ಕುವೆಂಪು ಸಾಹಿತ್ಯಕೃತಿಗಳಲ್ಲಿ ಅವರ ಎರಡು ಬೃಹತ್ ಕಾದಂಬರಿಗಳು ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಮಲೆನಾಡಿನ ಜೀವರಾಶಿಯ ಜೀವನ ವೈವಿಧ್ಯವನ್ನು ತೆರೆದಿಡುತ್ತಿದೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಅನೇಕ ಕುಟುಂಬಗಳ, ಹಲವಾರು ಜಾತಿ ಧರ್ಮದವರ, ಪ್ರಾಣಿಪಕ್ಷಿಗಳ ಬದುಕಿಗೆ ಕಾರಣವಾದ ಕಾಡನ್ನೂ ವರ್ಣಿಸುತ್ತದೆ. ಆ ಮೂಲಕ ಮಾನವಕುಲಕ್ಕೆ ಶುಭ ಸಂದೇಶವನ್ನು ಕೋರುತ್ತಿದೆ. ಆದುದರಿಂದ ನನ್ನ ಅಧ್ಯಯನದ ಆಸಕ್ತಿ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ.

ಲಕ್ಕುಂದದ ಹಳೇಪೈಕದವರು ಒಕ್ಕಲಿಗರ ಒಕ್ಕಲುಗಳಾಗಿದ್ದುಕೊಂಡು ಬಗನಿಮರದಿಂದ ಕಳ್ಳು ಇಳಿಸಿ, ಕುಡಿದು, ಮಾರಿ ಜೀವನ ಮಾಡುವವರು, ಇವರಿಗೆ ಸ್ವಂತ ಜಮೀನಿರುವುದೇ ಬಹಳ ಅಪರೂಪ. ವೇದಕಲಿಯುವುದು ಶೂದ್ರರಿಗೆ ಹೇಗೆ ನಿಷಿದ್ಧವೋ ಹಾಗೆಯೇ, ಸ್ವಂತ ಜಮೀನು ಮಾಡುವುದು ಹಳೇಪೈಕದವರಿಗೆ ನಿಷಿದ್ಧ ಎಂದು ಒಕ್ಕಲಿಗರಾದ, ಹೆಗ್ಗಡೆ, ಗೌಡ, ನಾಯಕರುಗಳೆಲ್ಲ ಸೇರಿ ತೀರ್ಮಾನ ಮಾಡಿದ್ದರು. ಅಷ್ಟೇ ಅಲ್ಲದೆ ಮದುವೆ ಮೊದಲಾದ ಸಂದರ್ಭಗಳಲ್ಲಿ ಹಳೇಪೈಕದವರು ಒಕ್ಕಲಿಗರನ್ನು ಯಾವುದೇ ಕಾರಣಕ್ಕೂ ಅನುಕರಿಸಬಾರದೆಂದು ಒಟ್ಟಾಗಿತ್ತು. ದಿಬ್ಬಣದಲ್ಲಿ ಮದುವೆಯ ಗಂಡು ಸವಾರಿ ಮಾಡಬಾರು. ದಂಡಿಗೆಯ ಮೇಲೆ ಕೂತರಂತೂ ಮದುಮಕ್ಕಳಿಗೂ ದಿಬ್ಬಣದವರಿಗೂ ಉಳಿಗಾಲ ಇರಲಿಲ್ಲ. ಈ ಚರ್ಚೆ ಸರ್ಕಾರದವರೆಗೂ ಹೋಗಿ ಅದು ಒಕ್ಕಲಿಗರ ಪರವಾಗಿಯೇ ತೀರ್ಮಾಣ ಕೊಟ್ಟಿದ್ದರಿಂದ ಮಾತ್ಸರ್ಯಕ್ಕೆ ಕಾನೂನಿನ ಮುದ್ರೆ ಬೇರೆ ಬಿದ್ದಿತ್ತು!

ಸರ್ಕಾರ ಇತ್ಯರ್ಥ ಮಾಡಿದ ಕಾರಣ ನ್ಯಾಯಪಕ್ಷಪಾತವಾಗಿರಲಿಲ್ಲ. ಬಲಪಕ್ಷಪಾತವಾಗಿತ್ತು. ಹಳೇಪೈಕದವರು ಬಹಿರಂಗವಾಗಿ ಯಾವ ಒಕ್ಕಲಿಗರ ತಂಟೆಗೂ ಹೋಗುತ್ತಿರಲಿಲ್ಲ. ಆದರೆ, ಸೇಸನಾಯ್ಕನಂತಹ ಸ್ವಂತ ಜಮೀನ್ದಾರರು “ಅವರಿಗಿಂತ ನಾನೇನು ಕಡಿಮೆ? ನಮ್ಮ ಕುದುರೆ, ನಮ್ಮ ದಂಡಿಗೆ, ನಮ್ಮ ವಾದ್ಯ ನಮ್ಮ ಹುಮ್ಮಸ್ಸು ಇರುತ್ತಿತ್ತು” (ಪುಟ ೧೨-೧೩) ಹೀಗೆ ಹಳೇಪೈಕದವರ ಅಸಮಾಧಾನದ ಹೆಡೆ ಎತ್ತುತ್ತಲೇ ಇತ್ತು.

ಲಕ್ಕುಂದದಲ್ಲಿ ಹಳೇಪೈಕದವರದು ಮೂರು ಮನೆಗಳಿದ್ದವು. ಅವುಗಳಲ್ಲಿ ಮನೆ ಮೂರು. ಒಂದು ಸೇಸನಾಯ್ಕನದು, ಇನ್ನೊಂದು ರಂಗನಮನೆ, ಮತ್ತೊಂದು ಪುಟ್ಟನಾಯ್ಕನ ಮನೆ. ಅದರಲ್ಲಿ ಸೇಸನಾಯ್ಕನ ಮನೆ ಸ್ವಲ್ಪ ಚೆನ್ನಾಗಿತ್ತು. ಉಳಿದವು ಗುಡಿಸಲುಗಳು. ಆದರೆ, ಹಳೇಪೈಕದವರು ಗುಡಿಸಲುಗಳಿಗೇ ‘ಮನೆ’ ಎಂದು ಕರೆದುಕೊಳ್ಳುತ್ತಿದ್ದರು. ಮತ್ತು ಇತರರಿಗೂ ಒತ್ತಾಯಿಸುತ್ತಿದ್ದರು. ಎಲ್ಲರಿಗೂ ಮೇಲ್ವರ್ಗದಲ್ಲಿ ಗುರುತಿಸಿಕೊಳ್ಳುವ ಅಪೇಕ್ಷೆ ಹೆಚ್ಚಾಗಿದ್ದಂತೆ ತೋರುತ್ತದೆ.

ಜಾತಿಯ ಪಿರಮಿಡ್ಡಿನಲ್ಲಿ ಒಕ್ಕಲಿಗರು ಹಳೇಪೈಕದವರನ್ನು ಕೀಳಾಗಿ ಕಾಣುವುದು ಹಳೇಪೈಕದವರು ಅವರಿಗಿಂತ ಕೀಳಾದ ಜಾತಿಯವರನ್ನು ಕೀಳಾಗಿ ಕಾಣುವುದು  ಮಲೆನಾಡಿನ ಜೀವನಶೈಲಿಗೆ ಒಗ್ಗಿಹೋಗಿತ್ತು. ಪುಟ್ಟಿನ ಅತ್ತೆ ಕಾಡಿಮೂಡೆ ಬಸಿರಾಗಿದ್ದನ್ನು ಯಾರೂ ಪ್ರಶ್ನೆ ಮಾಡದಂತೆ ಹೆಂಡ ತುಂಡಿನ ಮೂಲಕ ಬಗೆಹರಿಸಿದ ರೀತಿಯು ನಾಜೂಕಾಗಿ ಕಂಡರೂ ಅವನ ಅನೈತಿಕ ನೀತಿಯ ದರ್ಶನವಾಗುತ್ತದೆ. ಗುತ್ತಿಗೆ ಊಟ ಹಾಕುವಾಗ ಕಾಡಿಯ ದೇಹಪ್ರಕೃತಿಯನ್ನು ಕಂಡು ಮುಖಕಿವುಚಿಕೊಳ್ಳುವುದು ಕಾಡಿಯ ಮಂದಮತಿಗೆ ಅರ್ಥವಾಗುವುದಿಲ್ಲ. ಆದರೆ, ಗುತ್ತಿ ಕಾಡಿಯ ದೃಹಪ್ರಕೃತಿಯಿಂದಲೇ ಏನನ್ನೂ ಕಂಡವನಂತೆ ವರ್ತಿಸುವುದು ಆಶ್ಚರ್ಯವಾಗುತ್ತದೆ.

ಊರಿನ ಯಾವ ಮೂಲೆಯಲ್ಲಿರುವ ಹಳ್ಳಿಯೂ ರಹಸ್ಯಗಳನ್ನು ಅಡಗಿಸಿಟ್ಟುಕೊಳ್ಳಲು ಸೋಲುತ್ತಿತ್ತು. ಬ್ರಾಹ್ಮಣರಲ್ಲಿ ಕದ್ದು ಬಸುರಿಯಾದವಳು ಘಟಾಶ್ರಾದ್ಧಕ್ಕೆ ಗುರಿಯಾಗುತ್ತಿದ್ದರೆ ಇವರಲ್ಲೂ ಅದೇ ರೀತಿಯ ಶಿಕ್ಷೆ ಇದೆ. ಆದರೆ, ಹೊಟ್ಟೆಯ ಹೊರೆ ಇಳಿಸಿ ಸೇಸನಾಯ್ಕನ ಊಟ ಉಪಚಾರಕ್ಕಾಗಿ ಮೌನವಾಗುತ್ತಾರೆ. ಇಲ್ಲಿ ಯಾರೂ ‘ಬದುಕು ಬಡ ಜೀವವೇ’ ಎನ್ನುವವರಿಲ್ಲ. ಮಾನವೀಯತೆ  ಅನುಕಂಪ ಯಾವುದರ ಲೇಪವಿಲ್ಲ. ತಿಮ್ಮನಾಯ್ಕ ಹಣತೆದೀಪತಂದು ಇಡುವಾಗ, “ಅವನ ದೃಷ್ಟಿ ಕಳವು ಮಾಲನ್ನು ಪತ್ತೆ ಮಾಡಲು ಹೊರಟಿದ್ದೆ ಗುಪ್ತ ಪೊಲೀಸಿನಂತೆ ಕಾಡಿಯ ಮೋರೆಯ ಕಡೆ ತೆರಳದೆ ಅವಳ ಹೊಟ್ಟೆಯೆಡೆ ಸಂಚರಿಸುತ್ತಿತ್ತು”. ಅದೇ ಕಾರಣವಾಗಿಯೇ ಸೀತೂರು ಸೀಮೆಯ ಹಳೆಪೈಕದವರ ಪ್ರತಿನಿಧಿಯೂ ಮುಖಂಡನೂ ಆಗಿದ್ದ ಅವನು ಆದಿನ ಲಕ್ಕುಂದಕ್ಕೆ ಬಂದಿದ್ದನು. (ಪು.೧೧ -೧೨) ಹೆಗ್ಡೇರ್ ಮನೆ ಮದುವೆ ವಿಚಾರ ಕೇಳುತ್ತಾ ಕಾಡಿ ಗುತ್ತಿಗೆ ಊಟ ಬಡಿಸುತ್ತಿದ್ದಳು. ಗುತ್ತಿ ಕಾಡಿಯ ಮುಖ ನೋಡುತ್ತಾ. “ಆಗ ತಾನೆ ಹೊಸದಾಗಿ ಕಂಡು ಹಿಡಿದವನಂತೆ ಬೆರಗಾಗಿ ಕೇಳಿದನು” ನಿಮಗೇನು ಜಡಾಗಿಡಾ ಆಗಿತ್ತೇನ್ರೋ? ಬಾಳ ಬಡಕಟ್ಟೆಯಾಗಿ ಕಾಣ್ತೀರಿ! ಹೌದು ಪುಣ್ಯಾತ್ಮ ಹೋದ ಗದ್ದೆಕೊಯ್ಲಿನಿಂದ ಒಡಲಜದ ಮೂರಕ್ಕೆ ನಾಲ್ಕಕ್ಕೆ ಬರ್ತಾನೆ ಅದೆ”. ಅವಳ ಮೋರಯನ್ನೇ ನೋಡುತ್ತಿದ್ದ ಗುತ್ತಿಗೆ ಇದ್ದಕ್ಕಿದ್ದ ಹಾಗೆ ಏನೋ ಜ್ಞಾಪಕ್ಕೆ ಬಂದಂತಾಗಿ ಜಿಗುಪ್ಸೆಯಿಂದ ಮುಖ ಅಸಹ್ಯ ವಿಕಾರವಾಯಿತು. ಅದನ್ನು ಕಂಡು ಕಾಡಿ ಏನೋ ಕಲ್ಲುಗಿಲ್ಲು ಸಿಕ್ತೇನೋ? ಎಂದಳು ಇಲ್ಲ! ಇಲುಬಿನ ಚೂರು ಅಂತ ಕಾಣ್ತದೆ!” ಎಂದು ಗುತ್ತಿ ಹುಸಿ ನುಡಿದು ತನ್ನ ಬಾಯಿಗೆ ಬೆರಳು ಹಾಕಿಕೊಂಡು ಎಲುಬಿನ ಚೂರನ್ನು ತೆಗೆದು ಬಿಸಾಡುವವಳಂತೆ ನಟಿಸಿದನು. ಇಂತಹ ಅವಮಾನಕರವಾದ ನೋಟ ಅವಳ  ಮುಗ್ಧತೆಯ ತೆರೆಯನ್ನು ಸರಿಸಲು ಸಾಧ್ಯವಾಗಲಿಲ್ಲ. ಜಾತಿಯವರೂ ಟೀಕಿಸಿದರು. ಜಾತಿಯವರಲ್ಲದವರೂ ಬಿಡಲಿಲ್ಲ. ನಿಂದಿಸುವಾಗ ಎಲ್ಲಾ ಜಾತಿವರ್ಗದವರು ಸಮಾನವಾಗುವುದು ಆಶ್ಚರ್ಯ ಮೂಡಿಸುತ್ತದೆ. ಪಾಪದ ಹೊರೆ ಇಳಿಸಿ ಕೊಂಡಷ್ಟು ಸುತ್ತಲಿನವರ ಅವಮಾನಕರವಾದ ಮಾತುಗಳಿಂದ ಮುಕ್ತಳಾಗುವುದು ಸುಲಭವಾಗಿರಲಿಲ್ಲ.

ಕಾಡಿಯ ಆಶ್ರಿತ ಬದುಕಿನ ದುರಂತವನ್ನು ಚಿತ್ರಿಸುವ ಕುವೆಂಪು ಅವಳ ವೇದನೆಯನ್ನು ಮೂಕವೇದನೆಯಾಗಿಯೇ ಇರಿಸುತ್ತಾರೆ. ಸಮಾಜದಲ್ಲಿ ಒಬ್ಬ ಗರಿಷ್ಠ ಶೋಷಿತ ವ್ಯಕ್ತಿಯಾದ ಗುತ್ತಿಯಿಂದಲೂ ಅಪಹಾಸ್ಯಕ್ಕೊಳಗಾದ ಕಾಡಿ ತನ್ನ ನೋವನ್ನು ಸ್ವಗತದಲ್ಲಿಯೂ ಹೇಳಿಕೊಳ್ಳುವುದಿಲ್ಲ. ಬಹುಶಃ ಅವಳ ಪಾಪಪ್ರಜ್ಞೆ. ಯಾವುದೇ ರೀತಿಯಿಂದಲೂ ಪ್ರತಿಕ್ರಿಯಿಸದಂತೆ ತಡೆದಿರಬಹುದು. ಅಥವಾ ಸಮರ್ಥಿಸಿಕೊಳ್ಳುವುದೇ ಒಂದು ಅಪರಾಧವಾಗಿ ಕಂಡಿರಬಹುದು. ಹಾಗಂತ ಮಾನಸಿಕ ಹಿಂಸೆಗೆ ಗುರಿಯಾಗಿಲ್ಲ ಎಂದು ಭಾವಿಸುವಂತಿಲ್ಲ. ತನ್ನ ತಪ್ಪನ್ನು ಅನಿವಾರ್ಯವಾಗಿ ಮರೆಮಾಚುತ್ತಾಳೆ. ಸಾಂದರ್ಭಿಕ ಸುಳ್ಳನ್ನೂ ಹೇಳುತ್ತಾಳೆ. ಹಣತೆ ದೀಪ ತಂದಿರಿಸಿ ನಿಲ್ಲದೆ ಒಳಗೆ ದಾಟಿಕೊಳ್ಳುವುದು. ಗುತ್ತಿಗೆ ಏನಾದರೂ ಬೇಕಾದರೆ ಕರೆದು ಕೇಳು ಎಂದು ತಕ್ಷಣ ಒಳಗೆ ಸೇರಿಕೊಳ್ಳುವುದು ಅವಳಲ್ಲಿನ ನೋವಿಗೆ ಅವಮಾನಕ್ಕೆ ಸಾಕ್ಷಿಯಾಗುತ್ತಿದೆ.

ನಾಗತ್ತೆ, ನಾಗಕ್ಕ ಊರಿಂದ ಊರಿಗೆ ಪ್ರಯಾಣ ಮಾಡುವಾಗ ಎಲ್ಲರ ಬಾಯಿಗೆ ಆಹಾರವಾಗದೆ ಇರಲಾಗುವುದಿಲ್ಲ. ನಾಗಕ್ಕ ವಿಧವೆಯಾದ್ದರಿಂದ ಪುರಷವರ್ಗದವರ ಗಮನ ಸೆಳೆದಿದ್ದಳು. ಅವರಲ್ಲಿ ರಂಗಪ್ಪಗೌಡರೂ ಒಬ್ಬರು. ನಾಗತ್ತೆ ತನ್ನ ಸೊಸೆ ನಾಗಕ್ಕನನ್ನು ಹೇಗಾದರೂ ಮಾಡಿ ಹೂವಳ್ಳಿ ವೆಂಕಟಪ್ಪಗೌಡರಿಗೆ ‘ಸೀರುಡಿಕೆ’ ಮಾಡುವ ಹುನ್ನಾರದಲ್ಲಿದ್ದಳು. ಈ ಸುದ್ಧಿ ಗಾಳಿ ಸುದ್ದಿಯಾಗಿ ರಂಗಪ್ಪ ಗೌಡರಿಗೆ ಮಾತ್ರವಲ್ಲ. ಚೀಂಕ್ರನ ಆದಿಯಾಗಿ ಎಲ್ಲಾ ಜಾತಿವರ್ಗದವರಿಗೂ ಹಬ್ಬಿದ ವಿಚಾರವಾಗಿತ್ತು. ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ರಂಗಪ್ಪಗೌಡರಿಗೆ ಅತ್ತೆಸೊಸೆ ಆ ಮಾರ್ಗವಾಗಿ ಹೂವಳ್ಳಿಗೆ ಸಾಗುತ್ತಿದ್ದುದು ಕಣ್ಣಿಗೆ ಬೀಳುತ್ತಿದ್ದಂತೆ ಅವರ ಮನಸ್ಸು ಹಿಂದಿನ ನೆನಪುಗಳನ್ನು ಕೆಣಕುತ್ತದೆ. ಗೌಡರಿಗೆ ನಾಗಕ್ಕಳನ್ನು ವಶಪಡಿಸಿಕೊಂಡು ಇನ್ನೊಂದು ಮದುವೆಯಾಗುವುದಕ್ಕೆ ಅಥವಾ ಇಟ್ಟುಕೊಳ್ಳುವುದಕ್ಕೆ ಬಹಳಷ್ಟು ಅಡ್ಡಿಗಳಿದ್ದವು. ಧರ್ಮ ಮತ್ತು ಅಧ್ಧಮಗಳ ಗೊಂದಲವಿತ್ತು. ತೀರಾ ಪಾಳೆಗಾರಿಕೆತನದಿಂದ ವಶಪಡಿಸಿಕೊಂಡು ಸಮರ್ಥಿಸಿಕೊಳ್ಳುವುದು ಕಷ್ಟದ ಹಾದಿಯೇ ಆಗಿತ್ತು. “ತಮಗೂ ನಾಗಕ್ಕನಿಗೂ ಇರಬಹುದಾದ ಸಂಬಂಧ ಸ್ವರೂಪವನ್ನೆ ನಿರ್ಣಯಿಸಲು ಅವರಿನ್ನೂ ಸಮರ್ಥರಾಗಿರಲಿಲ್ಲ. ಒಮ್ಮೆ ಯೋಚನೆ ಸುಮ್ಮನೆ ಅವಳನ್ನು ಇಟ್ಟುಕೊಳ್ಳಬಹುದಲ್ಲಾ! ಎಂದು ಮತ್ತೊಮ್ಮೆ ಸೀರುಡಿಕೆ  ಮಾಡಿಕೊಂಡರೇನಾಗುತ್ತದೆ ಎಂದು, -ಛೇ ಛೇ ಅದು ನಮ್ಮಂತಹ ಮನೆತನದ ಅಂತಸ್ತಿಗೆ ಕೀಳು ಎಂಬ ಭಾವನೆ ಅವರನ್ನು ನಾಚಿಸುತ್ತಿದ್ದುದು ಉಂಟು. ಗಟ್ಟಿಮುಟ್ಟಾದ ಹೆಂಡತಿ ಲಕ್ಷಣವಾಗಿಯೇ ಇರುವಾಗ? ಅದರಲ್ಲಿಯೂ ಐಗಳು ಅನಂತಯ್ಯನವರು ಭಾರತ, ರಾಮಾಯಣ ಜೈಮಿನಿ ಇವುಗಳನ್ನು ಓದಿ ಧರ್ಮ ವಿಚಾರ ಸೂಕ್ಷ್ಮವನ್ನು ಹೃದಯಸ್ಪರ್ಶಿಯಾಗಿ ಬಿತತರಿಸುತ್ತಿದ್ದಾಗ ಅದನ್ನು ಗ್ರಹಿಸಿದ ತತ್ಕಾಲದಲ್ಲಿ ರಂಗಪ್ಪಗೌಡರ ರಸವಶವಾದ ಮನಸ್ಸು ಎಷ್ಟೋ ಸಾರಿ ಧರ್ಮ ಅಧರ್ಮ ಪ್ರಸಂಗದ ಕುರುಕ್ಷೇತ್ರವಾಗಿದ್ದಿತು. “ಆದರೆ ಮನ್ಮಧೀ ವಿಜಯವು ನೀಲಕಂಠನಿಗೂ ಸುಲಭವಾಗಲಿಲ್ಲ ಎಂದ ಮೇಲೆ ಬರಿಯ ಧರ್ಮ ಶ್ರವಣದಿಂದಲೇ ಮನುಷ್ಯ ಮಾತ್ರನಾದವನು ಉತ್ತೀರ್ಣನಾಗುತ್ತೇನೆಯೇ? ಎಂದು ಐಗಳು ತಾಳಮದ್ದಳೆಯ ಪ್ರಸಂಗ ಸಮಯದಲ್ಲಿ ವ್ಯಾಖ್ಯಾನ ಮಾಡಿದ್ದರಲ್ಲವೇ? (ಪು.೧೧೯) ನಾಗಕ್ಕನನ್ನು ಅನುಭವಿಸಲಾಗದ ರಂಗಪ್ಪಗೌಡರು ಧರ್ಮವನ್ನು ಮುಂದಿಟ್ಟುಕೊಂಡು ತನ್ನ ನಿರ್ಧಾರವೇ ಸರಿ ಎಂದು ಸಮರ್ಥಿಸುತ್ತಿದ್ದಾರೆ.

ನಾಗತ್ತೆ ನಾಗಕ್ಕ ಇಬ್ಬರೂ ವಿಧವೆಯರೆ. ದುಡಿಮೆಗಾಗಿ ಯಾವ ಆಸ್ತಿಯನ್ನು ಹೊಂದಿರದ ನಾಗತ್ತೆ ತನ್ನ ಸೊಸೆ ನಾಗಕ್ಕ ವಿಧವೆಯಾಗುತ್ತಿದ್ದಂತೆ ಅವಳನ್ನು ಕಟ್ಟಿಕೊಂಡು ಮಲೆನಾಡಿನ ಒಕ್ಕಲಿಗ ಶ್ರೀಮಂತರೆನಿಸಿಕೊಂಡವರ ಮನೆಗಳಲ್ಲಿ ಬಾಣಂತನ ಮುಂತಾದ ಕೆಲಸಗಳಲ್ಲಿ ಜೀವನೋಪಾಯವನ್ನು ಕಂಡುಕೊಂಡವರು. ಆದರೆ, ಮಲೆನಾಡಿನ ಶ್ರಮಿಕ ವರ್ಗದ ಮಹಿಳೆಯರು ಸೋಮಾರಿಗಳಾಗಿ ಈ ಕಾದಂಬರಿಯಲ್ಲಿ ಚಿತ್ರಣಗೊಂಡಿಲ್ಲ. ಆದರೆ, ನಾಗತ್ತೆ ನಾಗಕ್ಕ ಹೆಚ್ಚಿನ ಶ್ರಮ ಜೀವಿಗಳಾಗಿ ಕಾಣುತ್ತಿಲ್ಲ. ಸುಖದ ಜೀವನಕ್ಕಾಗಿ ನಾಗತ್ತೆ ತನ್ನ ಸೊಸೆ ನಾಗಕ್ಕಳನ್ನು ಹೊನ್ನಳ್ಳಿಯ ವೆಂಕಟಪ್ಪ ನಾಯಕರಿಗೆ ಸೀರುಡಿಕೆ ಸಂಬಂಧ ಮಾಡಿಸುವ ಪ್ರಯತ್ನದಲ್ಲಿ ನಿರತಳಾಗಿದ್ದಾಳೆ. ಹರಕೆಯ ದಿನ ವೆಂಕಟಪ್ಪ ನಾಯಕರು ಮತ್ತು ನಾಗತ್ತೆ ಕುಟಿಲೋಪಾಯದಿಂದ ಮತ್ತು ಬರುವ ಔಷಧಿಯಿಂದ ನಾಯಕ್ಕನೊಂದಿಗೆ ಸಂಬಂಧವೇರ್ಪಡುವಂತೆ ಮಾಡುವುದು ಶೋಷಣೆಯ ಪರಮಾವಧಿ ಮತ್ತು ಅಮಾನವೀಯವಾಗಿ ಕಾಣುತ್ತದೆ.

ಒಂದು ಹೆಣ್ಣು ಅವಕಾಶ ಸಿಕ್ಕಾಗಲೆಲ್ಲ ಇನ್ನೊಂದು ಹೆಣ್ಣನ್ನು ಶೋಷಣೆ ಮಾಡುತ್ತಾ ಬಂದಿರುವುದು ಇತಿಹಾಸವಾದರೂ ಇಂದಿಗೂ ಸತ್ಯ. ನಾಗತ್ತೆ ತನ್ನ ಬದುಕಿನ ಸಂತೋಷಕ್ಕಾಗಿ ನಾಗಕ್ಕನಿಗೆ  ಯಾವುದೇ ರೀತಿಯ  ಸ್ವಾತಂತ್ರ್ಯವಿಲ್ಲದಂತೆ ಮಾಡಿ ಅವಳ ಶ್ರಮ ಮತ್ತು ಮುಗ್ಧತೆಯನ್ನು ಬಳಸಿಕೊಳ್ಳುವುದನ್ನು ಕಾದಂಬರಿ ಸ್ಪಷ್ಟವಾಗಿ ತೆರೆದಿಡುತ್ತದೆ. ನಾಗಕ್ಕನ ಬದುಕಿನ ಎಲ್ಲಾ ತೀರ್ಮಾನಗಳನ್ನು ವೆಂಕಟಪ್ಪ ನಾಯಕರೇ ತೆರೆದುಕೊಳ್ಳುತ್ತಾರೆ. ಇದು ಪುರುಷ ಪ್ರಧಾನ ಸಂಸ್ಕೃತಿ ಧೋರಣೆ ಎನಿಸುತ್ತದೆ.

ಮುಕುಂದಯ್ಯನ ಪ್ರಾಣಿ ಪ್ರೀತಿಯನ್ನು ಇಲ್ಲೂ ಹೇಳುತ್ತರೆ. ಚಿಟ್ಟುಬಿಲ್ಲನ್ನು ಹಿಡಿದು ಹಕ್ಕಿ ಹುಡುಕುತ್ತಾ ಕಾಡಿನಲ್ಲಿ ಹೊರಟ ಮುಕುಂದಯ್ಯನನ್ನು ಸಮೀಪಿಸಿದರು ಹುಲಿಯನ ಹೆಸರು ಹಿಡಿದು  ಕೂಗಿದೊಡನೆ “ತಟಕ್ಕನೆ ಸಂತೋಷಕ್ಕೆ ಮುಗ್ಗರಿಸಿದಂತೆ ಮುನ್ನುಗ್ಗಿ ಹೆಳು ಮುರಿಯುವಂತೆ ನೆಸೆನೆಸೆದು ಬಂದು ಹಚೀ ಹಚೀ ಏ ಹುಲಿಯಾ! ಎಂದು ಗದರಿಸುತ್ತಿದ್ದರೂ ಲೆಕ್ಕಿಸದೆ ಮುಕುಂದಯ್ಯನ ಎದೆಯವರೆಗೊ ತನ್ನ ಮುಂಗಾಲು ಹಾಕಿ ಹಿಂಗಾಲ ಮೇಲೆಕಂಯ್ಞುಗುಡುತ್ತಾ ತನ್ನ ಮೂತಿಯಿಂದ ಅವನ ಮುಖದವರೆಗೂ ಬಾಗಿ ಅವನ ಬಾಯನ್ನೇ ನೆಕ್ಕಿಬಿಟ್ಟಿತು”! (ಪುಟ.೧೨೪.) ಈ ಮಾತುಗಳಲ್ಲಿ ಹುಲಿಯಾ ಮತ್ತು ಮುಕುಂದಯ್ಯರ ಅನ್ಯೋನ್ಯ ಪ್ರೀತಿ ಮನದಟ್ಟಾಗುತ್ತದೆ. ಅಷ್ಟೇ ಅಲ್ಲ ಇಬ್ಬರ ಸಂಬಂಧ ಇಂದು ನಿನ್ನೆಯದಾಗಿರಲಿಲ್ಲ. ದೊಡ್ಡ ಬೇಟೆಯಲ್ಲಿ ಬಿಲ್ಲಿಗೆ ನಿಂತಿದ್ದ ಮುಕುಂದಯ್ಯನಿಗೆ ಹುಲಿಯ ಹಂದಿ ಸೋವಿ ಎಂದುದರಿಂದ ಅದಕ್ಕೊಂದು ಗುಂಡುಹೊಡೆಯಲು ಸಾಧ್ಯವಾಗಿತ್ತು. ಇಂತಹ ಪ್ರೀತಿಯ ಹುಲಿಯಾ ತನ್ನೊಂದಿಗೆ ಇರಬೇಕೆಂದು ಅಪೇಕ್ಷೆಪಟ್ಟು ಗುತ್ತಿಯಿಂದ ಬೇಡಿ ಪಡೆಯುತ್ತಾನೆ. ಹುಲಿಯನನ್ನು ಬಿಟ್ಟಿರಲಾರದೆ ಅಳುವ ಗುತ್ತಿ ಒಂದೆಡೆಯಾದರೆ, ಹುಲಿಯನನ್ನು ತನ್ನಲ್ಲೇ ಉಳಿಸಿಕೊಳ್ಳುವ ಉಪಾಯಗಳನ್ನು ಹುಡುಕುವ ಮುಕುಂದಯ್ಯ ‘ನೆಲಸುಟ್ಟು’ ಅನ್ನ ಹಾಕಿಯಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಕೊನೆಗೂ ಮುಕುಂದಯ್ಯ ನಾಯಿಗಾಗಿ ಕೊಟ್ಟಿದ್ದ ವಸ್ತುಗಳನ್ನು ಹಿಂದಿರುಗಿಸಿ ದುಃಖಿತನಾಗಿ ವಾಪಾಸಾಗುತ್ತಾನೆ. ಈ ಕಡೆಯಿಂದ ಮುಕುಂದಯ್ಯನಿಗೆ ಹೇಗಾದರೂ ಮಾಡಿ ಹುಲಿಯನನ್ನು ತನ್ನೊಂದಿಗೆ ಉಳಿಸಿಕೊಳ್ಳುವ ಹಂಬಲ. ಅದಕ್ಕಾಗಿ ನೆಲಸುಟ್ಟು ಬೆಲ್ಲ ಹಾಕಿ ಅನ್ನ ಹಾಕಿ ಮೊದಲ ಪ್ರಯತ್ನ ಮಾಡಿದನು.

ಆದರೆ, ನಾಯಿ ಯಾವ ಪ್ರತಿಕ್ರಿಯೆ ತೋರಿಸದೆ ಇದ್ದಾಗ ಸಮಾಧಾನಿಯಾಗಿ ಹುಲಿಯನ ಕುತ್ತಿಗೆಯ ಕಟ್ಟು ಬಿಚ್ಚಿದನು. ಸಂತೋಷಕ್ಕೆ ಅವನ ಕುತ್ತಿಗೆಯ ಮೇಲೆ ನೆಗೆದು ಮನೆಯ ಒಳ ಹೊರಗೂ ಓಡಾಡಿದ ನಾಯಿ ಓಡುತ್ತಿದ್ದಾಗ ಆಶ್ಚರ್ಯದಿಂದ ನೋಡಿದರೆ ಗುತ್ತಿ ಹೋದ ಕಡೆ ಮರೆಯಾಯಿತು. ಮಲೆನಾಡಿನಲ್ಲಿ ಪ್ರಚಲಿತದಲ್ಲಿದ್ದ  ‘ಮುಷ್ಠ’ ಪದ್ಧತಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾರೆ. ಇದೊಂದು ಗಾಢವಾದ ನಂಬಿಕೆ. ಹಲವರು ಮುಷ್ಠವನ್ನು ತಮ್ಮ ಕಾರ್ಯ ಸಿದ್ಧಿಗಾಗಿ ಬಳಸಿಕೊಳ್ಳುತ್ತ ಬಂದಿದ್ದರು. ಬಹುಶಃ ಈಗಲೂ ಚಾಲ್ತಿಯಲ್ಲಿರಬಹುದು.

ಒಮ್ಮೆ ಕಾಡು ಹಾದಿಯಲ್ಲಿ ಮುಕುಂದಯ್ಯ ಬರುತ್ತಿರುವಾಗಿ ಹುಲಿಯ ಮತ್ತು ಗುತ್ತಿಯನ್ನು ಕಂಡು ಅತೀವ ಸಂತೋಷವಾಯಿತು. ಹುಲಿಯನ ಬಗ್ಗೆ ಇದ್ದಷ್ಟೇ ಪ್ರೀತಿ ಗುತ್ತಿಯನ್ನು ಕಂಡಾಗಲೂ ಆಯಿತು. “ಅಭೇದ ಸಂಬಂಧವಿತ್ತು ನಾಯಿಗೂ ಹೊಲೆಯನಿಗೂ” (ಪು. ೧೨೮)

ಕುವೆಂಪು ಸಾಹಿತ್ಯ ‘ಜೀವನಪರ’ವಾದುದನ್ನು ಸಮರ್ಥಿಸುತ್ತಿದೆ ಎನ್ನುವ ಮಾತು ಈ ಸಂದರ್ಭಕ್ಕೆ ಚೆನ್ನಾಗಿ ಹೊಂದುತ್ತಿದೆ. ಆದರೆ, ಜಾತಿಪಿರಮಿಡ್ಡಿನಲ್ಲಿ ಮೆಲ್‌ಸ್ತರದಲ್ಲಿರುವ ಮುಕುಂದಯ್ಯನಿಗೆ ಕೆಳಸ್ತರದಲ್ಲಿರುವ ಗುತ್ತಿ ಶ್ರೇಷ್ಠವಾಗಿ ಕಾಣುವುದು ಒಂದೆಡೆಯಾದರೆ, ನಾಯಿ ಹುಲಿಯನ ಬಗ್ಗೆ ಅಪಾರವಾದ ಪ್ರೀತಿ ವ್ಯಕ್ತವಾಗುವುದು ಇನ್ನೊಂದು ವಿಶೇಷ.

ಮಲೆನಾಡಿಗೆ ಬೈಸಿಕಲ್ಲು ಪ್ರವೇಶಿಸಿದಾಗ ಆ ಭಾಗದ ಜನತೆ ಸಹಜವಾಗಿ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದರು. ಪಾದ್ರಿಜೀವರತ್ನಯ್ಯ ಅವರ ಕುತೂಹಲ ಕಂಡು ಎಲ್ಲರೂ ಕ್ರೈಸ್ತಮತಕ್ಕೆ ಸೇರಿದರು ಎಂದು ಭಾವಿಸುತ್ತ “ಮತ ಪ್ರಚಾರಕ್ಕೆ ಬೈಬಲ್ಲು ಏಸುಕ್ರಿಸ್ತರಿಗಿಂತಲೂ ಸೈಕಲ್ಲೇ ಹೆಚ್ಚು ಪ್ರಭಾವಶಾಲಿ! (ಪು.೧೫೨) ಎಂದು ಖುಚಿಪಡುತ್ತಾರೆ. ಆದರೆ, ಬೈಸಿಕಲ್ಲಿನಂತಹ ಮಾಯಾ ಪ್ರಪಂಚ ಕೆಲವೇ ದಿನಗಳಲ್ಲಿ ಈ ಜನರ ಭಾವಕೋಶದಿಂದ ಮರೆಯಾಗುತ್ತದೆ. ದೇವಯ್ಯ ಬಚ್ಚನಂತವರನ್ನು ಪರಿವರ್ತಿಸುತ್ತಿದ್ದೇನೆ ಎಂದಷ್ಟೇ ಬೀಗಬೇಕಾಗುತ್ತದೆ. ಬೈಸಿಕಲ್ಲು ಸವಾರಿ ನಡೆಯುತ್ತಿದ್ದಂತೆ ಸೂರ್ಯಾಸ್ತಮದ ಸಮಯದಲ್ಲಿ ಇದ್ದಕ್ಕಿದ್ದಂತೆ ಜೀವರತ್ನಯ್ಯ ಮಂಡಿಯೂರಿ ಕುಳಿತು ಪ್ರಾರ್ಥನೆ ಮಾಡುತ್ತಾರೆ. ಅವರೊಂದಿಗೆ ದೇವಯ್ಯನೂ, ಬಚ್ಚನೂ, ಮಂಡಿಯೂರಿ ಪ್ರಾರ್ಥನೆ ಮಾಡುವುದನ್ನು ಹಳೆ ಮನೆ ಹೊಲೆಯರ ಮಂಜು, ಚೀಂಕ್ರ, ಐತ, ಕಟುಟೀಕೆಗೆ ಒಳಪಡಿಸುತ್ತಾರೆ, ಹಾಸ್ಯ ಮಾಡುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ. ಮತ ಪ್ರಚಾರ ಮಾಡುವ ಪಾದ್ರಿಗೆ ಅಲ್ಲಿ ಸೇರಿರುವ ಅಷ್ಟೂ ಜನರನ್ನೂ ತನ್ನ ಧರ್ಮಕ್ಕೆ ಸೇರಿಸಿಕೊಳ್ಳಬಹುದೆಂದು ದೂರದ ಆದೆ. ಅಲ್ಲಿ ಸೇರಿರುವವರ ಮನಸ್ಸಿನಾಳದಲ್ಲಿದ್ದುದೇ ಬೇರೆ. ಪ್ರಾರ್ಥಿಸುತ್ತಿರುವವರ ಭಾವ ಭಂಗಿಯನ್ನು ಕುರಿತು ಅಪಹಾಸ್ಯ ಮಾಡುತ್ತಾರೆ. ಬಚ್ಚ ಮಂಡಿಯೂರಿ ಕುಳಿತದ್ದನ್ನು ನೋಡಿ ಐತ ಚೀಂಕ್ರನಿಗೆ ತೋರಿಸುತ್ತಾ “ನೋಡೋ ನೋಡೋ ಆ ಹೊಲೆಯ ಬಚ್ಚನೂ ಮಂಡಿಯೂರಿ ಕೂತುಬಿಟ್ಟಿದ್ದಾನಲ್ಲ! ಹ್ಹಿ, ಹ್ಹಿ, ಹ್ಹಿ! ಮಂಡಿನಾರೂ ಊರ್ಲಿ ಕುಂಡಿನಾರೂ ಊರ್ಲಿ! ನೀ ಬಾ ಹೋಗುವ ನಾವು! (ಪು.೧೫೬) ಎನ್ನುತ್ತಾನೆ. ಅಪಹಾಸ್ಯದ ಮಾತನಾಡುವವರೆಲ್ಲರೂ ಹೊಟ್ಟೆಪಾಡಿಗಾಗಿ ಕಾಯಕ ಮುಖ್ಯವಾಗಿದ್ದವರು. ಇಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದು ಮುಖ್ಯವೋ ಮತಧಮ್ಮದ ಚಿಂತನೆ ಮುಖ್ಯವೋ ಎಂದು ಭಾವಿಸಬೇಕಾಗುತ್ತಿದೆ. ಎಲ್ಲರಿಗೂ ಯಾವುದು ಮುಖ್ಯ ಅಮುಖ್ಯ ಎಂದು ಗೊತ್ತಿರುವಂತೆ ವರ್ತಿಸುತ್ತಿದ್ದಾರೆ.

ಮುಕುಂದಯ್ಯ ಮತ್ತು ಚಿನ್ನಮ್ಮರ ವಿವಾಹಪೂರ್ವ ಪ್ರೀತಿಯ ಮಧ್ಯವರ್ತಿಯಾಗಿ ಜಾಣೆಯಾದ, ಭಯಭಕ್ತಿಯನ್ನೆ ಹೊಂದಿದ ಪೀಂಚಲುವನ್ನು ಮುಕುಂದಯ್ಯ ಆಯ್ಕೆ ಮಾಡುತ್ತಾನೆ. ಐತನನ್ನು ಆಯ್ಕೆ ಮಾಡದಿರಲು ಕಾರಣಗಳನ್ನು ಕೊಡುವ ಮುಕುಂದಯ್ಯ ಅವನ ಹರುಕುಬಾಯಿಗೆ ತುಂಬಾ ಹೆದರುತ್ತಾನೆ. ಪೀಂಚಲುವನ್ನು ಆಯ್ಕೆ ಮಾಡಲು ಕಾರಣ ಬಹುಶಃ ಇಬ್ಬರೂ ಸ್ತ್ರೀಯರಾಗಿರುವುದರಿಂದ ವ್ಯವಹಾರವನ್ನು ಸಲೀಸಾಗಿಸುವ ಯೋಚನೆ ಇರಬಹುದು. ಕಾರ್ಯಸಿದ್ಧಿಯ ಬಗ್ಗೆ ಪೀಂಚಲುವಿಗೆ ಇದ್ದ ಆತ್ಮವಿಶ್ವಾಸವಿರಬಹುದು.

ಬೆಟ್ಟಳ್ಳಿಯ ದೇವಯ್ಯನ ಮತಾಂತರದ ವಿಚಾರವನ್ನು ವಿವರಿಸುವಾಗ ಅಷ್ಟೇ ನಿಖರವಾಗಿ ದೇವಯ್ಯನ ಹೆಂಡತಿ ದೇವಮ್ಮಳ ಮನಃಸ್ಥಿತಿಯ ವಿವರಗಳೂ ಇವೆ. ಮಗುವಿಗೆ ಜನ್ಮ ನೀಡಿದ ದೇವಮ್ಮ ಬಾಣಂತಿ. ಸಹಜವಾಗಿಯೇ ನಿತ್ರಾಣಳಾಗಿದ್ದಳು. ಅವಳ ನಂಬಿಕೆಯಂತೆ ಮಗುವಿನ ರಕ್ಷಣೆಗಾಗಿ ಮಗುವಿನ ಕೋಣೆ ಅಂತ್ರದಗಂಟುಗಳಿಂದ ಮತ್ತು ಭೂತದ ಗಾಳಿ ಒಳಗೆ ನುಗ್ಗದ ರೀತಿಯಲ್ಲಿ ಕತ್ತಲಾಗಿತ್ತು. ಪಾದ್ರಿಯವರ ಉಪದೇಶದಿಂದ ಮೂಢನಂಬಿಕೆಗಳನ್ನು ಒಂದೇ ಸಾರಿಗೆ ತೊಡೆದು ಹಾಕುವ ಪಣತೊಟ್ಟಂತೆ ಭಾವಿಸಿದ್ದ ದೇವಯ್ಯನಿಗೆ ಆ ಕೋಣೆ ತಿರಸ್ಕಾರ ಮಾಡಿಸಿದ್ದು ಸಹಜ. ಆದರೆ, ದೇವಮ್ಮನ ಸಿಟ್ಟಿನ ಪ್ರಶ್ನೆಯೂ ಅಷ್ಟೇ ಸಹಜವಾಗಿತ್ತು. ಇವುಗಳ ಅಗತ್ಯವೇನಿತ್ತು ಎಂದು ಪ್ರಶ್ನಿಸುವ ದೇವಮ್ಮ “ಅವೆಲ್ಲ ನಿಮಗ್ಯಾಕೆ? ಗಂಡಸಿಗೆ? (ಪು.೨೦೦) ಎಂದು ಪ್ರತಿಕ್ರಿಯಿಸುವಾಗ ಅವಳ ಒಳಗಿನ ವಿರೋಧ ವ್ಯಕ್ತವಾಗುತ್ತದೆ. “ಆ ಕಾಲದ ಎಷ್ಟೋ ಮಹಿಳೆಯರು ತಾನಿರುವ ಪ್ರಪಂಚವನ್ನು ಬಿಟ್ಟರೆ ಬೇರೊಂದು ಪ್ರಪಂಚದ ಕಲ್ಪನೆಯನ್ನೂ ಮಾಡಲಾರದವರಾಗಿದ್ದರು. ಅದಕ್ಕಿಂತ ಹೊರತಾದ ಸುಖದ ಅಪೇಕ್ಷೆಯೂ ಇಲ್ಲ. ವ್ಯಥೆಯೂ ಇಲ್ಲ ಎನ್ನುವಂತೆ ಬದುಕಿದ್ದವರು.” ಆ ಕ್ಷಣಕ್ಕಾದರೂ ಪ್ರತಿಭಟಿಸುವ ದೇವಮ್ಮ ಬಹಳ ದೊಡ್ಡ ವಿಚಾರವಾದಿಯಾಗಿ ಕಾಣದಿದ್ದರೂ, ದೇವಯ್ಯನು ಮಾಡುವ ಕ್ರಿಶ್ಚಿಯನ್ ಧರ್ಮದ ಗುಣಗಾನವನ್ನು ತಿರಸ್ಕರಿಸಿ ತನ್ನ ವಾದವನ್ನೇ ಒಪ್ಪುವಂತೆ ಮಾಡಲು ಯಶಸ್ವಿಯಾಗುತ್ತಾಳೆ.

ತಿಮ್ಮಿ ಗುತ್ತಿಯೊಂದಿಗೆ ಹುಲಿಕಲ್ಲು ನೆತ್ತಿಯಲ್ಲಿ ರಾತ್ರಿ ಕಳೆದು ಆ ಸುಖಾನುಭವದ ನೆನಪಿನಿಂದ ಸಾಗುತ್ತಾಳೆ. ಸೂರ್ಯೋದಯ ತಿಮ್ಮಿಯ ಹೃದಯದಲ್ಲಿ ಭೂಮಾನುಭೂತಿ ಸಂಚಾರವಾಗುವಂತೆ ಮಾಡಿತ್ತು. “ಅಃ ಭಾವ ನಮ್ಮ ಬಿಡಾರ ಇಲ್ಲೇ ಇದ್ದಿದ್ರೆ” ಎಂದು ಹೇಳಲು ಮಾತ್ರ ಶಕ್ತವಾಗಿತ್ತು ಅವಳಿಗೆ ತಿಳಿದ ಭಾಷೆ. ಅವಳ ಚೇತನದ ಅನುಭವದ ಅಭಿವ್ಯಕ್ತಿಗೆ ಪ್ರತೀಕವಾಗಿತ್ತು! ಮೂಡುತ್ತಿದ್ದ ದಿನ ಸ್ವಾಮಿಗೆ ಕೈ ಮುಗಿಯುತ್ತಾ ನಕ್ಕು ಹೇಳಿದ ಗುತ್ತಿ ನಮ್ಮ ಬಿಡಾರ ಇಲ್ಲೇ ಇದ್ದಿದ್ರಾ? ನಿನ್ನ ಮಗ್ಗುಲಾಗೆ ಮನಗ್ತಿತ್ತು… ಹುಲಿ! ಹುಲಿ ಏನು ನಿನ್ನ ಹಂಗಲ್ಲ? ಅದ್ನೂ ಮಾನಮರ್ವಾದೆ ಅದೆ! ಗುತ್ತಿ ತತ್ತರಿಸುವಂತೆ ಉತ್ತರ ಬಿಗಿದ್ದಿದ್ದಳು ತಿಮ್ಮಿ!” (ಪು.೨೧೩)

ಗುತ್ತಿ ತಿಮ್ಮಿಯ ಜಾಣಮಾತನ್ನು ನೆನಪಿಸಿ ನಕ್ಕು ಮುಂದೆ ಸಾಗುತ್ತಿದ್ದಾಗ ಸಮಯಕ್ಕೆ ಸರಿಯಾಗಿ ತಿಮ್ಮಿ ಎಡವಿದ್ದಳು. ಗುತ್ತಿ ನಗುವಿನಿಂದ ಅವಮಾನಿತಳಾದ ತಿಮ್ಮಿ “ನಾ ಎಡಗಿದ್ರೆ ನಿಂಗೆ ತಮಾಷೆ! ನಾ ನಿನ್ನ ಜೊತೆ ಬಂದದ್ದೇ ತಪ್ಪು!” (ಪು. ೨೧೩) ಎಂದದಕ್ಕೆ ಕೆಣಕಿ ಪೀಡಿಸುವ ಉದ್ದೇಶದಿಂದ ತನ್ನ ಎಡಕೈಗೆ ಕಟ್ಟಿದ್ದ ತಾಯಿತ ತೋರಿಸಿ ‘ಈ ಅಂತ್ರದ ಶಕ್ತಿಯಿಂದ ನೀನು ನನ್ನ ಹಿಂದೆ ಬಂದದ್ದು ಇದು ಕಣ್ಣಾ ಪಂಡಿತರು ಕೊಟ್ಟ ಅಂತ್ರ’ ಎಂದು ಹೇಳುತ್ತಾನೆ. ತನ್ನ ಪ್ರಯತ್ನಕ್ಕಿಂತ ನಿನ್ನ ಪ್ರೀತಿಗಿಂತಲೂ ಕಣ್ಣಾ ಪಂಡಿತರು ಕೊಟ್ಟ ಅಂತ್ರದ ಶಕ್ತಿಯೇ ಹೆಚ್ಚು ಎಂದು ಸೂಚಿಸುತ್ತಾನೆ. ಆದರೆ, ತಿಮ್ಮ ತನಗೆ ಗೊತ್ತಿದ್ದ ಸತ್ಯವನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾಳೆ. ‘ಆ ಬಚ್ಚನಿಗೂ ಕೊಟ್ಟಿದ್ದಾರೆ. ನಿಂಗೊಬ್ಬನಿಗೇ ಅಲ್ಲ!’ ಎಂದು ಸೋತವನಿಗೆಯೆಂಬಂತೆ ಗೆದ್ದದನಿಯಲ್ಲಿ ಪ್ರತಿಕ್ರಿಯಿಸುತ್ತಾಳೆ. ಪ್ರೀತಿಯಿಂದ ಜಗಳವೂ ನಡೆದು ಹುಡುಗಿ ತುಂಬಾ ಬದಲಾಗಿದ್ದಾಳೆ ಎಂದು ತಾನೇ ಸುಮ್ಮನಾಗುತ್ತಾನೆ ಗುತ್ತಿ. ಗುತ್ತಿಯ ಪ್ರಶ್ನೆಗಳಿಗೆಲ್ಲ ನೇರವಾಗಿ ಹಿಂದು ಮುಂದು ಆಲೋಚನೆಗಳಿಲ್ಲದೆ ಉತ್ತರ ಸಿದ್ಧವಾಗಿತ್ತೇನೋ ಎನ್ನುವ ರೀತಿಯಲ್ಲಿ ಉತ್ತರಿಸಿ ತಡಸ್ಥಳಾಗುವ ತಿಮ್ಮಿ ತುಂಬಾ ಸೌಮ್ಯವಾಗಿ, ಮುಗ್ಧವಾಗಿ ‘ಸಹಜ ಪ್ರೀತಿ’ಯನ್ನು ಅತ್ಯಂತ ಸರಳ ಶೈಲಿಯಲ್ಲಿ ಹೇಳುತ್ತಿದ್ದಾಳೆ ಎನಿಸುತ್ತದೆ. ಇಬ್ಬರ ಪ್ರೀತಿ ಯಾವ ಬಾಹ್ಯ ಒತ್ತಡಗಳಿಂದಲೂ ತಳೆದದ್ದಲ್ಲ ಅಂತರಂಗದಿಂದಲೇ ಸ್ಫುರಿಸಿದ್ದು ಎಂದು ಸೂಚಿಸುವುದಕ್ಕಾಗಿ ಈ ನವಿರಾದ ಸಂಭಾಷಣೆಯನ್ನು ತರುತ್ತಿದ್ದಾರೆ ಎನಿಸದಿರಲಾರದು.

ದೊಡ್ಡಣ್ಣ ಹೆಗ್ಗಡೆಯ ಹೆಂಡತಿ ರಂಗಮ್ಮನನ್ನು ಮೈದುನ ಮೂಲೆ ಸೇರಿಸುವ ಪ್ರಯತ್ನ ಸಫಲವಾಗಿತ್ತು. ಹೊಡೆದು ಬಡಿದು ಕೋಣೆ ಸೇರಿಸಿ ದೌರ್ಜನ್ಯವೆಸಗುವ ತಿಮ್ಮಪ್ಪ ಹೆಗ್ಗಡೆ ಅಮಾನವೀಯವಾಗಿ ಕಾಣುತ್ತಾನೆ. ಗಂಡಸತ್ತಿದ್ದನ್ನು ತಿಳಿಯಲಾಗದೆ ಮುತ್ತೈದೆಯಾಗಿಯೇ ಉಳಿದ ಅನಿಷ್ಠ ಎಂದು ಜರಿದು ಹಂಗಿಸುವ ಮೈದುನನಿಗೆ ಪ್ರಾರಂಭದಲ್ಲಿ ಅಣ್ಣ, ಅತ್ತಿಗೆ ಮತ್ತು ಮಗ ಧರ್ಮುವಿನ ಮೇಲೆ ಪ್ರೀತಿ ಇತ್ತು. ಅಣ್ಣನನ್ನು ಹುಡುಕುವ ಸಲುವಾಗಿ ಐಶ್ವರ್ಯವೆಲ್ಲ ಕರಗುತ್ತಿದೆ ಎಂಬ ಅನುಮಾನಕ್ಕೆ ಸಿಲುಕಿ ಅಣ್ಣ, ಅತ್ತಿಗೆಯರನ್ನು ಅವನ ಹೃದಯದಿಂದ ಕಿತ್ತು ಹಾಕಿದ್ದ. ಪೂರ್ಣ ಆಸ್ತಿಯ ಒಡೆತನಕ್ಕಾಗಿ ಅವನು ಅತ್ತಿಗೆಯನ್ನು ಕ್ರೂರವಾಗಿ ಕಾಣುವಂತೆ ಮಾಡುತ್ತಿತ್ತು. ಒಟ್ಟು ಕುಟುಂಬದ ಕೆಲವು ದೌರ್ಜನ್ಯಗಳು ಇಂತಹ ಸಂದರ್ಭದಲ್ಲಿ ತೆರೆದುಕೊಳ್ಳುತ್ತವೆ.

ತನ್ನ ಮಗನಿಗೆ ಇಜಾರದ ಸಾಬಿಯಿಂದ ಬೀಳುತ್ತಿದ್ದ ಪೆಟ್ಟುಗಳನ್ನು ತಪ್ಪಿಸುವ ಸಲುವಾಗಿ ಸೇಸಿ ಮಾಡಿದ ಪ್ರತಿಭಟನೆ ಅವಳ ತಾಯ್ತನದ ಉತ್ತುಂಗ ಸ್ಥಿತಿಯನ್ನು ತೋರಿಸುವಂತೆ ಚಿತ್ರಿಸುತ್ತಾರೆ. ಗೌಡರನ್ನು ಬಹಳ ದೂರದಿಂದಲೇ ಕಾಣುತ್ತಿದ್ದ ಸೇಸಿ ಭಯ ಮರೆದು ಧೀರತೆಯಿಂದ ನನ್ನನ್ನು ಬೇಕಾದರೆ ಹೊಡೆದು ಹಾಕಿ! ನನ್ನ ಗಂಡ ಮಕ್ಕಳನ್ನು ಮಾತ್ರ ಕೊಲ್ಲಿಸಬೇಡಿ! ಎಂದು ಆರ್ತಳಾಗಿ ಬೇಡುತ್ತಾಳೆ. ಇನ್ನುಳಿದು ಇನ್ನೇನು ಅವಳಿಗೆ ದಾರಿಯೇ ಇಲ್ಲ. ಕೆಳವರ್ಗದ ಜಾತಿಯವರಿಗೆ ಸಣ್ಣಪುಟ್ಟ ಕಾರಣಕ್ಕಾಗಿ ವಿಕೃತವಾದ ಹಿಂಸೆ ಕೊಡುತ್ತಿದ್ದುದು ಆ ಕಾಲದಲ್ಲಿ ಕ್ರೂರತೆಗೆ ಸಾಕ್ಷಿಯಾಗಿತ್ತು. ಇಲ್ಲಿ ಸೇಸಿಯ ತಾಯ್ತನವನ್ನು ಮನಕರಗುವಂತೆ ಚಿತ್ರಿಸುವ ಕುವೆಂಪು, ಗುತ್ತಿ ತಿಮ್ಮಿಯ ಮದುವೆ ಮುಂಚಿನ ಪ್ರೀತಿಯನ್ನು ಅತ್ಯಂತ ನವಿರಾಗಿ ಚಿತ್ರಿಸುವ ಕುವೆಂಪು ಕಾದಂಬರಿಯ ಪ್ರಾರಂಭದಲ್ಲಿ ಬರುವ ಕಾಡಿಯ ಪಾತ್ರದ ವೇದನೆಯನ್ನು ಮಾತ್ರ ಮೂಕವೇದನೆಯಾಗಿಸುತ್ತಾರೆ.

ಶೆಡ್ತಿಯ ಮಗಳು ಕಾವೇರಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ನೋವಿನಿಂದ ಹೊರ ಬರಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದು ಕ್ರೂರ ವ್ಯವಸ್ಥೆಗೆ ಹಿಡಿದ ಕನ್ನಡಿ.

ಈ ಕಾದಂಬರಿಯಲ್ಲಿ ಬರುವ ಮಧ್ಯಮವರ್ಗದ ಬಹುತೇಕ ಮಹಿಳೆಯರು ರೈತ ಮಹಿಳೆಯರು, ವಿಧವೆಯರು, ಗೃಹಿಣಿಯರು, ಕುಟುಂಬದೊಳಗಿನ ಮತ್ತು ಹೊರಗಿನ ಜವಾಬ್ದಾರಿಗಳನ್ನು ಹೊತ್ತು ಹಣ್ಣಾದವರು. ಈ ಕಾದಂಬರಿಯ ಮಹಿಳಾ ಪಾತ್ರಗಳು ಸಂಪ್ರದಾಯಿಕವಾದ ಸ್ಥಾಪಿತ ಮೌಲ್ಯಗಳನ್ನು ಒಪ್ಪಿಕೊಂಡು ಬದುಕುತ್ತವೆ.

ಗ್ರಂಥ ಋಣ

೧. ಮಲೆಗಳಲ್ಲಿ ಮದುಮಗಳು-ಕುವೆಂಪು
ಉದಯರವಿ ಪ್ರಕಾಶನ, ವಾಣಿವಿಲಾಸಪುರಂ, ಮೈಸೂರು-೨
ಪ್ರಥಮ ಮುದ್ರಣ ೧೯೬೩, ಎರಡನೆ ಮುದ್ರಣ-೧೯೩೪.

೨. ಮಹಿಳೆ ಸಾಹಿತ್ಯ ಸಮಾಜ-ವಿಜಯಾ ದಬ್ದೆ,
ಮುದ್ರಕರು: ಶ್ರೀಶಕ್ತಿ ಎಲೆಕ್ಟ್ರಿಕಲ್ ಪ್ರೆಸ್‌, ಜಯನಗರ, ಮೈಸೂರು.

* * *