(ಮೂಲ – National Entrepreneurship Network (NEN) Source: An Initiative of Wadhwani Foundation

ಈ ಭಾರತೀಯ ಉದ್ಯಮಿಗಳನ್ನು ಗುರುತಿಸಬಲ್ಲಿರೇನು? (ಉತ್ತರಗಳು ಅಧ್ಯಾಯದ ಕೊನೆಯ ಪುಟದಲ್ಲಿ)

ಇವರು ತಮ್ಮ ಉದ್ಯಮ-ಸಾಮ್ರಾಜ್ಯವನ್ನು ಪ್ರಾರಂಭಿಸಿ, ಮುಂದುವರೆಸಿ ಯಶಸ್ಸನ್ನು ಕಂಡ ವಿವರಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿ.

ಅಧ್ಯಾಯದ ಕಲಿಕೆಯ ಧ್ಯೇಯಗಳು

  • ಉದ್ಯಮಶೀಲತೆಯ ಮೂಲಭೂತ ವಿಚಾರಗಳ ತಿಳುವಳಿಕೆ.
  • ವ್ಯವಹಾರದಲ್ಲಿನ ದೃಷ್ಟಿಕೋನಗಳು ಮತ್ತು ವ್ಯಾವಹಾರಿಕ ಪ್ರಯೋಗಗಳಲ್ಲಿನ ಸವಾಲುಗಳು.
  • ಸರಳ ವ್ಯವಹಾರ-ಪ್ರಯೋಗಗಳ ಮೂಲಕ ಸೃಜನಶೀಲ ಕಲಿಕೆ.

ಪರಿಚಯ

ಬದಲಾಗುತ್ತಿರುವ ಪ್ರಪಂಚದಲ್ಲಿ ಅಧಿಕ ಅವಕಾಶಗಳು ಉಂಟಾಗುತ್ತಿವೆ, ಜೊತೆಗೆ ಸತತ ಬದಲಾಗುವ ಪರಿಸರಕ್ಕೆ ಹೊಂದಿಕೊಂಡು ಉತ್ತಮವಾಗಿ ಕಾರ್ಯಕೌಶಲವನ್ನು ಪ್ರದರ್ಶಿಸಬೇಕಾದ ಒತ್ತಡವೂ ಹೆಚ್ಚುತ್ತಿದೆ. ಉದ್ಯಮ-ಶೀಲತೆ (entrepreneurship) ಎನ್ನುವುದು ‘ಇರುವ ಅವಕಾಶಗಳನ್ನು ಸಾಧ್ಯವಾದಷ್ಟು ಚೆನ್ನಾಗಿ ಬಳಸಿಕೊಳ್ಳುವ ಕಲೆ’. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಕ್ಕಾಗಲಿ ಅಥವಾ ಇರುವ ವ್ಯವಹಾರವನ್ನೇ ಯಶಸ್ವಿಯಾಗಿ ಮುನ್ನಡೆಸಲಿಕ್ಕಾಗಲಿ ಈ ಉದ್ಯಮ-ಶೀಲತೆಯ ಕೌಶಲ ಸಹಾಯಕವಾಗುತ್ತದೆ.

ಉದ್ಯಮಶೀಲತೆಯನ್ನು ವಿವರಿಸುವ ಪ್ರಮುಖ ಕೌಶಲಗಳನ್ನು ಸಾರವಾಗಿ ಹೇಳುವುದಾದರೆ, ಅದು ಈ ಕೆಳಕಂಡ ಸಾಮರ್ಥ್ಯಗಳ ಮೂಲಕ ವ್ಯಕ್ತವಾಗುತ್ತದೆ:

  • ಅನೇಕ ಹೊಸ ಉಪಾಯಗಳನ್ನು ಆವಿಷ್ಕರಿಸುವುದು.
  • ಅವಕಾಶಗಳನ್ನು ವಿಶ್ಲೇಶಿಸುವುದು, ಅಥವಾ ಉಪಾಯಗಳನ್ನು ವಿವೇಚಿಸಿ ಅತ್ಯಂತ ಸತ್ವಯುತವಾದುದು ಯಾವುದು ಎಂದು ಗುರುತಿಸುವುದು.
  • ಒಂದು ‘ಆದರ್ಶ-ವ್ಯವಹಾರ-ಪುತ್ಥಲಿ’ಯನ್ನು (business model) ಮುಂದಿಟ್ಟು ಪ್ರಾರಂಭ ಮಾಡುವ ಕುರಿತಾಗಿ ಯೋಜನೆ ಹೂಡುವುದು.
  • ಪ್ರಾರಂಭಿಸುವುದಕ್ಕಾಗಿ ಯಾವ ಸಂಪನ್ಮೂಲಗಳು ಬೇಕಾಗುತ್ತವೆ, ಅವುಗಳನ್ನು ಹೊಂದುವುದು ಹೇಗೆ, ಯಾವ ಮೂಲದಿಂದ ಅವು ಲಭ್ಯ, ಅದಕ್ಕೆ ಬೇಕಾದ ಹಣ ಹಾಗೂ ತತ್ಸಂಬಂಧಿತವಾದ ಕೌಶಲಗಳುಳ್ಳ ಜನರು ಯಾರು ಎಂಬುದನ್ನು ನಿರ್ಣಯಿಸುವುದು.
  • ಗ್ರಾಹಕನೊಬ್ಬನಿಗೆ ಏನನ್ನಾದರೂ ಮಾರುವುದು.

 

ವ್ಯವಹಾರವನ್ನು ಕಟ್ಟಿ, ಬೆಳೆಸುವಲ್ಲಿ ಇನ್ನೂ ಅನೇಕ ಕೌಶಲಗಳೂ, ಜ್ಞಾನೋಪಾಯಗಳೂ ಬೇಕಾಗುತ್ತವೆ ನಿಜ. ಆದರೆ ಇಲ್ಲಿ ಪ್ರಮುಖವಾದ ಕೆಲವು ಕೌಶಲಗಳ ಮೇಲೆ ಹೆಚ್ಚು ಗಮನ ಹರಿಸೋಣ. 

ಉದ್ಯಮಶೀಲತೆಯ ಕುರಿತಾಗಿ ಸ್ವಲ್ಪ ತಿಳುವಳಿಕೆ:

ಉದ್ಯಮ-ಶೀಲತೆಯ ಕುರಿತಾಗಿ ಕೇವಲ ಓದುವುದರಿಂದ ಅದನ್ನು ಕಲಿಯಲು ಸಾಧ್ಯವಿಲ್ಲ. ಉದ್ಯಮ-ಶೀಲತೆ ಎನ್ನುವುದು ಕ್ರೀಡೆಗಳಂತೆ- ಅದು ಅಭ್ಯಾಸದಿಂದ ಮಾತ್ರ ಉತ್ತಮವಾಗುತ್ತ ಸಾಗುತ್ತದೆ. ಆದ್ದರಿಂದ ೨ ಸರಳ ಅಭ್ಯಾಸಗಳನ್ನು ಇಲ್ಲಿ ಕೆಳಗೆ ಕೊಡಲಾಗಿದೆ. ಇದನ್ನು ನೀವು ಏಕಾಕಿಯಾಗಿ ಅಥವಾ ಸ್ನೇಹಿತರೊಂದಿಗೆ ತಂಡಕಟ್ಟಿಕೊಂಡು ಮಾಡಬಹುದು. ಮೊದಲ ಅಭ್ಯಾಸವು ಅನೇಕ ವ್ಯವಹಾರೋಪಾಯಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಹುಟ್ಟಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಎರಡನೆಯ ಅಭ್ಯಾಸವು ಒಂದು ವ್ಯವಹಾರವನ್ನು ಪ್ರಾರಂಭಿಸಲು ಬೇಕಾದ ಸರ್ವತೋಮುಖ ಅನುಭವವನ್ನು ಕೊಡುತ್ತದೆ.

ಅಭ್ಯಾಸ ವೃತ್ತಪತ್ರಿಕೆಯಿಂದ ಉಪಾಯಗಳು 

ಪರಿಚಯ:

ಒಂದು ಸಂಸ್ಥೆಯನ್ನು ಕಟ್ಟುವಾಗ ಪ್ರಾರಂಭದ ಪ್ರಕ್ರಿಯೆಯಲ್ಲಿ ಉದಯಿಸುವ ಅನೇಕ ಉಪಾಯಗಳ ಕುರಿತಾಗಿ ಈ ಅಭ್ಯಾಸವು ಒತ್ತು ಕೊಡುತ್ತದೆ- ಸಾಮಾನ್ಯವಾಗಿ ಈ ಕೌಶಲವನ್ನು ಉದಾಸೀನ ಮಾಡಲಾಗುತ್ತದೆ. ಆದರೆ ಕೆಲವೇ ಉಪಾಯಗಳು ಮಾತ್ರ ನಿಜಕ್ಕೂ ಉತ್ತಮ ವ್ಯವಹಾರ-ಅವಕಾಶಗಳು ಆಗಬಲ್ಲವು. ಆದ್ದರಿಂದ ಉದ್ಯಮಶೀಲನು ಅನೇಕ ಉಪಾಯಗಳನ್ನು ಉತ್ಪತ್ತಿಮಾಡಬೇಕಾಗುತ್ತದೆ.

ಉಪಾಯಗಳ ಆವಿಷ್ಕಾರ, ವ್ಯವಹಾರದ ಮೊದಲಲ್ಲಿ ಮಾತ್ರವಲ್ಲದೇ ವ್ಯವಹಾರ ನಿರ್ವಹಣೆಯ ಪ್ರಕ್ರಿಯೆಯ ಉದ್ದಕ್ಕೂ ಬೇಕಾಗುತ್ತದೆ. ಸಂಸ್ಥೆಗಳಲ್ಲಿ ಕಾರ್ಯ ಮಾಡುವಾಗ ಹಾಗೂ ಇತರ ಸಂದರ್ಭಗಳಲ್ಲೂ ಇದೊಂದು ವಿಮರ್ಶಾತ್ಮಕ ಕೌಶಲವಾಗಿ ಸಹಕರಿಸುತ್ತದೆ.

 

ಅಭ್ಯಾಸದ ಕಾರ್ಯರೂಪ: ನಿಮ್ಮಲ್ಲಿ ಎಷ್ಟು ಉಪಾಯಗಳಿವೆ?

೧. ನೀವು ಈ ಅಭ್ಯಾಸವನ್ನು ಏಕಾಕಿಯಾಗಿ ಮಾಡಬಹುದು. ಅಥವಾ ಗುಂಪಲ್ಲಿದ್ದಲ್ಲಿ, ೩-೫ ಜನರ ತಂಡಗಳನ್ನು ನಿರ್ಮಿಸಿಕೊಳ್ಳಿ. ಆ ತಂಡಗಳ ಮೂಲಕ ಕಾರ್ಯಗೈಯುವಂತೆ ಯೋಜನೆ ಮಾಡಿಕೊಳ್ಳಿ.

೨. ಒಂದು ಇತ್ತೀಚಿನ ವೃತ್ತಪತ್ರಿಕೆಯನ್ನು ತಂದುಕೊಳ್ಳಿ- ಸುಮಾರು ೮ ಪುಟಗಳಷ್ಟಿದ್ದರೆ ಚೆನ್ನ.

೩. ಕಾರ್ಯರೂಪಕ್ಕೆ ತರಲು ಸಾಧ್ಯವೆನಿಸುವಂತಹ ಹೊಸ ಹೊಸ ವ್ಯವಹಾರೋಪಾಯಗಳನ್ನು ೧೫ ನಿಮಿಷಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಂಡುಹಿಡಿಯಿರಿ. ಈ ಉಪಾಯಗಳಿಗೆ ನಿಮ್ಮ ಭಾಗದ ವೃತ್ತ ಪತ್ರಿಕೆಯಲ್ಲಿರುವ ಯಾವುದಾದರೂ ವಾರ್ತೆಯೇ ಸ್ಫೂರ್ತಿಯಾಗಿರಬೇಕು.

೪. ೧೫ ನಿಮಿಷಗಳ ಬಳಿಕ, ನಿಲ್ಲಿಸಿ, ಎಷ್ಟು ಉಪಾಯಗಳನ್ನು ಆವಿಷ್ಕಾರ ಮಾಡಿದಿರಿ ಎಂದು ಎಣಿಸಿ ನೋಡಿ. ಅದರಲ್ಲಿ ಆಯ್ಕೆ ಅಥವಾ ಪ್ರಾಮುಖ್ಯತೆಯ ಕ್ರಮವೇನೂ ಬೇಕಿಲ್ಲ. (ಇದು ಅವಕಾಶವನ್ನು ಗುರುತಿಸುವ ಹಂತವಲ್ಲ)

೫. ನಿಮ್ಮ ಪಟ್ಟಿ ತಯಾರಾದ ಮೇಲೆ, ಆ ಉಪಾಯಗಳನ್ನು ಪುನರವಲೋಕನ ಮಾಡಿ, ಆ ಎಲ್ಲ ಉಪಾಯಗಳ ಶೈಲಿಯಲ್ಲಿ ಯಾವುದಾದರೂ (ಗಮನೀಯ) ವಿನ್ಯಾಸವನ್ನು ಗುರುತಿಸಬಲ್ಲಿರಾ ನೋಡಿ.

ನಿಮ್ಮ ಉಪಾಯಗಳನ್ನು ಪುನರವಲೋಕಿಸಿ. ಆ ಉಪಾಯಗಳ ಮೂಲಭೂತ ಉದ್ದೇಶ-ಪ್ರವೃತ್ತಿಗಳನ್ನು ಆಧಾರವಾಗಿಟ್ಟುಕೊಂಡು ಅವಕಾಶವನ್ನು ನಿರ್ಮಾಣ ಮಾಡುವಂತಹ ರೀತಿಯಲ್ಲಿ ಅದನ್ನು ಕೆಳಕಂಡ ವಿಭಾಗಗಳಲ್ಲಿ ಜೋಡಿಸಿ:

  • ಗ್ರಾಹಕರ ಅಭಿರುಚಿ ಅಥವಾ ಖರ್ಚು-ವೆಚ್ಚಗಳ ಬದಲಾವಣೆಗೆ (consumer taste/ changes in expenditure) ಅನುಗುಣವಾಗಿ ಆದ ಉಪಾಯಗಳು.
  • ನಿಯಂತ್ರಿತ ವ್ಯತ್ಯಾಸಗಳಿಂದ (regulatory changes) ಸ್ಪೂರ್ತಿಗೊಂಡು ಉಂಟಾದ ಉಪಾಯಗಳು.
  • ತಂತ್ರಜ್ಞಾನದಿಂದ ಉಂಟಾದ ಬದಲಾವಣೆಗಳಿಂದ (changes in technology)  ಸ್ಪೂರ್ತಿಗೊಂಡ ಉಪಾಯಗಳು.

ಕೆಲವು ಉಪಾಯಗಳು ಒಂದಕ್ಕಿಂತ ಹೆಚ್ಚಿನ ವಿಭಾಗಗಳಲ್ಲಿ ಸೇರುವ ಸಾಧ್ಯತೆಗಳು ಖಂಡಿತ ಇವೆ. ಆದರೂ ಹೆಚ್ಚು ‘ಸಮಂಜಸ’ ಎನಿಸುವ ಅಥವಾ ‘ಮೂಲಕಾರಣ’ ಎನಿಸುವಂತಹ ವಿಭಾಗದಲ್ಲಿ ಅದನ್ನು ಸೇರಿಸಿ.

ನೆನಪಿರಲಿ- ಯಾವ ಉಪಾಯವೂ ಅರ್ಥಹೀನವಲ್ಲ. ಯಾವ ಉಪಾಯವೂ ಅಸಾಧ್ಯವಲ್ಲ.

ಕಲಿಕೆಯ ಉದ್ದೇಶಗಳು: ಈ ಅಭ್ಯಾಸದಿಂದ ನೀವು ಕಲಿಯಬೇಕಾದ ಪ್ರಧಾನವಾದ ಅಂಶಗಳು ಹೀಗಿವೆ:

  • ಉಪಾಯಗಳನ್ನು ಪಡೆಯಲು ನೀವು ಹೊರಜಗತ್ತನ್ನು ನೋಡಬೇಕೇ ಹೊರತು ನಿಮ್ಮನ್ನೇ ನೀವು ನೋಡಿದರೆ ಸಾಲದು. (ಆದ್ದರಿಂದಲೇ ನಿಮ್ಮದೇ ಸರಕಿನ ಉಪಾಯಗಳನ್ನು ಮುಂದಿಡುವುದಕ್ಕಿಂತ ‘ವೃತ್ತಪತ್ರಿಕೆಯ ಪ್ರೇರಣೆಯಿಂದ ಉಪಾಯಗಳನ್ನು ಆವಿಷ್ಕರಿಸಿ’ ಎಂದು ನಿರ್ದೇಶಿಸಿರುವುದು).
  • ಉಪಾಯದ ಆವಿಷ್ಕಾರಕ್ಕೆ ಸಂಬಂಧಿಸಿದಂತೆ ಶಿಸ್ತಿನಿಂದ ಇರಲು ಸಾಧ್ಯ, ಅಲ್ಲದೆ ಹೀಗೆಯೇ ಇರಬೇಕು ಕೂಡ. ತನ್ನನ್ನು ತಾನು ತರಬೇತಿಗೊಳಿಸಿಕೊಳ್ಳಬೇಕು. ಏಕೆಂದರೆ ಉಪಾಯಗಳ ಆವಿಷ್ಕಾರ ಎನ್ನುವುದು ಯಶಸ್ವೀ ಉದ್ಯಮಶೀಲತೆಗೆ ಬೇಕೇ ಬೇಕು.
  • ಪರಿಸರದಲ್ಲಿನ ಬದಲಾವಣೆಗಳು ಉಪಾಯಗಳನ್ನು ಪ್ರೇರೇಪಿಸಬೇಕು. ಏಕೆಂದರೆ ಬದಲಾವಣೆಗಳೇ ಉದ್ಯಮಶೀಲತೆಗೆ ಅವಕಾಶಗಳನ್ನು ಕಲ್ಪಿಸುತ್ತವೆ ಮತ್ತು ಈ ಕ್ಷೇತ್ರವನ್ನು ಹೊಸದಾಗಿ ಪ್ರವೇಶಿಸಿದವರಿಗೆ ಹೆಚ್ಚು ಅವಕಾಶಗಳನ್ನು ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತದೆ. ಈಗಾಗಲೇ ವ್ಯವಸ್ಥಿತವಾಗಿ ಸ್ಥಾಪಿತವಾದ ಸಂಸ್ಥೆಗಳಿಗೆ ಬಂಡವಾಳ ಕ್ಷೇತ್ರದಲ್ಲಿ, ವಿಶ್ವಾಸಾರ್ಹತೆ ಅಥವಾ ಇನ್ನಿತರ ಅಂಶಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅನುಕೂಲಗಳು ಇದ್ದರೂ, ಪರಿಸ್ಥಿತಿಗಳಲ್ಲಿ ಬದಲಾವಣೆಗಳು ಉಂಟಾದಾಗ ಅದೇ ವೇಳೆಗೆ ಈಗಾಗಲೇ ವ್ಯವಹಾರದಲ್ಲಿ ಆಸ್ತಿಗಳ ಮೇಲೆ ಹೂಡಿರುವ ಬಂಡವಾಳ, ಮಾನವ ಸಂಪನ್ಮೂಲ ಮತ್ತು ರೂಢಿಯಾಗಿರುವ ವ್ಯವಹಾರಶೈಲಿಗಳೇ ಅವರ ಪಾಲಿಗೆ ತೊಡಕಾಗುವ ಸಾಧ್ಯತೆಗಳೂ ಇವೆ.
  • ‘ತಾಂತ್ರಿಕ ಬದಲಾವಣೆಗಳು’, ‘ನಿಯಂತ್ರಿತ ಬದಲಾವಣೆಗಳು’ ಅಥವಾ ‘ಗ್ರಾಹಕ ಅಭಿರುಚಿ/ ಖರ್ಚುವೆಚ್ಚಗಳಿಗೆ ಸಂಬಂಧಿಸಿದ ಬದಲಾವಣೆಗಳು’ ಮುಂತಾದ ನಿರ್ದಿಷ್ಟವೂ ಪ್ರಮುಖವೂ ಆದ ಬದಲಾವಣೆಯ ಕ್ಷೇತ್ರಗಳ ಕುರಿತಾಗಿ ಅರಿವು ಇರಲೇಬೇಕು.
  • (ಗಮನಿಸಿ: ವಿವಿಧ ಉಪಾಯಗಳ ವಿವರಗಳೊಳಕ್ಕೆ ಇಳಿದು ನೋಡಲು ಬೇರೊಂದು ಶೈಲಿಯೇ ಇದೆಯಾದರೂ ಇಲ್ಲಿ ಅದನ್ನು ನಾವು ವಿಸ್ತರಿಸುತ್ತಿಲ್ಲ).

ಎಲ್ಲ ಉಪಾಯಗಳೂ ನಿರ್ಣಯಕ್ಕೆ ಕೊಂಡೊಯ್ಯುವ ಉತ್ತಮ ಉಪಾಯಗಳೇನಲ್ಲ- ೧) ಬಹಳ ಉಪಾಯಗಳು ಹೊಳೆಯುವುದು ತುಂಬ ಮುಖ್ಯ. ೨) ‘ಆ ಉಪಾಯಗಳು ನಿಜಕ್ಕೂ ಅವಕಾಶಗಳಾಗಬಲ್ಲವೇ?’ ಎಂದು ವಿಮರ್ಶಿಸುವ ಸಾಮರ್ಥ್ಯವಿರಬೇಕು. (ವ್ಯತ್ಯಾಸವನ್ನು ಗುರುತಿಸುವ ಕೀಲಿಕೈ: ಉಪಾಯ Vs ಅವಕಾಶ) ಗಮನಿಸಿ: ಈ ಅಭ್ಯಾಸವು ಕೇವಲ ಉಪಾಯಗಳ ಆವಿಷ್ಕಾರಕ್ಕಷ್ಟೇ ಸೀಮಿತ, ಅವಕಾಶಗಳ ವಿಮರ್ಶೆಯ ವಲಯದವರೆಗೂ ಇನ್ನೂ ಮುಂದುವರೆದಿಲ್ಲ.

ಬೇಕಾದ ಸಮಯ:

  • ಪ್ರಾರಂಭಗೈಯಲು ೫ ನಿಮಿಷಗಳು
  • ಉಪಾಯಗಳ ಉತ್ಪತ್ತಿಗೆ ೧೫ ನಿಮಿಷಗಳು
  • ಪುನರವಲೋಕನ ಹಾಗೂ ಉದ್ದೇಶಗಳನ್ನು ವಿಚಾರಿಸುವುದಕ್ಕೆ ೧೫ ನಿಮಿಷಗಳು
  • ಒಟ್ಟು ಸಮಯ: ೩೫ ನಿಮಿಷಗಳು

ಅಭ್ಯಾಸ : ೫೦ ರೂಪಾಯಿ ವ್ಯವಹಾರ 

ಮೂಲ ಕೊಡುಗೆ:

ಡಾ ಟೀನಾ ಸೀಲಿಗ್, ಕಾರ್ಯನಿರ್ವಾಹಕ ನಿರ್ದೇಶಕರು, ಎಸ್ ಟಿ ವಿ ಪಿ, ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾಲಯ, ಸಿಎ, ಯೂ ಎಸ್ ಎ.

ಅಳವಡಿಸಿಕೊಂಡವರು:

ಡಾ. ಗಾಯತ್ರೀ ಸಾಬೆರ್ವಾಲ್, ವಿಜ್ಞಾನಿ-ತಜ್ಞರು, IBAB, ಭೆಂಗಳೂರು, ಭಾರತ ಮತ್ತು ಲಾರಾ ಪಾರ್ಕಿನ್, NEN

ಪರಿಚಯ:

ಒಂದು ವ್ಯವಹಾರವನ್ನು ಪ್ರಾರಂಭಿಸಲು ಬೇಕಾದ ಎಲ್ಲ ಕೌಶಲಗಳನ್ನೂ ಅಲ್ಪ ಸಮಯಾವಕಾಶದಲ್ಲೇ ಅಭ್ಯಾಸ ಮಾಡಲು ಈ ‘೫೦ ರೂಪಾಯಿ ವ್ಯವಹಾರ’ದ ಅಭ್ಯಾಸ ಸಹಾಯ ಮಾಡುತ್ತದೆ. ಹೇಗೆ? ಈ ಅಭ್ಯಾಸದ ಪ್ರಕಾರ ಮೊದಲು ನೀವು ವ್ಯವಹಾರವೊಂದನ್ನು ಪ್ರಾರಂಭಿಸಬೇಕು.

 

ಒಂದಷ್ಟು ಕೌಶಲಗಳನ್ನು ಹೊಂದಿರುವುದಲ್ಲದೆ, ಕೆಲವು ಮೂಲಭೂತ ಪೂರ್ವಗ್ರಹಗಳನ್ನು, ಹೊಸದನ್ನು ಪ್ರಯೋಗಿಸಲು ಹಿಂಜರಿಯುವ ಮನೋಭಾವವನ್ನು, ಅಪರಿಚಿತರನ್ನು ಬಳಿಸಾರಿ ತನ್ನ ವಸ್ತುವನ್ನು ಮಾರಾಟ ಮಾಡಲು ಮುಜುಗರ ಪಡುವ ಬುದ್ಧಿಯನ್ನೂ ಹಾಗೂ ‘ತನ್ನದೇ ಉಪಾಯದಿಂದ ಹಣ ಸಂಪಾದನೆ ಮಾಡಬೇಕಾಗುತ್ತದಲ್ಲಾ’ ಎನ್ನುವ ಅಸುರಕ್ಷೆಯ ಭಾವ, ಭಯ, ಇತ್ಯಾದಿಗಳನ್ನು ಗೆಲ್ಲಬೇಕಾಗುತ್ತದೆ. ಈ ೫೦ ರೂಪಾಯಿಯ ಸಾಹಸವು ನಿಮಗೆ ನಿಮ್ಮ ಕೌಶಲಗಳನ್ನು ಪ್ರಯೋಗಿಸುವ ಅವಕಾಶವನ್ನು ಒದಗಿಸುವುದಲ್ಲದೆ ನಿಮ್ಮಲ್ಲಿರಬಹುದಾದ ಈ ಪೂರ್ವಗ್ರಹ ತೊಡಕುಗಳನ್ನು ಗೆಲ್ಲಲು ಸಹಕರಿಸುತ್ತದೆ.

ಅಭ್ಯಾಸದ ಕಾರ್ಯರೂಪ: ನೀವೆಷ್ಟು ಹಣವನ್ನು ಸಂಪಾದಿಸಬಲ್ಲಿರಿ?

 

೧. ಏಕಾಕಿಯಾಗಿ, ಅಥವಾ ಒಂದಿಬ್ಬರು-ಮೂವರು ಸ್ನೇಹಿತರ ಜೊತೆಯಲ್ಲಿ ಅಥವಾ ದೊದ್ದ ಗುಂಪಿನಲ್ಲಿ ಇರುವಾಗ ತಲಾ ೩ ಜನರ ತಂಡಗಳನ್ನು ಕಟ್ಟಿಕೊಂಡು ಈ ಅಭ್ಯಾಸವನ್ನು ನೀವು ಮಾಡಬಹುದು. ಒಂದೊಂದು ತಂಡವೂ ಒಂದು ವ್ಯವಹಾರವನ್ನು ಪ್ರಾರಂಭಿಸಬೇಕು.

೨. ಈ ಅಭ್ಯಾಸದ ಪ್ರಕಾರ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕು, ಒಂದು ವಸ್ತುವನ್ನು ಮಾರಾಟ ಮಾಡಬೇಕು/ ಸೇವೆಗಳನ್ನು ಒದಗಿಸಬೇಕು, ಕೊನೆಯಲ್ಲಿ ಎಷ್ಟು ಗಳಿಕೆ ಆಯಿತು ಎಂದು ಗಣನೆ ಮಾಡಬೇಕು.

ಅಭ್ಯಾಸದ ನಿಯಮಗಳು:

೩. ನೀವು ಅಥವಾ ನಿಮ್ಮ ತಂಡ ಕೇವಲ ೫೦ ರೂಪಾಯಿಯನ್ನು ಬಂಡವಾಳವಾಗಿ ಹೂಡಬಹುದು. ಈ ಹಣದಿಂದ ಅಗತ್ಯಗಳನ್ನು ಕೊಂಡುಕೊಳ್ಳಲು ಅಥವಾ ಪ್ರಯಾಣ-ಓಡಾಟದ ಖರ್ಚಿಗೆ ಬಳಸಬಹುದು. ೫೦ ರೂಪಾಯಿಗಿಂತ ಹೆಚ್ಚು ಹಣವನ್ನು ಹೂಡುವಂತಿಲ್ಲ. ನಿಮಗೆ ದಾನವಾಗಿ ಬಂದ ಅಥವಾ ಅದಾಗಲೇ ಕೈಯಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

೪. ನೀವು ಅಭ್ಯಾಸದ ಅವಧಿಯನ್ನು ೧ ದಿನ ಅಥವಾ ೩ ದಿನದಷ್ಟು ಎಂದು ನಿಗದಿಪಡಿಸಿಕೊಳ್ಳಬಹುದು.

೫. ನಿಮ್ಮ ಮೊದಲ ಉಪಾಯ ಸಫಲವಾಗದಿದ್ದಲ್ಲಿ ನೀವು ಕೈಬಿಡುವಂತಿಲ್ಲ. ಬೇಕಾದರೆ ಆ ಉಪಾಯವನ್ನು ತ್ಯಜಿಸಿ ಬೇರೊಂದನ್ನು ಪ್ರಯತ್ನಿಸಬಹುದು – ಹೆಚ್ಚಿನ ವ್ಯವಹಾರಶೀಲರಿಗೆ ಮೊದಮೊದಲ ಉಪಾಯಗಳು ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಬೇಕಿದ್ದರೆ ಯೋಜನೆ a, ಯೋಜನೆ b, ಯೋಜನೆ c ಗೆ ನೆಗೆಯಬಹುದು.

೬. ಯಾವುದೂ ಅಕ್ರಮವಲ್ಲ!

 

ಸಮಯವನ್ನು ಪೂರ್ವಸಂಯೋಜನೆ ಮಾಡಿಕೊಳ್ಳುವುದು:

೭. ಅಭ್ಯಾಸದ ಕಾಲದಲ್ಲಿ ಈ ಕೆಳಕಂಡ ವಿಷಯಗಳಿಗೆ ಸಮಯಾವಕಾಶವನ್ನು ಒದಗಿಸಿಕೊಳ್ಳಬೇಕು.

. ವ್ಯವಹಾರಕ್ಕಾಗಿ ಉಪಾಯಗಳ ಮಂಥನ ಮಾಡುವುದು.

ನಿಮ್ಮ ಸುತ್ತಲಿನ ಜನರಲ್ಲಿ ಯಾವ ಅಗತ್ಯಗಳು ಅಥವಾ ಸಮಸ್ಯೆಗಳು ಕಾಣಬರುತ್ತಿವೆ? ನೀವು ನಿಮ್ಮ ಯಾವ ಪ್ರತಿಭೆ ಅಥವಾ ಕೌಶಲಗಳನ್ನು ಪ್ರದರ್ಶಿಸಬಲ್ಲಿರಿ? ಸಾಧ್ಯವಾದಷ್ಟು ಉಪಾಯಗಳನ್ನು ಆವಿಷ್ಕರಿಸಿ.

. ‘ಪ್ರಯೋಗಕ್ಕೆ ಯಾವ ಉಪಾಯವು ಅರ್ಹಎಂದು ವಿಮರ್ಶಿಸುವುದು:

  • ಯೋಗ್ಯ ಗ್ರಾಹಕನ ದೊಡ್ಡ ಅಗತ್ಯಗಳನ್ನು ಪೂರೈಸಬಲ್ಲಂತಹ ಉಪಾಯ ಯಾವುದಾದರೂ ಇದೆಯೆ?
  • ನಿಮ್ಮ ಕೌಶಲಗಳನ್ನು ಹಾಗೂ ಜ್ಞಾನವನ್ನು ಬಳಸಲು ಹೆಚ್ಚಿನ ಅನುಕೂಲವೊದಗಿಸುವ ಉಪಾಯವುಂಟೆ?
  • ಯೋಗ್ಯ ಗ್ರಾಹಕರನ್ನು ನೀವು ತಲುಪಬಲ್ಲಿರೇನು?
  • ನಿಮ್ಮ ಉಪಾಯವನ್ನು ಪ್ರಯೋಗಿಸಲು ನಿಮಗೆ ಸಾಕಷ್ಟು ಸಮಯವಿದೆಯೆ? ಈ ಉಪಾಯ ಫಲಿಸದಿದ್ದಲ್ಲಿ ಮತ್ತೊಂದು ಉಪಾಯವನ್ನು ಪ್ರಯೋಗಿಸಲು ಸಾಧ್ಯವೆ?

. ಪ್ರಾರಂಭ ಮಾಡುವುದು:

ನಿಮ್ಮ ವ್ಯಾಪಾರದ ‘ವಸ್ತು’ ಅಥವಾ ‘ಸೇವೆ’ಯನ್ನು ಸಿದ್ಧಪಡಿಸಿಕೊಂಡು ಯೋಗ್ಯ ಗ್ರಾಹಕರನ್ನು ಸಂಪರ್ಕಿಸಲು ಪ್ರಾರಂಭಿಸಿ.

. ನೀವು ಏನನ್ನು ಕಲಿತಿರಿ ಎನ್ನುವುದನ್ನು ವಿವೇಚಿಸಿ:

ನಿಗದಿತ ಸಮಯ ಮುಗಿದ ಬಳಿಕ ಸ್ವಲ್ಪ ನಿಂತು, ನೀವು ಗಳಿಸಿದ ಹಣವನ್ನು ಎಣಿಸಿಕೊಳ್ಳಿ. ನೀವು ಏನನ್ನಾದರು ಗಳಿಸಿದ್ದೀರೇನು? ಅದರ ಮೇಲೆ ಏನಾದರೂ ಲಾಭ ದಕ್ಕಿತೆ? ಅಥವಾ ನಿಮ್ಮ ಆ ೫೦/- ರೂಪಾಯಿಗಳನ್ನು ಕಳೆದುಕೊಂಡಿರೇನು?

ನೀವು ಇದೆಲ್ಲದರಿಂದ ‘ಮುಖ್ಯವಾಗಿ’ ಏನನ್ನು ಕಲಿತಿರಿ ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳುವುದೇ ಪ್ರಮುಖ ವಿಚಾರ- ಅದನ್ನು ನೀವು ನಿರೀಕ್ಷಿಸಿಯೇ ಇಲ್ಲದಿರಬಹುದು.

ಕಲಿಕೆಯ ಉದ್ದೇಶಗಳು:

ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಈ ಅಭ್ಯಾಸವನ್ನು ಪ್ರಯೋಗಿಸಿದ್ದಾರೆ. ಬೆಂಗಳೂರಿನಲ್ಲಿನ IBAB ಎನ್ನುವ ಒಂದು (bio-informatics institute) ಸಂಸ್ಥೆಯ ವಿದ್ಯಾರ್ಥಿಗಳಂತೂ ಎಲ್ಲರೂ ವಿಜ್ಞಾನಿಗಳೇ ಆಗಿದ್ದರು. ಆದರೆ ಹೊಸ ವ್ಯವಹಾರವನ್ನು ಪ್ರಾರಂಭಿಸುವ ವಿಷಯದಲ್ಲಿ ತುಂಬ ಅಂಜಿಕೆಯಿಂದ ಕೂಡಿದ್ದರು.

ಆ ೫೦ ರೂಪಾಯಿಗಳಿಂದ ಅವರೇನನ್ನು ಗಳಿಸಿದರು ಎನುವುದನ್ನು ಗಮನಿಸುವುದು ಸ್ವಾರಸ್ಯಕರ.

IBAB ಸಂಸ್ಥೆಯ ವಿದ್ಯಾರ್ಥಿಗಳ ಕೆಲವು ಹೇಳಿಕೆಗಳನ್ನು ಗಮನಿಸಿ:

  • “ಉದ್ಯಮಶೀಲನಿಗೆ ಪ್ರಮುಖವಾಗಿ ಬೇಕಾಗಿರುವುದು ಸಮಯಸ್ಫೂರ್ತಿ. (presence of mind)”
  • “ಒಂದು ಪ್ರಯೋಗವನ್ನು ಯಶಸ್ವಿಗೊಳಿಸುವುದರಲ್ಲಿ ತಂಡಕಾರ್ಯ ಸಹಾಯಕವಾಗುತ್ತದೆ.”
  • “ನೀವು ಸಾಧ್ಯತೆಗಳನ್ನು ಸಂಶೋಧಿಸುತ್ತ ಹೋದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಅನೇಕ ಮಾರ್ಗಗಳು ಸಿಗುತ್ತವೆ.”
  • “ಎಷ್ಟು ಶ್ರಮ, ಸಮಯ ಹಾಗೂ ಹಣವನ್ನು ಹೂಡಬೇಕು ಎನ್ನುವುದನ್ನು ಪೂರ್ವಸಂಯೋಜನೆ ಮಾಡಿಕೊಳ್ಳುವುದು ತುಂಬ ಮುಖ್ಯ.”
  • “ವ್ಯವಹಾರವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಮಾರುಕಟ್ಟೆ ಎಷ್ಟಿದೆ ಎನ್ನುವುದನ್ನು ಅಧ್ಯಯನ ಮಾಡುವುದು ಮುಖ್ಯ. ನಾವು ‘ಎಲ್ಲಿ ತಲುಪಿದ್ದೇವೆ’ ಎನ್ನುವುದು ಈಗ ಗೊತ್ತಾಗಿದೆ, ಲಾಭ ಗಳಿಸಲು ಏನೆಲ್ಲ ಮಾಡಬೇಕಾಗುತ್ತದೆ ಎನ್ನುವುದು ಈಗ ಅರಿವಾಗಿದೆ”.

  • “ಮಾರುಕಟ್ಟೆಯಲ್ಲಿ ವಸ್ತುವಿನ ‘ಗುಣಮಟ್ಟ’ವೇ ತುಂಬ ಗಮನಯೋಗ್ಯ ವಿಚಾರ.”
  • “ಗ್ರಾಹಕ ಏನನ್ನು ಹೇಳುತ್ತಿದ್ದಾನೆ ಎನ್ನುವುದನ್ನು ನಾವು ಕೇಳಿಸಿಕೊಳ್ಳಬೇಕು.”
  • “ನಿಮ್ಮ ಸಾಮಾಜಿಕ ಸಂಬಂಧಗಳ ವಲಯವು ವಿಶ್ವಾಸ ಸಂಪಾದನೆಯಲ್ಲಿ ಸಹಾಯಕವಾಗುತ್ತದೆ”.
  • “ಗ್ರಾಹಕರ ಅಗತ್ಯಗಳನ್ನು ಪೂರೈಸಲು ಶಕ್ತವಾದಲ್ಲಿ ನಿಮ್ಮ ಯಾವುದೇ ಉಪಾಯ ‘ಸೃಜನಶೀಲ’ ಎನಿಸುತ್ತದೆ.
  • “ಈ ಸಮಗ್ರ ಅಭ್ಯಾಸದಿಂದ ನಾನು ಆತ್ಮವಿಶ್ವಾಸವನ್ನು ಪಡೆದುಕೊಂಡೆ.”
  • “ಸೇವಾ-ಉದ್ಯಮಗಳ ವಿಷಯದಲ್ಲಂತೂ ಗ್ರಾಹಕರ ಸಂತೃಪ್ತಿಯೇ ಅತ್ಯಂತ ಮುಖ್ಯವಾದದ್ದು”.
  • “ಅನುಭವ ಹಾಗೂ ಪ್ರಯೋಗಗಳಿಂದ ಬೇಗ ಕಲಿಯಬೇಕು ಹಾಗೂ ಕಲಿಕೆಯನ್ನು ತಪ್ಪದೆ ತಕ್ಷಣವೇ ಕಾರ್ಯಗತಗೊಳಿಸಬೇಕು.”
  • “ನಾವು ಬದಲಾವಣೆಗೆ ತೆರೆದುಕೊಂಡಿರಬೇಕು (ಸಿದ್ಧರಿರಬೇಕು) ಹಾಗೂ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು.”

ಈ ಅಭ್ಯಾಸದಿಂದ ನಿಮ್ಮ ಅನುಭವ ಹಾಗೂ ಕಲಿಕೆಗಳು ಹೇಗಿದ್ದವು? IBAB ವಿದ್ಯಾರ್ಥಿಗಳ ಅನುಭವಗಳೊಂದಿಗೆ ಹೋಲಿಸಿಕೊಂಡಾಗ ಹೇಗನಿಸುತ್ತದೆ?

ಉತ್ತರಗಳು

a) ವಿ ಜಿ ಸಿದ್ಧಾರ್ಥ್ (ಕಾಫೀ ಡೇ)

b) ಕ್ಯಾಪ್ಟೆನ್ ಜಿ ಆರ್ ಗೋಪೀನಾಥ್ (ಡೆಕ್ಕನ್ ಏರ್ ವೇಸ್)

c) ಕಿರನ್ ಮಜುಮ್ದಾರ್ (ಬಯೋಕಾನ್)

d) ನಾರಾಯಣಮೂರ್ತಿ (ಇನ್ಫೋಸಿಸ್)

e) ಕರ್ಶನ್ ಭಾಯ್ ಪಟೇಲ್ (ನಿರ್ಮಾ ಡಿಟರ್ಜೆಂಟ್ಸ್)

ಗ್ರಂಥ ಮೂಲ:

Zero to One Million by Ryan P. M. Allis

The Young Entrepreneur’s Guide to Starting and Running a Business by Steve Mariotti

Multiple Streams of Income by Robert G. Allen

ಅಂತರ್ಜಾಲ ಮೂಲ:

http://www.nenonline.org

http://www.ediindia.org

.