ಕುವೆಂಪುರವರು ಸೇರಿದ ಹಾಗೆ ನವೋದಯದ ಅನೇಕರನ್ನು ‘ವಿಶೇಷ’ ಅಥವಾ ‘ವರ್ಗೀಕೃತ’ ಓದಿಗೆ ಒಳಪಡಿಸುವಾಗ ಹಲವು ಸವಾಲುಗಳು ಎದುರಾಗುತ್ತವೆ. ಇದಕ್ಕೆ ಅನೇಕ ಕಾರಣಗಳಿವೆ. ಉದಾರವಾದಿ ಮಾನವತಾವಾದದಲ್ಲಿ ನಂಬಿಕೆ ಇಟ್ಟವರು ಈ ತಲೆಮಾರಿನ ಲೇಖಕರು. ನಮ್ಮ ಕಾಲದ ಮೂಲ ಆಧ್ಯತೆಗಳಲ್ಲೊಂದು ಸಾಮಾಜಿಕ ನ್ಯಾ. ಈ ಸಾಮಾಜಿಕ ನ್ಯಾಯದ ವಿವರಣೆಗಳನ್ನು ಉದಾರವಾದಿ ಮಾನವತಾವಾದದ ಹಿನ್ನೆಲೆಯಲ್ಲಿಟ್ಟು ಚರ್ಚಿಸುವಾಗ ಸಿಗುವ ಉತ್ತರಗಳು ಎಷ್ಟು ಅಧಿಕೃತ ಮತ್ತು ಸಾಮಾಜಿಕ ನ್ಯಾಯದ ತಾತ್ವಿಕ ಹಿನ್ನೆಲೆ ಅವುಗಳಿಗೆ ಇರುವುದು ಸಾಧ್ಯವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಯಾಕೆಂದರೆ ಉದಾರವಾದಿ ಮಾನವತಾವಾದವು ಸಾಮಾಜಿಕ ನ್ಯಾಯದ ರಾಜಕೀಯ ನೆಲೆಯನ್ನು ಮುಖಾಮುಖಿಯಾಗುವುದೆ ಇಲ್ಲ. ಬದುಕಿನ ಬಗೆಗಿನ ಅದಮ್ಯ ನಂಬಿಕೆ, ಕನಸುಗಳ ಬಗೆಗೆ, ನಾಳೆಯ ನಂದನವನದ ಬಗೆಗೆ ಅವರಿಗಿದ್ದ ಭರವಸೆ, ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಚೈತನ್ಯದ ಬಗ್ಗೆ ಅವರಲ್ಲಿದ್ದ ಅಸಾಧಾರಣವಾದ ಶ್ರದ್ಧೆ… ಈ ಎಲ್ಲವು ಸೇರಿ ರೂಪುಗೊಂಡ ಅವರ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡೆ ಈ ಲೇಖಕರ ವಿಶೇಷ ಓದನ್ನು ನಡೆಸಬೇಕು. ಇದು ಆ ಲೇಖಕರಿಗೆ ಕೊಡುತ್ತಿರುವ ರಕ್ಷಣಾತ್ಮಕ ಆಯಾಮವಲ್ಲ. ಬದಲಿಗೆ ಈ ಅಂಶವನ್ನು ಬಿಟ್ಟುಕೊಟ್ಟರೆ ಆ ಲೇಖಕರ ಬರವಣಿಗೆಯ ಚರ್ಚೆ ಅಪೂರ್ಣವಾಗುತ್ತದೆ ಎನ್ನುವ ಕಾರಣಕ್ಕೆ. ಕುವೆಂಪು ಅವರ ವಿಷಯದಲ್ಲಂತು ಇದು ಇನ್ನೂ ಹೆಚ್ಚು ಸಂಕೀರ್ಣವಾದದ್ದು. ಆಧುನಿಕ ಕರ್ನಾಟಕದ ಮಟ್ಟಿಗೆ ಕುವೆಂಪು ಮಹತ್ವದ ಲೇಖಕರು ಎನ್ನುವ ಪರಿಧಿಯನ್ನು ಅವರ ಬರವಣಿಗೆ ಮತ್ತು ವ್ಯಕ್ತಿತ್ವ ಆರಂಭದಲ್ಲಿಯೇ ದಾಟಿಬಿಟ್ಟವು. ನಿರ್ಣಾಯಕವಾದ, ಪ್ರಭಾವಶಾಲಿಯಾದ ಸಾಂಸ್ಕೃತಿಕ ವಿದ್ಯಮಾನದ ಚಹರೆಯನ್ನು ಕುವೆಂಪು ಅವರ ಬರವಣಿಗೆ ಮತ್ತು ವ್ಯಕ್ತಿತ್ವಗಳು ಪಡೆದುಕೊಂಡವು. ಕುವೆಂಪು ಅವರ ಮಟ್ಟಿಗೆ ಇತರ ನವೋದಯ ಲೇಖಕರಿಗೆ ಸಮಷ್ಠಿಕಲ್ಯಾಣ ಪ್ರಜ್ಞೆಯಾಗಿ ರೂಪುಗೊಂಡದ್ದು ಇವರಲ್ಲಿ ಖಚಿತವಾದ ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿ ರೂಪುಗೊಳ್ಳಲು ನಡೆಸಿದ ಪ್ರಯತ್ನಗಳಾಗಿದ್ದವು. ನವೋದಯ ಲೇಖಕರಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ರಾಜಕೀಯ ನೆಲೆಯಲ್ಲಿ ಮುಖಾಮುಖಿಯಾಗಿಸಿದ ಏಕೈಕ ಲೇಖಕ ಎಂದರೆ ಕುವೆಂಪು. ಆದ್ದರಿಂದಲೇ ಇವರು ನವೋದಯದ ಸಾಮಾನ್ಯ ಎಂದು ಗುರುತಿಸಬಹುದಾದ ಗುಣಲಕ್ಷಣಗಳನ್ನು ಹೊಂದಿಯೂ, ಅದರಿಂದ ನಿರ್ಣಯಾತ್ಮಕವಾಗಿ ಭಿನ್ನವೂ ಹೌದು. ಗೆಳೆಯರ ಗುಂಪಿನೊಡನಿದ್ದೂ ಅವರಿಂದ ತಾತ್ವಿಕವಾಗಿ ವಸ್ತುನಿಷ್ಠ ಅಂತರವನ್ನು ಮಾತ್ರವಲ್ಲ, ಸ್ಪಷ್ಟವಾದ ಭಿನ್ನಾಭಿಪ್ರಾಯವನ್ನು ಹೊಂದಿದವರು ಕುವೆಂಪು ಇದು ಕುವೆಂಪು ಅವರ ಮಟ್ಟಿಗೆ ಅನಿವಾರ್ಯವು ಆಗಿತ್ತು ಮತ್ತು ಬರವಣಿಗೆಯ ಮೂಲಕವೇ ಅವರು ಸಾಧಿಸಲು ಪ್ರಯತ್ನಿಸಿದ ಹೊಸ ಸಾಮಾಜಿಕ ಸಂರಚನೆಯ ಅಂತಿಮ ಆಸೆಯು ಆಗಿತ್ತು. ಈ ಹಿನ್ನೆಲೆಯಲ್ಲಿ ಹೆಣ್ಣನ್ನು ಕುರಿತು ಕುವೆಂಪು ಅವರ ನಿಲುವುಗಳನ್ನು ಚರ್ಚಿಸಲು ಪ್ರಯತ್ನಿಸಬಹುದು. ಎಂದರೆ ಹೆರ್ಣಣನ್ನು ಕುವೆಂಪು ಸಾಮಾಜಿಕ ನ್ಯಾಯದ ಅಥವಾ ಲಿಂಗರಾಜಕಾರಣದ ಹಿನ್ನೆಲೆಯಲ್ಲಿ ಗ್ರಹಿಸಲು ಪ್ರಯತ್ನಿಸಿದ್ದಾರೆನ್ನುವುದು. ಮೇಲಿನ ನೋಟಕ್ಕೆ ಹೆಣ್ಣನ್ನು ಕುರಿತ ನಿಲುವುಗಳು ಸಮಾನಾಂತರ ರೇಖೆಗಳಾಗಿ ಕಾಣಿಸುತ್ತವೆ. ಇದು ಕಾಣುವ ಮೊದಲ ದೃಷ್ಟಿಕೋನವೆಂದರೆ ಆರ್ಷೇಯ ಹೆಣ್ಣಿನ ಅತ್ಯುತ್ತಮ ಪ್ರತಿನಿಧಿಯಾಗಿ ನೋಡುವುದು. ಸುಸಂಸ್ಕೃತಳು, ಕೋಮಲೆಯು, ಕುಟುಂಬವತ್ಸಲಳು ಆದ ಮನೆಮನೆಯ ತಪಸ್ವಿನಿ. ಎರಡನೆಯದು ರಸದೇವಗಂಗೆಯಲಿ ಮೀನಾಗುವ, ಪ್ರೇಮಕಾಶ್ಮೀರಕ್ಕೆ ಕರೆದೊಯ್ಯುವ ಶುದ್ಧರಮ್ಯವಾದಿ ದೃಷ್ಠಿಕೋನ. ಮೂರನೆಯದು ಹೆಣ್ಣನ್ನು ಸಹಜತೆಯಲಿ ಮತ್ತು ಘನತೆಯಲ್ಲಿ ಚಿತ್ರಿಸುವ ದೃಷ್ಟಿಕೋನ. ಮೊದಲ ಎರಡು ದೃಷ್ಟಿಕೋನಗಳು ಬಹುತೇಕ ಕಾಣಿಸಿಕೊಳ್ಳುವುದು ಅವರ ಕಾವ್ಯದಲ್ಲಿ. ಮೂರನೆಯದು ಅವರ ಕಾದಂಬರಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಮೂರು ನಿಲುವುಗಳು ಕುವೆಂಪು ಅವರಲ್ಲಿ ಸಾಮರಸ್ಯದಲ್ಲಿ ಕಾಣಿಸಿಕೊಳ್ಳುತ್ತದೆಯೋ ಅಥವಾ ಬೇರೆ ಬೇರೆಯಾಗಿ ನಿಲ್ಲುತ್ತವೆಯೋ ಎನ್ನುವುದೊಂದು ಮೂಲ ಪ್ರಶ್ನೆ. ನನ್ನ ಮಟ್ಟಿಗೆ ಈ ಮೂರು ಒಂದರೊಳಗೊಂದು ಸಾಮರಸ್ಯದ ಹೆಣ್ಣಿಗೆ ಕುವೆಂಪು ಅವರಲ್ಲಿ ಕಾಣಿಸುವುದಿಲ್ಲ. ಇದಕ್ಕಿರುವ ಏಕೈಕ ಅಪವಾದ ಮಲೆಗಳಲ್ಲಿ ಮದುಮಗಳಾದ ಚಿನ್ನಮ್ಮಳದ್ದು. ಕುವೆಂಪು ಅವರ ಎರಡು ಕಾದಂಬರಿಗಳ ಶೀರ್ಷಿಕೆಯಲ್ಲಿ ಸ್ತ್ರೀಯರ ಪ್ರಸ್ತಾಪವಿರುವುದು ಆಕಸ್ಮಿಕವೇ ಇದ್ದೀತು. ಕಾನೂರು ಹೆಗ್ಗಡಿಯ ಮೊದಲ ಶೀರ್ಷಿಕೆ ಕಾನೂರು ಸುಬ್ಬಮ್ಮ ಹೆಗ್ಗಡತಿಯೆಂದು ಇದ್ದದ್ದು ನಂತರ ಕಾನೂರು ಹೆಗ್ಗಡತಿಯಾಯಿತು. ಹೆಗ್ಗಡೆಯರ ಪ್ರಾಬಲ್ಯದ ಆ ಸಮುದಾಯದಲ್ಲಿ ಈ ಸುಬ್ಬಮ್ಮ ಹೆಗ್ಗಡತಿ ಕುಟುಂಬದ ಅಡಿಗೆ ಮನೆಯ ಅಧಿಕಾರ ಕೇಂದ್ರಕ್ಕೆ ಸೀಮಿತವಾಗಿದ್ದವಳು ಹೆಗ್ಗಡೆಯವರಿಗೆ ಸಮಾನವಾಗಿ ಅಧಿಕಾರ ಕೇಂದ್ರದಲ್ಲಿ ಸ್ಥಾಪಿತವಾಗುವುದನ್ನು ಕಾನೂರು ಹೆಗ್ಗಡತಿ ಹೇಳಿದರೆ ಆಯ್ಕೆಯ ಅವಕಾಶವೇ ಇಲ್ಲದ ಒಳಲೋಕದಲ್ಲಿ ಮಾತ್ರ ಗುಪ್ತ ಸ್ವಾಯತ್ತತೆಯನ್ನು ಪಡೆಯಬಹುದಾಗಿದ್ದ ಸಮುದಾಯದಲ್ಲಿ ಹೆಣ್ಣೊಬ್ಬಳು ವ್ಯವಸ್ಥೆಯ ಎಲ್ಲ ನಿರ್ಬಂಧಗಳನ್ನು ಕೃತಕ ಕುಬ್ಜತೆಗಳನ್ನು ಧಿಕ್ಕರಿಸಿ, ಮಲೆಗಳ ವಿಸ್ತಾರದ ಕಡೆಗೆ, ಜಡತೆಯಿಂದ ಜೀವಂತಿಕೆಯ ಕಡೆಗೆ ಚಲಿಸುವ ಹಾಗೆ ಮಲೆಗಳಲ್ಲಿ ಮದುಮಗಳು ಕಾಣಿಸುತ್ತದೆ. ಈ ಇಬ್ಬರೂ ಹೆಣ್ಣು ಮಕ್ಕಳು ಹಾಯುವ ಬದುಕಿನ ದುರಂತಗಳು ಎದುರಿಸುವ ಸವಾಲುಗಳ ಪ್ರಕ್ರಿಯೆಯೇ ತುಂಬಾ ಮುಖ್ಯ. ಕುವೆಂಪು ಅವರ ಹೆಣ್ಣನ್ನು ಕುರಿತ ನಿಲುವು ಸಾಂದ್ರವಾಗಿ ಪ್ರಕಟವಾಗಿರುವುದು ಈ ಎರಡು ಕೃತಿಗಳಲ್ಲಿ. ಮೊದಲ ಎರಡರಲ್ಲಿ ಕಾಣಿಸಿಕೊಳ್ಳುವುದು ರಮ್ಯವಾದರೂ ತೆಳುವಾದ ಚಿತ್ರಣ. ಯಾಕೆಂದರೆ ಅಲ್ಲಿರುವುದು ಅಪೇಕ್ಷಿತ ವ್ಯಕ್ತಿತ್ವದ ವಿವರಗಳು ಮಾತ್ರ. ಅಪೇಕ್ಷಿಸಿದ್ದನ್ನು ಕೊಡುವುದರಲ್ಲಿಯೇ ಸಾರ್ಥಕತೆ ಪಡೆಯುವ ಹೆಣ್ಣಿನ ಮತ್ತು ತಾನು ಬಯಸಿದ್ದನ್ನು ಹೆಣ್ಣಿನಿಂದ ಪಡೆದು ಸಾರ್ಥಕವಾಗುವ ಗಂಡಿನ ತೃಪ್ತಿಯ ಗಳಿಗೆಗಳು. ಇಲ್ಲಿ ಗ್ರಹಿತವೆಂದರೆ ಗಂಡಿನ ಸಾರ್ಥಕ ಗಳಿಗೆಯೇ ಹೆಣ್ಣಿನ ಸಾರ್ಥಕ ಗಳಿಗೆಯೂ ಹೌದು ಎನ್ನುವುದು. ಈ ಎರಡು ನಿಲುವುಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಲಿ, ಆಸಕ್ತಿಯಾಗಲಿ ಇರುವುದು ಸಾಧ್ಯವಿಲ್ಲ. ಬದುಕಿನ ಸಹಜ ಅವಿಭಾಜ್ಯ ಸಂಘರ್ಷಗಳು, ತಲ್ಲಣಗಳು, ನೋವುಗಳು ಅಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆ ಗಳಿಗೆಗಳು ತನ್ನಿಂದ ತಾನೆ ಒದಗಿಬಿಡುವ ಅನಾಯಾಸತೆಯಲ್ಲಿ ಕುವೆಂಪು ಅವರ ಪ್ರೇಮಗೀತೆಗಳಿಗೂ ಮೂಲಭೂತವಾದ ವ್ಯತ್ಯಾಸವಿದೆ. ಅಪರಿಹಾರ್ಯವಾದ ಬಿಕ್ಕಟ್ಟನ್ನು ಒಡಲೊಳಗಿಟ್ಟುಕೊಂಡೆ ಬೇಂದ್ರೆಯವರ ಪ್ರೇಮಗೀತೆಗಳು, ಮುಖ್ಯವಾಗಿ ಸಖಿಗೀತ ರೂಪುಗೊಂಡಿದೆ. ಆದರೆ ಕುವೆಂಪುರವರ ಕಾವ್ಯದಲ್ಲಿ ನೋವಿನ ಸ್ಪರ್ಶವೇ ಇಲ್ಲದ ಪ್ರೇಮಲೋಕವೊಂದು ದೇವಲೋಕದಿಂದ ಇಳಿದು ಬಂದಂತೆ ಕಾಣಿಸುತ್ತದೆ. ಲೌಕಿಕದ ಸಂಕಷ್ಟಗಳೆಲ್ಲ ಹುಟ್ಟಿ ಬೆಳೆಯಬೇಕದ, ಸತತ ಪ್ರಯತ್ನಗಳಲ್ಲಿ ಸೋಲು-ಗೆಲುವುಗಳಲ್ಲಿ, ಸ್ಥಾಯಿ-ಸಂಚಾರಗಳಲ್ಲಿ, ಗಂಡು ಹೆಣ್ಣು ಎಡೆಬಿಡದೆ ಕಾಡುವ ಹೀಗೆ ಕಾಡಕಾಡುತ್ತಲೇ ಅಲೌಕಿಕವಾಗುವ ದಿವ್ಯ ಗಳಿಗೆಗಳು ಅಪೂರ್ವ ಎನ್ನುವ ದೃಷ್ಟಿಕೋನದಲ್ಲಿ ಬೇಂದ್ರೆಯವರ ಕಾವ್ಯವಿದೆ. ಕುವೆಂಪು ಕಾವ್ಯ ಈ ಪ್ರಕ್ರಿಯೆಯ ಹಂಗೇ ಇಲ್ಲದ ಪ್ರೇಮಕಾಶ್ಮೀರವನ್ನು ನಮ್ಮೆದುರಿಗೆ ತೋರಿಸಲು ಬಯಸುತ್ತದೆ. ಅದ್ವೈತದ ಅಸೀಮ ಹಂಬಲದಲ್ಲಿಯೂ ಬಹುತೇಕ ಬಾರಿ ಗಂಡು ಹೆಣ್ಣಿನ ಸಂಬಂಧಗಳು ಅದ್ವೈತದಲ್ಲಿಯೇ ಉಳಿದುಬಿಡುವ ವಾಸ್ತವಾಂಶ ಕುವೆಂಪು ಅವರಿಗೆ ಯಾಕೆ ಮುಖ್ಯವಾಗುವುದಿಲ್ಲ? ಬಹುಶಃ ಇದರ ಇಂದಿನ ಕಾರಣ ಹೆಣ್ಣನ್ನು ತನ್ನ ಅಪೇಕ್ಷೆಗನುಗುಣವಾಗಿ ದಕ್ಕಿಸಿಕೊಳ್ಳಬಹುದಾದ ಗಂಡಿನ ಶಕ್ತಿ ಮತ್ತು ಹಕ್ಕಿನಲ್ಲಿರುವ ನಂಬಿಕೆ. ಕುವೆಂಪು ವರ ಕಾವ್ಯ ವಿಹಾರದಲ್ಲಿ ಹಾರುವ ತೇಲು, ಪ್ರೀತಿಯ ಅಮೃತವನ್ನು ಕುಡಿಸುವ ಸ್ತ್ರೀತತ್ವವೂ ನಿಜ ಜೀವನದ ದಟ್ಟ ವಾಸ್ತವದ ವಿವರಣೆಗಳಲ್ಲಿ ಭೂಮಿಗಿಳಿಯುವುದು ಅವರ ಕಾದಂಬರಿಗಳಲ್ಲಿ. ಅವರ ಕಾವ್ಯದ ಹೆಣ್ಣಿಗೂ ಕಾದಂಬರಿಗಳ ಹೆಣ್ಣಿಗೂ ಇರುವ ಭೂಮಿಯಾಕಾಶಗಳ ವ್ಯತ್ಯಾಸವನ್ನು ಗುರುತಿಸುವುದು ವಿವರವಾದ ಚರ್ಚೆಯನ್ನು ಅಪೇಕ್ಷಿಸುತ್ತದೆ. ಮಹತ್ವದ ಮಾತೆಂದರೆ ಹೆಣ್ಣು ಈ ಎರಡರಲ್ಲೂ ವಸ್ತುವಿಶೇಷವಲ್ಲ ಎನ್ನುವುದು. ಇನ್ನೂ ಮುಖ್ಯವಾದ ಮಾತೆಂದರೆ ಇದನ್ನು ಕುವೆಂಪು ಪ್ರಜ್ಞಾಪೂರ್ವಕವಾಗಿ ಮಾಡಿದ್ದಾರೆ ಎಂದು ಹೇಳಲಾಗುವುದಿಲ್ಲ ಎನ್ನುವುದು. ಕಾದಂಬರಿಗಳಲ್ಲಿ ಅವರ ಸ್ತ್ರೀ ಪಾತ್ರಗಳು ಬದುಕಿನ ಜೊತೆಗೆ ಕಟ್ಟಿಕೊಳ್ಳುವ ಸಾವಯುವ ಸಂಬಂಧವೂ ಮೂಲತಃ ಕಾದಂಬರಿಗಳು ಬದುಕಿನೊಂದಿಗೆ ಕಟ್ಟಿಕೊಳ್ಳುವ ಸಾವಯವ ಸಂಬಂಧದ ಭಾಗವಾಗಿಯೇ ಕಾಣಿಸಿಕೊಳ್ಳುತ್ತದೆ. ಬದುಕನ್ನು ಕುರಿತ ಅದರ ನಿಗೂಢತೆ ಅನಿರೀಕ್ಷಿತತೆ ಮತ್ತು ಧೀರೋದಾತ್ತವಾಗಿ ಮುಖಾಮುಖಿಯಾಗುವ ವಾಸ್ತವತೆ ಈ ಎಲ್ಲವೂ ಸೇರಿ ಸೃಷ್ಟಿಯಾಗುತ್ತಿರುವ ಅಪೂರ್ವ ಕಲಾಕೃತಿಯೊಂದರ ಭಾಗವಾಗಿ ಇಲ್ಲಿನ ಸ್ತ್ರೀಪಾತ್ರಗಳಿವೆಯೇ ಹೊರತು ಕಲಾವಿದನೊಬ್ಬನ ಉದ್ದೇಶಿತ ಆಶಯಗಳ ಪ್ರತಿನಿಧಿಯಾಗಲ್ಲ. ಕಲಾವಿದನನ್ನು ಮೀರಿ ಕಾಲದ ಮತ್ತು ಬದುಕಿನ ಸತ್ಯಗಳು ಅಭಿವ್ಯಕ್ತಗೊಳ್ಳುವ ಕಲೆಯ ಮಾಂತ್ರಿಕತೆಗೆ ಪ್ರತಿಮೆಗಳಾಗಿ ಸ್ತ್ರೀಪಾತ್ರಗಳು ಕಾಣಿಸುತ್ತವೆ. ಈ ಎರಡು ಕಾದಂಬರಿಗಳುದ್ದಕ್ಕೂ ಸೂಕ್ಷ್ಮಾತಿಸೂಕ್ಷ್ಮ ದಟ್ಟ ವಿವರಣೆಗಲ್ಲಿ ಸಾಂದ್ರವಾಗಿ ಕಾಲಾತೀತ ಸತ್ಯದ ಚಹರೆಗಳಲ್ಲಿ ಕಾಣಿಸುವ ಪ್ರಕೃತಿಯಷ್ಟೇ ಸಾಂದ್ರತೆಯಲ್ಲಿ ಇಲ್ಲಿನ ಸ್ತ್ರೀ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಈ ಕಾದಂಬರಿಗಳ ಪ್ರಕೃತಿಯ ದರ್ಶನ ಎಷ್ಟು ಅಧಿಕೃತವಾದದ್ದೋ ಇಲ್ಲಿನ ಸ್ತ್ರೀಲೀಕವೂ ಅಷ್ಟೇ ಅಧಿಕೃತವಾದದ್ದು. ಕುವೆಂಪು ಬರವಣಿಗೆಯಲ್ಲಿ ಕಾಳಿಯ ಪಾತ್ರ ಮಹತ್ವಪೂರ್ಣವಾದದ್ದು. ಕಾಳಿಯ ವ್ಯಕ್ತಿತ್ವ ಕುವೆಂಪು ಅವರಿಗೆ ದಕ್ಕಿರುವುದರಿಂದಲೇ ತಮ್ಮ ಕಾದಂಬರಿಯ ಸ್ತ್ರೀ ಪಾತ್ರಗಳನ್ನು ಸಹಜ ಘನತೆಯಲ್ಲಿ ಚಿತ್ರಿಸುವುದು ಸಾಧ್ಯವಾಗಿದೆ. ಬದುಕು ಮತ್ತು ಸಂಬಂಧಗಳ ಕುರೂಪಗಳನ್ನು ದುರಂತಗಳನ್ನು ಮನುಷ್ಯರ ಕೈ ಮೀರಿದ ಸನ್ನಿವೇಶಗಳಲ್ಲಿ ಕುವೆಂಪು ಚಿತ್ರಿಸಿದ್ದಾರೆ. ಹೀಗೆ ಕೈ ಮೀರಿದ ಸನ್ನಿವೇಶಗಳ ಜೊತೆ ಮನುಷ್ಯನನ್ನು ಮುಖಾಮುಖಿಯಾಗಿಸುವಾಗ ಕುವೆಂಪು ತೀರ್ಮಾನಗಳನ್ನು ಕೊಡುವುದಿಲ್ಲ. ಕಾದಂಬರಿಗಳ ಸ್ತ್ರೀಪಾತ್ರದ ಮಟ್ಟಿಗಂತೂ ಇದು ಇನ್ನೂ ಹೆಚ್ಚು ನಿಜ. ಹೂವಯ್ಯನನ್ನು ಒಂದು ಮೌಲ್ಯದ ಪ್ರತಿನಿಧಿಯಾಗಿ ನೋಡದೆ ಒಂದು ಜೀವನ ಕ್ರಮದ ಪ್ರತಿನಿಧಿಯಾಗಿ ಮಾದರಿಯಾಗಿ ನೋಡುತ್ತಾರೆ. ಸುಬ್ಬಮ್ಮನ ಬದುಕಿನ ದುರಂತವನ್ನು ವ್ಯಕ್ತಿಗತ ದುರಂತ, ನೈತಿಕ ಅಧಃಪತನ ಎಂದು ನೋಡುವ ಒಂದು ಸಣ್ಣ ಸೂಚನೆ, ಕಾದಂಬರಿಯಲ್ಲಿದೆ, ನಿಜ. ಆದರೆ ಆ ದುರಂತದ ಸುತ್ತಲಿನ ವಿವರಗಳನ್ನು ಕೊಡುವ ಹೆಣ್ಣಿನ ಜೈವಿಕ ಸತ್ಯಗಳನ್ನು ನೋಡಲು ಅವರು ಪ್ರಯತ್ನಿಸುತ್ತಿರುವಾಗ ಹಾಗೆ ಕಾಣಿಸುತ್ತದೆ. ಪ್ರಾಕೃತಿಕ ಸತ್ಯವನ್ನು ಮೀರುವುದು, ಗೆಲ್ಲುವುದು ಎಷ್ಟು ಕಷ್ಟಸಾಧ್ಯವಾದದ್ದು ಎನ್ನುವುದನ್ನು ಸುಬ್ಬಮ್ಮ ಮತ್ತು ಹೂವಯ್ಯನ ವೈದೃಶ್ಯದ ನೆಲೆ ಸೂಚಿಸುವ ಹಾಗೆ ಕಾಣಿಸುತ್ತದೆ. ಸರಿ ತಪ್ಪುಗಳಿಗಿಂತ ಹೆಚ್ಚಾಗಿ ವ್ಯಕ್ತಿಯ ಆಯ್ಕೆ ಮತ್ತು ವ್ಯಕ್ತಿತ್ವದ ಶಕ್ತಿ ಮತ್ತು ಸಾಧ್ಯತೆಯ ಪ್ರಶ್ನೆಯಾಗಿ ಕುವೆಂಪು ಇದನ್ನು ನಿಭಾಯಿಸುತ್ತಿದ್ದಾರೆ. ಸುಬ್ಬಮ್ಮನ ಬದುಕಿನ ದುರಂತವೂ ವ್ಯಕ್ತಿಯಾಗಿ ಅವಳ ದುರಂತ ಎನ್ನುವುದು ಎಷ್ಟು ನಿಜವೋ, ಇಂಥ ದುರಂತಗಳ ಮೂಲ ಪ್ರೇರಣೆಯಾದ ಸಾಮಾಜಿಕ ಸಂರಚನೆಯೂ ಒಂದು ದುರಂತಮೌಲ್ಯ ಎನ್ನುವ ಧ್ವನಿ ಈ ಕಾದಂಬರಿಯಲ್ಲಿ ಇದೆ. ಎಂದರೆ ನೇರವಾಗಿಯಲ್ಲದಿದ್ದರೂ ಕಾದಂಬರಿ ಹೆಣ್ಣನ್ನು ಕುರಿತ ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ತನಗರಿವಿದ್ದೋ ಇಲ್ಲದೆಯೋ ಎತ್ತುತ್ತಿದೆ. ಈ ಎರಡು ಕಾದಂಬರಿಗಳಲ್ಲಿ ಕುವೆಂಪು, ಅದ್ಭುತವೆನ್ನಬಹುದಾದ ಸ್ತ್ರೀಲೋಕವನ್ನು ಕಟ್ಟಿಕೊಡುತ್ತಾರೆ. ಅಡಿಗೆ ಮನೆಯ ಲೋಕವನ್ನು ಪರಿಪೂರ್ಣ ಎನ್ನಬಹುದಾದ ವಿವರಗಳಲ್ಲಿ ಅವರು ತೋರಿಸುತ್ತಾರೆ. ಆ ಲೋಕದ ಕತ್ತಲೆ, ಬೆಂಕಿಯ ಬಿಸಿ, ಒಳ ಮನಸ್ಸಿನ ಕುದಿತ ಹಾಗೂ ಅವು ಪ್ರಕಟವಾಗುವ ನೂರು ಬಗೆಗಳು ಈ ಎಲ್ಲವುಗಳು ಅಡಿಗೆ ಮನೆಯ ಪರಿಕರಗಳ ಸಂಕೇತಗಳಲ್ಲಿ ಜೀವಂತವಾಗಿ ಕಾಣಿಸಿಕೊಳ್ಳುತ್ತವೆ. ನಗಣ್ಯವಾಗಿ ಕಾಣಸಿಗಬಹುದಾದ ಈ ಲೋಕ ತನ್ನಷ್ಟಕ್ಕೆ ತಾನು ಎಷ್ಟು ಜೀವಂತ ಎನ್ನುವುದನ್ನು ಕುವೆಂಪು ಕಟ್ಟಿಕೊಟ್ಟ ಹಾಗೆ ಚಿತ್ರಿಸಿದ ಲೇಖಕರು ಕನ್ನಡದಲ್ಲಿ ನಿಜಕ್ಕೂ ವಿರಳ. ಐತ, ಪೀಂಚಲು ಮತ್ತು ಮುಕಂದಯ್ಯ ಇವರ ನಡುವಿನ ಸಂಬಂಧಗಳ ಸೂಕ್ಷ್ಮತೆಯನ್ನು ಹಿಡಿಯುವಾಗ, ನಾಗಮ್ಮ, ನಾಗತ್ತೆ, ಕಾವೇರಿ, ಅಜ್ಜಿ ಈ ಪಾತ್ರಗಳ ಮೂಲಕ ಸ್ತ್ರೀವಾದಿಯಂತೆ ಕಾಣಿಸುತ್ತಾರೆ. ಸೀತೆಯಂತಹ ರಮ್ಯ ಪಾತ್ರವನ್ನು ಚಿತ್ರಿಸುವಾಗಲೂ ಕುವೆಂಪು ತಮ್ಮ ಸೂಕ್ಷ್ಮತೆಯನ್ನು ಒಂದು ಗಳಿಗೆಗೂ ಕಳೆದುಕೊಳ್ಳುವುದಿಲ್ಲ. ಮಲೆನಾಡಿನ ಸ್ತ್ರೀಲೋಕದ ಅಪರಿಚಿತತೆಯನ್ನು ಪರಿಚಿತಗೊಳಿಸುವ ಪ್ರಕ್ರಿಯೆಯಲ್ಲಿ ಕುವೆಂಪು ನಿಜವಾದ ಅರ್ಥದಲ್ಲಿ ಸಮಸ್ತ ಸ್ತ್ರೀಲೋಕದ ಅಪರಿಚಿತತೆಯನ್ನು ಪರಿಚಿತಗೊಳಿಸುತ್ತಾರೆ.

* * *