ಕುವೆಂಪು ಶತಮಾನೋತ್ಸವದ ಸಂದರ್ಭದಲ್ಲಿ ಅವರನ್ನು ನೆನೆಯುವುದು  ಎಂದರೆ, ಮನುಕುಲದ ಚರಿತ್ರೆಯಲ್ಲಿ ಮಹತ್ವದ ಕಾಲವಾದ ಇಪ್ಪತ್ತನೆಯ ಶತಮಾನವನ್ನು ತಮ್ಮ ಕೃತಿಗಳ ಮೂಲಕ ಅದರ ಸಮಸ್ತ ಪಲ್ಲಟಗಳ ಹಾಗೂ ತಲ್ಲಣಗಳ ಸಹಿತ ಗ್ರಹಿಸಿ ನಿರೂಪಿಸಿದ ಪ್ರತಿಭಾವಿಶೇಷವೊಂದನ್ನು ನೆನೆಯುವುದು ಎಂದು ಅರ್ಥ. ಬೇರೊಂದು ಮಾತಿನಲ್ಲಿ ಹೇಳುವುದಾದರೆ ಸಮಕಾಲೀನ ಭಾರತೀಯ ಸಾಹಿತ್ಯವು ಕನ್ನಡದ ಸಂದರ್ಭದಲ್ಲಿ ಪಡೆದುಕೊಂಡ ಸೃಜನಶೀಲತೆ ಮತ್ತು ವೈಚಾರಿಕತೆಗಳ ಉತ್ಕರ್ಷದ ಪ್ರತಿನಿಧಿಯಂತೆ ಇದ್ದಾರೆ ಕುವೆಂಪು.

‘ಕಾಡಿನ ಕೊಳಲಿದು, ಕಾಡಕವಿಯು ನಾ, ನಾಡಿನ ಜನರೊಲಿದಾಲಿಪುದು’ ಎಂಬ ಬಿನ್ನಹದೊಂದಿಗೆ, ಕಳೆದ ಶತಮಾನದ ಮೂರನೆಯ ದಶಕದಲ್ಲಿ ಕನ್ನಡ ನವೋದಯವನ್ನು ಪ್ರವೇಶಿಸಿದ ಈ ‘ಕಾಡಿನ ಕವಿ’, ಅನಂತರ ನಾಡಿನ ಕವಿಯಾಗಿ, ಸಾಹಿತ್ಯದ ವಿವಿಧ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತ, ಜಾಗತಿಕ ಪ್ರಜ್ಞೆಯ ವಿಸ್ತಾರದಲ್ಲಿ ಕನ್ನಡವನ್ನು ಬೆಳೆಯಿಸುತ್ತ ಬಂದ ಸಂಗತಿ ಈಗಾಗಲೇ ಕನ್ನಡ ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದೆ. ಅರ್ಧ ಶತಮಾನಕ್ಕೂ ಮೀರಿದ ಕಾಲಮಾನದಲ್ಲಿ ಸಾಹಿತ್ಯ, ಶಿಕ್ಷಣ, ಸಂಸ್ಕೃತಿಗೆ ಮಹತ್ತರ ಕೊಡುಗೆಯನ್ನು ಕೊಟ್ಟ, ಈ ಮಹಾನ್ ಲೇಖಕನ ಸಾಹಿತ್ಯ ನಿರ್ಮಿತಿಯ ಹರಹು, ಆಳ ಮತ್ತು ವೈವಿಧ್ಯಗಳು ಹಾಗೂ ಉದ್ದಕ್ಕೂ ಕಾಯ್ದುಕೊಂಡು ಬಂದ ಒಂದು ನಿಶ್ಚಿತವಾದ ಎತ್ತರ, ಅವರು ಹುಟ್ಟಿ- ಬೆಳೆದು- ಬದುಕಿದ ಮಲೆನಾಡಿನ ಪರ್ವತಾರಣ್ಯ ಪ್ರಪಂಚದಂತೆ ಪ್ರವೇಶ ಮಾಡಿದವರನ್ನು ದಂಗು ಬಡಿಸುತ್ತದೆ. ಅವರ ಸಾಹಿತ್ಯದ ವಿಭಿನ್ನ ನೆಲೆಗಳು, ಅದರ ವೈರುಧ್ಯಗಳು, ಅಸ್ತಿತ್ವದ ಅನೇಕ ಸ್ತರಗಳಿಗೆ ಏರುವ- ಇಳಿಯುವ ಅನ್ವೇಷಣಾ ಸಾಮರ್ಥ್ಯ, ವಿವಿಧ ಜ್ಞಾನ ಶಾಖೆಗಳ ಗಾಢವಾದ ತಿಳಿವಿನಿಂದ ಅವರು ಪಡೆದುಕೊಂಡ ವ್ಯುತ್ಪತ್ತಿ ವಿಶೇಷಗಳು- ಯಾವುದೇ ಸಿದ್ಧ ಸಾಹಿತ್ಯ ವಿಮರ್ಶೆಯ ಮಾನದಂಡಗಳಿಗೆ ಅಳವಡುವುದು ದುಸ್ತರವಾಗಿದೆ. ಅಷ್ಟೇ ಅಲ್ಲ, ಅವರ ಸಾಹಿತ್ಯ ಸಾಧನೆಗಳಾಚೆಗೂ ನಿಂತು ಅವರು ಪಡೆದುಕೊಳ್ಳುವ ಸಾಂಸ್ಕೃತಿಕ ಮಹತ್ವ ವಿಶೇಷ ರೀತಿಯದಾಗಿದೆ.

ಕುವೆಂಪು ಶತಮಾನೋತ್ಸವದ ಸಂದರ್ಭದ ನಮ್ಮಸಮಕಾಲೀನ ಜಗತ್ತು, ಹಿಂದಿಗಿಂತ ಎಷ್ಟೋ ಮುಂದುವರಿದಿರುವುದು ನಿಜವಾದರೂ, ಅನೇಕ ಬಗೆಯ ತಲ್ಲಣಗಳಿಂದ ಒಂದು ರೀತಿಯಲ್ಲಿ ಅಸ್ವಸ್ಥವಾಗಿದೆ. ಈ ಅಸ್ವಸ್ಥತೆಗೆ ಕಾರಣವನ್ನು ‘ಹಿಂಸೆ’ ಎಂದು ಗುರುತಿಸಬಹುದು. ಈ ಹಿಂಸೆ ಅನೇಕ ಮುಖಿಯಾದದ್ದು; ಅಭಿವೃದ್ಧಿ ಶೀಲತೆಯೊಂದಿಗೆ ತಳುಕು ಹಾಕಿಕೊಂಡಿರುವ ಪರಿಸರ ನಾಶದ ತಲ್ಲಣಗಳ ಹಿಂಸೆ; ರಾಷ್ಟ್ರವ್ಯಾಪಿಯಾದ ಭ್ರಷ್ಟಾಚಾರದ ಹಿಂಸೆ; ಬಹುಕಾಲದಿಂದ ಹೇಗೋ ಕಾಪಾಡಿಕೊಂಡು ಬಂದ ಕೋಮು ಸಾಮರಸ್ಯದ ಆಕೃತಿಗಳು, ರಾಜಕಾರಣ ಮತ್ತು ಧರ್ಮಗಳ ಅಪವಿತ್ರ ಮೈತ್ರಿಯಿಂದ ಚೂರುಚೂರಾಗುತ್ತಿರುವುದನ್ನು ಅಸಹಾಯಕವಾಗಿ ನೋಡಬೇಕಾದ ಹಿಂಸೆ; ಅದರ ವಿಸ್ತರಣೆಯಾದ ಭಯೋತ್ಪಾದಕತೆಯ ಹಿಂಸೆ; ವಿಜ್ಞಾನ-ತಂತ್ರಜ್ಞಾನಗಳ ಹೊಸ ಆವಿಷ್ಕಾರಗಳ ನಡುವೆಯೂ ಮುಂದುವರೆಯುತ್ತಿರುವ ಎಷ್ಟೋ ಜಡ ಸಂಪ್ರದಾಯಗಳ ಮತ್ತು ಹೊಸದಾಗಿ ಹುಟ್ಟುತ್ತಿರುವ ಮೂಢ ನಂಬಿಕೆಗಳ ಪರಿಣಾಮವಾದ ಅವೈಚಾರಿಕತೆಯ ಹಿಂಸೆ; ನವ ವಸಾಹತುಶಾಹೀ ರೂಪದ ವಾಣಿಜ್ಯ ಸಂಸ್ಕೃತಿಯ ಆಕ್ರಮಣಗಳ ಹಿಂಸೆ- ಇಂಥವುಗಳನ್ನು ಎದುರಿಸಲು ಮತ್ತು ದಾಟಲು ಅಗತ್ಯವಾದ ವೈಚಾರಿಕತೆಯನ್ನು ಕುವೆಂಪು ಎತ್ತಿ ಹಿಡಿದಿದ್ದಾರೆ ಎನ್ನುವುದನ್ನು ನೆನೆದರೆ, ಕುವೆಂಪು ಅವರು ಈ ಹೊತ್ತೂ ಎಷ್ಟೊಂದು ಪ್ರಸ್ತುತರಾಗುತ್ತಾರೆ ಎಂಬುದು ಆಶ್ಚರ್ಯದ ಸಂಗತಿಯಾಗಿದೆ.

ಕುವೆಂಪು ಹುಟ್ಟಿ ಬೆಳೆದ ಕುಪ್ಪಳಿಯನ್ನೊಳಗೊಳ್ಳುವ ಸಹ್ಯಾದ್ರಿಯ ಅರಣ್ಯ ವೈಭವ, ಇಂದು ಕೇವಲ ಅವರ ಸಾಹಿತ್ಯದೊಳಗೆ ಉಳಿದುಕೊಳ್ಳುವಂತಾಗಿರುವ, ಪರಿಸರ ನಾಶದ ತಲ್ಲಣಗಳ ನಡುವೆ ನಿಂತು ನೋಡಿದರೂ, ಕುವೆಂಪು ಅವರು ತಮ್ಮಬದುಕಿನುದ್ದಕ್ಕೂ ಈ ನಿಸರ್ಗವನ್ನು ಅತ್ಯಂತ ಉತ್ಕಟವಾಗಿ ಪ್ರೀತಿಸಿದ, ಆರಾಧಿಸಿದ, ಕೀರ್ತಿಸಿದ ಕ್ರಮ, ಅವರನ್ನು ಅವರ ಸಮಕಾಲೀನ ಪ್ರಮುಖ ಬರಹಗಾರರಿಂದ ಬೇರ್ಪಡಿಸುವ ಮುಖ್ಯ ಲಕ್ಷಣವಾಗಿದೆ. ಯಾಕೆಂದರೆ ಅವರಾರೂ ಕುವೆಂಪು ಅವರಂತೆ ಇಂತಹ ಮಲೆನಾಡಿನ ದುರ್ಗಮ ಅರಣ್ಯ ಶ್ರೇಣಿಯ ದಟ್ಟವಾದ ಅನುಭವಗಳಲ್ಲಿ ಬೇರೂರಿ ಬೆಳೆದವರಲ್ಲ; ಮತ್ತು ರಮ್ಯತೆಯಿಂದ ಮೊದಲುಗೊಂಡು ಭವ್ಯತೆಯವರೆಗಿನ ಅರಣ್ಯಾನುಭವಗಳನ್ನು ಕುವೆಂಪು ಅವರಂತೆ ಗ್ರಹಿಸಿ ಅಭಿವ್ಯಕ್ತಿಸಿದವರೂ ಅಲ್ಲ. ಇದರಿಂದ ಕುವೆಂಪು ಅವರ ಎಲ್ಲ ಕೃತಿಗಳ- ಕವಿತೆ, ಕತೆ, ನಾಟಕ, ಕಾದಂಬರಿ, ಮಹಾಕಾವ್ಯ- ಮೂಲದ್ರವ್ಯದಂತೆ ಈ ಅರಣ್ಯಾನುಭವ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ ಎಲ್ಲ ಪಾತ್ರಗಳೂ ಈ ಅರಣ್ಯ ಸಂಸ್ಕೃತಿಯ ಹಲವು ಹಂತಗಳನ್ನು ಪ್ರತಿನಿಧಿಸುತ್ತವೆ.  ಅವರ ವ್ಯಕ್ತಿತ್ವದ ಬೇರು-ಬುಡದಂತೆ ಅವರನ್ನು ವ್ಯಾಪಿಸಿದ ಈ ನಿಸರ್ಗ ಪ್ರೀತಿ, ಕೇವಲ ಸೌಂದರ‍್ಯನಿಷ್ಠವಾದುದಲ್ಲ; ಅದನ್ನೂ ಮೀರಿದ ಒಂದು ಆಧ್ಯಾತ್ಮಿಕ ಅನ್ವೇಷಣೆಯ ಹಾಗೂ ಸಾಕ್ಷಾತ್ಕಾರದ ಅನುಭವ ಕೂಡ. ನಿಸರ್ಗ ಕೇವಲ ನಮ್ಮ ಉಪಭೋಗದ ವಸ್ತುವಲ್ಲ; ನಮ್ಮ ವ್ಯಕ್ತಿತ್ವದ ಒಂದು ವಿಸ್ತರಣೆ ಅಥವಾ ನಾವು ಅದರ ಚೈತನ್ಯದ ಒಂದು ಅಂಶ-ಎಂಬ ನಿಲುವನ್ನು ಪ್ರತಿಪಾದಿಸುವ ಕುವೆಂಪು ಅವರ ಅದಮ್ಯವಾದ ನಿಸರ್ಗ ಪ್ರೀತಿ, ಪರಿಸರ ನಾಶದ ತಲ್ಲಣದ ಈ ದಿನಗಳಲ್ಲಿ  ಒಂದು ಬಹು ದೊಡ್ಡ ಮೌಲ್ಯ ಎಂಬುದನ್ನು ನಾವಿನ್ನೂ ತಿಳಿದುಕೊಳ್ಳಬೇಕಾಗಿದೆ.

ಕನ್ನಡ ನವೋದಯ ಸಾಹಿತ್ಯ ಸಂದರ್ಭದಲ್ಲಿ ಬಹುತೇಕ ಮೇಲುವರ್ಗದಿಂದ ಬಂದ ಬರಹಗಾರರ ನಡುವೆ ನಗರ ನಾಗರಿಕ ಪರಸರದಿಂದ ದೂರವಾದ ಮಲೆನಾಡಿನ ಕಾಡಿನ ನಡುವಣ, ಅಪ್ರತಿಷ್ಠಿತ ಜನ ಸಮುದಾಯದ, ಅದರಲ್ಲೂ ಶೂದ್ರ ವರ್ಗದಿಂದ ಬಂದ ಮೊದಲ ಮಹತ್ವದ ಲೇಖಕರಾಗಿದ್ದಾರೆ ಕುವೆಂಪು ಎನ್ನುವುದು ಅವರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಹಲವು ಒಳನೋಟಗಳನ್ನು ಒದಗಿಸುತ್ತದೆ. ಇಂಥ ಸಾಮಾಜಿಕ ಸ್ತರದಿಂದ ಬಂದ ಕುವೆಂಪು ಸಿದ್ಧ ಸಂಪ್ರದಾಯದ ಯಾವುದೇ ಉಪಾಧಿಗಳಿಗೂ ಬದ್ಧರಾಗದೆ, ಒಂದು ಮುಕ್ತವೂ ಸ್ವತಂತ್ರವೂ ಆದ ನಿಲುವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು. ಹುಟ್ಟಿನಿಂದ ಶೂದ್ರರೂ, ಹಿಂದಿನ ಅಥವಾ ಇಂದಿನ, ಅಂತರಂಗದ ಅಥವಾ ಬಹಿರಂಗದ ಸಾಂಪ್ರದಾಯಿಕ ನಿಯಂತ್ರಣಗಳಿಗೆ ಕಟ್ಟುಬೀಳದ ಒಂದು ‘ನಿರಂಕುಶಮತಿ’ಯ ನಿಲುವನ್ನು ರೂಢಿಸಿಕೊಂಡ ಕುವೆಂಪು, ಈ ದೇಶದ ಸಾಮಾಜಿಕ ವಾಸ್ತವಗಳನ್ನು ಉಳಿದೆಲ್ಲರಿಗಿಂತ ಹೆಚ್ಚು ನಿಖರವಾಗಿ ಗುರುತಿಸಲು ಸಾಧ್ಯವಾಯಿತು. ಇಂಗ್ಲಿಷ್ ಶಿಕ್ಷಣ, ಪ್ರಾಚ್ಯ ಪಾಶ್ಚಾತ್ಯ ತತ್ವಜ್ಞಾನಗಳ ತಲಸ್ಪರ್ಶಿಯಾದ ತಿಳಿವಳಿಕೆ, ಆಧುನಿಕ ವಿಜ್ಞಾನ ಮತ್ತು ಜಾಗತಿಕ ಸಮಾಜವಾದೀ ಚಿಂತನೆಗಳೊಂದಿಗೆ ನಡೆಯಿಸಿದ ಸಂವಾದ, ಶ್ರೀ ರಾಮಕೃಷ್ಣ- ವಿವೇಕಾನಂದ- ಗಾಂಧಿ- ಅರವಿಂದರು ಮತ್ತು ಲೋಹಿಯಾ, ಇಂಥ ವ್ಯಕ್ತಿತ್ವಗಳ ಚಿಂತನೆಯ ಪ್ರಭಾವ- ಇತ್ಯಾದಿಗಳಿಂದ ರೂಪುಗೊಂಡ ಕುವೆಂಪು ಅವರ ವೈಚಾರಿಕತೆಯು, ಮನುಷ್ಯನ ಚೈತನ್ಯದ ಚಲನಶೀಲತೆಯನ್ನು ಸ್ಥಗಿತಗೊಳಿಸುವ ಎಲ್ಲ ವಿಕೃತಿಗಳನ್ನೂ ವಿರೋಧಿಸುತ್ತ, ಮನುಷ್ಯರೆಲ್ಲರ ಸಮಾನತೆಯ ಪರವಾದ ಕಾಳಜಿಗಳನ್ನು ಎತ್ತಿ ಹಿಡಿಯುವ ಸ್ವರೂಪದ್ದಾಗಿದೆ. ಒಂದು ರೀತಿಯಲ್ಲಿ ಇದು ಕುವೆಂಪು ಸಾಹಿತ್ಯದ ಮುಖ್ಯ ಸತ್ವವಾದ ಅಧ್ಯಾತ್ಮದ ಲಕ್ಷಣವೂ ಹೌದು. ಕುವೆಂಪು ಅವರ ದೃಷ್ಟಿಯಲ್ಲಿ ಅಧ್ಯಾತ್ಮ ಎಂದರೆ, ಎಲ್ಲ ಜಾತಿ ಮತ ಪಂಥಗಳನ್ನೂ ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತ ಜೀವ ಜೀವರ ನಡುವೆ, ಆತ್ಮ ಆತ್ಮಗಳ, ಜಡ ಚೈತನ್ಯಗಳ ನಡುವೆ ಯಾವುದೆ ತರತಮಗಳನ್ನು ಕಲ್ಪಿಸದ ಒಂದು ಏಕತೆಯ ಅನುಭವ. ಕುವೆಂಪು ಪ್ರತಿಪಾದಿಸುವ ಈ ಏಕತೆ ಅಥವಾ ‘ಅದ್ವೆ ತ’, ಏಕಕಾಲಕ್ಕೆ ಆಧ್ಯಾತ್ಮಿಕವಾದದ್ದೂ ಹೌದು,  ಸಾಮಾಜಿಕವಾದದ್ದೂ ಹೌದು. ಇದನ್ನು ಹೊಸ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದ ಮಹಾತ್ಮಾಗಾಂಧಿಯವರ ‘ಸರ್ವೋದಯ’ವನ್ನು ಕುವೆಂಪು ಅವರು ಒಂದು ‘ಯುಗಮಂತ್ರ’ವೆಂದು ಸ್ವೀಕರಿಸುತ್ತಾರೆ. ಈ ಕಾರಣದಿಂದಲೆ ಕುವೆಂಪು ಸರ್ವೋದಯ ವಿರೋಧಿಯಾದ ವರ್ಣ ವ್ಯವಸ್ಥೆ, ಜಾತಿ ಪದ್ಧತಿ, ಮೂಢನಂಬಿಕೆ, ಸಾಂಸ್ಥಿಕ ಧರ್ಮದ ಸಂಕೇತವಾದ ದೇವಸ್ಥಾನ, ಧರ್ಮದ ಹೆಸರಿನಲ್ಲಿ ಸಾಮಾನ್ಯ ಜನರನ್ನು ಶೋಷಣೆಗೆ ಗುರಿಪಡಿಸುವ ಪುರೋಹಿತಶಾಹಿ -ಇತ್ಯಾದಿಗಳನ್ನು ತಮ್ಮಸಮಕಾಲೀನರಾದ ಇತರ ಪ್ರಮುಖ ಬರಹಗಾರರಿಗಿಂತ ಭಿನ್ನವಾಗಿ ಮತ್ತು ಉಗ್ರವಾಗಿ ಚಿಕಿತ್ಸೆಗೆ ಮತ್ತು ನಿರಾಕರಣೆಗೆ ಗುರಿಪಡಿಸುತ್ತಾರೆ. ಒಂದು ಕಾಲಕ್ಕೆ ಮನುಷ್ಯರ ಆಧ್ಯಾತ್ಮಿಕ ಆವಶ್ಯಕತೆಗಳಾಗಿದ್ದ ಹಾಗೂ ಸಮುದಾಯದ ಬದುಕನ್ನು ಹಿಡಿದು ಕೂಡಿಸುತ್ತಿದ್ದ ಧರ್ಮ ಮತ್ತು ದೇವಾಲಯದಂಥ ಸಂಸ್ಥೆಗಳು, ಇಂದಿನ ಕೋಮು-ರಾಜಕಾರಣದ ಸಮೂಹ ಸನ್ನಿಯಲ್ಲಿ, ಸ್ಫೋಟಕ ಸಾಮಗ್ರಿಗಳಂತೆ ಬಳಕೆಯಾಗುತ್ತಿರುವ ಹೊತ್ತಿನಲ್ಲಿ, ‘ಗುಡಿ ಚರ್ಚು ಮಸಜೀದಿಗಳ ಬಿಟ್ಟು ಬನ್ನಿ,’ ‘ನೂರು ದೇವರನ್ನೆಲ್ಲ ನೂಕಾಚೆ ದೂರ, ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ’, ‘ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಓ ಬನ್ನಿ ಸೋದರರೆ ಮನುಜ ಮತಕೆ’ -ಎಂದು ನಾಲ್ಕು ದಶಕಗಳಿಗೂ ಹಿಂದೆ ಕುವೆಂಪು ಕೊಟ್ಟ ಕರೆ ಇಂದು ಎಷ್ಟೊಂದು ಪ್ರಸ್ತುತವಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಶೂದ್ರಸಮುದಾಯಕ್ಕೆ ಸೇರಿದ ಕುವೆಂಪು, ಈ ವರ್ಗಕ್ಕೆ ಯಾವತ್ತಿನಿಂದಲೋ ನಿರಾಕೃತವಾದ ಹಿಂದೂ ಧಾರ್ಮಿಕ ಆಧ್ಯಾತ್ಮಿಕ ಪರಂಪರೆಯನ್ನು ಸ್ವಂತ ಅಧ್ಯಯನದ ಮೂಲಕ ಕರಗತ ಮಾಡಿಕೊಂಡು ಆ ಪರಂಪರೆ ಮತ್ತು ಸಂಸ್ಕೃತಿಯನ್ನು ತಮ್ಮ ಪ್ರತಿಭೆ ಮತ್ತು ವೈಚಾರಿಕತೆಗಳಿಂದ, ಈ ಕಾಲಮಾನದ ಅಗತ್ಯಕ್ಕೆ ತಕ್ಕ ಹಾಗೆ ತಮ್ಮ ಸೃಜನ ಹಾಗೂ ಸೃಜನೇತರ ಸಾಹಿತ್ಯ ಕೃತಿಗಳಲ್ಲಿ ಪುನರ್ ವ್ಯಾಖ್ಯಾನ ಮತ್ತು ಚಿಕಿತ್ಸೆಗೆ ಒಳಗುಪಡಿಸಿರುವುದನ್ನು ನೋಡಿದರೆ, ಈ ದೇಶದ ಚರಿತ್ರೆ ಹಾಗೂ ಪರಂಪರೆಯನ್ನು ಅತ್ಯಂತ ಆರೋಗ್ಯಪೂರ್ಣವಾದ ಚರ್ಚೆಗೆ ಗುರಿಪಡಿಸಿದ ಸಾಹಿತಿಗಳಲ್ಲಿ ಕುವೆಂಪು ಮುಖ್ಯರಾಗುತ್ತಾರೆ.

ಆದರೆ ಈ ಚರ್ಚೆಯ ಸಂದರ್ಭದಲ್ಲಿ ಕುವೆಂಪು ತಾಳುವ ನಿಲುವು ಬಹುತೇಕ ಸುಧಾರಣಾವಾದಿಯದಾಗಿದೆಯೇ ಹೊರತು ಅದು, ಬೇರೊಂದು ಪರ್ಯಾಯ ಸಂಸ್ಕೃತಿಯೊಂದನ್ನು ನೆಲೆಗೊಳಿಸುವಷ್ಟು ಶಕ್ತವಾಗಿಲ್ಲ ಎಂಬ ವಿಮರ್ಶನೋಕ್ತಿಗಳನ್ನು ಒಪ್ಪಿಕೊಂಡರೂ, ಕುವೆಂಪು ತಮ್ಮ ಸಮಕಾಲೀನತೆಯಲ್ಲಿ ಸಂಭವಿಸುತ್ತಿದ್ದ ಯುಗ ಪರಿವರ್ತನಕಾರಿಯಾದ ವಿದ್ಯಮಾನಗಳಿಗೆ ಸ್ಪಂದಿಸುತ್ತ, ಈ ನವಕ್ರಾಂತಿಗೆ ಈ ದೇಶದ ಯುವ ಮನಸ್ಸುಗಳನ್ನು ಸಜ್ಜುಗೊಳಿಸಿದ ಕ್ರಮವು ಗಮನಿಸತಕ್ಕದ್ದಾಗಿದೆ. ಹಾಗೆ ನೋಡಿದರೆ ಕುವೆಂಪು ಅವರ ಸಾಹಿತ್ಯವೆಲ್ಲವೂ, ಒಂದು ರೀತಿಯಲ್ಲಿ ಈ ದೇಶದ ಸ್ವಾತಂತ್ರ ಪೂರ್ವದ ಆಶೋತ್ತರಗಳ ಅಭಿವ್ಯಕ್ತಿಯೂ, ಸ್ವಾತಂತ್ರೊ ತ್ತರ  ಭಾರತದ ವಿಮರ್ಶೆಯೂ ಆಗಿದೆ. ಕುವೆಂಪು ನೇರವಾಗಿ ಸ್ವಾತಂತ್ರ  ಚಳವಳಿಯೊಳಗೆ ಧುಮುಕದಿದ್ದರೂ, ಆ ಕಾಲದಲ್ಲಿ ತಮ್ಮ ಅನೇಕ ಕವಿತೆಗಳ ಮೂಲಕ ಈ ಚಳವಳಿಗೆ ಕೊಟ್ಟ ಸ್ಫೂರ್ತಿ ಕಡಿಮೆಯದೇನಲ್ಲ. ನಿಜವಾದ ರಾಷ್ಟ್ರೀಯ ಪ್ರಜ್ಞೆಯ ಎಚ್ಚರಕ್ಕೆ ಅಗತ್ಯವಾದ ಪರಂಪರೆಯ ಹಿನ್ನೆಲೆಯನ್ನೂ, ಸಾಂಸ್ಕೃತಿಕ ಸ್ಮರಣೆಗಳನ್ನೂ ಮತ್ತು ತಕ್ಕ ವೈಚಾರಿಕತೆಯನ್ನೂ ತಮ್ಮ ಕವಿತೆಗಳ ಮೂಲಕ ಕಟ್ಟಿಕೊಟ್ಟವರು ಕುವೆಂಪು. ಭಾರತವು ಸ್ವತಂತ್ರವಾದಾಗ ಅವರು, ‘ಸ್ವಾತಂತ್ರೊ ದಯ ಮಹಾಪ್ರಗಾಥ’ದ ಮೂಲಕ ಅಭಿವ್ಯಕ್ತಿಸಿದ ಸಂಭ್ರಮವನ್ನೂ, ಭಾರತ ಗಣರಾಜ್ಯವಾದಾಗ ‘ಹಿಂದಾಯಿತು ಓರೋರ್ವರ ಗರ್ವದ ಕಾಲ, ಇದು ಸರ್ವರ ಕಾಲ’ ಎಂದು ಶ್ರೀಸಾಮಾನ್ಯನ ಪರವಾಗಿ ಸರ್ವೋದಯವನ್ನು  ಕೀರ್ತಿಸಿದ ಉತ್ಸಾಹವನ್ನೂ ನೆನೆಯಬಹುದು. ಸ್ವಾತಂತ್ರೊ ತ್ತರ ಭಾರತದ ಎಷ್ಟೋ ವಿದ್ಯಮಾನಗಳಿಗೆ ಕುವೆಂಪು ತಮ್ಮ ಕವಿತೆಗಳ ಮೂಲ ಮಾನದಲ್ಲಿ ಸ್ಪಂದಿಸಿರುವರಾದರೂ, ೧೯೭೪ರಂದು ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದ ಸಂದರ್ಭದಲ್ಲಿ ಅವರು ಮಾಡಿದ ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಭಾಷಣ ಸಮಕಾಲೀನ ಭಾರತದ ರಾಜಕಾರಣಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿದೆ; “ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಛೆ ನಿಮಗಿದ್ದರೆ, ಇಂದಿನ ರೀತಿಯ ಧನಾಶ್ರಿತ ಚುನಾವಣೆಯ ಪದ್ಧತಿಯನ್ನೇ ಬದಲಾಯಿಸಿ ಅದನ್ನು ಗುಣಾಶ್ರಿತವನ್ನಾಗಿ ಪರಿವರ್ತಿಸುವ ಕರ್ತವ್ಯ ನಿಮ್ಮ ಹೆಗಲ ಮೇಲಿದೆ…” “ಇನ್ನು ಮುಂದಾದರೂ ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ನಾಡಿನ ರಾಜಕೀಯ ಸಾಮಾಜಿಕ ಮತ್ತು ಮತ ಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು.”

ಕರ್ನಾಟಕವನ್ನು ‘ಭಾರತ ಜನನಿಯ ತನುಜಾತೆ’ ಎಂದು ವರ್ಣಿಸುವ ಕುವೆಂಪು, ಕನ್ನಡ ಪರವಾದ ಕಾಳಜಿಗಳನ್ನು ಪ್ರಕಟಿಸುವ ಕವಿತೆಗಳನ್ನು ಉಳಿದೆಲ್ಲರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಬರೆದಿದ್ದಾರೆ. ಅಖಂಡ ಕರ್ನಾಟಕದ ಕನಸನ್ನು ಕಾಣುತ್ತ, ‘ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು’ ಎಂಬ ನಿರ್ದೇಶನವನ್ನು ನೀಡಿದವರು ಕುವೆಂಪು. ಇಂಗ್ಲಿಷಿನ ಮುಖಾಂತರವೆ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ ಕುವೆಂಪು, ಈ ದೇಶದಲ್ಲಿ ಜಾತಿ ಪದ್ಧತಿ, ಇಂಗ್ಲಿಷ್ ಭಾಷೆ ಮತ್ತು ಆಸ್ತಿ ವ್ಯವಸ್ಥೆ- ಈ ಮೂರೂ ಹೇಗೆ ಭಾರತದೊಳಗಿನ ಅಸಮಾನತೆ ಹಾಗೂ ಶೋಷಣೆಗಳಿಗೆ ಕಾರಣವಾಗಿವೆ ಎಂಬುದನ್ನು ನಿಚ್ಚಳವಾಗಿ ಬಲ್ಲ ಕುವೆಂಪು, ಮೊದಲಿನಿಂದಲೂ ಕನ್ನಡ ಪರವಾದ ಹೋರಾಟಗಳಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಬೇಕು ಎನ್ನುವುದು ಅವರ ಬಹು ಮುಖ್ಯವಾದ ಆಶಯ. ಅವರ ಈ ಕನ್ನಡ ಪ್ರೇಮ, ಕೇವಲ ಕನ್ನಡದ ಮೇಲಿನ ಅಭಿಮಾನದಿಂದ ಹುಟ್ಟಿಕೊಂಡದ್ದಲ್ಲ; ಅದು ಶ್ರೀ ಸಾಮಾನ್ಯನ ಅಭ್ಯುದಯ ಪರವಾದ ಕಾಳಜಿಗಳಿಂದ ಹುಟ್ಟಿಕೊಂಡದ್ದು. ಯಾಕೆಂದರೆ ಇಂಗ್ಲಿಷ್ ಭಾಷೆ ಮತ್ತು ಆ ಮಾಧ್ಯಮದ ಶಿಕ್ಷಣದ ಹಿಡಿತಗಳು ನಮ್ಮ ಸಾಮಾಜಿಕ ಸಂದರ್ಭದಲ್ಲಿ ಉಂಟು ಮಾಡುವ ತರತಮಗಳು ಪ್ರಜಾಪ್ರಭುತ್ವ ವಿರೋಧಿಯಾದ ಅಸಮಾನತೆಯನ್ನು ಸುಭದ್ರವಾಗಿ ನೆಲೆಗೊಳಿಸುವ ತಂತ್ರಗಳೆ ಆಗುತ್ತವೆ ಎಂಬುದನ್ನು ಕುವೆಂಪು ಬಲ್ಲವರಾಗಿದ್ದರು. ಆದರೆ ಏನಾಗಬಾರದೆಂದು ಕುವೆಂಪು ಆಶಿಸಿದ್ದರೋ ಅದೇ ಆಗುವಂತೆ ತೋರುತ್ತಿದೆ. ಜಾಗತೀಕರಣದ ಹೆಸರಿನಲ್ಲಿ ಮತ್ತೆ ಇಂಗ್ಲಿಷ್ ಭಾಷೆ ಹೊಸ ಬಗೆಯ ಹುನ್ನಾರಗಳ ಮೂಲಕ ಹೇಗೆ ತನ್ನ ಜಾಲವನ್ನು ವಿಸ್ತರಿಸತೊಡಗಿದೆ ಎನ್ನುವುದು ಒಂದು ವಿಪರ‍್ಯಾಸವಾಗಿದೆ!

ಕುವೆಂಪು ತಮ್ಮ ಬದುಕಿನ ಸಂದೇಶವೆಂದು ‘ವಿಶ್ವಮಾನವ’ನ ಪರಿಕಲ್ಪನೆಯೊಂದನ್ನು ಮಂಡಿಸಿದವರು. ‘ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.’ ಇದನ್ನು ಕಾರ‍್ಯಗತಗೊಳಿಸಲು ಅಗತ್ಯವಾದ ಸಪ್ತಸೂತ್ರಗಳನ್ನು ಮಂಡಿಸುತ್ತಾ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕವಿ ಪಂಪನ ಸೂತ್ರವನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು ಎನ್ನುತ್ತಾರೆ ಕುವೆಂಪು. ಬಹು ದೊಡ್ಡ ಕನಸು; ಬಹು ದೊಡ್ಡ ಆದರ್ಶ. ಆದರೆ ಮನುಷ್ಯ ಮನುಷ್ಯನಾಗಿ ಬದುಕುವುದೇ ಸಾಧ್ಯವಾಗದಂತಹ ವಿದ್ಯಮಾನಗಳು ಸಂಭವಿಸುತ್ತಿರುವ ಈ ಹೊತ್ತಿನಲ್ಲಿ, ಅನೇಕ ವಿಚ್ಛಿದ್ರಕಾರಕ ಶಕ್ತಿಗಳಿಂದ ಮನುಷ್ಯತ್ವವೇ ಚೂರು ಚೂರಾಗುತ್ತಿರುವ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವ ಕಲ್ಪನೆ ಒಂದು ದೂರದ, ಎತ್ತರದ ಬೆಳಕು ಮಾತ್ರ!

ಯಾವುದೂ ಸಣ್ಣದಲ್ಲ : ೨೦೦೪