ಡಾ. ಗದ್ದಗಿಮಠ ಅವರ ಮೂರನೆಯ ಕೃತಿ ಜನತಾ ಗೀತೆಗಳು. ಈ ಕೃತಿಯಲ್ಲಿರುವ ಜಾನಪದ ಗೀತೆಗಳನ್ನು ೧೯೫೬ ರಲ್ಲಿ ಸಂಗ್ರಹಿಸಿದ್ದಾರೆ. ಸಂಪ್ರದಾಯದ ಹಾಡುಗಳು, ಹಂತಿಯ ಹಾಡುಗಳು, ದೊಡ್ಡ ಹಾಡುಗಳು, ಹೋಳಿಯ ಹಾಡುಗಳು, ದುಂದುಮೆ ಹಾಡುಗಳು ಮತ್ತು ಇತರ ಹಾಡುಗಳು ಎಂದು ವಿಂಗಡಿಸಲಾಗಿದೆ.

ಅತ್ಯಂತ ಸಾರ್ಥಕವಾದ ಅನೇಕ ಹೊಸ ತ್ರಿಪದಿಗಳು ಈ ಸಂಕಲನದಲ್ಲಿರುತ್ತವೆ. ಸಾಂಸಾರಿಕ ಚಿತ್ರಗಳನ್ನು ಪಡಿಮೂಡಿಸುವ ಗೀತೆಗಳು ಸಾಕಷ್ಟು ಇರುತ್ತವೆ. ಕುಮಾರರಾಮ ಹಾಗೂ ಮಲ್ಲಚ್ಚಖಂಡಿಯ ದುಂದುಮೆಗಳೂ ಇದರಲ್ಲಿರುತ್ತವೆ. ಈ ಕೃತಿಯ ಕೊನೆಯ ಭಾಗದಲ್ಲಿ ಶಿಶುಗೀತೆಗಳನ್ನು ಸೇರಿಸಲಾಗಿದೆ. ವಿಶೇಷವಾಗಿ ಜನಪದ ಸೋದರನೊಬ್ಬನ ಅವನತಿಯನ್ನು ಧ್ವನಿಸುವ ಇಂತಹ ಗೀತೆಯನ್ನು ಮರೆಯುವುದು ಅಸಾಧ್ಯವಾದುದು.

ಒಡಹುಟ್ಟಿದವರಿಗೆ ಬಡಜಾಲಿ ಮುಳ್ಳಾದ
ಹಡದವ್ವಗೀದ ಹುಲಿಯಾದ ನನತಮ್ಮ
ಮಡದಿಗೆ ಮಾಣಿಕದ ಹರಳಾದ ||

ಜನಪದ ಸಂಪ್ರದಾಯಗಳು ತುಂಬಾ ಅರ್ಥವತ್ತಾಗಿವೆ. ಬನ್ನಿಯ ಹಬ್ಬವು ಕನ್ನಡಿಗರಿಗೆ ನಾಡಹಬ್ಬ. ಅಂದು ಅವರು ನಾಡದೇವಿಯ ತೇರನ್ನು ಸಿಂಗರಿಸಿ ಎಳೆಯುವರು. ಬನ್ನಿ ಮುಡಿಯುವದೆಂದರೆ ಕಾಡ ಸಂಪತ್ತನ್ನು ನಾಡಿಗೆ ತರುವದು. ಒಕ್ಕಲಿಗನು ಬೆಳೆದ ಬೆಳಸಿಗೆ, ಭೂಮಿ ತಾಯಿಗೆ, ಬನ್ನಿ ಅರ್ಪಿಸುತ್ತಾನೆ. ಅವನ ದೃಷ್ಟಿಯಲ್ಲಿ ದೇವಾಧಿದೇವರೂ ಬನ್ನಿಯನ್ನು ಮುಡಿಯುತ್ತಾರೆ. ಮಕ್ಕಳು ಹಡದವರಿಗೆ ಹೆಂಡತಿಯು ಗಂಡನಿಗೆ ಬನ್ನಿ ಮುಡಿಯುವದು ಅವರವರ ಧರ್ಮ, ಕನ್ನಡ ಗುಜ್ಜೆಯರು ವೇಷ ಭೂಷಿತರಾಗಿ ಘಿಲ ಘಿಲಸಿ ಕುಣಿಯುವದು, ಹ್ಯಾವ ಮರೆತು ಒಕ್ಕಟ್ಟಿನಿಂದ ಬಾಳುವರು. ಕನ್ನಡ ಕುಲಕ್ಕೆ ಈ ಹಾಡಿನಲ್ಲಿ ದಿವ್ಯ ಸಂದೇಶವಿದೆ.

ಇಂದು ಮುಡಿಯುವ ಬನ್ನಿ ಮುಂದೆಮಗ ಹೊನ್ನಾಗಿ
ಕುಂದಣದಾರೂತಿ ಬೆಳಗುದಕ || ಕೋಲು ಕೋಲು

ಕನ್ನಡಿಗರು ಮುಡಿಯುವ ಕನ್ನಡ ಗಡಿಗಳ ಬನ್ನಿಯ ಪತ್ರಿ ನಾಡಹೊನ್ನಾಗಿ ಕನ್ನಡಿಗರು ಮುಡಿಯುವ ಕನ್ನಡ ಗಡಿಗಳ ಬನ್ನಿಯ ಪತ್ರಿ ನಾಡಹೊನ್ನಾಗಿ ಕುಂದಣದಾರುತಿಯನ್ನು ಬೆಳಗಲೆಂದು ಒಕ್ಕಲಿಗನು ಜೊಕುಮಾರನ ಪೂಜೆಯನ್ನು ಮಣ್ಣು ಪೂಜೆಯೆಂದು ನಂಬಿರುತ್ತಾನೆ, ಜೋಕುಮಾರನ ಅಳಕ ಅಂಬೇರಿಯೇ ಒಕ್ಕಲಿಗನು ತನ್ನ ಬೆಳಸಿಗೆ ಒಗೆಯುವ ಮೊದಲನೆಯ ಚರಗ,

ಜೋಕುಮಾರ ಹುಟ್ಟಲಿ ಲೋಕವು ಬೆಳೆಯಲಿ
ಆಕಳ ಹಾಲ ಕರೆಯಲಿ | ಹರಿಯಾಗ
ಕಾತೆದ್ದು ಮಸರ ಕಡೆಯಲಿ ||

ಜೋಕುಮಾರನು ಹುಟ್ಟಿ ಲೋಕವೆಲ್ಲ ಬೆಳಕಾಗಲೆಂದೇ ಒಕ್ಕಲಿಗನ ಹಾರೈಕೆ. ಜೋಕುಮಾರನ ಪ್ರಭಾವವನ್ನು ಕಂಡ ಒಕ್ಕಲಿಗನು ಅವನಿಗೆ ಅಂಬಲಿಯುಣಿಸಿ ಅವನ ಹೆಸರಿನಿಂದ ಬೆಳಿಗ್ಗೆ ಅಂಬಲಿಯನ್ನು ಸೂರಾಡಿ ಬೆಳಸು ಹುಲುಸಾಗಲೆಂದು ಬೇಡಿಕೊಳ್ಳುತ್ತಾನೆ. ಜೋಕುಮಾರನು ಹುಟ್ಟಿ ಸಾಯುವುದರೊಳಗಾಗಲಿ, ಸತ್ತ ಮೇಲಾಗಲಿ ಮುಂಗಾರಿಯ ದೊಡ್ಡ ಮಳೆಗಳು ಕೂಡಿ ಮಳೆಯಾಗುವದು. ಇದೆಲ್ಲವು ಜೋಕುಮಾನ ಫಲವೆಂದು ನಂಬಿ ಜನಪದವು  ಅವನನ್ನು ಆದರದಿಂದ ಬರಮಾಡಿಕೊಳ್ಳುವರು.

ಕಿತ್ತೂರು ರಾಜ್ಯದ ದುರಂತ ಚಿತ್ರಣವು ಕಣ್ಣೀರಿನ ಕಡಲಿನಂತಿದೆ. ಕಿತ್ತೂರು ಹಾಳಾಗಲು ಜನತೆಯ ಪಟ್ಟ ಕಳವಳವು, ನರಗುಂದ ಹಾಳಾಗಲು ಕಂಡು ಬರುವುದಿಲ್ಲ. ಅಲ್ಲದೆ ನರಗುಂದ ಬಾಬಣ್ಣನಿಗೆ ರಾಜನು ಹಾಳಾಗಿಹೋಗಲೆಂದು ಹೂಲಿಸ್ವಾಮಿಗಳವರಿಂದ ಶಾಪವಿತ್ತೆಂಬುದು ಹಾಡಿನಿಂದ ತಿಳಿಯುತ್ತದೆ.

ಹೂಲಿ ಸ್ವಾಮಿಯು ಕೊಟ್ಟ ಕೋಲಮಿಂಚಿನ ಶಾಪ
ಗಾಲಮೇಲಾತು ನರಗುಂದೊ | ಮರುವರುಷ
ಕೂಲಿ ಕುಂಬಳಿಗೆ ಎರವಾತೊ ||

ಶಾಪ ಏಕೆ ಕೊಟ್ಟನೋ ಏನೋ ಎಂಬುದು ಮಾತ್ರ ತಿಳಿಯದು. ಈ ಎಲ್ಲ ಪದ್ಯಗಳು ಐತಿಹಾಸಿಕ ದೃಷ್ಟಿಯಿಂದ ಅತ್ಯಂತ ಮಹತ್ವದವುಗಳಾಗಿವೆ. ನೊರೊಂದು ರಾಗ ರಾಗಿಣಿಗಳೊಡನೆ ಗರತಿಯರ ಜೀವನ ಪರಿಮಳವು ಘಮಘಮಿಸುತ್ತದೆ. ಇತರ ಹಾಡುಗಳಲ್ಲಿ ಹಳ್ಳಿಗರ ಧರ್ಮ, ನೀತಿ, ಆಚಾರ ವಿಚಾರ ಮೊದಲಾದ ಭಾವತರಂಗಗಳನ್ನು ನಾವು ಚಂದ್ರಗುತ್ತಿಯ ಅರಸನ ಹಾಡುಗಳಲ್ಲಿ ಕಾಣುತ್ತೇವೆ. ಗರತಿ ಗಂಗವ್ವನು ಮಲಪ್ರಭೆಯ ಮಹಾಪೂರವನ್ನಳೆದುದೇ ಹಾಡಿನ ಕಥಾಸಾರವಾಗಿದೆ. ಹೀಗೆ ಜನಪದ ಸಾಹಿತ್ಯ ಅನ್ನಮಯದಿಂದ ಆನಂದಮಯಕ್ಕೇರುವ ಆತ್ಮ ಪ್ರಮಾಣದ ಮಹಾಕಥೆಯೆಂದು ಹೇಳಬಹುದು, ಜನವಾಣಿಯೇ ಮನವಾಣಿಯಾಗಿ ನಿರರ್ಗಳ ಶೈಲಿಯಲ್ಲಿ ಹರಿದಿದೆ. ಜನಜೀವಾಳಕ್ಕೀಳಿಯುವ ಸಂಜೀವಿನಿಯಾಗಿದೆ. ಇಂಥ ವಿಶಿಷ್ಟ ಕೊಡುಗೆಯಾಗಿರುವ ಈ ಕೃತಿರತ್ನವು ಧಾರವಾಡದ ಕರ್ನಾಟಕ ಸಹಕಾರಿ ಸಾಹಿತ್ಯ ಸಂಘದ ನೆರವಿನಿಂದ ಪ್ರಕಟವಾಗಿದೆ. ಈ ಸಂಘದವರ ಸಹಕಾರ ಸಿಗದೇ ಹೋಗಿದ್ದರೆ ಇಂಥ ಅಮೂಲ್ಯ ಕೃತಿಯು ಎಂದು ಬೆಳಕಿಗೆ ಬರುತ್ತಿತ್ತೋ ಏನೋ! ಇದರ ಫಲಶೃತಿ ಆ ಸಂಘದ ಸಂಚಾಲಕರಿಗೆ ಸಲ್ಲುತ್ತದೆ.

ಜನಪದ ಸಾಹಿತ್ಯದ ಕೋಶದಂತೆ ಇರುವ ಶ್ರೀ ಗದ್ದಗಿಮಠ ಅವರು ತಮ್ಮ ಜಾನಪದ ಸಾಹಿತ್ಯ ಭಂಡಾರದಿಂದ ಇದುವರೆಗೆ ಪ್ರಕಟವಾಗದೆ ಇರುವ ಉತ್ತಮ ಗೀತೆಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಗದ್ದಗಿಮಠ ಅವರು ಲಕ್ಷಕ್ಕೂ ಮಿಕ್ಕುವಷ್ಟು ಜಾನಪದ ಹಾಡುಗಳನ್ನು ಸಂಗ್ರಹಿಸಿದ್ದಾರೆಂಬುದು ತಿಳಿದು ಬರುತ್ತದೆ. ಜಾನಪದ ಸಾಹಿತ್ಯದ ಭಂಡಾರವಾಗಿರುವ ಶ್ರೀಯುತರ ಹಾಡುಗಳಲ್ಲಿ ಹುದುಗಿರುವ ಕನ್ನಡ ಸಂಸ್ಕೃತಿಯ ಸಂಪತ್ತು, ಸಾಹಿತ್ಯ ಜೀವನಗಳನ್ನು ಕುರಿತು ಹಲವಾರು ದೃಷ್ಟಿಯಿಂದ ಸಂಶೋಧನಾ ನಿರತರಾಗಿ ಒಂದು ನೆಲೆಗೆ ನಿಂತಿದ್ದಾರೆ. ಗದ್ದಗಿಮಠ ಅವರ ಸಂಗ್ರಹವೆಲ್ಲ ಪ್ರಕಟವಾದರೆ ಕನ್ನಡಿಗರ ಜೀವನದ ಮೇಲೆ ಹೊಸಬೆಳಕು ಬೀಳುವುದಲ್ಲದೆ ನಮ್ಮ ಪುರಾತನ ಸಂಸ್ಕೃತಿಯ ಘನೆತೆ ಗೌರವಗಳ ಮನವರಿಕೆಯಾಗಬಹುದಾಗಿದೆ. ಗದ್ದಗಿಮಠರು ಒಂದೊಂದು ತ್ರಿಪದಿಯನ್ನು ವಿವಿಧ ಧಾಟಿ, ರೀತಿಗಳಿಂದ ಪರಿಣಾಮಕಾರಿಯಾಗಿ ಹಾಡಬಲ್ಲ ಉತ್ಸಾಹಿ ತರುಣರಾಗಿದ್ದರು. ಅವರ ಜೀವನವೇ ಈ ಗೀತೆಗಳ ಸಂಗ್ರಹ ಮತ್ತು ಪ್ರಕಾಶನಕ್ಕಾಗಿ ಮುಡಿಪಾಗಿದೆಯೆಂದರೂ ಅತಿಶಯೋಕ್ತಿಯಾಗಲಾರದು.

ಡಾ. ಗದ್ದಗಿಮಠ ಅವರು ಜನತಾ ಗೀತೆಗಳು ಕೃತಿಯ ಮೊದಲ ಮಾತು ಭಾಗದಲ್ಲಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನಾನು ಸಂಕಲಿಸಿದ ಜನಪದ ಸಾಹಿತ್ಯದಲ್ಲಿಯ ಹಲಕೆಲವು ಹಾಡುಗಳನ್ನು ಸಂಗ್ರಹಿಸಿ ‘ಜನತಾ ಗೀತೆಗಳು’ ಎಂಬ ಪುಸ್ತಕ ರೂಪದಲ್ಲಿ ಕನ್ನಡಿಗರ ಗಮನಕ್ಕೆ ತರಲು ನನಗೆ ತುಂಬ ಆನಂದ. ಇದು ನನ್ನ ಮೂರನೆಯ ಸಂಗ್ರಹ. ಇದನ್ನು ಬೆಳಕಿಗೆ ತರಲು ಧಾರವಾಡದ ಕರ್ನಾಟಕ ಸಹಕಾರಿ ಸಾಹಿತ್ಯ ಸಂಘದ ನೆರವು ಇಲ್ಲದೆ ಹೋಗಿದ್ದರೆ ಈ ಸಂಗ್ರಹವು ಎಂದು ಬೆಳಕಿಗೆ ಬರುತ್ತಿತ್ತೊ ಏನೊ ಆದುದರಿಂದ ಆ ಸಂಘದ ಸಂಚಾಲಕ ಮಹನೀಯರಿಗೆ ಮೊದಲು ನನ್ನ ಕೃತಜ್ಞತೆಯ ಅಭಿನಂದನೆಗಳು” ಎಂದು ನುಡಿದಿದ್ದಾರೆ. ಈ ಕೃತಿಯು ೧೯೫೬ ರಲ್ಲಿ ಪ್ರಕಟವಾಗಿದೆ.

ಜನಪದ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿದ್ದು ತಮ್ಮ ತಂದೆ ತಾಯಿಗಳಿಂದಲೆ ಎಂದು ಗದ್ದಗಿಮಠರು ಜನತಾ ಗೀತೆಗಳು ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ತ್ರಿಪದಿಯನ್ನು ನೂರೊಂದು ರಾಗದಲ್ಲಿ ಹಾಡಿ ಜನರನ್ನು ತಣಿಸುವ ಅವರ ತಾಯಿ ಶಿವಗಂಗಾದೇವಿ ತಮಗೆ ಜನಪದ ಸೊಲ್ಲನಿತ್ತಳು ಎಂಬುದಾಗಿ ನುಡಿದಿದ್ದಾರೆ. ಹೀಗೆ ಅಭಿರುಚಿ ತುಂಬಲು ಹಳ್ಳಿಗರ ಹಾಡುಗಳ ‘ಗುಂ’ ಗಾನಕ್ಕೆ ಮನಸೋತು ಜೀವನದ ಪರಿವೆಯಿಲ್ಲದೆ ಉತ್ತರ ಕರ್ನಾಟಕದಲ್ಲಿ ಅಲೆದಾಡಿ ಕ್ರಿ.ಶ. ೧೯೪೩ ರಿಂದ ಹಾಡುಗಳನ್ನು ಸಂಗ್ರಹಿಸಿದ್ದಾರೆ.

ಜನತಾ ಗೀತೆಗಳು ಕೃತಿಯಲ್ಲಿ ಸಂಪ್ರದಾಯದ ಹಾಡುಗಳು, ಹಂತಿಯ ಹಾಡುಗಳು, ಹೋಳಿಯ ಹಾಡುಗಳು, ಬೀಸುವ ಹಾಡುಗಳು ಇರುತ್ತವೆ. ಜನಪದವು ಸಂಪ್ರದಾಯಗಳನ್ನು ಅಂಧ ಶ್ರದ್ಧೆಯಿಂದ ನಂಬಿಕೊಂಡು ಬಂದಿದೆ. ಕಾಲಕಾಲಕ್ಕೆ ಅವುಗಳನ್ನು ಆಚರಿಸಿ ಪೀಳಿಗೆಗೆ ತಾತಂದ ‘ಚ್ಯಾಜ’ವೆಂದು ಕೊಡುತ್ತ ಬಂದಿದೆ. ಅಂತೆಯೇ ಈ ಸಂಪ್ರದಾಯಗಳ ಅರ್ಥಗಳು ತಿಳಿಯದಿದ್ದರೂ ನಮಗಿಂದು ಉಳಿದು ಬಂದಿರುತ್ತವೆ.