೧೯೨೬ರಿಂದ ೧೯೭೪ರವರೆಗೆ ೪೮ ವರ್ಷಗಳಲ್ಲಿ ಕುವೆಂಪು ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಅಗಾಧವಾದ ಕುವೆಂಪು ಅವರ ಸಾಹಿತ್ಯ ಸೃಷ್ಟಿಯಲ್ಲಿ ಈ ನಾಟಕಗಳು ಅನೇಕ ಕಾರಣಗಳಿಂದ ಮಹತ್ವಪೂರ್ಣವಾಗಿವೆ. ಈ ನಾಟಕಗಳಲ್ಲಿ ಕಾವ್ಯ, ಕಥನ, ವಿಮರ್ಶೆ ಮತ್ತು ವೈಚಾರಿಕತೆಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತವೆ.

ಯಮನ ಸೋಲು, ಶ್ಮಶಾನ ಕುರುಕ್ಷೇತ್ರಂ, ವಾಲ್ಮೀಕಿಯ ಭಾಗ್ಯ, ಶೂದ್ರ ತಪಸ್ವಿ, ಬೆರಳ್‌ಗೆ ಕೊರಳ್, ಚಂದ್ರಹಾಸ, ಕಾನೀನ-ನಾಟಕಗಳ ವಸ್ತು-ಪೌರಾಣಿಕ ಮಾದರಿಯ ಭಿತ್ತಿಯನ್ನೊದಗಿಸುವುದು ಕುವೆಂಪು ಅವರ ವಿಶಿಷ್ಟತೆ.

೧೯೨೬ರಲ್ಲಿ ಪ್ರಕಟವಾದ ಕುವೆಂಪು ಅವರ ಮೊದಲ ನಾಟಕ ‘ಮೋಡಣ್ಣನ ತಮ್ಮ’ದಿಂದ ೧೯೭೪ರಲ್ಲಿ ಪ್ರಕಟವಾದ ಅವರ ಕೊನೆಯ ನಾಟಕ ‘ಕಾನೀನ’ದವರೆಗೆ, ಬರೆದ ಎಲ್ಲ ೧೪ ನಾಟಕಗಳಲ್ಲೂ ಕುವೆಂಪು ಅವರ ಪೂರ್ಣದೃಷ್ಟಿಯ ಅನೇಕ ಅಂಶಗಳು ಬೇರೆ ಬೇರೆ ನೆಲೆಗಳಲ್ಲಿ ಪ್ರಕಟವಾಗುತ್ತವೆ. ಯಾವುದೇ ವಸ್ತುವನ್ನು ಆರಿಸಿಕೊಂಡರೂ ಅವುಗಳ ಮೂಲಕ ಬದುಕಿನ ನಿತ್ಯಸತ್ಯಗಳನ್ನು ಬದುಕಿನ ಮಹತ್ತನ್ನು ಹಿಡಿದಿಡುತ್ತಾರೆ ಕುವೆಂಪು.

ಮಕ್ಕಳ ನಾಟಕ ‘ಮೋಡಣ್ಣನ ತಮ್ಮ’ದಲ್ಲಿ ಮೋಡದ ಜೊತೆ ಆಟವಾಡಲು ಬಯಸುವ ಪುಟ್ಟ ಹುಡುಗಿ ಕಿಟ್ಟು, ಮನುಷ್ಯರ ದುರಾಸೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ, ಪುಟ್ಟ ಹುಡುಗನಿಗೆ ಬುದ್ದಿ ಹೇಳುವ ಬೆಟ್ಟ-ಹೀಗೆ ಕಥೆ ಸಾಗುತ್ತದೆ.

ಕುವೆಂಪು ಅವರ ವಿಶ್ವಮಾನದ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಅವರ ಮೊದಲ ನಾಟಕಗಳಲ್ಲೇ ಮೊಳಕೆಯೊಡೆಯುತ್ತವೆ.

೧೯೨೮ರಲ್ಲಿ ಪ್ರಕಟವಾದ ‘ಜಲಗಾರ’ ನಾಟಕ, ಆ ಕಾಲಕ್ಕೆ ಒಂದು ಸಂಚಲನವನ್ನೇ ಉಂಟು ಮಾಡಿರಬೇಕು. ಊರಿನಲ್ಲಿ ಜಾತ್ರೆ ನಡೆಯುತ್ತಿರುತ್ತದೆ. ಎಲ್ಲರೂ ಶಿವನ ಗುಡಿಗೆ ಹೋಗುತ್ತಿದ್ದಾರೆ. ಆದರೆ, ಜಲಗಾರ ರಸ್ತೆಗಳನ್ನು ಗುಡಿಸುತ್ತಿದ್ದಾನೆ. ಅವನು ಗುಡಿಗೆ ಹೋಗಲಾರ, ಅವನು ಬಹಿಷ್ಕೃತ, ಅವನಿಗೆ ಗುಡಿಯಲ್ಲಿ ಪ್ರವೇಶವಿಲ್ಲ. ಜಾತ್ರೆಗೆ ಹೋಗುತ್ತಿರುವ ಬ್ರಾಹ್ಮಣರ ಕಪಟತನ, ಭಿಕ್ಷುಕನೊಬ್ಬನ ಅಸಹಾಯಕತೆ, ರೈತನ ಕರ್ಮಯೋಗ, ಯುವಕರ ಸ್ವೇಚ್ಛಾ ಪ್ರವೃತ್ತಿ-ಎಲ್ಲವೂ ನಾಟಕದಲ್ಲಿ ಪ್ರಕಟವಾಗಿದೆ.

ಆದರೆ, ಶಿವ ಪ್ರತ್ಯಕ್ಷನಾಗುವುದು ಯಾರಿಗೂ ಅಲ್ಲ, ಕರ್ಮಯೋಗಿ, ದಲಿತ, ಅಸ್ಪೃಶ್ಯ ಜಲಗಾರನಿಗೆ. ಅದೂ, ಗಂಗೆಯನ್ನು ಮುಡಿಯಲ್ಲಿ ಹೊಂದಿದ, ಹಾವನ್ನು ಕೊರಳಲ್ಲಿ ಸುತ್ತಿದ, ಚಂದ್ರನ್ನು ಮುಡಿದ, ವಿಭೂತಿ, ಜಟಾಧಾರಿ ಶಿವನಲ್ಲ. ಅವನು ಮತ್ತೊಬ್ಬ ಜಲಗಾರನ ವೇಷದಲ್ಲಿಯೇ ಪ್ರತ್ಯಕ್ಷನಾಗಿ ‘ನಾನು ಜಗದ ಜಲಗಾರ’ ಎನ್ನುತ್ತಾನೆ. ಕೊನೆಯಲ್ಲಿ, ಕಸಗುಡಿಸುವ ಜಲಗಾರನಲ್ಲಿ ಲೀನನಾಗುತ್ತಾನೆ.

ಇಲ್ಲಿ, ನಿಜವಾದ ದೇವರು ಯಾರು? ಎಂಬ ಪ್ರಶ್ನೆ ಚರ್ಚಿತವಾಗಿದೆ. ಜಾತಿ ಮತ್ತು ವೃತ್ತಿ ಆಧಾರಿತ ಶ್ರೇಣಿಕೃತ ವ್ಯವಸ್ಥೆಯನ್ನು ಧಿಕ್ಕರಿಸುವ, ಜಾತಿ, ಮತದ ಎಲ್ಲೆಗಳನ್ನು ಮೀರುವ ತುಡಿತವಿದೆ. ಕುವೆಂಪುರವರ, ಸ್ಥಾಪಿತ ವ್ಯವಸ್ಥೆಗೆ ಪ್ರತಿರೋಧ ತೋರುವ ಈ ದೃಷ್ಟಿಯೇ ಮುಂದಿನ ಹಲವು ನಾಟಕಗಳಲ್ಲಿ ಅನುರಣಿಸಿದೆ.

೧೯೨೮ರಲ್ಲಿ ಬರೆದ ‘ಯಮನ ಸೋಲು’ ನಾಟಕ, ನವೋದಯದ ಆದರ್ಶಗಳನ್ನು ಎತ್ತಿ ಹಿಡಿಯುತ್ತದೆ. ಯಮಧರ್ಮನ ಕಾಲಧರ್ಮದೆದುರು ಸಾವಿತ್ರಿಯ ಪ್ರೇಮನಿಷ್ಠೆ, ಆತ್ಮವಿಶ್ವಾಸ, ಛಲ ಗೆಲ್ಲುವುದೇ ಇಲ್ಲಿನ ಆಶಯ. ಸತ್ಯವಾನನ ಆಯುಷ್ಯ ಮುಗಿದಾಗ, ಯಮ ಅವನ ಜೀವವನ್ನು ಕೊಂಡೊಯ್ಯಲು ಬರುತ್ತಾನೆ. ಸಾವಿತ್ರಿಯ ತೇಜಸ್ಸಿನೆದುರು ಅವನು ಹಿಂಜರಿದರೂ ‘ಸಾವು ಅನಿವಾರ್ಯ’ ಎಂದು ಹೇಳಿ ಸತ್ಯವಾನನ ಜೀವವನ್ನು ಕೊಂಡೊಯ್ಯುವಾಗ, ಛಲ ಬಿಡದೆ ಸಾವಿತ್ರಿ ಅವನನ್ನು ಹಿಂಬಾಲಿಸುತ್ತಾಳೆ. ಯಮ ಅವಳಿಗೆ ಮೂರು ವರಗಳನ್ನು ಕೊಟ್ಟು, ಹಿಂತಿರುಗುವಂತೆ ಕೇಳಿಕೊಳ್ಳುತ್ತಾನೆ. ಕೊನೆಯಲ್ಲಿ ಸಾವಿತ್ರಿಯ ಪ್ರೇಮ ನಿಷ್ಠೆಗೆ ಸೋತು ಸತ್ಯವಾನನನ್ನು ಬದುಕಿಸುತ್ತಾನೆ. ಲೋಕಧರ್ಮಕ್ಕೂ ಮೀರಿದ ಹೃದಯ ಧರ್ಮವೊಂದಿದೆ ಎಂಬ ಕವಿವಾಣಿ ಇಲ್ಲಿ ಮಾರ್ದನಿಗೊಳ್ಳುತ್ತದೆ.

೧೯೩೦ರಲ್ಲಿ ಬರೆದ ಮಕ್ಕಳನಾಟಕ ‘ನನ್ನ ಗೋಪಾಲ’ದಲ್ಲಿ ಭಗವಂತ ಆಡಂಬರಕ್ಕೊಲಿಯುವುದಿಲ್ಲ. ಮುಗ್ಧ ಭಕ್ತಿಗೊಲಿಯುತ್ತಾನೆ ಎಂಬ ಸಂದೇಶವಿದೆ. ಇಲ್ಲಿ ಬರುವ ಬಾಲಕ ಗೋಪಾಲ ಬಡ ಹುಡುಗ. ವಿಧವೆ ತಾಯಿಯೊಂದಿಗೆ ಗುಡಿಸಲಿನಲ್ಲಿ ಬಾಳುತ್ತಾನೆ. ಮಠದಲ್ಲಿ ಬರುವ ಶ್ರೀಮಂತ ಹುಡುಗರಿಗೆ ಕಾಡನ್ನು ದಾಟಿ ಹೋಗಲು ಜೊತೆಗೆ ಆಳುಗಳಿದ್ದಾರೆ. ಆದರೆ, ಬಡ ಹುಡುಗ ಗೋಪಾಲನಿಗೆ ಯಾರೂ ಇಲ್ಲ. ಆಗ, ಗೋಪಾಲ ಭಕ್ತಿಯಿಂದ ಕರೆಯುವುದು ಬನದ ಗೋಪಾಲನನ್ನು ಭಗವಂತನ ಕೃಪೆಯಿಂದ ಭಯವನ್ನು ಮೀರುತ್ತಾನೆ ಬಾಲಕ ಗೋಪಾಲ.

ಗುರುಗಳು, ಗುರುದಕ್ಷಿಣೆ ಕೇಳಿದಾಗ ಉಳಿದ ಶಿಷ್ಯರೆಲ್ಲ ರತ್ನ, ವೈಢೂರ್ಯ, ಜರಿಪಂಚೆಗಳನ್ನು ತಂದುಕೊಳ್ಳರೆ, ಗೋಪಾಲನಲ್ಲಿ ಏನೂ ಇಲ್ಲ. ಬನದ ಗೋಪಾಲ ಕೊಟ್ಟ ಮೊಸರಿನ ಕುಡಿಕೆಯನ್ನೇ ಗುರುಗಳಿಗೆ ಕೊಡುತ್ತಾನೆ. ಅದು ಅಕ್ಷಯ ಪಾತ್ರೆ. ಎಷ್ಟು ತೆಗೆದರೂ ಮೊಸರು ಮತ್ತೆ ಮತ್ತೆ ತುಂಬಿಕೊಳ್ಳುತ್ತದೆ. ಆಗ, ಇದನ್ನು ಕೊಟ್ಟವನು ಭಗವಂತನೇ ಎಂದರಿತ ಗುರುಗಳು ಅವನನ್ನು ಬನದ ಗೋಪಾಲ ದರುಶನವನ್ನೀಯುವುದಿಲ್ಲ. ಗುರುಗಳಿಗೆ ಬಾಲಕ ಗೋಪಾಲನೇ ಕೃಷ್ಣ ಸದೃಶನಾಗಿ ಕಾಣುತ್ತಾನೆ.

ಈ ನಾಟಕ ಭಗವಂತನ ವರ್ಣನೆ, ಕಾಡಿನ ವರ್ಣನೆ, ಮುಗ್ಧ ಭಕ್ತಿಯ ವರ್ಣನೆಗಳಿಂದ ಕೂಡಿ ಹೃದಯಂಗಮವಾಗಿದೆ.

೧೯೩೦ರಲ್ಲಿ ಬರೆದ ‘ಬಿರುಗಾಳಿ’. ೧೯೩೨ ರಲ್ಲಿ ಬರೆದ ‘ರಕ್ತಾಕ್ಷಿ’ ಎರಡೂ ಷೇಕ್ಸಪಿಯರ್‌ನ ಟೆಂಪೆಸ್ಟ್ ಮತ್ತು ಹ್ಯಾಮ್ಲೆಟ್‌ನಾಟಕಗಳನ್ನು ಆಧರಿಸಿ ಬರೆದಿರುವಂತಹ ನಾಟಕಗಳು. ಭಾರತೀಯ ತತ್ವಗಳಿಗನುಗುಣವಾಗಿ ಪಾತ್ರ, ಸನ್ನಿವೇಶಗಳನ್ನು ಸೃಷ್ಟಿ ಮಾಡಿರುವುದರಿಂದ ಇವು ‘ಸ್ವತಂತ್ರ’ ನಾಟಕಗಳಾಗಿಯೇ ಶೋಭಿಸುತ್ತವೆ.

‘ಬಿರುಗಾಳಿ’ಯಲ್ಲಿ, ತಮ್ಮ ರುದ್ರನಾಯಕನ ರಾಜ್ಯ ಲೋಭ ತಪೋನಿರತನೂ, ಸಾತ್ವಿಕನೂ ಆದ ಭೈರವ ನಾಯಕನನ್ನು ರಾಜ್ಯ ಭ್ರಷ್ಟನನ್ನಾಗಿ ಮಾಡುತ್ತದೆ. ಅವನು ಪುಣ್ಯವಶಾತ್ ಬದುಕಿ, ತನ್ನ ಮಗಳೋಡನೆ ದೂರದ ದ್ವೀಪವೊಂದರಲ್ಲಿ ತನ್ನ ಮಂತ್ರಬಲದಿಂದ ಪಾಶವೀಶಕ್ತಿ, ಧೈವೀ ಶಕ್ತಿಗಳೆರಡನ್ನೂ ಅಧೀನದಲ್ಲಿಟ್ಟುಕೊಂಡು ತಪೋನಿರತನಾಗಿರುತ್ತಾನೆ.

ಒಮ್ಮೆ ರಾಜ್ಯ ಲೋಭಿ ತಮ್ಮನೂ, ಅವನ ಆಪ್ತರೂ ದೋಣಿಯೊಂದರಲ್ಲಿ ಆ ದ್ವೀಪದೆಡೆಗೇ ಬರುತ್ತಾರೆ. ಆಗ ಭೂರವನಾಯಕ ಬಿರುಗಾಳಿ ಎಬ್ಬಿಸಿ ಅವರನ್ನೆಲ್ಲ ಚೆಲ್ಲಾಪಿಲ್ಲಿ ಮಾಡುತ್ತಾನೆ. ರಣನಾಯಕನ ಮಗ ಶಿವನಾಯಕನಲ್ಲಿ ಭೈರವ ನಾಯಕನ ಮಗಳು ಗೌರಾಂಹೆ ಅನುರಕ್ತಳಾಗಿ ಅವರಿಬ್ಬರ ವಿವಾಹವಾಗುತ್ತದೆ. ರುದ್ರನಾಯಕ, ರಂಗನಾಯಕ, ರಣ ನಾಯಕರು ಪಶ್ಚಾತ್ತಾಪದಲ್ಲಿ ಬೇಯುತ್ತಾರೆ. ವಿವಿಧ ಕಷ್ಟಗಳನ್ನು ಕೊಟ್ಟ ನಂತರ, ಭೈರವನಾಯಕ ಅವರನ್ನು ಕ್ಷಮಿಸುತ್ತಾನೆ. ಕಳೆದುಕೊಂಡ ರಾಜ್ಯ ಭೈರವನಾಯಕನಿಗೆ ಮರಳಿ ದೊರೆಯುತ್ತದೆ. ಈ ನಾಟಕದಲ್ಲಿ, ಧೈವೀಶಕ್ತಿ ಮತ್ತು ಪಾಶವೀಶಕ್ತಿಗಳ ಹೋರಾಟ-ಕಿನ್ನಡ ಮತ್ತು ಶನಿಯರ ಪಾತ್ರಗಳಲ್ಲಿ ಉಜ್ವಲವಾಗಿ ಮೂಡಿದೆ. ಇಲ್ಲಿ ಒಳಿತು, ಕೆಡುಕುಗಳ ಸಂಘರ್ಷವಿದೆ. ಹಾಗೆಯೇ, ಕೊನೆಯಲ್ಲಿ ಮಾನವೀಯ ಗುಣ, ಕ್ಷಮಾಗುಣ, ದಯೆಗಳು ವಿಜೃಂಭಿಸಿ ಗೆಲ್ಲುತ್ತವೆ.

‘ರಕ್ತಾಕ್ಷಿ’ ಐದು ಅಂಕಗಳ, ಬಿಗಿಯಾದ ಬಂಧವುಳ್ಳ ನಾಟಕ. ಮೊದಲೆರಡು ದೃಶ್ಯಗಳು ‘ಹ್ಯಾಮ್ಲೆಟ್‌’ ನಾಟಕದ ಮೊದಲೆರಡು ದೃಶ್ಯಗಳನ್ನೇ ಹೋಲುವಂತಿದ್ದರೂ, ಮುಂದೆ ಸಾಗುತ್ತ ಹ್ಯಾಮ್ಲೆಟ್‌ಗಿಂತ ಗಟ್ಟಿ ನಾಡಕವಾಗಿ ಇದು ರೂಪುಗೊಳ್ಳುತ್ತದೆ. ಇಡೀ ನಾಟಕವನ್ನು ಬಿದನೂರಿನ ಚರಿತ್ರೆಗೆ ಹೊಂದಿಸಿ ಬರೆದಿರುವುದಂತೂ ಅತ್ಯದ್ಭುತ ಅನುಭವವನ್ನು ಓದುಗರಿಗೆ ನೀಡುತ್ತದೆ.

೧೯೩೧ರಲ್ಲಿ ಬರೆದ ‘ಶ್ಮಶಾನ ಕುರುಕ್ಷೇತ್ರಂ’ ನಾಟಕದ ಹಿನ್ನೆಲೆಗೆ ಮೊದಲನೆಯ ಮಹಾಯುದ್ಧದ ಭೀಕರತೆಯೂ ಇದೆ. ಈ ನಾಟಕದ ವಸ್ತು ಯುದ್ಧೋತ್ತರ ಮಹಾಭಾರತದ ಚಿತ್ರಣ. ಯುದ್ಧ ಸಂಸ್ಕೃತಿಯ ಬಹುರೂಪಿಯಾದ ಭಯ, ತಲ್ಲಣ, ನೋವುಗಳನ್ನು, ಕ್ರೌರ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವ ಇಂಥಹ ನಾಟಕ ಬೇರೊಂದಿಲ್ಲ. ‘ಸಾವಿನಲಿ ಹೊಸಬಾಳು ಹುದುಗಿಹುದು, ನಾಶದಲಿ ನವದೃಷ್ಟಿ ಪವಡಿಸಿದೆ’ ಎಂಬ ಕುವೆಂಪುರವರ ದರ್ಶನ, ಯುದ್ಧದ ಪರಿಣಾಮಕ್ಕೆ ವಿನೂತನ ವ್ಯಾಖ್ಯೆಯಾಗಿದೆ. ಇಲ್ಲಿ ಬರುವ ಎಲ್ಲ ಪಾತ್ರಗಳೂ ಯುದ್ಧದ ಪರಿಣಾಮವಾಗಿ ದುಃಖತಪ್ತವಾಗಿದೆ. ಶ್ಮಶಾನ ಸದೃಶ ವಾತಾವರಣ ನಾಟಕದುದ್ದಕ್ಕೂ ಮಡುಗಟ್ಟಿದೆ.

ಆದರೆ, ಎಲ್ಲರ ದುಃಖವನ್ನೂ ಮೀರಿ ನಾಟಕಕಾರರ ದರ್ಶನ ಮನಸ್ಸಿಗೆ ತಟ್ಟುತ್ತದೆ. ದ್ವಾಪರ, ಕಲಿ, ರುದ್ರ, ಕೃಷ್ಣ-ಈ ಪಾತ್ರಗಳ ಮೂಲಕ ನಾಟಕದ ತಾತ್ವಿಕತೆ ಪ್ರತಿಪಾದಿತವಾಗಿದೆ. ದ್ವಾಪರ ಮತ್ತು ಕಲಿ ಸಂವಾದ ಆಧುನಿಕೋತ್ತರ ಸನ್ನಿವೇಶದ ಒಂದು ಮುಖ್ಯ ಸಂಕಥನವಾಗಿ ಕಾಣಿಸುತ್ತದೆ.

೧೯೩೧ರಲ್ಲೇ ಬರೆದ ಇನ್ನೊಂದು ನಾಟಕ ‘ಮಹಾರಾತ್ರಿ’. ೧೨ ದೃಶ್ಯಗಳ ಈ ನಾಟಕದಲ್ಲಿ, ಸಿದ್ದಾರ್ಥನು ಬುದ್ಧನಾಗುವ ರಾತ್ರಿಯಲ್ಲಿ ಅರಮನೆ, ಪತ್ನಿ, ಪುತ್ರರನ್ನು ಅಗಲಿ, ತನ್ನ ಪ್ರಿಯ ಸಾರಥಿ ಚೆನ್ನನನ್ನೂ ಬಿಟ್ಟು, ಕೊನೆಯಲ್ಲಿ ತನ್ನ ಪ್ರೀತಿಯ ಕುದುರೆ ಕಂದಕವನ್ನು ಬಿಟ್ಟು ಹೋಗುವ ಮಹಾರಾತ್ರಿಯ ವರ್ಣನೆಯಿದೆ. ‘ಜಗಕಾಗಿ ಕಣ್ಣೀರ ಸುರಿಸುವೆನು, ಅದಕ್ಕಾಗಿ ಸತಿಗಾಗಿ ಕಂಬಿ ಕರೆಯೆ, ಮುಂದೆದೆಯ ಬೆಣ್ಣೆಯ ಮಾರಿ, ಇಂದದನು ಕಲ್ಲಾಗಿ ಮಾಡಿ’ ಎನ್ನುವ ಸಿದ್ಧಾರ್ಥನ ಮಾತುಗಳು ವೈಯಕ್ತಿಕ ಭೋಗಕ್ಕಿಂತ ಸಾಮಾಜಿಕ-ಸಾಮೂಹಿಕ ಹಿತ ಮುಖ್ಯ ಎನ್ನುವ ನಿಲುವನ್ನು ಹೊಂದಿವೆ. ಇದು ಕುವೆಂಪುರವರ ಪ್ರಧಾನ ತಾತ್ವಿಕತೆಯೂ ಹೌದು.

೧೯೩೧ರಲ್ಲಿ ಬರೆದ ಮತ್ತೊಂದು ನಾಟಕ ‘ವಾಲ್ಮೀಕಿಯ ಭಾಗ್ಯ’ ಸೀತೆ, ಲಕ್ಷ್ಮಣ, ವಾಲ್ಮೀಕಿ-ಮೂರೇ ಪಾತ್ರಗಳಿರುವ ಒಂದು ದೃಶ್ಯದ ಈ ನಾಟಕದಲ್ಲಿ, ಲೋಕಾಪವಾದಕ್ಕೆ ಹೆದರಿ ಶ್ರೀರಾಮಚಂದ್ರ ಸೀತೆಯನ್ನು ಕಾಡಿಗೆ ಬಿಟ್ಟು ಬರಲು ಲಕ್ಷ್ಮಣನನ್ನು ಕಳುಹಿಸುತ್ತಾನೆ. ವಿಹಾರವೆಂದು ತಿಳಿದ ಸೀತೆಗೆ, ಲಕ್ಷ್ಮಣ ಸತ್ಯವನ್ನು ತಿಳಿಸುತ್ತಾನೆ. ಅದನ್ನು ತಿಳಿಸಿದಾಗ ಲಕ್ಷ್ಮಣನಿಗಾದ ವೇದನೆ, ತಿಳಿದಾಗ ಸೀತೆಗಾಗುವ ಶೋಕ ಎರಡೂ ಪರಿಣಾಮಕಾರಿಯಾಗಿ ಚಿತ್ರಿಸಲ್ಪಟ್ಟಿದೆ. ಕಾಡಿನಲ್ಲಿ ಒಂಟಿಯಾಗಿ ರೋಧಿಸುತ್ತಿರುವ ಗರ್ಭಿಣಿ ಸೀತೆಯ ದನಿ ಕೇಳಿ ವಾಲ್ಮೀಕಿ ಅಲ್ಲಿಗೆ ಬಂದು, ಆಕೆಯನ್ನು ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾನೆ. ಮುಂದೆ ತಾನು ಬರೆಯಲಿರುವ ಮಹಾಕಾವ್ಯದ ನಾಯಕಿಯನ್ನು ಕವಿಯೇ ರಕ್ಷಿಸುವುದು ‘ವಾಲ್ಮೀಕೀಯ ಭಾಗ್ಯ’ ಎಂದು ನಾಟಕಕಾರರು ಕರೆದಿದ್ದಾರೆ.

ಈ ನಾಟಕದ ಆದಿ, ಬೆಳವಣಿಗೆ, ಮುಕ್ತಾಯಗಳು ಕುತೂಹಲಕರವಾಗಿದ್ದು, ಪಾತ್ರ ರಚನೆ, ಮನೋವಿಶ್ಲೇಷಣೆಗಳು ಶ್ರೇಷ್ಠ ಮಟ್ಟದ್ದಾಗಿವೆ.

೧೯೪೪ ರಲ್ಲಿ ಪ್ರಕಟವಾದ ‘ಶೂದ್ರ ತಪಸ್ವಿ’ ನಾಟಕ. ರಾಮಾಯಣದ ಶಂಭೂಕವಧೆಯ ಪ್ರಸಂಗವನ್ನು ಸಂಪೂರ್ಣ ಬದಲಾವಣೆ ಮಾಡಿಕೊಂಡು ರಚಿಸಿದ ನಾಟಕ. ಈ ನಾಟಕ ಪ್ರಕಟವಾದಾಗ ಹಲವರ ಕಟುವಿಮರ್ಶೆಗೆ ಒಳಗಾಗಿತ್ತು. ವಿಪ್ರನೊಬ್ಬನ ಮಗ ಶಂಭೂಕವನದಲ್ಲಿ ಸತ್ತು ಬಿದ್ದಿದ್ದಾನೆ. ಇದಕ್ಕೆ, ಶಂಭೂಕನೆಂಬ ಶೂದ್ರ ತಪಸ್ಸು ಮಾಡುತ್ತಿರುವುದೇ ಕಾರಣವೆಂದು ವಿಪ್ರ ಶ್ರೀರಾಮಚಂದ್ರನೆದುರು ಗೋಳಿಡುತ್ತಿದ್ದಾನೆ. ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೇಳುತ್ತಾನೆ.

ಧರ್ಮಚ್ಯುತಿಯಾಗಿದೆಯೆಂದು ಹೇಳಿ ರಾಮ ಬ್ರಹ್ಮಾಸ್ತ್ರವನ್ನು ತೊಟ್ಟು ಶಂಬೂಕನೆಡೆ ಪ್ರಯೋಗಿಸುತ್ತಾನೆ. ಆದರೆ, ಬ್ರಹ್ಮಾಸ್ತ್ರ ಶಂಭೂಕನಿಗೆ ಸುತ್ತು ಹಾಕಿ, ನಮಿಸಿ ವಿಪ್ರನೆಡೆ ಧಾವಿಸಿ ಬರುತ್ತದೆ. ಪ್ರಾಣಭಯದಿಂದ ವಿಪ್ತ, ಶಂಭೂಕನಿಗೆ ನಮಿಸಿ ಕ್ಷಮೆ ಕೇಳುತ್ತಾನೆ. ಆಗ ವಿಪ್ರನೂ ಬದುಕುಳಿಯುತ್ತಾನೆ. ಅವನ ಮಗನೂ ಬದುಕುತ್ತಾನೆ. ವಿಪ್ರ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.

ಈ ನಾಟಕದಲ್ಲಿ ಶೂದ್ರನೊಬ್ಬ ತಪಸ್ವಿಯಾಗಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಕಾರಣನಾಗುತ್ತಾನೆ ‘ಶೂದ್ರತಪಸ್ವಿ’ಯ ಒಂದು ನಾಟಕ ಮಾತ್ರವಾಗಿರದೆ ಒಂದು ಪರ್ಯಾಯ ಸಂಸ್ಕೃತಿಯನ್ನು ಸೂಚಿಸುವ ಮಹತ್ವದ ರೂಪಕವಾಗುತ್ತದೆ. ಈ ನಾಟಕ, ಕನ್ನಡ ಸಾಹಿತ್ಯದ ಆಶಯ ಮತ್ತು ರಚನೆಗಳನ್ನೇ ಬದಲಾಯಿಸಲು ಶಕ್ತವಾಯಿತು. ಶೂದ್ರರು, ದಲಿತರು, ಮಹಿಳೆಯರು ಜ್ಞಾನವನ್ನು ಪಡೆದು ಸಾಧನೆಯನ್ನು ಮಾಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಿದ್ಧಿಯನ್ನು ಪಡೆಯುವ ಆಧುನಿಕ ಸಾಹಿತ್ಯಕ್ಕೆ ದಿಕ್ಕನ್ನು ತೋರಿಸಿದ ಈ ನಾಟಕ ಒಂದು ಸಾಂಸ್ಕೃತಿಕ ದಾಖಲೆ.

೧೯೪೭ರಲ್ಲಿ ಬರೆದ ‘ಬೆರಳ್‌ಗೆ ಕೊರಳ್’ ನಾಟಕದಲ್ಲಿ ಕುವೆಂಪುರವರು ಗುರು, ಕರ್ಮ ಮತ್ತು ಯಜ್ಞಗಳೆಂದು ದೃಶ್ಯಗಳನ್ನು ವಿಂಗಡಿಸಿದ್ದಾರೆ. ಈ ತತ್ವಗಳ ಪ್ರತಿಪಾದನೆಯನ್ನೂ ಮೀರಿ ನಾಟಕ ಬೆಳೆಯುತ್ತದೆ. ಏಕಲವ್ಯನ ಹೆಬ್ಬೆರನ್ನು ಗುರುದಕ್ಷಿಣೆಯಾಗಿ ಪಡೆದ ದ್ರೋಣನು ಅದಕ್ಕೆ ಪ್ರತಿಯಾಗಿ ಮಹಾಭಾರತ ಯುದ್ಧದಲ್ಲಿ ಕೊರಳನ್ನು ಬಲಿಕೊಡಬೇಕಾಗುತ್ತದೆ. ಈ ತತ್ವವು ಬುಡಕಟ್ಟು ಸಂಸ್ಕೃತಿಯ ಆಂದೋಲನದ ನೆಲೆಯಿಂದ ಕ್ರಾಂತಿಕಾರಕವಾದದ್ದು. ಕಾಡಿನ ಸಂಸ್ಕೃತಿಯಲ್ಲಿ ತನ್ನ ಸೃಜನಶೀಲತೆಯನ್ನು ಬೆಳೆಸಿಕೊಂಡ, ಬಿಲ್ವಿದ್ಯೆಯನ್ನು ಆರ್ಜಿಸಿಕೊಂಡ ಏಕಲವ್ಯನು ದ್ರೋಣನನ್ನು ಕಲ್ಪಿತ ಗುರುವಾಗಿ ಇಟ್ಟುಕೊಂಡು ಏಕಾಗ್ರತೆಯಿಂದ ವಿದ್ಯೆಯನ್ನು ಗಳಿಸಿದರೂ ವ್ಯವಸ್ಥೆ ಅದಕ್ಕೂ ಪ್ರತಿಫಲವನ್ನು ಕೇಳಿ, ಬಲಿ ತೆಗೆದುಕೊಳ್ಳುತ್ತದೆ. ಆದರೆ, ಇಂತಹ ಅಮಾನುಷ ದೌರ್ಜನ್ಯಗಳಿಗೆ ಮುಂದೊಂದು ದಿನ ಪ್ರತೀಕಾರವೊಂದು ಕಾದಿದೆ ಎನ್ನುವ ಧ್ವನಿ ಈ ನಾಟಕದಲ್ಲಿ ಶಕ್ತಿಶಾಲಿಯಾಗಿ ಮೂಡಿದೆ.

ಹೀಗಾಗಿ ‘ಜಲಗಾರ’ ಮತ್ತು ‘ಶೂದ್ರತಪಸ್ವಿ’ಗಿಂತಲೂ ಭಿನ್ನವಾಗಿ ಕೆಳವರ್ಗದ ಪ್ರತಿಭಟನೆಯ ಇನ್ನೊಂದು ಮಾದರಿ ‘ಬೆರಳ್‌ಗೆ ಕೊರಳ್’ ನಾಟಕದಲ್ಲಿ ದೊರಕುತ್ತದೆ. ಕಾಡಿನ ಸಂಸ್ಕೃತಿ ಹಾಗೂ ನಾಡಿನ ಸಂಸ್ಕೃತಿಗಳ ನಡುವೆ ಇರುವ ವ್ಯತ್ಯಾಸಗಳೂ ನಾಟಕದಲ್ಲಿ ಗೋಚರವಾಗುತ್ತವೆ.

೧೯೪೮ರಲ್ಲಿ ಪ್ರಕಟವಾದ ‘ಬಲಿದಾನ’ ನಾಟಕದಲ್ಲಿ ಭಾರತದ ಸ್ವಾತಂತ್ರ್ಯ ಪೂರ್ವ, ಸ್ವತಂತ್ರ ಮತ್ತು ಸ್ವಾತಂತ್ರ್ಯೋತ್ತರ ಸಂದರ್ಭದ ಮೂರು ದೃಶ್ಯಗಳಿದ್ದು, ಸ್ವಾತಂತ್ರ್ಯದ ಮೂರು ನೆಲೆಗಳನ್ನು ಸೂಚಿಸುತ್ತವೆ. ಇಲ್ಲಿ ಭಾರತಾಂಬೆ ಬ್ರಿಟೀಷರ ಆಳ್ವಿಕೆಯ ಸಂಕೋಲೆಯಲ್ಲಿ ದುಃಖತಪ್ತಳಾಗಿದ್ದಾಳೆ. ಆನಂತರ ಸಂಕೋಲೆ ಕಳಚಿ ಬೀಳುತ್ತದೆ. ಆದರೆ ಸ್ವತಂತ್ರಗೊಂಡ ಭಾರತವು ಮತಪೀಡೆಯಿಂದ ಇನ್ನೂ ಮುಕ್ತವಾಗಿಲ್ಲ ಎಂಬ ನೋವು ನಾಟಕದ ಕೊನೆಯಲ್ಲಿ ಪ್ರಕಟಗೊಂಡಿದೆ.

‘ಬಲಿದಾನಕ್ಕುಂಟೆ ಕೊನೆ?
ಬಲಿಪರಂಪರೆಯಲ್ತೆ ಸ್ವಾತಂತ್ರ್ಯ ಜೀವನಂ’

ಎನ್ನುವ ಕುವೆಂಪು ಅವರ ಮಾತು, ಈ ನಾಟಕವನ್ನು ದಾರ್ಶನಿಕ ರೂಪವನ್ನಾಗಿ ಕಟ್ಟಿಕೊಡುತ್ತದೆ.

೧೯೬೩ರಲ್ಲಿ ಪ್ರಕಟವಾದ ‘ಚಂದ್ರಹಾಸ’ ನಾಟಕ, ಲಕ್ಷ್ಮೀಶನಂತಹ ಕವಿಗಳು ಕಾವ್ಯರೂಪದಲ್ಲಿ ಚಿತ್ರಿಸಿದ ಕಥಾನಕವನ್ನು ದೃಶ್ಯರೂಪದಲ್ಲಿ ಕಟ್ಟಿ ಕೊಡುತ್ತದೆ. ಆಕಸ್ಮಿಕಗಳ ಸರಮಾಲೆ, ಅನಿರೀಕ್ಷಿತ ತಿರುವುಗಳು ಬದುಕನ್ನು ರೂಪಿಸುವ ಬಗೆ ಇಲ್ಲಿ ಪ್ರಧಾನವಾಗಿದೆ. ಎಲ್ಲಾ ಪ್ರತಿರೋಧಗಳ ನಡುವೆಯೂ ಜೀವವೊಂದು ತನ್ನ ಪರಮಗಂತವ್ಯವನ್ನು ತಲುಪಬಹುದು ಎನ್ನುವ ಕುವೆಂಪು ತತ್ವ ಈ ನಾಟಕದಲ್ಲಿ ಅನುರಣನಗೊಂಡಿದೆ. ಮಂತ್ರಿ ದುಷ್ಟಬುದ್ಧಿ ಮತ್ತೆ ಮತ್ತೆ ಚಂದ್ರಹಾಸನನ್ನು ಕೊನೆ ಮಾಡಿಸಲು ಪ್ರಯತ್ನಪಟ್ಟರೂ, ಚಂದ್ರಹಾಸ ಬದುಕುಳಿಯುತ್ತಾನೆ. ದುಷ್ಟಬುದ್ದಿಯ ಅಳಿಯನೂ ಆಗುತ್ತಾನೆ. ಕರ್ಮ ಸಿದ್ಧಾಂತದನ್ವಯ ದುಷ್ಟಬುದ್ದಿ ಕೊನೆಯಲ್ಲಿ ಸಾಯುತ್ತಾನೆ. ಚಂದ್ರಹಾಸ ರಾಜನಾಗುತ್ತಾನೆ. ಈ ನಾಟಕದ ಆದಿ, ಅಂತ್ಯಗಳು ದೈವಿಕ ಪಾತ್ರಗಳಿಂದ ತುಂಬಿವೆ.

೧೯೭೪ರಲ್ಲಿ ಪ್ರಕಟಗೊಂಡ ‘ಕಾನೀನ’ ನಾಟಕ, ಕರ್ಣನ ಹುಟ್ಟು, ಬಾಲ್ಯ, ಯೌವನಗಳ ಹೃದಯಂಗಮ ಚಿತ್ರಣ ನೀಡುತ್ತದೆ, ಕೊನೆಯಲ್ಲಿ ಬರುವ ಕೃಷ್ಣ-ಕರ್ಣರ ದೃಶ್ಯ ಆನಂತರದಲ್ಲಿ ಬರೆದು ಸೇರಿಸಿರುವುದು.

ಕುಂತಿ ದೂರ್ವಾಸರ ವರವನ್ನು ಪರೀಕ್ಷಿಸಲು ಸೂರ್ಯದೇವನ ಪ್ರಾರ್ಥನೆ ಮಾಡಿ, ಕನ್ನೆತನದಲ್ಲೇ ಮಗುವನ್ನು ಪಡೆಯುತ್ತಾಳೆ. ಆ ಮಗುವೇ ಕರ್ಣ. ಲೋಕಾಪವಾದಕ್ಕೆ ಹೆದರಿ, ಕರ್ಣನನ್ನು ಗಂಗೆಗೊಪ್ಪಿಸುತ್ತಾಳೆ. ಗಂಗೆಯ ತಡಿಯಲ್ಲಿ ಆ ಮಗು ಸೂತರಾದ ರಾಧೆಯರಿಗೆ ಸಿಕ್ಕುತ್ತದೆ. ಮುಂದೆ ಪರಶುರಾಮನನ್ನರಸಿ ಹೋಗಿ, ಆತನ ಪರಮಶಿಷ್ಯನಾಗಿ ಬಿಲ್ವಿದ್ಯೆಯಲ್ಲಿ ಮಹತ್ತನ್ನು ಸಾಧಿಸುತ್ತಾನೆ. ಪರಶು ರಾಮನ ಸಹಾಯದಿಂದಲೇ ಭೀಷ್ಮನೊಡನೆ ಹಸ್ತಿನಾವತಿಗೆ ಬರುತ್ತಾನೆ. ಅಲ್ಲಿ ಕೌರವನ ಸ್ನೇಹವಾಗಿ, ಅಂಗಾಧಿಪತಿಯೂ ಆಗುತ್ತಾನೆ. ಕೃಷ್ಣ ಸಂಧಿಯ ನೆಪದಲ್ಲಿ ಕರ್ಣನಿಗೆ ಆತನ ಜನ್ಮರಹಸ್ಯವನ್ನು ಹೇಳಿ ಆತನನ್ನು ಅಸಹಾಯನನ್ನಾಗಿಸುತ್ತಾನೆ.

ಕುವೆಂಪುರವರ ನಾಟಕಗಳು ಬೇರೆ ಬೇರೆ ಕಾಲಘಟ್ಟಗಳಲ್ಲಿ, ಸನ್ನಿವೇಶಗಳಲ್ಲಿ ರಚನೆಯಾಗಿದ್ದರೂ ಅವು ನಮ್ಮ ಇಂದಿನ ವರ್ತಮಾನದೊಂದಿಗೆ ಅನುಸಂಧಾನ ಮಾಡುವ ಬಗೆಗಳು ಕುತೂಹಲಕಾರಿಯಾಗಿವೆ. ಕಾವ್ಯಮಯ ಭಾಷೆ, ಸೂಕ್ತ ಸನ್ನಿವೇಶ ನಿರ್ಮಾಣ, ಪಾತ್ರಗಳ ಪರಿಕಲ್ಪನೆ, ಇಡಿಕಿರಿದ ಪ್ರಕೃತಿ ವರ್ಣನೆ- ಇವುಗಳಿಂದ ಕುವೆಂಪು ನಾಟಕಗಳು ಗಮನ ಸೆಳೆಯುತ್ತವೆ. ಮತ, ಧರ್ಮ, ಯುದ್ಧ, ಹಿಂಸೆ, ಭೋಗ, ಸುಖಗಳೇ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನ ನಿಜದ ನೆಲೆಗಳು ಎಂದು ಭ್ರಮಿಸಿಕೊಂಡಿರುವ ಆಧುನಿಕ ಸಮಾಜದ ಹೃದಯ, ಬುದ್ಧಿಗಳನ್ನು ರೂಪಾಂತರಿಸುವ ಶಕ್ತಿ ಈ ನಾಟಕಗಳಿಗಿದೆ.

* * *