ಕಂಪ್ಯೂಟರ್‌ಗಳು ನಮ್ಮ ನಿತ್ಯ ಜೀವನದ ಭಾಗವೇ ಆಗಿವೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರ, ವ್ಯಾಪಾರ ಕೇಂದ್ರಗಳು, ಮಾಧ್ಯಮಗಳು, ಇಂಜಿನಿಯರಿಂಗ್ ಕ್ಷೇತ್ರಗಳು ಸೇರಿದಂತೆ ಎಲ್ಲ  ಕಾರ್ಯಕ್ಷೇತ್ರಗಳಲ್ಲಿಯೂ ಈಗ ಅವುಗಳ ಬಳಕೆ ಅನಿವಾರ್ಯವಾಗಿದೆ. ಈ ಕಂಪ್ಯೂಟರ್‌ಗಳಲ್ಲಿ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವಂತೆ ಪ್ರೋಗ್ರಾಂಗಳನ್ನು ರೂಪಿಸಲಾಗಿರುತ್ತದೆ. ಸಾಮಾನ್ಯವಾಗಿ ಅವು ನಿರ್ದಿಷ್ಟ ರೀತಿಯ ಕಾರ್ಯಗಳನ್ನು ದಕ್ಷವಾಗಿ ಹಾಗೂ ಖಾತ್ರಿಯಾಗಿ ನಿರ್ವಹಿಸುತ್ತವೆ. ಆದರೆ, ಈಗಾಗಲೇ ಫೀಡ್ ಮಾಡಿರದ ಹೊಸದೊಂದು ಸಮಸ್ಯೆ ಎದುರು ಬಂದಾಗ ಮಾತ್ರ ಈ ಕಂಪ್ಯೂಟರ್‌ಗಳಿಗೆ ಪ್ರತಿಕ್ರಿಯಿಸಲಾಗುವುದಿಲ್ಲ.

ಹಾಗಿದ್ದರೆ ಅವುಗಳು ಸ್ವತಃ ತಾವೇ ಚಿಂತಿಸಿ ಕಾರ್ಯ ನಿರ್ವಹಿಸುವಂತೆ ಮಾಡುವುದು ಹೇಗೆ? ಮನುಷ್ಯನಾದರೆ ತಾನು ನಿತ್ಯ ಎದುರಿಸುವ ಹೊಸ ಹೊಸ ಸಮಸ್ಯೆಗಳಿಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುತ್ತಾನೆ. ಅದೇ ರೀತಿ ಯಂತ್ರಗಳೂ ಹೊಸ ಸಮಸ್ಯೆಗಳು ಬಂದಾಗ ತಾವಾಗಿಯೇ ಪ್ರತಿಕ್ರಿಯಿಸುವಂತೆ ಮಾಡುವುದಕ್ಕಾಗಿಯೇ ಹೊಸದೊಂದು ವಿಜ್ಞಾನವನ್ನು ಆವಿಷ್ಕಾರ ಮಾಡಲಾಯಿತು. ಅದಕ್ಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಎಂದು ಹೆಸರು.

`ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (ಕೃತಕ ಬುದ್ಧಿಮತ್ತೆ) ಎಂಬ ಪದವನ್ನು 1956 ರಲ್ಲಿ ಜಾನ್ ಮ್ಯಾಕ್‌ಕಾರ್ಥಿ ಎಂಬ ಅಮೇರಿಕಾದ ಕಂಪ್ಯೂಟರ್ ವಿಜ್ಞಾನಿ ಮೊದಲ ಬಾರಿಗೆ ಬಳಸಿದನು. ಆತನ ಪ್ರಕಾರ ಇದು ಬುದ್ಧಿವಂತ ಯಂತ್ರಗಳನ್ನು ರಚಿಸುವ ಯಂತ್ರ ವಿಜ್ಞಾನ. ಮನುಷ್ಯನ ಬುದ್ಧಿಶಕ್ತಿಯನ್ನು ಯಂತ್ರಗಳು ಅನುಕರಿಸಲು ಸಾಧ್ಯವಿದೆ ಎಂಬ ಸಂಗತಿಯು ಕೃತಕ ಬುದ್ಧಿಮತ್ತೆಯ ವಿಜ್ಞಾನದ ಆಧಾರ ಸ್ಥಂಬವಾಗಿದೆ.

ಕೃತಕ ಬುದ್ಧಿಮತ್ತೆಯ ಕುರಿತಾದ ಸಂಶೋಧನೆಯನ್ನು ಮುಖ್ಯವಾಗಿ ಐದು ಅಂಶಗಳ ಮೇಲೆ ಕೇಂದ್ರೀಕರಿಸಿ ಮಾಡಲಾಗುತ್ತಿದೆ. ಅವೆಂದರೆ ಕಲಿಕೆ, ತರ್ಕ, ಸಮಸ್ಯೆ ಪರಿಹರಿಸುವಿಕೆ, ಗ್ರಹಿಕೆ ಮತ್ತು ಭಾಷೆಯನ್ನು ಅರ್ಥಮಾಡಿಕೊಳ್ಳುವಿಕೆ. ಸಾಮಾನ್ಯ ಕಂಪ್ಯೂಟರುಗಳಿಗೂ ಈ ಕೃತಕ ಬುದ್ಧಿಮತ್ತೆಯ ಯಂತ್ರಗಳಿಗೂ ಏನು ವ್ಯತ್ಯಾಸವೆಂದರೆ ಇವು ಒಮ್ಮೆ ಮಾಡಿದ ತಪ್ಪುಗಳಿಂದ ಕಲಿಯುತ್ತವೆ. ಅಂದರೆ ಒಂದು ಚೆಸ್ ಆಟದ ಸಮಸ್ಯೆಯನ್ನು ನೀಡಿದಾಗ ಅದು ಚೆಕ್‌ಮೇಟ್ ಆಗುವವರೆಗೆ ಮನಬಂದಂತೆ ಆಡುತ್ತದೆ. ಆದರೆ ತನ್ನ ಹೆಜ್ಜೆಯನ್ನೆಲ್ಲ ನೆನಪಿಟ್ಟುಕೊಂಡಿದ್ದು, ಇನ್ನೊಮ್ಮೆ ಅದೇ ಸಮಸ್ಯೆಯನ್ನು ಅದಕ್ಕೆ ನೀಡಿದಾಗ, ತಕ್ಷಣ ಸುಲಭದ ಹಂತಗಳನ್ನು ಬಳಸುತ್ತದೆ. ಒಂದು ಕಾರ್ಯ ಅಥವಾ ಸಮಸ್ಯೆಯನ್ನು ನೀಡಿದಾಗ ಕೃತಕ ಬುದ್ಧಿಮತ್ತೆಯು ತರ್ಕಿಸಿ ಸುಸಂಬದ್ಧವಾದ ನಿರ್ಣಯಕ್ಕೆ ಬರುತ್ತದೆ.

ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ವಿಸ್ತಾರವಾದ ಕ್ಷೇತ್ರಗಳಲ್ಲಿ ಹರಡಿದೆ. ಕಂಪ್ಯೂಟರ್ ಗೇಮ್, ಆಟಿಕೆ ರೋಬೋಟ್‍ಗಳಂತಹ ಮನರಂಜನಾ ಕ್ಷೇತ್ರದಿಂದ ಹಿಡಿದು ಮಿಲಿಟರಿಯಲ್ಲಿ ಯಂತ್ರಗಳು ಸ್ವಯಂ-ನಿಯಂತ್ರಣ ಮತ್ತು ಗುರಿಯನ್ನು ಕಂಡುಹಿಡಿಯುವುದೇ ಮೊದಲಾದ ಕೆಲಸಗಳನ್ನು ಮಾಡುತ್ತಿವೆ. ಬ್ಯಾಂಕುಗಳು, ಆಸ್ಪತ್ರೆಗಳು ಮತ್ತು ವಿಮಾ ಕ್ಷೇತ್ರಗಳೇ ಮೊದಲಾದವುಗಳಲ್ಲಿ ಗ್ರಾಹಕರ ವರ್ತನೆ ಮತ್ತು ಟ್ರೆಂಡ್ ಕುರಿತು ಅರ್ಥ ಮಾಡಿಕೊಳ್ಳುವ ಮತ್ತು ಅದನ್ನು ವ್ಯವಹಾರದಲ್ಲಿ ಬಳಸುವಲ್ಲಿ ಕೂಡಾ ಕೃತಕ ಬುದ್ಧಿಮತ್ತೆಯನ್ನು ಬಳಸಬಹುದಾಗಿದೆ.

ಇದು ಪುರಾತನ ಕಲ್ಪನೆ

ಈ ರೀತಿ ಬುದ್ಧಿವಂತ ಯಂತ್ರಗಳನ್ನು ಮತ್ತು ಕೃತಕ ಮಾನವರನ್ನು ರೂಪಿಸುವುದು ಆಧುನಿಕ ಯುಗದಲ್ಲಿ ಮೂಡಿದ ಕಲ್ಪನೆಯೇನೂ ಅಲ್ಲ. ಗ್ರೀಕ್ ಪುರಾಣಗಳಲ್ಲಿ ಇವುಗಳ ಉಲ್ಲೇಖವಿದೆ. ಪುರಾಣಗಳ ಪ್ರಕಾರ ಟಾಲೋಸ್ ಎಂಬ ಬೃಹದಾಕಾರದ ಕಂಚಿನ ಜೀವವಿರುವ ಮೂರ್ತಿಯನ್ನು ಕ್ರಿಟಿ ಎಂಬ ಗ್ರೀಸಿನ ದ್ವೀಪವೊಂದನ್ನು ಕಾಯಲು ನಿಯೋಜಿತಗೊಳಿಸಲಾಗಿತ್ತು. ಟಾಲೋಸ್ ರೋಬೊ ದ್ವೀಪವನ್ನು ದಿನಕ್ಕೆ ಮೂರು ಬಾರಿ ಸುತ್ತುತ್ತ ಕಡಲ್ಗಳ್ಳರ ದಾಳಿಯಿಂದ ದ್ವೀಪವನ್ನು ರಕ್ಷಿಸುತ್ತಿತ್ತು. ಅನೇಕ ನಾಗರೀಕತೆಗಳಲ್ಲಿ ಕೂಡಾ ಮಾನವನನ್ನು ಹೋಲುವ ಕೃತಕ ಯಂತ್ರಗಳನ್ನು ನಿರ್ಮಿಸಿರುವುದು ಮತ್ತು ಪೂಜಿಸಿರುವುದಾಗಿ ಹೇಳಲಾಗುತ್ತದೆ. ಹತ್ತೊಂಬತ್ತು, ಇಪ್ಪತ್ತನೇ ಶತಮಾನಗಳ ಕಾಲ್ಪನಿಕ ಕಥೆ, ಕಾದಂಬರಿಗಳಲ್ಲಿ ಈ ರೀತಿಯ ಕೃತಕ ಜೀವಿಗಳ ಕುರಿತು ಬರೆಯಲಾಗಿದೆ.

ಪ್ರಾಚೀನ ಕಾಲದಿಂದ ತತ್ವಜ್ಞಾನಿಗಳು ಮತ್ತು ಗಣಿತಜ್ಞರು ಬೆಳೆಸಿದ ತರ್ಕಶಾಸ್ತ್ರದ ಆಧಾರದ ಮೇಲೆ ನಿರ್ದಿಷ್ಟ ಕೆಲಸ ಮಾಡುವಂತೆ ಪ್ರೋಗ್ರಾಂ ಮಾಡಬಲ್ಲ ಡಿಜಿಟಲ್ ಎಲೆಕ್ಟ್ರಾನಿಕ್ ಕಂಪ್ಯೂಟರ್ ಅನ್ನು ಆವಿಷ್ಕರಿಸಲಾಯಿತು. ಇದರ ಜೊತೆಗೆ ನರವಿಜ್ಞಾನ, ಮಾಹಿತಿ ಸಿದ್ಧಾಂತ ಮತ್ತು ಸೈಬರ್ನೆಟಿಕ್ಸ್ (ಜೀವಿಗಳು ಮತ್ತು ಯಂತ್ರಗಳಲ್ಲಿರುವ ಸಂವಹನ ಮತ್ತು ಸ್ವಯಂಚಾಲಿತ ನಿಯಂತ್ರಣ ವ್ಯವಸ್ಥೆಯ ವಿಜ್ಞಾನ) ಮುಂತಾದ ಕ್ಷೇತ್ರಗಳಲ್ಲಿ ಆದ ಆವಿಷ್ಕಾರಗಳು ಸಂಶೋಧಕರಲ್ಲಿ ಒಂದು ಇಲೆಕ್ಟ್ರಾನಿಕ್ ಮೆದುಳನ್ನು ರಚಿಸಬಹುದಾದ ಸಾಧ್ಯತೆಯ ಕುರಿತು ಆಶಾಭಾವವನ್ನು ಹುಟ್ಟಿಸಿತು.

1956 ರಿಂದ ಎ.ಐ. (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡತೊಡಗಿದ ಜಾನ್ ಮ್ಯಾಕ್‌ಕಾರ್ಥಿ, ಮರ್ವಿನ್ ಮಿನ್ಸ್‌ಕಿ, ಅಲೆನ್ ನೆವೆಲ್ ಮತ್ತು ಹರ್ಬರ್ಟ್ ಸೈಮನ್ ಮುಂತಾದ ಸಂಶೋಧಕರು ಕೆಲವು ದಶಕಗಳವರೆಗೆ ಈ ಕುರಿತು ಸಂಶೋಧನೆಗಳನ್ನು ಮಾಡಿದರು. ಈ ಸಂಶೋದಕರು ಮತ್ತು ಇವರ ವಿದ್ಯಾರ್ಥಿಗಳು ಬರೆದು ಅಳವಡಿಸಿದ ಪ್ರೋಗ್ರಾಂಗಳು ಬೀಜಗಣಿತದ ಲೆಕ್ಕಗಳನ್ನು ಮಾಡುತ್ತಿದ್ದವಲ್ಲದೇ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದವು ಕೂಡಾ. ಈ ಸಂಶೋಧನೆಗಳು ಬೆರಗುಗೊಳಿಸುವಂತಹವಾಗಿದ್ದವು.

1960 ರ ದಶಕದಲ್ಲಿ ಈ ಸಂಶೋಧನೆಗಳ ಸಾಧ್ಯತೆಗಳು ಮತ್ತು ಭವಿಷ್ಯವನ್ನು ಅರ್ಥಮಾಡಿಕೊಂಡ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಡೆಯುತ್ತಿದ್ದ ಸಂಶೋಧನೆಗಳಿಗೆ ಅಲ್ಲಿನ ರಕ್ಷಣಾ ಇಲಾಖೆ ದೊಡ್ಡ ಮಟ್ಟದ ಹಣಕಾಸಿನ ಸಹಾಯ ಮಾಡಿತು ಮತ್ತು ಜಗತ್ತಿನಾದ್ಯಂತ ಪ್ರಯೋಗಾಲಯಗಳು ಸ್ಥಾಪಿಸಲ್ಪಟ್ಟವು. ಈ ಸಮಯದಲ್ಲಿ ಹರ್ಬರ್ಟ್ ಸೈಮನ್, “ಇನ್ನು ಇಪ್ಪತ್ತು ವರ್ಷಗಳಲ್ಲಿ ಯಂತ್ರಗಳು ಮನುಷ್ಯ ಮಾಡುವ ಎಲ್ಲ ಕೆಲಸಗಳನ್ನು ಮಾಡಲು ಸಮರ್ಥವಾಗುತ್ತವೆ” ಎಂದು ಭವಿಷ್ಯ ನುಡಿದಿದ್ದ.

ಆದರೆ ಇದು ಸುಲಭವಾಗಿರಲಿಲ್ಲ. ಈ ಸಂಶೋಧಕರು ತಮ್ಮ ಸಂಶೋಧನೆಯ ಹಂತದಲ್ಲಿ ಎದುರಿಸಿದ ಸಮಸ್ಯೆಗಳಿಗೆ ಕಾರಣಗಳನ್ನು ಹುಡುಕಲಾಗದೇ ಹೆಣಗುತ್ತಿದ್ದರು. ಆದರೆ 1974 ರಲ್ಲಿ ಗಣಿತಜ್ಞ ಸರ್ ಜೇಮ್ಸ್ ಲೈಟ್‌ಹಿಲ್ ವರದಿ ಆಧರಿಸಿ ಇಂಗ್ಲೆಂಡಿನ ಸರ್ಕಾರ ಎ.ಐ. ಸಂಶೋಧನೆಗೆ ನೀಡುತ್ತಿದ್ದ ಹಣಕಾಸಿನ ನೆರವನ್ನು ಬಹಳಷ್ಟು ಕಡಿತಗೊಳಿಸಿತು. ಯುಎಸ್‌ ಕಾಂಗ್ರೆಸ್ ಒತ್ತಡಕ್ಕೆ ಮಣಿದ ಅಲ್ಲಿನ ಸರ್ಕಾರ ಕೂಡಾ ಒಂದು ಸ್ಪಷ್ಟ ಗುರಿ ಕಾಣದಿದ್ದ ಈ ಸಂಶೋಧನೆಗೆ ಬೆಂಬಲ ನಿಲ್ಲಿಸಿತು. ಕೆಲವು ವರ್ಷಗಳವರೆಗೆ ಸಂಶೋಧನೆ ಹಿನ್ನೆಡೆ ಅನುಭವಿಸಬೇಕಾಯಿತು.

ಆದರೆ 1980ರ ದಶಕದಲ್ಲಿ ಎಕ್ಸ್‌ಪರ್ಟ್‌ ಸಿಸ್ಟಮ್ಸ್ (ಇವು ತಜ್ಞರಂತೆ ವರ್ತಿಸಿ ಕಾರ್ಯಗಳನ್ನು ನಿರ್ವಹಿಸುವ ಕಂಪ್ಯೂಟರ್‌ಗಳು) ಗಳ ಮಾರಾಟದಲ್ಲಿ ಆದ ಗೆಲುವು ಮತ್ತೆ ಈ ಸಂಶೋಧನೆಗೆ ಜೀವ ತುಂಬಿತು, ಯುಎಸ್ ಮತ್ತು ಬ್ರಿಟಿಷ್ ಸರ್ಕಾರಗಳು ಸಹಾಯಧನ ನೀಡಲಾರಂಭಿಸಿದವು. 1985ರ ಹೊತ್ತಿಗೆ ಈ ಕಂಪ್ಯೂಟರ್‌ಗಳ ಮಾರುಕಟ್ಟೆಯು ಬಿಲಿಯನ್ ಡಾಲರ್ ವ್ಯವಹಾರವನ್ನು ಮೀರಿ ಬೆಳೆದಿತ್ತು. ಈ ಸಮಯದಲ್ಲಿ ಪಿ.ಸಿ. ಕ್ರಾಂತಿ ಆರಂಭವಾಯಿತು ಮತ್ತು 1987 ರಿಂದ ಆವರೆಗೂ ಬಳಕೆಯಲ್ಲಿದ್ದ ಲಿಸ್ಪ್ ಮಷಿನ್‌ಗಳ ಮಾರುಕಟ್ಟೆ ಕುಸಿಯುವುದಕ್ಕೆ ಕಾರಣವಾಯಿತು. ಇದು ಎ.ಐ. ಸಂಶೋಧನೆಗೆ ಎರಡನೇ ಹಿನ್ನಡೆಗೆ ನಾಂದಿ ಹಾಡಿತು.

ಆದರೆ 1990 ರ ದಶಕ ಮತ್ತು 21ನೇ ಶತಮಾನದಲ್ಲಿ ಎ.ಐ. ದೊಡ್ಡ ಗೆಲುವನ್ನು ಕಂಡಿತು. ಏಕೆಂದರೆ ಈ ಕೃತಕ ಬುದ್ಧಿಮತ್ತೆಯ ಗಣನ ಸಾಮರ್ಥ್ಯ ಮತ್ತು ಸಾಗಾಣಿಕೆ, ವೈದ್ಯಕೀಯ ಕ್ಷೇತ್ರ ಮುಂತಾದವುಗಳಲ್ಲಿ ಬಳಕೆಯ ಸಾಧ್ಯತೆ ಹೊಸ ಸಂಶೋಧನೆಯನ್ನು ಹೆಚ್ಚು ವಿಸ್ತಾರಗೊಳಿಸಿತು.

11 ಮೇ 1997 ರಂದು ಡೀಪ್ ಬ್ಲೂ ಎಂಬ ಕಂಪ್ಯೂಟರ್‌ ಚೆಸ್ ಆಟದಲ್ಲಿ ಜಾಗತೀಕ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್‌ನನ್ನು ಸೋಲಿಸಿತು. 2005 ರಲ್ಲಿ ಡಿಎಆರ್‌ಪಿಎ ಗ್ರ್ಯಾಂಡ್ ಛಾಲೆಂಜ್ ಎಂಬ ರೇಸಿನಲ್ಲಿ ಸ್ಟ್ಯಾನ್‌ಫರ್ಡ್‌ನ ರೋಬೊಟ್ ಒಂದು 131 ಮೈಲು ದೂರ ಪೂರ್ವಾಭ್ಯಾಸವಿಲ್ಲದೇ ಮರುಭೂಮಿಯಲ್ಲಿ ಓಡಿಸಿ ಗೆದ್ದಿತ್ತು. ಅದಾದ ಎರಡು ವರ್ಷಗಳ ನಂತರ ಇದೇ ಸ್ಪರ್ಧೆಯಲ್ಲಿ ಬಾಸ್ ಎಂಬ ರೋಬೊ ಚಾಲಿತ ಎಸ್‌ಯುವಿ ವಾಹನವು ಮಾನವರು ಓಡಿಸುತ್ತಿರುವ ನಗರದ ರಸ್ತೆಗಳಲ್ಲಿ 55 ಮೈಲುಗಳವರೆಗೆ ಓಡಿಸಿ ಮೊದಲ ಬಹುಮಾನ ಗೆದ್ದಿತ್ತು. ಇದು ಕೇವಲ ಪ್ರಾರಂಭ.

ಹೊಸ ಲೋಕದ ಸೃಷ್ಟಿಯಲ್ಲಿ

ಕೃತಕ ಬುದ್ಧಿಮತ್ತೆಯ ವಿಜ್ಞಾನವು ಅತ್ಯಂತ ಉನ್ನತ ಮಟ್ಟದ ತಾಂತ್ರಿಕತೆಯನ್ನು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಅನೇಕ ವಿಭಾಗಗಳು ಬೆಳೆಯುತ್ತ ಹೋಗಿವೆ. ನಿರ್ದಿಷ್ಟ ಉದ್ದೇಶಗಳಿಗೆ ತಕ್ಕಂತೆ ಅವುಗಳನ್ನು ಸಂಶೋಧನೆ ಮಾಡುತ್ತ ಬೆಳೆಸಿಕೊಳ್ಳುತ್ತ ಹೋಗಲಾಗುತ್ತಿದೆ. ಆಧುನಿಕ ಜಗತ್ತಿನಲ್ಲಿ ಅಚ್ಚರಿಕರ ಸಂಶೋಧನೆಗಳು ನಡೆಯುತ್ತ, ಅವು ಜನಜೀವನದ ಭಾಗವಾಗುತ್ತಿದ್ದಂತೆ ಕೃತಕ ಬುದ್ಧಿಮತ್ತೆಯ ವ್ಯಾಖ್ಯಾನವೂ ಬದಲಾಗುತ್ತ ಹೋಗಿದೆ. ಈ ಮಧ್ಯದಲ್ಲಿಯೇ ಇದು ವಿವಾದಕ್ಕೂ ಈಡಾಗಿದೆ.  ಮನುಷ್ಯರ ಬದಲಾಗಿ ವಿಭಿನ್ನ ಕ್ಷೇತ್ರಗಳಲ್ಲಿ ರೋಬೋಗಳು ಕೆಲಸ ಮಾಡಲು ಪ್ರಾರಂಭಿಸಿದರೆ ನಿರುದ್ಯೋಗ ಸಮಸ್ಯೆ ಕಾಡುವುದು, ಅದರಿಂದ ಬಡತನ ಮತ್ತು ಅಪರಾಧಗಳು ಹೆಚ್ಚುವುದು, ಕೆಲಸವಿಲ್ಲದ ಮನುಷ್ಯ ಜಡನಾಗುತ್ತ ಹೋಗುವುದು ಇತ್ಯಾದಿ ಸಮಸ್ಯೆಗಳ ಕುರಿತು ಆತಂಕವಿದೆ. ಅದಕ್ಕಿಂತ ಹೆಚ್ಚಾಗಿ ಕೃತಕ ಬುದ್ಧಿಮತ್ತೆಯಿಂದ ರಚಿತಗೊಂಡ ಯಂತ್ರ ಮಾನವ ಸ್ವತಂತ್ರಗೊಂಡು ಮನುಷ್ಯನ ಮೇಲೆಯೇ ಆಧಿಪತ್ಯವನ್ನು ಸಾಧಿಸಿ ಅವನನ್ನು ಗುಲಾಮನನ್ನಾಗಿ ಮಾಡಿಕೊಂಡರೆ ಹೇಗೆ ಎಂಬ ಭಯವೂ ಇದೆ. `ಯಂದಿರನ್’ ಎಂಬ ತಮಿಳು ಚಲನಚಿತ್ರದಲ್ಲಿ ಇಂತಹ ಒಂದು ಅಪಾಯದ ಚಿತ್ರಣವಿದೆ.

ಆದರೆ ಯಂತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನುಸೇರಿಸುವ ಮೂಲಕ ಅವುಗಳು ಸ್ವತಃ ಯೋಚಿಸಿ ಕೆಲಸ ನಿರ್ವಹಿಸುವಂತೆ ಮಾಡುವುದರಲ್ಲಿ ಬಹಳಷ್ಟು ಪ್ರಯೋಜನಗಳು ಇವೆ. ಮನುಷ್ಯನಿಂದ ಮಾಡಲು ಸಾಧ್ಯವಾಗದ ಗಂಭೀರವಾದ ಕೆಲಸಗಳನ್ನು ಮಾಡಲು ಈ ಯಂತ್ರಗಳನ್ನು ಬಳಸಿಕೊಳ್ಳುವುದು ಮತ್ತು ಆ ಮೂಲಕ ಅಪಾಯಕಾರಿ ಕೆಲಸಗಳಲ್ಲಿ ಜೀವಹಾನಿಯನ್ನು ತಪ್ಪಿಸುವುದು ಈ ವಿಜ್ಞಾನದ ಉದ್ದೇಶಗಳಲ್ಲಿ ಒಂದಾಗಿದೆ.

ಆದರೆ ಎಲ್ಲಾ ಕ್ಷೇತ್ರಗಳಲ್ಲಿ ರೋಬೊಗಳನ್ನು ತರುವುದು ಸರಿಯಾಗಲಾರದು, ಉದಾಹರಣೆಗೆ ವೈದ್ಯಕೀಯ ವಲಯದಲ್ಲಿ ಒಬ್ಬ ರೋಗಿಗೆ ಡಾಕ್ಟರ್ ಮತ್ತು ನರ್ಸ್ ಕೊಡುವ ಕಾಳಜಿಯನ್ನು ಮತ್ತು ಸಹೃದಯಿ ಭರವಸೆಯನ್ನು ಒಬ್ಬ ರೋಬೊ ಡಾಕ್ಟರ್ ಅಥವಾ ರೋಬೊ ನರ್ಸ್ ಕೊಡಲು ಸಾಧ್ಯವಿಲ್ಲ. ಎಷ್ಟೆಂದರೂ ಯಂತ್ರಗಳು ಮಾನವರಾಗಲು ಸಾಧ್ಯವಿಲ್ಲ. ಯೋಚಿಸುವಂತೆ ಮಾಡಬಲ್ಲೆವೇ ಹೊರತೂ ಯಂತ್ರಗಳಲ್ಲಿ ಭಾವನೆಗಳನ್ನು ತುಂಬುವುದು ನಮಗೆ ಸಾಧ್ಯವೇ, ಎಂಬ ಪ್ರಶ್ನೆ ಹಲವರದು. ರೋಬೊ ಒಂದು ಭಾವನೆಗಳನ್ನು ಹೊಂದಿರುವ ಮಾನವನಾಗಿ ಬದಲಾಗುವ ಕಥೆಯಿರುವ `ಹಾಲಿವುಡ್’ ಎಂಬ ಸಿನೆಮಾ ಕನ್ನಡದಲ್ಲಿಯೇ ಬಂದಿತ್ತು.

ಮನುಷ್ಯ ಯಾವ ಸಂದರ್ಭದಲ್ಲಿ ಹೇಗೆ ವರ್ತಿಸುತ್ತಾನೆ, ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅವನಿಗರಿವಿಲ್ಲದೇ ಹೇಗೆ ಅವನ ಬುದ್ಧಿಮತ್ತೆ ಕೆಲಸ ಮಾಡುತ್ತದೆ ಎನ್ನುವುದು ವಿಜ್ಞಾನಕ್ಕೆ ಯಾವತ್ತೂ ವಿಸ್ಮಯಕಾರಿ ಸಂಗತಿ. ಈ ಕೃತಕ ಬುದ್ಧಿಮತ್ತೆಯ ಯಂತ್ರಗಳನ್ನು ರೂಪಿಸುವುದು ಮನುಷ್ಯನಿಗೆ ಸಮಸ್ಯೆ ಪರಿಹರಿಸುವಲ್ಲಿನ ತನ್ನದೇ ಆದ ತರ್ಕ ಮತ್ತು ನಡೆಯ ಕುರಿತು ಹೆಚ್ಚಿನ ಒಳನೋಟ ಹೊಂದಲು ಮತ್ತು ತನ್ನ ಆ ಬೌದ್ಧಿಕ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ.

ಸದ್ಯದ ಪ್ರಯೋಗಗಳಲ್ಲಿ ಈ ಕೃತಕ ಬುದ್ಧಿಮತ್ತೆಯನ್ನು ಕೆಲವು ನಿರ್ಧಿಷ್ಟ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಸಂಶೋಧನೆ ಮಾಡಲಾಗುತ್ತಿದೆಯೇ ಹೊರತೂ ಮಾನವನ ಸಮಗ್ರ ಬುದ್ಧಿಮತ್ತೆಯನ್ನು ಯಂತ್ರಗಳಲ್ಲಿ ತುಂಬುವ ಪ್ರಯೋಗವನ್ನು ಮಾಡುತ್ತಿಲ್ಲ. ಆದರೆ ಭವಿಷ್ಯದಲ್ಲಿ ಈ ಯಂತ್ರಗಳು ಹೆಚ್ಚು ಹೆಚ್ಚು ಬುದ್ಧಿಮತ್ತೆಯನ್ನು ಪಡೆಯುತ್ತ ಹೋಗುತ್ತವೆ ಮತ್ತು ಈ ಶತಮಾನದ ಅಂತ್ಯದ ಹೊತ್ತಿಗೆ ಕೃತಕ ಬುದ್ಧಿಮತ್ತೆಯ ವಿಜ್ಞಾನವು ಜಗತ್ತಿನ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದೆ.