ಭಾರತ ದೇಶವು ಭಿನ್ನತೆಯಲ್ಲಿ ಏಕತೆಗೆ ಪ್ರಸಿದ್ಧವಾಗಿದೆ. ನಮ್ಮ ದೇಶದಲ್ಲಿ ಭಿನ್ನಶೀತೋಷ್ನ ಸ್ಥಿತಿಗಳು. ವಿಭಿನ್ನ ವೇಷ, ಭಾಷೆಗಳು, ವಿಭಿನ್ನ ಜಾತಿ ಮತಗಳು ಇದ್ದರೂ ಎಲ್ಲರೂ ಒಂದೇ ಎಂಬ ಭಾವದಲ್ಲಿ ಜೀವಿಸುತ್ತಿದ್ದಾರೆ. ಇದೇ ಭಿನ್ನತ್ವದಲ್ಲಿ ಏಕತ್ವ, ಹಾಗೇ ನಮ್ಮ ದೇಶದಲ್ಲಿ ಶಾಸ್ತ್ರೀಯ ನೃತ್ಯ ಶೈಲಿಗಳು ಅವರವರ ಸಾಂಪ್ರದಾಯಗಳನ್ನು ಒಳಗೊಂಡು ರೂಪಗೊಂಡಿದ್ದರೂ, ಆಯಾ ಶೈಲಿಗಳು ಭರತನ ನಾಟ್ಯ ಶಾಸ್ತ್ರವನ್ನು ಅವಲಂಭಿಸಿದೆ. ಹೀಗೆ ಶಾಸ್ತ್ರೀಯ ನೃತ್ಯದಲ್ಲಿಯು ಸಹ ಭಿನ್ನತ್ವದಲ್ಲಿ ಏಕತ್ವವು ಕಂಡುಬರುತ್ತದೆ.

ನಮ್ಮ ಪ್ರಾಚೀನ ಪಂಡಿತರು ಚತುರ್ಶಷ್ಟಿ (64) ವಿದ್ಯೆಗಳ ಸಾರಾಂಶವನ್ನು ಗ್ರಹಿಸಿ, ಕ್ಲುಪ್ತಗೊಳಿಸಿ ಐದು ಲಿಖಿತ ಕಲೆಗಳಾಗಿ ರೂಪಿಸಿದರು. ಅವುಗಳು ಶ್ರವಣಾನಂದಕರವಾದ ಸಂಗೀತವು, ಆಲೋಚನಾಮೃತವಾದ ಸಾಹಿತ್ಯವು, ನಯನಾನಂದಕರವಾದ ಶಿಲ್ಪವು, ಸೃಜನಾತ್ಮಕವಾದ ಚಿತ್ರಕಲೆಯಾದರೆ ಈ ನಾಲ್ಕರ ಸಂಪೂರ್ಣ, ಸಮಹಾರ, ಕಲಾಸ್ವರೂಪವೇ ನಾಟ್ಯ. ನಮ್ಮ ದೇಶದಲ್ಲಿ ಈ ನಾಟ್ಯವನ್ನು ತಮ್ಮದೇ ಆದ ಸಂಸ್ಕೃತಿ ಹಾಗೂ ಸಾಂಪ್ರದಾಯವಾಗಿ ಅಳವಡಿಸಿಕೊಂಡು ಆಂಧ್ರಪ್ರದೇಶದಲ್ಲಿ ಕೂಚಿಪುಡಿ, ತಮಿಳುನಾಡಿನಲ್ಲಿ ಭರತನಾಟ್ಯ, ಕೇರಳದಲ್ಲಿ ಮೋಹಿನಿಆಟ್ಟಂ ಮತ್ತು ಕಥಕಳಿ, ಉತ್ತರ ಭಾರತದಲ್ಲಿ ಕಥಕ್, ಮಣಿಪುರದಲ್ಲಿ ಮಣಿಪುರಿ, ಒರಿಸ್ಸಾದಲ್ಲಿ ಒಡಿಸ್ಸಿ ನೃತ್ಯ ಶೈಲಿಗಳು ಪ್ರಖ್ಯಾತಗೊಂಡಿದೆ. ಈ ಎಲ್ಲಾ ನೃತ್ಯ ಶೈಲಿಗಳಿಗಿಂತ ಕೂಚಿಪುಡಿ ನಾಟ್ಯ ಬಹಳ ಪ್ರಾಚೀನವಾದುದು.

ಕೂಚಿಪುಡಿ ನಾಟ್ಯವು ಕೂಚಿಪುಡಿ ಗ್ರಾಮದಿಂದ ಪ್ರಚಾರವಾಗಿದೆ. ಈ ಕೂಚಿಪುಡಿ ಗ್ರಾಮವು ಭೌಗೋಳಿಕವಾಗಿ ದಕ್ಷಿಣ ಭಾರತದ ಆಂಧ್ರಪ್ರದೇಶ ರಾಜ್ಯದ ಕೃಷ್ಣಜಿಲ್ಲೆಯ ವಿಜಯವಾಡ ಊರಿನಿಂದ 55 ಕಿ.ಲೋ. ಮೀಟರ್ ದೂರದಲ್ಲಿದೆ. ಆಂಧ್ರಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯ ಕಲೆಗಳನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.

ಅವುಗಳು ನಟ್ಟುವ ಮೇಳ ಮತ್ತು ನಾಟ್ಯ ಮೇಳ, ಕೂಚಿಪುಡಿ ಸಾಂಪ್ರದಾಯವು ನಾಟ್ಯ ಮೇಳಕ್ಕೆ ಸೇರಿಕೊಳ್ಳುತ್ತದೆ. ಈ ಕೂಚಿಪುಡಿ ಗ್ರಾಮದಲ್ಲಿರುವ ಭಾಗವತರು ಈ ನಾಟ್ಯವನ್ನು ಪ್ರಚಾರಕ್ಕೆ ತಂದರು. ಈ ನಾಟ್ಯ ಮೇಳವನ್ನು ಕೂಚಿಪುಡಿ ಭಗವತ ಮೇಳವೆಂದು ಕರೆಯುತ್ತಾರೆ. ಕೂಚಿಪುಡಿ ಭಾಗವತರ ಪ್ರಶಸ್ತಿಯನ್ನು ಪ್ರಥಮವಾಗಿ “ಮಾಚುಪಲ್ಲಿ ಕೈ ಫಿಯತ್”ನಲ್ಲಿ ಹೇಳಿದೆ.

15ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ರಾಜನಾದ “ವೀರ ನರಸಿಂಹ ರಾಯ”ರ ಸಮಕ್ಷಮದಲ್ಲಿ ಕೂಚಿಪುಡಿ ಭಾಗವತರು ಒಂದು ಕೇಳಿಕೆಯನ್ನು ಪ್ರದರ್ಶಿಸಿದರು. “ಸಂಬೆಟ ಗುರುವರಾಜು”, ಸಿದ್ಧವಟಂ ಸೀಮ”ನಲ್ಲಿ ಆಳುತ್ತಿದ್ದಾಗ ಪ್ರಜೆಗಳನ್ನು ಅತಿ ಧಾರುಣವಾಗಿ ಶಿಕ್ಷಿಸುತ್ತಿದ್ದನು. ಈ ಧಾರುಣ ಕೃತ್ಯವನ್ನು ಕಂಡು ಕೂಚಿಪುಡಿ ಭಾಗವತರು ವೀರ ನರಸಿಂಹ ರಾಯರ ಸಮಕ್ಷಮದಲ್ಲಿ ಕೇಳಿಕೆಯಾಗಿ ಪ್ರದರ್ಶಿಸಿದರು. ಇದೇ ಮೊದಲನೆಯ ಚಾರಿತ್ರಿಕ ಆಧಾರವಾಗಿದೆ.

ವೀರನರಸಿಂಹ ರಾಯರ ನಂತರ ಲಲಿತ ಕಲೆ ಪೋಷಕನಾದ, ರಾಜಾದಿ ರಾಜ, ವೀರಪ್ರತಾಪ ಶ್ರೀಕೃಷ್ಣ ದೇವರಾಯರು 1509 ಉತ್ತರಾರ್ಥದಲ್ಲಿ ವಿಜಯನಗರ ಸಾಮ್ರಾಜ್ಯ ಅಧಿಪತ್ಯವನ್ನು ಕೈ ಹಿಡಿದರು. ಆ ಕಾಲದಲ್ಲಿ ರಾಯರು ಕೃಷ್ಣ ಜಿಲ್ಲೆಯ ಶ್ರೀಕಾಕುಳಕ್ಕೆ ಬಂದಾಗ ಕೂಚಿಪುಡಿ ಕಲಾಕಾರರನ್ನು ಅವರ ಜೊತೆಯಲ್ಲಿ ಹಂಪೆಗೆ ಕರೆದುಕೊಂಡು ಬಂದರು. ನಂತರ ಹಂಪೆಯಲ್ಲಿ ಒಂದು ರಂಗಸ್ಥಳವನ್ನು ನಿರ್ಮಿಸಿ, ಆ ಕಲಾವಿದರಿಗೆ ಪ್ರದರ್ಶಿಸಲು ಪ್ರೋತ್ಸಾಹಿಸಿದರು. ಇದನ್ನೇ “ಹಂಪೆ ಚರಿತೆ”ಯಲ್ಲಿ ಹೇಳಲಾಗಿದೆ. ಶ್ರೀಕೃಷ್ಣದೇವರಾಯರು ಕೂಚಿಪುಡಿ ಭಾಗವತರನ್ನು ಸನ್ಮಾನಿಸಿದರೆಂದು “ತಾಯಿ ಕೊಂಡ” ನಾಟಕದ ಪ್ರದರ್ಶನಕ್ಕಾಗಿ ಮಾಡಿದ ಶಾಸನದಿಂದ ತಿಳಿಯುತ್ತದೆ. ಶ್ರೀಕೃಷ್ಣದೇವರಾಯರು ಕೂಚಿಪುಡಿ ಭಾಗವತರ ನಾಟ್ಯಕಲಾ ಕೌಶಲ್ಯವನ್ನು ವೀಕ್ಷಿಸಿ ಸಂತೋಷದಿಂದ ತನ್ನ ಅಮುಕ್ತಮೌಲ್ಯದ ಒಂದು ಪದ್ಯದಲ್ಲಿ “ಭ್ರುಕುಂಸುಲು” ಎಂಬ ಪದವನ್ನು ಪ್ರಯೋಗಿಸಿದರು. ಭ್ರುಕುಂಸುಕ ಎಂದರೆ ಪುರುಷನು ಸ್ತ್ರೀಪಾತ್ರವನ್ನು ಧರಿಸುವುದು ಎಂದು ಅರ್ಥ. ಕೂಚಿಪುಡಿ ಸಂಪ್ರದಾಯದಲ್ಲಿ ಪುರುಷರೇ ಸ್ತ್ರೀಪಾತ್ರ ಮಾಡಿರುವುದರಿಂದ ಶ್ರೀಕೃಷ್ಣದೇವರಾಯರು ಹೇಳಿದ ಭ್ರುಕುಂಸುಕ ಎಂಬ ಪದವನ್ನು ಕೂಚಿಪುಡಿ ಭಾಗವತರ ಪ್ರದರ್ಶನವನ್ನು ಕಂಡು ರಾಯರು “ಭ್ರುಕುಂಸುಲು” ಎಂದು ಬರೆದಿದ್ದಾರೆಂದು ಸ್ಪಷ್ಟವಾಗಿದೆ. ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿರುವ “ಕೇಶವಬಟ್ಟು” ಎಂಬ ಕಲಾವಿದನಿಗೆ “ಮುದಿಗೊಂಡ” ಅಗ್ರಹಾರವನ್ನು ಕೊಟ್ಟು ಗೌರವಿಸಿದರು.

“ಕೂಚಿಪುಡಿ” ಶಬ್ದವು ಬಹುರೀತಿಯಾಗಿ ಪ್ರಯೋಗಿಸಲಾಗಿದೆ. ಕೂಚಿಪುಡಿಯು ಒಂದು ಗ್ರಾಮದ ಹೆಸರು. ನಾಟ್ಯ ಹೆಸರು, ಭಾಗವತ ಹೆಸರು, ಗೃಹ ನಾಮವಾಗಿ ಬಳಸಲಾಗಿದೆ. ಅಂದರೆ ಸಂದರ್ಭಾನುಸಾರವಾಗಿ ಈ ಶಬ್ದದ ಪ್ರಯೋಗವನ್ನು ತಿಳಿಯಬೇಕು.

1565 “ತಳ್ಳಿಕೂಟ” ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯವು ಪತನವಾಗಿ, ಲಲಿತ ಕಲೆಗಳಿಗೆ ಪೋಷಕರೇ ಇಲ್ಲದಂತಾಯಿತು. ಆದ್ದರಿಂದ ಆ ಸಮಯದಲ್ಲಿ ತಮಿಳುನಾಡಿನ ತಂಜಾವೂರನ್ನು ನಾಯಕರು ಪರಿಪಾಲಿಸಿದರು. ಕ್ರಮವಾಗಿ ವಿಜಯನಗರದ ವೈಭವವು ತಂಜಾವೂರಿಗೆ ಸಾಗಿಸಲಾಯಿತು. ಕೂಚಿಪುಡಿ ಭಾಗವತರಲ್ಲಿ ಕೆಲವರು ತಂಜಾವೂರಿನಲ್ಲಿ ಸ್ಥಿರ ನಿವಾಸ ಮಾಡಿಕೊಂಡರು. ಅವರಲ್ಲಿ ಒಬ್ಬರಾದ ಕೂಚಿಪುಡಿ ವಂಶಕ್ಕೆ ಸೇರಿದ “ವೆಂಕಟ ರಾಮಶಾಸ್ತ್ರಿ” ಅವರೇ ಮೆಲ್ಲತ್ತೂರು ವೆಂಕಟರಾಮಶಾಸ್ತ್ರೀ.

ಕೂಚಿಪುಡಿ ನಾಟ್ಯವು ಕಾಲಾನುಗುಣವಾಗಿ ಐದು ಪ್ರಕ್ರಿಯೆಗಳಾಗಿ ಬದಲಾವಣೆಯಾಯಿತು. ಅವುಗಳು ಸಂಸ್ಕೃತ ನೃತ್ಯರೂಪಕಗಳು, ಕಲಾಪಗಳು, ಯಕ್ಷಗಾನ, ಏಕಕೇಳಿಕ ನೃತ್ಯ ಪ್ರದರ್ಶನ ಹಾಗೂ ನೃತ್ಯ ನಾಟಕಗಳು. ಆಂಧ್ರ ವಾಜ್ಮಯಕ್ಕೆ ಪೂರ್ವ ಕೂಚಿಪುಡಿ ಭಾಗವತರು ಸಂಸ್ಕೃತ ನಾಟಕಗಳಾದ ಮಹಾಕವಿರತ್ನ ಕಾಳಿದಾಸರ ಅಭಿಜ್ಞಾನ ಶಾಕುಂತಲ, ಭಾಸನ ಛಂಡಕೌಶಿಕ, ಊರು ಭಂಗ, ವೇಣಿ ಸಂಹಾರ, ಸೂತ್ರಕನ ಮೃಚ್ಚಖಟಿಕ, ಸ್ವಪ್ನವಾಸವದತ್ತ ಮುಂತಾದ ನಾಟಕಗಳನ್ನು ಆರಿಸಿ ಭಗವತ ಸಂಬಂಧವಾದ ಇತಿವೃತ್ತಗಳನ್ನು ಕೂಚಿಪುಡಿ ಭಾಗವತರು ಭಾವ, ರಾಗ, ತಾಳ, ಲಯಗಳೊಂದಿಗೆ ಪರಿಷ್ಕರಿಸಿ, ಪ್ರಯೋಗಿಸಿ ಪ್ರಚಾರ ಮಾಡಿದರು. ಸಂಸ್ಕೃತ ರೂಪದ ನಂತರ ಶ್ರೀ ಸಿದ್ಧೇಂದ್ರಯೋಗಿ ಈ ಭಾಗವತರಲ್ಲಿರುವ ಕಲೆಯನ್ನು ಗುರುತಿಸಿ ಭಾಮಾಕಲಾಪವನ್ನು ರಚಿಸಿ ನೃತ್ಯ ಸಂಯೋಜನೆ ಮಾಡಿ ಕೂಚಿಪುಡಿ ಭಾಗವತರಿಗೆ ಕಲಿಸಿಕೊಟ್ಟ ಕೂಚಿಪುಡಿ ಸಾಂಪ್ರದಾಯವಾಗಿದೆ. ಕೂಚಿಪುಡಿ ಸಾಂಪ್ರದಾಯದಲ್ಲಿ ಬ್ರಾಹ್ಮಣರು ಮತ್ತು ಪುರುಷರು ಮಾತ್ರವೇ ಕಲಿಯಲು ಅವಕಾಶವಿತ್ತು. ಪ್ರಯೋಗಗಳಲ್ಲಿಯೂ ಸಹ ಪುರುಷರು ಸ್ತ್ರೀ ಪಾತ್ರಗಳನ್ನು ಧರಿಸುತ್ತಿದ್ದರು. ಕೂಚಿಪುಡಿ ಭಾಗವತರು ರಾಮಾಯಣ, ಮಹಾಭಾರತ ಮತ್ತು ಭಾಗವತಗಳಿಂದ ಭಗವತ್ ಸಂಬಂಧವಾದ ಇತಿ ವೃತ್ತಗಳನ್ನು ಪ್ರದರ್ಶಿಸುತ್ತಿದ್ದರು. ಕೂಚಿಪುಡಿ ಸಂಪ್ರದಾಯಗಳಲ್ಲಿ ಶಾಸ್ತ್ರೀಯ ಸಂಗೀತವನ್ನೇ ಬಳಸುತ್ತಿದ್ದು ಭಾಗವತರೇ ಹಾಡುತ್ತಿದ್ದರು. ಈ ಸಾಂಪ್ರದಾಯಗಳನ್ನು ಒಳಗೊಂಡ ಭಾಮಾ ಕಲಾಪದಲ್ಲಿ ಮೂರು ಪಾತ್ರಗಳಿವೆ. ಅವುಗಳು ಸತ್ಯಭಾಮೆ, ಶ್ರೀಕೃಷ್ಣ ಹಾಗೂ ಮಾಧವಿ ಇದರಲ್ಲಿ ಆತ್ಮವು ಪರಮಾತ್ಮನಲ್ಲಿ ಲೀನವಾಗಲು ಪಡುವ ತವಕವನ್ನು ಪ್ರತಿಬಿಂಬಿಸುತ್ತಿತ್ತು. ಇದರಲ್ಲಿ (ಭಾಮಾಕಲಾಪದಲ್ಲಿ) ಭಾಮೆ ಆತ್ಮವಾದರೆ ಶ್ರೀಕೃಷ್ಣನು ಪರಮಾತ್ಮನು. ಮಾಧವಿ ಇವರಿಬ್ಬರಲ್ಲಿರುವ ಮಾಯೆ. ಪ್ರಯೋಗದಲ್ಲಿ ಈ ಮಾಧವಿ ಪಾತ್ರವನ್ನು ಸೂತ್ರಧಾರನೇ ಮಾಡುವ ಸಂಪ್ರದಾಯ. ಆದರೆ ಸೂತ್ರಧಾರನು ಭಾಮೆಯ ದೃಷ್ಟಿಯಲ್ಲಿ ಸ್ತ್ರೀರೂಪದಲ್ಲಿರುವ ಮಾಧವಿಯಾಗಿ, ಶ್ರೀಕೃಷ್ಣ ದೃಷ್ಟಿಯಲ್ಲಿ ಪುರುಷ ರೂಪದಲ್ಲಿರುವ ಮಾಧವನಾಗಿ ಕಾಣಿಸುತ್ತಿದ್ದನು. ಭಾಮಾಕಲಾಪದ ಕೊನೆಯ ಭಾಗದಲ್ಲಿ ಮಾಧವಿ, ಭಾಮೆಯು ಕೃಷ್ಣನೊಂದಿಗೆ ಒಂದಾಗಲು ಕಾರಣಕರ್ತಳಾಗುತ್ತಾಳೆ. ಈ ಭಾಮಾ ಕಲಾಪವು ಮಧುರ ಭಕ್ತಿಯಿಂದ ಕೂಡಿದೆ. 12ನೇ ಶತಮಾನದಲ್ಲಿ ಆಂಧ್ರಪ್ರದೇಶ ಕೃಷ್ಣಾಮಂಡಲದ ಗೋಲ್ಕಂಡ ನವಾಬ್ ಆದ ಅಬ್ದುಲ್ ಹಸನ್ ತಾನಿಷಾ ಮುಚಲಿಪಟ್ಟಣಕ್ಕೆ ಪ್ರಯಾಣ ಮಾಡುತ್ತಾ ಕೂಚಿಪುಡಿಯಲ್ಲಿ ವಿರಾಮಕ್ಕಾಗಿ ಒಂದು ರಾತ್ರಿ ಉಳಿದುಕೊಂಡರು. ಕೂಚಿಪುಡಿ ಭಾಗವತರು ಈ ವಿಷಯವನ್ನು ತಿಳಿದು ಅಬ್ದುಲ್ ಹಸನ್ ತಾನಿಷಾನನ್ನು ಸಂದರ್ಶಿಸಿ ಆತನ ಸಮಕ್ಷಮದಲ್ಲಿ ಭಾಮಾಕಲಾಪವನ್ನು ಪ್ರದರ್ಶಿಸಿದರು. ಆ ಪ್ರದರ್ಶನವನ್ನು ಕಂಡ ತಾನಿಷಾ ಬಹಳ ಮಹಾದಾನಂದವನ್ನು ಹೊಂದಿ ಸುಮಾರು 600 ಎಕರೆಗಳ ವಿಸ್ತೀಣವಾಗಿರುವ ಕೂಚಿಪುಡಿ ಅಗ್ರಹಾರವನ್ನು ಆ ಭಾಗವತರಿಗೆ ಬಹುಮಾನವಾಗಿ ನೀಡಿದರು. ಕೂಚಿಪುಡಿ ಭಾಗವತರು ತಮ್ಮ ಕಲೆಯಿಂದ ಸಾಂಘಿಕ ಪ್ರಯೋಜನವನ್ನು ಸಾಧಿಸಿದರು. ಭಾಮಾ ಕಲಾಪವು ಭಾಗವತಿಗೆ ಸ್ಥಿರ ನಿವಾಸವಾಗಲು ಅವಕಾಶ ಕೊಟ್ಟು ಕೂಚಿಪುಡಿ ಕಲೆಗೆ ಮೂಲ ಸ್ಥಾನವಾಗಿದೆ. ಭಾಮಾ ಕಲಾಪದ ನಂತರ ಕಲಾಪ ಪ್ರಕ್ರಿಯೆಯಲ್ಲಿ ಭಾಗವತುಲ ರಾಮಯ್ಯರವರಿಂದ ರಚಿಸಲ್ಪಟ್ಟ “ಗೊಲ್ಲ ಕಲಾಪ”ವು ಪ್ರಚಾರವಾಯಿತು. ಈ ಗೊಲ್ಲ ಕಲಾಪವು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳು ಪಿಂಡೋತ್ಪಥಿ ಹಾಗೂ ಆತ್ಮಯಜ್ಞ, ಗೊಲ್ಲ ಕಲಾಪದಲ್ಲಿ ಎರಡು ಪಾತ್ರಗಳು ಮಾತ್ರ ಇರುತ್ತದೆ. ಅವು ಬ್ರಾಹ್ಮಣ ಹಾಗೂ ಗೊಲ್ಲತಿ. ಪಿಂಡೋತ್ಪಥಿಯಲ್ಲಿ ಜ್ಞಾನೇಂದ್ರೀಯ, ಕರ್ಮೆಂದ್ರಿಯಗಳ ಬಗ್ಗೆ ಸತ್ವ, ರಜೋತಮೊಗುಣಗಳ ಬಗ್ಗೆ, ಮಾತೃ ಗರ್ಭದಲ್ಲಿರುವ ಶಿಶುವಿನ ಅವಸ್ಥೆಗಳ ಬಗ್ಗೆ ರಚಿಸಿದರು. ಆತ್ಮಯಜ್ಞದಲ್ಲಿ ಜೀವಹಿಂಸೆ ಮಾಡುವ ಯಜ್ಞ ಯಾಗಾದಿ ಕೃತಿಗಳಿಗಿಂತ ಮನಸ್ಸಿನಿಂದ ಮಾಡುವ ಯಾಗವನ್ನು ಮಾಡಲು ಗೊಲ್ಲತಿ ಉಪದೇಶಿಸುತ್ತಾಳೆ. ಈ ಕಲಾಪದಲ್ಲಿ ವಿಜ್ಞಾನ ಮತ್ತು ವೇದಾಂತ ಧಾರಣೆಯನ್ನು ಕಾಣಬಹುದು. ಈ ವೇದಾಂತ ಮತ್ತು ವಿಜ್ಞಾನ ವಿಷಯಗಳು ಬ್ರಾಹ್ಮಣ ಮತ್ತು ಗೊಲ್ಲತಿ ಪಾತ್ರಗಳ ನಡುವೆ ಸಂವಾದ ರೂಪದ ಸಂಭಾಷಣೆ ನಡೆಯುತ್ತದೆ. ಹಾಗೇ ಕಲಾಪ ಪ್ರಕ್ರಿಯೆಗಳಲ್ಲಿ ಶ್ರೀ ಸಿದ್ಧೇಂದ್ರ ವಿರಚಿತ ಭಾಮಾ ಕಲಾಪ ಶ್ರೀ ಭಾಗವತುಲರಾಮಯ್ಯ ವಿರಚಿತ ಗೊಲ್ಲ ಕಲಾಪ ಅಕ್ಕತಂಗಿಯರಾಗಿ ಕೂಚಿಪುಡಿ ನಾಟ್ಯ ವಿಕಾಸಕ್ಕೆ ಕಾರಣವಾಗಿದ್ದು ಇದು ಈ ನಾಟ್ಯಕ್ಕೆ ಒಂದು ವಿಶಿಷ್ಟ ಸ್ಥಾನವನ್ನು ನೀಡಿದೆ.

ಕಲಾಪಗಳ ನಂತರ ಶ್ರೀ ಚಿಂತಾ ವೆಂಕಟರಾಮಯ್ಯರವರು ಯಕ್ಷಗಾನ ಪ್ರಕ್ರಿಯೆಯನ್ನು ರೂಪಿಸಿ ಪ್ರಚಾರ ಮಾಡಿದರು. ಇವರು ಕೂಚಿಪುಡಿನಲ್ಲಿ ಆರುಂಧತಿ ಶಿವರಾಮಯ್ಯರವರಿಗೆ ಜನಿಸಿದರು. ಜೇಷ್ಠ ಸೋದರನಾದ ಶ್ರೀ ಚಿಂತಾರತ್ತಯ್ಯ ಮತ್ತಯ ಏಲೆಶ್ವರಪು ನಾರಾಯಣರವರ ಬಳಿ ನಾಟ್ಯವನ್ನು ಕಲಿತು ಬಹಳ ಜನರಿಗೆ ಈ ನಾಟ್ಯವನ್ನು ಭೋಧಿಸಿದರು. ಆದರೆ ಅವರಿಗೆ ಕಲಾಪ ನಾಟ್ಯ ಭೋಧನೆಯಿಂದ ತೃಪ್ತಿ ಆಗಲಿಲ್ಲ. ಪ್ರೇಕ್ಷಕರಿಗೆ ಒಂದು ನೂತನ ಪ್ರಕ್ರಿಯೆಯೊಂದಿಗೆ ಅವರನ್ನು ರಂಜಿಸಲು ನಿರಂತರ ಚಿಂತಿಸಿದರು. ಒಂದು ನೂತನ ಪ್ರಕ್ರಿಯೊಂದಿಗೆ ಅವರನ್ನು ರಂಜಿಸಲು ನಿರಂತರ ಆಲೋಚನ ನಿರತರಾಗಿದರು. ಕೂಚಿಪುಡಿ ಭಾಗವತರ ಕುಟುಂಬದ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು. ಹಾಗೂ ಕುಟುಂಬ ನಿಯಂತ್ರಣ ಇಲ್ಲದೆ ಇರುವುದರಿಂದ ಭಾಗವತರ ಮನೆಯಲ್ಲಿ ಸಂತಾನ ಲಕ್ಷ್ಮಿ ತಾಂಡವ ಆಡುತ್ತಿದ್ದಳು. ಆದ್ದರಿಂದ ಕೌಟುಂಬಿಕ ಜೀವನ ನಡೆಸಲು ಬಹಳ ಕಷ್ಟವಾಯಿತು. ಆ ಸಮಯದಲ್ಲಿ ಚಿಂತಾ ವೆಂಕಟ ರಾಮಯ್ಯನವರು ಹೆಚ್ಚುಮಂದಿ ಭಾಗವಹಿಸುವ ಪ್ರಕ್ರಿಯೆಯಾದ ಯಕ್ಷಗಾನವನ್ನು ಕೈಗೊಂಡು ಭಾಗವತರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದರು. ಈ ಪ್ರಕ್ರಿಯೆಯಲ್ಲಿ ಮೊದಲು ಶ್ರೀ ವೇದಾಲ ತಿರುನಾರಾಯಣಚಾರ್ಯ ಮತ್ತು ರಾಮಾನುಜಾಚಾರ್ಯ ಅವರಿಂದ ರಚಿಸಿರುವ “ಭಕ್ತ ಪ್ರಹ್ಲಾದ” ಯಕ್ಷಗಾನದ ಮೇಲೆ ಚಿಂತಾವೆಂಕಟ ರಾಮಯ್ಯನವರು ದೃಷ್ಠಿ ಬಿದ್ದಿತು. ಆ ಯಕ್ಷಗಾನಕ್ಕೆ ಕರ್ನಾಟಕ ಸಂಗೀತವನ್ನು ಸುಮಧುರವಾಗಿ ಶ್ರವಣಾನಂದಕರವಾಗಿ ರೂಪಿಸಿ ಅದಕ್ಕೆ ತಕ್ಕಂತೆ ಪಾತ್ರಧಾರಿಗಳನ್ನು ಆಯ್ಕೆ ಮಾಡಿ ಹೇಳಿಕೊಟ್ಟರು. ನಂತರ ರೆಂಡು ಚಿಂತಲ ಚಿದಂಬರ ಕವಿ ಬರೆದಿರುವ “ಉಷಾ ಪರಿಣಯ”ವನ್ನು ಶ್ರೀ ವಲ್ಲಭನೇನಿ, ರಾಮಕೃಷ್ಣ ಚೌದರೀ ಕೃತವಾದ “ಶಶಿರೇಖ ಪರಿಣಯ”, “ಗೇಯ ನಾಟಕ”ಗಳಿಗೆ ಯಕ್ಷಗಾನ ರೂಪವನ್ನು ಕೊಟ್ಟು ಸಾವಿರಾರು ಪ್ರದರ್ಶನಗಳನ್ನು ನೀಡಿದರು. ಅನಂತರ “ಏನುಗುಲೂರಿ ಪಾಪರಾಜು”ರವರ ರುಕ್ಮಾಂಗದ ಚರಿತ್ರೆ ರಾಮನಾಟಕವನ್ನು ರಮಣೀಯವಾಗಿ ರೂಪಿಸಿ ನಯನಾನಂದಕರವಾಗಿ ಪ್ರದರ್ಶನಗಳಿಂದ ಕೂಚಿಪುಡಿ ನಾಟ್ಯಕ್ಕೆ ಅಖಂಡ ಖ್ಯಾತಿಯನ್ನು ಸಂಪಾದಿಸಿದರು. ಆ ಘನತೆ ಶ್ರೀ ಚಿಂತಾವೆಂಕಟ ರಾಮಯ್ಯನವರಿಗೆ ಸಲ್ಲುತ್ತದೆ. ಈ ಯಕ್ಷಗಾನವನ್ನು ಕಂಡ ಆಂಧ್ರರು ಸಂತೋಷದ ಸಾಗರದಲ್ಲಿ ಮುಳುಗಿದರು. ಹೀಗೆ ಯಕ್ಷಗಾನ ಪ್ರಕ್ರಿಯೆ ಕೂಚಿಪುಡಿ ನಾಟ್ಯ ಪ್ರಕ್ರಿಯೆಗಳಲ್ಲಿ ತೃತೀಯ ಪ್ರಕ್ರಿಯೆಯಾಗಿದ್ದು, ಅದ್ಭುತವಾಗಿ, ಅದ್ವಿತೀಯವಾಗಿ, ಅನಂತವಾಗಿ ಇಂದಿಗೂ ಅದಕ್ಕೇ ಒಂದು ಪ್ರತ್ಯೇಕ ಸ್ಥಾನವನ್ನು ಪಡೆದಿದೆ.

ಯಕ್ಷಗಾನದ ನಂತರ ಕೂಚಿಪುಡಿ ನಾಟ್ಯ ಪ್ರಕ್ರಿಯೆಗಳಲ್ಲಿ ವ್ಯಸ್ಥನೃತ್ಯಾಂಶಗಳು ಸ್ಥಾನವನ್ನು ಸಂಪಾದಿಸಿಕೊಂಡಿದೆ. ಈ ಪ್ರಕ್ರಿಯೆಯನ್ನು ಶ್ರೀವೇದಾಂತಂ ಲಕ್ಷ್ಮೀ ನಾರಾಯಣ ಶಾಸ್ತ್ರಿಯವರು ಪರಿಚಯಿಸಿದರು. ಇವರು ಶ್ರೀ ಚಿಂತಾವೆಂಕಟರಾಮಯ್ಯರವರಿಗೆ ಸಮಕಾಲದವರಾಗಿದ್ದರು. ಲಕ್ಷ್ಮೀ ನಾರಾಯಣ ಶಾಸ್ತ್ರಿರವರು, ಜಾವಳಿ, ಪದಗಳು, ಅಷ್ಟಪದಿ, ತರಂಗಗಳಿಗೆ ನೃತ್ಯ ಸಂಯೋಜಿಸಿ ಕೂಚಿಪುಡಿ ನಾಟ್ಯಗಾರರೆಲ್ಲರು ಅನುಸರಿಸುವಂತೆ ರೂಪಿಸಿದರು. ಅಷ್ಟೇ ಅಲ್ಲದೆ ಸಾಂಪ್ರದಾಯಿಕವಾಗಿ ಕೇವಲ ಪುರುಷರಿಗೆ ಮಾತ್ರವೇ ಪ್ರವೇಶಾರ್ಹತೆ ಉಳ್ಳ ಈ ನಾಟ್ಯ ಶೈಲಿಯಲ್ಲಿ ಸ್ತ್ರೀಯರಿಗೂ ಸಹ ಪ್ರವೇಶ ಮಾಡಲು ಅವಕಾಶವನ್ನು ನೀಡಿ ಕೂಚಿಪುಡಿ ಸಾಂಪ್ರದಾಯಕ್ಕೆ ನೂತನ ಸ್ವರೂಪವನ್ನು ತಂದರು. ವ್ಯಸ್ಥ ನೃತ್ಯಾಂಶಗಳು ಸುವಿಶಾಲವಾದ ಪ್ರಕ್ರಿಯೆ, ವ್ಯಸ್ಥ ನೃತ್ಯಾಂಶಗಳಲ್ಲಿ ಒಂದು ಅಂಶವಾದ ತರಂಗವು ಒಂದು ಪ್ರತ್ಯೇಕ ಸ್ಥಾನವನ್ನು ಪಡೆದಿದೆ. ಈ ತರಂಗ ನೃತ್ಯಾಂಶವನ್ನೇ ಒಂದು ನಾಟ್ಯ ಯೋಗವೆಂದು ಹೇಳುತ್ತಾರೆ. ಈ ನೃತ್ಯಾಂಶವು “ಪೂಂಖಾನು ಪೂಂಖ ವಿಷಯ ಕ್ಷಣ ತತ್ವರೋಪಿ. ಬ್ರಹ್ಮಾವಧಿ ಲೋಕ ನದ್ಧಿಯಂ ನಜಹಾತಿ ಯೋಗಿ ಸಂಗೀತ, ತಾಳ, ಲಯ, ವಾದ್ಯ, ವಶಂಗ ತಾಪಿ ಮೌಳಿಸ್ಥ ಕುಂಭ ಪರಿರಕ್ಷಣ ಧಿರ್ರ‍ಟಿವ”.

ಆದಿ ಶಂಕರಾಚಾರ್ಯ ಹೇಳಿದ ಈ ಶ್ಲೋಕದ ಆಧಾರವಾಗಿ ತರಂಗ ನೃತ್ಯಾಂಶವನ್ನು ಸಂಯೋಜಿಸಿದರು. ಈ ನೃತ್ಯಾಂಶವು ಬಹಳ ಪ್ರಾಮುಖ್ಯತೆಯನ್ನು ಹೊಂದಿ ಪ್ರಚಾರವಾಗಿ ಪ್ರಸಿದ್ಧಿಯನ್ನು ಪಡೆದು ತನ್ನದೇ ಆದ ಪ್ರತ್ಯೇಕ ಸ್ಥಾನ ಕಲ್ಪಸಿಕೊಂಡಿದೆ.

ಲಕ್ಷ್ಮೀ ನಾರಾಯಣಶಾಸ್ತ್ರಿರವರ ನಂತರ ಡಾ|| ಶ್ರೀ ವೆಂಪ್ಪಟಿ ಚಿನ್ನ ಸತ್ಯಂರವರು ಈ ಪ್ರಕ್ರಿಯೆಗೆ ಇನ್ನೂ ಮೆರಗು ನೀಡಿ ವಿಸ್ತಾರ ಮಾಡಿದರು. ಈ ಪ್ರಕ್ರಿಯೆಯಲ್ಲಿ ತನ್ನದೆ ಆದ ಒಂದು ಪ್ರತ್ಯೇಕ ಬಾಣಿಯನ್ನು ಅವಲಂಬಿಸಿ ಜತಿಸ್ವರ, ಸ್ವರಜತಿ, ಪದ, ಅಷ್ಟಪದಿ, ಜಾವಳಿ, ಅಷ್ಟ, ತಾಂಡವ, ಶ್ಲೋಕಾರ್ಥ, ಪದ್ಯಾಭಿನಯ, ಕೌತ್ವ ಮುಂತಾದ ನೃತ್ಯಾಂಶಗಳಿಗೆ ರೂಪ ಕಲ್ಪನೆಯನ್ನು ಮಾಡಿ ಏಕಪಾತ್ರ ಕೇಳಿಕೆ ಪ್ರಕ್ರಿಯೆಯನ್ನು ಬಹುಸುಂದರವಾಗಿ ವಿಸ್ತರಿಸಿ ಪ್ರಖ್ಯಾತರಾಗಿದ್ದರು.

ಏಕಪಾತ್ರ ಕೇಳಿಕ ಪ್ರಕ್ರಿಯೆ ನಂತರ ಕೂಚಿಪುಡಿ ನಾಟ್ಯದಲ್ಲಿ ನೃತ್ಯನಾಟಕ ಪ್ರಕ್ರಿಯೆ ನೆಲೆಗೊಂಡಿತು. ಈ ನೃತ್ಯ ಪ್ರಕ್ರಿಯೆಯನ್ನು ಪದ್ಮಭೂಷಣ ಡಾ|| ವೆಂಪ್ಪಟ್ಟಿ ಚಿನ್ನಸತ್ಯಂರವರೆ ರೂಪಿಸಿದರು. ಇದರಲ್ಲಿ ಚರ್ತುವಿಧಾಭಿನಯಗಳಲ್ಲಿ ಒಂದಾದ ವಾಚಿಕಾಭಿಯ ಕೊರತೆ ಇದ್ದರೂ ಸಹ ಬೇರೆ ಅಭಿನಯಗಳಿಂದ ಉಂಟಾದ ರಸೋತ್ಪತ್ತಿಯಿಂದ ಆ ಲೋಪವನ್ನು ಪೂರೈಸಿದೆ. ಇವರು ಹಳೆಯ ಮತ್ತು ಹೊಸ ಸಾಂಪ್ರದಾಯಗಳ ಸಮ್ಮೇಳದೊಂದಿಗೆ ವಿವಿಧ ನೃತ್ಯ ನಾಟಕಗಳನ್ನು ರೂಪಿಸಿದರು. ಮೊದಲು ಶ್ರೀ ದೇವುಲ ಪಲ್ಲಿಕೃಷ್ಣಶಾಸ್ತ್ರಿ ಶ್ರೀ ಬಾಲಾಂತಪು ರಜನಿಕಾಂತರವರ ಕೃತವಾದ ಕ್ಷೀರಸಾಗರ ಮಥನವನ್ನು ಸಂಯೋಜಿಸಿ ಆಂಧ್ರಾವಳಿಗೆ ಅಮೃತವನ್ನು ನೀಡಿದರು. ನಂತರ ಶ್ರೀ ಭುಜಂಗ ರಾಯಶರ್ಮರವರ ರಚಿತ ಶ್ರೀ ಕೃಷ್ಣ ಪರಿಜಾತ, ವಿಪ್ರನಾರಾಯಣ ಚರಿತ್ರೆ, ಕಲ್ಯಾಣ ಶಾಕುಂತಲ, ಮೇನಕ ವಿಶ್ವಾಮಿತ್ರ, ಶ್ರೀನಿವಾಸ ಕಲ್ಯಾಣಂ, ಚಂಡಾಲಿಕ, ಕಲ್ಯಾಣ ರುಕ್ಮಿಣಿ, ಹರವಿಲಾಸ ಮುಂತಾದ ನೃತ್ಯ ನಾಟಕಗಳಿಗೆ ರೂಪವನ್ನು ಕೊಟ್ಟು ಬಹಳ ಪ್ರದರ್ಶನಗಳನ್ನು ಕೊಟ್ಟು ದೇಶ ವಿದೇಶದಲ್ಲಿ ಪ್ರಚಾರ ಮಾಡಿದರು. ಅಷ್ಟೇ ಅಲ್ಲದೆ ತಮಿಳು ಭಾಷೆಯಲ್ಲಿಯೂ ಸಹ ಕುಮಾರ ಸಂಭವ, ಶ್ರೀನಿವಾಸ ಕಲ್ಯಾಣ ನೃತ್ಯ ನಾಟಕಗಳನ್ನು ಅನುವಾದ ಮಾಡಿ ಪ್ರದರ್ಶಿಸಿದರು.

ಈ ಪ್ರಕಾರವಾಗಿ ಕೂಚಿಪುಡಿ ನಾಟ್ಯ ಕಲೆ ಸಂಸ್ಕೃತ ರೂಪಕಗಳಿಂದ ಪ್ರಾರಂಭಿಸಿ ಕಲಾಪಗಳೊಂದಿಗೆ ಮುಂದುವರೆಸಿ ಯಕ್ಷಗಾನಗಳೊಂದಿಗೆ ವಿಸ್ತರಿಸಿ ಏಕಪಾತ್ರ ಕೇಳಿಕೆಗಳೊಂದಿಗೆ ಪ್ರಸರಿಸಿ, ನೃತ್ಯ ನಾಟಕಗಳೊಂದಿಗೆ ಪ್ರಪಂಚ ಖ್ಯಾತಿಯನ್ನು ಹೊಂದಿದೆ.

ಈಗ ನರ್ತಕ ನರ್ತಕಿಯರು ಯುಗಳ ಮತ್ತು ವೃಂದ ನೃತ್ಯಗಳೊಂದಿಗೆ ಈ ಕೂಚಿಪುಡಿ ನಾಟ್ಯವನ್ನು ಮುಂದುವರೆಸಿ ಪ್ರಚಾರ ಮಾಡಿ ಬಹಳ ಸುಂದರವಾಗಿ, ಆಕರ್ಷಕವಾಗಿ ಪ್ರದರ್ಶಿಸುತ್ತಿದ್ದಾರೆ. ಹೀಗೆ ಕೂಚಿಪುಡಿ ಉಗಮ ಅನೇಕ ಗುರುಗಳ ಕೊಡುಗೆಗಳಿಂದ ಕಾಲಾನುಗುಣವಾಗಿ ಹಾಗೂ ಸಂದರ್ಭಾನುಸಾರವಾಗಿ ವಿವಿಧ ರೂಪಗಳ ಬದಲಾವಣೆಗಳಿಂದ ಪ್ರಖ್ಯಾತಗೊಂಡಿದೆ.