ತನ್ನ ನಂತರದ ತಲೆಮಾರಿನವರನ್ನು ತೀವ್ರವಾಗಿ ಪ್ರಭಾವಿಸಿದ ಕೆಲವೇ ಕೆಲವು ಸಾಹಿತ್ಯ ಪ್ರತಿಭೆಗಳಲ್ಲಿ ಕುವೆಂಪು ಪ್ರಮುಖರು. ಕುವೆಂಪು ಅವರ ಸಮಗ್ರ ಸಾಹಿತ್ಯ ಶರಧಿಯನ್ನು ಗಮನಿಸಿದಾಗ ಅದರಲ್ಲಿ ನಾನಾತರಹ ವಸ್ತು ವಿನ್ಯಾಸಗಳು, ಪ್ರಯೋಗಗಳು ಕಾಣುತ್ತವೆ. ಅವರೇ ಒಂದೆಡೆ ಹೇಳಿದಂತೆ, ಅವರದು ಸಕಾಲ ಸಾಹಿತ್ಯವೂ ಹೌದು, ತ್ರಿಕಾಲ ಸಾಹಿತ್ಯವೂ ಹೌದು. ಕೆಲವೇ ಕೆಲವು ಸಕಾಲವಷ್ಟೇ. ಆದರೆ, ಹೆಚ್ಚಿನವು ಸಕಾಲವೂ ತ್ರಿಕಾಲವೂ ಆಗಿವೆ.

ಬದುಕನ್ನೂ ಸಾಹಿತ್ಯ ಸೃಷ್ಟಿಯನ್ನೂ ತಪಸ್ಸೆಂದು ಭಾವಿಸುವ ಕುವೆಂಪು ‘ಇಲ್ಲಿ ಯಾವುದೂ ಮುಖ್ಯವಲ್ಲ’ ಎನ್ನುತ್ತಲೇ, ಜಗತ್ತು ಯಾವುದನ್ನು ಅಮುಖ್ಯ ಎಂದು ಭಾವಿಸುತ್ತದೋ ಅದರಲ್ಲಿನ ಮಹತ್ತನ್ನು ಅನ್ವೇಷಿಸಿದವರು. ಹೀಗೆ ಅನ್ವೇಷಿಸುವಾಗ ಮಹತ್ತನ್ನೇ ಅಮಹತ್ತಾಗಿಸಿದ ವ್ಯವಸ್ಥೆ, ಸಾಹಿತ್ಯದ ಕುರಿತು ಸಾತ್ವಿಕ ಸಿಟ್ಟನ್ನು ಹೊರಹಾಕುತ್ತಲೇ, ಆ ಮಹತ್ತನ್ನು ನೋಡುವ ಬಗೆಯನ್ನು ಸಾಕ್ಷಾತ್ಕರಿಸಿದವರು. ಅಂದರೆ, ಇಂತಹ ಸಂದರ್ಭಗಳನ್ನೆಲ್ಲಾ ಕುವೆಂಪು ಗಮನ ಆ ಚಿಂತನೆಗಳನ್ನು ಮರುರೂಪಿಸುವುದರ ಕಡೆಗೆ, ಹೊಸ ಚಿಂತನೆಗಳನ್ನು ಕಟ್ಟುವುದರ ಕಡೆಗೆ ಇದೆ.

ಹೀಗೆ ಮಾಡುವುದಕ್ಕಾಗಿ ಕುವೆಂಪು ಸಿದ್ಧತೆ ಮಾತ್ರ ಅಪಾರ. ಉಪನಿಷತ್‌ ಮತ್ತು ರಾಮಕೃಷ್ಣ ಪರಮಹಂಸರ ಪ್ರಭಾವ ಕುವೆಂಪು ಮೇಲೆ ಮೇಲ್ನೋಟಕ್ಕೆ ಗೋಚರವಾಗುತ್ತದಾದರೂ, ಇದಲ್ಲದೇ ಸಂಸ್ಕೃತ ಸಾಹಿತ್ಯದ ಓದು ಮತ್ತು ಮರು ಅರ್ಥೈಸುವಿಕೆ, ಆ ಕಾಲದ ಇಂಗ್ಲಿಷ್‌ ಸಾಹಿತ್ಯದ ಓದು ಮತ್ತು ಹೊಸ ನೋಡದ ಆಹಾವಿಸುವಿಕೆ, ಅಲ್ಲದೆ, ಆ ಕಾಲಘಟ್ಟದಲ್ಲಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದ್ದ ಜಾಗತಿಕ ರಾಜಕೀಯ ವಿದ್ಯಮಾನಗಳ ಸೂಕ್ಷ್ಮ ಅವಲೋಕನಗಳಿಂದ ಅವರು ತಳೆಯುವ ರಾಜಕೀಯ ನಿಲುವು ಇವೆಲ್ಲವುಗಳ ಜೊತೆ ಜೊತೆಗೇ ಅತಿ ಮುಖ್ಯವಾಗಿ ತಾನು ಹುಟ್ಟಿ ಬೆಳೆದ ಪರಿಸರದ ಸಾಮಾನ್ಯ ಮನುಷ್ಯರ ಅಸಾಮಾನ್ಯ ಪ್ರತಿಭೆಯ ಅರಿವು ಇವುಗಳು ಕುವೆಂಪುವನ್ನು ರೂಪಿಸಿವೆ. ಈಗ ನಾವು ಕುವೆಂಪುವಿನಿಂದ ಪಡೆಯಬೇಕಾಗಿರುವುದು ಈ ನಿಲುವು ನೋಟಗಳನ್ನೇ.

ಹೀಗೆಂದ ಮಾತ್ರಕ್ಕೆ, ಕುವೆಂಪುನಿನಲ್ಲಿ ಕೇವಲ ಬಳಸುವ ಪರಿಪೂರ್ಣತೆಯನ್ನು ಅರಸಬೇಕೆಂದಿಲ್ಲ. ಪರಿಪೂರ್ಣತೆಯೆಡೆಗಿನ ಅವರ ಪಯಣದ ಹಾದಿಯನ್ನಷ್ಟೇ ಇಲ್ಲಿ ಗಮನಿಸುವ ಪ್ರಯತ್ನವೊಂದಿದೆ. ಕುವೆಂಪು ಬಳಸುವ ತಪಸ್ವಿ ಎಂಬ ಪದ ಪರಿಪೂರ್ಣತೆಯೆಡೆಗಿನ ಅವರ ಹಂಬಲವನ್ನು ಪ್ರತಿಬಿಂಬಿಸುತ್ತದೆ. ಶೂದ್ರ, ಶಿಲಾ, ಗೃಹ, ವಿದ್ಯಾರ್ಥಿ ಹೀಗೆ ಅನೇಕ ಕಡೆ ನೇರವಾಗಿ, ಜಗದ ಜಲಗಾರ, ಸಾಮಾನ್ಯಮೆ ಭವ್ಯಂ ಇತ್ಯಾದಿ ಇನ್ನೂ ಕೆಲವು ಕಡೆ ಪರೋಕ್ಷವಾಗಿ ಇದನ್ನು ಕಾಣಬಹುದು. ಅವರು ರಾಮಾಯಣ ದರ್ಶನಂನಿಂದ ಆ ದೊಡ್ಡ ಪ್ರಯತ್ನ ಆರಂಭಿಸಿ, ತಮ್ಮ ಮಲೆಗಳಲ್ಲಿ ಮದುಮಗಳುವಿನ ಹಂತದಲ್ಲಿ ಒಂದು ಅತ್ಯಂತಿಕ ನೆಲೆಗೆ ತಲುಪುತ್ತಾರೆ. ಗೊಬ್ಬರದ ಹುಳುವಿನ ವರ್ಣನೆಯನ್ನೇ ಇದಕ್ಕೊಂದು ಉದಾಹರಣೆಯನ್ನಾಗಿ ಗಮನಿಸಬಹುದು.

ಇದಕ್ಕಾಗಿ ಕುವೆಂಪು ಪರಂಪರೆಯ ನಂಬಿಕೆಗಳನ್ನು ಮರುರೂಪಿಸುವ ತಂತ್ರವನ್ನು ಬಳಸುತ್ತಾರೆ. ಅವರು ಶೂದ್ರತ್ವವನ್ನು, ಅಸ್ಪೃಶ್ಯತೆಯನ್ನು ಭಿನ್ನ ನೆಲೆಯಲ್ಲಿ ಎದುರುಗೊಳ್ಳುವ ಪ್ರಯತ್ನವನ್ನು ತಮ್ಮ ಶೂದ್ರತಪಸ್ವಿ, ಜಲಗಾರ ನಾಟಕಗಳಲ್ಲಿ ಮಾಡುತ್ತಾರೆ. ಹಾಗೆಯೇ ಸ್ತ್ರೀತ್ವವನ್ನೂ ಪರಂಪರೆಗಿಂತ ಭಿನ್ನವಾಗಿ ಕಟ್ಟುತ್ತಾರೆಯೇ ಎಂಬ ಕುತೂಹಲ ಸಹಜ. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ಭಾಗ್ಯ ನಾಟಕವನ್ನು ಪರಿಶೀಲಿಸಬಹುದೆನಿಸುತ್ತದೆ. ಈ ಮೂರರ ಜೊತೆಗೆ ಸಾಂದರ್ಭಿಕವಾಗಿ ಅವರ ಬೇರೆ ಬರಹಗಳನ್ನೂ ನೆನಪಿಸಿಕೊಳ್ಳಬಹುದು.

ಯಾವುದನ್ನು ಈ ಜಗತ್ತು ಕ್ಷುಲ್ಲಕ ಎನ್ನುತ್ತದೋ ಅದರ ಕಡೆಗೆ ಕುವೆಂಪು ನೋಟ ಭಿನ್ನ ದಾರಿಯಿಂದ ಪ್ರವೇಶಿಸಬಯಸುತ್ತದೆ. ಗೊಬ್ಬರ, ಹೀರೇಹೂವು, ಹುಲ್ಲು ಮೇಲಿನ ಹನಿ, ಕಲ್ಕಿ, ಗುತ್ತಿಯ ನಾಯಿ, ಐತಪೀಂಚಲುವಿನಲ್ಲಿ ಶಿವ-ಶಿವೆ, ಮಂಥರೆಯಲ್ಲಿ ಮಮತೆ ಹೀಗೆ ಈ ಪಟ್ಟಿ ಮುಂದುವರಿಯುತ್ತದೆ. ಇಲ್ಲೆಲ್ಲಾ ಕುವೆಂಪು ಹುಡುಕಾಟದ ಅಂತಿಮ ಗುರಿ ಭವ್ಯತೆಯನ್ನೂ, ಔನ್ನತ್ಯವನ್ನೂ ಕಾಣುವುದೇ ಆಗಿದೆ. ಅಂದರೆ, ಔನ್ನತ್ಯವನ್ನು ಕಾಣುವುದಕ್ಕೆ ಸೂಕ್ತ ಕಾರಣಗಳಿದ್ದರೆ ಮಾತ್ರ ಕುವೆಂಪು ಅವುಗಳನ್ನು ತನ್ನ ಕೃತಿಯ ಭಾಗವನ್ನಾಗಿಸಿಕೊಳ್ಳುತ್ತಾರೆ. ಆದರೆ, ಎಲ್ಲದಕ್ಕೂ ಔನ್ನತ್ಯವನ್ನು ಆರೋಪಿಸುವುದಕ್ಕೆ ಅವರ ತಕರಾರಿದೆ. ಉದಾ: ದುರಂತದಲ್ಲೂ ಒಂದು ಔನ್ನತ್ಯವಿದ್ದಾಗ ಅದನ್ನು ಹಾಡುವುದು, ಅದರ ಕುರಿತು ಆಡುವುದನ್ನು ಒಪ್ಪುವ ಕುವೆಂಪು ಹಾಗಿಲ್ಲದಿದ್ದಲ್ಲಿ ‘ದುರಂತ’ ಎಂಬ ಪದ ಬಳಕೆ ಮಾಡುವುದನ್ನೂ ವಿರೋಧಿಸುತ್ತಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ‘ಯಶೋಧರ ಚರಿತೆಯಲಿ ಕಾಮವಿಕಾರ ನಿರೂಪಣೆಯ ಉದ್ದೇಶ’ ಲೇಖನ.

ಅಮೃತಮತಿಯ ಬದುಕು ದುರಂತಮಯವಾದುದು ಎಂಬ ಮಾತನ್ನು ಹೇಳಲೂ ಅವರು ತಯಾರಿಲ್ಲ. ಅಷ್ಟು ಒಳ್ಳೆಯ ಪದವನ್ನು ಅಮೃತಮತಿಗೇಕೆ ಬಳಸಬೇಕು ಎಂದು ಅವರು ಆಕ್ಷೇಪಿಸುತ್ತಾರೆ. ಮಾತ್ರವಲ್ಲ, ವೈಪರೀತ್ಯ ಮನಶ್ಯಾಸ್ತ್ರ ಇತ್ಯಾದಿ ಮನಶ್ಯಾಸ್ತ್ರದ ಸಹಾಯವನ್ನು ಆಕೆಯ ಪಾತ್ರನಿರ್ವಚನೆಗೆ ಬಳಸಿಕೊಳ್ಳುವುದೂ ಕುವೆಂಪು ಪ್ರಕಾರ ಅಪರಾಧ. ಅಮೃತಮತಿಯ ಕುರಿತಾದ ಅವರ ಕಠಿಣ ನಿಲುವುಗಳನ್ನು ಚರ್ಚಿಸುವ ಮೊದಲು ಇನ್ನೂ ಕೆಲವು ಪಾತ್ರಗಳ ಕುರಿತಾದ ಅವರ ನಿಲುವನ್ನು ಗಮನಿಸಿ ಮತ್ತೆ ಅಮೃತಮತಿಗೆ ಮರಳಬಹುದೆನಿಸುತ್ತದೆ.

ಶೂದ್ರತಪಸ್ವಿ ಮತ್ತು ಜಲಗಾರನನ್ನು ಮರುರೂಪಿಸುವಲ್ಲಿನ ಅವರ ಶ್ರದ್ಧೆಯನ್ನು ಗಮನಿಸಬೇಕು. ಶೂದ್ರ ತಪಸ್ವಿಯಲ್ಲಿ ಶಂಬೂಕನನ್ನು ಮಾತ್ರವಲ್ಲ ರಾಮನನ್ನೂ, ಬ್ರಾಹ್ಮಣನನ್ನೂ ಅವರು ಹೊಸ ನಿಲುವಿನಿಂದ ನೋಡುತ್ತಾರೆ. ಆಮ ಶಂಬೂಕವಧೆ ಮಾಡುವುದು ಸಾಧ್ಯವೇ ಇಲ್ಲ ಎಂಬುದು ಅವರ ದೃಢ ನಂಬಿಕೆ. ರಾಮನಲ್ಲಿ ರಾಜನನ್ನು ಕಾಣುವುದಕ್ಕಿಂತ ಕುಟುಂಬ ಪ್ರಿಯನಂತೆ ಚಿತ್ರಿಸಲು ಅವರು ಪ್ರಯತ್ನಿಸುತ್ತಾರೆ. ಶೂದ್ರನಾದರೇನು ಆತನೂ ತಪಸ್ವಿಯೇ ಎಂಬುದನ್ನು ಪ್ರತಿಪಾದಿಸುವುದಕ್ಕಿಂತಲೂ ಕುವೆಂಪು ಗಮನವಿರುವುದು ‘ಕವಿ ಹೇಳಿದ್ದೆಲ್ಲ ಸತ್ಯ’ ಎಂಬ ನಂಬಿಕೆಯನ್ನು ಅಲುಗಾಡಿಸುವುದರ ಕಡೆಗಿದೆ.

ಶೂದ್ರತಪಸ್ವಿಗೆ ಮಾಸ್ತಿಯಿಂದ ಬಂದ ಪ್ರತಿಕ್ರಿಯೆ ಮತ್ತು ಇದಕ್ಕೆ ಕುವೆಂಪು ಅವರ ತೀಕ್ಷ್ಣ ಮಾರುತ್ತರ ಎಲ್ಲರಿಗೂ ತಿಳಿದಿರುವಂತಹದೆ. ಪುರಾಣಗಳ ವಸ್ತುವನ್ನು ಹೊಸ ವಿಚಾರ ಹೇಳಲು ಬಳಸಿಕೊಳ್ಳಬಾರದು ಎಂಬ ಮಾಸ್ತಿಯವರ ಮಾತಿಗೆ ಕುವೆಂಪು ಪ್ರತಿಕ್ರಿಯೆ ಗಮನಾರ್ಹ. ಅವರು ಹೀಗೆ ಹೇಳುತ್ತಾರೆ: “ಪುರಾಣಗಳನ್ನು ಪ್ರತಿಮಾ ದೃಷ್ಟಿಯಿಂದ ನೋಡದೆ ಪ್ರತಿಕೃತಿಯ ದೃಷ್ಟಿಯಿಂದ ನೋಡಿದರೆ ಈ ತರಹದ ಅನರ್ಥ ವಿಮರ್ಶೆ ಸಿದ್ಧವಾಗುತ್ತದೆ. ಪುರಾಣಗಳೆಂದರೆ ಸೂಕ್ಷ್ಮತರವಾದ ನಿತ್ಯ ಸತ್ಯಗಳಿಗೆ ಮಾನವಮತಿ ಕೆತ್ತಿರುವ ಸ್ಥೂಲವೂ ಸದೋಷವೂ ಆದ ಕಥಾಪ್ರತಿಮೆಗಳು. ಆದ್ದರಿಂದ ನಿತ್ಯ ಸತ್ಯಗಳಿಗೆ ಭಂಗಬಾರದಂತೆ ಆ ಕಥಾಪ್ರತಿಮೆಗಳನ್ನು ಆಯಾ ಕಾಲದ ಮನೋಧಮಕ್ಕೆ ಅನುಗುಣವಾಗಿ ತಮ್ಮ ತಮ್ಮ ಶಕ್ತಿ ಸಂಸ್ಕಾರ ಧೈರ್ಯದರ್ಶನಗಳ ಅಭಿವ್ಯಕ್ತಿಗೆ ಅನುಕೂಲವಾಗುವಂತೆ ಕವಿಗಳು ಮಾರ್ಪಡಿಸಿಕೊಂಡು ಸಾಹಿತ್ಯ ಸೃಷ್ಟಿ ಮಾಡುವುದು ಅತ್ಯಂತ ಅವಶ್ಯಕ ಎಂದು ಒತ್ತಿ ಹೇಳಬಯಸುತ್ತೇನೆ.” (ಪುಟ: ೧೯೮; ಸಮಗ್ರ ನಾಟಕ) ಇಲ್ಲಿ ಅವರು ಬಳಸಿರುವ ‘ಸದೋಷವೂ’ ಎಂಬ ಪದವನ್ನು ಗಮನಿಸಬೇಕು. ಈ ದೋಷವನ್ನು ಸರಿಮಾಡುವ ಜವಾಬ್ದಾರಿಯನ್ನು ಅವರು ತಮ್ಮ ಮೇಲೆ ಹೊರಿಸಿಕೊಂಡಿದ್ದಾರೆ. ಹೀಗಾಗಿ ಕುವೆಂಪು ಇಲ್ಲಿ ಕೇವಲ ಶೂದ್ರರನ್ನು ಗಮನದಲ್ಲಿಟ್ಟುಕೊಂಡಿಲ್ಲ. ಬದಲಿಗೆ, ಸಾಮಾನ್ಯರಲ್ಲಿ ಒಂದು ಭಾಗವಾಗಿರುವ, ಪರಂಪರೆಯಿಂದ ದತ್ತವಾಗಿರುವ ಬ್ರಾಹ್ಮಣಿಕೆಯ ಅಹಂಕಾರಕ್ಕೆ ಬಲಿಯಾಗಿರುವ ಅಜ್ಞಾನಿ ಬ್ರಾಹ್ಮಣನನ್ನೂ-ಹೊಸಜ್ಞಾನದ ಅರಿವುಂಟಾಗುವಂತೆ ಪರಿವರ್ತಿಸುವುದರ ಕಡೆಗೂ ಚಿಂತಿಸಿದ್ದಾರೆ.

ಬೋಧಮಾಯ್ತೆನಗೀಗಳ್, ಮಹಾಪ್ರಾಜ್ಞ,
ಬುದ್ಧಿಗಲಿಸಿದಯ್ ಸಂಪ್ರದಾಯಬದ್ಧಂಗೆ,

ಶಾಸ್ತ್ರ ಸಂಮೂಢಂಗೆ, ಜಾತಿಗರ್ವಾಂಧಂಗೆಎಂಬ ಸಾಲುಗಳಾಗಲೀ, ‘ನಮಸ್ಕರಿಸಾ ಮಹಾತಪಸ್ವಿಗೆ, ದ್ವಿಜಕುಮಾರ’ ಎಂಬ ಮಾತುಗಳಾಗಲೀ ಇದನ್ನು ಪುರಸ್ಕರಿಸುತ್ತೇವೆ.

ಈ ನಿಟ್ಟಿನಲ್ಲಿ ಕುವೆಂಪುವಿನಲ್ಲಿ ತುಂಬಿ ತುಳುಕುವ ಆತ್ಮವಿಶ್ವಾಸಕ್ಕೆ ಅತಿ ಮುಖ್ಯ ಕಾರಣ, ಅವರಿಗೆ ಈ ಕುರಿತು ಇರುವ ಖಚಿತತೆ ಮಾತ್ರವಲ್ಲ-ವಾಲ್ಮೀಕಿ ರಾಮಾಯಣ ಮತ್ತು ಭವಭೂತಿಯ ರಾಮಾಯಣ ಹಾಗೂ ಸಂಸ್ಕೃತ ಸಾಹಿತ್ಯಗಳ ಆಳವಾದ ಓದೂ ಆಗಿದೆ. ತಪ್ಪಾಗಿ ಅರ್ಥೈಸಿದ್ದೀರಿ ಎಂದು ‘ಸಂಸ್ಕೃತದ ವಾರಸುದಾರರಿಗೆ’ ಅವರು ಕಣ್ಣಿಗೆ ಬೆರಳಿಟ್ಟು ಹೇಳಿ ಬಿಡುತ್ತಾರೆ.

ಜಲಗಾರದಲ್ಲಿ ‘ಜಲಗಾರ’ ಒಂದು ಆದರ್ಶಪಾತ್ರಂದಂತೆ ಚಿತ್ರಿತನಾಗಿದ್ದಾನೆ. ಆತ ಧರ್ಮದ ಬಗೆಗೆ ದೇವರ ಬಗೆಗೆ ನಿಶಿತದೃಷ್ಟಿಯನ್ನು ಹೊಂದಿದವನು. ಬೂಟಾಟಿಕೆಗಳನ್ನು ಪ್ರತಿನಿಧಿಸುವ ಅನೇಕ ಸ್ತರದ ಪಾತ್ರಗಳು ಇಲ್ಲಿ ಬರುತ್ತವೆ. ಮುಗ್ಧರು, ಮೂಢರು, ಅರಿವಿದ್ದೂ ಸುಲಿಯುವ ಪುರೋಹಿತರು, ಜಾತಿ, ವರ್ಗ ವಿನಾಶದ ಮಾತನಾಡಿ, ಜಾತಿ, ವರ್ಗಭೇದ ಆಚರಿಸುವವರು, ವಿದ್ಯಾವಂತರಾಗಿದ್ದೂ ಮೂರ್ಖರಾಗಿರುವವರು, ಬಡವರು, ದಮನಿತರು, ಅಸ್ಪೃಶ್ಯರು ಇತ್ಯಾದಿ. ಇಲ್ಲಿ ಅತಿ ವಾಚ್ಯವಾಗಿಯೇ ಆಶಯಗಳನ್ನು ಹೇಳಿಸಲಾಗಿದೆ.

ಆದರೆ, ಜಲಗಾರನ ಬದುಕಿನಲ್ಲಿ ಯಾವುದೇ ಜಿಗಿತ ಕಾಣುವುದಿಲ್ಲ. ಶಿವ ಒಲಿಯುತ್ತಾನೆ, ಜಲಗಾರನನ್ನು ಶಿವನಲ್ಲಿ ಅಭಿನ್ನಗೊಳಿಸಲಾಗುತ್ತದೆ ನಿಜ. ಆದರೆ, ಸ್ಥಿತ್ಯಂತರ ಕಾಣುವುದಿಲ್ಲ. “ಊರ ತೋಟಿಯು ನೀನು, ಜಗದ ತೋಟಿಯು ನಾನು!” ಎಂಬಲ್ಲಿಗೆ ಕೊನೆಗಾಣುವ ಇಲ್ಲಿ ಕುವೆಂಪು ಮರು ರೂಪಿಸುವುದು ಕಾಯಕದ ಬಗೆಗಿನ ಲೋಕರೂಢಿಯ ನಂಬಿಕೆಗಳನ್ನು ಮತ್ತು ಶ್ರಮಜೀವಿಯಲ್ಲೇ, ಶ್ರಮದಲ್ಲೇ ದೇವರಿದ್ದಾನೆ ಎಂಬ ಮೇಲುಸ್ತರದ ನಂಬಿಕೆಯನ್ನು ಮಾತ್ರ,

“ಕರ್ಮವಾರಾಧನೆ, ಸೇವೆಯೇ ಪೂಜೆ
ನನ್ನ ಭಾಗಕೆ ಪೊರಕೆ ಆರತಿ, ಗುಡಿಸುವುದೆ
ನನ್ನ ದೇವರ ಪೂಜೆ!”

ಎಂಬ ಮಾತುಗಳು ಜಲಗಾರನೆಂಬ ವ್ಯಕ್ತಿಗಿಂತಲೂ ಆತನ ಕಾಯಕದ ಔನ್ನತ್ಯವನ್ನು ಮೆರೆಸುವುದರ ಕಡೆ ಗಮನಹರಿಸುವುದರಲ್ಲಿ ಮಗ್ನವಾಗಿದೆ. ಶೂದ್ರ ತಪಸ್ವಿಯ ರೋಷ ಇಲ್ಲಿ ಕಾಣುವುದಿಲ್ಲ. ಆದರೆ, ಅಸಮಾನತೆಯ ಬಗ್ಗೆ ಅಸಮಾಧಾನವಿದೆ.

ಮೇಲಿನ ಎರಡೂ ಸಂದರ್ಭದಲ್ಲಿ ಕುವೆಂಪುವಿನಲ್ಲಿ ಕಾಣಿಸುವ ಅಸಮಾನತೆಯ ವಿರುದ್ಧದ ತೀವ್ರತರವಾದ ಪ್ರತಿಪಾದನೆ ಹೆಣ್ಣುಮಕ್ಕಳು ವಿಚಾರದಲ್ಲಿ ಕಾಣುತ್ತದೆಯೇ ಎಂಬುದು ನನ್ನ ಇನ್ನೊಂದು ಕುತೂಹಲದ ವಿಚಾರ.

ವಾಲ್ಮೀಕಿಯ ಭಾಗ್ಯ ನಾಟಕವನ್ನೇ ನೋಡಿದರೆ, ಸೀತೆಯನ್ನು ಕಾಡಿಗೆ ಬಿಡುವ ಸಂದರ್ಭದಲ್ಲಿ ಲಕ್ಷ್ಮಣನ ಸಂಕಟ, ಸೀತೆಯ ಅಳಲು ಕಣ್ಣಿಗೆ ಕಟ್ಟುವಂತೇನೋ ಚಿತ್ರಣಗೊಂಡಿದೆ. ಲಕ್ಷ್ಮೀಶನ ಜಾಡಿನಲ್ಲೇ ಸಾಗುವ ಈ ನಾಟಕ ಕೊನೆಯಲ್ಲಿ ದುಃಖದ ತಾಪವನ್ನು ತಂಪಾಗಿಸಿ ಬಿಡುತ್ತದೆ. ತನ್ನ ಕಾವ್ಯವ ನಾಯಕಿ ಸೀತೆ ತನ್ನಾಶ್ರಮಕ್ಕೆ ಬಂದುದು ತನ್ನ ಭಾಗ್ಯ ಎಂದು ವಾಲ್ಮೀಕಿ ಸಂತಸ ಪಡುತ್ತಾನೆ. ಸೀತೆಯ ದುಃಖಕ್ಕೂ ಒಂದು ಮಹತ್ ಕಾರಣವಿದೆ ಎಂದು ಸಮಾಧಾನಿಸುತ್ತಾನೆ.

ತಾಯಿ, ಮೇಲೇಳು
ನಿನಗೆಲ್ಲಂ ಒಳ್ಳಿತಹುದು
ನೀನೆನ್ನ ಮಹಾಕಾವ್ಯದ ಸವಿಗಣ್ಣಲ್ತೆ!
ಕಥಾನಾಯಿಕೆಯಲ್ತೆ!
ವಾಲ್ಮೀಕಿಯ ಭಾಗ್ಯಮಲ್ತೆ!

ತತ್‌ಕ್ಷಣ ಹುಟ್ಟುವ ಪ್ರಶ್ನೆ ‘ಸೀತೆಯ ಭಾಗ್ಯ ಯಾವುದು?’ ಇಲ್ಲಿ ನಾಟಕಕಾರ ರಾಮನ ಚಿತ್ರವನ್ನಾಗಲೀ, ಸೀತೆಯ ವ್ಯಕ್ತಿತ್ವನ್ನಾಗಲೀ ಮರುರೂಪಿಸ ಹೊರಡುವುದಿಲ್ಲ. ಬದಲಿಗೆ, ರಾಮನ ಬಗೆಗೆ ಓದುಗರ ಮನದಲ್ಲೇನಾದರೂ ಕಹಿಇದ ದರೆ ಅದನ್ನು ಇದ್ದಲು ಪ್ರಯತ್ನಿಸಿದಂತೆ ಕಾಣುತ್ತದೆ. ಅವರೇ ಹೇಳಿಕೊಂಡಂತೆ, “ಸೀತಾಪರಿತ್ಯಾಗಕ್ಕೆ ಈಗಾಗಲೇ ನೀಡಲಾಗಿರುವ ಕಾರಣಗಳಲ್ಲಿ ಕೆಲವು ಕುಂಟು ಕೆಲವು ಕುರುಡು… ಈ ‘ದೃಶ್ಯ’ದಲ್ಲಿ ವಾಲ್ಮೀಕಿಯ ಭಾಗವನ್ನು ಕಾರಣವಾಗಿ ಸಮಸ್ಯೆ ಪರಿಹಾರವಾಗದಿದ್ದರೂ ಅದು ಭಾವಪೂರ್ಣವಾಗುವುದೆಂದು ಬರೆದವನ ಆಶಯ” (ವಿಜ್ಞಾಪನೆಯಲ್ಲಿ). ಇಲ್ಲಿ ಕುವೆಂಪು ಸೀತೆ ದುಃಖಿಯಲ್ಲ ಸುಖಿ ಎಂಬುದನ್ನು ಕಟ್ಟಲು ಪ್ರಯತ್ನಿಸುತ್ತರುವಂತಿದೆ ಅಥವಾ ರಾಮಾಯಣದ ಕಥಾನಾಯಿಕೆಯಾವುದೇ ಅವಳಿಗೊದಗುವ ಒಳಿತು ಎಂಬಂತೆ ಒಪ್ಪಿಸ ಹೊರಡುತ್ತಿರುವಂತಿದೆ. ವಾಲ್ಮೀಕಿ ಸೀತೆಗೆ ಹೇಳುತ್ತಾನೆ:

ಈ ಯಾವ ಕಾರಣವೂ ಸೀತೆಗೆ ನ್ಯಾಯ ಒದಗಿಸದು ಎಂಬುದು ಯಾವುದೇ ಹೆಣ್ಣು ಮಕ್ಕಳ ಅಭಿಪ್ರಾಯವಾದೀತು ಎಂದು ನನಗನಿಸುತ್ತದೆ. ಮುಂದೆ, ಪೀಂಚಲುವನ್ನು ಸೃಷ್ಟಿಸಿದ ಕುವೆಂಪು ಕುರಿತು ಇಲ್ಲಿ ದೋಷಾರೋಪಣೆ ಮಾಡುತ್ತಿಲ್ಲ. ಬದಲಿಗೆ, ಕುವೆಂಪು ಹೆಣ್ಣು ಮಕ್ಕಳಲ್ಲಿ ಭವ್ಯತೆಯನ್ನು, ತ್ಯಾಗದ ಮಹತ್ತನ್ನು, ದೇವಿಯನ್ನು, ಬಾಳಿನ ಸೊಬಗನ್ನು ಕಾಣುತ್ತಾರೆ ಮತ್ತು ಅದರಲ್ಲಿಯೇ ತೃಪ್ತರಾಗುತ್ತಾರೆ. ಆದರೆ, ಸೃಷ್ಟಿಸುವ ‘ಮನೆ ಮನೆಯ ತಪಸ್ವಿನಿ’ಯರ ಬಿಂಬವನ್ನು ಒಡೆಯಲೇ ಬೇಕಾದ್ದು ಇಂದಿನ ಅನಿವಾರ್ಯ.

ತಮ್ಮ ‘ಮಗಳಿಗೆಹರಕೆ’ ಕವನದಲ್ಲಿ ಅವರು ‘ನಿನ್ನತನವನು ನೀನು ಅವನಿಗರ್ಪಿಸುವೋಲೆ, ತನ್ನತನವನು ಅವನು ನಿನಗರ್ಪಿಸಲಿ ಬಾಲೆ’ ಎಂದು ಸಮಾನತೆಯನ್ನು ಹಾರೈಸುತ್ತಾರೆ. ‘ನಿನ್ನಮ್ಮನನು ನಾನು ಎಂತು ಒಲಿದೆನೊ ಅಂತೆ, ನಿನ್ನನೊಲಿಯುವ ಇನಿಯ ನಿನಗೂ ದೊರೆಯುವಂತೆ, ಹರಕೆಗೈಯಲಿನಿನ ಗೆ ಶ್ರೀ ಜಗನ್ಮಾತೆ’ ಎಂದು ಈ ಕವಿತೆ ಆರಂಬವಾಗುತ್ತದೆ ನಿಜ. ಆದರೆ, ಎಲ್ಲರ ಕವಿತೆಗಳ ನಾಯಕ ಕುವೆಂಪು ಆಗಿರುವುದಿಲ್ಲ ಎಂಬುದೇ ವಾಸ್ತವ. ಹೀಗಾಗಿಯೇ, ‘ಮನೆ ಮನೆಯ ತಪಸ್ವಿನಿಗೆ’ ಕವಿತೆಯಲ್ಲಿ ಬರುವ

ಹಿಡಿಯದಿರಲಿ ನಿನಗಾದರು
ಗಂಡಸರಾ ಕುತ್ತ;
ಪ್ರಖ್ಯಾತಿಯ ಪಡೆಯುವೊಂದು
ಪ್ರಾಪಂಚಿಕೆ ಪಿತ್ತ!
ಹೊಸಲಾಚೆಗೆ ನೀನೋತರೆಹ
ಸಲೀಚೆಗೆ ಬೆಳಕಿಲ್ಲ;
ಹೆಸರಾಸೆಗೆ ನೀ ಸೋತರೆ
ಉಸಿರಾಸೆಯೆ ನಮಗಿಲ್ಲ!

ಎಂಬ ಸಾಲುಗಳು ಬೆರಳ್‌ಗೆ ಕೊರಳ್, ಗೊಬ್ಬರ, ಹೀರೇ ಹೂವಿನ ಆಶಯಗಳಿಗೆ ವಿರುದ್ಧ ನೆಲೆಯಲ್ಲಿ ನಿಲ್ಲುತ್ತವೆ. ಇಲ್ಲಿರುವ ಸೂಚನೆಗಳು ತ್ಯಾಗದ ಕಡೆಗಷ್ಟೇ ಕೈ ತೋರುತ್ತವೆ.

ಈ ಕಾರಣಗಳಿಗಾಗಿಯೇ ಕುವೆಂಪು ಅಮೃತಮತಿಯ ಕುರಿತು ಸಹಾನುಭೂತಿ ತೋರಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲ, ಬಹುಶಃ ಇನ್ನೆಲ್ಲೂ ಬಳಸದಷ್ಟು ರೂಕ್ಷವಾದ ಭಾಷೆಯ ಬಳಕೆಯನ್ನು ಅವರು ಅಮೃತಮತಿಗೆ ಬಳಸುತ್ತಾರೆ. ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್ ಎಂಬ ಮಾತಿಗೆ ಕುವೆಂಪು ಪ್ರತಿಕ್ರಿಯೆ ಹೀಗಿದೆ: ‘ಎಂತಹ ಮುತ್ತಿನಂತಹ ಮಾತು, ಎಂತಹ ಹಂದಿಯ ಬಾಯಲ್ಲಿ.’ ‘ಆಕೆ ಪತಿತೆ ಮಾತ್ರವೇ ಅಲ್ಲ, ನೀಚೆ, ಕುಲಟೆ, ಪಾತಕಿ, ಸರ್ವಪಾಪಗಳ ಘನೀಭೂತ ಪ್ರತಿಮೆ. ಇಂತಹ ಪಾತ್ರವನ್ನು ಕುರಿತು ಅನುಕಂಪೆ ಹುಟ್ಟುವುದು ಅಸಂಭವ’ (ಪು: ೪೧೬). ಇಷ್ಟಾದರೂ, ಇಂದಿಗೂ ಮಹಿಳಾ ಕವಿಗಳು ಅಮೃತಮತಿಯ ಮೇಳೆ ಕವನ ಬರೆಯುತ್ತಲೇ ಇದ್ದಾರೆ.

ಹೀಗೆ ಬರೆಯುತ್ತಾರೆಂದರೆ ಅದಕ್ಕೂ ಒಂದು ಕಾರಣವಿದ್ದೀತು ಅಲ್ಲವೇ? ಅಮೃತಮತಿಯನ್ನು ಸಮರ್ಥಿಸುವುದು ಬೇಡ. ಕೊನೆಯ ಪಕ್ಷ ಜನ್ನನನ್ನೂ, ಯಶೋಧರನನ್ನೂ ಹೋಗಲಿ, ಅಷ್ಟಾವಂಕನನ್ನಾದರೂ ಅನುಮಾನಿಸುವುದೂ ಬೇಡವೇ? ಬಹುಶಃ ಕುವೆಂಪು ಹೆಣ್ಣು ಮಕ್ಕಳ ವಿಚಾರದಲ್ಲಿ ಮಂಥರೆ ಮೊದಲಾದವರಲ್ಲಿ ಕಂಡರೂ, ಮರು ರೂಪಿಸುವುದಕ್ಕಿಂತ ಕೇವಲ ಕಟ್ಟುವುದರಲ್ಲಿ ಮಗ್ನರು ಅನಿಸುತ್ತದೆ. ಅವರೇ ಸಂದರ್ಶನವೊಂದರಲ್ಲಿ ಹೇಳುವ ಮಾತುಗಳು ಹೀಗಿವೆ: ‘ನೋಡಿ, ಸೃಷ್ಟಿ ನಿಯಮವೇ ಹಾಗೆ. ಪೂರ್ಣದೃಷ್ಟಿಗೆ ಯಾವುದೂ ತುಚ್ಛವಲ್ಲ. ಪಾಪವಲ್ಲ, ನೀಚವಾದದ್ದು ನೀಚನಾಗಿಯೇ ಉಳಿಯುವುದಿಲ್ಲ. ಎಲ್ಲವೂ ಪರಿವರ್ತನೆಗೊಳ್ಳಲೇಬೇಕು. ರಾವಣ ಒಬ್ಬ ಖಳನಾಯಕ. ಆದರೆ, ಅಲ್ಲಿ ಅವನು ‘ಶ್ರೀ ರಾವಣ’, ಮಂಥರೆ ಅಷ್ಟೆ! ಕೈಕೆ ಅಷ್ಟೆ. ಕೊನೆಗೆಲ್ಲ ಓಂ ಸಚ್ಚಿದಾನಂದ ಮಯ!” (ಪುಟ: ೧೧೩೭; ಸಮಗ್ರ ಗದ್ಯ ಸಂಪುಟ-೨)

ಪಾತಿವ್ರತ್ಯ ಭಂಗ, ಅಪಾತ್ರನಲ್ಲಿ ಒಲುಮೆ, ಜನ್ಮಾಂತರ ದ್ವೇಷ, ಕೊಲೆಯಲ್ಲಿ ಭಾಗಿಯಾದ ಅಮೃತಮತಿಗೆ ನರಕದ ಗತಿಯಾದದ್ದನ್ನು ಹರ್ಷದಿಂದ ಮೆಚ್ಚುವ ಕುವೆಂಪು ಈಕೆಯನ್ನೂ ಮರುರೂಪಿಸಲು ಹೋಚಿಸಬಹುದಿತ್ತೇ? ಬಹುಶಃ ಅದು ಅವರಿಗೆ ಸಾಧ್ಯವಿಲ್ಲ. ತಮ್ಮ ಸಹಧರ್ಮಿಣಿ ಕುರಿತು ಕವನದೊಂದರ ಕೆಲವು ಸಾಲುಗಳು ಹೀಗಿವೆ:

ಜಗವನಾಳುವ ತಾಯೆ ನನ್ನನಾಳುವ ಮಾಯೆ
ತಾನಾಗಿ ಬಂದಿಹಳು ನನ್ನ ಜಾಯೆ!
ಭೂಮೆತಾನಾಗಿಯೂ ಅಲ್ಪೆತಾನೆನೆನುವೋಲು
ಒಲಿದಪ್ಪಿ ಮಲಗಿಹಳು ಈ ಕೃಪಾಲು!
ಸೂರ್ಯ ನಕ್ಷತ್ರಾದಿ ಭೂಮ್ಯೋಮ ಸಾಗರವ
ಮಾಡಿ ಆಡಿಪ ದಿವ್ಯೆ ಆ ಸರ್ವಶಕ್ತೆ
ಇಲ್ಲಿ ಅಬಲೆಯೆ ಆಗಿ, ಒಲಿದ ಹೆಂಡತಿಯಾಗಿ
ಮಕ್ಕಳೊಂದಿಗೆ ಚಿಕ್ಕ ಸಂಸಾರಾನುರಕ್ತೆ!

ಇದು ಕುವೆಂಪು ನಂಬುವ, ಕಟ್ಟುವ ಹೆಣ್ಣಿನ ಚಿತ್ರ. ಇದೇ ದಿವ್ಯ ಭವ್ಯ ನೆಲೆ ಅಸ್ಪೃಶ್ಯತೆ, ಶೂದ್ರರು, ನಿರ್ಲಕ್ಷಿತ ವಿಚಾರಗಳ ಕುರಿತೂ ಅವರಿಗಿದೆ. ಆದರೆ, ಅಲ್ಲಿರುವ ಹಕ್ಕಿನ ಹೋರಾಟ ಮಾತ್ರ ಇಲ್ಲಿ ಕಾಣುವುದಿಲ್ಲ. ಸ್ತ್ರೀ ಸಮಸ್ಯೆಯನ್ನು ಅವರು ಪುರುಷನು ಪರಿಪೂರ್ಣನಾದಾಗ, ತನ್ನಷ್ಟಕ್ಕೆ ತಾನೇ ಪರಿಹಾರವಾಗುವ ವಿಚಾರ ಎಂದೇ ಭಾವಿಸುತ್ತಾರೆ.