ರಾಮಾಯಣ ಮತ್ತು ಮಹಾಭಾರತಗಳು ಹಲವು ತಲೆಮಾರಿನ, ಹಲವು ಪೀಳಿಗೆಯ ಲೇಖಕರಿಗೆ ಪ್ರೇರಣೆ ನೀಡಿದಂಥ ಕೃಷಿಗಳು. ತಿಣುಕಿದನು ಫನಿರಾಯ ರಾಮಾಯಣದ ಭಾರದಲಿ’ ಎಂಬ ಕುಮಾರವ್ಯಾಸನ ಮಾತು ಭರತಖಂಡದಲ್ಲಿ ಸೃಷ್ಟಿಯಾದ ರಾಮಾಯಣಗಳನ್ನು ನಿರ್ದೇಶಿಸುತ್ತದೆ. ಹೀಗೆ ಸಿದ್ಧವಸ್ತುವನ್ನಿಟ್ಟುಕೊಂಡು ರಚಿತವಾದ ಕೃತಿಗಳಲ್ಲಿ ಎರಡು ಮಾದರಿಗಳು ಕಂಡುಬರುತ್ತವೆ. ಒಂದು, ಮೂಲಕ್ಕೆ ನಿಷ್ಠವಾದ ಮತ್ತು ಮೂಲವನ್ನೇ ಸಂಪೂರ್ಣವಾಗಿ ಅನುಸರಿಸಿ ಬಂದ ಕೃತಿಗಳು. ಎರಡು, ಮೂಲಕೃತಿಗೆ ಭಿನ್ನವೂ ನವೀನವೂ ಸ್ವತಂತ್ರವೂ ಆದ ದರ್ಶನಂ ಕಾವ್ಯ ಎರಡನೆಯ ಮಾದರಿಗೆ ಸೇರುತ್ತದೆ. ಅವರೇ ಹೇಳುವಂತೆ-

ಕನ್ನಡದಿ ಬೇರೆ ಕಥೆಯೆಂಬಂತೆ ಬೇರೆ ಮೈಯಾಂತಂತೆ
ಮರುಹುಟ್ಟು ನಡೆದಂತೆ
ಈ ಕಾವ್ಯ ಮೂಡಿ ಬಂದಿದೆ
.

ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ಮಹಿಳೆಯರ ಬಗ್ಗೆ ಅದರಲ್ಲಿಯೂ ತಳವರ್ಗದ ಮಹಿಳೆಯರ ಬಗ್ಗೆ ವಿಶೇಷ ಆಸಕ್ತಿಯನ್ನೂ ಗೌರವವನ್ನೂ ತೋರುತ್ತ ಬಂದಿದ್ದಾರೆ. ಇದಕ್ಕೆ ರಾಮಾಯಣ ದರ್ಶನಂ ಕಾವ್ಯ ಕೂಡ ಹೊರತಲ್ಲ. ಈ ಕಾವ್ಯ ಸ್ತ್ರೀಪರ ಧಾಟಿಯಲ್ಲಿ ಬರೆಯಲಾಗಿದೆ. ಇಲ್ಲಿ ಹೆಣ್ಣಿನ ವಿರಾಟ್ ವ್ಯಕ್ತಿತ್ವದ ಅನಂತ ಮುಖಗಳನ್ನು ಅನಾವರಣಗೊಳಿಸಲು ಯತ್ನಿಸಲಾಗಿದೆ.

ಕುವೆಂಪು ಅವರು ತಮ್ಮ ಒಂದು ಸಂದರ್ಶನದಲ್ಲಿ ರಾಮಾಯಣ ದರ್ಶನಂ ಕಾವ್ಯವನ್ನು ಸಾಹಿತ್ಯ ದೃಷ್ಟಿ ಮನಶಾಸ್ತ್ರದೃಷ್ಟಿ ಮತ್ತು ದರ್ಶನ ದೃಷ್ಟಿಗಳಿಂದ ಪರಿಭಾವಿಸಬೇಕೆಂದು ಸೂಚಿಸಿದ್ದಾರೆ. ಹಲವು ನಿಟ್ಟಿನ ಅಧ್ಯಯನಕ್ಕೆ ಈ ಕಾವ್ಯ ಯೋಗ್ಯವಾಗಿದೆ. ಪ್ರಸ್ತುತ ಶಬರಿಯ ಪಾತ್ರ ಮೂಲಕ ಕುವೆಂಪು ತಮ್ಮ ಸಾಹಿತ್ಯದಲ್ಲಿ ಸ್ತ್ರೀಯರಿಗೆ ಕೊಟ್ಟ ಸ್ಥಾನಮಾನವೇನು, ಅವರ ಸ್ತ್ರೀಪರ ದೃಷ್ಟಿ ಏನೆಂಬುದನ್ನು ತಿಳಿಯಲೆತ್ನಿಸಿದೆ. ಹಾಗಾಗಿ ಇಲ್ಲಿ ಸ್ತ್ರೀವಾದಿ ಸೈದ್ಧಾಂತಿಕ ನೆಲೆಗಿಂತ ವಾಲ್ಮೀಕಿಯ ಶಬರಿಯೊಡನೆ ತುಲನೆ ಮಾಡುತ್ತ ಕುವೆಂಪು ಅವರು ಚಿತ್ರಿಸಿರುವ ಮಹಿಳೆ ವಾಲ್ಮೀಕಿಗಿಂತ ಎಷ್ಟು ಭಿನ್ನವಾಗಿದ್ದಾಳೆಂಬುದನ್ನು ಕಂಡುಕೊಳ್ಳಬಹುದು.

ವಾಲ್ಮೀಕಿ ರಾಮಾಯಣದಲ್ಲಿ ಶಬರಿಯ ಪಾತ್ರ ಸಂಕ್ಷಿಪ್ತವಾಗಿ ಬಂದಿದೆ. ಇಲ್ಲಿ ರಾಮಲಕ್ಷ್ಮಣರು ಕಬಂಧನ ಮಾತಿಗೆ ಅನುಗುಣವಾಗಿ ಶಬರಿಯ ಆಶ್ರಮಕ್ಕೆ ತೆರಳುತ್ತಾರೆ. ಶಬರಿ ರಾಮನ ದರ್ಶನಕ್ಕಾಗಿ ಬಹುಕಾಲದಿಂದ ತಪೋನಿರತೆಯಾಗಿರುತ್ತಾಳೆ. ಈಕೆ ಅವರಿಗೆ ಹಣ್ಣು ಹಂಪಲು ನೀಡಿ ಸತ್ಕರಿಸುತ್ತಾಳೆ. ಮುಂದೆ ಆಕೆಯ ಸಾಧನೆಯನ್ನು ತಿಳಿದು ರಾಮ ತೃಪ್ತನಾಗುತ್ತಾನೆ.

ಅವರೆಲ್ಲರೂ ಮತಂಗ ಮುನಿಗಳ ಆಶ್ರಮಕ್ಕೆ ಹೋಗುವುದು, ಶಬರಿ ಅವರ ಸಮ್ಮುಖದಲ್ಲಿ ಯಜ್ಞೇಶ್ವರನಿಗೆ ದೇಹವನ್ನು ಅರ್ಪಿಸುವುದು-ಇವು ವಾಲ್ಮೀಕಿಯಲ್ಲಿ ಬರುವ ಶಬರಿಯ ವೃತ್ತಾಂತ. ವಾಲ್ಮೀಕಿಯಲ್ಲಿ ರಾಮನ ಸುತ್ತ ಶಬರಿಯ ಪ್ರಸಂಗ ಬೆಳೆದಿದೆ ಹಾಗೂ ಶಬರಿಯ ಮುಕ್ತಿ ಕೂಡಾ ರಾಮನಿಂದಲೇ. ರಾಮಾಯಣ ದರ್ಶನಂನಲ್ಲಿ ರಾಮನೇ ಶಬರಿಯಿಂದ ಚೈತನ್ಯ ಪಡೆದಂತೆ ಶಬರಿಯ ಪಾತ್ರವನ್ನು ಉನ್ನತೀಕರಿಸಿದ್ದಾರೆ.

ಕುವೆಂಪು ಅವರ ಶ್ರೀರಾಮಾಯಣ ದರ್ಶನಂನಲ್ಲಿ ಶಬರಿ ಎದುರಾಗುವುದು ಕಿಷ್ಕಿಂದಾ ಸಂಪುಟದ ‘ಶಬರಿಗಾದನು ಅತಿಥಿ ದಾಶರಥಿ’ ಎಂಬ ಸಂಚಿಕೆಯಲ್ಲಿ ಸೀತೆಯನ್ನು ಕಳೆದುಕೊಂಡ ರಾಮಲಕ್ಷ್ಮಣರು ಪಂಚವಟಿಯಿಂದ ಹೊರಡುತ್ತಾರೆ. ಸೀತಾಪಹರಣ ರಾಮನನ್ನು ಖಿನ್ನತೆಗೆ ಒಳಗಾಗುವಂತೆ ಮಾಡಿರುತ್ತದೆ. ಕಬಂಧ ರಾಮನನ್ನು ತನ್ನ ಬಾಹುಗಳಿಂದ ಬಂಧಿಸಿದಾಗ ಲಕ್ಷ್ಮಣನೇ ಆ ತೋಳುಗಳನ್ನು ಕತ್ತರಿಸಿ ರಾಮನನ್ನು ಮುಕ್ತಗೊಳಿಸುವನು. ತಕ್ಷಣವೆ ಕಬಂಧನ ರಾಕ್ಷಸರೂಪ ಮಾಯವಾಗಿ ಸುಂದರ ಕಾಯನಾಗುತ್ತಾನೆ. ರಾಮನಿಂದ ಆತನ ಉದ್ದಾರವಾಗುತ್ತದೆ. ಶಬರಿಯಾಶ್ರಮದ ಮಾರ್ಗವನ್ನು ಕಬಂಧ ತೋರುವನು.

ಶಬರಿ ಹೆಸರೇ ಸೂಚಿಸುವಂತೆ ಒಬ್ಬ ಬೇಡಿತಿ. ವಾಲ್ಮೀಕಿ ಈಕೆಯನ್ನು ಮತಂಗ ಋಷಿಯ ಪರಿಚಾರಿಕೆ ಎಂದು ಪರಿಚಯಿಸಿದರೆ ಕುವೆಂಪು ಅವರು ಮತಂಗ ಮುನಿಯ ಶಿಷ್ಯೆ ಎಂದು ವ್ಯತ್ಯಾಸ ಮಾಡಿಕೊಂಡಿರುವುದರಲ್ಲಿಯೆ ಇವರು ಶಬರಿಗೆ ನೀಡಿದ ಮಹತ್ವ ವ್ಯಕ್ತವಾಗುತ್ತದೆ.[1] ಶಬರಿಯ ಜೀವನದ ಪರಮಗುರಿಯೆಂದರೆ ರಾಮನನ್ನು ಕಾಣಬೇಕೆಂಬುದು. ಅದಕ್ಕಾಗಿ ಆಕೆ ಹಲವು ವರ್ಷ ತಪೋನಿರತೆಯಾಗಿರುತ್ತಾಳೆ. ವಾಲ್ಮೀಕಿಯಲ್ಲಿ ಆಕೆ ರಾಮನಿಗೂ ಹದಿಮೂರು ವರ್ಷಗಳಿಂದ ನಿರೀಕ್ಷೆಯಲ್ಲಿದ್ದರೆ ಕುವೆಂಪು ಅದನ್ನು ಹತ್ತು ವರ್ಷಕ್ಕೆ ಇಳಿಸಿರುವುದರ ಹಿಂದಿನ ಉದ್ದೇಶ ತಿಳಿಯುವುದಿಲ್ಲ. ಒಂದು ಕಾಲದಲ್ಲಿ ನಮ್ಮ ಪರಂಪರೆಯು ಹೆಣ್ಣು ಮಕ್ಕಳಿಗೆ ಆಧ್ಯಾತ್ಮವನ್ನು ನಿರಾಕರಿಸಿತ್ತು. ವ್ಯಕ್ತಿ ಯಾವ ಸಂಸ್ಕೃತಿಯಲ್ಲಿ ಜನಿಸಿದ್ದರೇನು ವೈಯಕ್ತಿಕ ಸಂಸ್ಕಾರ ಸಾಧನೆಗಳಿಂದ ಆಧ್ಯಾತ್ಮ ಸಿದ್ಧಿ ಪಡೆಯಬಹುದೆಂಬುದನ್ನು ಶಬರಿಯ ಪ್ರಸಂಗ ಅರುಹುತ್ತದೆ.

ಯಾವುದೇ ರಾಮಾಯಣದಲ್ಲಿ ಶಬರಿಯ ಬಾಲ್ಯ ಜೀವನದ ವಿವರಗಳು ದೊರೆಯುವುದಿಲ್ಲ. ಆಕೆ ಕಾಣಿಸಿಕೊಳ್ಳುವುದೇ ವೃದ್ಧಳಾಗಿ. ಆಕೆಯ ಆಶ್ರಮಕ್ಕೆ ಮುಂದೊಂದು ದಿನ ರಾಮ ಬರುವನೆಂದು ಮತಂಗ ಮುನಿಗಳು ಭವಿಷ್ಯ ನುಡಿದಿರುತ್ತಾರೆ. ಶಬರಿ, ಗುರುವಾಣಿ ಫಲಿಸುವುದನ್ನೇ ಎದುರು ನೋಡುತ್ತಿರುತ್ತಾಳೆ. ಹೀಗಾಗಿ ಶಬರಿಯ ಕನಸು ನನಸುಗಳಲ್ಲೆಲ್ಲ ರಾಮನೇ ತುಂಬಿರುತ್ತಾನೆ. ರಾಮಾಯಣ ದರ್ಶನಂನಲ್ಲಿ ಕವಿ ಆಕೆಯ ಬಾಹ್ಯ ಸ್ವರೂಪವನ್ನು ಚಿತ್ರಿಸಿರುವುದು ಹೀಗೆ-

ಪುಂಡಿನಾರಿನ ತೆರನ ಬೆಳ್ನರೆ ನವಿರ್ದಲೆಯ
ಬಚ್ಚುಪಲ್ಲಿಲಿವಾಯ ಕುಡುಬೆನ್ನ ಹಣ್ಮುದಕಿ
ಶಬರಜ್ಜಿ

ಇಲ್ಲಿ ಶಬರಿ ಬಿಳಿಕೂದಲಿನ, ಬಚ್ಚು ಬಾಯಿಯ, ಬಾಗಿದ ಬೆನ್ನಿನ ಹಣ್ಣು ಹಣ್ಣು ಮುದುಕಿಯಾಗಿ ಕಾಣಿಸುತ್ತಾಳೆ. ಕುವೆಂಪು ಆಕೆಯನ್ನು ಶಬರಜ್ಜಿ ಎಂದು ಕರೆದಿರುವುದು ಆಯ್ಕೆಯನ್ನು ಆತ್ಮೀಯಳನ್ನಾಗಿ ಮಾಡುತ್ತದೆ. ಮಾತ್ರವಲ್ಲ ಆಕೆಯ ಪಾತ್ರಕ್ಕೆ ತೋರಿರುವ ಗೌರವವೂ ಆಗಿದೆ. ಇದು ವಾಲ್ಮೀಕಿಯಲ್ಲಿಲ್ಲ.

ಕುವೆಂಪು ಅವರು ಶಬರಿಯ ಪ್ರಸಂಗದಲ್ಲಿ ಕನಸಿನ ತಂತ್ರವನ್ನು ಬಹಳಷ್ಟು ಬಳಸಿಕೊಂಡಿದ್ದಾರೆ. ಶಬರಿಯ ಪ್ರಥಮ ಭೇಟಿಯಾಗುವುದು ಕೂಡ ಆಕೆ ಕನಸು ಕಾಣುತ್ತಿರುವಾಗಲೇ. ಬೆಳ್ದಿಂಗಳಿನ ರಾತ್ರಿಯಲ್ಲಿ ಮುಪ್ಪು ಯೌವನದ ಕನಸು ಕಾಣುವಂತೆ ಶಬರಿ ರಾಮನ ಕನಸು ಕಾಣುತ್ತಾಳೆಂದು ಕುವೆಂಪು ವಣಿಸಿದ್ದಾರೆ. ಆಕೆಯ ಜಾಗೃತಾವಸ್ಥೆ ಎ;ಲ್ಲವೂ ರಾಮಮಯ. ಆಕೆ ಎದ್ದು ಕುಳಿತು ಕನಸಿನಲ್ಲಿ ಕಂಡ ಆ ಮೂರ್ತಿಯನ್ನು ಮತ್ತೆ ಮತ್ತೆ ಕಲ್ಪಿಸಿಕೊಳ್ಳುತ್ತ ಹರ್ಷಗೊಂಡು ತನ್ನ ಕನಸಿನ ಮೂರ್ತಿಯನ್ನು ನಿರೀಕ್ಷಿಸುತ್ತ ಗುಡಿಸಿಲ ಬಾಗಿಲನ್ನು ತೆರೆದು ನೋಡುವಳು. ಅಲ್ಲಿ ಯಾರೂ ಇರುವುದಿಲ್ಲ. ಮೂಲದಲ್ಲಿ ದೊರೆಯದ  ಶಬರಿಯ ಮನದ ತಲ್ಲಣ ತಳಮಳಗಳು ಕುವೆಂಪು ಅವರಲ್ಲಿ ಸ್ಫುಟಗೊಂಡಿವೆ. ಆಕೆಯ ರಾಮಭಕ್ತಿ ವಾತ್ಸಲ್ಯ ಭಾವವಾಗಿ ಪ್ರವಹಿಸಿದೆ. ಆಕೆ ರಾಮನನ್ನು ಕಾಣದೆ ನಿಟ್ಟುಸಿರುಬಿಟ್ಟು-

ನೀನೆಂದಿಗೆ ಬರುವೆಯಯ್ಯ, ಓ ನನ್ನಯ್ಯ
ಕಂದಯ್ಯ ರಾಮಚಂದ್ರಯ್ಯ? ನಿನಗಾಗಿ
ಕಾದಿರುವೆ ನೀರೈದುವತ್ಸರಗಳಿಂ

ಎನ್ನುವಲ್ಲಿ ಆಕೆಯ ರಾಮಭಕ್ತಿ ಶಿಶುಪ್ರೇಮವಾಗಿ ವ್ಯಕ್ತಪಟ್ಟಿದೆ. ಶಬರಿಯಲ್ಲಿ ತಾಯ್ತನದ ಆರ್ದ್ರತೆಯನ್ನು ಕುವೆಂಪು ಅವರು ಗುರುತಿಸಿದ್ದಾರೆ. ಶಬರಿ ವೃದ್ಧಳಾಗಿರುವುದರಿಂದ ಈಗಾಗಲೇ ಆಕೆಯ ಕಣ್ಣುಗಳು ಮಬ್ಬಾಗುತ್ತಿವೆ. ಕಣ್ಣಿನ ದೃಷ್ಟಿ ಸಂಪೂರ್ಣ ನಶಿಸಿದ ಬಳಿಕ ರಾಮ ಬಂದರೆ ನೋಡಲಾಗುವುದಿಲ್ಲವಲ್ಲ ಎಂಬ ಕಳವಳ, ಆತಂಕ.

ಕಣ್ಕಿಡುವ ಮೊದಲೆ ಬಾರಯ್ಯ; ಈ ಬಾಳ್ಕೆಡುವ
ಮುನ್ನಮೆನ್ನೆರ್ದೆಗೆ ತಾರಯ್ಯ ನಿನ್ನಾ ಶಾಂತಿಯಂ

ಎಂದು ಹಂಬಲಿಸುವ ಶಬರಿಯ ಆಶಯದಲ್ಲಿ ಪ್ರತಿಯೊಂದು ಜೀವಿಯ ಸುಪ್ತಚೇತನದ ಆಶಯವೂ ಅಡಗಿದೆ. ಇದು ಬಸವಣ್ಣನವರ ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡುವೋಗದ ಮುನ್ನ” ಎಂಬ ವಚನವನ್ನು ನೆನಪಿಗೆ ತರುತ್ತದೆ. ಕುವೆಂಪು ಅವರಲ್ಲಿ ಶಬರಿ ಸದ್ಭಕ್ತೆಯಾಗಿ ಭಕ್ತನ ಮನದ ಉದ್ವೇಗ ನಿರೀಕ್ಷೆ ಕಳವಳ ಉಲ್ಲಾಸ ಈ ಎಲ್ಲ ಭಾವಗಳೊಂದಿಗೆ ಕಂಡು ಬರುತ್ತಾಳೆ. ಆಕೆ ಬೆಳಗಾಗುವುದನ್ನೇ ಕಾಯುತ್ತಿರುವಂತೆ ಎದ್ದು, ಒಳಕ್ಕೂ ಹೊರಕ್ಕೂ ತಿರುಗುತ್ತ ದೂರದಿಂದ ಬರುವವರನ್ನು ನೋಡುತ್ತಿದ್ದುದನ್ನು ಹಾಗೂ ಆಕೆಯ ಎಲ್ಲ ಚಲನವಲನಗಳನ್ನು ಕುವೆಂಪು ವರ್ಣಿಸುತ್ತಾರೆ-

ಕಟಿಗೊಂದು ಕೈಯಾಗ ಪಣೆಗೊಂದು ಕೈಯೆತ್ತಿ
ಸುರ್ಕು ತಾಂ ಪುರ್ಟಿನ ಕೋಲ್ಗೆ ತೆರೆಗಳನೊಡರ್ಚಲ್ಕೆ
ನೋಡಿದಳ್
…. ನೋಡಿದಳ್

ಇಂಥ ಸೂಕ್ಷ್ಮ ವಿವರಗಳು ವಾಲ್ಮೀಕಿಯಲ್ಲಿಲ್ಲ. ಇದೊಂದು ಶಬ್ದಚಿತ್ರವಾಗಿಯೂ ಗಮನ ಸೆಳೆಯುತ್ತದೆ. ರಾಮಲಕ್ಷ್ಮಣರು ಶಬರಿಯ ಆಶ್ರಮವನ್ನು ಪ್ರವೇಶಿಸುವ ಸಂದರ್ಭ ಕೂಡ ವಾಲ್ಮೀಕಿಗಿಂತ ಭಿನ್ನವಾಗಿದ್ದು, ಕುವೆಂಪು ಅವರ ಸೋಪಜ್ಞ ಶೀಲತೆಯನ್ನು ಪ್ರತಿಬಿಂಬಿಸುವಂತಿದೆ.

ಶಬರಿ ವಾಲ್ಮೀಕಿಯಲ್ಲಿ ರಾಮಲಕ್ಷ್ಮಣರನ್ನು ನೋಡಿದ ಕೂಡಲೆ ಗುರುತಿಸುತ್ತಾಳೆ. ಆದರೆ, ಕುವೆಂಪು  ಅವರಲ್ಲಿ ಕೆದರಿದ ತಲೆಯ, ಕೊಳಕಾದ ಉಡುಗೆಯ, ತೇಜಹೀನವಾದ ಮುಖದ, ಖಿನ್ನತೆಯನ್ನು ತೋರುವ ಗಡ್ಡದಾರಿ ರಾಮನನ್ನು ಗುರುತಿಸದೆ ಹೋಗುತ್ತಾಳೆ. ಆಕೆ ರಾಮಲಕ್ಷ್ಮಣರನ್ನು ಬೇಡರೆಂದು ಭಾವಿಸುತ್ತಾಳೆ  ಏಕೆಂದರೆ ಆಕೆ ಕನಸಿನಲ್ಲಿ ಕಂಡ ರಾಮನು ಸೀತೆ ಮತ್ತು ಲಕ್ಷ್ಮಣನೊಡನಿರುವ ಶಾಂತಮೂರ್ತಿ. ಆಕೆಯ ಕಲ್ಪನೆಯ ರಾಮ ಈಗ ರೂಕ್ಷರೂಪದಲ್ಲಿ ನಿಂತಿದ್ದಾನೆ. ಇಲ್ಲಿ ಕುವೆಂಪು ಅವರು ದರ್ಶನವೊಂದನ್ನು ರೂಪಿಸಿದ್ದಾರೆ.

ಭಗವದಾಗಮನವೇಂ
ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೆ
ಸುಖದವೋಲಾಶಿಸಲ್ ದುಃಖದೊಲ್‌ಮೈದೋರಿ
ಭಕ್ತನನಿತಂ ಸುಲಿದು ನೈವೇದ್ಯಮಂ ಕೊಳದೆ
ಪೇಳ್ ಅಹಂಕಾರಮಂ ದಿವ್ಯಶೂನ್ಯತೆಗದ್ದುವೊಲ್
ಸಂಪೂರ್ಣತಾ ಸಿದ್ಧಿಯೊಲ್

ಭಗವಂತನ ಕಲ್ಪನೆ ಎನ್ನುವುದು ಕುಂಬಾರನ ಮಣ್ಣಿನ ಹಾಗೆ. ಮಾಡುವವನ ಮನೋಧರ್ಮಕ್ಕೆ ಅನುಗುಣವಾಗಿ ಮಣ್ಣು ಬೇರೆ ಬೇರೆ ಆಕೃತಿಯನ್ನು ಪಡೆಯುತ್ತದೆ. ಅಂತೆಯೇ ಭಕ್ತರು ತಮ್ಮ ಸಂಸ್ಕಾರಕ್ಕೆ ಅನುಗುಣವಾಗಿ ಭಗವಂತನನ್ನು ಕಲ್ಪಿಸಿಕೊಂಡಿರುತ್ತಾರೆ. ಭಕ್ತ ಭಗವಂತನನ್ನು ಶಂಖಚಕ್ರಧಾರಿಯಾಗಿಯೋ ಗಜಚರ್ಮಾಂಬರನಾಗಿಯೋ ಊಹಿಸಿಕೊಂಡಿರುತ್ತಾನೆ. ಆದರೆ, ಭಗವಂತನ ಭಕ್ತನ ಎಣಿಕೆಯಂತೆ ಪತ್ಯಕ್ಷನಾಗುವುದಿಲ್ಲ. ಭಗವಂತನ ಇರುವಿಕೆಯನ್ನು ಗುರುತಿಸಲಾಗುವುದಿಲ್ಲ. ಆತ ನಮ್ಮ ಅಂತಃಚಕ್ಷುವಿಗೆ ಗೋಚರವಾಗದಿರಬಹುದು. ಶಬರಿ ಕೂಡ ರಾಮನ ಆಗಮನವನ್ನು ಅರಿಯದಾಗುತ್ತಾಳೆ.

ಕುವೆಂಪು ಮೂಲದಿಂದ ಹೊರತಾಗಿ ಮಾಡಿಕೊಂಡ ಈ ಮಾರ್ಪಾಟು ಶಬರಿಯ ಪಾತ್ರದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮಹತ್ವದ್ದು. ರಾಮಲಕ್ಷ್ಮಣರಲ್ಲಿ ಲಕ್ಷ್ಮಣ ಶಬರಿಗೆ ದಣಿದು ಬಂದಿದ್ದೇನೆ ಗುಡಿಸಿಲಲ್ಲಿ ‘ತಾವಿತ್ತು ತಿನಲಿತ್ತು ಕರುಣಿಸೈ’ ಎಂದು ಬೇಡಿಕೊಂಡಾಗ ಕುವೆಂಪು ಅವರು ಶಬರಿಯನ್ನು ಎಷ್ಟು ಸಹಜವಾಗಿ ಚಿತ್ರಿಸಿದ್ದಾರೆಂದರೆ ಆಕೆ ಕಂಡಕಂಡವರಿಗೆಲ್ಲ ಬರುವ ಬೇಡರಿಗೆಲ್ಲ ಊಟ ವಸತಿಗಳನ್ನು ನೀಡಲು ನಾನೇನು ಅಡಗೊಳಜ್ಜಿಯಲ್ಲ ಎಂದು ಮುನಿಸು ತೋರುತ್ತಾಳೆ. ಇಲ್ಲಿ ಶಬರಿ ತಪಸ್ಸಾಧನೆ ಮಾಡಿದ ವೃದ್ಧೆಯಂತೆ ದೂರನಿಲ್ಲದೆ ನಮ್ಮ ಮನೆಯಂಗಳದಲ್ಲಿಯೇ ಇರುವ ಅಜ್ಜಿಯಂತೆ ತೋರುತ್ತಾಳೆ. ಈಕೆಯ ಮಾತಿನಲ್ಲಿ ಕೃತಕತೆ ತೋರುವುದಿಲ್ಲ. ಸಾಮಾನ್ಯವಾಗಿ ಅಜ್ಜಿಯರು ವಾತ್ಸಲ್ಯಮಯಿಗಳು. ಅವರಲ್ಲಿ ಏನನ್ನಾದರೂ ಕೇಳಿದರೆ ಒಮ್ಮೆ ಗದರಿಕೊಂಡು ಅನಂತರ ಪ್ರೀತಿಯಿಂದ ಕೂಡುವುದುಂಟು. ಇಲ್ಲಿ ಶಬರಿ ಕೂಡ ಮೊದಲು ಲಕ್ಷ್ಮಣನಿಗೆ ರೇಗಿಕೊಂಡರೂ ಮರುಕ್ಷಣದಲ್ಲಿಯೇ “ಬಡವಳಿದ್ದುದನೀವೆ ಬನ್ನಿಂ” ಎಂದು ಅವರನ್ನು ಪ್ರೀತಿಯಿಂದ ಆಹ್ವಾನಿಸಿ ನೀವ್ಯಾರು? ಎಲ್ಲಿಂದ ಬಂದಿರಿ? ಎಂದು ವಿಚಾರಿಸುವಳು. ಲಕ್ಷ್ಮಣ ನಿಜಸ್ಥಿತಿಯನ್ನು ಮರೆಮಾಚಿ ಮನೆ ಮಾರು ಇಲ್ಲದವರು ಎಂದು ಹೇಳುತ್ತಾನೆ. ಅದನ್ನು ಕೇಳಿ ಶಬರಿ ಏನು ಕೇಡುಗಾಲವೋ “ಅರಗುಲಿಗೊಳರ್ವನ ಸತಿಗೆ ಮತ್ತೋರ್ವನಳುಪುವಂ” ಎಂದು ವಾಲಿಸುಗ್ರೀವರ ಪ್ರಸಂಗವನ್ನು ಉದ್ದೇಶಿಸಿ ಹೇಳಿದರೂ ಇದು ಧ್ವನಿರಮ್ಯತೆಗೆ ಎಡೆಮಾಡಿಕೊಡುತ್ತದೆ.

ಕುವೆಂಪು ಅವರು ಶಬರಿಯ ಪಾತ್ರ ನಿರ್ವಹಣೆಯಲ್ಲಿ ಎಲ್ಲಿಯೂ ಲೌಕಿಕವನ್ನು ಮರೆಯುವುದಿಲ್ಲ. ಆಕೆಯನ್ನು ನಿಸರ್ಗ ಸಹಜವಾಗಿ ಚಿತ್ರಿಸಿದ್ದಾರೆ. ಸಾಮಾನ್ಯವಾಗಿ ವಯೋವೃದ್ಧರಿಗೆ ಶಿಶು ಸಹಜ ಕುತೂಹಲವಿರುತ್ತದೆ. ಇಲ್ಲಿ ಶಬರಜ್ಜಿ ಕೂಡ ಕುತೂಹಲ ತಡೆಯಲಾರದೆ ರಾಮಲಕ್ಷ್ಮಣರು ಸ್ನಾನಕ್ಕೆ ತೆರಳಿದಾಗ ಅವರ ಪೆಟ್ಟಿಗೆಯನ್ನು ಶೋಧಿಸುತ್ತಾಳೆ. ಅದರಲ್ಲಿದ್ದ ಬಿಲ್ಲು ಬತ್ತಳಿಕೆ ನಾರುಬಟ್ಟೆಗಳನ್ನು ಕಂಡು ಅಚ್ಚರಿಯಾದರೂ ತಾನು ಅನೇಕ ವರ್ಷಗಳಿಂದ ನಿರೀಕ್ಷಿಸುತ್ತಿದ್ದ ಭಗವಂತನೇ ಆತನೆನ್ನುವುದು ತಿಳಿಯುವುದಿಲ್ಲ.

ರಾಮಲಕ್ಷ್ಮಣರ ತೇಜಸ್ಸನ್ನು ಗಮನಿಸಿ ಅವರನ್ನು ರಾಜಕುಮಾರರೆಂದು ಭಾವಿಸುತ್ತಾಳೆ. ಮಿಂದು ಬಂದ ಅತಿಥಿಗಳಿಗೆ ರಾಮನಿಗಾಗಿ ನಿತ್ಯವೂ ಅಣಿ ಮಾಡಿ ಇಡುತ್ತಿದ್ದ ಜೇನುತುಪ್ಪ, ಕೆನೆ ಹಾಲು, ನೂಲೆಗೆಣಸು, ಬಾಳೆಹಣ್ಣು, ಸೌತೆ ಪಚ್ಚಡಿ, ಮೊಸರನ್ನ, ಬೆಲ್ಲ ಬೆಣ್ಣೆಗಳನ್ನು ನೀಡುತ್ತಾಳೆ. ಇಲ್ಲಿ ಮತ್ತೊಂದು ಅಂಶ ಗಮನಾರ್ಹ. ಶಬರಿ ತಾನು ತಿಂದು ಎಂಜಲು ಮಾಡಿದ ಹಣ್ಣುಗಳನ್ನೇ ರಾಮನಿಗೆ ಕೊಟ್ಟಳು ಎಂಬ ಮಾತು ರೂಢಿಯಲ್ಲಿದೆ. ವಾಲ್ಮೀಕಿಯಲ್ಲಾಗಲಿ ಕುವೆಂಪು ಅವರಲ್ಲಾಗಲಿ ಈ ಅಂಶವಿಲ್ಲ.

ಶಬರಿಯ ಮಾತೃಹೃದಯವನ್ನು ವ್ಯಕ್ತಪಡಿಸುವುದಕ್ಕಾಗಿ ಕುವೆಂಪು ಅವರು ವಾಲ್ಮೀಕಿಯಲ್ಲಿಲ್ಲದ ಅನೇಕ ಸಂಗತಿಗಳನ್ನು ಸೃಷ್ಟಿಸುತ್ತಾರೆ. ಉದಾಹರಣೆಗೆ: ರಾಮಲಕ್ಷ್ಮಣರಿಗೆ ಬಡಿಸುವಾಗ ಶಬರಿ-ಯಾರಿಗೋ ಸಲ್ಲಬೇಕಾಗಿದ್ದುದು ಮತ್ತಾರಿಗೋ ಸಲ್ಲುತ್ತಿದೆ. ಆದರೂ ತೃಪ್ತಿಯಾಗಿ ಉಂಡು ತಣಿಯಿರಿ ಮಕ್ಕಳೆ, ಬಂದ ಅತಿಥಿ ಯಾರಾದರೇನಂತೆ ಎನ್ನುತ್ತಾಳೆ. ಲಕ್ಷ್ಮಣ ಆಕೆಯನ್ನು ಈ ಊಟ ಯಾರಿಗೆ ಮೀಸಲಾಗಿತ್ತು ಎಂದಾಗ ಶಬರಿ ‘ಲಕ್ಷ್ಮಣಾಗ್ರಜನವಂ ನೆಲವೆಣ್ಮಗಳಿಗಿನಿಯನಯ್‌’ ಎಂದು ಹೇಳುತ್ತಾರೆ. ಇಲ್ಲಿ ಕುವೆಂಪು ರಾಮನನ್ನು ಲಕ್ಷ್ಮಣನ ಅಣ್ಣನಾಗಿ ಸೀತೆಯ ಗಂಡನಾಗಿ ಗುರುತಿಸಲು ಇಚ್ಛಿಸಿರುವುದೂ ತುಂಬಾ ಭಿನ್ನವಾಗಿದೆ. ಕುವೆಂಪು ತಮ್ಮನ್ನು ‘ಹೇಮಿಗಂಡ’ನೆಂದು ಗುರುತಿಸಿಕೊಂಡದ್ದು ಇಲ್ಲಿ ನೆನಪಿಗೆ ಬರುತ್ತದೆ.

ರಾಮನೇ ರಾಮನಿಂದೆ ಮಾಡಿದಾಗ, ನನ್ನನ್ನು ನಾನು ಅರಿಯೆನೆ ಎಂದಾಗ ಕೂಡ ಶಬರಿ ರಾಮನನ್ನು ಗುರುತಿಸುವಲ್ಲಿ ಅಸಮರ್ಥಳಾಗುತ್ತಾಳೆ. ರಾಮಭಕ್ತೆಯಾದ ಈಕೆ ರಾಮನಿಂದೆ ಕೇಳಲಾರಳು. ಮುಂದೆ ಕನಸಿನ ತಂತ್ರದ ಮೂಲಕ ಕುವೆಂಪು ಅವರು ಈಕೆಗೆ ಭಗವದ್ದರುಶನ ಮಾಡಿಸುತ್ತಾರೆ. ಶಬರಿಯ ಆತಿಥ್ಯದಿಂದ ತೃಪ್ತನಾಗಿ ರಾಮ ಮಲಗಿದ್ದಾಗ ‘ಸೀತೆ ಬಾ ಇಲ್ಲಿ, ಪ್ರಿಯೆ’ ಎಂದು ಕನವರಿಸಿ ಮುಗುಳ್ನಗುವುದನ್ನು ನೋಡಿದ ಶಬರಿಗೆ ಕನಸಿನ ರಾಮ ಈತನೇ ಎಂಬುದು ಖಾತ್ರಿಯಾಗುತ್ತದೆ.

ಹೀಗೆ ಭಗವದ್ದರುಶನ ಮಾಡಿಸಿರುವಲ್ಲಿ ವಿನೂತನ ತಂತ್ರವಿದೆ. ಈ ಮೂಲಕವೇ ಸೀತಾಪಹರಣವಾದ ಸೂಚನೆಯೂ ದೊರೆಯುತ್ತದೆ. ಕನಸಿನಿಂದ ಎಚ್ಚರಗೊಂಡಾಗ ರಾಮ ಶಬರಿಯ ಮಡಿಲಲ್ಲಿ ಶಿಶುವಾಗಿ ವಾತ್ಸಲ್ಯದ ಸವಿಯನ್ನು ಅನುಭವಿಸುತ್ತಾನೆ. ಸೀತೆಯ ವೃತ್ತಾಂತವನ್ನು ತಿಳಿಸಿ ಬಿಕ್ಕಿ ಬಿಕ್ಕಿ ಅಳುತ್ತ ಹೃದಯದಲ್ಲಿ ಮಡುಗಟ್ಟಿದ್ದ ದುಃಖವನ್ನು ಹೊರಹಾಕುತ್ತಾನೆ. ಈ ಸಂದರ್ಭದಲ್ಲಿ ರಾಮನಿಗೆ ಶಬರಿಯ ಸಾನಿಧ್ಯ ಎಷ್ಟು ಅವಶ್ಯಕವಾಗಿತ್ತೆಂಬುದನ್ನು ಮನಗಾಣಿಸಿದ್ದಾರೆ.

ರಾಮಾಯಣ ದರ್ಶನಂನಲ್ಲಿ ಶಬರಿಯ ಪಾತ್ರದ ಆಶಯವನ್ನು ವಿಸ್ತರಿಸುವ ಮತ್ತೊಂದು ಸನ್ನಿವೇಶವೆಂದರೆ ರಾಮ, ಸೀತಾ ಶೋಕವನ್ನು ತಾಳಲಾರದೆ ರೋಗಗ್ರಸ್ತನಾಗಿ ಹಾಸಿಗೆ ಹಿಡಿದ ಪ್ರಸಂಗ. ಶಬರಿಯ ರಾಮಭಕ್ತಿ ಪ್ರಕಟವಾಗುವುದಕ್ಕೂ ಈ ಪ್ರಸಂಗ ಇಂಬು ನೀಡುತ್ತದೆ. ರಾಮನ ಸ್ಥಿತಿಯನ್ನು ನೋಡಿ ಈಕೆ ಹಗಲಿರುಳೆನ್ನದೆ ಶುಶ್ರೂಷೆ ಮಾಡುತ್ತಾಳೆ.

ಹಗಲಿರುಳೆನ್ನದೆಯೆ
ಮೇಣೆಚ್ಚರೆನ್ನದೆ ನಿದ್ದೆಯೆನ್ನದೆ ನಿರಂತರಂ
ರಾಮಸೇವಾಸಾಧನೆಗೆ ಸವೆಸಿದಳ್ ಮುದುಕಿ
ತನ್ನಾಯುವಂ, ಕೇಳುವಳು ಹಾಸಗೆಯ ಬಳಿಯೆ
ಕುಳಿತು, ರಾಮನ ಮೆಯ್ಯನೆಳವುತ್ತದೆ, ವನವಾಸದಾ
ಕಥೆಯೆಲ್ಲಮಂ; ಅಂತೆ ಸಂತೈಸುವಳು ಮನೋ
ವ್ಯಥೆಯಲ್ಲಮಂ ದೈತ್ಯವಾಕ್ಯಂಗಳಿಂ

ರಾಮ ದೈವಾಂಶಸಂಭೂತನಾದರೂ ಆತ ಸೀತೆಯಿಲ್ಲದೆ ದಿಕ್ಕುಗೆಟ್ಟಿದ್ದಾನೆ. ಶಬರಿ ತನ್ನ ತಪದ ಮಹಿಮೆಯಿಂದ ಭಗವಂತನನ್ನು ಸಂತೈಸುವ ಮಟ್ಟಕ್ಕೆ ಏರಿದ್ದಾಳೆ. ಈ ಸನ್ನಿವೇಶದಲ್ಲಿ ಕುವೆಂಪು ಅವರು ಮನಶ್ಶಾಸ್ತ್ರದ ಅಂಶಗಳನ್ನೂ ಸೇರಿಸಿದ್ದಾರೆ. ಮನೋರೋಗಿಗೆ ನೀಡುವ ಚಿಕಿತ್ಸೆಯೆಂದರೆ ಪ್ರೀತಿ. ಇಲ್ಲಿ ಅದನ್ನು ನೀಡುತ್ತಿರುವವಳು ಶಬರಿ. ಆದರೂ ರಾಮನ ರೋಗ ಶಮನಗೊಳ್ಳದೆ ಉಲ್ಬಣಿಸುತ್ತ ಲಕ್ಷ್ಮಣನನ್ನು ಆತಂಕಕ್ಕೆ ಗುರಿಮಾಡುತ್ತದೆ. ಆಗ ಶಬರಿ ಲಕ್ಷ್ಮಣನನ್ನು ಸಮಾಧಾನಪಡಿಸಿ “ನಿನ್ನ ಅಣ್ಣನ ಪ್ರಾಣಕ್ಕೆ ನಾನು ಹೊಣೆಗಾರ್ತಿಯಾಗಿ ಗುರುಕೃಪೆಯಿಂದ ರಾಮನ ರೋಗವನ್ನೆಲ್ಲ ಹೀರುತ್ತೇನೆ” ಎಂದು ಆಶ್ವಾಸನೆ ನೀಡುತ್ತಾಳೆ. ಈ ಭಾಗ ವಾಲ್ಮೀಕಿಯಲ್ಲಿಲ್ಲ. ಕುವೆಂಪು ಅವರು ನೂತನವಾಗಿ ರಚಿಸಿದ್ದು. ಶಬರಿ ಗುರುವನ್ನು ಧ್ಯಾನಿಸುತ್ತ ರಾಮ ಮಲಗಿದ್ದ ಹಾಸಿಗೆಗೆ ಪ್ರದಕ್ಷಿಣೆ ಬಂದು ನಮಸ್ಕರಿಸುತ್ತಾಳೆ. ಮರುದಿನವೇ ರಾಮನರೋಗ ಶಬರಿಗೆ ಪಲ್ಲಟವಾಗುತ್ತದೆ. ಶಬರಿ ಹಾಸಿಗೆ ಹಿಡಿಯುತ್ತಾಳೆ. ರಾಮ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾನೆ. ಶಬರಿ ರಾಮನ ರುಜೆಯನ್ನು ಹೀರಿಕೊಳ್ಳುವುದು ಶಿವ ವಿಷವನ್ನು ಕಂಠದಲ್ಲಿ ಧರಿಸಿದುದಕ್ಕೆ ಸಮನಾಗಿದೆ. ಇಲ್ಲೆಲ್ಲ ಶಬರಿ ದೈವೀ ಚೈತನ್ಯವಾಗಿ ಗೋಚರಿಸುತ್ತಾಳೆ.

ಈ ಸನ್ನಿವೇಶ ಕೂಡ ವಾಲ್ಮೀಕಿಯಲ್ಲಿಲ್ಲ. ಹೀಗೆ ಒಬ್ಬರ ರೋಗವನ್ನು ಮತ್ತೊಬ್ಬರು ಧರಿಸಿದ ಹಲವು ಪ್ರಕರಣಗಳು ಪುರಾಣ ಮತ್ತು ಇತಿಹಾಸದಲ್ಲಿ ಕಂಡು ಬರುತ್ತವೆ. ಮಹಾಭಾರತದಲ್ಲಿ ಪುರು ತನ್ನ ತಂದೆ ಯಯಾತಿಗೆ ಯೌವನ ನೀಡಿ ಆತನ ಮುಪ್ಪು ಸ್ವೀಕರಿಸುವುದು ಇತ್ಯಾದಿ ಜನಜನಿತ ಅಂಶಗಳು ಕುವೆಂಪು ಅವರಿಗೆ ಪ್ರೇರಣೆ ನೀಡಿರಬಹುದೆ?

ಶಬರಿ ಹಾಸಿಗೆ ಹಿಡಿದಾಗ ರಾಮ ಆಕೆಯನ್ನು ಅನನ್ಯವಾಗಿ ಉಪಚರಿಸುವನು. ಆಕೆ ‘ಹಣ್ಣೆಲೆಗೇಕೆ ಇಂಥ ಉಪಚಾರ. ನೀನು ಮಾಡುವ ಕೆಲಸ ಬೆಟ್ಟದಷ್ಟಿದೆ’ ಎಂದು ಸೀತಾನ್ವೇಷಣೆಗೆ ತೊಡಗುವಂತೆ ಸೂಚಿಸುವಳು.

ಕನಸು ಮತ್ತು ವಾಸ್ತವಗಳ ಕಣ್ಣಮುಚ್ಚಾಲೆಯಲ್ಲಿ ಸಾಗುವ ಕುವೆಂಪು ಅವರ ಶಬರಿಯ ಪ್ರಸಂಗದಲ್ಲಿ ಆಕೆ ಕನಸಿನಲ್ಲಿ ಲಂಕೆಯ ಉದ್ಯಾನದಲ್ಲಿ ಸೊರಗಿದ್ದ ಸೀತೆಯನ್ನು ಕಾಣುವಂಥ ದಾರ್ಶನಕಿ, ದಿವ್ಯದೃಷ್ಟಿ ಉಳ್ಳವಳು. ಈ ಸಂಗತಿಯನ್ನು ಆಕೆ ರಾಮನಿಗೆ ತಿಳಿಸಿ ಕಾರ್ಯ ಸಾಧನೆಗಾಗಿ ಸುಗ್ರೀವರ ಸಖ್ಯ ಬೆಳೆಸುವಂತೆ ಹೇಳುತ್ತಾಳೆ. ವಾಲ್ಮೀಕಿಯಲ್ಲಿ ಕಬಂಧನು ರಾಮನಿಗೆ ಸುಗ್ರೀವನ ವೃತ್ತಾಂತವನ್ನು ತಿಳಿಸುತ್ತಾನೆ. ಕುವೆಂಪು ಅವರ ಈ ಮಾರ್ಪಾಟಿನಿಂದ ಇಲ್ಲಿನ ಶಬರಿ ವರ್ತಮಾನದಲ್ಲಿ ನಿಂತು ಭವಿಷ್ಯವನ್ನು ಕಾಣುವಂಥವಳು. ರಾಮನಿಗೆ ಹರಸಿ ಅವರನ್ನು ನೋಡುತ್ತ ಕಣ್ಮುಚ್ಚುತ್ತಾಳೆ. ವಾಲ್ಮೀಕಿಯಲ್ಲಿ ಅಗ್ರಿಗೆ ಸಮರ್ಪಿಸಿಕೊಂಡಳೆಂದಿದೆ.

ಹೀಗೆ ಕುವೆಂಪು ಅವರು ಪ್ರಾರಂಭದಿಂದಲೂ ಶಬರಿಯ ಪಾತ್ರವನ್ನು ಉನ್ನತಗೊಳಿಸಲು ಸಾಗಿದ್ದಾರೆ. ಮೂಲದಲ್ಲಿ ಬಿಂದುರೂಪವಾಗಿ ಗೋಚರಿಸಿದ ಶಬರಿ ರಾಮಾಯಣ ದರ್ಶನಂನಲ್ಲಿ ಕಾವ್ಯದ ಜೀವನಾಡಿಯಾಗಿ ಬಂದಿದ್ದಾಳೆ. ವಾಲ್ಮೀಕಿ ರಾಮಾಯಣದಲ್ಲಿ ಪುಟ್ಟ ಪುಟ್ಟ ಪಾತ್ರಗಳ ಬೆಳವಣಿಗೆಗೆ ದೊರೆತ ಪೋಷಣೆ ಕಮ್ಮಿ. ಕುವೆಂಪು ಅವರಲ್ಲಿ ಸಣ್ಣ ಸಣ್ಣ ಪಾತ್ರಗಳೂ ಪರಿಪೂರ್ಣತೆಯನ್ನು ಪಡೆದುಕೊಂಡಿವೆ. ವಾಲ್ಮೀಕಿಯಲ್ಲಿ ಮಿಂಚಿ ಮರೆಯಾಗುವ ಶಬರಿ ಕುವೆಂಪು ಅವರಲ್ಲಿ ಮುಂದಿನ ಘಟನೆಗಳಿಗೆ ಆಯಾಮ ನೀಡುತ್ತಾಳೆ. ಪರಮಹಂಸರ ಸಿದ್ಧಾಂತದ ಪ್ರಭಾವ ಮತ್ತು ಸರ್ವ ಸಮನ್ವಯ ದೃಷ್ಟಿಯಿಂದ ಶಬರಿ ರಾಮಾಯಣದರ್ಶನಂನಲ್ಲಿ ಮರು ಹುಟ್ಟು ಪಡೆದಿದ್ದಾಳೆ.

ಪಾತ್ರಕ್ಕಿದ್ದ ಚೌಕಟ್ಟನ್ನು ಮೀರಿ ಬೆಳೆದಿದ್ದಾಳೆ. ಇಲ್ಲಿ ಭಕ್ತೆಯಾಗಿ, ವಾತ್ಸಲ್ಯ ಮಯಿಯಾಗಿ, ಅದ್ಭುತ ಸಾಧಕಿಯಾಗಿ, ತ್ಯಾಗಶೀಲಳಾಗಿ ಮೂರ್ತಿವೆತ್ತಿದ್ದಾಳೆ. ಇಲ್ಲಿ ಆಕೆ ಅನೂಹ್ಯ ಲೋಕದ ಆಗಂತುಕಳಂತೆ ಕಂಡು ಬರದೆ ನಾವು ನೋಡಿದ ಅಜ್ಜಿಯಂತೆ ಆಪ್ತಳಾಗುತ್ತಾಳೆ. ಆಕೆಯ ವಿಶಿಷ್ಟತೆ ಇರುವುದು ತಪಸ್‌ಶಕ್ತಿಯಲ್ಲಿ. ಶಬರಿಯು ರಾಮನ ರುಜೆಯನ್ನು ತನ್ನ ಯೋಗಿಕ ಶಕ್ತಿಯಿಂದ ಆವಾಹನ ಮಾಡಿ ರಾಮತ್ವದ ವಿಕಾಸಕ್ಕೆ ಕಾರಣಳಾಗುತ್ತಾಳೆ. ಮುಂದಿನ ಶುಭ ಘಟನೆಗಳಿಗೆ ಮುಂಬೆಳಗಾಗಿ ಕಂಡು ಬರುತ್ತಾಳೆ.

ರಾಮನ ದೈಹಿಕ ಮತ್ತು ಮಾನಸ ಲೋಕವನ್ನು ಬೆಳಗುವ ಜೀವಶಕ್ತಿ ಶಬರಿ. ಕುವೆಂಪು ಅವರು ಈ ಪಾತ್ರದ ಮೂಲಕ ಹೆಣ್ಣನ್ನು ಬಹಳ ಆದರದಿಂದ ಗೌರವದಿಂದ ಉಪಾಸಕಭಾವದಿಂದ ಕಂಡಿದ್ದಾರೆ. ಸ್ತ್ರೀಸತ್ವದ ಅಗಾಧ ಆಯಾಮಗಳನ್ನು ಈ ಪಾತ್ರದ ಮೂಲಕ ಅಭಿವ್ಯಕ್ತಿಸಿದ್ದಾರೆ.

ಇಲ್ಲಿಯೇ ಅವರು ತಮ್ಮ ಇತರ ಸಮಕಾಲೀನ ಕವಿಗಳಿಗಿಂತ ಪ್ರತ್ಯೇಕವಾಗಿ ತೋರುತ್ತಾರೆ. ಶಬರಿಯ ಪಾತ್ರದಲ್ಲಿ ಹೆಣ್ತನದ ಅಂತಃಸತ್ವವನ್ನು ನೂತನವಾದ ರೀತಿಯಲ್ಲಿ ನಿರೂಪಣಿ ಹೊಸದರ್ಶನ ಕೊಟ್ಟಿದ್ದಾನೆ. ಹೆಣ್ಣು ಇಲ್ಲಿ ಅವರ ಕಾವ್ಯ ತತ್ವದ ಕೇಂದ್ರ ಆಶಯವಾಗಿ ವಿರಾಜಿಸಿದ್ದಾಳೆ. ವಾಲ್ಮೀಕಿಯಲ್ಲಿ ಶಬರಿಯ ಪ್ರಸಂಗ ರಾಮಕೇಂದ್ರಿತವಾಗಿದ್ದರೆ ಕುವೆಂಪು ಅವರಲ್ಲಿ ಶಬರಿಕೇಂದ್ರಿತವಾಗಿ ಕಾಣಿಸಿಕೊಳ್ಳುತ್ತದೆ.

* * *

 

[1] ಶ್ರಮಣೀ ಶಬರೀ ಕಾಕುತ್‌ಸ್ಥ ಚಿರಜೀವಿನೀ ತ್ಯಾಂತು ಧರ್ಮೇಸ್ಥಿತಾ ನಿತ್ಯಂ ಸರ್ವಭೂತಂ ನಮಸ್ಕ್‌ಋತಂ (ಅರಣ್ಯಕಾಂಡೇ ತ್ರಿಸಪ್ತತಿ ತಮಸ್ಸರ್ಗಃ)