ಪ್ರಪಂಚದ ಹೆಚ್ಚಿನ ಭಾಷೆಗಳಲ್ಲಿ ಮಹಾಕಾವ್ಯಗಳಿವೆ. ಮೆಸಪೊಟೊಮಿಯಂ ಐತಿಹ್ಯವನ್ನು ಆಧರಿಸಿದ ಗಿಲ್ಗಮೇಷ್, ಪ್ರಾಚೀನ ಗ್ರೀಕ್ ಮಹಾಕಾವ್ಯಗಳಾದ ಹೋಮರ್‌ನ ಇಲಿಯಡ್, ಒಡೆಸ್ಸಿ, ಭಾರತೀಯ ಋಷಿ ಸಂಸ್ಕೃತಿ ರೂಪಿಸಿದ ರಾಮಾಯಣ, ಮಹಾಭಾರತ, ಲ್ಯಾಟಿನ್ ಕಲಾಕೃತಿಯಾದ ವರ್ಜಿಲ್‌ನ ಇಡಿಯನ್, ಡಾಂಟೆ ಕವಿಯ ಇಟಾಲಿಯನ್ ಕಾವ್ಯ “ಡಿವೈನ್ ಕಾಮಿಡಿ” ಇಂಗ್ಲಿಷ್ ಭಾಷೆಯಲ್ಲಿ ಬಂದ ಎಡ್ಮಂಡ ಸ್ಪಿನ್ನರ್‌ನ ‘ದಿ ಫೆರಿ ಕ್ವೀನ್’, ಮಿಲ್ಟನ್ ನ ‘ದಿ ಪ್ಯಾರಡೈಸ್ ಲಾಸ್ಟ್’ ಮೊದಲಾದ ಪ್ರಪಂಚದ ಹೆಚ್ಚಿನ ಪ್ರಾಚೀನ ಪಾಶ್ಚಾತ್ಯ ಮಹಾಕಾವ್ಯಗಳು ತಮ್ಮದೆ ಸಂಸ್ಕೃತಿಯೊಂದರ ಸ್ಮಾರಕಗಳಾಗಿವೆ. ಒಂದು ರಾಷ್ಟ್ರವನ್ನು ಕಟ್ಟುವ ಅದನ್ನು ಹೆಸರಿಸುವ ಬಹು ದೊಡ್ಡ ಹೊಣೆಗಾರಿಕೆಯನ್ನು ಈ ಮಹಾ ಕಾವ್ಯಗಳು ನಿರ್ವಹಿಸಿದಂತಿದೆ. ವರ್ಜಿಲ್ ನ ಇನಿಯಡ್‌ನಲ್ಲಿ ಕಾಣುವ ಪೌರಾಣಿಕ ವ್ಯಕ್ತಿ ಏನಿಯಾಸ್ ಇಟಲಿಯನ್ನು ಸ್ಥಾಪಿಸುವುದು ಮತ್ತು ರೋಮನ್‌ರ ಪೂರ್ವಜನಾಗುವ ಚಿತ್ರದ ಪ್ರಸ್ತಾಪವಿದೆ. ಭಾರತೀಯ ಮಹಾಕಾವ್ಯಗಳಲ್ಲೂ ಈ ಬಗೆಯ ಐತಿಹ್ಯಗಳು ಇವೆ. ಭರತವರ್ಷಕ್ಕೆ ಈ ಹೆಸರು ಬರಲು ಭರತನೆಂಬ ಪೌರಾಣಿಕ ವ್ಯಕ್ತಿ ಕಾರಣನಾಗುವುದು ರಾಷ್ಟ್ರ ನಿಮಾರ್ಣವೂ ಸಂಸ್ಕೃತಿ ನಿಮಾರ್ಣವೂ ಒಟ್ಟಾಗಿ ಈ ಮಹಾಕಾವ್ಯಗಳಿಂದಾಗಿದೆ.

ಪುರಾಣ, ಇತಿಹಾಸ, ಐತಿಹ್ಯ ಈ ಮೂರು ಒಟ್ಟಾಗಿ ಬೆರೆತುಕೊಂಡು ಮಹಾಕಾವ್ಯವನ್ನು ನಿರ್ಮಿಸುತ್ತದೆಯಾದರೂ ನಮ್ಮದೆ ಪೂರ್ವಚರಿತ್ರೆಯೊಂದು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಬೇಕಾದ ಅಗತ್ಯವನ್ನು ಸದಾ ಕಾಲ ಈ ಮಹಾಕಾವ್ಯಗಳು ನೆನಪಿಸುತ್ತಿರುತ್ತವೆ. ವಿಶ್ವಕವಿ ರವೀಂದ್ರರು ಹೇಳುವ ಹಾಗೆ “ಪುರಾಣಗಳು ನಮಗೆ ನಾವೇ ಕಳುಹಿಸಿದ ಸಂದೇಶ” ಎನ್ನುವ ಮಾತನ್ನ ಗಮನಿಸಿದರೆ ಪರಂಪರೆಯ ಪ್ರಜ್ಞೆಯೊಂದು ನಮ್ಮೊಳಗೆ ಆಳವಾಗಿ ಪ್ರವಹಿಸುವುದು ಈ ಮಹಾಮಾರ್ಗದಲ್ಲಿಯೇ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡತಾಗುತ್ತದೆ.

ಶ್ರೀ ಕುವೆಂಪು ರಚಿಸಿದ ಶ್ರೀ ರಾಮಾಯಣ  ದರ್ಶನಂ ಆಧುನಿಕ ಕನ್ನಡ ಕಾವ್ಯದ ಮೇರು ಶಿಖರ. ಜಗತ್ತಿನ ಪ್ರಮುಖ ಮಹಾ ಕಾವ್ಯಗಳನ್ನೆಲ್ಲಾ ಓದಿ ಅರಗಿಸಿಕೊಂಡ ದೈತ್ಯ ಪ್ರತಿಭಾ ಪ್ರಖರತೆಯಲ್ಲಿ ಪಳಗಿ ಪ್ರಜ್ಞಾ ಪ್ರಾಜ್ವಲ್ಯದಲ್ಲಿ ರಚಿತವಾದ ಮಹಾ ಕೃತಿಯಿದು. ಕನ್ನಡದ ಮಹಾಕಾವ್ಯಗಳೆಲ್ಲಾ ದೇಶ ಭಾಷಾ ಜ್ಞಾನ ಸಂಪತ್ತನ್ನು ಬಳಸಿಕೊಂಡರೆ ಮೊತ್ತ ಮೊದಲ ಬಾರಿಗೆ ವಿಶ್ವ ಜ್ಞಾನ ಪರಂಪರೆಯ ಸೂಕ್ಷ್ಮ ಸತ್ವ ಸಾಂಗತ್ಯ ಪಡೆದು ಮೂಡಿದ ಮಹಾಕಾವ್ಯವಾಗಿಯೂ ಶ್ರೀ ರಾಮಾಯಣ ದರ್ಶನಂ ಕಥಾ ಸಂವಿಧಾನವನ್ನು ಗುರುತಿಸಬಹುದು. ಅಷ್ಟೇ ಅಲ್ಲ, ಭಾರತೀಯ ಧರ್ಮ ಸಮನ್ವಯ, ಧಾರ್ಮಿಕ ಚಳವಳಿಯ ವಿಚಾರ ಸಮನ್ವಯ, ಸರ್ವೋದಯ, ಪೂರ್ಣದೃಷ್ಟಿಯೇ ಮೊದಲಾದ ಭಾರತೀಯ ತತ್ವಸಿದ್ಧಾಂತಗಳ ಯುಗ ಧರ್ಮ ಪ್ರಜ್ಞೆಯಾಗಿಯೂ ಮೂಡಿ ಬಂದಿರುವುದು ವಿಶೇಷ. ಅವರೇ ರೂಪಿಸಿದ ವಿಶ್ವಾತ್ಮಕತೆ, ವಿಶ್ವ ಮಾನವತ್ವದ ಪರಿಕಲ್ಪನೆಗಳು ಸಾರ್ಥಕವಾಗುವುದು ದೇಶ, ಭಾಷೆ, ಜಾತಿ, ಮತ, ಪಂಥಗಳ ಗಡಿ ಮೀರಿದ ವಿಚಾರ ಸಂಪನ್ನತೆಯಲ್ಲಿ ಎಂದು ಅವರು ಬಲವಾಗಿ ನಂಬಿದ್ದರು. ತನ್ನ ಕಾವ್ಯಸೃಷ್ಟಿಯ ಬಗ್ಗೆ ಶ್ರೀ ಕುವೆಂಪು ಅವರೇ ಹೇಳಿಕೊಳ್ಳುವ ಮಾತು ಗಮನಾರ್ಹ; “ಪ್ರಾಚ್ಯ ಪಾಶ್ವಾತ್ಯ ಪ್ರಾಚೀನ ಅರ್ವಾಚೀನಗಳ ಸಾರ್ವಕಾಲೀಕ ಮತ್ತು ಸಾರ್ವಧಾರ್ಮಿಕ ಸಮಷ್ಠಿ ರೂಪದ ಯುಗ ಪ್ರಜ್ಞೆಯ ಆರ್ವಿಭೂತಿಯಂತಿರುವ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ವ್ಯವಹಾರಿಕವಾಗಿ ಕುವೆಂಪು ಕೃತಿಯೆಂದು ಕರೆಯಲಾಗಿದ್ದರೂ ಪಾರಮಾರ್ಥಿಕವಾಗಿ ನೋಡಿದರೆ ಕುವೆಂಪುವನ್ನೇ ಅದು ಸೃಜಿಸಿದೆ. ಅದು ಯು ಚೈತನ್ಯದ ಸಮಷ್ಟಿ ಪ್ರಜ್ಞೆಯ ಸೃಷ್ಟಿ. ಅದು ಶ್ರೀ ರಾಮಾಯಣದ ಆಧುನಿಕ ಅವತಾರ; ಅದು ವೈದಿಕ ಸಂಪ್ರದಾಯದ ವಾಲ್ಮೀಕಿ ರಾಮಾಯಣಕ್ಕೆ ಋಣಿಯಾಗುರುವಂತೆ ಜೈನ ಸಂಪ್ರದಾಯದ ರಾಮಾಯಣಗಳಿಗೂ ಋಣಿಯಾಗಿದೆ. ವ್ಯಾಸ, ವಾಲ್ಮೀಕಿ, ಪಂಪ, ನಾಗಚಂದ್ರಾದಿಗಳಿಗೆಂತೂ ಅಂತೆಯೇ ಹೋಮರ, ವರ್ಜಿಲ್, ಡಾಂಟೆ, ಮಿಲ್ಟನ್ನರಿಗೂ ಋಣಿಯಾಗಿದೆ. ಅಲ್ಲಿ ಶ್ರೀರಾಮಕೃಷ್ಣ-ವಿವೇಕಾನಂದರ ಸಮನ್ವಯ ದರ್ಶನವನ್ನೆಂತೊ ಅಂತೆಯೇ, ಗಾಂಧೀಜಿ ವಿನೋಬಾಜಿಯವರಿಂದ ಪ್ರಣೀತವಾದ ಸರ್ವೋದಯ ಭಾವನೆಯನ್ನು ಪಾಶ್ಚಾತ್ಯ ವಿಜ್ಞಾನದ ವಿಕಾಸವಾದವನ್ನೆಂತೋ ಅಂತೆ ಶ್ರೀ ಅರವಿಂದ ಪ್ರಣೀತವಾದ ಪೂರ್ಣಯೋಗದರ್ಶನವನ್ನು ಸಂದರ್ಶಿಸಬಹುದು. ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ ಇವುಗಳೇ ‘ಶ್ರೀ ರಾಮಾಯಣದರ್ಶನ’ದ ತ್ರೀಣೇತ್ರಗಳಾಗಿವೆ”[1]

ವಸಾಹತುಶಾಹಿ ವ್ಯವಸ್ಥೆ ನಮಗೆ ಕಲಿಸಿದ ಮೊದಲ ಪಾಠ ಅನ್ಯ ಸಂಸ್ಕ್ರತಿಯೊಂದಿಗೆ ಮುಖಾಮುಖಿಯಾಗುವುದು ಹೇಗೆ ಎನ್ನುವುದನ್ನು ಭಾರತೀಯ ಮನಸ್ಸು ಇಂಗ್ಲಿಷ್ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳಲು ಪ್ರಾರಂಭಿಸಿದಾಗಿನಿಂದ ಎರಡು ರೀತಿಯ ಪರಿಣಾಮಗಳುಂಟಾದವು. ಒಂದು ನಮ್ಮ ಹುಳುಕುಗಳು ನಮಗೇ ಕಾಣಲು ತೊಡಗಿದ್ದು, ಇನ್ನಿಂದು ನಮ್ಮ ಸಂಸ್ಕ್ರತಿಯ ಹಿರಿಮೆ ನಮಗೇ ಅರಿವಾಗ ತೊಡಗಿದ್ದು, ಹಳೆಯದೆಲ್ಲವನ್ನು ತಿರಸ್ಕರಿಸಲಾಗದ ಹೊಸತೆಂದು ಅನ್ಯವಾದುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗದ ಮನೋಸ್ಥಿತುಯಿದು. ನಮ್ಮ ಕನ್ನಡ ನವೋದಯ ಸಾಹಿತ್ಯ ಸಂದರ್ಭವೂ ಇಂತಹ ಸನ್ನಿವೇಶದಿಂದ ಹೊರಗಿಳಿಯಲಾಗಲಿಲ್ಲ. ಈ ದ್ವಂದ್ವವನ್ನು ಎದುರಿಸಿದ ರೀತಿಯೇ ನವೋದಯ ಸಾಹಿತ್ಯ ಚರಿತ್ರೆ. ಭಿನ್ನ ಸಂಸ್ಕೃತಿಯ ನಡುವಿನ ಈ ಸೂಕ್ಷ್ಮ ಸಂಘರ್ಷ, ಹೊಸ ಮಾನವೀಯ ಆಲೋಚನೆಗಳ ಹುಟ್ಟಿಗೆ ಕಾರಣವಾಯಿತು. ವಿಚಾರ ಕ್ರಾಂತಿಗೆ ಆಹ್ವಾನವೂ ದೊರೆಯಿತು. ಬ್ರಿಟಿಷ್ ಸಾಮ್ರಾಜ್ಯಶಾಹಿ ಧೋರಣೆಯನ್ನು ವಿರೋಧಿಸುತ್ತಲೇ ಇಂಗ್ಲಿಷ್ ಭಾಷೆ, ಸಾಹಿತ್ಯ ಜ್ಞಾನದ ಬಗೆಗಿನ ಆದರ ಪ್ರಗತಿಪರ ಆಲೋಚನೆಯ ದೃಷ್ಟಿಕೋನವನ್ನು ಬೆಳೆಸಿತು.

ಕುವೆಂಪು ತನ್ನ ಸಾಹಿತ್ಯ ಪ್ರವೇಶದ ಆರಂಭದಲ್ಲಿ ತನ್ನ ‘ಚೇತನದ ಮೊದಲ ಅಭಿವ್ಯಕ್ತಿ ಕಂಡುಕೊಂಡಿದ್ದೆ ಇಂಗ್ಲಿಷ್ ಭಾಷೆಯಿಂದ’ ಪಶ್ಚಿಮದ ವಿರೋಧ, ತಿರಸ್ಕಾರದ ನಡುವೆಯೇ ಅದರಲ್ಲಿ ಸ್ವೀಕರಣೆಯ ಅಂಶಗಳನ್ನು ಹುಡುಕುತ್ತಾಹೊಸ ಜಾಡು ಹಿಡಿದು ಕನ್ನಡ ಸಾಹಿತ್ಯರಂಗವನ್ನು ಪ್ರವೇಶಿಸಿಸುವುದು ಕುವೆಂಪು ಅವರಿಗೆ ಅನಿವಾರ್ಯವಾಯಿತು. ನಾಡಿನ ಆತ್ಮಗೌರವವನ್ನು ಬಂಡಾಯದ ಹೊಣೆಯನ್ನು ನಿರ್ವಹಿಸಿದರು. ಒಂದು ಸಾಹಿತ್ಯ ಯುಗದ ಕೇಲವೇ ಮಹಾನ್ ಶಿಲ್ಪಿಗಳಲ್ಲಿ ಒಬ್ಬರಾದರು.[2]

ಭಾರತೀಯ ವೈದಿಕಶಾಹಿ ಸಂಸ್ಕೃತಿಯ ದಮನಕಾರಿ, ಶೂದ್ರ ವಿರೋದಿ ನೀತಿಗೆ ಪ್ರತಿರೋಧದ ನೆಲೆಯೊಂದನ್ನು ಪಾಶ್ಚಾತ್ಯ ಸಾಹಿತ್ಯ ಭೂಮಿಕೆಯ ಮೂಲಕ ಕಂಡುಕೊಂಡರು. ಭಾರತೀಯ ಪುರಾಣ ಕಥನಕ್ರಮದಲ್ಲಿ ಅಡಕವಾಗಿರುವ ವೈದಿಕ ಹಾಗೂ ಸಾಮ್ರಾಜ್ಯಶಾಹಿ ಕ್ರೌರ್ಯವನ್ನು ಬಯಲಿಗೆಳೆಯಲುತನ್ನ ಶೂದ್ರತ್ವದ ವೈಯಕ್ತಿಕ ಅನುಭವವನ್ನೇ ಪ್ರಮಾಣವನ್ನಾಗಿರಿಸಿಕೊಂಡು ಏಕಲವ್ಯ, ಶಂಭೂಕನಂತಹ ಪತ್ರಗಳನ್ನು ಪುನರ್ ಚಿಂತನೆಗೆ ಒಳಪಡಿಸುವ ಪ್ರಯೋಗಶೀಲತೆಗೆ  ತೊಡಗಿಕೊಂಡರು.

ಪುರಾಣವನ್ನು ತನ್ನ ಅನುಭವದ ಪ್ರಮಾಣಜ್ಞಾನಕ್ಕೆ ಮುರಿದು ಕಟ್ಟುವ ಪ್ರಯತ್ನ ಕನ್ನಡದಲ್ಲಿ ಮೊದಲು ಮಾಡಿದವನು ಆದಿಕವಿ ಪಂಪ. ಆದರೆ ಪಂಪನ ಪ್ರಯತ್ನಕ್ಕೆ ಹಲವು ಮಿತಿಗಳಿವೆ.‘ನೆನೆಯದಿರಣ್ಣ ಭಾರತದೊಳಿಂ ಪೆರರಾರಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ’ಎನ್ನುವ ಪಂಪನಿಗೆ ಆಂತರ್ಯದಲ್ಲಿ ಅರ್ಜುನನಿಗಿಂತಲೂ ಕರ್ಣನನ್ನೆ ಮೆಚ್ಚಿಕೊಳ್ಳಬೇಕೆನಿಸಿದರೂ ಪ್ರಭುತ್ವದ ಪರವಾದ ಧ್ವನಿಯನ್ನು ವ್ಯಕ್ತಪಡಿಸಬೇಕಾದ ವೈಯಕ್ತಿಕ ಅನಿವಾರ್ಯತೆಗೆ ಒಳಗಾಗುವ ಮೂಲಕ ತನಗೊಂದು ಚೌಕಟ್ಟನ್ನು ತಾನೇ ನಿರ್ಮಿಸಿಕೊಳ್ಳತ್ತಾನೆ. ಕರ್ಣ, ಏಕಲವ್ಯ, ಶಂಭೂಕ ಇವರೆಲ್ಲಾ ದಮನಿತ ಧ್ವನಿಗಳು. ಇವರ ಪರವಾದ ಗಟ್ಟಿ ನಿಲುವು ತಳೆಯುವ ಯುಗಧರ್ಮವೊಂದನ್ನು ಪಂಪನ ಕಾಲದಿಂದ ನಿರೀಕ್ಷಿಸುವುದು ಕಷ್ಟ. ಆದರೆ ಕುವೆಂಪು ಅವರಿಗೆ ಅದು ಕಾಲದ ಅಗತ್ಯವಾಗಿತ್ತು.

ಕುವೆಂಪು  ಮಹಾಕಾವ್ಯ ಬರೆಯುವ ಹೊತ್ತಿಗೆ ವಿಶ್ವ ಸಾಹಿತ್ಯದಲ್ಲಿ ಮಹಾಕಾವ್ಯ ರಚಿಸುವ ಆಸಕ್ತಿ ಸಂಪೂರ್ಣವಾಗಿ ಸ್ಥಗಿತಗೊಂಡಿತು. ೧೬,೧೮ನೇ ಶತಮಾನದ ಕೊನೆಯ ಭಾಗದಲ್ಲಿ ಇಂಗ್ಲೆಂಡ್, ಯೂರೋಪ್ ಸಾಹಿತ್ಯ ವಲಯದಲ್ಲಿ ಮಹಾಕಾವ್ಯ ಬರೆಯುವುದು ಈ ಕಾಲಮಾನಕ್ಕೆ ಒಗ್ಗದು; ಅದು ಅಪ್ರಸ್ತುತವೆಂಬ ಭಾವನೆ ಬಲವಾಗಿತ್ತು. ಅದನ್ನು ಹೂತುಬಿಡುವುದೇಲೇಸು ಎಂಬ ಅಭಿಪ್ರಾಯ ವಿಮರ್ಶಾವಲಯದಲ್ಲಿಯೂ ಇತ್ತು. ಅವುಗಳ ಸ್ಥಾನದಲ್ಲಿ ಭಾವಗೀತೆಗಳು, ಕಥನ ಕಾವ್ಯಗಳು ಬಂದು ಬಿಟ್ಟಿದ್ದವು. ಆದರೆ , ದೇಸೀ ಸೃಜನಶೀಲತೆ ಇದರಿಂದ ಮಂಕಾಗಲಿಲ್ಲ. ಪಶ್ಚಿಮ ಪ್ರಣೀತ ವಿಚಾರಧಾರೆಗಳ ದಟ್ಟ ಪ್ರಭಾವದ ನಡುವೆಯೂ ಭಾರತೀಯ ಸಾಹಿತ್ಯದಲ್ಲಿ ಮಹಾಕಾವ್ಯರಚನೆ ಮುಂದುವರಿದುಕೊಂಡು ಬಂದದ್ದು ಗಮನಾರ್ಹ ಅಂಶ. ಇಂಗ್ಲಿಷ್‌ನಲ್ಲಿ ಬಂದ ಮಹರ್ಷಿ ಶ್ರೀ ಅರವಿಂದರ ‘ಸಾವಿತ್ರಿ’ ಬಂಗಾಳಿಯಲ್ಲಿ ಮೈಖೇಲ್ ಮಧುಸೂಧನದತ್ತರ ‘ಮೇಘನಾದವಧಾ’, ಹಿಂದಿಯಲ್ಲಿ ಜಯಶಂಕರ್ ಪ್ರಸಾದ್ ಅವರ ‘ಕಾಮಾಯಿನೀ’, ಮೈಥಿಲೆ ಶರಣ ಗುಪ್ತರ ‘ಸಾಕೇತ’ (ರಾಮಾಯಣ), ‘ಯಶೋಧರ’ (ಬೌದ್ಧ), ಬಾಲಕೃಷ್ಣ ಶರ್ಮರ ‘ಉರ್ಮಿಳಾ’ ಅಯೋಧ್ಯ ಸಿಂಗ್ ಉಪಾಧ್ಯಾಯರ, ‘ವೈದೇಹಿ ವನವಾಸ’ ತೆಲುಗಿನಲ್ಲಿ  ವಿ.ಸತ್ಯನಾರಾಯಣ ಅವರ ‘ರಾಮಾಯಣ ಕಲ್ಪವೃಕ್ಷಮು’ ಮೊದಲಾದವುಗಳು  ವಸಾಹತುಶಾಹಿ ಸಂದರ್ಭದ ಮಹಾಕಾವ್ಯಗಳು. ನಮ್ಮ ಆಧುನಿಕ ಹಾಗೂ ಮಧ್ಯಯುಗೀನ ಬಹುತೇಕ ಮಹಾಕವಿಗಳನ್ನು ಆಕರ್ಷಿಸಿದ  ಕಾವ್ಯ ವಸ್ತು ಮಹಾಭಾರತಕ್ಕಿಂತ  ಹೆಚ್ಚಾಗಿ ರಾಮಾಯಣವೆನ್ನುವುದು ಇನ್ನೊಂದು ಅಂಶ.

ಕುವೆಂಪು ಪೂರ್ವಕವಿ ಸ್ಮರಣೆಯಲ್ಲಿ ನೆನೆಸುವುದು ವಾಲ್ಮೀಕಿ, ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್  ಪಾಶ್ಚಾತ್ಯ ಕವಿಗಳಿಗ, ನಾರಣಪ್ಪ, ಪಂಪ ಕನ್ನಡ ಕವಿಗಳಿಗೆ, ವ್ಯಾಸ, ಭಾಸ, ಭವಭೂತಿ, ಕಾಳಿದಾಸ ಮೊದಲಾದ ಸಂಸ್ಕೃತ ಕವಿಗಳಿಗೆ, ‘ರಾಘವಾಭ್ಯುದಯ’ಯ ಬರೆದ ತೆಲುಗಿನ ನನ್ನಯ ‘ತೊರೆವೆ ರಾಮಾಯಣ’ ಬರೆದ ಕನ್ನಡದ ನರಹರಿ ‘ರಾಮಚರಿತ ಮಾನಸ’ ಬರೆದ ಹಿಂದಿಯ ತಿಳಸಿದಾಸ, ಬಂಗಾಳಿ  ರಾಮಾಯಣದ ಕರ್ತೃವಾದ ಕೃತ್ತಿವಾಸ, ತಮಿಳಿನಲ್ಲಿ ರಾಮಾಯಣ ಬರೆದ ಕಂಬ ಕವಿ ಜೊತೆಗೆ ಫಿರ್ದೂಸಿ ಅರವಿಂದರಿಗೆ ನಮನ ಸಲ್ಲಿಸುತ್ತಾರೆ. ಇದರಲ್ಲಿ ಉದಾತ್ತ ಲೋಕ ದೃಷ್ಟಿ ವ್ಯಕ್ತವಾಗುತ್ತದೆ. ಪಾಶ್ಚಾತ್ಯ- ಪೌರಾತ್ವ ಸಮನ್ವಯ, ಧರ್ಮ  ದಾಶರ್ನಿಕ  ದೃಷ್ಟಿ, ಆದಿ ಕವಿಗಳ ಪಾಂಡಿತ್ಯ ಪೂಜ್ಯತೆ, ದೇಶಭಾಷಾ ಏಕಾತ್ಮಕತೆಯ ನಿಲುವು, ಪರಂಪರೆಯ ಪ್ರಜ್ಞೆ ಇತ್ಯಾದಿಗಳನ್ನು ಗಮನಿಸಬಹುದು.

ಕುವೆಂಪು ಅವರು ರಾಮಾಯಣದರ್ಶನಂ ಬರೆಯಲು ತೊಡಗಿಕೊಂಡ ಕಾಲ ಜಾಗತಿಕ ಇತಿಹಾಸದಲ್ಲಿಯೆ ಬಹು ಮುಖ್ಯವಾದುದು. ಅದಾಗಲೇ ವಸಾಹತ್ತೋತ್ತರ ರಾಜಕೀಯ ಚಿಂತನೆಗೆ ಬಲಗೊಳ್ಳುತ್ತದ್ದ ಕಾಲ. ಮಹಾಯುದ್ಧ, ಸಾಮ್ರಾಜ್ಯಶಾಹಿ ಅಟ್ಟಹಾಸ, ವಸಾಹತು ವಿರೋಧಿ ವಿಪ್ಲವ, ಬದಲಾವಣೆಯ ಸಾಂಸ್ಕೃತಿಕ ಸಂಘರ್ಷ, ಪ್ರಧಾನ ಅಧೀನ ಮನೋಭಾವದೊಂದಿಗಿನ ತಿಕ್ಕಾಟ, ಯಜಮಾನ್ಯದ ನಿರಾಕರಣ, ರಾಷ್ಟ್ರೀಯತೆಯೇ ಮೊದಲಾದ ಆಲೋಚನೆಗಳು ದೇಶೀಯ ಸಂಸ್ಕೃತಿಯ ರೂಪಕವಾಗಿ ಕಾಣಿಸಿಕೊಂಡ  ಸನ್ನಿವೇಶವೂ ಅದೇ ಆಗಿದೆ.[3]

ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯೇ ಒಂದು ರಾಷ್ಟ್ರೀಯತೆಯ ರೂಪ; ಯುಗಧರ್ಮ ಮಾಪಕ. ರಾಜ್ಯದಿಂದ ರಾಷ್ಟ್ರ, ರಾಷ್ಟ್ರದಿಂದ ವಿಶ್ವಕ್ಕೆ ವಿಕಾಸಗೊಳ್ಳುವ ಮಾನವ ಚೇತನದ  ಗ್ರಹಿಕೆಗೆ ಆಧ್ಯಾತ್ಮವೂ , ವಿಜ್ಞಾನವು ಜೊತೆಯಾಗಿ ಸಾಗಬೇಕಾದ  ಅನಿವಾರ್ಯತೆಯನ್ನು ಒತ್ತಿ ಹೇಳುವ ಮಹಾನ್ ಕೃತಿಯಾಗಿ ಇದನ್ನು ಗುರುತಿಸಬಹುದು. “ಈ ರಾಷ್ಟ್ರೀಯ ನವೋದಯದ ಒಡಲಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಜ್ಞಾನಯೋಗದ ಬೆಂಕಿಯಿದ್ದರೆ ಗಾಂಧೀಜಿಯವರ ಕರ್ಮಯೋಗದ ಬೆಳಕು ಇದೆ” [4]

ಕುವೆಂಪು ಆರಂಭದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ, ವಿವೇಕಾನಂದರಿಂದ ಪ್ರಭಾವಿತರಾಗಿ ರಾಷ್ಟ್ರೀಯತೆಯ ಪರಿಕಲ್ಪನೆಗೆ ಹೊಸ ಅರ್ಥ ನೀಡಲು ಪ್ರಯತ್ನಿಸಿದರು. ಕೊನೆಕೊನೆಗೆ ರಾಷ್ಟ್ರೀಯತೆಯನ್ನೂ ಪ್ರಶ್ನಿಸಿ ವಿಶ್ವಪ್ರಜ್ಞೆಗೆ ಹೊರಳಿ ‘ಅನಿಕೇತನ’ವಾಗುವುದನ್ನು ಪ್ರತಿಪಾದಿಸಿದರು.[5]

ಸರ್ವೋದಯ, ಪೂರ್ಣದೃಷ್ಟಿ, ಸಮನ್ವಯವೇ ಅವರ ಜೀವನ ಸಿದ್ಧಾಂತವಾಗುವಲ್ಲಿ ಶ್ರೀ ರಾಮಾಯಣವನ್ನು ಸೃಜಿಸಿದ ಕುವೆಂಪು ಅವರಿಗೆ ‘ಶ್ರೀ ರಾಮಾಯಣವೇ ತನ್ನನ್ನು ಸೃಜಿಸಿದಂತೆ’ ಭಾಸವಾಯಿತು.

ರಾಮಾಯಣದ ಬಗೆಗಿನ ವಿಶೇಷ ಆದರ ಅಭಿಮಾನಗಳಿಂದಲೇ ಕವಿ ಈ ಮಹಾವಸ್ತುವನ್ನು ಆಯ್ದುಕೊಂಡರೆ? ಎಂಬ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ‘ಕರಿಸಿದ್ದ’ ಕವಿತೆಯಲ್ಲಿ ಕುವೆಂಪು ಹೇಳುವ ಹಾಗೆ ‘ರಾಮನಂತಹ ರಾಜರನೆ ಕುರಿತು ಕೊಬ್ಬಿಹ ಕಾವ್ಯ ರಚಿಸಿಹರು’, ತಿರೆಗೆಲ್ಲ ಶ್ರೀರಾಮನೊಬ್ಬನೇ ಎಂಬರೂ ಬೆಪ್ಪುಗಳೆ’ ಎಂಬ ಮಾತುಗಳಲ್ಲಿ ಶ್ರೀ ರಾಮನ ವ್ಯಕ್ತಿತ್ವವನ್ನು ಸಾಮಾನ್ಯೀಕರಣ ಪ್ರಕ್ರಿಯೆಗೆ ಒಳಪಡಿಸುವ ಪ್ರಯತ್ನ ಮಾಡುತ್ತಾರೆ.

‘………..ಒಬ್ಬೊಬ್ಬ ಗಂಡನಲ್ಲಿ
ಶ್ರೀರಾಮನಡಗಿಹನು; ಒಬ್ಬೊಬ್ಬ ಹೆಂಡತಿಯ
ಎದೆಯೊಳಿರುವಳು ಸೀತೆ. ಇಂತಿರಲು ವಾಲ್ಮೀಕಿ
ಬರೆದಿರುವ ರಾಮಾಯಣವು ಕೋಟಿ ಕಾವ್ಯಗಳ-
ಲೊಂದೆನ್ನಲತಿಶಯವೇ?’ (ಕರಿಸಿದ್ಧ)

ಗಾಂಧಿಜೀ ಈ ಯುಗದ ಆದರ್ಶವಾದರೆ ಗಾಂಧಿಜೀಗೆ ರಾಮನೇ ಬಹುದೊಡ್ಡ ಆದರ್ಶ; ಆದರ್ಶಪುರುಷ. ‘ಪತಿತರನ್ನು ಪಾವನ ಮಾಡುವ ಕರುಣಾಮೂರ್ತಿಯೆಂದು ಅವರು ನಂಬಿದ್ದರು. ಸ್ವತಃ ಗಾಂಧೀಜಿಯವರೇ ರಾಮಾಯಣ ಕಥೆಯ ಅಸ್ತಿತ್ವಕ್ಕೆ ಸಾಕ್ಷಿಯಾಗಿ ಬಾಳಿದವರು.[6] ರಾಮರಾಜ್ಯದ ಕನಸು ಕಂಡವರು. ಉದಾರ ಮಾನವ ಪ್ರೇಮವೇ ಗಾಂಧೀ ಪ್ರಣೀತ ವಿಚಾರಧಾರೆಗಳ ಅಂತಃಸತ್ವವಾಗಿತ್ತು. ಬಹು ಪತ್ನಿತ್ವದ ಬದಲಾಗಿ ಏಕಪತ್ನಿತ್ವವನ್ನು ಪ್ರತಿಪಾದಿಸುವುದಕ್ಕೂ ರಾಮ ಆದರ್ಶ. ಅಸ್ಪೃಶ್ಯತೆ, ಸ್ತ್ರೀ ದೈವಿಕತೆ, ರಾಷ್ಟ್ರಭಕ್ತಿ, ಅಹಿಂಸಾ ಪರದೃಷ್ಟಿ, ಸತ್ಯ, ಧರ್ಮ ನಿಷ್ಠೆ ಇವೇ ಮೊದಲಾದ ಸಮಕಾಲೀನ ಗಾಂಧೀ ಚಿಂತನೆಯೊಂದು ಕುವೆಂಪು ಅವರನ್ನು ಆಕರ್ಷಿಸಿದ ಪರಿಣಾಮ ಸೃಷ್ಟಿಯೇ ಈ ರಾಮಾಯಣ ದರ್ಶನಂ. “ತನ್ನ ದಯಿತೆಯನೊಲಿದ ಕಾರಣಕೆ ಗುರುಕಣಾ ರಾಮಚಂದ್ರ” ಎನ್ನುವ ಕುವೆಂಪುವಿಗೆ ಶ್ರೀ ರಾಮ ಮುಖ್ಯವಾಗುವುದು ರಾವಣನ್ನು ಕೊಂದ ಕಾರಣಕ್ಕಾಗಿ ಅಲ್ಲ; ತನ್ನ ಪತ್ನಿ ಸೀತೆಯನ್ನು ಪ್ರೀತಿಸಿದ ಕಾರಣಕ್ಕೆ ಶ್ರೀರಾಮ ಗುರು. ಪ್ರಭು ಸಂಸ್ಕೃತಿಯಿಂದ ವನ ಸಂಸ್ಕೃತಿಗೆ ಒಲಿದು ಬಂದ ಕಾರಣಕ್ಕೆ ರಾಮ ಕವಿಗೆ ಪ್ರಿಯ

ಗಿರಿವನ ಪ್ರೇಮ ಸಾದೃಶ್ಯದಿಂ ಸಮರಸಂ
ಸಮಹೃದಯಿ  ರಾಮರಸಋಷಿಗೆ
(ಶ್ರೀರಾಮಾಯಣ ದರ್ಶನಂ)

ಇದು ಕವಿಯ ಅಂತರಂಗ ದರ್ಶನ. ಇದರ ಜೊತೆಗೆ ಉಜ್ವಲ ರಾಷ್ಟ್ರೀಯತೆ ಮತ್ತು ನಾಡು ನುಡಿಯ ಪ್ರೇಮದ ಅಭಿವ್ಯಕ್ತಿಗೂ ಈ ವಸ್ತು ಪರ್ಯಾಯವಾಗಿ ಬಳಕೆಯಾದುದು ಸಾಂದರ್ಭಿಕ ಅಗತ್ಯ. ಅವರೇ ಹೇಳುವಂತೆ ಇದು ‘ಪುರುಷೋತ್ತಮನ ಲೋಕಲೀಲಾ ದರ್ಶನ.’

ಭಾರತದಲ್ಲಿ ರಾಷ್ಟ್ರೀಯತೆ ಎನ್ನುವುದು ವಸಾಹತು ಪ್ರಭುತ್ವದ ಕೊಡುಗೆ.[7] ಭಾರತೀಯ ಮನೋಸ್ಥಿತಿಯು ಅದು ರೂಪಿಸಿದ ಆಕರ್ಷಣೆಗಳಿಗೆ ಸ್ಥಿತ್ಯಂತರಗೊಳ್ಳುವ ಸಂಕ್ರಮಣಕಾಲದಲ್ಲಿ ರಾಷ್ಟ್ರೀಯ ಪ್ರಜ್ಞೆ ಎಂಬುದು ಅದರ ಪರ್ಯಾಯ, ಪ್ರತಿಚಿಂತನ ಕ್ರಮವಾಗಿ ಬಳಕೆಯಾಯಿತು. ರಾಷ್ಟ್ರವೂ ಒಂದು ವ್ಯಕ್ತಿತ್ವವೆಂದು ಪರಿಭಾವಿಸಲಾಯಿತು. ಅದು ಪರಕೀಯರ ವಸ್ತುವಾಗುವುದು ಕೋಟಿ ಕೋಟಿ ಭಾರತೀಯರ ಆತ್ಮಗೌರವಕ್ಕೆ ಧಕ್ಕೆ ತರುವ ವಿಚಾರವೇ ಆಗಿತ್ತು. ಹಾಗಾಗಿ ಇಡೀ ದೇಶವೇ ಒಂದು ಸ್ತ್ರೀ ರೂಪಕವಾಯಿತು. ಭಾರತಮಾತೆ, ಸೀತಾಮಾತೆ ಇವರಿಬ್ಬರೂ ಮಾತೃತ್ವದ ಪ್ರತೀಕವೇ. ರಾವಣನ ಅತಿಕ್ರಮಣ, ಆಕ್ರಮಣಕ್ಕೆ ಒಳಗಾದ ಸೀತೆಯನ್ನು ಬಂಧನದಿಂದ ಬಿಡುಗಡೆ ಮಾಡುವುದು ಶ್ರೀ ರಾಮನ ಪುರುಷ ಪ್ರಯತ್ನ ಗಾಂಧೀವಾದದ ಆದರ್ಶಕ್ಕೆ ಪ್ರತಿಯಾಯಿತು.

ಆದರೆ, ಬ್ರಿಟಿಷ್ ಪ್ರಭುತ್ವವೆನ್ನುವುದು ವೈದಿಕ ರಾಮಾಯಣದ ರಾವಣತ್ವದ ಪ್ರತೀಕವೆಂದೂ, ಸ್ವಾತಂತ್ರ್ಯ ಹೋರಾಟವೆನ್ನುವುದು ರಾಮ-ರಾವಣರ ಹಿಂಸಾತ್ಮಕ ಯುದ್ಧವೆಂದೂ ಇದರರ್ಥವಲ್ಲ. ರಾವಣತ್ವವನ್ನೂ ಸಂಸ್ಕೃತಿ ಪ್ರಜ್ಞೆಯ ವಿಕಾಸವೆಂಬಂತೆ ಕುವೆಂಪು ಸ್ವೀಕರಿಸುತ್ತಾರೆ. ಪರಕೀಯ ಪ್ರಭುತ್ವವನ್ನು ಕುವೆಂಪು ವಿರೋಧಿಸುವುದ ನಾಡು, ನುಡಿ ರಾಷ್ಟ್ರದ ಮೇಲಿನ ಅಪರಿಮಿತ ಪ್ರೇಮದ ದೃಷ್ಟಿಯಿಂದ ಎನ್ನುವುದು ಗಮನಾರ್ಹ. ಈ ಪ್ರೇಮವು ರಾಮನ ಪ್ರೇಮದಂತೆ ಪರಿಶುದ್ಧವಾದುದು; ನಿಷ್ಕಳಂಕವಾದುದು.

ನವೋದಯವೆನ್ನುವುದೇ ‘ಪ್ರೇಮ’ಕ್ಕೆ ಪರ್ಯಾಯವಾದ ಒಂದು ಸಂವೇದನೆ. ಪ್ರೇಮ ಒಂದು ಪ್ರಧಾನ ವಸ್ತು. ಗಿರಿ ಪ್ರಕೃತಿ ಪ್ರೇಮ, ನಾಡು ನುಡಿ ಪ್ರೇ, ದೇಶ ಪ್ರೇಮ, ಪತಿ ಪತ್ನಿಯರ ಪ್ರೇಮ, ಜೀವನ ಪ್ರೇಮ, ಮಾನವ ಪ್ರೇಂ ಇತ್ಯಾದಿಗಳು ಯುಗದ ಬಹುದೊಡ್ಡ ಸಂವೇದನೆಯಾಗಿ ರೂಪಗೊಂಡಿದೆ. ಶ್ರೀ ರಾಮಾಯಣ ದರ್ಶನಂ ಈ ಪ್ರೇಮ ದರ್ಶನಕ್ಕೊಂದು ದರ್ಪಣ; ಕರುಣೆಗೆ ಹಿಡಿದ ಕನ್ನಡಿ. ಪ್ರೇಮ ಭಾವದಲ್ಲಿ ಕ್ರೌರ್ಯಕ್ಕೆ ಅವಕಾಶವಿಲ್ಲ. ಕರುಣೆ, ಪಶ್ಚಾತ್ತಾಪ, ಶೋಕದ ಹೊಳೆಯಲ್ಲಿ ಆತ್ಮ ಹಳೆಯ ಕೊಳೆಯನ್ನು ಕಳೆದುಕೊಂಡು ಪರಿಶುದ್ಧವಾಗುವ ರಸಭಾವವೇ ಈ ಪ್ರೇಮ್ ಸ್ಥಾಯಿ. “ಪೆರ್ಮೆಗೊಲ್ಮೆಯೆ ಚಿನ್ಹೆ”. ಹಿಂಸೆ, ಕೊಲೆ ಜೀವನವನ್ನು ಪ್ರತೀಸುವುದಕ್ಕೆ ವಿರುದ್ಧವಾದ ಕ್ರಿಯೆ. ಅದು ಸರ್ವತಾ ಮಾನವ ಗುಣವಲ್ಲ. ಕ್ರೌಂಚ ಮಿಥುನದಲ್ಲಿ ಗಂಡು ಹಕ್ಕಿಯ ಹತ್ಯೆ ಮಾಡಿದ ನಿಷಾದನ ಕ್ರೌರ್ಯ ಕೊಲೆಯಾಗಿ ಕಾಣಿಸಿತು. ವಾಲ್ಮೀಕಿಗೆ. ಹೆಣ್ಣು ಹಕ್ಕಿಯ ಪ್ರೇಮ ಯಾತನೆ, ಹೊರಳಾಟ, ಚೀತ್ಕಾರ ಋಷಿ ಹೃದಯದಲ್ಲಿ ಕರುಣೇಯನ್ನೇ ಉಕ್ಕಿಸಿತು.

‘ಮಾಣ್‌ ನಿಷಾದನೆ ಮಾಣ್‌! ಕೊಲೆ ಸಾಲ್ಗುಮಯ್ಯೊ ಮಾಣ್‌
ನಲಿಯುತಿರೆ ಬಾನ್‌ ಬನದ ತೊರೆ ಮಲೆಯ ಭುವನಕವನಂ
ಸುಖದ ಸಂಗೀತಕೆ ವಿಷಾದಮಂ ಶ್ರುತಿಯೊಡ್ಡಿ
ಕೆಡಿಸುವಯ್‌? ನಾನುಮೊರ್‌ ಕಾಲದೋಳ್‌ ನಿನ್ನವೊಲೆ
ಕೊಲೆಯ ಕಲೆಯಲ್ಲಿ ಕೋವಿದನಾಗಿ ಮಲೆತಿರ್ದೆನಯ್‌
ನಾರದ ಮಹಾಋಷಿಯ ದಯೆ ಕಣಾ ಕರುಣೆಯಂ ಕಲಿತೆನ್‌!”

ಅನಾಥ ದಸ್ಯ ಶಿಶು ಮಂಥರೆಯನ್ನು ಎತ್ತಿ ತರುವಲ್ಲಿ ಕೈಕೆಯ ತೋರಿದ ಮಾನವ ಪ್ರೇಮ ಇಂದಿಗೂ ದಾರಿದೀಪ. ಹೆಣ್ನು ಶಿಶುವಿನ ಬಗೆಗಿನ ಅನಾದರ, ಭ್ರೂಣ ಹತ್ಯೆ, ಶಿಶು ಹತ್ಯೆ, ನವಜಾತ ಶಿಶುವನ್ನು ತೊಟ್ಟಿಯಲ್ಲೋ, ರಸ್ತೆ ಬದಿಯಲ್ಲೋ ಎಸೆದು ಹೋಗುವ ಆಧುನಿಕ ಜೀವನದ ಕ್ರೌರ್ಯಕ್ಕೆ ಇದು ಒಂದು ಉತ್ತರವೆಂಬಂತೆ ಕುವೆಂಪು ಈ ಪ್ರಸಂಗವನ್ನು ಸೃಷ್ಟಿಸಿದ್ದಾರೆ.

ನಡೆದು ನೋಡಲ್ಕೆ ಕಾಣಿಸಿತೊಂದು ದಸ್ಯಶಿಶು
ಮುಳ್‌, ಮಣ್ಣು. ತರಗಲೆಯಿಡಿದ ನೆಲದ ಮೇಲಿರುವೆ
ಮುತ್ತಿ, ಹಾ, ವಿಕೃತಿ ವಕ್ರತೆ ರೂಹುಗೊಂಡಂತೆ!
ಪೆತ್ತವರ ಸುಳಿವಿಲ್ಲದಿರ್ದ ಆ ಎಣ್‌ ಪಸುಳೆಯಂ
ಪಿಡಿದೆತ್ತಿ, ಕಟ್ಟಿರುಂಪೆಯನೊರಸಿ, ಸಂತೈಸಿದನ್‌

ಅವಮಾನ, ಅಂಜಿಕೆ, ಉಪೇಕ್ಷೆಗೆ ಒಳಗಾಗುವ ಮಂಥರೆಯ ಬಗ್ಗೆ ಕನಿಕರಿಸುವ ಕುಎಂಪು ಸಹಾನುಭೂತಿ, ಸಂಯಮದಿಂದಲೇ ಆ ಪಾತ್ರವನ್ನು ಪುನರ್‌ ವಿವೇಚನೆಗೆ ಒಳಪಡಿಸಿದ್ದಾರೆ. ‘ಮಮತೆಯ ಸುಳಿ’ ಅವಳು. ಜಗತ್ತಿನ ದೃಷ್ಟಿಯಲ್ಲಿ ಘೋರ ಪಾತಕಿಯಾಗಿ ಕಾಣುವ ಅವಳ ಕಾರ್ಯ, ಲೋಕ ಕಲ್ಯಾಣದ ಉದಾತ್ತ ಉದ್ದೇಶವನ್ನು ಹೊಂದಿದೆ ಎಂಬ ಭಾವನೆಯಲ್ಲಿ ಸಾರ್ಥಕತೆ ಕಾಣುತ್ತದೆ. ಲೋಕದ ದೃಷ್ಟಿಯಲ್ಲಿ ರಾವಣ, ಮಂಥರೆ, ಚಂದ್ರನಖಿ ಇವರೆಲ್ಲಾ ಪಾಪಿಗಳಾದರೂ ಕುವೆಂಪು ಕಾವ್ಯದಲ್ಲಿ ಉದಾರ ಮಾನವೀಯ ಚಿಂತನೆಯ ಸೆಲೆಯಲ್ಲಿ ಮಿಂದು ಪುನೀತರಾಗುವ ಕಲ್ಪನೆಯಿದೆ. ‘ಪಾಪಿಗೂ ಉದ್ಧಾರವಿದೆ’ ಎಂಬ ನಿಲುವಿನ್ಲಲಿ ಮಾನವ ಪ್ರೇಮದ ಉನ್ನತ ಆದರ್ಶವಿದೆ. ಇದರಂತೆ ಗಿರಿವನ ಪ್ರಕೃತಿ ಪ್ರೇಮ. ದಾಂಪತ್ಯ ಪ್ರೇಮ, ಭ್ರಾತೃಪ್ರೆಮ, ಪುತ್ರ ಪ್ರೇಮ, ಮಾತಾ ಪಿತೃ ಪ್ರೇಮ, ವಾತ್ಸಲ್ಯ, ಸ್ವಾಮಿಭಕ್ತಿಯ ಉತ್ಕಟ, ಉಜ್ವಲ ಪ್ರೇಮ ಪೂರಣದಿಂದ ಹೃದಯ ಸಂಸ್ಕಾರಕ್ಕೆ ಈ ಮಹಾಕಾವ್ಯ ಹಾದಿ ಮಾಡಿಕೊಡುತ್ತದೆ.

ಕುವೆಂಪು ದೃಷ್ಟಿಯಲ್ಲಿ ಹೆಣ್ಣು ಮಾತೃ ಸ್ವರೂಪಿ. ನವೋದಯದ ಬಹುತೇಕ ಕವಿಗಳಿಗೆ ಹೆಣ್ಣು ಒಂದು ಪ್ರಮುಖ ಕಾವ್ಯ ವಸ್ತು. ಪುತೀನ ಅವರಿಗೆ ಹೆಣ್ಣು ಒಂದು ಜಿಜ್ಞಾಸೆ, ಬೇಂದ್ರೆಯವರಿಗೆ ಸಖಿ, ಮನದನ್ನೇ, ಕೆಎಸ್‌ಎನ್‌ ಅವರಿಗೆ ಇಹದ ಪರಿಮಳದ ಹಾದಿ. ಕುವೆಂಪು ಅವರಿಗೆ ದೇವತೆ.[8] ಅಲ್ಲಿಯ ದಾಂಪತ್ಯ ಪರಿಕಲ್ಪನೆಯೂ ಕೌಟುಂಬಿಕ ಚೌಕಟ್ಟಿನಾಚೆ ಹೆಚ್ಚಾಗಿ ಹೋಗುವುದಿಲ್ಲ.

ಕುವೆಂಪು ಅವರ ದಾಂಪತ್ಯದ ಪರಿಕಲ್ಪನೆಗೆ ಆಧ್ಯಾತ್ಮಿಕ ಸ್ಪರ್ಶವಿದೆ. ಒಂದು ಬಗೆಯ ಪಾವಿತ್ರ್ಯದ ಪರಿವೇಷವಿದೆ.[9] ದಶರಥ-ಕೈಕೆಯಿ, ಸೀತಾ-ರಾಮ, ಊರ್ಮಿಳೆ-ಲಕ್ಷ್ಮಣ, ಮಂಡೋದರಿ-ರಾವಣ ಇವರೆಲ್ಲಾ ದಾಂಪತ್ಯ ಜೀವನದ ವಿವಿಧ ಮಾದರಿಗಳಿಗೆ ಸಾಕ್ಷಿಯಾದವರು. ದುಃಖ, ವಿರಹ, ಸಂತಾಪ, ವಿಷಾದದ ನಡುವೆಯೂ ಪ್ರೇಮ ಆಮರವಾದುದು ಎನ್ನುವ ಸಂದೇಶ ಇಲ್ಲಿ ವ್ಯಕ್ತವಾಗುತ್ತದೆ. ದಶರಥನ ಕುಟುಂಬ ಜೀವನದ ಸಾಮಾನ್ಯ ಚಿತ್ರಣ ನೀಡುವ ಕುವೆಂಪುವಿಗೆ ದಶರಥನೆಂಬ ಚಕ್ರವರ್ತಿ ಮುಖ್ಯನಲ್ಲ; ಅವನ ಯುದ್ಧ, ಮನೋಲ್ಲಾಸ, ರಾಜವೈಭವ ಮುಖ್ಯವಲ್ಲ. ಅಳುವ ಮಗುವನ್ನು ಸುಮ್ಮನಿರಿಸಲಾಗದ ಮನುಷ್ಯ ಸಹಜ ಕಳವಳ, ದುಃಖಕ್ಕೆ ಒಳಗಾಗುವ ಒಬ್ಬ ಸಾಮಾನ್ಯ ತಂದೆಯಾಗಿ ಕುವೆಂಪುಗೆ ಕಾಣುತ್ತಾನೆ. ದುಃಖ ದಾವಾಗ್ನಿಯಲಿ ಬೇಯುವ ಕೈಕೆಯಿಯನ್ನು ಸಂತೈಸುವಲ್ಲಿ ದಶರಥ ಒಬ್ಬ ಸಾಮಾನ್ಯ ಪತಿ. ಮನವೊಲಿಸುವ ಮನದನ್ನ!

ಕಲ್ಯಾಣಚೇತಸಿಯೆ, ಪೇಳ್‌,
ಪ್ರೇಮಪಕ್ಷಿಯ ಹೇಮಪಂಜರಮೆ, ಅಳಲಿದೇನ್‌?
ಮುನಿಸೆ ನನ್ನೊಳ್‌, ಜೀವಿತೇಶ್ವರಿಯೇ? ಹೇಮಾಂಗಿನಿಯೆ
ಅದಕ್ಕೆ ಕೈಕೆಯ ಉತ್ತರವೂ ಹರಿತವಾಗಿದೆ:
“…ನಾಲಗೆಯ ಜಾಣ್ಮೆಗೆನ್ನಾಸೆ ತೀರದಯ್‌”
“…………..ಪೀಡಿಪೆಯೇಕೆ?
ನಿನಗಿಂ ಮಿಗಿಲ್‌ ಪ್ರಿಯರೆ, ಪೇಳ್‌, ನನಗೆ ಮೂಜಗದಿ?
ಪ್ರಾಣಮಂ ಪತ್ತುವಿಟ್ಟಾದೊಡಂ ನಿನ್ನಿಷ್ಟಮಂ
ಸಲಿಪೆನೆಂದಾಣೆಯಿಟ್ಟಾಡಿದೆನ್‌. ಮತ್ತಿದೇನ್‌
ಪುರುಷರೊಳ್‌ ರಾಮನೆನಗೆಂತಂತೆ ಪೆಣ್ಗಕೊಳ್‌
ನೀನಲ್ತೆ, ಕುಸುಮಕೋಮಲೆ, ಪ್ರಿಯತಮಂ!

ರಾಮನ ಮೇಲಿನ ಮೋಹವನ್ನೂ ಬಿಡದ, ಕೈಕೆಯ ಮೇಲಿನ ಮೋಹವನ್ನೂ ಬಿಡದ ದಶರಥ ಆ ಬೆಂಕಿಯಲ್ಲಿ ತಾನೇ ಸುಟ್ಟು ಉರಿದು ಹೋಗುತ್ತಾನೆ. ಕೌಸಲ್ಯ, ಲಕ್ಷ್ಮಣನ ದೃಷ್ಟಿಯಲ್ಲಿ ಅದು ‘ಕಿರುವೆಂಡತಿ’ಗೆ ಮಾರು ಹೋದ ‘ಮುಪ್ಪುದೊರೆ’ಯ ಅಂಧ ಪ್ರೇಮ.

ಸೀತೆ ರಾಮರ ಪ್ರೇಮ ಇನ್ನೊಂದು ಮಾದರಿ. ಎಷ್ಟು ಕಷ್ಟವಾದರೂ ರಾಮನ್ನು ಬಿಟ್ಟಿರರಲರೆ ಎನ್ನುವ ಸೀತೆಗೆ ರಾಮನ ಹೊರತು ಅನ್ಯ ಜೀವನವಿಲ್ಲ; ರಾಮನಿಗೂ ಅಷ್ಟೆ. ಸೀತೆಯ ಅವನ ಉಸಿರಿಗೆ ಉಸಿರು: ‘ತನ್ವಂಗಿ’. ಪತಿ ಪತ್ನಿಯರ ಸಂಬಂಧ ಜೀವ ಮತ್ತು ಇಸುರು. ಸೀತೆ,

“ನಿನ್ನನಲ್ಲದೆ, ನಲ್ಲ, ಕೊಸಲ ನೆಲವನಲ್ಲ
ನಾನೊಲ್ದದಂದು, ಮೇಣಿಂದಿಗುಂ ಮನೆಯೆನಗೆ
ರಾಮನೆರ್ದೆಯಲ್ಲದೆಯೇ ಮಾವನವರಮನೆಯಲ್ತು.
ನೀನಿರಲ್ಕೆನ್ನೊಡನೆ ನಾಡಾದರೆಂತಂತೆ
ಕಾಡಾದೊಡಂ ಸುಖಿಯೆ ನಾಂ”

ಎನ್ನುತ್ತಾಳೆ. ರಾಮನ ಸಾನಿಧ್ಯ ಪ್ರೇಮಕ್ಕಾಗಿ ಪರಿತಪಿಸುವ ಸೀತೆಗೆ ರಾಮನು ಕಾಡಿನ ವರ್ಣನೆ ಭಯವನ್ನು ಮುಡಿಸುವ ಬದಲು ಕುತೂಹಲ ಮೂಡಿಸುತ್ತದೆ. ರಾಮನಿಗೂ ಪ್ರೇಮ ತುಂಬಿದ ಹೃದಯ ಧ್ವಾನ ಅರ್ಥವಾಗುತ್ತದೆ. ಪ್ರೀತಿಸಿದ ಜೀವಗಳು ಎಂದೂ ಅಗಲಬಾರದು ಎನ್ನುವ ನಿಲುವಿನಲ್ಲಿ ಊರ್ಮಿಳೆಯನ್ನು ಬಿಟ್ಟು ಇರುವ ಲಕ್ಷ್ಮಣನನ್ನು ನಟ್ಟ ನಡುರಾತ್ರಿಯಲ್ಲಿ ಕರೆದು ರಾಮ ಹೇಳುತ್ತಾನೆ: ‘ಈ ರಾತ್ರಿ ಕಳೆದು ಹಿಂತಿರುಗು ಅಯೋಧ್ಯೆಗೆ. ಊರ್ಮಿಳೆ ನಿನ್ನೆ ಕರೆದು ಗೋಳಾಡುತ್ತಿರುವಂತೆ ಕನಸ ಕಂಡೆ’ ಎನ್ನುತ್ತಾನೆ.

‘ಸೋಗಸಲ್ತೆ, ಜೊತೆಯಿರಲ್ಕೊಲಿದ ಪೆಣ್‌” ಇದು ಕವಿ ನಿಲುವೂ ಹೌದು. ‘ಕಲ್ದವಸಿ’ಯಲ್ಲಿ ಮಿಶ್ರಮಿಸಿದ ಲಕ್ಷ್ಮಣ ಚಿರ ವಿರಹಿಯಾಗಿ, ಸತಿಯನ್ನು ದೇವರಲ್ಲಿ ಬೇಡುವ ದೀನ ಪ್ರೇಮಿಯಾಗಿ ರಾಮ ಸೀತೆಗೆ ತೋರುವುದೂ ಇದೇ ಕಾರಣಕ್ಕಾಗಿ ರಾಮಾಯಣ ದರ್ಶನಂ ಮಹಾಕಾವ್ಯದ ಕೇಂದ್ರ ಚಿಂತನೆ ಚೆಲುವು, ಒಲವು, ಗೆಲುವು ಈ ಸರಳ ಸೂತ್ರವೊಂದನ್ನು ಪ್ರತಿಪಾದಿಸುವಂತೆ ತೋರುತ್ತದೆ. “ಒಲವು ಬಳಿಯಿರೆ ಚೆಲುವು ಬೇಟಮಂ ಕೊನರಿಸುವುದಲ್ತೆ?” ಪ್ರಕೃತಿಯ ಚೆಲುವಿನ ಲೋಕದಲ್ಲಿ ಒಲವು ಅರಳಿ ನಿಂದಿದೆ. ರಮ ಸೀತೆಯ ನೀರಾಟದ ವರ್ಣನೆಯಲ್ಲಿ ರಾಮನೆನ್ನುತ್ತಾನೆ.

“ನೀರಸೀರೆಯ ತೆರೆಯ ನಿರಿ ಮೆರೆವ
ತೊರೆನೀರೆಯೀಕೆಯಂ ಕಂಡು ಕರುಬದಿರೆನ್ನ
ಮಾವನ ಮಗಳೆ!”
ಅದಕ್ಕೆ ಸೀತೆಯ ಉತ್ತರ:
“ಕರುಬೇತಕೆರ್ದೆಯನ್ನ?
ಪೊಳೆಯ ಕನ್ನಡಿಯೊಳಗೆ ನಾನೆ ರಾಮಚಂದ್ರಂ ಪ್ರಕೃತಿ
ಲೋಕದಲ್ಲಿ?”

ಇಬ್ಬನಿಯ ಹನಿಗಳು ಸೀತೆಯ ಮೊಗದ ಮೇಲೆ ಉದುರುತ್ತಿದ್ದರೆ ಲಕ್ಷ್ಮಣನಿಗೆ ಅದು, “ದೇವಿಯರನಭಿನಂದಿಸುತ್ತಿಹಳರಣ್ಯಸಖಿ” ಎಂಬಂತೆ ತೋರಿದರೆ ಅದೇ ಸೀತೆಗೆ, ‘ಅಲ್ತಲ್ತು, ತಂಗಿ ಊರ್ಮಿಳೆಯ ಕಣ್ಣೀರುಗಳ್‌, ಮುನ್‌ ಬರ್ಪ ಸೊಗಕುರ್ಕಿ. ಮುಂಗಾಣ್ಕೆಗಳನರ್ಪಿಸಿಹವೈ ಪ್ರಾಣೇಶ್ವರನ ಚರಣತಲಕೆ!” ಎನ್ನಿಸುತ್ತದೆ. ಇಲ್ಲಿ ಪ್ರೇಮವೇ ಒಂದು ನಿಷ್ಠೆ: ತಪ, ರಾಮ-ಸೀತೆಗೆ, ಲಕ್ಷ್ಮಣ-ಊರ್ಮಿಳೆಗೆ, ರಾವಣ-ಮಂಡೋದರಿ, ಇಂದ್ರಜಿತು-ತಾರಾಕಷಿಯರಿಗೆ, ವಾಲಿ ಸತ್ತಾಗ ಅವನೊಂದಿಗೆ ಚಿರತೆಯೇರುವ ತಾರೆಗೂ ಕೂಡ.

ಆದರೆ ಅಹಲ್ಯೆ ಧಾನ್ಯಮಾಲಿನಿಯರು ಲೋಕ ದೃಷ್ಟಿಯಲಿ ಪತಿತೆಯರು. ದೇಹ ಸುಖಾಭಿಲಾಷೆಗೆ ಮನಸೋತು ‘ಹದಿಬದೆ’ ಎನ್ನುವ ಪಟ್ಟಕ್ಕೆ ದೂರವಾದವರು. ಹೋಮರ್‌ನ ಹೆಲೆನ್‌ಳಂತೆ ಸ್ವಲ್ಪಮಟ್ಟಿಗೆ ರಾಮಾಯಣದ ಧಾನ್ಯಮಾಲಿನಿ. ಅವಳಂತೆ ‘ತನು ರುಚಿಗೆ ಸೋತ ಹೆಣ್ಣು’, ಪಶ್ಚಾತ್ತಾಪದಲ್ಲಿ ಬೇಯುವ ಹೆಣ್ಣು. ಆದರೆ, ಕುವೆಂಪುಗೆ ಹೆಲನ್‌ಳ ಪಾತ್ರಕ್ಕೆ ಹೋಮರ್‌ ಕೊಡದ ಮಾನ್ಯತೆಯ ಬಗ್ಗೆ ಅತೃಪ್ತಿಯಿದೆ. ಹಾಗಾಗಿ ಧಾನ್ಯಮಾಲಿನಿಯ ಪಾತ್ರವನ್ನು ಚಿತ್ತಿಸುವಾಗ ಬಹಳಷ್ಟು ಎಚ್ಚರಿಕೆ ವಹಿಸಿದ್ದಾರೆ. ‘ಸೀತೆಯ ಶುಚಿ’, ಮಂಡೋದರಿಯ ‘ಶುಚಿ’ಯ ವೈಭವೀಕರಣದ ಹಿನ್ನೆಲೆಗೆ ಧಾನ್ಯಮಾಲಿನಿಯ ಪಾತ್ರ ಬಳಕೆಯಾಯಿತು ಎಂಬ ಸಂದೇಹ ಬಂದರೂ ಆಶ್ಚರ್ಯವಿಲ್ಲ.

ನವೋದಯದ ಕಾಲಕ್ಕೆ ಪಾತಿವ್ರತ್ಯವೂ ಒಂದು ಮೌಲ್ಯ. ಅದು ಸ್ತ್ರೀಯರಿಗಷ್ಟೇ ಅಲ್ಲ, ಪುರುಷರಿಗೂ ಅದು ಅಗತ್ಯವೆಂಬುದನ್ನು ಕುವೆಂಪು ಸಮಾನತೆಯ ನೆಲೆಯಿಂದ ವಿವೇಚಿಸುತ್ತಾರೆ. ಪಾತಿವ್ರತ್ಯದಿಂದ ಸ್ತ್ರೀ ಶ್ರೀಮತಿಯಾದರೆ, ಸತೀವ್ರತ್ಯದಿಂದ ಪುರುಷ ಶ್ರೀ ಪತಿಯಾಬೇಕು. ‘ಇನ್ನೊಬ್ಬ ರಾವಣನಿದ್ದರೆ ಪಾತಿವ್ರತ್ಯವೆನೆಂದರೆನೆಂದು ತೋರಿಸುತ್ತೇನೆ” ಎಂಬ ಮಂಡೋದರಿಯಿಂದ, ರಾಮನಲ್ಲದೇ ಅನ್ಯ ಪುರುಷರನ್ನು ಕಣ್ತೆತ್ತಿಯೂ ನೋಡದ ಸೀತೆಯಿಂದ, ತನ್ನ ಕೊನೆಯ ಗಳಿಗೆಯಲ್ಲಿ ದೇಹ ಮನಸ್ಸಿನ ಜಿಜ್ಞಾಸೆಗೆ ಒಳಗಾಗಿ ಸೀತೆಗೆ ನೂರು ನಮಸ್ಕಾರ ಹೇಳುವ ಧಾನ್ಯಮಾಲಿನಿಯಿಂದ ರಾವಣ ಬಹಳಷ್ಟು ಕಲಿತಿದ್ದಾನೆ. ಸೀತೆಯೊಂದಿಗೆ ಅಗ್ನಿ ಪ್ರವೇಶ ಮಾಡಿ ಹೊರಬರುವ ರಾಮನಿಂದಲೂ ದಾಂಪತ್ಯ ನಿಷ್ಠಗೆ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನವನ್ನು ಕವಿ ಕುವೆಂಪು ಮಾಡಿದ್ದಾರೆ.

ಅಲ್ಲದೇ ಸ್ತ್ರೀತ್ವ ಒಂದು ಶಕ್ತಿ, ಅರಿವಾಗಿ ಪರಿಣಮಿಸುವುದು ಇಲ್ಲಿಯ ಇನ್ನೊಂದು ಬೆಳವಣಿಗೆ. ಯುದ್ಧ-ಹಿಂಸೆಗೆ ಪ್ರತಿರೋಧದ ನೆಲೆಯೊಂದು ಹುಟ್ಟಿಕೊಳ್ಳುವುದು ಈ ಸ್ತ್ರೀ ಪ್ರೇಮದ ಪರ್ಯಾವರಣದಲ್ಲಿ ರಾವಣನಿಗೆ ತಿಳಿಹೇಳುವ ಮಂಡೋದರಿ, ಪ್ರೀತಿಯ ಬಂಧನದಲ್ಲಿ ಬಂಧಿಸುವ ಅನಲೆ, ಮೈ ಮಣಿದರೂ ಮನಸ್ಸು ಮಣಿಯದ ಪ್ರೇಮವೆನೆಂದು ಅರಿವು ಮೂಡಿಸುವ ಧಾನ್ಯಮಾಲಿನಿ. ಇಂದ್ರಜಿತುವಿಗೆ ಪುತ್ರ ವಾತ್ಸಲ್ಯದ ನೆಪವೊಡ್ಡಿ ಯುದ್ಧ-ವಿನಾಶ ಪ್ರಜ್ಞೆಯನ್ನು ಮೂಡಿಸುವ ಅವನ ಹೆಂಡತಿ ತಾರಾಕ್ಷಿ ಯುದ್ಧ ರಾವಣ ಅದೆಷ್ಟು ಪರಾಕ್ರಮಿ ಎನಿಸಿದರೂ ಮಂಡೋದರಿಯ ಪ್ರೀತಿಯನ್ನು ಧಿಕ್ಕರಿಸಿ ಮುನ್ನಡೆಯಲಾರ.

“ಭೀತಿ ತಲೆದೋರುತಿಹುದೆನಗೆ,
ಕರುಣೆಯಿಂದೆಲ್ಲಿ ದೃಢತೆಗೆ ಭಂಗಬರುವುದೊ
ಎಂದು.”

ರಾಮನಲ್ಲೂ, ರಾವಣನಲ್ಲೂ ಈ ಸ್ತ್ರೀ ಸತ್ವವೊಂದು ಸದಾ ಜಾಗೃತವಾಗಿಯೇ ಇದೆ. ಪ್ರಪಂಚವನ್ನು ಕಾಪಿಡುವುದೇ ಈ ಸ್ತ್ರೀ ಸತ್ವ. ಅದು ಬುದ್ಧ, ಬಸವ, ಗಾಂಧಿ ಎಲ್ಲರಲ್ಲೂ ಇದ್ದಿದ್ದರಿಂದಲೇ ಜಗತ್‌ ಕಲ್ಯಾಣ ಸಾಧ್ಯವಾಯಿತು. ಸ್ತ್ರೀತ್ವ ಭಾರತೀಯ ಸಂದರ್ಭದಲ್ಲಿ ಆತ್ಮಗೌರವದ ಪ್ರತೀಕವಾಗಿ ಬಳಕೆಯಾಗುತ್ತದೆ. ಅದು ಪ್ರಜ್ಞಾಜಾಗೃತಿಯೂ ಹೌದು. ರಾವಣ ಕದ್ದೊಯ್ದುದ್ದು ಸೀತೆ ಎಂಬ ಸಾಮಾನ್ಯ ಹೆಣ್ಣನಲ್ಲ; ರಾಮನೆಂಬ ವ್ಯಕ್ತಿಯ ಆತ್ಮಗೌರವವನ್ನು. ಸ್ವಾತಂತ್ರ್ಯ ಹೋರಾಟವೂ ಇದರ ಇನ್ನೊಂದು ರೂಪಕ. ಬ್ರಿಟಿಷರಿಂದ ಅಪಹರಿಸಲ್ಪಟ್ಟ ರಾಷ್ಟ್ರಗೌರವವನ್ನು ಹಿಂಪಡೆಯುವ ಹರಸಾಹಸವೂ ಇದಕ್ಕೆ ಸಾದೃಶ್ಯ. ಕುವೆಂಪು ಆರ್ಯ ಸಂಸ್ಕೃತಿಗೆ ದಸ್ಯು ಸಂಸ್ಕೃತಿ ಮುಖಾಮುಖಿಯಾಗುವುದನ್ನೂ, ಯುದ್ಧಕ್ಕೆ ಬದಲಾಗಿ ಶಾಂತಿಯನ್ನೂ, ಕ್ರೌರ್ಯಕ್ಕೆ ಕರುಣೆಯನ್ನೂ, ಹಿಂಸೆಗೆ ಪ್ರತಿಯಾಗಿ ಅಹಿಂಸೆಯನ್ನೂ, ಅಜ್ಞಾನದ ವಿರುದ್ಧ ವಿಜ್ಞಾನವನ್ನೂ ಎತ್ತಿ ಹಿಡಿಯುವುದು ಯುಗದೆ ಸಂವೇದನೆಯೊಂದು ಸಾಂಸ್ಕೃತಿಕ ಪಲ್ಲಟಕ್ಕೆ ನಾಂದಿಯಾಗುವ ಸೂಚನೆ ಎಂಬಂತೆ ತೋರುತ್ತದೆ.

ಇಲ್ಲಿಯ ಪ್ರತಿಯೊಂದು ಪಾತ್ರವೂ ದುಃಖ, ಶೋಕ, ಪಶ್ಚಾತ್ತಾಪ, ಕರುಣೆಯ ಅಶ್ರುಗಂಗೋತ್ರಿಯಲ್ಲಿ ಮಿಂದು ಬಂದಿದೆ. ಇದು ಒಂದು ಬಗೆಯಲ್ಲಿ ಸಂಸ್ಕೃತಿ ಶೋಧನೆ ಜಿಡ್ಡುಗಟ್ಟಿದ ಮಾನವ ಮನಸ್ಸುಗಳನ್ನು ತಿಳಿಗೊಳಿಸುವ ಸಾಧನವೂ ಹೌದು. ನಮ್ಮ ಸಂಸ್ಕೃತಿ, ಪರಂಪರೆಯ ಮೂಲಬೇರುಗಳನ್ನು ಹಾಗೆಯೇ ಉಳಿಸಿಕೊಂಡು, ಅದನ್ನು ನವಜ್ಞಾನ ಸಾಮಗ್ರಿಗಳ ಮೂಲಕ ಸಂಸ್ಕರಿಸಿಕೊಳ್ಳುವ ಕಾಣ್ಕೆಯ ವಿಶ್ವದರ್ಶನವನ್ನು ಕುವೆಂಪು ಕಾವ್ಯ ಮಾಡಿಸುತ್ತದೆ. ಸಮಕಾಲೀನ ಸಂವೇದನೆಗೆ ಮುಖಾಮುಖಿಯಾಗುತ್ತಲೇ ಪರಂಪರೆಯ ಬಗೆಗಿನ ಅರಿವಿನ ಹರವು ಹೆಚ್ಚಿಸುತ್ತದೆ.

* * *

 

[1] ಸಂ. ಪ್ರೊ. ಅರವಿಂದ ಮಾಲಗತ್ತಿ: ಕುವೆಂಪು ಕೃತಿ ವಿಮರ್ಶೆ; ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ ಮೈಸೂರು. (೨೦೦೬) ಪುಟ ೩೩೯.

[2] ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌: ಕುವೆಂಪು ಸಾಹಿತ್ಯ ಜಗತ್ತಿನಲ್ಲಿ; ಸಪ್ನ ಬುಕ್‌ ಹೌಸ್‌, ಬೆಂಗಳೂರು (೨೦೦೮): ಪುಟ : ೫.

[3] ನರಹಳ್ಳಿ ಬಾಲಸುಬ್ರಹ್ಮಣ್ಯ: ಕುವೆಂಪು ಕಾವ್ಯ : ಅಂಕಿತ ಪುಸ್ತಕ, ಬೆಂಗಳೂರು. ೨೦೦೪ ಪುಟ ೧೧೯.

[4] ಡಿ. ಎಸ್‌. ನಾಗಭೂಷಣ: ಅನೇಕ – ಧರ್ಮ, ಜಾತಿ ಕೋಮುವಾದ: ಕುವೆಂಪು ಚಿಂತನೆಗಳು. ಲೋಹಿಯಾ ಪ್ರಕಾಶನ, ಬಳ್ಳಾರಿ: ಪುಟ ೪.

[5] ೧೯೭೪ರಲ್ಲಿ ಬರಹಗಾರರ ಒಕ್ಕೂಟದ ಉದ್ಘಾಟನಾ ಭಾಷಣದಲ್ಲಿ ಹೀಗೆ ಲೇಖಕರಿಗೆ/ಓದುಗರಿಗೆ ಕರೆ ಕೊಟ್ಟರು: “ನಿಮ್ಮ ಪ್ರಜ್ಞೆ ಬರೀ ಕರ್ನಾಟಕ, ಬರೀ ಇಂಡಿಯಾ ಅಲ್ಲದೆ, ವಿಶ್ವ ಪ್ರಜ್ಞೆಯಾಗಲಿ… ಹಿಂದು ದೇಶಕ್ಕೆ ಅವರಿಗೆ ಇವರಿಗೆ ಅಂತಲ್ಲ. ವಿಶ್ವಜನತೆಗೆಲ್ಲಾ ಅನ್ಯಾಯವಾಗುವಂತಿದ್ದರೆ ಮಾತ್ರ ಗ್ರಾಹ್ಯ. ಈ ವೈಚಾರಿಕ ನೆಲೆಯಲ್ಲಿಯೆ ಅವರ ಸುಪ್ರಸಿದ್ಧ ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ಕವನ ಜನ್ಮ ತಾಳುತ್ತದೆ.” ಡಾ. ಸಿ. ಎನ್‌. ರಾಮಚಂದ್ರನ್‌: ವಸಾಹತೋತ್ತರಚಿಂತನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು; ಪುಟ. ೧೧೬.

[6] ಸುಜನಾ: ಇಪ್ಪತ್ತನೇ ಶತಮಾನದಲ್ಲಿ ಶ್ರೀ ರಾಮಾಯಣ ದರ್ಶನಂ: ಕುವೆಂಪು ಕೃತಿ ವಿಮರ್ಶೆ ಪುಟ. ೩೪೩.

[7] ಡಾ. ಸಿ. ಎನ್‌. ರಾಮಚಂದ್ರನ್‌: ವಸಾಹತೋತ್ತರ ಚಿಂತನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು : ಪುಟ. ೧೧೩.

[8] ನರಹಳ್ಳಿ ಬಾಲಸುಬ್ರಹ್ಮಣ್ಯ: ಕುವೆಂಪು ಕಾವ್ಯ: ಅಂಕಿತ ಪುಸ್ತಕ, ಬೆಂಗಳೂರು. ೨೦೦೪,. ಪುಟ. ೧೧೯.

[9] ನರಹಳ್ಳಿ ಬಾಲಸುಬ್ರಹ್ಮಣ್ಯ: ಕುವೆಂಪು ಕಾವ್ಯ: ಅಂಕಿತ ಪುಸ್ತಕ, ಬೆಂಗಳೂರು ೨೦೦೪. ಪುಟ. ೧೧೬.