‘ನೆಯ್ದಾಳುತಿದೆ ಜಗವನೊಂದಲೆ ವಿರಾಡ್ಮನಂ
ಜೀವಿಗಳಿಚ್ಛೆಯಾ ಸ್ವಾತಂತ್ರ್ಯ ಭಾವಮಂ
ನೀಡಿ. ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರದ ಗೊಂಬೆಗಳಲ್ತೆ ಆ ವಿಧಿಯ ಹಸ್ತದಲಿ’.

ಕುವೆಂಪುರವರ ಸ್ತ್ರೀ ಬಗೆಗಿನ ಕಾಣ್ಕೆ, ದರ್ಶನ, ವೈಚಾರಿಕತೆ ಇವೆಲ್ಲವೂ ಮೇಲಿನ ಶ್ರೀ ರಾಮಾಯಣ ದರ್ಶನಂನ ಕಾವ್ಯದ ಸಾಲುಗಳಿಂದಲೇ ನಾವು ಗ್ರಹಿಸಬಹುದಾಗಿದೆ. ಅವರ ರಾಜಕೀಯ ದಾಶನಿಕತೆಯ ಒಳಗಡೆ ಕೂಡಾ ಕೆಲಸ ಮಾಡುವ ಅಂಶಗಳು ಈ ಮೇಲಿನ ಚೌಕಟ್ಟನ್ನೇ ಹೊಂದಿರುವುದರಿಂದ ಸ್ತ್ರೀ ಪಾತ್ರದ ನಿರೂಪಣೆಯಲ್ಲಿ ಈ ವೈಚಾರಿಕತೆಯೇ ಪ್ರಬಲವಾಗಿ ಕೆಲಸ ಮಾಡಿರುವುದನ್ನು ಕೆಲವು ಪಾತ್ರಗಳ ಮೂಲಕ ನಾವು ಗಮನಿಸಬಹುದಾಗಿದೆ. ಖಂಡ ದೃಷ್ಟಿ ಮಂಥರೆಯನ್ನು ರಾಮಾಯಣದ ಎಲ್ಲಾ ಅನರ್ಥಗಳಿಗೂ ಮೂಲ ಕಾರಣವೆಂದು ಪರಿಗಣಿಸುತ್ತದೆ. ‘ಆದರೆ ಕುವೆಂಪು’ ಶ್ರೀ ಸಂಪುಟದ’ ಶ್ರೀ ರಾಮ ರಾವಣ ಚಿತ್ ತಪಸ್ ಶ್ರೀ ಸಂಚಿಕೆಯಲ್ಲಿ ಹೇಳಿರುವಂತೆ ಮಂಥರೆ ಮೂಲದೀ ಬೃಹತ್ ಘಟನೆ ಸೀತಾ, ರಾಮ, ರಾವಣರ ಆತ್ಮ ವಿಕಸನದ ಪರಿಣಾಮ ಸಿದ್ಧಿಗೆ ಸಹಾಯಕವಾಗುವಂತಹದು. ‘ತಪಸ್ಸಿದ್ಧಿ’ ಸಂಚಿಕೆಯಲ್ಲಿ ಈ ಭಾವ ಇನ್ನೂ ಸ್ಪಷ್ಟವಾಗಿದೆ. ‘ಕಾರಣಳಲ್ತು; ಬರಿ ಕರಣಮಾ ಕುಬ್ಜೆ’ ಎಂಬ ಮಾತಿನಲ್ಲಿ ಈ ರಹಸ್ಯವನ್ನು ಉದ್ಘಾಟಿಸಲಾಗಿದೆ ಎಂದು ಡಾ. ಪ್ರಧಾನ ಗುರುದತ್ತ ‘ಕುವೆಂಪು’ ಎಂಬ ತಮ್ಮ ವಿಮರ್ಶಾ ಕೃತಿಯಲ್ಲಿ ಹೇಳುತ್ತಾರೆ. (ಪುಟ ೧೧೮, ಸಂ. ಡಾ.ಹಾ.ಮಾ. ನಾಯಕ, ಡಾ. ಪ್ರಧಾನ ಗುರುದತ್ತ, ೨೦೦೧)

ಮೂಲ ರಾಮಾಯಣದಲ್ಲಿ ಎಲ್ಲರಿಂದ ತಿರಸ್ಕೃತಳಾಗಿರುವ ಮಂಥರೆ ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ಮಾನವೀಯ ನೆಲೆಯಲ್ಲಿ ಚಿತ್ರಿತಳಾಗಿದ್ದಾಳೆ. ಕೊನೆಗೆ ‘ಮಂಥರಾ ಲಕ್ಷ್ಮಿ’ಯಾಗುತ್ತಾಳೆ. ಎನ್ನುವಲ್ಲಿ ಈ ಪಾತ್ರ ಬಹಳಷ್ಟು ವಿಮರ್ಶಕರಿಂದ ಮೆಚ್ಚುಗೆಗೆ ಒಳಗಾದ ಪಾತ್ರ. ಕಪ್ಪು ಬಣ್ಣದ, ಗೂನು ಬೆನ್ನಿನ, ಕುಬ್ಜೆ, ಕುರೂಪಿ ಮಂಥರೆ ಆಕೆಯ ವಿಕೃತ, ವಿಲಕ್ಷಣ ವ್ಯಕ್ತಿತ್ವದಿಂದ ರಾಮಾಯಣದ ಕಲಹದ ಮೂಲ ವ್ಯಕ್ತಿಯಾಗುತ್ತಾಳೆ ಎಂದು ಚಿತ್ರಿಸುವ ಮೂಲ ರಾಮಾಯಣವಾಗಲೀ ಅಥವಾ

‘………….. ಪಾಪಿ ಗುದ್ದಾರಮಿಹುದೌ
ದೃಷ್ಟಿಯ ಮಹದ್ ವ್ಯೂಹ ರಚನೆಯೊಳ್’

ಎಂದು ಆಕೆಯನ್ನು ‘ಮಂಥರಾ ಲಕ್ಷ್ಮಿ’ಯಾಗಿ ರೂಪಿಸುವ ‘ಶ್ರೀ ರಾಮಾಯಣ ದರ್ಶನಂ’ ಆಗಲೀ ಯಾವುದೇ ಭಿನ್ನವಾದ ಧ್ವನಿಯನ್ನು ಧ್ವನಿಸುತ್ತದೆ ಎನಿಸುವುದಿಲ್ಲ. ಸಮಾಜದಿಂದ ತಿರಸ್ಕೃತಳಾಗಿ, ಅನಾಥಳಾಗಿ ಕಾಡಿನಲ್ಲಿ ಬಿದ್ದಿದ್ದ ಕುರೂಪಿ ಮಗು ಕೈಕೆಯ ತಾತನಿಂದಾಗಿ ಅರಮನೆ ಸೇರಿ, ಮನೋ ವ್ಯಾಪಾರದಲ್ಲಿ ಕೈಕೆಗೆ ಹಾಗೂ ಆಕೆಯ ಮಗ ಭರತನಿಗೆ ತಾಯಿಯಾಗಿ, ಮತ್ತೆ ಆ ತಾಯ್ತನದ ಸುಳಿಯಿಂದಾಗಿ ‘ಮಂಥರೆ’ ಶ್ರೀ ರಾಮಾಯಣದರ್ಶನಂಗೆ ಮೂಲ ಕಾರಣಳಾಗುತ್ತಾಳೆ. ರಾಮಾಯಣ, ಮಹಾಭಾರತದಂತಹ ಸವಿಸ್ತಾರ ಹರವುಳ್ಳ ವಸ್ತುವಿನಲ್ಲಿ ಪ್ರಭುತ್ವ, ಆಸ್ತಿ, ಬಾಹ್ಯ ರಾಜಕಾರಣಗಳೂ ಬಲವಾದ ಪಾತ್ರ ವಹಿಸುವಂತಹವುಗಳೇ. ರಾಜ, ರಾಜ್ಯಭಾರ, ರಾಜ್ಯ ಇವುಗಳಿಗೆ ಕುಟುಂಬ ರಾಜಕಾರಣದ ಆಚೆಯೂ ಒಂದು ವ್ಯವಸ್ಥಿತವಾದ ವ್ಯೂಹ ಇರುತ್ತದೆ. ಇಂತಹ ರಾಜಕಾರಣದ ಚಕ್ರವ್ಯೂಹ ಅಧಿಕಾರದ ಜೊತೆ ತಳಕು ಹಾಕಿಕೊಂಡಿರುತ್ತದೆ. ಇಂತಹ ವ್ಯವಸ್ಥಿತ ರಾಜಪ್ರಭುತ್ವದ ರಾಜಕಾರಣವನ್ನು ಕೌಟುಂಬಿಕ ನೆಲೆಗೆ ಇಳಿಸಿ, ಭಾವನಾತ್ಮಕ ನೆಲೆಯಲ್ಲಿ, ಮನೋ ವ್ಯಾಪಾರದ ನೆಲೆಯಲ್ಲಿ ವ್ಯಕ್ತಿಗಳನ್ನು ವಿಭಿನ್ನವಾಗಿ ಚಿತ್ರಿಸುವುದು, ಮಾನವೀಯ ನೆಲೆಯಲ್ಲಿ ಕೌಟುಂಬಿಕ ರಾಜಕಾರಣದ ಸುತ್ತವೇ ಸುತ್ತುವಂತೆ ಮಾಡುವಲ್ಲಿ ಯಾವ ತಾತ್ವಿಕ ನೆಲೆಗಳು ಕೆಲಸ ಮಾಡುತ್ತವೆ ಎಂಬ ಅನುಮಾನವೊಂದು ಹರಿಹಾಯದೇ ಇರುವುದಿಲಗಲ. ಶ್ರೀ ರಾಮಾಯಣ ದರ್ಶನಂ ಕುಟುಂಬದ ಸಾಮಾನ್ಯರ ಜೀವನದ ರೀತಿ ಎಂಬಂತೆ ಚಿತ್ರಿತವಾದರೂ, ಆಧ್ಯಾತ್ಮ ಬದುಕಿನಡೆ ಸಾಗುವಂತಹದಾದರೂ ವಾಸ್ತವ ಬದುಕಿನ ಸಂಘರ್ಷಗಳು, ಭಾವನಾತ್ಮಕ ನೆಲೆಯಲ್ಲಿ ಆತ್ರ ತೀರ್ಮಾನಗೊಳ್ಳುವಂತಹವುಗಳಲ್ಲ. ಇಲ್ಲಿ ರಾಮಾಯಣ ಕುಟುಂಬದ ರಾಜಕಾರಣವಾಗಿ ಮಂಥರೆಯಂತಹ ದಾಸಿ ತನ್ನ ಮಾತು ಹಾಗೂ ನಿಲುವಿನಿಂದಾಗಿ ರಾಮ, ಗೀತೆ, ರಾವಣರ ಆತ್ಮವಿಕಸನಕ್ಕೆ ಕಾರಣಳಾಗುತ್ತಾಳೆಂಬುದು ವಿಧಿಯ ಸಂಚು…. ವಿಧಿ ನಿಯಮ. ಈ ವಿಧಿ ನಿಯಮದ ಹಿಂದೆ ಇರುವ ಅರ್ಕ, ವೈಚಾರಿಕತೆ ಕುತೂಹಲ ಹುಟ್ಟಿಸುವಂತಹುದು. ರಾಜ ಪ್ರಭುತ್ವದ ಒಳಸುಳಿಗಳು ಬಿಚ್ಚಿ ಕೊಳ್ಳಲಾರದ ಒಂದು ಸಂದರ್ಭದಲ್ಲಿ ಮಂಥರೆ ಅದೂ ಕುರೂಪಿ, ಕುಬ್ಜೆ, ವಿಕೃತ ಮಂಥರೆ ಈ ರಾಜಕಾರಣದ ಸೂತ್ರಧಾರಿ ಹೇಗೆ ಎನ್ನುವುದು ಪ್ರಶ್ನೆಯಾಗುತ್ತದೆ. ಬ್ಲಾಕ್ ಇಸ್ ಬ್ಯೂಟಿಫುಲ್ ಎನ್ನುವ ವೈಚಾರಿಕತೆಯೊಂದು ಹೆಣ್ಣಿನ ಸೌಂದರ್ಯದ ಮೀಮಾಂಸೆಯನ್ನು ಪುನರ್ ವಿಮರ್ಶಿಸುವ, ಆಕೆಯ ವ್ಯಕ್ತಿತ್ವಕ್ಕೆ ಘನತೆಯನ್ನು ಇಡಿಯಾಗಿ, ಹೊರ ಮುಖಿಯಾಗಿಯಲ್ಲದೇ ಅಂತಸತ್ವದ ಮೂಲಕ ಹೊರ ಹಾಕಬಲ್ಲದು ಎನ್ನುವ ಕ್ಷಣದಲ್ಲಿ, ವಿಕಾರ, ವಿಕೃತ, ಕುರೂಪಿ ಮಂಥರೆ ವಿಲಕ್ಷಣವಾಗಿ ಸೃಷ್ಟಿಯಾದುದು. ಅಲಕ್ಷಿತ ಮೂಲಕ ಮಹತ್ವವಾದುದನ್ನು ಸಾಧಿಸಲು ಒಂದು ಮಾದರಿಯಾಗಿ ಬಿಡುವುದು ಕುತೂಹಲಕಾರಿಯಾದ ವಿಚಾರವಾಗಿದೆ. ಕುವೆಂಪು ಸಾಹಿತ್ಯ ಚಿತ್ರ ಸಂಪುಟದಲ್ಲಿ (೨೦೦೪, ಎಂ.ಎಚ್. ಕೃಷ್ಣಯ್ಯ, ಪ್ರಧಾನ ಸಂಪಾದಕರು) ಕಲಾವಿದೆ ಸುರೇಖಾ “ಶ್ರೀ ರಾಮಾಯಣ ದರ್ಶನಂ”ಗೆ ಪರಸ್ಪರ ಸಂಬಂಧಿಕ ಎರಡು ಕೃತಿಗಳನ್ನು ರಚಿಸಿದ್ದಾರೆ. (ಚಿತ್ರ ಸಂಖ್ಯೆ ೪೧, ೪೨). ‘ಅಗ್ನಿ ದಿವ್ಯ’- ಕಲಾಕೃತಿಯ ಬಲಗಡೆ ಆಕೆ ಒಂದು ಬರಹದ ಚೀಟಿ ಅಂಟಿಸಿದ್ದಾರೆ. ‘ಕುವೆಂಪುರವರ ಕ್ಷಮೆ ಯಾಚಿಸಿ’. ಸೀತೆಯೊಡನೆ ಅಗ್ನಿ ಪ್ರವೇಶ ಮಾಡಿದ ನಿಮ್ಮ ರಾಮ ನನ್ನ ಸುತ್ತ-ಮುತ್ತಲೂ ಕಾಣುತ್ತಿಲ್ಲ ‘ಮೆ ಬಿ ಐ ಕಾಂಟ್ ರೀಚ್ ಯುವರ ರಾಮ’. ಸುರೇಖಾ ಹೇಳುವ ಕಟು ವಾಸ್ತವದ ಹಿನ್ನಲೆಯಲ್ಲಿಯೂ ಕೂಡಾ ‘ಶ್ರೀ ರಾಮಾಯಣ ದರ್ಶನಂ’ದ ಮಹತ್‌ಕಲ್ಪನೆ, ಆಧ್ಯಾತ್ಮ ದರ್ಶನದ ಪಥದಲ್ಲಿ ರೂಪುಗೊಂಡಿರುವ ಸ್ತ್ರೀ ಪಾತ್ರಗಳು ಪುನರ್ ವಿಮರ್ಶೆಗೊಳಗಾಗುವ ಅಗತ್ಯವೂ ಇದೆ.

ಡಾ. ಪಿ.ಜೆ. ಮ್ಯಾಗೇರಿ ‘ವಸಾಹುತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳು’ ಎನ್ನುವ ತಮ್ಮ ಪಿಎಚ್‌ಡಿ ಪ್ರಬಂಧದಲ್ಲಿ ಹೀಗೆ ಬರೆಯುತ್ತಾರೆ. ‘ರಾಜಾರಾಮ್ ಮೋಹನ್ ರಾಯರ ‘ವೈಚಾರಿಕ ಹಾಗೂ ರಾಜಕೀಯ ನೆಲೆಗಳು ಕನ್ನಡದ ಇಂದಿರಾಬಾಯಿಯಲ್ಲಿ ಪ್ರಕಟವಾದಂತೆ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮಧುಮಗಳು’ ಕಾದಂಬರಿಗಳಲ್ಲಿ ಪ್ರವೇಶಿಸಿಲ್ಲ’ (ಪು. ೧೩೬, ೨೦೦೮). ‘ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಶಿಕ್ಷಣ ಕುರಿತಂತೆ ಎರಡು ಕಡೆ ಪ್ರಸ್ತಾಪವಿದೆ.

‘ಹೂವಳ್ಳಿಗೆ ಒಂದೆರೆಡು ಮೈಲಿಗಳೊಳಗೇ ಇರುವ ಕೋಣೂರಿನ ಮನೆಗಳಲ್ಲಿಯೇ ಒಂದು ಐಗಳ ಮಠ ಇದ್ದು, ಹಳೆ ಮನೆ ಬೆಟ್ಟಳ್ಳಿ ಕಡೆಯ ಸಮೀಪದ ಊರು ಮನೆಯ ಕೆಲವೇ ಮಕ್ಕಳು ‘ಬರಾವು’ ಕಲಿಯುತ್ತಿದ್ದರಾದರೂ, ಗಂಡು ಮಕ್ಕಳಿಗೇ ಅಪೂರ್ವವೂ ಅಸಾಧ್ಯವೂ ಅತಿ ವಿರಳವೂ ಆಗಿದ್ದ ಓದು ಬರಹವನ್ನು ‘ಹೆಣ್ಣು-ಹೆಂಗಸರಿಗೆ’ ಕಲಿಸಲು ಯಾರೂ ಒಪ್ಪುತ್ತಿರಲಿಲ್ಲ….. ಒಮ್ಮೆ ಕೋಣೂರಿನ ಹುಡುಗ ಮುಕುಂದಯ್ಯ, ‘ವೆಂಕ್ಟ ಮಾವನಿಗೆ’ ‘ಚಿನ್ನೀನ ನಮ್ಮ ಮನೆಗೆ ಬರೆಯೋಕೆ ಕಳ್ಸಿ’ ಎಂದು ಯಾವುದೋ ಮಾತಿನ ಸಂದರ್ಭದಲ್ಲಿ ಹೇಳಿದಾಗ, ಹೂವಳ್ಳಿ ವೆಂಕಟಣ್ಣ ನಕ್ಕು ‘ಹೌದು ಕಣ್ರೋ ಅವಳು ಬರಾವು ಕಲ್ತು ಮಣೆಗಾರಿಕೆ ಮಾಡೋದೊಂದೇ ಬಾಕಿ’ (ಪು೭೦).

ಕ್ರೈಸ್ತ ಮಷಿನರಿಗಳು ಮುಕುಂದಯ್ಯನಿಗೆ ಶೂದ್ರ ವರ್ಗ ಬ್ರಾಹ್ಮಣಶಾಹಿಯ ವಿರುದ್ಧ ನಡೆಸಬೇಕಾದ ಹೋರಾಟದ ಬಗ್ಗೆ ತಿಳುವಳಿಕೆ ಕೊಡುತ್ತಾರೆಯೇ ಹೊರತು ಅದರಲ್ಲಿ ಒಂದೇ ಒಂದು ಶಬ್ದ ಕೂಡಾ ಹೆಂಗಸರಿಗೆ ಸಂಬಂಧಿಸಿದ ಶಿಕ್ಷಣ, ಸಮಾನತೆಯ ಬಗ್ಗೆ ಉಸಿರೆತ್ತುವುದಿಲ್ಲ.

ಈ ವಿಚಾರ ಇಲ್ಲಿ ನಾನು ಪ್ರಸ್ತಾಪಿಸುವುದಕ್ಕೆ ಕಾರಣವಿದೆ. ವಸಾಹತುಶಾಹಿಯ ಸಂದರ್ಭದಲ್ಲಿನ ‘ರಾಷ್ಟ್ರೀಯತೆ’ ಸೃಷ್ಟಿಸಿದ ರಾಷ್ಟ್ರೀಯ ಇಬ್ಬಂದಿತನದಲ್ಲಿ ಮಹಿಳಾ ಪ್ರಶ್ನೆಯು ಒಂದು ಶಬ್ದ ಕೂಡಾ ಹೆಂಗಸರಿಗೆ ಸಂಬಂಧಿಸಿದ ಶಿಕ್ಷಣ, ಸಮಾನತೆಯ ಬಗ್ಗೆ ಉಸಿರೆತ್ತುವುದಿಲ್ಲ.

ಈ ವಿಚಾರ ಇಲ್ಲಿ ನಾನು ಪ್ರಸ್ತಾಪಿಸುವುದಕ್ಕೆ ಕಾರಣವಿದೆ. ವಸಾಹತುಶಾಹಿಯ ಸಂದರ್ಭದಲ್ಲಿನ ‘ರಾಷ್ಟ್ರೀಯತೆ’ ಸೃಷ್ಟಿಸಿದ ರಾಷ್ಟ್ರೀಯ ಇಬ್ಬಂದಿತನದಲ್ಲಿ ಮಹಿಳಾ ಪ್ರಶ್ನೆಯು ಒಂದು ಈಗಾಗಲೇ ಚರ್ಚಿತವಾಗಿರುವ ವಿಚಾರ. ಮಹಿಳೆಯರ ಸಬಲತೆಯನ್ನು, ಅವರನ್ನು ಒಂದು ‘ಸಮೂಹ’ವಾಗಿ ಪರಿಗಣಿಸಿ ರಾಷ್ಟ್ರೀಯ ಚಳವಳಿಯ ಮುಂಚೂಣಿಯಲ್ಲಿ ಇರಬೇಕೆಂದು ಬಯಸಿದ ಗಾಂಧೀಜಿಯವರಂತಹ ರಾಷ್ಟ್ರೀಯ ನಾಯಕರೇ ‘ಕುಟುಂಬದ’ ಚೌಕಟ್ಟಿನೊಳಗೆ ಅಂತಹ ಸಮೂಹ ಪ್ರಜ್ಞೆಯ ಕರ್ತೃತ್ವ ಶಕ್ತಿಯನ್ನು ವೈಯಕ್ತಿಕ ನೆಲೆಯಲ್ಲಿ ನಿರಾಕರಣ ಮಾಡುವುದು ಕಾಣಸಿಗುತ್ತದೆ. ಏಕೆಂದರೆ ಗೃಹ ಕೃತ್ಯದ ಜವಾಬ್ದಾರಿಯ ನಿರ್ವಹಣೆಗಾಗಿ, ‘ಮನೆ’, ‘ಕುಟುಂಬ’, ‘ಸಂಸ್ಕೃತಿ’ಯ ಆಕರವಾಗಿ ‘ಮನೆಯೊಡತಿ’ಯಾಗುವುದಕ್ಕಾಗಿ.

ಗಾಂಧೀಜಿಯವರು ಸುಧಾರಣಾವಾದಿ ರಾಜಕೀಯದಲ್ಲಿ ನಂಬಿಕೆ ಇಟ್ಟ ಕುವೆಂಪುರವರು ಸೃಷ್ಟಿಸಿದ ಸ್ತ್ರೀ ಪಾತ್ರಗಳು ಗೃಹ ಕೃತ್ಯದ ವಿಧಿಗೆ ಅಂಟಿಕೊಂಡ ಮಗಳು. ‘ಕುವೆಂಪು ಸಮಗ್ರಗದ್ಯ’ ಸಂಪುಟ ೨ರ ಸಂದರ್ಶನದಲ್ಲಿ ಕುವೆಂಪು ನುಡಿಯುತ್ತಾರೆ;

‘ಗೃಹ ಧರ್ಮವನ್ನು ಸಹ ಸ್ತ್ರೀ ಸಮನ್ವಯಗೊಳಿಸಬೇಕೆಂಬುದೇ ನನ್ನ ನಿಲುವು’ (ಪು. ೯೧೬)

‘ಮನೆ ಮನೆಯ ತಪಸ್ವಿನಿಯ ಮುಂದೆ ಲಕ್ಷ್ಮೀಬಾಯಿ, ಸರೋಜಿನಿ ನಾಯ್ದು ರಾಜಕಾರಣಿಗಳು ಸಾಮಾನ್ಯರೇ’ (ಪು. ೮೫೨)

ಹೊಸಲಾಚೆಗೆ ನೀನೊದರೆ
ಹೊಸಲೀಚೆಗೆ ಬೆಳಕಿಲ್ಲ
ಹೆಸರಾಸೆಗೆ ನೀ ಸೋತರೆ
ಉಸಿರಾಸೆಯ ನಮಗಿಲ್ಲ
(ಮನೆ ಮನೆಯ ತಪಸ್ವಿನಿ)

ಕುವೆಂಪುರವರ ಈ ನಿಲುವಿನಿಂದಾಗಿ ಅವರ ಸ್ತ್ರೀ ಪಾತ್ರಗಳು ಜ್ಞಾನ, ಅಧಿಕಾರ, ಸ್ವಯಂ ಪ್ರತಿಭೆಯನ್ನು ಅಂಚಿಗೆ ಒತ್ತರಿಸಿ ರೂಪು ತಳೆದಿವೆ. ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ಯ ಸೀತೆ-ಹೂವಯ್ಯರ ಸಂಬಂಧ, ಗುರು-ಶಿಷ್ಯೆ ಸಂಬಂಧ, ಹೂವಯ್ಯನ ಪ್ರಕೃತಿ ವರ್ಣನೆ, ಭಾವ ಸಮಾಧಿ, ಆತ್ಮ-ದೇಹ ಸಂಬಂಧಿತ ಪ್ರಶ್ನೆಗಳು ಆಕೆಯನ್ನು ಉನ್ನತ ರೀತಿಗೆ ಏರಿಸುವ ಅಂಶಗಳು. ಹೂವಯ್ಯನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲಿಚ್ಛಿಸುವ ಆಕೆ ವಾಚ್ಯದಲ್ಲಿ, ಸುಪ್ತವಾಗಿ ಬಯಸಿದಂತೆ ಆಕೆ ಮದುವೆಯಾಗಬೇಕಿದ್ದ ಕೃಷ್ಣಪ್ಪಗೌಡ ಸಾಯುತ್ತಾನೆ. ಗೊಂದಲ-ಗದ್ದಲದಲ್ಲಿ ರಾಮಯ್ಯ ಆಕೆಗೆ ತಾಳಿ ಕಟ್ಟದೇ ಪುರೋಹಿತ ಕಟ್ಟಿದ ಎಂದಾಗುತ್ತದೆ. ತಾಳಿಯ ಒಡೆತನ, ಸಿಕ್ಕು, ಮತ್ತೊಂದಿರದ ಸೀತೆ ಎಲ್ಲಾ ಘಟನಾವಳಿ ಕಳೆದು ಹೂವಯ್ಯನಲ್ಲಿಗೆ ಧಾವಿಸುತ್ತಾಳೆ.

ಹೀಗೆ ವಿಧಿಯ ಘಟನಾವಳಿಯಿಂದ ಹತ್ತಿರ ಬರುವ ಅವರ ಸಂಬಂಧ ಜನ್ಮ ಜನ್ಮಾಂತರದ ಸಂಬಂಧ ಎಂದೇ ಕುವೆಂಪು ಭಾವಿಸುತ್ತಾರೆ. ಈ ಬಗ್ಗೆ ತೇಜಸ್ವಿಯವರು ‘ಸೀತೆ ಹೂವಯ್ಯನಿಗೆ ಕೊಟ್ಟ ಕಾಗದ ಆತನಿಗೆ ತಲುಪದೇ ರಾಮಯ್ಯನಿಗೆ ತಲುಪುತ್ತದೆ’ ಅದು ನೇರವಾಗಿ ಹೂವಯ್ಯನಿಗೇ ತಲುಪಿದ್ದರೆ ಹೂವಯ್ಯನ ಆದರ್ಶವಾದಕ್ಕೆ ಇನ್ನೂ ಕಠೋರ ಅಗ್ನಿ ಪರೀಕ್ಷೆಯೂ ಒದಗುತ್ತಿತ್ತೆ. ಅನೇಕ ಬಾರಿ ಆದರ್ಶವಾದದೆ ಒಲವು ಹೂವಯ್ಯನನ್ನು ರಕ್ಷಿಸುವುದರ ತನಕ ಹೋಗುತ್ತದೆ ಎನ್ನುತ್ತಾರಲ್ಲ’ ಎಂದು ಸಂದರ್ಶನದಲ್ಲಿ ಕೇಳಿದಾಗ. ‘…. ರೆ….’ ವಿಮರ್ಶಕರ ಬಗ್ಗೆ ಮಾತನಾಡುತ್ತಾ ಕುವೆಂಪು ಕೃತಿಯ ವಿಕೃತ ವಿಮರ್ಶೆ ಎನ್ನುತ್ತಾರೆ…. ಇನ್ನೊಬ್ಬ ಕೃಷ್ಣಪ್ಪನನ್ನೇ ಹುಲಿ ಏಕೆ ಸಾಯಿಸಬೇಕಿತ್ತು ಎನ್ನಬಹುದು.ಮತ ತೊಬ್ಬ ವಾಸ್ತವವಾದಿ ಸುಬ್ಬಮ್ಮ ಏಕೆ ಗರ್ಭಸ್ರಾವ ಮಾಡಿಸಿಕೊಳ್ಳಬೇಕಿತ್ತು. ಅವಳಿಗೆ ಮಗು ಜನಿಸಿದ್ದರೆ ಆಗಿನ ಕಾಲದ ಸಾಮಾಜಿಕ ಪರಿಸರದ ಪ್ರಕ್ರಿಯೆಯನ್ನು ಇನ್ನೂ ವಾಸ್ತವವಾಗಿ ಚಿತ್ರಸಬಹುದಿತ್ತು ಎನ್ನಬಹುದು. ಈ ತರಹದ ಚಿಂತನೆಗಳು, ಆಧ್ಯಾತ್ಮ ತತ್ವ ಮೀಮಾಂಸೆಗಳಾಗುತ್ತವೆಯೇ ಹೊರತು ಸಾಹಿತ್ಯ ವಿಮರ್ಶೆ ಅಲ್ಲ….’ (ಕುವೆಂಪು ಸಮಗ್ರ ಗದ್ಯ-ಸಂಪುಟ ೧೦೧೦ ಪು)

ಸಾಹಿತ್ಯ ವಿಮರ್ಶೆ ಕೃತಿ ಆಧಾರಿತ ಎನ್ನಬಹುದಾದರೂ ಸಾಹಿತ್ಯ ಕೃತಿಯೊಂದರಲ್ಲಿ ಇರುವ ನೆಲೆಗಳು ಕೇವಲ ಸಾಹಿತ್ಯಕವಾಗಿರುವುದಿಲ್ಲ. ಒಟ್ಟು ಸಾಮಾಜಿಕ ವಿಮರ್ಶೆಯ ನೆಲೆಗಳಾಗಿರುತ್ತವೆ. ಹಾಗಾಗಿ ಸಾಹಿತ್ಯ ವಿಮರ್ಶೆ ಸಾಮಾಜಿಕ, ತಾತ್ವಿಕ, ಸಾಂಸ್ಕೃತಿಕ ನೆಲೆಗಳನ್ನು ಗ್ರಹಿಸಿಕೊಳ್ಳುವ ಪರಿಭಾಷೆಯನ್ನು ಒಳಗೊಂಡಿರಬೇಕಾಗುತ್ತದೆ.

ಕುವೆಂಪುರವರ ಕಾನೂರು ಸುಬ್ಬಮ್ಮ ಹೆಗ್ಗಡತಿಯ ಸೀತೆ-ಹೂವಯ್ಯನ ಸಂಬಂಧ ಹೀಗಿದೆ:

‘ಆಕೆಯ ಹಾಗೂ ಹೂವಯ್ಯನ ಬಾಳು ಒಡಲ ಸೋಂಕಿನ ಗೊಡವೆಯಿಲ್ಲದೆ ಪರಸ್ಪರ ಎರಡು ಆತ್ಮಗಳ ಪ್ರೋಜ್ವಲ ಜೀವನ….

ಶುದ್ಧವಾದ ಆತ್ಮಕ್ಕೆ ಸಂಬಂಧಪಟ್ಟ ಅತೀಂದ್ರಿಯವಾಗಿತ್ತು. ಆ ಹಿನ್ನಿನ ಗಟ್ಟಿಯಲ್ಲಿ ಒಂದು ವೇಳೆ ಕಾಳಿಕೆಯ ರೇಖೆ ಸುಳಿದುದಾದರೆ, ಒಡನೆಯೇ ಇಬ್ಬರೂ ಪ್ರಯತ್ನದಿಂದ ಅದನ್ನು ನಿವಾರಿಸುತ್ತಿದ್ದರು. ಉರಿಯುವ ಬತ್ತಿಯ ತುದಿಯಲ್ಲಿ ಕರಿ ಕಟ್ಟಿಕೊಂಡರೆ ಅದನ್ನು ತೊರೆದು ಹಾಕಿ ದೀಪದ ಕುಡಿ ಮತ್ತಷ್ಟು ಉಜ್ವಲವಾಗಿ ತೊಳಗಿ ಬೆಳಗಿಸುವಂತೆ…” (ಪು.೫೮೬)

ಹೀಗಿರುವ ಈ ಸೀತೆ ನಮಗೆ ಏನನ್ನು ಹೇಳುತ್ತಾಳೆ. ಈ ಆಧ್ಯಾತ್ಮಿಕ ಹೊರೆಯನ್ನು ಹೊರುವಷ್ಟು ಸೀತೆ ಸ್ವಯಂ ಪ್ರತಿಭೆಯಿಂದ ಕಂಗೊಳಿಸುತ್ತಾಳೆಯೇ ಎಂಬುದು ಇಲ್ಲಿಯ ಪ್ರಶ್ನೆ. ಗಂಗಿ, ಸುಬ್ಬಮ್ಮ ಬಡತನದ, ಕುಸಂಸ್ಕೃತಿಯ ನೆಲೆಯ ಹೆಣ್ಣು ಮಕ್ಕಳು. ಇವರ ಕುಸಂಸ್ಕೃತಿಯಿಂದಾಗಿ ಇವರು ದುರಂತ, ಅದಃಪತನವನ್ನು ಕಾಣುತ್ತಾರೆ. ಬಡತನ, ಕುಸಂಸ್ಕೃತಿ, ಅವರ ಸಾಮಾಜಿಕ ಸ್ತರಗಳು ಅವರ ಲೈಂಗಿಕ ದುರ್ವರ್ತನೆಗೆ, ದುರಂತಕ್ಕೆ ಕಾರಣ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲಾಗಿದ್ದರೂ ವಿಧಿ ನಿಯಾಮಕ ಜಗತ್ತಿನಲ್ಲಿ, ವಿಧಿ ನಿಯಾಮಕಗಳ ಮೇಲಿನ ಉಜ್ವಲತೆಯಿಂದಾಗಿ ಈ ಚಿತ್ರಣಗಳು ಪ್ರಾತಿನಿಧಿಕವಾಗಿ ಉಳಿದು ಬಿಡುತ್ತವೆ. ಕಾದಂಬರಿಯ ಪ್ರಧಾನ ವೈಚಾರಿಕತೆ ವಿಧಿ ನಿರ್ಣಾಯಕ ಪ್ರಕೃತಿ ಸಹಜ ಎಂದಾಗುವುದರಿಂದ ಕುವೆಂಪು ಕಾಲದಲ್ಲಿ ಮೂಡುತ್ತಿದ್ದ ಸ್ತ್ರೀ ಸಂಬಂಧಿತ ಆಧುನಿಕತೆಯ ಜೊತೆಗಾಗಲೇ, ರಾಜಕಾರಣದ ಜೊತೆಗಾಗಲೀ ಇಲ್ಲಿ ಸಂವಾದ ಇಲ್ಲ. ಈ ಬಗೆಯ ಸಂವಾದಗಳು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಪುನರ್‌ನಿರ್ಮಾಣದ ಪರಿಭಾಷೆಯನ್ನು ಆಯ್ದುಕೊಳ್ಳುತ್ತಿರುತ್ತವೆ. ಆದರೆ, ಕುವೆಂಪುರವರ ಸ್ತ್ರೀ ಸಂಬಂಧಿತ ಪಾತ್ರಗಳಲ್ಲಿ ಇಂತಹ ಆಶಯಗಳ ಜೊತೆ ಸಂವಾದ ಇಲ್ಲ ರೂಪುಗೊಂಡಿಲ್ಲ. ಕಾದಂಬರಿಗಳಲ್ಲಿ ಶೂದ್ರವರ್ಗದಲ್ಲಿ ಸಂಚಲನ ಉಂಟು ಮಾಡುವ  ಸಾಂಸ್ಕೃತಿಕ ಬಂಡಾಯದ ಎಳೆಗಳು ಕಂಡು ಬಂದಂತೆ ಸ್ತ್ರೀ ಸಂಬಂಧಿತ ಪ್ರಶ್ನೆಗಳಲ್ಲಿ ಮೂಡುವುದಿಲ್ಲ.

ಕೊನೆಯದಾಗಿ ಕುವೆಂಪುರವರ ಸ್ತ್ರೀ ಪಾತ್ರಗಳ ಸುತ್ತ ಸುತ್ತಿದಾಗ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಮೂಡಿ ಬಂದ ಪೀಂಚಲು ಸೃಷ್ಟಾತ್ಮಕ ಪಾತ್ರವಾಗಿ, ಸ್ವಾತಂತ್ರ್ಯ ಚಿಂತನೆಯಲ್ಲಿ ಮೂಡಿ ಬಂದ ಹೊಲೆಯರ ಹೆಣ್ಣು ಮಗಳಾಗಿ ಕಾಣಿಸುತ್ತಾಳೆ. ಆಕೆಯ ಮನಸ್ಸಿಗೆ ತಾರತಮ್ಯದ ಪ್ರಶ್ನೆಗಳಾಗಲೀ, ಜಾತಿಯ ಶ್ರೇಣೀಕರಣವಾಗಲೀ ಗಂಭೀರವಾಗಿ ಮೂಡಿ ಬರುವುದಿಲ್ಲ. ಆದರೂ ಹಿತ ಕೇಳುವುದನ್ನು ಮುಕುಂದಯ್ಯ ಕೇಳಿದರೂ ಕೊಡಬಲ್ಲ ಹೆಣ್ಣು ಈಕೆ. ಮಹತ್ವವಾದುದೊಂದಕ್ಕೆ, ಹಿರಿದಾದುದೊಂದಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಿದ್ದೇನೆಂಬ ಭಾವ ಈಕೆಗೆ. ಈತನನ್ನು ಪಕ್ಕದಲ್ಲಿಟ್ಟು, ಮುಂಕುಂದಯ್ಯ, ಚಿನ್ನಮ್ಮ, ತಿಮ್ಮಿ ಇತರರಿಗೆ ಅವರ ಜೀವನಕ್ಕೆ ಒಂದು ಸೂತ್ರ ಸೇತುವೆಯಾಗುವ ಪೀಂಚಲು ವ್ಯಕ್ತಿತ್ವ ಕುವೆಂಪುರವರ ಕಾದಂಬರಿಯಲ್ಲಿ ಸೃಷ್ಟಿಸಲಾದ ಒಂದು ಗಟ್ಟಿ ಧ್ವನಿಯ, ಸ್ವತಂತ್ರ್ಯ ನೆಲೆಯ ಪಾತ್ರ ಎಂದು ಗುರುತಿಸಬಹುದಾಗಿದೆ.

ಒಟ್ಟಾಗಿ ಹೇಳುವುದಾದರೆ-

ಕುವೆಂಪುರವರು ಶ್ರೀ ರಾಮಾಯಣ ದರ್ಶನಂನಲ್ಲಿ ಊರ್ಮಿಳೆ, ಮಂತರೆಯಂತಹ ನಿರ್ಲಕ್ಷಿತ ಪಾತ್ರಗಳನ್ನು ಹಾಗೂ ಇತರ ಪುರಾಣದ ಪಾತ್ರಗಳನ್ನು ಮಾನವೀಯ ನೆಲೆಯಲ್ಲಿ ವಿಭಿನ್ನವಾಗಿ ಚಿತ್ರಿಸಿದ್ದರೂ ಅವರ ವ್ಯಕ್ತಿತ್ವಗಳು ರೂಢಿಯ, ಸ್ಥಾಪಿತ ಮೌಲ್ಯಗಳನ್ನೇ ಎತ್ತಿ ಹಿಡಿಯುತ್ತವೆ ಹಾಗೂ ಇವರ ಸೀತೆ, ಸಾವಿತ್ರಿ, ಊರ್ಮಿಳೆಯರು ಹೆಣ್ಣಿನ ಸೃಷ್ಟಾತ್ಮಕ ಬದುಕಿಗೆ ಹೊಸದಾರಿಗಳನ್ನು ತೆರೆಯುತ್ತಾರೆಂದು ನಿರೀಕ್ಷಿಸುವುದು ಕಷ್ಟ ಸಾಧ್ಯ.

ಕುವೆಂಪುರವರ ಆಧ್ಯಾತ್ಮಕ ನೋಟದ ಆದರ್ಶೀಕರಣದಿಂದಾಗಿ ಮಹಿಳಾ ಚಿತ್ರಣದಲ್ಲಿ ‘ತಾಯ್ತನ’ದ ಮೇಲೇ ವಿಶೇಷ ಗಮನ ಕೇಂದ್ರೀಕರಣವಾಗಿರುವುದನ್ನು ಗಮನಿಸಬಹುದು. ಹೂವಯ್ಯನ ಆದರ್ಶದಲ್ಲಿ ಅಥವಾ ಮುಕುಂದಯ್ಯನ ನೋಟದಲ್ಲಿ ವಿಚಾರಧಾರೆಗಳು ಹೊಸ ಬದುಕಿನತ್ತ ಹೆಜ್ಜೆ ಹಾಕಲು ಹಲವಾರು ದಾರಿಗಳನ್ನು ಹೊಂದಿದ್ದರೂ, ಹೆಣ್ಣಿನ ವಿಚಾರದಲ್ಲಿ ಮಾತ್ರ ವಾಸ್ತವ ಸತ್ಯಗಳಿಗೇ ಪ್ರಾಶಸ್ತ್ಯವಿರುವುದು ಕಂಡು ಬರುತ್ತದೆ. ಹಾಗಾಗಿ ಹೂವಯ್ಯನಂತವರ ಕೇಂದ್ರ ಪ್ರಜ್ಞೆಯ, ಕೇಂದ್ರ ವೈಚಾರಿಕತೆಯ ವಾಹಿನಿಯಲ್ಲಿ ಮಹಿಳಾ ಪಾತ್ರಗಳು ತಮ್ಮನ್ನು ಗುರುತಿಸಿಕೊಳ್ಳುವುದು ಮುಖ್ಯವಾಗುತ್ತದೆ.

‘ವಿಧಿ ಚಿತ್ತದ’ –ಪ್ರಜ್ಞೆಯ ವೈಚಾರಿಕತೆ ಕೂಡಾ ಕುವೆಂಪು ಕಾದಂಬರಿಗಳಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಮಹಿಳಾ ಪ್ರಜ್ಞೆಯ ಲೋಕ ತೆರೆದುಕೊಳ್ಳುವಲ್ಲಿ, ಮಹಿಳಾ ಬದುಕಿನ ಸಂಘರ್ಷಗಳನ್ನು ಮುಂಚೂಣಿಗೆ ತರುವಲ್ಲಿ- ವಿಧಿ ಚಿತ್ರ-ಒಂದು ದೊಡ್ಡ ಮಿತಿಯಾಗಿಯೇ ಧ್ವನಿಸುತ್ತದೆ. ಹಾಗಾಗಿ ಅವರ ಸಮಕಾಲೀನರಲ್ಲಿ ಧ್ವನಿಸಿದ್ದ ಮಹಿಳಾ ಆಧುನಿಕ ವಿಚಾರಗಳು ಇವರ ಬರಹಗಳಲ್ಲಿ ಕಾಣಸಿಗುವುದಿಲ್ಲ. ಆದರೆ, ಮಾನವೀಯ ನೆಲೆಯ ನೋಟಗಳು ಮಹಿಳೆಯನ್ನು ಚಿತ್ರಿಸುವಲ್ಲಿ ವಿಶೇಷವಾದ ಪಾತ್ರವನ್ನು ವಹಿಸುತ್ತವೆ ಎಂದು ಹೇಳಬಹುದು.

* * *