‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಕಾಣ್ಕೆ- ‘ಪಾಪಿಗುದ್ಧಾರ-ಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್’ ಎಂಬ ದಾಶನಿಕ ಸತ್ಯಕ್ಕೆ ರಾವಣನ ಪಾತ್ರವೇ ಪ್ರಮುಖ ನಿದರ್ಶನವಾಗಿದೆ. ಕಾವ್ಯದಲ್ಲಿ ಕಾಣಿಸಿಕೊಳ್ಳುವ ದಶಾನನನೊಂದಿಗೆ ಇತರ ಪಾತ್ರಗಳೂ ವಿಕಾಸದೆಡೆಗೆ, ಆತ್ಮೋದ್ಧಾರದೆಡೆಗೆ ಸಾಗಿರುವುದನ್ನು ಜಗದ ಕವಿ ಕುವೆಂಪು ತಮ್ಮ ಯುಗದ ವಾಣಿಯಲ್ಲಿ ಸಾರಿದ್ದಾರೆ. ಸರ್ವರ ಉದ್ಧಾರ, ಸರ್ವಸ್ತರ ಉದ್ಧಾರ; ಒಟ್ಟು ಸರ್ವರಿಂದ ಸರ್ವರ ಉದ್ಧಾರ ಕೊನೆಯಲ್ಲಿ ಪಾಪಿ ರನಿಸಿಕೊಂಡ ರಾವಣ ಪರಿಪೂರ್ಣದೆಡೆಗೆ ನಡೆಯುವಂತಾಗುವ ಅದ್ಭುತವಾದ ಪರಿವರ್ತನೆ. ಇದಕ್ಕೆ ಪ್ರಾರಕ ಶಕ್ತಿಗಳಲ್ಲಿ ಸೀತೆ, ಮಂಡೋದರಿಯರಂತೆ ರಾವಣನ ಉಪಪತ್ನಿಯಾಗಿದ್ದ ಹದಿಬದೆ ಧಾನ್ಯಮಾಲಿನಿಯೂ ಒಬ್ಬಳಾಗಿದ್ದಾಳೆ.

ಯಾವುದೇ ಕವಿಯು ಅಂದಂದಿನ ಕಾಲ-ದೇಶ, ಆವಾಗಿನ ಸಂದರ್ಭದ ಸತ್ವದೊಂದಿಗೆ ಬದ್ಧರಾಗಿರುತ್ತಾರೆ. ಸಮಕಾಲೀನತೆಯನ್ನು ಮೈಗೂಡಿಸಿಕೊಳ್ಳುತ್ತಾರೆ ಅದಕ್ಕನುಗುಣವಾಗಿ ಕವಿಯ ಪ್ರಜ್ಞೆ ಮತ್ತು ಅಭಿವ್ಯಕ್ತಿಯನ್ನು ಗಮನಿಸಿದಾಗ ಕುವೆಂಪು ಕಾವ್ಯ ಒಟ್ಟಾರೆ ಇಂದಿನ ಆಗು-ಹೋಗುಗಳೆಲ್ಲವನ್ನು ಧ್ವನಿಪೂರ್ಣವಾಗಿಸುತ್ತದೆ.

ಈ ಶತಮಾನದಲ್ಲಿ ಶ್ರೀಸಾಮಾನ್ಯನೆ ಮಾನ್ಯನು. ಕಾವ್ಯದಲ್ಲಿ ಪ್ರತಿಯೊಂದು ಶ್ರೀಸಾಮಾನ್ಯ ಪಾತ್ರವೂ ತಲೆಯೆತ್ತಿ ಮೆರೆದಿದೆ. ಆತ್ಮ ವಿಶ್ವಾಸದಿಂದ ಮುನ್ನಡೆದಿದೆ. ಶ್ರೀಸಾಮಾನ್ಯತೆಯನ್ನು ಇಲ್ಲಿ ಚಿತ್ರಿಸಿದ ರೀತಿ, ಓದುಗರ ಗಮನ ಗೌರವವನ್ನು ಸೆಳೆದುಕೊಳ್ಳುವ ಬಗೆಯಲ್ಲಿದ್ದು, ಪ್ರಧಾನ ಪಾತ್ರಗಳಂತೆಯೇ ಪ್ರಭಾವ ಬೀರುತ್ತವೆ.

ಇಂದಿನದು ವಿಶಿಷ್ಟಯುಗ. ಸ್ತ್ರೀ ಜೀವನದ ಸಾರ್ಥಕತೆಯ ಕಾಲ. ಆಕೆ ಹಲವು ಕ್ಷೇತ್ರಗಳಲ್ಲಿ ಸರ್ವತೋಮುಖವಾಗಿ ಬೆಳೆಯುವ ತನ್ನ ಬುದ್ಧಿಮತ್ತೆ ಮತ್ತು ಸ್ವಾಭಿಮಾನ ಪ್ರಜ್ಞೆಯಿಂದ ಅನನ್ಯತೆಯನ್ನು ಮರೆಯುವ ತನ್ನತನವನ್ನು ಎಚ್ಚರಗೊಳಿಸಿದಂಥ ಸಂದರ್ಭ ‘ಶ್ರೀರಾಮಾಯಣ ದರ್ಶನಂ’ದಲ್ಲಿ ಸ್ತ್ರೀಯರ ನಿಷ್ಠೆ, ಆತ್ಮಶಕ್ತಿ, ಹೃದಯ ವೈಶಾಲ್ಯತೆಯನ್ನು ಆಯಾ ಪಾತ್ರಗಳಲ್ಲಿ ಕವಿ ರಮ್ಯೋಜ್ವಲವಾಗಿ ಕಟ್ಟಿದ್ದು ನಿಲ್ಲಿಸಿದ್ದಾರೆ.

ಸ್ತ್ರೀಯ ಸರ್ವೋದ್ಧಾರಕ ಶಕ್ತಿ ಕೂಡ ಈ ಕಾವ್ಯದ ಸಿದ್ಧಿಗಳಲ್ಲಿ ಮಹತ್ತರ ಹಾಗೂ ಒಂದೆಂಬುದು ಇಲ್ಲಿಯ ಹಲವು ಸ್ತ್ರೀ ಪುರುಷ ಪಾತ್ರಗಳಿಂದ ವ್ಯಕ್ತವಾಗುತ್ತದೆ. ಸೀತೆಯ ಮಹೋನ್ನತ, ವ್ಯಕ್ತಿತ್ವದಿಂದ ಪ್ರಭಾವಿತರಾದ ಇತರ ಪಾತ್ರಗಳು ಸಹಿತ ತಮ್ಮ ಉದ್ಧಾರದ ಪಥವನ್ನು ಕಂಡುಕೊಂಡಿದ್ದಾರೆ. ಮಂಡೋದರಿ, ಚಂದ್ರನಖಿ, ತ್ರಿಜಟೆ, ಅನಲೆ ಮೊದಲಾದವರು ಅಲ್ಲದೆ ಧಾನ್ಯಮಾಲಿನಿ, ರಾವಣನು ಕೂಡ ಆತ್ಮೋದ್ಧಾರದೆಡೆಗೆ ಸಾಗಿದ್ದಾರೆ. ಧಾನ್ಯಮಾಲಿನಿಯ ನಿರ್ಮಲಾಕಾಂಕ್ಷೆ, ಪ್ರೀತಿ, ನಿಷ್ಠೆಗಳು, ಮನಸ್ಸಿನ ಬೇಗುದಿ ಕೊನೆಯಲ್ಲಿ ಆಕೆ ಪಡುವ ಪಶ್ಚಾತ್ತಾಪ ಎಲ್ಲವನ್ನು ಗ್ರಹಿಸಿದಾಗ ಕವಿ ಕುವೆಂಪು ಪಾತ್ರ ಸೃಷ್ಟಿಯಲ್ಲಿ ಧಾನ್ಯಮಾಲಿನಿಗೆ ಕೊಟ್ಟ ಸ್ಥಾನ ಹಿರಿದು ಮತ್ತು ನಿಶ್ಚಿತ, ಮಹತ್ ಸಾಧನೆಯ ಹಿನ್ನೆಲೆಯದು ಎನಿಸುತ್ತದೆ.

ಕುವೆಂಪು ಕಾವ್ಯದಲ್ಲಿ ವೈಜ್ಞಾನಿಕತೆಯ, ವೈಚಾರಿಕತೆಯ ಹರವು ಹಾದಿ ಗಮನಾರ್ಹವಾಗಿದ್ದು, ಮನೋವೈಜ್ಞಾನಿಕ ಫಲಿತವೆನಿಸುವ ಹಲವಂಶಗಳು ಕಾವ್ಯದ ತುಂಬೆಲ್ಲ ಹಾಸುಹೊಕ್ಕಾಗಿರುವುದನ್ನು ಕಂಡಾಗ ಕುವೆಂಪುರವರ ವಿಷಯ ವಿಶ್ಲೇಷಣೆಯಲ್ಲಿ ಮನೋವೈಜ್ಞಾನಿಕ ರೀತಿ ಒಂದೆಂಬುದು ಗೊತ್ತಾಗುತ್ತದೆ. ಫ್ರಾಯ್ಡ್, ಯೂಂಗ್, ಆಡ್ಲರ್‌ ಮೊದಲಾದ ವಿದ್ವಾಂಸರು ಮನುಷ್ಯನ ಒಳ, ಹೊರ ಪ್ರವೃತ್ತಿಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳುವ ವಿಶೇಷ ಪ್ರಯತ್ನದಂತೆ ಕುವೆಂಪು ತಮ್ಮ ಪಾತ್ರ ರಚನೆ ಹಾಗೂ ಸಂದರ್ಭ ನಿರೂಪಣೆಯಲ್ಲಿ ಮನೋವಿಜ್ಞಾನದ ದೃಷ್ಟಿಕೋನಗಳನ್ನು ಅನುಸರಿಸಿದ್ದಾರೆ. ಪಾತ್ರ ಸೃಷ್ಟಿಯಲ್ಲಿ ಕವಿ ಮಾನವೀಯ ಅಂಶಗಳಿಗೆ ಮೊದಲು ಗಮನ ಕೊಡುತ್ತಾರೆ. ಪರಕಾಯ ಪ್ರವೇಶ ಮಾಡುವ ಸಮಥ್ಥ ಶಕ್ತಿ ಕವಿಗಿರುವುದರಿಂದ ಇಡೀ ಕಾವ್ಯದೇ ಒಂದು ಮನೋ ವಿಶ್ಲೇಷಣಾತ್ಮಕ ಮಹತ್ ಬೃಹತ್ ರಚನೆಯಿನಿಸಿದೆ.

ದುಷ್ಟಶಕ್ತಿಯ ಮೇಲಾಟ, ಸತ್‌ಶಕ್ತಿಯ ಹೋರಾಟ. ಕೊನೆಗೆ ದುಷ್ಟ ಶಕ್ತಿಯ ಸೋಲು, ಸತ್‌ಶಕ್ತಿಯ ಗೆಲುವು, ಲೋಕ ಕಲ್ಯಾಣಾರ್ಥವಾಗಿ ಕೆಡುಕಿನ, ಒಳಿತಿನ ಪಾತ್ರಗಳ ರಚನೆ, ಇದು ಕುವೆಂಪು ಸೃಷ್ಟಿ. ವಾಲ್ಮೀಕಿ ಕಥಾಹಂದರದ ಪುನರ್‌ಸೃಷ್ಟಿ ‘ಶ್ರೀರಾಮಾಯಣ ದರ್ಶನಂ’ ಕಾವು ಸಮಕಾಲೀನ, ಸರ್ವಕಾಲೀನ ಜೀವ ಮೌಲ್ಯಗಳನ್ನು ಮರೆಯುವುದಾಗಿದೆ. ವ್ಯಕ್ತಿಯಲ್ಲಿರುವ ದುಷ್ಟತನ ನಾಶವಾಗಿ ಆತನ ಮನಃಪರಿವರ್ತನೆಯಾಗಬೇಕು. ದಶಕಂಥನಲ್ಲಿರುವ ಕೆಡುಕುತನ ಅಳಿದು ಒಳಿತಿನ ದಿಕ್ಕಿಗೆ ಆತ ಮುಖ ಮಾಡಿ ಕಾಲ ಕಾಮದಲ್ಲಿ ಶಿಷ್ಟತನ ಪ್ರಕಟವಾಗುವುದಕ್ಕೆ ಪ್ರೇರಕವಾಗಿರುವವರಲ್ಲಿ ಸೀತೆ, ಮಂಡೋದರಿ, ಅನಲೆ ಧಾನ್ಯಮಾಲಿನಿ ಮೊದಲಾದವರು ಪ್ರಮುಖರೆನಿಸಿದ್ದಾರೆ.

‘ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯಲಿ’ ಎಂಬ ದರ್ಶನದ ಪರಮೊನ್ನತ-ಪ್ರತಿಮೆ ರಾವಣನಾಗಿದ್ದಾನೆ. ಮಹಾ ಪರಾಕ್ರಮಿಯಾಗಿ, ಮಹಾಕಾಮಿಯಾಗಿ, ಮಹಾದುಷ್ಟನಾಗಿ ವಾಲ್ಮೀಕಿ ರಾಮಾಯಣದಲ್ಲಿ ಚಿತ್ರಿತನಾದ ರಾವಣ, ಕುವೆಂಪು ದೃಷ್ಟಿಯಲ್ಲಿ ಸಂಪೂರ್ಣ ರಜೋಗುಣ ವಿಪನ್ನನಲ್ಲ. ವಾಲ್ಮೀಕಿ ರಾವಣನಂತೆ ಪಾಪೊಯೆನಿಸಿಕೊಂಡೇ ಈ ಲೋಕ ಬಿಟ್ಟು ಹೊರಟವನಲ್ಲ. ಪಾಪಕ್ಕೆ ಪ್ರಾಯಶ್ಚಿತ್ತಕ್ಕಿಂತ ಬೇರೆ ಶಿಕ್ಷೆಯಿಲ್ಲ ಎಂಬ ನಿತ್ಯ ಸತ್ಯಕ್ಕೆ ಒಪ್ಪಿದವನಾಗಿ ಅಪ್ಪಿಕೊಂಡವನಾಗಿ ಜೀವ ತ್ಯಜಿಸುತ್ತಾನೆ. ಕೊನೆಯಲ್ಲಿ ರಾವಣ ಇಲ್ಲಿ ಸಾತ್ವಿಕಗುಣ ಸಂಪನ್ನನೆನಿಸಿಕೊಂಡು ಓದುಗರ ಮನದಲ್ಲಿ ಆಶ್ರಯ ಪಡೆಯುತ್ತಾನೆ. ಪ್ರಾತಃ ಸ್ಮರಣೀಯರಾದ ಸೀತೆ, ಮಂಡೋದರಿಯಂತೆ, ಮೇಲ್ನೋಟಕ್ಕೆ ಅಪ್ರಧಾನ ಇಲ್ಲವೆ ಶ್ರೀಸಾಮಾನ್ಯ ಪಾತ್ರವೆನಿಸಬಹುದಾದ ಧಾನ್ಯಮಾಲಿನಿಯೂ ರಾವಣನಲ್ಲಿ ಅಚ್ಚರಿಯ ಮನಃಪರಿವರ್ತನೆಗೆ ಕಾರಣಳಾಗುತ್ತಾಳೆ.

‘ರಾಮಮಯಮೀ ಸಮಸ್ತಲೋಕಂ’ ಎಂದು ಅಶೋಕವನದಲ್ಲಿ ತನ್ನ ಆತ್ಮಸಿದ್ಧಿಗೆ ತೊಡಗಿದ ಸೀತೆ ‘ರಾವಣಂಗೊಳ್ಳಿತಕ್ಕುಂ’ ಎಂದು ದುಷ್ಟ ರಾವಣನಿಗೂ ಒಳ್ಳೆಯದನ್ನು ಬಯಸಿದ್ದಾಳೆ. ‘ನನಗೆ, ರಘುನಾಥಂಗೆ, ಮೇಣ್ ರಾಕ್ಷಸೇಂದ್ರರಂಗೆ ಮೂವರ್ಗಮವರವರ ಕರ್ಮಾನುಸಾರಿ ಜನ್ಮೋದ್ಧೇಶ ಸಾಧನೆಗೆ, ಮೇಣತ್ಮವಿಕಸನದ ಪರಿಣಾಮಸಿದ್ಧಿಗೆ ಸಹಾಯ ಮಾದುದು ಮಂಥರೆ ಮೂಲದೀ ಬೃಹದ್ ದುರ್ಘಟನೆ ಎಂದು ವ್ಯಕ್ತಿಗಳೆಲ್ಲರೂ ‘ವಿಧಿಯ ಅಧೀನ’ ಎಂಬ ನಂಬಿಕೆಗೆ ಮನವೊಪ್ಪಿದ ಘನತೆವೆತ್ತ ಸೀತೆಯನ್ನು ಕಂಡಾಗ ‘ಪದ್ಮಪತ್ರದ ಜಲಬಿಂದುವಿನಂತೆ ಚಕಿತಮಾದುದು ಚಿತ್ತಂ’ ಎಂಬುದಾಗಿ ರಾವಣನ ಚಿತ್ತ ವಿಚಲಿತವಾಗುತ್ತದೆ. ಕುವೆಂಪು ರಾವಣ ಹುಟ್ಟುವಾಗಲೇ ‘ಪೆಣ್ಣೊಡಲಿನಾಸೆ’ಯನ್ನು ಹೊತ್ತುಕೊಂಡೇ ಬಂದವನು. ಮೊಟ್ಟಮೊದಲ ಬಾರಿಗೆ ರಾಮಸನಿಹದಿಂದ ದೂರಿರುವ ಸೀತೆಯಂತಹ ಹೆಣ್ಣು ತನ್ನಾವ ರಚನಾವ್ಯೂಹಕ್ಕೆ ಒಲಿಯದಾದಾಗ ಅವನು ಅಚ್ಚರಿಗೊಳಗಾಗುತ್ತಾನೆ. ಅಂದಿನಿಂದಲೇ ಅವನಿಗೆ ತಾನು ತಾನೇಯಾಗಿ ಸಂದೇಹಾಸ್ಪದನಾಗುತ್ತಾನೆ. ಅವನ ಅಂತರಂಗದ ಆಳದಲ್ಲಿ ಅವ್ಯಕ್ತ ಶೋಧನೆಯೊಂದು ಪ್ರಾರಂಭವಾಗುತ್ತದೆ ಎಂದೂ ಸೋಲರಿಯದ ದಶಾನನ ಅವಮಾನದ, ಆತಂಕದ, ತಳಮಳದ ಬೇಗುದಿಯಲ್ಲಿ ಬೇಯುತ್ತಿದ್ದಾನೆ. ಆದರೆ ಈವರೆಗೆ ಲಂಕಾಧಿಪತಿಯ ಶೌಯ್ಯವನ್ನು, ಧೈರ್ಯವನ್ನು, ಐಶ್ವಯ್ಯವನ್ನು, ಔದಾರ್ಯವನ್ನು, ಸೌಂದರ್ಯವನ್ನು ಮೆಚ್ಚಿ ವಶವಾದ ಹೆಂಗಳೆಯರ ಸಂಖ್ಯೆ ಅಪಾರವೆಂದೂ, ಅಂಥವರಲ್ಲಿ ರೂಪಸಿ ಧಾನ್ಯಮಾಲಿಯು ಸಹ ಒಬ್ಬಳೆಂದು ತಿಳಿಯಲಾಗಿತ್ತು.

ವಾಲ್ಮೀಕಿ ರಾಮಾಯಣದಲ್ಲಿ ಧಾನ್ಯಮಾಲಿಯ ಪಾತ್ರ ಒಮ್ಮೆ ಮಾತ್ರ ಕಾಣಿಸಿಕೊಂಡು ಮರೆಯಾಗುತ್ತದೆ. ಸೀತಾಮಾತೆಯನ್ನು ಹುಡುಕಿಕೊಂಡು ಭಕ್ತ ಆಂಜನೇಯ ಅಶೋಕವನಕ್ಕೆ ಬರುತ್ತಾನೆ. ಅಲ್ಲಿ ಮರದ ಮೇಲೆ ಅಡಗಿ ಕುಳಿತಿರುತ್ತಾನೆ.  ಸೀತೆಯ ಬಳಿಗೆ ಬಮದ ರಾವಣ ತನ್ನನ್ನು ಒಲಿಯುವಂತೆ ನಾನಾ ವಿಧವಾಗಿ ಕೇಳಿಕೊಳ್ಳುತ್ತಾನೆ. ಆದರೆ, ಅದಕ್ಕೆ ಜಗ್ಗದ ಸೀತೆ, ರಾವಣನನ್ನು ತುಚ್ಛವಾಗಿ ನಿಂದಿಸುತ್ತಾಳೆ. ಇದರಿಂದ ಕುಪಿತಗೊಂಡ ರಾವಣ ದಂಡೋಪಾಯದಿಂದ ಸೀತೆಯನ್ನು ಒಲಿಸುವುದಕ್ಕಾಗಿ ಅಲ್ಲಿ ಕಾವಲಿದ್ದ ರಾಕ್ಷಸ ಸ್ತ್ರೀಯರಿಗೆ ಆಜ್ಞಾಪಿಸುತ್ತಾನೆ. ಆಗ ಧಾನ್ಯಮಾಲಿನಿ ಮುಂದೆ ಬಂದು ರಾವಣನನ್ನು ಅಪ್ಪಿಕೊಂಡು ‘ಈ ಸೀತೆಯಿಂದ ಆಗಬೇಕಾದದ್ದಾದರೂ ಏನು? ನನ್ನೊಡನೆ ನೀನು ಆನಂದದಿಂದಿರು. ಕಂದಿಹೋಗಿರುವ ಈ ಸೀತೆಯಲ್ಲಿ ನಿನಗೆ ಪ್ರೇಮವೇಕೆ? ವಾಲ್ಮೀಕಿ ರಾಮಾಯಣ, ಸುಂದರಾಕಾಂಡ, ಸರ್ಗ ೨೨, ಸಾಳು ೩೯-೪೩ ಎಂದು ಅವನನ್ನು ತಡೆದು ನಿಲ್ಲಿಸುತ್ತಾಳೆ.

ಇಂಥ ಒಂದು ಚಿಕ್ಕ ಸನ್ನಿವೇಶ ಹಾಗೂ ಪಾತ್ರವು ಕವಿ ಕುವೆಂಪು ರಾಮಾಯಣದಲ್ಲಿ ಅತ್ಯಂತ ಕರುಣಪೂರ್ಣವೂ, ಸೀತಾ ಪ್ರಭಾವದ ಪ್ರತೀಕವೂ ಆಗಿ ತೀವ್ರವಾಗಿ ಗಮನ ಸೆಳೆಯುತ್ತದೆ. ಉದ್ಧಾರಾಕಾಂಕ್ಷಿ ರಾವಣನ ಹೃದಯ ಪರಿವರ್ತನೆಗೊಳ್ಳುವುದಕ್ಕೆ ಇಂಥ ಪ್ರಸಂಗವು ಉಜ್ವಲ ಸಂಕೇತವಾಗಿ, ಜೀವಂತಿಕೆಯನ್ನು ಪಡೆದುಕೊಂಡಿದೆ.

ಧಾನ್ಯಮಾಲಿನಿ ರಾವಣನನ್ನು ಒಲಿದು, ಮೋಹಿಸಿ ಮದುವೆಯಾಗಿ ಬಂದವಳಲ್ಲ. ಆಕೆ ಗಂಧರ್ವನೊಬ್ಬನ ಪ್ರೇಮದ ಪತ್ನಿ, ಅಪೂರ್ವ ಸುಂದರಿ, ಆಕೆಯ ಯೌವ್ವನಕ್ಕೆ, ರೂಪಕ್ಕೆ, ಲಾವಣ್ಯಕ್ಕೆ ಮೋಹಗೊಂಡ ರಾವಣ ಹಲವರನ್ನು ತಂದಂತೆ ಬಲಾತ್ಕಾರದಿಂದ ಅವಳನ್ನು ತಂದಿದ್ದಾನೆ. ಕಾಲಕ್ರಮೇಣ ಮನವೊಪ್ಪದಿದ್ದರೂ ಆಕೆ ರಾವಣನ ವಶವಾಗುತ್ತಾಳೆ. ‘ಧಾನ್ಯಮಾಲಿನಿಯೆನಗೆ ನೋಂತಂಗೆ ಕಾಲಾಂತರಕ್ನೋತು ಕೃಪೆದೋರ್ದಳೆಂಬುದಂ’ ಎಂಬ ರಾವನನ ಮಾತೇ ಇದಕ್ಕೆ ನಿದರ್ಶನ. ಆಕೆ ಸದಾ ವಿಷಾದದ ಅಂತರ್‌ಜಾತಿಯಿಂದ ಬೇಯುತ್ತಿದ್ದಳು. ಬೇರೆ ದಾರಿಕಾಣದೆ ವಿಧಿ ತನಗೊದಗಿಸಿದ ಪರಿಗಾಗಿ ಪರಿತಪಿಸುತ್ತಿದ್ದಾಳೆ.

‘ಶ್ರೀರಾಮಾಯಣ ದರ್ಶನಂ’ ಕಾವ್ಯದಲ್ಲಿ ಕವಿಯ ಔದಾರ್ಯದಿಂದ ಧಾನ್ಯಮಾಲಿನಿಯು ಪತಿವ್ರತಾಪಟ್ಟ ದೊರಕಿಸಿಕೊಂಡಿದ್ದಾಳೆ. ಪಾತಿವ್ರತ್ಯಕ್ಕೆ ಹೆಚ್ಚಿನ ಬೆಲೆಕೊಟ್ಟು ಅದನ್ನು ತಮ್ಮ ಕಾವ್ಯದ ಪರಮ ಮೌಲ್ಯವಾಗಿಸಿಕೊಂಡ ಕುವೆಂಪುರವರು ವಾಲ್ಮೀಕಿ ರಾಮಾಯಣದಲ್ಲಿ ಹೇಳಿಲ್ಲವಾದರೂ ವಾಲಿಯೊಡನೆ ತಾರೆಯನ್ನೂ, ರಾವಣನೊಡನೆ ಮಂಡೋದರಿಯನ್ನೂ ಸಹಗಮನ ಮಾಡಿಸಿ ಧಾನ್ಯಮಾಲಿನಿಯನ್ನೂ ಅಸಹಾಯಕತೆ ಮತ್ತು ಪಶ್ಚಾತ್ತಾಪದಲ್ಲಿ ಬೇಯುವಂತೆ ಮಾಡಿ ಕೊನೆಗೆ ಹದಿಬದೆಯ ಸ್ಥಾನಕ್ಕೆ ಎತ್ತರಿಸಿ ಅಂತ್ಯಗೊಳಿಸಿದ್ದಾರೆ.

ಕುವೆಂಪು ರಾಮಾಯಣದ ಸವಿಸ್ತಾರ ಕ್ಷೇತ್ರದಲ್ಲಿ ಧಾನ್ಯಮಾಲಿನಿಯು ಪಡೆದುಕೊಂಡಿರುವ ಸ್ಥಾನ ಕಿರಿದಾದರೂ ಬಾಹ್ಯ ಚಕ್ಷುವಿಗೆ ಅವ್ಯಕ್ತವಾದ ಅವಳ ವ್ಯಕ್ತಿತ್ವ ಅಂತಃಚಕ್ಷುವಿಗೆ ಸದಾ ವ್ಯಕ್ತವಾಗಿದೆ. ಅಪೂರ್ಣತೆಯಿಂದ ಪೂರ್ಣತೆಗೆ, ಸಮಸ್ಸಿನಿಂದ ಜ್ಯೋತಿಯೆಡೆಗಡ ಕೈಕೊಂಡ ಈ ಯಾತ್ರಯಲ್ಲಿ ‘ಪಶ್ಚಾತ್ತಾಪದಿಂದ ಪೂಸಿಯುದ್ಧಾರ’ ಎಂಬ ಭಾರತೀಯ ನಿತ್ಯಸತ್ಯ ಸಿದ್ಧಾಂತಕ್ಕನುಗುಣವಾಗಿ ರಾಮಾಯಣದ ಪ್ರತಿನಾಯಕನಾದ ರಾವಣ ತನ್ನಲ್ಲಿರುವ ರಜಸ್ತಮೋಗುಣಗಳನ್ನು ಕಳೆದುಕೊಂಡು ರಾಮತ್ವಕ್ಕೇರುವಲ್ಲಿ ಸಹಾಯಕರಾಗುವ ಸತೀಶಕ್ತಿಗಳಾದ ಸೀತೆ-ಮಂಡೋದರಿಯರಂತೆ-ಧಾನ್ಯಮಾಲಿನಿಯೂ ಒಬ್ಬಳೆಂಬುದನ್ನು ಇಲ್ಲಿ ಮರೆಯಲಾಗದು. ದುಷ್ಟ ಮತ್ತು ಶಿಷ್ಟ ಶಕ್ತಿಗಳ ಸಂಘರ್ಷಣೆಯಲ್ಲಿ ಅನೇಕ ವೇಳೆ ಸತ್‌ಶಕ್ತಿ ಆಸುರೀ ಶಕ್ತಿಯ ವಜ್ರಮುಷ್ಠಿಗೆ ಸಿಕ್ಕು ನರಳಬೇಕಾಗುತ್ತದೆ.

ಅಂತಹ ಕಷ್ಟ, ಸಂಕಷ್ಟಗಳಿಗೆ ಬಲಿಯಾದವರಲ್ಲಿ ಕುವೆಂಪುರವರ ಪ್ರಮುಖ ಸ್ತ್ರೀಪಾತ್ರಗಳನ್ನು ಮತ್ತು ಧಾನ್ಯಮಾಲಿನಿಯನ್ನು ಜೊತೆಗಿಟ್ಟು ನೋಡುವುದಾದರೆ, ಸೀತೆಯ ವಿರಹತಾಪದೊಂದಿಗೆ, ಮಂಡೋದರಿಯ ಹೃದಯ ಸಂಕಟದೊಂದಿಗೆ, ಊರ್ಮಿಳೆಯ ದೀರ್ಘತಪಸ್ವಿನೊಂದಿಗೆ, ಧಾನ್ಯಮಾಲಿನಿಯ ಮೌನಯಾತನೆ ಉತ್ತರವಾಗಬಲ್ಲದು. ಧೈವೀಶಕ್ತಿಯು ಆಸುರೀ ಶಕ್ತಿಯೊಂದಿಗೆ ಸಂಧಿಸಿ ಮನಃಪರಿವರ್ತನೆ ಮಾಡುತ್ತದೆಯೆಂಬ ಸತ್ಯವು ಗುಪ್ತಸಂತಪ್ತೆಯಾಗಿದ್ದ ಧಾನ್ಯಮಾಲಿನಿಯಲ್ಲಿ ವ್ಯಕ್ತವಾಗುತ್ತದೆ.

ಕಾವ್ಯಕ್ಕೆ ವಸ್ತು ಒಂದೇಯಾದರೂ ದುಷ್ಟನಿಗ್ರಹ-ಶಿಷ್ಟ ಪರಿಗ್ರಹ ಇದು ವಾಲ್ಮೀಕಿಯ ನೋಟವಾದರೆ, ಶಿಷ್ಟಪರಿಗ್ರಹ, ದುಷ್ಟ ಪರಿವರ್ತನ ಕುವೆಂಪು ದೃಷ್ಟಿ. ಕುವೆಂಪು ತಮ್ಮ ವಿಶಿಷ್ಟವಾದ ಪಾತ್ರ ನಿರ್ಮಾಣ, ಸನ್ನಿವೇಶಗಳ ರಚನೆಯಿಂದ, ವ್ಯಕ್ತಿಗಳ ಮನಸ್ಸು, ಸಂಸ್ಕಾರಗಳ ಸ್ವರೂಪ ರೀತಿಯಿಂದಾಗಿ ಮೂಲಕ್ಕಿಂತ ಅನೇಕ ಕಡೆಗಳಲ್ಲಿಯ ವ್ಯತ್ಯಾಸಗಳೊಂದಿಗೆ ವಾಲ್ಮೀಕಿಗಿಂತ ಭಿನ್ನವಾದ ನಿಲುವಿನಲ್ಲಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಗೌಡ ಪಾತ್ರಗಳೆನಿಸಿದ ಊರ್ಮಿಳೆ, ಅನಲೆ, ಮಂಥರೆ, ಮಂಡೋದರಿಯರಂತೆ ಧಾನ್ಯಮಾಲಿನಿಯು ಶ್ರೀ ಕುವೆಂಪುರವರ ಅಭಿರುಚಿ ಸಂಸ್ಕಾರಗಳನುಗುಣವಾಗಿ ಅವರಿಂದ ಉದಾತ್ತತೆಯ ದೀಕ್ಷೆ ಪಡೆದು ಶ್ರೀ ಸಾಮಾನ್ಯ ಪಾತ್ರಗಳಾಗಿ ತನ್ನ ಸಮಾಜದ ಆಸೆ, ಆಕಾಂಕ್ಷೆಗಳನ್ನು ಗರ್ಭೀಕರಿಸಿಕೊಂಡು ಸೂಕ್ಷ್ಮ ರೀತಿಯಲ್ಲಿ ಅಪೂರ್ವವಾದ ಬೆಳವಣಿಗೆ ಪಡೆದಿವೆ.

ಕಾವ್ಯದಲ್ಲಿ ಎಲ್ಲ ಪಾತ್ರಗಳಿಗೆ ಸಮಾನವಾದ ಪ್ರಾಶಸ್ತ್ಯ ದೊರೆಯುತ್ತದೆ ಎಂದು ತಿಳಿಯಲಾಗದು. ಕವಿ ತನ್ನ ಆವಶ್ಯಕತೆಗೆ ತಕ್ಕಂತೆ ನಾಯಕ, ನಾಯಕಿಯರೊಂದಿಗೆ ಇನ್ನಿತರ ಪಾತ್ರಗಳನ್ನು ತಕ್ಕಂತೆ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಅಂಥ ಸಂದಭರಭಗಳು ಸಹೃದಯರ ಅಭಿರುಚಿಗೆ ಅನುಗುಣವಾಗಿ ಅವರ ಅಪೇಕ್ಷೆಗೂ, ಉಪೇಕ್ಷೆಗೂ ಒಳಗಾಗುತ್ತವೆ. ಇತಿಹಾಸದ ತೇಲುನೋಟಕ್ಕೆ ಜಾಜ್ವಲ್ಯಮಾನರಾದ ವ್ಯಕ್ತಿಗಳು ಗೋಚರಿಸುತ್ತಾರೆಯೇ ಹೊರತು ಎಲೆಯಮರೆಯ ಕಾಯಿಯಂತಿದ್ದು, ಮೌನತಪಸ್ಸಿನಲ್ಲಿ ತೊಡಗಿರುವವರು ಕಾಣದೇ ಹೋಗಬಹುದು. ಕೆಲವರು ನಿರ್ಝರಣೆಯರಾಗಿ ಲೋಕವನ್ನೇ ಬೆಳಗಿದರೆ, ಇತರರು ಗುಪ್ತಗಾಮಿನಿಯರಾಗಿ ಕೆಲವನ್ನು ಮಾತ್ರ ಉದ್ಧರಿಸಬಲ್ಲರು. ಕೆಲವರು ಸಾಮಾನ್ಯರು, ಉಳಿದವರು ಅಸಾಮಾನ್ಯರು. ಕುವೆಂಪು ಅವರ ದೃಷ್ಟಿಯಲ್ಲಿ ಸಾಮಾನ್ಯರೆಂದರೆ ಶ್ರೀಸಾಮಾನ್ಯರು. ಭಗವಂತನಿಗೆ ಅಸಾಮಾನ್ಯತೆಗಿಂತಲೂ ಸಾಮಾನ್ಯತೆಯಲ್ಲಿಯೇ ಹೆಚ್ಚು ವಲವರ.

“ಶ್ರೀಸಾಮಾನ್ಯವೆ ಭಗವನ್‌ಮಾನ್ಯಂ, ಶ್ರೀಸಾಮಾನ್ಯನೆ ಭಗವದ್‌ಧನ್ಯಂ ಸಾಮಾನ್ಯತೆ-ಭಗವಂತನ ರೀತಿ, ಸಾಮಾನ್ಯವೆ ದಿಟಭಗವತ್‌ ಪ್ರೀತಿ”

ಇಂಥ ಶ್ರೀಸಾಮಾನ್ಯರನೇಕರು ಯಾವುದೇ ಸಾಮಾಜಿಕ ಪರಿಸರದಲ್ಲಿ ಅಗಣ್ಯತೆ, ಅಲಕ್ಷ್ಯತೆಗೆ ಒಳಗಾಗಿ ಅಸಾಹಯಕರೂ ಪರಾವಲಂಬಿಗಳೂ ಆಗಿದ್ದರೂ ಸಹಿತ ಅವರ ನಿಷ್ಠೆ, ವಿಧೇಯತೆ ಮುಂತಾದ ಸದ್ಗುಣಗಳಿಂದ ಎಲ್ಲರ ಮೆಚ್ಚಿಕೆಗೆ ಪಾತ್ರರಾಗುತ್ತಾರೆ. ಕುವೆಂಪು ಅನುಭವಕ್ಕೆ ದಕ್ಕಿದ ಸಂಗತಿಯಿದು.

ಸೀತಾಪಹರಣದ ನಂತರ ರಾಮ, ರಾವಣರ ಯುದ್ಧ ಆರಂಭವಾಗಿದೆ. ಸಮರದಲ್ಲಿ ರಾವಣ ಪಕ್ಷದ ಪ್ರಮುಖರನೇಕರು ಮಡಿದಿದ್ದಾರೆ. ಇಂದ್ರಜಿತು ಶಕ್ತಿ ಸಂಪಾದನೆಗೋಸ್ಕರ ಯಜ್ಞಶಾಲೆ ಹೊಕ್ಕಿದ್ದಾನೆ. ಅಂದಿನ ರಾತ್ರಿ ವೈರಿಗಳನ್ನು ತಡೆಯುವ ಕೆಲಸ ಅತಿಕಾಯನದು.

ಧಾನ್ಯಮಾಲಿನಿಯುದರದಲ್ಲಿ ತನಗೆ ಸಂಭವಿಸಿದ ತನ್ನ ಉದ್ಭುತಕುಮಾರನನ್ನು ಕರೆದು ರಾಕ್ಷಸೇಂದ್ರ ಹೇಳುತ್ತಾನೆ.

“ವಿಷಮ ಸಮಯಮಂ ನೆನೆದೀ
ನಿಶಾಯುದ್ಧಮಂ ಪೂಡಿದರ್ ಶತ್ರುಗಳ್ ವತ್ಸ
ಕುಂಭಕರ್ಣಂ ಮಡಿದನಿಂದ್ರಜಿತು ತಾಂ ಪೂಣ್ದು
ಪೊಕ್ಕೂನ್ ನಿಕುಂಭಿತಾ ಯಾಗಮಂಟಪಕೆ
……………………………………………………..
……………………………………………………..
ರಾಮನಂ ರಣಕೆ ಹೋಮಂಗಳ್ವೆವದು ದಿಟಂ ನಾಳಿನ
ಮಹೊಗ್ರ ಸಂಗ್ರಾಮ ಯಜ್ಞದಲಿ! ನೀನನ್ನೆಗಂ
ರಕ್ಷೆಯಾಗಿರು ನಮ್ಮ ಭಾಗ್ಯಕ್ಕೆ, ದಯರ್ಗಕ್ಕೆ,
ಮೇಣ್ ದೈತ್ಯ ಸ್ವರ್ಗಕ್ಕೆ ! ನಡೆ, ಕಂದ, ತಡೆ ಹಗೆಯ
ಮುನ್ನಡೆಯನಾ ಕಾಣ್ಯ ಕೇಸುರಿವೋಟಮಂ”
(ಸಂಚಿಕೆ ೪-ಪು ೩೦೦)

ತಂದೆಯಾಣತಿಯನ್ನು ಶಿರಸಾವಹಿಸಿ ಯುದ್ಧಕ್ಕೆ ಹೊರಡಲಿದ್ದ ತನ್ನ ಮುದ್ದು ಕುಮಾರನನ್ನು ಕರೆದು ಮತ್ತೆ ಮಮತೆಯಿಂದ ‘ಎದೆಯೊಳಗೇನೋ ತನಗಾದ ಭಯಚಲನಮಂ ಕಂಡು ರಾವಣ,

“ವೀರನಹುದಾದೊಡಂ, ನಿನಗೆ
ಸಾವೆಂಬುದೊಂದು ನಗೆ ವಿಷಯಮಾದೊಡಮೊಂದು
ಬಗೆಯ ಬಿನ್ನಪವೊರೆಯೆ ತವಕಿಸುತ್ತಿರ್ಪುದೆರ್ದೆ
ರಾಜಾಜ್ಞೆಯಲ್ತು, ಪೆತ್ತವರೊಂದು ಬಿನ್ನಪಂ
ನಿನ್ನ ತಾಯ್‌ಧಾನ್ಯಮಾಲಿನಿಯುಸಿರ್‌ನಿನ್ನಿಂದೆ,
ನಿನಗಾಗಿ, ತಡೆದಿರ್ಪುದಿಲ್ಲಿ ಮರೆಯದಿರದನ್
ಸಮರ ಸಂಭ್ರಮದಿ.”

ಹೀಗೆಂದು ಎಚ್ಚರಿಸುತ್ತಾನೆ. ತಂದೆಯ ಮಾತುಗಳನ್ನು ಆಲಿಸುತ್ತಿದ್ದಂತೆಯೆ,

“ಅತಿಕಾಯನಾಯತ ತನು
ಕುನುಂಗಿದತ್ತಾ ನುಡಿಗಳಿಂಗಿತಕೆ”

ತಾನು ಚಿಕ್ಕವನಿದ್ದಾಗಿಂದಲೂ ಅಮ್ಮನ ಮೂಕಯಾತನೆಯನ್ನು ಗುರುತಿಸಿದ್ದ ಅತಿಕಾಯನಿಗೆ ಕಳೆದ ದಿನಗಳು ನೆನಪಾಗುತ್ತದೆ. ತನ್ನ ತಾಯಿ ತನಗೆ ತಾಯಾಗುವ ಮುನ್ನ ಇನ್ನೊಬ್ಬನ ಅರಸಿಯಾಗಿದ್ದಳೆಂಬುದನ್ನು ದಾದಿಯದ ‘ಪರ್ಚುನುಡಿ’, ಅವರ ‘ಕಣ್‌ಮಿಸುಗಿ’ನಿಂದ ಗ್ರಹಿಸಿರುತ್ತಾನೆ. ಆಗಲೆ ಆ ಎಳೆಯ ಹೃದಯದಲ್ಲಿ ಅವಳ ದುಃಖಕ್ಕೆ ತನ್ನ ತಂದೆಯೇ ಕಾರಣನಿರಬಹುದೆಂಬ ಅಸ್ಪಷ್ಟ ಭಾವನೆ ಮೂಡಿರಬೇಕು. ಆ ಪುಟ್ಟ ಮನಸ್ಸು ನಿಗೂಢ ಸಂಕಟಕ್ಕೆ ಒಳಗಾಗಿರಬೇಕು. ಅವನಿಗೆ ತಾಯಿಯ ಬಗೆಗೆ ಅತೀವ ಪ್ರೀತಿ, ದುಃಖವನ್ನು ಮರೆಮಾಚಿ ಮೇಲ್ನೋಟಕ್ಕೆ ನಗುತ್ತಿದ್ದು ಗೊತ್ತಿದೆ. ಅತಿಕಾಯನಿಗೆ ಈಗ ತಡೆಯಲಾಗಲಿಲ್ಲ. ತಾನೇ ತಾಯಿಯನ್ನು ಕೇಳುತ್ತಾನೆ.

“ತನ್ನ ತಾಯೇಗಳುಂ…….
ಅದಾವುದೋ ವಿಷಾದದಂತರ್‌ ಜ್ವಾಲೆಯಿಂಬೆಂದು
ಕೃಶಳಾದೊಡಂ, ತನಗದಂ ತೋರಗೊಡದಂತೆ
ಮೇಲ್‌ನಗುತ್ತಿರ್ದುದನರಿತು, ಕೇಳ್ದನೊರ್‌ದಿನಂ
ತನ್ನಬ್ಬೆಯನೆ, ದಾದಿಯರ ಮಾತಿನಾ ಮರ್ಮಮಂ
ತನಗರುಹಬೇಕೆಂದು”
ಆದರೆ ಆ ತಾಯಿ ಏನು ಉತ್ತರ ಹೇಳಬಲ್ಲಳು!
“ಧಾನ್ಯಮಾಲಿನಿ ಹೃದಯ ಸಂಕಟದ ಮರ್ಮಮಂ
ತಿಳಿವರಾರ್, ಹದಿಬರೆಯರಂ ತಸ್ಥಮಂ?”

ಅವಳ ಕಳೆದ ಬಾಳಿನ ಕಥೆ ಗೋಳಿನ ಕಥೆ. ಮಗನ ಮುದ್ದಿನ ಮೊಗಕೆ ಮೊಗವಿಟ್ಟು ‘ಮಿಸಿಸಿರ್ದಳದನಶೃತೀರ್ಥದಲಿ”…. “ನೂರುಪನ್ಯಾಸಂಗಳಿಂ ಮಿಗಿಲ್ ಧ್ವನಿಪೂಣ್ವೆಂಬಂತೆವೋಲ್”

ಅಂಬೆಯ ಅಳಲು ಅತಿಕಾಯನ ಮುಗ್ಧ ಹೃದಯಕೆ ‘ವಾಗ್ಮಿ ತಾನಾಯ್ತು’ ಅಂದು ಮೊದಲಾಗಿ ಅವನು ತನ್ನ ಇರ್ಮಡಿಸಿದಳ್ಕರೆಯಿಂದ ತಾಯಿಯನ್ನು ಸಂತೈಸಲೆಳಸಿದನು. ಆದರೆ ಆಕೆಗೆ ತನ್ನ ಹಿಂದಿನ ಆ ಸುಂದರ ದಿನಗಳನ್ನು ಮರೆಯಲಾದೀತೆ?

“ಪತಿವ್ರತೆಗೆದೇಂ ಸುಲಭಮೇ
ಮರೆಯತಾ ಪ್ರಥಮಮಂ ಪ್ರೇಮಮಂ, ದಶಕಂಠ
ದುರ್ಮೋಹ ವಜ್ರಘಾತಕೆ ಕೆಡೆದ ಸಂಸಾರ
ಗೋಪುರ ಪವಿತ್ರಮಂ?”

ರಾಕ್ಷಸ ರಾವಣ! ವಾಲ್ಮೀಕಿ ರಾವಣನ ಹೆಸರನ್ನು ಕೇಳಿದರೇನೇ ರಕ್ತ ಹೆಪ್ಪುಗಟ್ಟುತ್ತಿತ್ತು. ತ್ರೇತಾಯುಗದಲ್ಲಿ  ಕುವೆಂಪುರವರ ರಾವಣನೂ ತ್ರಿಜಗದ್ ಭಯಂಕರ, ಅಪ್ರತಿಮ ಪರಾಕ್ರಮಿಯಾದ ಅವನ ಸಲ್ಲದ ಮತ್ತು ಒಳ್ಳೆಯ ಗುಣಗಳೆಲ್ಲ ಪ್ರಕಟವಾದುದು ಅವನ ಇನ್ನೊಂದು ಮುಖದಿಂದ. ಅದು ಅವನ ಕಾಮ ಮತ್ತು ಭ್ರಮೆ.

ತ್ರಿಲೋಕ ವಿಜಯಿ ದಶಕಂಠ ಹುಟ್ಟುವಾಗಲೆ ‘ನೆತ್ತರೊಳೆ ಪೆಣ್ಣೊಡಲಿನಾಸೆಯಾ ಬೇಟಂ’ ಹೊತ್ತು ಹುಟ್ಟಿದ ಮಹಾನುಭವ! ಹೆಣ್ಣಿನ ವ್ಯಾಮೋಹ ಅವನ ಜನ್ಮದೌರ್ಬಲ್ಯ. ಅದನ್ನು ಜಯಿಸಲು ಆತ್ಮವನ್ನೇ ಬೇಯಿಸಬೇಕಾಯಿತು. ಪಾತಿವ್ರತ್ಯವನ್ನು ನಂಬಿದ ಪತ್ನೀವ್ರತಕ್ಕೆಳಸಿದವರನ್ನು ಪರೀಕ್ಷಿಸಲು ಹೊರಟ. ಆದರೆ, ಆದದ್ದಾದರೂ ಏನು? ಅವನು ಹೆಣ್ಣನ್ನು ಬಯಸುವ ಮೊದಲೇ ಹೆಣ್ಣೇ ಅವನನ್ನು ಬಯಸಿದಳು.

ರಾವಣ ತನ್ನ ರೂಪಕ್ಕೆ, ರಸಿಕತೆಗೆ, ಐಶ್ವರ್ಯಕ್ಕೆ, ಶೌರ್ಯಕ್ಕೆ ಸೋಲದ ಹೆಣ್ಣೊಬ್ಬರನ್ನೂ ಕಾಣದಾದ, ಪ್ರಬಲವಾದ ಭೋಗಭಾವನೆಯ ಕಾಮಪ್ರವಾಹದಲ್ಲಿ ಕೊಚ್ಚಿ ಹೋದ, ಹೋದೆಡೆಯಲ್ಲೆಲ್ಲಾ ಕಣ್ಣಿಗೆ ಬಿದ್ದ ರೂಪಿಸಿಯರನ್ನೂ, ಹದಿಬದೆಯರನ್ನೂ ತನ್ನ ಬುದ್ದಿ ಚತುರತೆಯಿಂದಲೋ, ಬೆದರಿಕೆಯಿಂದಲೋ, ಕೊನೆಗೆ ಯುದ್ಧದಲ್ಲಿ ಜನಿಸಿಯೋ ಅವರನ್ನು ಒಪ್ಪಿಸಿ, ಎಳೆದು ತಂದು ತನ್ನ ಅಂತಃಪುರಕ್ಕೆ ಸೇರಿಸಿಕೊಂಡ. ಮತ್ತೊಮ್ಮೆ ಹದಿಬದೆಯೆಂದು ಹೆಸರಾದ ಧಾನ್ಯಮಾಲಿನಿಯೆಂಬುವಳನ್ನು ಪರೀಕ್ಷಿಸುವ ಹರಿಯಾಸೆಯಿಂದ ಅವಳ ಅರಸನ ಜೊತೆಗೆ ಯುದ್ಧ ಮಾಡುತ್ತಾನೆ.

“ತಂದೆನವಳರಸನಂ ಸೋಲಿಸಿ ಸೆರೆಗೆ ನೂಂಕಿ
ಧಾನ್ಯಮಾಳಿನಿಯೆಂಬಾಕೆಯೆಂ……..
…………. ರಾವಣನ ಬೇಟಕ್ಕೆ
ಸೋಲದವಳೊರ್ವಳಂ ಕಾಣ್ಬೆನೆಂದರೆ, ಕಟ್ಟ
ಕಡೆಗಾಕೆಯುಂ ಸೋಲ್ತಳೆನಗೆ”

ಈಗ ಧಾನ್ಯಮಾಲಿನಿ ರಾವಣನ ಉಪಪತ್ನಿಯಾಗಿದ್ದಾಳೆ. ಮತ್ತೆ ಹೀಗೆ ಭಾವಿಸುತ್ತಾನೆ ರಾವಣ:

“ಹದಿ ಬದೆಯರೆಂದು ಹೆಸರಾಂತ ಹೆಣ್ಮಣೆಗಳಂ
ಪರಿಕಿಸಿದೆನವರುಂ ಸುಲಭಮಾದರಯ್, ಕಡೆಗೆ ಕೇಳ್
ಹದಿಬದೆಯರಿಹರೆಂಬ ನಂಬುಕೆ ಸತ್ತುದೆನ್ನೆದೆಗೆ!

ಅಂದಿನಿಂದ ಲಂಕೇಶ್ವರನ ಶಯನವನ್ನು ನಿಜವಾಗಿಯೂ ಹಳಿಯುವ ಹೇಸುವ ಹೆಣ್ಣೇ ಇಲ್ಲವೆಂದು ರಾವಣ ಭಾವಿಸುತ್ತಾನೆ. ಅವನಲ್ಲಿ ಅಹಂಕಾರ ಇನ್ನೂ ಹೆಚ್ಚುತ್ತಿದೆ. ತಾನು ಹೊತ್ತು ತಂದ ಹೆಣ್ಣುಗಳು ಆತ್ಮಹತ್ಯೆಗೇನಾದರೂ ಪ್ರಯತ್ನಿಸಿದರೆ ‘ಅದೇ ಚಿತೆಯನೇರುವೆನ್, ಪೆಣದೆಡೆಯ ಪವಡಿಪೆನ್’ ಎಂಬುದಾಗಿ ಅತಿಕಾಮುಕನಾಗಿ ವರ್ತಿಸುತ್ತಾನೆ.

ಪತಿವ್ರತೆಯಾದ ಸೀತೆಯನ್ನು ಕದ್ದು ತಂದ ರಾವಣ ಅವಳಿಗೆ ಹತ್ತು ತಿಂಗಳ ಅವಧಿಯನ್ನು ದಯಪಾಲಿಸಿ ಅಷ್ಟರೊಳಗೆ ವಶವಾಗದಿದ್ದರೆ ಬಲಾತ್ಕಾರ ಪ್ರಯೋಗ ಮಾಡಬೇಕಾಗುತ್ತದೆ ಎಂಬ ಬೆದರಿಕೆಯನ್ನು ಹಾಕುತ್ತಾನೆ. ಗಂಡನಿಂದ ದೂರವಾಗಿ ಸುಖತ್ಯಕ್ತಳಾಗಿ ಅಶೋಕವನದಲ್ಲಿ ವಿರಹ ತಾಪದಿಂದ ನರಳುವ ಸೀತೆಗೆ, ರಾವಣನಿಗಿಂತಲೂ ಅಧಿಕ ತೇಜಸ್ಸು, ಯೌವ್ವನ, ಐಶ್ವರ್ಯವನ್ನು ಹೊಂದಿದ ಪತಿ, ಶ್ರೀರಾಮನು ಎಂದಾದರೂ ತನ್ನ ಪರಾಕ್ರಮ ಬಲದಿಂದ ತನ್ನನ್ನು ಮರಳಿಕೊಂಡೊಯ್ಯುವನೆಂಬ ಗಾಢ ನಂಬುಗೆ ಇತ್ತು. ನಿದ್ದೆ, ನೀರಡಿಕೆ ಉಣಿಸು, ವಿವಾಹಗಳನ್ನು ಬಿಟ್ಟು ರಾಮನಾಮಧ್ಯಾನದ ಕಠೋರ ತಪಸ್ಸಿನಲ್ಲಿ ಆಕೆ ನಿರತಳಾಗುತ್ತಾಳೆ. ಅಧರ್ಮ ನಾಶಕ್ಕೆ ಸಂಕಲ್ಪ ರೂಪದ ತಪಃಶಕ್ತಿಯೂ ಕಾರಣವಾಗುತ್ತದೆ.

ಅದೊಂದು ಮಾನಸಿಕ ಶಕ್ತಿ. ಆದ್ದರಿಂದ ಏನನ್ನಾದರೂ ಸಾಧಿಸಬಹುದೆಂಬುದನ್ನು ಸೀತೆ ತಿಳಿದಿದ್ದಳು. ಧಾನ್ಯಮಾಲಿನಿಗೆ ಸೀತೆಯ ಹಾಗೆ ಮನಸ್ಸಿನ ದೃಢತೆಯನ್ನು ಉಳಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಅವಳ ಅರಸ ತಿರುಗಿ ಬರದಂತೆ ಆತನನಗನು ಸೆರೆಗೆ ಅಟ್ಟಿಯೇ ರಾವಣ ಇವಳನ್ನು ಹೊತ್ತು ತಂದಿದ್ದ. ಆತನೊಡ್ಡುವ ನಾನಾ ಬಗೆಯ ಬಲೆಯಲಲ್ಲಿ ಸಿಕ್ಕು ಅಸಹಾಯಕಳಾಗಿ ಪರಿಸ್ಥಿತಿಯಿಂದ ಪಾರಾಗುವುದು ಸಾಧ್ಯವಾಗದಾಗ ಅವನ ಕೈವಶವಾಗಿದ್ದಾಳೆ. ನಂತರ ಅತಿಕಾಯನ ಜನನ. ಅವಳ ಪಾಲಿಗೆ ಬದುಕು ಅನಿವಾರ್ಯ.

ಹೀಗೆ ರಾಕ್ಷಸನ ದುರ್ಮೋಹಕ್ಕೆ ಕಾಲಾಂತರಕ್ಕೆ ಓತ-ಧಾನ್ಯಮಾಲಿನಿಗೆ “ಮನವೊಪ್ತರಿರ್ದುದಕ್ಕೆ ತನುವೊಪ್ತಿದವಳ ಬಾಳ್ ನರಕಮಾದುದು”. ಆದರೂ “ಪತಿದೊರೆಯದಾ ಪತಿವ್ರತೆಯ ಸಂಕಟದ ಜೀವಿತಕೆ ಜೀವಾನು ವೋಲಿರ್ದ” ತನ್ನ ಕುಮಾರನಿಗಾಗಿ ಬದುಕಿದಳು “ಸುತನ ಸುಸ್ಮಿತ ಸ್ವರ್ಗದಿಂದಾ ನರಕ ಕೂಪಮಂ ಬಾಸಣಿಸಿ ಬದುಕುತಿರ್ದಳು” ‘ಬ್ರಹ್ಮವರಬಲ ಸಮರ ಶೂರನಾದ’ ಅತಿಕಾಯನಂತಹ ಮಗನಿದ್ದರೂ, ಅಗಲಿದ ಜವ್ವನಿಗ ಗಂಡನಿಗಾಗಿ ಧ್ಯಾನಮಾಲಿನಿ ಹಗಲಿರುಳು ಪರಿತಪಿಸುತ್ತಾಳೆ. ತನ್ನ ಒಡೆದ ಸಂಸಾರಕ್ಕಾಗಿ ದುಃಖಿಸುತ್ತಾಳೆ; ಕೊರಗಿ ಕಣ್ಣೀರು ಹಾಕುತ್ತಾಳೆ.

ಇದೀಗ ಧಾನ್ಯಮಾಲಿಯ ಉದ್ದಾರಕ್ಕಾಗಿ ವಿಧಿ ಅನುವುಮಾಡಿಕೊಟ್ಟಿದೆ. ಅವಳ ಸುಪ್ತಚಿತ್ತದಲ್ಲಿ ಅಡಗಿದ್ದ ಆರ್ತ್ಮೊದ್ಧಾರಕ ಶಕ್ತಿ ಜಾಗೃತಗೊಂಡು ಸದ್ಗತಿ ದೊರಕುವ ಕಾಲ ಒದಗಿ ಬಂದಿತ್ತು. ಅವಳಿಗೆ ಸೀತೆಯನ್ನು ಕಾಣುವ ಸುಯೋಗ ಲಭಿಸಿತು. ಆ ದಶ್ಶನ ಧಾನ್ಯಮಾಲಿನಿಗೆ ಮೂಕ ದೀಕ್ಷೆಯಾಯಿತು.

“ಸೀತೆಯಂ ಕಂಡ
ಧಾನ್ಯಮಾಲಿನಿಗೆ, ಸಿದ್ಧಿಯನಾಂತ ಯೋಗಿಯಂ
ಕಾಣ್ಬಯೋಗಭ್ರಷ್ಟಾನಂತಾಗೆ, ಪೂರ್ವಮಂ
ನೆನೆದು ಕೊರಗಿದೊಳೊದಗಿದಾತ್ಮ ಪತನಕೆ”

“ಧಾನ್ಯಮಾಲಿನಿ ಹೃದಯ ಸಂಕಟದ ಮರ್ಮಮಂ ತಿಳಿವರಾರ್, ಹದಿಬರೆಯರಂತಸ್ಥಮಂ?’ ರಾವಣನ ಪ್ರಯಣವಂತಿರಲಿ, ಮಗನ ಮೋಹವೂ ಆಕೆಗೆ ಬೇಡವಾಯಿತು.

‘ಶ್ರೀರಾಮಾಯಣ ದರ್ಶನಂ’ ಕಾವ್ಯದಲ್ಲಿ ಅನೇಕ ಕಡೆಗಳಲ್ಲಿ ಮನೋ ವೈಜ್ಞಾನಿಕ ಹೊಳಹುಗಳನ್ನು ಗುರುತಿಸಬಹುದು. ವ್ಯಕ್ತಿಗಳ ಸುಪ್ತಚೇತನದ ಕ್ರಿಯೆಯ ಪರೋಕ್ಷ ಅಭಿವ್ಯಕ್ತತೆಯು ವೈವಿಧ್ಯಪೂರ್ಣವಾಗಿರುತ್ತದೆ. ಭಾವಾಘಾತದ ಫಲವಾಗಿ ನೈಜಸ್ಥಿತಿಯನ್ನು ಮರೆಮಾಚಿ, ತನ್ನ ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ತಾತ್ಫೂರ್ತಿಕವಾಗಿ ಬಗೆಯ ಸಮತೆ (Mental equilibrium)ಯನ್ನು  ಕಾಯ್ದುಕೊಳ್ಳಲು ವ್ಯಕ್ತಿಯು ನಾನಾ ರೀತಿಯ ಮನೋತಂತ್ರಗಳನ್ನು ಅನುಸರಿಸುತ್ತಾನೆ. ಮುಂದೆ ಸೂಕ್ತ ಪ್ರಚೋದನೆ ದೊರೆತಾಗ ಬಚ್ಚಿಟ್ಟ ಅಳಲು, ಆಸೆ ಆಕಾಂಕ್ಷೆಗಳು ಹಳೆಯ ಅನುಭವಗಳು ನೆನಪಿನಾಳದಿಂದ ಮರುಕಳಿಸುತ್ತವೆ.

ಧಾನ್ಯಮಾಲಿನಿಯು ತನ್ನ ಮೊದಲಿನ ಸುಂದರ ಜೀವನ, ಪ್ರೀತಿಯ ಪತಿ, ಬದುಕಿನಲ್ಲಿ ಸಂಭವಿಸಿದ ಆಘಾತ, ಸಂಕಟಗಳನ್ನು ಆಗಿನ ಮಟ್ಟಿಗಾದರೂ ಮರೆತು ಮಗನಿಗೋಸ್ಕರ ಪರಿಸ್ಥಿತಿಗೆ ಹೊಂದಿಕೊಂಡಿದ್ದಳು. ಮುಂದೆ ಸೀತೆಯು ಸಂಸರ್ಗ ಪ್ರಭಾವ (ಸಾಮಾಜಿಕ ಅನುಖುಲ)ದಿಂದ ಅವಳಲ್ಲಿ ಸುಪ್ತವಾಗಿ ಅಡಗಿದ್ದ ಪಾತಿವ್ರತ್ಯದ ಕಿಡಿ ಪ್ರಜ್ವಲಿಸುತ್ತದೆ. ತನ್ನ ‘ಪೂರ್ವಮಂ ನೆನೆದು’ ತನಗೊದಗಿದ ಆತ್ಮಪತನಕ್ಕೆ ದಿಗಿಲು ಗೊಂಡವಳಾಗಿದ್ದಾಳೆ.

ರಾವಣನ ಸಂಗ, ಸುತನ ವಾತ್ಸಲ್ಯವನ್ನು ತೊರೆದು ಸದಾಕಾಲ ಆಕೆಯ ಮನಸ್ಸು ತಪಸ್ಸಿನಲ್ಲಿ ತೊಡಗಿಕೊಳ್ಳುವಷ್ಟು ಪರಿವರ್ತನ ಪಡೆಯುತ್ತದೆ. ಅವಳ ಮೌನ ತಪಸ್ಸು, ಅವಳಲ್ಲಿಯ ಭಾವಶುದ್ಧಿಯನ್ನು ಅಭಿವ್ಯಕ್ತಗೊಳಿಸುತ್ತದೆ. ಊರ್ಮಿಳೆ ತನ್ನ ಪತಿಯ ಕ್ಷೇಮಕ್ಕಾಗಿ ತನ್ನ ಸಕಲ ರಾಜ ವೈಭೋಗವನ್ನು ತ್ಯಜಿಸಿ, ಸರಯೂ ನದಿಯ ತಟದಲ್ಲಿ ಒಬ್ಬ ತಪಸ್ವಿನಿಯಂತೆ ಕೈಕೊಳ್ಳುವ ಸುದೀರ್ಘವಾದ, ಏಕಮುಖವಾದ ತಪಸ್ಸು ಇಡೀ ಲೋಕವನ್ನೇ ಆಕರ್ಷಿಸುತ್ತದೆ.

‘ಶ್ರೀರಾಮಾಯಣ ದರ್ಶನಂ’ ಕಾವ್ಯದಲ್ಲಿ ಅವಳಿಗಾಗಿಯೇ ಕವಿ ಒಂದು ‘ಸಂಚಿಕೆ’ಯನ್ನು ಮೀಸಲಾಗಿರಿಸಿದ್ದಾರೆ. ಆದರೆ, ಧಾನ್ಯಮಾಳಿನಿ ರಾವಣನ ಕೈಸೇರಿದ ದಿನದಿಂದ ಮಾನಸಿಕ ತುಮುಲಕ್ಕೆ ಸಿಲುಕಿ, ನೊಂದು, ಬೆಂದು ಅಗಲಿದ ಪತಿಯನ್ನು ನೆನೆನೆನೆದು ಕೊರಗುವ ಈ ತಪಸ್ಸು ಯಾರಿಗೂ ಕಾಣದು. ಅವ್ಯಕ್ತವಾದ ಈ ತಪಸ್ಸು ಕುವೆಂಪು ಕಣ್ಣಿಗೆ ಕಂಡಿದೆ. ಅಂತೆಯೆ ಕಾವ್ಯದಲ್ಲಿ ಆಕೆಗೆ ದೊರಕಿಸಿದ ಅವಕಾಶ ಚಿಕ್ಕದಾದರೂ ಆಕೆಯ ಬಗೆಗಿನ ಅನುಕಂಪ ಆದರ ಗಮನಾರ್ಹ.

ಅತಿಕಾಯನು ಹಿಂದಿನಂತೆ ಈಗ ತನ್ನ ಮಾತೆಯನ್ನು ಸಂತೈಸಲು ಅಸಮರ್ಥನಾಗಿದ್ದಾನೆ. ಅದೇ ವೇಳೆಗೆ ಆತನಿಗೆ ಕಾಳಗಕ್ಕೆ ತಂದೆಯಿಂದ ದೊರೆತ ಆಣತಿ ವರವಾಗಿ ಪರಿಣಮಿಸುತ್ತದೆ, ‘ತೊರೆವನೇನ್ ವಿರೋಚಿತದ ರಣದ ಮರಣದ ಸುಯೋಗಮಂ?’

ತನ್ನ ತಾಯಿ ನನಗಾಗಿ ಬದುಕಿದ್ದಾಳೆ. ಅವಳನ್ನು ಈ ಸಂದಿಗ್ಧತೆಯಿಂದ ಪಾರು ಮಾಡಲು ಒಂದೇ ಉಪಾಯ, ಅದುವೇ ತನ್ನ ಅವಸಾನ ಎಂಬುದಾಗಿ ಅತಿಕಾಯ ಭಾವಿಸುತ್ತಾನೆ.

“ನನ್ನಿಂದೆ, ನನಗಾಗಿ, ನನ್ನ ತಾಯ್
ಬರ್ದುಕಿ ಬೇಯುತ್ತಿಹಳ್? ನನ್ನ ಸಾವಿರ್ವರ್ಗೆ,
ತಾಯ್ಗೆನಗೆ, ಶಾಂತಿಯಂ ದಯೆಗೆಯ್ವೊಡಿಂದಿನ
ರಣಂ ತರವ್‌ವೇಳ್ಕುಮಾ ಶಾಂತಿಯಂ!”

ಹಾಗೆಂದುಕೊಂಡು ಹೊರಟ ಅತಿಕಾಯನಿಗೆ ರಣರಂಗದಲ್ಲಿ ಮರಣ ಸಂಭವಿಸುತ್ತದೆ. ಇಲ್ಲಿಯವರೆಗೆ ಯಾರಿಗೋಸ್ಕರ ತನ್ನೆಲ್ಲ ದುಃಖವನ್ನು ಮರೆಮಾಚಿದ್ದಳೋ ಅವನೇ ಇಲ್ಲವಾದಾಗ ಅವಳಲ್ಲಿಯ ಬಗೆಯ ಸಮತೆ (Mental equilibrium) ಇಲ್ಲವಾಗುತ್ತದೆ. ಧಾನ್ಯಮಾಲಿನಿಗೆ ಈಗ ಎಲ್ಲವೂ ಶೂನ್ಯ. ಇಹದ ಬಂಧನವನ್ನೆಲ್ಲ ಕಳಚಿಕೊಂಡು ಕಣ್ಮುಚ್ಚುವ ಘಳಿಗೆ ಧಾನ್ಯಮಾಲಿನಿಯ ಈಗಿನ ಸ್ಥಿತಿ ತುಂಬ ದಯನೀಯವಾಗಿದೆ. ರಾವಣನ ಆತ್ಮೋದ್ಧಾರಕ್ಕೆ ಕಾರಣವಾಗುವ ಇನ್ನೊಂದು ಭಾವಪೂರ್ಣ ದೃಶ್ಯವನ್ನು ಇಲ್ಲಿ ಕವಿ ನಿರ್ಮಿಸಿದ್ದಾರೆ. ಅವಳು ಸಾವಿನ ಉಡಿಯಲ್ಲಿ ಬೀಳು ಕ್ಷಣಗಳಿವು.

“ಧಾನ್ಯಮಾಲಿನಿ ದೇವಿಗಸ್ತಮಿಸುತಿರ್ಪುದಸು!
ಅತಿಕಾಯನೊಡಲುಳಿದುದಂ ಕೇಳಿದುದೆ ತಡಂ,
ಒಡೆಯ, ಮೂರ್ಛೆಗೆ ಸಂದಳಿನ್ನುಮುಪಚರಿಸಿಹರ್
ದಾದಿಯರ್’!

ತಮ್ಮನಾದ ಕುಂಭಕರ್ಣ, ನೆಚ್ಚಿನ ಶೂರ ಮಕ್ಕಳಾದ ಅತಿಕಾಯ, ಇಂದಜಿತು ಇವರ ಸಾವು. ಈಗ ಮೆಚ್ಚಿನ ಉಪಪತ್ನಿ ಧಾನ್ಯಮಾಲಿನಿಯ ಸರದಿ.

ಕುವೆಂಪು ದೃಷ್ಟಿಯಲ್ಲಿ ಮಂಡೋದರಿಯ ಪತಿಯ ಒಳತಿಗಾಗಿ ಸದಾ ಪ್ರಾರ್ಥಿಸುತ್ತಿರುವ ರಾವಣನ ಮೆಚ್ಚಿನ ಮಡದಿ. ತನ್ನ ಪತಿ ಮತ್ತೆ ಒಬ್ಬಬ್ಬರನ್ನು ಕರೆತಂದಾಗಲೂ ಆಕೆಯ ಮನ ನರಳಿದೆ. ಆದರೆ, ಆಕೆ ಪ್ರೇಮಮಯಿ, ಮಗ ಇಂದ್ರಜಿತು ಲೋಕೈಕ ವೀರ. ಅವನ ಮರಣ ಸಂಭವಿಸಿದೆ. ಹೆತ್ತೊಡಲು ಗೋಳಿಡುತ್ತಿದೆ. ರಾವಣ ಅವಳನ್ನು ಸಂತೈಸುತ್ತಿದ್ದಾನೆ. ಸೀತಾಪಹರಣದ ತನ್ನ ಅವಿವೇಕತನಕ್ಕೆ ಪರಿತಪಿಸುತ್ತಿದ್ದಾನೆ.

ಮಂಡೋದರಿಯ ತೀವ್ರ ನೋವನ್ನು ಕಂಡ ರಾವಣ ಮಡಿದ ಇಂದ್ರಜಿತು ಐಂದ್ರಾಸ್ತ್ರದಿಂ ಮಡಿದನೈಂದ್ರಾಸ್ತ್ರದಲಿ ಮಂಡೋದರಿಯ ಮಗಂ ಎನ್ನುತ ಕಂಪಿಸುತ್ತಿದ್ದಾನೆ.

“ಏರ ಮೇಲೇರ್ಗೊಂಡ ಸಿಂಗದೊಲ್ ಬಾರಿ ಬಾರಿಗೆ ಬೀಸುಸುಯ್ಯುತ್ತ ಮಂಡೋದರಿಯನ್ನು  ಸಮಾಧಾನಪಡಿಸುತ್ತಿದ್ದ ರಾವಣ. ಅವಳನ್ನು ದಾದಿಯರ ಆರೈಕೆಗೆ ಒಪ್ಪಿಸಿ ಮ್ಲಾನಮುಖಿಯಾಗಿ ಮೃತ್ಯುಶಯ್ಯೆಯಲ್ಲಿರುವ ಪತ್ನಿ ಧಾನ್ಯಮಾಲಿನಿಯೆಡೆಗೆ ಧಾವಿಸುತ್ತಾನೆ. ಆಕೆಗೆ ಇಹಪ್ರಜ್ಞೆ ಹೊರಟುಹೋಗಿದೆ. ಆತ್ಮಸಂತಾಪದಗ್ಧಳಾಗಿದ್ದಾಳೆ. ಅದಾವುರೋ ಅಶರೀರಿಯೊಂದಿಗೆ ಮೊರೆಯುಡುತ್ತಲಿದ್ದಾಳೆ. ಅಲ್ಲಿಯ ಅವಳ ಆ ಸ್ಥಿತಿಯನ್ನು ಕಂಡಾಗ ಮೂರು ಲೋಕವನ್ನೇ ಗೆದ್ದ ಮಹಾ ಸಾಮ್ರಾಟನಾದ ರಾವಣನಿಗೂ ಆ ಕ್ಷಣ ದಿಗ್‌ಭ್ರಮೆ. ತನ್ನ ಶೌರ್ಯ ಐಶ್ವರ್ಯವೆಲ್ಲವು ಅರ್ಥಹೀನವಾಗಿ ತೋರುತ್ತದೆ. ಬದುಕಿನಲ್ಲಿ ಜಿಗುಪ್ತೆ ಮೂಡುತ್ತದೆ. ಈ ಬಾಳೆಂಬುದು ಕ್ಷಣಿಕ, ಅಶಾಶ್ವತ, ಅನಿತ್ಯ, ಇದೊಂದು ಬಲವಾದ ಭ್ರಮೆ ಎಂಬ ಸತ್ಯದ ಸಾಕ್ಷಾತ್ಕಾರವಾಗುತ್ತದೆ.

“ಬಾಳ್!
ಕಳ್ಳನೊರೆದೊಂದು ಸುಳ್ಳಿನ ಸಂತೆ! ಬರಿ ಬೊಂತೆ !
ಕಡೆಗೆ, ಬೆಂಕಿಯ ಹೊರೆದು ಬೂದಿರಾಸಿಯನುಳಿವ
ಅರ್ಥವಿಲ್ಲದ ಬಣಗು ಕಂಥೆ! ಇದಕೇಕಿನಿತು
ಚಿಂತೆ?”

ಜೀವ ಇದುವರೆಗೆ ಯಾವುದನ್ನು ಬೆನ್ನು ಹತ್ತಿ ಓಡುತ್ತಿತ್ತೋ, ಸತಿ-ಸುತರು, ಬಂಧು-ಬಾಂಧವರು ಅವರೆಲ್ಲ ತನ್ನ ಕಣ್ಣಿದುರಿನಲ್ಲಿಯೇ ಒಬ್ಬರ ಮೇಲೊಬ್ಬರು ಉರುಳುವುದನ್ನು ಕಂಡಾಗ, ರಾವಣನ ಅಂತರಂಗ ವೈರಾಗ್ಯದ ಕಡೆಗೆ ತಿರುಗುತ್ತದೆ ಧಾನ್ಯಮಾಲಿನಿಯೆಡೆಯ ಪೀಠದಲ್ಲಿ ಆತ ಚಿಂತೆಯಿಂದ ಕುಸಿಯುತ್ತಾನೆ. ಅವಳು ಅರೆಪ್ರಜ್ಞಾ ಸ್ಥಿತಿಯಲ್ಲೂ ಬೆಚ್ಚುತ್ತಾಳೆ. ನಿಟ್ಟುಸಿರಿಡುತ್ತ ಯಾರನ್ನೂ ಗುರುತಿಸದ ನೋಡದಿಂದ ಸುತ್ತಲೂ ಕಣ್ಣು ತಿರುಗಿಸುತ್ತ ತನ್ನೊಳಗೆ ತಾನು ತನ್ನ ಮೊದಲಿನ ಪತಿಯೊಡನೆ ಮಾತನಾಡುತ್ತಿದ್ದಾಳೆ, ದನುಜೇಂದ್ರನೂ ಅನಿಮೇಷನಾಗಿ ಆಳಿಸುವಂತೆ.

“ಮಿನಿಯದಿರ್, ಸ್ವಾಮಿ, ಮೇಯ್ ಸೋಲ್ತುದು ದಿಟಂ; ಮನಂ
ಸುಡುತಿರ್ದುದದನೇಗಳುಂ, ಮೆಯ್ಸನಲ್ಲದೇಂ
ಮನವನಿತ್ತೆನೆ ರಾಕ್ಷಸಂಗೆ? ಕೈಬಿಡದಿರೀ
ದಾಸಿಯಂ ಮನವನಲ್ಲದೆ ತನುವ ನೋಡುವನೆ
ಜಗದೀಶ್ವರಂ? ನನಗೆ ನೀನೇ ಸರ್ವೇಶ್ವರಂ
ಸೀತೆಯಂ, ಪೂಜ್ಯೆಯಂ, ಆ ಲೋಕಮಾತೆಯಂ
ಪಶುರಾಕ್ಷಸಂ ಮುಟ್ಟಿ ಪೋತ್ತು ತಂದಾ ಕತದಿನ್
ಅಪವಿತ್ರಳಾದಳೇನಾ ಪತಿವ್ರತೆ..?……..
…………………………….
ಏನೋ ದುಃಸ್ವಪ್ನದೊಳ್
ಪ್ರಾರಬ್ಧ ಕರ್ಮ ಪರಿಪಾಕದಿಂದಗಲಿದೆವು
ನೀನು ನಾನ್, ಆ ಸ್ವಪ್ಮವೊಡೆದುದಿನ್

ದೇಹ ಮನಸ್ಸುಗಳ ಸಂಘರ್ಷವು ಇಲ್ಲಿ ಕವಿ ಕಂಡಂತೆ ಪ್ರತಿಬಿಂಬಿತವಾಗಿದೆ. ಎಂಥ ಪತನ ಸಂಭವಿಸಿದ್ದರೂ, ಪ್ರಪಾತದಲ್ಲಿ ಉರುಳಿದ್ದರೂ ಸಾತ್ವಿಕ ಶಕ್ತಿಯ ಆಧಾರದಿಂದ, ನಿರಂತರವಾದ ಪ್ರಾಮಾಣಿಕ ಪ್ರಯತ್ನದಿಂದ ಮನುಷ್ಯ ತನ್ನ ಉತ್ಥಾನದ ಮೆಟ್ಟಿಲನ್ನು ಏರಬಲ್ಲ. ಧಾನ್ಯಮಾಲಿನಿಯದು ಇಲ್ಲಿ ಸಫಲ ಪ್ರಯತ್ನವಾಗಿದೆ. ಅದನ್ನು ಪರಮೋಜ್ವಲವಾಗಿ ಇಲ್ಲಿ ಧ್ವನಿಸಲಾಗಿದೆ. ಅವಳ ಮನಸ್ಸನ್ನು ವಿಶ್ಲೇಷಿಸಿದಾಗ ಇಷ್ಟು ದಿನಗಳವರೆಗೆ ಅವಳು ಬಚ್ಚಿಟ್ಟ ಗೌಪ್ಯ ಭಾವವಿರೇಚನ ಕ್ರಿಯೆಯಿಂದ ಇಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಅದು ಪ್ರಕಟವಾಗಿತ್ತು “ಮತ್ತೆ ಕಣ್ಮುಚ್ಚಿದಳ್ ಧಾನ್ಯಮಾಲಿನಿ”

ಕಾಯಾ, ವಾಚಾ ಮನಸಾ ಧಾನ್ಯಮಾಲಿನಿ ತನಗೆ ಒಪ್ಪಿಕೊಂಡವಳೆಂದು ಭಾವಿಸಿದ ರಾವಣೇಶ್ವರನಿಗೆ ಆಗ ಎಂಥ ಆಘಾತ, ಜಿಗುಪ್ಸೆ, ವಿಷಾದ ಉಂಟಾಗಿರಬೇಕು! ರಕ್ಕಸನಿಗೆ ತನ್ನ ಮೈ ಮಾತ್ರ ನೀಡಿದೆನೇ ಹೊರತು ಮನವೆಂದೂ ಸೋತಿರಲಿಲ್ಲ. ತನ್ನ ತಪ್ಪನ್ನು ಕ್ಷಮಿಸಬೇಕೆಂದು ಮೊರೆಯಿಡುತ್ತಿರುವುದನ್ನು ಕೇಳಿದ ರಾವಣ ಹಿಂದೆಂದೂ ಅನುಭವಿಸದ ಮರ್ಮಾಘಾತದ ವೇದನೆಯಿಂದ ನರಳಿದ.

“ಪಿಂತೆಂದುಮಾವ ಕಾರಣಕನುಭವಿಸದೊಂದು
ಮರ್ಮಘಾತದ ವೇಧೆಯಿಂ ನರಳ್ವನಾಳದಿಂ”

ಅಂದು ರಾವಣೇಶ್ವರ ತನ್ನ ಶಕ್ತಿ, ಸಾಮರ್ಥ, ಹಿರಿಮೆಗಳ ಬಗ್ಗೆ ಮಾರೀಚನನೊಂದಿಗೆ ಹೇಳಿದ ಮಾತುಗಳು ಒಂದೊಂದಾಗಿ ಅವನ ಕಣ್ಮುಂದೆ ಸುಳಿಯುತ್ತಿವೆ. ಅವನ ಅಹಂಕಾರ, ವ್ಯಾಮೋಹಕ್ಕೆ ಬಲವಾದ ಪೆಟ್ಟು ಬೀಳಲಿದೆ. ರಾವಣನ ಅಂತ್ಯಕಾಲ ಇನ್ನೇನು ಹತ್ತಿರದಲ್ಲಿದೆ.

“ರಾಕ್ಷಸೇಶ್ವರನ ಮೈಸಿರಿಗೆ
ವಿತ್ತೇಶೇಜೇತನೈಸಿರಿಗೆ, ದಿಕ್ಪಾಲರಂ
ಗೆಲ್ದ ಪೆಂಪಿಗೆ, ನಿಖಿಲ ಭೂಮಿನಾಥರನೊತ್ತಿ
ಬಾಯ್ಕೇಳಿಸಿದ ಯಶೋವೈಭವಕೆ, ರಾವಣನ
ರಸಿಕತೆಗೆ, ಸತ್ವಕ್ಕೆ, ವೀರ್ಯಕ್ಕೆ, ತೇಜಕ್ಕೆ
ಜೌವನಕೆ ಕಂಡೆನಿಲ್ಲಾನೊರ್ವಳಂ ನನಗೆ
ಮೆಚ್ಚಿ ವಶವಾಗದಿರ್ದಾ ಪವಿತ್ರಾಂಗಿಯಂ!

ರಾವಣನಿಗೆ ತೀವ್ರ ಭ್ರಮನಿರಸನವಾಗಿದೆ. ಧಾನ್ಯಮಾಲಿನಿ ಸೋತಳೆಂಬ ಅವನ ಭ್ರಾಂತಿ ಒಡೆದು ಚೂರಾಗಿದೆ. ತನ್ನೊಡನೆ ಅನ್ಯೋನ್ಯವಾಗಿದ್ದುಕೊಂಡು ಹದಿಬದೆಯಾಗಿದ್ದಾಳೆ. ಯಾತನಾ ತೀವ್ರತೆಯಿಂದ ಅವನ ಅಂತರಂಗ ಅಲ್ಲೋಲ-ಕಲ್ಲೋಲವಾಗಿದೆ. ಈಗಾದ ವಜ್ರಾಘಾತದಿಂದಾಗಿ ಅವನ ಒಳಗಣ್ಣು ತೆರೆದಿದೆ. ತನ್ನ ಅಂತ್ಯಕಾಲವೂ ಬಂದ ಹಾಗೆ ಭಾಸವಾಗುತ್ತಿದೆ.

“ತನ್ನ ಕಾಮಾತಿಶಯದಿಂದೆ
ಶವದ ಸಹವಾಸದೊಳ್ ಭೋಗಿಯಾಗಿರ್ದವಂ
ಬೋಧೆ ತಿಳಿದೇಳುತೆ-ಜಿಗುಪ್ಸೆಯಿಂದಲೆನಾಣ್ಚೆ”

ಅತೀವವಾದ ವೇಧೆಯಿಂದ ರಾವಣ ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ.

ಧಾನ್ಯಮಾಲಿನಿಯಾತ್ಮಮಂ
ಕ್ಷಮೆ ಬೇಡುವಂದದಿಂದ ಮುಡಿಮಣಿದನವಳಡಿಗೆ
ದೇವದಾನವ ಭಯಂಕರನಾತ್ಮ ಸಂತಾಪ
ದೀನಮನನಾಗಿ

ಧಾನ್ಯಮಾಲಿನಿಯ ಪಾತಿವ್ರತ್ಯ, ಕೊನೆಯಲ್ಲಿ ರಾವಣನ ಹೃದಯ ಪರಿವರ್ತನೆ ಇದನ್ನು ಕಂಡ ಪರಶಿವನ ಮೈ ಪುಳಕಗೊಂಡಿದೆ.

“ಪುಲಕಿಸಿತು ಪರಶಿವನ ಮೆಯ್;
ಮುಗುಳು ನಗೆ ಮಲರಿದತ್ತಾದಿಶಕ್ತಿಯ ಮೊಗಕೆ,
ಮಾಯಾಂಗನೆಯ ಕಯ್ಯ ಮೋಹಪಾಶಂ ನಡುಗೆ,
ಕರುಬಿದಳು ಕಂಡು ಮುಕ್ತ್ಯಂಗೆಯ ಹಸಿತಸಿತ ವದನಾಬ್ಜಮಂ!”

ಇದೀಗ ರಾವಣನ ಆತ್ಮೋದ್ಧಾರ ಸಮೀಪಿಸುತ್ತಿದೆ. ಧಾನ್ಯಮಾಲಿನಿಯ ಮಹಾಮೌನ ‘ಪಾಪಿಯುದ್ಧಾರ’ ಕ್ಕೆ ಪ್ರೇರಣೆಯಾಗಿದೆ; ಉದ್ಧಾರಕ ಶಕ್ತಿಯಾಗಿದೆ.

ಧಾನ್ಯಮಾಲಿನಿ ಪತಿತೆ ನಿಜ. ಪತಿತೆಯ ಉದ್ಧಾರ ಹಾಗೂ ಸತ್‌ಶಕ್ತಿಯಿಂದ ದುಷ್ಟಶಕ್ತಿಯಲ್ಲಿ ಉಂಟಾಗುವ ಪರಿವರ್ತನವನ್ನು ನಿರೂಪಿಸುವುದು ಇಲ್ಲಿಯ ಉದ್ದೇಶ. ಕಾವ್ಯದಲ್ಲಿ ಉಕ್ತವಾದುದರ ಜೊತೆಗೆ ಅನುಕ್ತವಾದುದೂ ಇರುತ್ತದೆ. ಎಷ್ಟೋ ಬಾರಿ ಈ ರೀತಿ ಅಪೂರ್ಣವಾದ ಚಿತ್ರಗಳನ್ನು ತಮ್ಮ ಕಲ್ಪನೆ, ಪ್ರತಿಭೆಗಳಿಂದ ಪೂರ್ಣಗೊಳಸುವುದನ್ನು ಓದುಗರಿಗೇ ಕವಿ ಬಿಟ್ಟುಕೊಡುತ್ತಾನೆ.

‘ಪೆಣ್ಣೆ ತನುವತ್ತಿ ಹೃದಯಂ’ ಎಂಬ ಮಂಡೋದರಿಯ ಮಾತಿನಲ್ಲಿ ಆಳವಾದ ತತ್ತ್ವ ಅಡಗಿದೆ. ಪಾಶವೀ ಶಕ್ತಿಗೆ ಕೆಲವೊಮ್ಮೆ ಹೆಣ್ಣಿನ ದೇಹಶಕ್ತಿ ಸೋಲಬಹುದು. ಆದರೆ, ಹೃದಯ ಮನಸ್ಸುಗಳನ್ನು ಗೆಲ್ಲದ ಆ ದೇಹಕ್ಕೆ ಯಾವ ಬೆಲೆಯಿದೆ? ಧಾನ್ಯಮಾಲಿನಿ ಪರಿಸ್ಥಿತಿಯ ಕೈಗೊಂಬೆಯಾಗಿದ್ದಾಳೆ. ಆದುದರಿಂದ ಮಾನವೀಯತೆಯುಳ್ಳ ಯಾರಾದರೂ ಇಂಥ ಪಾತ್ರ ಕುರಿತು ಅನುಕಂಪ ತೋರಬೇಕಾಗುತ್ತದೆ.

ಕವಿ ಕುವೆಂಪು ಕಾವ್ಯದಲ್ಲಿ ಕಾವ್ಯವಸ್ತು, ನಿರೂಪಣೆ, ಯುಗಧರ್ಮದ ಮೈದಾಳಿಕೆ ಈ ಮೂರು ಅಂಶಗಳು ಸ್ಪಷ್ಟವಾಗಿವೆ. ಸಮಕಾಲೀನ ವಿದ್ಯಮಾನಗಳನ್ನು ಸಾರ್ವಕಾಲಿನ ಪ್ರಜ್ಷೆಯಿಂದ ಚಿತ್ರಿಸುವುದು ವಾಲ್ಮೀಕಿ, ವ್ಯಾಸರಂತಹ ಋಷಿ ಕವಿಗಳಿಗೆ ಮಾತ್ರ ಸಾಧ್ಯ. ಕವಿ ಕುವೆಂಪು ಅಂಥ ದ್ರಷ್ಟಾರಾಗಿದ್ದರಿಂದ ಅವರ ರಸಾರ್ದ್ರ ಹೃದಯಕ್ಕೆ ಸಾಮಾನ್ಯರಿಗೆ ಗೋಚರಿಸುವ ಹೊರ ಚೆಲುವಿನ ಜೊತೆಗೇ ಅಂತಃಶ್ಚೈತನ್ಯ ನ್ಯಾರೂಪಿಯಾದ ನಿತ್ಯ ಸತ್ಯವೂ ಕಾಣಿಸುತ್ತದೆ. ಅದನ್ನು ಪ್ರತಿಮಿಸುವುದೇ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ಭವ್ಯ ಲಕ್ಷ್ಯ. ಒಟ್ಟಿನಲ್ಲಿ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯವು ಈ ಯುಗದ ವೈಶಿಷ್ಟಪೂರ್ಣವಾದ ಮತ್ತು ಪ್ರಧಾನವಾದ ವಿಚಾರಧಾರೆಗಳನ್ನು ಗರ್ಭೀಕರಿಸಿಕೊಂಡು ಪ್ರಸ್ತುತತೆಯನ್ನು ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ದಾಖಲಿಸಿದೆ. ‘ಪಾಪಿಗುದ್ಧಾರಮಿಹುದೌ’ ಈ ಜಗದ ಬೃಹದ್ ರಚನೆಯಲಿ ಎಂಬುದು ಕುವೆಂಪು ದೃಷ್ಟಿ-ಸೃಷ್ಟಿ ಆಗಿದೆ.

ಗ್ರಂಥ ಋಣ

೧. ಶ್ರೀರಾಮಾಯಣ ದರ್ಶನಂ: ಕುವೆಂಪು

೨. ಶ್ರೀರಾಮಾಯಣ ದರ್ಶನಂ: ವಿಮರ್ಶಾತ್ಮಕ ಅಧ್ಯಯನ: ಡಾ. ಎಚ್. ಜೆ. ಲಕ್ಕಪ್ಪಗೌಡ

೩. ಕುವೆಂಪು ಕೃತಿ ವಿಮರ್ಶೆ: ಪ್ರ.ಸಂ.ಪ್ರೊ. ಅರವಿಂದ ಮಾಲಗತ್ತಿ

೪. ಕುವೆಂಪು ಪುನರ್ಮನನ: ಸಂ. ಪ್ರೊ. ಅಂಬಳಿಕೆ- ಹಿರಿಯಣ್ಣ, ಪ್ರೊ. ನೀಲಗಿರಿ ತಳವಾರ, ಪ್ರಸರಾಂಗ ಮೈ. ವಿ.ವಿ.

* * *