ಮಹಾಕಾವ್ಯದ ಕಾಲ ಮುಗಿಯಿತು ಎಂಬ ಭಾವನೆಯನ್ನು ಸುಳ್ಳಾಗಿಸಿ ಕನ್ನಡಕ್ಕೆ ಮೊದಲ ಕೇಂದ್ರ; ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೊದಲ ಜ್ಞಾನಪೀಠ ಪ್ರಶಸ್ತಿ ಮೊದಲ ಪಂಪ ಪ್ರಶಸ್ತಿ ತಂದಿತ್ತ ಕೃತಿ ಕುವೆಂಪು ಅವರ “ಶ್ರೀ ರಾಮಾಯಣ ದರ್ಶನಂ”. ಇದುವರೆಗೆ ಈ ಕೃತಿಯ ಬಗ್ಗೆ ಬಂದಿರುವಷ್ಟು ವಿಮರ್ಶೆ ಕುವೆಂಪುರವರ ಉಳಿದ ಕೃತಿಗಳ ಬಗ್ಗೆಯಾಗಲೀ ಕನ್ನಡದ ಉಳಿದ ಯಾವ ಕಾವ್ಯದ ಬಗ್ಗೆಯಾಗಲೀ ಬಂದಂತೆ ಕಾಣುವುದಿಲ್ಲ. ಇವೆಲ್ಲವೂ ಜೈ ವಿಮರ್ಶೆಯೇ ಎನ್ನುವುದು ಸತ್ಯವಾದರೂ, ಕುವೆಂಪು ಬದುಕಿದ್ದಾಗಲಆಗಲೀ, ಅನಂತರವಾಗಲೀ ಅವರ ಈ ಕೃತಿಯಲ್ಲಿ ಲೋಪದೋಷ ಕಾಣುವುದು, ಕಾಣಿಸುವುದು ಸಾಧ್ಯವಿಲ್ಲ ಎಂಬ ಮಾತು ನಿಜವಾದರೂ, ಕನ್ನಡದ ಕೋಡನ್ನು ಇನ್ನಷ್ಟು ಮೇಲತ್ತಿದ್ದು ಈ ಕಾವ್ಯವೇ. ಇದರ ಬಗೆಗೆ ಬಂದಿರುವ ವಿಮರ್ಶಾ ಗ್ರಂಥಗಳ ಪಟ್ಟಿ[1]ಯನ್ನು ಗಮನಿಸಿದರೇ ಸಾಕು. ಮತ್ತೆ ಇದರ ಬಗ್ಗೆ ಏನು ಬರೆಯುವುದು, ಹೇಗೆ ಬರೆಯುವುದು ಎಂದು ಗಾಬರಿಯಾಗುವುದು ಸಹಜವಾದರೂ ಈ ಅಧ್ಯಾಯವನ್ನು ಪಠ್ಯ ಕೇಂದ್ರಿತ ವಿಮರ್ಶೆಯಾಗಿಸಿ, ವಾಲ್ಮೀಕಿಯ ವೈದಿಕ ಪರಂಪರೆಗಿಂತ ಭಿನ್ನವಾಗಿರುವ ಅಂಶಗಳು, ಜೈನ ಪರಂಪರೆಯ ಪ್ರಭಾವ, ಯುಗಧರ್ಮದ ಪ್ರತಿಪಾದನೆ, ವಿಶ್ವಧರ್ಮ ಮತ್ತು ಸಮಾನತೆಯ ಪ್ರತಿಪಾದನೆ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಸಂಕ್ಷೇಪವಾಗಿ ವಿವೇಚಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಟಿ. ಎಸ್‌. ವೆಂಕಣ್ಣಯ್ಯನವರು ತೀರಿಕೊಂಡ ನಂತರ ಅವರಿಗೆ ಹೇಳುವ ಮಾತುಗಳಂತೆ. ಅವರು ಸ್ವರ್ಗದ ಸಭೆಗೆ ತಮ್ಮ ಶಿಷ್ಯನನ್ನು ಪರಿಚಯಿಸುವಂತೆ ಕುವೆಂಪು, ಕಾವ್ಯದ ಬಗೆಗಿನ ತಮ್ಮ ನಿಲುವನ್ನು ಪ್ರತಿಪಾದಿಸುತ್ತಾರೆ. ಅದಕ್ಕೆ ಮೊದಲು-

ಪಿಂತೆ ವಾಲ್ಮೀಕಿ ಯುಲಿದ ಕಥೆಯಾದೊಡಂ ಕನ್ನಡದಿ ಬೇರೆ ಕಥೆಯೆಂಬಂತೆ ಬೇರೆ ಮೈಯಾಂತಂತೆ ಮರುವುಟ್ಟು ವಡೆದಂತೆ ಹುಟ್ಟಿದ ಕಾವಯ ಎಂದು ಹೇಳಿ

ಬಹಿರ್ಘಟನೆಯಂ ಪ್ರಕೃತಿಸುವಾಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸತ್ಯಂಗಳಂ

ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ ಇದು ಎಂದು ತಮ್ಮ ನಿಲುವನ್ನು ಅವರಿಂದ ಹೇಳಿಸಿದ್ದಾರೆ.

ಅಯೋಧ್ಯಾ ಸಂಪುಟ, ಕಿಸ್ಕಿಂದಾ ಸಂಪುಟ, ಲಂಕಾ ಸಂಪುಟ, ಶ್ರೀ ಸಂಪುಟ-ಎಂಬ ನಾಲ್ಕು ಸಂಪುಟಗಳಲ್ಲಿ ಒಟ್ಟು ೫೦ ಅಧ್ಯಾಯಗಳಲ್ಲಿ ಕಥೆ ಹರಡಿದ್ದು, ಅಭಿಷೇಕ ವಿರಾಟ್‌ ದರ್ಶನದಲ್ಲಿ ಮುಕ್ತಾಯವಾಗಿದೆ[2].

ವಾಲ್ಮೀಕಿಯ ಪೂರ್ವಾಶ್ರಮದ ಪರಿಚಿತವಾದ ಕಥೆ ಹೇಳಿದ ನಂತರ ಕವಿಕ್ರತು ದರ್ಶನದಲ್ಲಿ ಕಾವ್ಯ ಮೀಮಾಂಸೆಯ ಅನೇಕ ಹೊಳಹುಗಳನ್ನು ಕವಿ ಕೊಟ್ಟಿದ್ದಾರೆ. ಅಲ್ಲದೇ ವಾಲ್ಮೀಕಿಯನ್ನು ಸ್ತುತಿಸುತ್ತಾ

“ಕಥೆ ನಿನ್ನದಾದೊಡಂ ಕೃತಿನನ್ನ ದರ್ಶನಂ” ಎಂದು ಹೇಳಿ ಇದು ರಾಮಾಯಣ ಮಾತ್ರವಲ್ಲ ರಾಮಾಯಣದರ್ಶನಂ ಎಂಬ ಅಂಶವೂ-

“ರಾಮನ ಕಿರೀಟದಾ ರನ್ನ ಮಣಿಯೊಲೆ ರಮ್ಯಂ ಪಂಚವಟಿಯೊಳ್‌
ದಿನೇಶೋದಯದ ಶಾಡ್ವಲದ ಪಸುರ್‌ ಗರುಕೆಯ ತೃಣ ಸುಂದರಿಯ
ಮೂಗುತಿಯ ಮುತ್ತು ಪನಿಯಂತೆ ಮಿರುಮಿರುಗಿ ಮೆರೆವ ಹಿಮ ಬಿಂದುವುಂ”

ಎಂದು ಹೇಳಿ ತಮ್ಮ ಸಮಾಜವಾದವನ್ನು ಪ್ರತಿಬಿಂಬಿಸಿದ್ದಾರೆ. ಈ ಮಾತು ಇಡೀ ಕಾವ್ಯದ ಎಲ್ಲ ಸನ್ನಿವೇಶಕ್ಕೂ ಅನ್ವಯಿಸುತ್ತದೆ.

“ಹೋಮರಗೆ, ವರ್ಜಿಲಗೆ, ಡಾಂಟೆ ಮೇಣ್‌ ಮಿಲ್ಟನಗೆ ನಾರಣಪ್ಪಂಗೆ ಮೇಣ್‌ ಪಿರ್ದೂಸಿಯಾದ್ಯರಿಗೆ, ಭಾಸ ಭವಭೂತಿ ಮೇಣ್‌ ಕಾಳಿದಾಸಾದ್ಯರಿಗೆ ನರಹರಿ ತುಳಸಿದಾಸ ಮೇಣ್‌ ಕೃತ್ತಿವಾಸಾದ್ಯರಿಗೆ ನನ್ನಯ್ಯ ಪಿರ್ಧೂಸಿ ಕಂಬ ಅರವಿಂದರಿಗೆ ಜಗತೀಕಲಾಚಾರ್ಯರೆಲ್ಲರಿಗೆ ನಮಿಸುವ ಮೂಲಕ ಸಂಸ್ಕೃತ, ಕನ್ನಡ, ಹಿಂದಿ, ತಮಿಳು, ತೆಲುಗು, ಬಂಗಾಳಿ ರಾಮಾಯಣ ಕವಿಗಳಲ್ಲದೇ ಜಗತ್ತಿನ ಇತರ ಭಾಷೆಯ ಪ್ರಸಿದ್ಧ ಕವಿಗಳ ಪ್ರಭಾವಕ್ಕೆ ತಾವು ಒಳಗಾಗಿರುವುದನ್ನೂ ತಾವು ಪ್ರತಿಪಾದಿಸುವ ಯುಗ ಧರ್ಮ ಮತ್ತು ವಿಶ್ವಧರ್ಮಕ್ಕೆ ಅದು ಸ್ಫೂರ್ತಿಯಾಗಿದೆ ಎಂಬುದನ್ನೂ ಕುವೆಂಪು ಸೂಚಿಸುತ್ತಾರೆ.

ಸಾಂಪ್ರದಾಯಿಕ ಕಥೆಯ ಚೌಕಟ್ಟಿನಲ್ಲಿಯೇ ಸಾಗುವ ದಾರಿಯಲ್ಲಿ ಹೊಸಹೊಳವುಗಳಿವೆ. ಕೆಲ ಅಭಾಸಗಳಿವೆ, ಮಹತ್ತರ ಬದಲಾವಣೆಗಳಿವೆ. ಇವನ್ನು ಕಥೆಯ ಜಾಡಿನಲ್ಲಿಯೇ ವಿಮರ್ಶಿಸುವುದರಿಂದ ಕ್ರಮಬದ್ಧತೆಯೂ ಇರುತ್ತದೆ ಮತ್ತು ಇದುವರೆಗೆ ಬೇರೆ ಬೇರೆಯಾಗಿ ಬಿಡಿ ಬಿಡಿಯಾಗಿ ಬಂದಿರುವ ವಿಮರ್ಶೆಗಳ ತೌಲನಿಕ ವ್ಯಾಖ್ಯಾನ ಮಾಡುವ ದುಸ್ಸಾಹಸದಿಂದ ತಪ್ಪಿಸಕೊಂಡಂತೆ (ಅದು ಈ ಪ್ರಬಂಧಕ್ಕೆ ಪ್ರಸ್ತುತವೂ ಅಲ್ಲ)ಯೂ ಆಗುತ್ತದೆ. ಇದು ಬಹುಶಃ ಈ ಅಧ್ಯಾಯದ ಮಿತಿಯೂ ಹೌದು.

ದಶರಥನಿಗೆ ಪುತ್ರವಾಂಛೆ ಮೊಳೆಯುವುದು ಗುಬ್ಬಚ್ಚಿ ತನ್ನ ಮರಿಗೆ ಗುಟುಕು ಕೊಡುವುದನ್ನು ನೋಡಿ, ವಾಲ್ಮೀಕಿ ರಾಮಾಯಣದಲ್ಲಿ ವಿಸ್ತಾರವಾಗಿ ವರ್ಣಿತವಾಗಿರುವ ಅಶ್ವಮೇಧಯಾಗದ (ಎನ್‌. ರಂಗನಾಥಶರ್ಮರ ಅನುವಾದ)ವರ್ಣನೆ ಇಲ್ಲಿ ಇಲ್ಲ. ಅದಕ್ಕೆ ಬದಲಾಗಿ ಹಿಂಸೆಯಿಂದ ಪ್ರೇಮಮೂರ್ತಿಗಳಾದ ಮಕ್ಕಳು ಜನಿಸುವುದಿಲ್ಲ ಎಂದು ವಸಿಷ್ಠರು ಹೇಳುತ್ತಾರೆ. ಮೊನ್ನೆ ಮೊನ್ನೆ ಗೆಲಿಲಿಯೋ ಕಂಡುಹಿಡಿದ ದೂರದರ್ಶಕ ಯಂತ್ರದ ಉಪಮೆಯನ್ನು ತ್ರೇತಾಯುಗದ ದಶರಥ ಕಂಡ ಯಜ್ಞದ ಬೆಂಕಿಗೆ ಹೋಲಿಸುವುದೂ ಇಲ್ಲಿ ಇದೆ. ಹುಣ್ಣಿಮೆಯ ಚಂದ್ರನನ್ನು ಕಂಡ ಶಿಶು ರಾಮನು ತನಗೆ ಬೇಕೆಂದು ಹಠ ಹಿಡಿದಾಗ ತ್ರೇತಾಯುಗದಲ್ಲಿದ್ದ ಮಂಥರೆ ಕನ್ನಡಿ ತೋರಿಸುವುದೂ ಇಲ್ಲಿ ಇದೆ. (ಹೀಗೆ ತೋರಿದ್ದು ಬೆಳ್ಳಿ ಅಥವಾ ತಾಮ್ರದ ತಟ್ಟೆ ಎಂಬ ಅಭಿಪ್ರಾಯವೂ ಇದೆ. ಕನ್ನಡಿ ಆಗ ಕಂಡುಹಿಡಿದಿರಲಿಲ್ಲ).

ಕಾಡಿನಲ್ಲಿ ಇರುವೆ ಮುತ್ತಿ ಮುಳ್ಳಿನಲ್ಲಿ ಬಿದ್ದಿದ್ದ ದಸ್ಯು ಶಿಶುವನ್ನು ಕೈಕೆಯ ತಂದೆ ದಾರಿಯ ಮಾರಿಯನ್ನು ಮನೆಗೆ ತಂದಂತೆ ಮುಂದಣ ಮಹಾ ದುಃಖ ದಾವಾನಲಕೆ ತನ್ನ ಕಿರುಗಜ್ಜದ ಬಂದು ಕಿಡಿಯ ಮುನ್ನಡಿಯನ್ನು ಬರೆಯುವಂತೆ ಮನೆಗೆ ತಂದುದು, ಇಡೀ ಜಗತ್ತೇ ತನ್ನನ್ನು ತಿರಸ್ಕರಿಸಿದ್ದರಿಂದ ಅವಳು ಕೈಕೆಯಿ ಭಾರತವನ್ನು ಮೋಹಿಸಿ ಅವರಿಗಾಗಿಯೇ ಅಯೋಧ್ಯೆ ಎಂದು ಭಾವಿಸಿದ್ದು, ಅದಕ್ಕಾಗಿಯೇ ಅವಳು ರಾಮನಿಗೆ ಪಟ್ಟವಾಗದಂತೆ ಭರತನು ರಾಜನಾಗುವಂತೆ ಕೈಕೆಯನ್ನು ಪ್ರೇರಿಸಿದ್ದು. ಈ ಹಿನ್ನೆಲೆ ವಾಲ್ಮೀಯದಲ್ಲ. ‘ಮತೆಯ ಸುಳಿ ಮಂಥರೆ’ ಎಂಬ ಶಿರ್ಷಿಕೆಯನ್ನೇ ಒಂದು ಅಧ್ಯಾಯಕ್ಕೆ ಕೊಟ್ಟು ಪಾಪಿಗೂ ಉದ್ಧಾರವುಂಟು ಈ ಸೃಷ್ಟಿಯ ಮಹತ್‌ ವ್ಯೂಹ ರಚನೆಯಲಿ ಎಂಬ ಸಾಮಾಜಿಕ ನ್ಯಾಯದ ಪ್ರತಿಪಾದನೆಗಾಗಿ ವಾಲ್ಮೀಕಿಯಲ್ಲಿ ಕೇವಲ ಗೂನಿ ಮತ್ತು ಕೆಟ್ಟ ಬುದ್ಧಿಯವಳಾಗಿದ್ದ ಮಂಥರೆ ಇಲ್ಲಿ ‘‘ಕುಡು ಬಿಲ್ಲು ಬಾಗಿದ ಮೆಯ್ಯ ತೊನ್ನ ಬೆಳ್ತಲೆ ವಿಡಿದ ಕರ್ರನೆಯ ಕುಬ್ದಜತೆಯ, ಗೂಳಿ ಹಿಣಿಲಿನವೊಲು ಗೂನುವುಬ್ಬಿದ ಬೆನ್ನ ಸುಕ್ಕು ನಿರಿನಿರಿಯಾಗಿ ಬತ್ತಿದ ತೊವಲ್‌ ಪತ್ತಿ ಬಿಗಿದೆಲ್ವು ಗೂಡಿನಾ ಶಿಥಿಲ ಕಂಕಾಲತೆಯ ಪಲ್ಲುದುರಿ ಬೋಡಾದ ಬಚ್ಚುಬಾಯಿಯ ಕುಳಿಯ ಕೆನ್ನೆಗಳ, ದಿಟ್ಟಿಮಾಸಿದ ಕಣ್ಣ ಕೋಟರದ ಕರ್ಬುನ ಮೊರಡುಮೊಗದ ಕೂದಲುದುರಿದ ಬೋಳು ಪುರ್ಬಿನ ವಿಕಾರದ ಅಸ್ಥಿಪಂಜರಸ್ಥವಿರೆ” (ಪುಟ ೩೩) ಆಗಿದ್ದಾಳೆ. ಈ ಕಾರಣದಿಂದಲೇ ಕನ್ನಡಿಯಲ್ಲಿ ಚಂದ್ರಬಿಂಬವನ್ನು ಕಂಡು ಶಿಶುರಾಮನು ಚಂದ್ರನನ್ನು ಪಡೆದೆನೆಂದು ಸಂತೋಷಿಸಿದಾಗ ಮಗುವನ್ನು ಎತ್ತಿಕೊಳ್ಳಲು ಕೈ ಚಾಚಿದ ಮಂಥರೆಯನ್ನು ಕಂದನಿಗೆ ಅಮಂಗಳ ಮುಟ್ಟದಿರು ಎಂದು ಕೌಸಲ್ಯೆ ದೂರ ಸರಿಸಿದಳು. ಮಂಥರೆ ಹೆಡೆ ತುಳಿದ ಹಾವಿನಂತಾದಳು. ಅಷ್ಟೇ ಅಲ್ಲದೆ ಮುಂದೆ ಶತೃಘ್ನ ತನ್ನನ್ನು ಹೊಡೆದಾಗ ಭರತ ಕೋಪಿಸಿದಾಗ ಕಾಡಿನಿಂದ ರಾಮನ್ನು ಕರೆತರುವೆನೆಂದು ಹೋಗಿ ಕಾಡ್ಗಿಚ್ಚಿಗೆ ಬಲಿಯಾದಳು. ಅಲ್ಲಿಂದ ಮುಂದೆ ಕಾಡಿನಲ್ಲಿದ್ದ ರಾಮ ಸೀತೆ ಲಕ್ಷ್ಮಣರು ಸಂಕಟಕ್ಕೆ ಸಿಲುಕಿದಾಗಲೆಲ್ಲಾ ಮಂಥರೆಯ ಅಂತರಾತ್ಮದ ಪುಣ್ಯಲಕ್ಷ್ಮೀಯೇ ದಾರಿ ತೋರುತ್ತಿದ್ದುದು. ಮೂಲದ ಒಂದು ಕವಿ ಭಾವಿಸುವುದರಲ್ಲಿ ನ್ಯಾಯವಿದೆ.

ಆದರೆ ಮೂಲದಲ್ಲಿ ಕೇವಲ ಗೂನಿಯಾಗಿದ್ದ ಮಂಥರೆಯನ್ನು ಬೋಳುತಲೆ, ಗುಳಿಬಿದ್ದ ಕಣ್ಣು, ಬೊಚ್ಚು ಬಾಯಿ, ಕೊನೆಗೆ ತೊನ್ನಿ-ಇಷ್ಟೆಲ್ಲಾ ಮಾಡಿದ್ದು, ಉದ್ಧಾರವೋ ಅಥವಾ ಅಧಃಪತನವೋ? ಮೂಲದ ಕತೆಯನ್ನು ಬದಲಾಯಿಸಿ ಹೊರಟ ಪಂಪನಿಗೂ ಇದು ತಪ್ಪಲಿಲ್ಲ. ಕುವೆಂಪುವಿಗೂ ಇದು ತಪ್ಪಲಿಲ್ಲ.

ಭಾಸನ ‘ಯಜ್ಞಫಲ’ ನಾಟಕದಲ್ಲಿ ತುಳಸೀದಾಸರ ‘ರಾಮಚರಿತ ಮಾನಸ’ದಲ್ಲಿ ‘ಕಂಬ ರಾಮಾಯಣ’ದಲ್ಲಿ ರಾಮಸೀತೆಯರು ಸ್ವಯಂವರಕ್ಕಿಂತ ಮೊದಲೇ ಒಬ್ಬರನ್ನೊಬ್ಬರು ನೋಡಿ ಅನುರಾಗಗೊಂಡ ಪ್ರಸಂಗವಿದೆ. ಅವುಗಳಿಂದ ಪ್ರಭಾವಿತರಾಗಿದ್ದಿರಬಹುದಾದರೂ ಕುವೆಂಪು ಲೇಖನಿಯು ಈ ಘಟ್ಟವನ್ನು ಚಿತ್ರಿಸುವಾಗ ಅತ್ಯಂತ ಸಂಯಮ ಪೂರ್ಣವಾಗಿದ್ದು, ರಾಮನ್ನು ನೋಡಿದ ಕೂಡಲೇ ಸೀತೆಯು ಅಂತಃಪುರಕ್ಕೆ ಓಡಿ ಬಂದು ತಾನು ಕಂಡ ಕನಸನ್ನು ನೆನೆಯುತ್ತಾಳೆ ಮತ್ತು ರಾಮನಿಗೆ ಬಿಲ್ಲು ಬಾಗಲೆಂದು ಪ್ರಾರ್ಥಿಸುತ್ತಾಳೆ. ಮೊನ್ನೆ ಮೊನ್ನೆಯವರಿಗೆ ಈ ಅಂಶ ಕುವೆಂಪು ಅವರ ಸ್ವಂತ ಕಲ್ಪನೆ ಎಂದೂ ಆಧುನಿಕ ಮನೋಭಾವವೆಂದೂ ಭಾವಿಸಲಾಗಿತ್ತು.

ಮಂಥರೆಯು ರಾಮಪಟ್ಟಾಭಿಷೇಕ ವಾರ್ತೆಯನ್ನು ಕೇಳುವ ಸಂದರ್ಭದಲ್ಲಿ ಇಡೀ ಜಗತ್ತಿನ ಎಲ್ಲಾ ವ್ಯಕ್ತಿಗಳನ್ನು ತನ್ನೊಂದು ಸೂಕ್ಷ್ಮಾತಿಸೂಕ್ಷ್ಮ ತಂತ್ರದಿಂದ ಬಿಗಿದು ಕಟ್ಟಿದ ವಿರಾಟ್‌ ಮನವೊಂದು ಆಳುತ್ತಿದೆ. ಅದು ರಾಮ ಸೀತೆ ರಾವಣ ಮಂಥರೆಯನ್ನು ಬಿಗಿದು ಕಟ್ಟಿದೆ ಎಂದು ಹೇಳಿ ಇಡೀ ಕತೆಗೆ ತಾತ್ವಿಕ ದೃಷ್ಟಿಕೋನ ನೀಡಿದ್ದಾರೆ.

ಮಹಾಕವಿಯ ಅವಜ್ಞೆ ಎಂಬ ಪ್ರಬಂಧದಲ್ಲಿ ವಾಲ್ಮೀಕಿಯು ಊರ್ಮಿಳೆಗೆ ತೋರಿರುವ ನಿರ್ಲಕ್ಷ್ಯವನ್ನು ರವೀಂದ್ರನಾಥ ಠಾಗೋರರು ಪ್ರತಿಪಾದಿಸಿದ ನಂತರ ಅನೇಕ ಆಧುನಿಕ ಕವಿಗಳು ತಮ್ಮ ಕೃತಿಗಳಲ್ಲಿ ಅದನ್ನು ಸರಿಪಡಿಸಲು ಪ್ರಯತ್ನಿಸಿದ್ದುಂಟು. ಹೋಮರನೂ ತೂಕಡಿಸುತ್ತಾನೆ ಎಂಬ ಗಾದೆಯಂತೆ ತುಂಬು ಪ್ರವಾಹವಾಗಿ ಹರಿಯುತ್ತಿರುವ ಮಹಾಕಾವ್ಯದ ರಭಸದಲ್ಲಿ ಕಸ ಕಡ್ಡಿಗಳು ತೇಲಿ ಹೋಗುವಂತೆ ರಾಮ ಸೀತೆ ಲಕ್ಷ್ಮಣರು ಕಾಡಿಗೆ ಹೊರಟ ಸಂಭ್ರಮನ್ನು ವಿವರಿಸುವ ವಾಲ್ಮೀಕಿಗೆ ಊರ್ಮಿಳೆಯ ಬಗ್ಗೆ ಲಕ್ಷ್ಯ ಹೊರಳಲಿಲ್ಲ. ಇದನ್ನು ಸರಿಪಡಿಸಹೊರಟ ಕುವೆಂಪು ತಮ್ಮ ಕಾವಯದ ಒಂದು ಅಧ್ಯಾಯಕ್ಕೆ ಊರ್ಮಿಳಾ ಎಂದು ಹೆಸರಿಟ್ಟು ಕಾಡಿಗೆ ಹೊರತ ಲಕ್ಷ್ಮಣ ತನ್ನಯ ಅನುಮತಿ ಪಡೆದನೆಂದೂ ಆಗ ಅವನು ಹೇಳಿದ್ದೇನೆ ಎಂಬುದನ್ನು ಊರ್ಮಿಳೆ ಹೇಳಲಾರಳು ಏಕೆಂದರೆ ಗುರು ತಪಕೆ ದೀಕ್ಷೆ ಇತ್ತುದನ್ನು ಅವಳು ಹೇಗೆ ತಾನೇ ಹೇಳಬಲ್ಲಳು ಎಂದು ಅಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಮುಂದೆಲ್ಲಾ ಲಕ್ಷ್ಮಣನನ್ನು ಊರ್ಮಿಳಾಧವ ಎಂದೇ ಕರೆಯುವ ಮೂಲಕ ಮತ್ತು ಯುದ್ಧಕಾಂಡದಲ್ಲಿ ರಾಮಲಕ್ಷ್ಮಣರ ಗೆಲುವಿಗೆ ಅವಳ ತಪಸ್ಸಿನ ಬೆಂಬಲವೂ ಇತ್ತು ಎಂದು ಹೇಳುವ ಮೂಲಕ ಅವಳ ಇರುವಿಕೆಗೆ ಒತ್ತುಕೊಡುವ ಪ್ರಯತ್ನ ನಡೆದಿದೆ.

ಚಿನ್ನದ ಜಿಂಕೆಯಾಗಿ ಬಂದ ಮಾರೀಚನು ರಾವಣನ ಧ್ವನಿಯನ್ನು ಅನುಕರಿಸಿ ಹಾ ಸೀತಾ ಹಾ ಲಕ್ಷ್ಮಣಾ ಎಂದು ಕಿರುಚಿ ಸಾಯುವುದು ಅನಂತರ ಆ ಧ್ವನಿಯನ್ನು ಕೇಳಿ ಮೋಸ ಹೋದ ಸೀತೆ ಲಕ್ಷ್ಮಣನಿಗೆ ಅಪಶಬ್ದಗಳನ್ನಾಡಿ ಅಟ್ಟುವುದು ವಾಲ್ಮೀಕಿ ರಾಮಾಯಣದ ಜನಪ್ರಿಯವಾದ ಕಾವ್ಯಭಾಗ ಕುವೆಂಪು ಮಾರೀಚನಿಂದ ಓ ಲಕ್ಷ್ಮಣಾ ಎಂಬ ಕರೆಯನ್ನು ಮಾತ್ರ ಹೊರಡಿಸುತ್ತಾರೆ. ಜಟಾಯು ಸಾಯುವಾಗ ಸೀತೆಯೂ ಪಶ್ಚಾತ್ತಾಪದಿಂದ ಓ ಲಕ್ಷ್ಮಣಾ ಎಂದು ಕೂಗುವುದು, ಇಡೀ ಕಾಡೇ ಮಾರ್ದನಿಗೊಡುವುದು ಇಲ್ಲಿನ ಹೊಸ ಅಂಶ. ಹಾಗಾಗಿ ಓ ಲಕ್ಷ್ಮಣೋ ಲಕ್ಷ್ಮಣೋ ಎಂಬುದು ಇಲ್ಲಿಯ ಗೋಳಿನ ನೀಳ್ದನಿಯಾಗಿದೆ. ಮೂಲದಂತೆ ಇಲ್ಲಿಯೂ ಲಕ್ಷ್ಮಣ ರೇಖೆಯ ಪ್ರಸ್ತಾಪವಿಲ್ಲ. ಬಹುಶಃ ಪಿತೃಪ್ರಧಾನ ವ್ಯವಸ್ಥೆ ಲಕ್ಷ್ಮಣನ ಮೂಲಕ ಎಲ್ಲ ಸೀತೆಯರಿಗೆ ಹಾಕಿದ ಈ ನಿರ್ಬಂಧದ ಗೆರೆ ಈ ವ್ಯವಸ್ಥೆಯ ಜನಪ್ರಿಯ ಅಂಶವಾಗಿ ಇಂದಿಗೂ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರಿಗೇ ಪ್ರಿಯವಾಗಿದೆ!

ಶಬರಿಯು ವಿರಹದಿಂದ ಜರ್ಝಿತನಾಗಿ ಸಾಯುವಂತಿದ್ದ ರಾಮನ ಋಜೆಯನ್ನು ತಾನು ತೆಗೆದುಕೊಂಡು ಅವನಿಗೆ ತನ್ನ ಪ್ರಾಣ ನೀಡುವುದು. ಕುವೆಂಪು ಪ್ರತಿಪಾದಿಸುವ ವಿಶ್ವಧರ್ಮದ ಸಂಕೇತ. ಪುತಿನರ ನಾಟಕದೊಂದಿಗೆ ಈ ಭಾಗವನ್ನು ಹೋಲಿಸಿದಾಗ ವೈಚಾರಿಕತೆಯಿಂದ ಕುವೆಂಪು ದೂರ ಸರಿದಿರುವುದು ಅರಿವಾಗದಿರದು.

ಸುಗ್ರೀವನ ಹೆಂಡತಿ ರುಮೆ, ವಾಲಿಯ ಹೆಂಡತಿ ತಾರೆ. ಕಪಿಗಳಲ್ಲಿ ಗಂಡ ಹೆಂಡಿರ ಸಂಬಂಧದಲ್ಲಿ ಅಂತಹ ನೈತಿಕತೆಯಿಲ್ಲವಾದುದರಿಂದ ವಾಲಿಯು ಸತ್ತನೆಂದು ಭಾವಿಸಿದ ಸುಗ್ರೀವ ಅಣ್ಣನ ಹೆಂಡತಿ ತಾರೆಯನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾನೆ. ಹಾಗೆಯೇ ವಾಲಿ ತಾನು ರಾಜನಾಗಿ ಸುಗ್ರೀವನನ್ನು ಗಡೀಪಾರು ಮಾಡಿದಾಗ ಅವನ ಹೆಂಡತಿಯನ್ನಾಗಿ ರುಮೆಯನ್ನು ತನ್ನ ಹೆಂಡತಿ ಮಾಡಿಕೊಳ್ಳುತ್ತಾನೆ ಎಂದು ನಾವು ಭಾವಿಸಬಹುದಿತ್ತು. ಆದರೆ ಆಧುನಿಕ ಸುಸಂಸ್ಕೃತ ಮನಸ್ಸಿಗೆ ಇದು ತಪ್ಪಾಗಿ ಕಾಣುವುದರಿಂದಲೇ ರಾಮನಿಗೂ ಇದು ತಪ್ಪಾಗಿ ತೋರಿ ವಾಲಿಯ ಈ ತಪ್ಪಿಗೂ ಇದು ಶಿಕ್ಷೆ ಎಂದು ವಾಲ್ಮೀಕಿಯೇ ರಾಮನಿಂದ ಹೇಳಿಸಿದ್ದಾರೆ. ಆದ್ದರಿಂದ ಮಾಸ್ತಿ, ವೀಸೀ ಈ ಪ್ರಶ್ನೆಯನ್ನೆತ್ತಿದ್ದಾರೆ. ಕುವೆಂಪು ಅವರಿಗೂ ಈ ಪದ್ಧತಿ ಅನೈತಿಕವೆಂದು ತೋರಿದ್ದರಿಂದ ಗುಹೆ ಹೊಕ್ಕ ವಾಲಿ ಸತ್ತನೆಂದು ಭಾವಿಸಿ ಅವನ ಹೆಂಡತಿ ತಾರೆ ತಪಸ್ಸಿಗೆ ಕೂರುತ್ತಾಳೆ. ಸುಗ್ರೀವನನ್ನು ಗಡಿಪಾರು ಮಾಡಿದ ವಾಲಿ ರುಮೆಯನ್ನು ಸೆರೆಯಲ್ಲಿಡುತ್ತಾನೆ. ಈ ಅಂಶವನ್ನು ಮಾಸ್ತಿ ಕುವೆಂಪು ಇಬ್ಬರೂ ತಮ್ಮ ಕಾವ್ಯಗಳಲ್ಲಿ ಒತ್ತಿ ಒತ್ತಿ ಹೇಳುತ್ತಾ ಸಂಸ್ಕೃತಿ ರಕ್ಷಕರಂತೆಯೂ ವರ್ತಿಸುತ್ತಾರೆ.[3]

ನಾಗಚಂದ್ರನ ಜೈನ ಪರಂಪರೆಯ ರಾಮಾಯಣದಿಂದ ದಟ್ಟವಾಗಿ ಪ್ರಭಾವಿತರಾಗಿರುವವರು ಕುವೆಂಪು. ರಾವಣನ ಪಾತ್ರದ ಉದ್ಧಾರಕ್ಕೆ ಸಂಬಂಧಿಸಿ ಜೈನರ ತಾತ್ವಿಕ ಪ್ರಭಾವವನ್ನು ಕುವೆಂಪು ಕಾವ್ಯದಲ್ಲಿ ಗುರುತಿಸುವುದು ತುಂಬಾ ಸುಲಭ. ಆದರೆ ರಾವಣತ್ವು ರಾಮತ್ವದೊಡನೆ ಒಂದಾಯಿತು ಎಂಬಂತಹ ಮಾತುಗಳಿಗೆ ವಿಶ್ವಧರ್ಮ ಮಾನವ ಧರ್ಮ ಪರಿಕಲ್ಪನೆಗಳೇ ಪ್ರೇರಣೆ. ಕಪಿತಳಾದರೂ ಕಪಿಗಳಲ್ಲ. ಕಪಿಧ್ವಜರು, ರಾವಣಿಗೆ ಹತ್ತುತಲೆ ಇರಲಿಲ್ಲ, ನವರತ್ನದ ಉಂಗುರದಲ್ಲಿ ಅವನ ಮುಖ ಪ್ರತಿಬಿಂಬಿಸಿ ದಶಶಿರನೆಂಬ ಬಿರುದಾಯಿತು ಇತ್ಯಾದಿ ಜೈನ ಪರಂಪರೆಯ ಅಂಶಗಳನ್ನು ಕುವೆಂಪು ನೇರವಾಗಿ ಸ್ವೀಕರಿಸಿದ್ದಾರೆ. ಸುಗ್ರೀವನ ಅನುಚರರು ಕಪಿಗಳೇಕಾದರು ಎಂದು ಮಾಸ್ತಿ ಡಿವಿಜಿ ಮೊದಲಾದವರು ಪ್ರಶ್ನಿಸಿ ಇದು ವಾಲ್ಮೀಕಿಗಳ ಹಾಸ್ಯ ಪ್ರವೃತ್ತಿಯನ್ನು ತೋರುತ್ತದೆ ಎಂದೂ ಉತ್ತರಿಸಿದ್ದಾರೆ. ದ್ರಾವಿಡರು ಭಾರತದ ಮೂಲ ನಿವಾಸಿಗಳು, ಡಾರ್ವಿನ್ನನ ವಿಕಾಸವಾದದಲ್ಲಿ ತುಂಬಾ ಹಿಂದಿರುವವರು. ರಾವಣಾದಿಗಳು ಆರ್ಯರು ಎಂಬ ಕಲ್ಪನೆಯೂ ಇದೆ. ಆದರೆ, ಮಾಸ್ತಿ, ಅವರು ಕಪಿಗಳಲ್ಲ ವಾನರಲ್ಲ. “ವಾನರ” ಎಂಬ ಜನಾಂಗ ಎಂದರೆ ಕುವೆಂಪು ಹನುಮಂತನಿಂದ “ತಾನು ನರವರಂ, ವಾನರಂ, ಕಪಿಕೇತನರ ಕುಲಕೆ ಚೇತನಂ” ಎಂದು ಹೇಳಿಸಿದ್ದಾರೆ. ಅವರ ವೇಷ. “ಬಳ್ಳಿ ಹೂ ನವಿಲಗರಿಯ ತಲೆ ಯುಡೆ ಅಪುಲಿ ಚಿರತೆ ಮಿಗದ ತೋಲಂಗಿ, ಬಣ್ಣದ ನಾರ್ಗಳ ವಸ್ತ್ರ” ಆದರೆ ವಾಲ್ಮೀಕಿಯ ವೈದಿಕ ಕತೆಯ ದಟ್ಟ ಪ್ರಭಾವಕ್ಕೆ ಸಿಕ್ಕಿರುವ ಈ ದೇಶದ ಜನಕ್ಕೆ ಇಂದಿಗೂ ಚಲನಚಿತ್ರ ಮತ್ತು ದೂರದರ್ಶನ ಸರಣಿಗಳನ್ನು ಹನುಮಂತ ಮೊದಲಾದವರಿಗೆ ಕಪಿ ಮುಖದ ಮೇಕಪ್‌ ಮಾಡುತ್ತಿರುವಾಗ ಮಾಸ್ತಿ ಕುವೆಂಪು ಅವರ ಕಾವ್ಯದ ಇಂತಹ ಮಾತುಗಳು ಬರೀ ಹೇಳಿಕೆಗಳಾಗಿ ಪರಿಣಮಿಸಿ, ಆಂತರ್ಯವನ್ನು ತಟ್ಟದೇ ಹಾಗೇ ಉಳಿದು ನಮ್ಮ ಕಣ್ಣ ಮುಂದೆ ಕಪಿ ಮುಖವೇ ಕಾಣುತ್ತದೆ! ಏನಾದರೂ ಹೇಳಿಕೊಳ್ಳಲಿ ನಮಗೆ ಅದೇ ಸಹಜ ಅನ್ನಿಸುತ್ತದೆ. ಅಷ್ಟಲ್ಲದೇ ವಾಲ್ಮೀಕಿ ವ್ಯಾಸರ ಕಾವ್ಯಗಳು ಈ ದೇಶದ ರಕ್ತದಲ್ಲಿದೆ ಎಂದು ಹೇಳುತ್ತಾರೆಯೇ!

ಸಂಸ್ಕೃತಿ ರಕ್ಷಣೆಗೆ ಸಂಬಂಧಿಸಿ… “ಪರಸತಿಗಳು ಪಿದ ಆ ರಾಕ್ಷಸ (ರಾವಣ) ನೂ, ನಿನ್ನಂತೆ ಕೊನೆಯೆಯ್ದುವನು” ಎಂಬ ರಾಮನ ಮಾತಿಗೆ ‘ಪುಸಿ ಪುಸಿ ಪುಸಿ’ ಎಂದು ಕಿವಿ ಮುಚ್ಚಿಕೊಂಡು ‘ಮಗಳೆನಗೆ ರುಮೆ ತಾರೆ ತಾಂ ಸಾಕ್ಷಿ’ ಎನ್ನುತ್ತಾನೆ ವಾಲಿ. ಅಷ್ಟೇ ಅಲ್ಲದೇ ವಾಲಿಯೊಂದಿಗೆ ತಾರೆ ಸಹಗಮನ ಮಾಡುತ್ತಾಳೆ. ಮೂಲದಲ್ಲೇ ಈ ಅಂಶವಿದ್ದಿದ್ದರೆ ಹೇಗಾದರೂ ಇದನ್ನು ಹೇಳಲೇಬೇಕಿತ್ತು. ತಾವು ಆಧುನಿಕರೆಂದುಕೊಳ್ಳುವ ಕುವೆಂಪು ಆಧುನಿಕ ಭಾರತದಿಂದ ಹೊಡೆದಟ್ಟಿದ ಈ ಅನಿಷ್ಠ ಪದ್ಧತಿಯನ್ನು ಮೂಲದಲ್ಲಿಲ್ಲದಿದ್ದರೂ ತಂದಿರುವುದೇಕೆಂದರೆ ಇಲ್ಲಿ ಮೂಲಕತೆ ಒತ್ತುತ್ತಿದೆ. ಮೂಲದಲ್ಲಿರುವಂತೆ ರಾಮನು ತನ್ನನ್ನು ಸಮರ್ಥಿಸಿಕೊಳ್ಳದೇ, ವಾಲಿಯ ಕ್ಷಮೆ ಕೇಳುವುದು “ಶೂದ್ರ ತಪಸ್ವಿ”. ನಾಟಕದ ನೆನಪು ತಂದು ಎಷ್ಟೇ ಉದಾರವಾದಿಯಾದರೂ ವೈದಿಕಷಾಹಿ ಮೌಲ್ಯಗಳನ್ನೇ ಪ್ರತಿಪಾದಿಸುವ ವಿರೋಧಾಭಾಸವಿದೆ.

ಪತಿವ್ರತೆಯನ್ನು ತಾನು ನೋಡೇ ಇಲ್ಲ. ನೋಡುವ ಬಯಕೆ ಎಂಬ ರಾವಣನ ಇಚ್ಛೆ ಕುವೆಂಪು ಸ್ವಂತದ್ದು. ನಾಗಚಂದ್ರನಲ್ಲೂ ಇಲ್ಲ. ಅಲ್ಲಿಯ ಪರಾಂಗನಾವಿರತಿ ವ್ರತದ ಇನ್ನೊಂದು ರೂಪ ಇದು. ಏಕೆಂದರೆ ಮಂಡೋದರಿ ಹೇಳುವ ಇನ್ನೊಬ್ಬ ರಾವಣನಿದ್ದಿದ್ದರೆ ಪತಿವ್ರತೆಯನ್ನು ಅವನಿಗೆ ತೋರುತ್ತಿದ್ದೆ- ಎಂಬ ಮಾತು ಮತ್ತು ಧ್ಯಾನಮಾಲಿನಿ ಬಹುಕಾಲದ ನಂತರ ತನ್ನನ್ನು ಒಲಿದಳು ಎಂದು ರಾವಣ ಸೀತೆಗೆ ಹೇಳುವುದು, ಸಾಯುತ್ತಿರುವ ಮಗನ ಬಳಿ ತನ್ನ ಮನಸ್ಸು ರಾವಣನನ್ನು ಒಲಿಯಲಿಲ್ಲ. ಬರಿ ದೇಹ ಮಾತ್ರ ಎಂದು ಅದೇ ಧ್ಯಾನಮಾಲಿನಿ ಹೇಳುವುದು ಎಲ್ಲವೂ ಶುಚಿತ್ವದ ಕಡೆಗೆ ತುಡಿಯುತ್ತಿದೆ.

ಸೀತೆಗೆ ಕನಸಿನಲ್ಲಿ ಮಂಡೋದರಿ ಕಾಣಿಸಿಕೊಂಡು ನಾನಕ್ಕ ನಿನಗೆ ನೀನು ತಂಗಿ ಎಂದು ಹೇಳುವ ಮೂಲಕ (ಮಾತುಗಳಲ್ಲಿರುವ ವಿರೋಧವನ್ನು ಕಡೆಗಣಿಸಬೇಕು) ಸೀತೆ ರಾವಣನ ಮಗಳು ಎಂಬ ಜಾನಪದ ನಂಬಿಕೆಯನ್ನು ಕುವೆಂಪು ಸಂಪೂರ್ಣವಾಗಿ ತಿರಸ್ಕರಿಸಿ, ವೈದಿಕ ಕತೆಯಡೆಗೆ ಒಲಿದಿದ್ದಾರೆ. ಆದರೆ ವೈದಿಕ ಪರಂಪರೆಯಲ್ಲೇ ಬರುವ ಪುರಾಣಾಂತರ್ಗತ ರಾಮ ಕತೆಗಳು ಮಾತ್ರ ಜಾನಪದದ ಈ ನಂಬಿಕೆಯನ್ನು ಪೂರ್ಣವಾಗಿ ದುಡಿಸಿಕೊಳ್ಳುತ್ತವೆ.

ಕಪಿಗಳು ಮಹೇಂದ್ರಾಚಲದ ಬಳಿ ಸೇರಿ ನಡೆಸಿದ ಸಭೆಯು ಜಾನ್‌ ಮಿಲ್ಟನ್‌ನ ಪ್ಯಾರಡೈಸ್‌ ಲಾಸ್ಟ್‌ನಲ್ಲಿ ದೇವರ ವಿರುದ್ಧ ನಡೆದ ಸಭೆಯನ್ನು ನೆನಪಿಗೆ ತರುತ್ತದೆ. ಹಾಗೆಯೇ ರಾವಣ ನಡೆಸುವ ಸಭೆಗಳು ಕಪಿಗಳು ಸೀತೆಯನ್ನು ಹುಡುಕಿದ ಬಗೆಯನ್ನು ಕನ್ನಡದ ಎಲ್ಲಾ ರಾಮಾಯಣಗಳೂ ಸಾಕಷ್ಟು ದೀರ್ಘವಾಗಿಯೇ ವಿವರಿಸಿವೆ. ವಾಲ್ಮೀಕಿ ರಾಮಾಯಣದಲ್ಲೇ ಈ ಹಂತದಲ್ಲಿ ಚರ್ಚೆಯಿದೆ. ರಾವಣನಿರುವುದು ಲಂಕೆಯಲ್ಲಿ ಎಂದು ತಿಳಿದಿದ್ದೂ ಸುಗ್ರೀವನು ಬೇರೆ ದಿಕ್ಕಿಗೆ ಕಪಿಗಳನ್ನೇಕೆ ಕಳಿಸಿದ ಎಂಬ ಚರ್ಚೆಯ ಗಂಭೀರತೆಯಿಂದ ಹಿಡಿದು ಒಂದು ಕಪಿ ಅಯೋಧ್ಯಗೆ ಹೋಗಿ ಭರತನನ್ನೇ ಪ್ರಶ್ನಿಸಿದ (ನರಹರಿಯ ತೊರವೆ ರಾಮಾಯಣ) ಎಂಬ ಉತ್ಪ್ರೇಕ್ಷೆಯವರಿಗೆ ಈ ಪ್ರಸ್ತಾಪವಿದೆ. ಇದನ್ನು ಅಣಕಿಸಲೆಂದೇ ಇರಬೇಕು ಕುವೆಂಪು

ಅರಸಿದರು ಸೀತೆಯಂ ಅರಸಿದರವನಿಜಾತೆಯಂ
ಅರಸಿದರಸುರನೊಯ್ದ ರಾಮ ಸಂಪ್ರೀತೆಯಂ
ಜಾನಕಿಯ ನರಸಿದರ ಮೈಥಿಲಿಯನರಸಿದರ್‌
ಹುಡುಕಿದರರಣ್ಯಮಂ ಹುಡುಕಿದರಚಲ ಸೀಮೆಯಂ
ಹುಡುಕಿದರ್‌ ನದನದೀ ಜಲಗಳಂ ಕಾಸಾರ
ಕುಲಗಳಂ ಮೇಣ್‌ ತಲಾತಲಗಳಂ ಹುಡುಕಿದರ್‌
ಗಹ್ವರದ ಗುಹೆಗಳಂ ಮೇಣ್‌ ಭೀಕರಾಭೀಳ
ತಿಮಿರ ಭೀತಿಯ ಬಿಲಸ್ಥಲಗಳಂ ಸೋವಿದರ್‌
ದೂರ ಮಂ ಸೋವಿದರ್‌ ನಿಕಟಮಂ ಸೋದಿರ್‌
ಸರ್ವಮಂ ಮರಗಳೊಳ್‌ ಪೊದೆಗಳೊಳ್‌ ಕಲ್ಗಳೊಳ್‌
ಪುಲ್ಗಳೊಳ್‌ ಪಳುಬೆಳೆದ ಪಳ್ಳದೊಳ್‌ ಪಿಣಿಲಿಡಿದ
ಕೊಳದೊಳ್‌ ಕೆಸರು ಸುಬು ಕೊರಕಲಿನ ಕಿಬ್ಬಿಯೊಳ್‌
ದುಮುದುಮುನೆ ನೀರ್‌ ಬೀಳುವಬ್ಬಿಯೊಳ್‌ ಆ
ಕೀಳ ಸಂಶೋಧನಾ ಕೋವಿದರ್‌!
ತಡವಿದರ್‌ ಅಹರ್ಪತಿಯ ಕದಿರಾಳ್ವಳಾ
ಕೂಡಿ ಪಗಲನೆತ್ತತ್ತಲುಂ
ಕೌಟವಿಯಾಗಿ ಕಣ್ಣಟವಿ ಸೋಸಿದರಂತೆ
ತಣ್ಗದಿರ್ವೇರಸಿ ರಾತ್ರಿಯ ಗರ್ಭಮಾಕೈಗೆ
ಕತ್ತಲೆ ಬತ್ತಲಪ್ಪಂತೆ[4]

ಆಂಜನೇಯ ಸಮುದ್ರ ಹಾರಿದ್ದು ಹೇಗೆ? ಹಾರಲಿಲ್ಲ ಈಜಿದ ಇತ್ಯಾದಿ ಮಾತುಗಳಿವೆ. ಯೋಗದ ಬಲದಿಂದ ಪೂರಕ ಪ್ರಾಣತುಂಬಿ ಎತ್ತರಕ್ಕೆ ಬೆಳೆದು ಕುಂಭಕವು ನಿರ್ಮಿಸಿದ ಶೂನ್ಯದಿಂದ ದೇಹವು ಗುರುತ್ವಾಕರ್ಷಣೆ ಕಳೆದುಕೊಂಡು, ಯೋಗಬಲದಿಂದ ನೀರಿನಲ್ಲಿ ನಡೆಯುವಂತೆ ಗಾಳಿಯಲ್ಲಿ ಕುಳ್ಳಿರುವಂತೆ ಹಾರಿದ ಎಂದು ಕುವೆಂಪು ಯುಕ್ತಿಯುಕ್ತವಾಗಿ ಹೇಳಬೇಕಾಗಿದೆ. ಏಕೆಂದರೆ ಹನುಮಂತ ಹಾರುತ್ತಿರುವ ಚಿತ್ರ ಭಾರತೀಯರಿಗೆ ಚಿರಪರಿಚಿತವಾದುದರಿಂದ ಹೇಗೆ ಹಾರಿದ ಎಂಬ ಪ್ರಶ್ನೆ ಏಳುವುದೇ ಇಲ್ಲ. ಯುಕ್ತಿಯ ಪ್ರಶ್ನೆಯಾಗಿ ವಿಮರ್ಶಕ ಮತಿಗೆ ಮಾತ್ರ ಏಳುವಂತಹ ಪ್ರಶ್ನೆ ಅದು. ನೆಂಟರನ್ನು ಕಳಿಸಲು ಹೋದ ಜನ ಕೊಂಚ ದೂರ ಹೋಗಿ ಹಿಂದಿರುಗುವಂತೆ ಗಿಡಮರ ಬಳ್ಳಿಗಳು ಕೊಂಚ ಎತ್ತರಕ್ಕೆ ಹಾರಿ ಕೆಳಕ್ಕೆ ಬಿದ್ದವು. ಕವಿ ಕಲ್ಪನೆಯ ಕೂಡೆ ಏರಲೆಳಸಿಯುಮೇರಲಾರದ ವಿಮರ್ಶಕನ ಕಾಣ್ಮೆಯಿಲ್ಲದ ಒಂದು ಜಾಣ್ಮೆಯಂತೆ” ಕೆಲವು ಗಿಡಗಳು ಮಾತ್ರ ಜೊತೆಗೆ ಹಾರಿದವು. ಕವಿಕಲ್ಪನೆಗೆ ಕೊಂಕು ಬಿಂಕವನುಳಿದು ನೆಮ್ಮವ ರಸಾಸ್ವಾದಿ ಸಹೃದಯ ವಿನಯದಂತೆ. ಇದು ಕುವೆಂಪು ಕಾವ್ಯ ಮೀಮಾಂಸೆ. ವಾಲ್ಮೀಕಿಗೆ ಈ ಕಾಳಜಿಯಿಲ್ಲ. ‘ಪಕ್ಷಿಕಾಶಿ’ಯಲ್ಲಿ ವಿಮರ್ಶಕರನ್ನು ಕುರಿತು ಓ, ಬಿಯದ, ಬಿಲ್ಲುಬತ್ತಳಿಕೆಗಳನಲ್ಲೆ ಬಿಟ್ಟು ಬಾ. ಎಂದಿರುವ ಮಾತನ್ನು ಇಲ್ಲಿ ನೆನೆಯಬಹುದು ಮತ್ತು ಹೀಗೆ ಹೇಳುವಾಗ, ಸಮುದ್ರೊಲ್ಲಂಘನ ಸೇತು ಬಂಧನಗಳ ಬಗ್ಗೆ ನೇಮಿಚಂದ್ರನಿಂದ ಹಿಡಿದು ಇಲ್ಲಿಯವರೆಗೆ ಎತ್ತಿರುವ ಚರ್ಚೆಗಳ ಹಿನ್ನೆಲೆಯ ಅರಿವೂ ಅವರಿಗಿದೆ ಎಂದು ಹೇಳಬಹುದು.

ವಾಲ್ಮೀಕಿ ರಾಮಾಯಣದಲ್ಲಿ ಮಾತ್ರವಲ್ಲದೇ, ಜಾನಪದ, ಯಕ್ಷಗಾನ, ಬಯಲಾಟ, ರಂಗಭೂಮಿಗಳಲ್ಲಿ ಅತಿರಂಜಿತವಾಗಿ ವಿವರಿಸಲ್ಪಟ್ಟಿರುವಂಥದು ಹನುಮಣತನ ಲಂಕಾದಹನ. ಮಾತಿಯಂತಹ ವಿಮರ್ಶಕ ಮತಿ ಇದು ಪ್ರಕ್ಷಿಪ್ತ ಅನ್ನಬಹುದು ಅಥವಾ ನಡೆದೇ ಇಲ್ಲ ಅನ್ನಬಹುದು. ಆದರೆ ನಮ್ಮ ಜಾನಪದ ಮನಸ್ಸು ಮಾತ್ರ ಹನುಮಂತನು ಬಾಲವನ್ನು ಬೆಳೆಸಿ, ರಾವಣನಿಗಿಂತ ಎತ್ತರಕ್ಕೆ ಕುಳಿತ. ಕೋಪಗೊಂಡ ರಾವಣ ಅವನ ಬಾಲಕ್ಕೆ ಬೆಂಕಿ ಹಚ್ಚಿದ (ನರಹರಿಯಂಥವರಿಗಂತು ಕತೆ ಬೆಳೆಸಲು ಇದು ಅಪೂರ್ವ ಸಂದರ್ಭ) ಎಂದು ಹೇಳುವ ಕತೆ ನಮ್ಮ ದೇಶದ ಚಿಕ್ಕ ಮಕ್ಕಳಿಗೂ ಗೊತ್ತು. ಆದರೆ, ಕುವೆಂಪು ಈ ಎರಡೂ ಸಂಸ್ಕೃತಿಗಳ ಸಮ್ಮಿಲನವಾದ ಪರಿಣತ ವಿಮರ್ಶನ ಪ್ರಜ್ಞೆಯಿಂದ ಬೆಂಕಿಗೆ ಕಾರಣವನ್ನು ಹೀಗೆ ನಿರೂಪಿಸಿದ್ದಾರೆ.

“ಲಂಕೆಯ ಕೋಟೆಗೆ ಹನುಮಂತ ಹಿಂದಿರುಗಿದಾಗ ಪ್ರತಿಮಾಯೆ ಅವನನ್ನು ತಡೆಯಿತು. ಬಿರುಗಾಳಿಯಾಗಿ ಬಂದವನು ತಿರುಗಾಳಿಯಾಗಿ ತಿರ್ರನೆ ತಿರುಗಿದಾಗ ವಾಯು ಮಂಥನದೊಳಗ್ನಿಗಳ್‌ ಜ್ವಾಲಾ ಜಟಾಧಾರಿ ತಾಂಡವ ಶಿವನ ತೆರದಿ ವಿಲಯ ನರ್ತದೊಳಾರ್ಭಟಿಸಿತು…[5]

‘ರಣವ್ರತರ್‌ ವಹ್ನಿರನ್ನರ್‌’ ಎಂಬ ಸಂಚಿಕೆಯ ವಹ್ನಿ ಮತ್ತು ರಾಮನ ಸಂಭಾಷಣೆಯಲ್ಲಿ ಕುವೆಂಪು ಅವರ ಯುದ್ಧ ವಿರೋಧಿ ಮನೋಭಾವವು ಬಹು ಚೆನ್ನಾಗಿ ವ್ಯಕ್ತವಾಗಿದೆ. ವೆಹ್ನಿ ಸಾಯುವನಲ್ಲಾ ಎಂದು ರಾಮನ ದುಃಖ ರಾವಣ ಕೊಂಡೊಯ್ದುದು ನಿನ್ನ ಸತಿಯನ್ನು ಮಾತ್ರವಲ್ಲ. ಸತೀತನವನ್ನೇ ಇದಕ್ಕೆ ಪ್ರತಿಭಟಿಸದಿದ್ದರೆ ತಾವು ಬದುಕಿದ್ದೂ ವ್ಯರ್ಥ ಎನ್ನುವ ವಹ್ನಿ ಸುಬಾಹು ವಧೆಯಿಂದ ಮಾರೀಚನ ವರೆಗಿನ ವಿಷಯವು ತನಗೆ ಗೊತ್ತೆಂದೂ ರಾಮನೇ ದೇವರೆಂದೂ ಹೇಳುತ್ತಾನೆ. ಇಂತಹ ಅಂಶಗಳನ್ನು ಮೀರಿಸುವಂತೆ ಯುದ್ಧವರ್ಣನೆಯೊಂದಿಗೆ ಅದರ ಬಗೆಗಿನ ವಿಷಾದವನ್ನು ಬೆರೆಸುವುದು, ನಮ್ಮ ಸ್ವಾತಂತ್ರ್ಯವನ್ನು ಕಳಚಿ ದಾಸ್ಯಕ್ಕೆ ಒಡ್ಡೆವು ಎಂಬ ಲಂಕೆಯ ಸೈನಿಕರ ಮಾತು, ರಾವಣನು ಸಭೆಯನ್ನುದ್ದೇಶಿಸಿ ದೇಶಭಕ್ತರಿರ ಎನ್ನುವು ಈ ವಿವರಗಳಲ್ಲಿ ಇಂದಿನ ಯುಗಧರ್ಮವಾದ ಅಲಿಪ್ತತೆಯನ್ನು ಬೆರೆಸುವ ಕವಿ ಹೇಗಾದರೂ ಶಾಂತಿಯನ್ನರಸುವ ಹಂಬಲದಲ್ಲಿ ಪುನರ್ಜನ್ಮವನ್ನೂ ನಂಬುತ್ತಾರೆ. ಆದ್ದರಿಂದಲೇ ರಾವಣ ಕುಂಭಕರ್ಣರೇ ಮುಂದಿನ ಜನ್ಮದಲ್ಲಿ ಲವಕುಶರಾಗುವರು ಎಂಬ ಮಾತು, ಯುದ್ಧದಲ್ಲಿ ಸತ್ತರೆ ಮುಂದೆ ರಹ್ನನು ವಹ್ನಿಗೆ ಮಗನಾಗಿ ಹುಟ್ಟುವನು ಎಂಬ ಮಾತು ಬರುತ್ತದೆ. ರಾವಣ ಸತ್ತ ಮರುದಿನ ಎಲ್ಲೆಲ್ಲಿಯೂ ರಾಮನೇ ಇದ್ದನಂತೆ. ಹಾಗೆ ವಹ್ನಿಯ ಬಳಿ ಬಂದ ರಾಮ ಗೆಳೆಯನ್ನನು ಕಳೆದುಕೊಂಡ ದುಃಖದಲ್ಲಿದ್ದ ಅವನಿಗೆ ರಹ್ನ ಮತ್ತೆ ಬರುವನು ನಿನ್ನ ಮಗನಾಗಿ ಎನ್ನುತ್ತಾನೆ.

ಶುಕ ಸಾರಣರ ಪ್ರಸಂಗ ಆ ಕಾಲದಲ್ಲೂ ಇದ್ದ ಬೇಹುಗಾರಿಕೆಗೆ ಸಾಕ್ಷಿಯಾಗಿ ಬಂದಿವೆ. ಹಾಗೆಯೇ ಮೈಂದ, ದ್ವಿವಿಧರ ಪ್ರಸಂಗ, ವಿಭೀಷಣನ ಬಳಿಗೆ ಸುಗ್ರೀವನ ದೌತ್ಯ, ವಿಭೀಷಣನೂ ಮೊದಲು ಹಿರಣ್ಯಕೇಶಿಯನ್ನು ತನ್ನ ಪ್ರತಿನಿಧಿಯಾಗಿ ರಾಮನೆಡೆಗೆ ಕಳಿಸುವುದು… ಈ ಎಲ್ಲಾ ಸನ್ನಿವೇಶಗಳಲ್ಲಿ ರಾಮನ ದೈವತ್ವವನ್ನು ಕಳಚಿ ಹಾಕಿ ಪೂರ್ತಿ ರಾಜಕೀಯ ತುಂಬಲಾಗಿದೆ. ಇದಕ್ಕೆ ಪೂರಕವೋ ಎಂಬಂತೆ ಮೈಂದ, ದ್ವಿವಿಧರು ರಾಕ್ಷಸ ಭೋಜನವನ್ನು ಹೊಟ್ಟೆ ಬಿರಿವಂತೆ ತಿನ್ನುವುದನ್ನು ವರ್ಣಿಸಿ, ಬೇರೆ ಶಕುನ ಬೇಕೇ ರಾಯಭಾರ ವಿಫಲತೆಗೆ ಎಂದು ಕೇಳುವ ಹಾಸ್ಯ ಸನ್ನಿವೇಶವೂ ಇದೆ.

ಸೇತುಬಂಧನದ ಬಗ್ಗೆಯೂ ಬೇಕಾದಷ್ಟು ಚರ್ಚೆ ನಡೆಸಿದೆ. ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿ ಸಂತತಿ ಎಂಬ ನೇಮಿಚಂದ್ರ ಮಾತಿನಿಂದ ಹಿಡಿದು ಲಂಕೆ ಇದ್ದುದು ಸಿಂಹಳದಲ್ಲಲ್ಲ ಎಂದೂ ಪರ್ವತದ ಕಾಡಿನಲ್ಲಿ ರಾವಣನಿಗೆ ವಿಮಾನ ಇರಲಿಲ್ಲ. ಕಾಡಿನ ನಡುವೆ ಸೀತೆಯನ್ನು ಕದ್ದೊಯ್ದು… ಜೊತೆಗೆ ಇವೆಲ್ಲಾ ಪ್ರಕ್ಷೇಪ ಎಂಬ ವಾದದವರೆಗೆ, ಮೂಲ ಕತೆಯಲ್ಲಿಯೇ ಒಂದಕ್ಕೊಂದು ವಿರುದ್ಧವಾದ ಕತೆಗಳಿವೆ… ರಾಮನು ಕೋಪಗೊಳ್ಳಲು ಸಮುದ್ರವು ಬತ್ತಿ ಹೋಯಿತು. ನಳನು ಯಾವ ಬಂಡೆಯನ್ನು ಮುಟ್ಟಿ ಸಮುದ್ರಕ್ಕೆ ಹಾಕಿದರೂ ಅದು ತೇಲುತ್ತಿತ್ತು ಇತ್ಯಾದಿ.

ಕುವೆಂಪು ತಮ್ಮ ಆಧ್ಯಾತ್ಮಿಕ ಪರಿವೇಷ ತೊಡಿಸಿ:-

ರಾಮ ಸೀತೆಯರ ವಿರಹ ಈಗಾಗಲೇ ಸೂಕ್ಷ್ಮ ಸೇತುವೆಯನ್ನು ಕಟ್ಟಿದೆ. ಅದಕ್ಕೆ ಭೌತಿಕ ವಸ್ತುಗಳನ್ನು ತುಂಬುವ ಕೆಲಸ ನಡೆಯಿತು ಎನ್ನುತ್ತಾರೆ… ಮುಂದೆ ನಡೆದುದನ್ನು ಏನೆಂದು ವರ್ಣಿಸಲು. ಬಲ್ಲನಿತೆ ಬಣ್ಣಿಪ್ಪೆನಾಂ ಕಾಣ್ಪುದು ಎನ್ನಯ ಕಾಣ್ಮೆಯಿರ್ಪೆಲ್ಲರ್ಗೆ ಅನುಭವ ಪ್ರತ್ಯಕ್ಷಮಂ ಪೇಳ್ವೆನ್‌ ಅತ್ಯಲ್ಪಮಂ ಕಲ್ಲು ಮಣ್ಣಂ ಕಡೆದು ಕೊರೆದು ಮಪ್ರತಿಮನಂ ಪ್ರತಿಮಿಸುವವೋಲ್‌ ಭಾವ ಸತ್ಯವನರಿಯದಿರ್ಪ ಕಲ್ಪನಾ ಕುಬ್ಜರಿಗಿದಲ್ಪಮಲ್ತುಂ ಉದ್ಯಮಂ…[6]

ಲಂಕಾ ಸಂಪುಟದಿಂದಾಚೆಗೆ ಜೈನ ರಾಮಾಯಣಗಳ ಪ್ರಭಾವ ಸುಸ್ಪಷ್ಟವಾಗಿದೆ. ಬಹುಶಃ ಕಾವ್ಯಗಳೆಗಟ್ಟಿರುವುದೇ ಇಲ್ಲಿಂದ. ಮಲೆನಾಡಿನ ಪ್ರೀತಿಯ ಜೊತೆಗೆ ದ್ರಾವಿಡ ದೇಶದ ಮೋಹವೂ ಸೇರಿಯೋ ಏನೋ ಅಪೂರ್ವವಾದ ಬಿಡಿ ಬಿಡಿ ಚಿತ್ರಗಳು ಮನೋಹರವಾಗಿವೆ.

ಯುದ್ಧದ ಹಿಂದಿನ ದಿನ ನಭೋಲಕ್ಷ್ಮೀಗೆ ತಪೋಲಕ್ಷ್ಮೀ ಕಾಣಿಸಿಕೊಂಡು ನೀನಾರೆಂದು ಕೇಳಲು ನಂದಿಗ್ರಾಮದಿಂದ ಹೊರಟ ಅವಳು ಊರ್ಮಿಳಾ ಮೊದಲಾದವರ ಹರಕೆಯನ್ನು ತಂದಿರುವೆನೆನ್ನುತ್ತಾಳೆ.

ಲಂಕೆಯ ಪ್ರತಿಯೊಂದು ಮನೆಯೂ ಸುಂದರವಾದ ಸಾಂಸಾರಿಕ ಚಿತ್ರಗಳು ಇಂದ್ರಜಿತು ಅವನ ಹೆಂಡತಿ ಮಗನ ಚಿತ್ರ, ವಿಭೀಷಣ ಸುರಮೆ ಅವರ ಮಗಳು ಅನಲೆ ವೀಣೆ ನುಡಿಸುತ್ತಿರುವ ಚಿತ್ರ, ಮಂಚದ ಮೇಲೆ ಮಲಗಿರುವ ದೊಡ್ಡಪ್ಪ ರಾವಣನ ಬಳಿಗೆ ಬಂದು ಮಾತನಾಡಲು ಅನಲೆ ಬಾಗಿದಾಗ ಅವಳ ನಿಳಾಹಿಯಂತಹ ಜಡೆ ಮುಂದೆ ಬಿದ್ದು ಅದನ್ನವಳು ಹಿಂದಕ್ಕೆಸೆದಳು ಎನ್ನುವಾಗ ನಮಗೆ ಅಂತಃಪುರದಲ್ಲಿದ್ದಂತೆನ್ನಿಸುವುದಿಲ್ಲ. ಕುಂಭಕರ್ಣ ಸತ್ತನೆಂದು ತಿಳಿದ ಅನಲೆ ಅವನು ತನ್ನನ್ನು ಚಿಕ್ಕವಳಿದ್ದಾಗ ನೀನೊಂದು ಚೆಂಡು ಎಂದು ಹಿಡಿದು ಮೇಲಕ್ಕೆ ಎಸೆದು ಆತುಕೊಳ್ಳುತ್ತಿದ್ದುದನ್ನು ನೆನೆಯುತ್ತಾಳೆ. ವಾಲಿ ಸುಗ್ರೀವರೂ ಹೀಗೆ ನೆನೆಯುವ ಚಿತ್ರವಿದೆ. ವಾಲಿ ಸುಗ್ರೀವನನ್ನು ಮಗುವಿದ್ದಾಗ ಬೆನ್ನ ಮೇಲೆ ಹಾಕಿಕೊಂಡು ಉಪ್ಪು ಬೇಕೇ ಉಪ್ಪು ಎನ್ನುತ್ತಿದ್ದುದು.

ವಾಲ್ಮೀಕಿಗಳಿಗೆ ಕಾಡಿನಲ್ಲಿದ್ದಾಗ ರಾಮ ಏನು ಮಾಡುತ್ತಿದ್ದ. ಇಂದ್ರಜಿತು ಅರಮನೆಯಲ್ಲಿ ಏನು ಮಾಡುತ್ತಿದ್ದ ಎಂದು ಹೇಳುವ ಅವಶ್ಯಕತೆಯಿರಲಿಲ್ಲ. ಬಹುಶಃ ವಾಲ್ಮೀಕಿ ಬರೆಯುತ್ತಿರುವ ಕತೆ ನಡೆದ ತ್ರೇತಾಯುಗದಲ್ಲಿ ಇದ್ದುದೇ ಶ್ರುತಿ ಪರಂಪರೆ, ಲಿಪಿ ಇರಲಿಲ್ಲ. ಇದರ ಗಂಭೀರ ಅರಿವು ಕುವೆಂಪು ಅವರಿಗೆ ಬೇಕಿಲ್ಲ. ಅವರ ಇಂದ್ರಜಿತು ವೇದಗಳಲ್ಲಿರುವ ಧನುರ್ವಿದ್ಯೆಯ ವ್ಯಾಸಂಗ ಮಾಡುತ್ತಾನೆ. ಹೊತ್ತಗೆ ಓದುತ್ತಾನೆ. ಕಾಡಿನಲ್ಲಿದ್ದಾಗ ರಾಮ ಅಧ್ಯಯನಕ್ಕೆಂದು ರೋಮಹರ್ಷರ ಆಶ್ರಮಕ್ಕೆ ಹೋಗುತ್ತಾನೆ.

ರಾವಣನ ಪಾತ್ರದ ಉದಾತ್ತೀಕರಣ ನಾಗಚಂದ್ರನಲ್ಲಾಗಿದೆ. ಬಹುಶಃ ಅದಕ್ಕೂ ಮೊದಲು ಕ್ರಿ. ಪೂ. ೧ನೇ ಶತಮಾನದ ವಿಮಲಸೂರಿಯಲ್ಲೇ ಆಗಿದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. ಈ ರೀತಿಯ ಪಾತ್ರಗಳನ್ನು ಮೇಲೆತ್ತುವ ಕೆಲಸವನ್ನು ಭಾಸನು ಸಂಸ್ಕೃತದಲ್ಲೂ ಪಂಪರನ್ನರು ಕನ್ನಡದಲ್ಲೂ ಮಾಡಿದ್ದಾರೆ. ಆದರೆ, ಕುವೆಂಪು ಕೊಡುವ ರಾವಣನ ಚಿತ್ರ ಬರೀ ಉದಾತ್ತ ಮಾತ್ರವಾಗದೇ ಮಾನವೀಯವಾಗಿರುವುದೇ ಈ ಕಾವ್ಯದ ಒಂದು ಹಿರಿಮೆ. ಮಂಡೋದರಿಯ ಬಳಿಗೆ ರಾವಣ ಬಂದಾಗ ಹನುಮಣತನಿಗೆ ಹೀಗೆ ಅನ್ನಿಸಿತಂತೆ.

ಇವನಾರ್‌ ಈತನಾರ್‌ ಈ ಮಹಾಪುರುಷನಾರ್‌
ನಾಂ ಕಾಣೆನಿನ್ನೆಗಮ್‌ ಇವಂಗೆಣೆಯ ಓಜಸ್ವಿಯಂ
(ನಾಗಚಂದ್ರನ ಮಾತುಗಳೇ ಈ ಭಾಗದಲ್ಲಿ ವಾಚ್ಯವಾಗಿವೆ)

ವಾಲ್ಮೀಕಿ ಪ್ರಕಾರ ಹನುಮಂತ ಬಂದಾಗ ಎಲ್ಲರೂ ನಿದ್ರಿಸಿರುತ್ತಾರೆ. ಬ್ರಹ್ಮಚಾರಿ ಹನುಮಂತ ಲಂಪಟ ರಾವಣನ ಅಂತಃಪುರ ಸುತ್ತುವ ದೃಶ್ಯ ದೀರ್ಘವಾಗಿಯೂ ವೈಭವೋಪೇತವಾಗಿಯೂ ಚಿತ್ರಿಸಲ್ಪಟ್ಟಿದೆ. ಇಲ್ಲಿ ಎಲ್ಲರೂ ಎಚ್ಚತ್ತಿದ್ದು ಮಾತನಾಡುತ್ತಿದ್ದು ಹನುಮಂತನಿಗೆ ಅನೇಕ ಸೂಚನೆಗಳೂ ಸಿಗುತ್ತವೆ. ಇಬ್ಬರು ಸೈನಿಕರ ಮಾತಿನಿಂದ ಸೀತೆಯಿರುವ ಸ್ಥಳ ಅವನಿಗೆ ತಿಳಿಯುತ್ತದೆ. ಸೀತೆಗಾಗಿ ನಿರೀಕ್ಷಿಸುತ್ತಿರುತ್ತಾ ಅಶೋಕ ವೃಕ್ಷದ ಮೇಲೆ ಅವನು ಕುಳಿತಿರುತ್ತಾ ಬೆಳಗಾಗುತ್ತದೆ. ಆಗ ಮಲೆನಾಡಿನ ಎಲ್ಲ ಹಕ್ಕಿಗಳೂ ತಮ್ಮ ಹೆಸರು ಸಮೇತ ತ್ರೇತಾಯುಗದ ಲಂಕೆಯ ಅಶೋಕ ವನಕ್ಕೆ ಬಂದು ಹಾಡತೊಡಗುತ್ತವೆ!

ಜನ್ನನ ಅನಂತನಾಥ ಪುರಾಣವೋ ಸೇರಿದಂತೆ ಜೈನ ರಾಮಾಯಣಗಳು, ವೈದಿಕ ರಾಮಾಯಣಗಳು ಮಾಯಾ ಶಿರಸ್ಸಿನ ಹನನದ ಕತೆಯನ್ನು ಅತಿರಂಜಿಸಿವೆ. ಕುವೆಂಪು ಅವರ ರಾವಣ ಅಂತಹ ಕ್ರೂರಿಯಲ್ಲ. ಶಾರ್ದೂಲನು ಮಾಯಾರಾಮ ಶಿರಸ್ಸಿನ ಹನನದ ಸಲಹೆ ನೀಡಿದಾಗ ರಾವಣ ತಿರಸ್ಕರಿಸುವುದಲ್ಲದೇ ಹಾಗೆ ಮಾಡಿದರೆ ವಶವಾಗುವುದು ಸೀತೆಯ ಕಳೇಬರವೇ ರಾವಣಂಗಲ್ಲದಿನ್ನಾರ್ಗೋ ಹೇಳ್‌ ಸೀತಾ ಹೃದಯ ಸೂಕ್ಷ್ಮತಾಸಿದ್ಧಿ? ಎಂದು ಪ್ರಶ್ನಿಸಿ ಒಳ್ಳೆಯದು ಕೆಟ್ಟದ್ದು ಎಂಬ ಗೆರೆ ಎಳೆಯುವ ಪ್ರಾಚೀನ ಮಹಾಕಾವ್ಯಗಳ ಕಪ್ಪು ಬಿಳುಪು ಚಿತ್ರಗಳ ಪರಿಕಲ್ಪನೆಯನ್ನೇ ಅಳಿಸಿ ಹಾಕಿಬಿಡುತ್ತಾರೆ. ಇಂತಹ ಮಾತುಗಳನ್ನು ರಾಮನೂ ಮುಂದೆ ಆಡಿಬಿಡುವಾಗ ರಾವಣತ್ವ ರಾಮತ್ವದೊಡನೆ ಒಂದಾಗುತ್ತದೆ. ಆದರೂ ಯುದ್ಧ ಕಾಂಡದಲ್ಲಿ ವಾಲ್ಮೀಕಿಯ ದಟ್ಟ ಪ್ರಭಾವದಿಂದ ತಪ್ಪಿಸಿಕೊಳ್ಳಲು ಕುವೆಂಪು ಅವರಿಗೆ ಆಗಿಲ್ಲವೆಂದೇ ಹೇಳಬೇಕು. ವೇದವತಿಯ ಪ್ರಸಂಗ ಇಲ್ಲೂ ಇದೆ. ಕುಂಭಕರ್ಣನ ಯುದ್ಧದಲ್ಲಿ ಶಿವಪಾರ್ವತಿ ಗಣಪ ಎಲ್ಲರೂ ತಲೆ ಹಾಕುವ ಪವಾಡವೂ ಇದೆ. ಮೂಲ ಕಥೆಯ ಅಥೆಂಟಿಸಿಟಿಯನ್ನು ಕಾಯ್ದುಕೊಳ್ಳಬೇಕಾಗಿರುವ ಅನಿವಾರ್ಯತೆಯ ಅರಿವು ಕವಿಗಿದೆ. ಅದಕ್ಕೇ “ದೂರಮಿರದಿನ್‌ ಸುಗತಿ” ಎಂಬ ಅಧ್ಯಾಯದ ಆ ಮಾತಿನಲ್ಲಿ ರಾವಣನನ್ನು ಪರಿವರ್ತಿಸಲು ಸಾಧ್ಯವಿಲ್ಲ. ಯುದ್ಧ, ಮರಣ ಅನಿವಾರ್ಯ ಆತ್ಮಪರಿವರ್ತನೆಯಾದರೆ ಸಾಕು ಎಂಬ ಅರ್ಥವಿದೆ. ಮಗ ಅತಿಕಾಯ ಸತ್ತಾಗ ಧ್ಯಾನಮಾಲಿನಿ ಆಡಿದ ಮಾತಿನಿಂದ ಪರಿವರ್ತನೆ ಹೊಂದಿದ ರಾವಣ (ಜೈನ ಕಾವ್ಯಗಳಂತೆ) ರಾಮನನ್ನು ಸೆರೆ ಹಿಡಿದು ತಂದು ಸೀತೆಗೊಪ್ಪಿಸುವೆ ಎಂದು ತೀರ್ಮಾನಿಸುತ್ತಾನೆ. ಆಗ ಚಂದ್ರಮುಖಿ ಹೇಳುವ-

ದಿಟಂ ನೀನ್‌ ಮಹಾಕವಿ ದಿಟಂ ಜಗತ್‌ ರಂಗದೊಳ್‌
ಬರಿ ಕಲ್ಪನೆಯೊಳಲ್ತು ಕೃತಿಗಳಂ ಕೊರೆಯುವ ಮಹತ್‌ ಶಿಲ್ಪಿ ನೀ ದಿಟಂ

ಎಂಬ ಮಾತು ಅತೀ ರೋಚಕವಾಗಿದ್ದು ಇಡೀ ಕಾವ್ಯದ ಒಟ್ಟು ಮೀಮಾಂಸೆಯನ್ನೇ ಕುವೆಂಪು ಮಾಡಿಕೊಟ್ಟಿದ್ದಾರೆ.

ಕೊನೆಯ ಬಾರಿ ಸೀತೆಯನ್ನು ಕಾಣಲು ಬಂದ ರಾವಣನಿಗೆ ಪರ್ಣಕುಟಿ ಹೊತ್ತಿ ಉರಿಯುವಂತೆ ತೋರುವುದು ವೇವತಿಯಂತೆ ಇವಳೂ ಅಗ್ನಿಪ್ರವೇಶ ಮಾಡಿದಳೇ ಎಂದು ಚಿಂತೆಗೊಳಗಾದ ರಾವಣನಿಗೆ ಮಹಾಕಾಳಿಯ ರುಂಡಮಾಲೆಯಲ್ಲಿ ಕುಂಭಕರ್ಣನ ತಲೆ, ಪಕ್ಕದಲ್ಲಿಯೇ ತನ್ನ ತಲೆ ಕಂಡಂತೆ ಅನುಭವವಾಗುವುದು, ಇಂತಹ ಅತಿಮಾನುಷತೆಯ ಜೊತೆಗೆ ರಾಮ ಹನುಮಂತನಿಗೆ ಹೀಗೆ ಹೇಳುತ್ತಾನೆ.

ಇದು ರಹಸ್ಯ ಆಲಿಸು, ನಾನೇ ಆ ರಾವಣನ ಮೂಲ ಬಲ ಶಕ್ತಿ ನನ್ನ ಅಸತ್‌ ಶಕ್ತಿಯ ಗೆಲಲಲು ಅರಿದು ನನಗಲ್ಲದೆ ಇತರರಿಗೆ ಕಾಣು ಬಾ. ಚಿತ್‌ ತಪಸ್‌ ಶಕ್ತಿಯ ಅಲೌಕಿಕ ವಿಧಾನಂ… ನಾನೇ ಅವನಲ್ಲದಿರೆ ಆ ದಶಗ್ರೀವಂಗದೇನ್‌ ಸೀತೆಯನೊಲಿವುದುಂ ಮೇಣವಳನುಯ್ವುದುಂ ಪೇಳ್‌ ಮೊಗ್ಗೆ?[7]

ಕುವೆಂಪು ಆಶಯದಂತೆ ರಾಕ್ಷಸನ ಸೈನ್ಯವೆಲ್ಲವೂ ರಾವಣನ ರೂಪ, ವಾನರ ಸೈನ್ಯವೆಲ್ಲವೂ ರಾಮನ ರೂಪ. ಅದು ಅದ್ಭುತ ನೋಟ. ಈ ಎರಡು ಕಡೆ ಯುದ್ಧದಲ್ಲಿ ತಿಣುಕದಿರ್ಪನೆ ಪೇಳ್‌ ದಿಟಾ ತಿಣುಕಿದನೋ ಫಣಿ ರಾಯನಾ ರಾಮಾಯಣದ ಭಾರಕೆಂಬಂತೆ ಎಂದು ಹೇಳಿ ಕುಮಾರವ್ಯಾಸನ ಮಾತನ್ನು ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ.

ವೈದಿಕ ಪ್ರಜ್ಞೆಗೇ ಒಲಿದಂತೆ ತೋರಿದರೂ ಅಪ್ರಯತ್ನವಾಗಿ ಜಾನಪದ ಪ್ರಜ್ಞೆ ಕಾವ್ಯದಲ್ಲಿ ಕೆಲಸ ಮಾಡಿದೆ. ದೇವಿಯನ್ನು ಸಾಕ್ಷಾತ್ಕರಿಸಿಕೊಂಡ ರಾವಣ ಎರಡು ವರ ಕೇಳುತ್ತಾನೆ. ೧ ರಾಮನನ್ನು ಸೋಲಿಸಬೇಕು. ೨. ಸೀತೆಯನ್ನು ಪಡೆಯಬೇಕು. ದೇವಿ ವರ ನೀಡುತ್ತಾಳೆ. ರಾಮನನ್ನು ಸೋಲಿಸುವೆ, ಸೀತೆ ನಿನ್ನನ್ನು ಚುಂಬಿಸುವಳೆದೆಗೊತ್ತುವಳ್‌… ಆದರೆ ಮುಂದಿನ ಜನ್ಮದಲ್ಲಿ (ಲವಕುಶರೇ ರಾವಣ ಕುಂಭಕರ್ಣರು, ಮಕ್ಕಳನ್ನು ಸೀತೆ ಮುದ್ದಾಡಿದ್ದು ಅವರು ರಾಮನ್ನು ಸೋಲಿಸಿದ್ದು)… ರಕ್ತದ ವಡುವಿನಲ್ಲಿ ಕುಂಭಕರ್ಣನನ್ನು ಕಂಡು ತಾನೂ ಮುಳುಗಿ ಇಬ್ಬರೂ ಮೇಲೇರಿ ಬಂದಾಗ ಶಿಶುಗಳಾಗಿದ್ದರು. ಸೀತೆ ಮುದ್ದಾಡಿದಳು. ಪೂಜಾಗೃಹದಿಂದ ಅಳು ಕೇಳಿಸಿ ಮಂಡೋದರಿ ಬಂದಳು ಇತ್ಯಾದಿ.

ಯುದ್ಧದಲ್ಲಿ ಎದುರಾದ ರಾಮನನ್ನು ನೋಡುತ್ತಲೇ ರಾಮನಿಗೆ ಅನ್ನಿಸುತ್ತದೆ. ಅಂದು ಜನಕನ ಸಭೆಯಲ್ಲಿ ಧನುವನ್ನೆತ್ತಿ ಸೀತೆಯನ್ನು ಗೆದ್ದಂತಲ್ಲ. ಇಂದು ನನ್ನನ್ನು ಸೋಲಿಸಿ ಸೀತೆಯನ್ನು ಗೆಲ್ಲುವುದು ಕಷ್ಟ. ಅಂದು ಜನಕ ಮಾವ ಇಂದು ನಾನು ಮಾನ (ಅಂದರೆ ಸೀತೆಯ ತಂದೆ)-ಹೀಗೆ ಅರಿವಿದ್ದೋ ಇಲ್ಲದೆಯೋ ನಮ್ಮ ಪುರಾಣಗಳೂ ನಂಬುವ ಸೀತೆ ರಾವಣನ ಮಗಳು ಮತ್ತು ರಾವಣ ಕುಂಭಕರ್ಣರೇ ಲವಕುಶರು ಎಂಬ ಜಾನಪದ ಅಂಶಗಳನ್ನು ಇಲ್ಲಿ ದುಡಿಸಿಕೊಳ್ಳಲಾಗಿದೆ.

ನಾಗಚಂದ್ರನನ್ನು ದಟ್ಟವಾಗಿ ಅನುಸರಿಸುತ್ತಾ ರಾವಣನ ದಶಶಿರ ಎಂಬ ಹೆಸರು ಬರೀ ಬಿರುದು ಮಾತ್ರ ಎಂದು ಹೇಳಿದ್ದು ಯುದ್ಧ ಕಾಂಡದ ವೇಳೆಗೆ ಕವಿಗೆ ಮರೆತಿದೆ ಅಥವಾ ನೆನಪಿದೆ. ಆದರೆ, ಈ ಹತ್ತು ತಲೆ ಕತ್ತರಿಸಿ ಬೀಳುವ ವೈದಿಕ ಕಥೆಯ ದೃಶ್ಯ ವೈಭವವನ್ನು ಬಿಡುವ ಮನಸ್ಸಿಲ್ಲ. ಅದು ಹಾಗೇ ಉಳಿದಿದೆ. ಕೊನೆಗೆ… ರಾವಣ ಬಿಟ್ಟ ಶಸ್ತ್ರಾಸ್ತ್ರವು ರಾಮನ ಎದೆಗೆ ಚುಚ್ಚಿ ಅವನು ಸತ್ತ. ಅವನು ಬಿಟ್ಟ ಬ್ರಹ್ಮಾಸ್ತ್ರ ರಾವಣನ ಎದೆಗೆ ನಾಟಿತು. ಅದರಲ್ಲಿ ರಾಮನ ಮೂರ್ತಿ ಕಂಡುದರಿಂದ ‘‘ಸೆರೆ ಸಿಸಿಲ್ಕಿದನೋ ವೈರಿ” ಎಂದು ಅದನ್ನೇ ಹಿಡಿದು ರಾವಣ ಹಿಂದಿರುಗಿದ ಮಂಡೋದರಿ ಅದನ್ನು ಹಿಡಿದೆಳೆದಾಗ ರಾವಣನ ಪ್ರಾಣ ಹೋಯಿತು. ಆಗ ಇಲ್ಲಿ ರಾಮನಿಗೆ ಪ್ರಾಣ ಬಂತು. ಇಂಥದೊಂದು ಪ್ರತಿ ನಿರ್ಮಾಣದಿಂದ “ರಾಮನು ರಾವಣನನ್ನು ಕೊಂದನು” ಎಂಬ ಪ್ರಾಥಮಿಕ ಪಾಠಕ್ಕೇ ತಿದ್ದುಪಡಿ ತರುವ ಕುವೆಂಪು ವಿಶ್ವಧರ್ಮದ ಸಂದೇಶವನ್ನು ಹೀಗೆ ಸಾರಿದ್ದಾರೆ. ರಾವಣ ಸತ್ತ ಮರುದಿನ ರಾಮ ಎಲ್ಲ ಕಡೆಯಲ್ಲೂ ಒಟ್ಟಿಗೆ ಇದ್ದ ಎನ್ನುವುದರ ಅರ್ಥವೂ ಇದೇ ಆಗಿದೆ. ರಾವಣ ಸತ್ತಾಗ ಮಂಡೋದರಿಯೂ ಸಾಯುತ್ತಾಳೆ. (ಅಲ್ಲಿ ತಾರೆ ಸತ್ತಂತೆ) ಈ ಮೊದಲು ಇಂದ್ರಜಿತುವಿನ ಜೊತೆ ಸಾಯ ಹೊರಟಿದ್ದ ಸೊಸೆಯನ್ನು ರಾವಣ ತಡೆದಿದ್ದ. ಅವಳ ಮಗ ವಜ್ರಾರಿಗೇ ವಿಭೀಷಣ ಪಟ್ಟ ಕಟ್ಟುತ್ತಾನೆ.

ಸೀತೆಯ ಅಗ್ನಿ ಪರೀಕ್ಷೆ ವಾಲ್ಮೀಕಿ ರಾಮಾಯಣದ ಮಹತ್ವದ ಘಟ್ಟ ತುಂಬಾ ಚರ್ಚಿತ ಘಟ್ಟ ಎಂತಹ ರಾಮ ಭಕ್ತರೂ ರಾಮನ್ನು ಸಮರ್ಥಿಸಲಾಗದ ಘಟ್ಟ ಅದು ಇಂದಿನ ಯುಗ ಧರ್ಮದಿಂದ ನೋಡುವವರಿಗೆ. ಇಡೀ ಕಾವ್ಯವನ್ನೇ ಯುಗಧರ್ಮಕ್ಕೆ ಬಾಗಿಸುವ ಕುವೆಂಪು ಅದನ್ನು ಚಿತ್ರಿಸಿರುವುದು ಹೀಗೆ. ಶಿವ ಪಾರ್ವತಿಯರ ಸಂಭಾಷಣೆಯಿಂದ ಈ ದೃಶ್ಯ ಪ್ರಾರಂಭವಾಗುತ್ತದೆ. ಸೀತೆ ಶುಭ್ರ ಸ್ನಾತಳಾಗಿ ಬಂದುದು ರಾಮನಿಗೆ ತೃಪ್ತಿ. ಅವನ ನಿಂದೆಯಲ್ಲಿ ಈ ಅಂಶವೂ ಇದೆ. ಉಳಿದುದೆಲ್ಲಾ ವಾಲ್ಮೀಕಿಯಂತೆಯೇ. ಸೀತೆಯನ್ನು ಹಿಂಬಾಲಿಸಿ ತಾನೂ ಒಯ್ಯನೇ ಅಗ್ನಿ ಪ್ರವೇಶಿಸಿದ್ದು ಮಾತ್ರ ಕುವೆಂಪು ಅವರ ಹೊಸ ಕಲ್ಪನೆ. ಅಪ್ಪಟ ಸ್ತ್ರೀವಾದಿಯಾಗಿ ಕುವೆಂಪು ನಮ್ಮ ಪ್ರಾಚೀನ ಮಹಾಕಾವ್ಯದ ಒಂದು ಕಳಂಕಿತ ಚಿತ್ರಕ್ಕೆ ಕೊಡುವ ಹೊಸ ಬಣ್ಣ ! ಅದಕ್ಕಾಗೇ ಅನಲೆಯ ಬಾಯಲ್ಲಿ ಹೇಳಿಸುತ್ತಾರೆ. ಅಗ್ನಿಯನ್ನು ದಿವ್ಯವೆಂದೇ ಇಟ್ಟುಕೊಂಡರೂ ಅದು ಸೀತೆಗೆ ಬೇಕಿದ್ದರೆ ರಾಮನಿಗೂ ಬೇಕು ಎಂದು.

ಕತೆ ಅಯೋಧ್ಯೆಗೆ ಮರಳುತ್ತದೆ. ಅವಧಿ ಮೀರಿತೆಂದು ಅಗ್ನಿಪ್ರವೇಶ ಮಾಡಹೊರಟ ಭರತನನ್ನು ಮಂಥರೆಯ ಆತ್ಮ ತಡೆಯುತ್ತದೆ. ಸ್ನಾನ ಮಾಡಿ ರಾಮನ ಮುಂದೆ ಹೋಗಬೇಡ ಹಾಗೆಯೇ ಮಲಿನಳಾಗಿ ಹೋಗು. ನಿನ್ನ ತಪಸ್ಸು ಅವನಿಗೆ ತಿಳಿಯಲಿ ಎಂದ ಮಾಂಡವಿಗೆ ಊರ್ಮಿಳೆ,

ಚಿಃ ಕಡಲ್ಗಿದಿರ್‌ ಪನಿಗೇಂ ಪ್ರದರ್ಶನಂ
…ತನ್ನ ತಾನ್‌ ಇಲ್ಲಗೈವುದೇ ಎಲ್ಲ ಸಾಧನೆಗೆ ಕೊನೆಯ ಗುರಿ.

ಎನ್ನುತ್ತಾಳೆ ಇಂತಹ ಅಪೂರ್ವ ಮಾತುಗಳ ಸೂರೆಯಾಗಿದೆ ಕಾವ್ಯದುದ್ದಕ್ಕೂ.

ಉದಾ:

ಶುದ್ಧಿ ಮೇಣ್‌ ಶ್ರದ್ಧೆಯಿರೆ ತುದಿಗೆ ತಪ್ಪದು ಸಿದ್ಧಿ ಸಾಧನೆಗೆ
ಪಾಪಿಗುಂ ಉದ್ಧಾರಮಿಹುದೌ ಸೃಷ್ಟಿಯ ಮಹತ್‌ ವ್ಯೂಹ ರಚನೆಯಲಿ
ಶಿವ ಕೃಪೆಗೆ ತೃಣಮೆ ಖಡ್ಗಂ ಪನಿ ಕಡಲ್ ಕಿಡಿಸಿಡಿಲ್
ಕಿರು ಮೀನ್‌ಗೆ ಕೆರೆ ಕೊಳಂ ಕೊಳೆ ಸಾಲ್ಕುಂ
ಆ ಮಹಾ ತಿಮಿಂಗಿಲಕೆ ಬೇಕು ಮಹಾ ಸಾಗರ ಸಲಿಲ ವಿಸ್ತಾರಂ…

“ಅಭಿಷೇಕ ವಿರಾಟ್‌ ದರ್ಶನ”ವು ರಾಮನ ಪಟ್ಟಾಭಿಷೇಕವನ್ನು ವರ್ಣಿಸುವುದಿಲ್ಲ. ಉತ್ತರಾಖಂಡದ ಕತೆಯಿಲ್ಲ ಎಂದು ಹೇಳುವುದೂ ಇದರ ಉದ್ದೇಶವಲ್ಲ. ಈ ಒಂದು ಭಾಗವೇ ಸಾಕು ಈ ಕಾವ್ಯವನ್ನು ‘ದರ್ಶನ’ವಾಗಿಸಲು.

ಇತಿಹಾಸಮಲ್ತು ಬರಿ ಕಥೆಯಲ್ತು ಕಥೆ ತಾಂ
ನಿಮಿತ್ತ ಮಾತ್ರಂ ಆತ್ಮಕೆ ಶರೀರ ದೋಲಂತೆ ಮೆಯ್ವೆ
ತ್ತುದಿಲ್ಲಿ ರಾಮನ ಕಥೆಯ ಪಂಜರದಿ ರಾಮ ರೂಪದ
ಪರಾತ್ಪರ ಪುರುಷೋತ್ತಮನ ಲೋಕ ಲೀಲಾದರ್ಶನಂ

ಆಗ ಕಾಣಿಸಿಕೊಂಡ ಮಹಾಪುರುಷನು ಅನಾದಿ ಕವಿ ನಾಂ ಕಣಾ ವಾಲ್ಮೀಕಿ ವ್ಯಾಸ ಹೋಮರ್‌ ಡಾಂಟೆ, ಫಿರ್ದೂಸಿ ಮಿಲ್ಟನ್‌ ಮಹಾ ಕವೀಶ್ವರರೆನಗೆ ಬಾಹುಗಳ್ತೆ. ಬಹುನಾಮ ರೂಗಳು, ಬಹುಕಲಾ ದೇಶಗಳು ನನಗೆ. ನೀನುಂ ನಾನೆಯೇ ಕುವೆಂಪು.

ಆ ದಿವ್ಯ ಪುರುಷ ಕವಿಯನ್ನು ಪ್ರಾಣಮಯ ಮನೋಮಯ ಇತ್ಯಾದಿ ಲೋಕಗಳಲ್ಲಿ ತಿರುಗಿಸಿ ಕರೆತರುತ್ತಾನೆ.

ಮಾನವನ ಕಿವಿಯಾಲಿಸಲ್ಕರಿಯದೀ ಸೃಷ್ಟಿ ಗಾಥೆಯಂ
ನಿತ್ಯ ರಾಮಾಯಣದ ರಾಮಂಗೆ ನಿಚ್ಚಮುಂ ನಡೆವ
ಪಟ್ಟಾಭಿಷೇಕೋತ್ಸವಂ ಎಂದು ಹೇಳುತ್ತಾ ಕೊನೆಗೆ
ರಾಮಂಗೆ ಮೊದಲಲ್ತೆ ರಾಮಾಯಣಂ
ಮುನ್ನಲ್ತೆ ಪಿರಿದಲ್ತೆ ಮೈಯ್ಯಲ್ತೆ
ಮನೆಯಲ್ತೆ ರಾಮಾಯಣಂ
ರಾಮನಾಮದ ಮಹಿಮೆ ರಾಮಂಗೆ ಮಿಗಿಲೆಂಬ

ವೋಲ್‌ ರಾಮಾವತಾರಕಿಂ ಗುರುತರಂ ತಾನೈಸೆ ರಾಮಾಯಣಾವತಾರಂ ಎಂದು ಹೇಳುವ ಮಾತುಗಳು ಎಲ್ಲ ರಾಮಾಯಣಗಳಿಗೆ ಅನ್ವಯಿಸಿಯೋ ಅಥವಾ ತಮ್ಮ ಕಾವ್ಯಕ್ಕೆ ಅನ್ವಯಿಸಿಯೋ ಎಂಬುದನ್ನು ಸ್ಪಷ್ಟಪಡಿಸದೇ ಬಿಟ್ಟಿದ್ದಾರೆ.

ಇದುವರೆಗೆ ಶ್ರೀ ರಾಮಾಯಣದರ್ಶನಂ ಬಗ್ಗೆ ಲೆಕ್ಕವಿಲ್ಲದಷ್ಟು ವಿಮರ್ಶಾ ಲೇಖನಗಳು ಪ್ರಕಟವಾಗಿದ್ದು, ಅವು ಮುಖ್ಯವಾಗಿ ಕಾವಯದ ಮಂಥರೆ, ಊರ್ಮಿಳೆ, ಮಂಡೋದರಿ, ಕೈಕೆ, ಸುಮಿತ್ರೆ, ರಾವಣ, ರಾಮ, ಲಕ್ಷ್ಮಣ, ದಶರಥ, ಭರತ, ಅನಲೆ, ತಾರೆ ಇತ್ಯಾದಿ ಪಾತ್ರಗಳ ಬಗ್ಗೆಯೂ ಕಾವ್ಯದಲ್ಲಿ ಕಂಡುಬರುವ ಧರ್ಮ, ಯುಗಧರ್ಮ, ರಾಜಧರ್ಮ, ನೀತಿ, ಅನೀತಿ, ವಿಜ್ಞಾನ, ಸಮಕಾಲೀನತೆ ಇತ್ಯಾದಿಗಳ ಬಗ್ಗೆಯೂ ಆಗಿವೆ ಮತ್ತು ತಮಿಳು, ತೆಲುಗು, ಹಿಂದಿ ರಾಮಾಯಣಗಳಿಗೆ ಹೋಲಿಸಿ ನಡೆಸಿದ ತೌಲನಿಕ ಅಧ್ಯಯನಗಳೂ ಇವೆ. ಈ ಗ್ರಂಥ, ಲೇಖನಗಳಲ್ಲದೇ ಎರಡು ಅಭಿನಂದನ ಗ್ರಂಥಗಳಲ್ಲಿ ಕುವೆಂಪು ಹುಟ್ಟಿದ ಬೆಳೆದ ಊರು, ಕೇರಿ, ಕಾಲೇಜುಗಳ ಬಗ್ಗೆ ಅವರ ಎಲ್ಲಾ ನಾಟಕಗಳು, ಕವನ ಸಂಕಲನಗಳು, ಪ್ರಬಂಧಗಳು, ಖಂಡಕಾವ್ಯ ಈ ಎಲ್ಲದರ ಬಗ್ಗೆಯೂ ವಿವರವಾದ ವಿಮರ್ಶೆಗಳೂ ಬಂದಿವೆ. ಒಂದೊಂದು ವಿಷಯದ ಬಗ್ಗೆ ಐದು ಆರು ಪುಸ್ತಕಗಳೂ ಪ್ರಕವಾಗಿರುವುದುಂಟು. ಅವರ ಆತ್ಮ ಚರಿತ್ರೆಯೂ ಪ್ರಕಟವಾಗಿದೆ.

ಈ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ಕೇವಲ ಪಠ್ಯಕೇಂದ್ರಿತ ವಿಮರ್ಶೆಯಾಗಿಸಲು ಪ್ರಯತ್ನಿಸಿರುವೆ. ಈ ಕಾವ್ಯದ ಮಹತ್ವವನ್ನು ಒಂದು ಮಾತಿನಲ್ಲಿ ಹೇಳುವುದು ಸಾಧ್ಯವಿಲ್ಲವಾದರೂ “ದರ್ಶನ ವೈವಿಧ್ಯವೇ ಯುಗಧರ್ಮವಾಗಿರುವ ೨೦ನೇ ಶತಮಾನವನ್ನು ಯಾವ ಒಂದು ಕೃತಿಯೂ ಸಂಪೂರ್ಣವಾಗಿ ಪ್ರತಿನಿಧಿಸುವುದ ಅಸಾಧ್ಯ ಎಂಬ ಮಾತನ್ನು ಒಪ್ಪಿಕೊಂಡರೂ ಭಾರತೀಯ ಸಂಸ್ಕೃತಿಯ ಮೂಲಗಳಲ್ಲೊಂದಾದ ರಾಮಾಯಣದ ಕತೆಯಲ್ಲಿ ತನ್ನ ಸಮನ್ವಯ ದೃಷ್ಟಿಯ ಮೂಲಕ ಹೊಸ ಚೈತನ್ಯವನ್ನು ತುಂಬಲೆತ್ನಿಸುವ ಮೂಲಕ ಸಾರ್ಥಕವಾದ ಕೃತಿ ಇದು” [8] ಎಂಬ ಪ್ರಾತಿನಿಧಿಕ ವಿಮರ್ಶೆಯ ಮಾತಿನಲ್ಲಿ ಬಹುಶಃ ಈ ಕಾವ್ಯಕ್ಕೆ ನ್ಯಾಯ ಸಂದಿವೆ ಎನ್ನಬಹುದು.

ಅನುಬಂಧ

“ಶ್ರೀ ರಾಮಾಯಣ ದರ್ಶನಂ” ಕುರಿತು ಇದುವರೆಗೆ ಪ್ರಕಟ ಆಗಿರುವ ಮಿಮರ್ಶಾ ಗ್ರಂಥಗಳು ಕಾಲಕ್ರಮದಲ್ಲಿ

೧. ತಪೋನಂದನ-ಕುವೆಂಪು, ಉದಯರವಿ ಪ್ರಕಾಶನ, ೧೯೫೦.

೨. ಕುವೆಂಪು ಸಂದರ್ಶನ-ಕೋ. ಚೆನ್ನಬಸಪ್ಪ ಸಜೀವ ಸಾಹಿತ್ಯ ಮಾಲೆ, ಬಳ್ಳಾರಿ, ೧೯೫೨.

೩. ಶ್ರೀ ರಾಮಾಯಣ ದರ್ಶನಂ ಉಪನ್ಯಾಸ ಮಾಲೆ-ಸಂ ದೇ. ಜ. ಗೌ. ಸಾಹಿತ್ಯ ದರ್ಶನ ಮಾಲೆ, ಮೈಸೂರು, ೧೯೫೪.

೪. ಶ್ರೀ ರಾಮಾಯಣ ದರ್ಶನಂ ವಚನ ಚಂದ್ರಿಕೆ-ದೇ. ಜ. ಗೌ. ಸಾಹಿತ್ಯ ದರ್ಶನ ಮಾಲೆ-ಮೈಸೂರು, ೧೯೫೬.

೫. ಉಡುಗೊರೆ-ಸಂ. ಪ. ವಿ. ಚಂದ್ರಶೇಖರ ಮತ್ತು ಜಿ. ಪರಶಿವಮೂರ್ತಿ, ಮಹಾರಾಜ ಕಾಲೇಜು, ಮೈಸೂರು-೧೯೫೬.

೬. ಭಾಷಣಗಳು, ಬಿನ್ನವತ್ತಳೆಗಳು-ಸಂ. ಕೋ. ಚೆನ್ನಬಸಪ್ಪ, ಬಳ್ಳಾರಿ ಸಾಹಿತ್ಯ ಅಕಾಡೆಮಿ, ೧೯೬೬.

೭. ಉಪಾಯನ-ಡಿ. ಎಲ್‌. ಎನ್‌. ಅಭಿನಂದನ ಗ್ರಂಥ ಸಂಭಾವನಾ ಗ್ರಂಥ ಸಮಿತಿ, ೧೯೬೭.

೮. ಶ್ರೀ ರಾಮಾಯಣ ದರ್ಶನಂನಲ್ಲಿ ಕುವೆಂಪು ಸೃಜಿಸಿದ ಮೂರು ಪಾತ್ರಗಳು (ಊರ್ಮಿಳೆ, ಮಂಥರೆ, ರಾವಣ)-ಡಾ. ಶಂಗು ಬಿರಾದಾರ-೨.೨.೧೯೬೭.

೯. ಗಂಗೋತ್ರಿ-ಕುವೆಂಪು ಅಭಿನಂದನಾ ಗ್ರಂಥ-ಗೀತಾ ಬುಕ್‌ ಹೌಸ್‌, ೧೯೬೮.

೧೦. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ-ಕೋ. ಚೆನ್ನಬಸಪ್ಪ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ-೧೯೭೧.

೧೧. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿ ಕೋಟಿ ಜನತಾ ಪುಸ್ತಕಾಲಯ-ತುಮಕೂರು ೧೯೭೧.

೧೨. ಕುವೆಂಪು ಸಾಹಿತ್ಯ ಕೆಲವು ಮುಖಗಳು-ಸಿಪಿಕೆ ಪ್ರಬುದ್ಧ ಪ್ರಕಾಶನ, ಮೈಸೂರು, ೧೯೭೪.

೧೩. ವಿಭೂತಿ ಪೂಜೆ-ಕುವೆಂಪು-ವಿದ್ಯಾವರ್ಧಕ ಟ್ರಸ್ಟ್‌ ಮೈಸೂರು-(ಶ್ರೀ ರಾಮಾಯಣ ದಿವ್ಯ ಶಿಲ್ಪಿ) ೧೯೭೫.

೧೪. ಕುವೆಂಪು ವ್ಯಕ್ತಿತ್ವ ಮತ್ತು ಸಾಹಿತ್ಯ-ಮ. ಶಿವನಂಜಯ್ಯ, ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಮೈಸೂರು, ೧೯೭೫.

೧೫. ಸಹ್ಯಾದ್ರಿ-ಅಭಿನಂದನ ಗ್ರಂಥ-ಸಂ. ದೇಜಗೌ ೭೮ (ಪ್ರಬಂಧಗಳು)೧೯೭೫.

೧೬. ಶ್ರೀ ರಾಮಾಯಣ ದರ್ಶನಂ ತೌಲನಿಕ ಅಧ್ಯಯನ ಡಾ. ಎಚ್‌. ತಿಪ್ಪೇರುದ್ರಸ್ವಾಮಿ – ಕ.ವಿ.ವಿ. (ಕ. ವಿ.ವಿ.ದ ರಜತ ಮಹೋತ್ಸವ ವರ್ಷದಲ್ಲಿ ನೀಡಿದ ವಿಶೇಷ ಉಪನ್ಯಾಸಗಳು) ೧೯೭೬.

೧೭. ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಬರಹಗಾರರ ಪ್ರತಿಕ್ರಿಯೆ ಎಸ್‌. ವೆಂಕಟ ವಿಶ್ವನಾಥ, ವಿಜಯಾ ಪ್ರಕಾಶನ, ಬೆಂಗಳೂರು, ೧೯೭೬.

೧೮. ವಿಮರ್ಶೆಯ ದಾರಿ ಭಾಗ-೧ ಜಿ. ಎಸ್‌. ಎಸ್‌. ಬೆಂ. ವಿ. ವಿ. (ಕುವೆಂಪುರವರ ಮಂಥರೆ) ೧೯೭೮.

೧೯. ಶ್ರೀ ಕುವೆಂಪು-ಜಿ.ಎಸ್‌. ಎಸ್‌. ಬೆಂ. ವಿ.ವಿ., ೧೯೮೦.

೨೦. ಕುವೆಂಪು-ಪ್ರಭುಶಂಕರ –ಪ್ರಸಾರಾಂಗ ಬೆಂ. ವಿ.ವಿ. ೧೯೮೨.

೨೧. ಕುವೆಂಪು ಕಥಾ ಸಾಹಿತ್ಯ-ಭಾಗ೧ ೧೯೮೩, ಭಾಗ೨ ೧೯೮೩, ಭಾಗ೩ ೧೯೮೪. ಸಂ. ಹ. ಕ.-ರಾಜೇಗೌಡ, ಕುವೆಂಪು ಅಧ್ಯಯನ ಕೇಂದ್ರ ಬೆಂಗಳೂರು.

೨೨. ಶ್ರೀ ರಾಮಾಯಣ ದರ್ಶನಂ ಸಿಪಿಕೆ ಮೈ. ವಿ.ವಿ., ೧೯೮೩.

೨೩. ಕನ್ನಡ ಭಾರತಿ –ಸಂ ಎಲ್‌. ಎಸ್‌. ಎಸ್. ಕರ್ನಾಟಕ ಸಾಹಿತ್ಯ ಅಕಾಡೆಮಿ- ೧೯೮೪.

೨೪. ಕುವೆಂಪು ರಾಮಾಯಣ ದರ್ಶನಂ ಗದ್ಯಾನುವಾದ, ರಾಜಶೇಖರಯ್ಯ, ೧೯೮೮.

೨೫. ಅರ್ಥಲೋಕ-ಜಿ. ಎನ್‌. ಅಮೂರ, ೧೯೮೮.

ಶ್ರೀ ರಾಮಾಯಣ ದರ್ಶನಂ ಕುರಿತ ಲೇಖನಗಳು

ಕನ್ನಡ ನುಡಿ ಪತ್ರಿಕೆ

೧. ಕುವೆಂಪುರವರ ರಾಮಾಯಣ ದರ್ಶನಂ; ಲೇ-ಗುಂಡೂರಾವ್‌ ಬಿ; ೧೮ ಜನವರಿ ೧೯೫೫-೯.

೨. ಶ್ರೀ ರಾಮಾಯಣ ದರ್ಶನಂ-ಲೇ-ಚನ್ನಬಸಪ್ಪ –ಕೋ; ೨೮-೧೧ ನವೆಂಬರ್‌ ೧೯೬೫-೬.

೩. ಕುವೆಂಪುರವರ ‘ಚಿತ್ರಾಂಗದಾ’; ಅರಗ. ಸೂ. ವೆಂ; ೨೮-೧೧ನವೆಂಬರ್‌-೧೯೬೫-೧೨.

೪. ಕವಿವರ್ಯ ಕುವೆಂಪು-ಲೇ-ಶಂಕರ ನಾರಾಯಣ; ೨೮-ಜನವರಿ -೧೯೬೫-೧೩.

೫. ಶ್ರೀ ರಾಮಾಯಣ ದರ್ಶನಂನಲ್ಲಿ ಕುವೆಂಪು ಕಾಣ್ಕೆ: ಲೇ-ಶ್ರೀನಿವಾಸರಾವ್‌ ಪೊರವಿ: ೨೮-ನವೆಂಬರ್‌ ೧೯೬೫-೧೮.

೬. ರಾಮಾಯಣ ಸನ್ನಿವೇಶ (ಮಂಥರೆ); ಪುಟ್ಟರಾಮು. ಎ. ಕೆ; ೬-೨೬ ಜುಲೈ ೧೯೪೪-೧೭೩.

೭. ರಾಮನಿರ್ಗಮನ; ಪುಟ್ಟರಾಮು. ಎ. ಕೆ; ೬-೪೩ ಆಗಸ್ಟ್‌ ೧೯೪೪-೨೦೨.

೮. ಶ್ರೀ ರಾಮಾಯಣ ದರ್ಶನಂ ಸನ್ನಿವೇಶ; ಪುಟ್ಟರಾಮು ಎ. ಕೆ; ೭-೧೨- ಜನವರಿ ೧೯೪೪-೫೯.

೯. ಸೀತಾಪಹರಣ; ಪುಟ್ಟರಾಮು ಎ. ಕೆ; ೭-೪೯ ಸೆಪ್ಟೆಂಬರ್‌ -೧೯೪೫-೨೧೭.

೧೦. ಸೀತಾ ವಿರಹ; ಪುಟ್ಟರಾಮು ಎ. ಕೆ; ೮-೭ ಡಿಸೆಂಬರ್‌-೧೯೪೫-೩೫.

ಪ್ರಬುದ್ಧ ಕರ್ನಾಟಕ

೧. ಶ್ರೀರಾಮಾಯಣ ದರ್ಶನಂದಲ್ಲಿ ಮಹಾತಪಸ್ವಿನಿ ಊರ್ಮಿಳಾದೇವಿ; ಲೇ-ಜವರೇಗೌಡ. ದೇ; ೩೫-೪.

೨. ಶ್ರೀ ರಾಮಾಯಣ ದರ್ಶನಂ; ಅಣ್ಣಾರಾಯ ಮಿರ್ಜಿ; ೩೯-೧.

೩. ಶ್ರೀ ರಾಮಾಯಣ ದರ್ಶನಂದಲ್ಲಿ ಧರ್ಮಾಧರ್ಮದ ಪ್ರಶ್ನೆ; ಚೆನ್ನಬಸಪ್ಪ ಕೋ-೪೦-೧.

೪. ಶ್ರೀ ರಾಮಾಯಣ ದರ್ಶನಂದಲ್ಲಿ ಮೈದೋರಿರುವ ಸಾಧಕ ರಾವಣ; ಚೆನ್ನಬಸಪ್ಪ ಕೋ-೩೭೪.

೫. ಶ್ರೀ ರಾಮಾಯಣ ದರ್ಶನಂದಲ್ಲಿ ಶ್ರೀ ರಾಮಾವತಾರ ಸಾರ್ಥಕತೆ; ಚೆನ್ನಸಬಪ್ಪ ಕೋ-೪೨-೨೩.

೬. ಶ್ರೀ ರಾಮಾಯಣ ದರ್ಶನಂದಲ್ಲಿ –ಲೇ-ಇಂದಿರಾದೇವಿ ನರೆಗಲ್ಲ-ಗುಪ್ತ ಸಂತಪ್ತ ಧ್ಯಾನಮಾಲಿನಿ-೪೬-೩.

೭. ಶ್ರೀ ರಾಮಾಯಣದ ದಿವ್ಯ ಶಿಲ್ಪಿ; ಕುವೆಂಪು;೩೨-೩.

೮. ಶ್ರೀ ಕುವೆಂಪು ಸೃಜಿಸಿದ ಮಂಥರೆ; ಲೇ-ಕೆ. ಎಂ. ಕೃಷ್ಣರಾವ್‌; ೩೯-೩.

೯. ಶ್ರೀ ರಾಮಾಯಣ ದರ್ಶನಂದಲ್ಲಿ ಅರವಿಂದ ದರ್ಶನ; ೩೯-೨.

೧೦. ಶ್ರೀ ರಾಮಾವತಾರದ ಸಾರ್ಥಕತೆ –ಶ್ರೀ-ಶ್ರೀ ರಾಮಾಯಣಾವತಾರದಲ್ಲಿ; ೩೬-೨.

೧೧. ಸತ್ಯಸ್ಯ ಸತ್ಯಾಕಥನಂ ಶ್ರೀ ರಾಮಾಯಣ ದರ್ಶನಂ; ೩೯-೪.

೧೨. ಮಹಾತಪಸ್ವಿ ಊರ್ಮಿಳಾ-೩೫-೪.

೧೩. ವಾಲಿ-೩೬-೩.

೧೪. ಶ್ರೀ ರಾಮಾಯಣ ದರ್ಶನಂ ದರ್ಶನಂ ಎರಡು ಸಂಗತಿಗಳು; ಲೇ. ಪ್ರಭುಶಂಕರ; ೫೦-೧.

ಸಹ್ಯಾದ್ರಿ ಲೇಖನಗಳು

೧. ಶ್ರೀ ರಾಮಾಯಣ ದರ್ಶನಂ ಮತ್ತು ತೊರವೆ ರಾಮಾಯಣ- ಎನ್‌. ಬಸವರಾಧ್ಯ.

೨. ಶ್ರೀ ರಾಮಾಯಣ ದರ್ಶನಂ ಮತ್ತು ಕಂಬ ರಾಮಾಯಣ-ಗೊರೂರು.

೩. ಶ್ರೀ ರಾಮಾಯಣ ದರ್ಶನಂ ಮತ್ತು ಜೈನ ರಾಮಾಯಣ.

೪. ಶ್ರೀ ರಾಮಾಯಣ ದರ್ಶನಂ ಮತ್ತು ಮರಾಠಿ ಗೀತ ರಾಮಾಯಣ ಪಾಟೀಲ.

೫.  ಕಲೆಯನಲ್ಲಿದೆ ಶಿಲ್ಪ ಶಿಲೆಯೇನೆಂ- ಕೋ. ಚೆನ್ನಬಸವ.

೬. ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಕುಂಭಕರ್ಣ-ಬಿ.ವಿ.ವೆಂ.

೭. ಶ್ರೀ ರಾಮಾಯಣ ದರ್ಶನಂದಲ್ಲಿ ಸಂಪಾತಿಯ ಚಿತ್ರಣ-ಟಿ. ಎನ್‌. ನಾಗರತ್ನ.

೮. ಶ್ರೀ ರಾಮಾಯಣ ದರ್ಶನಂ ಕಾವ್ಯದ ಹಾಸ್ಯ ಮತ್ತು ವಿಡಂಬನೆ –ವಿಜಯಭಾರತಿ.

೯. ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಮನೋವೈಜ್ಞಾನಿಕ ಹೊಳಹುಗಳು ಆರಣೇಂದ್ರರು.

೧೦. ಶ್ರೀ ರಾಮಾಯಣ ದರ್ಶನಂನಲ್ಲಿನ ಪ್ರಣಯ ದರ್ಶನ-ಶಾಂತಿ ಚಂದ್ರಶೇಖರ ಐತಾಳ್‌.

೧೧. ಶ್ರೀ ರಾಮಾಯಣ ದರ್ಶನಂದಲ್ಲಿ ಕೆಲವು ಗ್ರಾಮೀಣ ಉಪಮೆ ಮಹೋಪಮೆಗಳು-ಡಿ.ಎ. ಶಂಕರ್‌.

೧೨. ಶ್ರೀ ರಾಮಾಯಣ ದರ್ಶನಂನಲ್ಲಿ ವೈಜ್ಞಾನಿಕ ಅಂಶಗಳು ಜಿ. ಟಿ. ನಾರಾಯಣರಾವ್‌.

೧೩. ರಗಳೆ, ಸರಳರಗಳೆ ಮತ್ತು ಮಹಾ ಛಂದಸ್ಸು-ಎಂ.ಚಿದಾನಂದ.

೧೪. ಕುವೆಂಪು ಛಂದಸ್ಸು-ಕೆ. ಶಿವರಾಮ.

೧೫. ಶ್ರೀ ರಾಮಚರಿತ ಮಾನಸ ಮತ್ತು ಶ್ರೀ ರಾಮಾಯಣ ದರ್ಶನಂ-ಪ್ರಧಾನ ಗುರುದತ್‌.

೧೬. ಶ್ರೀ ರಾಮಾಯಣ ದರ್ಶನಂದಲ್ಲಿ ಮಂಡೋದರಿ-ದೇಜಗೌ.

೧೭. ಶ್ರೀ ರಾಮಾಯಣ ದರ್ಶನಂದಲ್ಲಿನ ಸಾಧಕ ರಾವಣ-ಎಚ್‌. ನಂಜೇಗೌಡ.

೧೮. ಮನೆಮನೆಯ ತಪಸ್ವಿನಿಗೆ-ಸಿಪಿಕೆ.

 

[1] ನೋಡಿ-ಅನುಬಂಧ-೩

[2] ವಾಲ್ಮೀಕಿಯ ಭಾಗ್ಯ, ಶೂದ್ರ ತಪಸ್ವಿ ನಾಟಕಗಳಲ್ಲಿ ಉತ್ತರಾಖಂಡದ ಕತೆ ಬಳಸಿಕೊಂಡಿರುವ ಕುವೆಂಪು ಈ ಕಾವ್ಯದಲ್ಲಿ ಉತ್ತರಾಖಂಡದ ಕತೆ ಹೇಳಿಲ್ಲ.

[3] ಅಣ್ಣ ಸತ್ತರೆ ಮೈದುನ ಅತ್ತಿಗೆಯನ್ನು ತಮ್ಮ ಸತ್ತರೆ ಭಾವ ನಾದಿನಿಯನ್ನು ಮದುವೆಯಾಗುವ ಪದ್ಧತಿ ಹಿಂದೆ ಇದ್ದಿದ್ದಿರಬಹುದು. ಅಲ್ಲದೆ ಕಪಿಗಳು ಅವು ಅವುಗಳಲ್ಲೆಂತಹ ಪಾವಿತ್ರ್ಯ ಹಾಗೂ ಮಾನವೀಯತೆಯ ದೃಷ್ಟಿಯಿಂದ ಅದನ್ನು ಒಪ್ಪಬಹುದು. ಆದರೆ, ವಾಲ್ಮೀಕಿ ಒಪ್ಪಿಲ್ಲ. ಕುವೆಂಪು, ಮಾಸ್ತಿ ಕೂಡಾ ಒಪ್ಪುವುದಿಲ್ಲ. ಇಂತಹ ಪಿತೃಪ್ರಧಾನ ಮನೋಭಾವದ ಎದುರು ಇಂದಿನ ಪ್ರಗತಿಪರ ಲೇಖಕಿಯರ ಸೃಷ್ಟಿಯಾದ ಫಣಿಯಮ್ಮ, ಆಂದೋಲನ, ಆಶ್ವಾಸನ (ಬರೆದ ಎಂ. ಕೆ. ಇಂದಿರಾ, ಉಷಾ ನವರತ್ನರಾಂ) ಗಳನ್ನು ಇಟ್ಟು ನೋಡಬೇಕು.

[4] ಪುಟ ೩೭೯-ಶ್ರೀ ರಾಮಾಯಣ ದರ್ಶನಂ-ಕುವೆಂಪು. ಪ್ರ-ಕನ್ನಡ ಅಧ್ಯಯನ ಸಂಸ್ಥೆ ಮೈ. ವಿ.ವಿ.

[5] ಪುಟ ೫೩೫-ಅದೇ –ರನ್ನನ ಗದಾಯುದ್ಧದಲ್ಲಿ ಭೀಮನು ದ್ರೌಪದಿಗೆ ಹೇಳುವ ನೀನಗ್ನಿಪುತ್ರಿ ನಾನಲ ಪುತ್ರ ಎಂಬ ಮಾತನ್ನು ನೆನೆಯಬಹುದು.

[6] ಅದೇ-ಪುಟ ೫೬೯

[7] ಅದೇ-ಪುಟ ೭೭೦

[8] ಡಾ. ಜಿ. ಎಸ್‌. ಆಮೂರ-ಶ್ರೀ ರಾಮಾಯಣ ದರ್ಶನಂ ಪುನರ್ವಿಮರ್ಶೆ ಅರ್ಥಲೋಕ.