ಡಾ. ಬಿ.ಎಸ್‌.ಗದ್ದಗಿಮಠ ಅವರ ದ್ವಿತೀಯ ಕೃತಿಕುಸುಮ ‘ಕಂಬಿಯ ಹಾಡುಗಳು’ ಇದು ೧೯೫೫ ರಲ್ಲಿ ಪ್ರಕಟವಾಗಿದೆ. ಅತ್ಯಂತ ಮಹತ್ವದ ಕೃತಿಯಿದು. ೪೨ ಶುದ್ಧ ಕಂಬಿಯ ಹಾಡುಗಳು, ೯ ಉರ್ದು ಮಿಶ್ರಿತ ಕಂಬಿಯ ಹಾಡುಗಳು ಹಾಗೂ ೪ ಮಂಗಳಾರತಿಯ ಪದಗಳು ಬಿರುದಾವಳಿಯನ್ನೊಳಗೊಂಡ ೩ ನುಡಿಗಳು ಮತ್ತು ಉಗ್ಗಳಿಸುವ ೧೪ ನುಡಿಗಳನ್ನು ಹೊತ್ತ ಈ ಕಿರು ಕೃತಿ ಅನೇಕ ನಿಟ್ಟುಗಳಿಂದ ಗಮರ್ನಾಹವಾಗಿದೆ. ಜಾನಪದ ಕಾವ್ಯಮಾಲೆಯ ದ್ವಿತೀಯ  ಪುಷ್ಪವಾಗಿರುವ ಈ ಕೃತಿ ಚಿಕ್ಕ ಸಂಕಲನವಾಗಿದೆ. ಶ್ರೀಶೈಲ ಮಲ್ಲಿಕಾರ್ಜುನನ ಪರಮ ಭಕ್ತರು ಹಾಡುವ ಭಕ್ತಿ ಪದಗಳೆ ಕಂಬಿಯ ಹಾಡುಗಳು. ಇವುಗಳನ್ನು ಒಟ್ಟು ಐದು ವಿಧವಾಗಿ ವಿಭಾಗಿಸಲಾಗಿದೆ.

೧. ಉಗ್ಗಳಿಸುವುದು-ಒಟ್ಟು ೧೪ ನುಡಿಗಳನ್ನೊಳಗೊಂಡಿದೆ.

೨. ಕಂಬಿಯ ಹಾಡು- ಶುದ್ಧ ಕಂಬಿಯ ಹಾಡುಗಳ ಒಟ್ಟು ೪೨ ನುಡಿಗಳಿವೆ.

೩. ಉರ್ದುಮಿಶ್ರಿತ ಕಂಬಿಯ ಹಾಡು – ಒಟ್ಟು ೯ ನುಡಿಗಳಿವೆ.

೪. ಬಿರುದಾವಳಿಗಳು- ಒಟ್ಟು  ೩ ನುಡಿಗಳಿವೆ.

೫. ಮಂಗಳಾರತಿ ಹಾಡುಗಳು-ಒಟ್ಟು ೪ ಹಾಡುಗಳಿವೆ (೨೦ ನುಡಿಗಳಿವೆ)

ಇದೊಂದು ಕಂಬಿಯ ಹಾಡುಗಳ ಚಿಕ್ಕಸಂಕಲನ. ಕಂಬಿಯ ಹಾಡುಗಳು ಇಲ್ಲಿಯವರೆಗೆ ಎಲ್ಲಿಯೂ ಅಚ್ಚಾದಂತೆ ಕಂಡುಬರುವುದಿಲ್ಲ. ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರೆಲ್ಲರೂ ಈ ಹಾಡುಗಳನ್ನು ಪರಮ ಭಕ್ತಿಯಿಂದ ಮಲ್ಲಿಕಾರ್ಜುನನ ಪರ್ವದಲ್ಲಿ ಹಾಡುವರು. ಹೆಚ್ಚಾಗಿ ಕಂಬಿಯ ಅಯ್ಯಗಳೆ ಈ ಹಾಡುಗಳನ್ನು ಮೇಳದೊಡನೆ ರಾಗವೆತ್ತಿ ಹಾಡುತ್ತಾರೆ ಎಂಬ ವಿಷಯವನ್ನು ಡಾ. ಗದ್ದಗಿಮಠ ಅವರು ಕಂಬಿಯ ಹಾಡುಗಳು ಕೃತಿಯ ನನ್ನ ನುಡಿಯಲ್ಲಿ ಪ್ರಸ್ತಾಪಗೊಳಿಸಿದ್ದಾರೆ.

ಕಂಬಿಯ ಹಾಡುಗಳನ್ನು ಹಾಡುವ ಬಗೆ, ಆಯಾ ಸಂದರ್ಭದ ಬಗ್ಗೆ ವಿವರಿಸಿ ಮುಸಲ್ಮಾನ್‌ಆಳರಸರ ದಬ್ಬಾಳಿಕೆಗೆ ಹೆದರಿ, ಈ ಕಂಬಿಯವರು ತಮ್ಮ ಇಷ್ಟಲಿಂಗದ ಕರಡಿಗೆಯ ಆಕಾರವನ್ನು ಹೋಲುವಂತೆ ಮಾರ್ಪಡಿಸಿಕೊಂಡು ಅನೇಕ ಉರ್ದು ಶಬ್ದಗಳನ್ನು ತಮ್ಮ ಕಂಬಿಯ ಪದಗಳಲ್ಲಿ ಬಳಸುತ್ತ ವೀರಶೈವ ಧರ್ಮ ಸಂಪ್ರದಾಯಗಳನ್ನು ಬಿಡದೆ ಮುಂದುವರೆಸಿಕೊಂಡು ಬಂದ ಸ್ವಾರಸ್ಯಪೂರ್ಣ ಸಂಗತಿಯನ್ನು ತಿಳಿಸಿದ್ದಾರೆ. ಉಗ್ಗಳಿಸುವುದು ಪದ್ಯದಲ್ಲಿ ಭಗವಂತನ ಮಹಿಮೆಯನ್ನು ಹೀಗೆ ಕೊಂಡಾಡುತ್ತಾರೆ-

ಶಿವ ಶಿವೊ ಹಾಲ ಮಲ್ಲಯ್ಯ ಓಲವಲ್ಲಯ್ಯ ಸಕ್ಕರಿ ಸವಿಗಾರ ಮಲ್ಲಯ್ಯ |
ಮಹಾಂತ ಮಲ್ಲಯ್ಯ ಉಘೇ ಉಘೇ ಉಘೇ ||
ಹಾಲಗಿರಿ ಮೇಲಗಿರಿ ಸಿದ್ದಗಿರಿ ಸಿಂಹಾಸನಗಿರಿ ಶ್ರೀ ಪಾದಕೆ |
ಮಹಾಂತ ಮಲ್ಯಯ್ಯ ಉಘೇ ಉಘೇ ಉಘೇ ||
– ಉಗ್ಗಳಿಸುವುದು.

ಈ ನುಡಿಗಳಲ್ಲಿ ದೇವರ ವಿಶಿಷ್ಟ ಗುಣಗಾನವನ್ನು ವಿವಿಧ ರೂಪದಲ್ಲಿ ದೇವರ ಸ್ತುತಿ ಮಾಡುತ್ತಿರುವುದನ್ನು ಉಗ್ಗಳಿಸುವುದು ಎಂದು ಪದ್ಯದಲ್ಲಿ ಕಾಣುತ್ತೇವೆ.

ಮಲ್ಲಯ್ಯ ಮಲ್ಲಯ್ಯ ಸಿರಿಗಿರಿ ಮಲ್ಲಯ್ಯನ ನೋಡೋಣ ಬನ್ನಿ
ಎಲ್ಲಾ ದೇವರಿಗೆ ಒಡೆಯಾ ಬಲ್ಲಿದನ ಚೆನ್ನಮಲ್ಲ ||||
ಅನ್ನದಾನಿ ಬಹುಳ ಮಲ್ಲs ಚಿನ್ನದ ಗುಡಿ ಚೆನ್ನಮಲ್ಲs
ಎಲ್ಲಿ ನೋಡಿದರ ತಾನಲ್ಲ ನಂಬಿದ ಭಕ್ತರಿಗಾನಲ್ಲ ||||
– ಕಂಬಿಯ ಹಾಡುಗಳು.

ಭಕ್ತಿಭಾವನೆಯು ಪುಟಿದೇಳುವಂತೆ ದೇವರನ್ನು ಕೊಂಡಾಡುವ ಸರಳ ಶೈಲಿಯು ಕಂಬಿಯ ಹಾಡುಗಳಲ್ಲಿ ಮನಂಬುಗುವಂತೆ ಚಿತ್ರಿತವಾಗಿದೆ.

ಬೇಬಿಸಿ ಮಿಲ್ಲಾ ಬೇಬಿಸಿ ಮಿಲ್ಲಾ ಲಗು ಬಾರೋ ಪರವುತವಲ್ಲ
ಕ್ಯಾಹೂಂವಾ ಆಯಿತು ಅಕ್ಕೇಲ ನಿಮ್ಮ ಹೊರ್ತು ಯಾರ್ಯಾರಿಲ್ಲ ||||
ಮೂಡುವಲ್ಲಿ ಮುಣುಗುವಲ್ಲಿಗೆ ನೀನೆ ಒಬ್ಬನು ಬಿಸಿಮಿಲ್ಲಾ
ಏಕ ಅಲ್ಲಾ ಹಜಾರ್ ನಾವ್‌ಖಾಸ್‌ಹೌದು ಪರವುತಮಲ್ಲ ||||
– ಉರ್ದುಮಿಶ್ರಿತ ಕಂಬಿಯ ಹಾಡುಗಳು

ಹೀಗೆ ವೀರಶೈವ ಸಂಸ್ಕೃತಿ ಹಾಗೂ ಇತಿಹಾಸವನ್ನೊಳಗೊಂಡ ಈ ಹಾಡುಗಳ ಮಹತ್ವವು ವಿಶೇಷವಾಗಿ ಉರ್ದು ಮಿಶ್ರಿತ ಕಿಂಬಿಯ ಹಾಡುಗಳಲ್ಲಿ ಮೂಡಿಬಂದಿದೆ.

ಹಾಜರಾನ್‌, ಹೊಜರಾನ್‌, ಗೈರಾನ್‌, ಗಾಯಖಾನ್‌, ದಂಡಿಗೆ ಜಲ್ಲೋರಿ
ಹಾಕುವ ಚೌರಿ, ಊದುವ ಕಾಳಿ, ಹೆಗ್ಗಾಳಿ ಚಲಕಾಳಿ.
ಪಂಚಮುಖದ ಪರಮೇಶ್ವರನೆ ನೀನಲ್ಲದೆ
ಮಹಾಮಲ್ಲಿಕಾರ್ಜುನಕೂ ಸಾಹೇಬಕೂ ಸಲಾಂ‌.
– ಬಿರುದಾವಳಿಗಳು.

ಬಿರುದಾವಳಿಗಳಲ್ಲಿಯೂ ಉರ್ದುಮಿಶ್ರಿತ ಭಾಷೆ ಮತ್ತು ವೀರಶೈವ ಸಂಸ್ಕೃತಿಯ ಪ್ರಭಾವಗಳೆರಡನ್ನೂ ಕಾಣಬಹುದು. ಅಲ್ಲದೆ ಮಂಗಳಾರತಿಯ ಪದ್ಯಗಳು ಸರಳ ರೀತಿಯಲ್ಲಿ ರಚನೆಯಾಗಿವೆ, ಉದಾ-

ಆನಂದದಾರುತಿ ತಂದ |
ಸೂಜನರೆಲ್ಲ ಬಂದ ||||
ರಂಗ ಮಂಟಪದೊಳು ಸಿಂಗಾರ ಸ್ತುತಿ ಶಿವ
ಸಂಗನ ಬಸವಗೆ ಮಂಗಲಾಂಗೆಯರಿಗೆ ||

ಎಂದು ಸಂಪ್ರದಾಯದಂತೆ ಮಂಗಳಾರತಿ ಹೇಳಿ ಸರ್ವರಿಗೂ ಮಂಗಲ ಹಾರೈಸಿದ್ದಾರೆ. ಹೀಗೆ ದೇವರ ಸ್ತುತಿ, ಭಕ್ತಿ, ಭಾವನೆ, ಮುಸ್ಲಿಮರ ಮೇಲೆ ವೀರಶೈವ ಸಂಸ್ಕೃತಿಯ ಪ್ರಬಾವ ದೇವರ ಬಗೆಗಿರುವ ಬಿರುದಾವಳಿಗಳು, ಮಂಗಳಾರತಿ ಪದಗಳು ತುಂಬಾ ಸ್ವಾರಸ್ಯಕರವಾಗಿ ವೈಶಿಷ್ಟ್ಯಪೂರ್ಣವಾಗಿ ರಚನೆಯಾಗಿವೆ.