ಕನ್ನಡದ ಪಂಚಭೂತ
ಕನ್ನಡದ ಆಕಾಶ ನೀನು
ಏನೆಲ್ಲ ಉಂಟು ನಿನ್ನೊಳಗೆ.
ಮಲೆನಾಡ ಮಲೆಗಳ ತಂಪೆಲರು ನೀನು
ಏನೆಲ್ಲ ಗಂಧ ಪರಿಮಳ ನಿನ್ನೊಳಗೆ.
ಕನ್ನಡಿಗರ ಮೌಢ್ಯತೆಗೆ ಅಗ್ನಿ ನೀನು
ಏನೆಲ್ಲ ವೈಚಾರಿಕ ಕಿಡಿ ನಿನ್ನೊಳಗೆ.
ಕನ್ನಡದ ಕಸ್ತೂರಿ ನೆಲವು ನೀನು
ಕಣಕಣವೆಲ್ಲ ವಿಶ್ವಮಾನತ್ವದ ಹಸಿರು.
ಪಂಚಭೂತಗಳಲಿ ಬಯಲಾದೆ
ಕನ್ನಡದ ಪಂಚಭೂತವಾದೆ.
ಕರ್ನಾಟಕದ ವಿಶ್ವಮಾನವ ವರ್ಷವಾದೆ
ಭಾರತಿಸುವೆ ಮಾನಸಶಿವೆಯ ಕಾವ್ಯಸತ್ಯವಾದೆ.

ಆಡು ಮುಟ್ಟದ ಸೊಪ್ಪಿಲ್ಲ. ಕುವೆಂಪು ಬರೆಯದ ಸಾಹಿತ್ಯವಿಲ್ಲ. ಅದೇನು ಪ್ರತಿಭೆ ಅವರದು. ಅದ್ಭುತ, ಕುವೆಂಪು ಅವರ ಪ್ರತಿಭೆ ಸಮುದ್ರದಂತೆ ಅಪಾರ. ಪಂಪನಿಂದ ಕುವೆಂಪೂವರೆಗೆ ಎಂಬ ಸಾಹಿತ್ಯಕ ಪರಿಭಾಷೆ ಕುವೆಂಪು ಅವರ ಪ್ರತಿಭೆಗೆ ಸಂದ ಗೌರವ. ಮಹಿಳೆಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯರಾಗುವ ಅವಕಾಶ ಇನ್ನೂ ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇಂದಿಗೂ ಮಹಿಳೆಯರು ತಮಗೆ ಬರಬೇಕಾದ ಗೌರವವನ್ನು ಹೋರಾಟ ಮಾಡಿಯೇ ಪಡೆಯಬೇಕಾಗಿದೆ.

ಕುವೆಂಪು ಅವರ ಸಮಗ್ರ ಕಾವ್ಯ ಎರಡು ಸಾವಿರ ಪುಟಗಳು, ಎರಡು ಸಂಪುಟಗಳಿವೆ. ೩೧ ಕವನ ಸಂಕಲನಗಳಿವೆ. ಇದರ ಜೊತೆಗೆ ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಮತ್ತು ಚಿತ್ರಾಂಗದೆ ಖಂಡಕಾವ್ಯ ಬೇರೆ ಇವೆ. ಮಹಿಳೆಯನ್ನು ಕುರಿತು ಅನ್ನಪೂರ್ಣೆ, ಶಕ್ತಿಗೌರಿ, ಭವತಾರಿಣಿ ವಿಶೇಷಣಗಳಲ್ಲಿ ಕರೆದ ಪ್ರಾತಿನಿಧ್ಯ ಕೊಟ್ಟಿರುವ ಬೇಕಾದಷ್ಟು ಕವಿತೆಗಳಿವೆ. ಅದರಲ್ಲಿ ನಾಗಿಯನ್ನು ಕುರಿತ ಕಥನಗೀತೆಯೂ ಇದೆ. ಐಸಡೋರಾ ಮಹಿಳೆ ಮೇಲೆ ಬರೆದ ಕವನವೂ ಇದೆ.

ಐಸಡೋರಾ ಐಸಡೋರಾ
ಮರುಗುವೆನು ನಾ ಬಯ್ಯೆನು
ಅಯ್ಯೋ ಸೋದರಿ ನನ್ನ ಸೋದರಿ
ನಿನಗೆ ನಿಂದೆಯ ನೆಯ್ಯೆನು
ಐಸಡೋರಾ ಐಸಡೋರಾ
ಭವಿಸು ಭಾರತದೇಶಕೆ

ಎಂದು ಕವನ ಬರೆಯುವ ಕುವೆಂಪು ಅವರು ರವೀಂದ್ರನಾಥ ಟಾಗೂರರು ಜನಗಣಮನಗೀತೆ ಬರೆದಂತೆ ಕರ್ನಾಟಕಕ್ಕೂ ಒಂದು ನಾಡಗೀತೆ ಕೊಡುವ ಉದ್ದೇಶದಿಂದಲೆ ಜಯಹೇ ಕರ್ನಾಟಕ ಮಾತೆ ನಾಡಗೀತೆಯನ್ನು ಬರೆದರು. ಈ ನಾಡಗೀತೆಯು ೧೯೨೪-೨೫ರಲ್ಲಿ ರಚನೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ತು ೭೦-೭೧ರ ನಾಟಗೀತೆ ಎಂದು ಸ್ವೀಕರಿಸಿತು. ೨೭.೭.೭೨ರಲ್ಲಿ ಕರ್ನಾಟಕ ಎಂದು ನಾಡಿಗೆ ಹೆಸರಾದ ಸಂದರ್ಭದಲ್ಲಿ ಮತ್ತೆ  ಕುವೆಂಪು ಅವರು ಪುನರ್ರಚನೆ ಮಾಡಿದರು.

ಅವರ ವಿಸ್ತಾರದ ಓದಿನಲ್ಲಿ ಕರ್ನಾಟಕದ ನಾಡಿಯರು ಯಾರೂ ಈ ನಾಡಗೀತೆಯಲ್ಲಿ ಸ್ಥಾನ ಪಡೆಯುವ ಅವಕಾಶ ಒದಗಿ ಬರಲಿಲ್ಲವಲ್ಲ ಎಂದು ನನಗೆ ಬೆರಗಾಗುತ್ತದೆ. ಈ ದೇಶದಲ್ಲಿ ಪಟ್ಟಭದ್ರ ಧರ್ಮಗಳು ಬಹಳವಾಗಿ ಮಹಿಳೆಯನ್ನು ಸತಿ ಹೋಗುವಂತೆ ಮಾಡಿದರು. ಅವಿದ್ಯೆಯಲ್ಲಿಟ್ಟರು. ದೇವದಾಸಿಯರನ್ನಾಗಿ ಮಾಡಿದರು. ಅಡಿಗೆ ಮನೆಯಲ್ಲಿ ಕೊಳೆಸಿದರು. ಇಷ್ಟೆಲ್ಲ ವ್ಯವಸ್ಥೆಯ ಕುತಂತ್ರಗಳನ್ನು ಅನುಭವಿಸಿದ ಕರ್ನಾಟಕದ ಮಹಿಳೆಯರು ಏನೆಲ್ಲ ಸಾಧನೆ ಆಡಿ ಮೇಲೇರಿದ್ದಾರೆ.

ಕರ್ನಾಟಕದ ನಾಡಗೀತೆಯನ್ನು ನಿತ್ಯ ಹಾಡುವ ಕಾಲಕ್ಕೆ ಸಾಧನೆ ಮಾಡಿದ ಯಾವ ಮಹಿಳೆಯರೂ ಕುವೆಂಪು ಅವರಿಗೆ ಕಾಣಿಸಲಿಲ್ಲವೆ? ಜಯಭಾರತ ಜನನಿಯ ತನುಜಾತೆ ಎನ್ನುತ್ತಾರೆ. ಜಯಹೇ ಕರ್ನಾಟಕದ ಮಾತೆ ಎನ್ನುತ್ತಾರೆ. ನಾಡು, ನುಡಿಯನ್ನು ಮಾತೆಯರಾಗಿ, ದೇವಿಯಾಗಿ ಗುರುತಿಸಿದ ಈ ನೆಲದ ಕವಿಗಳಿಗೆ ಕರ್ನಾಟಕದ ಯಾವ ಮಹಿಳೆಯರೂ ಪ್ರಾತಃಸ್ಮರಣೀಯರು ಎನಿಸಲಿಲ್ಲವೆ? ಲೋಕಸಭೆಯಲ್ಲಿ ಮಹಿಳೆಯರಿಗೆ ೫೦-೫೦ ಮೀಸಲಾತಿ ಬೇಕು ಎನ್ನುತ್ತಿರುವಾಗ ಶೇ.೩೩ ಸಿಕ್ಕಿದೆ. ಆದರೆ, ಅದು ಕಾರ್ಯಗತವಾಗುತ್ತಿಲ್ಲ. ಈಗ ತಾನೆ ಕರ್ನಾಟಕದ ರಾಜ್ಯಸಭೆಗೆ ೪, ವಿಧಾನ ಪರಿಷತ್ತಿಗೆ ೭ ಸ್ಥಾನಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಒಬ್ಬರ ಮಹಿಳೆಯರಿಗೂ ಅಲ್ಲಿ ಸ್ಥಾನ ಸಿಕ್ಕಿಲ್ಲ. ಯಾವ ಪಕ್ಷಗಳೂ ಮಹಿಳೆಯನ್ನು ಗೌರವಿಸುತ್ತಿಲ್ಲ.

ಕುವೆಂಪು ಅವರು ಸ್ವತಃ ತಮ್ಮ ತಾಯಿಯವರೆ ವ್ಯವಸ್ಥೆಯಿಂದ ಎಷ್ಟು ನಲುಗಿದರು ಎಂಬುದನ್ನು ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಸಾಧನೆ ಮಾಡುವುದು ಎಷ್ಟೊಂದು ಕಷ್ಟವಿದೆ. ಇಷ್ಟೆಲ್ಲ ಸಾಧನೆ ಮಾಡಿ ಮೇಲೇರಿ ಬಂದರೂ ಕುವೆಂಪು ಬರೆದ ನಾಡಗೀತೆ ಕವಿತೆಯಲ್ಲಿ ಕೂಡ ಮಹಿಳೆಯರು ಹೆಸರೇಕಿಲ್ಲ ಎಂದು ಕೇಳಬೇಕಾದುದು ಸೋಜಿಗ. ಕುವೆಂಪು ಅವರ ಕಣ್ಣಿಗೆ ಪ್ರಾತಃಸ್ಮರಣೀಯರಾದ ಮಹಿಳೆಯರು ಯಾರೂ ಕಾಣಲೇ ಇಲ್ಲವೆ? ಲೋಕ್ಯ ಮಹಾದೇವಿ, ತ್ರೈಲೋಕ್ಯ ಮಹಾದೇವಿ, ಅಕ್ಕಾದೇವಿ, ಅತ್ತಿಮಬ್ಬೆ, ಅಕ್ಕಮಹಾದೇವಿ, ಶಾಂತಲಾ ಮುಂತಾದ ಅಸಂಖ್ಯಾತ ಮಹಿಳೆಯರಿದ್ದಾರೆ. ಇವರು ಯಾರೂ ಕುವೆಂಪು ಅವರಿಗೆ ಕರ್ನಾಟಕದ ನಾಟಗೀತೆಯಲ್ಲಿ ಪ್ರಾತಃಸ್ಮರಣೀಯರು ಎನಿಸಲಿಲ್ಲವೆ?

ಬಾಲವಿಧವೆ (ಪುಟ ೫೪೯, ಸಮಗ್ರ ಕಾವ್ಯ ಸಂಪುಟ-೨, ಹಂಪಿ ವಿಶ್ವವಿದ್ಯಾಲಯ ಪ್ರಕಟಣೆ) ಎಂಬ ಒಂದು ಕವಿತೆಯನ್ನು ಬರೆದಿದ್ದಾರೆ. ಈ ಕವಿತೆಯ ಕೊನೆಯಲ್ಲಿ ಕಾಲವಿಧವೆಯು ಹದಿನಾರನೆ ವಯಸ್ಸಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಮನುಜ ಲೋಕವೇ ನರಕ,
ಬೇರೆ ನರಕವದೆಲ್ಲಿ ಆ ವಿಧವೆಗೆ?
ಪತಿಯ ಲೋಕವೇ ನಾಕ,
ಬೇರೆ ನಾಕವದೆಲ್ಲಿ ಆ ಬಾಲೆಗೆ?
ಧರ್ಮ ಶಾಸ್ತ್ರಜ್ಞರೇ ಬನ್ನಿ ಧರ್ಮವ ತೋರಿ
ಧಾರೆಯನು ಎರೆದವನೆ ಜೋಯಿಸನೆ ಬಾ ಈಗ
ಕರೆ ನಿನ್ನ ಸಾಕ್ಷಿಗಳ ಅಪರಾಧಿ ಯಾರು?
ಇದನ್ನೆಲ್ಲ ಸರಿಯೆಂದು ಹೊಗಳುವ ಸಮಾಜವೆ
ಎಲ್ಲಿ ಗೊರಕೆಯ ಹೊಡೆವೆ? ಬಾ ಬೇಗ ಇಲ್ಲಿ
ಇಲ್ಲಿ ನ್ಯಾಯಾಸ್ಥಾನ, ಇಲ್ಲಿ ಧರ್ಮವ ಹೇಳು.

ಭಾರತದ ಸಂಸ್ಕೃತಿಯಲ್ಲಿ ಮಹಿಳೆಗೆ ಪುರುಷನೇ ಸರ್ವಸ್ವ. ಪುರುಷನಿಲ್ಲದೆ ಸತಿಗೆ ಬಾಳಿಲ್ಲ. ಈ ವ್ಯವಸ್ಥೆಯನ್ನು ಕುವೆಂಪು ಪ್ರಶ್ನೆ ಮಾಡುತ್ತಿದ್ದಾರೆ. ಜ್ಯೋತಿಷ್ಯ ಕೇಳಿಯೇ ಲಗ್ನ ಮಾಡಿದರೂ ಜ್ಯೋತಿಷಿಗೆ ಆ ಪುರುಷ ಪತಿ ಅಲ್ಪಾಯು ಎಂದು ತಿಳಿಯದೆ. ತಪ್ಪು ಯಾರದು? ವೈಧವ್ಯದ ಶಿಕ್ಷೆ ಪುಟ್ಟ ಬಾಲೆಗೇಕೆ? ಇದು ಕುವೆಂಪು ವ್ಯವಸ್ಥೆಗೆ ಕೇಳುವ ಪ್ರಶ್ನೆ. ಇದು ಕುವೆಂಪು ಕಾದಂಬರಿಗಳಲ್ಲಿಯೇ ವಿಧವೆ ಮಹಿಳೆಯರು ಪುನರ್ವಿವಾಹವಾದ ಚಿತ್ರಣವೇ ಇದೆ. ವಿಧವೆ ಮಹಿಳೆ ಮರುಮದುವೆಗೆ ಹೆಜ್ಜೆ ಹಾಕಿ ಬದುಕು ಅರಳಿಸಿಕೊಂಡ ಬದುಕು ಇಂದು ವಿಸ್ತಾರವಾಗಿದೆ.

ಕುವೆಂಪು ಅವರು ವಿಧವೆಗೆ ನೇಣೇ ಗತಿ ಎಂದು ಕವಿತೆಗೆ ಅಂತ್ಯ ಹಾಡಿದ್ದಾರೆ. ನಿರುಂಕುಶಮತಿಯಾಗಿ ಚಿಂತನೆಗಳನ್ನು ತೇಲಿ ಬಿಡುವ ಮಂತ್ರ ಅವರು ವಿಧವೆ ಮಹಿಳೆಯು ದಿಟ್ಟೆಯಾಗಿ ತನ್ನ ಬದುಕನ್ನು ಕಟ್ಟಿಕೊಳ್ಳುವ ಆಶಯದೊಂದಿದೆ ಕವಿತೆಯನ್ನು ಮುಕ್ತಾಯಗೊಳಿಸಬಹುದಿತ್ತು. ನೇಣು ಹಾಕಿಕೊಳ್ಳುವುದಕ್ಕೆ ಮರ ಹತ್ತುವ ಸಾಹಸಿಯಾದ ಮಹಿಳೆಯು ವೈಧವ್ಯ ಮತ್ತು ವ್ಯವಸ್ಥೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಳೆನ್ನುವುದು ಮಹಿಳೆಗೆ ಕೊಡುವ ಪರಿಹಾರವಲ್ಲ. ಸಾಯುತಿದೆ ನಿಮ್ಮ ನಾಡಿ ಓ ಕನ್ನಡದ ಕಂದರಿರಾ? ಎಂದು ಕುವೆಂಪು ಅವರು ಕನ್ನಡಿಗರ ಸಮಸ್ತ ಪ್ರಜ್ಞೆಯನ್ನು ಬಡಿದೆಬ್ಬಿಸಿದ್ದಾರೆ.

ನೂರಾರು ಭಾಷಣಗಳಲ್ಲಿ, ಲೇಖನಗಳಲ್ಲಿ ಬೆರಳ್ಗೆ ಕೊರಳ್ ಎನ್ನುವ ನಾಟಕದಲ್ಲಿ ಪಟ್ಟಭದ್ರಶಕ್ತಿಗಳ ಹುನ್ನಾರಗಳನ್ನೆಲ್ಲ ಎಳೆಎಳೆಯಾಗಿ ಬಯಲಿಗಿಟ್ಟಿದ್ದಾರೆ. ಇಂತಹ ಕುವೆಂಪು ಅವರು ನಾಡಗೀತೆ ವಿಚಾರದಲ್ಲಿ ಮಹಿಳೆಗೂ ಒಂದು ಮೌಲ್ಯ ಸ್ಥಾನ ಕೊಟ್ಟಿದ್ದರೆ ಬಹುಶಃ ಭಾರತದಲ್ಲಿ ಪ್ರಜಾಪ್ರಭುತ್ವದಲ್ಲಿ ಮಹಿಳೆಗೆ ಮೀಸಲಾತಿ ಎಂಬುದು ಹೆಚ್ಚು ವೇಗ ಪಡೆದುಕೊಳ್ಳಲು ಸಹಾಯವಾಗುತ್ತಿತ್ತು. ಇತರ ಚಿಂತಕರು, ಕವಿಗಳು ಕೂಡ ಈ ನಿಟ್ಟಿನಲ್ಲಿ ಮಹಿಳಾ ಸಮಾನತೆಯ ವಿಚಾರಗಳಿಗೆ ಮನ್ನಣೆ ನೀಡುವಲ್ಲಿ ಮತ್ತಷ್ಟು ವೇಗ ಬರುತ್ತಿತ್ತು.

ರಾಮ-ಸೀತೆಯರ ಅಗ್ನಿ ಪರೀಕ್ಷೆ

ರಾಮಾಯಣ ದರ್ಶನಂ ಕೃತಿಯಲ್ಲಿ ಲಂಕೆಯಲ್ಲಿ ರಾವಣನನ್ನು ಮುಗಿಸಿದ ಮೇಲೆ ಸೀತೆಯನ್ನು ರಾಮನು ಸ್ವೀಕರಿಸಿದ ಸಂದರ್ಭವನ್ನು ಇಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತೇನೆ. ಸೀತೆಯು ಅಶೋಕವನದಲ್ಲಿ ರಾವಣನ ರಾಜ್ಯದಲ್ಲಿದ್ದಳು. ಇವಳನ್ನು ನಾನು ಈಗ ಸ್ವೀಕರಿಸಬೇಕೇ? ಬೇಡವೇ? ಸ್ವೀಕರಿಸುವುದಾದರೆ ಸೀತೆಯು ಪರಿಶುದ್ಧಳು ಎನ್ನುವುದು ಲೋಕಸತ್ಯದಲ್ಲಿ ಸಿದ್ಧವಾಗಲಿ ಎಂದು ರಾಮನು ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಡ್ಡುತ್ತಾನೆ. ಈ ಅಗ್ನಿ ಪರೀಕ್ಷೆಯಲ್ಲಿ ಸೀತೆಯು ಅಗ್ನಿಗೆ ದುಮುಕಿದಾಗ ಆಕೆಯ ಜೊತೆ ರಾಮನು ಅಗ್ನಿಗೆ ದುಮುಕುವ ಸಂದರ್ಭವನ್ನು ಅಪೂರ್ವ ಚಿತ್ರಣ ಎಂದು ಎಲ್ಲರೂ ಕೊಂಡಾಡುತ್ತಾರೆ.

ವೈದಿಕ ಪರೀಕ್ಷೆಗಳಿಗೆ ತಲೆಯೊಡ್ಡುತ್ತಾ ಹೋದುದರಿಂದಲೇ ಭಾರತ ಹೀಗಾಯಿತು. ಈ ದೇಶವನ್ನು ಪ್ರಧಾನಿಯಾಗಿ ಆಳುತ್ತಿದ್ದ ಇಂದಿರಾಗಾಂಧಿಯವರಿಗೆ ಒರಿಸ್ಸಾದ ಜಗನ್ನಾಥ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಯಿತು. ಅವರು ಮಹಿಳೆ ಎಂಬುದು ಒಂದು. ವಿಧವೆ ಎಂಬುದು ಇನ್ನೊಂದು. ಜಯಮಾಲ ಅವರಿಗೆ ಅಯ್ಯಪ್ಪ ದೇವಾಲಯಕ್ಕೆ ನಿಷೇಧ ಹೇರಲಾಯಿತು. ಅವರು ಒಳ ಹೋಗಿ ಬಂದರು ಎಂದು ಸುದ್ದಿಯಾಗಿ ಜಯಮಾಲ ಪ್ರವೇಶದ ಕಾರಣ ದೇವಾಲಯ ಅಪವಿತ್ರವಾಯಿತೆಂದು ದೇವಾಲಯವನ್ನು ಶುಚಿ ಕರ್ಮದ ಹೆಸರಿನಲ್ಲಿ ಪವಿತ್ರಗೊಳಿಸಿದಂತೆ?! ಎಲ್ಲಿಯ ಪುರೋಹಿತಷಾಹಿಗಳು? ಎಲ್ಲಿಯ ಕುವೆಂಪು? ಇವರ ಇಂತ ಪಟ್ಟಭದ್ರ ವಿಧಿ, ಕರ್ಮಗಳನ್ನು ಪ್ರಶ್ನೆ ಮಾಡಿಯೇ ಅಲ್ಲವೆ ವಚನಕಾರರು ಹನ್ನೆರಡನೇ ಶತಮಾನದಲ್ಲಿ ದೇವಾಲಯಗಳಿಗೆ ನಿಷೇಧ ಹಾಕಿದ್ದು.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲುಮಣ್ಣುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಕುವೆಂಪು ಅವರ ಶಿಷ್ಯರೇ ಆದ ಜಿಎಸ್‌ಎಸ್‌ಅವರು ಬರೆದ ಈ ಕವಿತೆ ಬಹುಶಃ ಕವೆಂಪು ಅವರ ವಿಚಾಧಾರೆಗಳಿಗೆ ನೀಡಿದ ಗೌರವದ ಕಾಣಿಕೆ ಎನಿಸುತ್ತದೆ. ಯಾವ ವ್ಯವಸ್ಥೆಯು ಮಹಿಳೆಯನ್ನು ಕನಿಷ್ಠ, ಅಪವಿತ್ರ, ಬಹುಷ್ಠೆ, ಮೋಕ್ಷಕ್ಕೆ ಅನರ್ಹಳು ಎಂದು ಹೇಳುತ್ತದೆಯೋ ಅಂತಹ ಚಿಂತನೆಗಳಿಗೆ ತಲೆಯೊಡ್ಡುವುದರಲ್ಲಿ ಅರ್ಥವಿದೆಯೆ? ಬಹುಶಃ ಕುವೆಂಪು ಅವರು ತುಸು ಸಮಾಧಾನವಾಗಿ ಆಳವಾಗಿ ವಿಚಾರ ಮಾಡಿದ್ದರೆ ಕಾನೂರು ಹೆಗ್ಗಡತಿಯಲ್ಲಿ ಹೂವಯ್ಯ ಬುದ್ದನ ಅನುಯಾಯಿ ಆದಂತೆ ಬುದ್ಧನ ಮೇಲೆ ಮಹಾಕಾವ್ಯ ಬರೆಯಬೇಕಾಗಿತ್ತು.

ಕನ್ನಡದ ಸಾವಿರಾರು ಶಾಸನಗಳಲ್ಲಿ ತುರುಗೋಳೊಳ್, ಪೆಣ್ಬುಯ್ಯಲೊಳ್ ಮುಂತಾದ ಕಳವಿನ ಸಂದರ್ಭದಲ್ಲಿ ನಿಜವಾದ ಅಪರಾಧಿಗಳು ಸಿಗದಾಗ ಕೆಲವು ಸಲ ನಿರಪರಾಧಿಗಳನ್ನು ಹಿಡಿದು ತರಲಾಗುತ್ತದೆ. ಅವರು ಕಳ್ಳರೋ ಹೌದೊ? ಅಪರಾಧಿಗಳು ಹೌದೊ? ಎಂಬುದನ್ನು ಪತ್ತೆ ಹಚ್ಚಲು ಅಗ್ನಿದಿವ್ಯದ ಪರೀಕ್ಷೆಗೆ ಒಡ್ಡಲಾಗುತ್ತದೆ. ಅಗ್ನಿ ಒಂದು ಜಡ ವಸ್ತು. ಸುಡುವುದು ಅದರ ಗುಣ. ಅವರು ಅಪರಾಧಿಗಳಿರಲಿ ನಿರಪರಾಧಿಗಳಿರಲಿ ಅದು ಸುಡುತ್ತದೆ. ಸುಡುವುದು ಅದರ ಗುಣಧರ್ಮ. ಇಂತಹ ಅಗ್ನಿದಿವ್ಯವನ್ನು ಬಳಸಿಕೊಂಡು ತಮಗಾಗದವರನ್ನು ಹಣಿಯುವುದಕ್ಕೆ ಬಳಸಿಕೊಳ್ಳುತ್ತಾರೆ ಎಂದು ಕಾನೂನು ಹೆಗ್ಗಡತಿಯಲ್ಲಿ ಕುವೆಂಪು ಅವರೇ ಹೂವಯ್ಯನ ಸಂದರ್ಭದಲ್ಲಿ ಚಿತ್ರಣ ಮಾಡಿದ್ದಾರೆ. ಈ ಬಗ್ಗೆ ಹೂವಯ್ಯನು ಬಹಳ ವಿಸ್ತಾರವಾಗಿ ಚಿಂತನೆ ಮಾಡಿದ್ದಾನೆ.

ದಕ್ಷನ ಯಜ್ಞಕುಂಡದಲ್ಲಿ ಶಿವನ ಅರ್ಧಾಂಗಿನಿಯಾದ ದಾಕ್ಷಾಯಿಣಿ ಧಗ್ದವಾಗಿ ಹೋಗಲಿಲ್ಲವೆ? ಅಲ್ಲಿ ಹೇಳುತ್ತಿರುವ ಸತ್ಯವೇನು? ಅಗ್ನಿಯು ಯಾರನ್ನಾದರೂ ಸುಟ್ಟೇ ಸುಡುತ್ತದೆ. ಆದಿಶಕ್ತಿ, ದಾಕ್ಞಾಯಿಣಿ ಶಕ್ತಿ ಸ್ವರೂಪಿಣಿ, ಭವತಾರಿಣಿ ಎಂದು ಕರೆಸಿಕೊಂಡು ಪಾರ್ವತಿಯನ್ನು ಅಗ್ನಿಯು ಸುಡುವುದು ಸಾಧ್ಯವೇ? ಅಗ್ನಿ ಸುಡುತ್ತದೆ. ಅದು ಭೌತಿಕ ಸತ್ಯ. ಈ ಸತ್ಯವನ್ನು ನಿರಾಕರಿಸಲು ಸಾಧ್ಯ ಇಲ್ಲ. ರಾಮ-ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಡ್ಡುವ ಪ್ರಸಂಗವೇ ಸೀತೆಗೆ ಮಾಡಿದ ಅನ್ಯಾಯ. ಇಂದಿನ ಪ್ರಜಾಪ್ರಭುತ್ವದಲ್ಲಿ ದುರಾಚಾರಕ್ಕೆ ಒಳಗಾದ ಮಹಿಳೆಯರನ್ನು ಅವರು ಗಂಡಂದಿರು ತಪ್ಪು ನನ್ನ ಮಡದಿಯದಲ್ಲ. ಆ ದುಷ್ಟನದು ಎಂದು ಉದಾರವಾಗಿ ಸ್ವೀಕರಿಸಿದ ಸಾವಿರಾರು ಪ್ರಸಂಗಗಳು ಪ್ರಪಂಚದಾದ್ಯಂತ ನಿತ್ಯ ವರದಿಯಾಗುತ್ತಲೆ ಇವೆ. ಕುವೆಂಪು ಅವರ ರಾಮನು ಇನ್ನೂ ಯಾವುದೇ ಕಾಲದ ವಿಚಾರಧಾರೆಯವನಾಗಿ ಉಳಿದರೆ ಹೇಗೆ? ಅಗ್ನಿ ಸುಡುವುದಿಲ್ಲ ಎಂಬುದೆಲ್ಲ ಕಲ್ಪನೆಯ ಕಥೆಗಳು ತಾನೆ. ಸೀಎ, ರಾಮ ಅಗ್ನಿಗೆ ಹಾರಿದರೂ ಸುಡಲಿಲ್ಲ ಎಂಬುದು ಕೇವಲ ಕಥೆ ಅಷ್ಟೆ. ದೇವಾಲಯ, ಪುರೋಹಿತ ವ್ಯವಸ್ಥೆ, ಮಠಗಳು ವಿಚಾರಗಳನ್ನೆಲ್ಲ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿ ಮುಕುಂದಯ್ಯನ ಮೂಲಕ ಜರಡಿ ಹಿಡಿಯುವ ಕುವೆಂಪು ಅವರ ಇಂತಹ ಅಗ್ನಿದಿವ್ಯಗಳಿಗೆ ಮೊರೆಹೋದುದೇಕೆ? ನೂರು ದೇವರುಗಳನ್ನೆಲ್ಲ ನೂಕಾಚೆ ದೂರ ಎಂದು ನಿರಂಕುಶ ಮತಿಗಳಿಗಾಗಿ ಕರೆಕೊಡುವ ಕುವೆಂಪು ಅವರು ಸೀತೆ, ರಾಮರ ಅಗ್ನಿದಿವ್ಯ ಸಂದರ್ಭದಲ್ಲಿ ಇನ್ನೂ ಪುರೋಹಿತಷಾಹಿ ವ್ಯವಸ್ಥೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನಿಸುತ್ತದೆ.

ಈ ಕಥಾವಸ್ತುವೇ ಪುರೋಹಿತ ವಿಚಾರಗಳನ್ನು ತುಂಬಿಕೊಂಡಿರುವುದರಿಂದ ಕುವೆಂಪುಅ ತಹ ನಿಶಿತ ಚಿಂತಕರನ್ನು ಕೂಡ ಕೆಲವು ಸಲ ಮಸಕುಗೊಳಿಸುತ್ತದೆ ಎನ್ನುವುದಕ್ಕೆ ಸೀತೆಯು ಅಗ್ನಿಗೆ ಹಾರುವ ಪ್ರಸಂಗವೂ ಒಂದಾಗಿ ದಾಖಲಾಗಿದೆ. ಅಗ್ನಿಗೆ ಹಾರುವ ಪ್ರಸಂಗವಾಗಲಿ, ಸೀತೆ ಪರಿಶುದ್ಧಳೆ ಅಲ್ಲವೆ ಎಂದು ಅನುಮಾನಿಸುವುದಾಗಲಿ ಇದೊಂದು ಮಾನವೀಯ ಮೌಲ್ಯವಾಗಿ ಉಳಿದಿಲ್ಲ. ವಿಶ್ವಮಾನವ ಪ್ರಜ್ಞೆ ಬೆಳೆಸುವ ಕುವೆಂಪು ಅವರನ್ನು ವೈದಿಕಷಾಹಿ ಇನ್ನೂ ಆವರಿಸಿದೆ ಎಂಬುದಕ್ಕೆ ಇಂತಹ ಚಿತ್ರಣಗಳೆಲ್ಲ ಉದಾಹರಣೆಯಾಗಿ ದಾಖಲಾಗಿವೆ.

ರಾಣಿಯಾಗುವ ಚಿತ್ರಾಂಗದೆ ವಿಶ್ವಮಾನವಳಾಗುವುದೆಂತು?

ಇಲ್ಲಿಯೇ ಚಿತ್ರಾಂಗದೆ ಪ್ರಸಂಗವನ್ನು ಕೂಡ ತುಸು ವಿಶ್ಲೇಷಣೆಗೆ ಒಳಪಡಿಸಬಹುದು. ಮಹಿಳೆ ಎಂದ ಕೂಡಲೆ ತೀರ ಲಘುವಾಗಿ ಮಾತನಾಡುವ ಧಾಟಿಯನ್ನು ಅರ್ಜುನನಲ್ಲಿ ಕಾಣುತ್ತೇವೆ. ಚಿತ್ರಾಂಗದೆಯ ಕಥೆ ಏನೇ ಇರಲಿ. ಇದು ಕುವೆಂಪು ಅವರ ಚಿತ್ರಣ. ಇಲ್ಲಿ ಕೂಡ ಮಹಿಳೆಯನ್ನು ಪುರುಷನಿಗೆ ಅಧೀನವಾಗಿಸಿಕೊಂಡಿರುವ ವೈದಿಕ ಪರಂಪರೆಯ ಚಿತ್ರಣವನ್ನೇ ಕಾಣುತ್ತೇವೆ.

ಅರ್ಜುನ ಚಿತ್ರಾಂಗದೆಯನ್ನು ತುರ್ತಾಗಿ ಲಗ್ನ ಮಾಡಿಕೊಂಡವನು ತುರ್ತಾಗಿಯೇ ನಿರ್ಗಮಿಸುತ್ತಾನೆ. ಇಲ್ಲಿ ಸಮುದ್ರಮೂರ್ತಿ ರೂಪಿತವಾಗಿರುವುದು ಚಿತ್ರಾಂಗದೆಯ ರಾಣಿಪಟ್ಟವನ್ನು ಶೂನ್ಯವಾಗಿಸಿ, ಅರ್ಜುನನ ಮಗನಿಗೆ ಆಕೆಯ ಕ್ಷತ್ರಿಯ ವಿದ್ಯೆಗಳನ್ನು ಕಲಿಸಿ, ಊರಾಚೆಯ ಪರ್ಣಕುಟೀರವನ್ನು ಸೇರಿಸುವುವಾಗಿದೆ. ಗಂಡು ಸಂತಾನವಿಲ್ಲದ ಚಿತ್ರವಾಹನನ ಏಕಮಾತ್ರ ಪುತ್ರಿಯಾದ ಚಿತ್ರಾಂಗದೆ ರಾಜಕುಮಾರಿ. ಇಲ್ಲಿಯೇ ರಾಜ್ಯಭಾರ ಮಾಡಿಕೊಂಡು ಇರಬಹುದಿತ್ತಲ್ಲ. ಮಹಾಭಾರತದ ಕಥೆ ಏನೇ ಇರಲಿ ಹೀಗೂ ಚಿತ್ರಣ ಕೊಡಬಹುದಿತ್ತಲ್ಲವೆ? ಚಿತ್ರಾಂಗದೆಯೇ ರಾಜ್ಯಸೂತ್ರ ಹಿಡಿದು ಅಧಿಕಾರ ನಡೆಸಬಹುದಿತ್ತಲ್ಲವೆ? ಭಾರತ ಮತ್ತು ಕನ್ನಡನಾಡಿನ ಇತಿಹಾಸದಲ್ಲಿ ಅನೇಕರಾಣಿಯರು ಆಗಿಹೋಗಿದ್ದಾರೆ.

ಸಮುದ್ರಮೂರ್ತಿಯನ್ನು ಸೃಜಿಸಿರುವುದು ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ಬಂಧಿಸಲೆಂದೇ! ಪತಿಯಿಂದ ದೂರವಾಗಿ, ಕ್ಷತ್ರಿಯತ್ನವನ್ನು ತ್ಯಜಿಸಿ, ಮಗನನ್ನು ಪೊರೆವ ಜವಾಬ್ದಾರಿಯನ್ನು ಮಾತ್ರ ಹೊತ್ತು, ಊರಾಷೆಯ ಪರ್ಣ ಕುಠೀರದಲ್ಲಿ ಬದುಕ ಸವೆಸಬೇಕಾದ ಚಿತ್ರಂಗದೆ ಹೇಗೆ ತಾವೆ ವಿಶ್ವಮಾನನ ಬದುಕನ್ನು ಪಡೆದಾಳು? ಅರ್ಜುನನ ಭೋಗಕ್ಕೆ ಮಡದಿ, ಗಂಡುಮಗನನ್ನು ಸಾಕುವ ಹೊಣೆ, ತಂದೆ, ಮಕ್ಕಳು ಕಾಳಗಕ್ಕೆ ಬಲಿ, ಚಿತ್ರಾಂಗದೆಯನ್ನು ಉಳಿಸಿದ್ದು ಎಲ್ಲಿ? ಈ ಕಾವ್ಯದ ನಾಯಕ ಅರ್ಜುನನ ಯಜ್ಞಕ್ಕೆ ಪೂರ್ಣಾಹುತಿಯಾಗಿದ್ದಾಳೆ.

* * *