ಕನ್ನಡ ಹಾಡುಗಬ್ಬಗಳು ಎಂಬ ಪ್ರಬಂಧದಲ್ಲಿ ಸಾಹಿತ್ಯ ಮತ್ತು ಜೀವನದ ಬಗ್ಗೆ ಅಮೂಲ್ಯವಾದ ವಿಚಾರಗಳನ್ನು ಬಿತ್ತರಿಸಿದ್ದಾರೆ. ಸಾಹಿತ್ಯದಲ್ಲಿ ಹೆಣ್ಣು ಗಂಡನ್ನು ವರ್ಣೀಸುವುದು ತೀರ ಅಪರೂಪ. ಅದರಲ್ಲಿ ಈ ವರ್ಣನೆಯಂತೂ ಉಪಮಾತೀತವಾದುದು. ಉದಾ-

ತುಂಬಿದ ಬೆಳದಿಂಗಳ ||||
ಬಂತಬಂತವ್ವ ಕುಂತಕುಂತಲ್ಲಿ ಕಾಂತಿ
ಅಂತರ ಲೇಕದ ತಿಂತಿಣಿಯು ದೇವಾ
||ತುಂ||
ಕಾಯೆಲ್ಲ ಹದವಾಗಿ ಮಾಯೆಯ ಹೊದಿಕ್ಕಾಗಿ
ಕಾಯೆಲ್ಲ ಕಾಮ ಹೊಬಿಸಿಲು ದೇವಾ
||ತುಂ||

ಮಲುಹಣ-ಮಲುಹಣಿಯರ-ಬೇಟಕೂಟ-ರಾಸಾಟ-ರಸದೂಟದ ವರ್ಣನೆಯಂತೂ ಶೃಂಗಾರವು ಭಕ್ತಿಯೊಡನೆ ಸಮರಸವಾಗಿ ಈ ಹಾಡುಗಬ್ಬವು ಮಹಾಮಧುರಗೀತೆಯೆಂದೇ ಹೇಳಬಹುದು.

ಹಾಡುಗಬ್ಬದ ಪ್ರತಿಯೊಂದು ಸಂಧಿಯ ಕೊನೆಯಲ್ಲಿಯೂ ಮುಕ್ತಾಯದ ಸಂಧಿಯಲ್ಲಿಯೂ ಕನ್ನಡ ಹೆಣ್ಣುಮಕ್ಕಳಿಗೆ ಶುಭಾಶೀರ್ವಾದವಿದೆ. ಮಂಗಲ ತಿಲಕದೊಡನೆ ಮುತ್ತೈದೆತನವಿದೆ. ತೊಟ್ಟಲ ಬಲದೊಡನೆ ಸಂಪತ್‌ಸಮೃದ್ಧಿಯಿದೆ. ಈ ಹೆಣ್ಣು ಮಕ್ಕಳು ಆಶಾವಾದಿಗಳಾಗಿ ಜೀವನದ ಶುಭ ನುಡಿಯ ಹಾಡುವುದನ್ನು ಕೇಳಿದರೆ ದಂಗು ಬಡಿಯದಿರದು.

ಕನ್ನಡ ಲಾಲಿ ಜೋಗುಳ ಪದಗಳು ಎಂಬ ಪ್ರಬಂಧದಲ್ಲಿ ಮಕ್ಕಳೆ ಬಾಳಿನ ಸಂಪತ್ತು ಎಂಬುದರ ಬಗ್ಗೆ ಅನೇಕ ಉದಾಹರಣೆಗಳನ್ನು ಕೊಟ್ಟು ಮಹಿಳೆಯು ಮಕ್ಕಳ ಸಂಪತ್ತನ್ನು ಪಡೆದ ನಂತರವೇ ಅವಳ ಒಗತನದಲ್ಲಿ ದಾಂಪತ್ಯವು ಬಂಧುರವಾಗುವದೆಂಬುದನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಹೆಣ್ತನವು ಸಾರ್ಥಕವಾಗಬೇಕಾದರೆ ಅವಳು ಮಕ್ಕಳ ತಾಯಿಯಾದ ಮೇಲೆಯೇ ಸರಿ. ಉದಾ-

ಹೆಣ್ಣು ಜನುಮಕ ಬಂದೆ ಮಣ್ಣು ಮಾಡಲಿಬ್ಯಾಡ
ಹೆಣ್ಣುತನ ಶಿವನೆ ಜಗದಾಗ
| ಕೈ ಮುಗಿವೆ
ಕಂದಯ್ನಕೊಟ್ಟು ಕಡಿಮಾಡು
ಹಂಗಿನ ಬಾನ ಉಣಲಾರೆ
| ಜನದಾಗ
ಬಂಜೆಂಬು ಸಬುದ ಹೊರಲಾರೆ
||

ಲಾಲಿ ಜೋಗುಳ ಪದಗಳಲ್ಲಿ ತಾಯಿಯ ಹಂಬಲ, ಪರಮಾತ್ಮನ ಸ್ತುತಿ, ಮಗುವಿನ ರೂಪಲಾವಣ್ಯ ಹಾಗೂ ವಿವಿಧ ಆಟ ಪಾಠಗಳ ಕೌಶಲ್ಯಾದಿಗಳ ಸೂಕ್ಷ್ಮ ನಿರೀಕ್ಷಣೆ ಮೊದಲಾದ ವಿಷಯಗಳ ಸ್ವಾರಸ್ಯವನ್ನು ತಿಳಿಯಬಹುದಾಗಿದೆ. ಮುತ್ತೈದೆಯರೂ ಕನ್ಯೆಯರೂ ಮಗುವಿಗೆ ಹೆಸರಿಟ್ಟು ತೊಟ್ಟಿಲದಲ್ಲಿ ತೂಗುವಾಗ ದೇವ ದೇವತೆಗಳ ಶರಣ ಸಂಥ ಸಾಧು ಸತ್ಪುರುಷರ ಪ್ರಾರ್ಥನೆಗಳು ಹಾಗೂ ಜೋಗುಳ ಪದಗಳಂತೂ ಚೇತೋಹಾರಿಯಾಗಿರುತ್ತವೆ.

ಜೋ ಜೋ ಎನ್ನ
ಗೋಪಿಯ ಕಂದ ಜೋಜೋ
||||
……ಮಲಗ್ಯಾನೊ ಕಂದ ಮಾತಿನಗಿಣಿಯೆ
ಮತ್ತ ಪೇಳಿದರ ರನ್ನದ ಖಣಿಯೇ ಹರೀ
ಇಂದ್ರಂಬ್ರದೊಳೊಪ್ಪು ಅಮೃತ ಧನಿಯೇ ಜೋಜೋ
||

ಎಂದು ಕೃಷ್ಣನ ದಶಾವತಾರಗಳನ್ನು ಹಾಡುವದೂ ಹೆಣ್ಣಿನ ತಾಯ್ತನದ ಆನಂದವಲ್ಲದೆ ಮತ್ತೇನು?.

ಡಾ. ಬಿ.ಎಸ್‌. ಗದ್ದಗಿಮಠ ಅವರ ‘ಶಿರಯಾಳ ಚಂಗಳೆ’ ‘ಗೊಂದಲಿಗರು’ ‘ದುರುಗಮುರಗಿಯವರು’ ‘ಅಳಿದುಳಿದ ಪುಲಿಗೆರೆ’ ‘ನೆಟ್ಟಗಲ್ಲುಗಳು’ ‘ಕರ್ನಾಟಕದ ಜಾನಪದ ಕಲೆ’ ‘ಕನ್ನದ ಬಯಲಾಟ’ ‘ಜನಪದ ಭಾವಗೀತೆಗಳು’ ‘ಕಲಾರಾಶಿ’ ‘ಅನುಭವ ಸಾಹಿತ್ಯ’ ‘ಮಲೆನಾಡಿನ ಹಾಡುಗಳು’ ಜನಪದ ಸಾಹಿತ್ಯಾವಲೋಕನ, ಶಿವರಾತ್ರಿ, ಕಾರಹುಣ್ಣಿಮೆ, ಗಣಪತಿ, ಹುತ್ತಪ್ಪ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕೃಷಿಗೈದಿರುವದನ್ನು ನೋಡಿದರೆ ಗದ್ದಗಿಮಠ ಅವರ ಒಲವು ಜನಪದ ಸಾಹಿತ್ಯದ ವಿವಿಧ ಮುಖಗಳತ್ತ ಸಾಗರದಂತೆ ಹರಿದಿದೆ ಎಂಬುದು ಮನದಟ್ಟಾಗುತ್ತದೆ.

ಕರ್ನಾಟಕ ಜಾನಪದ ಅಧ್ಯಯನಕ್ಕೆ ಅನಂತ ಮೌಲಿಕವಾದ ಕೊಡುಗೆಗಳನ್ನು ಕೊಟ್ಟವರಲ್ಲಿ ಡಾ. ಗದ್ದಗಿಮಠ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂಥಹದು. ಸ್ವಾತಂತ್ಯ್ರೋತ್ತರ ಜಾನಪದ ಅಧ್ಯಯನಕ್ಕೆ ಒಳ್ಳೆಯ ಆರಂಭವನ್ನು ಒದಗಿಸಿದ ಶ್ರೇಷ್ಠ ವಿಧ್ವಾಂಸರು. ಜಾನಪದ ಕ್ಷೇತ್ರದಲ್ಲಿ ಸಂಶೋಧನೆಗೆ ನಾಂದಿ ಹಾಡಿದ ಆದ್ಯರು. ವ್ಯಾಪಕವಾದ ಕ್ಷೇತ್ರ ಹಾಗೂ ಉತ್ತಮ ಸಂಶೋಧನೆಯ ಮೂಲಕ ಜಾನಪದ ಕ್ಷೇತ್ರಕ್ಕೆ ವಿದ್ವತ್ತಿನ ಹೊಂಬಳೆಯನ್ನು ತೊಡಿಸಿದ ಕೀರ್ತಿಶಾಲಿಗಳು. ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಡಾಕ್ಟರೇಟ್‌ ಪದವಿಯನ್ನು ಪಡೆದ ಭಾರತೀಯ ವಿದ್ವಾಂಸರ ಶ್ರೇಣಿಯಲ್ಲಿ ಪ್ರಪ್ರಥಮರೆನಿಸಿಕೊಂಡವರು.

ಡಾ. ಗದ್ದಗಿಮಠ ಅವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಜಾನಪದ ಸಾಹಿತ್ಯವನ್ನು ಒಂದು ಮೌಲಿಕವಾದ ಅಧ್ಯಯನ ವಿಷಯವೆಂದು ಗುರುತಿಸುವಂತಾಯಿತು. ಇಪ್ಪತ್ತನೆಯ ಶತಮಾನದವರೆಗೂ ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಕಾರ್ಯದಲ್ಲಿ ನಿರತರಾದ ವಿದ್ವಾಂಸರು ಯಾರೂ ಈ ನಿಟ್ಟಿನಲ್ಲಿ ಯೋಚಿಸಿರಲಿಲ್ಲವೆಂದರೆ ಡಾ. ಬಿ.ಎಸ್‌. ಗದ್ದಗಿಮಠ ಅವರ ವಿದ್ವತ್ಪ್ರತಿಭೆಯು ಎಷ್ಟು ಸೂಕ್ಷ್ಮವಾದುದು ಎಂಬುದು ತಿಳಿದುಬರುತ್ತದೆ.

ಕನ್ನಡ ಜನಪದ ಸಾಹಿತ್ಯ ಕ್ಷೇತ್ರದಲ್ಲಿ (೧೯೫೦-೬೦) ಆ ಕಾಲಕ್ಕೆ ಡಾ. ಗದ್ದಗಿಮಠ ಅವರಂತೆ ವ್ಯಾಪಕ ಕ್ಷೇತ್ರಕಾರ್ಯ ಮಾಡಿದವರು ಇನ್ನೊಬ್ಬರಿಲ್ಲವೇ ಇಲ್ಲ! ತಮ್ಮ ಸಮಸ್ತವನ್ನು ಜಾನಪದಕ್ಕಾಗಿ ಅರ್ಪಿಸಿ ಅನೇಕ ಸಮಸ್ಯೆಗಳನ್ನು ಎದುರಿಸಿ ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಾಗಗಳಲ್ಲಿ ವಿಪುಲವಾದ ಸಾಹಿತ್ಯವನ್ನು ಸಂಗ್ರಹಿಸಿದ್ದಾರೆ. ಕಲೆ ಹಾಕಿರುವ ಸಾಹಿತ್ಯವನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಜೊತೆಗೆ ತಮ್ಮ ಶ್ರೀಮತಿಯವರನ್ನು ಕರೆದುಕೊಂಡು ಎತ್ತಿನ ಗಾಡಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಗೀತೆಗಳನ್ನು ಹಾಡಿ ವ್ಯಾಖ್ಯಾನಿಸಿ ಜಾನಪದ ಸಾಹಿತ್ಯ ಪ್ರಸಾರ ಕಾರ್ಯವನ್ನು ಕೈಕೊಂಡರು. ಪ್ರಾಚೀನ ಕಾಲದಲ್ಲಿ ವಿವಿಧ ಧರ್ಮದವರು ಧರ್ಮಪ್ರಚಾರ ಮಾಡುವಂತೆ ಜಾನಪದ ಸಾಹಿತ್ಯ ಪ್ರಸಾರ ಕಾರ್ಯಗೈದರು.

ಡಾ. ಬಿ.ಎಸ್‌. ಗದ್ದಗಿಮಠ ಅವರು ಉತ್ತರ ಕರ್ನಾಟಕದ ಜಾನಪದ ಸಾಹಿತ್ಯದ ವಿವಿಧ ಪ್ರಕಾರಗಳ ಮೇಲೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲ ಗಣ್ಯ ವಿದ್ವಾಂಸರು. ಜಾನಪದ ಸಾಹಿತ್ಯ ಸಂಕಲನಗಳಿಗೆ ವಿದ್ವತ್ಪೂರ್ಣವಾದ ಪ್ರಸ್ತಾವನೆಗಳನ್ನು ಬರೆಯುವುದರ ಮೂಲಕ ಅವುಗಳಿಗೆ ವೈಜ್ಞಾನಿಕ ಸ್ವರೂಪವನ್ನು ತಂದುಕೊಟ್ಟರು. ಅವರ ದೀರ್ಘವಾದ ಕ್ಷೇತ್ರಾನುಭವದಿಂದ ಹಾಗೂ ವಿದ್ವತ್ತಿನ ಪ್ರಖರತೆಯಿಂದ ಹಲವಾರು ಸಂಶೋಧನಾ ಪ್ರಬಂಧಗಳು ಉತ್ಕೃಷ್ಟ ಸಾಹಿತ್ಯವನ್ನೊಳಗೊಂಡಿರುತ್ತವೆ. ಡಾ. ಗದ್ದಗಿಮಠ ಅವರ ಪ್ರತಿಯೊಂದು ಬರಹಗಳಲ್ಲಿ ಅಡಗಿರುವ ವಿಷಯ ವಸ್ತುವನ್ನು ಗಮನಿಸಿದಾಗ ಜನಪದ ರಂಗ ಪ್ರಕಾರಗಳ  ಮೇಲೆ ಅವರು ಎಂತಹ ದಟ್ಟವಾದ ಅನುಭವವುಳ್ಳವರಾಗಿದ್ದರೆಂಬುದಕ್ಕೆ ಅವರು ರಚಿಸಿದ ಪ್ರಬಂಧಗಳು ಸಾಕ್ಷಿಯಾಗಿರುತ್ತವೆ.

ಜಾನಪದ ಕ್ಷೇತ್ರದ ದಿಗ್ಗಜರಿನಿಸಿರುವ ಡಾ. ಗದ್ದಗಿಮಠ ಅವರು ಸಿರಿಯನ್ನು ಬೆನ್ನು ಹತ್ತಿಹೋದವರಲ್ಲ. ಆತ್ಮಾನಂದ ಸ್ವಾರ್ಥಕ್ಕಾಗಿ ಸಾಹಿತ್ಯ ಸಂಸ್ಕೃತಿಯ ಸೇವೆಗೈದರು. ತುಂಬಿದ ಕೊಡದಂತಹ ವ್ಯಕ್ತಿತ್ವವುಳ್ಳವರು. ಅವರ ಅನುಭವ ನುಡಿಗಳು ತುಂಬಿ ಭೋರ್ಗರೆವ ಗಂಗೆಯ ಪ್ರವಾಹದಂತಿರುತ್ತವೆ. ಶ್ರೀಯುತರ ಹೃದಯಾಂತರಾಳದಿಂದ ಬಂದ ಅನುಭವ ಸಾಹಿತ್ಯವು ಅಮರವಾದುದು. ಜನಪದ ಸಾಹಿತ್ಯದಲ್ಲಿ ತಮ್ಮ ಜೀವನವನ್ನು ಹಾಸು ಹೊಕ್ಕಾಗಿಸಿಕೊಂಡ ಗದ್ದಗಿಮಠ ಅವರು ಕನ್ನಡ ಜನಪದ ಸಾಹಿತ್ಯ ಕ್ಷೇತ್ರಕ್ಕೆ ಮರಣ ಗೆಲಿದ ಮಹಾಂತರಾಗಿದ್ದಾರೆ. ಅವರ “ಸಾಹಿತ್ಯ ಆಲಿಸಿದಾಗ ಮನರಂಜನೆ, ಅನುಭವಿಸಿದಾಗ ಆತ್ಮರಂಜನೆ!”

ಡಾ. ಗದ್ದಗಿಮಠ ಅವರು ಜಾನಪದ ವಸ್ತುಗಳನ್ನು ಸಂಗ್ರಹಿಸುವಲ್ಲಿ ತುಂಬಾ ಆಸಕ್ತಿವುಳ್ಳವರು. ನಶಿಸಿಹೋಗುವ ಜಾನಪದ ಕಲೆಯ ಬಗ್ಗೆ ಹಳ್ಳಿಯ ಜನತೆಗೆ ಮನವರಿಕೆಯಾಗುವಂತೆ ತಿಳುವಳಿಕೆ ಮೂಡಿಸುತ್ತಿದ್ದರು. ಪ್ರಗತಿಶೀಲ ವಿಚಾರವಾದಿಗಳಾಗಿ, ಆದರ್ಶ ಶಿಕ್ಷಕರಾಗಿ ಶ್ರೇಷ್ಠ ಜಾನಪದ ಸಂಗ್ರಹಕರರಾಗಿ, ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಮಿನುಗುವ ಬೆಳ್ಳಿಚುಕ್ಕೆಯಾಗಿರುವರು. ಡಾ. ದ.ರಾ. ಬೇಂದ್ರೆಯವರು ಗದ್ದಗಿಮಠ ಅವರ ಜಾನಪದ ವಾಙ್ಮಯದ ಸರಕನ್ನು ಕಂಡು ಮೆಚ್ಚುಗೆಯ ಅಭಿಪ್ರಾಯವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ- “ಸಾಕಷ್ಟು ತೊಂದರೆಗಳನ್ನು ಅನುಭವಿಸಿ ಉತ್ಕೃಷ್ಟವಾದ ಜಾನಪದ ಸಂಪತ್ತನ್ನು ಉಳಿಸಿದ್ದಾರೆ ಬೆಳೆಸಿದ್ದಾರೆ. ಈ ಕ್ಷೇತ್ರದಲ್ಲಿ ಮರೆಯಲಾಗದ ಮಹಾನುಭಾವರಾಗಿದ್ದಾರೆ. ಜಾನಪದದ ಇನ್ನೊಂದು ಹೆಸರೇ ಗದ್ದಗಿಮಠ ಅವರು” ಎಂಬ ಬೇಂದ್ರಯವರ ಹೇಳಿಕೆ ಅರ್ಥಗರ್ಭಿತವಾದುದಾಗಿದೆ.

ಜಾನಪದ ಸಾಹಿತ್ಯವನ್ನೇ ತಮ್ಮ ಜೀವನದ ಏಕೈಕ ಸಾಧನೆಯನ್ನಾಗಿಸಿಕೊಂಡು ಉನ್ನತ ವಿದ್ವತ್ಪದವಿಯನ್ನು ಗಳಿಸಿರುವ ಡಾ.ಬಿ.ಎಸ್‌. ಗದ್ದಗಿಮಠ ಅವರು ದಿನಾಂಕ ೨.೧೧.೧೯೬೦ ರಂದು ಹೃದಯಘಾತದಿಂದ ಶಿವಾಧೀನರಾದರು. ಅವರ ಕೊನೆಯುಸಿರು ಜನಪದ ಸಾಹಿತ್ಯಕ್ಕೆ ತುಂಬಲಾಗದ ನಷ್ಟವೇ ಸರಿ. ಕೇವಲ ೪೦ನೆಯ ವಯಸ್ಸಿನ ಕಿರಿಯ ನಿಷ್ಠಾವಂತ ಜನಪದ ವಿದ್ವಾಂಸರ ಮರಣದ ಸನ್ನಿವೇಶ ಕನ್ನಡಕ್ಕೆ ಭರಿಸಲಾಗದ ನಷ್ಟವನ್ನುಂಟು ಮಾಡಿರುತ್ತದೆ. ಅವರ ಅಕಾಲಿಕ ಮರಣದಿಂದ ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರ ಎಷ್ಟೊಂದು ಬರಡಾಯಿತೆಂಬುದನ್ನು ಹೇಳಲಾಗದು. ಇಂಥ ಜಾನಪದ ಕ್ಷೇತ್ರದ ಶಿಲ್ಪಿಯನ್ನು ಪಡೆದ ಕನ್ನಡ ಮಾತೆಯೇ ಧನ್ಯ! ಧನ್ಯಳು!!