ಕುವೆಂಪು ಸಾಹಿತ್ಯ ಜಿಜ್ಞಾಸೆಯ ಗುಣವುಳ್ಳದ್ದು. ಇತ್ತೀಚಿನ ಓದುಗಳಲ್ಲಿ ಕುವೆಂಪು ಮತ್ತೆ ಮತ್ತೆ ನಿರ್ವಚನಗೊಳ್ಳುತ್ತಿರುವುದೂ ಸಹ ಅವರ ಸಾಹಿತ್ಯದ ಜಿಜ್ಞಾಸೆಯ ಗುಣಗಳಿಂದಲೇ ಅನ್ನಿಸುತ್ತದೆ. ಪ್ರತಿಯೊಂದು ಕಾಲಮಾನವೂ ತನ್ನ ಓದನ್ನು ಕಂಡುಕೊಳ್ಳುವ ಬಗೆ ಅನನ್ಯವಾಗಿರುತ್ತದೆ. ಕೃತಿಯೊಂದರಲ್ಲಿ ತನ್ನ ಕಾಲಕ್ಕೆ ಬೇಕಾದ ಚಾರಿತ್ರಿಕ ಜಿಗಿತವನ್ನೂ, ಸಾಂಸ್ಕೃತಿಕ ಒಳನೋಡಗಳನ್ನೂ ನಿರೀಕ್ಷಿಸುತ್ತಿರುತ್ತದೆ. ಕುವೆಂಪು ಸಾಹಿತ್ಯದಲ್ಲಿ ಈ ಓದುಗನ ಸಂವಾದ ಗುಣವು ಎದ್ದು ಕಾಣುವಂತದ್ದು. ಅವರ ಸಾಹಿತ್ಯ ಒಳಗೊಳ್ಳುವ ವೈರುಧ್ಯದ ಅಂಶಗಳು ವಾಗ್ವಾದಗಳನ್ನು ಬೆಳೆಸುವುದಲ್ಲದೆ ಕ್ರಿಯಾಶೀಲವಾದ ಮನೋಭಾವವನ್ನು ಪ್ರೇರೇಪಿಸುತ್ತವೆ. ಆದ ಕಾರಣ ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಹುಟ್ಟಿದ ಕವಿ ಆ ಶತಮಾನದ ಅಂತ್ಯದಲ್ಲಿ ಬಂದ ಬಂಡಾಯ ಚಳವಳಿಗೆ ಪ್ರೇರಕವಾಗಿ ಉಳಿದಿದ್ದು ಗಮನಾರ್ಹ ಸಂಗತಿಯಾಗಿ ತೋರುತ್ತದೆ.

ಹತ್ತು ಹಲವು ಚರಿತ್ರೆಗಳ ಜೊತೆಯಲ್ಲಿ ಏಗಿದವರು ಕುವೆಂಪು. ಅವರಿಗೆ ತಮ್ಮದೇ ಆದ ಚರಿತ್ರೆ ಕಟ್ಟಿಕೊಳ್ಳಬೇಕಾದ ಸವಾಲನ್ನು ಅವರು ಎದುರಿಸುತ್ತಲೇ ಬಂದಿದ್ದಾರೆ. ಶೂದ್ರ ಅಸ್ಮಿತೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಕುವೆಂಪು ಅವರಿಗೆ ರಾಷ್ಟ್ರೀಯತೆಯ ಅಸ್ಮಿತೆ ಭಾವೈಕ್ಯತೆಯನ್ನು ಒತ್ತಾಯಿಸುವಂತದ್ದಾಗಿದೆ. ರಾಷ್ಟ್ರೀಯತೆಯ ಪ್ರಶ್ನೆಯು ಸಾರ್ವಕಾಲಿಕ ಆಸ್ಮಿತೆಯನ್ನು ಕೊಡುವಂತೆ ತೋರುತ್ತಿರುತ್ತವೆ. ಆದರೆ, ವಾಸ್ತವದಲ್ಲಿ ಹತ್ತು ಹಲವು ಆಸ್ಮಿತೆಗಳ ಮೇಲೆ ರಾಷ್ಟ್ರೀಯತೆಯು ನಿರ್ಮಾಣವಾಗುತ್ತದೆ. ಒಂದು ನಿಶ್ಚಿತತೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ಬಹುಸಂಖ್ಯಾತ ಅಲೆಗಳನ್ನಾಧರಿಸಿದ ತೀರ್ಮಾನಗಳು, ನಂಬಿಕೆಗಳು ಬಹುತೇಕ ಅಸ್ಮಿತೆಗಳ ಒಟ್ಟೂ ಸಂವೇದನೆ ಅಭಿಪ್ರಾಯವಾಗಿ ಹೊಮ್ಮಿಸಿರುತ್ತದೆ. ಈ ವೈರುಧ್ಯದ ಒಳಸುಳಿಯಲ್ಲಿ ಕುವೆಂಪು ಸಾಹಿತ್ಯ ರೂಪುಗೊಳ್ಳುತ್ತದೆ. ಚರಿತ್ರೆಗಳ ಮೇಲಾಟದಲ್ಲಿ ಕುವೆಂಪು ಸಾಹಿತ್ಯ ಎರಡೂ ರಾಷ್ಟ್ರೀಯತೆಗಳ ನಡುವಿನ ಸಂದಿಗ್ಧವನ್ನು ಹೊರಗೆಡಹುತ್ತದೆ. ಕುವೆಂಪು ಅವರ ಪ್ರತಿಕ್ರಿಯೆ ಕೆಲವೊಮ್ಮೆ ಪ್ರಜ್ಞಾಪೂರ್ವಕ ಅನ್ನಿಸಿದರೆ ಇನ್ನೊಮ್ಮೆ ಅಪ್ರಜ್ಞಾಪೂರ್ವಕ ಎನ್ನಿಸುತ್ತದೆ. ಅದನ್ನು ಗಮನಿಸದೇ ಮುಂದು ಹೋಗುವಂತೆಯೇ ಇಲ್ಲ.

ರಾಷ್ಟ್ರೀಯತೆಯ ಸಂದರ್ಭದಲ್ಲಿ ನಿರ್ವಸಾಹತೀಕರಣವನ್ನು ಎಲ್ಲ ದೊಡ್ಡ ಲೇಖಕರೂ ಸ್ವಾಗತಿಸಿದಂತೆ ಕುವೆಂಪು ಕೂಡ ಆ ಸಂದರ್ಭಕ್ಕೆ ಪ್ರತಿಕ್ರಿಯಿಸಿದ್ದಾರೆ. ‘ಬಿಡುತೆ ಗುಡಿಯ ಕಟಟುವುದೇ’ ಅವರ ಮುಖ್ಯ ಧ್ಯೇಯವಾಗಿತ್ತು. ಆದರೆ, ಬಿಡುಗಡೆಯ ಪ್ರಶ್ನೆ ಬಂದಾಗ ಮಾತ್ರ ನಿರ್ವಸಾಹತೀಕರಣದ ದಾರಿಗಳು ವಿಭಿನ್ನವಾಗಿರುತ್ತವೆ. ಕುವೆಂಪು ಅವರ ನಿರಂಕುಶತೆಯ ಪ್ರತಿಪಾದನೆಯು ಬಿಡುಗಡೆಯ ದಾರಿಯ ಹುಡುಕಾಟವೇ ಆಗಿದೆ. ಕುವೆಂಪು ಅವರ ಕಾವ್ಯದಲ್ಲಿ ನಿರ್ವಸಾಹತೀಕರಣದ ಆಶಯಗಳು ಹೆಣ್ಣು ಸತ್ವದಲ್ಲಿ ಪ್ರಕಟಗೊಳ್ಳುತ್ತದೆ. ದೇವಿ, ತಾಯಿಯರೆಂಬ ಮಾತೃತ್ವದ ಪರಿಕಲ್ಪನೆಯಲ್ಲಿ ವಿಶಾಲತ್ವವನ್ನು ಗ್ರಹಿಸುವ ಆಶಯ ಒಂದು ಬಗೆಯದಾದರೆ, ಇನ್ನೊಂದು ಸಾಮಾಜಿಕ ನ್ಯಾಯವನ್ನೂ ಸೇರಿದಂತೆ ಒಂದು ಜೀವಪರ ನಿಲುವನ್ನು ಪ್ರತಿಪಾದಿಸುವುದು. ಇವೆರಡರಲ್ಲೂ ಪರ್ಯಾಯಗಳ ಸೂಚನೆ ಇದೆ. ಆದರೆ, ಇಲ್ಲಿ ಸೂಕ್ಷ್ಮವಾಗಿ ಗ್ರಹಿಸಬಹುದಾದ ಸಂಗತಿ ಇದೆ. ಕುವೆಂಪು ಸಂಸ್ಕೃತೀಕರಣದ ಪ್ರಭಾವಕ್ಕೆ ಒಳಗಾಗಿ ದೇವಿಯ ಕಲ್ಪನೆಯನ್ನು ಬೆಳೆಸುವುದು ರಾಷ್ಟ್ರೀಯತೆಯ ಕಲ್ಪನೆಯಲ್ಲಿ. ಶೂತ್ರ ಅಸ್ಮಿತೆಯಲ್ಲಿ ನಿಂತು ನೋಡುವಾಗಿನ ರಾಷ್ಟ್ರೀಯತೆಯ ಕಲ್ಪನೆ ಮೊದಲಿನದಕ್ಕಿಂತ ಭಿನ್ನವಾಗಿ ಆರೋಗ್ಯಪೂರ್ಣ ಸಮತಾವಾದದ ಸರ್ವಸಮಾನತೆಯ ನೆಲೆಗಳನ್ನು ಕಂಡುಕೊಳ್ಳುವ ಯತ್ನ ಮಾಡುತ್ತಾರೆ. ಹೀಗಾಗಿ ಈ ಎರಡರ ಸಂಘರ್ಷ ಅನ್ನಿಸುವ ತತ್ವ ಪ್ರತಿಪಾದನೆಯ ಹೊರಳುಗಳು ಕುವೆಂಪು ಅವರಲ್ಲಿ ಕಾಣುತ್ತವೆ. ಈ ನನ್ನ ಟಿಪ್ಪಣಿಯಲ್ಲಿ ಕುವೆಂಪು ಕಾವ್ಯವು (ಮಹಾಕಾವ್ಯ ಮತ್ತು ಖಂಡ ಕಾವ್ಯಗಳನ್ನು ಹೊರತುಪಡಿಸಿ) ಸ್ತ್ರೀತತ್ವವನ್ನು ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಒಳಗೊಳ್ಳುವ ಬಗೆಯನ್ನು ಗಮನಿಸಿದ್ದೇನೆ.

ಕುವೆಂಪು ಮೂಲತಃ ಬಿಡುಗಡೆಗೆ ಕಾತರಿಸುವ ಕವಿ. ನಿರ್ವಸಾಹತೀಕರಣವೆನ್ನುವುದು ಕುವೆಂಪು ಎದುರಿಸುವ ವಾಸ್ತವವೇ ಆದರೂ ಅವರು ರಾಷ್ಟ್ರೀಯತೆ ಮತ್ತು ಸಾಬಾಲ್ಟ್ರನ್ ಚರಿತ್ರೆ ಎರಡನ್ನೂ ಒಟ್ಟಿಗೆ ನೋಡಬೇಕಾದ ಸಂದರ್ಭದಲ್ಲಿದ್ದಾರೆಂದು ಈಗಾಗಲೇ ಹೇಳಲಾಗಿದೆ. ಸ್ತ್ರೀ ತಾತ್ವಿಕತೆಯ ಸ್ವರೂಪ ಕುವೆಂಪು ಅವರಿಗೆ ನಿರ್ವಚನಗೊಳ್ಳುವುದು ಪರಮಹಂಸ ಮತ್ತು ವಿವೇಕಾನಂದರಿಂದ ಬಂದ ಕಾಳಿಯ ಪರಿಕಲ್ಪನೆಯಿಂದ. ಇವರಿಬ್ಬರ ಪ್ರಭಾವದಿಂದ ಜಗನ್ಮಾತೆ ಅವರ ಮುಖ್ಯ ಪ್ರೇರಣೆಯಾಗಿ ಕಾಣುತ್ತಾಳೆ.

ಬಂಗಾಳದ ಬಹುತೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕಾಣುವ ಸಾಮಾನ್ಯ ಅಂಶವೆಂದರೆ ಕಾಳಿಯ ಕಲ್ಪನೆ. ಆಗಿನ ದೇಶಭಕ್ತರಿಗೆಲ್ಲಾ ಒಂದೊಂದು ದೇವರುಗಳ ಮಿಥ್‌ಗಳನ್ನು ಪುನಃ ರೂಪಿಸಿಕೊಳ್ಳುವ ಪ್ರವೃತ್ತಿ ಇರುವುದು ಕಾಣುತ್ತದೆ. ಅದರ ಉದ್ದೇಶ ಪ್ರಾಥಮಿಕವಾಗಿ ಸ್ವಾತಂತ್ರ್ಯಕ್ಕೆ ಬೇಕಾದ ಸೈದ್ಧಾಂತಿಕ ನೆಲೆಗಟ್ಟನ್ನು ರೂಪಿಸಿಕೊಳ್ಳುವುದಾಗಿತ್ತು. ತಿಲಕರಿಗೆ ಗಣೇಶ ಪೂಜೆ ಸಾರ್ವಜನಿಕಗೊಳಿಸಿಕೊಳ್ಳುವುದಕ್ಕೆ ಅವರದೇ ಆದ ಕಾರಣಗಳಿತ್ತು. ಸಂಘಟನೆ ಮತ್ತು ಭಾವನಾತ್ಮಕತೆ ಸಾಧಿಸುವುದು ತಿಲಕರಿಗೆ ಅಗತ್ಯವಾದ ಅಂಶವಾಗಿತ್ತು. ಗಾಂಧಿಗೆ ರಾಮಾಯಣದ ರಾಮ ತುಳಸೀದಾಸರ ಪ್ರಾರ್ಥನೆ ಮತ್ತು ಶೀಲ ಮತ್ತು ಸಚ್ಚಾರಿತ್ರದ ಸಂಕೇತವಾಗಿ ಕಾಣಿಸಿಕೊಂಡರೆ ಸೇವೆಯ ಮಿಥ್ ಆಗಿ ಭಗವದ್ಗೀತೆಯ ನಿಷ್ಕಾಮ ಕರ್ಮವು ಸ್ಫೂರ್ತಿಯಾಗುತ್ತದೆ. ಬಂಗಾಳದ ಹೋರಾಟಗಾರರಿಗೆ ಮಿಥ್ ಆಗಿ ನಿಂತಿದ್ದು ಕಾಳಿ. ಕಾಳಿಮಾ ಕೇಡನ್ನು ನಾಶ ಮಾಡುವ ಸದ್ಧರ್ಮಕ್ಕೆ ಜಯ ತರುವ ಸಂಕೇತ, ವಸಾಹತುಶಾಹಿ ಎಂಬ ಕೇಡನ್ನು ಎದುರಿಸಬೇಕಾದಾಗ ಇದೊಂದು ಪ್ರಭಾವಶಾಲಿಯಾದ ಮಿಥ್ ಆಯಿತು. ಆಧ್ಯಾತ್ಮಿಕ ತತ್ವದ ವಿಕಾಸ ಕ್ರಮವಾಗಿ ಸ್ವೀಕರಿಸುವ ಕ್ರಮವನ್ನು ಕುವೆಂಪು ಪರಮಹಂಸರ ತತ್ವಬೋಧನೆಗಳಿಂದ ಅರಿತಿರುವ ಸಾಧ್ಯತೆಗಳಿವೆ.

ಆದರೆ ಈ ಕಾಳಿ ಮಿಥ್ ಮೂಲಕ ಇನ್ನೂ ಒಂದು ವ್ಯಾಖ್ಯಾಸ ಸಾಧುವಾಯಿತು. ಹಿಂಸೆಯ ಮೂಲಕ ಕೇಡನ್ನು ನಾಶಗೊಳಿಸಿಕೊಳ್ಳುವ ನಿರ್ವಚನ ಅದು. ದೇಶದಿಂದ ಹೊರಗೆ ಓದುತ್ತಿದ್ದ ಅಥವಾ ಅಲ್ಲಿ ವಾಸವಾಗಿದ್ದ ಅನಿವಾಸಿ ಭಾರತೀಯರಲ್ಲಿ ಕಾಣುತ್ತಿದ್ದ ಸಾಮಾನ್ಯ ಪ್ರವೃತ್ತಿಯೆಂದರೆ ಭೂಗತ ಚಟುವಟಿಕೆಗಳಲ್ಲಿ ತೊಡಗುವುದು, ವಿನಾಶಕಾರಿ ಅಸ್ತ್ರಗಳ ಬಳಕೆ, ಆತ್ಮಾಹುತಿ ಮುಂತಾದವು. ಆ ಕಾಲದ ಸ್ವಾತಂತ್ರ್ಯ ಹೋರಾಟಗಾರರೂ ತತ್ವ ಚಿಂತಕರೂ ಆದ ಅರವಿಂದರ ಕಲ್ಪನೆಯಲ್ಲಿ ಕಾಣಿ ದುರ್ಗಾಭವಾನಿಯಾಗಿ ಶಕ್ತಿಯ ಹಿಂಸಾತ್ಮಕ ಸ್ವರೂಪದಲ್ಲಿರುತ್ತಾಳೆ. ರಾಷ್ಟ್ರೀಯತೆಗೆ ತಮ್ಮನ್ನು ಒಡ್ಡಿಕೊಂಡ ಕುವೆಂಪು ಬಂಗಾಳದ ಕಾಳಿಯ ಪುರಾಣವನ್ನು ನಿರ್ವಚನ ಮಾಡಿಕೊಳ್ಳುವಂತೆ ಕಾಣುತ್ತಾರೆ. ‘ಯಾ ದೇವೀ ಸರ್ವ ಭೂತೇಷು ಬುದ್ಧಿ ರೂಪೇಣ ಸಂಸ್ಥಿತಾ…’ ಈ ಶ್ಲೋಕ ಕುವೆಂಪು ಅವರಿಗೆ ಪ್ರಿಯವಾದುದು. ದೇಶ, ಭಾಷೆ, ಕಾವ್ಯಗಳ ಅಮೂರ್ತ ಮೇಲಿನ ವಿಜಯಶಾಲೀ ಗುಣವನ್ನು ಅವರು ಅರಿವಿನಿಂದಲೇ ಸ್ವೀಕರಿಸುತ್ತಾರೆ. ಅಂತೆಯೇ ವಿರಾಟ್ ಸ್ವರೂಪದ ಕೇಡು ಮತ್ತದನ್ನು ಎದುರಿಸಲು ವಿಲಯ ಸ್ವರೂಪಿಣಿಯಾದ ಸ್ತ್ರೀತ್ವದ ಆಧಿ ಭೌತಿಕ ಶಕ್ತಿಯನ್ನು ತಮ್ಮ ಕಾವ್ಯಲಯದಲ್ಲಿ ಹಿಡಿಯಲೆತ್ನಿಸುತ್ತಾರೆ ಕುವೆಂಪು. ಕಾಳಿ ಮೇಲಿನ ಅವರ ಕವಿತೆಗಳಲ್ಲಿ ಈ ವಿನ್ಯಾಸ ನೇರವಾಗಿ ಕಾಣುವಂತದ್ದು. ಇದಕ್ಕೆ ‘ಕಾಳಿ ಬರುವಳು’ ಕವಿತೆಯ ಸಾಲುಗಳನ್ನು ನೋಡಿ;

ನೋಡು ಬರುತಲಿರುವಳದೋ | ರುದ್ರ ಭದ್ರಕಾಳಿಯು |
ದೇವಿ, ಚಂಡಿ ಚಾಮುಂಡಿ, ರಕ್ತ ರುಂಡಮಾಲಿನಿಯಂ |
ಪ್ರಳಯದಲಿ ದೃಷ್ಟಿಯನು | ಮೇಲೆತ್ತಿ ಬರುವಳು |
ಪ್ರಳಯದಲಿ ದೃಷ್ಟಿಯನು | ಕೆಳಗೊತ್ತಿ ಬರುವಳು |
ವಿಜಯ ರಣೋನ್ಮತೆಯಾಗಿ | ಬರುವಳಾದಿ ಮಾಯೆಯು

ಇದರಂತೆಯೇ ಇರುವ ‘ಭೈರವನಾರಿ’ ಕವನದ ಸಾಲುಗಳಲ್ಲಿಯೂ ರಣಕಾಳಿಯ ಬಣ್ಣನೆ ಇದೆ.

ಕುಣಿಯುವಳಾರೀ ಭರವನಾರಿ | ರಣರಂಗದಲಿ ರೌದ್ರವ ತೋರಿ
ಕಣ್ಣುಗಳಿಂದ ಕಿಡಿಗಳು ಕಾರಿ | ದೆಸೆದೆಸೆಗೆ ಜಡೆಯನು ಬೀರಿ
ಕೆನ್ನಾಲಿಗೆಯಿಂ ರಕ್ತವ ಸೋರಿ |  ಹುಚ್ಚಳವೊಳುನ್ಮತ್ತತೆ ಮೀರಿ
ಕಂಠದೊಳಂಜಿಪ ನರಶಿರಮಾಲೆ | ಕರದಲಿ ರಂಜಿಪ ರೂಕ್ಷಜ್ವಾಲೆ
‘ಸ್ವಾತಂತ್ರ್ಯ ಲಕ್ಷ್ಮಿಗೆ’ಯ ಸಾಲು ‘ದುರ್ಗ ಇವಳು ಲಕ್ಷ್ಮಿಯಲ್ಲ ರುಂಡಮಾಲನಿ |
‘ವಿಪ್ಲವಮೂರ್ತಿ’ಯನ್ನು ಕುವೆಂಪು ಬಣ್ಣಿಸುವುದು ಕಾಳಿಯ ಅಂಶವಾಗಿಯೇ,
‘ಕಾಳಿಯು ನಾನು| ರುದ್ರನು ನಾನು | ಹೆಣ್ಣೊರಲಿಂಚರ ನಾನು | ಕಣ್ಮಿಂಚಾನು,

ನಿರ್ವಸಾಹತೀಕರಣಕ್ಕೆ ಉಗ್ರವಾದ ಹಿಂಸೆಯನ್ನು ಬೆಂಬಲಿಸಿದ ದೇಶಭಕ್ತರ ದನಿಯಲ್ಲೇ ಕುವೆಂಪು ಮಾತನಾಡುವಂತೆ ಕಾಣುತ್ತಾರೆ. ಹಾಗಾದರೆ ಕುವೆಂಪು ಕಾವ್ಯ ರಾಜಕೀಯವಾಗಿ ಉಗ್ರ ಧೋರಣೆಗಳ ಪ್ರತಿಪಾದಕವಾದುದೇನು? ಅಥವಾ ರುಂಡಮಾಲಿನಿಯನ್ನು ನರ್ತಿಸುವ ಅದರ ಉತ್ಸಾಹಕ್ಕೂ ದೇಶ ಸಂಗ್ರಾಮದಲ್ಲಿ ಅಡಗಿರಬಹುದಾದ ಹಿಂಸಾತೃಷೆಗೂ ಏನಾದರೂ ಸಂಬಂಧವಿದ್ದಿರಬಹುದೇ? ಮೆಲ್ಲುಲಿಯ, ನಾದಮಯೀ ಶರೀರೆಯಾದ ಕಾವ್ಯ ಕನ್ನಿಕೆಯನ್ನು ಗುರುತಿಸಿಕೊಳ್ಳುವ ಕುವೆಂಪು ಅವರಲ್ಲೇ ಕೊಳಲು ಭೇರಿಯಾಗಿ, ನಾದವೆನ್ನುವುದು ಢಮಢಮದ ಗಡಚಿಕ್ಕುವ ದನಿಯಾಗಿ ಬದಲಾಗುತ್ತದೆ. ದನಿ ಏರುತ್ತದೆ, ಸ್ಫೂರ್ತಿ ಉಕ್ಕುತ್ತದೆ. ಈ ಬದಲಾವಣೆ ಅಚ್ಚರಿ ಮೂಡಿಸುತ್ತದೆ. ಯಾವುದು ಇದರಲ್ಲಿ ಕುವೆಂಪು ದನಿ?

ಕುವೆಂಪು ಅವರ ವೈಚಾರಿಕ ಆಕೃತಿಗಳು ಗಟ್ಟಿಗೊಳ್ಳುವುದು ಮೇಲ್ಕಾಣಿಸಿದ ಪ್ರಜ್ಞಾಪೂರ್ವಕ ರಚನೆಗಳಲ್ಲಿ ಆತ್ರವೇ ಅಲ್ಲ. ಇಷ್ಟನ್ನು ಮಾತ್ರ ನೋಡಿದರೆ ಒಂದು ಪಾರ್ಶ್ವ ಮಾತ್ರ ಕಂಡಂತೆ. ಅವರ ಕಾವ್ಯದಲ್ಲಿ ಅಂತರ್ಗತವಾದ ದನಿಗಳು ಹಿಂಸೆಯನ್ನು ಬಿಟ್ಟು ಅಹಿಂಸಾವಾದಿಯಾಗಿವೆ. ಪ್ರಜಾಪ್ರಭುತ್ವವಾದೀ ಮೌಲ್ಯಗಳಾದ ಬಹುತ್ವ ಮತ್ತು ಬಹುರೂಪತೆಗಳನ್ನೂ, ಸಮಾನತೆಯ ಆಶಯಗಳನ್ನೂ ಬೆಸೆದುಕೊಂಡು ಸ್ತ್ರೀವಾದೀ ದೃಷ್ಟಿಕೋನದ ಪೂರ್ಣ ಪ್ರಮಾಣದ ಮಾದರಿಯಾಗಿದೆ. ಸಂಸ್ಕೃತೀಕರಣಕ್ಕೆ ಒಳಗಾದ ಕವಿ ಪಡೆದುಕೊಂಡಿರಬಹುದಾದ ಸಾಂಸ್ಕೃತಿಕ ಅಂಶಗಳ ಜೊತೆ ಜೊತೆಗೇ ಪರ್ಯಾಯವಾದೀ ನೆಲೆಳ ಶೋಧವೂ ಇರುವುದು ಅಚ್ಚರಿ ಮೂಡಿಸುತ್ತದೆ. ಅವರ ಕಾವ್ಯವು ವಾಚ್ಯವಾಗಿ ಹೇಳುವುದನ್ನು ಅದರಲ್ಲೇ ಅಂತರ್ಗತವಾಗಿರುವ ಪ್ರತಿಸಂಸ್ಕೃತಿ ನಿರ್ಮಾಣದ ಅಂಶಗಳು ನಮ್ಮನ್ನು ವಾಗ್ವಾದಕ್ಕೊಯ್ಯುತ್ತವೆ.

ಭಾರತೀಯ ಸಾಹಿತ್ಯವನ್ನು ಅಭ್ಯಾಸ ಮಾಡುತ್ತಿರುವ ವಿಮರ್ಶಕ ಕೆ.ಸಚ್ಚಿದಾನಂದನ್ ಅವರು ಮಹಿಳಾ ಬರವಣಿಗೆ ಕುರಿತ ತಮ್ಮ ಲೇಖನದಲ್ಲಿ ಕೆಲವು ಮುಖ್ಯ ಅಂಶಗಳನ್ನು ಚರ್ಚಿಸುತ್ತಾರೆ. ಅವರ ಪ್ರಕಾರ ಹೆಣ್ಣಿನ ಬರಹ ಮತ್ತು ಹೆಣ್ಣು ದೃಷ್ಟಿಕೋನ ಎನ್ನುವುದು ಬಹುಮಟ್ಟಿಗೆ ಸಾಮಾಜಿಕ ನ್ಯಾಯಕ್ಕೆ ಸಂವಾದಿಯಾಗಿದೆ. ಅದರ ರೂಪಗಳು ನಾನಾ ರೂಪದಲ್ಲಿರಬಹುದು. ದಲಿತರು ಮತ್ತು ಬುಡಕಟ್ಟಿನವರು ಜಾತಿ ಶ್ರೇಣೀಕರಣದ ವಿರುದ್ಧ ಇರುವಂತೆ, ಅಂಚಿಗೆ ತಳ್ಳಲ್ಪಟ್ಟ ಅಲ್ಪಸಂಖ್ಯಾತರು, ನಿರ್ಲಕ್ಷಕ್ಕೊಳಗಾದ ಪ್ರದೇಶಗಳು, ಅಳಿವಿನಂಚಿನಲ್ಲಿರುವ ಭಾಷೆಗಳು ಅನ್ಯಾಯದ ವಿರುದ್ಧ ಇರುವಂತೆ, ಒಂಚು ವಿಮರ್ಶಾತ್ಮಕ ಅಕಾಡೆಮಿಕ್ಸ್ ಜ್ಞಾನದ ಗುಲಾಮಗಿರಿಯ ವಿರುದ್ಧ ಇರುವಂತೆ ಹೆಣ್ಣಿನ ದೃಷ್ಟಿಕೋನ ವಿಶಾಲಾರ್ಥದಲ್ಲಿ ಪ್ರಜ್ಞಾಪ್ರಭುತ್ವವಾದೀ ಬಹುತ್ವ, ಸೃಜನಾತ್ಮಕ ಭಿನ್ನತೆ, ಆರೋಗ್ಯಕರ ಪರಿಸರ, ಸಾಂಸ್ಕೃತಿಕ ಬಹುತ್ವ, ಅಹಿಂಸೆಯ ಅರಿವು, ಶಾಂತಿಯ ತಿಳುವಳಿಕೆ, ಜಾತಿ, ಲಿಂಗ, ವರ್ಗ, ಜನಾಂಗ ಭೇದಗಳನ್ನು ದಾಟಿ ಬಿಡುಗಡೆಗೆ ಯತ್ನಿಸುವ ಪರಿ ಎಲ್ಲವೂ ಆಗಿದೆ. ‘ಪಿತೃ ಪ್ರಧಾನತೆ’ ಎನ್ನುವ ಅಧಿಕಾರ ಕೇಂದ್ರ ಸಾರ್ವತ್ರಿಕವಾದುದು. ಅದು ಎಲ್ಲ ಅಧಿಕಾರಗಳಿಗೆ ಅನ್ವಯಿಕ ಎನ್ನಿಸುತ್ತದೆ. ಹೀಗಾಗಿ ಸ್ತ್ರೀದೃಷ್ಟಿ ಕೋನದಲ್ಲಿ ಓದುವ ಪಠ್ಯಗಳು ನಿರಚನೆ ಮಾಡಿಕೊಳ್ಳಬೇಕಾದುದು ವೈಧಾನಿಕವಾಗಿ ಸಮಾಜದ ಅಧಿಕಾರ ಕೇಂದ್ರಗಳ ಪಾತ್ರ ಮತ್ತು ಅವುಗಳೊಳಗಿನ ವೈರುದ್ಯದ ನೆಲೆಗಳನ್ನು ಬೆಳೆಸಬೇಕಾಗುತ್ತದೆ. ಈ ಕ್ರಮ ಅದನ್ನು ಕೃತಿಯಿಂದ ಜಗತ್ತಿಗೆ ಜಿಗಿಯುವಂತೆ ಮಾಡುತ್ತದೆ. ಹಾಗೆ ಜಿಗಿಯುತ್ತಾ ಚಾರಿತ್ರಿಕ ಮತ್ತು ಸಮಕಾಲೀನ ವಾಸ್ತವವನ್ನು ಸೂಚಿಸುವಂತಿರುತ್ತದೆ. ಇದಕ್ಕೂ ಮೇಲ್ಪಟ್ಟು ಭಾಷಿಕವಾಗಿಯೂ ಬಹುತ್ವದ ಧ್ವನಿಗಳನ್ನು ಕೇಳಿಸುವಂತಿರುತ್ತದೆ. ಅದು ಬಹಳ ಮುಖ್ಯ.

ಕುವೆಂಪು ಅವರಲ್ಲಿ ಈ ದೃಷ್ಟಿಯಿಂದ ನೋಡಿದರೆ ಹೆಣ್ತನದ ದೃಷ್ಟಿ ಧೋರಣೆಗಳೇ ಪ್ರಧಾನವಾಗಿ ಕಾಣುವುದಿಲ್ಲವೆ? ಅವರ ಲಕ್ಷ್ಯ ಪರ್ಯಾಯ ನೆಲೆಗಳನ್ನು ಕಂಡುಕೊಳ್ಳುವತ್ತ ಇದೆ. ಸಂಸ್ಕೃತೀಕರಣದ ಪ್ರಭಾವಗಳಿಂದ ಕುವೆಂಪು ಕಂಡುಕೊಳ್ಳುವ ಕಾಳಿ ತತ್ವವು ಸ್ತ್ರೀತ್ವದ ತತ್ವವನ್ನು ಸಾಂಪ್ರದಾಯಿಕ ನೆಲೆಗಳಲ್ಲೇ ಬಹುಮಟ್ಟಿಗೆ ನಿರ್ವಚನಗೊಳಿಸಿಕೊಳ್ಳುತ್ತದೆ. ಸ್ತ್ರೀತ್ವ ಎನ್ನುವುದು ‘ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆ’ಯ ಪರಿಕಲ್ಪನೆಯಲ್ಲಿ ಬರುತ್ತದೆಯಲ್ಲದೆ, ಇಲ್ಲಿ ಹೆಣ್ಣು ಶಕ್ತಿ ದೇವತಾ ಸ್ವರೂಪ, ವೈದಿಕ ಮಾತೃತ್ವದ ವ್ಯಾಖ್ಯಾನ ರೂಪವಾಗುತ್ತದೆ. ಡಾ. ಬಿ.ಎನ್. ಸುಮಿತ್ರಾಬಾಯಿಯವರು ತಮ್ಮ ‘ಕುವೆಂಪು ಕಾದಂಬರಿಯಲ್ಲಿ ಸ್ತ್ರೀತ್ವದ ಪ್ರತೀಕಗಳು’ ಎನ್ನುವ ಲೇಖನದಲ್ಲಿ ಚರ್ಚಿಸುವಂತೆ, ಕುವೆಂಪು ಓರಿಯೆಂಟಲಿಸ್ಟ್‌ಗಳಿಂದ ಪ್ರಭಾವಿತರಾಗಿ ಸಹಧರ್ಮಿಣಿ ಕುಟುಂಬಿನಿ ಮಾದರಿಯನ್ನು ಸೃಷ್ಟಿಸುತ್ತಾರೆ. “…. ಈ ಮಾತೃ ಪ್ರತೀಕಗಳ ಸಹಧರ್ಮಿಣಿಯರ, ಕುಟುಂಬಿನಿಯರ ಸತ್ವವನ್ನು ಜಗತ್ತಿನ ಮೂಲವಾದ ರಕ್ಷಕ ಶಿಕ್ಷಕ ಶಕ್ತಿರೂಪಿಣಿಯ ಅಂಶವಾಗಿ ಗ್ರಹಿಸುವ ವಿಚಾರಧಾರೆ, ಬೇಂದ್ರೆಯವರಂತೆ ಕುವೆಂಪು ಅವರಿಗೂ ಆಪ್ರವಾದುದು. (ಕುವೆಂಪು ಕೃತಿ ವಿಮರ್ಶೆ, ಪು ೬೦೧) ನಿಜ, ಅವರಲ್ಲಿ ಇವು ಉನ್ನತೀಕರಣದ ಭಾವಗಳು ಮತ್ತು ಬಿಡುಗಡೆಯ ಮಾರ್ಗಗಳು ಎನ್ನುವುದನ್ನು ನಿರಾಕರಿಸುವಂತಿಲ್ಲ. ಆದರೆ, ಇವನ್ನು ಕುವೆಂಪು ಅವರ ಪ್ರಜ್ಞಾಪೂರ್ವಕ ಆಕೃತಿಗಳು ಎನ್ನುಬಹುದು. ಕುವೆಂಪು ಅವರ ಅಭಿವ್ಯಕ್ತಿಗಳಲ್ಲಿ ಇವಕ್ಕೆ ಪರ್ಯಾಯವಾದ ಹಲವು ಬಿಡುಗಡೆಗಳ ದಾರಿಗಳು ಕಾಣುತ್ತವೆ. ಅವರು ಉತ್ಸಾಹದಿಂದ ಸ್ವಾತಂತ್ರ್ಯದ ಮಹಾಘಟನೆಗೆ ಪ್ರತಿಕ್ರಿಯಿಸುವುದು ನಿಜವಾದ ಅನೇಕತ್ವದ ನೆಲೆಯಿಂದಲೆ ಅನ್ನಿಸುತ್ತದೆ.

ಕುವೆಂಪು ಅನ್ಯಾಯದ ವಿರುದ್ಧ ದನಿಯತ್ತುವುದು, ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಮೂಲಕ. ಅದನ್ನು ‘ಸ್ಥಾಪಿತ’ ಮಟ್ಟದಿಂದ ಕೆಳಗಿಳಿಸಿ ನೋಡುವುದು ಅವರ ರೀತಿ. ಅಧಿಕಾರಗಳನ್ನು ಅನುಮಾನಿಸುವುದನ್ನು ಕುವೆಂಪು ಕಲಿಸುವುದಲ್ಲದೆ, ಅದಕ್ಕೆ ಪ್ರತಿಯಾದ ನಿರಂಕುಶತೆಯನ್ನು ಮುಂದೊಡ್ಡುತ್ತಾರೆ. ಚಾರಿತ್ರಿಕವಾಗಿ ಘಟಿಸುವ ಪ್ರತಿಯೊಂದು ರಾಜಕೀಯ ತೀರ್ಮಾನಗಳನ್ನೂ, ನಿಲುವುಗಳನ್ನೂ ಕುವೆಂಪು ಕಾವ್ಯ ಅಡ್ಡ ಹಾಕುತ್ತದೆ, ಅವನ್ನು ಪ್ರಶ್ನಿಸುತ್ತವೆ. ಜೊತೆಗೆ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಸರ್ವೋದಯದ ವಿಕಾಸವನ್ನು ಕಂಡುಕೊಳ್ಳುತ್ತದೆ.

‘ಸಾಕು ಈ ಬಲಾತ್ಕಾರ ಸಾಲು’ ಕವಿತೆಯ ಸಾಲು ಹೀಗಿದೆ- ‘ಬಲಾತ್ಕಾರಕ್ಕಾಗಿ ಮಾತ್ರವೆ ಹೊರತು ಈ ರೋಷ/ ಭಾಷೆಗಾಗಿಯೆ ನಮ್ಮ ದ್ವೇಷವೇನಿಲ್ಲ. ೩.೧೦.೧೯೬೦ರಲ್ಲಿ ನೆಹರೂ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದನ್ನು ಆಕಾಣವಾಣಿಯಲ್ಲಿ ಕೇಳಿದ ಕುವೆಂಪು ಪ್ರತಿಕ್ರಿಯೆ ಒಂದು ಕವಿತೆಯಲ್ಲಿ ವ್ಯಕ್ತವಾಗುತ್ತದೆ;

ಸ್ವಾತಂತ್ರ್ಯ, ಐಕ್ಯತೆ, ಸರ್ವೋದಯ ಸಮನ್ವಯ!
ಸತ್ಯ, ಅಹಿಂಸಾ, ಸ್ನೇಹ ದಯಾ ಇತ್ಯಾದಿ ಮೊಳಗಿತ್ತು
ಇಲ್ಲಿಯೋ ನಾಚಿಗೆಗೇಡು!
ದಸರಾ ದರ್ಬಾರ್!
ಬಗ್ಗು ಸೊಂಟ, ಡೊಗ್ಗು ಸುಲಾಮು!
ಗುಲಾಮಿಗೂ ಚಿನ್ನದ ಮುಲಾಮು!
ಹಳೆಯ ಪಾಳೆಯಗಾರಿಕೆಗೆ ಹೊಸ ಪ್ರಹಸನ ! (ಅಲ್ಲಿ-ಇಲ್ಲಿ)

ಲಕ್ಕವಳ್ಳಿಗೆ ಇನ್ನೂ ಹೆಸರಿಡದ ಸಮಯದಲ್ಲಿ ಕುವೆಂಪು ಅದನ್ನು ಸಂದರ್ಶಿಸುತ್ತಾರೆ. ಅದಕ್ಕೊಂದು ಹೆಸರನ್ನೂ ಇಡುತ್ತಾರೆ. ಅಲ್ಲಿ ಹೇಳುವ ಮಾತುಗಳಿವು.

ಯಾರಿಗಿಲ್ಲ ಸೊಂಟಬಗ್ಗಿ / ನಮಸ್ಕರಿಪ ತಂಟೆಯಿಲ್ಲ.
ಯಾರಿಗಿಲ್ಲ ತಗ್ಗಿ, ತಿಕ್ಕಿ / ಬಾಲಬೀಸಿ ಕಾಲುನೆಕ್ಕಿ
ಮೇಲೇರಿದ ಗೋಜು ಇಲ್ಲ…
(ಅನಧಿಕೃತ ನಾಮಕರಣೋತ್ಸವ)

ಈ ತೆರನಾದ ಸ್ವಾಭಿಮಾನದ ಚಿಂತನೆ ಪರ್ಯಾಯದ, ಸೂಚನೆ ಕೊಡುತ್ತದೆ. ಹಿಂಸೆಯನ್ನು ಮುಖಾಮುಖಿಗೊಳ್ಳುವಲ್ಲಿ ಅಹಿಂಸಾತತ್ವವು ಇದೆ. ಅದು ನಿರ್ವಸಾಹತೀಕರಣದ ಬಲವಾದ ಪ್ರತಿಪಾದನೆ. ಗಾಂಧಿ ರಾಜಕೀಯ ಬಿಡುಗಡೆಯೊಂದನ್ನೆ ಕಾತರಿಸಿದ್ದರು. ಮಾನಸಿಕವಾಗಿಯೂ ಬಿಡುಗಡೆಗೊಂಡು ಸ್ವರಾಜ್ಯವನ್ನು ಸ್ಥಾಪಿಸಬೇಕೆಂದು ಅವರ ಇಚ್ಛೆ.ಹಿಂಸಾತತ್ವವನ್ನು ಒಳಗೊಂಡಂತೆ ಕಾಣುವ ಕುವೆಂಪು ಕಾವ್ಯ ಆಂತರ್ಯದಲ್ಲಿ ಅಹಿಂಸೆಯನ್ನು ಹೀಗೆ ನಿರ್ವಚನ ಮಾಡಿಕೊಳ್ಳುತ್ತದೆ.

ಹಿಂಸೆಯನ ಹಿಂಸೆಯಿಂ ಹಿಂಸಿಸದೆ ಕೊಲ್ಪ / ಸಮರ ಲೋಲನೆ ನಮ್ಮ ವೀರ ಸತ್ಯಾಗ್ರಹ! / ಇತರರನು ನೋಯಿಸದೆ ತನ್ನ ಜೀವನ ತೆತ್ತ / ಕಾಯುವವನಾವನೋ ಅವನೆ ಸತ್ಯಾಗ್ರಹಿ! (ಸತ್ಯಾಗ್ರಹಿ)

ಇದು ನೇರ ಮಾತಾದರೆ, ಅಹಿಂಸೆಯನ್ನು ಒತ್ತಿ ಹೇಳುವ ಕಥನಕವನ ‘ಮರಸು ಬೇಟೆ’ಯ ಸಾಲುಗಳನ್ನು ಗಮನಿಸಬೇಕು.

ಬೇಟೆಯನ್ನು ಕೈ ಬಿಟ್ಟನಂದಿಗೆ! ತನ್ನ ಕಂದನ ಜೀವದಂತೆಯೆ ಇತರ ಜೀವಗಳೆಂದ ಹಿಂಸೆಯ/ ವ್ರತವ ಹೂಡಿದನು! (ಮರಸುಬೇಟೆ)

ಹಿಂಸೆಗೆ ಪ್ರತಿಹಿಂಸೆಯ ನೆಲೆ ಬಿಟ್ಟು ಅನೇಕತ್ವದ ಕಡೆ ತಿರುಗುವುದು ಕುವೆಂಪು ಕಾವ್ಯದಲ್ಲಿ ಕಾಣುತ್ತದೆ. ಅನೇಕಾಂತವಾದದ ತಾತ್ವಿಕತೆಯನ್ನು ಅನುಸರಿಸಿ, ರಾಜಕೀಯ ತತ್ವವನ್ನಾಗಿ ವಿಸ್ತರಿಸಿಕೊಂಡ ಗಾಂಧಿಯಂತೆ ಕುವೆಂಪು ಸಾಮಾಜಿಕ ಘನತೆ ಮತ್ತು ಪ್ರಕೃತಿಯಲ್ಲಿನ ಜೀವನ ಘನತೆ ಎರಡನ್ನು ಎತ್ತಿ ಹಿಡಿಯುತ್ತಾ ಬಹುತ್ವದ ಸಾಂಸ್ಕೃತಿಕ ನೆಲೆಗಳನ್ನು ವಿಸ್ತರಿಸುತ್ತಾನೆ.

ಸ್ತ್ರೀತ್ವದ ದೃಷ್ಟಿಕೋನವು ಬಹುತ್ವವುಳ್ಳ ಚಿಂತನಾಕ್ರಮದಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತದೆ. ದ್ವಿತ್ವವನ್ನು ನಿಂತು ಸಾಧಿಸುವ ತರ್ಕವನ್ನು ಅದು ಗಂಡಸಿನ ಚಿಂತನಾಕ್ರಮವಾಗಿ ಗುರುತಿಸುತ್ತದೆ. ಬಹುತ್ವವನ್ನು ಆಶ್ರಯವಾಗುಳ್ಳ ಕುವೆಂಪುಅ ವರ ಹುಡುಕಾಟ ಹಾಗೂ ದ್ವಿತ್ವವನ್ನು ಮೀರಿದ್ದು.

ಕುವೆಂಪು ವಿಶ್ವ ವಿಶಾಲವಾದುದು. ಇಲ್ಲಿ ನಾಯಿಗಳಿಂದ ಹಿಡಿದು ಮನುಷ್ಯರ ತನಕ ಎಲ್ಲ ಘನತೆವೆತ್ತವರೇ. ರೈತ ರಾಜನಿಗೂ ಮಿಗಿಲು, ತಿಮ್ಮು, ಗಿಡ್ಡಿ, ಬೈರ, ಭಿಕ್ಷೆ ಬೇಡುವ ಹಳೇ ಮುದುಕಿ ಮುಂತಾದ ಸಾಮಾನ್ಯರೆಲ್ಲ ಅಸಾಮಾನ್ಯರಾಗಿ ಅಸ್ಮಿತೆ ಪಡೆದುಕೊಳ್ಳುವ ವಿಶ್ವ ಅದು. ಕೇಂದ್ರಗಳನ್ನು ಬದಲಾಯಿಸಿ ನೋಡುವ ಮೂಲಕ ಅನೇಕ ಸಾಮಾನ್ಯ ಚೇತನಗಳನ್ನು ಕುವೆಂಪು ಮುನ್ನೆಲೆಗೆ ತರುತ್ತಾರೆ. ಒಬ್ಬ ರಾಜನಿಗೆ ಬದಲಾಗಿ ಹಲವರು ದುಡಿಯುವ ಕೈಗಳನ್ನು ಪರ್ಯಾಯವಾಗಿ ನೋಡಲಿಚ್ಚಿಸುತ್ತಾರವರು. ನಿರ್ವಸಾಹಿತೀಕರಣ ಕುರಿತು ಕೆಲಸ ಮಾಡುತ್ತಿರುವ ಪ್ರೊ. ಮಕರಂದ ಪರಾಂಜಪೆ ಹೇಳುವಂತೆ, ‘ಸ್ವಾತಂತ್ರ್ಯ ಸಂಗ್ರಾಮದ ಅದ್ಭುತ ಕ್ರಿಯೆಯಲ್ಲಿ ಸಾಮಾನ್ಯರೂ ನಾಯಕರಾದರು, ಹುತಾತ್ಮರಾದರು, ಆ ಕ್ರಿಯೆಯಿಂದಲೆ ಅಸಾಧಾರಣ ಮನುಷ್ಯರಾದರು’ (ಇಂಟರ್‌ನೆಟ್‌).

ಗಾಂಧಿ ಸ್ವಾತಂತ್ರ್ಯಕ್ಕಾಗಿ ಅನುಸರಿಸಿದ ಮಾರ್ಗವನ್ನೇ ಹೆಣ್ಣು ಮಾರ್ಗ ಎಂದು ಗುರುತಿಸಲಾಗುತ್ತದೆ. ಗಾಂಧಿ ತಮ್ಮ ರಾಜಕೀಯ ಸಿದ್ಧಾಂತಗಳನ್ನು ಆರಮಭಿಸಿದ್ದು ಹೆಣ್ಣಿನ ದಿನಚರಿಯ ದೈನಂದಿನ ಕಾಯಕಗಳಿಂದ ನೂಲುವಿಕೆ, ಮನೆಯನ್ನು ಸ್ವಚ್ಚಗೊಳಿಸಿಕೊಳ್ಳುವಿಕೆ ಮತ್ತು ಅಡುಗೆಗೆ ಬೇಕಾದ ಉಪ್ಪಿನಂತಹ ಪರಿಕರಗಳಿಂದ ಸತ್ಯಾಗ್ರಹಕ್ಕೆ ಬೇಕಾದ ಸೈದ್ಧಾಂತಿಕತೆಯನ್ನು ಅವರು ಪಡೆದುಕೊಂಡುದುದಾಗಿ ವಿಶ್ಲೇಷಕರು ಹೇಳುತ್ತಾರೆ. ಕಾಯಕ ಗೌರವ ಮತ್ತು ಅಲ್ಪವೆಂದು ಅಗೌರವಿಸಲ್ಪಡುತ್ತಿದ್ದ ಶ್ರಮದ ಆಂತರ್ಯವು ಅಂತಿಮವಾಗಿ ಸ್ವರಾಜ್ಯದ ಮೂಲಮಂತ್ರವು ಆಗಿರುವುದನ್ನು ಗಾಂಧಿ ಕಂಡುಕೊಳ್ಳುತ್ತಾರೆ, ಇದು ಒಂದು ರೀತಿಯಲ್ಲಿ ಗಾಂಧಿ ಮಾಡಿದ ಸಾಧಾರಣೀಕರಣದ ಸಾರ್ವತ್ರಿಕ ಪ್ರತಿಪಾದನೆಯನ್ನು ಮತ್ತು ಆ ಮೂಲಕ ಬಂದು ನಿರ್ವಸಾಹತೀಕರಣದ ದಾರಿಯೂ, ಆತ್ಮೋನ್ನತಿಯೂ ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟರು. ಇದನ್ನು ಕುವೆಂಪು ತಮ್ಮ ಶ್ರೀ ಸಾಮಾನ್ಯರ ದೀಕ್ಷಾಗೀತೆಯಲ್ಲಿ ಹೀಗೆಂದು ಹಾಡುತ್ತಾರೆ:

ಶ್ರೀ ಸಾಮಾನ್ಯವೆ ಭಗವನ್ ಮಾನ್ಯಂ
ಕೊಗೆಗೊಂಡಿದೆ ಓರೋರ್ವರ ಗರ್ವದ ಕಾಲ
ಇದು ಸರ್ವರ ಕಾಲ!
ಅಧ್ಯಕ್ಷನೊ ಸೇನಾನಿಯೊ! ಕಮ್ಮಾರನೊ ಚಮ್ಮಾರನೊ
ಕಾಯಕವೆಲ್ಲವು ಪೂಜ್ಯ!
(ಶ್ರೀ ಸಾಮಾನ್ಯನ ದಿಕ್ಷಾಗೀತೆ)

ವೈರುದ್ಯಗಳ ಮೇಲಾಟವೇ ಕುವೆಂಪು ಕಾವ್ಯದಲ್ಲಿ ಕಾಣುವುದಾದರೂ ತಾತ್ವಿಕತೆಯನ್ನು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಕುವೆಂಪು ಅವರಲ್ಲಿ ಪರ್ಯಾಯ ಮಾರ್ಗಕ್ಕೇ ಹೆಚ್ಚು ಪ್ರಾಶಸ್ತ್ಯ. ಶಕ್ತಿಯ ಉನ್ಮತ್ತ ಖಡ್ಗಗಳ ಝಣ ಝಣತ್ಕಾರದ ನರ್ತನಕ್ಕಿಂತ ‘ಕೂಗು ಕರ್ಕಶವಿದನು ತಾಳೆ ನಮ್ಮ ಹೇ ತಾಯೆ ಸೈರಿಸೆನು ರಣವಿದು ಕಠೋರ (ಜೋಗುಳ)’ ಎಂಬ ಅಹಿಂಸೆಯ ಸೊಲ್ಲು ಆಳದಿಂದ ಕೇಳುತ್ತದೆ. ಹಿಂಸೆಯ ರುದ್ರ ನರ್ತನಕ್ಕಿಂತ ಸ್ತ್ರೈಣವೆನ್ನಿಸುವ ಗಾಂಧಿಯ ಹೆಣ್ಣು ಮಾರ್ಗ ಅಸಾಧಾರಣ ಪ್ರಭಾವ ಬೀರಲು ಸಾಧ್ಯವಿದೆ ಎನ್ನುವುದನ್ನು ಚರಿತ್ರೆಯೇ ತೋರಿಸಿಕೊಟ್ಟಿದೆ. ಕುವೆಂಪು ನಿರ್ವಸಹಾತೀಕರಣದ ಹುಡುಕಾಟಗಳು ಸಹ ಅಹಿಂಸೆಯ ನೆಲೆಯತ್ತಲೇ, ಅದರ ನಿಜವಾದ ಸ್ವರೂಪವನ್ನು ಪಡೆದುಕೊಳ್ಳುವತ್ತಲೇ ತಿರುಗುವುದು ಈ ದಿಸೆಯಲ್ಲಿ ಮುಖ್ಯವೆನಿಸುತ್ತದೆ. ಆದ್ದರಿಂದಲೇ ಗಾಂಧಿಯಂತೆ ಅವರೊಬ್ಬ ಹೆಣ್ಣು ಮಾರ್ಗಿ; ಸಾಂಸ್ಕೃತಿಕ ಬಹುತ್ವವನ್ನು ಪ್ರತಿಪಾದಿಸುವ ಅಹಿಂಸಾವಾದಿ ಅನ್ನಿಸುತ್ತಾರೆ.

ಕೊನೆಗೆ: ಕುವೆಂಪು ಒಬ್ಬ ಭಾರತೀಯ ಲೇಖಕ. ಒಮ್ಮೆಗೇ ಹಲವಾರು ಅಸ್ಮಿತೆಗಳನ್ನು ಮುಖಾಮುಖಿಯಾಗಬೇಕಾದ ಒತ್ತಡವನ್ನು ವಸಾಹತುಶಾಹಿ ಮತ್ತು ಜಮೀನ್ದಾರಿಕೆ, ಜಾತಿ ಪದ್ಧತಿಗಳು ನಿರ್ಮಿಸಿದವು. ಹೀಗಾಗಿ ನಿರ್ವಸಹಾತೀಕರಣಗೊಳ್ಳುವ ಕ್ರಿಯೆ ಕುವೆಂಪು ಅವರಲ್ಲಿ ಸಂಕೀರ್ಣವಾದುದು. ಅವರ ಪಾಲಿಗೆ ವೈರುದ್ಯಗಳ ಹಾದಿಗಳೇ ತೆರೆದುಕೊಂಡಿದ್ದವು. ಇವುಗಳ ನೆಲೆಯನ್ನು ಅರಿಯುವ ಮತ್ತು ಪುನರ್‌ರಚಿಸುವ ಸವಾಲು ಅವರ ಮುಂದೆ ಇದ್ದಿತು. ವೈರುದ್ಯಗಳೆಲ್ಲ ಮೆಳೆಯಲ್ಲೂ ಕುವೆಂಪು ತಮ್ಮ ಜಾಡನ್ನು ಗುರುತಿಸಿಕೊಳ್ಳುತ್ತಾರೆ. ಈ ದೃಷ್ಟಿಯಿಂದ ಕುವೆಂಪು ನಮ್ಮ ಕಾಲದ ಬಹು ಮುಖ್ಯ ಲೇಖಕ. ಬಗೆದಷ್ಟು ಚರಿತ್ರೆಯನ್ನು ಬಿಟ್ಟು ಕೊಡುವ ಮಣ್ಣಿನಂತೆ ಅವರ ಸಾಹಿತ್ಯ ಗೋಚರಿಸುತ್ತದೆ.

* * *