ಕುಷ್ಠರೋಗದಲ್ಲಿ ಸ್ವರ್ಶ, ನೋವು, ತಂಪು, ಬಿಸಿಗಳ ಸಂವೇದನೆಗಳು ಇರುವುದಿಲ್ಲ ಎಂದು ಲೇಖನದಲ್ಲಿ ಹೇಳಿದೆಯಲ್ಲವೆ. ಇದರ ಒಂದು ಅಪಾಯವನ್ನು ಹೀಗೆ ಉದಾಹರಿಸಬಹುದು.

ಕುಷ್ಠರೋಗದಿಂದ ಬಳಲುತ್ತಿರುವವರಲ್ಲಿ, ಸರಿಯಾದ ಎಚ್ಚರಿಕೆ ವಹಿಸದಿದ್ದಾಗ ಕಾಲು ಹಾಗೂ ಕೈಗಳಲ್ಲಿ ದೊಡ್ಡದಾಗಿರುವ ಹುಣ್ಣುಗಳು ಎದ್ದುಕಾಣುತ್ತವೆ. ಇದು ರೋಗ ಹರಡುವಿಕೆಯಿಂದ ಆದುದಲ್ಲ. ಮೇಲೆ ಹೇಳಿದ ಸಂವೇದನೆಗಳನ್ನು ಕಳೆದುಕೊಂಡು ಸರಿಯಾದ ಜಾಗ್ರತೆ ವಹಿಸದುದರ ಪರಿಣಾಮಗಳು.

ಕುಷ್ಠರೋಗವಿಲ್ಲದ ಸಾಮಾನ್ಯ ವ್ಯಕ್ತಿಯೊಬ್ಬ ಬಹಳದೂರ ನಡೆದು ಹೋಗುತ್ತಿದ್ದಾಗ ಕಾಲಿನಲ್ಲಿ ಹೊಪ್ಪಳೆಗಳು ಬರುತ್ತವೆ ಎಂದುಕೊಳ್ಳಿ. ಅವನು ಕೂಡಲೇ ನಡೆಯುವುದನ್ನು ನಿಲ್ಲಿಸುತ್ತಾನೆ.  ಇದರಿಂದ ಅವನ ಪಾದಕ್ಕೆ ಇನ್ನು ಹೆಚ್ಚು ಧಕ್ಕೆ ಯಾಗುವುದು ತಪ್ಪುತ್ತದೆ. ಆದರೆ ಕುಷ್ಠರೋಗಿಗೆ ನೋವಿನ ಸಂವೇದನೆಯಿಲ್ಲದೆ, ಅವನು ಅತಿಯಾಗಿ ನಡೆದು ಪಾದದಲ್ಲಿ ವ್ರಣ ಉಂಟಾಗಬಹುದು. ಕೂಡಲೇ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ, ಅದಕ್ಕೆ ಸೋಂಕು ತಗುಲುತ್ತದೆ. ಸೋಂಕು ಕಡೆಗೆ ಮೂಳೆಗಳಿಗೆ ಹರಡಿ ಅವುಗಳನ್ನು ನಾಶಗೊಳಿಸುತ್ತದೆ.  ಆದ್ದರಿಂದ ಇಂತಹ ಅಪಾಯಗಳು ಆಗದಂತೆ ರೋಗಿ ಎಚ್ಚರವಹಿಸಿಕೊಳ್ಳಬೇಕು.