕಲವ್ಯನಿಂದ ಹೆಬ್ಬೆರಳನ್ನು ಗುರುದಕ್ಷಿಣೆಯನ್ನಾಗಿ ತೆಗೆದುಕೊಳ್ಳುವಂತೆ ಮಾಡುತ್ತದೆ. ದ್ರೋಣನ ಮಾತು ಉಳಿದು ಅರ್ಜುನನಿಗೆ ಸಂತೋಷವಾದರೂ ಏಕಲವ್ಯನಿಗೆ ಮೊದಲಿನಂತೆ ಬಾಣ ಪ್ರಯೋಗ ಮಾಡಲು ಸಾಧ್ಯವಾಗುವುದಿಲ್ಲ. ಇದು ವ್ಯಾಸ ಭಾರತದಲ್ಲಿ ಸಿಗುವ ಏಕಲವ್ಯನ ಕಥೆಯಾಗಿದೆ. ಪ್ರಾಸಂಗೀಕವಾಗಿ ಬಂದು ಹೋಗುವ ಏಕಲವ್ಯನ ಕಥೆ ಮಹಾಭಾರತದಲ್ಲಿ ಅಂತಹ ಪ್ರಮುಖ ಸ್ಥಾನವನ್ನೇನು ಪಡೆಯುವುದಿಲ್ಲ. ಗುರುಭಕ್ತಿಯ ಸಂಕೇತವಾಗಿ, ಗುರುವೆಂಬ ಹೆಸರಿನಿಂದಲೇ ವಿದ್ಯೆಯನ್ನು ಸಾಧಿಸಿದ ಭಕ್ತಿಯ ಸಂಕೇತವಾಗಿ ಏಕಲವ್ಯ ನಿಲ್ಲುತ್ತಾನೆ. ಆದರೆ, ಕೇವಲ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಕಲಿಯಲು ಬಂದ ಏಕಲವ್ಯನಿಗೆ ವಿದ್ಯಾದಾನ ಮಾಡದೆ ಅವನಿಂದ ಗುರುದಕ್ಷಿಣೆ ನಿರೀಕ್ಷಿಸುವ ದುರ್ಬಲ ವ್ಯಕ್ತಿತ್ವದ ಗುರುವಾಗಿ ದ್ರೋಣ ನಿಲ್ಲುತ್ತಾನೆ. ಆಳುವ ವರ್ಗದ ಅಸ್ತ್ರವಾದ ದ್ರೋಣ ಏಕಲವ್ಯನನ್ನು ಬೇಟೆಯಾಡುವ ಬೇಟೆಗಾರನಂತೆ, ಏಕಲವ್ಯ ಬಲಿಪಶುವೆಂಬಂತೆ ಚಿತ್ರಿತರಾಗುತ್ತಾರೆ.

ಕುವೆಂಪು ಬಳಸಿಕೊಂಡ ಈ ಹೆಬ್ಬೆರೆಳಿನ ಪ್ರಸಂಗ ಶಂಭೂಕನ ನಂತರ ಪುರೋಹಿತಶಾಹಿ ವರ್ಗ ಬೇಟೆಯಾಡಿದ ಮತ್ತೊಂದು ಬೇಟೆ ಎಂಬಂತೆ ಕುವೆಂಪು ಚಿತ್ರಿಸುತ್ತಾರೆ. ‘ಬೆರಳ್ಗೆ ಕೊರಳ್’ ಎಂಬ ಈ ನಾಟಕ ರಂಗಪಠ್ಯವಾಗಿಯೂ ತನ್ನ ನಾಟಕೀಯ ಗುಣಗಳಿಂದಲೂ ಸಶಕ್ತವಾದ ನಾಟಕವಾಗಿದೆ. ಮೂರು ದೃಶ್ಯಗಳ ಈ ನಾಟಕದಲ್ಲಿ ಗುರು, ಕರ್ಮ ಮತ್ತು ಯಜ್ಞತತ್ವಗಳು ಸಮರ್ಪಣ ಭಾವದಿಂದ ವ್ಯಕ್ತವಾಗಿವೆ. ನಾಟಕವನ್ನು ಹೇಗೆ ಗ್ರಹಿಸಬೇಕೆಂಬ ಪ್ರವೇಶ ಬೆರಳ್ಗೆ ಕೊರಳ್‌ ನಾಟಕದ ಟಿಪ್ಪಣಿಯಿಂದಲೇ ದೊರೆಯುತ್ತದೆ. ಇದುವರೆಗೆ ನಡೆದ ಚರ್ಚೆಯನ್ನು ಗಮನಿಸಿದರೆ ಈ ಮೂರು ಅಂಶಗಳೇ ಮೈಲಿಗಲ್ಲುಗಳೆಂಬಂತೆ ತೋರುತ್ತವೆ.

ನಾಲ್ಕು ಪಾತ್ರಗಳು ಹಾಗೂ ಮೂರು ದೃಶ್ಯಗಳ ಈ ನಾಟಕವನ್ನು ಕುವೆಂಪುರವರ ತಮ್ಮ ಗುರುಗಳಾದ ಶ್ರೀಯವರಿಗೆ ಅರ್ಪಿಸಿದ್ದಾರೆ. ಅರಿಕೆಯ ಮಾತು ಬೆರಳ್ಗೆ ಕೊರಳ್‌ ನಾಟಕಕ್ಕೆ ಗುರುಶಿಷ್ಯರ ಸಂಬಂಧದ ಬಗ್ಗೆ ಒಂದು ಸುಂದರ ಕ್ಯಾನ್‌ವ್ಯಾಸ್‌ ರಚಿಸುತ್ತದೆ. ಕುವೆಂಪು ಚಿತ್ರಿಸುವ ದ್ರೋಣಚಾರ್ಯನೂ ಸಹ ಶಿಷ್ಯ ವಾತ್ಸಲ್ಯವುಳ್ಳ ಇದೇ ಕ್ಯಾನವಾಸ್‌ ಒಳಗೆ ಬರುತ್ತಾನೆ. ಶಂಭೂಕನನ್ನು ಶಿಕ್ಷಿಸಲೆಂದು ಬಂದ ರಾಮ ನಿಜವಾದ ತಪ್ಪಿತಸ್ತನನ್ನು ಶಿಕ್ಷಿಸಿದಂತೆ ಇಲ್ಲಿನ ಗುರುವೂ ಏಕಲವ್ಯನನ್ನು ಒಲ್ಲದ ಮನಸ್ಸಿನಿಂದಲೇ ಗುರುದಕ್ಷಿಣೆ ಕೇಳುತ್ತಾನೆ. ಗುರುವಿನ ಸಂದಿಗ್ಧತೆ ಏಕಲವ್ಯನ ಪ್ರಶ್ನಾತೀತವಾದ ಗುರುಭಕ್ತಿ ನಾಟಕವನ್ನು ಮೇರುಸ್ಥಿತಿಗೆ ಕೊಂಡೊಯ್ಯುತ್ತದೆ.

೩೦ ಶ್ಲೋಕಗಳಲ್ಲಿ ವ್ಯಾಸರು ನಿರೂಪಿಸಿದ ಈ ಕಥೆಯನ್ನು ಕುವೆಂಪು ಸ್ವಾತಂತ್ರ ನಾಟಕ ಕೃತಿಯನ್ನಾಗಿ ರಚಿಸಿದ್ದಾರೆ. ಪ್ರತಿಭೆ ಮತ್ತು ಕುಲ ಹುಟ್ಟಿನಿಂದಲೇ ಮಾನವನಿಗೆ ಬರುವಂತದ್ದು. ಕುಲವಿಲ್ಲದಿದದಾಗ ಪ್ರತಿಭೆಯೂ ಕತ್ತಲೆಗೆ ಸೇರಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಪ್ರಶ್ನಿಸುವ ಪ್ರತಿಭಟನಾಕಾರನಂತೆ ಏಕಲವ್ಯ ಚಿತ್ರಿತವಾಗದಿದ್ದರೂ ಕಲಿಯುವ ಅದಮ್ಯ ಆಸೆಯನ್ನು ಎದೆಯಲ್ಲಿ ಹೊತ್ತಿದ್ದಾನೆ. ಏಕಾಗ್ರತೆ ಮತ್ತು ಏಕಾಂತದಲ್ಲಿ ಅದನ್ನು ಸಧಿಸಿದ್ದಾನೆ. ಮೊದಲನೆಯ ದೃಶ್ಯದಲ್ಲಿ ಗುರುವಿನ ನಿರೀಕ್ಷೆಯಲ್ಲಿರುವ ಏಕಲವ್ಯನ ವರ್ಣನೆಯಲ್ಲಿಯೇ ಲೇಖಕರು ಪ್ರಕೃತಿಯೊಂದಿಗೆ ಬೆರೆದುಹೋದ ಚಿತ್ರ ಚಿತ್ರಿಸಿದಂತೆಯೇ ದ್ರೋಣನ ಪ್ರತಿಮೆಯೂ ಏಕಲವ್ಯನ ವ್ಯಕ್ತಿತ್ವದ ಒಂದಂಗ ಎಂಬಂತೆ ಚಿತ್ರಿತವಾಗಿದೆ.

ಗುರುವಿನ ನಿರೀಕ್ಷೆಯಲ್ಲಿ ಮೈಮರೆತ ಏಕಲವ್ಯನಿಗೆ ಹಣ್ಣು ಆಹಾರ ತೆಗೆದುಕೊಂಡು ಅಜ್ಜಿ ಬರುತ್ತಾಳೆ. ಅಜ್ಜಿಯೊಂದಿಗೆ ತನ್ನ ಅಂತರಂಗ ಬಿಚ್ಚಿಕೊಳ್ಳುವ ಏಕಲವ್ಯ ದ್ರೋಣನ ಭೇಟಿ, ತಾನು ವಿದ್ಯೆ ಕಲಿತ ರೀತಿ, ಗುರುಕರುಣೆ, ಅರಸು ಮಕ್ಕಳ ಮತ್ಸರ, ಕೊನೆಗೆ ದ್ರೋಣನ ಮನೆಯಲ್ಲಿ ಆಳಾಗಿ ವಿದ್ಯೆ ಕಲಿತ ಬಗೆ ಎಲ್ಲವನ್ನೂ ವಿವರಿಸುತ್ತಾನೆ. ಅರಸು ಮಕ್ಕಳ ಮತ್ಸರಕ್ಕೆ ದ್ರೋಣ ಹೇಳುವ ಬುದ್ಧಿವಾದ ಈ ಮುಂದಿನಂತಿದೆ.

“ಶೂದ್ರನಾದೊಡಮೇನ್‌?
ಸಮರ್ಥನ್‌, ವಿನಯಶಾಲಿ, ಕಲ್ತ ಮೇಲಿಂ ಬಳಿಂ
ನಿಮಗೆ ಸಲ್ವನ್‌, ನಿಮ್ಮ ಸೇವೆಯೊಳೆ ನಿಲ್ವನ್‌.
ಬಲ್ಲಿದನ್‌ ಕೈಂಕರ್ಯವೆಸಗೆ ಬಲ್ಲಿದರ್‌ ನೀಮಲ್ತೆ?”

ರಾಜಕುಮಾರರು ಏಕಲವ್ಯನನ್ನು ಹೊರಗಟ್ಟಿದಾಗ ಗುರುಕರುಣೆ ಅವನ ಕೈ ಬಿಡುವುದಿಲ್ಲ. ಬಚ್ಚ ಎಂದಿದ್ದ ಹೆಸರನ್ನು ಏಕಲವ್ಯನೆಂದು ಬದಲಾಯಿಸಿದ್ದ ಗುರು ತನ್ನ ಮನೆಯಲ್ಲೇ ಆಳಾಗಿ ಇದ್ದ ಅವನಿಗೆ ವಿದ್ಯೆ ಕಲಿಯುವಂತೆ ಸೂಚಿಸುತ್ತಾನೆ. “ಈ ಗುರುಶಿಷ್ಯರಿಬ್ಬರ ಸಂಬಂಧ ಪರಸ್ಪರ ಪೂರಕವಾದದ್ದು. ಗುರು ವಿದ್ಯಾಶಕ್ತಿ ಹರಿಯುವ ಪಾತ್ರ; ಶಿಷ್ಯ ವಿದ್ಯಾಶಕ್ತಿಯನ್ನು ಸ್ವೀಕರಿಸುವ ಅವಿದ್ಯೆಯ ಪಾತ್ರ, ನರರೂಪ ವ್ಯಕ್ತಿಯನ್ನು ಗುರುವನ್ನಾಗಿ ಸ್ವೀಕರಿಸಿದ ಮೇಲೆ ಶಿಷ್ಯನು ಸದಾ ಅವನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಬೇಕು”. ದ್ರೋಣ ಕಲಿಯುವ ಆಸೆಯ ಏಕಲವ್ಯನಿಗೆ ಈ ಮುಂದಿನಂತೆ ಹೇಳುತ್ತಾನೆ.

“ಏಕಲವ್ಯ ಅಳಲದಿರ್‌
ಆಸೆಗೆಡದಿರ್‌. ನೀನೆಮ್ಮ ಮನೆಯೊಳಾಳಾಗಿರು
ಈ ಗರುಡಿಗೆನ್ನ ಸೇವೆಗೈತರುತೆ
ದೂರದಿಂದ ಕಂಡು ಕಲಿ, ಕಲ್ಪುನಿತಂ
ಮತ್ತುಳಿದುದಂ ಮನೆಯೊಳಿಯೆ ಕಲಿಯುವನಿತಂ
ಕಲಿಪೆನಶ್ವತ್ಥಾಮನೊಡನೆ”

ಇಲ್ಲಿ ಕುವೆಂಪು ತನ್ನ ಕರುಣಗೆಗೆ ಪಾತ್ರನಾದ ಶಿಷ್ಯನಿಗೆ ಕಲಿಸುವ ಗುರುವಾದ ದ್ರೋಣನನ್ನು ಉದಾತ್ತನಾಗಿ ಚಿತ್ರಿಸಿದ್ದ ಈ ಭಾಗವನ್ನು ಗುರುತತ್ವವೆಂಬಂತೆ ಚಿತ್ರಿಸಲಾಗಿದೆ.

ಮುಖ್ಯವಾಗಿ ಈ ನಾಟಕದಲ್ಲಿ ಅಧಿಕಾರ ಕೇಂದ್ರಗಳು ಹಾಗೂ ಕೆಳವರ್ಗದ ಬುಡಕಟ್ಟುಗಳು ಪರಸ್ಪರ ಎದುರಾಗುವಂತೆ ಅರ್ಜುನ ಮತ್ತು ಏಕಲವ್ಯನನ್ನು ಚಿತ್ರಿಸಲಾಗಿದೆ. ಏಕಲವ್ಯನ ಹಂದಿ ಬೇಟೆಯ ಸಂದರ್ಭದಲ್ಲಿ ಎದುರಾಗುವ ಅರ್ಜುನನ ನಡೆನುಡಿ, ಆತ್ಮಪ್ರಶಂಸೆ ಮದದಿಂದ ಮರೆತ ವ್ಯಕ್ತಿತ್ವ ಚಿತ್ರಿಸುತ್ತದೆ.

ಎರಡನೆಯ ದೃಶ್ಯದಲ್ಲಿ ಗುರುವಾಗಿ ವಿದ್ಯೆಯನ್ನು ಕಲಿಸಿದ ದ್ರೋಣಾಚಾರ್ಯ ಅನಿವಾರ್ಯವೆಂಬಂತೆ ಗುರುದಕ್ಷಿಣೆ ಯಾಚಿಸಲು ಏಕಲವ್ಯನ ಬಳಿಗೆ ಬರುತ್ತಾನೆ. ಈ ದೃಶ್ಯವನ್ನು ಕರ್ಮತತ್ವವೆಂಬಂತೆ ಹೆಸರಿಸಲಾಗಿದೆ. “ಕರ್ಮ, ವಿಧಿ, ಈಶ್ವರೇಚ್ಚೆ ಈ ಮೂರು ಅಭಿನ್ನ: ಒಂದೇ ತತ್ವದ ಮೂರು ಮುಖಗಳಾಗಿವೆ. ಕರ್ಮಫಲ ಸ್ವರೂಪಿಯಾದ ಈಶ್ವರೇಚ್ಛೆಯ ಮುಂದೆ ಮನಷ್ಯೇಚ್ಛೆ ಪ್ರತಿಭಟಿಸಿ ಗೆಲ್ಲಲಾರದು. ಗೆದ್ದರೂ ಅದರ ಅನುಮತಿಯಿಂದಲ್ಲದೆ ಅನ್ಯರೀತಿಯಿಂದಲ್ಲ” (ಟಿಪ್ಪಣಿಕೆ)

“ಜೀವಿಗಳ ಕರ್ಮ ಜಟಿಲತೆ, ಏಕಲವ್ಯ, ಈ
ಕುಟಿಲ ಕಾರ್ಯಂಗಳಿಗೆ ನಮ್ಮನ್‌ ನಿಯೋಜಿಪುದು
ದೇವನಿಚ್ಛೆಯ ದಿವ್ಯಲೀಲಾ ಪ್ರಯೋಜನಕೆ”

ದ್ರೋಣನನ್ನು ಏಕಲವ್ಯನಲ್ಲಿ ಗುರುದಕ್ಷಿಣೆ ಕೇಳಲೇಬೇಕಾದ ಅರ್ಜುನನ ಒತ್ತಡ ಹಣ್ಣಾಗಿಸಿದೆ. ಏಕಲವ್ಯನ ಹೃದಯ ಶ್ರೀಮಂತಿಕೆಯ ಮಾತು ಈ ಮುಂದಿನಂತಿದೆ.

“ಪಡೆವುದೆಲ್ಲಂ ಕೊಡುವುದಕ್ಕತ್ತಿ, ಆರ್ಯ? ಮೇಣ್‌
ಪೂರ್ಣಮಂ ಕೊಡದೆ ಪಡೆದಪೆವೆಂತು ಪೂರ್ಣಮಂ?”

ಈ ನಾಟಕದುದ್ದಕ್ಕೂ ಮೂಲದಲ್ಲಿ ಸಾಧ್ಯವಾಗದ ಗುರು-ಶಿಷ್ಯ ಸಂಬಂಧದ ಮಧುರತೆಯನ್ನು ಚಿತ್ರಿಸಲಾಗಿದೆ. ವರ್ಣತಾರತಮ್ಯ ದೂರವಾದ ಈ ಸಂಬಂಧ ಕುವೆಂಪು ಕಟ್ಟಲೆಳೆಸುವ ಮಧುರ ಸಮಾಜವಾಗಿದೆ. ಗುರುದಕ್ಷಿಣೆ ಪಡೆಯುವಲ್ಲಿ ದ್ರೋಣ ಎದುರಿಸುವ ತಳಮಳ ಯಾತನೆಗಳೇ ಈ ನಾಟಕದ ಕೇಂದ್ರವಾಗಿದೆ. ಶಂಭೂಕನ ಆಧ್ಯಾತ್ಮಿಕತೆಗೆ ಸೋತ ರಾಮ ಉದಾತ್ತನಾದಂತೆ ಶಿಷ್ಯನ ಭಕ್ತಿಗೆ, ಪ್ರತಿಭೆಗೆ ಸೋತ ದ್ರೋಣ ತನ್ನ ತಳಮಳ ಯಾತನೆಗಳಿಂದಲೇ ಇಲ್ಲಿ ಗೆಲ್ಲುತ್ತಾನೆ. ಈ ಸಂಘರ್ಷವೇ ಪರ್ಯಾಯ ಸಂಸ್ಕೃತಿ ಕಟ್ಟುವಲ್ಲಿ ಮುಖ್ಯ ಸಂಗತಿಯಾಗುತ್ತದೆ. ಅಲ್ಪದಿಂದ ಭೂಮವನ್ನು ಸಾಧಿಸಿದ ಏಕಲವ್ಯನನ್ನು ಸವ್ಯಸಾಚಿಯ ಕರುಬನ್ನು ಅಂತ ದ್ರೋಣನ ಒಲವು ಏಕಲವ್ಯನಡೆಗೆ ಯಜ್ಞ ತತ್ವವಾದ ಮೂರನೆಯ ದೃಶ್ಯದಲ್ಲಿ ಏಕಲವ್ಯ ಗುರುವಿನಿಂದ ಪಡೆದ ವಿದ್ಯೆಯನ್ನೇ ಗುರುವಿಗೆ ಸಲ್ಲಿಸುವಂತೆ ಹೆಬ್ಬೆರಳನ್ನು ಬಲಿಕೊಡುತ್ತಾನೆ. ಈ ಯಜ್ಞ ತತ್ವದಲ್ಲಿ ಯಜ್ಞ ಹೋತುವೆಂಬಂತೆ ಏಕಲವ್ಯ ಅಪಿðತವಾಗುತ್ತಾನೆ. ಇದು ದೈವೇಚ್ಛೆ, ಭಗವದರ್ಪಿತವಾದ ಕರ್ಮಫಲವೆಂಬಂತೆ ಚಿತ್ರಣಗೊಳ್ಳುತ್ತದೆ.

ಶೂದ್ರತಪಸ್ವಿಯಲ್ಲಿ ಕವಿ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಇಲ್ಲಿ ತೆಗೆದುಕೊಳ್ಳುವುದಿಲ್ಲ. ಶಂಭೂಕನ ಬದಲಾಗಿ ಬ್ರಾಹ್ಮಣನನ್ನು ಶಿಕ್ಷಾರ್ಹನೆಂದು ಪರಿಗಣಿಸಿದಂತೆ ದ್ರೋಣನನ್ನು ಕಾಣಲು ಸಾಧ್ಯವಾಗುವುದಿಲ್ಲ. ಗುರುಪರಂಪರೆಯ ಹಿನ್ನೆಲೆಯಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡ ಕುವೆಂಪು ಅವರಿಗೆ ದ್ರೋಣನನ್ನು ಎದುರಾಗಲು ಸಾಧ್ಯವಾಗಿಲ್ಲ. ಹೀಗಾಗಿ ಏಕಕಾಲಕ್ಕೆ ಗುರುವನ್ನು ಶಿಷ್ಯನನ್ನು ಸಮತೂಕದಲ್ಲಿ ನೋಡುವ ಪ್ರಯತ್ನ ಮಾಡುತ್ತಾರೆ.

ಅದ್ಭುತವಾದ ನಾಟಕ ಕ್ರಿಯೆಗಳನ್ನು ಏರಿಳಿತಗಳನ್ನು ಒಳಗೊಂಡ ಈ ನಾಟಕ ಗಮನ ಸೆಳೆಯುವುದೇ ಕರ್ಮ ಮತ್ತು ಕರ್ಮದಿಂದ ಪಡೆಯುವ ಫಲದ ನಡುವೆ ಸಿಕ್ಕಿ ಹಾಕಿಕೊಂಡ ದ್ರೋಣನ ತಲ್ಲಣಗಳಿಂದಾಗಿ ಒಂದೆಡೆ ಅರಸು ಮಕ್ಕಳ ಕ್ರೌರ್ಯ ಮತ್ತೊಂದೆಡೆ ವಿಧಿಯ ಲೀಲೆ. ಮಧ್ಯದಲ್ಲಿ ಕುಲದ ಕಾರಣಕ್ಕಾಗಿಯೇ ಬೇಟೆಯಾಗಲಿರುವ ಏಕಲವ್ಯನ ಪಾತ್ರ ಚಿತ್ರಣಗಳು ನಾಟಕದ ಶ್ರೀಮಂತಿಕೆ ಹೆಚ್ಚಿಸಿದೆ. ಹಲವು ವಿಮರ್ಶಕರು ಗುರುತಿಸಿದಂತೆ ಇದು ನಗರ ಸಂಸ್ಕೃತಿ ಮತ್ತು ದೇಶಿ ಸಂಸ್ಕೃತಿಯ ನಡುವಿನ ಸಂಘರ್ಷವಾದರೂ ಕುವೆಂಪುರವರ ಗಮನವಿರುವುದು ಎರಡರ ಮಧ್ಯೆ ಬಾಂಧವ್ಯ ಏರ್ಪಡಿಸುವಲ್ಲಿ. ಈ ಬಾಂಧವ್ಯ ಏರ್ಪಡಿಸಬಲ್ಲ ಏಕೈಕ ವ್ಯಕ್ತಿ ವಿಧಿಯ ರೀತಿಗೆ ಒಳಗಾಗಿದದಾನೆ ಎಂಬುದೇ ಇಲ್ಲಿನ ದುರಂತವಾಗಿದೆ.

ದುರಂತ ನಾಟಕದ ಹಲವು ವಿನ್ಯಾಸವನ್ನು ಈ ಕೃತಿ ಒಳಗೊಂಡಿದ್ದರೂ ದುರಂತ ನಾಯಕನ ಗುರುಭಕ್ತಿಗೆ, ವಿಧಿಗೆ ಶರಣಾಗಿ ಬಲಿಯಾಗುವಿಕೆಗೆ, ಸೋತರೂ ಗೆದ್ದು ನಿಲ್ಲುವ ವ್ಯಕ್ತಿತ್ವಕ್ಕೆ ಸಾಕ್ಷಿಯೆಂಬಂತೆ ನಿಲ್ಲುತ್ತದೆ. ಮೂಲದಲ್ಲಿ ಇಲ್ಲದ ಏಕಲವ್ಯನ ತಾಯಿಯ ಪಾತ್ರ ಕುವೆಂಪುರವರ ಸೃಷ್ಟಿಯಾಗಿದ್ದು, ತನ್ನ ಭಾವನೆಗಳನ್ನು ಹಂಚಿಕೊಳ್ಳುವ, ಏಕಾಂತಕ್ಕೆ ಜೊತೆಯಾಗುವ ತಾಯಿಕರುಳಾಗಿ ನಿಲ್ಲುತ್ತಾಳೆ. ದ್ರೋಣನು ಏಕಲವ್ಯನ ಕೈಯಿಂದ ಸುರಿದ ರಕ್ತದಲ್ಲಿ ತನ್ನ ಕೊರಳನ್ನು ಕತ್ತರಿಸುವ ಕೈ ಕಾಣುತ್ತದೆ. ಇದೇ ರಕ್ತವನ್ನು ಕಂಡ ಏಕಲವ್ಯನ ಅಬ್ಬೆ ಬಲಿಯಕ್ಕೆ ಆ ಪಾಪಿಯ ಕೊರಳ್‌’ ಎಂದು ಶಪಿಸುತ್ತಾಳೆ. ದೈವ ಲೀಲೆಯನ್ನು ಬಲ್ಲ ದ್ರೋಣ ಅದನ್ನು ಈ ಮುಂದಿನಂತೆ ಗುರ್ತಿಸುತ್ತಾನೆ.

………………..
ಅಂತೆ ಕರ್ಮದ ಪಾಂಗು: ಮರಿಗೆ ಮರಿ : ಮರಿಗೆ ಮರಿ
ಬೆರಳ್‌ಗೆ ಕೊರಳು!

‘ಬೆರಳ್‌ಗೆ ಕೊರಳು’ ಪುರಾಣದ ಕತೆಯೊಂದನ್ನು ‘ದ್ರೋಣ, ಏಕಲವ್ಯ’ರ ಗುರುಶಿಷ್ಯ ಸಂಬಂಧ, ಸಂಘರ್ಷಗಳ ಮೂಲಕವೇ ಎದುರಾಗುವ ಒಂದು ಸಾಂಕೇತಿಕ ನಾಟಕ. ದ್ರೋಣ, ಅರ್ಜುನರನ್ನು ತನ್ನ ಕಾಡಿನ ಸಂಸ್ಕೃತಿಯ ಮೂಲಕವೇ ಎದುರಾಗಬಲ್ಲ ಏಕಲವ್ಯನಿಗೆ ಯಾವುದೇ ಕಲ್ಪಿತ ಸಿದ್ಧಾಂತಗಳಿಲ್ಲ. ಅವನಲ್ಲಿರುವುದು ಕಲಿಯುವ ಆಸೆ ಮಾತ್ರ. ಈ ನಾಟಕದಲ್ಲಿ ಕಲಿಯುವ ಆಸೆ ಹೊತ್ತ ಏಕಲವ್ಯರು ಮೂಡುತ್ತಿರುವಂತೆಯೇ ಆ ಬಯಕೆಗಳನ್ನು ಮುಳುಗಿಸುವ, ದಮನಗೊಳಿಸುವ ಅಧಿಕಾರ ವ್ಯವಸ್ಥೆ ಚಲನಶೀಲವಾಗುತ್ತದೆ. ಇಲ್ಲಿ ದಮನಗೊಳಿಸುವ ಕೆಲಸ ಮಾಡುವವರು ದ್ರೋಣನಂತಹ ವೇದವಿದ್ಯಾಶಾಸ್ತ್ರ ಪಾರಂಗತರು. ಅವರು ಒಳಗಾಗಿರುವುದು ಅನ್ನ ನೀಡುವ ಅಧಿಕಾರದ ಋಣಕ್ಕೆ. ಹೀಗೆ ಪರಸ್ಪರ ಋಣ ಸಂದಾಯಗಳಲ್ಲಿ ಏಕಲವ್ಯನಂತಹವರು ಸದ್ದಿಲ್ಲದೆ ಇಲ್ಲವಾಗುತ್ತಾರೆ. ‘ಗುರುಭಕ್ತಿ, ಗುರುದಕ್ಷಿಣೆ’ ಅವರನ್ನು ಕೊಲ್ಲುವ ನೇಣು ಕುಣಿಕೆಯಾಗುತ್ತದೆ.

ಕುವೆಂಪುರವರು ಈ ವ್ಯವಸ್ಥೆಯ ನಾಡಿಮಿಡಿತ ಬಲ್ಲವರಾದ್ದರಿಂದ ಜಲಗಾರ, ಶಂಭೂಕ, ಏಕಲವ್ಯನಂತವರನ್ನು ತಮ್ಮ ಕೃತಿಯ ನಾಯಕರನ್ನಾಗಿಸಿ ವೇದಶಾಸ್ತ್ರ ಬಂಧನಗಳಿಂದ ಹೊರಬರುವ ಹೊಸಲೋಕವೊಂದನ್ನು ಸೃಷ್ಟಿಸುತ್ತಾರೆ. ಈ ರೀತಿಯ ಪಾತ್ರ ಚಿತ್ರಣಗಳಿಂದ ಹಾಗೂ ಗತದಲ್ಲಿ ನಡೆದ ಅನ್ಯಾಯಗಳಿಗೆ ವಾಸ್ತವ ಕಾಲದಲ್ಲಿ ಸೂಕ್ತ ರೀತಿಯ ಹೊಸ ಕಾಲದ ನ್ಯಾಯವನ್ನು ಒದಗಿಸುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ಈ ಆಶಯಗಳು ಸಹಜವಾಗಿಯೇ ಪರ್ಯಾಯ ವ್ಯವಸ್ಥೆಯಾಗಿ ಕುವೆಂಪು ಚಿತ್ರಿಸಿದ ನಾಯಕರುಗಳಲ್ಲಿ ಅಡಗಿವೆಯೆಂದೇ ಹೇಳಬಹುದಾಗಿದೆ.

* * *