ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲಿ ಗುಡಿಸಲೊಂದಿರಲಿ
ಅಲ್ಲಿ ಸಿರಿಗನ್ನಡದ ಕಬ್ಬಗಳು ಹಬ್ಬಗಳು
ದಿನ ದಿನವು ಸವಿಯೂಟವಿಕ್ಕುತಿರಲೆನಗೆ
ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ
ನನ್ನಾಸೆ ಏನೆಂದು ಎಲ್ಲರರಿತಿರಲಿ

ಎಂದು ಹಾಡಿದವರು ಪೂಜ್ಯ ಪುಟ್ಟಪ್ಪನವರು. ಅವರ ಬಗೆಗೆ, ಅವರ ಸಾಹಿತ್ಯ, ಮದುಕು, ಜನಮನದ ಮೇಲೆ ಮುಖ್ಯವಾಗಿ ಲೇಖಕಿಯರ ಮನೋಮಂದಿರದ ಮೇಲೆ ಆದ ಪ್ರಭಾವ ಪರಿಣಾಮಗಳೇನು ಎಂಬ ಬಗೆಗಿನ ಟಿಪ್ಪಣಿಯನ್ನು “ಕುವೆಂಪು ಅಧ್ಯಯನ ಕೇಂದ್ರ ಕುಪ್ಪಳ್ಳಿ” ಪ್ರೀತಿಯಿಂದ ಆಗ್ರಹಿಸಿದಾಗ ಕುಪ್ಪಳ್ಳಿಯನ್ನೇ ಆವರೆಗೆ ನೋಡದಿದ್ದ ನನಗೆ ವಿದ್ಯುತ್ ಸಂಚಾರವಾದಂತೆನಿಸಿ ದೂರವಾಣಿ ಕರೆಗೆ ತಕ್ಷಣ ಪ್ರತಿಕ್ರಿಯಿಸಿ ಒಪ್ಪಿಕೊಂಡೆ. ಕುವೆಂಪು ಅವರ ಬಗೆಗೆ ಮಾತನಾಡಲೇ ಎಂಟೆದೆ ಇರಬೇಕು. ಮಹಾಸಾಗರಕ್ಕೆ ಹೋಲಿಕೆ ಉಂಟೆ? ಭೋರ್ಗರೆವ ಅದರ ಸದ್ದು ಪ್ರಶಾಂತವಾಗಿ ಕಾಣುವ ದೂರದ ನೋಟ, ಗಂಭೀರತೆ, ರೌದ್ರತೆ, ರಮಣೀಯತೆ, ಸೌಂದರ್ಯ ಎಲ್ಲವನ್ನೂ ಒಳಗೊಂಡ ಒಂದು ದಿವ್ಯ ಅನುಭೂತಿ ಇದು.

ನನ್ನ ಅತಿ ಚಿಕ್ಕ ವಯಸ್ಸಿನಲ್ಲೆ ಕುವೆಂಪು ಮನದಲ್ಲಿ ಸೇರಿ ಹೋದರು. ನನ್ನ ತಂದೆಗೆ ಪುಟ್ಟಪ್ಪನವರು ಎಂದರೆ ಅತಿಭಕ್ತಿ. ತಾಯಿಗೆ ಅವರ ಓದು ತಪಸ್ಸು ಸಹಜವಾಗಿ ತಮ್ಮ ಮಕ್ಕಳಲ್ಲಿ ಅದನ್ನು ತುಂಬಿದವರು ಅವರು. ‘ಎಲ್ಲಾದರೂ ಇರು’ ಎಂದು ನನ್ನ ತಾಯಿ ಹಾಡುತ್ತಿದ್ದರೆ, ನನ್ನ ತಂದೆ ಅವರ ‘ಬೆರಳ್‌ಗೆ ಕೊರಳ್’, ‘ಜಲಗಾರ’ ಮತ್ತು ‘ರಕ್ತಾಕ್ಷಿ’ಗಳನ್ನು ಓದುವ ಬಗೆ ಕಲಿಸಿದ್ದರು.

‘‘ನೋಡಿ ಇಲ್ಲಿದೆ ಆ ಹಿರಿಯರ ಮನದೊಳಗಣ ಮಾತು. ಜನತೆಗೆ ಕೊಟ್ಟ ಸಂದೇಶ…. ಇದು ಬದುಕಿನ ಯಥಾವತ್ ಚಿತ್ರಣ’ ಎಂದೆಲ್ಲ ವಿವರಿಸುವಾಗ ಯಾವುದೋ ಅದ್ಭುತ ಲೋಕದೊಳಗೆ ಪ್ರಯಣ ಮಾಡಿದಂಥ ಅನುಭವ ನಮ್ಮದು. ನಾನು ಒಂಭತ್ತನೆ ತರಗತಿಗೆ ಬರುವಷ್ಟರಲ್ಲಿ ‘ರಕ್ತಾಕ್ಷಿ’ ನಮಗೆ ಪಠ್ಯವಾಗಿತ್ತು. ಚಿಕ್ಕಂದಿನ ನನ್ನ ತಂದೆಯ ಓದಿನ ಪ್ರಭಾವವೋ ಏನೋ! ‘ರಕ್ತಾಕ್ಷಿ’ ಯ ಪ್ರತಿ ಪಾತ್ರವನ್ನೂ ನಾನು ಅಭಿನಯ ರೀತಿಯಲ್ಲೆ ಓದುತ್ತಿದ್ದೆ. ನನ್ನ ಸೋದರ ಸೋದರಿಯರು ಏನು ಮಾಡಲು ತೋಚದೆ, ತಮ್ಮ ಓದು ಮುಂದುವರೆಸುವ ಇಚ್ಛೆಯೂ ಇಲ್ಲದೆ ನನ್ನ ಓದು ಮುಗಿಯುವವರೆಗೆ ತನ್ಮಯರಾಗಿ ಬಿಡುತ್ತಿದ್ದರು. ಎಲ್ಲೆಲ್ಲಿ ಕುಳಿತವರೂ ಬಂದು ನನ್ನ ಸುತ್ತ ಕುಳಿತು ಬಿಡುತ್ತಿದ್ದರು. ನನ್ನ ಓದು ಮುಗಿದು ನೋಡಿದರೆ ಎಲ್ಲರೂ ನನ್ನ ಬಳಿ. ನನಗೆ ಆಗ ತಿಳಿವು ಬರುತ್ತಿತ್ತು. ಆ ಓದಿನ ತಾದಾತ್ಮ್ಯತನ ಅದು ಹೇಗೆ ಬರುತ್ತಿತ್ತೋ ಇಂದಿಗೂ ಅದಕ್ಕೆ ಉತ್ತರ ಸಿಕ್ಕಿಲ್ಲ.

ಮೈಸೂರಿನ ಶಾರದಾ ವಿಲಾಸ ಹುಡುಗಿಯರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ನನಗೆ ‘ರಕ್ತಾಕ್ಷಿ’ಯ ಕೆಲ ವಾಕ್ಯಗಳು ಏಕಪಾತ್ರಾಭಿನಯ ಮಾಡಲು ಸಿಕ್ಕಿದ್ದವು. ತಲೆ ಬಿರುಹುಯ್ದುಕೊಂಡು ಕಣ್ಣುಗಳನ್ನು ಅಗಲ ಮಾಡಿಕೊಮಡು ನಮ್ಮ ಸರೋಜ ಮಿಸ್ ಮಾಡಿದ್ದ ಮೇಕಪ್‌ನೊಂದಿಗೆ “ನಾನು ರಕ್ತಾಕ್ಷಿ” ಎಂದು. ರಂಗಕ್ಕೆ ಬಂದಾಗ ಎದ್ದ ಕರತಾಡನಗಳ ಸದ್ದು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಅಂಥ ಅದ್ಭುತ ತರಬೇತಿಯನ್ನು ನಮ್ಮ ಅಧ್ಯಾಪಕಿ ನನಗೆ ನೀಡಿದ್ದರು.

ಕುಪ್ಪಳ್ಳಿಯಲ್ಲಿ ೨೭, ೨೮, ೨೯ ರಂದು ನಡೆದ ಮೂರು ದಿನಗಳ ಮಹಿಳಾ ವಿಚಾರ ಮಂಥನದಲ್ಲಿ ಭಾಗವಹಿಸಿದ್ದ ನನಗೆ ಎರಡು ಆಶ್ಚರ್ಯಗಳು ಕಂಡವು. ಒಂದು ಕುವೆಂಪು ಅವರನ್ನು ‘ಹೆಣ್ಣು’ ಎಂದದ್ದು, ಇನ್ನೊಂದು ‘ಸ್ತ್ರೀ ಸ್ವಾತಂತ್ರ್ಯ ವಿರೋಧಿ’ ಎಂದದ್ದು. ‘ನಾಶ’, ‘ನಿರ್ಮಾಣ’ ಎನ್ನುವ ಪ್ರಜ್ಞೆ, ‘ಕಾಲಘಟ್ಟ’ ಎನ್ನುವ ಸೂಚನೆಗಳೂ ಈ ಮೂರು ದಿನಗಳ ವಿಚಾರ ಮಂಥನದಲ್ಲಿ ಮೂಡಿ ಬಂದವು.

ಹಾಗೆ ನೋಡಿದರೆ…. ಕುವೆಂಪು ಅವರು ತಮ್ಮ ಸಾಹಿತ್ಯ ರಚನೆಯ ಉತ್ತುಂಗ ಶ್ರೇಣಿಯಲ್ಲಿದ್ದಾಗಲೂ ಇಂಥವನ್ನೆಲ್ಲ ಎದುರಿಸಿದರವೇ! ಪಕ್ಷಿ ಸಾಲು ಕಂಡು, ‘ದೇವರು ರುಜು ಮಾಡಿದನು, ರಸವಶನಾಗುತ ಕವಿ ಅದ ನೋಡಿದನು’ ಎಂದವರೇ ‘ಇಲ್ಲಿ ಹುಗಲಿಲ್ಲ ನಿನಗೆ ಓ ಬಿಯದ ಇದು ಪಕ್ಷಿಕಾಶಿ’ ಎಂದು ವಿಮರ್ಶಕರನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದವರು.

ಏಕಿಂತು ಕುದಿಯುತಿಹೆ ಓ ಪ್ರಾಣ ಪುರುಷ
ಲೋಕಮಾತೆಯ ವಕ್ಷದಲಿ ಸುರಕ್ಷಿತ ನಿನ್ನ ಹರುಷ

ಎಂದ ಪುಟ್ಟಪ್ಪನವರ ನಾಡಗೀತೆಯಲ್ಲಿ ಒಬ್ಬ ಮಹಿಳೆಯ ಹೆಸರೂ ದಾಖಲಾಗಿಲ್ಲ ಎಂಬ ಆಕ್ಷೇಪಣೆಯೂ ಈ ಎರಡು ದಿನಗಳ ವಿಚಾರ ಮಂಥನದಲ್ಲಿ ಮೂಡಿ ಬಂತು.

ಒಟ್ಟಾರೆ…. ಜೈನ ಸಿದ್ಧಾಂತದ ಅನೇಕಾಂತವಾದದ ಪುಷ್ಠೀಕರಣ ಅದಕ್ಕೆ ಮೂಲ ಹೇತುವಾಗಿ ಯುಗ ಪುರುಷ, ಜಗದ ಕವಿ ಗುರಿ ಆದದ್ದು ಅವರ ಸಾಹಿತ್ಯದ ಅಧ್ಯಯನ ತೆರೆದುಕೊಳ್ಳುತ್ತಿರುವ ಅರ್ಥಾಂತರನ್ಯಾಸಗಳಿಗೆ ಬಯಲಾಗಿತ್ತು.

ರಾಷ್ಟ್ರಕವಿ, ಜಗದ ಕವಿ, ಯುಗದ ಕವಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಸಾಹಿತ್ಯ ರಚಿಸುತ್ತಿದ್ದ ಅಧ್ಯಾಪಕರಾಗಿ ಕುಲಪತಿಗಳಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೆ, ತಮಗೆ ತಾವೇ ದಂತಕತೆಯಂತೆ ಆದವರು ಕುವೆಂಪು. ಅಸಂಖ್ಯ ಮಾರ್ಗಗಳು ಅವರ ಹೆಸರನ್ನು ಹೊತ್ತವು, ಅನೇಕ ಬಡಾವಣೆಗಳು ಅವರ ಹೆಸರಿನಲ್ಲಿ ತಲೆ ಎತ್ತಿದವು. ವಿಶ್ವವಿದ್ಯಾಲಯವೇ ಅವರ ಹೆಸರನ್ನು ತನ್ನ ಶಿರದಲ್ಲಿ ಧರಿಸಿತ್ತು. ಈ ಅಪರೂಪದ ಸೌಭಾಗ್ಯವನ್ನು ತಮ್ಮ ಜೀವಿತ ಕಾಲದಲ್ಲೆ ಪಡೆದವರು ಶ್ರೀ ಕುವೆಂಪು. ತೊಲಗಾಚೆ ಕೀರ್ತಿಶನಿ’ ಎಂದು ಸಾರಿದರೂ, ಅರಸಿಕೊಂಡು ಬಂದ ಬಿರುದುಗಳು, ಬಿನ್ನವತ್ತಳೆಗಳು, ಡಾಕ್ಟರೇಟುಗಳು ತಮ್ಮನ್ನು ತಾವೇ ‘’‘ಧನ್ಯ’ ಎನಿಸುವಷ್ಟರ ಮಟ್ಟಿಗೆ ಪವಾಡ ಪುರುಷರೇ ಆದರು. ತೀರ್ಥಹಳ್ಳಿಯ ಪುಟ್ಟಗ್ರಾಮ ಕುಪ್ಪಳ್ಳಿಯ, ಮಲೆನಾಡಿನ, ಪುಟ್ಟಪ್ಪನವರ ತಾನು ಹುಟ್ಟಿದ ನಾಡಿಗೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದು ಕೊಟ್ಟುದೇ ಅಲ್ಲದೆ, ಜಾಗತಿಕ ಯಾತ್ರಾಸ್ಥಳವನ್ನಾಗಿಯೂ ಅದಕ್ಕೆ ಖ್ಯಾತಿ ತಂದುಕೊಟ್ಟರು. ಕುವೆಂಪು ಅಂಥ ಮಗನನ್ನು ಪಡೆದು ಪುನೀತಳಾದೆ ಎಂದು ಆ ಭೂದೇವಿ ಭಾವಿಸಿದರೆ, ಸಪ್ತತತ್ವಗಳನ್ನೂ, ವಿಶ್ವಮಾನವ ಸಂದೇಶವನ್ನೂ ನೀಡಿದ ಕುವೆಂಪು ಮುಂದಿನ ಶತಮಾನಗಳಲ್ಲಿ ದೇವರೆಂದು, ದೈವವೆಂದು ಪೂಜಿಸಲ್ಪಟ್ಟರೆ, ಅದು ಖಂಡಿತ ಅತಿಶಯದ ಮಾತಲ್ಲ!

ವಿಭೂತಿ ಪುರುಷ ಪುಟ್ಟಪ್ಪನವರು ಇಟ್ಟ ಹೆಜ್ಜೆ ಎಲ್ಲ. ಐರಾವತವೇ, ಕಾವ್ಯಭಾಷೆ, ವ್ಯಾವಹಾರಿಕ ಭಾಷೆ, ರಗಳೆಯ ಭಾಷೆ, ಮುಕ್ತಭಂದದ ಭಾಷೆ, ಲೋಕಭಾಷೆ, ಗದ್ಯ ಶೈಲಿ….. ಭಾಷಾಧ್ಯಯನದ ಹಲವು ದಿಕ್ಕುಗಳಿಗೆ, ವ್ಯಾಕರಣದ ನೂರಾರು ಹಾದಿಗಳಿಗೆ, ಮಾನವೀಯತೆಯ ಅನಂತ ಮುಖಗಳಿಗೆ ಅಭಿವ್ಯಕ್ತಿಯ ಹಾದಿ ನೀಡಿದ ನಾಡೋಜ ಕುವೆಂಪು ಮುಟ್ಟದ ಸಾಹಿತ್ಯ ‌ಪ್ರಕಾರವಿಲ್ಲ….. ಬಳಸದ ಶೈಲಿ ಇಲ್ಲ, ನೀಡಿದ ಛಂದಸ್ಸುಗಳಿಗೆ ಸಾಟಿ ಇಲ್ಲ…. ಕನ್ನಡಕ್ಕೆ ತಂದು ಕೊಟ್ಟ  ಸ್ಥಾನಮಾನಗಳಿಗೆ ಲೆಕ್ಕವೇ ಇಲ್ಲ. ಅದರ ಶಕ್ತಿಯ ಪರಿಚಯವಾಗಬೇಕಾದರೆ ಇವರ ಬರವಣಿಗೆಯ ಪರಿಚಯವಿಲ್ಲದೆ ಸಾಧ್ಯವೇ ಇಲ್ಲ.

‘ಮಿಂಚುತಿರ್ದುದು ಜಿಂಕೆಮರಿ, ಗಿರಿಯ ಕಂದರದ ಸುಂದರಾ
ಭೋಗದಲಿ, ಹಸಿರು ಹಿನ್ನೆಲೆಯಲಿ, ಹೊನ್ನ ಹನಿಯಂತೆ’

ಎಂಬ ಸುಂದರ ವರ್ಣಣೆ ಕೊಟ್ಟವರೇ

“ನೀ ಮೆಟ್ಟುವ ನೆಲ ಅದೆ
ಕರ್ನಾಟಕ, ನೀ ಮುಟ್ಟುವ ಜಲ ಕಾವೇರಿ”

ಎಂದುದಷ್ಟೇ ಅಲ್ಲ, ‘ಕನ್ನಡ ಗೋವಿನ ಓ ಮುದ್ದಿನ ಕರು, ಕನ್ನಡತನವೊಂದಿದ್ದರೆ ನೀ ನೆಮಗೆ ಕಲ್ಪತರು’ ಎಂದು ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂದು ಘೋಷಿಸಿದರು.

ಸಾಹಿತ್ಯದ ವಿದ್ಯಾರ್ಥಿ ಆಗಿ ಕನ್ನಡ ಎಂ.ಎ ತರಗತಿಗೆ ನಾನು ಸೇರಿಕೊಂಡಾಗ ಕುವೆಂಪು, ಕೆಎಸ್‌ನ, ಗೋಪಾಲಕೃಷ್ಣ ಅಡಿಗ ಮತ್ತು ಬೇಂದ್ರೆ ಅವರನ್ನು ವಿಶೇಷ ಕವಿಗಳನ್ನಾಗಿ ಅವರವರ ವಿಶಿಷ್ಟ ಕಾವ್ಯಕೃತಿಗಳ ಅಭ್ಯಾಸದೊಂದಿಗೆ ಅಧ್ಯಯನ ಮಾಡಬೇಕಾದ ಸಂದರ್ಬ ಒದಗಿಬಂದಾಗ ಮತ್ತೆ ನನ್ನ ಎದುರಾಗಿ ನಿಂತು ತಮ್ಮ ಕೃತಿಗಳಿಂದ, ಕವನಗಳಿಂದ, ಕಾದಂಬರಿಗಳಿಂದ ಕಾಡಿದವರು ಶ್ರೀ ಪುಟ್ಟಪ್ಪನವರು. ಅರ್ಥ ನಿಕಷಕ್ಕೆ ಒಡ್ಡಿ ಅದು ಮೈದೋರಿದಾಗ ಆಗುತ್ತಿದ್ದ ಆನಂದಕ್ಕೆ ಬೆರಗಿಗೆ ಎಣೆ ಇರಲಿಲ್ಲ. ಪರಂಪರೆಯೊಂದರೆ ಜನಕರೇ ಅವರು ಎಂಬುದು ಅರ್ಥವಾಗುವಷ್ಟರ ಹೊತ್ತಿಗೆ ವೈಯಕ್ತಿಕವಾದ ರಭಿರುಚಿಯಿಂದಲೇ ಕುವೆಂಪು ಕೃತಿಗಳನ್ನು ಅಧ್ಯಯನ ಮಾಡುತ್ತಿದ್ದೆ. ನನ್ನ ಈ ಓದು ಅಧ್ಯಯನದ ತೃಷೆಗೆ ನನ್ನ ತಂದೆ ಪೋಷಣೆ ಕೊಟ್ಟರು. ತರಗತಿಗಳಿಗಿಂತ ಹೆಚ್ಚಾಗಿ ನನ್ನ ತಾಯಿ ಪ್ರತಿನಿತ್ಯ ಅವರ ನಾಟಕಗಳನ್ನು ‘ರಾಮಾಯಣ ದರ್ಶನಂ’ವನ್ನು ಓದಿ ಅರ್ಥ ಹೇಳುತ್ತಿದ್ದರು. ನಮ್ಮ ಮನೆಯಲ್ಲಿ ಸಂಜೆ ಏಳರಿಂದ ಎಂಟರವರೆಗೆ ನನ್ನ ತಾಯಿ ಈ ಬಗೆಯ ಓದು, ಅರ್ಥ ಹೇಳುವಿಕೆಯಿಂದ ಪಂಪ ಮಹಾಕವಿಯ ಆದಿಪುರಾಣ, ನೇಮಿ ಜಿನೇಶ ಸಂಗತಿ, ಭರತೇಶವೈಭವ, ‘ರಾಮಾಯಣ ದರ್ಶನಂ’ಗಳು ಚಿತ್ತದಲ್ಲಿ ಅಚ್ಚು ಒತ್ತಿದ ಹಾಗೆ ಮುಡಿದವು.

ದೇಶದಲ್ಲಿ ಸ್ವಾತಂತ್ರ್ಯದ ಆಂದೋಲನ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ಭಾಷೆ ಎಂದರೆ ಇಂಗ್ಲಿಷ್‌ಎಂಬ ಮಹಾಸದ್ದಿನಲ್ಲಿ ತೀರ ಅಲಕ್ಷ್ಯಕ್ಕೊಳಗಾಗಿದ್ದ ಕನ್ನಡ ತಾಯಿಗೆ ತಮ್ಮ ಸುಪುಷ್ಟವಾದ ಅಭಿವ್ಯಕ್ತಿಯಿಂದ ಗಟ್ಟಿಯಾದ ನೆಲೆಯನ್ನು ಒದಗಿಸಿಕೊಟ್ಟವರು ಪುಟ್ಟಪ್ಪನವರು. ಭಾವಗೀತೆ, ನಾಟಕ, ಖಂಡ ಕಾವ್ಯ, ಮಹಾಕಾವ್ಯ, ಮಕ್ಕಳ ನಾಟಕಗಳು, ಬೃಹತ್ ಕಾದಂಬರಿಗಳು, ಕಿಂದರಿ ಜೋಗಿಯಂಥ ಸ್ಫೂರ್ತಿಯಿಂದ ಹೊಮ್ಮಿದ ಕಥನ ಕವನಗಳು….. ಕನ್ನಡದ ವಲಯವನ್ನೇ ತಮ್ಮ ಪ್ರಕಾರಗಳ ಸಂಖ್ಯೆಯಿಂದ ಹಿಗ್ಗಿಸಿದವರು ಕುವೆಂಪು. ತೌಲನಿಕ ಅಧ್ಯಯನದ ಕಲ್ಪನೆಯನ್ನು ಹುಟ್ಟುಹಾಕಿದ ಕುವೆಂಪು ವಿದ್ಯಾರ್ಥಿಗಳಾಗಿದ್ದ ನಮಗೆ ಒಂದು ದೊಡ್ಡ ಕೌತುಕ, ದ್ರಷ್ಟಾರ. ಆ ಕಣ್ಬೆಳಿನಲ್ಲಿ ಅವರು ಇಟ್ಟ ಹೊಸ ಹೆಜ್ಜೆಗಳ ಜಾಡಿನಲ್ಲಿ ನಾವು ಹೆಜ್ಜೆ ಊರಲು ಪ್ರಯತ್ನಿಸುತ್ತಲೇ ಸಾಹಿತ್ಯದ ಪ್ರಪಂಚದೊಳಗೆ ಕಾಲಿರಿಸಿದೆವು.

ವರ್ಣನೆಯ ವೈಖರಿ ವಿತ್ರ ಕಟ್ಟಿ ಕೊಡುವ ಜಾದೂ, ತಮ್ಮ ಊರು ಕುಪ್ಪಳ್ಳಿಯನ್ನೇ ಅವರು ವರ್ಣಿಸಿದರುವ ಬಗೆ

ತೀರ್ಥಹಳ್ಳಿಯ ಕಳೆದು ತಾಯಿ ತುಂಗೆಯ ದಾಟಿ
ಒಂಭತ್ತು ಮೈಲಿಗಳ ದೂರದಲಿ ನಮ್ಮೂರು
ಕುಪ್ಪಳ್ಳಿ ಊರಲ್ಲ ನಮ್ಮ ಮನೆ, ನಮ್ಮ ಕಡೆ
ಊರೆಂದರೊಂದೆ ಮನೆ ಪಡುವೆಟ್ಟಗಳ ನಾಡು
ದಟ್ಟವಾದಡವಿಗಳು ಕಿಕ್ಕಿರಿದ ಮಲೆನಾಡು
ಸುತ್ತಲೂ ಎತ್ತರದ ಬೆಟ್ಟಗಳು, ಕಾಡುಗಳು
ಎತ್ತ ನೋಡಿದರತ್ತ ಸಿರಿ ಹಸಿರು ಕಣ್ಣುಗಳಿಗಾನಂದ
ಮೇಣಾತ್ಮಕೊಂದೊಸೆಗೆ

ಹೀಗೆ ಥಟ್ಟನೆ ವರ್ಣನೆಯೊಡನೆ ಅಧ್ಯಾತ್ಮ ಮೇಳೈಸುವ ಕುವೆಂಪು ಬರವಣಿಗೆಯ ಶೈಲಿ ವೈಶಿಷ್ಟ್ಯಪೂರ್ಣವಾದದ್ದು, ಮಹಾಕವಿ ಪಂಪ, ರತ್ನಾಕರನನ್ನು ನೆನಪಿಸುವಂಥದ್ದು.

ಬದುಕು, ಆಧ್ಯಾತ್ಮ, ದೈವ, ಜಾತಿ, ಮತ, ಪಂಥ, ಆಚಾರ ಪದ್ಧತಿ ಎಲ್ಲವನ್ನೂ ಆಳವಾದ ನಿಕಷಕ್ಕೆ ಒಡ್ಡಿ ಹೊಸತಾದ ಆವಿಷ್ಕಾರವನ್ನು, ಅರ್ಥವನ್ನು, ಸಿದ್ಧಾಂತವನ್ನು, ಮಾವನ ಜನಾಂಗಕ್ಕೆ ನೀಡಿದ ಪುಟ್ಟಣ್ಣನವರು “ಓ ನನ್ನ ಚೇತನ”ದ ಮುಖಾಂತರ “ಅನಂತ, ನೀ ಅನಂತವಾಗಿರು” ಎಂಬ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡುದಷ್ಟೇ ಅಲ್ಲ, ನಮಗೂ ಆ ದರ್ಶನವನ್ನು ನೀಡಿ, ಅನಂತ ದರ್ಶನ ಸುಖವನ್ನು ಪ್ರಾಪ್ತ ಮಾಡಿಕೊಂಡವರು. ಅವರ ಸಾಹಿತ್ಯದ ಮೂಲ ಸ್ರೋತ ಅನ್ವೇಷಣೆ ಅದೂ ಯಥಾರ್ಥದ ಅನ್ವೇಷಣೆ. ಚಿಂತನೆಯ ಝರಿಯ ಝಲಕ್‌ಕೂಡ ಅದೇ. ಆ ಹಾದಿಯೇ ಅವರ ಬರವಣೆಗೆಯ ಅರಹು. ಆದಿ ಅಂತ್ಯಗಳಿಲ್ಲದ ಚೇತನದ “ಅನಂತ” ಸ್ವಭಾವ ರಸ ಋಷಿಯ ಮೇಲೆ ಆಗಾಧ ಪರಿಣಾಮ ಬೀರಿತ್ತು. ಸ್ವತಃ ಸಾಕ್ಷಾತ್ಕರಿಸಿಕೊಂಡ ಆ ಸತ್ಯ ನಿತ್ಯವೂ ಕೂಡ.

ಭಾಗ-೩

ನನ್ನ ಮನಸ್ಸು, ಹೃದಯ ತಟ್ಟಿ ನನ್ನ ಉಸಿರಿದುವವರೆಗೆ ಸ್ಥಾಯಿಯಾಗಿ ಉಳಿದಿರುವ ಒಂದು ಅಮೂಲ್ಯವಾದ ನೆನಪು ಈಗ ತೆರೆದುಕೊಳ್ಳುತ್ತಿದೆ. ೧೯೮೩-೧೯೮೪ರ ಸಂದರ್ಭ ಇರಬಹುದು ಅಥವಾ ಒಂದೆರಡು ವರ್ಷ ಆಚೆ ಈಚೆ, ನನ್ನ ‘ಚದುರಂಗ’ರ ಸ್ನೇಹ, ಪತ್ರ ವ್ಯವಹಾರ (ನನಗಿಂತ ಹೆಚ್ಚಾಗಿ ನನ್ನ ಗಂಡನ) ತುಂಬ ಚೆನ್ನಾಗಿದ್ದ ಕಾಲ. ಚದುರಂಗರಿಗೆಂದೇ ಎರಡು ಮೂರು ಬಾರಿ ವಿಶೇಷ ವೈದ್ಯ ತಿನಿಸನ್ನು ಮಾಡಿ ಕಳುಹಿಸುತ್ತಿದ್ದ ಸಮಯವೂ ಕೂಡ. ಪೂಜ್ಯ ಹಾಮಾನಾ ನಮ್ಮ ಆಪ್ತ ವಲಯಕ್ಕೆ ಸೇರಿದವರು. ನಾವು ಮಾನ್ಯ ಚದುರಂಗದ ಮನೆಗೆ ಹೋಗಿ ಮಾತಾಡುತ್ತಿದ್ದ ಸಂದರ್ಭದಲ್ಲಿ ‘ಜನ್ನ’ ಮಹಾಕವಿಯ ‘ಯಶೋಧರ ಚರಿತೆ’ಯ ಪ್ರಸ್ತಾಪ ಬಂತು. ಗಂಟೆಗಟ್ಟಲೆ ವಿಷಯಗಳನ್ನು ಕುರಿತು ಚರ್ಚೆ ಮಾಡುತ್ತ ನಮ್ಮ ಭೇಟಿ ಎಲ್ಲಿಯಾದರೂ, ಯಾರೊಂದಿಗಾದರೂ ಸಾರ್ಥಕ ಪಡಿಸಿಕೊಳ್ಳುತ್ತಿದ್ದ ಮಹಾ ಸುದಿನಗಳು ಅವು. ನನಗಿಂತ ಬೌದ್ಧಿಕವಾಗಿ ಬಹಳ ಎತ್ತರದಲ್ಲಿದ್ದವು ನನ್ನ ಗಂಡ. ಎಷ್ಟು ಸಕ್ರಿಯವಾಗಿ ಅವರು ಚರ್ಚಿಸುತ್ತಿದ್ದರೆಂದರೆ ಮೊನ್ನೆ ಕುಪ್ಪಳ್ಳಿಯಲ್ಲಿ ನಡೆದ ಚರ್ಚಾ ಮಂಥನದಲ್ಲಿ ಅವರ ನೆನಪು ನನ್ನನ್ನು ಬಹುವಾಗಿ ಕಾಡಿತು. ಲೇಖಕಿಯರು ಎತ್ತಿದ ಎಲ್ಲ ಪ್ರಶ್ನೆಗಳಿಗೂ ಕುವೆಂಪು ಬರಹ ಭಂಡಾರದಿಂದಲೇ ಉತ್ತರಿಸುವಷ್ಟು ಪ್ರೌಢರಾಗಿದ್ದವರು ಅವರು.

ನಮ್ಮ ಮಾತು ಕವಿ ಜನ್ನನ ಕಡೆಗೆ ಹೊರಳಿದಾಗ ನಾನು ಹೇಳಿದೆ.

“ಜನ್ನ ಮಹಾಕವಿ. ಕವಿ ಚಕ್ರವರ್ತಿ ಬಿರುದಾಂಕಿತ ಆಗಿದ್ದವನು. ಅವನು ಬರೆದದ್ದು ಯಶೋಧರ ಚರಿತೆ, ಅಮೃತಮತಿಯ ಕತೆಯಲ್ಲ. ಸ್ವತಃ ಜೈನನಾಗಿದ್ದ ಕವಿ ಆತ. ಸಿದ್ಧಾಂತಕ್ಕೆ ವಿರುದ್ಧವಾಗಿ ಏನನ್ನೂ ಬರೆಯಲಾರ. ಅಜೈನರಾಗಿದ್ದ ಯಶೋಮತಿ (ಯಶೋಧರ ರಾಜನ ತಾಯಿ) ಮತ್ತು ಅಮೃತಮತಿ (ಯಶೋಧರನ ಪತ್ನಿ) ಯೆಂಬ ಇಬ್ಬರು ಮಹಿಳೆಯರ ನಡುವೆ ಸಿಲುಕಿ ನಲುಗಿದ ಕತೆ” ಆಗ ಪೂಜ್ಯ ಚದುರಂಗರು ಕೇಳಿದರು.

“ಅದು ಹೇಗೆ ಇಬ್ಬರೂ ಅಜೈನರೆಂದು ಹೇಳುತ್ತೀರಿ”?

“ಕಾವ್ಯದಲ್ಲೇ ಅದಕ್ಕೆ ಆಧಾರ ಇದೆ. ‘ಗುರುವಿನಲಂಘ್ಯ ವಚನ, ಎಂದು ಪ್ರಾಣಿ ಬಲಿಯ ವಿಚಾರದಲ್ಲಿ ಯಶೋಮತಿ ಹೇಳುತ್ತಾನೆ. ಜೈನ ಗೃಹಸ್ಥನಿಗೇ ಹಿಂಸೆ ನಿಷಿದ್ಧ. ‘ಅಹಿಂಸಾ ಪರಮೋಧರ್ಮ, ಎಂದು ಪಂಚಾಣುವ್ರತಗಳಲ್ಲಿ ಮೊದಲ ಸ್ಥಾನವನ್ನು ಅಹಿಂಸೆಗೆ ಕೊಟ್ಟದ್ದು ಜೈನಧರ್ಮ. ಅಂತಹುದರಲ್ಲಿ ಒಬ್ಬ ಜೈನ ಗುರುತಿನ ಬಾಯಿಂದ ಪ್ರಾಣಿ ಬಲಿಯ ಪ್ರಸ್ತಾಪ ಹೇಗೆ ಬರಲು ಸಾಧ್ಯ”? ಜೈನ ಸಿದ್ಧಾಂತವಲ್ಲದ ಗುರು ಯಶೋಮತಿಗೆ ಗುರುವಾಗಲು ಹೇಗೆ ಸಾಧ್ಯ”?

ಮತ್ತೂ ಮುಂದುವರೆಸಿ ಹೇಳಿದೆ

“ಸನ್ಮಾನ್ಯ ಶ್ರೀ ಎಲ್. ಆರ್. ಹೆಗ್ಗಡೆ ಅವರ ಜಾನಪದ ಕಥಾ ಸಂಗ್ರಹದ ಬೃಹತ್ ಹೊತ್ತಿಗೆಯಲ್ಲಿ ಅಮೃತಮತಿಯ ಕಥಾ ಪ್ರಸಂಗ ಅಡಕವಾಗಿದೆ. ಅದರಂತೆ ಅಮೃತಮತಿಯ ಅಪೂರ್ವಲಾವಣ್ಯಕ್ಕೆ ಮನಸೋತ ರಾಜ ತನ್ನ ಅಧಿಕಾರ ಬಲದಿಂದ ಅವಳನ್ನು ತನ್ನ ಸೊತ್ತನ್ನಾಗಿ ಮಾಡಿಕೊಳ್ಳುತ್ತಾನೆ. ತಾನು ಚಿಕ್ಕಂದಿನಿಂದ ಪ್ರೀತಿಸಿದ ಗೆಳೆಯನನ್ನು ಅನಿವಾರ್ಯವಾಗಿ ಬಿಟ್ಟು ಕೊಡಬೇಕಾದುದರಿಂದ ಅಮೃತಮತಿ ಎಂದೂ ರಾಜನನ್ನು ಪ್ರೀತಿಸುವುದಿಲ್ಲ ಮಾವಟಿನಾಗಿ ಬಂದು ಅರಮನೆಗೇ ಸೇರಿಕೊಂಡು ಹಾಡಿದ ಮಾವಟಿಗನ ಹಾಡಿಗೆ ಅವಳು ಸೋತದ್ದಲ್ಲ. ಅವನ ದನಿ ಗುರುತಿಸಿ ಸೋತದ್ದು. ಹೀಗೆ ತನ್ನ ಕಾಲದ ಜಾನಪದ ಕತೆಯೊಂದನ್ನು ಕಾವ್ಯಕ್ಕೆ ಅಳವಡಿಸಿ ತನ್ನ ಕಾವ್ಯದ ಉದ್ದೇಶ ನೆರವೇರಿಸಿಕೊಂಡವನು ಜನ್ನ ಚಕ್ರವರ್ತಿ.

“ಇದನ್ನು ಕೇಳಿದರೆ ಕುವೆಂಪು ಅದೆಷ್ಟು ಸಂತೋಷಿಸುವರೋ ನಾನಂತೂ ಕಾಣೆ. ಇಂದಿಗೂ ಅವರನ್ನು ಅಮೃತಮತಿಯ ಪಾತ್ರ, ಜನ್ನಕವಿ ಕಾಡುತ್ತಲೇ ಇದ್ದಾರೆ”. ಎಂದು ಚದುರಂಗರು ತಕ್ಷಣ ಪುಟ್ಟನವರಿಗೆ ಫೋನ್‌ಮಾಡಿ ಮಾತಾಡಿದರು. “ಸಂಜೆ ನಾನು ರಾಷ್ಟ್ರಕವಿಗಳ ಮನೆಗೆ ಹೋಗಿ ಈ ಕುರಿತು ಮಾತಾಡಿ ಬರುತ್ತೇನೆ. ನಿಮಗೆ ನಾಳೆ ಸಂಜೆ ನಾಲ್ಕು ಗಂಟೆ ಭೇಟಿಗೆ ಅವಕಾಶ ನೀಡಿದ್ದಾರೆ” ಎಂದು ಚದುರಂಗರು ಹೇಳಿದಾಗ ನನಗಾದ, ಆಶ್ಚರ್ಯ, ಸಂಭ್ರಮಗಳಿಗೆ ಎಣೆಯೇ ಇರಲಿಲ್ಲ. ಅಲ್ಲಿಯೇ ಕುಣಿದು ಕುಪ್ಪಳಿಸುವಂತೆ ಆಯಿತು.

ಭಾಗ-೪

ಉದಯರವಿಯ ಗೇಟು ತೆಗೆದು ನಾವು ರಾಷ್ಟ್ರಕವಿಯ ಮನೆಯ ಒಳಗೆ (ಬಾಗಿಲು ತೆರೆದಿತ್ತು) ಹೆಜ್ಜೆ ಇರಿಸುತ್ತಿದ್ದಂತನೆಯೇ… (ಗಂಟೆ ಸರಿಯಾಗಿ ೪ ಸಂಜೆ) ರಸ ಋಷಿ ಶ್ವೇತವಸ್ತ್ರಧಾರಿಯಾಗಿ ಎದುರು ಬಂದು. ನಾನು ಅವರ ಪಾದ ಮುಟ್ಟಿ ನಮಸ್ಕರಿಸಿದೆ. ವರಾಂಡದ ಒಂದು ಪಕ್ಕ ಒಳಭಾಗಕ್ಕೆ ಹೋಗಿ ಅವರು ಕುಳಿತ ನಂತರ ನಾವು ಕುಳಿತೆವು. ವಿಷಯಗಳು ಒಂದಾದ ಮೇಲೆ ಒಂದರಂತೆ ನನ್ನ ಗಂಡ ಮತ್ತು ಅವರ ನಡುವೆ ನಡೆಯಿತು. ಶ್ರೀ ಎಲ್.ಆರ್. ಹೆಗ್ಗಡೆ ಅವರ ಜಾನಪದ ಕಥಾ ಸಂಕಲನದ ವಿಷಯ ಮಾತ್ರವಲ್ಲ, ಅವರ ಆಪ್ತ ಶಿಷ್ಯರಾದ ಶ್ರೀ ದೇಜಗೌ ಮತ್ತು ಡಾ. ಹಾಮಾನಾ ಅವರ ಬಗೆಗೂ ಪ್ರಚಲಿತ ಸಾಹಿತ್ಯ, ವಿಜ್ಞಾನ, ವಿಮರ್ಶೆಗಳ ಬಗೆಗೂ ಕುವೆಂಪು ಅವರು ಮಾತನಾಡಿದರು. ನನ್ನ ಬರವಣಿಗೆಯ ಬಗೆಗೂ ಸಾಕಷ್ಟು ವಿಷಯ ಕೇಳಿ ತಿಳಿದುಕೊಂಡರು. ಕಾವ್ಯದೆಡೆಗೆ ಮಾತು ಹರಳಿದಾಗ ಮಲೆನಾಡಿನವರೇ ಆದರು ಪುಟ್ಟಪ್ಪನವರು. ತನ್ನ ಕವನ ಸಂಕಲನವನ್ನು ತೆಗೆದುಕೊಂಡರು. ಒಂದೊಂದೆ ಕವಿತೆ ಆರಿಸಿ ಓದತೊಡಗಿದರು. ನಮಗೆ ಹಬ್ಬ, ಅವರಿಗೆ ಆನಂದ. ಆ ಅನುಭೂತಿಯ ಕ್ಷಣಗಳನ್ನು ಅನುಭವಿಸಿಯೇ ಆನಂದಿಸಲು ಸಾಧ್ಯ. ಪೂಜ್ಯ ಕುವೆಂಪು ಅವರು ಆ ಕ್ಷಣ ನಮ್ಮನ್ನೇ ತಾವು ಮರೆತ ಹಾಗಿತ್ತು.

ಎದೆಗೆ ಎದೆ ಒತ್ತಿಟ್ಟು
ತುಟಿಗೆ ತುಟಿ ಮುತ್ತಿಟ್ಟು
ಕೆನ್ನೆ ಕೆನ್ನೆಯಾ ಕಚ್ಚಿ
ಸವಿ ಸವಿದೆ, ಪ್ರೇಮರಸವೆರೆದ….

ಈಗಲೂ ಅವರು ಓದಿದ ಬಗೆ…. ಆ ಧ್ವನಿ…. ಆ ಕಣ್ಣುಗಳಲ್ಲಿ ಹೊಮ್ಮಿದ ಕಾಂತಿ ನನ್ನ ಕಣ್ಣಿಗೆ ಕಟ್ಟಿದಂತಿದೆ. ದನಿ ಮಾರ್ದನಿಗೊಳ್ಳುತ್ತಿದೆ. ಓದುತ್ತ ಓದುತ್ತ ಅವರು ಕುಳಿತಲ್ಲಿಂದ ಎದ್ದರು. ನಿಂತು ಓದಿದರು. ಓಡಾಡುತ್ತಾ ಓದಿದರು. ನಮ್ಮಂಥ ಕೇಳುಗರು ಅವರಂಥ ಸದ್ಗುರುಗಳು ಇದೂ ಒಂದು ಸೌಭಾಗ್ಯ….

ಕಡಿಮೆ ಎಂದರೂ ಹತ್ತು ಪದ್ಯಗಳನ್ನಾದರೂ ಅವರು ಓದಿದರು. ಮಾತು ಮತ್ತೆ ‘ಮಂತ್ರಮಾಂಗಲ್ಯ’, ‘ಸಪ್ತ ತತ್ವ’ಗಳೆಡೆ ಹೊರಳಿತು. ಅದೇ ತಾನೆ ಕೆಲದಿನಗಳ ಹಿಂದೆ ಬೆಂಗಳೂರಿನವರೊಬ್ಬರು ೨೦೦೦ ಪ್ರತಿ ಮುದ್ರಿಸಿ ಹಂಚಿದರು ಎಂದು ರಾಷ್ಟ್ರಕವಿ ಹೇಳಿದಾಗ.

“ಮುದ್ರಿಸಲು ತಮ್ಮ ಒಪ್ಪಿಗೆ ಇದೆಯೆ”? ಎಂದು ಕೇಳಿದೆವು.

“ಮುದ್ರಿತ ಪ್ರತಿ ‘ಉದಯರವಿ’ಗೆ ಹತ್ತು ಪ್ರತಿ ತಲುಪಿಸಬೇಕು ಎಂಬುದೊಂದೆ ಅದಕ್ಕೆ ನಿಯಮ” ಎಂದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಹಾ.ಮಾ.ನಾ. ಬಗೆಗೆ, “ಸೂಕ್ತ ಜಾಗಕ್ಕೆ ಅರ್ಹ ವ್ಯಕ್ತಿ” ಎಂದರು. ಜಾನಪದ ಕತೆಗಳನ್ನು ಮಕ್ಕಳಿಗೆ ಹೇಳುವಾಗ ವಿಕಾಸಗೊಂಡ ವೈಜ್ಞಾನಿಕ ಅನ್ವೇಷಣೆಗೆ ತಕ್ಕ ಹಾಗೆ, ಬದಲಿಸಿಕೊಂಡು ಹೇಳಬೇಕು, ಕುತೂಹಲ ಉಳಿಯಬೇಕೆ ಹೊರತು ಅನುಮಾನ, ಪ್ರಶ್ನೆಗಳು ಉಳಿಯಬಾರದು ಎಂದರು ಕುವೆಂಪು.

ಈ ವೇಳೆಗೆ ಎರಡು ಬಾರಿ ನಮಗೆ ಕಾಫೀಯ ಸರಬರಾಜಾಗಿತ್ತು. ವೇಳೆ ಸರಿಯುತ್ತಿದ್ದುದರ ಅರಿವು ನಮಗೆ ಇರಲಿಲ್ಲ. ಕುವೆಂಪು ಅವರು ಮಾತಾಡುತ್ತ ಉದಯರವಿಯ ಹೆಬ್ಬಾಗಿಲ ಬಳಿ ಒಳ ಭಾಗದಲ್ಲಿ ನಿಂತಿದ್ದರು. ಸಪ್ತ ತತ್ವಗಳು, ಓ ನನ್ನ ಚೇತನ ಅಚ್ಚಾಗಿದ್ದ ಪ್ರತಿಗಳನ್ನು ನಮಗೂ ಕೊಟ್ಟರು, ಅದರ ಪ್ರಚಾರದ ಅಗತ್ಯವನ್ನೂ ಕುರಿತು ಹೇಳಿದರು.

ಕಡೆಗೂ ವಿದಾಯ ಹೇಳಬೇಕಾಯಿತು. ಸಂಜೆಗತ್ತಲು ಆವರಿಸುತ್ತಿತ್ತು. ಒಳಗಿನಿಂದ ಪ್ರತೀಕ್ಷೆ ಜೋರಾಗಿತ್ತು. ನಾವು ಮತ್ತೆ ಅವರಿಗೆ ನಮಸ್ಕರಿಸಿ ಆಚೆ ಬಂದೆವು. ನಾವು ಗೇಟು ತೆರೆದು ಆಚೆ ಬರುವವರೆಗೂ ಕುವೆಂಪು ಬಾಗಿಲ ಬಳಿ ಇದ್ದರು. ಈ ಅನುಭವ ಎಷ್ಟು ಜನರಿಗಾಗಿದೆಯೋ ನನಗೆ ತಿಳಿದಿಲ್ಲ. ಆದರೆ, ನನ್ನನ್ನು ಇಂದಿಗೂ ಆ ಅನುಭೂತಿಯಲ್ಲಿ ಉಳಿಯುವಂತೆ ಮಾಡಿದ ಆ ಆನಂದದ ಸಂದರ್ಭ ಮತ್ತು ಅದಕ್ಕೆ ಕಾರಣರಾದ ಪೂಜ್ಯ ಚದುರಂಗರನ್ನು ಇಂದಿಗೂ ನನ್ನೊಳಗೆ ಬೆಚ್ಚಗೆ ಕಾಪಾಡಿಕೊಂಡಿದ್ದೇನೆ. ಸಾಹಿತ್ಯದ ಹರಿಕಾರರಾಗಿ, ಹೊಸಗನ್ನಡ ಗದ್ಯ, ಕಾವ್ಯ, ಮಹಾಕಾವ್ಯ, ನಾಟಕ, ಆತ್ಮಚರಿತ್ರೆ, ಭಾವಗೀತಾ ಪರಂಪರೆ, ಸಾಹಿತ್ಯ ವಿಮರ್ಶೆ, ಗದ್ಯ ಕಾವ್ಯ, ದಾರ್ಶನಿಕತೆ…. ಯಾವುದು ಮಹಾಕವಿ ಕುವೆಂಪು ಮುಟ್ಟದ ಕ್ಷೇತ್ರಗಳು….? ಅಷ್ಟೇ ಅಲ್ಲ…. ಆಯಾ ಕ್ಷೇತ್ರಗಳಲ್ಲಿ ಮಾದರಿ ಶಿಲ್ಪಿಗಳಾಗಿ ಹೊಸತನ, ಹೊಸ ಅರಿವು, ಹೊಸ ಆಯಾಮ ಹುಟ್ಟು ಹಾಕಿದ ದ್ರಷ್ಟಾರರು ಅವರು.

ಈ ಭವ್ಯ ಚೇತನದ ಆಶಯ, ಅನಿಕೇತನದಲ್ಲಿ ಬಿಂಬಿಸಿರುವ ಹಾಗೆ ಎಲ್ಲವನ್ನೂ ಮೀರಿದ…. ಎಲ್ಲವನ್ನೂ ಒಳಗೊಂಡ…. ಅನಂತ….. ಅದು ಅನಂತವೇ….

* * *