‘ಬೊಳ್ಳು’ – ವಿಶೇಷ ತಳಿಯ ನಾಯಿಯೇನೂ ಅಲ್ಲ! ಸಾವಿರಾರು ರೂಪಾಯಿ ಬೆಲೆ ಬಾಳುವಂತಹುದೂ ಅಲ್ಲ. ಲೋಕಲ್ ನಾಯಿ. ಅಮೈ ಮಹಾಲಿಂಗ ನಾಯ್ಕರಿಗೆ ಇದು ಸಾವಿರಾರು ರೂಪಾಯಿ ಉಳಿಸಿಕೊಡುತ್ತಿದೆ.

ಹೇಗದು? ಬೊಳ್ಳುವಿನ ಮುಂದೆ ಬಕೆಟನ್ನು ಇಟ್ಟು, ಕೊರಳಿನ ಸಂಕಲೆಯನ್ನು ಕೈಯಲ್ಲಿ ಹಿಡಿದು ‘ಪೋಯಿ’ (ಅಂದರೆ ‘ಹೋಗುವಾ’) ಅಂದರೆ ಸಾಕು, ಬೊಳ್ಳು ಬಕೆಟನ್ನು ಬಾಯಲ್ಲಿ ಕಚ್ಚಿ ನೇರವಾಗಿ ತೋಟದ ದಾರಿ ಹಿಡಿಯುತ್ತಾನೆ. ನಾಯ್ಕರು ಅನುಸರಿಸಿದರೆ ಆಯಿತು. ಅಡಿಕೆ ಮರದ ಬುಡದಲ್ಲಿ ಬಿದ್ದ ಹಣ್ಣಡಿಕೆಯನ್ನು ಬೊಳ್ಳು ಬಾಯಲ್ಲಿ ಕಚ್ಚಿ ಬಕೆಟಿಗೆ ಹಾಕುತ್ತಾನೆ. ಏನಿಲ್ಲವೆಂದರೂ ದಿನಕ್ಕೆ ೨೫೦-೩೦೦ ಅಡಿಕೆಯನ್ನು ನಾಯ್ಕರಿಗೆ ಹೆಕ್ಕಿ ಕೊಡುತ್ತಾನೆ.

 ‘ನನಗೆ ಬಗ್ಗಿ ಅಡಿಕೆ ಹೆಕ್ಕುವುದಕ್ಕೆ ಕಷ್ಟ. ಈ ಕೆಲಸವನ್ನು ಬೊಳ್ಳು ಮಾಡುವುದರಿಂದ ಬಿದ್ದ ಅಡಿಕೆ ಹಾಳಾಗುವುದಿಲ್ಲ.’ ಎನ್ನುತ್ತಾರೆ ಮಹಾಲಿಂಗ ನಾಯ್ಕರು.

ಮಹಾಲಿಂಗ ನಾಯಕ್ ಅಡಿಕೆ, ತೆಂಗು ಕೊಯ್ಯುವ ಶ್ರಮಿಕ. ಹತ್ತು ವರುಷಗಳ ಹಿಂದೆ ಅಕಸ್ಮಾತ್ ಮರ ಏರುತ್ತಿದ್ದಾಗ ಕೆಳಗೆ ಬಿದ್ದು ಸೊಂಟತ್ರಾಣ ಕಳೆದುಕೊಂಡಿದ್ದರು. ಯಜಮಾನನ ದುಃಸ್ಥಿತಿಯನ್ನರಿತ ಬೊಳ್ಳು ‘ಅಡಿಕೆ ಹೆಕ್ಕುವ’ ಮೂಲಕ ಉಪ್ಪಿನ ಋಣ ತೀರಿಸುತ್ತಿದ್ದಾನೆ.

ಬೊಳ್ಳುವಿಗೀಗ ಮೂರನೇ ವರುಷ. ಚಿಕ್ಕದಿರುವಾಗ ಅಂಗಳದಲ್ಲಿದ್ದ ಅಡಿಕೆಯನ್ನು ಕಚ್ಚಿ ಆಟವಾಡುತ್ತಿದ್ದನಂತೆ. ಇವನನ್ನು ಪಳಗಿಸಿದರೆ ಹೇಗೆ? ನಾಯ್ಕರು ಬಕೆಟನ್ನು ಹತ್ತಿರವಿಟ್ಟು ‘ಹಾಕು’ ಎಂದು ತುಳುವಿನಲ್ಲಿ ಆಜ್ಞಾಪಿಸಿದರು. ಮೊದಮೊದಲು ಅಷ್ಟೊಂದು ‘ಕ್ಯಾರ್’ ಮಾಡದ ಬೊಳ್ಳು, ನಂತರ ನಾಯ್ಕರ ಆಜ್ಞೆಯನ್ನು ಪಾಲಿಸತೊಡಗಿದ.

ತೆಂಗಿನಕಾಯನ್ನು ಬಾಯಲ್ಲಿ ಕಚ್ಚಿ ಮನೆಯಂಗಳಕ್ಕೆ ಕ್ಷಿಪ್ರವಾಗಿ ಬೊಳ್ಳು ತರುತ್ತಾನೆ. ಗೇರುಬೀಜವನ್ನು ಅಡಿಕೆಯಂತೆ ಹೆಕ್ಕಿ ಬಕೆಟ್‌ಗೆ ತುಂಬುತ್ತಾನೆ. ಆದರೆ ಸಂಕಲೆ ಮಾತ್ರ ಬಿಡುವ ಹಾಗಿಲ್ಲ. ಬಿಟ್ಟರೆ ಇದೆಯಲ್ಲಾ ‘ನಾಯಿ ಬುದ್ಧಿ’! ಬೊಳ್ಳು ನಾಯ್ಕರ ಆದೇಶವನ್ನು ಮಾತ್ರ ಪಾಲಿಸುತ್ತಾನೆ. ಮಡದಿ ಲಲಿತ, ಮೊಮ್ಮಗಳು ವಿದ್ಯಾಲಕ್ಷ್ಮಿಯರ ಆರ್ಡರನ್ನು ರಿಜೆಕ್ಟ್ ಮಾಡಿಬಿಡುತ್ತಾನೆ.

ಮಹಾಲಿಂಗ ನಾಯ್ಕರು ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕ ಸನಿಹದ ಅಮೈಯವರು. ಬೋಳುಗುಡ್ಡದಲ್ಲಿ ನೀರುಕ್ಕಿಸಿದ, ಹಸುರೆಬ್ಬಿಸಿದ ಸ್ವಾವಲಂಬಿ ಸಾಹಸಿ. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. ಬೊಳ್ಳು ಅವರ ಮನೆ ಸದಸ್ಯ. ಎಲ್ಲರ ಜತೆ ಅವನಿಗೂ ಪ್ರತ್ಯೇಕ ಮಣೆ. ಒಡೆಯನ ಆಜ್ಞೆಯನ್ನು ಶಿರಸಾ ಪಾಲಿಸುವ ಬೊಳ್ಳು, ನಿಜಾರ್ಥದಲ್ಲಿ ‘ಮನೆ ಕಾಯುತ್ತಿದೆ’.