ಕವಿ, ನಿಜವಾದ ಕವಿ ಜಗತ್ತನ್ನು ಅದರ ವಿವಿಕ್ತತೆಯಲ್ಲಿ ಮಾತ್ರ ಗ್ರಹಿಸುವುದಿಲ್ಲ; ಅದರ ಸಮಗ್ರತೆಯಲ್ಲಿ ಗ್ರಹಿಸುತ್ತಾನೆ. ಇದನ್ನೆ ಕುವೆಂಪು ‘ದರ್ಶನ’ ಎಂದು ಕರೆಯುತ್ತಾರೆ. ಕವಿಯ ಕಣ್ಣು ಈ ‘ದರ್ಶನ’ದ ಮೂಲಕ ಲೋಕ ವ್ಯಾಪಾರಗಳನ್ನು ಗ್ರಹಿಸುವಾಗ, ಅವುಗಳನ್ನು ಬಿಡಿಬಿಡಿಯಾಗಿ ಮಾತ್ರವಲ್ಲ, ಈ ಬಿಡಿ ಬಿಡಿಗಳು ಯಾವ ಒಂದು ‘ಇಡಿ’ಯ ಅಥವಾ ಸಮಗ್ರತೆಯ ಅವಿನಾಭಾಗವಾಗಿಯೋ, ಅವುಗಳ ಸಹಿತ ಗ್ರಹಿಸುತ್ತದೆ. ಇದಕ್ಕೆ ಕುವೆಂಪು ಕೊಡುವ ಮತ್ತೊಂದು ಹೆಸರೆಂದರೆ ‘ಪೂರ್ಣದೃಷ್ಟಿ’. ಕುವೆಂಪು ಮೊದಲಿನಿಂದಲೂ ಈ ಪೂರ್ಣ ದೃಷ್ಟಿಯ ಪ್ರತಿಪಾದಕರು. ೧೯೩೩ರಂದು ಹುಬ್ಬಳ್ಳಿಯ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ ಅವರು ಮಾಡಿದ ‘ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ’ ಎಂಬ ಭಾಷಣದಲ್ಲಿಯೆ ಈ ವಿಷಯವನ್ನು ಮೊದಲಿಗೆ ಪ್ರಸ್ತಾಪಿಸಿದ್ದಾರೆ. (ಸ.ಗ. ಸಂ.೧. ಪು.೨೭) ಇದಕ್ಕೂ ಮುನ್ನ ಅವರು ಬರೆದ ‘ಕರಿಸಿದ್ಧ’ ಎಂಬ ಕವಿತೆಯಲ್ಲಿ (ಸ.ಗ. ಸಂ.೨. ಪು. ೫೯೧) ಈ ಪೂರ್ಣದೃಷ್ಟಿಯ ಹೊಳಹುಗಳನ್ನು ಗುರುತಿಸಬಹುದು. ಈ ಕವಿತೆಯನ್ನು ಅವರು ಬರೆದದ್ದು. ೨೨.೯.೧೯೨೭ರಂದು (ನೆ.ದೋ. ಪು.೫೮೬). ಇದರ ವಸ್ತುವೋ ಸಾಮಾನ್ಯಾತಿ ಸಾಮಾನ್ಯ ವ್ಯಕ್ತಿಗಳಾದ, ಅದರಲ್ಲೂ ಕೆಳವರ್ಗಕ್ಕೆ ಸೇರಿದ, ಗಿಡ್ಡಿ, ಕರಿಸಿದ್ಧ, ಬೈರ ಇವರನ್ನು ಕುರಿತದ್ದು. ಗಿಡ್ಡಿಕರಿಸಿದ್ಧರ ಒಬ್ಬನೇ ಮಗ ಬೈರ. ಈ ಬೈರ ಹುಡುಗ ಒಂದು ದಿನ ಅಕಸ್ಮಾತ್ತಾಗಿ ಕುಪ್ಪಳಿಯ ಕೆರೆಯಲ್ಲಿ ಬಿದ್ದು ಮುಳುಗಿ ಸತ್ತು ಹೋಗುತ್ತಾನೆ. ಈ ಬೈರ ಹುಡುಗನ ಸಾವಿನ ಘಟನೆಯನ್ನು, ಅದೇ ಸಂದರ್ಭದ ಜಗತ್ತಿನ ಇನ್ನಿತರ ಘಟನೆಗಳೊಂದಿಗೆ– ಇರಿಸಿ ಕುವೆಂಪು ನಿರೂಪಿಸಿರುವ ಕ್ರಮ, ಮೇಲುನೋಟಕ್ಕೆ ಯಃಕಶ್ಚಿತ್ ಎಂದು ತೋರುವ ಈ ಕೆಳವರ್ಗದ ಬೈರ ಹುಡುಗನ ಸಾವು, ಅದೇ ಸಂದರ್ಭದಲ್ಲಿ ಈ ಜಗತ್ತಿನಲ್ಲಿ ಸಂಭವಿಸುತ್ತಿದ್ದ ಇನ್ನಿತರ ಘಟನೆಗಳಿಗಿಂತ ಯಾವ ರೀತಿಯಲ್ಲಿಯೂ ಕೀಳಾದುದಲ್ಲ ಎನ್ನುವುದನ್ನು ಸೂಚಿಸುವುದರ ಜತೆಗೆ, ಕವಿಯ ಪೂರ್ಣದೃಷ್ಟಿ ಜಗತ್ತಿನ ಅಖಂಡತೆಯನ್ನು ಗ್ರಹಿಸುವ ಪರಿಯನ್ನೂ ಪರಿಚಯ ಮಾಡಿಕೊಡುತ್ತದೆ.

೧೯೩೬ರಲ್ಲಿ ಅವರು ಬರೆದ ಕಾನೂರು ಹೆಗ್ಗಡಿತಿ, ಎಂಬ ಮೊದಲ ಬೃಹತ್  ಕಾದಂಬರಿಯ (೧೯೯೭ರ ಮುದ್ರಣ) ಮೊದಲ ಎಂಬತ್ತೈದು ಪುಟಗಳ, ಮತ್ತು ಅಲ್ಲಿಂದ ನೂರಾಹದಿನೇಳನೆ ಪುಟಗಳವರೆಗಿನ ನಿರೂಪಣೆ ಬೆಳಿಗ್ಗೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆಯವರೆಗಿನ ಮತ್ತು ಅನಂತರ ರಾತ್ರಿ ಮಲಗುವ ಹೊತ್ತಿನವರೆಗೆ ಏಕಕಾಲಕ್ಕೆ ಆ ಮಲೆನಾಡಿನ ಹಲವು ಕಡೆಗಳಲ್ಲಿ ಸಮಾನಾಂತರವಾಗಿ ಸಂಭವಿಸುತ್ತಿದ್ದ ಘಟನೆಗಳನ್ನು ಒಂದು ನಿರ್ದಿಷ್ಟಕಾಲದ ಚೌಕಟ್ಟಿಗೆ ತಂದುಕೊಂಡು ನಿರೂಪಿಸುವ ಕುವೆಂಪು ಅವರ ರಚನಾತಂತ್ರ ಅವರ ಗ್ರಹಿಕೆಯ ಕ್ರಮಕ್ಕೆ ಒಂದು ನಿದರ್ಶನವಾಗಿದೆ. ಅವರ ‘ಮಲೆಗಳಲ್ಲಿ ಮದುಮಗಳು’ (೧೯೬೭) ಎಂಬ ಅವರ ಇನ್ನೊಂದು ಕಾದಂಬರಿಯಲ್ಲಂತೂ ಈ ಗ್ರಹಿಕೆ ಇನ್ನೂ ವ್ಯಾಪಕವಾದ ನೆಲೆಯ ಘಟನೆಗಳನ್ನು ಸಮಾನಾಂತರವಾಗಿ ಸಂಘಟಿಸುತ್ತ ಓದುಗರಲ್ಲಿ ವಿಸ್ಮಯವನ್ನು ಹುಟ್ಟಿಸುತ್ತದೆ. ಒಂದೇ ಒಂದನ್ನು ಪ್ರಸ್ತಾಪಿಸುವುದಾದರೆ:  ೧೮೯೩ನೇ ಇಸವಿ ಸೆಪ್ಟೆಂಬರ್ ೧೧ನೆಯ ತೇದಿ ಸೋಮವಾರ ತೀರ್ಥಹಳ್ಳಿಯ ಪಾದ್ರಿ ಅಥವಾ ಉಪದೇಶಿ ಜೀವರತ್ನಯ್ಯ ಕಾಡುದಾಟಿ… ಸಿಂಧುವಳ್ಳಿಯ ಮನೆಗೆ ಪ್ರವೇಶಿಸಿದಂದು ತಾನು ಎಂತಹ ಲೋಕಪ್ರಸಿದ್ಧವಾಗಲಿರುವ ಜಗದ್‌ಭವ್ಯ ಮಹದ್ ಘಟನೆಯೊಂದರೊಡನೆ ಪ್ರತಿಸ್ಪರ್ಧಿಯಾಗಿದ್ದೇನೆ ಎಂಬುದನ್ನು ಅರಿತಿರಲಿಲ್ಲ: ಆ ದಿನವೆ ಕ್ರೆ ಸ್ತ ಮತ ಶ್ರದ್ಧೆಯ ಮತ್ತು ಮಿಶನರಿ ಮತಾಂಧತೆಯ ಶಕ್ತಿ ಕೇಂದ್ರವಾಗಿದ್ದ ಅಮೇರಿಕಾ ದೇಶದ ಚಿಕಾಗೋ ನಗರದಲ್ಲಿ ನೆರೆದಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮತ್ತು ವೇದಾಂತ ದರ್ಶನದ ಮಹೋನ್ನತಿಯನ್ನು ವಿಶ್ವ ವೈಶಾಲ್ಯವನ್ನು ತಮ್ಮ ಸಿಂಹ ಕಂಠದಿಂದ ಘೋಷಿಸಿದ್ದರು.

ಅದನ್ನೆಲ್ಲ ಸದ್ದು ಗದ್ದಲವಿಲ್ಲದೆ ಮೂದಲಿಸುವಂತೆ, ಯಃಕಶ್ಚಿತ ಪಾದ್ರಿಯೊಬ್ಬನು– ಅದರಲ್ಲಿಯೂ ನೇಟೀವ್ ಪಾದ್ರಿ-ಘೋರಾರಣ್ಯಮಯವಾದ ಸಹ್ಯಾದ್ರಿ ಶ್ರೇಣಿಯ ಮಲೆನಾಡಿನ ಕೊಂಪೆಯ ಅಜ್ಞ ಬೇಸಾಯಗಾರನೊಬ್ಬನಿಗೆ ಹಿಂದೂಧರ್ಮದ ಅನಾಚಾರ, ಅವಿವೇಕ, ಸಂಕುಚಿತ ಮನೋಭಾವ, ಜಾತಿಮತ ಪಕ್ಷಪಾತ, ಬ್ರಾಹ್ಮಣರ ತಿರಸ್ಕಾರ, ಶೂದ್ರರ ದೈನ್ಯ, ಅಧೋಗತಿ, ಕಲ್ಲು ಮಣ್ಣು ಮರ ದೆವ್ವಗಳ ಪೂಜೆ ಇತ್ಯಾದಿಗಳನ್ನೂ- ಯೇಸುಕ್ರಿಸ್ತನ ಮತ್ತು ಕ್ರೆ ಸ್ತ ಮತದ ಪರೋಪಕಾರ, ಪರಾನುಕಂಪನ ನೀತಿ, ತ್ಯಾಗ, ಭಕ್ತಿ, ಉದ್ಧಾರಕ ಸಾಮರ್ಥ್ಯ ಇತ್ಯಾದಿಗಳನ್ನು–ಕುರಿತು ಮನಮುಟ್ಟುವಂತೆ ಉಪದೇಶ ಮಾಡುತ್ತಿದ್ದನು, ಗೌಡನ ಮನೆಯ ಚಾವಡಿಯಲ್ಲಿಯೆ ಕುಳಿತು, ಅವನ ಗದ್ದೆ ತೋಟ, ಅಂಗಳದ ತುಳಸಿಕಟ್ಟೆಯ ದೇವರು ಮತ್ತು ಎದುರಿಗೇ ಕಾಣುತ್ತಿದ್ದ ಭೂತದ ಬನ ಇವುಗಳ ಇದಿರಿನಲ್ಲಿಯೆ!’ (ಮಲೆಗಳಲ್ಲಿ ಮದುಮಗಳು ಪು. ೧೯೧-೧೯೨).

ಕುವೆಂಪು ತಮ್ಮ ಮಹಾಕಾವ್ಯವಾದ ‘ಶ್ರೀರಾಮಾಯಣದರ್ಶನಂ’ ಬರೆಯುವ ಸಂದರ್ಭದಲ್ಲಿ, ಹಳಗನ್ನಡಕಾವ್ಯಗಳೊಳಗಿನ ಪೂರ್ವಕವಿಸ್ಮರಣೆಯನ್ನು ನೆನಪಿಗೆ ತರುವಂತಿರುವ ‘ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ’ ಎಂದು ಪ್ರಾರಂಭವಾಗಿ, ಭಾರತದ ವಿವಿಧ ಭಾಷಾ ಸಾಹಿತ್ಯಗಳ ಕವಿಗಳನ್ನು ಕುರಿತ ಸ್ತುತಿಯೊಂದಿದೆಯಷ್ಟೆ? ಕುವೆಂಪು ‘ಕಾಲದೇಶದ ನುಡಿಯ ಜಾತಿಯ ವಿಭೇದಮಂ ಲೆಕ್ಕಿಸದೆ, ಜಗತೀ ಕಲಾಚಾರ್ಯರೆಲ್ಲರ್ಗೆ’ (ಶ್ರೀ. ರಾ.ದ.ಸಂ. ೧- ಪಂಕ್ತಿ ೧೪೧-೧೫೦) ತಮ್ಮ ನಮನವನ್ನು ಸಲ್ಲಿಸುವುದರ ಮೂಲಕ ತಾವು ಈ ಜಗತ್ತಿನ ಮಹಾಕಾವ್ಯ ಪರಂಪರೆಗೆ ಸೇರಿದವರೆಂಬುದನ್ನು ದೃಢಪಡಿಸುತ್ತಾರೆ.

ಕುವೆಂಪು ಅವರ ಸಾಹಿತ್ಯ ವಿಮರ್ಶೆಯ ಬರಹಗಳಲ್ಲಿಯೂ ಈ ಜಾಗತಿಕ ಪ್ರಜ್ಞೆ ಒಂದು ಪ್ರಮುಖ ಲಕ್ಷಣವಾಗಿದೆ. ಅದರಲ್ಲಿಯೂ ಅವರ ತೌಲನಿಕ ವಿಮರ್ಶೆ, ಬೇರೆ ಬೇರೆ ದೇಶಗಳ ಹಾಗೂ ಭಾಷೆಯ ಕೃತಿ ಸಂದರ್ಭಗಳನ್ನು ಮುಖಾಮುಖಿಯನ್ನಾಗಿ ಮಾಡುತ್ತ, ಅನ್ಯ ಸಾಹಿತ್ಯ ಪರಿಕಲ್ಪನೆಗಳ ಬೆಳಕಿನಲ್ಲಿ ನಮ್ಮ ದೇಶದ ಸಾಹಿತ್ಯ ಸಂದರ್ಭಗಳನ್ನು ವಿವೇಚಿಸುತ್ತ, ಕನ್ನಡ ಸಹೃದಯರ ಅರಿವಿನ ಪರಿಧಿಗಳನ್ನು ವಿಸ್ತರಿಸಿದ್ದು ಒಂದು ವಿಶೇಷದ ಸಂಗತಿಯಾಗಿದೆ.

ಈ ಕೆಲವು ಪ್ರಸ್ತಾಪಗಳ ಉದ್ದೇಶ, ಕುವೆಂಪು ಅವರ ಗ್ರಹಿಕೆಯ ಸ್ವರೂಪವನ್ನು ಸ್ಪಷ್ಟಪಡಿಸುವುದೇ ಆಗಿದೆ. ವಾಸ್ತವವಾಗಿ, ಅದೊಂದು ರೀತಿಯಲ್ಲಿ ಲೋಕಾನುಭವಗಳನ್ನು, ಅದರ ಸಮಗ್ರತೆಯಲ್ಲಿ ತನ್ನ ಅರಿವಿಗೆ ತಂದುಕೊಂಡು ಅಭಿವ್ಯಕ್ತಪಡಿಸುವ ಪ್ರಜ್ಞಾ ವಿಶೇಷದ ಪರಿಣಾಮವಾಗಿದೆ. ಈ ನಿಲುವಿನಿಂದ ನಿಷ್ಪನ್ನವಾದದ್ದು ಅವರ ವಿಶ್ವಮಾನವ ಕಲ್ಪನೆ. ವಿಶ್ವಮಾನವನಾಗುವುದು ಎಂದರೆ ನಮ್ಮ ವ್ಯಕ್ತಿವಿಶಿಷ್ಟತೆಯನ್ನು ಕಳೆದುಕೊಂಡು ಅಮೂರ್ತವಾಗುವುದು ಎಂದಲ್ಲ. ಮನುಷ್ಯನ ವ್ಯಕ್ತಿತ್ವವು ಎಲ್ಲ ಬಗೆಯ ಜಾತಿ-ಮತ-ಪಂಥ- ವರ್ಣ-ವರ್ಗ-ದೇಶ-ಭಾಷೆ ಇತ್ಯಾದಿ ಉಪಾಧಿಗಳಿಂದ ಮುಕ್ತವಾದ ಒಂದು ಅನಿಕೇತನ ಪ್ರಜ್ಞೆಯಲ್ಲಿ ಅರಳಿಕೊಳ್ಳಬೇಕು ಎನ್ನುವುದೇ ಅವರ ವಿಶ್ವಮಾನವತೆಯ ಸಾರಾಂಶವಾಗಿದೆ. ಅವರೇ ಹೇಳಿಕೊಳ್ಳುವಂತೆ ‘ನಾನಾ ಕಾಲ ದೇಶಗಳಿಗೆ, ಮತ್ತು ಎಲ್ಲ ಜನರಿಗೆ ಸಮಾನವಾಗಿ ಅನ್ವಯವಾಗಬಹುದಾದ ಒಂದು ತತ್ವವನ್ನು ನನ್ನ ಚೇತನ ಅನೇಕ ವರ್ಷಗಳಿಂದ ಅರಸುತ್ತಿದ್ದುದಂತೂ ನಿಜ’. (ಸ.ಗ. ಸಂ. ೨ ಪು. ೨೦೯) ಆ ತತ್ವವೇ ‘ಓ ನನ್ನ ಚೇತನಾ ಆಗು ನೀ ಅನಿಕೇತನ’ ಎಂಬ ಗೀತೆಯಲ್ಲಿ ಹರಳುಗೊಂಡಿದೆ. ‘ಅನಿಕೇತನ’ ಎಂಬ ಶೀರ್ಷಿಕೆಯಲ್ಲಿ ೧೯೫೬ರಂದು ಮೊದಲು ಬರೆದ ಈ ಕವಿತೆಯನ್ನು, ೧೯೮೧ರಲ್ಲಿ ‘ವಿಶ್ವಮಾನವ ಗೀತೆ’ ಎಂದು ಕರೆದಿದ್ದಾರೆ. (ಸ.ಗ. ಸಂ.೨. ಪು. ೮೯೪). ಈ ವಿಶ್ವಮಾನವ ಪರಿಕಲ್ಪನೆಯನ್ನು ತಮ್ಮ ಕಟ್ಟಕಡೆಯ ಸಂದೇಶ ಎಂದು ಕುವೆಂಪು ಹೇಳಿಕೊಂಡರೂ, ಅವರ ಕಾವ್ಯಜೀವನದ ಮೊದಲಿನಿಂದಲೂ, ಅದು ಸಂದರ್ಭಾನುಸಾರವಾಗಿ ಕಾಣಿಸಿಕೊಳ್ಳುತ್ತಲೆ ಬಂದಿದೆ. ‘ಯಾವ ಮತದವನಲ್ಲ ಎಲ್ಲ ಮತದವನು’ ಎಂದು (ಸ.ಕಾ. ಸಂ.೧. ಪು. ೯೦೧) ಘೋಷಿಸಿಕೊಂಡ ಕುವೆಂಪು, ೧೯೩೫ರಷ್ಟು ಹಿಂದೆಯೇ–

ಮತದ ಮತದ ಹಳೆಮತದ ಸಹವಾಸ
ಸಾಕಿನ್ನು ಸಾರಿರೈ ಮನುಜ ಮತಕೆ
ಬನ್ನಿ ಸೋದರೆ ವಿಶ್ವಪಥಕೆ (ಸ.ಕಾ. ಸಂ.೧ ಪು. ೩೭೨)

ಎಂದು ತರುಣರಿಗೆ ಕೊಟ್ಟ ಕರೆಯಲ್ಲಿರುವ ‘ಮನುಜ ಮತ ವಿಶ್ವಪಥ’ ಎನ್ನುವ ಪರಿಕಲ್ಪನೆಯನ್ನು ಗಮನಿಸಬಹುದು. ೧೯೪೬ರಲ್ಲಿ ಪ್ರಕಟವಾದ ‘ಅಗ್ನಿಹಂಸ’ ಕವನ ಸಂಗ್ರಹದಲ್ಲಿ ‘ಮನ್ಮನೋ ಮಂದಿರಕೆ ಓ! ಲೋಕ ಗುರುಗಳೆಲ್ಲ ಬನ್ನಿ’ ಎಂಬ ಆಶಯ ವ್ಯಕ್ತವಾಗಿದೆ. ೧೯೫೯ರಲ್ಲಿ ಮಡಕೇರಿಯಲ್ಲಿ ಕುವೆಂಪು ಮಾಡಿದ ಭಾಷಣದ ಶೀರ್ಷಿಕೆಯೆ ‘ವಿಶ್ವಮಾನವ’ ಎನ್ನುವುದು. ಮುಖ್ಯವಾಗಿ ಇಲ್ಲಿ ಮಂಡಿತವಾಗಿರುವ ವಿಚಾರವೆಂದರೆ ನಮ್ಮ ವಿಶ್ವವಿದ್ಯಾಲಯಗಳು ‘ವಿಶ್ವವಿದ್ಯೆ’ಯನ್ನು ಜನಕ್ಕೆ ತಲುಪಿಸುವ, ಆ ಮೂಲಕ ಜನತೆಯಲ್ಲಿ ವಿಶ್ವಪ್ರಜ್ಞೆಯನ್ನು ಮೂಡಿಸುವ ಸಾಧನಗಳಾಗಬೇಕು–ಎನ್ನುವುದು. ವಿಶ್ವಮಾನವ ಪರಿಕಲ್ಪನೆಯನ್ನು ಕುರಿತು ಅಲ್ಲಿ ಹೆಚ್ಚೇನನ್ನೂ ಹೇಳದಿದ್ದರೂ ‘ಈ ವಿಶ್ವವಿದ್ಯೆ, ಅದರಿಂದ ಉಂಟಾಗುವ ವಿಶ್ವಪ್ರಜ್ಞೆ, ಅದರಿಂದ ಉಂಟಾಗುವ ವಿಶ್ವ ಮೈತ್ರಿ–ಇದು ಎಲ್ಲದಕ್ಕಿಂತಲೂ ಅತ್ಯಂತ ಅವಶ್ಯಕವಾಗಿದೆ… ಅಂಥ ವಿಶ್ವ ಮೈತ್ರಿಯನ್ನು ಪಡೆದ ಮಾನವ ವಿಶ್ವಮಾನವ’ (ಸ.ಗ. ಸಂ.೨. ಪು.೧೭೭) ಎಂಬುದನ್ನು ಸೂಚಿಸುತ್ತಾರೆ.[1] ಮುಂದೆ ೧೯೮೧ರಲ್ಲಿ ಪ್ರಕಟಿಸಿದ ‘ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ ಎಂಬ ಕಿರು ಕೃತಿಯಲ್ಲಿ, ‘ಪಂಚಮಂತ್ರ ಮತ್ತು ಸಪ್ತಸೂತ್ರ’ ಹಾಗೂ ‘ವಿಶ್ವಮಾನವ ಗೀತೆ’-(ಅನಿಕೇತನ)ಯನ್ನೂ ಕಾಣಿಸಿದ್ದಾರೆ. ‘ಯಾವುದೇ ಒಂದು ಮತಕ್ಕಾಗಲೀ ತತ್ವಕ್ಕಾಗಲೀ ಅಂಟಿಕೊಳ್ಳಬಾರದು, ಅಲ್ಲಿಯೇ ನಿಲ್ಲಬಾರದು ಎಂಬ ಭಾವನೆ ಉದಯಿಸಿದ್ದು, ಶ್ರೀರಾಮಕೃಷ್ಣ ವಿವೇಕಾನಂದರ ಸಾಹಿತ್ಯವನ್ನು ಓದುತ್ತಿದ್ದಾಗಲೇ… (ಸ.ಗ.ಸಂ.೨ ಪು. ೯೫೮)- ಎನ್ನುವುದನ್ನು ನೆನೆಸಿಕೊಳ್ಳುವ ಕುವೆಂಪು, ತಮ್ಮ ವಿಶ್ವಮಾನವ ಸಂದೇಶವನ್ನು ಪ್ರಾರಂಭಿಸುವುದೇ ಸ್ವಾಮಿ ವಿವೇಕಾನಂದರ ಮಾತುಗಳಿಂದ.

No man is born to any religion
every man has a religion in his soul
Let there be as many religions as
there are human beings in this world.

‘ಪ್ರತಿಯೊಂದು ಮಗುವೂ ಹುಟ್ಟುತ್ತಲೆ-ವಿಶ್ವಮಾನವ’, ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯ’ವಾಗಬೇಕು.

ಹುಟ್ಟುವಾಗ ‘ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ ಭಾಷೆ, ಮತ ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ ಅಂದರೆ ‘ವಿಶ್ವಮಾನವ’ನನ್ನಾಗಿ ಪರಿವರ್ತಿಸುವುದೆ ನಮ್ಮ ವಿದ್ಯೆ, ನಾಗರಿಕತೆ, ಸಂಸ್ಕೃತಿಗಳ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು ಬಾಳಿ ಬದುಕಬೇಕಾದರೆ’ (ಸ.ಗ.ಸಂ.೨. ಪು. ೮೯೨).

‘ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ’– ಇವುಗಳನ್ನೊಳಗೊಂಡ ಒಂದು ಪೂರ್ಣದೃಷ್ಟಿ ನಮ್ಮಲ್ಲಿ ಉದಯವಾಗಬೇಕು ಎನ್ನುವ ಕುವೆಂಪು, ಮುಂದೆ ಸಪ್ತಸೂತ್ರಗಳನ್ನು ಹೀಗೆ ಮಂಡಿಸುತ್ತಾರೆ:

೧) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.

೨) ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು…

೩) ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.

೪) ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.

೫) ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು. ಮನುಷ್ಯ ‘ವಿಶ್ವಮಾನವ’ನಾಗಬೇಕು.

೬) ಮತ ಗುಂಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕಂಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರು ವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು.

೭) ಯಾವ ಒಂದು ಗ್ರಂಥವೂ ‘ಏಕೈಕ ಪರಮಪೂಜ್ಯ’ ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು. (ಸ.ಗ.ಸಂ.೨ ಪು. ೮೯೧-೮೯೩)

ಕುವೆಂಪು ಅವರ ಈ ವಿಶ್ವಮಾನವ ಸಂದೇಶ, ಅವರ ವೈಚಾರಿಕತೆಯ ಪರಿಣತಿಯನ್ನೂ ಮತ್ತು ಅವರ ಸಾಹಿತ್ಯ ನಿರ್ಮಿತಿಯ ಹಿಂದಿರುವ ಪೂರ್ಣದೃಷ್ಟಿಯನ್ನೂ ಪ್ರತಿನಿಧಿಸುವುದಲ್ಲದೆ, ವರ್ತಮಾನದ ಹಾಗೂ ನಾಳಿನ ಜಗತ್ತಿಗೆ ಮಾರ್ಗದರ್ಶಕ ಮಹಾಸೂತ್ರಗಳಾಗಿದೆ. ಮನುಷ್ಯ ಮೂಲತಃ ಮನುಷ್ಯನಾಗಿ ಉಳಿಯಲು ಸಾಧ್ಯವಾಗದಂತಹ ವಿದ್ಯಮಾನಗಳು ಸಂಭವಿಸುತ್ತಿರುವ ಈ ಹೊತ್ತಿನ ಅಸ್ವಸ್ಥ ಜಗತ್ತಿನಲ್ಲಿ ಕುವೆಂಪು ಅವರ ಈ ವಿಶ್ವಮಾನವ ಕಲ್ಪನೆ ಇನ್ನೂ ಒಂದು ದೂರದ ಬೆಳಕೋ ಏನೊ!

* * *

 


[1] ಕುವೆಂಪು ಕೃತಿರಚನೆ ಮಾಡಿದ ಇಪ್ಪತ್ತನೆ ಶತಮಾನದ ಯುಗಧರ್ಮದಲ್ಲಿಯೇ ವಿಶ್ವಮಾನವ ಕಲ್ಪನೆಯೊಂದು-ಮನುಕುಲದ ಯೋಗಕ್ಷೇಮದ ದೃಷ್ಟಿಯಿಂದ-ರೂಪುಗೊಳ್ಳುತ್ತಲಿತ್ತು. ಜಗತ್ತಿನಾದ್ಯಂತ ವರ್ಣ-ವರ್ಗಗಳ ಕಾರಣ ನೆಲೆಗೊಂಡಿದ್ದ ಅಸಮಾನತೆ ಮತ್ತು ಶೋಷಣೆಗಳು, ವಿಜ್ಞಾನದ ಆವಿಷ್ಕಾರಗಳನ್ನು ಹಿಂಸೆಯ ಉಪಕರಣಗಳನ್ನಾಗಿ ಬಳಸಿಕೊಳ್ಳುತ್ತಿದ್ದ ರಣೋತ್ಸಾಹಗಳೂ ಇತ್ಯಾದಿಗಳಿಂದಾಗಿ, ಮನುಷ್ಯರ ಸ್ವಾತಂತ್ರ , ಸಮಾನತೆ ಹಾಗೂ ನೆಮ್ಮದಿಯ ಪರವಾದ ಚಿಂತನೆಗಳೂ ಕನಸುಗಳೂ ಆ ಕಾಲದ ಕೆಲವು ಪ್ರಜ್ಞಾವಂತರಿಂದ ಪ್ರಸ್ತಾಪಿತವಾಗತೊಡಗಿದವು. ಬಟ್ರಾಂಡ್ ರಸೆಲ್‌ನ ‘ವಿಶ್ವ ನಾಗರಿಕ’ (world citizen) ಕಲ್ಪನೆಯೂ, ರವೀಂದ್ರನಾಥ್ ಟ್ಯಾಗೂರರ ‘ವಿಶ್ವ ಮಾನವ’ (Universal Man) ಕಲ್ಪನೆಯೂ ಈ ಕಾಲಮಾನದಲ್ಲಿಯೆ ಮಂಡಿತವಾದವುಗಳು. ಅದರಲ್ಲಿಯೂ ಎರಡನೆಯ ಮಹಾಯುದ್ಧದ ಭಯಾನಕವಾದ ಹಿಂಸೆಯ ಅನುಭವದ ಹಿನ್ನೆಲೆಯಲ್ಲಿ ‘ವಿಶ್ವಸಂಸ್ಥೆ’ ಸ್ಥಾಪನೆಯಾಗಿ ೧೯೪೮ರಲ್ಲಿ ಜಗತ್ತಿನ ಮಾನವರ ಹಕ್ಕುಗಳನ್ನು ಸಂರಕ್ಷಿಸುವ ಮತ್ತು ಎತ್ತಿ ಹಿಡಿಯುವ ಘೋಷಣೆಯೊಂದನ್ನು ತನ್ನ ಸಂಕಲ್ಪವನ್ನಾಗಿ ಸ್ವೀಕರಿಸಿತು.

ಕುವೆಂಪು ಅವರ ಸಮಕಾಲೀನರಾದ, ದ.ರಾ. ಬೇಂದ್ರೆ ಮತ್ತು ವಿ.ಕೃ. ಗೋಕಾಕ್‌ರೂ ಇದೇ ಬಗೆಯ ‘ವಿಶ್ವಮಾನವ’ ಕಲ್ಪನೆಯನ್ನು ಎತ್ತಿ ಹಿಡಿದವರೇ. ಬೇಂದ್ರೆಯವರ ‘ಗಂಗಾವತರಣ’ (೧೯೫೧) ಕವನ ಸಂಗ್ರಹದೊಳಗಿರುವ ‘ನಾನು’ ಎಂಬ ಕವಿತೆಯಲ್ಲಿ ಕವಿ ಅಂಬಿಕಾತನಯನ ವ್ಯಕ್ತಿತ್ವವು, ‘ಐದು-ಐದೆಯರ ಪಂಚಪ್ರಾಣವಾಗಿ–ವಿಶ್ವಮಾತೆ, ಭೂಮಿತಾಯಿ, ಭರತಮಾತೆ, ಕನ್ನಡತಾಯಿ ಮತ್ತು ತಮ್ಮನ್ನು ಹೆತ್ತತಾಯಿ ಇವರಿಂದ–ರೂಪುಗೊಂಡಿದೆ ಎನ್ನುವ ಉಕ್ತಿಯಲ್ಲಿ ‘ವಿಶ್ವಮಾನವ’ ಕಲ್ಪನೆಯ ಹೊಳಹಿದೆ. ಡಾ. ವಿ.ಕೃ. ಗೋಕಾಕರು, ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಕನ್ನಡಿಗರು ‘ವಿಶ್ವಮಾನವ’ರಾಗಬೇಕೆಂದು ಕರೆಕೊಟ್ಟಿದ್ದಾರೆ. (ಪು.೧೫೬, ೧೫೭, ೧೭೪, ೧೭೫, ೧೭೮- ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳು.ಸಂಪುಟ ೩. ಪ್ರ:ಕ.ಸಾ.ಪ.) ಕುವೆಂಪು ಈ ವಿಶ್ವಮಾನವ ಕಲ್ಪನೆಯ ವಿಚಾರಗಳನ್ನು ಮೊದಲಿನಿಂದಲೂ ಪ್ರತಿಪಾದಿಸಿದವರಾದರೂ ನಮ್ಮ ಗಮನಕ್ಕೆ ಬಂದಂತೆ ವಿಶ್ವಮಾನವ ಎನ್ನುವ ಪದ ಮತ್ತು ವಿಶ್ವಮಾನವ ಎಂದರೇನೆಂಬುದರ ವಿವರಣೆ ಮೊದಲು ಪ್ರಸ್ತಾಪಿತವಾಗಿರುವುದು ಗೋಕಾಕರಿಂದ- ಬಳ್ಳಾರಿ ಸಾಹಿತ್ಯ ಸಮ್ಮೇಳನದ (೧೯೫೮) ಅವರ ಉಪನ್ಯಾಸದಲ್ಲಿ. ಕುವೆಂಪು ‘ವಿಶ್ವಮಾನವ’ ಎಂಬ ಶೀರ್ಷಿಕೆಯ ಉಪನ್ಯಾಸ ಮಾಡಿದ್ದು ಮತ್ತು ‘ವಿಶ್ವಮಾನವ’ ಯಾರು ಎಂಬುದನ್ನು ಸಂಕ್ಷೇಪವಾಗಿ ನಿರೂಪಿಸಿದ್ದು- ೧೯೫೯ ರಲ್ಲಿ; ಮಡಿಕೇರಿಯಲ್ಲಿ. ೧೯೮೧ರ ಹೊತ್ತಿಗೆ ಕುವೆಂಪು ತಮ್ಮ ಬದುಕಿನ ಸಂದೇಶವೆಂಬಂತೆ ಸಾರಿದ ವಿಶ್ವಮಾನವ ಕಲ್ಪನೆ ಮತ್ತು ಅದರ ಸೂತ್ರಬದ್ಧವಾದ ನಿರೂಪಣೆಯೊಳಗಿರುವ ನಿರ್ದೇಶನಗಳು ಇನ್ನೂ ಹೆಚ್ಚು ವ್ಯಾಪಕವೂ ಆಧ್ಯಾತ್ಮಿಕವೂ ಆಗಿವೆ.