ಡಾ. ಬಿ.ಎಸ್‌. ಗದ್ದಗಿಮಠ ಅವರ ಮೇರುಕೃತಿ. ಅವರ ಪಿಎಚ್‌.ಡಿ. ಮಹಾಪ್ರಬಂಧವಿದು. ೧೯೬೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಪ್ರಕಟಣೆಯಾಯಿತು. ಈ ಗ್ರಂಥ ಪ್ರಕಟವಾದ ಸಂದರ್ಭದಲ್ಲಿ ಡಾ. ಗದ್ದಗಿಮಠ ಅವರು ಬದುಕಿರಲಿಲ್ಲ ಎಂಬುದು ಶೋಚನೀಯ ಸಂಗತಿ. “ಕನ್ನಡ ಜಾನಪದ ಗೀತೆಗಳು” ಕೃತಿಯು ಗದ್ದಗಿಮಠ ಅವರ ಅಮೂಲ್ಯ ಕೃತಿರತ್ನವಾಗಿರುತ್ತದೆ.

ಕನ್ನಡ ಜಾನಪದದ ಈ ಗೀತ ಸಾಹಿತ್ಯಕ್ಕಾಗಿಯೇ ಡಾಕ್ಟರೇಟ ಪದವಿ ಪಡೆದವರಲ್ಲಿ ಗದ್ದಗಿಮಠ ಅವರು ಮೊದಲಿಗರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಮಹಾಪ್ರಬಂಧವು ಜಾನಪದ ಸಾಹಿತ್ಯದ ಹಲವಾರು ಮುಖಗಳನ್ನು ಕುರಿತು ಸುಧೀರ್ಘವಾಗಿ ವಿವೇಚಿಸಿರುವ ಆದ್ಯ ಗ್ರಂಥವೆಂಬ ಮೆಚ್ಚುಗೆ ಪಡೆದಿರುತ್ತವೆ. ಜಾನಪದ ಛಂದಸ್ಸನ್ನು ಗುರುತಿಸಿದ ಡಾ. ಗದ್ದಗಿಮಠ ಅವರ ದಿವ್ಯ ಕೊಡುಗೆ ಇದು. ಎಲ್ಲ ಜನಪದ ಸಂಪ್ರದಾಯಗಳನ್ನು ಅವರು ಆಳವಾಗಿ ಅಭ್ಯಸಿಸಿದ್ದರೆಂಬುದನ್ನು ಅವರ ಪಿಎಚ್‌.ಡಿ. ಮಹಾಪ್ರಬಂಧ ಸಾಬೀತು ಪಡಿಸುತ್ತದೆ.

ಸ್ತುತಿ ಪದಗಳು, ಸುಗ್ಗಿಯ ಹಾಡುಗಳು, ಮಕ್ಕಳ ಆಟದ ಹಾಡುಗಳು, ಹಾಸ್ಯದ ಹಾಡುಗಳು, ಹಂತಿಯ ಹಾಡುಗಳು ಈ ಮೊದಲಾದವುಗಳನ್ನು ಒಳಗೊಂಡ ವಿದ್ವತ್‌ಕೃತಿಯಾಗಿದೆ. ತಾವೇ ಸಂಗ್ರಹಿಸಿದ ಎಷ್ಟೋ ಹಾಡುಗಳನ್ನು ಗದ್ದಗಿಮಠ ಅವರು ಈ ನಿಬಂಧದಲ್ಲಿ ಬಳಸಿಕೊಂಡಿದ್ದಾರೆ. ಈ ಹೊತ್ತಿಗೆಯ ಕೊನೆಯ ಭಾಗದಲ್ಲಿ ಅನುಬಂಧ ರೂಪದಲ್ಲಿ ಕೊಟ್ಟಿರುವ ಕೆಲವು ಹಂತಿಯ ಹಾಡುಗಳು ಹಿಂದೆ ಎಲ್ಲಿಯೂ ಪ್ರಕಟವಾಗಿರದ ಅಪೂರ್ವ ಗೀತೆಗಳಾಗಿರುತ್ತವೆ. ಕಲ್ಯಾಣ ಬಸವಯ್ಯ, ಹರಳಯ್ಯ, ಮಡಿವಾಳ ಮಾಚಯ್ಯ, ಕಿನ್ನರಿ ಬೊಮ್ಮಯ್ಯ, ಮೇದರ ಕೇತಯ್ಯ, ಕುಂಬಾರ ಗುಂಡಯ್ಯ, ಮಾದರ ಚನ್ನಯ್ಯ ಮುಂತಾದ ಶಿವಭಕ್ತರಿಗೆ ಸಂಬಂಧಿಸಿರುತ್ತವೆ.

ಉತ್ತರ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ ಜನಸಾಮಾನ್ಯರ ಸಂಪ್ರದಾಯ-ಸಂಸ್ಕೃತಿಗಳಲ್ಲಿ ಒಂದಾಗಿ, ಹಳ್ಳಿ-ಹಳ್ಳಿಗಳಲ್ಲಿ ಹೇಳ ಹೆಸರಿಲ್ಲದೆ ಅಡಗಿಹೋಗುತ್ತಿದ್ದ ಜಾನಪದ ಗೀತ ರತ್ನಗಳನ್ನು ಅಚ್ಚಳಿಯದಂತೆ ಸಂಗ್ರಹಿಸಿ ಕೊಟ್ಟ ಶ್ರೇಯಸ್ಸಿನ ಬಹುಪಾಲು ದಿವಂಗತ ಗದ್ದಗಿಮಠ ಅವರಿಗೆ ಸಲ್ಲುತ್ತದೆ. ಇವರ ಮನೆತನವೇ ಇಂಥ ಜಾನಪದ ಗೀತೆಗಳ ಮಹಾಕೋಶವಾಗಿದ್ದುದು ಗದ್ದಗಿಮಠ ಅವರಿಗೆ ಈ ಕಾರ್ಯಕ್ಕಾಗಿ ಸಹಜ ಸ್ಪೂರ್ತಿಯನ್ನುಂಟು ಮಾಡುವುದರೊಂದಿಗೆ ಆ ಕಾರ್ಯವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಳ್ಳುವಂತೆ ಪ್ರೇರೇಪಿಸಿರುವದು ಗಮನಾರ್ಹವಾದುದಾಗಿದೆ.

ಈ ಗ್ರಂಥದಲ್ಲಿಯ ಲೇಖಕರ ಕೆಲವೊಂದು ಅಭಿಪ್ರಾಯಗಳು ಕೆಲವರಿಗೆ ರುಚಿಸದೆ ಹೋಗಬಹುದು. ಆದರೂ ಬಹುಜನರು ಕೈಹಾಕದಿರುವ ವಿಷಯದತ್ತ ಲೇಖಕರು ಸಂಶೋಧನ ಧೃಷ್ಟಿಯನ್ನು ಹರಿಯಿಸಿರುವದು ಶ್ಲ್ಯಾಘನಿಯವೆಂದೇ ಹೇಳಬಹುದು. ಈ ದಿಸೆಯಲ್ಲಿ ದುಡಿಯಬೇಕೆನ್ನುವವರಿಗೆ ವಿಶಾಲ ಕ್ಷೇತ್ರವೇ ಕಾದುಕೊಂಡಿದೆ ಎಂಬ ಡಾ.ಡಿ.ಸಿ. ಪಾವಟೆ ಅವರ ಅಭಿಪ್ರಾಯ ಚೇತೋಹಾರಿಯಾಗಿರುತ್ತದೆ.