ಕನ್ನಡ ವಿಶ್ವವಿದ್ಯಾಲಯವು ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತು ಅಧ್ಯಯನ ನಡೆಸುತ್ತಿರುವ ಒಂದು ಉನ್ನತ ಸಂಸ್ಥೆಯಾಗಿದೆ. ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳವಾದ ಕುಪ್ಪಳಿಯಲ್ಲಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಇಲ್ಲಿಯು ಕುವೆಂಪು ಕನ್ನಡದ ಬಗೆಗಿನ ಸಂಶೋಧನೆಗಳು, ಅಧ್ಯಯನಗಳು ನಡೆಯುತ್ತಿವೆ.

ಕನ್ನಡದ ಮಹತ್ವದ ಕವಿ ಮತ್ತು ಪ್ರಬುದ್ಧ ಚಿಂತಕರಾದ ಕುವೆಂಪುರವರ ಬರಹದ ಬಗ್ಗೆ ಈಗಾಗಲೇ ಅಗಾಧ ಪ್ರಮಾಣದ ವಿಮರ್ಶೆ ಮತ್ತು ವಿಚಾರಗಳು ಪ್ರಕಟವಾಗಿವೆ. ಆದರೆ ಪ್ರತ್ಯೇಕ ದೃಷ್ಟಿಕೋನಗಳ ಮೂಲಕ ಕುವೆಂಪುರವರ ಬರಹಗಳನ್ನು ಇನ್ನಷ್ಟು ಸೂಕ್ಷ್ಮ ವಿಶ್ಲೇಷಣೆಗೆ ಒಳಪಡಿಸುವ ಅಗತ್ಯವಿದೆ ಎಂಬುದು ಕುವೆಂಪು ಅಧ್ಯಯನ ಕೇಂದ್ರದ ಆಶಯ. ಈ ಹಿನ್ನೆಲೆಯಲ್ಲಿ ಕುವೆಂಪು : ಮಹಿಳಾ ಮಂಥನ ಎಂಬ ಮಹತ್ವದ ಕಾರ್ಯಕ್ರಮವೊಂದನ್ನು ಏರ್ಪಡಿಸಲು ತೀರ್ಮಾನಿಸಲಾಯಿತು. ಕರ್ನಾಟಕದ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸೃಜನಶೀಲ ಮಹಿಳೆಯರು ಕುವೆಂಪುರವರ ಸಾಹಿತ್ಯವನ್ನು ಯಾವ ಯಾವ ದೃಷ್ಟಿಕೋನದಿಂದ ನೋಡಬಹುದು ಎಂಬ ಕುತೂಹಲವೇ ಈ ಕಾರ್ಯಕ್ರಮದ ನಿಯೋಜನೆಗೆ ಕಾರಣವೆನ್ನಬಹುದು. ಕನ್ನಡ ಸಾಹಿತ್ಯದ ಚಿಂತನಶೀಲ ಬರಹಗಾರ್ತಿಯರು ಕುವೆಂಪುರವರ ಸಾಹಿತ್ಯವನ್ನು ಹೇಗೆ ಅರ್ಥೈಸುತ್ತಾರೆ ಅಥವಾ ಅವರಿಂದ ಯಾವ ರೀತಿ ಪ್ರೇರಣೆ, ಪ್ರಭಾವಗಳನ್ನು ಪಡೆದಿರಬಹುದು ಹಾಗೂ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕುವೆಂಪುರವರ ಸಾಹಿತ್ಯಕ್ಕೆ ಅವರು ನೀಡುವ ಸ್ಥಾನ ಯಾವುದು ಮುಂತಾದ ವಿಭಿನ್ನ ವಿಶ್ಲೇಷಣೆಯ ಮಂಥನವೇ ಈ ಕಾರ್ಯಕ್ರಮದ ಆಶಯವಾಗಿತ್ತು. ಕುವೆಂಪುರವರ ೧೦೫ನೇ ಜನ್ಮದಿನಾಚರಣೆಯ ಅಂಗವಾಗಿ ದಿನಾಂಕ ೨೭.೧೨.೨೦೦೯ ರಿಂದ ೨೯.೧೨.೨೦೦೯ರ ವರೆಗೆ ಮೂರು ದಿನಗಳ ಕಾಲ ನಡೆದ ಈ ಮಂಥನ ಕಾರ್ಯಕ್ರಮಕ್ಕೆ ಕರ್ನಾಟಕದಾದ್ಯಂತ ಸುಮಾರು ೪೦ ಲೇಖಕಿಯರನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ಸುಮಾರು ೩೪ ಲೇಖಕಿಯರು ಸಕ್ರೀಯವಾಗಿ ಭಾಗವಹಿಸಿದ್ದರು. ತಾವು ಬಯಸುವ ಕುವೆಂಪುರವರ ಬರಹದ ಯಾವುದೇ ಪ್ರಕಾರ ಅಥವಾ ಭಾಗವನ್ನು ಆಯ್ದುಕೊಂಡು ತಮ್ಮ ಅನಿಸಿಕೆ, ವಿಮರ್ಶೆ, ವಿಶ್ಲೇಷಣೆಯನ್ನು ಮಾಡುವ ಸ್ವಾತಂತ್ರ್ಯ ತಮಗೆ ಇರುತ್ತದೆ ಎಂದು ತಿಳಿಸಿದ್ದಲ್ಲದೆ ಹೊಗಳುವ ಅಥವಾ ಗುಣಾತ್ಮಕ ವಿಚಾರವನ್ನಷ್ಟೇ ಹೇಳಬೇಕೆಂಬ ಯಾವುದೇ ಪೂರ್ವಷರತ್ತು ಇರುವುದಿಲ್ಲವೆಂದು ಮೊದಲೇ ಸ್ಪಷ್ಟಪಡಿಸಲಾಗಿತ್ತು. ಒಬ್ಬ ಮಹತ್ವದ ಲೇಖಕನನ್ನು ತೀವ್ರವಾದ ಹಾಗೂ ಗಂಭೀರವಾದ ವಿಶ್ಲೇಷಣೆಗೆ ಒಳಪಡಿಸುವ ಮೂಲಕವೇ ಅರ್ಥಪೂರ್ಣ ಸಂವಾದ ಸಾಧ್ಯ ಎಂಬ ನಂಬಿಕೆಯನ್ನು ಇಟ್ಟುಕೊಂಡೇ ಈ ಮಂಥನ ನಡೆಯಿತೆಂದು ಹೇಳಬಹುದು.

ನಿಸರ್ಗದ ಮಡಿಲು ಕುಪ್ಪಳಿಯಲ್ಲಿರುವ ಕುವೆಂಪುರವರ ಜನ್ಮಶತಮಾನೋತ್ಸವ ಭವನ ‘ಹೇಮಾಂಗಣ’ದಲ್ಲಿ ನಡೆದ ಈ ಮಂಥನದಲ್ಲಿ ಕರ್ನಾಟಕದಾದ್ಯಂತ ಆಗಮಿಸಿದ್ದ ೩೪ ಹಿರಿ-ಕಿರಿಯ ಲೇಖಕಿಯರು ತಮ್ಮ ಟಿಪ್ಪಣಿಗಳನ್ನು ಮಂಡಿಸಿದರು. ಇವರಲ್ಲದೆ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಆಸಕ್ತರು ಮಂಥನದಲ್ಲಿ ಪಾಲ್ಗೊಂಡು ಚರ್ಚೆಯನ್ನು ಬೆಳೆಸಿದರು.

ಈ ಕಾರ್ಯಕ್ರಮಕ್ಕೆ ಕುವೆಂಪುರವರ ನೇರ ಶಿಷ್ಯೆಯರಿಬ್ಬರನ್ನು ಆಹ್ವಾನಿಸಿದ್ದು ಒಂದು ವಿಶೇಷ. ಪ್ರೊ. ಎಸ್‌. ರತ್ನಮ್ಮ ಎಂಬ ಸುಮಾರು ೮೦ ವರ್ಷದ ಬರಹಗಾರ್ತಿ ಈ ಮಂಥನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರೆ, ಮತ್ತೊಬ್ಬ ಶಿಷ್ಯೆ ನಾಡೋಜ ಡಾ. ಕಮಲ ಹಂಪನಾ ಅವರು ಉದ್ಘಾಟನಾ ಭಾಷಣ ಮಾಡಿದರು. ಉಳಿದಂತೆ ಎಲ್ಲ ಲೇಖಕಿಯರು ತಮ್ಮ ಕಾಲಮಾನದ ತಿಳುವಳಿಕೆಯ ಹಿನ್ನೆಲೆಯಲ್ಲಿ ಹೊಸ ಹೊಸ ವಿಚಾರಗಳನ್ನು ಮಂಡಿಸಿದರು. ಆಶ್ಚರ್ಯದ ಸಂಗತಿ ಎಂದರೆ ಶ್ರೀ ರಾಮಾಯಣ ದರ್ಶಣಂ ಹಾಗೂ ನಾಟಕಗಳ ಬಗೆಗೆ ಬಹುತೇಕ ಮಹಿಳೆಯರು ತೀವ್ರಾಸಕ್ತಿಯನ್ನು ತೋರಿದ್ದು ಕುತೂಹಲಕಾರಿಯಾಗಿತ್ತು. ಭಾಗವಹಿಸಿದ್ದ ೩೪ ಬರಹಗಾರ್ತಿಯರಲ್ಲಿ ೨೭ ಜನ ಇದೀಗ ತಮ್ಮ ಟಿಪ್ಪಣಿಗಳನ್ನು ಕಳಿಸಿಕೊಟ್ಟಿದ್ದಾರೆ. ಇಲ್ಲಿ ದಾಖಲಾಗಿರುವ ಅನೇಕ ಬರಹಗಳಲ್ಲಿ ಕುವೆಂಪುರವರು ವಿಶೇಷವಾಗಿ ಮಹಿಳೆಯನ್ನು ಯಾವ ರೀತಿಯಲ್ಲಿ ಗ್ರಹಿಸಿದ್ದಾರೆ ಎಂಬುವುದಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಾಗೆಯೇ ತಾನೊಬ್ಬ ಮಹಿಳೆಯಾಗಿ ಕುವೆಂಪುರವರನ್ನು ಯಾವ ರೀತಿಯಲ್ಲಿ ಅರ್ಥಮಾಡಿಕೊಂಡೆ ಹಾಗೂ ಅವರಿಂದ ಹೇಗೆ ಪ್ರಭಾವಿತಳಾದೆ ಎಂಬ ವಿಚಾರಗಳೂ ಸಾಕಷ್ಟು ಪ್ರಮಾಣದಲ್ಲಿ ದಾಖಲಾಗಿವೆ.

ಒಟ್ಟಾರೆಯಾಗಿ ಈ ಮಂಥನ ಕುವೆಂಪುರವರ ಮಹಿಳಾ ದೃಷ್ಟಿಯನ್ನು ಕುರಿತು ಮಹಿಳೆಯರೇ ಕಟ್ಟಿದ ಅಪೂರ್ವ ಸಂಕಥನ ಎನ್ನಬಹುದು.

ಇಂಥ ಒಂದು ಬಹುಮುಖ್ಯ ಕಾರ್ಯಕ್ರಮಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಗಳಾದ ಅಗ್ರಹಾರ ಕೃಷ್ಣಮೂರ್ತಿ ಸಹಯೋಗ ನೀಡಿದರು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಹಂಪ ನಾಗರಾಜಯ್ಯ ಹಾಗೂ ಸಮಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ಅವರ ಸಹಕಾರ ಮರೆಯುವಂತಿಲ್ಲ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಹಾಗೂ ಕುಲಸಚಿವರಾದ ಡಾ. ಬಿ. ಮಂಜುನಾಥ ಬೇವಿನಕಟ್ಟಿ ಅವರ ಬೆಂಬಲಕ್ಕೆ ಕೃತಜ್ಞತೆಗಳು. ಲೇಖಕಿಯರ ಬೆನ್ನುಬಿದ್ದು ತುಸು ಕಷ್ಟದಿಂದಲೇ ಲೇಖನಗಳನ್ನು ಸಂಗ್ರಹಿಸಿದ ನನ್ನ ಕಿರಿಯ ಮಿತ್ರ ಕುಪ್ಪಳಿಯ ಕುವೆಂಪು ಅಧ್ಯಯನ ಕೇಂದ್ರದ ಸಂಶೋಧನ ಸಹಾಯಕ ಕುಪ್ಪೇರಾವ್‌ ಬಪ್ಪೂರು ಅವರ ಶ್ರಮ ಮೆಚ್ಚುವಂಥದ್ದು. ಈ ಮಂಥನದ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರ ತರುತ್ತಿರುವ ಪ್ರಸಾರಾಂಗದ ನಿರ್ದೇಶಕರಿಗೆ ಹಾಗೂ ಸಹಾಯಕ ನಿರ್ದೇಶಕರಾದ ಮಿತ್ರ. ಬಿ. ಸುಜ್ಞಾನಮೂರ್ತಿಯವರಿಗೆ ನನ್ನ ವಂದನೆಗಳು ಸಲ್ಲುತ್ತವೆ. ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ್ದಲ್ಲದೆ ಸುಂದರವಾಗಿ ಮುದ್ರಿಸಿದ ಯಶಸ್ವಿ ಪ್ರಿಂಟ್‌ ಆಡ್ಸ್‌ನ ಬಿ. ಎಲ್‌. ನರಸಿಂಹಮೂರ್ತಿಯವರಿಗೆ ನನ್ನ ವಂದನೆಗಳು.

ಡಾ. ಹಿ. ಚಿ. ಬೋರಲಿಂಗಯ್ಯ
ಮುಖ್ಯಸ್ಥರು
ಕುವೆಂಪು ಅಧ್ಯಯನ ಕೇಂದ್ರ