ಕುವೆಂಪು ಕನ್ನಡದ ಪ್ರಮುಖ ‘ಸ್ವತಂತ್ರ ಲೇಖಕ. ಅವರ ಒಟ್ಟು ಸಾಹಿತ್ಯದಲ್ಲಿ ಭಾಷಾಂತರದ ಪ್ರಮಾಣ ಹೆಚ್ಚಿನದಲ್ಲ. ವರ್ಡ್ಸೆವತ್‌, ಟೆನಿಸನ್‌ ಮುಂತಾದ ರಮ್ಯಕವಿಗಳ ಕೆಲವು ಕವಿತೆಗಳಲ್ಲದೆ, ಷೇಕ್ಸಪಿಯರ್‌ನ ಟೆಂಪೆಸ್ಟ್‌ ಮತ್ತು ಹ್ಯಾಮ್ಲೆಟನ್ನು ರೂಪಾಂತರಿಸಿರುವ ಕುವೆಂಪು ಅವರ ಭಾಷಾಂತರ ಕುರಿತ ಚಿಂತನೆಗಳು ಮಾತ್ರ ಕುತೂಹಲಕಾರಿಯಾದವಾಗಿವೆ. ಕುವೆಂಪು ಅವರ ಭಾಷಾಂತರ ಚಿಂತನೆಯನ್ನು ಎರಡು ನೆಲೆಯಿಂದ ಪರಿಶೀಲಿಸಬಹುದಾಗಿದೆ. ೧. ಸ್ವತಃ ಭಾಷಾಂತರಕಾರರಾಗಿ ಕುವೆಂಪು ಅನುಸರಿಸಿದ ಮಾದರಿ, ೨. ಭಾಷಾಂತರದ ಬಗ್ಗೆ ಅವರು ವ್ಯಕ್ತಪಡಿಸಿರುವ ವಿಚಾರಗಳು

೧. ಭಾಷಾಂತರ ಕುವೆಂಪು ನಿಲುವು:

ಭಾಷಾಂತರಕಾರ ಕುವೆಂಪು ನೇರ ಭಾಷಾಂತರದಲ್ಲಿ ಆಸಕ್ತರಾದವರಲ್ಲ. ಭಾಷಾಂತರದ ಮೂಲಕ ಕನ್ನಡದ ಸತ್ವವನ್ನು ಹೆಚ್ಚಿಸಬಹುದೆಂಬ ಆಶಯವಿದ್ದಾಗಲೂ ಭಾಷಾಂತರದಲ್ಲಿ ಮರುಬರವಣಿಗೆ ಮತ್ತು ಅಳವಡಿಕೆಯ ಮಾದರಿಗಳನ್ನು ಸ್ವೀಕರಿಸಿದವರು. ಶೆಲ್ಲಿಯ ಕಾವ್ಯ ಸಮರ್ಥನೆ, ಲಾಜೇನಸನ ಭವ್ಯತೆಯ ಸಿದ್ಧಾಂತದಂತಹ ತಾತ್ವಿಕ ಚರ್ಚೆಗಳನ್ನು ಕೂಡ ಕುವೆಂಪು ಭಾಷಾಂತರಿಸುವ ಬದಲು ಕನ್ನಡದ ಸಂದರ್ಭಕ್ಕೆ ಅನುವಾದಿಸಲು ಪ್ರಯತ್ನಿಸಿದ್ದಾರೆ.[1] ರಾಮಾಯಣ ಮತ್ತು ಭಾರತದ ಕತೆಗಳನ್ನು ‘ಆಧುನಿಕ’ ಆಶಯಗಳಿಗನುಗುಣವಾಗಿ ಪುನರ್ಲೆಕ್ಕಿಸುವ ಮೂಲಕ ಭಾಷಾಂತರದ ‘ಮೂಲನಿಷ್ಠತೆ’ಯ ಪರಿಕಲ್ಪನೆಯನ್ನು ಬಿಟ್ಟುಕೊಟ್ಟವರಾಗಿದ್ದಾರೆ.

ಕುವೆಂಪು ಕನ್ನಡ ಪ್ರಮುಖ ‘ಸೃಜನಶೀಲ’ ಲೇಖಕ ಮಾತ್ರವಲ್ಲದೆ, ಸ್ಪಷ್ ರಾಜಕೀಯ ನಿಲುವನ್ನು ಹೊಂದಿರುವ ನಿರ್ಭಿಡೆಯ ಲೇಖಕ ಕೂಡ. ತಮ್ಮ ಐವತ್ತು-ಅರವತ್ತು ವರ್ಷಗಳ ಸುದೀರ್ಘ ಸಾಹಿತ್ಯಕ ಬದುಕಿನಲ್ಲಿ ಕಾಲದಿಂದ ಕಾಲಕ್ಕೆ ಅವರು ಸ್ಪಂದಿಸುತ್ತ ಬಂದ ಕ್ರಮ, ಅವರ ವೈಚಾರಿಕ ಮತ್ತು ‘ಸೃಜನಶೀಲ’ ಬರಹಗಳಲ್ಲಿ ಸಾಕಷ್ಟು ನೇರವಾಗಿಯೇ ವ್ಯಕ್ತಪಡಿಸಿರುವ ಧೋರಣೆಗಳು- ಇವೆಲ್ಲವೂ ಅವರ ಸಾಹಿತ್ಯದ ರಾಜಕೀಯ ನಿಲುವನ್ನು ವ್ಯಕ್ತಪಡಿಸುತ್ತೆ. ಅಂತೆಯೇ ಅವರ ಭಾಷಾಂತರ ಚಟುವಟಿಕೆ ಕೂಡ ಅವರ ರಾಜಕೀಯ ನಿಲುವನ್ನು ಆಧರಿಸಿಯೇ ರೂಪುಗೊಂಡದ್ದಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

ಕನ್ನಡದಲ್ಲಿಲ್ಲದ ಕಥೆಯನ್ನೋ, ವಿಚಾರವನ್ನೋ, ಸಂಸ್ಕೃತಿಯನ್ನೋ ಕನ್ನಡಿಗರಿಗೆ ಪರಿಚಯಿಸುವುದು ಭಾಷಾಂತರದ ಉದ್ದೇಶ ಎನ್ನುವ ಆಶಯವನ್ನು ಹೊಂದಿದ್ದಾಗಿದ್ದರೆ, ಕುವೆಂಪು ರಾಮಾಯಣ, ಮಹಾಭಾರತದಂತಹ ವಿಷಯಗಳನ್ನು ತಮ್ಮ ಕಾವ್ಯದ ನಾಟಕದ ವಸ್ತುವಾಗಿರಿಕೊಳ್ಳುವಲ್ಲಿ ಆಸಕ್ತರಾಗಬೇಕಿದ್ದಿಲ್ಲ. ಆದರೆ ‘ಶ್ರೀ ರಾಮಾಯಣ ದರ್ಶನಂ’ ಪುನರ್ಲೇಖದಲ್ಲಿ ಕುವೆಂಪು ರಾಮಾಯಣದ ಬಗ್ಗೆ ಆಧುನಿಕ ಸಂದರ್ಭದಲ್ಲಿ ಏಕಲವ್ಯನಂತಹ ಕಥಾವಿಷಯವನ್ನು ಆರಿಸಿಕೊಂಡ, ರಮಾಯಣದಲ್ಲಿ ಶಂಭೂಕನ ವೃತ್ತಾಂತದ ಆಯ್ಕೆ ಮಾಡಿಕೊಂಡು ಅದನ್ನು ಆಧುನಿಕ ವಿಚಾರಧಾರೆಗೆ ಮುಖಾಮುಖಿಯಾಗಿಸಿ ನಾಟಕ ರಚಿಸಿದ ಕ್ರಮ ಇತ್ಯಾದಿಗಳೆಲ್ಲವೂ ಭಾಷಾಂತರದ ಪರಿಕರವನ್ನು ಅವರು ಪ್ರಜ್ಞಾಪೂರ್ವಕವಾಗಿ ಬಳಸಿಕೊಂಡದ್ದನ್ನೇ ಸೂಚಿಸುತ್ತದೆ; ಅಂತೆಯೇ ಅವರ ಇಂಗ್ಲಿಷ್‌ ನಾಟಕಗಳ ಅನುವಾದವೂ ಕೂಡ.

ಕುವೆಂಪು ಕನ್ನಡಕ್ಕೆ ತಂದಿರುವ ಎರಡು ನಾಟಕಗಳೂ ಜಗತ್ತಿನ ಶ್ರೇಷ್ಠ ನಾಟಕಕಾರನಾದ ಷೇಕ್ಸಪಿಯರನದಾಗಿದೆ. ೧೯೩೦ರಲ್ಲಿ ಪ್ರಕಟಗೊಂಡಿರುವ ‘ಬಿರುಗಾಳಿ’ (ಮೂಲ: ಟೆಂಪೆಸ್ಟ್‌) ನಾಟಕದ ಮುನ್ನುಡಿಯಲ್ಲಿ ಟಿ. ಎಸ್‌. ವೆಂಕಣ್ಣಯ್ಯನವರು ಆಡಿರುವ ಮಾತುಗಳು ಕುವೆಂಪು ಭಾಷಾಂತರದ ಸ್ವರೂಪವನ್ನು ಸಮರ್ಥವಾಗಿ ವಿವರಿಸುತ್ತವೆ.

ಒಂದು ಭಾಷೆಯಲ್ಲಿರುವ ನಾಟಕವನ್ನು ಇನ್ನೊಂದು ಭಾಷೆಗೆ ತರುವವರು ಮೂಲದಲ್ಲಿ ಇದ್ದುದನ್ನು ಇದ್ದಂತೆ ಶಬ್ದಶಃ ಭಾಷಾಂತರ ಮಾಡಬಹುದು; ಅಥವಾ ಮೂಲದಲ್ಲಿರುವುದನ್ನು ಹೆಚ್ಚು ಬದಲಾಯಿಸದೆ ಅದು ತಾವು ಬರೆಯುವ ಭಾಷೆಯನ್ನಾಡುವ ಜನರ ನಡೆನಡುಗೆ ಹೊಂದುವಂತೆ ಅವಶ್ಯಕವಾದಷ್ಟು ವ್ಯತ್ಯಾಸವನ್ನು ಮಾತ್ರ ಮಾಡಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಮೂಲ ನಾಟಕದ ಭಾವವೆಲ್ಲವೂ ಬರುವಂತೆ ಅನುವಾದಿಸಬಹುದು. ಪುಟ್ಟಪ್ಪನವರು ಈ ಎರಡು ವಿಧಾನಗಳನ್ನು ಅನುಸರಿಸಿಲ್ಲ. ಅವರು ಮೂಲಗ್ರಂಥವನ್ನು ಓದಿ, ಅದನ್ನು ಓದಿದ್ದರಿಂದ ತಮ್ಮ ಮನಸ್ಸಿನಲ್ಲಿ ಉಂಟಾದ ಮುಖ್ಯವಾದ ಚಿತ್ರಗಳನ್ನೂ ಭಾಷಣಗಳನ್ನು ಆಧಾರವಾಗಿಟ್ಟು ಒಂದು ಹೊಸ ನಾಟಕವನ್ನು ನಿರ್ಮಿಸಿರುತ್ತಾರೆ. ಇದನ್ನು ಮೂಲ ನಾಟಕದ ಭಾಷಾಂತರ ಅಥವಾ ಅನುವಾದ ಎಂದು ಹೇಳಲಾಗದು; ಆ ನಾಟಕವನ್ನು ಈ ನಾಟಕ ರಚನೆಗೆ ಪ್ರೇರಕವೆಂದು ಹೇಳಬಹುದು. ಅದರಲ್ಲಿರುವ ಅನೇಕ ಭಾವವಗಳು ರೂಪಾಂತರವನ್ನು ಹೊಂದಿ ಇದರಲ್ಲಿ ಸೇರಿರುವುದು ಸ್ವಾಭಾವಿಕವಾಗಿದೆ. (ಪು. ೪೧೭, ೨೦೦೪)

೧೯೩೨ರಲ್ಲಿ ಪ್ರಕಟಗೊಂಡಿರುವ ರಕ್ತಾಕ್ಷಿ (ಮೂಲ: ಹ್ಯಾಮ್ಲೆಟ್‌) ನಾಟಕದ ಮುನ್ನುಡಿಕಾರರು ಈ ಬಗೆಯ ಮಾತುಗಳನ್ನೇ ಆಡುತ್ತ, ಮೂಲ ನಾಟಕದ ಸಾರವನ್ನು ಹೀರಿಕೊಂಡು ಬಂದ ಹೊಸ ಮಾದರಿಯ ನಾಟಕವಾಗಿಯೇ ಅದನ್ನು ಗುರುತಿಸುತ್ತಾರೆ.

ಶೇಕ್ಸಪೀಯರ್‌ ಮಹಾಕವಿಯ ರೂಪಕ ರತ್ನಗಳಲ್ಲೊಂದಾದ ‘ಹ್ಯಾಂಲೆಟ್‌’ ಸಾರವನ್ನು ಹೀರಿಕೊಂಡು ಅಪೂರ್ವ ತೇಜಸ್ವಿನಿಂದ ಕಳಕಳಿಸುವ ಹೊಸ ಮಾದರಿಯ ಗ್ರಂಥವಾಗಿದೆ. ಇನ್ನು ಮೇಲೆ ಸಂಸ್ಕೃತವು ಮುಪ್ಪಡಸಿದ ಕಾಮಧೇನುವಿನತೆ ಪೂಜಾಯೋಗ್ಯವೆಂದೂ ಸಾಹಿತ್ಯ ಶಿಶುಗಳಿಗೆ ಹಾಲು ಬೇಕಾದರೆ ನಾವು ಸೇಮೆಯ ಹಸುವಿನಂತಿರುವ ಇಂಗ್ಲಿಷನ್ನು ಸಾಕಿ ಕರೆದುಕೊಳ್ಳಬೇಕೆಂದೂ ಹೇಳುವ ಅನುಭವಶಾಲಿಗಳ ಮಾತನ್ನು ಮ|| ಪುಟ್ಟಪ್ಪನವರ ಕಾವ್ಯಗಳು ನಿರ್ವಿವಾದವಾಗಿ ನಿದರ್ಶಿಸುತ್ತಿವೆ. (ಪು. ೫೬೬, ೨೦೦೪)… ಇದು ಕನ್ನಡಕ್ಕೆ ‘ಹ್ಯಾಂಲೆಟ್‌’ ಕಾವ್ಯ. ಇಂಗ್ಲಿಷನಲ್ಲಿ ‘ಹ್ಯಾಂಲೆಟ್‌’ ಹುಟ್ಟಿದಾಗ ಅದರ ಸಾಹಿತ್ಯವು ಅತ್ಯುನ್ನತ ಶಿಖರವನ್ನೇರಿತು. ‘ರಕ್ತಾಕ್ಷಿ’ ಯಂಥ ಶ್ಲಾಘ್ಯ ಸ್ವತಂತ್ರ ಐತಿಹಾಸಿಕ ನಾಟಕವು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹುಟ್ಟಿದಾಗ ಅದರ ಮಟ್ಟವು ಬಹು ಎತ್ತರಕ್ಕೆ ಏರಿರುವುದೆನ್ನುವುದರಲ್ಲಿ ಸಂದೇಹವಿಲ್ಲ. (ಪುಟ. ೫೬೮, ೨೦೦೪)

ಭಾಷಾಂತರಕಾರರಾದ ಕುವೆಂಪು ೧೯೫೬ರಲ್ಲಿ ಬಿರುಗಾಳಿ ನಾಟಕಕ್ಕೆ ಹಿನ್ನುಡಿಯೊಂದನ್ನು ಟಿಪ್ಪಣಿಕೆ ಎಂಬ ಹೆಸರಿನಲ್ಲಿ ಸೇರಿಸುತ್ತ, ತಮ್ಮ ಭಾಷಾಂತರದ ಉದ್ದೇಶವನ್ನು ಸಪಷ್ಟಪಡಿಸುತ್ತಾರೆ.

ಇಲ್ಲಿ ನಿರೂಪಣೆಗೊಂಡಿರುವ ಜೀವನ ದರ್ಶನ ಭಾರತೀಯ ದರ್ಶನದಿಂದ ಅಭಿನ್ನವಾದುದು. ಆದ್ದರಿಂದಲೇ ಪಾತ್ರಸೃಷ್ಟಿ, ಸನ್ನಿವೇಶ ಕಲ್ಪನೆ ಮತ್ತು ನಾಟಕದ ವಾತಾವರಣದ ಭಾರತೀಯ ಸಂಪ್ರದಾಯಕ್ಕೂ ಅಭಿರುಚಿಗೂ ತುಂಬ ಹೊಂದಿಕೊಂಡಿರುವಂತೆ ಕಾಣುತ್ತದೆ. (ಪುಟ.೫೫೫)…. ಈ ಕಾರಣದಿಂದ ‘ಬಿರುಗಾಳಿ’ ‘ಟೆಂಪೆಸ್ಟ್‌’ ನಾಟಕದ ಅನುವಾದವಾದರೂ ಇಂಗ್ಲಿಷ್‌ ಬಾರದ ಜನರಿಗೆ ಸ್ವತಂತ್ರ್ಯ ಕೃತಿಯೆಂದೇ ಕಾಣಬಹುದು. (ಪುಟ. ೫೫೫, ೨೦೦೪).

ಈ ಮಾತುಗಳಂತೂ ನೇರವಾಗಿಯೇ ಕುವೆಂಪು ಎರಡು ಸಂಸ್ಕೃತಿಗಳಲ್ಲಿ ಅಪರಿಚಿತಕ್ಕಿಂತ ಸಾದೃಶ್ಯವನ್ನು ಕಾಣುವುದಕ್ಕೆ, ಆ ಮೂಲಕ ವಿಶ್ವಸ್ಥವನ್ನು ತತ್ವಗಳನ್ನು ನಿರೂಪಿಸುವುದಕ್ಕೆ ಭಾಷಾಂತರ ಚಟುವಟಿಕೆಗಳನ್ನು ಬಳಸುತ್ತಾರೆಂಬುದು ಗೋಚರಿಸುತ್ತದೆ. ತೌಲನಿಕ ಸಾಹಿತ್ಯಾಧ್ಯಯನದ ಮತ್ತು ವಿಶ್ವಸಾಹಿತ್ಯದ ಪರಿಕಲ್ಪನೆಗಳು ಪ್ರಧಾನವಾಗಿ ಕಂಡುಬರುತ್ತಿದ್ದ ಆ ದಿನಮಾನಗಳಲ್ಲಿ ಭಾಷಾಂತರವನ್ನು ಅದರ ಪರಿಕರವಾಗಿ ಬಳಸಿದ್ದು, ಜಾಗತಿಕ ಮಟ್ಟದಲ್ಲಿಯೇ ಕಂಡುಬರುತ್ತದೆ. ಇದಕ್ಕೆ ಅವರ ಕೆಳಗಿನ ಮಾತುಗಳೇ ಸಾಕ್ಷಿಯಾಗಿದೆ.

ಬಿರುಗಾಳಿಯಲ್ಲಿ ಸಾಮ್ರಾಜ್ಯಶಾಹಿಯ ರಾಷ್ಟ್ರೀಯ ಮನೋಭಾವನೆಗಳನ್ನು ಮಾತ್ರ ನಾವು ಗುರುತಿಸಿದರೆ ಅದು ವಿಶ್ವಕೃತಿಯ ಮಟ್ಟಕ್ಕೆ ಏರುವುದಿಲ್ಲ. ಸರ್ವಕಾಲ ಸರ್ವದೇಶ ಮಾನ್ಯವಾಗುವ ವಿಶ್ವತತ್ವಗಳ ಪ್ರತಿಮೆಗಳನ್ನು ಗುರುತಿಸುವುದರಿಂದ ನಾಟಕ ಕೃತಿಗೆ ವಿಶ್ವತತ್ವ ಮತ್ತು ಶಾಶ್ವತತ್ವ ಒದಗುವಂತಾಗುತ್ತದೆ (ಪು. ೫೫೭, ೨೦೦೪).

ಕುವೆಂಪು ಭಾಷಾಂತರ ಕುರಿತಂತೆ ನೇರವಾಗಿ ಮಾತನಾಡಿರುವ ಇನ್ನೊಂದು ಮುಖ್ಯ ಸಂದರ್ಭವಿದೆ. ಅದು ಮೈಸೂರು ವಿಶ್ವವಿದ್ಯಾಲಯದ ಪಠ್ಯಪುಸ್ತಕ ಮಾಲೆಯ ಪ್ರಧಾನ ಸಂಪಾದಕರಾಗಿ ಅವರು ಬರೆದಿರುವ ಪ್ರಧಾನ ಸಂಪಾದಕರ ಮಾತುಗಳು.

ವೈಜ್ಞಾನಿಕ ಅಥವಾ ಪಾರಿಭಾಷಿಕ ವಿಷಯಗಳಿಗೆ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸುವ ಸಂಕಟಕ್ಕೆ ಗುರಿಯಾಗಬೇಕಾಗಿಲ್ಲ. ಅಂತರ ರಾಷ್ಟ್ರೀಯ ಶಬ್ದಗಳನ್ನೇ ಇದ್ದಕ್ಕಿದ್ದ ಹಾಗೆಯೇ ಬಳಸಿಕೊಳ್ಳಬಹುದು. ಪಾರಿಭಾಷಿಕ ಶಬ್ದಗಳು ವಾಸ್ತವವಾಗಿ ಅಂಕಿತನಾಮಗಳೇ ತಾನೆ!… ಅಂತಾರಾಷ್ಟ್ರೀಯ ಪಾರಿಭಾಷಿಕ ಶಬ್ದಗಳನ್ನು ಬಿಡುವುದಿಲ್ಲವಾದುದರಿಂದ, ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯನ್ನು ಎಲ್ಲಾ ವಿದ್ಯಾರ್ಥಿಗಳು ಒಂದಲ್ಲ ಒಂದು ರೀತಿಯಲ್ಲಿ ಕಲಿಯಬೇಕಾಗಿರುವುದರಿಂದಲೂ ವಿದ್ವಾಂಸರ ಸಂಪರ್ಕಕ್ಕಾಗಲೀ, ಸರ್ಕಾರಿ ನೌಕರರ ವಿನಿಮಯಕ್ಕಾಗಲೀ ಅಡಚಣೆ ಆಗುವುದಿಲ್ಲ. ಈ ದೊಡ್ಡ ರಾಷ್ಟ್ರದಲ್ಲಿ ಸರ್ಕಾರಿ ನೌಕರರ ಸಂಖ್ಯೆ ಅತ್ಯಲ್ಪ ಭಾಗವೆನ್ನುವುದನ್ನೂ, ಈ ಅತ್ಯಲ್ಪ ಸಂಖ್ಯೆಯ ಸರ್ಕಾರಿ ನೌಕರರ ಹಿತಕ್ಕಾಗಿ ಇಡೀ ರಾಷ್ಟ್ರದ ಕಲ್ಯಾಣವನ್ನು ಬಲಿಗೊಡುವುದು ಸರಿಯಲ್ಲವೆಂಬುದನ್ನೂ ಮರೆಯಬಾರದು.[2]

ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಕುವೆಂಪು ಒಬ್ಬ ಶಿಕ್ಷಣತಜ್ಞರಾಗಿ, ಆಡಳಿತ ಅಧಿಕಾರಿಯಾಗಿ ಇಲ್ಲಿ ಭಾಷಾಂತರವನ್ನು ನೋಡುವ ಕ್ರಮ ಕವಿಕುವೆಂಪುವಿನ ದೃಷ್ಟಿಕೋನಕ್ಕಿಂತ ಸ್ವಲ್ಪ ಭಿನ್ನವಾದುದಾಗಿದೆ. ಇಷ್ಟಾಗಿಯೂ ಇಲ್ಲಿಯೂ ಯಥಾವತ್‌ ಅನುವಾದದ ನಿಷ್ಠೆಯೇನು ಕಂಡುಬರುವುದಿಲ್ಲ. ಈ ಮುನ್ನುಡಿಯಲ್ಲಿ ಕುವೆಂಪು ಭಾಷಾಂತರದ ಮೂಲಕ ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಬಯಸುತ್ತಾರೆ. ಅವುಗಳೆಂದರೆ.

೧. ಕನ್ನಡ ಭಾಷೆ ಮತ್ತು ಸಮುದಾಯದ ಉಳಿವು ಮತ್ತು ಬೆಳವಣಿಗೆಯ ಪ್ರಶ್ನೆ. ಅದಕ್ಕಾಗಿ ದೇಶಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿ ಬೆಳೆಸುವ ಕೆಲಸದಲ್ಲಿ, ಸಮುದಾಯದ ಸಾಮಾನ್ಯಜನರ, ಜನನಾಯಕರ ತಿಳುವಳಿಕೆಯನ್ನು ಹೆಚ್ಚಿಸುವ ಕೆಲಸದಲ್ಲಿ ಭಾಷಾಂತರದ ಪಾತ್ರ ಮುಖ್ಯವಾದುದು.

೨. ಕನ್ನಡ ಭಾಷೆ ಮತ್ತು ಸಮುದಾಯವನ್ನು ಅನ್ಯದೊಂದಿಗೆ ಅನುಸಂಧಾನಕ್ಕೆ ಸಜ್ಜಾಗಿಸುವುದರಲ್ಲಿ ಭಾಷಾಂತರ ಒಂದು ಭಾಷೆಯ, ಸಮುದಾಯದ ತನ್ನತನವನ್ನು ಉಳಿಸಿಕೊಳ್ಳುವ ಹಾಗೂ ಅನ್ಯತನವನ್ನು ಅರಗಿಸಿಕೊಳ್ಳುವ ಎರಡೂ ಕೆಲಸಕ್ಕೂ ಅಗತ್ಯವಾದುದಾಗಿದೆ.

ಭಾಷಾಂತರಕ್ಕೆ ಅವರು ಮೇಲಿನ ಎರಡು ಜವಾಬ್ದಾರಿಯನ್ನು ವಹಿಸುವುದರಿಂದಲೇ ಅವರು ಪಾರಿಭಾಷಿಕ ಪದಗಳಿಗೆ ಕನ್ನಡದ ರೂಪಗಳನ್ನು ಹುಡುಕಿಯೇ ತೀರುವ ಹಠ ಬೇಕಿಲ್ಲವೆನ್ನುತ್ತಾರೆ. ಅರ್ಥಾತ್‌ಕುವೆಂಪು ಭಾಷಾಂತರದಲ್ಲಿನ ‘ಲಾಗ್ವೇಜ್‌ ಫೆನಟಿಸಂ’ಅನ್ನು ನಿರಾಕರಿಸುತ್ತಾರೆ.

ಸಾಹಿತ್ಯ ಚಿಂತಕ ಕುವೆಂಪು

ಕುವೆಂಪು ಅವರ ಕೆಲವು ಲೇಖನಗಳು ನೇರವಾಗಿ ಭಾಷಾಂತರವನ್ನು ಕುರಿತದ್ದಲ್ಲವಾದರೂ ಅವುಗಳನ್ನು ನಾವು ಭಾಷಾಂತರ ನೆಲೆಯಿಂದ ಅರ್ಥೈಸುವ ಸಾಧ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ ಮುಖ್ಯವಾದುದು ‘ಕವಿಕೃತಿಯ ಅನನ್ಯ ಪರತಂತ್ರತೆ’ ಎಂಬ ಲೇಖನ. ಈ ಲೇಖನ ನೇರವಾಗಿ ಭಾಷಾಂತರ ಕುರಿತು ಚರ್ಚಿಸಿದ್ದರೂ, ‘ಸ್ವತಂತ್ರ’ ಮತ್ತು ಭಾಷಾಂತರ ಎಂಬ ಎರಡು ದ್ವಿವೈರುಧ್ಯ ಪರಿಕಲ್ಪನೆಗಳನ್ನು ‘ಸ್ವತಂತ್ರ’ ‘ಪರಂತಂತ್ರ’ ‘ಅನ್ಯಪರತಂತ್ರ’ ಮತ್ತು ‘ಅನನ್ಯ ಪರತಂತ್ರ’ ಎಂಬ ನಾಲ್ಕು ಪರಿಕಲ್ಪನೆಗಳ ಮೂಲಕ ಒಡೆದು ವಿವರಿಸಲು ಯತ್ನಿಸುತ್ತದೆ. ಅದರ ಪ್ರಕಾರ ‘ಸ್ವತಂತ್ರ ಕೃತಿಯೊಂದು ಇರಲು ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲ ಕೃತಿಗಳು ಲೋಕವಸ್ತು, ಲೋಕಾನುಭವ ಮತ್ತು ಲೋಕಭಾವಗಳನ್ನು ಬಂಡವಾಳವಾಗಿ ಇಟ್ಟುಕೊಂಡದ್ದೆ. ಹಾಗೆಯೇ ಅದನ್ನು ಸಂಪೂರ್ಣವಾಗಿ ‘ಪರತಂತ್ರ’ವೆಂದೂ ಕರೆಯಲಾಗದು.[3] ಹಾಗಿದ್ದರೆ ಈ ಎರಡೂ ಅಲ್ಲ ಎನ್ನುವುದಾದರೆ ಅದು ಏನು? ಎನ್ನುವ ಪ್ರಶ್ನೆಗೆ ಕುವೆಂಪು ‘ಅನ್ಯ ಪರತಂತ್ರ’ ಮತ್ತು ‘ಅನನ್ಯ ಪರತಂತ್ರ’ ಎಂಬ ಎರಡು ಪರಿಕಲ್ಪನೆಗಳನ್ನು ರೂಪಿಸಿ ಬಳಸುತ್ತಾರೆ. ಅವರ ಪ್ರಕಾರ ಈ ಎರಡು ಪರಿಕಲ್ಪನೆಗಳು ಭಾಷಾಂತರ ಮತ್ತು ‘ಸ್ವತಂತ್ರ’ ಕೃತಿಗಳನ್ನು ಸೂಚಿಸುವುದಾಗಿದೆ.

‘ಅನ್ಯಪರತಂತ್ರ’ ಎಂದರೆ ಯಾವ ಕಾವ್ಯದ ತಂತ್ರವು ಇನ್ನೊಬ್ಬರ ಪರವಾಗಿ ಮಾತ್ರ ಎಂದರೆ ಇನ್ನೊಬ್ಬರು ಹೆಜ್ಜೆಯಲ್ಲಿ, ಹಾಕಿಕೊಟ್ಟ ಹಾದಿಯಲ್ಲಿ, ಗುರುತು ಮಾಡಿದ ಗೆರೆಯಲ್ಲಿ ಒಂದಿನಿತೂ ಅತ್ತ ಇತ್ತ ಅಲುಗದೆ ಚಲಿಸುವುದು ಎಂದರ್ಥ. ಇಲ್ಲಿ ನಿರ್ಬಂಧವನ್ನು ಒಪ್ಪಿಕೊಳ್ಳುವ ಮುನ್ನ ಯಾವ ಬಲಾತ್ಕಾರವೂ ಇರುವುದಿಲ್ಲ.

ಅಂತಹ ಒಪ್ಪಿಗೆ ಕೊಡುವುದಕ್ಕೂ ಬಿಡುವುದಕ್ಕೂ ವ್ಯಕ್ತಿ ಸ್ವತಂತ್ರನೆ. ಆದರೆ, ಒಪ್ಪಿಗೆ ಕೊಟ್ಟ ಮೇಲೆ ಆ ನಿರ್ಬಂಧದಂತೆ ನಡೆಯುವುದು ಅವಶ್ಯಕರ್ತವ್ಯವಾಗಿದೆ. ಸೇನೆಗೆ ಸೇರಿದ ಸೈನಿಕನ ಕವಾಯತಿನಂತೆ. ಕಾವ್ಯಗಳಲ್ಲಿ ಬಹುಭಾಗಕ್ಕೆ ಈ ‘ಅನ್ಯ ಪರತಂತ್ರ’ ಲಕ್ಷಣ ಅನ್ವಯಿಸುತ್ತದೆ ನಿಜ. ಆದರೂ ನಾವು ಉತ್ತಮ ಕೃತಿಯ ಉತ್ತಮತೆಯನ್ನು ಗುರುತಿಸುಸುವುದು ಅನ್ಯಪರತಂತ್ರ’ವಾದ ಭಾಗದಿಂದಲ್ಲ. ಒಂದು ಕಾವ್ಯದ ಭಾಷಾಂತರವನ್ನಾಗಲಿ ಅಥವಾ ಅದರ ಸಂಪೂರ್ಣವಾದ ಅನುಕರಣೆಯನ್ನಾಗಲಿ ‘ಅನ್ಯಪರತಂತ್ರ’ ಎಂದು ಕರೆಯಬಹುದು. ಭಾಷಾಂತರವಾಗದೆ ಅನುವಾದವಾದರೂ ಅಥವಾ ಒಂದು ಕಾವ್ಯವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿದ್ದರೂ ‘ಅನ್ಯಪರತಂತ್ರಕ್ಕೆ’ ಮೀರಬಹುದು. ಆದ ಕಾರಣ ಕವಿಕೃತಿಯನ್ನು ‘ಅನ್ಯಪರತಂತ್ರ’ವಲ್ಲದುದು ಎಂದು ಕರೆದಿದ್ದಾರೆ. ಆದ ಕಾರಣ ಕವಿಕೃತಿಯನ್ನು ‘ಅನ್ಯಪರತಂತ್ರ’ವ್ಲಲದುದು ಎಂದು ಕರೆದಿದ್ದಾರೆ. ಅದು ಕೇವಲ ‘ಸ್ವತಂತ್ರ’ವೂ ಅಲ್ಲ, ಕೇವಲ ‘ಪರತಂತ್ರ’ವೂ ಅಲ್ಲ; ಸಂಪೂರ್ಣವಾಗಿ ‘ಅನ್ಯಪರತಂತ್ರ’ವೂ ಅಲ್ಲ, ಅದು ‘ಅನನ್ಯ ಪರತಂತ್ರ’. (೨೦೦೩ ; ೪೫೪)[4]

ಮೇಲಿನ ಮಾತುಗಳನ್ನು ವಿಶ್ಲೇಷಿಸುವುದಾದರೆ, ಇಲ್ಲಿ ಕುವೆಂಪು ‘ಸ್ವತಂತ್ರ’ ಮತ್ತು ‘ಭಾಷಾಂತರ’ ಬಳಕೆಯ ಸಾಹಿತ್ಯ ಪರಿಕಲ್ಪನೆಗಳನ್ನು ಬಿಟ್ಟು ಸಾಹಿತ್ಯವನ್ನು ‘ಅನ್ಯ ಪರತಂತ್ರ’ ಮತ್ತು ‘ಅನನ್ಯ ಪರತಂತ್ರ’ ಎಂಬ ಎರಡು ಮಾದರಿಗಳ್ಲಲಿ ನೆಲೆಗೊಳಿಸುತ್ತಾರೆ. ಈ ಎರಡು ಮಾದರಿಗಳು ಭಾಷಾಂತರದ ಎರಡು ಮಾದರಿಗಳಾಗಿದ್ದು, ಅವುಗಳಲ್ಲಿ ಅನನ್ಯ ಪರತಂತ್ರವನ್ನು ಅಂದರೆ ಮೂಲವನ್ನು ಹೊಂದಿದ್ದು ಅದನ್ನು ಮೀರುವ ವೈಶಿಷ್ಟ್ಯವನ್ನು ಹೊಂದಿರುವ ಕೃತಿಗಳನ್ನು ಅತ್ಯುತ್ತಮವೆನ್ನುತ್ತಾರೆ. ಅಂತಹ ಭಾಷಾಂತರ ಪ್ರಕ್ರಿಯೆ ಘಟಿಸಿದ ಸಂದರ್ಭವನ್ನು ‘ಅಪೂರ್ವ ಕಲ್ಯಾಣ ಘಟನೆ’ ಎನ್ನುತ್ತಾರೆ. ಅವರ ಪ್ರಕಾರ ಕನ್ನಡದಲ್ಲಿ ಅದು ಜರುಗಿರುವುದು ಪಂಪ ಭಾರತದ ರನ್ನನ ಗದಾಯುದ್ಧವಾಗಿ ಪುನರ್ಲೇಖಗೊಂಡಾಗ, ರನ್ನನ ಗದಾಯುದ್ಧ ಬಿಎಂಶ್ರೀಯವರ ಗದಾಯುದ್ಧ ನಾಟಕವಾಗಿ ಮಾರ್ಪಾಡನ್ನು ಹೊಂದಿದಾಗ.[5]

ಇದಲ್ಲದೆ, ಸಾಹಿತ್ಯ ಚಿಂತನೆಯ ಸಂದರ್ಭದಲ್ಲಿ ಕುವೆಂಪು ಬಳಸುವ ಮೂಲ ಪ್ರತಿಕೃತಿ ಮತ್ತು ಪ್ರತಿಮಾ ಎಂಬ ಪರಿಕಲ್ಪನೆಗಳೂ ಭಾಷಾಂತರದ ನೆಲೆಯಿಂದ ಉಪಯುಕ್ತವಾದುದಾಗಿವೆ. ಉದಾಹರಣೆಗೆ ಅವರು ತಮ್ಮ ‘ಪ್ರತಿಮಾ ಮತ್ತು ಪ್ರತಿಕೃತಿ’ ಎಂಬ ಲೇಖನದಲ್ಲಿ ಆಡುವ ಮಾತುಗಳು ಮೂಲಕ ಅರಿವಿರುವ ಮತ್ತು ಅರಿವಿಲ್ಲದ ಸಂದರ್ಭದಲ್ಲಿ ಭಾಷಾಂತರ ಕೃತಿಯೊಂದನ್ನು ಗ್ರಹಿಸುವ ಕ್ರಮದ ಚರ್ಚೆಗೆ ಉಪಯುಕ್ತವಾದುದಾಗಿದೆ. ಮೂಲಕ ಅರಿವಿದ್ದಾಗ ನಾವು ಭಾಷಾಂತರವನ್ನು ಅದರ ಪ್ರತಿಕೃತಿಯಾಗಿ ಗ್ರಹಿಸಿ ಮೂಲನಿಷ್ಠೆಯನ್ನು ನಿರೀಕ್ಷಿಸುತ್ತೇವೆ. ಆದರೆ, ಮೂಲ ಗೊತ್ತಿಲ್ಲದಿದ್ದಲ್ಲಿ ಹಾಗೆಯೇ ಸ್ವೀಕರಿಸುತ್ತೇವೆ. ಎನ್ನುವ ಮಾತನ್ನು ಅಕ್ಬರ್‌, ಮಹಾತ್ಮಾಗಾಂಧಿ ಮತ್ತು ವಾಯುದೇವನ ಉದಾಹರಣೆಯ ಮೂಲಕ ವಿವರಿಸಿ ‘ಕಲೆಯಲ್ಲಿ ಸತ್ಯ  ಮೈದೋರುವುದು ಬಹುಮಟ್ಟಿಗೆ ಪ್ರತಿಮಾ ವಿಧಾನದಿಂದಲ್ಲದೆ ಪ್ರತಿಕೃತಿ ವಿಧಾನದಿಂದಲ್ಲ’ (ಪು. ೧೭೫) ಎಂದು ಪ್ರತಿಮಾ ಸಾಹಿತ್ಯ ಸ್ವರೂಪ ಮತ್ತು ಮಹತ್ವವನ್ನು ಸ್ಥಾಪಿಸಲೆಳಸುತ್ತಾರೆ.

ಇಲ್ಲಿ ಅವರು ಆಡುವ ‘ಶಿಶುವಿನ ಸತ್ಯತೆ ಸ್ಥಾಪಿತವಾಗುವುದು ತಾನು ಅವತರಿಸಿದ ಪ್ರಪಂಚದಲ್ಲಿ ತನ್ನ ಸಮಗ್ರವರ್ತನೆಯ ಸಮಂಜಸತೆಯಿಂದ. ಅದು ಅವತರಿಸಿದ ಪ್ರಪಂಚದಲ್ಲಿ ತನ್ನ ಸಮಗ್ರವರ್ತನೆಯ ಸಮಂಜಸತೆಯಿಂದ. ಅದು ಹುಟ್ಟಿದ ಭೂಮಿಕೆಯನ್ನು ಬಿಟ್ಟು ಬೇರೆ ಭೂಮಿಕೆಯ ಪ್ರಮಾಣಗಳಿಂದ ನಾವು ಅದರ ಸತ್ಯ ನಿರ್ಣಯಕ್ಕೆ ಹೋಗುವುದಿಲ್ಲ. ಆಯಾ ಭೂಮಿಕೆಯ ಅಥವಾ ಸತ್ತೆಯ ವಸ್ತುಗಳ ಸತ್ಯಕ್ಕೆ ಆಯಾ ಭೂಮಿಕೆಗೆ ಅಥವಾ ಸತ್ತೆಗೆ ಅಧೀನವಾಗಿರುವ ಪ್ರಮಾಣಗಳೇ ಸಾಕ್ಷಿ. ಅವು ‘ಅನ್ಯಪರ’ವಲ್ಲ, ‘ಅನನ್ಯಪರ’. (ಪು. ೧೭೫. ೨೦೦೩) ಭಾಷಾಂತರ ಕೃತಿಯಾದರೂ ತಾನು ಅವತರಿಸಿದ ಪ್ರಪಂಚದ ಸಮಗ್ರವರ್ತನೆಯ ಸಮಂಜಸತೆಯಿಂದಲೇ ತನ್ನ ಸತ್ಯತೆಯನ್ನು ಸ್ಥಾಪಿಸಿಕೊಳ್ಳಬೇಕೆಂಬ ಆಶಯಕ್ಕನುಗುಣವಾಗಿಯೇ ಅವರ ರೂಪಾಂತರ ಕೆಲಸವೂ ನಡೆದಿದೆ.

ಹಾಗಿದ್ದರೆ ಮೂಲಕ್ಕೆ ಅವರ ಚಿಂತನೆಯಲ್ಲಿ ಸ್ಥಾನವೇ ಇಲ್ಲವೆ ಎಂಬ ಪ್ರಶ್ನೆಗೆ ಕೂಡ ಅವರಲ್ಲಿ ಉತ್ತರವಿದೆ.

ಮೂಲಾನುಭವಕ್ಕೂ ಅದರ ಸಾಂಕೇತಿಕ ಪ್ರತಿಮೆಗೂ ಅತ್ಯಂತ ನಿಕಟವೂ ವಿಶ್ಲೇಷಣದೂರವೂ ಆದ ಜೀವಸಂಬಂಧವಿರುತ್ತದೆ. ಪ್ರತಿಮೆ ಎಂಬುದು ಮೂಲಾನುಭವಕ್ಕೆ ‘ನಾವು’ ನೀಡುವ ಆಕಾರವಲ್ಲ. ಅದು ಮೂಲಾನುಭವವು ತನಗೆ ಅನಿವಾರ್ಯವೂ ಅವಶ್ಯಕವೂ ಆಗಿರುವ ಸಹಜಧರ್ಮದ ಪ್ರೇರಣಾಶಕ್ತಿಯಿಂದ ಪಡೆಯುವ ರೂಪ ರೂಪಧಾರಣೆ. ಅದೊಂದು ಅವತರಣಕ್ರಿಯೆ.[6]

ಕುವೆಂಪು ಅವರ ‘ರಕ್ತಾಕ್ಷಿ’ ಮತ್ತು ‘ಬಿರುಗಾಳಿ’ ನಾಟಕಗಳ ಸಂದರ್ಭದಲ್ಲಿ ಮೂಲವು ಒದಗಿಬಂದಿರುವ ಕ್ರಮವೂ ಇದೆ. ಎನ್ನುವುದು ಅವುಗಳ ಮುನ್ನುಡಿಕಾರರ ಅಭಿಪ್ರಾಯ. ‘ಭಾವಗಳು ರೂಪಾಂತರ ಹೊಂದಿ ಸ್ವಭಾವಿಕವಾಗಿ ಹೊಂದಿಕೊಂಡಿವೆ’ ಎಂಬ ಮಾತು, ‘ಸಾರವನ್ನು ಹೀರಿಕೊಂಡ ಸ್ವತಂತ್ರ ನಾಟಕವೆಂಬ ಮಾತು ಇದನ್ನೇ ಸೂಚಿಸುತ್ತದೆ.

ಇನ್ನೊಂದು ಲೇಖನವಾದ ನಾಟಕದಲ್ಲಿ ಪ್ರತಿಕೃತಿ ಮತ್ತು ಪ್ರತಿಮಾ ವಿಧಾನಗಳು ಎಂಬ ಲೇಖನದಲ್ಲಿನ ನಾಟಕ ಮತ್ತು ಸಾಮಾಜಿಕ ವಾಸ್ತವಗಳ ಸಂಬಂಧ ಕುರಿತ ಚರ್ಚೆಯನ್ನು ಕೂಡ ಯಥಾವತ್ತಾಗಿ ಮೂಲವನ್ನು (ಕುವೆಂಪು ‘ಇದ್ದುದನ್ನು ಇದ್ದಂತೆ, ನಡೆದುದನ್ನು ನಡೆದಂತೆ’ ಎಂಬ ಮಾತನ್ನು ಬಳಸುತ್ತಾರೆ) ಅನುಸರಿಸು ಸಾಧ್ಯತೆ ಮತ್ತು ಸಾಧುತ್ವದ ಚರ್ಚೆಗೆ ಎಟುಕಿಸಿಕೊಳ್ಳಬಹುದಾಗಿದೆ.

ಇದ್ದುದನ್ನು ಇದ್ದಂತೆಯೇ, ನಡೆದುದನ್ನು ನಡೆದಂತೆಯೇ ಚಿತ್ರಿಸಬೇಕು ಎಂಬ ಪ್ರಯತ್ನಕ್ಕೆ ಹೋಗದೆ ಇದ್ದದ್ದೂ ನಡೆದದ್ದು ತನಗೆ ಹೇಗೆ ಗೋಚರಿಸಿತೋ ಆ ತನ್ನ ಅನುಭವಕ್ಕೆ ಆಕಾರ ಕಲ್ಪನೆ ಮಾಡುವ ಪ್ರಯತ್ನದ ರೀತಿಯನ್ನು ಪ್ರತಿಮಾ ವಿಧಾನವೆಂದು ಕರೆಯುತ್ತೇವೆ. ಪ್ರತಿಮಾದೃಷ್ಟಿಗೆ ಆ ವಸ್ತುವಿಗಿಂತಲೂ ಆ ವಸ್ತು ಪ್ರಚೋದಿಸುವ ಅನುಭವವೇ ವಿಶೇಷವಾಗಿ ಮಾನ್ಯ ವಿಷಯ.’ (ಪುಟ. ೨೩೬, ೨೦೦೩)

ಈ ಆಶಯವನ್ನೇ ವೆಂಕಣ್ಣಯ್ಯನವರು ‘ಬಿರುಗಾಳಿ’ ನಾಟಕದ ಮುನ್ನುಡಿಯಲ್ಲಿ ಭಾಷಾಂತರದಲ್ಲಿ ‘ಮೂಲಗ್ರಂಥವನ್ನು ಓದಿ, ಅದನ್ನು ಓದಿದ್ದರಿಂದ ತಮ್ಮ ಮನಸ್ಸಿನಲ್ಲಿ ಉಂಟಾದ ಮುಖ್ಯ ಮುಖ್ಯವಾದ ಚಿತ್ರಗಳನ್ನೂ ಭಾವಗಳನ್ನೂ ಆಧಾರವಾಗಿಟ್ಟುಕೊಂಡು ಒಂದು ಹೊಸ ನಾಟಕವನ್ನು ನಿರ್ಮಿಸಿರುತ್ತಾರೆ’ ಎನ್ನುವುದು. ಟಿಪ್ಪಣಿಕೆಯಲ್ಲಿ ಕುವೆಂಪು ಪ್ರಸ್ತಾಪಿಸಿರುವ ಮೂಲ ನಾಟಕವನ್ನು ಗ್ರಹಿಸಬೇಕಾಗಿರುವ ಕ್ರಮದ ಕುರಿತ ‘ಸರ್ವಕಾಲ ಸರ್ವ ದೇಶ ಮಾನ್ಯವಾಗುವ ವಿಶ್ವತತ್ವಗಳ ಪ್ರತಿಮೆಗಳನ್ನು ಗುರುತಿಸಬೇಕೆಂಬ’ ಮಾತುಗಳು ಇದರತ್ತಲೇ ಮುಖಮಾಡಿದೆ.

ಮೇಲಿನ ವಿವರಣೆಗಳ ಹಿನ್ನೆಲೆಯಲ್ಲಿ ಕುವೆಂಪು ಅವರ ಭಾಷಾಂತರ ಚಟುವಟಿಕೆಯನ್ನು ಪರಿಶೀಲಿಸುವುದಾದರೆ, ಅವರ ಭಾಷಾಂತರಗಳ ಸರ್ವಪ್ರಯತ್ನವೂ ‘ಅನ್ಯಪರತಂತ್ರ’ವನ್ನು ದಾಟಿ ‘ಅನನ್ಯ ಪರತಂತ್ರ’ ವಾಗುವುದೇ ಆಗಿದೆ. ೧೯೨೬ರ ಕಿಂದರಜೋಗಿ ಕವನ ರಚನೆಯ ಸಂದರ್ಭವನ್ನು ವಿವರಿಸುತ್ತಾರೆ.

‘ಪೈಡ್‌ಪವರ್‌ ಆಫ್‌ ಹ್ಯಾಮಲಿನ್‌’ ತನ್ನ ನೈತ್ಯಮಯ ಶೈಲಿಯಿಂದಲೂ ಬಾಲಕ ಚೇತನಗಳಿಗೆ ಕಚಗುಳಿಯಿಟ್ಟು ನಗಿಸುವಂತಹ ಹಾಸ್ಯದಿಂದಲೂ ನನ್ನ ಮೆಚ್ಚುಗೆಯನ್ನು ಸೂರೆಗೊಂಡಿತು. ಅದು ಎಷ್ಟರ ಮಟ್ಟಿಗೆ ನನ್ನ ಅಂತಃಕರಣದ ಭಾವಕೋಶವನ್ನು ಪ್ರವೇಶಿಸಿತ್ತು ಎಂದರೆ, ಮುಂದೆ ೧೯೨೬ರಲ್ಲಿ ಅಂದರೆ ಆರೇಳು ವರ್ಷಗಳ ತರುವಾಯ…. ಆ ಕಥೆಯನ್ನು ಆಧರಿಸಿ ಬೊಮ್ಮನಹಳ್ಳಿಯ ಕಿಂದರಜೋಗಿಯನ್ನು ರಚಿಸುವಾಗ ಇಂಗ್ಲಿಷ್‌ ಭಾಷೆಯ ಮೂಲ ಕವಿತೆ ನನ್ನ ಬಳಿ ಇರಲೇ ಇಲ್ಲ. ಬೊಮ್ಮನಹಳ್ಳಿಯ ಕಿಂದರಜೋಗಿಯನ್ನು ಬ್ರೌನಿಂಗ್‌ ಕವಿಯ ಕಥನ ಕವನದ ಭಾಷಾಂತರವೆಂದು ಅನೇಕರು ತಪ್ಪಾಗಿ ತಿಳಿದಿದ್ದಾರೆ. ಅದು ಭಾಷಾಂತರೂ ಅಲ್ಲ, ಅನುವಾದವೂ ಅಲ್ಲ, ಆ ಕಥೆಯನ್ನು ಆಧರಿಸಿರುವ ರೂಪಾಂತರ ಸೃಷ್ಟಿ. (ಪುಟ. ೧೦೬೮, ೨೦೦೦)

ಕುವೆಂಪು ಮಹೋಪಮೆ ಎಂಬ ಪಾಶ್ಚಾತ್ಯ ಸಾಹಿತ್ಯ ಪರಿಕಲ್ಪನೆಯನ್ನು ಕನ್ನಡದಲ್ಲಿ ತರುವುದರ ಸಾಧ್ಯಾಸಾಧ್ಯಾತೆಯ ಕುರಿತು ಚರ್ಚಿಸುವ ‘ಮಹೋಪಮೆ’ ಎಂಬ ಲೇಖನದ ಪ್ರಸ್ತಾಪದೊಂದಿಗೆ ಈ ವಿಶ್ಲೇಷಣೆಯನ್ನು ಮುಕ್ತಾಗೊಳಿಸಬಹುದಾಗಿದೆ.

‘ಬಾಳಿನಲ್ಲಿ ಎನಿತೆನಿತೋ ಅಪರಿಚಯಗಳು ಸುಪರಿಚಯಗಳಾಗಿ ಸುಖ ಶಾಂತಿಗಳಿಗೆ ಕಾರಣವಾಗುತ್ತವೆ. ಪಶ್ಚಿಮದಿಂದ ಬಂದ, ಒಂದಲ್ಲ, ಎರಡಲ್ಲ, ಹಲವಾರು ಅಪರಿಚಯಗಳು ಈಗ ಎಷ್ಟರಮಟ್ಟಿಗೆ ಸುಪರಿಚಿತಗಳಾಗಿವೆ ಎಂದರೆ ಅವು ಹೊರಗಿನಿಂದ ಬಂದವೆಂಬುದನ್ನೂ ನಾವು ಮರೆತಿದ್ದೇವೆ.[7] ‘ಮಹೋಪಮೆ’ಯೂ ಮುಂದೆ ಅಂತಹ ಸುಪರಿಚಿತಗಳೊಂದಿಗೆ ಸೇರುತ್ತದೆ. ಎಂಬುದರಲ್ಲಿ ಸಂದೇಹವಿಲ್ಲ. ಆ ಹೆಣ್ಣು ಕನ್ನಡದ ಮನೆಗೆ ಸೊಸೆ.[8] ಅವಳು ಮೂರು ಜಡೆಗಳನ್ನು ಹಾಕಿಕೊಂಡಿರಬಹುದು. ಬಣ್ಣಬಣ್ಣದ ಸೀರೆಯನ್ನು ನೆಲಗುಡಿಸುವಂತೆ ಉಟ್ಟಿರಬಹುದು. ನಾನಾ ರತ್ನಗಳಿಂದ ತಯಾರಾದ ಅವಳ ಕೊರಳ ಹಾರಗಳು ಅತಿ ನಳವಾಗಿ ಜೋಲಾಡುತ್ತಿರಬಹುದು. ಒಟ್ಟಿನಲ್ಲಿ ಆಕೆಯದೆಲ್ಲವೂ ಕೊಂಚ ಅಧೀಕಾಲಂಕಾರವಾಗಿ ತೋರಬಹುದು. ಅತ್ತೆಗೆ ಮುನಿಸು; ಅತ್ತಿಗೆಗೆ ಕರುಬು. ಕೆಲವರಿಗೆ ಕುತೂಹಲ; ಮತ್ತೆ ಹಲವರಿಗೆ ಕೈಗೆಟುಕುದ ಅಪಕ್ವಫಲ. ಕೈಹಿಡಿದ ಇನಿಯನಿಗೆ ಮಾತ್ರ ಎಷ್ಟು ನೋಡಿದರೂ ಸಾಲದು; ಎಷ್ಟು ಮೆಚ್ಚಿದರೂ ಸಾಲದು; ಎಷ್ಟು ಬಣ್ಣಿಸಿದರೂ ಸಾಲದು. ಇರಲು ಹೊಸ ಸೊಸೆ ಕೆಲದಿನಗಳಲ್ಲಿಯೇ ಮನೆಯವಳಾಗುತ್ತಾಳೆ. ತನ್ನ ಸೌಜನ್ಯ ಸದ್ಗುಣಗಳಿಂದ ಎಲ್ಲರ ಮನಸ್ಸನ್ನೂ ಅಕ್ಕರೆಯಿಂದ ಸೂರೆಗೊಳ್ಳುತ್ತಾಳೆ. ಹಿರಿಕುಲದ ಹೆಣ್ಣು ಹಿರಿತನದಿಂದ ಕೂಡಿಯೇ ಇದ್ದಾಳೆ; ಹಿರಿಯಳೆಂದು ಸನ್ಮಾನಿತಳೂ ಆಗುತ್ತಾಳೆ’. (ಪುಟ. ೨೧೩. ೨೦೦೩)

ಪ್ರತಿಯೊಬ್ಬ ಭಾಷಾಂತರಕಾರನೂ ಈ ಆಶಯ ಮತ್ತು ಆತ್ಮವಿಶ್ವಾಸವನ್ನು ಇಟ್ಟುಕೊಂಡೇ ಭಾಷಾಂತರ ಮಾಡುತ್ತಾನೆ; ಮಾಡುವಂತಾಗಲಿ.

ಆಕರ ಗ್ರಂಥಗಳು

ಕುವೆಂಪು ಸಮಗ್ರ ಪದ್ಯ ಸಂಪುಟ ೧-೨ (ಸಂ.) ಶಿವಾರೆಡ್ಡಿ ಕೆ. ಸಿ. ಕನ್ನಡ ವಿಶ್ವವಿದ್ಯಾಲಯ –ಹಂಪಿ, ೨೦೦೦.

ಕುವೆಂಪು ಸಮಗ್ರ ಗದ್ಯ ಸಂಪುಟ ೧ (ಸಂ.) ಶಿವಾರೆಡ್ಡಿ ಕೆ. ಸಿ. ಕನ್ನಡ ವಿಶ್ವವಿದ್ಯಾಲಯ –ಹಂಪಿ, ೨೦೦೩.

ಕುವೆಂಪು ಸಮಗ್ರ ನಾಟಕ ಸಂಪುಟ ೧ (ಸಂ.) ಶಿವಾರೆಡ್ಡಿ ಕೆ. ಸಿ. ಕನ್ನಡ ವಿಶ್ವವಿದ್ಯಾಲಯ –ಹಂಪಿ, ೨೦೦೪.

 

[1] ಭಾಷಾಂತರ ಮತ್ತು ಅನುವಾದದ ನಡುವೆ ವ್ಯತ್ಯಾಸವನ್ನು ಕನ್ನಡದೆ ಇನ್ನೂ ಹಲವು ಲೇಖಕರು ಮಾಡಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಭಾಷಾಂತರವನ್ನು ನೇರಾನುವಾದವಾಗಿಯೂ, ಅನುವಾದವನ್ನು ಸಂವಾದಿ ಭಾಷಾಂತರವಾಗಿಯೂ ಇಲ್ಲಿ ಪರಿಭಾವಿಸಲಾಗಿದೆ. ಈ ಏಖನದಲ್ಲಿಯೇ ದಾಖಲಾಗಿರುವ ಟಿ. ಎಸ್‌. ವೆಂಕಣ್ಣನಯ್ಯನವರ ವಿವರಣೆಯನ್ನು ನಾವು ಗಮನಿಸಬಹುದು.

[2] ಕರ್ನಾಟಕ ಏಕೀಕರಣದ ಒಂದು ವರ್ಷದ ಅವಧಿಯಲ್ಲಿ ಅಂದರೆ ೧೯೫೭ರಲ್ಲಿ ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಬೆಳೆಸುವ ದಿಕ್ಕಿನಲ್ಲಿ ಪಠ್ಯ ಪುಸ್ತಕ ಮಾಲೆಯನ್ನು ಆರಂಭಿಸಿದ ಕುವೆಂಪು ಅವರು ಮುಖ್ಯವಾಗಿ ಸಮಾಜ ವಿಜ್ಞಾನಗಳ ಪಠ್ಯಗಳ ಸಂದರ್ಭದಲ್ಲಿ ಆಡುವ ಮಾತುಗಳಿವು.

[3] ಈ ಮಾತುಗಳು ಆಧುನಿಕೋತ್ತರ ಭಾಷಾಂತರ ಚಿಂತನೆಗೆ ಹತ್ತಿರವಾಗಿವೆ. ನೋಡಿ.1. De-Main, Poul(1986) ‘’Conclusions’’, Walter Benjamin’s `The of the Translator’ in The Resistence to Theory, Minnepolis: Iniversity of Minnesota press 2.

[4] ಇಲ್ಲಿನ ಅನನ್ಯಪರತಂತ್ರತೆಗೂ ಒಂದು ಮಿತಿಯಿರುವುದನ್ನು ಕುವೆಂಪು ಅಡಿಟಿಪ್ಪಣಿಯಲ್ಲಿ ಪ್ರಸ್ತಾಪಿಸುತ್ತಾರೆ.

[5] ಅವರ ‘ಪ್ರತಿಮಾ ಮತ್ತು ಪ್ರತಿಕೃತಿ’ ಲೇಖನದಲ್ಲಿ ಕೂಡ ವಾಸ್ತವ ಸತ್ಯ ಮತ್ತು ಕಾವ್ಯಸತ್ಯಗಳ ನಡುವಿನ ಸಂಬಂಧವನ್ನು ವಿವರಿಸುವಲ್ಲಿ ಅನ್ಯ ಪರತಂತ್ರ ಮತ್ತು ಅನನ್ಯ ಪರತಂತ್ರ ಪರಿಕಲ್ಪನೆಗಳನ್ನು ಬಳಸುತ್ತಾರೆ. ಸಾಹಿತ್ಯವು ವಾಸ್ತವ ಬದುಕಿನ ಯಥಾವತ್‌ ಪ್ರತಿಕೃತಿಯಾಗದೆ ಪ್ರತಿಮಾ ವಿಧಾನದಲ್ಲಿ ಲೋಕ ವ್ಯವಹಾರವನ್ನು ಪುನರ್‌ ಸೃಷ್ಟಿಸುತ್ತದೆ. ಹಾಗೆ ಸೃಷ್ಟಿಸಿದಾಗ ಮಾತ್ರ ಸಾಹಿತ್ಯ ಶ್ರೇಷ್ಠವಾಗುತ್ತದೆ ಎನ್ನುತ್ತಾರೆ. ಇದರ ಚರ್ಚೆ ಲೇಖನದಲ್ಲಿ ಬಂದಿದೆ.

[6] ಭಾಷಾಂತರವನ್ನು ಅವತರಣಿಕೆ ಎಂದು ಕರೆದಿರುವ ಉದಾಹರಣೆಗಳೂ ವಸಾಹತುಶಾಹಿ ಸಂದರ್ಭದಲ್ಲಿ ದೊರೆಯುತ್ತದೆ.

[7] ಇದೇ ಕವಿಯಿಂದ ೧೯೨೬ರಲ್ಲಿ ರಚಿತವಾದ ಬೊಮ್ಮನಹಳ್ಳಿ ಕಿಂದರಜೋಗಿ ಕವಿತೆಯ ಹಾಗೆ. ಇದರ ಮೂಲ ಬೌನಿಂಗ್‌ ಕವಿಯ The Pide Piper of Hamelin

[8] ಭಾಷಾಂತರ ಮೀಮಾಂಸೆಯಲ್ಲಿ ಈ ರೀತಿಯ ಲಿಂಗೀಕರಣದ ಪ್ರತಿಮೆಗಳನ್ನು ಬಳಸುವುದು ಜಾಗತಿಕ ಲಕ್ಷಣವಾಗಿದ್ದು, ಇದರ ಬಗ್ಗೆ ಪ್ರತ್ಯೇಕವಾದ ಚರ್ಚೆಯ ಅಗತ್ಯವಿದೆ.