ಕನ್ನಡದ ಮಹತ್ವದ ಕವಿ, ಲೇಖಕ, ಚಿಂತಕ ಹಾಗೂ ದಾರ್ಶನಿಕ ಕುವೆಂಪುರವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ. ರಾಷ್ಟ್ರಕವಿ ಎಂಬ ಬಿರುದಿಗೆ ಪಾತ್ರರಾಗಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿಯ ಸಾಧನೆಗಳನ್ನು ಸ್ಮಾರಕ ರೂಪದಲ್ಲಿ ಕುಪ್ಪಳಿಯಲ್ಲಿ ಸ್ಥಿರೀಕರಿಸಲಾಗಿದೆ. ಕವಿ ಮನೆಯನ್ನು ಮೂಲ ಮಾದರಿಯಲ್ಲಿ ಸಂರಕ್ಷಿಸಿರುವುದಲ್ಲದೆ, ಕವಿಯ ದೇಹ ಲೀನವಾದ ಸ್ಥಳದಲ್ಲಿ ‘ಕವಿಶೈಲ’ ಸ್ಮಾರಕವಿದೆ. ಕವಿಯ ಸಂದೇಶವನ್ನು ಸಾರಲು ಮತ್ತು ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಲು ಸರ್ಕಾರವು ೧೯೯೨ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವನ್ನು ಸ್ಥಾಪಿಸಿದೆ. ಕರ್ನಾಟಕದ ಮುಖ್ಯ ಪ್ರವಾಸಿ ತಾಣಗಳಲ್ಲಿ ಒಂದಾಗಿ ರೂಪುಗೊಂಡಿರುವ ಕುಪ್ಪಳಿಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಕವಿಯ ಹೆಸರಲ್ಲಿ ಕುವೆಂಪು ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ. ೨೦೦೩ರಲ್ಲಿ ಸ್ಥಾಪನೆಗೊಂಡ ಕುವೆಂಪು ಅಧ್ಯಯನ ಕೇಂದ್ರವು ಕುವೆಂಪುರವರ ಸಾಹಿತ್ಯ ಅಧ್ಯಯನವಷ್ಟೇ ಅಲ್ಲದೆ ಕನ್ನಡ ಸಾಹಿತ್ಯದ ವಿವಿಧ ಮುಖಗಳನ್ನು ಕುರಿತ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಕಾರ್ಯೋನ್ಮುಖವಾಗಿದೆ.

ಕುವೆಂಪುರವರ ವೈವಿಧ್ಯಮಯ ಸಾಹಿತ್ಯವು ಸಾವಿರಾರು ಪುಟಗಳನ್ನು ವಿಸ್ತಾರವಾಗಿದ್ದು ಹೊಸಗನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಒಳಗೊಂಡಿದೆ. ಈ ಅಗಾಧ ಸಾಹಿತ್ಯವನ್ನು ಜನತೆಗೆ ಸಮಗ್ರ ಸ್ವರೂಪದಲ್ಲಿ ನೀಡಬೇಕೆಂದು ತೀಮಾರ್ನಿಸಿದ ಕನ್ನಡ ವಿಶ್ವವಿದ್ಯಾಲಯವು ಕುವೆಂಪುರವರ ‘ಸಮಗ್ರ ಸಾಹಿತ್ಯ ಪ್ರಕಟಣಾ ಯೋಜನೆ’ಯೊಂದನ್ನು ಸಿದ್ಧಪಡಿಸಿತು. ಈ ಯೋಜನೆಯ ಅಂಗವಾಗಿ ಕುವೆಂಪು ಸಮಗ್ರ ಕಾವ್ಯ (೨ ಸಂಪುಟಗಳು) ಕುವೆಂಪು ಸಮಗ್ರ ಗದ್ಯ (೨ ಸಂಪುಟಗಳು) ಕುವೆಂಪು ಸಮಗ್ರ ನಾಟಕ (೧ ಸಂಪುಟ)ಗಳನ್ನು ಈಗಾಗಲೇ ಪ್ರಕಟಿಸಿದೆ. ಕುವೆಂಪುರವರ ಸಂಕೀರ್ಣ ಸಾಹಿತ್ಯ ಮತ್ತು ಪತ್ರ ವ್ಯವಹಾರಗಳನ್ನು ಕುರಿತಾದ ಎರಡು ಸಂಪುಟಗಳು ಪ್ರಕಟಣೆಗೆ ಸಿದ್ಧಗೊಂಡಿವೆ. ಕುವೆಂಪುರವರ ಸಮಗ್ರ ಮಹಾಕಾವ್ಯವನ್ನು ಹೊರತರುವ ಯೋಜನೆ ಪ್ರಗತಿಯಲ್ಲಿದೆ.

ಕುವೆಂಪು ಅಧ್ಯಯನ ಕೇಂದ್ರವು ಕನ್ನಡ ವಿಶ್ವವಿದ್ಯಾಲಯದ ಒಂದು ವಿಸ್ತರಣ ಕೇಂದ್ರವಾಗಿದ್ದು, ಪಿಎಚ್‌.ಡಿ ಮತ್ತು ಎಂ.ಫಿಲ್‌ ಅಧ್ಯಯನ ಕೋರ್ಸ್‌ಗಳನ್ನು ಆರಂಭಿಸಿದೆ. ಇದುವರೆಗೆ ೧೦ ವಿದ್ಯಾರ್ಥಿಗಳು ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ೬ ವಿದ್ಯಾರ್ಥಿಗಳು ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ೧೨ ಪಿಎಚ್‌.ಡಿ ಅಧ್ಯಯನದಲ್ಲಿ ತೊಡಗಿದ್ದಾರೆ.

ಕುವೆಂಪು ಅಧ್ಯಯನ ಕೇಂದ್ರವು ತನ್ನದೇ ಆದ ಗ್ರಂಥಾಲಯವನ್ನು ಸ್ಥಾಪಿಸಿದ್ದು ಸುಮಾರು ೧೨ ಸಾವಿರ ಮೌಲಿಕ ಗ್ರಂಥಗಳನ್ನು ಹೊಂದಿದೆ. ಆಸಕ್ತ ಸ್ಥಳೀಯರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಈ ಗ್ರಂಥಾಲಯದ ಪ್ರಯೋಜನವನ್ನು ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಅಧ್ಯಯನ ಕೇಂದ್ರದ ವತಿಯಿಂದ ಕುವೆಂಪು ಹಾಗೂ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಕುರಿತ ವಿಚಾರ ಸಂಕಿರಣ, ಕಮ್ಮಟ, ತರಬೇತಿ ಶಿಬಿರ ಮಂತಾದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ‘ಕುವೆಂಪು : ಅಂತರ ಶಿಸ್ತೀಯ ಅಧ್ಯಯನ,’ ‘ಕುವೆಂಪು ಕಾವ್ಯೋತ್ಸವ’ ಹಾಗೂ ‘ಕುವೆಂಪು ಮಹಿಳಾ ಮಂಥನ’ ಎಂಬ ವಿಶಿಷ್ಟ ವಿಚಾರ ಸಂಕಿರಣ ಮತ್ತು ಕಮ್ಮಟಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಂತಹ ಪ್ರಮುಖ ಸಂಸ್ಥೆಗಳು ತಮ್ಮ ಸಹಯೋಗ ನೀಡಿವೆ.