ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು !
ಅದ ನೆನೆದರೆ ಕಂಬನಿಯೇ ಕೋಡಿವರಿದು ಹರಿವುದು !

ಹುಟ್ಟಿದಂದಿನಿಂದ ನಾನು ನಿನ್ನಾಣೆಯ ಮೀರಿದೆ,
ಆದರು ನೀ ಅಕ್ಕರೆಯಲಿ ತಾಯೊಲವನೆ ತೋರಿದೆ !
ಮಧುರ ವಚನದಿಂದ ಮನವ ಸಂತೈಸುತ ನಲಿಸಿದೆ,
ಇದ ನೆನೆದರೆ ಕಂಬನಿಯೇ ಕೋಡಿಯೊಡೆದು ಹರಿದಿದೆ.

ನಿನ್ನೊಲವಿನ ಹೊರೆಯ ಹೊತ್ತು ನಾನು ಕರೆದು ಬಳಲಿದೆ.
ಇನ್ನು ಮುಂದೆ ಹೊರಲಾರದೆ ಎದೆಯು ಕೊರಗಿ ನರಳಿದೆ.
ನಿನ್ನೊಲವಿನ ಕರಸ್ಪರ್ಶದಿ ಈ ನೋವನು ನೀಗಿಸು.
ನಿನ್ನ ಪಾದಪದ್ಮಗಳಲಿ ನನನಿರಿಸಿ ಪಾಲಿಸು.