ಮಾನವರು ಬಳಸುವ ಭಾಷೆಗಳನ್ನು ಸಹಜ ಭಾಷೆಗಳೆನ್ನುತ್ತಾರೆ. ಕನ್ನಡ, ತಮಿಳು, ಬಂಗಾಲಿ, ಇಟಾಲಿಯನ್, ಜಪಾನೀಸ್ ಇವೆಲ್ಲ ಸಹಜ ಭಾಷೆಗಳು. ಈ ಭಾಷೆಗಳನ್ನು ಆಯಾ ಭಾಷಿಕರು ಅರಿತಿದ್ದಾರೆ; ಬಳಸಬಲ್ಲರು. ಆದರೆ ಅವುಗಳಲ್ಲಿರುವ ಧ್ವನಿರಚನೆ, ಪದರಚನೆ, ವಾಕ್ಯರಚನೆ, ಅರ್ಥರಚನೆ ಇವೇ ಮುಂತಾದ ಆಂತರಿಕ ವ್ಯವಸ್ಥೆಗಳನ್ನು ರೂಪುಗೊಳಿಸಿದವರು ಆ ಭಾಷಿಕರಲ್ಲ. ಸಹಜ ಭಾಷೆಗಳ ಜತೆಗೆ ಕೃತಕ ಭಾಷೆಗಳನ್ನು ಕೆಲವರು ಕಲ್ಪಿಸಿಕೊಳ್ಳುತ್ತಾರೆ. ಕೃತಕ ಭಾಷೆಗಳು ಎಂದರೇನು? ಮಾನವರೇ ಒಂದು ಭಾಷೆಯನ್ನು ರೂಪಿಸು ವುದು; ಆ ಭಾಷೆಗೆ ಒಂದು ಭಾಷಾ ಸಮುದಾಯವನ್ನು ಕಲ್ಪಿಸುವುದು. ಈ ಕ್ರಮಗಳಿಂದ ಕೃತಕ ಭಾಷೆ ಮೈದಳೆಯುತ್ತದೆ.

ಭಾಷೆ ಒಂದು ಗೋಡೆಯಾಗುವ, ಮಿತಿಯಾಗುವ ಸಂದರ್ಭಗಳನ್ನು ಬೇರೆ ಕಡೆ ವಿವರಿಸಲಾಗಿದೆ. (ನೋಡಿ. ಲೇಖನ 53) ಇಂಥ ಸಂದರ್ಭದಿಂದ ಹೊರಬರಲು ಕೆಲವರು ಕೃತಕ ಭಾಷೆಗಳ ಪರಿಕಲ್ಪನೆಯನ್ನು ಮುಂದಿಡುತ್ತಾರೆ. ವಿವಿಧ ಭಾಷಾ ಸಮುದಾಯಗಳ ಜನರು ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಬಹುದಾದ ಸಾಮಾನ್ಯ ಭಾಷೆಯೊಂದನ್ನು ಕೃತಕವಾಗಿ ರೂಪಿ ಸುವುದು ಅವಶ್ಯವೆಂದು ಹೇಳಲಾಗುತ್ತಿದೆ. ಕೃತಕವೆಂಬ ಪದವನ್ನು ಬಳಸಲು ಕೆಲವರು ಒಪ್ಪುವುದಿಲ್ಲ. ಭಾಷೆಯ ಮಿತಿಗಳನ್ನು ಮೀರಲು ಅನುವು ಮಾಡಿಕೊಡುವ ಇಂಥ ಭಾಷೆಯನ್ನು ಸಹಾಯಕ ಭಾಷೆ ಎನ್ನಬೇಕೆಂದು ಅವರ ಸಲಹೆ. ಬಳಕೆಯ ಉದ್ದೇಶದ ದೃಷ್ಟಿಯಿಂದ ಕೃತಕ ಭಾಷೆ ಮತ್ತು ಸಹಾಯಕ ಭಾಷೆ ಎಂಬ ಹೆಸರುಗಳಲ್ಲಿ ವ್ಯತ್ಯಾಸ ಕಾಣದು. ಆದರೆ ಸ್ವರೂಪದ ದೃಷ್ಟಿ ಯಿಂದ ಇವೆರಡೂ ಯಾವಾಗಲೂ ಒಂದೇ ಆಗಿರುವುದಿಲ್ಲ. ಭಾಷಾ ಸಮುದಾಯಗಳ ನಡುವೆ ಸಂವಹನಕ್ಕೆ ಬಳಕೆಯಾಗುವ ಸಂಪರ್ಕ ಭಾಷೆಗಳೆ ಲ್ಲವೂ ಸಹಾಯಕ ಭಾಷೆಗಳು. ಈ ಭಾಷೆಗಳು ಸಹಜ ಭಾಷೆಗಳು. ಬಂಗಾಳಿ ಮತ್ತು ಗುಜರಾತಿ ಮಾತನಾಡುವ ಇಬ್ಬರು ಸಂಪರ್ಕ ಭಾಷೆಯಾಗಿ ಹಿಂದಿ ಯನ್ನು ಬಳಸುವುದು ಸಾಧ್ಯ. ಹಿಂದಿ ಒಂದು ಸಹಾಯಕ ಭಾಷೆಯಾಯಿತು. ಇದು ಒಂದು ಸಹಜಭಾಷೆಯೂ ಹೌದು. ಆದರೆ ಕೃತಕ ಭಾಷೆಗಳು ಈಗಾಗಲೇ ಹೇಳಿದಂತೆ. ಸಹಜ ಭಾಷೆಗಳಲ್ಲ. ಅವುಗಳಿಗೆ ಖಚಿತ ಭಾಷಾ ಸಮುದಾಯ ಗಳಿರುವುದಿಲ್ಲ. ಅವು ಯಾರಿಗೂ ಮೊದಲ ಭಾಷೆಗಳಲ್ಲ.

ಕೃತಕ ಭಾಷೆಗಳನ್ನು ರೂಪಿಸುವ ಯತ್ನ ಯುರೋಪಿನಲ್ಲಿ 17ನೇ ಶತಮಾನದಲ್ಲಿ ಮೊದಲಾಗಿದೆ. ಇಂಥ ಯತ್ನಗಳನ್ನು ಸ್ಥೂಲವಾಗಿ ಎರಡು ಬಗೆಗಳಲ್ಲಿ ವಿಂಗಡಿಸಬಹುದು. ಮೊದಲನೆಯ ಬಗೆ: ಸುಮ್ಮನೆ ಕೆಲವು ಸಂಕೇತಗಳನ್ನು ಕಲ್ಪಿಸಿಕೊಳ್ಳುವುದು. ಸಾಮಾನ್ಯವಾಗಿ ಈ ಸಂಕೇತಗಳು ಸಂಖ್ಯೆ ಇಲ್ಲವೇ ಇನ್ನಿತರ ಬಗೆಯವಾಗಿರುತ್ತವೆ. ಈ ಸಂಕೇತಗಳಿಗೆ ಅರ್ಥಹಚ್ಚ ಲಾಗುತ್ತದೆ. ತರ್ಕಬದ್ಧವಾದ, ವೈಜ್ಞಾನಿಕವಾದ ರೀತಿಯಲ್ಲಿ ಈ ಅರ್ಥಯುಕ್ತ ಸಂಕೇತಗಳನ್ನು ವರ್ಗೀಕರಿಸಲಾಗುವುದು. ಹೀಗೆ ವರ್ಗೀಕರಿಸು ವಾಗ ಹೆಚ್ಚು ಸಾರ್ವತ್ರಿಕವಾದ, ದೇಶಕಾಲ ಮುಕ್ತವಾದ ನೆಲೆಗಳನ್ನು ಅನುಸರಿಸಲು ಯತ್ನಿಸುವು ದಾಗಿ ಇಂಥ ಭಾಷೆಯ ಪ್ರವರ್ತಕರು ಹೇಳಿಕೊಳ್ಳುತ್ತಾರೆ. ಈ ಬಗೆಯ ಕೃತಕ ಭಾಷೆಗಳಿಗೆ ಯಾವ ಸಹಜ ಭಾಷೆಯಾಗಲಿ ಮಾದರಿಯೂ ಅಲ್ಲ; ಆಕರವೂ ಅಲ್ಲ. 17ನೇ ಶತಮಾನದಿಂದ ಮೊದಲಾಗಿ ಇಂಥ ಕೃತಕ ಭಾಷೆಗಳನ್ನು ರೂಪಿಸುವ ಯತ್ನಗಳು ಯುರೋಪಿನಲ್ಲಿ ನಡೆಯುತ್ತ ಬಂದಿವೆ.

ಕೃತಕ ಭಾಷೆಯ ಇನ್ನೊಂದು ಮಾದರಿಯೆಂದರೆ ಸಹಜ ಭಾಷೆಗಳನ್ನು ಆಧರಿಸಿ ಹೊಸ ವ್ಯವಸ್ಥೆಯನ್ನು ರೂಪುಗೊಳಿಸುವುದು. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಆಕರಗಳನ್ನಾಗಿ ಮಾಡಿಕೊಂಡು ಸಾಮಗ್ರಿಗಳನ್ನು ಕೂಡಿ ಹಾಕ ಲಾಗುತ್ತದೆ. ಹಾಗೆಯೇ ಆಂತರಿಕ ವ್ಯವಸ್ಥೆಗಳನ್ನು ರೂಪಿಸಲು ಹಲವು ಭಾಷೆಗಳನ್ನು ಮಾದರಿಯಾಗಿ ಇರಿಸಿಕೊಳ್ಳಲಾಗುವುದು. ಬಹುಮಟ್ಟಿಗೆ ಹೀಗೆ ಮಾದರಿ ಮತ್ತು ಆಕರಗಳಾಗಿರುವ ಭಾಷೆಗಳೆಲ್ಲವೂ ಪಶ್ಚಿಮ ಯುರೋಪು ದೇಶಗಳಿಗೆ ಸೇರಿವೆ. ಕಳೆದ ಶತಮಾನದಿಂದ ಮೊದಲಾಗಿ ಈ ಎರಡನೆ ರೀತಿಯ ಹಲವಾರು ಕೃತಕ ಭಾಷೆಗಳನ್ನು ರೂಪುಗೊಳಿಸುವ ಯತ್ನಗಳು ನಡೆದಿವೆ.

ನಮಗೆ ತಿಳಿದಂತೆ ಸಹಜ ಭಾಷೆಗಳು ಎಷ್ಟೇ ನಿಯಮಬದ್ಧವಾಗಿದ್ದರೂ ನಿಯಮಗಳಿಗೆ ಕೆಲವಾದರೂ ವಿನಾಯತಿಗಳು ಇದ್ದೇ ಇರುತ್ತವೆ. ಅಲ್ಲದೆ ರಚನೆಯಲ್ಲಿ ನಿರುಪಯುಕ್ತವಾದ, ಆವರ್ತಗೊಳ್ಳುವ ಅಂಶಗಳಿರುತ್ತವೆ. ಉದಾಹರಣೆಗೆ ಕನ್ನಡದಲ್ಲಿ ಈ ರಚನೆಗಳನ್ನು ಗಮನಿಸಿ. ನೋಡು/ನೋಡಿ ದಳು, ಹೇಳು/ಹೇಳಿದಳು, ಕುಡಿ/ಕುಡಿದಳು, ಬೇಡು/ಬೇಡಿದಳು. ಈ ಜೋಡಿಗಳಲ್ಲಿ ಮೊದಲನೆಯದು ಕ್ರಿಯಾಧಾತು. ಎರಡನೆಯದು ಅದರ ಭೂತಕಾಲ ರೂಪಗಳಲ್ಲಿ ಒಂದು. ಇದೇ ಮಾದರಿಯಲ್ಲಿ ಹೋಗು ಧಾತುವನ್ನು ಸೂಚಿಸಿದರೆ ನಿಯಮಾನುಸಾರ ‘ಹೋಗಿದಳು’ ರೂಪವನ್ನು ನಿರೀಕ್ಷಿಸುತ್ತೇವೆ. ಆದರೆ ವಾಸ್ತವವಾಗಿ ಬಳಕೆಯಲ್ಲಿರುವ ರೂಪ ಹೋದಳು. ಇಂತಹ ನಿಯಮ ಬಾಹಿರ ವಿನಾಯಿತಿಗಳು ಸಹಜ ಭಾಷೆಗಳಲ್ಲಿ ಇದ್ದೇ ತೀರುತ್ತವೆ. ಕೃತಕ ಭಾಷೆಗಳು ಸಹಜ ಭಾಷೆಯ ಈ ಲಕ್ಷಣವನ್ನು ಹೊಂದಿರುತ್ತವೆಯೇ? ಕೆಲವು ಕೃತಕ ಭಾಷೆಗಳು ಯಾವುದೇ ವಿನಾಯಿತಿಗೂ, ನಿಯಮ ವ್ಯತ್ಯಯಕ್ಕೂ ಅವಕಾಶ ನೀಡುವುದಿಲ್ಲ. ಮತ್ತೆ ಕೆಲವು ಇಂಥ ಕೆಲವು ವ್ಯತ್ಯಯಗಳಿಗೆ ಅವಕಾಶ ಕಲ್ಪಿಸುತ್ತವೆ.

ಚಾರಿತ್ರಿಕ ಹಿನ್ನೆಲೆ

ಕೃತಕ ಭಾಷೆಗಳು ಭಾಷಾ ಸಮುದಾಯಗಳ ಭಾಷಾಮಿತಿಯನ್ನು ಮೀರುವ ಉದ್ದೇಶದಿಂದ ರೂಪುಗೊಂಡಿವೆಯೆಂದು ಹೇಳಲಾಗುತ್ತಿದೆ. ಚರಿತ್ರೆಯಲ್ಲಿ ಇಂಥ ಭಾಷೆಗಳಿಗೆ ಪ್ರೇರಣೆ ಭಿನ್ನ ರೀತಿಯಲ್ಲಿ ದೊರಕಿದೆ. ಜ್ಞಾನೋದಯ ಕಾಲದಲ್ಲಿ ಐರೋಪ್ಯರಿಗೆ ಹೊಸ ಭೂ ಭಾಗಗಳ ಪರಿಚಯವಾಯಿತು. ನೂರಾರು ಭಾಷಾ ಸಮುದಾಯಗಳು ಎದುರಾದವು. ಹತ್ತಾರು ಲಿಪಿ ವ್ಯವಸ್ಥೆಗಳು ಕಾಣತೊಡಗಿದವು. ಸಂವಹನದ ತೊಡಕುಗಳು ಉಂಟಾದವು. ಲ್ಯಾಟಿನ್ ಯುರೋಪಿನ ದೇಶಗಳಿಗೆ ಸಂಪರ್ಕ ಭಾಷೆಯಾಗಿತ್ತು. ಆದರೆ ಅದೀಗ ಹೊಸ ಜಾಗತಿಕ ಸಂದರ್ಭದಲ್ಲಿ ನಿರುಪಯುಕ್ತವಾಗತೊಡಗಿತ್ತು. ಬೇರೆ ಬೇರೆ ಲಿಪಿಗಳಿರುವುದೇ ಭಾಷೆಗಳು ಬೇರೆಯಾಗಲು ಕಾರಣವೆಂದು ಗ್ರಹಿಸಿದ ಆ ಕಾಲದ ಚಿಂತಕರು ಯಾವುದೇ ಭಾಷೆಗಾದರೂ ಹೊಂದುವ ಲಿಪಿವ್ಯವಸ್ಥೆಯೊಂದನ್ನು ರೂಪಿಸತೊಡಗಿದರು. ಈ ಹೊಸ ಸಂಕೇತ ವ್ಯವಸ್ಥೆಯೇ ಪ್ರತ್ಯೇಕ ಭಾಷೆಯಾಗಬೇಕೆಂದೂ ಅದರ ಮೂಲಕ ಎಲ್ಲ ಸಮುದಾಯಗಳ ಸಂವಹನ ಸಮಸ್ಯೆಗಳು ಪರಿಹಾರವಾಗುತ್ತ ವೆಂದೂ ತಿಳಿದರು.

ಮಾನವ ಸಮುದಾಯ ಹಲವಾರು ಬಗೆಯ ಸಂಕೇತ ವ್ಯವಸ್ಥೆಗಳನ್ನು ಹೊಂದಿದೆ. ಸರಳ ಸಂಕೇತ ವ್ಯವಸ್ಥೆಯಲ್ಲಿ ಒಂದು ಸಂಕೇತ ಒಂದು ಸಂಗತಿಯನ್ನು ಪ್ರತಿನಿಧಿಸುತ್ತದೆ. ಹಾಗೂ ಈ ಪ್ರತಿನಿಧೀಕರಣ ನೇರವಾಗಿರು ತ್ತದೆ. ಅಲ್ಲದೆ ಈ ಸಂಕೇತಗಳಿಗೆ ಸಂಗತಿಯ ಪ್ರತಿನಿಧೀಕರಣವನ್ನು ಹೊರತುಪಡಿಸಿ ಬೇರೆಯಾವ ಹೊಣೆಗಾರಿಕೆಯೂ ಇರುವುದಿಲ್ಲ. ಸಂಕೀರ್ಣ ಸಂಕೇತಗಳಲ್ಲಿ ಈ ಲಕ್ಷಣಗಳು ಭಿನ್ನವಾಗುತ್ತವೆ. ಅಲ್ಲಿ ಸಂಕೇತವೊಂದಕ್ಕೆ ಒಂದಕ್ಕಿಂತ ಹೆಚ್ಚು ಸಂಗತಿಗಳನ್ನು ಪ್ರತಿನಿಧಿಸುವ ಸಾಮರ್ಥ್ಯ ಹಾಗೂ ಹೊಣೆಗಾರಿಕೆ ಇರುತ್ತದೆ. ಪ್ರತಿನಿಧಿಸುವ ಕ್ರಮವೂ ಪರೋಕ್ಷವಾಗಿರಬಹುದು. ಅಲ್ಲದೆ ಈ ಸಂಕೇತಗಳಿಗೆ ಪ್ರತ್ಯೇಕ ಅಸ್ತಿತ್ವವೊಂದು ಇರುತ್ತದೆ. ತಾವು ಪ್ರತಿನಿಧಿಸುವ ಸಂಗತಿಯ ಗೊಡವೆಯೂ ಇಲ್ಲದೇ ತಮಗೆ ತಾವು ಪ್ರತ್ಯೇಕವಾಗಿ ಅವು ಇರಬಲ್ಲವು. ಕೃತಕ ಭಾಷೆಗಳನ್ನು ರೂಪಿಸಲು ಹೊರಟವರು ಸಹಜವಾಗಿಯೇ ಸರಳ ಸಂಕೇತ ವ್ಯವಸ್ಥೆಯ ಮಾದರಿಯನ್ನು ಅನುಸರಿಸಿದರು. ಹೀಗೆ ರೂಪಿಸಿದ ಭಾಷೆಗಳ ಸಂಕೇತಗಳು ಸರಳ ತಾರ್ಕಿಕ, ವೈಜ್ಞಾನಿಕ ನೆಲೆಗಳನ್ನು ಹೊಂದಿದ್ದವು. ಆದರೆ ಅವುಗಳು ಯಾದೃಚ್ಚಿಕವಾಗಿದ್ದವು. ಪ್ರತಿನಿಧಿಸಬೇಕಾಗಿದ್ದ ಅರ್ಥಗಳ ಬಾಹುಳ್ಯದ ದೆಸೆ ಯಿಂದಾಗಿ ಸಂಕೇತಗಳ ಸಂಖ್ಯೆಯೂ ಅಪರಿಮಿತವಾಗಿತ್ತು. ಇದರಿಂದಾಗಿ ಆ ಭಾಷೆಯನ್ನು ಕಲಿಯುವುದಾಗಲೀ ಬಳಸುವುದಾಗಲೀ ತ್ರಾಸದಾಯಕವಾಗ ತೊಡಗಿತು. ನೆನಪಿನ ಶಕ್ತಿಗೆ ಸವಾಲಾಗುವಷ್ಟು ಕಠಿಣವಾಗಿತ್ತು. ಅಲ್ಲದೆ ಎಲ್ಲ ಸಂಕೇತಗಳನ್ನು ವ್ಯವಸ್ಥೆಗೊಳಿಸುವಾಗ ಕಟ್ಟುನಿಟ್ಟಾದ ವರ್ಗೀಕರಣವನ್ನು ಅನುಸರಿಸಿದ್ದರಿಂದ ಹೊಸ ಪರಿಕಲ್ಪನೆಗಳನ್ನು ಮಾಹಿತಿಯನ್ನು ಈ ಭಾಷೆಯಲ್ಲಿ ಅಳವಡಿಸಿ ಕೊಳ್ಳಲು ಅವಕಾಶಗಳೇ ಇರಲಿಲ್ಲ.

ಕೃತಕ ಭಾಷೆಗಳನ್ನು ಉತ್ಸುಕತೆಯಿಂದ ಉಮೇದಿನಿಂದ ರೂಪುಗೊಳಿಸಿ ದರೂ ಬಳಸಲು ಇದ್ದ ಅಡ್ಡಿಗಳಿಂದಾಗಿ ಇಂಥ ಭಾಷೆಗಳನ್ನು ರೂಪಿಸುವ ಯತ್ನಗಳಿಗೆ ಹಿನ್ನಡೆಯುಂಟಾಯಿತು. ಸುಮಾರು ಒಂದು ಶತಮಾನದ ಅನಂತರ ಬೇರೊಂದು ಕಾರಣಕ್ಕಾಗಿ ಈ ಬಗೆಯ ಕೃತಕ ಭಾಷೆಯನ್ನು ರೂಪಿಸುವ ಪ್ರಯತ್ನಗಳು ಮತ್ತೆ ಮೊದಲಾದವು. ಭಾಷೆಗಳಿಗೆ ಸಂಬಂಧಿಸಿದ ಆ ಹೊತ್ತಿನ ಚಿಂತನೆಗಳಲ್ಲಿ, ಭಾಷೆಗಳಲ್ಲಿರುವ ಅಸ್ಪಷ್ಟತೆ, ಅಸಂದಿಗ್ಧತೆ, ವ್ಯತ್ಯಯಗಳನ್ನು ಕುರಿತಂತೆ ಆತಂಕಗಳು ವ್ಯಕ್ತಗೊಳ್ಳುತ್ತಿದ್ದವು. ಮಾನವರ ಆಲೋಚನೆಯ ವಿಧಾನ ದಲ್ಲಿರುವ ಸಾರ್ವತ್ರಿಕ ನೆಲೆಗಳನ್ನು ಭಾಷೆಯ ವಿಶಿಷ್ಟಾಂಶಗಳು ಪ್ರಕಟಿಸುತ್ತಿಲ್ಲ ವೆಂದು ಕುದಿಗೊಂಡಿದ್ದರು. ಆದ್ದರಿಂದ ನಿಯಮಬದ್ಧ ಹಾಗೂ ಸರಳ ಸಂಕೇತ ವ್ಯವಸ್ಥೆಯುಳ್ಳ ಭಾಷೆಯ ರಚನೆಯೇ ಈ ಸಮಸ್ಯೆಗೆ ಪರಿಹಾರವೆಂದು ಅವರು ತಿಳಿದರು. ಜ್ಞಾನದ ಗ್ರಹಿಕೆ ಮತ್ತು ಪ್ರಸಾರಕ್ಕೆ, ಅಡೆತಡೆಗಳಿಲ್ಲದ ಸಂವಹನಕ್ಕೆ ಇಂಥ ಹೊಸಭಾಷೆಗಳು ಅವಶ್ಯವೆಂದು ಭಾವಿಸಿ ಆ ದಿಕ್ಕಿನಲ್ಲಿ ಪ್ರಯತ್ನಶೀಲ ರಾದರು. ಈ ಹಂತದಲ್ಲಿ ಕೃತಕ ಭಾಷೆಗಳ ಉದ್ದೇಶ ಭಾಷೆ ಭಾಷೆಗಳ ನಡುವಣ ಗೋಡೆಗಳನ್ನು ಒಡೆಯುವ ಸಂಪರ್ಕ ಭಾಷೆಯಾಗಿ ಕಾರ್ಯನಿರ್ವಹಿಸುವು ದಾಗಿರಲಿಲ್ಲ. ಅದಕ್ಕೆ ಬದಲಾಗಿ ಭಾಷೆಯಲ್ಲೇ ಇರುವ ‘ಅತಾರ್ಕಿಕ’, ‘ಅಸ್ಪಷ್ಟ’ ‘ಸಂದಿಗ್ಧ’ ನೆಲೆಗಳನ್ನು ನಿವಾರಿಸುವುದು ಈ ಭಾಷೆಗಳನ್ನು ರೂಪಿಸಲು ಮುಖ್ಯ ಪ್ರೇರಣೆಯಾಗಿತ್ತು. ಇಂಥ ಪ್ರಯತ್ನಗಳೂ ಉತ್ಸಾಹದಾಯಕ ಪ್ರತಿಕ್ರಿಯೆಯನ್ನು ಪಡೆಯಲಾಗಲಿಲ್ಲ.

ಎರಡನೆಯ ಬಗೆಯ ಕೃತಕ ಭಾಷೆಗಳನ್ನು ರೂಪಿಸುವ ಪ್ರಯತ್ನಗಳು 19ನೆಯ ಶತಮಾನದ ಕೊನೆಯ ದಶಕಗಳಲ್ಲಿ ಮೊದಲಿಟ್ಟವು. ಇಂಥ ಪ್ರಯತ್ನ ಗಳಿಗೆ ಸಾರ್ವಜನಿಕರ ಒತ್ತಾಸೆಯೂ ದೊರಕತೊಡಗಿತ್ತು. ವೊಲ್ ಫುಕ್ ಎಂಬುದು ಹೀಗೆ ರೂಪುಗೊಂಡ ಮೊದಲ ಭಾಷೆ. ಜತೆಜತೆಗೆ ಎಸ್ಪರಾಂತೊ, ಈಡಿಯಮ್, ನ್ಯೂಟ್ರಲ್ ಇದೊ ಮತ್ತಿತರ ಕೆಲವು ಭಾಷಾ ವ್ಯವಸ್ಥೆಗಳು ಮೈದಳೆದವು. ನ್ಯೂಯಾರ್ಕ್ ನಗರದಲ್ಲಿ 1924ರ ವೇಳೆಗೆ ಅಂತಾರಾಷ್ಟ್ರೀಯ ಸಹಾಯಕ ಭಾಷಾ ಸಂಘ ಸ್ಥಾಪನೆಯಾಯಿತು. ಈ ವೇಳೆಗೆ ರೂಪಗೊಂಡಿದ್ದ ಕೃತಕ ಭಾಷೆಗಳಿಗೆ ಸಮಾನ ಪದಕೋಶವನ್ನು ರೂಪಿಸುವುದು ಈ ಸಂಘದ ಮುಖ್ಯ ಉದ್ದೇಶವಾಗಿತ್ತು. ಇಷ್ಟೆಲ್ಲಾ ನಡೆದರೂ ಎಸ್ಪರಾಂತೋ ಎಂಬೊಂದು ಕೃತಕ ಭಾಷೆಯನ್ನು ಹೊರತುಪಡಿಸಿದರೆ ಉಳಿದವು ಅಲ್ಪಾಯುಗಳು; ಇಲ್ಲವೇ ಮಿತಪ್ರಸಾರವನ್ನು ಮಾತ್ರ ಪಡೆದವು.

ಎರಡು ಮಹಾಯುದ್ಧಗಳಿಗೆ ಗುರಿಯಾದ, ಅತಿ ದೀರ್ಘಕಾಲದ ಶೀತಲ ಸಮರಕ್ಕೆ ಸಿಲುಕಿ ನಲುಗಿದ, ಸದಾಯುದ್ಧದ ಭೀತಿಯಲ್ಲೇ ನರಳುವ ಲೋಕ ದಲ್ಲಿ ಶಾಂತಿ ಸ್ಥಾಪನೆಗೆ ಹುಡುಕಾಟ ಸಹಜ. ಹಲವಾರು ವೇದಿಕೆಗಳು, ಸಂಸ್ಥೆ ಗಳು, ಆಂದೋಲನಗಳು ಈ ದಿಸೆಯಲ್ಲಿ ನಡೆದಿವೆ. ದೇಶಗಳ ನಡುವೆ ಪರಸ್ಪರ ದ್ವೇಷ, ಅಸೂಯೆ, ಅಸಹನೆ, ಸಂಶಯ, ದಬ್ಬಾಳಿಕೆ ಇವೆಲ್ಲವೂ ನಡೆಯುತ್ತಿರುವು ದಕ್ಕೆ ಆ ದೇಶಗಳ ನಡುವೆ ಸಂವಾದ ನಡೆಯದಿರುವುದೇ ಕಾರಣ ಎಂದು ಕೆಲವರು ತಿಳಿದರು. ಬೇರೆ ಬೇರೆ ಭಾಷೆಗಳು ಹೀಗೆ ಗೋಡೆಗಳನ್ನೂ ಕಟ್ಟುತ್ತಿವೆ ಎಂದು ಕೊಂಡು ಅಂತಹ ಗೋಡೆಗಳನ್ನು ಒಡೆಯಲು ಯತ್ನಿಸಿದರು. ಅದಕ್ಕಾಗಿ ಎಲ್ಲರಿಗೂ ತಿಳಿದಿರುವಂತೆ ಒಂದೇ ಭಾಷೆಯಾಗಲಿ, ಸುಲಲಿತ ಸಂವಹನದ ವ್ಯವಸ್ಥೆಯಾಗಲೀ ಶಾಂತಿ ಸ್ಥಾಪನೆಗೆ ಕಾರಣವಾಗಲಾರವು. ಅಂಥ ಸಂದರ್ಭವನ್ನು ಸೃಷ್ಟಿಸಲಾರವು. ಈ ಅಂಶವನ್ನು ಮನಗಂಡು ಕೃತಕ ಭಾಷೆಗಳ ಪ್ರವರ್ತಕರು ತಮ್ಮ ಗುರಿಯನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಸಂಪರ್ಕ ಭಾಷೆಯಾಗಿ ಕಾರ್ಯನಿರ್ವಹಿಸುವುದೇ ಕೃತಕ ಭಾಷೆಗಳ ಗುರಿಯಾಗಿದೆ. ಯುರೋಪಿನ ದೇಶಗಳ ಭಾಷೆಗಳು ಪ್ರತ್ಯೇಕವಾಗಿವೆ. ಆದ್ದರಿಂದ ಕೃತಕ ಭಾಷೆಯೊಂದನ್ನು ಮಿತ ಉದ್ದೇಶದ ಸಂಪರ್ಕ ಭಾಷೆಯನ್ನಾಗಿ ಬಳಸುವ ಅಪೇಕ್ಷೆಗೆ ಈಗ ಒತ್ತು ಹೆಚ್ಚಾಗುತ್ತಿದೆ. ಬ್ಯಾಂಕು, ಉಪಹಾರ ಗೃಹ, ಹೋಟೆಲ್, ಟೆಲಿಫೋನ್ ಬೂತ್, ರಸ್ತೆ ಸೂಚನೆಗಳು, ಜಾಹೀರಾತು ಇವೇ ಮುಂತಾದ ಕಡೆ ಇಂಥ ಕೃತಕ ಭಾಷೆಗಳನ್ನು ಮಾಹಿತಿ ಪ್ರಸಾರಕ್ಕಾಗಿ ಬಳಸುವುದು ಸೂಕ್ತ ಹಾಗೂ ಅವಶ್ಯವೆಂದು ಹೇಳಲಾಗುತ್ತಿದೆ.

ಎಸ್ಪರಾಂತೊ

ಈಗ ಹೆಚ್ಚು ವ್ಯಾಪಕವಾಗಿರುವ ಕೃತಕ ಭಾಷೆಯೆಂದರೆ ಎಸ್ಪರಾಂತೋ. ಪೊಲೆಂಡಿನ ಲುಡ್‌ವಿಗ್ ಲಾಜರಸ್ ಜೆಮೆನಾಫ್ (1859-1917) ಎಂಬಾತ ಈ ಭಾಷೆಯನ್ನು ರೂಪಿಸಿದರು. ಇವರ ಭಾಷಿಕ ಹಿನ್ನೆಲೆ ಸಂಕೀರ್ಣವಾಗಿದೆ. ಮನೆಯಲ್ಲಿ ರಷಿಯನ್ ಬಳಸುತ್ತಿದ್ದರು. ಯಿದಿಶ್, ಪೊಲಿಶ್ ಮತ್ತು ಹಿಬ್ರೂ ಗಳನ್ನು ಮನೆಯ ಹೊರಗೆ ಉಪಯೋಗಿಸುತ್ತಿದ್ದರು. ಶಾಲೆಯಲ್ಲಿ ಫ್ರೆಂಚ್, ಲ್ಯಾಟಿನ್, ಜರ್ಮನ್, ಗ್ರೀಕ್ ಮತ್ತು ಇಂಗ್ಲಿಶ್ ಅನ್ನು ಕಲಿಯುತ್ತಿ ದ್ದರು. ಇದಲ್ಲದೆ ಧರ್ಮಪ್ರಚಾರಕರಾಗಿ ಹೊಮೊರನಿಸ್ಮೆ ಎಂಬ ವಿಶ್ವಧರ್ಮ ವನ್ನು ಪ್ರಚುರಪಡಿಸಲು ಯತ್ನಿಸಿದರು. ತಮ್ಮ 15ನೆಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಭಾಷೆಯೊಂದರ ರೂಪುರೇಶೆಗಳನ್ನು ಗುರುತಿಸಲು ತೊಡಗಿದ್ದರು. 1887ರಲ್ಲಿ ಮೆಜ್ದುನರೊದ್ನಿ ಯಜ್ಯಕ್ ಎಂಬ ಪ್ರಬಂಧವನ್ನು ಪ್ರಕಟಿಸಿದರು. ರಷ್ಯನ್ ಭಾಷೆಯಲ್ಲಿ ಈ ಪ್ರಬಂಧವನ್ನು ರಚಿಸಲಾಗಿತ್ತು. ಈ ಪ್ರಬಂಧದಲ್ಲಿ ಪ್ರಸ್ತುತ ಪಡಿಸಲಾದ  ಅಂತಾರಾಷ್ಟ್ರೀಯ ಭಾಷೆಯಲ್ಲಿ ಲಿಂಗ್ವೋ ಇಂಟರ‌್ನೆಸಿಯಾ ಎಂದು ಹೆಸರಿಸಿದ್ದರು. ನಿಜನಾಮವನ್ನು ಮುಚ್ಚಿಟ್ಟು ಡಾಕ್ಟೊರೊ ಎಸ್ಪರಾಂತೊ ಎಂಬ ಹೆಸರಿನಲ್ಲಿ ಪ್ರಬಂಧವನ್ನು ಪ್ರಕಟಿಸಿದ್ದರು. ಅನಂತರದಲ್ಲಿ ಈ ಪ್ರಬಂಧ ಮಂಡಿಸಿದ ಭಾಷೆಗೆ ಎಸ್ಪರಾಂತೊ ಎಂಬ ಹೆಸರು ನಿಂತಿತು. 1889ರಲ್ಲಿ ಎಸ್ಪರಾಂತೊದ ಮೊದಲ ಪತ್ರಿಕೆಯಲ್ಲಿ ಎಸ್ಪರಾಂತಿಸ್ತೊ ಪ್ರಕಟವಾಯಿತು. 1905ರಲ್ಲಿ ಎಸ್ಪರಾಂತೊ ಕುರಿತ ಮೊದಲ ವಿಶ್ವಸಮ್ಮೇಳನ ನಡೆಯಿತು. ಸುಮಾರು 20 ದೇಶಗಳು 300 ಪ್ರತಿನಿಧಿಗಳು ಭಾಗವಹಿಸಿದ ಸಮ್ಮೇಳನ ಅದು. ಅದೇ ವರ್ಷ ಫಂಡಮೆಂಟೋ ದೆ ಎಸ್ಪರಾಂತೊ ಎಂಬ ಗ್ರಂಥ ಪ್ರಕಟ ವಾಯಿತು. ಈ ಭಾಷೆಯ ರಚನೆ, ಪದಕೋಶಗಳನ್ನು ಅಧಿಕೃತವಾಗಿ ಮೊದಲ ಬಾರಿಗೆ ಈ ಗ್ರಂಥದಲ್ಲಿ ನಿರೂಪಿಸಲಾಗಿದೆ. ಈಗಲೂ ಎಸ್ಪರಾಂತೊ ಬಳಸುವವರು ಈ ಗ್ರಂಥದಲ್ಲಿ ಮಂಡಿಸಲಾದ ಚೌಕಟ್ಟನ್ನೇ ಚಾಚೂ ತಪ್ಪದೆ ಪಾಲಿಸಬೇಕಾಗಿದೆ.

ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಈಗ ಎಸ್ಪರಾಂತೊವನ್ನು ಸಂಪರ್ಕ ಭಾಷೆಯನ್ನಾಗಿ ಬಳಸುವ ಸಂದರ್ಭಗಳೂ ಹೆಚ್ಚಾಗಿವೆ. ಆ ಭಾಷೆಯಲ್ಲಿ ಹಲವಾರು ಪತ್ರಿಕೆಗಳು ಪ್ರಕಟವಾಗುತ್ತಿವೆ. ವಾರ್ತಾ ಪತ್ರಿಕೆಗಳು ಹೊರಬರು ತ್ತಿವೆ. ಬೈಬಲ್, ಕುರಾನ್ ಮೊದಲುಗೊಂಡು ಹಲವಾರು ಗ್ರಂಥಗಳು, ವಿವಿಧ ಬಗೆಯ ಕೃತಿಗಳು ಎಸ್ಪರಾಂತೊಗೆ ಅನುವಾದ ಗೊಂಡಿವೆ. ಸ್ವತಂತ್ರ ಕೃತಿಗಳು ರಚನೆಯಾಗಿವೆ. ಎಷ್ಟೋ ದೇಶಗಳಲ್ಲಿ ರೇಡಿಯೋ ಕೇಂದ್ರಗಳಿಂದ ಈ ಭಾಷೆಯ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುತ್ತಿದೆ. 1970ರ ವೇಳೆಗೆ ವಿಶ್ವದಾದ್ಯಂತ 600 ಶಾಲೆಗಳಲ್ಲಿ 31 ವಿಶ್ವವಿದ್ಯಾಲಯಗಳಲ್ಲಿ ಆ ಭಾಷೆಯನ್ನು ಕಲಿಸಲಾಗು ತ್ತಿತ್ತು. ಯಾವುದೇ ಭಾಷೆಯನ್ನು ಎಷ್ಟು ಜನ ಬಳಸುವರೆಂದು ನಿಖರವಾಗಿ ಹೇಳುವುದು ಕಷ್ಟ. ಈ ಭಾಷೆಯ ಮಟ್ಟಿಗೂ ಈ ಮಾತು ನಿಜ. ನಿರರ್ಗಳವಾಗಿ ಈ ಭಾಷೆಯನ್ನು ಆಡುವವರ ಸಂಖ್ಯೆಯ ಅಂದಾಜು 1 ರಿಂದ 1.5 ಮಿಲಿಯನ್. ಇವರೆಲ್ಲರಿಗೂ ಇದು ಎರಡನೆಯ ಅನ್ಯ ಭಾಷೆ. ಅಲ್ಲದೆ ಮಾತ ನಾಡುವ ಸಾಮರ್ಥ್ಯ ಕೂಡಾ ವ್ಯತ್ಯಾಸವಾಗುತ್ತದೆ. 1972ರ ಹೊತ್ತಿಗೆ 60 ದೇಶಗಳಲ್ಲಿ ಆಯಾ ದೇಶದ ಎಸ್ಪರಾಂತೊ ಸಂಘಗಳಿದ್ದವು. 1250 ಸ್ಥಳೀಯ ಸಂಘಗಳಿದ್ದವು. ಸಂಘಗಳ ಸದಸ್ಯರ ಸಂಖ್ಯೆ ಏನೂ ಹೇಳಿಕೊಳ್ಳುವಂತಿರಲಿಲ್ಲ. ಆ ಸಂಖ್ಯೆಯನ್ನು ಲೆಕ್ಕಕ್ಕೆ ಹಿಡಿಯುವ ಮೂಲಕ ಮಾತಾಡುವವರ ಸಂಖ್ಯೆಯನ್ನು ತಿಳಿಯುವುದು ಸಾಧ್ಯವಿಲ್ಲ. ವಿಶ್ವ ಎಸ್ಪರಾಂತೊ ಸಂಘಕ್ಕೆ 1979ರಲ್ಲಿ ಸುಮಾರು 31 ಸಾವಿರ ಸದಸ್ಯರಿದ್ದರು. ಬಹುಪಾಲು ಸದಸ್ಯರು ಬಲ್ಗೇರಿಯಾ, ಪೊಲೆಂಡ್, ಜೆೆಕೋಸ್ಲೋವಾಕಿಯಾ ಮತ್ತು ಹಂಗೇರಿ ಮುಂತಾದ ಪೂರ್ವ ಯುರೋಪಿನ ದೇಶಗಳವರು. ಗಣನೆಗೆ ಬರುವ ಐರೋಪ್ಯೇತರ ದೇಶವೆಂದರೆ ಜಪಾನ್

ಇಷ್ಟೆಲ್ಲ ಅದರೂ ಎಸ್ಪರಾಂತೊಗೆ ಅಧಿಕೃತವಾಗಿ ಅಂತಾರಾಷ್ಟ್ರೀಯ ಭಾಷೆ ಯೆಂಬ ಮನ್ನಣೆಯಿಲ್ಲ. ಸುಮಾರು 10 ಲಕ್ಷ ಜನ ಸಹಿ ಮಾಡಿದ ಅಹವಾ ಲೊಂದನ್ನು ವಿಶ್ವಸಂಸ್ಥೆಗೆ 1966ರಲ್ಲಿ ಸಲ್ಲಿಸಿ ಮನ್ನಣೆ ಕೋರಲಾಯಿತು. ಆದರೆ ಸಮ್ಮತಿ ಸಿಗಲಿಲ್ಲ. ಈ ಅಹವಾಲಿಗೆ ಹಲವು ದೇಶಗಳ ಜನರ ಸಹಿಗಳಿದ್ದವು. ಎಸ್ಪರಾಂತೊಗೆ ಇರುವ ಈ ಪ್ರತಿರೋಧಕ್ಕೆ ಕಾರಣ ಎರಡು: ಇಂಗ್ಲಿಶನ್ನು ಅಂತಾರಾಷ್ಟ್ರೀಯ ಭಾಷೆಯೆಂದು ತಿಳಿದು ಅದರ ಪರವಾಗಿ ವಾದಿಸುವವರು ಎಸ್ಪರಾಂತೊವನ್ನು ವಿರೋಧಿಸುತ್ತಾರೆ. ಎಸ್ಪರಾಂತೊಗೆ ಬೆಂಬಲ ಪೂರ್ವ ಯುರೋಪಿನ ದೇಶಗಳಿಂದ ಅಧಿಕವಾಗಿ ದೊರಕಿರುವುದರಿಂದ ರಾಜಕೀಯ ಕಾರಣಗಳಿಗಾಗಿ ಈ ಭಾಷೆಗೆ ಮನ್ನಣೆ ನೀಡಲು ನಿರಾಕರಿಸ ಲಾಗುತ್ತಿದೆ.

ಎಸ್ಪರಾಂತೊ ಪರಿಚಯ

ಈ ಭಾಷೆಯಲ್ಲಿರುವ ವ್ಯಾಕರಣ ನಿಯಮಗಳು ಈ ಕೆಳಗಿನಂತಿವೆ.

1. La ಎಂಬುದು ನಿರ್ದೇಶಕ. ಈ ಭಾಷೆಯಲ್ಲಿ ಒಂದೇ ಒಂದು ನಿರ್ದೇಶಕದ ಬಳಕೆಯಾಗುತ್ತದೆ.

2. ಎಲ್ಲಾ ನಾಮಪದಗಳು-O ನಿಂದ ಕೊನೆಗೊಳ್ಳುತ್ತವೆ. ಬಹುವಚನ ಪ್ರತ್ಯಯವಾಗಿ- j ಬಳಕೆಯಾಗುತ್ತದೆ. ವಿಭಕ್ತಿ ಪ್ರತ್ಯಯಗಳು ಎರಡು: ಕರ್ತೃ ಮತ್ತು ಕರ್ಮ. ಕರ್ಮ ವಿಭಕ್ತಿ ಪ್ರತ್ಯಯ -n. ಉಳಿದೆಲ್ಲ ವಿಭಕ್ತಿ ಗಳನ್ನು ಪದಪೂರ್ವ ಘಟಕಗಳಿಂದ ಸೂಚಿಸಲಾಗುತ್ತದೆ.

3. ಎಲ್ಲಾ ವಿಶೇಷಣಗಳೂ -a ನಿಂದ ಕೊನೆಗೊಳ್ಳುತ್ತವೆ. ಅಲ್ಲದೆ ನಾಮ ಪದದೊಡನೆ ಹೊಂದಿಕೊಳ್ಳುತ್ತವೆ. ಅಂದರೆ ಬಹುವಚನ ಪ್ರತ್ಯಯವುಳ್ಳ ನಾಮಪದವಿದ್ದರೆ ಗುಣವಾಚಕಕ್ಕೆ ಬಹುವಚನ ಪ್ರತ್ಯಯವಿರುತ್ತದೆ.

4. ಸಂಖ್ಯಾವಾಚಕಗಳ ರೂಪ ನಿಯತ; ವಿಕಲ್ಪಗಳಿಲ್ಲ.

5. mi (ನಾನು), vi (ನೀನು), li (ಅವನು), si (ಅವಳು), gi (ಅದು), vi (ನೀವು), ni (ನಾವು) ಮತ್ತು ili (ಅವರು)- ಇವು ಸರ್ವನಾಮಗಳು.

6. ಕ್ರಿಯಾಪದಗಳ ಅಂತ್ಯಧ್ವನಿಯು ನಿರ್ದಿಷ್ಟ ಕಾಲ ಸೂಚಿಸುವಾಗ ಬದಲಾಗದೆ ಇರುತ್ತದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ ಎಂಬ ಮೂರು ಕಾಲಗಳಿವೆ.

7. ಆಜ್ಞಾತ್ಮಕ ಅವ್ಯಯ, ಆಖ್ಯಾತ ಮತ್ತು ಐದು ಕೃದಂತ ರೂಪಗಳಿವೆ.

8. ಕ್ರಿಯಾ ವಿಶೇಷಣಗಳು – e ನಿಂದ ಕೊನೆಗೊಳ್ಳುತ್ತವೆ.

9. ಪದ ಪೂರ್ವ ವಿಭಕ್ತಿ ಘಟಕಗಳ ಕರ್ತೃ ವಿಭಕ್ತಿ ರೂಪದೊಡನೆ ಬರುತ್ತವೆ.

10. ಬರೆದ ಎಲ್ಲಾ ಅಕ್ಷರಗಳನ್ನು ಉಚ್ಚರಿಸಲಾಗುತ್ತದೆ.

11. ಉಪಾಂತ್ಯ (ಕೊನೆಯದಕ್ಕಿಂತ ಹಿಂದಿನದು) ಅಕ್ಷರದ ಮೇಲೆ ಘಾತ.

12. ಧಾತುಗಳನ್ನು ಕೂಡಿಸಿ ಸಮಾಸ ಪದಗಳನ್ನು ರೂಪಿಸಬಹುದು.

13. ಉಪವಾಕ್ಯವೊಂದರಲ್ಲಿ ಒಂದು ನಿಷೇಧಾತ್ಮಕ ರೂಪವನ್ನು ಮಾತ್ರ ಬಳಸಬೇಕು.

14. ಕ್ರಿಯಾಪದದ ಮೇಲೆ ಎಲ್ಲಿ ಎಂಬ ಪ್ರಶ್ನೆಯನ್ನು ಹಾಕಿದಾಗ ಬರುವ ಉತ್ತರವನ್ನು ಸೂಚಿಸುವ ನಾಮಪದಕ್ಕೆ ಕರ್ಮವಿಭಕ್ತಿ ಪ್ರತ್ಯಯವನ್ನು ಹತ್ತಿಸಲಾಗುವುದು.

15. ಬೇರೆ ಯಾವುದೇ ಪದಪೂರ್ವ ವಿಭಕ್ತಿ ಸೂಚಕ ಘಟಕವನ್ನು ಬಳಸುವುದು ಸಾಧ್ಯವಿಲ್ಲದೇ ಇರುವಾಗ je ಎಂಬ ಅನಿರ್ದಿಷ್ಟ ರೂಪವನ್ನು ಬಳಸ ಲಾಗುತ್ತದೆ.

16. ಎರವಲು ಪದಗಳನ್ನು ಬರೆಯುವಾಗ ಈ ಭಾಷೆಯ ಬರೆಹದ ನಿಯಮಗಳನ್ನು ಪಾಲಿಸಲಾಗುವುದು.

17. ಉಚ್ಚಾರಣೆಯ ಸೌಲಭ್ಯಕ್ಕಾಗಿ ನಿರ್ದೇಶಕದ – a ಮತ್ತು ನಾಮಪದದ – O ಧ್ವನಿಗಳನ್ನು ಕೈಬಿಡಬಹುದು.

ಸುಮಾರು 15000 ಧಾತುಗಳಿವೆ. ಸಮಾಸ ರಚನೆಯಿಂದ ಅಸಂಖ್ಯಾತ ರೂಪಗಳನ್ನು ಪಡೆಯಬಹುದು. ಆದಿಪ್ರತ್ಯಯ ಮತ್ತು ಅಂತ್ಯ ಪ್ರತ್ಯಯಗಳ ಬಳಕೆ ವಿಫುಲವಾಗಿದೆ.

ಒಂದು ಕೃತಕ ಭಾಷೆ ಹೇಗಿರಬೇಕು?

ಕೃತಕ ಭಾಷೆಗಳು ಏಕೆ ಬೇಕು ಎಂಬುದಕ್ಕೆ ಸಮರ್ಥನೆಗಳನ್ನು ಪರಿಶೀಲಿಸಿ ದ್ದಾಯಿತು. ಆದರೆ ಅಂಥದ್ದೊಂದು ಭಾಷೆಯನ್ನು ರೂಪಿಸುವುದು ಹೇಗೆ. ಸಾಮಾನ್ಯ ಲಕ್ಷಣಗಳನ್ನು ಗುರುತಿಸಲು ಸಾಧ್ಯವೇ? ಕೃತಕ ಭಾಷೆಯೊಂದು ಹೇಗಿದ್ದರೆ ಸೂಕ್ತವೆಂದು ತಿಳಿಸುವ ಲಕ್ಷಣ ನಿರ್ವಚನ ಮಾಡಲಾಗಿದೆ. ಒಂದೊಂದು ಲಕ್ಷಣಗಳನ್ನೂ ವಿವರಿಸಲಾಗಿದೆ. ಈ ಲಕ್ಷಣಗಳಲ್ಲಿ ಕೆಲವು ಸರಳವಾಗಿವೆ ಮತ್ತು ಕೆಲವು ಸಂಕೀರ್ಣವಾಗಿವೆ. ಆದ್ದರಿಂದ ಈ ಎಲ್ಲ ಲಕ್ಷಣಗಳನ್ನು ಹೊಂದಿರುವ ಕೃತಕ ಭಾಷೆಯೊಂದನ್ನು ರೂಪಿಸುವುದು ಅತ್ಯಂತ ಕಠಿಣವಾದ ಕೆಲಸವಾಗಿದೆ. ಕಲಿಯಲು ಸುಲಭ ವಾಗಿರಬೇಕು ಇದನ್ನು ಸಾಧಿಸುವುದು ಹೇಗೆ? ಸಹಜ ಭಾಷೆಗಳನ್ನು- ಅವು ಅನ್ಯ ಭಾಷೆಗಳಾಗಿದ್ದಾಗ – ಕಲಿಯುವುದು ಕಷ್ಟ. ಇದಕ್ಕೆ ಆ ಭಾಷೆಗಳ ವ್ಯಾಕರಣ ಕ್ಲಿಷ್ಟ ಮತ್ತು ಅನಿಯತ ವಾಗಿರುವುದೇ ಕಾರಣವೆಂದು ತಿಳಿಯಲಾಗು ತ್ತದೆ. ಆದ್ದರಿಂದ ಕೃತಕ ಭಾಷೆಯ ವ್ಯಾಕರಣವನ್ನು ಸರಳವಾಗಿ ಮತ್ತು ಸಾಕಷ್ಟು ನಿಯತವಾಗಿರುವುದು ಅವಶ್ಯ. ಪದಗಳ ಅರ್ಥರಚನೆಯಲ್ಲಿ ಸಂದಿಗ್ಧತೆಗೆ, ಅರ್ಥಸಡಿಲತೆಗೆ, ಅವಕಾಶವಿರ ಬಾರದು. ಪದಗಳ ಬರವಣಿಗೆ ಧ್ವನ್ಯಾತ್ಮಕವಾಗಿರಬೇಕು. ಉಚ್ಚರಿಸಲು ಕಷ್ಟವಾಗುವ ಧ್ವನಿಗಳು ಇರಕೂಡದು.

ಸಹಜ ಭಾಷೆಗಳೊಡನೆ ಸಂಬಂಧ : ಕೃತಕ ಭಾಷೆ ಯಾರಿಗೂ ಮಾತೃ ಭಾಷೆಯಲ್ಲ. ಆದ್ದರಿಂದ ಈ ಭಾಷೆಯನ್ನು ಬಳಸುವವರಿಗೆ ಎರಡೂ ಭಾಷೆಗಳ ನಡುವಣ ವ್ಯವಹಾರ ಸುಲಭವಾಗುವಂತಿರಬೇಕು. ತನ್ನ ಭಾಷೆಯ ವಾಗ್ರೂಢಿಗಳನ್ನು ಮಂಡಿಸಲು ಅನುಕೂಲ ವಾಗುವಂಥ ರಚನಾ ಸೌಲಭ್ಯಗಳಿರ ಬೇಕು. ಭಾಷೆಗಳಲ್ಲಿರುವ ವಿಶ್ವಾತ್ಮಕ / ಸಾರ್ವತ್ರಿಕ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರಬೇಕು. ಅಂತಾರಾಷ್ಟ್ರೀಯ ಬಳಕೆಗೆ ತೆರೆದುಕೊಂಡಿರುವ ಪದಧಾತು ಗಳನ್ನು ಹೆಚ್ಚು ಅವಲಂಬಿಸಿರಬೇಕು.

ವಿವಿಧ ಬಗೆಯ ಹೊಣೆಗಳನ್ನು ನಿರ್ವಹಿಸುವ ಸಾಮರ್ಥ್ಯ : ದಿನದಿನ ಮಾತುಕತೆಗಳಿಗೆ, ಬರವಣಿಗೆಗಳಿಗೆ ಒಗ್ಗುವಂತಿರಬೇಕು. ಅಲ್ಲದೆ ವಿಜ್ಞಾನ, ಧರ್ಮ, ವಾಣಿಜ್ಯ, ಕ್ರೀಡೆ, ರಾಜಕಾರಣ ಇವೇ ಮುಂತಾದ ವಲಯಗಳ ಅವಶ್ಯಕತೆಗಳನ್ನು ಪೂರೈಸುವ ಸಾಮರ್ಥ್ಯವಿರಬೇಕು. ತಂತಿ, ರೇಡಿಯೋ, ಟೆಲಿವಿಷನ್ ಇವೇ ಮೊದಲಾದ ಅಂತಾರಾಷ್ಟ್ರೀಯ ಸಂಪರ್ಕ ಮಾಧ್ಯಮಗಳಲ್ಲಿ ಈ ಭಾಷೆಯನ್ನು ಬಳಸಲು ಸಾಧ್ಯವಾಗುವಂತಿರಬೇಕು.

ಪ್ರಮಾಣೀಕರಣ : ಈ ಭಾಷೆಗೆ ಉಪಭಾಷೆಗಳಿರುವುದಿಲ್ಲ. ಉಪಭಾಷೆ ಗಳಿದ್ದರೆ ಪರಸ್ಪರ ಸಂವಹನದಲ್ಲಿ ಅಡ್ಡಿಗಳು ಹೆಚ್ಚಾಗುತ್ತವೆ. ಹಾಗಾಗಿ ಯಾವುದೇ ಬಗೆಯ ವಿಕಲ್ಪಗಳಿಗೆ ಅವಕಾಶವಿರಬಾರದು. ಈ ಭಾಷೆಯ ಪ್ರಮಾಣ ಬದ್ಧತೆ ಯನ್ನು ಸದಾ ಪರಿಶೀಲಿಸುವ ಸಮಿತಿಯೊಂದು ಇರುತ್ತದೆ. ಎಲ್ಲ ಹೊಸ ರೂಪಗಳ ಸಾಧುತ್ವ ಮತ್ತು ಅಳವಡಿಕೆಯ ಕ್ರಮಗಳನ್ನು ಈ ಸಮಿತಿಯು ನಿರ್ಧರಿಸುತ್ತದೆ.

ನಿಸ್ಸಂಗತ್ವ : ಈ ಭಾಷೆಗೆ ಯಾವುದೇ ರಾಜಕೀಯ ಸಂದರ್ಭದ ಒತ್ತಾಸೆ ಇರಬಾರದು. ಭಾಷಿಕವಾಗಿಯೂ ಯಾವ ಭಾಷಾವರ್ಗದೊಡನೆಯೂ ಸಂಬಂಧ ಕಲ್ಪಿಸದಂತಿರಬೇಕು, ವಿಶ್ವಶಾಂತಿ ಮತ್ತು ಮಾನವ ಜನಾಂಗದ ಸಹ ಬಾಳ್ವೆ ಯನ್ನು ಸಾಧಿಸಲು ಈ ಲಕ್ಷಣವನ್ನು ಸಾಧಿಸುವುದು ಅವಶ್ಯವೆಂದು ಕೃತಕ ಭಾಷೆಯ ಪ್ರವರ್ತಕರು, ಸಮರ್ಥಕರು ಹೇಳುತ್ತಾರೆ.

ವಾಸ್ತವವನ್ನು ಗ್ರಹಿಸಲು ಒಳನೋಟ : ಕೃತಕ ಭಾಷೆಗಳು ಭಾಷೆಯ ಮಿತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ಸಂವಹನದ ಕೊರತೆ ಯನ್ನು ನಿವಾರಿಸಲು ರೂಪಗೊಂಡ ಸಂಪರ್ಕ ಭಾಷೆಗಳು. ಈ ಉದ್ದೇಶವೇ ಪ್ರಮುಖ. ಹೀಗೆಂದು ಹೇಳಿದರೂ ಈ ಭಾಷೆಯನ್ನು ಬಳಸುವವರ ಆಲೋಚನಾ ಕ್ರಮ ಮತ್ತು ಲೋಕಗ್ರಹಿಕೆಯ ಕ್ರಮ ದಿನಗಳೆದಂತೆ ಬದಲಾಗುತ್ತ ದೆಂದು ತಿಳಿಯಬಹುದು. ಈ ಕೃತಕ ಭಾಷೆಯ ನಿಯತತೆ, ಅರ್ಥಕಾಂತಿ, ಸ್ಫುಟತೆಗಳು, ಅರ್ಥರಚನೆಯ ತಾರ್ಕಿಕತೆಗಳು ನಿಧಾನವಾಗಿ ಭಾಷೆಯನ್ನು ಬಳಸುವವರ ಮೇಲೆ ಪ್ರಭಾವಬೀರುತ್ತವೆ. ಸಾರ್ವತ್ರಿಕವಾಗಿರುವ ಲೋಕ ಗ್ರಹಿಕೆಯ ವಿಭಿನ್ನ ನೆಲೆಗಳು ನಮ್ಮ ಚಿಂತನೆಯ ಕ್ರಮಕ್ಕೆ ಬಹುಳತೆ ಯನ್ನು ತಂದಿರುವಂತೆ ವಿಘಟನೆಯನ್ನೂ ತಂದಿದೆ. ಈ ಪರಿಸ್ಥಿತಿಯ ನಿವಾರಣೆಗೆ ಮತ್ತು ಆ ಮೂಲಕ ಎಲ್ಲಾ ಮಾನವರ ಚಿಂತನ ಕ್ರಮದ ಏಕತೆಗೆ ಕೃತಕ ಭಾಷೆಗಳ ಬಳಕೆ ಕ್ರಮೇಣ ಕಾರಣವಾಗುತ್ತದೆ.

ಬಿಕ್ಕಟ್ಟುಗಳು : ಕೃತಕ ಭಾಷೆಗಳ ಸಮರ್ಥಕರು ನಿರಂತರವಾಗಿ ಎಲ್ಲಾ ಬಗೆಯ ಸಾಮಾಜಿಕ, ರಾಜಕೀಯ ಮತ್ತು ಭಾಷಿಕ ಸಮಸ್ಯೆಗಳನ್ನು ಎದುರಿಸ ಬೇಕಾಗಿದೆ. ಅವರ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಲೇ ತಮ್ಮ ಭಾಷೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕುವಂತೆ ಮತ್ತು ಅಂತಹ ಮನ್ನಣೆ ಅಧಿಕೃತ ಗೊಳ್ಳುವಂತೆ ಪ್ರಯತ್ನಿಸಬೇಕು. ಇದು ಇನ್ನೂ ದೂರದ ದಾರಿ.

ಕಲಿಯಲು, ಬಳಸಲು ಪ್ರೋ: ಹಠ ಬಿಡದೆ ಒಂದು ಕೃತಕ ಭಾಷೆಯನ್ನು ರೂಪಿಸಿದರೆಂದುಕೊಳ್ಳೋಣ. ವ್ಯಕ್ತಿಯೋ ಸಂಸ್ಥೆಯೋ ಈ ಹೊಣೆ ಗಾರಿಕೆಯನ್ನು ನಿರ್ವಹಿಸಬಹುದು. ಮುಂದೇನು? ಇದು ಯಾರ ಮಾತೃಭಾಷೆಯೂ ಅಲ್ಲವಾದ್ದರಿಂದ ಈ ಭಾಷೆಯನ್ನು ಕಲಿಯುವಂತೆ ಪ್ರೇರೇಪಿಸಬೇಕಾಗುತ್ತದೆ. ಭಾಷಾ ಸಂಪರ್ಕದಿಂದಲೂ ಈ ಭಾಷೆಯ ಕಲಿಕೆ ಸಾಧ್ಯವಿಲ್ಲ. ಆದ್ದರಿಂದ ಸಾಕಷ್ಟು ಸಂಖ್ಯೆಯ ಜನರು ಏಕಕಾಲಕ್ಕೆ ಈ ಭಾಷೆಯನ್ನು ಕಲಿಯುವ ಸಂದರ್ಭಗಳನ್ನು ಸೃಷ್ಟಿಸಬೇಕು. ಇದಂತೂ ಕಷ್ಟಸಾಧ್ಯ, ಎಸ್ಪರಾಂತೊವನ್ನು ರೂಪಿಸಿದ ಜಮೆನಾಫ್‌ಗೆ ಈ ಸಮಸ್ಯೆಯ ತೀವ್ರತೆಯ ಅರಿವಿತ್ತು. ಇದನ್ನು ಪರಿಹರಿಸಲು ತನ್ನದೇ ಆದ ವಿಧಾನವೊಂದನ್ನು ಕಂಡುಕೊಳ್ಳಲು ಅವರು ಯತ್ನಿಸಿದ್ದರು. 1889ರಲ್ಲಿ ಪ್ರಕಟವಾದ ಅವರ ಪುಸ್ತಕ ಈ ಭಾಷೆಯ ರಚನೆಯ ಕೈಪಿಡಿಯಾಗಿತ್ತಷ್ಟೆ. ಈ ಪುಸ್ತಕದ ಕೊನೆಯಲ್ಲಿ ಒಂದು ಘೋಷಣಾ ಪತ್ರವಿತ್ತು, “ಡಾ.ಎಸ್ಪರಾಂತೊ ಅವರು ರೂಪಿಸಿರುವ ಈ ಅಂತಾರಾಷ್ಟ್ರೀಯ ಭಾಷೆಯನ್ನು ಕಲಿಯಲು 10 ಮಿಲಿಯನ್ ಜನರು ಬಹಿರಂಗವಾಗಿ ಒಪ್ಪಿಗೆ ನೀಡಿದರೆ ನಾನು ಕಲಿಯಲು ಸಿದ್ಧವಿರುವುದಾಗಿ ಒಪ್ಪಿ ಕೆಳಗೆ ಸಹಿ ಮಾಡಿದ್ದೇನೆ”. ಈ ಘೋಷಣಾ ಪತ್ರಗಳಿಗೆ ಸಹಿ ಮಾಡಿ ಹಿಂತಿರುಗಿಸಬೇಕಿತ್ತು. ಇಂಥ ಪತ್ರಗಳನ್ನು ನೀಡಿದವರ ಹೆಸರು ವಿಳಾಸಗಳಿರುವ ಕೈಪಿಡಿಯೊಂದನ್ನು ಪ್ರಕಟಿಸಲು ಜಮನಾಫ್ ಯೋಜಿಸಿದ್ದರು. ಇದು ಸಾಧ್ಯವಾಗಲೇ ಇಲ್ಲ. ಸದ್ಯ ಎಸ್ಪರಾಂತೊ ಬಳಸಬಲ್ಲ ತರ್ಜುಮೆಗಾರರ ವಿವರಗಳನ್ನು ಒದಗಿಸುವ ಕೈಪಿಡಿ ಮಾತ್ರ ಪ್ರಕಟವಾಗಿದೆ.

ಸ್ವಂತಿಕೆ : ಸಹಜ ಭಾಷೆಗಳು ಸಂವಹನ ಮಾಧ್ಯಮಗಳು ಮಾತ್ರವಲ್ಲ, ಅವುಗಳ ಮೂಲಕ, ಬಳಸುವವರು ಹಲವು ಬಗೆಯ ಚಹರೆಗಳನ್ನು ಪ್ರಕಟಿ ಸುತ್ತಾರೆ. ಈ ಕಾರಣದಿಂದಾಗಿಯೇ ಭಾಷೆಗಳಲ್ಲಿ ಅಗಾಧ ಪ್ರಮಾಣದ ವೈವಿಧ್ಯ ವಿದೆ. ಕೃತಕ ಭಾಷೆಗಳು ಈ ವೈವಿಧ್ಯ ಪ್ರಕಟಣೆಗೆ ಅವಕಾಶ ನೀಡುವುದಿಲ್ಲ. ರಾಷ್ಟ್ರೀಯ, ದೇಶೀಯ ಇಲ್ಲವೆ ಸಾಮಾಜಿಕ ಚಹರೆಗಳನ್ನು ಉಳಿಸಿಕೊಳ್ಳುವುದನ್ನು ಸಮರ್ಥಿಸುವ ಆಂದೋಲನಗಳ ಆಕಾಂಕ್ಷೆಗಳಿಗೆ ಕೃತಕ ಭಾಷೆಗಳು ವಿರುದ್ಧ ನೆಲೆಯಲ್ಲಿ ನಿಲ್ಲುತ್ತವೆ. ಇದರಿಂದ ತಾಕಲಾಟ ಮೊದಲಾಗುತ್ತವೆ. ರಾಷ್ಟ್ರೀಯತೆಯ ಉಗಮ ಮತ್ತು ಬೆಳವಣಿಗೆಗಳು ಕೃತಕ ಭಾಷೆಗಳನ್ನು ನಿರಾಕರಿಸಿದವು; ಅವುಗಳ ವಿಸ್ತರಣೆಗೆ ಅಡ್ಡಿಯನ್ನುಂಟು ಮಾಡಿದವು.

ಭಾಷಾಭಿಮಾನ ಮತ್ತು ದೇಶ ಭಾಷೆಗಳ ಬೆಳವಣಿಗೆಗೆ ಬಳಕೆಗೆ ಒತ್ತಾಸೆ ದೊರಕುತ್ತಿದ್ದ ಸಂದರ್ಭದಲ್ಲಂತೂ ಕೃತಕ ಭಾಷೆಗಳಂತೂ ಹಿನ್ನೆಲೆಗೆ ಸರಿದವು. ಮೊದಲನೆ ಮಹಾಯುದ್ಧದ ಅನಂತರವಂತೂ ಈ ಭಾಷೆಗಳ ಚಳುವಳಿಗೆ ಧಕ್ಕೆಯುಂಟಾಗಿದೆ.

ಭಾಷಾ ಪಕ್ಷಪಾತ : ಎಲ್ಲರಿಗೂ ಸಮಾನವಾದ ಸರಳವಾದ ಕೃತಕ ಭಾಷೆಯೊಂದನ್ನು ರೂಪಿಸುವುದು ಹೇಳುವಷ್ಟು ಸುಲಭದ ಮಾತಲ್ಲ. ಯಾವ ಭಾಷಾ ವರ್ಗಕ್ಕೂ ಒಲುಮೆಯನ್ನೂ ತೋರಬಾರದೆಂದು ಹೇಳಿದ್ದರೂ, ಬಹುಪಾಲು ಕೃತಕ ಭಾಷೆಗಳು ಇಂಡೋ ಯುರೋಪಿಯನ್ ಭಾಷೆಗಳ ರಚನೆಯನ್ನು ಅನುಸರಿಸಿವೆ. ಕೃತಕ ಭಾಷೆಗಳು ಪ್ರಪಂಚದ ಭಾಷೆಗಳಲ್ಲಿರುವ ವೈವಿಧ್ಯವನ್ನು ನಿರಾಕರಿಸಲು ಯತ್ನಿಸುವಂತೆ ತೋರಿದರೂ ವಾಸ್ತವದಲ್ಲಿ ಅವು ಕೆಲವು ಆಯ್ದ ಭಾಷೆಗಳ ರಚನೆಯನ್ನು ಅವಲಂಬಿಸಿವೆ. ಈ ತೋರ‌್ಕೆಯ ಸಾರ್ವತ್ರಿಕತೆ ಮತ್ತು ವಾಸ್ತವದ ಪಕ್ಷಪಾತಗಳು ಕೃತಕ ಭಾಷೆಗಳನ್ನು ವಿರೋಧಿಸಲು ಕಾರಣಗಳಾಗಿವೆ.

ಅರ್ಥವೈವಿಧ್ಯ ಭಾಷೆಗಳು ರಾಚನಿಕವಾಗಿ ಮಾತ್ರ ಬೇರೆ ಬೇರೆಯಲ್ಲ. ಅವುಗಳು ಅರ್ಥವ್ಯವಸ್ಥೆಯನ್ನು ರೂಪಿಸಿಕೊಂಡಿರುವ ವಿಧಾನದಲ್ಲೂ ಅಪಾರ ವೈವಿಧ್ಯವಿದೆ. ಪದಗಳ ಅರ್ಥರಚನೆ ಸುಲಭ ವರ್ಗೀಕರಣಕ್ಕೆ ಒಗ್ಗುವಂಥದ್ದಲ್ಲ. ಅಮೂರ್ತವಾದದ್ದನ್ನು ಪ್ರತಿನಿಧಿಸುವ ಪದಗಳ ವಿಷಯಕ್ಕೆ ಬಂದರೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಅಲ್ಲದೆ ಭಾಷೆಗಳಲ್ಲಿ ಪದಗಳಿಗೆ ವಾಚ್ಯಾರ್ಥದ ಜೊತೆಗೆ ಲಕ್ಷಣಾರ್ಥಗಳನ್ನೂ ನೀಡಲಾಗುತ್ತದೆ. ವಾಗ್ರೂಢಿಗಳಲ್ಲಿ ಪದಗಳ ವಾಚ್ಯಾರ್ಥ ಮಾತ್ರ ಸಾಲದಾಗುತ್ತದೆ. ಹೀಗಾಗಿ ಪದಗಳನ್ನು ಸರಳಗೊಳಿಸಿ ನೋಡುವಂತಿಲ್ಲ. ಕೃತಕ ಭಾಷೆಗಳ ಸರಳೀಕರಣದಿಂದ ಪದಗಳ ಸಾಧ್ಯತೆ ಯೆಲ್ಲವೂ ಕಳೆದುಹೋಗುತ್ತದೆ. ಆದ್ದರಿಂದ ಒಂದು ಪದವನ್ನು ಕೃತಕ ಭಾಷೆಗೆ ತರ್ಜುಮೆ ಮಾಡಿದ ಕೂಡಲೆ ಮೂಲ ಭಾಷೆಯಲ್ಲಿ ಹೊಂದಿರುವ ಅರ್ಥ ಚ್ಛಾಯೆ ಕಳೆದುಹೋಗುವುದಿಲ್ಲ. ಕಮ್ಯೂನಿಸಮ್ ಎಂಬ ಪದವನ್ನು ಕೃತಕ ಭಾಷೆಯಲ್ಲಿ ಹೇಳಿದ ಕೂಡಲೇ ಬಲಪಂಥೀಯರು ಮತ್ತು ಎಡಪಂಥೀಯರು ಆ ಪದದ ಬಗೆಗೆ ಹೊಂದಿರುವ ಭಾವನೆಗಳು ಒಂದೇ ಆಗಿಬಿಡುವುದಿಲ್ಲ.

ವಿರೋಧ : ಕೃತಕ ಭಾಷೆಗಳ ಪ್ರವರ್ತಕರು ತಮ್ಮ ಭಾಷಾ ಪ್ರಚಾರದಲ್ಲಿ ಎಷ್ಟು ಉತ್ಸುಕತೆಯನ್ನು ತೋರುತ್ತಾರೆಂದರೆ ಅವರ ಪ್ರಯತ್ನಗಳೆಲ್ಲವೂ ಧಾರ್ಮಿಕ ಪ್ರಚಾರದ ಲಕ್ಷಣಗಳನ್ನು ಪಡೆದುಕೊಳ್ಳುತ್ತದೆ. ಪ್ರಚಾರ ಸಭೆಗಳು ಪ್ರವರ್ತನಾ ಸಮಾವೇಶಗಳಂತೆ ತೋರುತ್ತವೆ. ಹಾಡುಗಳನ್ನು ಸ್ತೋತ್ರಗಳನ್ನು ಯಥೇಚ್ಚವಾಗಿ ಬಳಸುತ್ತಾರೆ. ಈ ಲಕ್ಷಣಗಳೇ ಕೃತಕ ಭಾಷೆಗಳನ್ನು ಸಹಾನುಭೂತಿಯಿಂದ ನೋಡುವವರನ್ನೂ ಅದರಿಂದ ದೂರ ಉಳಿಯುವಂತೆ ಮಾಡುತ್ತವೆ. ಎಷ್ಟೋ ಕಡೆಗಳಲ್ಲಿ ಈ ಪ್ರಚಾರವನ್ನು ರಾಜಕೀಯ ಉದ್ದೇಶ ಗಳಿಂದ ಕೂಡಿದೆಯೆಂದು ಕಟ್ಟುಪಾಡುಗಳನ್ನು ವಿಧಿಸಲಾಗಿದೆ. 1930ರ ಸುಮಾರಿನಲ್ಲಿ ಜರ್ಮನಿ ಮತ್ತು ಸೋವಿಯತ್ ಒಕ್ಕೂಟುಗಳಲ್ಲಿ ಎಸ್ಪರಾಂತೊ ಪ್ರವರ್ತನ ಸಂಘಗಳನ್ನು ಪರಿಷ್ಕರಿಸಲಾಗಿತ್ತು. ಸಂಘದ ಸದಸ್ಯರನ್ನು ಬಂಧಿಸ ಲಾಗಿತ್ತು. ಕೆಲವರನ್ನು ಗುಂಡಿಟ್ಟು ಕೊಂದದ್ದೂ ಉಂಟು. ಇದರಿಂದಾಗಿ ಎಸ್ಪರಾಂತೊ ಹರಡುವಿಕೆಗೆ ಅಡ್ಡಿಯಾದದ್ದೂ ನಿಜ. ಹಾಗೆ ನೋಡಿದರೆ ಎಸ್ಪರಾಂತೊ ಪ್ರವರ್ತಕ ಜಮೆನಾಫ್ ವಿಶ್ವಧರ್ಮವೊಂದನ್ನು ಪ್ರತಿಪಾದಿಸಿದ ರಷ್ಟೇ. ಅದನ್ನು ಒಪ್ಪದ ಎಷ್ಟೋ ಜನ ಧಾರ್ಮಿಕ ಸ್ವರೂಪವನ್ನು ಧಿಕ್ಕರಿಸಿ ಎಸ್ಪರಾಂತೊ ಚಳುವಳಿಯಿಂದ ಹೊರಬಂದರು. ಇದರಿಂದಲೂ ಚಳುವಳಿಗೆ ಧಕ್ಕೆಯುಂಟಾಯಿತು.