‘ಮಥನ’ ವಿಮರ್ಶಾ ಕಾರ್ಯಕ್ರಮದಲ್ಲಿ ಮಂಥನದಿಂದ ಲಭಿಸುವ ನವನೀತ ಆಸ್ವಾದನೆಗಾಗಿ ಆಗಮಿಸಿರುವ ಶ್ರೋತೃವರ್ಗಕ್ಕೆ, ಗುರುಹರಿಯರಿಗೆ, ಬಂಧು ಬಾಂಧವರಿಗೆ ನನ್ನ ಪ್ರಣಾಮಗಳು.

ಬಾಹ್ಯಾಕಾಶದಲ್ಲಿ ಉಪಸ್ಥಿತರಿರುವ ದೇವಪಾತ್ರರಾದ ಶ್ರೀ ಕುವೆಂಪು ಮತ್ತು ಹೇಮಾವತಿ ಅವರ ಪಾದಪದ್ಮಗಳಿಗೆ ವಂದನೆ. ವಸೂರೂಪಿ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರಿಗೆ, ಪ್ರೀತಿಯ ವಿದ್ಯಾರ್ಥಿನಿ ಇಂದುಕಲಾ-ತಾರಿಣಿ ಆಶೀರ್ವಾದ ಪೂರ್ವಕ ತೃತಜ್ಞತೆಗಳು.

ಸನ್ಮಾನ್ಯರೇ, ಈ ಪ್ರಾರಂಭೋತ್ಸವದ ಶುಭ ಪ್ರಾತಃಕಾಲದ ದಿವ್ಯ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸುವ ಪ್ರಭಾವಶಕ್ತಿ ನನಗಿಲ್ಲ. ನನಗಿಂತ ಹಿರಿಯರಾದ ಕುವೆಂಪು ವಿದ್ಯಾರ್ಥಿನಿಯರು, ಮಹಾವಿದ್ವಾಂಸರು, ಸಂಶೋಧಕರು, ಕಾದಂಬರಿಗಾರ್ತಿಯರು, ಕವಯಿತ್ರಿಯರು ಬಹಳಷ್ಟು ಮಂದಿ ಇದ್ದಾರೆ. ಪ್ರೊ. ಎಂ. ಎ. ಸಿಂಗಮ್ಮ, ಶ್ರೀಮತಿ ನಾಗಮ್ಮ ಮುಂತಾದ ಮಹಾವಿದ್ವಾಂಸರಿದ್ದಾರೆ. ಹಾಗೆಯೇ ಶ್ರೀಮತಿ ಬಿ. ಸ್‌. ರುಕ್ಕಮ್ಮ, ಪ್ರೀತಿಯ ಗೆಳತಿ ವಿನೋದ ಇದ್ದಾರೆ. ಅಂತಹುದರಲ್ಲಿ ನನ್ನ ವಿದ್ಯಾರ್ಥಿ ಮಿತ್ರರು ಚಿ. ಹಂಪನಾ ದಂಪತಿಗಳು ನನ್ನನ್ನು ಈ ಸ್ಥಾನಕ್ಕೆ ಕರೆದಾಗ ನೀವು ಕರೆಯುತ್ತಿರುವ ಭಾಷಣಗಾರ್ತಿಯರಲ್ಲಿ ಒಬ್ಬಳಾಗಿ ಬರುತ್ತೇನೆ, ಅಧಿಕಾರ ಅರ್ಹತೆ ಗಮನಿಸಿ ಕುವೆಂಪು ಕೃತಿಗಳ ಸಂಶೋಧನೆಗಾರ್ತಿಗೆ ಈ ಸ್ಥಾನ ಕೊಡಿ ಎಂದು ಕೇಳಿದೆ. ಆಗ ಅವರು ಕುವೆಂಪು ಕುಟುಂಬದ ಆತ್ಮೀಯತೆ ಪ್ರೀತಿ ವಿಶ್ವಾಸಗಳು ನನಗೆ ಇರುವುದನ್ನು ಗಮನಿಸಿ ಮುಖ್ಯವಾಗಿ ಕವಿಯ ಕೃಪಾಶೀರ್ವಾದದಿಂದ ನನ್ನನ್ನು ಇಲ್ಲಿಗೆ ತಂದಿದ್ದಾರೆ.

ಕವಿಯ ಗುರುಕೃಪ ಆಶೀರ್ವಾದದ ಸ್ವರೂಪಿಣಿ ಶ್ರೀಮತಿ ಹೇಮಾವತಿಯವರ ವಿಶ್ವಾಸ ನನಗಿತ್ತು. ಮತ್ತು ಶ್ರೀಮತಿ ವಿನೋದಗಿತ್ತು. ಅವರ ಆ ಸ್ನೇಹ ಪ್ರೀತಿ ಮುಖ್ಯವಾಗಿ ಈ ‘ನುಡಿ’ ಮಂಥನ ಸ್ತ್ರೀ ಸ್ವರೂಪಿಯನ್ನು ಅವರು ಸಂದರ್ಶಿಸಿದ ರೀತಿ ನನ್ನನ್ನು ಒಪ್ಪುವಂತೆ ಮಾಡಿತು. ಮುಖ್ಯವಾಗಿ ಹೇಮಾವತಿಯವರ ವಿಶ್ವಾಸ, ಸತ್ಕಾರ, ಸೌಜನ್ಯಗಳಿಗೆ ಚಿರಋಣಿಯಾಗಿದ್ದೇನೆ. ಅವರ ಇಬ್ಬರ ಮಕ್ಕಳು ನನ್ನ ವಿದ್ಯಾರ್ಥಿನಿಯರು. ಕಲಾ ಕನ್ನಡ ಮೇಜರ್‌ ವಿದ್ಯಾರ್ಥಿನಿ. ತಾರಣಿ ಹೋಮ್‌ ಸೈನ್ಸ್‌ ವಿದ್ಯಾರ್ಥಿನಿ. ಮುಖ್ಯವಾಗಿ ಫೋನ್‌, ಟಿವಿ ಇಲ್ಲದ ಕಾಲ. ಅವರನ್ನು ನೋಡಲು ಮುಂಚೆ ತಿಳಿಸಿ ಹೋಗುವ ವ್ಯವಸ್ಥೆ ಇಲ್ಲ. ಆದರೆ, ಅವರು ಯಾವಾಗಲೂ ತುಂಬಿ ಸುರಿಸುತ್ತಿದ್ದ ಸಂಪಿಗೆ ಹೂ, ಸಪೋಟ ಹಣ್ಣು, ಬಾದಾಮಿ ಹಾಲು ಕೊಟ್ಟು ಸತ್ಕರಿಸುತ್ತಿದ್ದರು.

ಮುಖ್ಯವಾಗಿ ಕುವೆಂಪು ದಂಪತಿಗಳನ್ನು ಸಂದರ್ಶಿಸಲು ಆಸೆ ಪಟ್ಟವರಿಗೆ ಅವರ ಮನೆಯ ಮನದ ಬಾಗಿಲು ತೆರೆದಿದ್ದಿತು. ನಿಜವಾಗಿ ಹೇಳಬೇಕಾದರೆ ಅಗೋಚರ, ಅವ್ಯಕ್ತಶಕ್ತಿಯಾಗಿ ಕವಿಕೃತಿಗಳ ಹಿಂದೆ ಹರಿಯುತ್ತಿರುವ ಹೇಮಾವಾಹಿನಿಯ ಮಂಥನದ ನವನೀತ ದರ್ಶನವಾಗಬೇಕು. ಡಾ. ಕಮಲಾ ಕೂಡ ಹೇಮಾವತಿ ಅವರ ಬಾದಾಮಿ ಹಾಲು ಕುಡಿದು ಸಂಪಿಗೆ ಮುಡಿದವರು. ಆ ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಮಕ್ಕಳು ಕಲೆ, ತಾರಣಿಯವರ ವಿಶ್ವಾಸ ಪ್ರೀತಿ ನನ್ನನ್ನು ಇಲ್ಲಿ ನಿಲ್ಲಿಸಿದೆ. ಹೀಗಾಗಿ ಡಾ. ಹಂಪನಾ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿ ಆಶೀರ್ವಾದಿಸುತ್ತಿದ್ದೇನೆ. ಬಂಧು, ಬಾಂಧವರೆ ಸಹೃದಯ ವರ್ಗವೆ ನಿಮಗೆ ಶ್ರೀಗುರುಕೃಪೆ ಲಭಿಸಲು. ಭಗವದ್‌ ಆಶಿರ್ವಾದಗಳು.

ಈಗ ಈ ಚಿತ್ರವನ್ನು ಪರಿಶೀಲಿಸಿ: ಚತುರ್‌ ಆಮ್ನಾಯ

“ವೇದವಾಣಿ ಪುಣ್ಯಜನನಿ ನಮೋಮಾತೃ ಭಾರತಿ
ಮಹಾಏಸ್ವರಿ ಮಹಾಕಾಳಿ ಮಹಾಲಕ್ಷ್ಮೀ ಸರಸ್ವತಿ”

ಕುವೆಂಪು ಸ್ತ್ರೀಯನ್ನು ಮಾನವ ದೇಹದ ಮನಸ್ಸಿನ ಶಕ್ತಿಯ ಅರ್ಥವೆಂದು ಚತುರಾಮ್ನಾಯದಲ್ಲಿ ಕಂಡವರು. ಸೃಷ್ಟಿ, ಸ್ಥಿತಿ, ಲಯ ಕಾರಣಿಯಾಗಿ ಸರಸ್ವತಿ ಲಕ್ಷ್ಮಿ ಪಾರ್ವತಿ, ಪ್ರತಿಮಾರೂಪದಲ್ಲಿ ಕಂಡಿದ್ದಾರೆ. ಆದರೆ, ಕುವೆಂಪು ಮಹೇಶ್ವರಿ, ಮಹಾಕಾಳಿ, ಮಹಾಲಕ್ಷ್ಮಿ, ಸರಸ್ವತಿ ಮೂರ್ತಿ ಸ್ವರೂಪದಲ್ಲಿ ಕಂಡರು.

ಶ್ರೀರಾಮಕೃಷ್ಣ ಪರಮಹಂಸರ ಜೀವನದ ನಿಜವಾದ ಅಧ್ಯಯನ ಅವರಿಗೆ ಮಾಹೇಶ್ವರಿಯ ಚತುರ್‌ಮುಖಿ ದರ್ಶನ ಪ್ರತಿಭೆ ಪ್ರಜ್ಞೆಯನ್ನು ನೀಡಿದ್ದಿತು.

ರಾಮಾಯಣ ದರ್ಶಣಂ ಕಾವ್ಯದ ಕಡೆಯ ಅಧ್ಯಯನ ಪ್ರಸಂಗವಿದು. ಕನಕ ಲಂಕೆಯ ಯುದ್ಧ ಭೂಮಿಯ ಆಚೆ ಯೋಧ ಶಿಕ್ಷಣ ಕೇಂದ್ರ ಬಹುದೊಡ್ಡ ಪಥಸಂಚಲನದ ವಿಸ್ತಾರ ಭೂಮಿ. ಲಂಕೆ ಮತ್ತು ಅಯೋಧ್ಯೆ ರಕ್ಷಕ ಪ್ರಭು ಶ್ರೀರಾಮಚಂದ್ರನ ವಂದನೆಗಳಿಗೆ ಪರಿಹಾರವಾಗಿ ಅಗ್ನಿ ಪ್ರವೇಶವನ್ನು ನಿರ್ಧರಿಸಿ ಅಗ್ನಿಕುಂಡ ರಚಿಸಿ ಆ ಭಯಂಕರ ಅಗ್ನಿಕುಂಡಕ್ಕೆ ಬೀಳುತ್ತಾಳೆ. ಸಾಮಾನ್ಯವಾಗಿ ರಾಮಾಯಣ ಗ್ರಂಥಗಳಲ್ಲಿ ಮೂಡಿದ ಮಲ್ಲಿಗೆ ಹೆರಳು ಬಾಡದಂತೆ ಅಗ್ನಿದೇವ ಅವಳನ್ನು ಎತ್ತಿಕೊಂಡು ಪ್ರತ್ಯಕ್ಷನಾಗುತ್ತಾನೆ. ಸೀತೆಯನ್ನು ಶಿಕ್ಷಿಸುವ ಅಧಿಕಾರ ಸಾಕೇತ ಸಾಮ್ರಾಟನಿಗೆ ಇದೆ. ಆದರೆ, ಸೀತೆ ಪರ ವಾದಿಸುವ ವ್ಯಕ್ತಿ ಕನಕ ಲಂಕೆಯಲ್ಲೂ ಇಲ್ಲ. ಅಯೋಧ್ಯೆಯಲ್ಲಿಯೂ ಇಲ್ಲ. ರಾಮನನ್ನು ಶಿಕ್ಷಿಸಲು ಪತಿ ಪ್ರೇಮ ಏಕಪತ್ನಿ ವ್ರತಸ್ಥನವನ್ನು ವಿಶ್ಲೇಷಿಸುವರಿಲ್ಲ.

ಕುವೆಂಪು ಕೃತಿ ದರ್ಶನಂನಲ್ಲಿ ಚತುರ್‌ ಆಯಾಮ ಪ್ರಜ್ಞೆ ಪ್ರಶ್ನೆಗಳಿಗೆ ರಾಘವ ಉತ್ತರಿಸುತ್ತಾನೆ. ಸೀತೆ ಅಗ್ನಿಕುಂಡಕ್ಕೆ ಬಿದ್ದ ತಕ್ಷಣ ಸಿಂಹಾಸನದಿಂದೆದ್ದ ರಾಘವ ಮುಂದೆ ಬಂದು ಅಗ್ನಿಕುಂಡಕ್ಕೆ ಬೀಳುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಸೀತೆಯ ಕೈ ಹಿಡಿದು ಅಗ್ನಿ ಸ್ಥಳದಿಂದ ಮೇಲೆದ್ದು ಬರುತ್ತಾನೆ. ಮಹೇಶ ದರ್ಶನವನ್ನು ಮೆರೆದ ಭವ್ಯ ದರ್ಶನವಿದು. ಕುವೆಂಪು ಸೀತೆಯ ಪಾತ್ರದಲ್ಲಿ ಪ್ರೀತಿ, ತ್ಯಾಗ, ಸಹನೆ, ಸ್ನೇಹ ಇತ್ಯಾದಿಗಳನ್ನು ಹೇಮಾವತಿ ಅವರ ಸ್ನೇಹದಿಂದ ಪಡೆದಿದ್ದಾರೆ. ಆಯಾಮ ಸೃಷ್ಟಿಯಲ್ಲಿ ಕುವೆಂಪು ಕೃತಿಗಳ ಮಂಥನ ಕಾರ್ಯ ಮಹಿಳೆಯರಿಂದ ನಡೆಯಬೇಕಾಇದೆ. ಮಹೇಶ ಶಕ್ತಿಯ ಆಯಾಮ ಪ್ರಜ್ಞೆ ಮೆರೆದಿರುವ ಸನ್ನಿವೇಶಗಳನ್ನು ಹುಡುಕಬೇಕು.

ದಾಂಪತ್ಯದಲ್ಲಿ ಸ್ನೇಹವನ್ನು ಪ್ರತಿಪಾದಿಸಿ ಸ್ತ್ರಿಪುರುಷರಿಬ್ಬರು ಪರಸ್ಪರ ಸಮ, ಒಂದೇ ದೇಹದ ಎರಡು ಭಾಗಗಳು ಎಂದು ರೂಪಿಸಿದ ಕವಿ ಪ್ರೇಮ, ಪ್ರಣಯ, ಪ್ರೇಮ ವಿವಾಹಗಳ ದುರಂತ ಚಿತ್ರಣವನ್ನು ನೀಡುವುದರಲ್ಲಿ ಮುಖ್ಯವಾಗಿ ಮಹಾಕಾಳಿಯ ರುದ್ರನೃತ್ಯದ ವರ್ಣನೆಯಲ್ಲಿ ಆಮ್ನಾಯ ಪ್ರಜ್ಞೆ ಮೆರೆದಿದ್ದಾರೆ. ಸೌಂದರ್ಯಾನುಭವ, ಹೃದಯ ತಲ್ಲೀನತೆ, ಮನ ಮೋಹ ಮಿಡಿತ, ಸರ್ವನಾಶ ಪರಿಹಾರವಾದ ಸಂತಸ ಮೌನ ರೋದನದ ಮುಕ್ತಾಯ ಕಣ್ಣೀರಿನ ಶ್ರದ್ಧಾಂಜಲಿ ಅರ್ಪಿಸಿರುವ ಚಿತ್ರಾಂಗದ ಖಂಡಕಾವ್ಯದ ಕಥೆ ರುದ್ರ ಕಾಳಿಯ ಭೈರವ ನೃತ್ಯ ವರ್ಣನೆಯ ಘಟನೆಯನ್ನು ವರ್ಣಿಸಿದೆ. ಕುವೆಂಪು ಸಂಸ್ಕೃತ ವಿದ್ವಾಂಸರು, ಅಷ್ಟೇ ಆಳಕ್ಕಿಳಿದು ನಾಟ್ಯ ವರ್ಣನೆ ಗೀತವರ್ಣನೆ ನೀಡುತ್ತಾರೆ. ಆ ಕಾಲದಲ್ಲಿ ಉದಯಶಂಕರ ಮುಂತಾದ ನಾಟ್ಯ ಶಾಸ್ತ್ರಜ್ಞರನ್ನು ಸಂದರ್ಶಿಸಿದ್ದಾರೆ. ನಾಟ್ಯ ಗ್ರಂಥಗಳನ್ನು ಓದಿರುವುದು ವ್ಯಕ್ತ. ಆಗಿನ ಮಹಾ ಸಂಗೀತಜ್ಞರ ಸಂಗೀತ ಕೇಳಿದ್ದರು. ‘ಚಿತ್ರಾಂಗದ’ನೂರಕ್ಕೆ ನೂರು ನೃತ್ಯ, ಗೀತಕೃತಿ. ಮಹೋಪಮೆಗಳನ್ನು ಮೊದಲು ಪರಿಚಯಿಸಿದವರು ಕುವೆಂಪು.

ಮಣಿಪುರದ ಅರಸ ಚಿತ್ರರಥನ ಮಗಳು ಚಿತ್ರೆ ಸರ್ವೇಸಾಮಾನ್ಯ ರೂಪಿನ ಅನನ್ಯ ಪರಾಕ್ರಮಿ. ತಂದೆಯ ಮರ್ಯಾದೆ ಉಳಿಸಲು ಗಂಡಾಗಿ ಬೆಳೆದಳು. ಗುಂಡಿಗೆಯ ಗಂಡುಗರ್ವದ ಗಂಡರೊಳ್‌ ಗಂಡನಾಗಿ ಕಾಡಿನಲ್ಲಿ ಅಲೆಯುತ್ತಿದ್ದಾಗ ಆಕಸ್ಮಾತ್‌ ವೀರ ಅರ್ಜನನ್ನು ಕಂಡು ಪ್ರಿಯನನ್ನು ಮದುವೆಯಾಗಬಯಸುತ್ತಾಳೆ. ಪ್ರಣಯ ಪ್ರಜ್ಞೆ ಇಲ್ಲದ ಕಾಡಿನ ಹುಡುಗಿ ಸೀರೆಯುಟ್ಟು ಹೆಣ್ಣಾಗಿ ನಯ, ವಿನಯ, ನಾಚಿಕೆಯಿಲ್ಲದೆ ಅರ್ಜನನ ಬಳಿ ಪ್ರೇಮಭಿಕ್ಷೆ ಬೇಡುತ್ತಾ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಶಿವನ ವರದಿಂದ ರತಿ, ಮದನರು ಪ್ರತ್ಯಕ್ಷರಾಗಿ ಪ್ರಣಯ ಶಿಕ್ಷಣ ಕಲಿಸಿ ಒಂದು ತಿಂಗಳು ರತಿ ಸೌಂದರ್ಯ ನೀಡುತ್ತಾರೆ. ಚಿತ್ರೆ ಅರ್ಜನನ್ನು ವಶಪಡಿಸಿಕೊಂಡು ಶಿವಲಿಂಗದ ಸಾಕ್ಷಿಯಲ್ಲಿ ವರ್ಣಮಾಲೆ ಸೂಡಿ ಮದುವೆಯಾಗುತ್ತಾಳೆ.

ಒಂದು ತಿಂಗಳ ಅವಧಿಯಲ್ಲಿ ಅವಳು ಹೆಸರು ಹೇಳುವುದಿಲ್ಲ. ಅರ್ಜನ ಒಂದು ವರ್ಷದ ಅವಧಿಯಲ್ಲಿ ಹನ್ನೊಂದು ತಿಂಗಳು ಕಳೆದು ಹೋಗಿರುವುದರಿಂದ ಆರು ತಿಂಗಳಿಗೆ ಮರಳಿ ಬರುವುದಾಗಿ ಭಾಷೆಯಿತ್ತು, ತನ್ನ ಕೈಯ ಬೆರಳಿನಲ್ಲಿದ್ದ ನರನಾಮಾಂಕಿತದ ಮುದ್ರೆಯುಂಗುರ ತೊಡಿಸಿ ನಿದ್ರಿಸುತ್ತಿದ್ದವಳನ್ನು ಬಿಟ್ಟು ಹೊರಟು ಹೋಗುತ್ತಾನೆ. ಮುಂದೆ ಮರಳಿ ಬರಲಾಗಲಿಲ್ಲ. ಪತಿ ವಿರಹದಿಂದ ಸಾವು ನಿಶ್ಚಯಿಸಿ ಸಮುದ್ರದ ಬಳಿ ಬಂದಾಗ ಸಮುದ್ರರಾಜ ‘ನಿನ್ನ ಕೊನೆ ಉಸಿರು ಎಳೆಯುವ ಮುನ್ನ’ ಪತಿ ದರ್ಶನ ಲಭ್ಯ ಎಂದು ಸಂತೈಸುತ್ತಾನೆ.

ಚಿತ್ರೆ ದೈವವಾಣಿಯಲ್ಲಿ ಭರವಸೆ ಇಟ್ಟು ಹಿಂತಿರುಗಿ ಮೊದಲಿದ್ದ ಶಿವಾಲಯದಲ್ಲಿ ನೆಲೆಸಿ ಶಿವಧ್ಯಾನ ಮಗ್ನಳಾಗುತ್ತಾಳೆ. ಅಭಿಮನ್ಯುವಿಗಿಂತ ಹಿರಿಯ ವೀರಾಧಿವೀರ ತ್ರಿಲೋಕವಿಜಯಿ ನಿಜ ಬಬ್ರುವಾಹನ ಶಕ್ತಿವಂತ ಮಗನನ್ನು ಪಡೆದು ಮಣಿಪುರದ ಸಿಂಹಾಸನಾಧಿಪತಿಗೆ ಸರ್ವಾಧಿಕಾರ ನೀಡುತ್ತಾಳೆ. ಇಪ್ಪತ್ತೆರಡು ವರ್ಷ ಕಳೆದ ನಂತರ ಒಂದು ದಿವಸ ತಪಸ್ವಿಯ ಬಳಿ ಅರ್ಜನನ ಕುದುರೆ ಕಟ್ಟಿರುವ ವಿಷಯ ತಿಳಿಸುತ್ತಾನೆ. ಆದರೂ ನಿಜ ಹೇಳದೆ ಕಾಡಿನ ಮೈಥಿಲಿ ಸಂಸ್ಕೃತಿಯನ್ನು ಎತ್ತಿ ಹಿಡಿದು ಅರ್ಜನನ್ನು ಕರೆ ತರಲು ಹೇಳುತ್ತಾಳೆ. ಸಮರ ಕೈಗಟ್ಟಿದ ವಿಷಯ ಸ್ಥಿತಿಯನ್ನು ಅರಿತು ಸೊಂಟಕ್ಕೆ ಅಂಗವಸ್ತ್ರ ಬಿಗಿದು ಶ್ವೇತಧ್ವಜ ಹಿಡಿದು ಕುದುರೆಯೇರಿ ರಣರಂಗಕ್ಕೆ ದೌಡಾಯಿಸಿ ಬಂದು ಅರ್ಜುನನಿಗೆ ಬಬ್ರುವಾಹನನ ಬಾಣ ಅರ್ನುನನಿಗೆ ತಾಗುವ ಬದಲು ಚಿತ್ರೆಯ ಕೊರಳಿಗೆ ತಾಗಿ ಚಿತ್ರೆ ಕೆಡದುರುಳುತ್ತಾಳೆ. ಓಡಿ ಬಳಿ ಬಂದ ತಂದೆ ಮಕ್ಕಳ ಕೈ ಕೈ ಹಿಡಿಸಿ ಕಗ್ಗಟ್ಟಿನ ಕಠಾಯನ್ನು ತೆಗೆದು ಮುಚ್ಚಿಟ್ಟಿದ್ದ ನರನಾಮಾಂಕಿತದ ಶ್ರೀ ಮುದ್ರೆಯನ್ನು ತೋರಿ ಅರ್ಜುನನ ತಲೆಗೆ ಪಡಿತಲೆಯನಿಟ್ಟು ಧರೆಗುರುಳುತ್ತಾಳೆ. ಅರ್ಜುನನ ಜೀವರಕ್ಷಕಿ ಮಹಾತ್ಯಾಗಮೂರ್ತಿಯಾಗುತ್ತಾಳೆ.

ಮಹೋಪಮೆಗಳನ್ನು ನೀಡಿದ ಮೊದಲ ಕೃತಿ, ಅದಕ್ಕಿಂತ ಮೊದಲಾಗಿ ಪ್ರತಿಸಂದರ್ಭಗಳಲ್ಲಿಯೂ ಅದ್ಭುತ ವರ್ಣನೆ, ಮಹೇಶ ಶಕ್ತಿಯ ಗಾಯತ್ರಿ ದರ್ಶನ, ಮಹಾಕಾಳಿಯ ರುದ್ರನರ್ತನ ಸಂಶೋಧನಗಾರ್ತಿಯರ ಸಂಶೋಧನಾ ಮಥನಕ್ಕೆ ಅರ್ಹ ಕೃತಿಯಿದು.

ಕುವೆಂಪು ಕಥನ ಕಾವ್ಯಗಳಿಂದ ನೃತ್ಯನಾಟಕಗಳನ್ನು ಸಿದ್ಧಪಡಿಸಿ ಹೇಮಾವತಿಯವರ ಒಪ್ಪಿಗೆ ಪಡೆದು ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಹಲವಾರು ನೃತ್ಯಗಳನ್ನು ಅಭಿನಯಿಸಿದೆ. ಮುಖ್ಯವಾಗಿ ಕುವೆಂಪು ದಂಪತಿಗ ಆರಾಧಾಕರೂ. ಪೂಜಾರ್ಪಣೆಯ ಭಕ್ತರೂ ಪ್ರಿನ್ಸಿಪಾಲ್‌ ಎಂ. ಜಯಲಕ್ಷಮ್ಮಣ್ಣಿಯವರ ಸಂಪೂರ್ಣ ಸಹಾಯ, ಸಹಕಾರಗಳಿದ್ದವು. ಸರ್ವೋನ್ನತ ನೃತ್ಯಗಾತಿಯರು, ಸಂಗೀತ ವಿದೂಷಕಿಯರು, ವಾದ್ಯಗಾರರು ಶ್ರೀಮಂತರ ಸಹಾಯವಿದ್ದಿತು. ಹೀಗಾಗಿ ಮಂಥನ, ಅನುಕರಣ ದೃಶ್ಯಗಳನ್ನು ಪ್ರದರ್ಶಿಸಿದೆ. ನನ್ನ ಕಾಲದಲ್ಲಿ ಪ್ರಖ್ಯಾತ ಕಥಕ್‌ ಕಲಾವಿದೆ ನರ್ತಕಿ ಶ್ರೀಮತಿ ಮಯಾರಾವ್‌ ನಟರಾಜ್‌ ಅವರು ಯಜ್ಞ ವೇದಿಕೆ ನೃತ್ಯ ನಾಟಕವನ್ನು ಶ್ರೀಚದುರಂಗರವರ ಸಹಾಯದಿಂದ ವಸ್ತುಪ್ರದರ್ಶನ ವೇದಿಕೆಯ ಮೇಲೆ ಪ್ರದರ್ಶಿಸಿದರು. ಆದರೆ, ಬಯಸಿದ್ದ ಫಲ ಸ್ವಲ್ಪವೂ ಲಭಿಸಲಿಲ್ಲ.

ಕುವೆಂಪು ತಮ್ಮ ಕಾವ್ಯದಲ್ಲಿ ಸ್ತ್ರೀಯನ್ನು ಕವಿಯ ಸಹಚರಿಯಾಗಿ ಕಂಡರು. ದೇವಿಯಾಗಿ ಆರಾಧಿಸಿದರು. ಅವರವರ ದರ್ಶನಕ್ಕೆ, ಭಾವಕ್ಕೆ, ಭಂಗಕ್ಕೆ ತಕ್ಕಂತೆ ಮಿಡಿಸಿದರು. ಕಲಾ ಸುಂದರಿಯಾಗಿ ಮಹೇಶ್ವರಿಯಾಗಿ ಸಂಪೂರ್ಣ ಗೌರವ ತೋರಿಸಿದರು.

* * *


 

‘ರಾಮಾಯಣ ದರ್ಶಣಂ’-ಒಂದು ವಿವೇಚನೆ
– ಬಿ. ಎನ್‌. ಸುಮಿತ್ರಾಬಾಯಿ

 

‘ಬಹಿರ್ಘಟನೆಯ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು. ಅಲೌಕಿಕ ನಿತ್ಯಸತ್ಯಗಳ
ಪ್ರತಿಮಿಸುವ ಸತ್ಯಸ್ಯ ಸತ್ಯಕಥನಂ ಕಣಾ’ (ರಾ.ದ. ಪು.೭೮)

ತಮ್ಮ ಕಾವ್ಯದ ಪೀಠಿಕೆಯ ಪದ್ಯಗಳಲ್ಲಿ ಈ ಕಾವ್ಯ ರಚನೆಯಲ್ಲಿ ಕವಿಯ ಆಶಯವೇನಿತ್ತು ಎಂಬುದನ್ನು ಅವರು ಸ್ಪಷ್ಟಪಡಿಸುತ್ತಾರೆ. ರಾಮಚರಿತ್ರೆಯ ಲೌಕಿಕವಿವರಗಳನ್ನು ಹೇಳುವ ಉದ್ದೇಶ ಕುವೆಂಪು ಅವರದಲ್ಲ. ವಾಲ್ಮೀಕಿ ರಾಮಾಯಣವೇ ಸ್ವತಃ ಗಾಢವಾದ ಸಾಂಕೇತಾರ್ಥದಲ್ಲಿ ರಚಿತವಾಗದ್ದು. ಆ ಸಂಕೇತಿಕ ಅರ್ಥವನ್ನು ಬಗೆಗಣ್ಣಿನಿಂದ ಗ್ರಹಿಸಿ, ಮನದಲ್ಲಿ ಮಥಿಸಿ ಅಧುನಿಕ ಕನ್ನಡಿಗರಿಗಾಗಿ ಆ ಅರ್ಥವನ್ನು ಕಟ್ಟಿಕೊಡುವುದು ಅವರ ಆಶಯ. ಈ ಆಶಯದ ಮಾತುಗಳಲ್ಲಿ “ಕಾವ್ಯ” ಕುರಿತಂತೆ ಕುವೆಂಪು ಅವರ ದಾರ್ಶನಿಕ ಮೀಮಾಂಸೆಯ ನಂಬಿಕೆಗಳೂ ಸೇರಿರುತ್ತವೆ. ಅಂತರಂಗ-ಬಹಿರಂಗ, ಲೌಕಿಕ-ಅಲೌಕಿಕ, ಪ್ರತಿಮೆ-ಪ್ರತಿಕೃತಿ ಘಟನಾತ್ಮಕ ಚರಿತೆ-ಸತ್ಯಕಥನ ಎಂಬ ದ್ವಂದ್ವಾತ್ಮಕ ತಾತ್ವಿಕ ಪರಿಕಲ್ಪನೆಗಳ ಮೂಲಕ ಕುವೆಂಪು ಅಂತರಂಗದಲ್ಲಿ ಮಾತ್ರ ಹೊಳೆವ ಸಂಕೇತಗಳ ಸತ್ಯವನ್ನು ಪ್ರತಿಮಾತ್ಮಕವಾಗಿ ಕಥೆಸುವ ದಾರಿ ತಮ್ಮದೆಂದು ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಆಯ್ಕೆಯಿಂದಲೇ ಪರಂಪರಾಗತ ಧಾರ್ಮಿಕವೂ ಆದ ಹಲವಾರು ನಂಬಿಕೆಗಳು ಶ್ರದ್ಧೆಯಾಗಿ ಒಂದು ಚೌಕಟ್ಟನ್ನು ಈ ವಸ್ತುವಿಗಾಗಿ ಕಟ್ಟಿನಿಲ್ಲಿಸುತ್ತವೆ. ರಾಮಾಯಣ ‘ಶಾಶ್ವತ’ವಾದದ್ದು, ಅದನ್ನು ನಿರ್ವಹಿಸಿದವರು ‘ದಿವ್ಯ ಚೇತಸರು’ ಅವರ ಕಥೆಗೆ ಈ ಕಾವ್ಯ ಎಂಬ ಆಕೃತಿಯೆ ‘ವಾಗಾರ್ಥ ರರ್ಥ’. ಈ ರಥವು ಚಲಿಸುವ ದಾರಿ ‘ಭಾವದಗ್ನಿಯ ಪಥ’. ಈ ಕಾವ್ಯದ  ರಚನೆ ಮತ್ತು ಓದುವಿಕೆ ‘ಸಚ್ಚಿದಾನಂದ ಪೂಜೆ’. ಸಹೃದಯರಾದಂಥ ಓದುಗರ ಹೃದಯದಲ್ಲಿ ಹುಟ್ಟುವ ಭಕ್ತಿಭಾವವೇ ಈ ಪೂಜೆಗೆ ಒದಗುವ ‘ನೈವೇದ್ಯ’. ಈ ಕಾವ್ಯವನ್ನು ಹೀಗೆ ಸಚ್ಚಿದಾನಂದ ಪೂಜೆಯೆಂದು ಅರಿತು ಓದುವವರಿಗೆ ಮತ್ತು ಕೇಳುವವರಿಗೆ ಕಾವ್ಯದಲ್ಲಿ ಅಂತರ್ಗತವಾಗಿರುವ ಆ ದಿವ್ಯ ಚೇತನಗಳು ‘ಚಿತ್ಕಾಂತಿಯನ್ನು’ ನೀಡಲಿ ಎಂಬುದೇ ಕವಿ ಹೇಳುವ ‘ಫಲಶ್ರುತಿ’.

ಈ ರೀತಿಯ ಲೋಕಾತೀತ ಮಾತ್ರವಲ್ಲ ಇಂದ್ರಿಯಾತೀತವೂ ಆದ ಅನುಭವವನ್ನು ಗುರಿಯಾಗಿ ಇಟ್ಟುಕೊಂಡು ಕುವೆಂಪು ಕಾವ್ಯವಸ್ತುವನ್ನು ಗಹನವಾದ ಆಧ್ಯಾತ್ಮಿಕ ಪದಪುಂಜಗಳ ಮೂಲಕ ಸೂಚಿಸುತ್ತಾರೆ. ಈ ಆಧ್ಯಾತ್ಮಿಕ ವಿಚಾರಗಳು ಉಪನಿಷತ್ಕಾಲದಿಂದಲೂ ಉಳಿದು ಬಂದಿರುವಂಥವು. ಬ್ರಹ್ಮಾಂಡ ಪ್ರಜ್ಞೆ ಎಂಬುದು ಶಾಶ್ವತವೂ ‘ಸತ್ಯ’ವೂ ಆಗಿದೆ. ಈ ‘ಸತ್‌’ ಎಂಬುದರ ಕ್ರಿಯಾತ್ಮಕ ಕಲೆಯೇ ‘ಚಿತ್‌’. ಈ ಲೋಕದ ಬದುಕಿನಲ್ಲಿ ತೊಳಲುತ್ತಾ ಹುಟ್ಟುತ್ತ, ಸಾಯುತ್ತ ಇರುವ ಜೀವರ ಅವಸ್ಥೆಯೇ ‘ಮೃತ್‌’. ಈ ಮರ್ತ್ಯಾವಸ್ಥೆಯ ನೆಲೆಯಿಂದ ಆತ್ಮಸಾಕ್ಷಾತ್ಕಾರ ಸಾಧಿಸಲು ಪಂಚಕೋಶಾವಸ್ಥೆಗಳನ್ನೂ ಹಾದುಹೋಗಬೇಕು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಎಂಬ ಈ ಐದು ಕೋಶಾವಸ್ಥೆಗಳಿಂದ ಆತ್ಮವು ತಾನು ಮತ್ತು ‘ಸತ್‌’ ಎಂಬ ನಿತ್ಯ ಸತ್ಯವೂ ಒಂದೇ ಎಂಬ ಮಿಲನಾವಸ್ಥೆಯನ್ನು ತಲುಪಬಹುದು. ಆ ಮಿಲನಾವಸ್ಥೆ ಕೇವಲ ಆನಂದ ರೂಪದ್ದು, ಅಲ್ಲಿ ಪ್ರಜ್ಞೆಯ ಕೆಳಗಿನ ಯಾವ ಹಂತಗಳೂ ಇರುವುದಿಲ್ಲ ಎಂಬುದು ಉಪನಿಷತ್ತು ಹಾಗೂ ಯೋಗ ದರ್ಶನಗಳು ಹೇಳುವ ವಿಚಾರ. ಕುವೆಂಪು ಅವರ ಬರಹದ ಒಟ್ಟು ದಾರ್ಶನಿಕ ಲಕ್ಷಣವೆಲ್ಲ ಈ ಆಧ್ಯಾತ್ಮಿಕ ನಂಬಿಕೆಯಿಂದಲೇ ಬೆಳೆದವುಗಳು.

ಒಂದು ಕವನದಲ್ಲಿ ಸರಸ್ವತಿಯನ್ನು ಕವಿ ಪ್ರಾರ್ಥಿಸುವ ಸಾಧಾರಣ ರೀತಿ ಹೀಗಿದೆ :

‘ನರ್ತಿಸುತಾಯೆ ಅಜಜಾಯೆ
ಮಮ ಮಸ್ತಕ ನಿವೇಶದಲಿ
ಅಡಿಸೋಂಕಿಗೆ ನುಡಿಯರಳೆ
ಅಜ್ಞಾನದ ಗಡಿ ಉರುಳೆ
ವಿಜ್ಞಾನದ ಕಾಂತಿ
ಅವತರಿಸುತ ಬರೆ ಶಾಂತಿ
ಮಾನಸ ಅಧಿಮಾನಸಕೇರೆ
ಅತಿಮಾನಸ ಮೈದೋರೆ…”

ಇಂತಹ ನಿರಂತರ ದಾರ್ಶನಿಕ ನಂಬಿಕೆಯುಳ್ಳ ಕವಿ ಕುವೆಂಪು ಸೀತೆ-ರಾಮರ ಸಂಬಂಧವನ್ನು ಮರ್ತ್ಯಲೋಕದ ಅವಸ್ಥೆಗೆ ಮೀರಿದ್ದಾದ ‘ಮೃತ’ ಮತ್ತು ‘ಚಿತ್‌’ ಶಕ್ತಿಗಳ ಸಂಯೋಗವೆಂದು ಭಾವಿಸುತ್ತಾರೆ. ಈ ಸಂಯೋಗದ ಹಿಂದೆ ಒಂದು ದೈವಿಕ ಉದ್ದೇಶವಿದೆ. ಅದೆಂದರೆ ಮೃತ್‌ ಶಕ್ತಿಯ ಮರ್ದನ ಮತ್ತು ‘ಚಿತ್’ ಶಕ್ತಿಯ ಸಂವರ್ಧನೆ. ಲೋಕದ ನಿತ್ಯ ನಿಯಾಮಕ ಶಕ್ತಿಗಳು ಈ ಕಾವ್ಯಕಥೆಗೆ ‘ರಸರೂಪದಿಂದ ಇಳಿದು’ ಮನೋಮಯಕ್ಕೆ ಬಂದು ಪ್ರಾಣಮಯದೊಳಗೆ ಚರಿಸುತ ಅನ್ನಮಯಕ್ಕೆ ಅವತರಿಸುವಂತಾಗಬೇಕು ಎಂಬುದೇ ಈ ಕಾವ್ಯದ ಕಥೆ ಹೇಳುವ ಅರ್ಥ ಎನ್ನುತ್ತಾರೆ. ಕವಿ.

‘ಶ್ರೀರಾಮನಾಲೋಕದಿಂದವತರಿಸಿ ಬಂದು
ಈ ಲೋಕಸಭವೆಯೆಮ್ಮ ಭೂಜಾತೆಯಂ
ಸೀತೆಯಂ ವತಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುವಂತೆ, ಸಂವರ್ಧಿಪವೋಲ್‌ ಚಿಚ್ಛಕ್ತಿಯಂ’

ಯೋಗದಲ್ಲಿ ಹೇಳುವ ಹಾಗೆ ಪ್ರಕೃತಿ-ಪುರುಷ ಎಂಬ ದ್ವಂದ್ವ ಭಾವದ ನಿವಾರಣೆಯೇ ಚಿತ್ತನ್ನು ಸತ್ತಿನೆಡೆಗೆ ಕರದೊಯ್ಯುವ ಹಾದಿ ಆದ್ದರಿಂದ ಲೋಕದ ನಿತ್ಯಶಕ್ತಿಗಳಿಗೆ ಕವಿ ಮೊರೆಯಿಡುತ್ತಾರೆ;

‘ರಾವಣವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ ನಿಮ್ಮ
ದಿವ್ಯದೈವೀ ಪ್ರಜ್ಞೆಯ ಮೃತಗೋಪುರಕೇರ್ವವೋಲ್‌
ಓ ಬನ್ನಿ ಮಮತರಿಸಿಮೀ ಮೃತ್ಕಲಾ ಪ್ರತಿಮೆಯೋಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್‌’
(ರಾ. ದ. ಪು.೮)

ರಾಮಾಯಣವನ್ನು ಸಾಂಪ್ರದಾಯಿಕ ಹಿಂದೂಧರ್ಮವು ತನ್ನ ಪ್ರಮಾಣಗ್ರಂಥವೆಂದು ಭಾವಿಸುತ್ತದೆ. ಅದರಲ್ಲಿ ಭಗವಂತನಾದ ವಿಷ್ಣುವಿನ ಒಂದು ಅವತಾರವೆಂದು ರಾಮನನ್ನು ಪ್ರತಿಪಾದಿಸಿದ್ದು, ದುಷ್ಟ ಶಿಕ್ಷಣ (ರಾಕ್ಷಸ ಮರ್ದನ) ಶಿಷ್ಟ ರಕ್ಷಣೆಯ ಅರ್ಥವನ್ನು ತಲೆತಲಾಂತರದಿಂದಲೂ ಭಾರತೀಯರು ಈ ಕಾವ್ಯದಿಂದ ಗ್ರಹಿಸುತ್ತ ಬಂದಿದ್ದಾರೆ. ವರ್ತಮಾನ ಕಾಲಕ್ಕಂತು ರಾಮ=ಹಿಂದುತ್ವ ಆಗಿ ಹೋಗಿದೆ. ಆದರೆ, ಕುವೆಂಪು ಈ ಗತಾನುಗತಿಕ ಪುರಾಣಾಂಶವನ್ನು ಬೆಳೆಸುವುದಿಲ್ಲ. ಅವರ ವೈಯಕ್ತಿಕ ವಿದ್ವತ್ತು, ವ್ಯೂತ್ಪತ್ತಿಗಳನ್ನೂ ತಮ್ಮ ಕಾಲದ ಸಮಾಜಶಾಸ್ತ್ರೀಯ ಮನೋವಿಜ್ಞಾನಾತ್ಮಕ ಹಾಗೂ ವೈಜ್ಞಾನಿಕ ಅರಿವನ್ನು ಅವರದೇ ಆದ ನಿರ್ದಿಷ್ಟ ಜೀವನದೃಷ್ಟಿಯ ಮೂಲಕ ರಾಮಾಯಣದ ಒಳಗಿನ ಆಧ್ಯಾತ್ಮಿಕ ಸಂಕೇತಾರ್ಥವನ್ನು ಬೆಳಕಿಗೆ ತರುವುದಕ್ಕೆ ಯತ್ನಿಸುತ್ತಾರೆ.

“…………………….. ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ ಕನ್ನಡದಿ
ಬೇರೆ ಕಥೆಯೆಂಬಂತೆ ಬೇರೆ ಮೈಯಾದಂತೆ ಮರುವುಟ್ಟುವಡೆದಂತೆ’

ಈ ಕಾವ್ಯದ ಸ್ವರೂಪವಿದೆ ಎಂದು ಕುವೆಂಪು ಹೇಳುತ್ತಾರೆ. ಆದರೆ ‘ಬೇರೆ ಕಥೆ’, ‘ಬೇರೆ ಮೈ’ ಅಥವಾ ‘ಮರುವುಟ್ಟು’ ಎಂಬುದು ಮೂಲ ಕೃತಿಯ ಧಾರ್ಮಿಕ ಆಧ್ಯಾತ್ಮಿಕ ನೆಲೆಗಳನ್ನು ಪ್ರಶ್ನಿಸುವ ಇಲ್ಲವೆ ಬುಡಮೇಲು ಮಾಡುವ ಯತ್ನವಲ್ಲ. ಬದಲಾಗಿ ಆಧುನಿಕ ಭಾಷಾಂತರ ಸಿದ್ಧಾಂತ ತಜ್ಞರು ವಸಾಹತುಶಾಹಿಯಡಿ ಭಾರತೀಯ ಭಾಷೆಗಳಲ್ಲಿ ಪ್ರಾಚೀನ ಪಠ್ಯಗಳ ಅನುವಾದಾತ್ಮಕ ಪುನಃಸೃಷ್ಟಿಯ ಯತ್ನಗಳಾಗಿದ್ದು, ಇಂತಹ ಪುನರ್‌ ಸೃಷ್ಟಿಗಳ ತದ್ರೂಪವಾಗಿರದೆ ಸ್ಥಳೀಯ ಭಾಷೆ, ಸಂಸ್ಕೃತಿಗಳ, ದೇಸಿತನವನ್ನು ಸಮಾವೇಶಗೊಳಿಸಿಕೊಂಡು ಸ್ವಂತಿಕೆಯನ್ನು ಸ್ಥಾಪಿಸುವ ಯತ್ನಗಳಾಗಿರುತ್ತವೆ. ಆದರೆ, ಕುವೆಂಪು ಅವರು ರಾಮಾಯಣದಂಥ ಘನವಾದ ವಸ್ತುವನ್ನು ಕಥಿಸಲು ಆಧುನಿಕ ಕನ್ನಡವನ್ನು ಆಯ್ದುಕೊಳ್ಳಲಿಲ್ಲ. ಬದಲಾಗಿ ಹಳೆಗನ್ನಡ ಮತ್ತು ಸಂಸ್ಕೃತ ಮಿಶ್ರಣ ಮಾಡಿ ‘ಘನೀಕರಿಸಿದ’ ಭಾಷೆ ಮತ್ತು ಗದ್ಯಗಂಧಿ ಛಂದಸ್ಸಿನಲ್ಲಿ ಹಳೆಯ ಮಹಾಕಾವಯಗಳ ರೀತಿಗಳನ್ನೂ ಬಿಡದೆಯೇ ಕೃತಿರಚಿಸಿರುವುದು ನಿಜವಾಗಿ ಕುತೂಹಲಿಸಬೇಕಾದ ಸಂಗತಿ. ಆರ್ಷ ಕಾವ್ಯಗಳಾದ ರಾಮಾಯಣ ಮಹಾಭಾರತಗಳು ಇಂದಿಗೂ ಜನರ ಮನಗೆದ್ದಿರುವುದಲ್ಲಿ ಅವು ಅತ್ಯಂತ ಸರಳ ಸಂಸ್ಕೃತ ಭಾಷೆಯಲ್ಲಿರುವುದೂ ಒಂದು ಬಹುಮುಖ್ಯ ಕಾರಣ. ಅವು ಬಾಣಕವಿ ಇಲ್ಲವೆ ಭಾರವಿಯ ಭಾಷೆಯಲ್ಲಿದ್ದರೆ ಎಂದೋ ಜನ ಅವುಗಳನ್ನು ದೂರ ಮಾಡಿರುತ್ತಿದ್ದರು.

ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಕುವೆಂಪು ಕಾವ್ಯ ಯಾವ ರೀತಿಯಲ್ಲಿ ವಾಲ್ಮೀಕಿ ರಚಿತ ರಾಮಾಯಣಕ್ಕಿಂತ ಬೇರೆಯಾಗಿ ತೋರಬಲ್ಲದು ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ಪರಿಶೀಲಿಸಬಹುದಾಗಿದೆ. ವಿಶೇಷವಾಗಿ ಸ್ತ್ರೀ ಪಾತ್ರಗಳನ್ನು ಕುರಿತಂತೆ ನಾನು ಪರಿಶೀಲಿಸಲು ಆಶಿಸುತ್ತೇನೆ. ರಾಮಾಯಣಕ್ಕಿಂತ ರಾಮಾಯಣ ದರ್ಶನಂ ಅನ್ನು ಭಿನ್ನವಾಗಿಸುವ ಅಂಶಗಳನ್ನು ಈ ಕೆಲವು ನಿರ್ದಿಷ್ಟ ರೂಪಗಳಲ್ಲಿ  ಗುರುತಿಸಬಹುದು.

೧. ಪ್ರಾಚೀನ ಪೌರಾಣಿಕ ಮೂಲ ಪ್ರತೀಕಗಳನ್ನು ಆಧುನಿಕ ಮನಶಾಸ್ತ್ರೀಯ ದೃಷ್ಟಿಯಿಂದ ಮಾನವೀಕರಣಗೊಳಿಸುವುದು.

೨. ಪ್ರಾಚೀನ ವಸ್ತುವಿನಲ್ಲಿರುವ ಆಕಾಲದ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ವಾಸ್ತವಿಕ ಕ್ರಿಯಾಶೀಲ ಪರಿಣಾಮಗಳನ್ನು ಉದ್ದೇಶ ಪೂರ್ವಕವಾಗಿ ತಮ್ಮ ಕೃತಿಯಿಂದ ಹೊರಗಿಡುವುದು.

೩. ತಮ್ಮ ಸಮಕಾಲೀನ ತಿಳುವಳಿಕೆ, ಅನುಭವಗಳನ್ನು ಪ್ರಕೃತಿ ವರ್ಣನೆಯಲ್ಲೂ ಸ್ತ್ರೀಯರ ಬದುಕಿನ ಚಿತ್ರಣದಲ್ಲೂ ಬಳಸುವ ಮೂಲಕ ಪ್ರಾದೇಶಿಕ ವಾಸ್ತವಿಕತೆಯನ್ನು ಸೃಷ್ಟಿಸುವುದು.

ಈ ವಿಭಿನ್ನ ಅಂಶಗಳನ್ನು ಉದಾಹರಣೆಗಳೊಂದಿಗೆ ಇನ್ನಷ್ಟು ವಿವರಿಸಬಹುದು.

೧. ಪುರಾಣ ಪ್ರತೀಕಗಳ ಮಾನವೀಕರಣ. ರಾಮಾಯಣದಲ್ಲಿ ಉದ್ದಕ್ಕೂ ಕಂಡುಬರುವಂಥದ್ದೇ. ಅಹಲ್ಯೆಯ ಉದ್ಧಾರ, ಶೂರ್ಪನಕೀಯ ಪ್ರಸಂಗ, ಕೈಕೆ, ಮಂಥರೆಯರ ಸಂಬಂಧ ಹಾಗೂ ವ್ಯಕ್ತಿತ್ವಗಳ ಪರಿವರ್ತನೆ, ಮಂಡೋದರಿ, ಸೀತೆಯರನ್ನು  ಮುಖಾಮುಖಿಯಾಗಿರುವ ಸಂದರ್ಭ ಶಬರಿಯ ಪ್ರಸಂಗ ತಾರೆ, ವಾಲಿ, ಸುಗ್ರೀವರ ಸಂಬಂಧ, ‘ರಾಕ್ಷಸತ್ವ ಅರ್ಯತ್ವ’ಗಳ ತಳದಲ್ಲಿರುವ ಜನಾಂಗೀಯ ಮಿಥ್ಯಾ ಕಲ್ಪನೆಗಳ ನಿವಾರಣೆ ಮುಂತಾದ ಅನೇಕ ನಿದರ್ಶನಗಳು ‘ಪುರಾಣ’ವನ್ನು ಮಾನವೀಕರಿಸುವ, ವಾಸ್ತವಿಕ ಸಹಜಗೊಳಿಸುವ ಯತ್ನಗಳಾಗಿವೆ. ಆದರೆ, ವಿಶ್ಲೇಷಣೆಯ ಅನುಕೂಲಕ್ಕಾಗಿ ನಾನು ‘ಮಂಥರೆ’ ಹಾಗೂ ‘ಶಬರಿ’ ಪಾತ್ರಗಳನ್ನು ಕುವೆಂಪು ಚಿತ್ರಿಸಿರುವ ಬಗೆಯನ್ನು ಮಾತ್ರ ಉದಾಹರಣೆಗಾಗಿ ಇಲ್ಲಿ ಆರಿಸಿಕೊಳ್ಳುತ್ತೇನೆ. ಕುವೆಂಪು ಕಾವ್ಯದಲ್ಲಷ್ಟೇ ಅಲ್ಲ. ಮೂಲದಲ್ಲೇ ಮಂಥರೆ ದಾಸಿ. ಶಬರಿ ಬೇಡತಿ. ಅಂದರೆ ವರ್ಣವ್ಯವಸ್ಥೆಯಲ್ಲಿ ಕೆಳಸ್ತರಕ್ಕೆ ಸೇರುವವರು ಅರ್ಥಾತ್‌‘ಆರ್ಯೇತರ” ಸಾಂಸ್ಕೃತಿಕ ನೆಲೆ ಅವರದು. ದಸ್ಯು ಶಿಶುವಾದ ಮಂಥರೆ ಅಸಾಧ್ಯ ಕುರೂಪಿತನದಿಂದಾಗಿ ಹೆತ್ತವರಿಂದ ತೊರೆಯಲ್ಪಟ್ಟು ಅನಾಥೆಯಾದವಳು. ಕೇಕಯ ರಾಜನ ಕರುಣೆಯಾಸರೆ ಸಿಕ್ಕಿದ್ದರಿಂದ ರಾಜವಂಶದವರ ಅರಮನೆಗಳಲ್ಲಿ ಊಳಿಗದ ಅವಕಾಶ ಪಡೆದಾಕೆ. ಅರಮನೆಯ ದಾಸಿಯಾಗಿ ಕೂಡ ಎಲ್ಲರಿಂದಲೂ ಅವಳು ಪಡೆಯುವುದು ಅವಹೇಳನ, ತಿರಸ್ಕಾರ, ಅಪಮಾನಗಳನ್ನು ಮಾತ್ರ. ಇಂತಹ ಮರುಭೂಮಿಯಂತೆ ಪ್ರೀತಿ ರಹಿತವಾಗಿದ್ದ ಅವಳಿಗೆ ಅಂತಃಕರಣ ಕನಿಕರ ದೊರಕಿಸಿಕೊಟ್ಟಿದ್ದು, ಕರುಣಾಳು ಕೇಕಯ ರಾಜ. ನನ್ನ ಮಗಳು ಕೈಕೆಗೆ ದಾದಿಯಾಗಿರುವಂತೆ ಮಾಡಿ ಅವಳೊಳಗಿನ ಮಾತೃವಾತ್ಸಲ್ಯಕ್ಕೆ ಹೊರ ಹೊಮ್ಮುವ ಅವಕಾಶ ನೀಡಿದವನು. ಕೈಕೆಯು ಮದುವೆಯಾಗಿ ದಶರಥನ ಅರಮನೆಗೆ ಬಂದಾಗ ಅವಳೂ ಜೊತೆಯೇ ಬಂದು, ಅವಳ ಮಗ ಭರತನಿಗೆ ಹುಟ್ಟಿದಾಗಿನಿಂದ ದಾದಿಯಾಗಿ ಲಾಲಿಸಿ ಪಾಲಿಸಿದವಳು ಮಂಥರೆ.

ಕೌಸಲ್ಯೆ ತನ್ನ ಕ್ಷತ್ರ ಕುಲದ ಗತ್ತಿನಿಂದ ಮಗು ರಾಮನ್ನು ಮುಟ್ಟಲೂ ಇವಳಿಗೆ ಅವಕಾಶ ನೀಡದೆ, ಅವಮಾನಿಸಿದ ನೋವೇ ಮಂಥರೆಯನ್ನು ಮುಂದೆ ಸೇಡಿಗೆ ಪ್ರೇರೇಪಿಸುತ್ತದೆ. ರಾಮನಿಗೆ ಪಟ್ಟಾಭಿಷೇಕ ಆಗಗೊಡದ ಹಾಗೆ, ಭರತನಿಗೇ ರಾಜ್ಯ ದೊರಕುವಂತೆ ಮಾಡಲು ಆಕೆ ಕೈಕೆಯ ಮನಸ್ಸಿನಲ್ಲಿ ರಾಜ್ಯದ ಆಸೆ ಬಿತ್ತುತ್ತಾಳೆ.

ಹೀಗೆ ಮೂಲದ ರಾಮಾಯಣದ ಕಥೆಗೆ ಬಲವಾದ ತಿರುವನ್ನು ನೀಡುವ ‘ನೈಮಿತ್ತಿಕಪಾತ್ರ’ವಾದ ಮಂಥರೆಯ ವರ್ತನೆಯ ಕೇಡಿಗತನವನ್ನು ಪೂರ್ಣವಾಗಿ ಮಾನವೀಯ ಮನಶಾಸ್ತ್ರೀಯ ಅರಿವಿನಿಂದ ಹೊಸದೊಂದು ಅರ್ಥ ಬರುವಂತೆ ಮಾಡಿದ್ದಾರೆ. ಕುವೆಂಪು. ಕೆಡುಕು ಎಂಬುದಕ್ಕೆ ಸಂಕೇತವಾಗಿ ಮಾತ್ರ ಮೂಲದಲ್ಲಿ ಕಾಣುವ ಮಂಥರೆ ಕುವೆಂಪು ಅವರಲ್ಲಿ ಅಜ್ಞಾನದಿಂದ ತಪ್ಪು ಮಾಡಿ, ಆಮೇಲೆ ತನ್ನ ತಪ್ಪಿನಿಂದ ಕೈಕೆಗೆ ವೈಧವ್ಯ, ಭರತನಿಗೆ ಪಾಡು ಉಂಟಾಗಿದ್ದು ಕಂಡು ಪಶ್ಚಾತ್ತಾಪದಲ್ಲಿ ಬೆಂದು ಮಂಥರೆಗೆ ಪರಿಶುದ್ಧವಾಗುವ ಅವಕಾಶವನ್ನು ಕುವೆಂಪು ಕಲ್ಪಿಸಿದ್ದಾರೆ. ಅಪರಾಧ ಮತ್ತು ಶಿಕ್ಷೆ, ಪಶ್ಚಾತ್ತಾಪ-ಪಾಪ ವಿಮೋಚನೆಗಳ ತತ್ವಗಳಿಂದಾಗಿ ಮಂಥರೆಯ ಮಾನವೀಕರಣ ಕುವೆಂಪು ಅವರ ಅಸಾಧಾರಣ ಪ್ರತಿಭೆಯ ನಿದರ್ಶನವೂ ಆಗಿ ಉಳಿದಿದೆ.

ಶಬರಿಯ ಪಾತ್ರ ಮೂಲ ರಾಮಾಯಣದಲ್ಲಿಯೇ ರಾಮನ ಪರಮಭಕ್ತೆಯಾದ ಜ್ಞಾನಿಯೊಬ್ಬಳ ಭಕ್ತಿ-ಶ್ರದ್ಧೆಗಳ ಸಂಕಥನವಾಗಿ ಬೆಳೆದಂಥದು. ಕುವೆಂಪು ಅವರು ಈ ಪಾತ್ರದ ವ್ಯಕ್ತಿತ್ವದ ಗಡಿ ರೇಖೆಗಳನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅವಳು ಬೇಡರ ಬುಡಕಟ್ಟಿನ ನಾಯಕಿ. ಮತಂಗ ಮುನಿಗಳ ಶಿಷ್ಯೆಯಾಗಿ ಆಧ್ಯಾತ್ಮಿಕ ಸಾಧನೆ, ದೈವಭಕ್ತಿಗಳಿಂದ ಮೋಕ್ಷಕ್ಕೆ ಸಲ್ಲುವ ದಾರಿಯ ಕೊನೆಯಲ್ಲಿರುವಾಕೆ. ಅವಳ ಅಸಾಧಾರಣ ಅತೀಂದ್ರಿಯ ಶಕ್ತಿಯಿಂದ ಕಾಲದ ಮಿತಿಯನ್ನು ಮೀರಿ ಮುಂದೆ ಆಗಬಹುದಾದ್ದನ್ನು ಅರಿಯಬಲ್ಲಾಕೆ. ರಾಮನಿಗೆ ಅವಳು ಮಾತೆಯ ವಾತ್ಸಲ್ಯವನ್ನೇ ಎರೆದು, ಅವನ ರೋಗವನ್ನು ನಿವಾರಿಸಿ, ತಾನು ರೋಗ ಹತ್ತಿ ಸಾವಿನೆಡೆಗೆ ಸರಿಯುವ ಅನನ್ಯ ರೀತಿಯ ತ್ಯಾಗ, ಪ್ರೇಮಗಳ ಸಾಕಾರಮೂರ್ತಿಯಾಗುತ್ತಾಳೆ ಶಬರಿ. ಒಳಿತಿನ ಶಕ್ತಿಯನ್ನು ಪ್ರತಿನಿಧಿಸುವ ಅವಳು ರಾಮನಿಗೆ ಸೀತೆಯನ್ನು ಹುಡುಕಲಿಕ್ಕೆ ವಾಲಿ-ಸುಗ್ರೀವರ ನೆರವನ್ನು ಪಡೆಯುವಂತೆ ಸೂಚನೆಯನ್ನೂ ನೀಡುತ್ತಾಳೆ. ಬಹುಶಃ ಶಬರಿಯಲ್ಲಿ ಕುವೆಂಪು ತಮ್ಮ ಆರಾಧ್ಯ ಸ್ತ್ರೀತ್ವದ ಮಾದರಿಯಾದ ಶಾರದಾದೇವಿಯವರ ಪ್ರತಿಬಿಂಬವನ್ನು ಮೂಡಿಸಿದ್ದಾರೋ ಎಂಬಷ್ಟರ ಮಟ್ಟಿನ ಗೌರವ ಶ್ರದ್ಧಾಭಾವದಿಂದ ಈ ಪಾತ್ರ ಮೂಡಿ ಬಂದಿದೆ.

ಈ ಇಬ್ಬರ ಜಾತೀಯ ಕೆಳನೆಗಳನ್ನಾಗಲಿ, ಅವರ ಹೊರಗಿನ ರೂಪು ಯೌವನ, ಸಂಪತ್ತು ಕುಲ ಮುಂತಾದ ಸಮಾಜ ಬಯಸುವ ಯಾವುದೇ ಗುಣಗಳಿಗಿಂತ ಮಿಗಿಲಾಗಿ ಅವರ ಅಂತರಂಗದ ಸತ್ವ ಮತ್ತು ಸೌಂದರ್ಯಗನ್ನು ಕುವೆಂಪು ಗ್ರಹಿಸಿ ಚಿತ್ರಿಸುವ ಮೂಲಕ ಮಾನವ ಬದುಕಿನ ಮೌಲ್ಯ ಮತ್ತು ಸಾರ್ಥಕತೆಗಳತ್ತಲೂ ಅರಿವು ಮೂಡಿಸುತ್ತಾರೆ. ಅಂತರಂಗದ ಅಜ್ಞಾನದ ಕತ್ತಲೆ ನೀಗಿಕೊಂಡರೆ ಬಹಿರಂಗದ ಎಷ್ಟೆಲ್ಲಾ ಕುಂದು ಕೊರತೆಗಳ ನಡುವೆ ಎಲ್ಲ ಕ್ರಿಯೆಗಳೂ ತನ್ನಿಂದತಾನೇ ಅರ್ಥಪೂರ್ಣವಾಗಬಲ್ಲವು ಎಂಬುದನ್ನು ಅವರು ಸೂಚಿಸುತ್ತಿರಬಹುದು.

ಶೂದ್ರತ್ವದ ಕಾರಣದಿಂದಾಗಿ ಪ್ರಧಾನ ವೈದಿಕ ಪರಂಪರೆಯುವ ಗೌಣವಾಗಿ ಕಂಡಿರುವಂಥ ಅನೇಕ ಪುರಾಣ ಪಾತ್ರಗಳನ್ನು ಆ ನೆಲೆಯಿಂದ ಮೇಲೇಳುವಂತೆ ಉದಾತ್ತೀಕರಿಸುವ ಮೂಲಕ ಜಾತಿಭೇದದ ಅರ್ಥಹೀನತೆಯನ್ನು ಪುನಃ ಪುನಃ ಕುವೆಂಪು ಸಾರಿ ಹೇಳುತ್ತ ಬಂದವರು. ಜಲಗಾರ, ಬೆರಳ್‌ಗೆ ಕೊರಳ್‌, ಶೂದ್ರ ತಪಸ್ವಿ ಮುಂತಾದ ನಾಟಕಗಳು ಕುವೆಂಪು ಅವರ ಇಂಥ ಯತ್ನದ ಜ್ವಲಂತ ನಿದರ್ಶನಗಳು. ಅದೇ ನಿಟ್ಟಿನಿಂದಲೇ ಬಂಡೆಯಾಗಿ ಬಿದ್ದಿದ್ದ ಶಾಪಗ್ರಸ್ತ ಅಹಲ್ಯೆಯಲ್ಲಿ ರಾಮನು ತಾಯಿ ಹೃದಯದ ಆಕ್ರಂದನ ಕೇಳಿ ಸೆಳೆಯಲ್ಪಟ್ಟು ಆಕೆಯನ್ನು ಮನುಷ್ಯಳನ್ನಾಗಿ ಪಾವನೀಕರಿಸಿ, ಮಗನೊಬ್ಬನ ಕರ್ತವ್ಯ ಮಾಡಿದ ಧನ್ಯತೆ ಅನುಭವಿಸುವುದನ್ನು ಕುವೆಂಪು ಚಿತ್ರಿಸಿರುವುದಾಗಲಿ, ಶೂರ್ಪನಖಿಯು ರಾವಣನಿಂದ ಅಪಹರಣಗೊಂಡು ಸೆರೆಯಲ್ಲಿ ಅಶೋಕವನದಲ್ಲಿ ತಪಸ್ಸು ಮಾಡುವ ವಿರಾಗಿಣಿ ಸೀತೆಯಿಂದ ಪ್ರಭಾವಿತಳಾಗಿ ತನ್ನಲ್ಲೇ ಪಶ್ಚಾತ್ತಾಪ ಪಡುವಂತಾದುದನ್ನು, ಕೈಕೆ ತನ್ನಲ್ಲಿ ತಾತ್ಕಾಲಿಕವಾಗಿ ಹುಟ್ಟಿದ್ದ ಸ್ವಾರ್ಥ, ದ್ವೇಷಗಳನ್ನು ಪಶ್ಚಾತ್ತಾಪದಲ್ಲಿ ತೊಳೆದು ಶುದ್ಧಳಾಗುವ ಬಗೆಯನ್ನು ಚಿತ್ರಿಸುವ ಕುವೆಂಪು ‘ಎಲ್ಲ ಜೀವಿಗಳಿಗೂ ವಿಕಾಸಕ್ಕೆ ಅವಕಾಶವಿದೆ’ ಎಂಬ ಸರ್ವೋದಯ ತತ್ವವನ್ನು ಸಾಹಿತ್ಯದೊಳಗೆ ಇಂತಹ ಸನ್ನಿವೇಶಗಳಲ್ಲಿ ಪ್ರತಿನಿಧಿಸುವಂತೆ ಮಾಡಿದ್ದಾರೆನ್ನಬಹುದು.

ಇವು ಪುರಾಣ ಭಂಜನ ಮತ್ತು ಮಾನವೀಯವಾಗಿ ವಾಸ್ತವೀಕರಿಸುವ ಕುವೆಂಪು ಕ್ರಮದ ಮಾದರಿಗಳು. ಆದರೆ, ಸ್ತ್ರೀಯರ ಪಾತ್ರಗಳಿರಲಿ, ಶೂದ್ರ ಪಾತ್ರಗಳಿರಲಿ ಅವುಗಳ ಉದಾತ್ತೀಕರಣ ಎಂಬುದು ಕುವೆಂಪು ಸ್ವೀಕರಿಸಿದ್ದ ಉದಾರ ಮಾನವತಾವಾದ ಮತ್ತು ರೋಮ್ಯಾಂಟಿಸಿಸಂಗಗಳಿಂದ ಹುಟ್ಟಿದ್ದ ಪರಿಣಾಮವೂ ಆಗಿರುವುದನ್ನು ನಿರ್ಲಕ್ಷಿಸಬಾರದು. ಎಲ್ಲಿ ರೋಮ್ಯಾಂಟಿಸಿಸಂ ಬಲಗೊಳ್ಳುತ್ತದೋ ಅಲ್ಲಿ ವಾಸ್ತವದ ಗ್ರಹಿಕೆ ಮಸುಕಾಗುತ್ತದೆ. ಆದರ್ಶವೇ ರಂಜಿತತೊಡಗುತ್ತದೆ. ಈ ಕಾರಣದಿಂದಲೇ ಕುವೆಂಪು ಮೂಲ ರಾಮಾಯಣ ಹೇಳುವ ಸಾಮ್ರಾಜ್ಯವಾದಿ ಚಿತ್ರೆಯನ್ನು. ಅದರಲ್ಲಿ ಬೇರೂರಿರುವ ರಾಜರ ಕೌಟುಂಬಿಕ ಆಸ್ತಿ ವಿವಾದದಂಥ ಪ್ರಶ್ನೆಗಳನ್ನು ಹಾಗೆಯೇ ‘ಪ್ರಭುತ್ವ’ದ ರಾಜಕೀಯ ಸ್ವರೂಪದ ಒಳಸುಳಿಗಳನ್ನು ‘ಬಹಿರ್ಘಟನೆಯ ಲೌಕಿಕ ಚರಿತ್ರೆ’ಯ ಸಂಗತಿಗಳೆಂದು ಗೌಣವಾಗಿ ಬದಿಗಿರಿಸುತ್ತಾರೆ ಎನ್ನಿಸುತ್ತದೆ.

ಪ್ರಾಚೀನ ರಾಮಾಯಣ ಕೇವಲ ಆಧ್ಯಾತ್ಮ ರಾಮಾಯಣವಲ್ಲ. ನಾಗರಿಕತೆಯ ಅತಿ ಪ್ರಾಚೀನ ಕಾಲದ ಸಾಂಸ್ಕೃತಿಕ ವಿಕಾಸದ ಅಸಾಮಾನ್ಯ ದಾಖಲೆಯೂ ಹೌದು. ಆದ್ದರಿಂದಲೇ ಇಂದಿಗೂ ಬೇರೆ ಬೇರೆ ದೃಷ್ಟಿಕೋನಗಳಿಂದ ಅದನ್ನು ಓದುವುದು ಸಾಧ್ಯವಾಗುತ್ತಿದೆ. ಅಂತಹ ಬಹುರೂಪದ ಓದುವಿಕೆಗಳಲ್ಲಿ ಆಧ್ಯಾತ್ಮಿಕ ಅರ್ಥ ಹುಡುಕುವಿಕೆ ಕೂಡ ಒಂದು. ಅದನ್ನೇ ‘ಸತ್ಯಸ್ಯ ಸತ್ಯ’ ಎಂದಿರುವುದು ಕುವೆಂಪು ಅವರ ಶ್ರದ್ಧೆಯ ದ್ಯೋತಕ. ಆದರೆ, ಮೂಲ ರಾಮಾಯಣದ್ದೇ ಇನ್ನೊಂದು ಅತ್ಯಾಧುನಿಕ ಪುನರಾಚನೆಯ ಯತ್ನವನ್ನು ತೆಲುಗು ಭಾಷೆಯಲ್ಲಿ ಮಾರ್ಕ್ಸ್‌ವಾದಿ ಲೇಖಕಿ ಮುಪ್ಪಾಳ ರಂಗನಾಯಕಮ್ಮ ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಮಾಡಿದ್ದಾರೆ. ಎಂಬತ್ತರ ದಶಕದಲ್ಲಿ ಕನ್ನಡ ಲೇಖಕಿ ಎಚ್‌. ವಿ. ಸಾವಿತ್ರಮ್ಮ ತಮ್ಮ ಕಾದಂಬರಿಗೆರಡರಲ್ಲಿ ಇಂಥದೇ ಮರುಸೃಷ್ಟಿಗೆ ಯತ್ನಿಸಿದರು. ಈ ಇಬ್ಬರು ಲೇಖಕಿಯರು ರಾಮಾಯಣದ ಪಠ್ಯಕ್ಕೆ ನೀಡಿದಂಥ ನವೀನ ವ್ಯಾಖ್ಯಾನಗಳನ್ನು ಕುವೆಂಪು ಕೃತಿಯ ಜೊತೆಗಿಟ್ಟು ಪರಿಶೀಲಿಸುವುದು ಯುಕ್ತವಾಗಿದೆ.

ರಂಗನಾಯಕಮ್ಮನವರು ಬರೆದ ‘ರಾಮಾಯಣ ವಿಷವೃಕ್ಷಮು’ ಎಂಬ ಕೃತಿಯು ಮೂರು ಸಂಪುಟಗಳಲ್ಲಿ ಕ್ರಮವಾಗಿ ೧೯೭೪, ೭೫, ೭೬ರಲ್ಲಿ ಪ್ರಕಟವಾಗಿದೆ. ಸರಳವಾದ, ತಿಳಿಯಾದ ಆಧುನಿಕ ತೆಲುಗು ಭಾಷೆಯಲ್ಲಿರುವ ಈ ಕೃತಿಯನ್ನು ಆಂಧ್ರದ ಸಾಮಾನ್ಯ ಜನರು, ಗೃಹಿಣಿಯರು, ಕಾರ್ಮಿಕರೂ ತುಂಬ ಮೆಚ್ಚಿ ಓದಿದರು. ಈ ಕೃತಿಯಲ್ಲಿ ಲೇಖಕಿಯು ದುಡಿಯುವ ವರ್ಗದವರ ದೃಷ್ಟಿಯಿಂದ ರಾಮಾಯಣದೊಳಗಿನ ಊಳಿಗಮಾನ್ಯ ಪ್ರಭುತ್ವ ವ್ಯವಸ್ಥೆಯನ್ನು ಅದು ಕಟ್ಟಿಕೊಡುವ ಸಾಮ್ರಾಜ್ಯದಾಹದ ಚರಿತ್ರೆಯನ್ನು ಬಯಲಿಗೆ ತರಲು ಯತ್ನಿಸಿದ್ದಾರೆ.

ಈ ಹೊಸದೃಷ್ಟಿಯ ರಾಮಾಯಣ ವ್ಯಾಖ್ಯಾನ ಎಷ್ಟು ಜನಪ್ರಿಯವಾಯಿತೆಂದರೆ ಅವರ ಮೊದಲ ಸಂಪುಟ ೭ ಬಾರಿ, ಎರಡನೆಯ ಸಂಪುಟ ೬ ಬಾರಿ ಹಾಗೂ ಮೂರನೆಯ ಸಂಪುಟ ೪ ಬಾರಿ ಮೂರು ಮುದ್ರಣ ಕಂಡಿದೆ. ಅದೂ ಓದುಗರ ಒತ್ತಾಯದಿಂದ. ಅವರಿಂದ ಪ್ರಭಾವಿತರಾದ ನೂರಾರು ಯುವ ಜನರು ಮಾರ್ಕ್ಸ್‌ವಾದಿಗಳಾದರು ಎಂಬು ಕೀರ್ತಿಯೂ ಆ ಗ್ರಂಥಕ್ಕೆ ಲಭಿಸಿದೆ.

ಕನ್ನಡದ ಲೇಖಕಿ ಎಚ್‌. ವಿ. ಸಾವಿತ್ರಮ್ಮ, ಬಹುವಾಗಿ ಬರೆದದ್ದು ಸಣ್ಣಕತೆಗಳನ್ನೇ ಆದರೂ ತಮ್ಮ ಬದುಕಿನ ಕೊನೆಯ ವರ್ಷಗಳಲ್ಲಿ ‘ಸೀತೆ-ರಾಮ-ರಾವಣ’ ಎಂಬ ತಮ್ಮ ಮೊದಲ ಕಾದಂಬರಿಯನ್ನು ಬರೆದರು. ಆದ್ದರಿಂದಲೇ ಉಮ್ಮೇದು ಪಡೆದು ಅದರ ಮುಂದುವರಿಕೆಯಾಗಿ ‘ವಿಮುಕ್ತಿ’ ಎಂಬ ಇನ್ನೊಂದು ಕಾದಂಬರಿಯನ್ನೂ ಬರೆದರು. ಈ ಜೋಡಿಕಾದಂಬರಿಗಳು ರಾಮಾಯಣ ಕಾವ್ಯದೊಳಗಿನ ಪಿತೃಪ್ರಧಾನ ವ್ಯವಸ್ಥೆಯನ್ನು ಅಲ್ಲಿರುವ ಸ್ತ್ರೀಯರ ಬದುಕಿನ ಅನುಭವಗಳ ನಿಟ್ಟಿನಿಂದ ತೀಕ್ಷ್ಣವಾಗಿ ವಿಮರ್ಶೆಗೆ ಒಳಗು ಮಾಡುವ ಅಪರೂಪದ ಸ್ತ್ರೀವಾದಿ ಕೃತಿಗಳಾಗಿವೆ. ಸಾವಿತ್ರಮ್ಮೆ ಪುರುಷ ಪ್ರಧಾನ ವ್ಯವಸ್ಥೆಯ ಅಡಿಯಲ್ಲಿ ದಮನಗೊಳ್ಳುವುದು ಕೇವಲ ಸ್ತ್ರೀಯರ ವ್ಯಕ್ತಿತ್ವಗಳೇ ಅಲ್ಲ. ಪುರುಷರನ್ನು ಆ ವ್ಯವಸ್ಥೆ ಬೆಳೆಯಗೊಡದೆ ಹೇಗೆ ಮೊಟಕುಗೊಳಿಸುತ್ತದೆ ಎಂಬುದನ್ನು ಚರ್ಚೆಗೆ ತಂದಿದ್ದಾರೆ. (ಸಾವಿತ್ರಮ್ಮ ೧೯೮೦ರ ದಶಕದಲ್ಲಿ ಈ ಕಾದಂಬರಿಗಳನ್ನು ಬರೆದಾಗ ಅವರಿಗೆ ತೆಲುಗಿನ ರಂಗ ನಾಯಕಮ್ಮನವರ ಕೃತಿಯ ಪರಿಚಯವಿರಲಿಲ್ಲ.)

ಈ ಇಬ್ಬರು ಲೇಖಕಿಯರು ರಾಮಾಯಣಕ್ಕೆ ನೀಡಿರುವ ಮರು ವ್ಯಾಖ್ಯಾನಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಕಾರಣವಿದೆ. ಕುವೆಂಪು ರಾಮಾಯಣ ದರ್ಶಣಂ ಕಾವ್ಯವನ್ನು ರಚಿಸುತ್ತಿದ್ದ ಕಾಲದಲ್ಲಿ ಇದ್ದುದಕ್ಕಿಂತಲೂ ಆನಂತರದ ಕಾಲದಲ್ಲಿ ಸ್ತ್ರೀ ಶಿಕ್ಷಣ ಬೆಳೆದು, ಅದು ಬೆಳೆದ ಹಾಗೆಲ್ಲ ಸ್ತ್ರೀಯರಲ್ಲಿ ತಮ್ಮದೇ ವ್ಯಕ್ತಿತ್ವ, ಅದರ ತನ್ನತನದ ಎಚ್ಚರ ಹೆಚ್ಚಾಗತೊಡಗಿತು. ಸ್ತ್ರೀಯರಿಗೆ ಶಿಕ್ಷಣ ಅವಶ್ಯಕವಾಗಿ ಕೊಡಬೇಕು. ಶಿಕ್ಷಣ ಕೊಟ್ಟರೆ, ಮುಂದೆ ಅವರೇ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಲ್ಲರು ಎನ್ನುವುದು ಕುವೆಂಪು ಅವರ ನಿಲುವಾಗಿತ್ತು. ಇದರ ಆಚೆಗೆ ಅವರು ಸ್ತ್ರೀಯರ ತಮ್ಮ ಕಾಲದ ಸಮಸ್ಯೆಗಳನ್ನು ಅಥವಾ ಅವರ ಪ್ರಗತಿಯನ್ನು ಅಪೇಕ್ಷಿಸುವ, ಎತ್ತಿ ಹಿಡಿವ ರೀತಿಯ ಬರಹದ ಮಾದರಿಗಳನ್ನೇನೂ ಸೃಷ್ಟಿಸಬೇಕಾದ್ದಿದೆ ಎಂದು ಭಾವಿಸಿದ್ದು ಕಂಡುಬರುವುದಿಲ್ಲ. ಅರ್ಥಾತ್‌ಆಧುನಿಕ ಕಾಲದ ಸ್ತ್ರೀಯರ ಬದುಕಿನಲ್ಲಾಗತೊಡಗಿದ್ದ ಸ್ಥಿತ್ಯಂತರಗಳ ಬಗ್ಗೆ ಅವರ ಸಮಕಾಲೀನ ಬರಹಗಾರರು ತಳೆದಿದ್ದ ರೀತಿಯ ಆಸಕ್ತಿ, ಅನ್ವೇಷಕ ಕುತೂಹಲಗಳು ಕುವೆಂಪು ಅವರಲ್ಲಿ ಹೆಚ್ಚಾಗಿಲ್ಲ. ಅವರು ಸ್ತ್ರೀತ್ವದ ಅನನ್ಯತೆಯನ್ನು ತುಂಬ ಗೌರವಿಸಿದರೂ ಸ್ತ್ರೀಯರಿಗೂ, ಸಮಾಜಕ್ಕೂ ಆದರ್ಶವೆಂದು ಎತ್ತಿ ಹಿಡಿದದ್ದು ಪಾತಿವ್ರತ್ಯವನ್ನು ಎಂಬುದು ಸರ್ವವಿದಿತ.

ಆದರೆ, ಹೆಣ್ಣಿನ ಲೈಂಗಿಕತೆ ಎನ್ನುವುದು ಒಂದು ಊಳಿಗಮಾನ್ಯ ಯಜಮಾನ ವ್ಯವಸ್ಥೆಯಲ್ಲಿ ಸಧಾ ಸಂಶಯಕ್ಕೆ ಬಲಿಯಾಗುವ ವಸ್ತುವೇ ಎಂಬುದಕ್ಕೆ ಜ್ವಲಂತ ನಿದರ್ಶನ ಸೀತೆಯ ಪ್ರತೀಕದಲ್ಲೇ ಅಳವಟ್ಟಿದ್ದು, ಅದು ಒಂದು ಸಾಮಾಜಿಕ ಅಮಾನವೀಯ ವಿಸಂಗತಿ ಎಂದು ಅವರಿಗೆ ಅನ್ನಿಸದೆ ಹೋಗಿರುವುದು ಸಾಧ್ಯವೆ? ಎಂಬ ಪ್ರಶ್ನೆ ‘ರಾಮಾಯಣ ದರ್ಶನಂ’ನಲ್ಲಿ ಏಳುತ್ತದೆ. ಈ ಸಂದರ್ಭದಲ್ಲಿ ಎರಡು ಪ್ರಸಂಗಗಳತ್ತ ನೋಡಬಹುದು. ಮೊದಲನೆಯದು ಸೀತೆ ಮಂಡೋದರಿಯರಿಬ್ಬರಿ ಪಾತಿವ್ರತ್ಯ ಶಕ್ತಿಗಳೂ ಮುಖಾಮುಖಿಯಾಗುವ ಸನ್ನಿವೇಶ. ರಾವಣ ಸೀತೆಯನ್ನು ಹೊತ್ತು ತಂದು ತನ್ನ ಅರಮನೆಯಲ್ಲಿಟ್ಟರೂ ಅವಳು ಅರಸೊತ್ತಿಗೆಯ ಸುಖಭೋಗಗಳಿಗೆ ಹೊರತಾದ ಗುಡಿಸಲಿನಲ್ಲಿ ತಾಪಸಿಯ ಹಾಗೆ ರಾಮಧಾನ್ಯದ ವ್ರತತೊಟ್ಟು ಅವನು ಬಂದು ಬಿಡಿಸಿಕೊಂಡು ಹೋಗುವವರೆಗೆ ಉಸಿರು ಹಿಡಿಯುವ ದಾರಿ ಆರಿಸಿಕೊಳ್ಳುತ್ತಾಳೆ. ಅವಳು ಹೀಗೆ ‘ಪಾತಿವ್ರತ್ಯ’ ವ್ರತಕ್ಕೆ ಗಂಟು ಬಿದ್ದು ತನ್ನನ್ನು ನಿರ್ಲಕ್ಷಿಸಿದ್ದು ರಾವಣನಿಗೆ ಅಸಹನೀಯ. ಆದರೆ, ಅವಳಷ್ಟೇ ಪತಿವ್ರತೆಯಾಗಿರುವ ತನ್ನ ಪತ್ನಿ ಮಂಡೋದರಿ ಏನಾದರೂ ಸೀತೆಯನ್ನು ಭೇಟಿಯಾದರೆ, ಅವಳ ಪಾತಿವ್ರತ್ಯಕ್ಕೆ ಇನ್ನಷ್ಟು ಬಲ ಬಂದುಬಿಡಬಹುದೆಂದು ಅವನು ಮಂಡೋದರಿಯನ್ನು ಅಶೋಕವನಕ್ಕೆ ಹೋಗಗೊಡುವುದಿಲ್ಲ. ಒಂದು ಮುಂಜಾನೆಯ ಕನಸಿನ ತರಹ ಮಂಡೋದರಿ-ಸೀತೆಯರ ಭೇಟಿಯನ್ನು ಕುವೆಂಪು ಕಲ್ಪಿಸುತ್ತಾರೆ. ಆ ಭೇಟಿಯಲ್ಲಿ ಸೀತೆಗೆ ತನ್ನ ದುಃಖಕ್ಕಿಂತ ಮಂಡೋದರಿಯ ದುಃಖ ದೊಡ್ಡದು ಎಂಬ ಅರಿವಾಗುತ್ತದೆ. ತನ್ನಂಥ ಎಷ್ಟೋ ಸತಿಯರ ಬಾಳು ಹಾಳು ಮಾಡಿದಂಥ ರಾವಣನ ಪತ್ನಿಯಾಗಿ ಅವನ ಮನಸ್ಸನ್ನು ಒಳಿತಿನ ಕಡೆಗೆ ಕರೆದೊಯ್ಯಲೆಂದು ದೈವವನ್ನು ಬೇಡಿಕೊಳ್ಳುತ್ತಿರುವ ಆ ಮಂಡೋದರಿಯ ಬಗ್ಗೆ ಸೀತೆಯಲ್ಲಿ ಕನಿಕರ ಹುಟ್ಟುತ್ತದೆ. ‘ನಾನಕ್ಕನೆನ್‌ ನಿನಗೆ, ತಂಗೆ’ ಎಂಬ ವಿಭಾಗದ ಅಡಿಯಲ್ಲಿ ಕುವೆಂಪು ಚಿತ್ರಿಸುವ ಈ ಪತಿವ್ರತೆಯರಿಬ್ಬರ ಭೇಟಿಯ ಪ್ರಸಂಗದಲ್ಲಿ ರಾವಣನಂಥ ಜಮೀನುದಾರರನ್ನು ಮಲೆನಾಡಿನಲ್ಲಿ ಕಂಡಿದ್ದ ಕುವೆಂಪು ಅವರು ಒಪ್ಪಿ ಎತ್ತಿ ಹಿಡಿದದ್ದು ಪತಿವ್ರತಾತತ್ವವೇ ಆಗಿದ್ದರೂ ವೈವಾಹಿಕ ನೆಲೆಯಲ್ಲಿ ಸ್ತ್ರೀಯರಿಗೆ ಒದಗುವ ಬವಣೆಯ ಅರಿವಿದ್ದೂ ಅದನ್ನು ಅಂತಃಕರಣದ ಮೂಲಕ ಜಿಜ್ಞಾಸಿಸುವುದು ಅವರಿಗೆ ಅದನ್ನು ವಾಗ್ವಾದವಾಗಿ ಮುಂದಿಡುವುದಕ್ಕಿಂತ ಮುಖ್ಯವಾಗಿತ್ತು ಎನಿಸುತ್ತದೆ.

ಇನ್ನೂ ಮುಂದುವರೆದು, ಸೀತೆಯನ್ನು ಅಗ್ನಿ ಪರೀಕ್ಷೆಯ ಶಿಕ್ಷೆಗೆ ಗುರಿ ಮಾಡಿದ ರಾಮ ತಾನೂ ಅಗ್ನಿಗೆ ಬಿದ್ದು ಶುದ್ಧನಾಗಿ ಅವಳೊಂದಿಗೆ ಹೊರಬಂದನೆಂದು ಅವರು ಚಿತ್ರಿಸುವುದರಲ್ಲಿಯೇ ಕುವೆಂಪು ಎತ್ತಿಹಿಡಿವ ಸಮಾನತೆಯ ಅರ್ಥವನ್ನು ಗ್ರಹಿಸಬಹುದಾಗಿದೆ.

* * *