ರೇಡಿಯೋ ಮುಂದೆ ಕುಳಿತು ಕೇಳುತಲಿರುವೆ
ನಮ್ಮವರ ರಣವಿಕ್ರಮದ ವಾರ್ತೆಗಳನ್ನು :
ಹಕ್ಕಿ ರೆಕ್ಕೆಯ ನೆರಳಿಗೂ ನಿಲುಕದೆತ್ತರದ
ನಿಶ್ಶಬ್ದ ಶ್ವೇತಶಿಖರದ ಕೆಳಗೆ ಹಗಲಿರುಳು
ನಡೆಯುತಿದೆ ಯುದ್ಧ. ಹೆಪ್ಪುಗಟ್ಟಿಸುವ ಆ
ಛಳಿಯಲ್ಲಿ ಸಿಡಿಗುಂಡಿಗೆದೆಯೊಡ್ಡಿ ಸಾಗುತಿದೆ
ಭಾರತದ ಬಿಸಿರಕ್ತ. ನಾನಿಲ್ಲಿ ಬೆಚ್ಚನೆಯ
ಮನೆಯಲ್ಲಿ ಉಂಡು, ಛಳಿಗೆ ರಗ್ಗನು ಹೊದೆದು
ಮಕ್ಕಳಾಡುವುದ ನೋಡುತ್ತ ಕುಳಿತಿರುವೆ.
ಓ ಇಲ್ಲಿ, ಬೆಚ್ಚಗೆ ಕುಳಿತ ನಮಗಾಗಿ, ನಮ್ಮ
ಮಕ್ಕಳಿಗಾಗಿ,  ಅಲ್ಲಿ ಹಿಮಶ್ವೇತಶಿಖರದಲಿ
ರಕ್ತಲಿಪಿಯನು ಬರೆದು ಗಡಿಕಾಯ್ವ ಸೋದರರೆ
ತುಡಿಯುತಿದೆ ಇದೋ ಈ ನನ್ನ ಸಿಡಿಗುಂಡಿನೆದೆ,
ನಿಮಗಾಗಿ ನಿಮ್ಮ ಸಾಹಸಕಾಗಿ ಕೃತಜ್ಞತೆಯ ವಂದನೆ.