ಶ್ರೀ ಕುವೆಂಪು ಕನ್ನಡದಲ್ಲಿ ಸಂಭವಿಸಿದ ಇಪ್ಪತ್ತನೆಯ ಶತಮಾನದ ಸೃಜನಶೀಲತೆ ಹಾಗೂ ವೈಚಾರಿಕತೆಯ ಉತ್ಕರ್ಷದ ಪ್ರತಿನಿಧಿಯಂತೆ ತೋರುತ್ತಾರೆ. ಅವರ ಕಾವ್ಯಪ್ರತಿಭೆ ಹೇಗೆ ಅವರಿಗೆ ಜನ್ಮಜಾತವಾದದ್ದೊ ಹಾಗೆಯೇ ಅವರ ವಿಚಾರ ಬುದ್ಧಿಯೂ ಜನ್ಮಜಾತವಾದದ್ದು. ಮುಂದೆ ಈ ಎರಡೂ ಅವರು ಪಡೆದ ಶಿಕ್ಷಣ ಸಂಸ್ಕಾರ ಮತ್ತು ಪರಿಸರಗಳ ಕಾರಣದಿಂದ ಅವರ ಬದುಕು ಬರೆಹಗಳಲ್ಲಿ ಹೇಗೆ ಅಭಿವ್ಯಕ್ತವಾಗಿವೆ ಎಂಬುದನ್ನು ಕನ್ನಡ ವಿಮರ್ಶೆ ತಕ್ಕಮಟ್ಟಿಗೆ ಗುರುತಿಸಿದೆ. ಮಲೆನಾಡಿನ ಅಪ್ರತಿಷ್ಠಿತ ಸಾಮಾಜಿಕ ಸ್ತರದಿಂದ ಬಂದ ಹುಡುಗನೊಬ್ಬ ತನ್ನ ಹೈಸ್ಕೂಲಿನ ದಿನಗಳಲ್ಲಿಯೇ ಇಂಗ್ಲಿಷ್ ಭಾಷೆಯಲ್ಲಿ ಕವನ ಕಟ್ಟುವಷ್ಟು ಪ್ರತಿಭಾಶಾಲಿಯಾಗಿ, ತನ್ನ ಹದಿನೆಂಟನೆ ವಯಸ್ಸಿಗೆ “ದಿ ಬಿಗಿನರ’್ಸ್ ಮ್ಯೂಸ್” ಎಂಬ ಕವನ ಸಂಗ್ರಹವನ್ನು ಪ್ರಕಟಿಸಿ ತನ್ನ ಹೈಸ್ಕೂಲಿನ ಅಧ್ಯಾಪಕರನ್ನು ಗೆಳೆಯರನ್ನೂ ಚಕಿತಗೊಳಿಸಿದನೆಂಬುದನ್ನು ನೆನೆದರೆ, ಪುಟ್ಟಪ್ಪನವರ ಸೃಜನ ಸಾಮರ್ಥ್ಯ ಅದು ಹೇಗೋ ಅವರಿಗೆ ಜನ್ಮಜಾತವಾದದ್ದೆಂಬುದು ಸ್ಪಷ್ಟವಾಗುತ್ತದೆ. ಇದೇ ಸಂದರ್ಭಕ್ಕೆ ಮುನ್ನ ಅವರಿನ್ನೂ ತೀರ್ಥಹಳ್ಳಿಯ ಮಿಡ್ಲ್ ಸ್ಕೂಲಿನಲ್ಲಿ ಓದುತ್ತಿದ್ದಾಗ, ಬಹುಶಃ ಅವರಿನ್ನೂ ಹತ್ತು-ಹನ್ನೊಂದು ವರ್ಷದ ಬಾಲಕನಾಗಿದ್ದಾಗ, ನಡೆದ ಒಂದು ಪ್ರಸಂಗವನ್ನು ಕುವೆಂಪು ತಮ್ಮ “ನೆನಪಿನ ದೋಣಿ”ಯಲ್ಲಿ ದಾಖಲಿಸಿರುವುದನ್ನು ಗಮನಿಸಿದರೆ, ಅವರ ವೈಚಾರಿಕ ಪ್ರಜ್ಞೆಯೂ ಅವರಿಗೆ ಹುಟ್ಟಿನೊಡನೆಯೇ ಬಂದಿತ್ತೆಂಬುದು ಸ್ಪಷ್ಟವಾಗಿದೆ. ಆ ಪ್ರಸಂಗ ಹೀಗಿದೆ:

ಒಂದು ಬೈಗು ಸ್ಕೂಲಿಂದ ಮನೆಗೆ ಬಂದು, ತಿಂಡಿ ತಿಂದು, ರಬ್ಬರ್ ಬಿಲ್ ಜತೆಗೆ ಕಲ್ಲಿನ ಚೀಲ ಹಿಡಿದು ನಾನೊಬ್ಬನೇ ಹೊರಟೆ. ಸೂರ್ಯ ಆಗಲೇ ಪಶ್ಚಿಮ ದಿಕ್ಕಿನ ಕಾಡುಗಳಲ್ಲಿ ಕಣ್ಮರೆಯಾಗಿದ್ದ. ಸಂಧ್ಯಾರಾಗ ಹಸುರನ್ನೆಲ್ಲ ಮೀಯಿಸಿತ್ತು. ಕಾಡು ಗೊತ್ತುಗಳಿಗೆ ಹಿಂತಿರುಗುತಿದ್ದ ಹಕ್ಕಿಗಳ ತರತರದ ಉಲಿ ಬನದ ನೀರವತೆಗೆ ರಾಗ ರೋಮಾಂಚನವೀಯುತ್ತಿತ್ತು. ಅದು ಹೊರತು ಬೇರೆ ಯಾವ ಸದ್ದೂ ಇರಲಿಲ್ಲ. ನಾನು ಹೋಗುತ್ತಿದ್ದ ಕಾಡು ಒಂದು ಪ್ರಶಾಂತ ವಾತಾವರಣದಿಂದ ಧ್ಯಾನಮಯವಾಗಿತ್ತು. ನನ್ನ ಕೈ ಬಿಲ್ಲನ್ನು ಹಿಡಿದಿದ್ದರೂ, ಕಣ್ಣು ಹುಡುಕುವ ಕಾರ್ಯದಲ್ಲಿ ಮಗ್ನವಾಗಿದ್ದರೂ ಮನಸ್ಸು ಏನನ್ನೊ ಮೆಲುಕು ಹಾಕುತ್ತಿತ್ತು. ಒಮ್ಮೊಮ್ಮೆ ಅದು ತುಂಬ ಗಹನವೂ ಉನ್ನತವೂ ಆದ ವಿಚಾರಗಳ ಕಡೆಗೂ ಏರಿ ಇಳಿಯುತ್ತಿತ್ತು. ಪಾಪ ಪುಣ್ಯ, ದೇವರು ಜಗತ್ತು, ಸೃಷ್ಟಿ, ವಿಧಿ, ಕಾಡು ಬೆಟ್ಟ, ಸೂರ್ಯ ಚಂದ್ರಹೀಗೆಲ್ಲ ಅಲೆಯುತ್ತಿತ್ತು. ಆಲೋಚನೆ, ಅಥವಾ ಅದರ ಅಂಬೆಗಾಲಿಕ್ಕುವ ಮನಃಸ್ಥಿತಿ.

ಅಷ್ಟರಲ್ಲಿ ಬಾಯಲ್ಲಿದ್ದ ಪೆಪ್ಪರ್ಮೆಂಟ್ ಕರಗಿ ಖರ್ಚಾಗಿತ್ತು. ಮತ್ತೆ ಕೈ ತನಗೆ ತಾನೆ ಸ್ವಯಂ ಚಾಲಿತವಾಗಿ, ಜೇಬಿನೊಳಗೆ ತೂರಿ ಹುಡುಕಿತು. ಇಲ್ಲ, ಪೆಪ್ಪರ್ಮೆಂಟೆಲ್ಲ ಮುಗಿದುಹೋಗಿದೆ! ಆದರೆ ತಿಂಡಿಯ ಕೊಸರಾಗಿ ಬಂದಿದ್ದ ಒಂದು ಬಾಳೆಯಹಣ್ಣು ಜೇಬಿನ ಆಶ್ರಯ ಪಡೆದಿತ್ತು. ಕೈ ಅದನ್ನು ಈಚೆಗೆ ಎಳೆಯಿತು. ಸಿಪ್ಪೆಯನ್ನು ಸ್ವಲ್ಪ ಸ್ವಲ್ಪವಾಗಿ ಸುಲಿಯುತ್ತಾ ಅಷ್ಟಷ್ಟೆ ಭಾಗವನ್ನು ಕಚ್ಚಿ ಕಚ್ಚಿ ತಿನ್ನತೊಡಗಿತು ಬಾಯಿ. ಇಷ್ಟೆಲ್ಲ ಅನೈಚ್ಛಿಕವೊ ಎಂಬಂಥ ಕ್ರಿಯೆ ನಡೆಯುತ್ತಿದ್ದಾಗ ಕಾಲುಗಳು ನಡೆಯುವ ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದವು…. ಮನಸ್ಸೂ ತನ್ನಪಾಡಿಗೆ ತಾನು ಚಿಂತನ ಕಾರ್ಯದಲ್ಲಿ ತೊಡಗಿಯೆ ಇತ್ತು.

ಕಾಡು, ಗುಡ್ಡ ಸಾಲು, ಮೋಡ, ಆಕಾಶ ಇದನ್ನೆಲ್ಲ ಮಾಡಿದ್ದಾನಲ್ಲ ದೇವರು, ಅವನು ಎಂತಹ ಅದ್ಭುತಶಕ್ತಿಶಾಲಿಯಾಗಿರಬೇಕು? ಭಾವಿಸುತ್ತೇನೆ. ಎಲ್ಲ ಅವನ ಇಚ್ಛೆಯಂತೆಯೇ ಆಗಿದೆ. ಅವನ ಇಚ್ಛೆಗೆ ಎಲ್ಲವೂ ಅಧೀನ. ಪೊದೆಯ ಬಳಿ ಹಸುರಿನ ಮೇಲೆ ಅರ್ಧ ಕಾಣಿಸಿಕೊಂಡು ಇಲ್ಲಿ ಬಿದ್ದಿರುವ ಕಲ್ಲುಗುಂಡು ಇಲ್ಲಿಯೇ ಹೀಗೆಯೇ ಬಿದ್ದಿರಬೇಕೆಂದು ದೇವರು ನಿಯಮಿಸಿದ್ದಾನೆ. ಆದ್ದರಿಂದಲೆ ಅದು ಇಲ್ಲಿಯೆ ಬಿದ್ದಿದೆ, ಇಲ್ಲಿಂದ ಹಂದುವುದಿಲ್ಲ. ಎಲ್ಲ ಭಗವಂತನ ವಜ್ರ ನಿಯಮಕ್ಕೆ ಅಧೀನ. ಸ್ವತಂತ್ರೇಚ್ಛೆ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ. ಇದ್ದಕ್ಕಿದ್ದ ಹಾಗೆ ಹುಡುಗನ ಮನಸ್ಸು ಸೆರೆಯಲ್ಲಿ ಸಿಕ್ಕಿಬಿದ್ದ ಸಿಂಹದಂತಾಗಿ ಕಂಬಿಗಳನ್ನೆಲ್ಲ ಕಿತ್ತು ಬಿಡುವಂತೆ ನುಗ್ಗತೊಡಗಿತು…. ಛೆಃ ಇದೆಂತಹ ದಾಸ್ಯ!

ಅಷ್ಟುಹೊತ್ತಿಗೆ ಬಾಳೆಯ ಹಣ್ಣು ತಿಂದು ಮುಗಿದು, ಸಿಪ್ಪೆ ಮಾತ್ರ ಕೈಯಲ್ಲಿತ್ತು. ಕೈ ಯಾಂತ್ರಿಕವಾಗಿ ಅದನ್ನು ಬಲವಾಗಿ ಎಸೆಯಿತು. ಅದು ತುಸುವೇ ದೂರದಲ್ಲಿದ್ದ ಒಂದು ಮುಳ್ಳು ಪೊದೆಯ ಹರೆಗೆ ತಗುಲಿ ಒಂದೆರಡು ಕ್ಷಣ ಅಲ್ಲಿ ನೇತಾಡಿ, ಕೆಳಗೆ ನೆಲದ ಹಸುರಿಗೆ ಬಿತ್ತು. ಕಾಲು ತನ್ನ ಪಾಡಿಗೆ ತಾನು ಮುಂದುವರಿಯಿತು, ಹತ್ತಿಪ್ಪತ್ತು ಮಾರು.

ಭಗವಂತನ ನಿರಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದಿದ್ದ ಮನಸ್ಸು ಒಡನೆಯೆ, ಆಗ ತಾನೆ ನಡೆದಿದ್ದ ಘಟನೆಯ ನಿದರ್ಶನವನ್ನು ಆಶ್ರಯಿಸಿ ಪ್ರತಿಭಟಿಸಲು, ಹೆಡೆಯೆತ್ತಿ ನಿಂತಿತು.

ನೋಡಿದೆಯಾ, ದೇವರ ಇಚ್ಛೆಯನ್ನು ಉಲ್ಲಂಘಿಸಲು ಯಾರಿಗೂ ಎಂದಿಗೂ ಸಾಧ್ಯವಿಲ್ಲ. ಬಾಳೆಹಣ್ಣಿನ ಸಿಪ್ಪೆ ಇಲ್ಲಿಯೇ ಇಂಥ ಜಾಗದಲ್ಲಿಯೇ ಬೀಳಬೇಕೆಂದು ಅವನು ನಿಯಮಿಸಿಬಿಟ್ಟಿದ್ದ. ಆದ್ದರಿಂದ ಅದು ಅಲ್ಲಿಯೇ ಬೀಳಬೇಕಾಯಿತು. ಅದು ಯಾರ ತೋಟದ್ದೊ? ಯಾರಿಗೆ ಮಾರಿದ್ದೊ? ಅದನ್ನು ನಮ್ಮ ಮನೆಯವರು ತಂದು, ನೀನು ತಿಂದು ಅದರ ಸಿಪ್ಪೆಯನ್ನು ಇಲ್ಲಿಗೇ ತಂದು ಹಾಕಬೇಕಾಯಿತು. ವಿಧಿಯ ಇಚ್ಛೆಗೆ ನೀನೇ ವಾಹಕ ಗುಲಾಮ!…. ಒಂದು ಯಃಕಶ್ಚಿತ್ ಹಣ್ಣಿನ ಸಿಪ್ಪೆ ಇಲ್ಲಿಯೇ ಬೀಳಬೇಕೆಂದು ವಿಧಿ ಇಚ್ಛಿಸಿದ್ದರಿಂದ ನೀನು ಇಂದು ಸಂಜೆ ಶಾಲೆಯಿಂದ ಬಂದು ತಿಂಡಿಯ ನೆವದಿಂದ ಅದನ್ನು ಇಲ್ಲಿಗೆ ತಂದು ತಿಂದು ಇಲ್ಲಿಯೆ ಹಾಕಬೇಕಾಯಿತು. ಹಾಗಿದೆ ಭಗವಂತನ ಅಲುಗಾಡದ ಕಟ್ಟಳೆ!

ಹುಡುಗನ ಮನಸ್ಸು ರೇಗಿತು. ನಾನೇನು ವಿಧಿಯ ಗುಲಾಮನಲ್ಲ. ವಿಧಿಯ ಇಚ್ಛೆಗೆ ಭಂಗ ತರಲೇಬೇಕು.

ಸೂರ್ಯಚಂದ್ರ ಪೃಥ್ವಿನಕ್ಷತ್ರಾದಿಗಳನ್ನು ಸೃಷ್ಟಿಸಿ ನಿಯಮ ಬಂಧನದಲ್ಲಿಟ್ಟಿರುವ ದುಷ್ಟ ವಿಧಿಯನ್ನು ಭಂಗಿಸುವ ದೃಢಛಲದಿಂದ, ಸಿಪ್ಪೆಯನ್ನೆಸೆದು ಅಷ್ಟು ದೂರ ಹೋಗಿದ್ದ ನಾನು, ಮತ್ತೆ ಹಿಂದಕ್ಕೆ ಬಂದೆ! ಸಿಪ್ಪೆ ಬಿದ್ದಿದ್ದ ಸ್ಥಳಕ್ಕೆ ಧಾವಿಸಿ ಹುಡುಕಿದೆ. ದೂರ ಹಸಿರು ಹುಲ್ಲಿನಲ್ಲಿ ಅಡಗಿ ಬಿದ್ದಿತ್ತುಸೆರೆ ಬಿಡಿಸುವವನಂತೆ ಅದನ್ನು ಎತ್ತಿಕೊಂಡೆ! ಮತ್ತೆ ಸ್ವಲ್ಪ ದೂರ ನಡೆದು ಅದನ್ನು ಬೇರೊಂದು ಕಡೆಗೆ ಎಸೆದು ವಿಜಯಿಯ ಹೆಮ್ಮೆಯಿಂದ ಮುಂದುವರಿದೆ.

ಆದರೆ ಹೆಮ್ಮೆ ಅಲ್ಪಾಯುವಾಗಿಬಿಟ್ಟಿತು! ಹಾಳು ವಿಧಿ ಮೂದಲಿಸ ತೊಡಗಿತು. ಬಾಳೆಯ ಹಣ್ಣಿನಸಿಪ್ಪೆ ನಾನು ಮತ್ತೆ ಎಸೆದು ಈಗ ಅದು ಬಿದ್ದಿರುವ ಜಾಗದಲ್ಲಿಯೆ ಅದು ಬೀಳಬೇಕೆಂಬುದು ವಿಧಿಯ ಇಚ್ಛೆಯಿದ್ದುದರಿಂದಲೇ ನಾನು ಪುನಃ ಅದರ ದಾಸನಂತೆ ಹಿಂದಕ್ಕೆ ಹೋಗಿ ಅದನ್ನು ತಂದು ಎಸೆಯ ಬೇಕಾಯಿತಲ್ಲಾ! ನನಗೆ ತಲೆ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತು. ನನ್ನ ಅಸಹಾಯಕತೆಗೆ ನಾನೇ ದುಃಖಿಸಿ ಕಣ್ಣು ಹನಿ ತುಂಬಿತು. ಬಿದ್ದಿರುವ ಜಾಗದಿಂದಲೂ ಅದನ್ನು ತೆಗೆದು ಬೇರೆ ಕಡೆಗೆ ಬಿಸಾಕಬೇಕು ಎಂದೆನಿಸಿತು. ಆದರೆ ಏನು ಪ್ರಯೋಜನ? ಮತ್ತೆ ವಿಧಿಯ ದಾಸನಾಗಿಯೆ ಕೆಲಸ ಮಾಡಿದಂತಾಗುತ್ತದೆ. ಥೂ! ಹಾಳು ವಿಧಿಯ ಬಾಯಿಗೆ ಮಣ್ಣು ಹಾಕಲಿ! ಏನಾದರೂ ಸಾಯಲಿ! ನನಗೇಕೆ ಎಂದೆಲ್ಲ ಶಪಿಸಿಬಿಟ್ಟು…. ಬೇಗ ಬೇಗ ಕತ್ತಲಾಗುವುದರ ಒಳಗೆ ಮನೆ ಸೇರಿಕೊಳ್ಳಲು ಧಾವಿಸಿದೆ. (ನೆ.ದೋ. ಪು.೩೨. ೧೯೩೩)

ಕುವೆಂಪು ಈ ಘಟನೆಯನ್ನು ಕುರಿತು ಯಾವುದೇ ವ್ಯಾಖ್ಯಾನವನ್ನು ಮಾಡದೆ ಹೋದರೂ, ಅವರ ಸಾಹಿತ್ಯದ ಹಿನ್ನೆಲೆಯಿಂದ ನೋಡಿದರೆ, ಹತ್ತು-ಹನ್ನೊಂದು ವರ್ಷ ವಯಸ್ಸಿನ ಬಾಲಕ ಕುವೆಂಪುವಿನ ಮನಸ್ಸಿನಲ್ಲಿ ಒಂದು ಮುಖ್ಯವಾದ ತಾತ್ವಿಕ ಜಿಜ್ಞಾಸೆ ನಡೆದಿರುವುದನ್ನು ನಾವು ಗುರುತಿಸಬಹುದು. ಅದೇನೆಂದರೆ ಮನುಷ್ಯನಿಗೆ ಸ್ವತಂತ್ರವಾದ ಇಚ್ಛೆ ಎಂಬುದಿದೆಯೆ? ಇದ್ದರೆ ಇಡೀ ಜಗತ್ತನ್ನು ನಿಯಂತ್ರಿಸುವ–ವಿಧಿಯೋ, ಕರ್ಮವೊ, ದೈವವೋ–ಒಂದು ವಿಶ್ವ ಸಂಕಲ್ಪವಿದೆಯಲ್ಲ, ಅದರ ಹಿನ್ನೆಲೆಯಲ್ಲಿ ಈ ಮನುಷ್ಯನ ಇಚ್ಛೆಗೆ ಏನು ಸ್ಥಾನ? ಅಥವಾ ಮನುಷ್ಯನ ಇಚ್ಛೆ ಅಥವಾ ಸಂಕಲ್ಪಕ್ಕೆ ಏನೂ ಬೆಲೆಯಿಲ್ಲವೆ, ಅದು ನಿಯಂತ್ರಿಸಿದಂತೆ ನಡೆದುಕೊಳ್ಳುವುದರ ಹೊರತು? ಈ ಗಹನವಾದ ತಾತ್ವಿಕ ಚಿಂತನೆಯ ಮೂಲರೂಪವೊಂದನ್ನು ಈ ಘಟನೆಯಲ್ಲಿ ಗುರುತಿಸಿದರೆ, ಕುವೆಂಪು ಅವರ ವೈಚಾರಿಕತೆ ಅವರಿಗೆ, ಅವರ ಪ್ರತಿಭೆಯಂತೆಯೆ ಜನ್ಮಜಾತವಾದದ್ದು–ಎನ್ನುವುದು ಸ್ಪಷ್ಟವಾಗಿದೆ.

ಮನುಷ್ಯನಿಗೆ ಸ್ವತಂತ್ರವಾದ ಇಚ್ಛೆ–ಎಂಬುದಿದೆಯೆ ಎನ್ನುವ ಜಿಜ್ಞಾಸೆ ಮುಖ್ಯವಾಗಿ ಪಶ್ಚಿಮದ ತತ್ವಶಾಸ್ತ್ರದಲ್ಲಿ ಬಾರೂಚ್ ಸ್ಫಿನೋಜಾ ಮತ್ತು ಷೋಪೆನ್ ಹೌರ್ ಅವರ ಚಿಂತನೆಗಳಲ್ಲಿ ಕಾಣಿಸಿಕೊಂಡಿದೆ. ತಮ್ಮ ಎಳೆಯಂದಿನಿಂದಲೂ ಜೀವ-ಜಗತ್ತು-ವಿಧಿ-ಕರ್ಮ-  ದೈವ ಇತ್ಯಾದಿಗಳ ವಿಚಾರವನ್ನು ಚಿಂತಿಸುತ್ತ ಬಂದ ಕುವೆಂಪು, ಪಶ್ಚಿಮದ ಹಾಗೂ ಭಾರತೀಯ ತತ್ವಶಾಸ್ತ್ರದ ಮತ್ತು ವೇದಾಂತದ ಪರಿಚಯದಿಂದ ಈ ವಿಷಯವನ್ನು ಕುರಿತು ತಲುಪಿದ ತೀರ್ಮಾನ ಅಥವಾ ಕಂಡ ಕಾಣ್ಕೆ ಎಂದರೆ:

ನೆಯ್ದಾಳುತಿದೆ ಜಗವನೊಂದತಿ ವಿರಾಣ್ ಮನಂ
ಸೂಕ್ಷಾ ತಿ ಸೂಕ್ಷ ತಂತ್ರದಿಂ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ ಭಾವಮಂ ನೀಡಿ
(ಶ್ರೀರಾ.ದ. ಸಂ.೩. ಪಂ.೧೩೧-೧೩೪. ಪು.೬೦-೬೧)

ಶ್ರೀರಾಮಾಯಣದರ್ಶನಂ, ಬೆರಳ್ಗೆ ಕೊರಳ್, ಮಲೆಗಳಲ್ಲಿ ಮದುಮಗಳು, ಶ್ಮಶಾನ ಕುರುಕ್ಷೇತ್ರ, ಚಂದ್ರಹಾಸ–ಈ ಕೃತಿಗಳನ್ನು ಈ ದೃಷ್ಟಿಯಿಂದ ನೋಡಬೇಕು.

ಯಾವುದೇ ಕವಿಯನ್ನು ಕುರಿತು ಮಾತನಾಡುವಾಗ, ವೈಚಾರಿಕತೆ ಎಂದರೆ, ಹಿಂದಿನ ಕಾವ್ಯ ಸಂದರ್ಭದಲ್ಲಿನಂತೆ ನಿರ್ದಿಷ್ಟವಾದ ಸಿದ್ಧಾಂತ, ತತ್ವ, ನೀತಿ, ಉಪದೇಶ ಇತ್ಯಾದಿಗಳನ್ನು ಹೇಳುವ ಪ್ರವೃತ್ತಿ ಅಲ್ಲ. ಅದು ಬದುಕನ್ನು ಕುರಿತ ಗಾಢವಾದ ಪ್ರೀತಿ ಹಾಗೂ ಚಿಂತನೆಗಳಿಂದ ನಿಷ್ಪನ್ನವಾಗುವ ಒಂದು ದೃಷ್ಟಿಕೋನ. ಒಬ್ಬ ಬರೆಹಗಾರ ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಮಾನವೀಯ ಕಾಳಜಿಗಳ ಮೂಲಕ ರೂಪಿಸಿಕೊಳ್ಳುವ ಒಂದು ವ್ಯಕ್ತಿ ವಿಶಿಷ್ಟವಾದ ಚಿಂತನಪರ ಬುದ್ಧಿಸ್ಥಿತಿಯನ್ನು ಆತನ ವೈಚಾರಿಕತೆ ಎನ್ನಬಹುದು. ಅದು ಕೇವಲ ಪುಸ್ತಕ ಪಾಂಡಿತ್ಯದಿಂದ ಬಂದುದಲ್ಲ; ಅದು ಎಲ್ಲವನ್ನೂ ಪರೀಕ್ಷಿಸುತ್ತ, ಪ್ರಶ್ನಿಸುತ್ತ ಸತ್ಯಾನ್ವೇಷಣೆಗೆ ತೊಡಗುವ ವೈಜ್ಞಾನಿಕ ದೃಷ್ಟಿಯನ್ನು ತನ್ನ ಚಿಂತನೆಯ ನೆಲೆಗಟ್ಟನ್ನಾಗಿ ಮಾಡಿಕೊಂಡ ಒಂದು ಮನೋಧರ್ಮ–ಎಂದು ಹೇಳಬಹುದು.

ಈ ಮನೋಧರ್ಮದ ಮೊದಲ ಪ್ರಸ್ತಾಪವನ್ನು ಕುವೆಂಪು ಮಾಡಿದ್ದು ೧೯೩೫ರಂದು ಅವರು ಶ್ರೀರಂಗಪಟ್ಟಣದಲ್ಲಿ ಯುವಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ. ಆ ಭಾಷಣದ ಶೀರ್ಷಿಕೆ “ಯುವಕರು ನಿರಂಕುಶಮತಿಗಳಾಗಬೇಕು” ಎನ್ನುವುದು. ಈ ಭಾಷಣದ ಮುಖ್ಯಾಂಶಗಳನ್ನು ಅವರದೇ ಮಾತಿನಲ್ಲಿ ಸಂಗ್ರಹಿಸಿ ಹೇಳುವುದಾದರೆ: “ಮತಿ ಮಾನವನ ಸರ್ವೋತ್ಕೃಷ್ಟವಾದ ಆಯುಧವಾಗಿದೆ…. ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮತಿ ಮನುಷ್ಯರೆಲ್ಲರಲ್ಲಿಯೂ ಇರುತ್ತದೆ. ಆದರೆ ಈಗೇನಾಗಿದೆ ಅದರ ಗತಿ? ಮೌಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗನರಕ ದೇವಾನುದೇವತೆಗಳ ಮೋಹಮಾಯೆಗಳಿಂದಲೂ ಅದು ಸತ್ವರಹಿತವಾಗಿದೆ; ಕಾಂತಿಹೀನ ವಾಗಿದೆ… ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೆ ನಿಸ್ತೇಜವಾಗಿದೆ.

ಮತಿಯನ್ನು ನಿಸ್ತೇಜಗೈದಿರುವ ಅಂಶಗಳಲ್ಲಿ (ಮೊದಲನೆಯದು) ಮತ. ಮತ ನಮಗೊಂದು ದೊಡ್ಡಬಂಧನವಾಗಿದೆ. ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದುದು. ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮ ತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.

ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರು ವಂತೆ ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದನು ಎಂದು ಹೇಳಿದರೆ ಕಣ್ಣು ಮುಚ್ಚಿಕೊಂಡು ನಂಬಬೇಡಿ. ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಬಿಡಬೇಡಿ. ಆಗಿನ ಮನು ಪವಿತ್ರನಾದರೆ ಈಗಿನ ಮಹಾತ್ಮಾಗಾಂಧಿ ಪವಿತ್ರನಲ್ಲವೆ?….” (ಸ.ಗ.ಸಂ೨. ಪು.೬೬-೬೭)

ಮೇಲೆ ಉಲ್ಲೇಖಿಸಿರುವುದು ಮೂವತ್ತೊಂದು ವರ್ಷದ ಯುವಕವಿ ಕುವೆಂಪು ಮಾಡಿದ, ಆ ಉಪನ್ಯಾಸದ, ಒಂದಷ್ಟು ಭಾಗ ಮಾತ್ರ. ಯುವಕರು ನಿರಂಕುಶಮತಿಗಳಾಗಬೇಕು ಎನ್ನುವ ಮಾತಿನಲ್ಲಿ “ನಿರಂಕುಶಮತಿ” ಎನ್ನುವ ಕಲ್ಪನೆಯೇ ತುಂಬ ಅದ್ಭುತವಾಗಿದೆ. ಸಿಡಿಮದ್ದಿನ ಕಿಡಿಯಂತಿರುವ ಈ ಮಾತುಗಳು ಕುವೆಂಪು ಅವರ ವೈಚಾರಿಕತೆಯ ಸ್ವರೂಪವನ್ನು ಸ್ಪಷ್ಟಪಡಿಸುತ್ತವೆ. ಅಷ್ಟೇ ಅಲ್ಲ ಅವರ ಬರೆಹ ಹಾಗೂ ಬದುಕಿನಲ್ಲಿ ಉದ್ದಕ್ಕೂ ಅಭಿವ್ಯಕ್ತವಾಗಿರುವುದು ಇದೇ ವೈಚಾರಿಕತೆಯೇ. ೧೯೨೭ರಂದು ಅವರು ಬರೆದ “ಜಲಗಾರ” ನಾಟಕದಿಂದ ಹಿಡಿದು, ೧೯೮೧ರಲ್ಲಿ ಅವರು ತಮ್ಮ ಸಂದೇಶ ಎಂದು ಸಾರಿದ “ವಿಶ್ವ ಮಾನವ ಸಂದೇಶ”ದ ವರೆಗೂ ಅವ್ಯಾಹತವಾಗಿ ಈ ನಿಲುವು ಸ್ಥಾಯಿಯಾಗಿದೆ.

ಕುವೆಂಪು ಯುವಕರು ನಿರಂಕುಶಮತಿಗಳಾಗಬೇಕು ಎನ್ನುವ ಕರೆ ನೀಡಿದ ಈ ಉಪನ್ಯಾಸವನ್ನು ಮಾಡಿದಾಗ, ಅವರು ಅಂದಿಗೆ ಹಿಂದಿನ ಹತ್ತು ವರ್ಷಗಳಿಂದಲೂ ಮೈಸೂರಿನ ಶ್ರೀರಾಮಕೃಷ್ಣ  ಆಶ್ರಮದಲ್ಲಿ ಇದ್ದರು ಎಂಬುದನ್ನು ಗಮನಿಸಬೇಕು. ಮತ್ತು ಈ ಸಂದರ್ಭದ ಉಪನ್ಯಾಸದಲ್ಲಿ ಸ್ವಾಮಿ ವಿವೇಕಾನಂದರ ವಿಚಾರಗಳು ಅನುರಣನ ಗೊಂಡಿರುವುದನ್ನು ಗುರುತಿಸಬಹುದು. ಇನ್ನೂ ಹಿಂದಕ್ಕೆ ಹೋದರೆ ಇವು ವಿವೇಕಾನಂದರಿಗೆ ಪ್ರಿಯವಾದ ಭಗವಾನ್ ಬುದ್ಧನ ಮಾತುಗಳೂ ಹೌದು. ಜಗತ್ತಿನ ಆಚಾರ್ಯರಲ್ಲೆಲ್ಲ ವಿವೇಕಾನಂದರು ಬುದ್ಧನನ್ನು ಮೊದಲ ಗುರುಸ್ಥಾನದಲ್ಲಿ ಇರಿಸುತ್ತಾರೆ. ಭಗವಾನ್ ಬುದ್ಧ ಪ್ರಾಚೀನ ಭಾರತವು ಕಂಡ ಮೊದಲ ವಿಚಾರವಾದಿ ಮತ್ತು ಮಹಾಮಾನವತಾವಾದಿ. ಸಂಪ್ರದಾಯದ ಮತ್ತು ಪೂರ್ವಾಚಾರ್ಯರ ಅಧಿಕಾರವನ್ನು ಮೊಟ್ಟಮೊದಲು ಪ್ರಶ್ನಿಸಿದವನು ಮತ್ತು ನಿರಾಕರಿಸಿದವನು ಬುದ್ಧ. ವಿವೇಕಾನಂದರ ಕ್ರಾಂತಿಕಾರಕ ವಿಚಾರಗಳಲ್ಲಿ, ಬುದ್ಧನ ಉದಾರ ಮಾನವತಾವಾದ, ಪುರೋಹಿತಶಾಹಿಯ ಅರ್ಥಹೀನ ಆಚರಣೆಗಳನ್ನು ಮತ್ತು ದೇವರು-ಧರ್ಮಗಳ ಹೆಸರಿನಲ್ಲಿ ಅವರು ಮಾಡುತ್ತಿದ್ದ ಶೋಷಣೆಗಳನ್ನು ಕುರಿತ ಪ್ರತಿಭಟನೆ, ಜಾತಿಪದ್ಧತಿಯ ಖಂಡನೆ, ಸಮಾನತೆಯ ಪರವಾದ ನಿಲುವುಗಳು ಮತ್ತು ಶ್ರೀರಾಮಕೃಷ್ಣ ಪರಮಹಂಸರಿಂದ ಪ್ರತಿಪಾದಿತವಾದ ಸರ್ವ ಧರ್ಮ ಸಮನ್ವಯದೃಷ್ಟಿ–ಈ ಎಲ್ಲವೂ ಸಮ್ಮೇಳನಗೊಂಡಿವೆ. ಬುದ್ಧ-ವಿವೇಕಾನಂದ-ಶ್ರೀರಾಮಕೃಷ್ಣ ಪರಮಹಂಸರ ಈ ವಿಚಾರಗಳು ಕುವೆಂಪು ಅವರಿಗೆ ಸಮ್ಮತವಾದ ಕಾರಣದಿಂದ, ಅವು ಕನ್ನಡದಲ್ಲಿ ಕುವೆಂಪು ಅವರ ಕವಿಪ್ರಜ್ಞೆಯ ಮೂಲಕ ಒಂದು ಬಗೆಯ ಧೀರೋದಾತ್ತತೆಯಲ್ಲಿ ಮಂಡಿತವಾಗಿವೆ. ಯುವಕರು ನಿರಂಕುಶಮತಿಗಳಾಗಬೇಕೆಂದು ಕರೆಕೊಟ್ಟ ಕುವೆಂಪು ಅವರ ಉಪನ್ಯಾಸದಲ್ಲಿ ಈ ಎಲ್ಲವೂ ಸಾರವತ್ತಾಗಿ ಬಂದಿವೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಶ್ರೀರಾಮಕೃಷ್ಣಾಶ್ರಮದ ಆಶ್ರಯವನ್ನು ಅವರು ಪಡೆಯುವ ಮೊದಲೇ, ಕುವೆಂಪು ತಮ್ಮ ಹದಿನೆಂಟನೆಯ ವಯಸ್ಸಿನಲ್ಲೇ, ಒಬ್ಬ ವಿದ್ಯಾರ್ಥಿಯಾಗಿ ಚರ್ಚಾಕೂಟವೊಂದರಲ್ಲಿ ಜಾತಿಪದ್ಧತಿಯ ಅನಿಷ್ಟಗಳನ್ನು ಕುರಿತು ಮಾತನಾಡಿದರು ಮತ್ತು ಲೋಟಸ್ ಅಸೋಸಿಯೇಷನ್ ವ್ಯವಸ್ಥೆ ಮಾಡಿದ ಆ ಚರ್ಚಾಕೂಟದ ಸಭೆಯಲ್ಲಿ ಮೈಸೂರಿನ ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿಸಿದ್ಧೇಶ್ವರಾನಂದರೂ ಇದ್ದರು–ಎನ್ನುವುದು. ಜಾತಿಪದ್ಧತಿಯ ಅನಿಷ್ಟಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಈ ಜಾತಿಪದ್ಧತಿಯ ಲಾಭವನ್ನು ಮೇಲುವರ್ಗದ ಪುರೋಹಿತಶಾಹಿ ತನ್ನ ಅನುಕೂಲಕ್ಕೆ ಹೇಗೆ ಬಳಸುತ್ತಿದೆ ಎನ್ನುವುದನ್ನು ಗುರುತಿಸಲು, ಕುವೆಂಪು ಪುಸ್ತಕಗಳನ್ನು ಓದುವ ಅಥವಾ ವಿವೇಕಾನಂದರ ವಿಚಾರಗಳನ್ನು ಅವಲಂಬಿಸುವ ಅಗತ್ಯವೇನೂ ಇರಲಿಲ್ಲ. ಯಾಕೆಂದರೆ ಅವು ಅವರು ಹುಟ್ಟಿಬೆಳೆದ ಮಲೆನಾಡಿನ ಮಣ್ಣಿನ ಮಕ್ಕಳಾದ ಒಕ್ಕಲಿಗ ಜನಾಂಗದವರಾಗಿ ಕಂಡ-ಉಂಡ ಅನುಭವಗಳೇ ಆಗಿದ್ದವು. ಆದ ಕಾರಣವೇ ಅವರು ತಮ್ಮ ಹೈಸ್ಕೂಲಿನ ದಿನಗಳಲ್ಲಿಯೇ ಜಾತಿಪದ್ಧತಿ ಮತ್ತು ವರ್ಣವ್ಯವಸ್ಥೆಗಳನ್ನು ಕುರಿತು ಸ್ಪಷ್ಟವಾಗಿ ವಿಚಾರಮಾಡಬಲ್ಲವರಾಗಿದ್ದರು. ಇದರಿಂದ ನಿಷ್ಪನ್ನವಾಗುವ ಸಂಗತಿ ಯೆಂದರೆ, ಕುವೆಂಪು ಅವರ ವೈಚಾರಿಕತೆಗೆ ಒಂದು ನಿರಂಕುಶವೂ ಸ್ಪಷ್ಟವೂ ಆದ ನಿಲುವು ಪ್ರಾಪ್ತವಾದದ್ದಕ್ಕೆ ಕಾರಣ, ಅವರು ತಮ್ಮ ಸಮಕಾಲೀನರಾದ ಇತರ ಪ್ರಮುಖ ಬರೆಹಗಾರರಂತೆ ಯಾವುದೇ ಸಿದ್ಧ ಮತಧರ್ಮದ ಸಂಪ್ರದಾಯಕ್ಕೂ ಸೇರದೆ, ಮಲೆನಾಡಿನ ಕಾಡಿನ ಅಪ್ರತಿಷ್ಠಿತ ಸಾಮಾಜಿಕ ಸ್ತರಕ್ಕೆ ಸೇರಿದ ಕನ್ನಡದ ಮೊದಲ ಪ್ರಮುಖ ಶೂದ್ರ ಬರೆಹಗಾರರಾಗಿದ್ದಾರೆ ಎನ್ನುವುದೇ ಆಗಿದೆ. ಹಾಗೆಂದರೆ ಅವರ ಸಮಕಾಲೀನ ಪ್ರಮುಖ ಬರೆಹಗಾರರು ತಮ್ಮ ಸೃಜನಶೀಲತೆಯ ಉತ್ಕಟ ಕ್ಷಣಗಳಲ್ಲಿ, ತಾವು ಹುಟ್ಟಿ ಬೆಳೆದ ಮತ-ಧರ್ಮಗಳ ಉಪಾಧಿಗಳನ್ನು ಮೀರುವಲ್ಲಿ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಲಿಲ್ಲವೆಂದು ಈ ಮಾತಿನ ಅರ್ಥವಲ್ಲ. ಆದರೆ, ಸಮಾಜದ ಶೋಷಿತ ಸಮುದಾಯದಿಂದಲೇ ಬಂದಂಥ ಕುವೆಂಪು ಅವರಂತೆ, ನಿಚ್ಚಳವಾದ, ಮತ್ತು ಯಾವುದೇ ಒಡಂಬಡಿಕೆಗಳಿಲ್ಲದ ರೀತಿಯಲ್ಲಿ ಅಂದಿನ ಸಾಮಾಜಿಕ ವಾಸ್ತವಗಳನ್ನೂ ಹಿಂದೂ ಧಾರ್ಮಿಕ ಸಂಸ್ಕೃತಿಯೊಳಗಿನ ಬಿರುಕುಗಳನ್ನೂ ಗ್ರಹಿಸಲು ಸಾಧ್ಯವಾಗಿದೆ ಎಂದು ಹೇಳಲು ಬರುವುದಿಲ್ಲ. ಈ ಕಾರಣದಿಂದಲೇ ಕುವೆಂಪು ಅವರ ವೈಚಾರಿಕತೆಗಿರುವ ಬಂಡಾಯ ಮನೋಧರ್ಮ ಹಾಗೂ ಕ್ರಾಂತಿಕಾರಕ ಲಕ್ಷಣಗಳು ಬೇರೆ ಯಾರಲ್ಲೂ ಈ ಪ್ರಮಾಣದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕುವೆಂಪು ಅವರ ವೈಚಾರಿಕತೆಯ ಹಿಂದೆ ಅವರ ಶೂದ್ರ ಜಗತ್ತಿನ ವಾಸ್ತವ ಅನುಭವಗಳು ಹೇಗೆ ಮೂಲದ್ರವ್ಯಗಳಾಗಿವೆಯೋ, ಹಾಗೆಯೆ ಅವರು ಪಡೆದ ಇಂಗ್ಲಿಷ್ ಭಾಷಾ ಶಿಕ್ಷಣವು ತಂದುಕೊಟ್ಟ ಹೊಸ ಜಗತ್ತಿನ ಅನುಭವಗಳೂ ಇವೆ. ಇಂಗ್ಲಿಷ್ ಶಿಕ್ಷಣ ಎನ್ನುವುದು ಈ ದೇಶಕ್ಕೆ ವಸಾಹತುಶಾಹಿಯ ಕೊಡುಗೆ. ಈ ಕುರಿತು ವಿವಿಧ ಪ್ರತಿಕ್ರಿಯೆಗಳು ಮತ್ತು ವ್ಯಾಖ್ಯಾನಗಳು ಪ್ರಚಲಿತವಾಗಿವೆ. ಆದರೆ ಕುವೆಂಪು ಅವರ ದೃಷ್ಟಿಗೆ ಅದೊಂದು ಶಾಪವಲ್ಲ, ವರ. ವಾಸ್ತವವಾಗಿ ವಸಾಹತುಶಾಹಿ ಈ ಭಾರತದೊಳಕ್ಕೆ ಬಂದೂಕು-ಬೈಬಲ್ ಮತ್ತು ಇಂಗ್ಲಿಷ್ ಈ ಮೂರು ಅಸ್ತ್ರಗಳನ್ನು ಹಿಡಿದು ಪ್ರವೇಶಿಸಿತು. ಕುವೆಂಪು ಮುಖ್ಯವಾಗಿ  ಸಾಮ್ರಾಜ್ಯಶಾಹಿಯ ಆಕ್ರಮಣಕಾರೀ ಧೋರಣೆಯ ಸಂಕೇತವಾದ “ಬಂದೂಕ”ನ್ನು ದ್ವೇಷಿಸಿದರೂ, ಪ್ರತಿಭಟಿಸಿದರೂ,[1] ಇಂಗ್ಲಿಷ್ ಭಾಷೆಯನ್ನು ಈ ದೇಶದ ಕೆಳವರ್ಗದ ಬಿಡುಗಡೆಯ ಸಾಧನ ಎಂದು ಸ್ವಾಗತಿಸುತ್ತಾರೆ. ಈ ಕುರಿತು ಕುವೆಂಪು ಹೇಳುತ್ತಾರೆ: ‘ಬ್ರಾಹ್ಮಣಾದಿ ಉಚ್ಚವರ್ಗಗಳಿಂದ ಸಾವಿರಾರು ವರ್ಷಗಳ ಕಾಲ ತುಳಿಯಲ್ಪಟ್ಟು, ಶೋಷಿಸಲ್ಪಟ್ಟು, ದಾಸ್ಯವನ್ನು ದೈವದತ್ತವೆಂದೂ ವಿಧಿ ಎಂದೂ ಒಪ್ಪಿಕೊಂಡು ಕಾಲಕಸವಾಗಿ ಬಿದ್ದಿದ್ದ ಶೂದ್ರಾದಿ ವರ್ಗದವರನ್ನು ತಲೆಯೆತ್ತುವಂತೆ ಪ್ರೇರಿಸಿದ್ದು ಇಂಗ್ಲಿಷೇ’ (ನೆ.ದೋ. ಪು.೧೨೯). ಅಷ್ಟೇ ಅಲ್ಲ ಕುವೆಂಪು ಮೊದಲು ಒಬ್ಬ ಕವಿಯಾಗಿ ಕಾಣಿಸಿಕೊಂಡದ್ದು ಇಂಗ್ಲಿಷಿನಲ್ಲೇ! ಪಶ್ಚಿಮದ ಸಾಹಿತ್ಯ-ವಿಜ್ಞಾನ-ರಾಜಕೀಯ ಹಾಗೂ ರಾಷ್ಟ್ರೀಯ ಚಿಂತನೆಗಳು ಕುವೆಂಪು ಅವರ ಮನಃಕೋಶವನ್ನು ಪ್ರವೇಶಿಸಿದ್ದು ಇಂಗ್ಲಿಷಿನ ಮೂಲಕವೇ. ‘ಪ್ರಾಚ್ಯ-ಪಾಶ್ಚಾತ್ಯ ತತ್ವಜ್ಞಾನ ಖನಿಗಳಲ್ಲಿ ಬಹುವಜ್ರಗಳನಾಯ್ದು’ ಕುವೆಂಪು ಶ್ರೀಮಂತರಾದದ್ದು ಇಂಗ್ಲಿಷಿನಲ್ಲಿಯೆ.  ಸ್ವಾಮಿ ವಿವೇಕಾನಂದ-ಶ್ರೀರಾಮಕೃಷ್ಣ ಪರಮಹಂಸ- ಅರವಿಂದ- ಟ್ಯಾಗೂರ್- ಗಾಂಧೀ ಇವರ ತತ್ವಜ್ಞಾನದ ಪರಿಚಯವಾದದ್ದೂ ಇಂಗ್ಲಿಷಿನಲ್ಲಿಯೇ. ಕುವೆಂಪು ಕನ್ನಡದಲ್ಲಿ ನಡೆಯಿಸಿದ ಸಮಸ್ತ ಸಾಹಿತ್ಯ ಪ್ರಯೋಗಗಳ ಹಿಂದೆ ಇರುವ ಪಶ್ಚಿಮದ ತಿಳಿವಳಿಕೆಯೂ ಪರಂಪರೆಯ ಅರಿವೂ ಅವರಿಗೆ ಬಂದದ್ದು ಇಂಗ್ಲಿಷಿನ ಮುಖಾಂತರವೆ.[2]

ಇಂಗ್ಲಿಷಿನ ಮೂಲಕ ಕುವೆಂಪು ಅವರ ಸೃಜನಶೀಲತೆ ಹಾಗೂ ವೈಚಾರಿಕತೆಗಳಿಗೆ ಒದಗಿದ ಆಯಾಮದ ಜತೆಗೆ, ಅದೇ ಇಂಗ್ಲಿಷಿನ ಮೂಲಕ ಅವರಿಗೆ ಪರಿಚಯವಾದ ಶ್ರೀರಾಮಕೃಷ್ಣ ವಿವೇಕಾನಂದ ಸಾಹಿತ್ಯವೂ ಮತ್ತು ಅನಂತರ ಅವರು ಪಡೆದುಕೊಂಡ ಶ್ರೀರಾಮಕೃಷ್ಣಾಶ್ರಮದ ಆಶ್ರಯದ ಪರಿಣಾಮವೂ ಅವರ ತಾತ್ವಿಕ ವೈಚಾರಿಕತೆಯನ್ನು ರೂಪಿಸಿದ ಬಗೆ ವಿಶೇಷ ರೀತಿಯದಾಗಿದೆ. ಅವರಿನ್ನೂ ಆಶ್ರಮವನ್ನು ಸೇರುವ ಮೊದಲೇ, ತಮ್ಮ ಹದಿನೆಂಟನೆಯ ವಯಸ್ಸಿನ ವಿದ್ಯಾರ್ಥಿಯಾಗಿದ್ದಾಗಲೇ ಮೈಸೂರಿನ ಪಬ್ಲಿಕ್ ಲೈಬ್ರರಿಯಲ್ಲಿ ಶ್ರೀರಾಮಕೃಷ್ಣ ವಿವೇಕಾನಂದ ವಿಷಯಕವಾದ ಕೃತಿಶ್ರೇಣಿಯ ದರ್ಶನವಾಗಿ ಮುಂದೆ ಅವರ ತರುಣ ಕವಿಚೇತನವು, ಅದರ ತಾತ್ವಿಕ ವೈಶಾಲ್ಯ ಹಾಗೂ ಓಜಸ್ಸಿಗೆ ವಶವಾಗಿ, ವಿವೇಕಾನಂದರನ್ನು ತಮ್ಮ ಮಾರ್ಗದರ್ಶಕರನ್ನಾಗಿ ಸ್ವೀಕರಿಸಿಬಿಟ್ಟಿತು. ಮುಂದೆ ದೈವಕೃಪೆಯೋ ಎಂಬಂತೆ ಶ್ರೀರಾಮಕೃಷ್ಣಾಶ್ರಮವೇ ಅವನನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲಂತೂ ಶ್ರೀರಾಮಕೃಷ್ಣರ ಸರ್ವಧರ್ಮ ಸಮನ್ವಯವೇ, ಈ ಕಾಲಕ್ಕೆ ಅಗತ್ಯವಾದ ಧರ್ಮವೆಂದು ಒಪ್ಪಿಕೊಂಡದ್ದಲ್ಲದೆ, ಶ್ರೀ ವಿವೇಕಾನಂದರ ಅದ್ಭುತವಾದ ವೈಚಾರಿಕ ವಾಕ್ಸರಣಿ ಹಾಗೂ ವ್ಯಕ್ತಿತ್ವ ಒಂದು ರೀತಿಯಲ್ಲಿ ಕುವೆಂಪು ಅವರನ್ನು ಆಕ್ರಮಿಸಿಬಿಟ್ಟಿತೆಂದೇ ಹೇಳಬೇಕು.

ಈ ಹಿನ್ನೆಲೆಯಲ್ಲಿ ಕುವೆಂಪು, ತಾವು ಹುಟ್ಟಿ ಬೆಳೆದು ಬಂದ ಕೆಳವರ್ಗದ ಜನ ಸಮುದಾಯದ ಬಿಡುಗಡೆಗೆ, ಇಂಗ್ಲಿಷ್ ಶಿಕ್ಷಣ ಮತ್ತು ಶ್ರೀರಾಮಕೃಷ್ಣ ವಿವೇಕಾನಂದರ ಸರ್ವಧರ್ಮ ಸಮನ್ವಯ ತತ್ವದ ಪರಿಚಯ–ಈ ಎರಡೇ ಸಾಧನಗಳೆಂದು ಯೋಚಿಸಿದ್ದು ಸಹಜವಾಗಿದೆ. ಇಂಗ್ಲಿಷ್ ಶಿಕ್ಷಣ ಆಗಲೇ ಆ ಪರಿಸರದಲ್ಲಿ ಪ್ರಾರಂಭವಾಗಿತ್ತು. ಆದರೆ ಭೂತ-ಪ್ರೇತ-ಜಕ್ಕಿಣಿ ಇತ್ಯಾದಿಗಳನ್ನು ಪೂಜಿಸುತ್ತ ಮಲೆನಾಡಿನ ಒಕ್ಕಲಿಗರು ‘ಇತರ ಶೂದ್ರ ವರ್ಗದವರಂತೆ ಬ್ರಾಹ್ಮಣರೊಡ್ಡಿದ ಮತಾಚಾರದ ಮೌಢ್ಯ ಸಂಕುಲಗಳ ಬೋನಿನೊಳಗೆ ಸಿಕ್ಕಿಬಿದ್ದ ಇಲಿಗಳಾಗಿದ್ದರು. ಆ ಇಲಿಗಳನ್ನು ಬೋನಿನಿಂದ ಬಿಡಿಸಲು ಕ್ರೆ ಸ್ತ ಪಾದ್ರಿಗಳು ತಮ್ಮ ರೀತಿಯ ಪ್ರಯತ್ನಗಳನ್ನು ಮಾಡಿ, ಆ ಬೋನಿನಿಂದ ಹೊರ ಬಂದವುಗಳನ್ನು ಹಿಡಿದು ಹಾಕಿಕೊಳ್ಳಲು ತಮ್ಮದೇ ಆಗಿರುವ ಬೇರೆಯ ಬೋನುಗಳನ್ನು ಒಡ್ಡಿಕೊಂಡಿದ್ದರು. ಶೂದ್ರರು ಬ್ರಾಹ್ಮಣ್ಯ ಮೌಢ್ಯದ ಬೋನಿನಿಂದ ನೆಗೆದರೆ ಕ್ರೆ ಸ್ತ ಮೌಢ್ಯದ ಬೋನಿಗೆ ಬೀಳಬೇಕಾಗಿತ್ತು. ಎರಡೂ ಪುರೋಹಿತಶಾಹಿಗಳೇ! ಎರಡೂ ಪುರೋಹಿತಶಾಹಿಗಳು ಬೋನಿನೊಳಗೆ ಇಲಿಗಳನ್ನಾಕರ್ಷಿಸಲು ಇಡುತ್ತಿದ್ದ ತಿಂಡಿಗಳು ರೂಪದಲ್ಲಿ ಬೇರೆಬೇರೆಯಾಗಿದ್ದರೂ, ಸ್ವರೂಪದಲ್ಲಿ ಒಂದೇ ತರಹದ್ದಾಗಿದ್ದವು: (ನೆ.ದೋ. ಪು.೭೪೪).[3] ಅಂದಿನ ಚರಿತ್ರೆಯನ್ನು ಹೀಗೆ ರೂಪಕ ಮಾರ್ಗದಲ್ಲಿ ವರ್ಣಿಸುವ ಕುವೆಂಪು ಯೋಚಿಸುತ್ತಾರೆ: ‘ನಮ್ಮವರನ್ನು ಈ ಹಳೆಯ ಮತ ಮೌಢ್ಯ ಸಂಕುಲಗಳಿಂದ ಪಾರುಮಾಡಿ ಅವರಿಗೆ ವೈಚಾರಿಕತೆಯನ್ನೂ ವೈಜ್ಞಾನಿಕತೆಯನ್ನೂ ನೀಡಿ, ನಿಜವಾದ ಉಪನಿಷತ್ ಪ್ರಣೀತವಾದ ವೇದಾಂತದ ಅಧ್ಯಾತ್ಮ ಶ್ರೀಯೆಡೆಗೆ ಅವರನ್ನು ಕರೆದೊಯ್ಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅವರಿಗೆ ಶ್ರೀರಾಮಕೃಷ್ಣ ಮತ್ತು ಸ್ವಾಮಿವಿವೇಕಾನಂದರ ಪರಿಚಯ ಮಾಡಿಕೊಟ್ಟು ಅವರ ಚೇತನವನ್ನು ಮೇಲೆತ್ತಿದರೆ ಆ ಕೆಲಸ ತನ್ನಷ್ಟಕ್ಕೆ ತಾನೆ ಕೈಗೂಡುತ್ತದೆ ಎಂದೂ ನನ್ನ ನಂಬಿಕೆ’ (ನೆ.ದೋ. ಪು.೭೪೪-೭೪೫)

ಕುವೆಂಪು ಅವರಿಗೆ ವಿವೇಕಾನಂದರಂತೆ, ಸಮಾಜದ ಶ್ರೇಣೀಕರಣವನ್ನು ರಕ್ಷಿಸಿಕೊಂಡು ಬಂದ ಹಿಂದೂಧರ್ಮವನ್ನು ಕುರಿತು ತೀವ್ರವಾದ ಅಸಮಾಧಾನವಿದೆ. ‘ವರ್ಣಾಶ್ರಮ ಜಾತಿಪದ್ಧತಿ, ಚಾತುರ್ವಣ್ಯ ಮೊದಲಾದ ಮೂಢನಂಬಿಕೆಗಳ ಪುರೋಹಿತಶಾಹಿಯಿಂದ ಸಂಪೂರ್ಣ ಪಾರಾದಂದೇ, ಹಿಂದೂಮತವು ವೇದಾಂತದರ್ಶನವಾಗಿ, ವಿಶ್ವಧರ್ಮವಾಗಿ ಸರ್ವಧರ್ಮಗಳನ್ನೂ ಒಳಗೊಂಡು, ನಿಜವಾದ ವಿಶ್ವಧರ್ಮವಾಗುತ್ತದೆ. ಅಲ್ಲಿಯವರೆಗೂ ಅದು ಶೂದ್ರಪೀಡನಕರವಾಗಿ, ಪುರೋಹಿತ ಪೀಡೆಯ ಬ್ರಾಹ್ಮಣ್ಯ ಮಾತ್ರವಾಗಿರುತ್ತದೆ’ (ನೆ.ದೋ. ಪು. ೫೫೨-೫೫೩) ಎನ್ನುವ ಕುವೆಂಪು, ‘ಪುರೋಹಿತಶಾಹಿಯ’ ‘ಶೂದ್ರಪೀಡನ ಕರ’ ಸಂದರ್ಭವೊಂದನ್ನು ತಮ್ಮ ಅನುಭವದಿಂದ ಉಲ್ಲೇಖಿಸುತ್ತಾರೆ: ಆ ಪ್ರಸಂಗ ಹೀಗಿದೆ: ಅದು ೧೯೨೬-೧೯೨೭ರ ಕಾಲ. ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದ ಕುವೆಂಪು ಬೇಸಿಗೆ ರಜಾಕ್ಕೆ ಕುಪ್ಪಳ್ಳಿಗೆ ಬಂದಿದ್ದಾರೆ. ಒಂದು ದಿನ ಮಧ್ಯಾಹ್ನ ಉಪ್ಪರಿಗೆಯ ಕೋಣೆಯಲ್ಲಿ ಓದುತ್ತ ಕೂತಿದ್ದಾರೆ. ಮುಂಗಾರು ಮೋಡಗಳು ದಟ್ಟೆ ಸಿವೆ. ಬಿರುಗಾಳಿ ಬೀಸಿ, ಗುಡುಗು ಸಹಿತ ಮಳೆ ಶುರುವಾಯಿತು. ಆಗ ಹಠಾತ್ತನೆ ಕಣ್ಣು ಕೋರೈಸುವ ಮಿಂಚೂ, ಅದರ ಜತೆಗೆ ಬ್ರಹ್ಮಾಂಡವನ್ನೆ ಪುಡಿ ಪುಡಿ ಮಾಡುವಂಥ ಸಿಡಿಲು ಬಡಿಯಿತು–ಕುಪ್ಪಳ್ಳಿಯ ಮನೆಯ ಪಕ್ಕದ ಅಡಿಕೆತೋಟಕ್ಕೆ. ತೋಟದ ಕೆಳಗಣ ಒಂದು ಭಾಗದ ಅಡಕೆ ಮರಗಳೂ, ಬಾಳೆ ಗಿಡಗಳೂ ಸಿಡಿಲ ಹೊಡೆತಕ್ಕೆ ಸುಟ್ಟು ನೆಲಕ್ಕೆ ಒರಗಿದ್ದವು. ಮನೆಯ ಹಿರೀಕರು, ಭಟ್ಟರನ್ನು ಕರೆಸಿ ಕೇಳಿದರು. ಅವರೆಂದರು, ಮನೆಯ ಯಾರದೋ ದೋಷದಿಂದ ಇಂದ್ರನ ಕೋಪ ಕೆರಳಿ ಸಿಡಿಲಾಗಿ ಮನೆಯ ಯಜಮಾನರಿಗೆ ಎಚ್ಚರಿಕೆ ಕೊಟ್ಟಿದೆ. ಈ ದೋಷ ಪರಿಹಾರಕ್ಕೆ ಶಾಂತಿ ಮಾಡಿಸಬೇಕು. ಅಂದರೆ ಬ್ರಾಹ್ಮಣರ ಕೈಯಿಂದ ಪೂಜೆ-ಗೀಜೆ ಹೋಮ-ಗೀಮ ಮಾಡಿಸಿ ಅವರಿಗೆ ಸಮಾರಾಧನೆಯ ಊಟ ಹಾಕಿಸಿ ದಾನ-ದಕ್ಷಿಣೆ ಕೊಡಬೇಕು–ಎಂದು. ಕುವೆಂಪು ಅವರ ದೊಡ್ಡ ಚಿಕ್ಕಪ್ಪಯ್ಯನವರು ಮನೆಗೆ ಸಂಭವಿಸಲಿರುವ ಕೇಡನ್ನು ತಪ್ಪಿಸುವ ಸಲುವಾಗಿ ‘ಶಾಂತಿ’ ಮಾಡಿಸಲು ನಿಶ್ಚಯಿಸಿದರು.

ಸಿಡಿಲು ಬಡಿದಂಥ ಒಂದು ನೈಸರ್ಗಿಕ ವ್ಯಾಪಾರವನ್ನು, ಪುರೋಹಿತಶಾಹಿ ಪೌರಾಣಿಕವಾಗಿ ವ್ಯಾಖ್ಯಾನಿಸಿ, ಜನಸಾಮಾನ್ಯರನ್ನು ಹೇಗೆ ಸುಲಿಗೆ ಮಾಡುತ್ತದೆ– ಎಂಬುದನ್ನರಿತ ಕುವೆಂಪು, ಈ ಸಂದರ್ಭಕ್ಕೆ ತೋರಿದ ಪ್ರತಿಕ್ರಿಯೆ ಹೀಗಿದೆ:

ತರುಣ ವರ್ಗದವರಾದ ನಮಗೆಲ್ಲ ಒಳಗೊಳಗೆ ತುಂಬ ಅಸಮಧಾನ. ಸಿಡಿಲು ತೋಟಕ್ಕೆ ಹೊಡೆದು ಆಗಿರುವ ನಷ್ಟಕ್ಕೆ ಪರಿಹಾರ ದೊರೆಯುತ್ತದೆಯೆ ಹಾರುವರಿಗೆ ಊಟ ಹಾಕಿದ ಮಾತ್ರಕ್ಕೆ? ಬೇರೆ ಸಸಿ ಹಾಕಿ, ಗೊಬ್ಬರ ಹಾಕಿ, ಕೃಷಿ ಮಾಡಿದರೆ ಆಗಿರುವ ನಷ್ಟಕ್ಕೆ ಕ್ರಮೇಣ ಪರಿಹಾರ ದೊರೆಯುತ್ತದೆ. ಪುರೋಹಿತವರ್ಗ ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಎಲ್ಲ ಮತಗಳಲ್ಲಿಯೂ ಇದೇ ಕೆಲಸ ಮಾಡುತ್ತ ಬಂದಿದೆ. ತಮ್ಮ ಹೊಟ್ಟೆ ಹೊರೆದುಕೊಳ್ಳಲು: ಬುಡಭದ್ರವಿಲ್ಲದ ಮೂಢನಂಬಿಕೆಗಳನ್ನು ಸೃಷ್ಟಿಸಿ, ಅವಕ್ಕೆ ಭಾವಮಯ ವರ್ಣದ ಪೌರಾಣಿಕ ಕಥಾಧಾರಗಳನ್ನು ಕಲ್ಪಿಸಿ, ಶಾಸ್ತ್ರಜ್ಞಾನ ಭ್ರಾಂತಿಯ ಹಗಲುವೇಷಗಳನ್ನು ತೊಡಿಸಿ, ಶೂದ್ರಾದಿಗಳ ಅಜ್ಞಾನವನ್ನೆ ತಮ್ಮ ಆದಾಯದ ಬಂಡವಾಳವನ್ನಾಗಿ ಮಾಡಿಕೊಂಡು, ಅವರ ಗೆಯ್ಮೆಯನ್ನೆಲ್ಲ ತಮ್ಮ ಸೌಕರ್ಯ ಸೌಖ್ಯಗಳಿಗಾಗಿ ಲೂಟಿ ಹೊಡೆಯುತ್ತಾ ಬರುತ್ತಿದ್ದಾರೆ. ಮಠ, ಗುರು, ಪೂಜೆ, ಹೋಮ, ಯಜ್ಞ, ಸತ್ಯನಾರಾಯಣವ್ರತ ಇತ್ಯಾದಿ ಭದ್ರ ಕೋಟೆಗಳಲ್ಲಿ ತಮ್ಮ ರಕ್ಷಾಸ್ಥಾನಗಳನ್ನು ರಚಿಸಿಕೊಂಡು, ಮಂಕು ಕುರಿಗಳುಶೂದ್ರರು ಕಟುಕರ ಕೈಯ ಹುಸಿ ಹಸುರಿಗೆ ಬ್ಯಾಗುಡುತ್ತಾ ನುಗ್ಗುತ್ತಿವೆ!
(ನೆ.ದೋ. ಪು.೫೫೬-೫೫೭)

ಕುವೆಂಪು ಅವರ ಈ ಪ್ರತಿಕ್ರಿಯೆಯಲ್ಲಿ, ದೇವರು-ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರ ನಂಬಿಕೆ ಮತ್ತು ಮೌಢ್ಯಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಅವರನ್ನು ಸುಲಿಗೆ ಮಾಡುವ ಪುರೋಹಿತಶಾಹೀ ಕುತಂತ್ರವನ್ನು ಕುರಿತ ಸಿಟ್ಟು ಪ್ರಧಾನವಾಗಿದೆ. ಅಷ್ಟೇ ಅಲ್ಲ ಪುರೋಹಿತಶಾಹಿ ಎನ್ನುವುದು ಹಲವರು ತಪ್ಪಾಗಿ ಭಾವಿಸುವಂತೆ ಯಾವುದೋ ಒಂದು ನಿರ್ದಿಷ್ಟ ಮತ ಧರ್ಮ ಅಥವಾ ವರ್ಗಕ್ಕೆ ಸಂಬಂಧಪಟ್ಟದ್ದಲ್ಲ; ಅದು ‘ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಎಲ್ಲ ಮತಗಳಲ್ಲಿಯೂ’ ಇರುವ ಒಂದು ಶೋಷಕವರ್ಗ ಎನ್ನುವ ಸಂಗತಿಯನ್ನು ಕುವೆಂಪು ಇಲ್ಲಿ ಸ್ಪಷ್ಟಪಡಿಸುತ್ತಾರೆ.

ಕುವೆಂಪು ಅವರ ವೈಚಾರಿಕತೆಯಲ್ಲಿ ಈ ಪುರೋಹಿತಶಾಹಿಯ ಕೇಂದ್ರಗಳಾದ ಗುಡಿ-ಚರ್ಚು-ಮಸೀದಿಗಳನ್ನು ನಿರಾಕರಿಸುವ ಧ್ವನಿಯೊಂದು ತುಂಬ ಪ್ರಧಾನವಾಗಿ ಕೇಳಿಬರುವ ಅಂಶವಾಗಿದೆ. ಆಧುನಿಕ ನವೋದಯದ ಕನ್ನಡದ ಪ್ರಮುಖ ಕವಿಗಳ ನಡುವೆ ಕುವೆಂಪು ಬೇರೆಯಾಗಿ ನಿಲ್ಲುವುದು ಈ ಕಾರಣದಿಂದಲೇ. ೧೯೨೭ರಷ್ಟು ಹಿಂದೆಯೇ ಅವರು ಬರೆದ ‘ಜಲಗಾರ’ ನಾಟಕದಲ್ಲಿಯೇ ಸಾಂಸ್ಥಿಕ ಧರ್ಮದ ಸಂಕೇತವಾದ ದೇವಸ್ಥಾನವನ್ನೂ ಮತ್ತು ದೇವಸ್ಥಾನ ಕೇಂದ್ರಿತ ಪುರೋಹಿತಶಾಹೀ ಶೋಷಣೆಗಳನ್ನೂ ಕುರಿತು ಕುವೆಂಪು ತೀವ್ರವಾದ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ ಎಂಬುದನ್ನು ಗಮನಿಸಬಹುದು. ‘ಗುಡಿಗಳಿವು ಪಾಪಿಗಳ ಭೋಗಿಗಳ ಗೂಡುಗಳು’–ಎನ್ನುವುದು ಈ ನಾಟಕದಲ್ಲಿ ತಿರುಕನೊಬ್ಬನು ಆಡುವ ಮಾತು. ‘ಶಿವಗುಡಿಯ ಶಿವನು ಜೋಯಿಸರ ಶಿವನಂತೆ’ ಎಂದು ಹೇಳುತ್ತಾ, ದೇವಸ್ಥಾನದ ಸಮೀಪಕ್ಕೆ ಹೋಗುವುದನ್ನು ನಿರಾಕರಿಸುತ್ತ, ತಾನು ಮಾಡುವ ದೈನಂದಿನ ಕರ್ಮಗಳಲ್ಲಿ ತಾನು ಶಿವನನ್ನು ಕಾಣುತ್ತೇನೆ ಎನ್ನುವ ಜಲಗಾರನ ದಿಟ್ಟತನದ ನಿಲುವು ತುಂಬ ಕ್ರಾಂತಿಕಾರಕ ವಾದದ್ದೆಂದು ಬೇರೆ ಹೇಳಬೇಕಾಗಿಲ್ಲ. ವಾಸ್ತವವಾಗಿ ಭಾರತೀಯ ಸಂದರ್ಭದಲ್ಲಿ ಅದು ಹರಿಜನರಿಗೆ ದೇವಸ್ಥಾನ ಪ್ರವೇಶವನ್ನು ಕಲ್ಪಿಸುವ ಗಾಂಧೀಜಿಯವರ ಚಳುವಳಿಯ ಕಾಲ. ಆದರೆ ಈ ವಿಚಾರದಲ್ಲಿ ಕುವೆಂಪು ಅವರು ಗಾಂಧೀಜಿಗಿಂತ ಭಿನ್ನವಾದ ನಿಲುವನ್ನು ತಾಳುತ್ತಾರೆ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಗಾಂಧೀಜಿಯವರು ಹರಿಜನರಿಗೆ ದೇವಸ್ಥಾನ ಪ್ರವೇಶವನ್ನು ಕಲ್ಪಿಸುವ ಹೋರಾಟದಲ್ಲಿ ತೊಡಗಿದರೆ, ಕುವೆಂಪು ಅವರ ಜಲಗಾರ (ಹರಿಜನ) ದೇವಾಲಯವನ್ನೆ ನಿರಾಕರಿಸುತ್ತಾನೆ. ದೇವಾಲಯ ಪ್ರವೇಶಕ್ಕೆ ಹೋರಾಡುವುದಕ್ಕಿಂತ ದೇವಾಲಯವನ್ನು ನಿರಾಕರಿಸುವ ಮನೋಧರ್ಮ ಹೆಚ್ಚು ಕ್ರಾಂತಿಕಾರಕ ವಾದದ್ದು. ಅಷ್ಟೇ ಅಲ್ಲ ಕುವೆಂಪು ಅವರ ಈ ನಾಟಕದಲ್ಲಿ ಜಲಗಾರನಿಗೆ ಶಿವ ಪ್ರತ್ಯಕ್ಷವಾಗುವುದು ಪುರಾಣೋಕ್ತವಾದ ರೂಪದಿಂದ ಅಲ್ಲ, ಜಗದ ಜಲಗಾರನ ರೂಪದಲ್ಲಿ!

‘ದೇವರು-ಪೂಜಾರಿ’–ಎಂಬ ಕವಿತೆಯೊಳಗೆ (ಸ.ಕಾ. ಸಂ.೧ ಪು.೪೧೬) ಕುವೆಂಪು ಮಾನವಮತಿಗೆ ಮತ್ತೆ ಮತ್ತೆ ಕವಿಯುವ ಕತ್ತಲೆಯೊಳಗೆ ಅವತಾರನು ಹತ್ತಿಸಿದುರಿಯನ್ನು ಅಗ್ರೋದಕದಿಂದ ನಂದಿಸುತ್ತ ‘ಬೆಂಕಿಯನಾರಿಸಿ ಬೂದಿಯ ಮಾಡಿ, ಆ ಬೂದಿಯ ಮಹಿಮೆಯನೇ ಕೊಂಡಾಡಿ’ ಮಿಂಚುವ ಪೂಜಾರಿಯ ಅಥವಾ ಪುರೋಹಿತ ಶಾಹಿಯ ಕುತಂತ್ರವನ್ನು ಚಿತ್ರಿಸುವ ಕ್ರಮ ಒಂದು ಸಾರ್ವಕಾಲಿಕ ಸತ್ಯದ ಪ್ರತಿಮೆಯಾಗಿದೆ. ಈ ಪುರೋಹಿತಶಾಹಿಯ ಪೀಡನೆಯಿಂದ ಪಾರಾಗಬೇಕಾದರೆ ಇರುವ ದಾರಿ ಎಂದರೆ, ಗುಡಿ-ಚರ್ಚು ಮಸಜೀದಿಗಳನ್ನು ಬಿಟ್ಟು ಹೊರಬರುವುದು. ‘ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುತಿಹರನೆಲ್ಲ, ಭಕ್ತರಕ್ತವ ಹೀರಿ ಕೊಬ್ಬಿಹರನೆಲ್ಲ, ಗಂಟೆಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು ಕಡಲೆಡೆಗೆ ನೂಕಿರೈ’ (ಸ.ಕಾ. ಸಂ.೧. ಪು.೧೪೪) ಎಂದು ಕರೆ ಕೊಡುವ ಕುವೆಂಪು ಅವರ ಎಷ್ಟೋ ಕವಿತೆಗಳು ಅವರ ಕ್ರಾಂತಿಕಾರೀ ವೈಚಾರಿಕತೆಯ ಪ್ರತಿನಿಧಿಗಳಂತಿವೆ. ಅದರಲ್ಲಿಯೂ, ಈಗ ಉಲ್ಲೇಖಿಸಿದ ಎರಡು ಕವಿತೆಗಳನ್ನು ಕುವೆಂಪು ಬರೆದದ್ದು–‘ನೂರು ದೇವರನೆಲ್ಲ ನೂಕಾಚೆ ದೂರ’ (೧೯೩೦), ‘ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ’ (೧೯೩೫)–ಆರೇಳು ದಶಕಗಳ ಹಿಂದೆ. ಆದರೆ ಇತ್ತೀಚಿನ ಕೆಲವು ದಶಕಗಳಿಂದ, ದೇವರು-ಧರ್ಮ-ದೇವಸ್ಥಾನಗಳ ಹೆಸರಿನಲ್ಲಿ, ಧರ್ಮ ಮತ್ತು ರಾಜಕಾರಣಗಳ ಅಪವಿತ್ರ ಮೈತ್ರಿಯಿಂದ ನಮ್ಮ ರಾಷ್ಟ್ರದ ಬದುಕು ಕಲುಷಿತವಾಗುತ್ತಿರುವ ಅಸ್ವಸ್ಥ ಸಾಮಾಜಿಕ ಸಂದರ್ಭದ ಹಿನ್ನೆಲೆಯಲ್ಲಿ ನೋಡಿದರೆ, ಕುವೆಂಪು ಅವರ ಈ ಕವಿತೆಗಳು ನಮ್ಮ ಈ ಹೊತ್ತಿನ ಸಂದರ್ಭಕ್ಕೆ ತೋರಿದ ಪ್ರತಿಕ್ರಿಯೆಯೋ ಎಂಬಂತೆ ಭಾಸವಾಗುತ್ತದೆ. ಕವಿ ಯಾವತ್ತೋ ಬರೆದ ಕವಿತೆ, ಈ ಹೊತ್ತಿನ ನಮ್ಮ ಪರಿಸ್ಥಿತಿಯನ್ನೆ ಕುರಿತು ಬರೆದಂತೆ ಪ್ರಸ್ತುತವಾಗುತ್ತಿದೆಯಲ್ಲ–ಅದೇ ಕವಿಯ ಮಹತ್ತಿಗೆ ಸಾಕ್ಷಿ. ಈ ಕವಿತೆಗಳ ನಡುವೆ ‘ಸೋಮನಾಥಪುರ ದೇವಾಲಯ’ವನ್ನು ಕುರಿತು (ಸ.ಕಾ.ಪು.೫೩) ೧೯೨೮ರಷ್ಟು ಹಿಂದೆಯೆ ಅವರು ಬರೆದ ‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’–ಎಂದು ಪ್ರಾರಂಭವಾಗುವ ಕವಿತೆ, ಮೇಲುನೋಟಕ್ಕೆ ಕುವೆಂಪು ದೇವಾಲಯ ಪ್ರವೇಶಕ್ಕೆ ಕೊಡುವ ಕರೆಯಂತೆ ಮತ್ತು ದೇವಸ್ಥಾನಗಳ ಪರವಾಗಿರುವಂತೆ ಭಾಸವಾದರೂ, ಮೂಲತಃ ದೇವಸ್ಥಾನಗಳನ್ನು ಕುರಿತ ಕುವೆಂಪು ಅವರ ವೈಚಾರಿಕತೆಗೆ ವಿರೋಧವಾಗೇನೂ ಇಲ್ಲ. ಯಾಕೆಂದರೆ ಕುವೆಂಪು ದೇವಸ್ಥಾನ ವಿರೋಧಿಯೇನಲ್ಲ; ಅವರ ವಿರೋಧವೇನಿದ್ದರೂ ದೇವಸ್ಥಾನಗಳನ್ನು ಸುಲಿಗೆಯ ಹಾಗೂ ಅರ್ಥಹೀನ ಸಂಪ್ರದಾಯಗಳ ಕೇಂದ್ರವನ್ನಾಗಿ ಮಾಡಿಕೊಂಡ ಪುರೋಹಿತಶಾಹೀ ಪ್ರವೃತ್ತಿಗಳನ್ನು ಕುರಿತು. ಇಲ್ಲಿ ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಎಂದು ಕುವೆಂಪು ಕರೆ ಕೊಡುವುದು, ಈ ದೇವಸ್ಥಾನ ತನ್ನ ಶಿಲ್ಪ ವೈಭವದಿಂದ ‘ಕಲೆಯಬಲೆ’ಯಂತೆ ಇದೆ ಎನ್ನುವ ಕಾರಣಕ್ಕೆ ಮಾತ್ರ ಅಲ್ಲ; ಅದಕ್ಕೂ ಮಿಗಿಲಾಗಿ, ‘ಗಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ, ಕರ್ಪೂರದಾರತಿಯ ಜ್ಯೋತಿಯಿಲ್ಲ’–ಎನ್ನುವ ಕಾರಣಕ್ಕೆ. ಗಂಟೆಗಳ ದನಿ, ಜಾಗಟೆಯ ಸದ್ದು ಮತ್ತು ಕರ್ಪೂರದಾರತಿ ಇಲ್ಲದಿರುವುದು ಒಂದು ನಷ್ಟ ಎಂಬ ವಿಷಾದಭಾವ ಇಲ್ಲಿದೆ ಎಂದೇನಾದರೂ ಭಾವಿಸುವುದಾದರೆ ಕವಿತೆಯ ಅರ್ಥದಿಂದ ನಾವು ವಂಚಿತರಾದಂತೆಯೇ ಸರಿ. ಯಾಕೆಂದರೆ ಗಂಟೆಗಳ ದನಿ, ಜಾಗಟೆಯ ಮೊಳಗು, ಕರ್ಪೂರದಾರತಿ ಇವೆಲ್ಲ ಪೂಜಾರಿ ಅಥವಾ ಪುರೋಹಿತನಿದ್ದಾನೆ ಎಂಬುದಕ್ಕೆ ಸಂಕೇತ; ಆದರೆ ಇಲ್ಲಿ ಪೂಜಾರಿ ಅಥವಾ ಪುರೋಹಿತ ಇಲ್ಲ, ಆದ ಕಾರಣ ಗಂಟೆಗಳ ದನಿಯಾಗಲೀ, ಜಾಗಟೆಯ ಸದ್ದಾಗಲೀ ಕರ್ಪೂರದಾರತಿಯಾಗಲೀ ಇಲ್ಲ. ಯಾಕೆಂದರೆ ಸೋಮನಾಥಪುರದ ಈ ದೇವಾಲಯ ಮತ್ತು ಮೂರ್ತಿ ಪರಕೀಯರ ದಾಳಿಯಿಂದ  ಭಗ್ನವಾಗಿರುವುದರಿಂದ ಅಲ್ಲಿ ಯಾವ ಪೂಜೆಯೂ ಇಲ್ಲ. ಹೀಗಾದುದರಿಂದ ಪೂಜೆಯೂ ಇಲ್ಲದ, ಪೂಜಾರಿಯೂ ಇಲ್ಲದ, ಆದರೆ ತನ್ನ ಶಿಲ್ಪಕಲಾವೈಭವದಿಂದ ‘ಭಗವಂತನಾನಂದ ಮೂರ್ತಿ’ಗೊಂಡಂತಿರುವ ಈ ದೇವಸ್ಥಾನಕ್ಕೆ ಕುವೆಂಪು ಯಾತ್ರಿಕರನ್ನು ಕರೆಯುತ್ತಾರೆ.

ಪುರೋಹಿತಶಾಹಿಯ ಕಾರಣದಿಂದ ದೇವಾಲಯಗಳನ್ನು ನಿರಾಕರಿಸುವ ಕುವೆಂಪು ಪರ್ಯಾಯವಾಗಿ ನಿಸರ್ಗಪ್ರೀತಿ ಮತ್ತು ಆರಾಧನೆಗಳನ್ನು ಸೂಚಿಸುತ್ತಾರೆ. ಈ ಕುರಿತು–

ಯಾವಗುಡಿ
ಮಿಗಿಲು ಭುವನ ದೇವಾಲಯಕೆ? ಮೇಣಾವ
ವಿಗ್ರಹಂ ಮೀರಿರುವುದೀಚೈತ್ರ ಪಂಚಮಿಯ
ಪುಣ್ಯ ಪ್ರಭಾತದಲಿ, ದೂರದ ದಿಗಂತದಿಂ
ಪ್ರತ್ಯಕ್ಷರಾಗಿರುವ ಭವ್ಯ ಸುಂದರದಿವ್ಯ
ಸೂರ್ಯದೇವನಿಗೆ?………
(ಸ.ಕಾ. ಸಂ.೧. ಪು.೬೪೬)

ಎನ್ನುವ ಕುವೆಂಪು, ‘ಸೃಷ್ಟಿ ಸೌಂದರ್ಯದೊಲ್ಮೆಯ ಸೃಷ್ಟಿಕರ್ತಂಗೆ ಪೂಜೆಯಯ್’ (ಶ್ರೀರಾ.ದ.೧-೨. ಪಂ.೧೨೬-೧೨೭) ಎನ್ನುವ ಬೇರೊಂದು ಧಾರ್ಮಿಕ ನಿಲುವನ್ನು ಎತ್ತಿ ಹಿಡಿಯುತ್ತಾರೆ. ಯಾಕೆಂದರೆ ಆ ಸೃಷ್ಟಿಕರ್ತನೊಬ್ಬನು ಇದ್ದಾನೆ ಎನ್ನುವುದಕ್ಕೆ ಈ ಸೃಷ್ಟಿಯೇ ಪರಮಪ್ರಮಾಣ. ಒಂದು ಬೆಳ್ಳಕ್ಕಿಯ ಪಂಕ್ತಿಯಲ್ಲಿ ದೇವರ ರುಜುವನ್ನು ಕಾಣುವ ಕುವೆಂಪು ಈ ಜಗತ್ತಿನ ವಿಸ್ಮಯಕ್ಕೆ ಹಾಗೂ ಅದರ ಕುಶಲತೆಗೆ ಚಂದಕ್ಕೆ ಚಿರಚೇತನವಾಗಿ ತಾನಿದ್ದೇನೆ ಎನ್ನುವುದನ್ನು ದೃಢೀಕರಿಸುವ ದೇವರ ರುಜುವಿನಂತಿದೆ, ಈ ಗಿರಿ-ವನ ಪಟದಾಕಾಶದಲ್ಲಿ ಕಾಣಿಸಿಕೊಂಡ ಬೆಳಕ್ಕಿಯ ಪಂಕ್ತಿ ಎನ್ನುತ್ತಾರೆ. (ದೇವರು ರುಜು ಮಾಡಿದನು, ಸ.ಕಾ. ಸಂ.೧. ಪು.೬೫೧). ಇಂಥ ಅನುಭವದ ಕ್ಷಣದಲ್ಲಿ ವ್ಯಕ್ತಿ ಪಡೆಯುವ ಸೌಂದರ್ಯಾನುಭವವು, ಭಕ್ತನಾದವನು ಪೂಜೆ-ಪ್ರಾರ್ಥನೆ-ಜಪ-ತಪಾದಿಗಳಿಂದ ಪಡೆಯಬಹುದಾದ ಧಾರ್ಮಿಕ ಅನುಭವಕ್ಕಿಂತ ಯಾವ ರೀತಿಯಲ್ಲಿಯೂ ಬೇರೆಯಾದುದಲ್ಲ. (ಬಾ ಫಾಲ್ಗುಣ ರವಿ ದರ್ಶನಕೆ: ಸ.ಕಾ. ಸಂ.೧ ಪು.೬೪೨) ಅಷ್ಟೇ ಅಲ್ಲ, ‘ಚಿರಸೌಂದರ್ಯದ ಸಂಪದವಿದ್ದರೆ’– ‘ನಿಸರ್ಗದ ಚೆಲುವನ್ನು ಒಲಿದುನೋಡುವ ಸಂಪದ್‌ಭರಿತ ಮನಃಸ್ಥಿತಿಯೊಂದು ಇದ್ದರೆ, ಅದು ಧರ್ಮಕ್ಕೆ ಯಾವ ರೀತಿಯಿಂದಲೂ ಚ್ಯುತಿಯನ್ನುಂಟು ಮಾಡುವುದಿಲ್ಲ’ (ಇಂತಹ ಸುಂದರ ಪ್ರಾತಃಕಾಲದಿ: ಸ.ಕಾ.೧-ಪು.೬೩೯). ಇಷ್ಟರ ಮೇಲೆ ಪೂಜೆ ಎಂದರೆ ಏನು? ಕೇವಲ ದೇವರಕೋಣೆಯಲ್ಲೊ, ದೇವಸ್ಥಾನಗಳಲ್ಲೊ ಗಂಟೆ-ಜಾಗಟೆ-ಮಂತ್ರಘೋಷ-ಮಂಗಳಾರತಿ ಸಹಿತವಾದ ಒಂದು ಆಚರಣೆಯೊ? ಅಲ್ಲ. ‘ಸೂರ್ಯಚಂದ್ರರ ಉದಯಾಸ್ತಮಾನಗಳನ್ನು, ಹೂಬಳ್ಳಿ ಹಸುರಿಡಿದ ಕಾನನಶ್ರೀಯನ್ನು ಜೋಗದ ಜಲಪಾತವನ್ನು ನೋಡುವುದೆ ಪೂಜೆ. ಹಕ್ಕಿಗಳ ಇಂಚರವನ್ನು ಕೇಳುವುದೂ ಪೂಜೆಯೆ. ಮಹತ್ತಾದುದನ್ನು ಕುರಿತು ಆಲೋಚಿಸುವುದೂ ಅನುಭವಿಸುವುದೂ ಪೂಜೆಯೆ’ (ಸ.ಗ. ಸಂ.೨. ಪು.೮೫೦). ಇದು ಕುವೆಂಪು ಸಾಂಸ್ಥಿಕ ಧರ್ಮದ ತಿಳಿವಳಿಕೆಗೆ, ಪರ‍್ಯಾಯವಾದ ಸೌಂದರ್ಯಧರ್ಮದ ವಿಚಾರಗಳನ್ನು ಮಂಡಿಸುವ ಕ್ರಮ. ಹಾಗೆಯೆ ಸಾಂಸ್ಥಿಕಧರ್ಮ ಒಡ್ಡುತ್ತಿದ್ದ ಪರಲೋಕ-ಸ್ವರ್ಗ ಮತ್ತು ತೀರ್ಥಯಾತ್ರೆಗಳ ಅಗತ್ಯ ಇತ್ಯಾದಿಗಳ ಕಲ್ಪನೆಗಳನ್ನು ನಿರಾಕರಿಸುತ್ತ, ಆ ಸ್ವರ್ಗ ಹಾಗೂ ಅದರ ವೈಭವಗಳು, ಕಾಶಿ ಮೊದಲಾದ ಪವಿತ್ರ ತೀರ್ಥಕ್ಷೇತ್ರಗಳು, ಎಲ್ಲೋ ದೂರದಲ್ಲಿ ಇಲ್ಲ, ನಮ್ಮ ಸುತ್ತಣ ಪ್ರಕೃತಿಸೌಂದರ್ಯದಲ್ಲಿ ದಿನ-ನಿತ್ಯ ಪ್ರತ್ಯಕ್ಷವಾಗುವ ವಾಸ್ತವಗಳು ಎನ್ನುವ ಕುವೆಂಪು ಒಂದು ಬೆಳಗನ್ನು ವರ್ಣಿಸುತ್ತ–

ನಿನ್ನೆಯ ಸಂಜೆಯ ಮಳೆಯಲಿ ಮಿಂದು
ಕಳಕಳಿಸುವ ಹಸುರ್ಬಯಯಲಿ ಇಂದು
ಹೊಂಬಿಸಿಲಲಿ ಉರಿದಿರೆ ಜಲಬಿಂದು
ಸತ್ತಳೊ ಉರ್ವಸಿ ಸ್ವರ್ಗದಲಿ!
ಗಾಳಿಯ ಮಂಡಲ ಸ್ಫಟಿಕದವೋಲಿದೆ
ನಭವೋ ನೀಲ ವಿತಾನವ ಹೋಲಿದೆ
ಅಲ್ಲಲ್ಲಿಯೆ ಮುಗಿಲಿನ ಪಟ ತೇಲಿದೆ
ವೈಕುಂಠವಿದೆ ನಿಸರ್ಗದಲಿ
(ಇಂತಹ ಸುಂದರ ಪ್ರಾತಃಕಾಲದಿ. ಸ.ಕಾ. ಸಂ.೧ ಪು.೬೩೯)

ಎನ್ನುತ್ತಾರೆ, ಹಾಗೆಯೇ–

ಆಃ ನಿಂತು ನೋಡಿಲ್ಲಿ
ಸ್ವರ್ಗವರಳುತಿದೆ ಮರದ ಮೈಸಿರಿಯಲ್ಲಿ
ಊರ್ವಶಿ ತಿಲೋತ್ತಮೆಯರೆಲ್ಲ ನರ್ತಿಪರಿಲ್ಲಿ
ಮರದ ಕೆಂದಳಿರಿನಿಂದ್ರನಾಸ್ಥಾನದಲಿ
(ಕೆಂದಳಿರು. ಸ.ಕಾ. ಸಂ.೧ ಪು.೬೪೩)

ಎಂದು ಸಮಸ್ತ ಸ್ವರ್ಗವೇ ಮರವೊಂದರಲ್ಲಿ ಮೈದೋರಿರುವ ಪರಿಯನ್ನು ವರ್ಣಿಸುತ್ತಾರೆ. ಈ ವರ್ಣನೆಯ ಜತೆಗೆ ‘ಪಕ್ಷಿಕಾಶಿ’ ‘ಸಸ್ಯಕಾಶಿ’ ‘ತರುಕಾಶಿ’–ಎಂಬಂಥ ರೂಪಕಗಳು ಕಟ್ಟಿಕೊಡುವ ಚಿತ್ರಗಳನ್ನು ಗಮನಿಸಬಹುದು. ನಿಸರ್ಗದ ಸೌಂದರ್ಯಾನುಭವದ ನೆಲೆಯಲ್ಲಿ ಕುವೆಂಪು ಸಾಂಸ್ಥಿಕ ಧರ್ಮದ ಸಂಕೇತಗಳಾದ ದೇವಸ್ಥಾನ ಹಾಗೂ ಪುರೋಹಿತಶಾಹೀ ಶೋಷಣೆಗಳಿಗೆ ಪ್ರತಿಕ್ರಿಯಿಸುತ್ತ, ಅವುಗಳಿಗೆ ಪರ‍್ಯಾಯಗಳನ್ನು ಸೂಚಿಸುವ ವೈಚಾರಿಕತೆ ವಿಶೇಷ ರೀತಿಯದಾಗಿದೆ.

ಇದಕ್ಕೂ ಮಿಗಿಲಾಗಿ ಕುವೆಂಪು ತಮ್ಮ ನಿಸರ್ಗಪರ ನಿಲುವಿನಲ್ಲಿ ಮಂಡಿಸುವ ಮತ್ತೊಂದು ವಿಚಾರವೆಂದರೆ: ಅರಣ್ಯಸಂಸ್ಕೃತಿಯಿಂದ ಮನುಷ್ಯನ ವ್ಯಕ್ತಿತ್ವಕ್ಕೆ ಒದಗುವ ಒಂದು ಹೊಸ ಎಚ್ಚರ ಮತ್ತು ತಿಳಿವಳಿಕೆಯನ್ನು ಕುರಿತದ್ದು. ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ, ಮೊಟ್ಟಮೊದಲ ಬಾರಿಗೆ ಶ್ರೀರಾಮನು ಅಯೋಧ್ಯಾನಗರವನ್ನು ಬಿಟ್ಟು ಗುರು ವಿಶ್ವಾಮಿತ್ರರ ಹಿಂದೆ ವಿದ್ಯಾಭ್ಯಾಸಕ್ಕೆಂದು ಸರಯೂ ನದಿಯ ದಕ್ಷಿಣದ ತಟದ ಅರಣ್ಯಕ್ಕೆ ಬಂದಾಗ, ರಾಮಲಕ್ಷ ಣರಿಗೆ ತಮ್ಮ ಅರಮನೆಯ ಸಂಪತ್ತೆಲ್ಲ ಈ ಅರಣ್ಯದ ಸೌಂದರ್ಯದ ಎದುರು ನಿಸ್ಸಾರ ಎನ್ನಿಸಿಬಿಟ್ಟಿತೆಂಬಂತೆ ಕುವೆಂಪು ಚಿತ್ರಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮನು ವಿಶ್ವಾಮಿತ್ರರನ್ನು ಕುರಿತು–

ಗುರುದೇವ
ನಿಮ್ಮ ಕರುಣೆಯಿನೆಮಗೆ ಲಭಿಸಿತೀ ವನಸುಖಂ
ದಾರಿದ್ರ ಮಲ್ತೆ ನಾಗರಿಕ ಜೀವನಂ
ವನ್ಯಸಂಸ್ಕೃತಿಯ ಮುಂದೆ?
(ಶ್ರೀ ರಾ.ದ. ೧-೨. ಪಂ.೧೧೧-೧೧೪. ಪು.೩೪)

ಎನ್ನುತ್ತಾನೆ. ಈ ಮಾತಿಗೆ ಮಹರ್ಷಿ ವಿಶ್ವಾಮಿತ್ರರು ಹೇಳುತ್ತಾರೆ:

ದಿಟವೊರೆದೆ
ಹೇವತ್ಸ. ಗಿರಿವನ ಪ್ರೀತಿತಾಂ ದೈವ ಕೃಪೆದಲ್
ಜಗದೀಶ್ವರನ ಮಹಿಮೆ ಸಂವೇದ್ಯವಹುದಿಲ್ಲಿ
ಭವ್ಯ ಸೌಂದರ್ಯಶೀಲದ ವನ್ಯ ಶಾಂತಿಯಲಿ.
ಉಪನಿಷತ್ತಿನ ಮಹಾಮಂತ್ರಾನುಭವಗಳುಂ
ಹೃದ್ ಗಮ್ಯವಿಲ್ಲಿ………. (ಅಲ್ಲೆ. ಪಂ.೧೧೭-೧೨೧. ಪು.೩೪)

ಎಂದು. ಇದು ಈ ಅರಣ್ಯಸಂಸ್ಕೃತಿಯಿಂದ ವ್ಯಕ್ತಿತ್ವಕ್ಕೆ ಒದಗುವ ಆಧ್ಯಾತ್ಮಿಕ ಪ್ರಯೋಜನ. ಈ ಬಗೆಯ ಪ್ರಯೋಜನ ಸುಲಭವಾಗಿ ದೊರೆಯತಕ್ಕದ್ದಲ್ಲ; ಯಾಕೆಂದರೆ ಗಿರಿವನಗಳನ್ನು ಪ್ರೀತಿಸುವ ಒಂದು ಮನಃಸ್ಥಿತಿಯೂ ದೈವಕೃಪೆಯಿಂದ ಲಭಿಸುವಂಥದು. ಅಂಥ ಕೃಪೆಗೆ ಪಾತ್ರರಾಗುವವರು ತೀರಾ ವಿರಳ.

ಕುವೆಂಪು ಸಾಹಿತ್ಯದ ಮೂಲದ್ರವ್ಯವೇ ದಟ್ಟವಾದ ಅರಣ್ಯಾನುಭವಗಳಿಂದ ತುಂಬಿದ್ದು. ಅವರ ಸಾಹಿತ್ಯದ ಒಂದೊಂದು ಪಾತ್ರವೂ ಈ ಅರಣ್ಯಸಂಸ್ಕೃತಿಯ ಹಲವು ಹಂತಗಳನ್ನು ಪ್ರತಿನಿಧಿಸುತ್ತದೆ. ಈ ಅರಣ್ಯಸಂಸ್ಕೃತಿ, ನಾಗರಿಕತೆಗೆ ಅಥವಾ ಆಧುನಿಕತೆಗೆ ಮುಖಾಮುಖಿ ಯಾಗುವಾಗಿನ ಪ್ರತಿಕ್ರಿಯೆ ಮತ್ತು ತಲ್ಲಣಗಳನ್ನು ಕುವೆಂಪು ಅವರ ಕೃತಿಗಳು ಗ್ರಹಿಸಿ ನಿರೂಪಿಸಿರುವ ಕ್ರಮ ವಿಶಿಷ್ಟವಾದುದಾಗಿದೆ. ಕಾರಣಾಂತರಗಳಿಂದ ಕುವೆಂಪು ತಾವು ಹುಟ್ಟಿ ಬೆಳೆದ ಮಲೆನಾಡಿನ ಪರ್ವತಾರಣ್ಯ ಪ್ರಪಂಚವನ್ನು ಬಿಟ್ಟು ಮೈಸೂರಿನಂಥ ನಾಗರಿಕ ಜೀವನ ಪರಿಸರದಲ್ಲಿ ಇರಬೇಕಾಗಿ ಬಂದಾಗ, ನಗರದಲ್ಲಿದ್ದೂ, ಆ ದೂರದ ಮಲೆನಾಡಿನ ನೆನಪುಗಳಲ್ಲಿ ಬದುಕಿದರೆಂಬುದನ್ನೂ, ‘ಹೋಗುವೆನು ನಾ ಮಲೆನಾಡಿಗೆ, ನನ್ನ ಒಲುಮೆಯ ಗೂಡಿಗೆ’ ಎಂದು ಸದಾ ಹಂಬಲಿಸುತ್ತಿದ್ದರೆಂಬುದನ್ನೂ ಇಲ್ಲಿ ನೆನೆಯಬಹುದು. ಅವರ ‘ಬೆರಳ್-ಗೆ-ಕೊರಳ್’ ನಾಟಕದಲ್ಲಿ ವನ್ಯಸಂಸ್ಕೃತಿ ಹಾಗೂ ನಗರಸಂಸ್ಕೃತಿಗಳ ಮುಖಾಮುಖಿ ಯನ್ನು ಚಿತ್ರಿಸುವಲ್ಲಿ ಅಭಿವ್ಯಕ್ತವಾಗಿರುವ ಕುವೆಂಪು ಅವರ ವೈಚಾರಿಕತೆಯನ್ನು ಈ ಹಿನ್ನೆಲೆಯಿಂದ ನೋಡಬಹುದು. ಈ ನಾಟಕದಲ್ಲಿ ಅರಣ್ಯದ ನಡುವೆ ಅದರದೊಂದು ಅಂಗವೆಂಬಂತೆ ಹುಟ್ಟಿ ಬೆಳೆದ ಏಕಲವ್ಯನಿಗೂ, ಹಸ್ತಿನಾಪುರದ ಪಾರ್ಥಿವ ರಾಜಕುಮಾರ, ನಾಗರಿಕನಾದ ಅರ್ಜುನನಿಗೂ ನಡೆಯುವ ಮುಖಾಮುಖಿಯಲ್ಲಿ, ವನ್ಯಸಂಸ್ಕೃತಿಯ ಪ್ರತಿನಿಧಿಯಾದ ಏಕಲವ್ಯನನ್ನು ಅರ್ಜುನನು ಮಾತನಾಡಿಸುವುದು ‘ಆರೋ ನೀನ್ ವನಚರ’ ಎಂಬ ತಿರಸ್ಕಾರದ ನುಡಿಯಿಂದ. ಅರ್ಜುನ ತನ್ನ ಹೆಸರನ್ನು ಪ್ರತಿಷ್ಠೆಯಿಂದ ಘೋಷಿಸಿಕೊಂಡಾಗ, ಏಕಲವ್ಯ ತನ್ನನ್ನು ದ್ರೋಣಶಿಷ್ಯನೆಂದು ಪರಿಚಯಿಸಿಕೊಳ್ಳುತ್ತ, ‘ವನಚರರಾದ ತನ್ನಂಥವರು ಅಸೂಯೆಯನ್ನು ಅರಿಯದವರು; ಹೆಸರನ್ನು ಮೆರೆಯಿಸುವ ಅಹಂಕಾರ ಅವರಿಗೆ ತಿಳಿಯದು; ಹೆಸರಿನ ಆಸೆ ಅದೊಂದು ನಾಗರಿಕರಿಗೆ ಮೀಸಲಾದ ಮನೋಜಾಡ್ಯವೇ ಸರಿ. ನನಗೂ ಇದೆ ನಿನಗಿರುವ ಹಾಗೆಯೆ ಒಂದು ಹೆಸರು. ಆದರೆ ಅದು ಇರುವುದು ಅಹಂಕಾರವನ್ನು ಮೆರೆಯಲೆಂದು ಅಲ್ಲ, ವಿನಯವನ್ನು ನಿವೇದಿಸುವುದಕ್ಕೆ’ ಎನ್ನುತ್ತಾನೆ.[4]

ಅರಣ್ಯಸಂಸ್ಕೃತಿಯನ್ನು ಪ್ರತಿಮಿಸುವ ಕುವೆಂಪು ಅವರ ಈ ನಾಯಕರೆಲ್ಲ ಶೂದ್ರ ವರ್ಗದವರು. ಮೇಲುವರ್ಗದವರ ಪ್ರತಿಷ್ಯೆಯ ಕಾರಣದಿಂದ, ತಮಗೆ ಚರಿತ್ರೆಯುದ್ದಕ್ಕೂ ನಿರಾಕೃತವಾದ ಸವಲತ್ತು ಹಾಗೂ ಹಕ್ಕುಗಳಿಗಾಗಿ ಪ್ರತಿಭಟಿಸುವ ಆತ್ಮಪ್ರತ್ಯಯ ಮೂಲವಾದ ವ್ಯಕ್ತಿತ್ವ ಉಳ್ಳವರು. ತಾನು ಶೂದ್ರನಾದ ಕಾರಣದಿಂದ, ಶಿಕ್ಷಣದ ಸವಲತ್ತುಗಳನ್ನು ಕಸಿದುಕೊಂಡ ಕ್ಷತ್ರಿಯರನ್ನು ಧಿಕ್ಕರಿಸಿ, ತನ್ನ ಸ್ವಯಂಸಾಧನೆಯಿಂದ ಅಪೂರ್ವ ವಿದ್ಯೆಗಳನ್ನು ಕರಗತಮಾಡಿಕೊಂಡ ಏಕಲವ್ಯ; ತಾನು ಶೂದ್ರನಾದುದರಿಂದಲೇ ತಪಸ್ಸನ್ನು ಕೈಕೊಳ್ಳಲನರ್ಹ ನೆಂಬ ಮೇಲುವರ್ಗದ ಜನದ ಶಾಸ್ತ್ರಬುದ್ಧಿಯನ್ನು ನಿರ್ಲಕ್ಷಿಸಿ ತಪಸ್ಸಿಗೆ ಕೂತ ಶಂಬೂಕ; ತಾನು ಅಸ್ಪ ಶ್ಯನಾದ ಕಾರಣಕ್ಕೆ ಶಿವ ಗುಡಿಯ ಪೂಜಾರಿಗಳು ದೇವಸ್ಥಾನದ ಹತ್ತಿರಕ್ಕೆ ಸೇರಿಸದೆ ಹೋದಾಗ, ಆ ದೇವಸ್ಥಾನವನ್ನೆ ದಿಟ್ಟತನದಿಂದ ತಿರಸ್ಕರಿಸಿ, ತಾನು ಮಾಡುವ ದೈನಂದಿನ ಕರ್ಮಗಳಲ್ಲಿಯೆ ಶಿವನನ್ನು ಕಾಣುವ ಜಲಗಾರ–ಇವರೆಲ್ಲ ಹೊಸ ಎಚ್ಚರದ ಮತ್ತು ಪ್ರತಿಭಟನೆಯ ವೈಚಾರಿಕ ಆಕೃತಿಗಳು. ‘ಕಾನೂರು ಹೆಗ್ಗಡಿತಿ’ ಕಾದಂಬರಿಯಲ್ಲಿ ಬರುವ ವೆಂಕಪ್ಪಯ್ಯ ಜೋಯಿಸರು ಸಾಮಾಜಿಕ ಅಸಮಾನತೆಯನ್ನು ಸುಭದ್ರವಾಗಿ ಕಾಯ್ದುಕೊಂಡು ಬಂದ ಚಾತುರ್ವರ್ಣದ ಹಾಗೂ ಪುರೋಹಿತಶಾಹಿ ಕುತಂತ್ರದ ಪ್ರತಿನಿಧಿಯಂತೆ ತೋರುತ್ತಾರೆ. ಒಂದು ರೀತಿಯಲ್ಲಿ ವೆಂಕಪ್ಪಯ್ಯ ಜೋಯಿಸರೆ ಈ ಕಾದಂಬರಿಯ ‘ಪ್ರತಿನಾಯಕ’ನಂತೆ ಭಾಸವಾಗುತ್ತಾರೆ ಎಂದರೆ ಅದೇನೂ ಉತ್ಪ್ರೇಕ್ಷೆಯಲ್ಲ.

ಕುವೆಂಪು ಅವರ ವೈಚಾರಿಕತೆಯ ತಳಹದಿ ಎಂದರೆ ಸಮಾನತೆಯನ್ನು ಕಾಣುವ ಮತ್ತು ಕಟ್ಟುವ ಒಂದು ಮನೋಧರ್ಮ. ಅವರು ಒಂದೆಡೆ ಹೇಳುತ್ತಾರೆ: ‘ನನ್ನ ಜೀವನದೃಷ್ಟಿ ಒಂದು ರೀತಿಯಲ್ಲಿ ಸಮಾನತಾವಾದಿಯ ದೃಷ್ಟಿ. ನೀವು ಸಮಾಜವಾದಿ, ಸಮತಾವಾದಿ ಎಂದೆಲ್ಲ ವ್ಯಾಖ್ಯಾನ ಮಾಡಬಹುದು. ಆದರೆ ನಾನು ಸಮಾನತಾವಾದಿ’ (ಸ.ಗ. ಸಂ.೨ ಪು.೪೭೯). ಜಾಗತಿಕ ಸಮಾಜವಾದೀ ಚಿಂತನೆಗಳೊಂದಿಗೆ ಸಂವಾದ ನಡೆಯಿಸಿ ಅವುಗಳನ್ನು ಅರಗಿಸಿಕೊಂಡ ಕುವೆಂಪು ರಷ್ಯಾದ ಸಾಮ್ಯವಾದವನ್ನು ಕುರಿತು ‘ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’ ಎಂಬ ಕವಿತೆಯ ಮೂಲಕ ತೋರಿರುವ ಸೃಜನಾತ್ಮಕ ಪ್ರತಿಕ್ರಿಯೆ ವಿಶೇಷ ರೀತಿಯದಾಗಿದೆ. ಅವರ ಪ್ರತಿಕ್ರಿಯೆಯ ಮುಖ್ಯಾಂಶವೆಂದರೆ, ಕೇವಲ ಯಾಂತ್ರಿಕವಾದ ನಿರ್ಭಾವುಕವಾದ ಸಮಾನತೆ ‘ಸಮಾಜವಾದ’ವಾಗುವುದಿಲ್ಲ; ಅಥವಾ ಬಲವಂತವಾಗಿ ಎಲ್ಲವನ್ನೂ ಒಂದೇ ನೆಲೆಗೆ ನಿರ್ಬಂಧಿಸುವುದೂ ಸಾಮ್ಯವಾದವಾಗುವುದಿಲ್ಲ; ವ್ಯಕ್ತಿ ಸ್ವಾತಂತ್ರ ವನ್ನು ಮೊಟಕು ಮಾಡದ ಸಮಾನತೆಯನ್ನು ಒಂದು ಮೌಲ್ಯವೆಂದು ಒಪ್ಪುವ ಸಾಮ್ಯವಾದವನ್ನು ಕುವೆಂಪು ಇಷ್ಟಪಡುತ್ತಾರೆ. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಸ್ವಾತಂತ್ರ ವಿಲ್ಲದ ಸಮಾನತೆಯನ್ನು ಕುವೆಂಪು ಒಪ್ಪುವುದಿಲ್ಲ. ಈ ಕಾರಣದಿಂದಲೇ ಕುವೆಂಪು ಗಾಂಧೀಜಿಯ ‘ಸರ್ವೋದಯ’ ಕಲ್ಪನೆಯನ್ನು ಎತ್ತಿ ಹಿಡಿಯುತ್ತಾರೆ. ‘ಹಿಂದಾಯಿತು ಓರೋರ‍್ವರ ಗರ್ವದ ಕಾಲ, ಇದು ಸರ್ವರ ಕಾಲ’ ಎಂದು ಘೋಷಿಸುತ್ತಾರೆ. ಈ ಸರ್ವೋದಯ ವಿರೋಧಿಯಾದ ಜಾತಿ-ಮತಗಳನ್ನೂ, ಚಾತುರ್ವರ್ಣ ವ್ಯವಸ್ಥೆಯನ್ನೂ ಇವುಗಳನ್ನು ಬೆಂಬಲಿಸುವ ಶಾಸ್ತ್ರ-ಗುರುಮಠ ಮತ್ತು ಪುರೋಹಿತಶಾಹಿಯನ್ನು ವಿಮರ್ಶಿಸುವ ಮತ್ತು ಧಿಕ್ಕರಿಸುವ ಜನತಾಪ್ರಜ್ಞೆಯೊಂದು ಜಾಗ್ರತಗೊಳ್ಳಬೇಕು ಎನ್ನುವುದನ್ನು ಕುವೆಂಪು ತಮ್ಮ ಸೃಜನ ಮತ್ತು ಸೃಜನೇತರ ಬರೆಹಗಳಲ್ಲಿ ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ. ‘ಯಾವ ಕಾಲದ ಶಾಸ್ತ್ರವೇನ ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?’ ಎಂದು ಪ್ರಶ್ನಿಸುವ ಕುವೆಂಪು, ಈ ಶಾಸ್ತ್ರಗಳೆಲ್ಲ ಹಿಂದೆ ಆಯಾಕಾಲದ ಧರ್ಮದ ಕಲ್ಪನೆಗೆ ಅನುಸಾರವಾಗಿ ರಚಿತವಾಗಿರಬಹುದು; ಆದರೆ ‘ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ’ (ಸ.ಕಾ. ಸಂ.೧ ಪು.೩೬೮)ವಾಗಬೇಕು ಎಂದು ವ್ಯಕ್ತಿಯ ವಿವೇಚನೆ ಮತ್ತು ವೈಚಾರಿಕತೆಯೆ ಈ ವಿಷಯಗಳಲ್ಲಿ ಪರಮಪ್ರಮಾಣ ಎನ್ನುತ್ತಾರೆ. ‘ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಎನ್ನುವ ಉಪನ್ಯಾಸವೊಂದರಲ್ಲಿ, ಭಗವದ್ಗೀತೆಯಲ್ಲಿ ಬರುವ ‘ಚಾತುರ್ವರ್ಣಂ ಮಯಾ ಸೃಷ್ಟಂ’ ಎಂಬ ಉಕ್ತಿಯನ್ನು ಕುರಿತು ‘ಒಂದು ವೇಳೆ, ನೀವು ಹೇಳುವಂತೆ ವರ್ಣ ಜಾತಿ ವರ್ಗಗಳನ್ನು ನಿಮ್ಮ ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ ಪ್ಲೇಗು ಮಲೇರಿಯಾಗಳನ್ನು ದೇವರೇ ಸೃಷ್ಟಿಮಾಡಿದ್ದು ಅಂತ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ, ಜಾತಿ, ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು’ (ಸ.ಗ. ಸಂ.೨ ಪು.೪೮೫. ಅಡಿಟಿಪ್ಪಣಿ)–ಎಂದು ತಾ. ೨೦-೪-೧೯೭೪ರಂದು ಬರೆಹಗಾರ ಒಕ್ಕೂಟದ ಭಾಷಣದಲ್ಲಿ ಕರೆ ಕೊಡುವ ಕುವೆಂಪು, ೧೯೭೮ರಂದು ಮೈಸೂರಿನಲ್ಲಿ ಮಾಡಿದ ಇನ್ನೊಂದು ಭಾಷಣದಲ್ಲಿ (ಜನತಾ ಪ್ರಜ್ಞೆ ಮತ್ತು ವೈಚಾರಿಕತೆ) ಇದೇ ವಿಷಯವನ್ನು ಮುಂದುವರಿಸುತ್ತಾ, ‘ವರ್ಣಾಶ್ರಮ, ಚಾತುರ್ವರ್ಣ, ಜಾತಿ ಭೇದ ಇತ್ಯಾದಿ ಕೃತಕ ತಾರತಮ್ಯಗಳನ್ನು ತಾವೇ ಕಲ್ಪಿಸಿ ಅವುಗಳನ್ನು ಭಗವಂತ ಸೃಷ್ಟಿಸಿದನೆಂದು ಸುಳ್ಳುಶಾಸ್ತ್ರಗಳನ್ನು ಜನರು ತಿಳಿಯದ ಸಂಸ್ಕೃತಭಾಷೆಯಲ್ಲಿ ರಚಿಸಿ, ಅವುಗಳಿಗೆ ಧರ್ಮಶಾಸ್ತ್ರಗಳು ಎಂಬ ದೊಡ್ಡ ಹೆಸರಿಟ್ಟು, ಅವುಗಳನ್ನು ಯಾರೂ ಉಲ್ಲಂಘಿಸಬಾರದೆಂಬ ಕಟ್ಟು ಕಲ್ಪಿಸಿ, ಆ ಕಟ್ಟಿನ ಕಾನೂನು ರಕ್ಷೆಗೆ ‘ಕ್ಷತ್ರಿಯ’ ವರ್ಗದ ರಾಜರನ್ನು ಕೈಗೊಂಬೆಗಳನ್ನಾಗಿ ಸಿಂಹಾಸನಕ್ಕೇರಿಸಿ, ರಾಜನೇ ಪ್ರತ್ಯಕ್ಷ ದೇವರು ಎಂಬ ಹುಸಿ ಹೆದರಿಕೆ ಹುಟ್ಟಿಸಿ, ಶೂದ್ರರನ್ನು ಗುಲಾಮರನ್ನಾಗಿ ಮಾಡಿ ಮೂಢಪಶುಗಳಿಗಿಂತಲೂ ಕೀಳುಮಟ್ಟದಲ್ಲಿಟ್ಟು, ಅವರ ದುಡಿಮೆ ಯಿಂದ ತಾವು ಸುಖಭೋಗಿಗಳಾಗಿರುವ ಆಚಾರ್ಯ ನಾಮಕ ನೀಚರನ್ನು ವಿಚಾರವೇದಿಕೆಯ ಸಾಕ್ಷಿಪೆಟ್ಟಿಗೆಯಲ್ಲಿ ನಿಲ್ಲಿಸುವ ಧೈರ್ಯ ದೃಢತೆಗಳನ್ನು ನಮ್ಮ ತರುಣರಿಗೆ ಕಲಿಸಬೇಕು. ಯುವಕರೇ ಒಂದು ಕಡೆ ಸೇರಿ ಚರ್ಚೆ ಮಾಡಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವಂತಾಗಬೇಕು. ಹಳೆಯ ಶಾಸ್ತ್ರ, ಬೂಸಲುಧರ್ಮ, ಕೇಡಿ ಜಗದ್ಗುರು, ಸ್ವಾರ್ಥಶೀಲ ಆಚಾರ್ಯ ಇವರನ್ನೆಲ್ಲ ಮುಲಾಜಿಲ್ಲದೆ ಧಿಕ್ಕರಿಸುವಂತಾಗಬೇಕು’ (ಸ.ಗ. ಸಂ.೨. ಪು.೭೩೦)–ಎನ್ನುತ್ತಾರೆ. ಇಡೀ ಪುರೋಹಿತಶಾಹಿ ಚರಿತ್ರೆಯನ್ನೂ ಮತ್ತು ಅದಕ್ಕೆ ತಮ್ಮ ಪ್ರತಿಕ್ರಿಯೆಯನ್ನೂ ಸಿಡಿಲ ದನಿಯಲ್ಲಿ ಮಂಡಿಸುವ ಈ ವಿಚಾರಗಳು ೧೯೩೫ರಲ್ಲಿ ಶ್ರೀರಂಗಪಟ್ಟಣದಲ್ಲಿ ‘ಯುವಕರು ನಿರಂಕುಶಮತಿಗಳಾಗಬೇಕು’ –ಎಂದು ಕರೆ ಕೊಟ್ಟ ಉಪನ್ಯಾಸದ ಶಿಖರದಂತಿದೆ. ಇಷ್ಟರಮಟ್ಟಿಗೆ ಕನ್ನಡದ ಜನತಾ ಪ್ರಜ್ಞೆಯನ್ನು ತಟ್ಟಿ ಎಚ್ಚರಿಸಿದ ಮತ್ತೊಬ್ಬ ಬರೆಹಗಾರರು, ಕನ್ನಡದಲ್ಲಿ ಅಪೂರ್ವ. ಅಷ್ಟೇ ಅಲ್ಲ ತಮ್ಮ ಸಮಕಾಲೀನ ಜಗತ್ತಿನಲ್ಲಿ ಸಂಭವಿಸುತ್ತಿದ್ದ ಯುಗಪರಿವರ್ತನಕಾರಿಯಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ[5] ಈ ದೇಶದ ತರುಣ ಮನಸ್ಸುಗಳಲ್ಲಿ, ಅದರ ಅರಿವು ಮೂಡುವಂತೆ ಮತ್ತು ಅವರು ಚಿಂತನಶೀಲರಾಗುವಂತೆ ಪ್ರಚೋದಿಸಿದ್ದು ಕುವೆಂಪು ಅವರ ವೈಚಾರಿಕತೆಯೇ. ಭಾರತದ ಬದುಕಿನಲ್ಲಂತೂ

ನಾಮ ಮುದ್ರೆ ವಿಭೂತಿಗಳ ಬಳಿದುಕೊಂಬವರು
ಕತ್ತೆಯಂದದಿ ಗದ್ದೆಯಲಿ ಗೆಯ್ದು
ಮೈ ಬೆವರು ಸುರಿಸಿ, ಗೊಬ್ಬರಮಣ್ಣು
ಬಳಿದುಕೊಂಬವರಿಗಿಂತ ಮೇಲೆಂಬ ಭಾವ
ತಲೆಕೆಳಗಾಗಿ ಹೋಗುತಿದೆ.[6]
(ಗೊಬ್ಬರ, ಸ.ಕಾ.೧. ಪು.೩೬೦)

ಎಂಬ ವಾಸ್ತವದ ಕಡೆಗೆ ಗಮನ ಸೆಳೆಯುತ್ತಾ

ಹಳೆಮತದ ಕೊಳೆಯೆಲ್ಲ ಹೊಸಮತದ ಹೊಳೆಯಲ್ಲಿ
ಕೊಚ್ಚಿಹೋಗಲಿ, ಬರಲಿ ವಿಜ್ಞಾನಬುದ್ಧಿ (ಸ.ಕಾ.ಸಂ. ೧. ಪು.೩೭೦)

ಎಂದು ಆಶಿಸಿದವರು ಕುವೆಂಪು.


[1] ಕುವೆಂಪು ನೇರವಾಗಿ, ಅಂದು ಗಾಂಧೀಜಿಯವರ ನೇತೃತ್ವದ ಭಾರತೀಯ ಸ್ರಾತಂತ್ರ ಚಳುವಳಿಯಲ್ಲಿ ಭಾಗವಹಿಸದಿದ್ದರೂ ಈ ಚಳುವಳಿಗೆ ಸ್ಫೂರ್ತಿಯಾಗುವ ಬಹು ಸಂಖ್ಯೆಯ ದೇಶಭಕ್ತಿ ಕವಿತೆಗಳನ್ನು ಬರೆದಿದ್ದಾರೆ ಎನ್ನುವುದನ್ನು ಗಮನಿಸಬಹುದು.

[2] ಇಂಗ್ಲಿಷ್ ಭಾಷೆಯನ್ನು ಕುರಿತ ಕುವೆಂಪು ಅವರ ನಿಲುವು ಕಾಲ-ದೇಶಾನುಸಾರಿಯಾಗಿ ಮಂಡಿತವಾಗಿವೆ. ವಸಾಹತುಶಾಹಿ ಸಂದರ್ಭದಲ್ಲಿ ವರವಾಗಿ ಬಂದ ಇಂಗ್ಲಿಷ್, ಸ್ವಾತಂತ್ರೋತ್ತರ ಸಂದರ್ಭದಲ್ಲಿ ಹೇಗೆ ಒಂದು ಶಾಪವಾಗಿ ಪರಿಣಮಿಸಿ ಕನ್ನಡಕ್ಕೆ ಮಾರಕವಾಗಿದೆ ಎನ್ನುವುದನ್ನು ಅವರ ಕನ್ನಡ ಪರ ನಿಲುವುಗಳಲ್ಲಿ ಗುರುತಿಸಬಹುದು.

[3] ಇದು ಕುವೆಂಪು ವಸಾಹತುಶಾಹಿಯ ಪರಿಣಾಮವಾಗಿ ಈ ದೇಶವನ್ನು ಪ್ರವೇಶಿಸಿದ ಬೈಬಲ್ ಅಥವಾ ಕ್ರೆ ಸ್ತಮತ ಪ್ರಸಾರದ ‘ಪುರೋಹಿತಶಾಹಿ’ಗೆ ಪ್ರತಿಕ್ರಿಯಿಸಿದ ರೀತಿ. ಕ್ರೆ ಸ್ತಪಾದ್ರಿಗಳ ಮತಪ್ರಸಾರ ಮತ್ತು ಮತಾಂತರ ಕಾರ್ಯಗಳನ್ನು ಕುವೆಂಪು ಮೆಚ್ಚಿಕೊಳ್ಳದಿದ್ದರೂ ಕ್ರೆ ಸ್ತಧರ್ಮದ ಸಮಾಜಸುಧಾರಣಾವಾದಿ ಕಾರ್ಯಗಳನ್ನು–ಶಿಕ್ಷಣ-ಆಸ್ಪತ್ರೆ-ಇತ್ಯಾದಿ–ಮೆಚ್ಚಿಕೊಳ್ಳುತ್ತಾರೆ. ಹಾಗೆಯೆ ಅವರೂ ಸೇರಿದಂತೆ ಮಲೆನಾಡಿನ ಕಾಡಿನ ಕೊಂಪೆಯ ಈ ಹುಡುಗರು ಆಗಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ದೂರದ ಮೈಸೂರಿಗೆ ಹೋಗಲು ‘ಪ್ರಚೋದನೆ-ಪ್ರೋತ್ಸಾಹ, ಸಹಾಯಗಳು ದೊರಕಿದುದೂ ಕ್ರೆ ಸ್ತ ಮಿಶನರಿಗಳಿಂದ’ (ನೆ. ದೋ.ಪು ೨೧)– ಎನ್ನುವುದನ್ನು ಗುರುತಿಸುತ್ತಾರೆ. ಸ್ವಾರಸ್ಯದ ಸಂಗತಿ ಎಂದರೆ, ದೈಯ್ಯ, ಜಕ್ಕಿಣಿ ಕಲ್ಕುಟಿಗೆ ಮೊದಲಾದ ಪಿಶಾಚಗಳನ್ನು ಕುರಿತ ಭೀಕರ ಕಥನಗಳು ಕಿವಿಯ ಮೇಲೆ ಬೀಳುವ ಪರಿಸರದಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರ ಬಾಲ್ಯದ ಬದುಕಿನಲ್ಲಿ, ದೇವರು, ಜೀವಲೋಕ, ಪರಲೋಕ ಇತ್ಯಾದಿ ಕಲ್ಪನೆಗಳು ಅವರ ಪ್ರಜ್ಞೆಯನ್ನು ಪ್ರವೇಶಿಸಿದ್ದು, ‘ಕುಪ್ಪಳ್ಳಿಯ ಉಪ್ಪರಿಗೆ ಶಾಲೆಗೆ’ ಉಪಾಧ್ಯಾಯರಾಗಿ ಬಂದ ಮೋಸೆಸ್ ಮೇಷ್ಟರು ಇವರ ಕೈಗೆ ಕೊಟ್ಟ, ಕನ್ನಡದಲ್ಲಿ ಅಚ್ಚಾಗಿದ್ದ ಮಾರ್ಕನ ಸುವಾರ್ತೆಯಿಂದ. ಪ್ರಾರ್ಥನೆ ಮಾಡಿದರೆ ದೇವರು ಓಕೊಳ್ಳುತ್ತಾನೆ, ಇಷ್ಟಾರ್ಥಗಳನ್ನು ಸಲ್ಲಿಸುತ್ತಾನೆ ಎಂಬಿತ್ಯಾದಿ ಸಂಗತಿಗಳನ್ನು ಬೈಬಲ್ಲಿನ ಓದಿನಿಂದ ತಿಳಿದು ಮೊದಲ ಬಾರಿಗೆ ಕುವೆಂಪು ಅವರ ಚೇತನ ‘ಭಕ್ತಿದೀಪ್ತ’ವಾಯಿತಂತೆ. ಅವರೂ ಅವರ ಗೆಳೆಯರೂ, ಅವರ ಮನೆಯ ‘ಹಿಂಬದಿಯ ಗುಡ್ಡವನ್ನು (ಈಗಿನ ಕವಿಶೈಲ)ವನ್ನು ಏರಿ, ಮೊಳಕಾಲು ಮಂಡಿಯನ್ನೂರಿ, ಕ್ರೆ ಸ್ತರು ಕೂರುವ ಭಂಗಿಯಲ್ಲಿ ಕೂತು, ಬಾಯಿಪಾಠ ಮಾಡಿದ ಪ್ರಾರ್ಥನೆಯಾದ:

‘ಪರಲೋಕದಲ್ಲಿರುವ ಓ ನನ್ನ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ.

ನಿನ್ನ ರಾಜ್ಯವು ಬರಲಿ | ಪರಲೋಕದಲ್ಲಿ ನೆರವೇರುವಂತೆ ನಿನ್ನ ಇಚ್ಛೆ ಭೂಲೋಕದಲ್ಲಿಯೂ

ನೆರವೇರಲಿ….. ನಾವು ಪಾಪವಶರಾಗದಂತೆ ನಮ್ಮನು ಪಾಪ ಪುರುಷನಿಂದ ಪಾರುಮಾಡು’

ಎಂದು ಪಠಿಸಿದರಂತೆ. ಕುವೆಂಪು ಅವರ ಧಾರ್ಮಿಕಪ್ರಜ್ಞೆ ಕ್ರೆ ಸ್ತಧರ್ಮದ ಬೈಬಲ್ಲಿನಲ್ಲಿನಿಂದ ಜಾಗೃತವಾಯಿತೆಂಬುದು ಸ್ವಾರಸ್ಯದ ಸಂಗತಿಯಾಗಿದೆ (ನೋಡಿ. ನೆ.ದೋ. ಪು.೨೩-೨೪).

[4] ‘ಪೆಸರ್ ಪೆಸರ್ ಪೆಸರ್. ಅದೊಂದು

ನಾಗರಿಕರ್ಗೆ ಮೀಸಲಾಗಿರ್ಪ ಮನೋಜಾಡ್ಯಂ ಕಣಾ!

ವನಚರರ್ ಅನಸೂಯಾ ಶೀಲರ್.’

(ಕು.ನಾ.ಸಂ. ಪು.೨೪೭)

[5] ಬೀಸುತಿದೆ ರಸಪೂರ್ಣ ಪಶ್ಚಿಮದ ಬಿರುಗಾಳಿ

ಭಾರತದ ಬಣಗು ಬಾಳ್ಮರವನಲುಗಾಡಿ…

ಮೊನ್ನೆಮೊನ್ನೆಯವರೆಗೆ ಪಶ್ಚಿಮದ ಹೊಲೆಗೇರಿ

ಇಂದು ನಂದನವಾಗಿ ನಗುತಲಿದೆ ರಷ್ಯಾ…       (ಸ.ಕಾ. ಸಂ.೧. ಪು.೩೭೦)

ಅದೊ ನೋಡಿ ರಷ್ಯಾ ಜಪಾನು ತುರ್ಕಿಗಳೆಲ್ಲ

ಪರೆಗಳಚಿ ಹೊರಟಿಹವು ಹೊಸ ಪಯಣಕೆ   (ಸ.ಕಾ. ಸಂ.೧. ಪು.೩೭೨)

‘ಸರ್ವರಿಗೆ ಸಮಬಾಳು! ಸರ್ವರಿಗೆ ಸಮಪಾಲು’

ಎಂಬ ನವಯುಗ ವಾಣಿ ಘೋಷಿಸಿದೆ ಕೇಳಿ   (ಸ.ಕಾ. ಸಂ.೧. ಪು.೩೭೩)

[6] ಬದುಕುವುದಕ್ಕೆ ಸಾಮಾಜಿಕ ಜೀವನ ಸಾಗುವುದಕ್ಕೆ ಬೇಕಾದುದೆಲ್ಲವನ್ನೂ ಸೃಷ್ಟಿಸುವ ಆಧುನಿಕ ಶ್ರಮಜೀವಿ ಮನುಷ್ಯರನ್ನು,  ಈ ತನಕ ಸಮಾಜದಲ್ಲಿ ತುಚ್ಛರೆಂದೂ, ಗೌಣ ಎಂದೂ ಕಾಣಲಾಗುತ್ತಿತ್ತು. ಇನ್ನು ಮುಂದೆ ಆ ದುಡಿಮೆಗಾರ ವರ್ಗವೇ ಇತಿಹಾಸದ ಚಲನೆಯ ಚೈತನ್ಯವೆಂದೂ, ಮುಂದಿನ (ಪರಿವರ್ತನೆಯ) ಹಂತದ ಕೇಂದ್ರಬಿಂದುವೆಂದೂ ಪರಿಗಣಿಸಬೇಕೆಂದು ಮಾರ್ಕ್ಸ್, ಎಂಗೆಲ್ಸ್ ಕಲಿಸಿಕೊಟ್ಟರು.

-ಬಿ.ವಿ. ಕಕ್ಕಿಲಾಯ (೧೯೮೫) ಕಾರ್ಲ್‌ಮಾರ್ಕ್ಸ್: ಬದುಕು-ಬರಹ. ಪು. ೧೩೭-೧೩೯.