ಕುಷ್ಠರೋಗವು ಒಂದು ಪ್ರಾಚೀನ ಕಾಯಿಲೆಯಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಸುಶ್ರುತನಿಂದ ಚೆನ್ನಾಗಿಯೇ ವಿವರಿಸಲ್ಪಟ್ಟಿದೆ. 1874ರಲ್ಲಿ ಅರ್ಮಾರ್ ಹ್ಯಾನ್‌ಸನ್ ಎಂಬ ನಾರ್ವೆ ದೇಶದ ವೈದ್ಯ ಈ ರೋಗಕ್ಕೆ ಕಾರಣವಾದ ಕುಷ್ಠರೋಗಾಣುವನ್ನು ಕಂಡು ಹಿಡಿದನು. ಆದುದರಿಂದ ಈ ಕಾಯಿಲೆಗೆ ‘ಹ್ಯಾನ್‌ಸನ್ಸ್ ಡಿಸೀಸ್’ಎಂದೂ ಕರೆಯುತ್ತಾರೆ. ಈ ಬ್ಯಾಕ್ಟೀರಿಯಾ ಮತ್ತು ಕ್ಷಯರೋಗದ ಬ್ಯಾಕ್ಟೀರಿಯಾ ಒಂದು ಜಾತಿಗೆ ಸೇರಿವೆ. ಗಾಜಿನ ಸ್ಲೈಡ್ ಮೇಲೆ ಲೇಪನ ಮಾಡಿ ಬಣ್ಣ ಹಾಕಿದಾಗ ಇದು ಮೆಜಂಟಾ ಬಣ್ಣವನ್ನು ಪಡೆದುಕೊಳ್ಳುತ್ತದೆ. ಆದುದರಿಂದ ಇದನ್ನು ಆಸಿಡ್ ಫಾಸ್ಟ್ ಬಾಸಿಲೈ (acid fast bacilli)ಎನ್ನುತ್ತಾರೆ. ಈ ಬ್ಯಾಕ್ಟೀರಿಯಾ ಗೊಂಚಲುಗಳಂತೆ ಇರುತ್ತದೆ. ಬಹಳ ಕಾಲದವರೆಗೆ ನಿಷ್ಕ್ರಿಯವಾಗಿಯೂ ಇರಬಲ್ಲದು. 1960, 1970ರ ದಶಕಗಳಲ್ಲಿ ಪ್ರಾಣಿಗಳ ಮೇಲೆ ಬ್ಯಾಕ್ಟೀರಿಯಾವನ್ನು ಇಂಜೆಕ್ಟ್ ಮಾಡಿದಾಗ ಆ ಪ್ರಾಣಿಗಳಲ್ಲಿ ರೋಗ ಕಾಣಿಸಿಕೊಂಡಿತು. ಆದರೆ ಈ ಬ್ಯಾಕ್ಟೀರಿಯಾವನ್ನು ಹೊರಗಡೆ ಬೆಳೆಸಲಾಗಿಲ್ಲ. ಆದುದರಿಂದಲೇ ಕುಷ್ಠರೋಗಕ್ಕೆ ಇನ್ನೂ ವ್ಯಾಕ್ಸಿನ್ ಕಂಡುಹಿಡಿಯಲಾಗಿಲ್ಲ. 1980ರಲ್ಲಿ ಕುಷ್ಠರೋಗಕ್ಕೆ ಬಹುಔಷಧಿ ಚಿಕಿತ್ಸೆಯನ್ನು ಪ್ರಾರಂಭಮಾಡಲಾಯಿತು. ಇದರಿಂದ ಒಂದು ಕೋಟಿ ಜನರು ಕುಷ್ಠರೋಗದಿಂದ ಮುಕ್ತಿಪಡೆದರು.

ಕುಷ್ಠರೋಗ ಒಂದು ದೀರ್ಘಾವಧಿಯ ಸಾಂಕ್ರಾಮಿಕ ರೋಗ. ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಸೋಂಕು ತಗುಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಬೇಕಾದರೆ 2 – 3ವರ್ಷಗಳಾಗುತ್ತವೆ. ಕುಷ್ಠರೋಗಕ್ಕೆ ವಯಸ್ಸು, ಸಾಮಾಜಿಕ ಅಂತಸ್ತು ಪರಿಗಣನೆ ಇಲ್ಲದಿದ್ದರೂ ಶುಚಿತ್ವ ಇಲ್ಲದೇ ಇರುವ ಕಡೆ ಇದು ಜಾಸ್ತಿ. ಈ ರೋಗ ಗಂಡಸರಲ್ಲಿ ಹೆಚ್ಚು. ಏಕೆಂದರೆ ಅವರು ಹೊರಗಡೆ ಇರುವುದು ಜಾಸ್ತಿ.

ಕುಷ್ಠರೋಗದ ಲಕ್ಷಣಗಳು

ಕುಷ್ಠರೋಗವು ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಚರ್ಮದ ಮೇಲೆ ಮೂಡುವ ತಿಳಿಬಿಳಿ ಇಲ್ಲವೇ ತಾಮ್ರವರ್ಣದ ಕಲೆಗಳು ಕುಷ್ಠರೋಗದ ಆರಂಭಿಕ ಲಕ್ಷಣಗಳು. ಮಚ್ಚೆಯು ಶರೀರದ ಮೇಲೆ ಯಾವ ಭಾಗದಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದಾದರೂ ಬೆನ್ನಿನ ಮೇಲೆ, ಕಾಲಿನಲ್ಲಿ ಹೆಚ್ಚು. ಈ ಮಚ್ಚೆಗಳಲ್ಲಿ ಸ್ವರ್ಶ, ನೋವು ಮತ್ತು ಬಿಸಿ, ತಣ್ಣನೆಯ ಸಂವೇದನೆಗಳಿರುವುದಿಲ್ಲ. ಚರ್ಮದ ಮೇಲೆ ಮೂಡುವ ತಿಳಿಬಿಳಿ ಇಲ್ಲವೇ ತಾಮ್ರವರ್ಣ ಚರ್ಮವು ದಪ್ಪವಾಗುತ್ತದೆ. ಕಿವಿಯ ಹಾಲೆ ದಪ್ಪವಾಗುತ್ತದೆ.  ಮೂಗಿನ ಕಂಬ ಸ್ವಲ್ಪ ಚಪ್ಪಟೆಯಾಗುವುದಕ್ಕೆ ಪ್ರಾರಂಭವಾಗುತ್ತದೆ. ಕಣ್ಣಿನ ಹುಬ್ಬಿನ ಹೊರತುದಿಯ 1/3ಭಾಗದಲ್ಲಿ ಕೂದಲು ಉದುರಿಹೋಗುತ್ತದೆ. 3 – 4ವರ್ಷ ಹಿಂದೆ ಕಾಯಿಲೆ ಇದ್ದರೂ ಅಂಗವಿಕಲತೆ ಕಾಣಬರುವುದಿಲ್ಲ. ಕಾಯಿಲೆ ಜಾಸ್ತಿಯಾದಂತೆ ಮುಖ ಮತ್ತು ಕೈ ಕಾಲುಗಳ ನರಗಳು ದಪ್ಪವಾಗಬಹುದು. ನಂತರ ಮಾಂಸ ಖಂಡಗಳು ನಶಿಸಿ ಕೈಕಾಲುಗಳ ಕೆಲಸದಲ್ಲಿ ತೊಡಕು ಉಂಟಾಗಬಹುದು. ಕಣ್ಣಿನ ನರಕ್ಕೆ ತೊಂದರೆಯಾಗಿ ಕಣ್ಣು ಮುಚ್ಚಲು ಕಷ್ಟವಾಗಬಹುದು. ರೋಗ ಇನ್ನೂ ಮುಂದುವರಿದರೆ ಕೈ ಬೆರಳುಗಳು ಮರಗಟ್ಟಿ ನಂತರ ಬಗ್ಗಿಕೊಳ್ಳುತ್ತವೆ. ಹೆಬ್ಬೆರಳು ಹಿಂದಕ್ಕೆ ಬಂದು ಲೇಖನಿ ಹಿಡಿಯಲಾಗುವುದಿಲ್ಲ. ಪಾದವು ಕೆಳಮುಖವಾಗಬಹುದು. ಈ ಸ್ಥಿತಿ ಅಂಗವಿಕಲತೆಯ ಆರಂಭಿಕ ಸ್ಥಿತಿ. ಈ ಹಂತ ತೋರಲು ಕೂಡ ಆರಂಭಿಕ ಹಂತದಿಂದ 2 – 3ವರ್ಷಗಳಾಗುತ್ತವೆ.

ಕುಷ್ಠರೋಗವನ್ನು ವೈದ್ಯಕೀಯ ರೋಗ ಲಕ್ಷಣಗಳಿಂದ ಮಾತ್ರ ಗುರುತಿಸಿ ನಿರ್ಣಯಿಸಬಹುದು.

ಬಹುಔಷಧ ಚಿಕಿತ್ಸೆ
MDT Multidrug Therapy

ಕುಷ್ಠರೋಗವನ್ನು ಚಿಕಿತ್ಸೆಗನುಗುಣವಾಗಿ ಎರಡು ವಿಧವಾಗಿ ವಿಂಗಡಿಸಲಾಗಿದೆ.

  • ಪಾನ್ಸಿಬಾಸಿಲರಿ:  1 – 6 ಮಚ್ಚೆಗಳು (Pancibacillary) ಚಿಕಿತ್ಸೆ 6ತಿಂಗಳು ಮಾತ್ರ
  • ಮಲ್ಟಿಬಾಸಿಲರಿ: 6ಮಚ್ಚೆಗಳಿಗಿಂತ ಹೆಚ್ಚು (Multibacillary) ಚಿಕಿತ್ಸೆ 12ತಿಂಗಳು ಮಾತ್ರ

ಬಹುಔಷಧಿಗಳೆಂದರೆ :
1. ರಿಫಾಂಪಿಸಿನ್

2. ಕ್ಲೋಫೀಜಮಿನ್

3. ಡಾಪ್ರೋ

ಮೇಲಿನ ಔಷಧಿಗಳು ಕುಷ್ಠರೋಗವನ್ನು ಗುಣಪಡಿಸುತ್ತವೆ.

ಆರೋಗ್ಯ ಕಾರ್ಯಕರ್ತರು ಕುಷ್ಠರೋಗ ಪತ್ತೆ ಹಚ್ಚಿ. ಚಿಕಿತ್ಸೆ ಪ್ರಾರಂಭಮಾಡುತ್ತಾರೆ.  ಚಿಕಿತ್ಸೆ ಉಚಿತ. ಚಿಕಿತ್ಸೆಯನ್ನು ತಪ್ಪದೆ ತೆಗೆದುಕೊಂಡರೆ ಸೇಕಡ 100ರಷ್ಟು ರೋಗ ವಾಸಿಯಾಗುತ್ತದೆ.

ಕುಷ್ಠರೋಗಿಗೆ ಸ್ಪರ್ಶ, ನೋವಿನ ಜ್ಞಾನವಿಲ್ಲದೆ ಇರುವುದರಿಂದ ಕೈ ಕಾಲುಗಳಲ್ಲಿ ಸುಟ್ಟುಕೊಳ್ಳುವ, ಗಾಯಗೊಳ್ಳುವ ಅವಕಾಶಗಳು ಹೆಚ್ಚು. ಆದುದರಿಂದ ಪಾದಗಳು ಮತ್ತು ಕೈಗಳ ಆರೈಕೆ ಬಹಳ ಮುಖ್ಯ.

ಕುಷ್ಠರೋಗವನ್ನು ಪ್ರಾರಂಭದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಮಾಡಿದರೆ, ರೋಗವನ್ನು ಸೇಕಡ 100ರಷ್ಟು ಗುಣಪಡಿಸಬಹುದು. ಅಂಗವಿಕಲತೆಯನ್ನು ತಪ್ಪಿಸಬಹುದು.

ಕುಷ್ಠರೋಗ ಈಗ ಬಹಳ ಮಟ್ಟಿಗೆ ಕಮ್ಮಿಯಾಗುತ್ತಿದೆ. ಆರೋಗ್ಯ ಇಲಾಖೆಯ ತೀವ್ರತರವಾದ ಚಿಕಿತ್ಸಾ ರಣನೀತಿಯೇ ಇದಕ್ಕೆ ಕಾರಣ.

ಕುಷ್ಠರೋಗ ಒಂದು ಶಾಪವಲ್ಲ, ಹಿಂದಿನ ಜನ್ಮದ ಕರ್ಮಫಲವೂ ಅಲ್ಲ. ಅದೊಂದು ದೀರ್ಘಕಾಲದ ಸಾಂಕ್ರಾಮಿಕ ರೋಗ ಅಷ್ಟೇ. ಪ್ರಾರಂಭದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದಲ್ಲಿ ರೋಗ ಗುಣವಾಗುತ್ತದೆ. ಮತ್ತು ಅಂಗವಿಕಲತೆ ತಪ್ಪುತ್ತದೆ.

ಪ್ರತಿವರ್ಷ ಜನವರಿ ತಿಂಗಳು 1 – 30 ರ ವರೆಗೆ ಕುಷ್ಠರೋಗ ನಿವಾರಣಾ ಮಾಸಾಚರಣೆಯನ್ನು ಆಚರಿಸಲಾಗುತ್ತದೆ. ಕುಷ್ಠರೋಗದ ಬಗ್ಗೆ ಜನರಿಗೆ ತಿಳಿವಳಿಕೆ ಕೊಡಲಾಗುತ್ತದೆ.