ಅಡಿಕೆ ಹಂಗಾಮು ಮಲೆನಾಡಿನಾದ್ಯಂತ ಶುರುವಾಗಿದೆ. ‘ಅನುರಾಧಾ ನಕ್ಷತ್ರದಲ್ಲಿ ಮಳೆ ಸುರಿದರೆ ಅನುಗಾಲವೂ ಮಳೆ’ ಎಂಬ ಮಾತು ನಿಜವಾಗಬಹುದೆಂದು ಆಗಸ ನೋಡುತ್ತ ಕೊಯ್ಲಿನ ಕೆಲಸ ನಡೆದಿದೆ. ಡಿಸೆಂಬರ್‌ದಲ್ಲೂ ಮಳೆ ಸುರಿಯುವ ಭಯದಲ್ಲಿ  ಕೆಲಸದ ಒತ್ತಡ ಹೆಚ್ಚಿದೆ. ಮನೆಯಂಗಳದಲ್ಲಿ ಅಡಿಕೆ ಸುಲಿತ, ಸಂಸ್ಕರಣೆ ನಡೆಸಿದ್ದ ಕುಟುಂಬಗಳು ಕೂಲಿಬರದಿಂದ ತತ್ತರಿಸಿವೆ. ತೋಟದಿಂದ ಮನೆಯಂಗಳಕ್ಕೆ ಬರುತ್ತಿದ್ದ ಫಸಲು ಸೀದಾ ಕೂಲಿಕಾರರ ಮನೆಯಂಗಳಕ್ಕೆ ಸಾಗಿದೆ!. ಒಂದು ಕಾಲಕ್ಕೆ ಶಿವಮೊಗ್ಗ, ಚಿಕ್ಕಮಂಗಳೂರಿನಲ್ಲಿ ಆರಂಭವಾದ ಫಸಲು ಗುತ್ತಿಗೆ ಈಗ ಅಡಿಕೆ ಬೆಳೆಯುವ ಎಲ್ಲ ಪ್ರದೇಶ ವ್ಯಾಪಿಸಿ ದೊಡ್ಡ ಉದ್ಯಮ ಸ್ವರೂಪ ಪಡೆದಿದೆ. ಸಂಸ್ಕರಣೆಯ ಸಂಭ್ರಮವಿರುತ್ತಿದ್ದ ನೆಲೆಯಲ್ಲಿ ಹಣಕಾಸಿನ ವಹಿವಾಟು ಮಾತ್ರ ಉಳಿದಿದೆ. ದಿನಗೂಲಿಗೆ ೬೦-೭೦ರೂಪಾಯಿ ನೀಡುತ್ತಿದ್ದಲ್ಲಿ ಈಗ ೧೫೦-೨೦೦ರೂಪಾಯಿ ನೀಡಿದರೂ ಕೆಲಸಗಾರರು ಸಿಗುತ್ತಿಲ್ಲ!. ಹಣ ನೀಡಿದರೂ ಕೆಲಸದ ಕ್ಷಮತೆ ಉಳಿದಿಲ್ಲ.

ಕೂಲಿಯಾಳಿನ ದಾರಿ ಪ್ರತಿನಿತ್ಯ ಬದಲಾಗುತ್ತಿದೆ, ಹೆಚ್ಚು ಹಣ ನೀಡಿದವರ ಜಮೀನಿಗೆ ಕೆಲಸಕ್ಕೆ ಹೋಗುವ ಉತ್ಸಾಹ ಸಹಜವಾಗಿದೆ. ನಂಬಿಗೆ, ಪ್ರೀತಿ, ವಿಶ್ವಾಸಗಳು ಹರಾಜಾಗಿವೆ. ಅಡಿಕೆ ಕೊಯ್ದು ಬೇಗ ಮುಗಿಸಿ ಸಂಸ್ಕರಿಸಿ ಮಾರುಕಟ್ಟೆಗೆ ಕಳಿಸುವವರಲ್ಲಿ ಷೇರು ಮಾರುಕಟ್ಟೆ ತರಾತುರಿಯಿದೆ. ಫಸಲು ಗುತ್ತಿಗೆದಾರರು ಹೆಚ್ಚು ಹಣ, ಬಾಡೂಟ ಸೇರಿದಂತೆ ವಿವಿಧ ಆಮಿಷ ನೀಡಿ ಕೂಲಿಕಾರರನ್ನು  ಸೆಳೆಯುವ ತಂತ್ರಗಳಿಂದ ಊರು ನಂಬಿದ ಇಡೀ ಕೃಷಿ ವ್ಯವಸ್ಥೆ ಮತ್ತೆ ಸುಧಾರಿಸಲಾಗದಷ್ಟು ಹದಗೆಟ್ಟಿದೆ. ಯಾವ ವ್ಯಕ್ತಿ ಎಷ್ಟು ಸಮಯಕ್ಕೆ ಏಲ್ಲಿಗೆ ಕೆಲಸಕ್ಕೆ ಹೋಗುತ್ತಾನೆಂದು ಊಹಿಸಲೂ ಸಾಧ್ಯವಿಲ್ಲ! ಮುಂಜಾನೆ ಮನೆ ಬಾಗಿಲಿನಿಂದ ವಾಹನದಲ್ಲಿ ಕರೆದೊಯ್ದು ತುರ್ತು ಕೆಲಸ ನಿರ್ವಹಿಸುವ ಗಡಿಬಿಡಿ ಕಾಣುತ್ತಿದೆ. ಮದುವೆ ದಿಬ್ಬಣದ ಭರಾಟೆಯಲ್ಲಿ ಕೆಲಸದ ತಂಡ ಹೊರಟಿದೆ. ಮುಂಗಡ ಹಣ, ಅನಾರೋಗ್ಯದಲ್ಲಿ ನೆರವು, ತುರ್ತು ಸಂದರ್ಭಗಳ ಸ್ಥಳೀಯ ಸಹಾಯಗಳನ್ನು ಮರೆತು ಓಟ ನಡೆದಿದೆ. ಈ ತುಟ್ಟಿ ದಿನಗಳಲ್ಲಿ ಹೆಚ್ಚು ಹಣ ಗಳಿಸುವ ಸಹಜ ಆಸೆ ಮನಸ್ಸುಗಳನ್ನು ಕದಡಿದೆ. ಊರು ಎಂಬ ಒಂದು ಹೆಸರು ನೆಪಮಾತ್ರ, ಅದು ಹಲವು ಮನೆಗಳ ಸಮೂಹ ಅಷ್ಟೇ! ಪರಸ್ಪರ ಕೂಡಿ ಬದುಕಿದ ಕ್ಷಣ ಹಳಸಿವೆ.

ಮಧ್ಯರಾತ್ರಿ ನಿರ್ಜನವಾಗುತ್ತಿದ್ದ ಮಲೆನಾಡಿನ ರಸ್ತೆಗಳ ರಂಗು ಬದಲಾಗಿದೆ. ಅಡಿಕೆ ಸಾಗಾಟ, ರಾತ್ರಿ ಸುಲಿತ, ಕೂಲಿಯಾಳುಗಳನ್ನು ಮನೆಗೆ ಕಳಿಸುವ ವಾಹನಗಳ ಓಡಾಟ ಚಾಲೂ ಇದೆ. ನಿತ್ಯ ೫೦-೧೦೦ಕಿಲೋ ಮೀಟರ್ ವಾಹನಗಳಲ್ಲಿ ಹೋಗಿ ಕೃಷಿ ಕೆಲಸ ಮಾಡುವವರಿದ್ದಾರೆ! ಇಂದು ಕೆಲಸದವರು ಬರಬಹುದು, ನಾಳೆ ಬರಬಹುದೆಂದು ನಂಬಿದ ಕೂಲಿಕಾರರನ್ನು  ಹುಡುಕಿ ಅಲೆಯುವ ಕೃಷಿಕರಂತೂ ಮಾನಸಿಕ ಒತ್ತಡದಲ್ಲಿ ಬಳಲಿದ್ದಾರೆ. ದೂರದ ದುಬೈ ಕುಸಿತವನ್ನು ಮಾಧ್ಯಮದಲ್ಲಿ ನೋಡಿ ಅಚ್ಚರಿ ಪಟ್ಟವರಲ್ಲಿ ಈಗ ಅಡಿಕೆ ನಾಡಿನ ಕುಸಿತ ಕಂಗಾಲು ಮಾಡಿದೆ. ವಾರದಿಂದ ವಾರಕ್ಕೆ ಸಮಸ್ಯೆಯ ಹೊಸ ಹೊಸ ಮುಖ ದರ್ಶನವಾಗುತ್ತಿದೆ. ಪರಿಹಾರದ ದಾರಿ ಹುಡುಕಲಾರದಷ್ಟು ಮನಸ್ಥಿತಿ ಕುಗ್ಗಿದೆ.

ಕೃಷಿಕ ಕುಟುಂಬಗಳಲ್ಲಿ ದುಡಿಯುವ ಮಂದಿ  ಕಡಿಮೆಯಾಗಿರುವದು ಸಮಸ್ಯೆಯ ಮೂಲ. ಸ್ವತಃ ಕೆಲಸ ಮಾಡದ ನಾವು ಎಲ್ಲದಕ್ಕೂ ಕೂಲಿಕಾರರನ್ನು  ಅವಲಂಬಿಸಿದ್ದೇವೆ! ಹಳ್ಳಿಯಲ್ಲಿ ಕೃಷಿ ನಂಬಿದ ಕುಟುಂಬಗಳು ಪರಸ್ಪರ ಸಹಕಾರದಿಂದ ಕೆಲಸದ ಸಮಸ್ಯೆ ಹೇಗೆ ಬಗೆಹರಿಸಬೇಕೆಂದು ಚಿಂತಿಸಬೇಕು, ಹಳೆಯ ದ್ವೇಷ ಮರೆತು ಎಲ್ಲ ಊರು ಕಟ್ಟುವ, ಕೃಷಿ ಬೆಳೆಸುವ ಕೆಲಸ ಪುನರಾರಂಭಿಸಬೇಕು. ದಿನದ ನಾಲ್ಕೇ ನಾಲ್ಕು ತಾಸು ಊರಿನ ಹತ್ತಾರು ಯುವಕರು ‘ಮುರಿಯಾಳು ಪದ್ದತಿ’ ಅನುಸರಿಸಿ ಕೆಲಸ ನಿರ್ವಹಿಸುವ ದಾರಿ ಹುಡುಕಿದರೆ ಹೂವು ಎತ್ತಿಟ್ಟಷ್ಟು ಸರಳವಾಗಿ ಸಮಸ್ಯೆ ಬಗೆಹರಿಯುತ್ತದೆ. ಪಂಚಾಯಿತಿಕಟ್ಟೆ, ಹಾಲುಡೇರಿ, ಸುದ್ದಿಕಟ್ಟೆಗಳಲ್ಲಿ ದಿನವಿಡೀ ಸಮಯ ಹಾಳುಮಾಡುವವರು ಬಿಕ್ಕಟ್ಟಿನ ಈ ಸ್ಥಿತಿಯಲ್ಲಿ ಸಮಯದ ಬೆಲೆ ಅರ್ಥಮಾಡಿಕೊಳ್ಳಬೇಕು. ಮುಂಜಾನೆ ಬೇಗ ಎದ್ದು ತಮ್ಮ ಕೈಯಲ್ಲಿ ಸಾಧ್ಯವಾದ ಕೃಷಿ ಕೆಲಸ ಶುರುಮಾಡಬೇಕು. ಮಣ್ಣು ಮುಟ್ಟುವುದು, ಬೆವರಿಳಿಸುವದು, ಭಾರಹೊರುವದು, ಬಿಸಿಲಲ್ಲಿ ದುಡಿಯುವದು ಕಷ್ಟವೆಂಬ ಭಯ ಬದಿಗಿಟ್ಟು ಮಣ್ಣಿಗೆ ಇಳಿಯಬೇಕು. ನಮ್ಮ ಕೃಷಿ ಕೆಲಸ ನಾವು ಮಾಡಿಕೊಳ್ಳುವದು ಹೆಮ್ಮೆಯ ಕೆಲಸ, ಹಾಳಾಗುವ ಫಸಲನ್ನು ಬಚಾವು ಮಾಡಲು ಇರುವ ಸರಳ ದಾರಿ ಇದು. ಆಗ ಮನೆ ಮನಸ್ಸುಗಳ ಮಧ್ಯೆ ಎದ್ದ ಗೋಡೆಗಳು ಒಡೆಯುತ್ತವೆ. ಅನವಶ್ಯಕ ಓಡಾಟಗಳಿಗೆ ಕಡಿವಾಣ ಹಾಕಿ ಕೃಷಿ ಗಮನ ಹೆಚ್ಚಿಸಿದರೆ ಪರಿಸ್ಥಿತಿ ಕೊಂಚ ಬದಲಾಗುತ್ತದೆ.

‘ಯಾರೂ ಕೆಲಸಕ್ಕೆ ಸಿಗುತ್ತಿಲ್ಲ, ಕೂಲಿದರ ದುಪ್ಪಟ್ಟು ಏರಿದೆ’ ಬೊಬ್ಬೆ ಹೊಡೆಯುತ್ತ ಕೂಡ್ರುವದರಲ್ಲಿ  ಯಾವ ಅರ್ಥವೂ ಇಲ್ಲ. ನಮಗೆ ಅಡಿಕೆ ದರ ಏರಿದರೆ ಹೇಗೆ ಖುಷಿಯೋ ಹಾಗೇ ಕೂಲಿಕಾರರಿಗೆ ಹೆಚ್ಚು ಹಣ ಸಿಕ್ಕಷ್ಟು ಸಂತೋಷ. ಜೀವನ ಪರ್ಯಂತ ಅವರು ನಮ್ಮ ಜಮೀನಿನ ಕೆಲಸ ಮಾಡುತ್ತಾರೆಂದು ಯಾವತ್ತೂ ಭಾವಿಸಬಾರದು.  ಅವರ ಬದುಕಿನಲ್ಲೂ ಬದಲಾವಣೆ ಇಚ್ಚೆಯಿದೆ. ‘ನಾವು ನಮ್ಮ ಜಮೀನಿನಲ್ಲಿ ಎಷ್ಟು ದುಡಿಮೆ ಮಾಡುತ್ತೇವೆ’ ಎಂಬ ಸೂತ್ರದಲ್ಲಿ ಕೃಷಿ ಉಸಿರು ನಿಂತಿದೆ. ನಿರ್ವಹಣೆಯ ತಂತ್ರಜ್ಞಾನ, ಸುಲಭ ವಿಧಾನಗಳ ಅಳವಡಿಸುವ ಮೂಲಕ ಕೃಷಿ  ಉಳಿಸುವ ನಿರ್ಧಾರ ನಮ್ಮ  ಕೈಯಲ್ಲಿದೆ. ಶತಮಾನದ ಆರಂಭದಲ್ಲಿ ಪ್ಲೇಗ್, ಮೈಲಿ, ಮಲೇರಿಯಾದಿಂದ ತತ್ತರಿಸಿದ ಮಲೆನಾಡಿನ ಕೃಷಿ ಭೂಮಿಗಳು ಪಾಳು ಬಿದ್ದ ಚಿತ್ರ ಯಾಕೋ ನೆನಪಾಗುತ್ತಿದೆ. ಈಗ ನಮ್ಮ ಆಲಸ್ಯದ ರೋಗ ಭೂಮಿಯ ಚಹರೆ ಕೆಡಿಸದಿರಲಿ.