ಮಾಳೂಗಿ ಒಳಗೆ ಪಟ್ಟೆ ಮಂಚದ ಮೆನೆ
ಕಟ್ಟು ಕವಳಗೆಯ ಬೆಳಿ ಎಲೆ
ಕಟ್ಟು ಕವಳಗೆಯ ಬೆಳಿ ಎಲೆ ಮೆಲುವಂಗೆ
ದಳವಳ ಕಯ್ತಪ್ಪಿ ಉದೂರೀತೆ
ದಳವಳ ಕಯ್ತಪ್ಪಿ ಉದುರ‍್ವದ್ನು ದರ್ಮರ ಮಡದಿ

“ಯಾವ್ ನಾರಿ ಅಂದವೇ ಯಾವ್ ನಾರಿ ಚಂದವೆ
ಯಾವ ನಾರಿ ಮೆನೆ ಕಡುಮೋಹಾ”
“ಅಂದೇಕೆ ರೋಪತಿ ಚಂದಕೆ ಕುಕಸುಮಾಲಿ
ಕುಸ್ಮಾಲಿ ಮೆನೆ ಕುಡಮೋಹಾ”

“ತೋಟಾದಲ್ಲಿರುವಾ ತಾಟಗಿತ್ತಿ ಕುಸುಮಾಲಿ
ಜೋಗಿ ಜಂಗಮರಾ ಒಲುಮೆಯೆ”
ಅಟ್ಟಂಬಾ ಮಾತಾ ಕೇಳಾನೆ ಅರ್ಜೀಣಾ
ಕೂತಾಮಂಚವಾ ಜಡೋದೆದ್ದಿ
ಕೂತಾ ಮಂಚವಾ ಜಡ್ದೆದ್ದಿ ಅರ್ಜೂಣಾ
ಮಾಳೂಗಿ ಒಳಗೆ ನೆಡದಾನೆ

ಮಾಳೂಗಿ ಒಳಗೆ ನೆಡ್ದಾನೆ ಅರ್ಜೂಣಾ
ಅಟ್ಟಕೆ ಏಣಿ ಇಡೂವಾನೆ
ಅಟ್ಟಕ್ಕೆ ಏಣೀ ಇಡ್ವಾನೆ ಅರ್ಜೂಣಾ
ಅಟ್ಟದ ಪೆಟ್ಟುಗಿಯ ತೆಗುವಾನೆ
ಅಟ್ಟದ ಪೆಟ್ಟುಗಿಯ ತೆಗ್ವಾನೆ ಅರ್ಜೂಣಾ
ಮೆಟ್ಟಿ ಬೀಗವ ಕರೀದಾನೆ

ಮೆಟ್ಟೀ ಬೀಗವ ಕರಿದಾನೆ ಅರ್ಜೂಣಾ
ಮುಚ್ಚೀಲಾ ತಗದಿ ಕಡಿಗಿಟ್ಟಿ
ಮುಚ್ಚೀಲಾ ತಗದಿಕೆಡಗಿಟ್ಟಿ ಅರ್ಜೂಣಾ
ಕಂತೇ ಜೋತರವಾ ನೆರದುಟ್ಟಿ
ಕಂತೇ ಜೋತರವಾ ನೆರದುಟ್ಟಿ ಅರ್ಜೂಣಾ

ಕಂತೆ ನೆರಿಯಂಗಿ ಬುಜಕಿಟ್ಟಿ
ಕಂತೆ ನೆರಿಯಂಗಿ ಬುಜಕಿಟ್ಟಿ ಅರ್ಜೂಣಾ
ಕಂತೆ ಮುಂಡೇಸಾ ತಲೆಸುತ್ತಿ
ಕಂತೆ ಮುಂಡೇಸಾ ತಲೆಸುತ್ತಿ ಅರ್ಜೂಣಾ

ಸಣ್ಣ ಗಂಬಳಿಯಾ ಹೊಗಲೀಗೆ
ಸಣ್ಣ ಗಂಬಳಿಯಾ ಹೊಗಲೀಗಾಯಿ ಕಂಡಿ
ತನ್ನಾ ಕಯ್ಚಂಚೀ ತಡದಾನೆ
ತನ್ನಾ ಕಯ್ಚಂಚೀ ತಡ್ದಾನೆ ಅರ್ಜೂಣಾ

ಈಬತ್ತಿ ಉಂಡೀ ತಡದಾನೆ
ಈಬತ್ತಿ ಉಂಡೀ ತಡ್ದಾನೆ ಅರ್ಜೂಣಾ
ರಾಗದ ಚೆನ್ನುಡಿಯಾ ತಡದಾನೆ
ರಾಗದ ಚೆನ್ನುಡಿಯಾ ತಡ್ದಾನೆ ಅರ್ಜೂಣಾ

ಪೆಟ್ಟುಗಿ ಬಾಯಲ್ಲೇ ಮಡೂಗಾನೆ
ಪೆಟ್ಟುಗಿ ಬಾಯಲ್ಲೇ ಮಡುಗಾನೆ ಅರ್ಜೂಣಾ
ಮಾಳಗ್ಗಿಂದೆರಗೇ ಬರೋವಾನೆ
ಮಾಳಗ್ಗಿಂದೆರಗೇ ಬರ‍್ವಾನೆ ಅರ್ಜೂಣಾ

ರಾಜಂಗ್ಳ ಮೆಟ್ಟಾ ಇಳೀದಾನೆ
ರಾಜಂಗ್ಳ ಮೆಟ್ಟಾ ಇಳ್ದಾನೆ ಅರ್ಜೂಣಾ
ಅಲ್ಲೊಂದು ಕೊಣತಾ ಕುಣದಾನೆ
ಕೊಣಿಯುತೆ ಕೊಣಿಯುತ ಮೊಣಕಾಲ ಚೆಜ್ಜರಿಯೂತ

ರಾಗದ ಚೆನ್ನುಡಿಯ ದೆನಿಮಾಡಿ
ಅರ್ಜೂಣ ನಂಬೆಸ್ರು ಇದರ್ಕಿಂದಿತ್ತಾಗಿರಲಿ
ಜೋಗಿ ಅಂಬೆಸ್ರು  ನೆಡಿಯಾಲಿ
ಜೋಗಿ ಅಂಬೆಸ್ರು ನೆಡಿಯಾಲಿ ಅಂದೇಳಿ

ತಾಯ್ ಕುಂತಿ ಅರಮನೆಗೇ ನೆಡದಾನೆ
ತಾಯ್ ಕುಂತೀ ಅರಮನೆಗೆ ನೆಡ್ದಾನೆ ಆ ಜೋಗಿ
ಹೋಗಿ ಬಾಗಲ್ಲೇ ನಿಲೋವಾನೆ
ಹೋಗಿ ಬಾಗಲ್ಲೇ ನಿಲ್ವಾನೆ ಆ ಜೋಗಿ

ಅಲ್ಲೊಂದು ಕೊಣತಾ ಕೊಣದಾನೆ
ಅಲ್ಲೊಂದು ಕೊಣತಾ ಕೊಣ್ದಾನೆ ಆ ಜೋಗಿ
ರಾಗದ ಚೆನ್ನುಡಿಯಾ ದೆನಿಮಾಡಿ
ರಾಗದ ಚೆನ್ನುಡಿಯಾ ದೆನಿ ಮಾಡ್ವದ್ನು ಒಳಗಿದ್ದ

ತಾಯ್ ಕುಂತೀ ಹೆರುಗೆ ಬರುವಾಳು
“ಕೋಣ್ತನ ಕಂಡರೆ ಹುಟ್ಟಿದ ಮಗ್ನ ಹೋಲುಮೆ
ಎತ್ತನ ರಾಜ್ಯವಾ ತಿರ್ಗಬಂದೆ ?”

“ಎತ್ತನ ಕೋಡಲ್ವಾ ಒಡಹುಟ್ಟಿದ ಮಗತಾ ಸಯ್ ಅಲ್ವ
ಸುತ್ತನ ರಾಜ್ಯವಾ ತಿರ್ಗಬಂದೆ
ಸುತ್ತನ ರಾಜ್ಯವಾಗಿರ್ಗ ಬಂದೇ ತಾಯೆ ಕೇಳೇ
ಒಡಹುಟ್ದ ಮಗನೆಂದು ನೆನಸ್ವಾಳೆ ”

ಅಟ್ಟಂಬಾ ಮಾತಾ ಕೇಳಾನೆ ಆ ಜೋಗಿ
ರಾಜಂಗ್ಳ ಮಟ್ಟಾ ಇಳೂದಾನೆ
ರಾಜಂಗ್ಳ ಮೆಟ್ಟಾ ಇಳ್ದಾನೆ ಆ ಜೋಗಿ
ಆಣ್ ದರ್ಮರರ ಮನಗೇ ನಡೆದಾನೆ
ಅರ್ಣ ದರ್ಮರರ ಮನೆಗೆ ನೆಡ್ಡಾನೆ ಆ ಜೋಗಿ

ಹೋಗಿ ಬಾಗಲ್ಲೇ ನಿಲೋವಾನೆ
ಕೊಣಿಯುತ ಕೊಣಿಯುತ ಮೊಣಕಾಲ್ ಜೆಜ್ಜಿರಿಯುತ
ರಾಗದ ಚೆನ್ನುಡಿಯ ದೆನಿಮಾಡಿ
ರಾಗದ ಚೆನ್ನುಡಿಯಾ ದೆನಿಮಡ್ವಾದ್ನು ಒಳಗಿದ್ದಾ
ಅರ್ಣ ದರ್ಮಾರೆರಗೇ ಬರೂವಾರು

“ಕೋಣ್ತವ ಕಂಡರೆ ಒಡೆಹುಟ್ಟಿದ ತಮ್ಮ ನೋಲುಮೆ
ಎತ್ತರ (ನ) ರಾಜ್ಯವಾ ತಿರ್ಗಬಂದೇ”
“ಹೋರಿ ಕೋಡಲ್ವ ಒಡಹುಟ್ದ ತಮ್ ತಾ ಸಯ್ ಲ್ವ
ಸುತ್ತನ ರಾಜ್ಯವಾ ತಿರಗ್ ಬಂದೆ
ಸುತ್ತನ ರಾಜ್ಯವಾ ತಿರಗ್ ಬಂದೆ ಅಣ್ಣಾ ಕೇಳೋ
ಒಡಹುಟ್ದ ತಮ್ಮಂದೇ ನೆನಸ್ವಾನೋ”

ಅಟ್ಟಂಬಾ ಮಾತಾ ಕೇಳಾನೇ ಆ ಜೋಗಿ
ರಾಜಂಗ್ಳ ಮೆಟ್ಟಾ ಇಳದಾನೆ
ರಾಜಂಗ್ಳ ಮೆಟ್ಟಾ ಇಳದಾನೆ ಆ ಜೋಗಿ
ರಾಜಾ ಮಾರ್ಗದಲೇ ನೆಡದಾನೆ

ರಾಜಾ ಮಾರ್ಗದಲ್ಲೆ ನೆಡುವದ್ನು ಕುಸುಮಾಲಿ ”
ಹೊಂಗನಕ್ಕಲಗೇ ನೆಡದದೆ
ಹೊಂಗ್ನಕಲ್ಗೇ ನೆಡ್ದಾಳೆ ಕುಸುಮಾಲಿ

ಹೊಂಗ್ಲಕ್ಕಲ ಬೇಲೀ ತೆಗೆದಾಳೆ
ಹೊಂಗ್ಲಕ್ಕಲ ಬೇಲಿ ತೆಗೆದಾಳೆ ಕುಸುಮಾಲಿ
ಮೊಟ್ಟೆ ಮಲ್ಲೂಗಿ ಕೊಯೀದಾಳೆ
ಮೊಟ್ಟೆ ಮಲ್ಲುಗಿಯಾ ಚೊಟ್ಟೇಣ್ಣಿಸಿ ಕೊವ್ವೆಣ್ಣು
ಮೊಟ್ಟೆ ಮಲ್ಲುಗಿಯಾ ಚೋಟ್ಟೆಣ್ಣಿಸಿ ಕೊವೆಣ್ಣು

ಬಪ್ಪ ಬಯರ್ ರಂಗ್ನಾ ಬರೂನೋಡಿ ಕುಸ್ಮಾಲಿ
ಕೆಟ್ಟೆನಂದ್ ಬಾಯಿ ಬಿಡೂವಾಳು
ಕೆಟ್ಟೆನೆಂದ್ ಬಾಯಿ ಬಿಡ್ವಾಳು ಕುಸ್ಮಾಲಿ

ಹೊಂಗ್ನಕ್ಕೆ ತಿರುಗೇ ಬರೋವಾಳು
ಚೊಬ್ಬೆ ತುಂಬ್ದೂಂಗಾ ಬೀಸೀ ಬೀದಿಗಿಟ್ಟಿ
ಬಾಗ್ಲೋರರ ಮನಗೇ ನೆಡೂದಾಳೆ
ಬಾಗ್ಲೋರರ ಮನೆಗೆ ನೆಡುದಾಳೆ ಕುಸ್ಮಾಲಿ

“ಬಾಗಾಲೋರಂದಿ ದೆನಿ ಮಾಡಿ
ಬಾಗಾಲೋರಂದಿ ದೆನಿ ಮಾಡ್ ಕರ‍್ವದ್ನು ಬಾಗ್ಲೋರು
ಓಯ್ಗುಂಡಿ ಒಡನೆ ಬರುವಾರು
ಓಯ್ಗುಂಡಿ ಒಡನೆ ಬರುವಾರು ಬಾಗಿಲೋರು

ನಿಂದಾರೆ ಕುಸುಮಾಲಿಯಾ ಒಡ್ನಲ್ಲಿ
ನಿಂದಾರೆ ಕುಸುಮಾಲಿಯಾ ಒಡ್ನಲ್ಲಿ ಬಾಗಿಲೋರು
“ಏನು ಕಾರಣ್ಲಿ ಕರದೀಯೇ
ಏನು ಕಾರಣ್ಲಿ ಕರದಿಯೆ ಅಕ್ಕಾ ಕೇಳು
ಕರ್ದಾ ಕಾರಣ್ವಾ ತಿಳ್ದೇಳಿ”

“ಎಂದೂ ಇಲ್ಲದ ಜೋಗಿ ಇಂದೊಂದ್ ಜೋಗೀಬರ್ತಾ
ಜೋಗೀಯಾ ಲೂಟಿ ಹೆರುದಕ್ಕು
ಜೋಗಿಯಾ ಲೂಟಿ ಹರ‍್ದಕ್ಕು ಬಾಗೀಲೋರೆ
ತಡ್ದಾ ಬಾಗಿಲವಾ ಬಿಡಬಾರಾ”

ಅಟ್ಟಂಬಾ ಮಾತಾ ಹೇಳಾದೇ ಕುಸುಮಾಲಿ
ಮುಂದೀನಾ ಬಾಗಲ್ಗೆ ನೆಡದಾಳೆ
ಮುಂದೀನಾ ಬಾಗಲ್ಗೆ ನೆಡ್ದಾಳೆ ಕುಸುಮಾಲಿ
ಬಾಗೀಲೋರಂದೀ ದೆನಿಮಾಡಿ

ಬಾಗೀಲೊರಂದೀ ದೆನಿ ಮಾಡಿ ಕರ‍್ವದ್ನು
ಓಯ್ಗುಂಡೇ ಒಡುನೇ ಬರುವಾರು
ಒಯ್ಗುಂಡೇ ಒಡುನೇ ಬರುವಾರು ಬಾಗಿಲೋರು
ನಿಂದಾರೆ ಕುಸ್ಮಾಲ್ಯಾ ಒಡ್ನಲ್ಲಿ
ನಿಂದಾರೆ ಕುಸ್ಮಲ್ಯಾ ಒಡ್ನಲ್ಲಿ ಬಾಗೀಲೋರು

“ಏನೂ ಕಾರಣಲಿ ಕರದೀಯೇ
ಏನೂ ಕಾರಣಲೀ ಕರದೀಯೇ ಅಕ್ಕಾ ಕೇಳು
ಕರ್ದಾ ಕಾರಣವಾ ತಿಳಿದೇಳು ”

“ಎಂದೂ ಇಲ್ಲದ ಜೋಗಿ ಇಂದೊಂದ್ ಜೋಗೀಬರ್ತಾ
ಜೋಗಿಯಾ ಲೂಟಿ ಹೆರದಕ್ಕು
ಜೋಗಿಯಾ ಲೂಟಿ ಹೆರ‍್ದಕ್ಕು ಬಾಗೀಲೋರೆ
ತಡ್ದಾ ಬಾಗಲವಾ ಬಿಡಬಾರಾ”

ಅಟ್ಟಂಬಾ ಮಾತಾ ಹೇಳಾದೇ ಕುಸುಮಾಲಿ
ಮಾಳಗಿಯ ಒಳಗೇ ನೆಡದಾಳೆ
ಮಾಳೂಗಿ ಒಳಗೇ ನೆಡ್ವದ್ನು ಆಜೋಗಿ

ಹೂಂಗ್ನಕ್ಲಕಾಗೇ ನೆಡದಾನೆ
ಹೂಂಗ್ನಕ್ಲಕಾಗೇ ನೆಡ್ದಾನೆ ಆ ಜೋಗಿ
ಹೂಂಗಂಬೂ ಹೂಂಗೆಲ್ಲಾ ಕೊಯೀದಾನೆ
ಹೂಂಗಂಬು ಹೂಂಗೆಲ್ಲ ಕೊಯ್ದಿ ದಂಡೀಕಟ್ಟೀ

ಜುಟ್ಟಕ್ಕಿಂಬಾಗಿ ಮುಡಿದಾನೆ
ಜುಟ್ಟಕ್ಕಿಂಬಾಗಿ ಮುಡ್ದಾನೆ ಆ ಜೋಗಿ
ಹೊಂಗ್ನಕ್ಕಲೆರುಗೇ ಬರುವಾನೇ
ಹೂಂಗ್ನಕ್ಕಲೆರುಗೇ ಬರುವಾನೆ ಆ ಜೋಗಿ

ಕುಸ್ಮಾಲಿ ಅರಮನಗೇ ನೆಡುದಾನೆ.
ಕುಸ್ಮಾಲಿ ಅರುಮನಗೇ ನೆಡ್ದಾನೆ ಆ  ಜೋಗಿ
ಹೋಗೀ ಬಾಗಲ್ಲೇ ನಿಲೋವಾನೆ
ಹೋಗೀ ಬಾಗಲ್ಲೇ ನಿಲ್ವಾನೇ ಆ ಜೋಗಿ

“ತಡ್ದಾ ಬಾಗಲವಾ ಬಿಡೋಬೇಕು”
“ಬಾಗಲ ಬಿಡುವಾಕೆ ಅಮ್ಮನಪ್ಪಣೆ ಬೇಕು
ಬಂದವರಿಲ್ಲೇ ನಿಲೋಬೇಕು”
“ನಿಮಗೂ ನಾಕರ್ತಾ ನಿಮ್ಮಮ್ಮಗೂ ನಾಕರ್ತಾ
ನಿಮ್ ಗ್ ಕೊಡು ಸಂಬಳಕೂ ನಾಕರ್ತಾ”
ನಿಮ್ಗ ಕೊಡು ಸಂಬಳಕೂ ನಾಕರ್ತಾ”

ಆಟ್ಟಂಬಾ ಮಾತಾ ಹೇಳಾನೆ ಆ ಜೋಗಿ
ಲೂಟಿ ಮಾಡೋಳಗೇ ನೆಡುದಾನೆ
ಲೂಟಿ ಮಾಡೋಳಗೇ ನೆಡುವುದ್ನು ಬಾಗಿಲೋರು
ತೊಟ್ಟಾ ಬೆತ್ತದಲ್ಲೆ ಒಗುದಾರೆ

ತೊಟ್ಟಾ ಬೆತ್ತದಲ್ಲೇ ಒಗ್ವದನ್ನು ಆ ಜೋಗಿ
ಉದ್ದ್ ಕಂತಾ ಮನಗೇ ನೆಡದಾನೆ
ಉದ್ದ್ ಕಂತಾ ಮನಗೇ ನೆಡ್ದಾನೆ ಆ ಜೋಗಿ
ಹೋಗೀ ಬಾಗಲ್ಲೇ ನಿಲೋವಾನೆ

ಕುಸ್ಮಾಲಿ ಅರಮನೆ ಹನ್ನೆಯ್ಡು ಗಾವುದ್ದಾ
ಕಸ್ಟಿಲ್ಲಾ ಕುಸ್ಮಾಲಿ ಅರಮಲ್ಲ
ಕಸ್ಟಿಲ್ಲ ಕುಸ್ಮಾಲಿ ಅರ‍್ಮಲ್ಲಿ ಅಂದೇಳಿ
ಸಣ್ಣ ಕಂಬಳಿಯಾ ಕುಡಗ್ ಹಾಸಿ
ಸಣ್ಣ ಕಂಬಳಿಯಾ ಕುಡ್ಗಾಸಿ ಆ ಜೋಗಿ

ಚಕ್ರಪಡಿ ಹೊಯ್ದಿ ಕುಳತಾನೆ
ಚಕ್ರಪಡಿ ಹೊಯ್ದಿ ಕುಳುವದ್ನು ಕುಸ್ಮಾಲಿ
ಹಿತ್ಲಕಣ ಬಾಗಲ್ಲೇ ಬರೋವಾಳೆ
ಹಿತ್ಲಕಣ ಬಾಗಲ್ಲೇ ಬರ‍್ವಾಳೆ ಕುಸ್ಮಾಲಿ

ಗವ್ಡಿಯೋರ್ ದೆನಿಮಾಡಿ ಕರೆವಾಳು
ಗವ್ಡಿಯೋರ್ ದೆನಿ ಮಾಡಿ ಕರ‍್ವದ್ನು ಗವ್ಡೀಯೋರು
ಓಯ್ಗುಂಡೇ ಒಡುನೇ ಬರೂವಾರೇ
ಒಯ್ಗುಂಡೇ ಒಡ್ನೇ ಬರುವಾರು ಗವ್ಡೀಯೋರು.

ನಿಂದಾರೆ ಕುಸ್ಮಾಲೀ ಒಡನಲ್ಲಿ
ನಿಂದಾರೆ ಕುಸ್ಮಾಲಿ ಒಡ್ನಲ್ಲಿ ಗವ್ಡಿಯೋರು
“ಏನು ಕಾರಣಲೆ ಕರದಿಯೇ
ಏನು ಕಾರಣಲೆ ಕರದಿಯೆ ಅಕ್ಕಾ ಕೇಳು
ಕರ್ದಾ ಕಾರಣವಾ ತಿಳದೇಳು”

“ಎಂದೂ ಇಲ್ಲದ ಜೋಗಿ ಇಂದೊಂದ್ ಜೋಗಿಬಂದ್
ಜೋಗೀಯಾ ಲೂಟಿ ಹೆರಿದಕ್ಕು
ಜೋಗೀಯಾ ಲೂಟಿ ಹೆರಿದಕ್ಕೂ ಗವ್ಡಿಯೋರೆ
ಪಡಿಯಾ  ಕೊಟ್ಟವನಾ ಕಳುಗೀಸಿ ”

ಅಟ್ಟಂಬಾ ಮಾತಾ ಕೆಳಾರೆ ಗವ್ಡೀಯೋರು
ಮಾಳೂಗೀ ಒಳುಗೆ ನೆಡುದಾರೆ
ದೊಡ್ಡಾ ಹಚ್ಚಗಲೀ ದೊಡ್ಡಕ್ಕೀ ಹೊಯ್ಕಂಡೀ
ಮೊದಲ ಕಾಯಾ ಪಲದೋಸ್ತಾ

ಮೊದಲ ಕಾಯಾ ಪಲದೋಸ್ತಾ ತಡಕಂಡೀ
ಮಾಳಗ್ಗಿಂದೆರಗೇ ಬರೋವಾರೇ
ಮಾಳಗ್ಗಿಂದೆರಗೇ ಬರೋವಾರು ಗವ್ಡೀಯೋರು
“ಇಕ್ಕೊಳ್ಳೋ ಜೋಗಿ ಪಡಿದಾನಾ”

“ನಿಮ್ಮಾ ಕೆಯ್ಪಡಿಯಾ ಕಿಟ್ಟುವ ಜೋಗೀಯಲ್ಲಾ
ನಿಮ್ಮಕ್ನ ಕಯ್ಪಡಿಯೇ ಬರೋಬೇಕು”
“ನಮ್ಮಕ್ಕಾನು ನಿಮ್ಮಂತೋರಿಗ್ ಪಡಿಕೊಡಾ
ಮಟ್ಟಾದಲ್ಲಿರುವಾ ಹೆರಿಗುರು
ಮಟ್ಟಾದಲ್ಲಿರುವಾ ಹೆರಿಗುರುಗಲ್ಲದೆ
ಮಿಕ್ಕೋರಿಗ ಪಡಿಯಾ ಅಳೂದಿಲ್ಲ”

“ಮಟ್ಟಾದಲ್ಲಿರುವಾ ಹೆರಿಗುರು ತಾನೇ ಸರಿಯೇ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕು:
ಅಟ್ಟಂಬಾ ಮಾತಾ ಕೇಳಾರೆ ಗವ್ಡೀಯೋರು
ಮಾಳೂಗಿ ಒಳಗೇ ನೆಡದಾರೆ
ಮಾಳೂಗೀ ಒಳಗೆ ನೆಡ್ದಾರೆ ಗವ್ಡೀಯೋರು
ಹೋಗೀ ತಮ್ಮಕ್ಕಾಗೇ ಒರಡಾರೇ

“ನಿಮ್ಮ ಕಯ್ಪಡಿಯಾ ಕಿಟ್ಟೂವ ಜೋಗಿಯಲ್ಲ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕು
ನಮ್ಮಾ ಅಕ್ಕಾನು ನಿಮ್ಮಂತೋರಿಗ್ ಪಡಿಕೋಡಾ
ಮಟ್ಟಾದಲ್ಲಿರುವಾ ಹೆರಿಗುರು
ಮಟ್ಟಾದಲ್ಲಿರುವಾ ಹೆರಿಗುರುಗಲ್ಲದೇ
ಮಿಕ್ಕೋರಿಗ್ ಪಡಿಯಾ ಅಳುವಾದಿಲ್ಲ”

“ಮಟ್ಟಾದಲ್ಲಿರುವಾ ಹೆರಿಗುರು ತಾನೇ ಸರಿಯೇ
ನಿಮ್ಮಕ್ಕನ ಕಯ್ಪಡಿಯೇ ಬರೋಬೇಕು”
ಅಟ್ಟಂಬಾ ಮಾತಾ ಕೆಳಾದೇ ಕುಸುಮಾಲಿ
ಮುತ್ತೀನಾ ಕಣ್ಣೀರಾ ಸೆಡಿದಾಳೆ
ಮುತ್ತೀನಾ ಕಣ್ಣೀರಾ ಸೆಡಿದಾಳೆ ಕುಸ್ಮಾಲಿ

ತನ್ನಾ ದಾದ್ಯೋರಾ ದೆನಿದೂರಿ
ತನ್ನಾ ದಾದ್ಯೋರಾ ದೆನಿದೂರಿ ಕರ‍್ವದ್ನು
ಓಯ್ಗುಂಡೇ ಒಡನೇ ಬರುವಾರು
ಓಯ್ಗುಂಡೇ ಒಡನೇ ಬರುವಾರು ದಾದಿಯೋರು