ಪಿಲತೀರ್ಥ

ದೂರ 
ತಾಲೂಕಿನಿಂದ : ೩೦ ಕಿ.ಮೀ.
ಜಿಲ್ಲೆಯಿಂದ : ೫೦ ಕಿ.ಮೀ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದಿಂದ 8 ಕಿ.ಮೀ. ಕ್ರಮಿಸಿದರೆ ಕಬ್ಬರಗಿ ಎಂಬುದು ಪುಟ್ಟ ಹಳ್ಳಿ. ಅಲ್ಲಿಂದ 2 1/2 ಕಿ.ಮೀ. ದೂರದಲ್ಲಿ  ಸಾಗಿದರೆ ಕಪಿಲತೀರ್ಥ ಜಲಪಾತ. ಇದಕ್ಕೆ ಕಪಿಲಪ್ಪ ಜಲಪಾತ ಎಂದು ಕರೆಯುವ ದುಂಟು. ಕಪಿಲಮುನೇಶ್ವರನು ಇಲ್ಲಿ ತಪಸ್ಸು ಮಾಡಿ ಗಂಗೆಯನ್ನು ಅವತರಿಸಿ ಈ ಪ್ರದೇಶವನ್ನು ತಪೋಭೂಮಿಯನ್ನಾಗಿಸಿದನೆಂದು ಪ್ರತೀತಿ ಇದೆ. ಕಬ್ಬರಗಿಗೆ ಹೊಂದಿಕೊಂಡುವ ಬೆಣಚುಕಲ್ಲಿನ ಕಡಿದಾದ ಗುಡ್ಡಗಾಡು ನೈಸರ್ಗಿಕ ಸುಂದರ ತಾಣವಿದ್ದು  ಈ ಪ್ರದೇಶ ಮಲೆನಾಡ ಸೊಬಗನ್ನು ನೆನಪಿಸುತ್ತದೆ. ಜಲಪಾತದ ಮೇಲೆಯೂ ಕಿರು ಜಲಪಾತಗಳನ್ನು ಸೃಷ್ಟಿಸಿಕೊಂಡು ಬರುವ ನೀರು ಮೂರು ಹಂತವಾಗಿ ಮೂವತ್ತು ಅಡಿ ಎತ್ತರದಿಂದ ಹತ್ತು ಅಡಿ ಅಗಲವಾಗಿ ಧುಮುಕುತ್ತದೆ.

ಕಪಿಲೇಶ್ವರ ಸ್ವಾಮಿ ಮತ್ತು ಚಂದಾಲಿಂಗೇಶ್ವರ  ಅಣ್ಣ ತಮ್ಮಂದಿರಿದ್ದು, ಚಂದಾಲಿಂಗೇಶ್ವರನ ವಾಸ ಬೆಟ್ಟದ ಮೇಲಾದರೆ ತಮ್ಮನದು ಕೆಳಬೆಟ್ಟದಲ್ಲಿ ವಾಸ. ತನ್ನ ತಪೋಬಲದಿಂದ ಕಪಿಲೇಶ್ವರ ಗಂಗೆಯನ್ನು ಧರೆಗೆ ಇಳಿಸಿದನು. ಕಾರಣಾಂತರಗಳಿಂದ ಕಪಿಲೇಶ್ವರ ಸ್ವಾಮಿಗೆ ರುಂಡವಿಲ್ಲ ಎಂಬುದು ಇಲ್ಲಿಯ ಜನರ ಅಭಿಮತವಾಗಿದೆ.

ಕಪಿಲೆಪ್ಪ ಜಲಪಾತದಿಂದ ಮೇಲೇಳುವ ಮಂಜಿನ ರಾಶಿಯಿಂದ ಮಲೆನಾಡಿನ ಸೌಂದರ್ಯ ಕಾಣುತ್ತದೆ. ಹಾಸುಬಂಡೆ ಇರುವದರಿಂದ ಇಲ್ಲಿ ಬಿದ್ದನೀರು ಹನಿಯಾಗಿ ಮೇಲಕ್ಕೆ ಚಿಮ್ಮುತ್ತದೆ.  ಈ ಜಲಪಾತ ಜುಲೈದಿಂದ ಅಕ್ಟೋಬರ ತಿಂಗಳವರೆಗೆ ಮಳೆಬಂದಾಗ ಸುತ್ತಲಿನ ಜನ ಶ್ರಾವಣ ಮಾಸದಲ್ಲಿ ಈ ಜಲಧಾರೆಗೆ ಪೂಜಿಸುತ್ತಾರೆ.  ಇಲ್ಲಿನ ಜನರಿಗೆ ಈ ಜಲ ತಮ್ಮ ಜಮೀನಿನಲ್ಲಿ ಸಿಂಪಡಿಸಿದರೆ ಹೆಚ್ಚಿನ ಬೆಳೆ ಬರುತ್ತದೆಂಬ ನಂಬಿಕೆ ಇದೆ.

 

ಭಿನವ ತಿರುಪತಿ ಹನುಮಸಾಗರ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ

ದೂರ 
ತಾಲೂಕಿನಿಂದ : ೨೨ ಕಿ.ಮೀ.
ಜಿಲ್ಲೆಯಿಂದ : ೭೨ ಕಿ.ಮೀ

ಹನುಮಸಾಗರದ ಬೆಟ್ಟದ ಮೇಲಿರುವ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನಲೆಯುಳ್ಳ ವಿಶಿಷ್ಟ ದೇವಾಲಯಗಳಲ್ಲಿ ಒಂದಾಗಿದೆ. ತಿರುಮಲ ತಿರುಪತಿಯಲ್ಲಿರುವಂತೆಯೇ ಇಲ್ಲಿಯೂ ಗೋವಿಂದರಾಜ ಪಟ್ಟಣ ಶ್ರೀ ಲಕ್ಷ್ಮೀದೇವಿ, ಪದ್ಮಾವತಿ ದೇವಸ್ಥಾನಗಳು, ಸ್ವಾಮಿ ಪುಷ್ಕರಣಿ, ಕಪಿಲತೀರ್ಥ, ಗಾಳಿಗೋಪುರ, ವರಹಾಸ್ವಾಮಿ ದೇವಸ್ಥಾನಗಳು ಇರುವದರಿಂದ ಇದಕ್ಕೆ ಅಭಿನವ ತಿರುಪತಿಯ ಎಂಬ ಅಭಿದಾನವಿದೆ.

ಸುಮಾರು 400 ವರ್ಷಗಳ ಹಿಂದೆ ಹನುಮಸಾಗರವು ಬಿಜಾಪುರ ಆದಿಲ್ ಷಾಹಿ  ಅಧೀನದಲ್ಲಿತ್ತು. ಅಲ್ಲಿಯ ಮಾಂಡಲಿಕ ರಾಜ ಆದಿಷಾಯಿಗೆ ಸರಿಯಾಗಿ ಕಪ್ಪುಕಾಣಿಕೆ, ಗೌರವ ಕೊಡದೇ ಇದ್ದುದರಿಂದ ವೈಮನಸ್ಸು ಉಂಟಾಗಿ ಮಾಂಡಲೀಕ ರಾಜನನ್ನು ನಿವೃತ್ತಿಗೊಳಿಸಿ ದೀವಾನ ಅಧಿಕಾರಿಯಾಗಿದ್ದ ತಿಮ್ಮಪ್ಪಯ್ಯ ದೇಸಾಯಿ ಅವರನ್ನು 35 ಗ್ರಾಮಗಳ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಅಧಿಕಾರ ಸಿಗದ ಮಾಂಡಲೀಕ ರಾಜ ಸತ್ತ ಮೇಲೆ ಪಿಶಾಚಿಯಾಗಿ ದೇಸಾಯಿಯವನ್ನು ಕಾಡ ತೊಡಗಿದ. ದೇಸಾಯಿಯವರು ತಿರುಪತಿ ತಿಮ್ಮಪ್ಪನ ಮೊರೆಹೋದರು. ಪ್ರತಿ ವರ್ಷ ಪಾದಯಾತ್ರೆ ಮೂಲಕ ತಿರುಪತಿಗೆ ಹೋಗಿ ಶ್ರೀನಿವಾಸ ದರ್ಶನ ಹಾಗೂ ಸೇವೆಯಿಂದ ಪಿಶಾಚಿ ಬಾಧೆಯನ್ನು ಕಳೆದುಕೊಂಡರು. ಮುಂದೆ ವೃದಾಪ್ಯದಿಂದ ಪ್ರತಿವರ್ಷ ತಿರುಪತಿಗೆ ಹೋಗಲು ಆಗದ ಕಾರಣ ಅವರು ಮಾನಸಿಕವಾಗಿ ನೊಂದು ಚಿಂತಾಕ್ರಾಂತರಾಗಿ ವಿಚಾರಮಗ್ನರಾಗಿ ನಿದ್ರೆಯಲ್ಲಿರುವಾಗ ಸ್ವಪ್ನದಲ್ಲಿ ಶ್ರೀ ವೆಂಕಟೇಶನು ಪ್ರತ್ಯಕ್ಷನಾಗಿ ಬೆಟ್ಟದ  ಮೇಲೊಂದು ಆಕಳು ಮಲಗಿರುತ್ತದೆ, ಆ ಹಾಸ ಬಂಡೆಯ ಮೇಲೆ ನನ್ನ ಎರಡೂ ಪುಟ್ಟಪಾದಗಳು ಮೂಡಿರುತ್ತವೆ ಅವುಗಳನ್ನು ನಾನೆಂದು ಭಾವಿಸಿ ಪೂಜಿಸಿ ಎಂದು ಹೇಳಿದರು. ಅದರಂತೆ ಬೆಳಿಗ್ಗೆ ಎದ್ದು ಬೆಟ್ಟಕ್ಕೆ ತೆರಳಿ ನೋಡಿದಾಗ ಹಾಸು ಬಂಡೆಯ ಮೇಲೆ ಆಕಳೊಂದು ಮಲಗಿರುತ್ತದೆ. ಅಲ್ಲಿ ಎರಡು ಪಾದಗಳು ಮೂಡಿರುವುದು ಕಂಡುಬರುತ್ತದೆ. ನಂತರ ಪಾದುಕೆ ಪೂಜೆ ಆರಂಭಿಸಿದ ದೇಸಾಯಿಯವರು ಅಷ್ಟಕ್ಕೆ ತೃಪ್ತರಾಗದೆ ಸ್ವಾಮಿ ದರ್ಶನವಾಗಲಿಲ್ಲವೆಂದು ಚಿಂತಾಮಗ್ನರಾದಾಗ ಮತ್ತೇ ಶ್ರೀನಿವಾಸನು ಸ್ವಪ್ನದಲ್ಲಿ ಕಾಣಿಸಿಕೊಂಡು ಕುಷ್ಟಗಿ ಭಾವಿಯೊಂದರಲ್ಲಿ  ಬೋರಲಾಗಿ ಬಿದ್ದಿರುವ ಉದ್ಭವ ಮೂರ್ತಿ ತೆಗೆದುಕೊಂಡು ಅದನ್ನು ಹನುಮಸಾಗರದವರೆಗೆ ಸಕಲ ವಾದ್ಯ ವೈಭವಗಳೊಂದಿಗೆ ತರುವ ಮೂಲಕ ಬೆಟ್ಟದ ಮೇಲೆ ಪಾದುಕೆಗಳ ಮುಂದೆ ಪ್ರತಿಷ್ಠಾಪನೆ ಮಾಡಲಾಯಿತು ಎಂಬ ಪ್ರತೀತಿ  ಇದೆ.

 

ಭೂ-ಕೈಲಾಸ ಕೋಟಿ ಲಿಂಗಗಳ ಅದ್ಭುತ ತಾಣ – ಪುರ

ದೂರ 
ತಾಲೂಕಿನಿಂದ : ೩೦ ಕಿ.ಮೀ.
ಜಿಲ್ಲೆಯಿಂದ : ೮೦ ಕಿ.ಮೀ

ಕಲಚೂರಿಗಳ ಆಳ್ವಿಕೆಯಲ್ಲಿ ಈ ದೇವಾಲಯ ನಿರ್ಮಾಣ ಗೊಂಡಿದ್ದು ಭಾಗಶ: ನಾಶವಾಗಿದೆ ಸೋಮೇಶ್ವರ ದೇವಾಲಯವಾದ ಇದು ಕೋಟಿಲಿಂಗಗಳ ಪುರವೆಂದು ಪ್ರಸಿದ್ದಿಯನ್ನು ಪಡೆದಿದೆ ಎಂದರೆ ಹುಬ್ಬೇರಿಸುವರುಂಟು. ಈ ಗುಡಿ ಪ್ರವೇಶಿಸಿದ ನಂತರ ಸತ್ಯವಾಗುವದು ೧೫ ನೇಯ ಶತಮಾನದಲ್ಲಿ ವೀರ ಪ್ರತಾಪದೇವ ರಾಯನಿಗೆ ಧರ್ಮವಾಗಬೇಕೆಂದು ಆತನ ರಾಣಿವಾಸದ ವ್ಯಕ್ತಿಯೋರ್ವನು ಸೋಮೇಶ್ವರ ದೇವರಿಗೆ ದತ್ತಿ ಬಿಡುವನು ಅಲ್ಲಿಯ ಮತ್ತೊಂದು ಶಾಸನವು (ಕ್ರಿ,ಶ ೧೫೪೭)ಇದೇ ರೀತಿ ಸಾಮಂತನು ವೀರ ಪ್ರತಾಪದೇವರಾಯನಿಗೆ ಆಯುಷ್ಯವೃದ್ದಿಗಾಗಿ ಸೋಮೇಶ್ವರ ದೇವರಿಗೆ ದತ್ತಿ ಬಿಡುವನು ಎಂದು ಉಲ್ಲೇಖವಿದೆ ಓಹಿಲನೆಂಬ ಶಿಲ್ಪಿಯು ಕೋಟಿಲಿಂಗಗಳನ್ನು ಮಾಡಿ ಪ್ರತಿಷ್ಟಾನ ಮಾಡಿದನೆಂದು ಹೇಳಿದೆ.

ನಂತರ ಈ ದೇವಾಲಯಕ್ಕೆ ಸುತ್ತಲೂ ಸೇರ್ಪಡೆಗೊಂಡವೆಂದು ಹೇಳಲಾಗಿದೆ. ಇಲ್ಲಿನ ಕೇಶವ, ನಾಲ್ಕು ಮುಖದ ನಂದಿ. ಮಹಿಷಾಸುರ, ಉಗ್ರನರಸಿಂಹ ಶಿವ, ಚಂದ್ರ, ಸೂರ್ಯ, ಪಾರ್ವತಿ, ಲಕ್ಷೀ, ಕೃಷ್ಣ ಷಣ್ಮೂಖ ಉಮಾ ಮಹೇಶ್ವರ, ಗಣೇಶ, ಇತರ ಚಿಕ್ಕ ಚಿಕ್ಕ ಸುಂದರ ಶಿಲ್ಪಗಳಿವೆ ಬೇಡರ ಕಣ್ಣಪ್ಪನಕಲ್ಲು ಸಂತನ ಕಲ್ಲು ಶ್ರವಣಕುಮಾರ ನಾಗಪುರುಷ, ಗೋಪಾಲಕರು. ಯಕ್ಷರ ಶಿಲ್ಪಗಳು. ಇಲ್ಲಿವೆ ಸಣ್ಣ ಮಂಟಪದಲ್ಲಿ ಸುತ್ತಲೂ ಅನೇಕ ಸಾಲು ಲಿಂಗಗಳಿವೆ ಇವು ನೋಡುಗರಿಗೆ ಆಶ್ಚರ್ಯವನ್ನುಂಟುಮಾಡುತ್ತವೆ ಕೆಲವು ಏಕಲಿಂಗವಾದರೆ ಕೆಲವು ಹತ್ತಾರು ನೂರಾರು ಲಿಂಗಗಳ ಒಳಗೊಂಡ ಏಕಪೀಠವಾಗಿವೆ. ಮುಸ್ಲಿಂ ಆಡಳಿತಕ್ಕೆ ಒಳಗಾದ ಮೇಲೆ ಇಸ್ಲಾಂ ಶೈಲಿಯಲ್ಲಿ ಮಹಾದ್ವಾರ ಮತ್ತು ಗೋಡೆಯ ಮೇಲ್ಬಾಗದಲ್ಲಿ ಚಿಕ್ಕ ಗೋರಿಯಾಕಾರದ ಭಾಗಗಳನ್ನು ಕೆತ್ತಲಾಗಿದೆ.

ಇಲ್ಲಿರುವ ಸರ್ಪಸಾಲುಗಳು ಮೂರುಕಾಲಿನ ಸರ್ಪ ಶಿಲಾಮಂಚ, ಚತುರ್ಮಖ ನಂದಿವಿಗ್ರಹ, ಶಿವಲಿಂಗಗಳನ್ನು ಹೊತ್ತ ಆನೆ, ಶಿಲಾವೃಂದಾವನ, ಕೈಲಾಸನಾಥ ರಥಗಳು ಶಿಲ್ಪಕಲಾ ಕುಸುರಿಗೆ ಸಾಕ್ಷಿಯಾಗಿವೆ ಮತ್ತು ಇಲ್ಲಿನ ಪುರಾಣ ದಂತಕಥೆಗಳ ಉಬ್ಬು ಶಿಲ್ಪಗಳು ದೃಶ್ಯಪುರಾಣ ಕಾಲಕ್ಕೆ ಕರೆದೊಯ್ಯುತ್ತವೆ.

ಸೋಮನಾಥ ದೇವಾಲಯದ ಹಿಂದೆ ಬನಶಂಕರಿ ದೇವಾಲಯವಿದೆ. ಹೊರಭಾಗದಲ್ಲಿ ಈಶ್ವರ ದೇವಾಲಯವಿದೆ. ಆದರ ಪಕ್ಕದಲ್ಲಿ ಕೈಕೊಳದ ಕಂಭವಿದೆ.

ಇಲ್ಲಿಂದ ಕೆಲವು ಗಜಗಳ ಅಂತರದಲ್ಲಿ ಮರದ ಕೆಳಗೆ ಒಂದು ಲಿಂಗವಿದೆ. ಇದಕ್ಕೆ ಮುನಿಸು ಲಿಂಗವೆಂದು ದೇವಾಲಯದ ಗರ್ಭಗುಡಿಯ ಮುಂದೆ ಕಲ್ಲಿನ ಹರಿವಾಣವಿದೆ. ಎಲ್ಲಾ ಲಿಂಗಗಳ ಸ್ನಾನ ಪೂಜೆಯ ಅನಂತರ ನೈವೇದ್ಯ ಮಾಡುವಾಗ ಈ ಹರಿವಾಣದಲ್ಲಿ ಹಾಕಿ ಒಂದು ಸುತ್ತು ತಿರುಗಿದರೆ ಅಲ್ಲಿರುವ ಎಲ್ಲಾ ಲಿಂಗಗಳಿಗೆ ಏಕಕಾಲಕ್ಕೆ ನೈವೇದ್ಯ ಅರ್ಪಿಸಿದಂತೆ. ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪೆ ನೋಡಬೇಕು ಎಂಬ ಇಲ್ಲಿಯ ಜನವಾಣಿಗೆ ಕಣ್ಣು-ಕಾಲು  ಎರಡು ಇದ್ದವರು ಪುರ ನೋಡಬೇಕು ಎಂಬ ವಾಣಿ ಇದೆ.

 

ಚಂದಾಲಿಂಗೇಶ್ವರ – ಹನುಮಸಾಗರ

ದೂರ 
ತಾಲೂಕಿನಿಂದ : ೩೦ ಕಿ.ಮೀ.
ಜಿಲ್ಲೆಯಿಂದ : ೮೦ ಕಿ.ಮೀ

ತಿರುಳ್ಗನ್ನಡ ನಾಡಿನ ಅಭಿನವ ತಿರುಪತಿ ಎಂದು ಹೆಸರುವಾಸಿ ಯಾಗಿರುವ ಹನುಮಸಾಗರದ ಚಂದಾಲಿಂಗೇಶ್ವರ ಬೆಟ್ಟದ ಮೇಲಿನ ನೈಜ ಸೌಂದರ್ಯವು ಪ್ರವಾಸಿ ತಾಣವನ್ನಾಗಿ ಸೃಷ್ಟಿಸಿದೆ.

ಬಸವೇಶ್ವರರ ಸಮಕಾಲೀನರೆಂದು ಊಹಿಸಲಾಗಿರುವ ಚಂದಾಲಿಂಗ (ಶರಣ)ರು ತಮ್ಮ ಧರ್ಮಪತ್ನಿಯೊಂದಿಗೆ ಇಲ್ಲಿ ನೆಲೆಸಿದ್ದು , ಬಿಜಾಪೂರ ಸುಲ್ತಾನನ ಕಾಲದಲ್ಲಿ ‘ಚಂದ್ರಗಿರಿ’ ಮಹಾಮಂಡಲವಾಗಿತ್ತೆಂದು ಆವರಣದಲ್ಲಿನ ಶಿಲಾಶಾಸನದ ಪ್ರಕಾರ ಕ್ರಿ.ಶ. 1267ರ ಪ್ರಾರ್ಥಿವ ಸಂವತ್ಸರದ ಹುಣ್ಣಿಮೆ ದಿನದಂದು ಬಂಡಾರಿ ಹೆಗ್ಗಡಿ ಮಾರಮಯ್ಯರು ಇದನ್ನು ಗೆದ್ದುಕೊಟ್ಟ ಇತಿಹಾಸವಿದೆ. ಕಲ್ಯಾಣಿ ಚಾಲುಕ್ಯರ  ಆರನೇ ವಿಕ್ರಮಾದಿತ್ಯನು ಈ ಭಾಗದಲ್ಲಿ ಮೂರು ತಿಂಗಳ ಅವಧಿಯ ವಿಹಾರಕ್ಕೆಂದು ಈ ದೇಗುಲ ಸಮುಚ್ಚಯದಲ್ಲಿ ಬರುತ್ತಿದ್ದನೆಂದು ಅದಕ್ಕಾಗಿ ಕೋಟೆಯನ್ನು ನಿರ್ಮಿಸಿರಬೇಕೆಂದು ಊಹಿಸಲಾಗಿದೆ. 56 ಕಂಬಗಳು ಕೆತ್ತನೆ ಒಳಗೊಂಡಿರುವ ಇದು ಅರುವಿನ ಮಂಟಪವಾಗಿದ್ದು – ದೇಗುಲ ಸುತ್ತಲೂ 100 ದೇವರ ಮೂರ್ತಿಗಳು ಇವೆ.

ಬಸವಣ್ಣ, ವಿಶ್ವೇಶ್ವರಲಿಂಗ, ಶ್ರೀಶೈಲ ಮಲ್ಲಿಕಾರ್ಜುನ, ಉಜ್ಜಯನಿ ಶಿದ್ದೇಶ್ವರ, ಶ್ಯಾಮನಾಥಲಿಂಗ, ವಿರುಪಾಕ್ಷ ಲಿಂಗಗಳಿದ್ದು, ಇಲ್ಲಿನ ‘ಬಿಸಿಲು ಬೀಳದ ಭಾವಿ’ಯ ನೀರು ಸಿಹಿಯಾಗಿದ್ದು ‘ಹಾಲುಭಾವಿ’ ಎಂದು ಕರೆಯಲಾಗುತ್ತದೆ. ವೀರಗಲ್ಲುಗಳು ಎರಡು ಶಿಲಾಶಾಸನಗಳು ಇವೆ. ಆಲದ ಬೃಹತ್ ಮರವಿದೆ. ಇದೊಂದು ಪ್ರವಾಸಿ ತಾಣವಾಗಲು ಅರ್ಹತೆ ಹೊಂದಿದೆ.

ಕೋಟೆಯ ಆಗ್ನೇಯ ಭಾಗದಲ್ಲಿ ಒಂದು ವಿಚಿತ್ರ ಮರವಿದೆ. ಇದಕ್ಕೆ ಯಾವ ಮರವೆಂದು ಕರೆಯಬೇಕು ಎನ್ನುವುದೇ ತಿಳಿಯುವುದಿಲ್ಲ. ಈ ಕೋಟೆಯ ಉತ್ತರ ಭಾಗದಲ್ಲಿ ಎರಡು ದೇಗುಲಗಳಿವೆ. ವೀರಭದ್ರ ಹಾಗೂ ಯಲ್ಲಾಲಿಂಗ ದೇಗುಲಗಳು. ಯಲ್ಲಾಲಿಂಗ ದೇಗುಲಗಳ ಪಕ್ಕದಲ್ಲಿ ಒಂದು ಸಣ್ಣ ಕೊಳ ಇದೆ. ಇದಕ್ಕೆ ಹೂವಿನ ಕೊಳ ಎನ್ನುತ್ತಾರೆ. ತನ್ನ ಇತಿಹಾಸ ಸಾರದೇ ಕಲ್ಲಲ್ಲಿ ಕಲ್ಲಾಗಿ ಚಲ್ಲಾಪಿಲ್ಲಿಯಾಗಿ ಹರಡಿರುವ ಈ ಕೋಟೆಯ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಇಲ್ಲಿನ ಇತಿಹಾಸವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ.

 

ದೋಟಿಹಾಳ ಶ್ರೀ ಅವಧೂತ ಶುಕಮುನಿ ತಾತನವರ ಮಠ :

ದೋಟಿಹಾಳದ ದಕ್ಷಿಣ ಭಾಗದಲ್ಲಿ ದೊಡ್ಡ ಪ್ರಮಾಣದ ಡಬ್ಬಗಳ್ಳಿ ಬೆಳೆದಿತ್ತು. ಅಲ್ಲೊಂದು ಪುರಾತನ ಬಯಲು ಬಸವೇಶ್ವರ ದೇಗುಲವಿದೆ. ಅದರ ಮುಂದೆ ಇದ್ದ ಕಲ್ಲು ಗುಂಡಿನ ಮುಂದೆ ಯೋಗನಿದ್ರೆಯಲ್ಲಿದ್ದ ತಾತನವರು ಕಂಡದ್ದು ಒಂದು ಆಶ್ಚರ್ಯದ ಘಟನೆಯಾಗಿದೆ. ಆಗ ಊರಿನ ರಾಜೇಗೌಡ ಪೋಲೀಸ ಗೌಡನಾಗಿದ್ದನು. ಊರಲ್ಲಿ ಕಳವಾಗಿದ್ದರಿಂದ ಕಳ್ಳನ ಪತ್ತೇಗಾಗಿ ಹುಟುಕಾಟ ನಡೆದಿತ್ತು. ಇಂತಹ ಸಂದರ್ಭದಲ್ಲಿ ಒಂದು ಕುರಿಮರಿ ಮೇಯುತ್ತಿತ್ತು. ಶುಕಮುನಿ ಇರುವ ಜಾಗೆಯ ಹತ್ತಿರ ಹೋಯಿತು. ಡಬ್ಬಗಳ್ಳಿ ಬಯಲು ಮಾಡುತ್ತಾ ಜನ ಹೋದರು. ಅಲ್ಲಿ ತಾತನವರು ಡಬ್ಬಗಳ್ಳಿ ಮಧ್ಯದಲ್ಲಿ ಯೋಗ ಸ್ಥಿತಿಯಲ್ಲಿ ಕಂಡರು. ಅವರು ಸ್ಥಿತಿಯನ್ನು ಅರಿಯದ ಜನರು ರಾಜೇಗೌಡನಿಗೆ ಸುದ್ದಿ ಮುಟ್ಟಿಸಿದರು. ಅವನು ತಾತವನರನ್ನೇ ಕಳ್ಳನೆಂದು ಭ್ರಮಿಸಿ ಊರ ಚಾವಡಿಯಲ್ಲಿ ಕಟ್ಟಿ ಬಡಿಸಿದರು. ಆದರೆ ಏಟು ತಿಂದರೂ ಬಾಹ್ಯವಾಗಿ ದುಃಖಿಸಲಿಲ್ಲ. ನೋವಿನ ಒಂದಂಶ ಕೂಡಾ ತೋರಲಿಲ್ಲ !  ಇದರಿಂದ ಜನರಿಗೆ ಆಶ್ಚರ್ಯವಾಯಿತು. ಇದನ್ನು ಅರಿತ ಶ್ರೀ ಸಿದ್ಧಲಿಂಗ ಯತಿಗಳು  ‘ಇವರು ಸಾಮಾನ್ಯ ವ್ಯಕ್ತಿಗಳಲ್ಲ. ಪರಾಶರ ಋಷಿಗಳ ಮಗ ಒಬ್ಬ ಶುಕಮುನಿ ಇದ್ದ, ಅವನು ದಿಗಂಬರನಾಗಿದ್ದು ದೇಹದ ಅಬಿಮಾನ ತೊರೆದು ಬಾಹ್ಯ, ಪ್ರಜ್ಞೆ ಕಳೆದು ಸದಾ ಆತ್ಮನಲ್ಲಿ ಸಂತೋಷವಾಗಿರುತ್ತಿದ್ದನು. ಜನಕ ಮಹಾರಾಜನ ಉಪದೇಶ ಪಡೆಯಲು ಹೋಗಿ ಅನೇಕ ಪರೀಕ್ಷೆಗೆ ಒಳಗಾದನು. ಆತನು ತನ್ನತನ ಬಿಟ್ಟುಕೊಡಲಿಲ್ಲ. ಅಂತಹ ಲೀಲಾಪುರುಷ ತಾತನವರು. ಆದುದರಿಂದ ಅವರ ಪುನರಾವತಾರವೇ ಶ್ರೀ ಅವಧೂತ ಶುಕಮುನಿ ತಾತನವರು’ ಎಂದೂ, ‘‘ಶುಕಮುನಿ’’ ಎಂದು ನಾಮಕರಣ ಮಾಡಿದ ನಂತರವೇ ಇವರ ಹೆಸರು ಜನರಿಗೆ ಜನಜನಿತವಾಯಿತು. ಇವರ ಪವಾಡಗಳಿಂದಾಗಿ ಈ ಭಾಗದ ಜನರಲ್ಲಿ ಅತ್ಯಂತ ದೈವೀ ಸಂಕೇತವಾಗಿ ನಿಂತಿದ್ದಾರೆ. ದಿನಾಂಕ : 20-11-1938ನೇ ಇಸ್ವಿಯಲ್ಲಿ ಭಾದ್ರಪದ ಶುಕ್ರವಾರ ಬೆಳಗ್ಗೆ 8 ಘಂಟೆಗೆ ರುದ್ರಮುನಿ ಸ್ವಾಮಿಗಳ ಮಠದ ಹತ್ತಿರ ಇಹಲೋಕ ತ್ಯಜಿಸಿದರೂ ಇಂದಿಗೂ  ಜನರ ಮನಸ್ಸಿನಲ್ಲಿ ಅಮರರಾಗಿದ್ದಾರೆ. ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆಯಂದು ದೋಟಿಹಾಳದಲ್ಲಿ ದೊಡ್ಡ ರಥೋತ್ಸವವು ಜರುಗುತ್ತದೆ. ಈ ಭಾಗದ ಜನರಿಗೆ ಇದೊಂದು ಧಾರ್ಮಿಕ ಪುಣ್ಯಕ್ಷೇತ್ರವಾಗಿದೆ.

ಕುಷ್ಟಗಿ ತಾಲೂಕಿನ ಇತರೆ ಪ್ರವಾಸಿ ತಾಣಗಳು

ಕುಷ್ಟಗಿ ಅಡವಿರಾಯನ ದೇವಸ್ಥಾನ, ಹನುಮಸಾಗರ ಪವನ ವಿದ್ಯುತ್ ಕೇಂದ್ರ, ಮಾಟೂರಿನ ಈಶ್ವರ ದೇವಾಲಯ, ಮೇಗೂರಿನ ಈಶ್ವರ ದೇವಾಲಯ, ಮೇಣದಾಳ ವಿಷ್ಣು ದೇವಾಲಯ, ಮುದೇನೂರು ಪಾರ್ಶ್ವನಾಥ ದೇವಾಲಯ, ಶಕ್ತಿ ದೇವತೆ ಮೂರ್ತಿ, ಗೋತಗಿಯ ರಾಮಲಿಂಗೇಶ್ವರ ದೇವಾಲಯ, ಹನಮಸಾಗರದ ಅಂಬಾಭವಾನಿ, ಪುರದ ಕೆರೆ, ಅಂಟರಠಾಣಾದ ಜಂಬುನಾಥೇಶ್ವರ.

ತಾವರಗೇರಾದಿಂದ 4 ಕಿ.ಮೀ. ಅಂತರದಲ್ಲಿರುವ ಗಾಣಗಿತ್ತಿ ಗುಡ್ಡದ ಗುಹಾ ಚಿತ್ರಗಳು, ಮತ್ತು ಹಿರೇಮನ್ನಾಪುರದ ಬಳಿ ಇರುವ ಗುಡದೂರ ದೊಡ್ಡ ಬಸವೇಶ್ವರ ದೇವಸ್ಥಾನ ಮತ್ತು ಮುಂತಾದವುಗಳು.