ಈ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದವರು ಇತ್ತೀಚೆಗೆ ಪ್ರಕಟಿಸಿದ್ದಾರೆ. ಈ ಕೃತಿಗೆ ಗದ್ದಗಿಮಠ ಅವರು ಕೊಟ್ಟ ಹೆಸರು ‘ಕರ್ನಾಟಕ ಜನಪದ ದರ್ಶನ’ ಮೈಸೂರು ವಿಶ್ವವಿದ್ಯಾಲಯದವರು ಮೂಲ ಹೆಸರನ್ನು ಬದಲಾಯಿಸಿಕೊಂಡು ‘ಗದ್ದಗಿಮಠರ ಬರಹಗಳು’ ಎಂದು ನಾಮಕರಣ ಮಾಡಿದ್ದಾರೆ. ಗದ್ದಗಿಮಠರ ಸಮಗ್ರ ಲೇಖನಗಳ ಸಂಪುಟವಾಗಿದೆ. ಜನಪದ ಸಂಪ್ರದಾಯಗಳ ಮೇಲೆ, ಜನಪದ ಸಾಹಿತ್ಯದ ಮೇಲೆ, ದೊಡ್ಡಾಟ ಮೊದಲಾದ ಜನಪದ ರಂಗ ಪ್ರಕಾರಗಳ ಮೇಲೆ ಅವರು ಎಂಥ ದಟ್ಟವಾದ ಅನುಭವವನ್ನು ಪಡೆದಿದ್ದರೆಂಬುದಕ್ಕೆ ಈ ಪ್ರಬಂಧಗಳು ನಿದರ್ಶನಗಳಾಗಿವೆ.

ಈ ಕೃತಿಯಲ್ಲಿ ‘ಸಂಪ್ರದಾಯಗಳು’ ‘ಜನಪದ ಸಾಹಿತ್ಯಾವಲೋಕನ’ ‘ಕಲಾರಾಶಿ’ ಎಂದು ಮೂರು ವಿಭಾಗಗಳನ್ನು ಮಾಡಲಾಗಿದೆ. ಸಂಪ್ರದಾಯಗಳು ಎಂಬ ಪ್ರಬಂಧದಲ್ಲಿ ವಿವಿಧ ಜನಾಂಗಗಳಲ್ಲಿ ಕಂಡುಬರುವ ಜನರ ನಡೆ ನುಡಿಗಳ ವಿಶಿಷ್ಟ ರೀತಿಗಳನ್ನು ಐತಿಹಾಸಿಕ ಸಂಗತಿಗಳನ್ನು ಒಳಗೊಂಡ ಎಲ್ಲ ನಾಡಿನ ಸಂಪ್ರದಾಯಗಳನ್ನು ಗುರುತಿಸಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದು ಸ್ತುತ್ಯಾರ್ಹವಾದುದು.

ಸಂಪ್ರದಾಯಗಳಲ್ಲಿ ಸುಗ್ಗಿಯ ಸಂಪ್ರದಾಯಗಳು ಮತ್ತು ಜನಪದ ಸಂಪ್ರದಾಯಗಳು ಎಂದು ಎರಡು ವಿಧದಲ್ಲಿ ವಿಭಾಗಿಸಲಾಗಿದೆ. ಸುಗ್ಗಿಯ ಸಂಪ್ರದಾಯ ಭಾಗದಲ್ಲಿ ಒಕ್ಕಲುನಾಡಿನ ಒಕ್ಕಲುತನಕ್ಕೆ ಸಂಬಂಧಪಟ್ಟ ಎಲ್ಲ ಸಂಪ್ರದಾಯಗಳೂ ಹೆಚ್ಚಾಗಿ ಶಿವಶರಣರ ಹಂಯ ಹಾಡುಗಳಲ್ಲಿ ಅಡಕವಾಗಿರುತ್ತವೆ. ಬನ್ನಿಯ ಹಬ್ಬ ಗುರ್ಚಿ, ಜೋಕುಮಾರ ಮಳೆತರುವ ಸನ್ನಿವೇಶ, ನಾಗರ ಪಂಚಮಿಯ ವೈಭವ, ಗೌರಿಹುಣ್ಣಿಮೆ, ಶೀಗೆ ಹುಣ್ಣಿಮೆಗಳ ಸಂಭ್ರಮ, ಹೋಳಿಹಬ್ಬದ ಮಹಿಮೆ ಮುಂತಾದವುಗಳ ಕಡೆಗೆ ಸಂಶೋಧಕರ ಗಮನ ಸೆಳೆದು ಮನಸೂರೆಗೊಳ್ಳುವಂತೆ ಮಾಡಿದ್ದಾರೆ. ಅವೆಲ್ಲವುಗಳನ್ನು ನೋಡಿದ ತಕ್ಷಣ ಮನಸ್ಸು ತ್ವರಿತವಾಗಿ ಸಂಶೋಧನೆಯಲ್ಲಿ ಧುಮುಕುವಂತೆ ಸ್ಪೂರ್ತಿಯನ್ನುಂಟು ಮಾಡುವ ಪ್ರಬಂಧಗಳಂತೆ ಇರುತ್ತವೆ.

ಹೋಳಿ ಹಬ್ಬವು ಭರತಖಂಡದ ಕೇವಲ ಗಂಡುಮಕ್ಕಳ ಒಂದೇ ಒಂದು ದೊಡ್ಡ ಹಬ್ಬವಾಗಿರುತ್ತದೆ. ಎಲ್ಲ ಹಬ್ಬ ಹುಣ್ಣಿಮೆಗಳಲ್ಲಿ ಮಹಿಳೆಯರು ಆನಂದ ಪಡುವುದನ್ನು ಕಂಡ ಪುರುಷರು ದುಡಿಯುವ ತನಗೆ ಹಬ್ಬವಿಲ್ಲ ಎಂದು ದೇವರ ಮುಂದೆ ದೂರಿದರಂತೆ. ಆಗ ದೇವರು ಪುರುಷನ ದೂರನ್ನು ಕೇಳಿ ಗಂಡು ಒಮ್ಮೆಯಾದರೂ ವರ್ಷದಲ್ಲಿ ನಕ್ಕು ನಲಿದಾಡಿ ಪ್ರಪಂಚದ ಭಾರವನ್ನು ಮರೆಯಲೆಂದು ಆಡಲು ಹೋಳಿಯ ಹಬ್ಬವನ್ನು ಆಚರಣೆಯಲ್ಲಿ ತಂದುಕೊಟ್ಟನೆಂದೂ ಜಾನಪದದಲ್ಲಿ ಒಂದು ಕಥೆಯು ಬರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಈ ಹಬ್ಬಕ್ಕೆ ದೊಡ್ಡ ಸಂಪ್ರದಾಯವಿದೆ.

ಊರಿನ ಪ್ರಮುಖ ಸ್ಥಳಗಳಲ್ಲಿ ಹಂದರ ಹಾಕಿ ಕಾಮ-ರತಿಯರನ್ನು ಕೂಡ್ರಿಸಿ ಶೃಂಗಾರ ಮಾಡಿ ಹೋಳಿ ಹಾಡುಗಳನ್ನು ಹಾಡಲು ಆರಂಭಿಸುವ ದೃಶ್ಯ ಮೋಹಕವಾದುದು.

ಹೋಳಿ ಹುಣ್ಣಿಮೆ ಬಂತು ಹೊಯ್ಕಳ್ಕದು ಬಂತು
ಹೋಳಿತುಪ್ಪುಣ್ಣುದು ಬಂತೋ
||

ಎಂದು ಹಾಡುತ್ತ ಮನೆ ಮನೆಯ ಮುಂದೆ ನಿಂತು ಹೊಯ್ಕಂಡು ಹೋಳಿಗೆ ಮೊದಲಾದವುಗಳನ್ನು ಕದಿಯುವದೂ ಉಂಟು, ಹೋಳಿಹಬ್ಬದ ಮಹಿಮೆ ಎಷ್ಟು ಆಗಾಧವಾದುದು ಎಂಬುದಕ್ಕೆ ಉದಾ,

ಹೋಳಿಯಾಡದ ನಾಡು ನಾಳೆನ್ನದೆ ಕಾಡಾತೊ
ಗೋಳಾತೊ ಜನಕ ಮೂಲಾತೊ
| ಮಳೆ ಹೋಗಿ
ಹಾಳಾತೊ ಪಿಡಗೆದ್ದು ದಿನದಿನಕೆ
||

ಎಂದು ಈ ಬಹ್ಹದ ಮಹತ್ವವನ್ನು ಈ ಒಂದೇ ಪದ್ಯದಲ್ಲಿ ಹಿಡಿದಿಟ್ಟಿದ್ದಾರೆ| ಇಷ್ಟೊಂದು ದೃಢವಾದ ನಂಬಿಕೆ ಇದೆ ಹೋಳಿಹಬ್ಬದಲ್ಲಿ ಒಕ್ಕಲಿಗನಿಗೆ! ಆದರೆ ಇತ್ತಿತ್ತಲಾಗಿ ಪಟ್ಟಣಿಗರು ಹೋಳಿ ಹುಣ್ಣಿಮೆ ಮೊದಲಾದ ಸಂಪ್ರದಾಯದ ವೈಭವದಿಂದೊಡಗೂಡಿದ ಹಬ್ಬಗಳ ಬಗ್ಗೆ ತಾತ್ಸಾರ ಭಾವ ತಾಳುತ್ತಿರುವದು ದುರದೃಷ್ಟಕರ ಸಂಗತಿ. ಹೋಳಿಹಬ್ಬಕ್ಕೆ ಸರ್ಕಾರದವರೂ ಕೂಡಾ ಹಲವಾರು ನಿರ್ಬಂಧ ಹಾಕಿರುವದು ವಿಷದಕರವೆನಿಸಿದರೂ ಅನಿವಾರ್ಯವೂ ಆಗಿರುತ್ತದೆ. ಇಂಥ ಪ್ರತಿಯೊಂದು ಹಬ್ಬಗಳು ಈಗ ಹಳ್ಳಿಯಲ್ಲಿ ಮಾತ್ರ ಸಂಭ್ರಮದಿಂದ ಆಚರಿಸಲ್ಪಡುತ್ತಿವೆ. ಈ ಎಲ್ಲ ಹಬ್ಬಗಳನ್ನು ಅತ್ಯಂತ ವಿಜೃಂಭಣೆಯಿಂದ ಮುಂದುವರಿಸಿಕೊಂಡು ಹೋಗುವದು ನಾಡಿನ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ. ಈ ಸಂಪ್ರದಾಯಗಳು ವೀರಶೈವ ಸಂಸ್ಕೃತಿಯ ಹೆಚ್ಚಳವನ್ನು ಬಿಂಬಿಸುತ್ತವೆ. ಹಳ್ಳಿಯಲ್ಲಿಯಾದರೂ ಈ ಎಲ್ಲ ಸಂಪ್ರದಾಯಗಳು ತಮ್ಮ ಲಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಬಳಕೆಯಲ್ಲಿ ಕಂಡುಬರುವದು ನಮ್ಮ ಸುದೈವವೇ ಸರಿ!.

ಜನಪದ ಸಾಹಿತ್ಯದಲ್ಲಿ ಕಾಮದಹನವು ಚೇತೋಹಾರಿಯಾಗಿದೆ. ಕೂಡಿದ ಸಭೆಯಲ್ಲಿ ‘ನಾ ಚೆಲುವ ನೀ ಚೆಲುವ!’ ಎಂಬ ವಾದವುಂಟಾಯಿತಂತೆ ಜಗತ್ತಿನಲ್ಲಿ ಯಾರು ಚೆಲುವರೆಂದು ಪಾರ್ವತಿಯನ್ನು ಕೇಳಲು ಅವಳು ಏಕೋಭಾವದಿಂದ ಕಾಮನು ಚೆಲುವನೆಂದು ಹೇಳಲು, ಹೆಂಡತಿಯು ಮನೆಯ ಗಂಡನ ಚಲುವಿಕೆಯನ್ನು ಒಪ್ಪದೆ ಅನ್ಯಪುರುಷರು ಚೆಲುವನೆಂದು ಸಭೆಯಲ್ಲಿ ಹೇಳಿದ್ದನ್ನು ಕೇಳಿ ಕೋಪೋದ್ರೇಕಿತನಾದ ಶಿವನ ತನ್ನ ಉರಿಗಣ್ಣನ್ನು ತೆರೆಯಲು ಕಾಮನು ಸುಟ್ಟುಬಸ್ಮವಾದನು. ಹೀಗೆ ಜಾನಪದದ ಕಾಮದಹನವು ಹೋಳಿಹಬ್ಬವಾಗಿ ಸಂಪ್ರದಾಯವಾಗಿ ಉಳಿದುಕೊಂಡು ಬಂದಿದೆ.