ಕುಮಾರರಾಮನ ದುಂದುಮೆ ಡಾ. ಗದ್ದಗಿಮಠ ಅವರ ನಾಲ್ಕನೆಯ ಕೃತಿ. ಈ ಪುಟ್ಟ ಪುಸ್ತಿಕೆಯನ್ನು ೧೯೫೯ ರಲ್ಲಿ ಪ್ರಕಟಿಸಿದ್ದಾರೆ. ತಮ್ಮ ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ನಡುವೆ ಕಂಡುಬಂದ ಕಮ್ಮಟ ಕೇಸರಿ ಕುಮಾರರಾಮನಿಗೆ ಸಂಬಂಧಿಸಿದ ಅನೇಕ ಹಾಡು, ಕಥೆ, ಬಯಲಾಟ, ಗಾದೆಮಾತು, ಒಗಟು, ಸೊಲ್ಲು ಮುಂತಾದವುಗಳನ್ನು ಸಂಗ್ರಹಿಸುತ್ತಾ ಬಂದಿದ್ದು ಈಗ ಒಂದು ದುಂದುಮೆಯನ್ನು ಪ್ರಕಟಿಸುತ್ತಿರುವುದಾಗಿ ತಿಳಿಸಿದ್ದಾರೆ. ದುಂದುಮೆ ಪದದ ಸ್ವರೂಪ, ಗೀತೆಯ ಧಾಟಿ ಹಾಗೂ ಛಂದಸ್ಸು ಮೊದಲಾದವುಗಳನ್ನು ವೈಜ್ಞಾನಿಕವಾಗಿ ವಿವೇಚಿಸಿರುವುದರಿಂದ ಎಲ್ಲ ಕೃತಿಗಳಿಗಿಂತ ಇದು ವೈಶಿಷ್ಟ್ಯಪೂರ್ಣವಾಗಿದೆ. ಜಾನಪದದಿಂದಾಗಿಯೇ ರಚಿಸಲ್ಪಟ್ಟ ಈ ‘ದುಂದುಮೆ’ಗಳನ್ನು ಕಿತ್ತೂರಿನ ಅರಸರನ್ನು ಹೊರತುಪಡಿಸಿ ಇತರ ಯಾವ ಅರಸು ಮನೆತನದವರೂ ಪ್ರೋತ್ಸಾಹ ನೀಡಲಿಲ್ಲ ಎಂಬುದಾಗಿ ಗದ್ದಗಿಮಠರು ಹೇಳಿದ್ದಾರೆ. ‘ದುಂದುಭಿ’ಯು ಹರವಾಗಿ ದುಂದುಮೆ ಆಗಿದೆ. ಇದು ಆರು ಸಾಲಿನ ಚೌಕಾಗಿ ಒಂಬತ್ತಕ್ಕಿಳಿದು, ಹದಿನೈದು ಸಾಲಿನ ಚೌಕಿನಲ್ಲಿ ನಿಂತಿದೆ. ಇಲ್ಲಿಂದಲೇ ಕನ್ನಡ ಲಾವಣಿ ಹಾಗೂ ರಿವಾಯತ್‌ಹಾಡುಗಳು ಪ್ರಾರಂಭವಾಗಿವೆ ಎಂದು  ಅಭಿಪ್ರಾಯಪಟ್ಟಿದ್ದಾರೆ. ಈ ಲಾವಣಿ ರಿವಾಯತಗಳಲ್ಲಿ ವಾದ-ಸಂವಾದ ಹಾಗೂ ಒಗಟು-ಬೆಡಗುಗಳ ಸವಾಲು ಮರು ಸವಾಲುಗಳೊಡನೆ ಚಕಮಕಿ ನಡೆದಾಗ ಚೌಕಿನಲ್ಲಿಯ ಸಾಲುಗಳು ಹೆಚ್ಚಾಗಿ ಏಕರಾಗದಲ್ಲಿದ್ದರೂ ದಾಟಿಧರತಿಗಳು ಬದಲಾಗಿ ಲಯ ಆಲಾಪವು ವೈವಿಧ್ಯ ರೂಪ ತಾಳುವುದು.

ಅಂಶಬಂಧವೇ ದುಂದುಭಿಯ ಛಂದೋಬಂಧ, ಅಂತೆಯೆ ಅದು ಹಾಡುವಾಗ ಲಯಾಲಾಪಗತಿ ವಿನ್ಯಾಸಕ್ಕೆ ಹೊಂದಿಕೊಂಡು ಸರಾಗವಾಗುವುದು ದುಂದುಭಿಯು ಚೌಪದಿ ಕಟ್ಟಿನಲ್ಲಿದೆ. ಅದರ ನಾಲ್ಕು ಸಾಲುಗಳನ್ನು ಹಾಡಿ, ಮೇಲೆ ‘ದುಂದುಭಿ’ ಎಂಬ ಸೊಲ್ಲು ಪಲ್ಲವಿಯನ್ನು ಎಳೆಯುವರು.

ವಿ
ದುಂದುಭಿ |

ವಿ
ಪದಗಳ |

ವಿ
ಚಂದಾಗಿ |

ವಿ
ಕೇಳಿರಿ

 

ವಿ
ಕಂದುಗೊ |

ವಿ
ರಳಭಕ್ತ |

ಬ್ರ
ಮಲ್ಲೇಂ |

ಬ್ರ
ದ್ರನ

 

ವಿ
ಸಿಂಧುರ |

ವಿ
ವಾಹನ |

ವಿ
ನೆಂದು ಮ |

ವಿ
ರ್ತ್ಯದಲ್ಲಿ

 

ವಿ
ಬಂದುರಾ |

ವಿ
ಜಿಸುವಂಥ |

ಬ್ರ
ದೇವೇಂ |

ಬ್ರ
ದ್ರನ

||೧|| ದುಂದುಭಿ||

ಹೀಗೆ ದುಂದುಭಿಯು ವಿಷ್ಣುಗಣ ಪ್ರಧಾನವಾಗಿರುತ್ತದೆ. ಎರಡನೆಯ ಮತ್ತು ನಾಲ್ಕನೆಯ ಸಾಲಿನ ಕೊನೆಯಲ್ಲಿ ಬ್ರಹ್ಮಗಣಗಳು ಬರುವುದರಿಂದ ಕತೆಯ ಮುನ್ನೋಟಕ್ಕೆ ಎತ್ತಿಕೊಟ್ಟಂತಾಗುತ್ತದೆ. ಇದನ್ನು ಮಾತ್ರಾಗಣಕ್ಕೆ ಇಳಿಸಿದಾಗ, ಸಾಮಾನ್ಯವಾಗಿ ಇದರ ಮೊದಲನೆಯ ಹಾಗೂ ಮೂರನೆಯ ಸಾಲುಗಳು ತ್ರಿಪದಿಯ ಎರಡನೆಯ ಸಾಲನ್ನು ಎರಡನೆಯ ಹಾಗೂ ನಾಲ್ಕನೆಯ ಸಾಲುಗಳು ತ್ರಿಪದಿಯ ಮೂರನೆಯ ಸಾಲನ್ನೂ ಸರಿಗಟ್ಟುವದು ಕಂಡುಬರುತ್ತದೆ.

ಕನ್ನಡ ಛಂದಸ್ಸಿನ ವೈಶಿಷ್ಟ್ಯವಾದ ಆದಿಪ್ರಾಸವು ದುಂದುಭಿಯಲ್ಲಿ ತಪ್ಪದೇ ಬಂದಿರುವುದರಿಂದ ಪದ್ಯದ ಶೋಭೆಯನ್ನು ಹಚ್ಚಿಸಿರುತ್ತದೆ. ಅಲ್ಲದೆ ತ್ರಿಪದಿಯ ಅನುಪ್ರಾಸವು ಮೊದನೆಯ ಹಾಗೂ ಮೂರನೆಯ ಚರಣಗಳಲ್ಲಿಯೂ ಅಂತ್ಯಪ್ರಾಸವು ಎರಡನೆಯ ಹಾಗೂ ನಾಲ್ಕನೆಯ ಚರಣಗಳಲ್ಲಿ ತಪ್ಪದೆ ಬರುತ್ತದೆ.

ದುಂದುಭಿ-ದುಂದುಮೆಗಳು ಹೋಳಿ ಹಬ್ಬದಲ್ಲಿ ಹಾಡುವಂತಹ ಪದಗಳೆಂದು ಕರ್ನಾಟಕದಲ್ಲಿ ಪರಂಪರೆಯಾಗಿ ರೂಢಿಯಲ್ಲಿವೆ. ಶಿವಶರಣರೂ ಹರಿದಾಸರೂ ಹೋಳಿಯನ್ನು ಹಾಡುವಾಗ ಈ ದುಂದುಭಿ-ದುಂದುಮೆ ಪದಗಳನ್ನು ಹಾಡುತ್ತಿದ್ದರೆಂದು ತಿಳಿದು ಬರುತ್ತದೆ. ಕಾಲಜ್ಞಾನದಲ್ಲಿಯೂ ಹರಿದಾಸರ ಹಾಡುಗಳಲ್ಲಿಯೂ ದುಂದುಭಿ-ದುಂದುಮೆಯ ಸೊಲ್ಲುಗಳು ಬಳಸಲ್ಪಟ್ಟಿವೆ. ಇದನ್ನು ಅರಿತಾಗ ಇವು ಸುಮಾರು ಹದಿನಾರನೆಯ ಶತಮಾನದಲ್ಲಿಯೇ ಬಳಕೆಯಲ್ಲಿ ಬಂದು ಹದಿನೇಳನೆಯ ಶತಮಾನದ ಕೊನೆಯ ಭಾಗದಲ್ಲಿಯೂ ಹದಿನೆಂಟನೆಯ ಶತಮಾನದಲ್ಲಿಯೂ ಕಿತ್ತೂರ ನಾಡ ಸೊತ್ತಾಗಿ ಹುಲುಸಾಗಿ ಬೆಳೆದು ಜನತೆಯ ಮೆಚ್ಚುಗೆ ಪಡೆದು ಹೆಚ್ಚು ಬೆಳಕಿಗೆ ಬಂದಿವೆ. ಇಂದಿಗೂ ಕಿತ್ತೂರ ನಾಡ ಮೂಲೆಮೂಲೆಯಲ್ಲಿ ಸಿಗುವ ಈ ಹಾಡುಗಳ ಅನೇಕ ಹಸ್ತಪ್ರತಿಗಳೇ ಇದಕ್ಕೆ ಉತ್ತಮ ನಿದರ್ಶನ. ದುಂದುಭಿ-ದುಂದುಮೆ ಸೊಲ್ಲು ಬಳಸಿ ಹೋಳಿ ಹಬ್ಬದಲ್ಲಿ ಹಾಡುವ ಪರಿಪಾಠವು ಉತ್ತರ ಕರ್ನಾಟಕದಲ್ಲಿ ಇಂದಿಗೂ ರೂಢಿಯಲ್ಲಿದೆ. ಆದರೆ ಇಂದು ಈ ದುಂದುಭಿ ದುಂದುಮೆ ಹಾಡುಗಳು ಹೋಳಿಯಲ್ಲಿ ಆಶ್ಲೀಲ ಭರಿತವಾಗಿದೆ. ಇವು ಹೇಗೆ ಆಶ್ಲೀಲವಾದುವೆಂಬುದೂ ಒಂದು ಸಂಶೋಧನೆಯ ವಿಷಯ. ಇವೆಲ್ಲವುಗಳನ್ನು ಸಮಗ್ರವಾಗಿ ಅರಿತು ವಿಚಾರಿಸಿದಾಗ ಪೇಶಾವಾಯಿಗಳ ಆಡಳಿತೆಯಿಂದ ಮಹಾರಾಷ್ಟ್ರದ ಪ್ರಭಾವವಾಗಿ ತಮಾಷೆ ಮೊದಲಾದ ಅಶ್ಲೀಲ ಸೊಗಡಿನಿಂದ ಇತ್ತೀಚೆಗೆ ಕನ್ನಡಿಗರ ಹೋಳಿಯಲ್ಲಿ ಅಶ್ಲೀಲ ಆಚರಣೆಯು ಆರಂಭವಾಯಿತೆಂದು ತೋರುತ್ತದೆ. ಮಹಾರಾಷ್ಟ್ರರ ಸಂಪರ್ಕವಾಗದ ದಕ್ಷಿಣ ಕರ್ನಾಟಕದಲ್ಲಿ ಇಂದಿಗೂ ಇದು ತೀರ ಕಡಿಮೆ ಪ್ರಮಾಣದಲ್ಲಿರುವುದು ನಿದರ್ಶನಕ್ಕೆ ಬರುತ್ತದೆ. ಶ್ರೀ ದೊಡ್ಡಪ್ಪ ಭಾವೆಪ್ಪ ಮೂಗಿ ಅವರು ಪ್ರಕಟಿಸಿದ ‘ದೊರೆ ಮಲ್ಲಸರ್ಜನ ದುಂದುಮಿ’ಯು ಹದಿನೈದು ಸಾಲಿನ ಚೌಕಿನಲ್ಲಿದೆ. ಕುಮಾರರಾಮನ ದುಂದುಮೆಯನ್ನು ಹಾಡಿದ ಗೋಕಾವಿಯ ಗುರುವರಸಿದ್ಧ ಸೇವಕನು ೧೯೧೦ ರಲ್ಲಿ ಶಿವಾಧೀನನಾಗಿದ್ದಾನೆ. ಮಹಾಲಿಂಗಪುರದಲ್ಲಿ ಕುಮಾರರಾಮನ ಬಯಲಾಟವನ್ನು ನೋಡಿ ಈ ದಂದುಮೆ ರಚಿಸಿರುವುದಾಗಿ ಹೇಳಿದ್ದಾನೆ.

ಚಲುವ ಚನ್ನಿಗ ನಿನ್ನ ನಲ್ಲನಗಲಿಸಿದೆಯ್ಯೋ
ಮೊಲೆಯುಣ್ಣು ಶಿಶುವ ಬಿಡಿಸಿದಂತೆ
| ಈದು
ಮಲಗಿದ ಹುಲಿಯನು ಕೆಣಕಿದಂತೆ
| ಮತ್ತ
ತಳಕು ಬಿದ್ದ ಸರ್ಪ ತಡವಿದಂತೆ
|| ರತಿಯ
ಕಲಹದೊಳಿದ್ದ ನಾರಿನೆಬ್ಬಿಸಿದಂತೆ
| ಪದ್ಮಿನಿ
ಫಲವೆನಗಾಯಿತು ಮಂತ್ರೀಶನಂದ
||ದುಂ||

ದುಂದುಮೆಗಳಲ್ಲಿ ಕಂಡುಬರುವ ಆಶ್ಲೀಲತೆಯ ಬಗೆಗೆ ಕುಮಾರರಾಮನ ದುಂದುಮೆಯ ಕಾಲದ ಬಗ್ಗೆ ಗದ್ದಗಿಮಠರು ಸಮರ್ಥವಾಗಿ ಪ್ರಸ್ತಾಪಿಸಿದ್ದಾರೆ. ಇದು ಗದ್ದಗಿಮಠ ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ.

ಉತ್ತರ ಕರ್ನಾಟಕದಲ್ಲಿ ಕುಮಾರರಾಮನನ್ನು ಹೊಗಳಿ ಹಾಡುವವರು ಹೆಚ್ಚಾಗಿ ಲಿಂಗಾಯತರಾಗಿದ್ದಾರೆ. ಈ ಭಾಗದಲ್ಲಿ ಒಕ್ಕಲಿಗರು  ಕುಮಾರರಾಮನನ್ನು ಹಂತಿಯಲ್ಲಿ ಹಾಡಿದರೆ, ಹೆಣ್ಣು ಮಕ್ಕಳು ಬೀಸುವಾಗ ಮತ್ತು ಸೋಬಾನವಾಡಿದ್ದಾರೆ. ರಸಿಕರಾಗಿ ತಿಂಗಳುಗಟ್ಟಲೆ ‘ಚನ್ನಿಂಗ ರಾಮನ ಹಾಡುಗಬ್ಬ’ವನ್ನು ಹಾಡಿ ನಲಿಯುತ್ತ ಬಂದಿದ್ದಾರೆ. ಅಲ್ಲದೆ ಕನ್ನಡ ಗೊಂದಲಿಗರು ಸ್ತುತಿ ಹಿಡಿದು ತಾಳ ಕಟೆದು ಮದ್ದಲಿ ನುಡಿಸಿ ಮೇಳದೊಡನೆ ಕುಣಿಕುಣಿದು ಕುಮಾರರಾಮನನ್ನು ಹಾಡುವುದೂ ಈ ಭಾಗದಲ್ಲಿ ಕೇಳಿಬರುವುದು. ಇಂತಹ ಜನಪದ ಸಾಹಿತ್ಯ ರಾಶಿಯು ಬೆಳಕಿಗೆ ಬಂದರೆ ಕನ್ನಡ ಸಂಸ್ಕೃತಿಯ ಮೇಲೆ ಹೊಸ ಬೆಳಕು ಬೀಳುವುದೆಂದು ಆಶಿಸಲಾಗಿದೆ.

‘ದುಂದುಭಿ’ ಅಥವಾ ‘ದುಂದುಮೆ’ಯು ಪರಸಿ ಕೂಡಿದಾಗ ವಿಶಿಷ್ಟ ಪ್ರಚಾರಕ್ಕಾಗಿ ಹಾಡುವ ಒಂದ ಮಾರುದ್ಧ ಹಾಡು; ಚಿಕ್ಕ ಹಾಡುಗಬ್ಬವಿದು. ಕಟ್ಟು ಕತೆಯಲ್ಲ, ಪವಾಡ-ಪುರಾಣದ ಗೊಂದಲವಲ್ಲ, ಅದು ನಮ್ಮ ನಾಡಿನ ಶರಣ-ಸಾಧುಸತ್ಪುರುಷರ ಪಾವನ ಚರಿತ್ರೆ, ಇಲ್ಲವೆ ವೀರಕಲಿಗಳ ಸಾಹಸ ಜೀವನ. ಅದರಲ್ಲಿ ಸಾಮಾಜಿಕ ಐತಿಹಾಸಿಕ ಸಂಧರ್ಭ ಸನ್ನಿವೇಶಗಳನ್ನು ಕಣ್ಮುಂದೆ ಕಾಣುತ್ತೇವೆ. ಆಯಾ ಭಾಗದ ದೇಶಿಯೊಡನೆ ಹಿತಮಿತವಾಗಿ ಬೆರೆತ ಜನವಾಣಿಯೇ ಅದರ ನುಡಿಯಾಗಿರುವುದರಿಂದ ಜನಸಾಮಾನ್ಯರ ಮನಸ್ಸನ್ನು ಹಿಡಿಯುವುದು ಏರಿಳಿವಿನ ಲಯವಿನ್ಯಾಸದಲ್ಲಿ ವಾದ್ಯದ ಸಂಗಜೋಡಣೆಯು ತಾಳಮೇಳದ ಗತ್ತನ್ನು ತುಂಬುವುದರಿಂದ ಸಂದರ್ಭ ಸನ್ನಿವೇಶಗಳ ರಸರುಚಿಯು ಇಮ್ಮಡಿಯಾಗಿ, ಕೇಳಲು ಕಿವಿಗೆ ಬಲು ಇಂಪಾಗುವದು. ಅದರಲ್ಲಿ ಜಾನಪದ ಛಂದಬಂಧವು ಕತೆಗೆ ಕುಕ್ಕೋಟವಾಗಿ ಹುಸಿಪೆಟ್ಟುಗಳ ಕೋಚಿನಲ್ಲಿ ನಡುನಡುವೆ ಕಿರಿನುಡಿಗಳ ಪಾತದಿಂದ ಜನಮನವನ್ನು ಕೆರಳಿಸಿ, ಭಾವೋದ್ರೇಕಕ್ಕೆ ಪುಟಕೊಡುವುದು. ಅವನು ಎಂತಹ ಗಾವಿಲನೇ ಇರಲಿ, ಅದನ್ನು ಕೇಳಿದಾಗ ಮನದಲ್ಲಿ ತಾನ ಹಿಡಿಯುವನಲ್ಲದೆ ಆವೇಶಭರಿತವಾಗಿ ಒಮ್ಮೊಮ್ಮೆ ಬಹಿರಂಗೋದ್ರೇಕನಾಗುವನು. ಅದನ್ನು ಕಿವಿಯಿಂದ ಕೇಳಿ ಅನುಭವಿಸಬೇಕಲ್ಲದೆ ಶಬ್ದಗಳಲ್ಲಿ ಹಿಡಿದಿಡುವುದು ಕಷ್ಟಸಾಧ್ಯವಾದುದು.

ನೃಪತುಂಗನು ಕವಿರಾಜಮಾರ್ಗದಲ್ಲಿ ಆಗಲಿ, ನಾಗವರ್ಮನು ತನ್ನ ಛಂದೋಂಬುಧಿಯಲ್ಲಿ ಆಗಲಿ ಎಲ್ಲಿಯೂ ‘ದಂದುಭಿ’ ಅಥವಾ ‘ದುಂದುಮೆ’ಯ ಮಾತನ್ನು ಪ್ರಸ್ತಾಪಿಸಿರುವುದಿಲ್ಲ. ಬೇರೆ ಯಾವ ಕನ್ನಡ ಕವಿಗಳೂ ಈ ಛಂದೋಬಂಧನವನ್ನು ತಮ್ಮ ಕಾವ್ಯದಲ್ಲಿ ಎಲ್ಲಿಯೂ ಬಳಸಿರುವುದಿಲ್ಲ. ಇದು ಜನಸಾಮಾನ್ಯರಲ್ಲಿ ಹುಟ್ಟಿ ಬೆಳೆದು ಶೈಲಿಯಲ್ಲಿ ಸರಳವಾಗಿ, ಅಂಶಬಂಧದಲ್ಲಿ ಹೊರಸೂಸಿ ಸುಲಭವಾಗಿ ಲಯವಿನ್ಯಾಸಕ್ಕೆ ಹಿತಮಿತವಾಗಿ, ಹಾಡಾಗಿ ಹಾಡುಗಬ್ಬವಾಗಿದೆ. ಕಿತ್ತೂರ ಅರಸರನ್ನು ಬಿಟ್ಟು ಯಾವ ಅರಸು ಮನೆತನದವರೂ ಇದನ್ನು ಪೋಷಸಿದಂತೆ ಕಂಡು ಬರುವುದಿಲ್ಲ. ಜನಸಾಮಾನ್ಯರ ಕಲ್ಯಾಣಕ್ಕಾಗಿ ಆಳಿದ ಕಿತ್ತೂರ ಅರಸರು ಅವರ ಸಾಹಿತ್ಯಕ್ಕೂ ಸ್ಥಾನಮಾನಕೊಟ್ಟು ಮನ್ನಿಸಿದ್ದಾರೆ. ಅಂತೆಯೆ ಕಿತ್ತೂರು ಹಾಳಾಗಲು ಆ ಭಾಗದಲ್ಲಿ ಕಣ್ಣೀರು ಸುರಿಸಿದ ಹಳ್ಳಿಗನೇ ಇಲ್ಲ. ದುಂದುಭಿ, ದುಂದುಮೆ, ಲಾವಣಿ, ರಿವಾಯತ ಮೊದಲಾದ ಹಾಡುಗಳು ಹಾಡುಗಬ್ಬಗಳೂ ಕಿತ್ತೂರ ಆಸ್ಥಾನವು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಮೀಸಲ ಮುಡುಪೆಂದರೆ ಅತಿಶಯೋಕ್ತಿ ಎನಿಸಲಾರದು.

ರಾಜಾಶ್ರಯದ ವೈಭವದಲ್ಲಿ ಬಂದ ಕನ್ನಡ ಕಾವ್ಯಶ್ರೀಯು ಈ ಅರಸರ ಕಾಲದಲ್ಲಿ ಜನಸಾಮಾನ್ಯರ ಅಂಗಳಕ್ಕಿಳಿದು ಜನತೆಯ  ಉಸಿರಾಗಿದ್ದಾಳೆ. ಅದರ ಪರಿಪಕ್ವತೆ ಎಂದರೆ ದುಂದುಬಿ, ಇದರ ಸೊಗಸಾದ ಬಿಗುವನ್ನು ಜನತಾ ಗೀತೆಗಳು ಎಂಬ ಸಂಕಲನದಲ್ಲಿ ಪ್ರಕಟಿಸಿದ ‘ಮುಚ್ಚಖಂಡಿಯ ದುಂದುಮೆ’ಯಲ್ಲಿ ನೋಡಬಹುದು. ಅದರಲ್ಲಿ ಆದಿ-ಅನು-ಅಂತ್ಯ ಪ್ರಾಸಗಳು ಗಮಕಕ್ಕೆ ಒಂದು ಎಮಕು ತಂದು ಹೆಚ್ಚು ಸೊಗಸಾಗಿರುತ್ತವೆ. ಈ ಛಂದದ ಮಟ್ಟವನ್ನು ಹಳ್ಳಿಗರ ಭಾವಗೀತೆಗಳಲ್ಲಿಯೂ ಕಾಣಬಹುದು. ಈ ಭಾವಗೀತೆಗಳನ್ನು ಹಾಡುವಾಗ ಹೆಣ್ಣುಮಕ್ಕಳು ‘ಮಲ್ಲಿಗೆ ದುಂಡು ಮಲ್ಲಿಗೆ’, ‘ಮಲ್ಲಿಗೆ ಸೂಜಿ ಮಲ್ಲಿಗೆ’ ಎಂದು ವಿವಿಧ ಸೊಲ್ಲುಗಳನ್ನು ಬಳಸಿಕೊಳ್ಳುವುದರಿಂದ ರಸಿಕತೆಯು ಹಾಡಿನ ತುಂಬೆಲ್ಲ ಸೂಸಾಡಿ ಕೇಳಲು ಇನ್ನಷ್ಟು ಇಂಪಾಗುವುದು.

‘ದುಂದುಭಿ’ ಹಾಗೂ ‘ದುಂದುಮಿ’ ಇವು ಎರಡೂ ಬಾಜನಗಬ್ಬಗಳಿದ್ದರೂ ಹಾಡುವ ತಾಳ, ಲಯ, ಗತಿ, ರಾಗ ಮೊದಲಾದವುಗಳು ಬೇರೆ ಬೇರೆ ಇವೆ. ದುಂ, ದುಂ ಎಂದು ಸಪ್ಪಳ ಮಾಡುವ ವಾದ್ಯಗಳನ್ನಲು ಬಾರಿಸಿ ಹಾಡುವ ವಾಡಿಕೆಯು ಮೊದಲಿನಿಂದಲೂ ಬಂದಿದೆ. ಅದು ಯಾವ ದಿನವೇ ಇರಲಿ, ಪರಸಿ ಕೂಡಿದಾಗ ಇವುಗಳನ್ನು ಹಾಡುತ್ತಿದ್ದರು. ಅರಸರ ಅಂಗಳದಲ್ಲಿ ವಿಶೇಷವಾಗಿ ದುಂದುಭಿಗಳನ್ನು ಹಾಡುತ್ತಿದ್ದರು. ದುಂದುಭಿ ವಾದ್ಯಗಳ ಜೋಡಣೆಯು ಅರಸರ ಅಂಗಳದಲ್ಲಿಯೇ ಇರುತ್ತಿತ್ತೆಂದು ಕಾಣುತ್ತದೆ. ರಾಜನು ದಿಗ್ವಿಜಯಕ್ಕೆ ಹೊರಟನೆಂದರೆ ಮೊದಲು ಕೆಲವು ದಿನಗಳವರೆಗೆ ದಂಡಿಯಲ್ಲಿ ವಿಜಯ ದುಂದುಭಿಗಳೇ ಮೊಳಗುತ್ತಿದ್ದವು. ಅರಸರ ಅಂಗಳದಲ್ಲಿ ಜನರು ಕೂಡಿದಾಗ ‘ದುಂದುಭಿ’ಗಳು ನಡೆಯುತ್ತಿದ್ದವು. ಮೊದಲು ‘ದುಂದುಭಿ’ ವಾದ್ಯವನ್ನು ಬಾರಿಸಿ ಜನರ ಗದ್ದಲವನ್ನು ನಿವಾರಿಸಿ ನಂತರ ಹಿಂದಿನಿಂದ ಹಾಡು ಪ್ರಾರಂಭವಾಗಲು ದುಂದುಭಿ ವಾದ್ಯದ ಕೆಳದನಿಯ ಗತ್ತನ್ನು ಹಾಡಿನೊಡನೆ ಕೂಡಿಸುತ್ತಿದ್ದಂತೆ ಕಾಣುತ್ತದೆ. ಆಗ ಅದಕ್ಕೆ ಬರುವ ಮಾರ್ದವವನ್ನು ಸ್ವತಃ ಕೇಳಿಯೇ ತಣಿಯಬೇಕು. ಅದು ವರ್ಣನೆಗೆ ನಿಲುಕದು.

ದುಂದುಬಿ, ದುಂದುಮಿ ಹಾಗೂ ಲಾಮಣಿಗಳನ್ನು ರಚಿಸಿ ಹಾಡಿದ ಕವಿಗಳು ತೀರ ನಿರಕ್ಷರಿಗಳೇನಲ್ಲ. ಹಾಗಿದ್ದರೂ ಕನ್ನಡ ಮನೆಯ ಸಂಸ್ಕೃತಿಯನ್ನುಂಡು ಅರಗಿಸಿ, ರಸಕವಿಗಳಾಗಿ ಪದಗಳನ್ನು ರಚಿಸಿ ಹಾಡಿದ್ದು ಎನಿಸದಿರದು. ಅವರು ತಮ್ಮ ಗುರುಕುಲವನ್ನು ಹೇಳಿ ಪಂಡಿತ ಕವಿಗಳಂತೆ ದೇವದೇವತೆಗಳನ್ನು ಬಲಗೊಂಡಿರುವುದೂ ಉಂಡು. ಈ ಕವಿಗಳು ಯಾರ ಹಂಗಿಗೂ ಆಶ್ರಯಕ್ಕೂ ಸಿಲುಕಿದವರಲ್ಲ. ಕಂಡದ್ದನ್ನು ಮಾರ್ಮಿಕವಾಗಿ ಪ್ರತಿಬಿಂಬಿಸುವಂತೆ ನಿರರ್ಗಳವಾದ ಒಂದು ಶೈಲಿಯಲ್ಲಿ ಚಿತ್ರರೂಪವಾಗಿ ಹಾಡಿದ್ದಾರೆ. ವೀರರಸವಿದ್ದರೆ ವೀರಾವೇಶ ತುಂಬಿ ಹಾಡಿದ್ದಾರೆ. ಹಾಸ್ಯವಿದ್ದರೆ ಹಸನ ಮನಸ್ಸಿನಿಂದ ನಕ್ಕು ಉಪದೇಶಪರವಾಗಿ ಹಾಡಿ ನಲಿದಿದ್ದಾರೆ. ಶೃಂಗಾರ ಪ್ರಧಾನವಿದ್ದರೆ ಅದರ ಬಲಿಗೆ ಬೀಳದೆ ಎಸರೊಸೆವ ಜೊಲ್ಲುತನ ಗೆದ್ದು ರಸಿಕರಾಗಿ ಹಾಡಿದ್ದಾರೆ. ಹಾಡುವಾಗ ಅವರಿಗೆ ಉಚ್ಚ-ತುಚ್ಚ ಶೃಂಗಾರವೆಂಬ ಹೆದರಿಕೆ ಇದ್ದಂತೆ ತೋರುವುದಿಲ್ಲ. ಅವರ ಹಾಡುಗಳಲ್ಲಿ ಅಲ್ಲಲ್ಲಿ ಅಶ್ಲೀಲ ಪ್ರಯೋಗಗಳು ಕಂಡುಬಂದರೂ ‘ಭರತೇಶ ವೈಭವ’ ಕಾವ್ಯವನ್ನು ಬರೆದ, ಕವಿ ರತ್ನಾಕರನಂತೆ ಸನ್ನಿವೇಶದ ಮೂಲ ಉದ್ದೇಶ, ಕಲ್ಪನೆ, ಮೊದಲಾದವುಗಳನ್ನು ಅರಿಯಲು ಮಾತ್ರವಲ್ಲದೆ ಬೇರೆಯೇನಿಲ್ಲ. ಅಂತೆಯೇ ಅವುಗಳನ್ನು ತಪ್ಪ ತಿಳಿದುಕೊಂಡು ತುಚ್ಛ ಶೃಂಗಾರವೆಂದು ನಿರಾಕರಿಸಬಾರದು. ಹಾಗೆ ಭಾವಿಸಿದರೆ ಆ ಹಾಡಿನ ಬಿಗುವೆ ಸಡಿಲಿಸಲಾಗುವುದು, ಉದ್ದೇಶವಂತೂ ಬೈಲಾಗುವದು. ವೀರರಸ ಪ್ರಧಾನವಾದ ದುಂದುಮೆ ಹಾಡುಗಳಿಗೆ ನಿದರ್ಶನ ಹೀಗಿದೆ.

ಚಂಡಿಯೋ ಚೌಡಿಯೋ, ಮಾರಿಯೋ ಮಸಣಿಯೊ ಖಂಡಿತ ಮಾನವಳಿವಳಲ್ಲ |
ಗಂಡುಗಲಿಗಳ ಮೀರಿ ರುಂಡವ ತರಿವಳು ಮಹಾ ಮಾಯಿಯಲ್ಲದೆ ಬ್ಯಾರಲ್ಲ
|
ಪುಂಡರಕ್ಕಸ ಹಿಂಡಮುರಿದ ಚಾಮುಂಡಿಯೆ ಈಕೆಯು ಸುಳ್ಳಲ್ಲ
|
ಚಂಡಪ್ರಚಂಡರ ತಂಡವೆ ಕುಂದಿಕತು ಎಂಬುವ ಶಬ್ದವೆ ರಣವೆಲ್ಲಿ
||

ಇದು ಕಿತ್ತೂರ ಚೆನ್ನಮ್ಮ ರಾಣಿಯ ಕೆರಳಿದ ರಣದ ಮೇಲಿನ ಕಾವ್ಯಚಿತ್ರ! ಈ ಹಾಡನ್ನು ಕೇಳುಕೇಳುತ್ತಲೇ ರಕ್ತ ಉಕ್ಕಿ ಶೌರ್ಯದ ರೋಮಾಂಚನ ಪುಟಿದೇಳುತ್ತದೆ. ಉತ್ತರ ಕರ್ನಾಟಕದಲ್ಲಿ ಇಂತಹ ಲಾವಣಿಗಳು ಜನರ ಮೆಚ್ಚುಗೆಯನ್ನು ಪಡೆದು ರಂಗಭೂಮಿಗೆ ಇಳಿದಿವೆ. ಹಳ್ಳಿಪಟ್ಟಣಗಳಲ್ಲಿ ಈ ಸನ್ನಿವೇಶಗಳನ್ನು ಈಗಲೂ ನಾಟಕ, ಬಯಲಾಟ ಮೊದಲಾದವುಗಳ ರೂಪಗಳಲ್ಲಿ ಕಾಣಬಹುದು. ಈ ಪ್ರಕಾರ ಲಾವಣಿಗಳೂ ದುಂದುಮಿಗಳೂ ರಾಷ್ಟ್ರ ಹಾಗೂ ಸಮಾಜದ ಪ್ರಚಾರ ಕಾರ್ಯವನ್ನು ಮಾಡುವ ಮೂಲ ಸಾಧನಗಳಾಗಿವೆ. ಕರೋಲಿನಾ ವಿಶ್ವವಿದ್ಯಾಲಯದ ಆರ್.ಎಸ್‌. ಬೊಗ್ಗ ಅವರು ಜಾನಪದ ಸಾಹಿತ್ಯವನ್ನು ಕುರಿತು ”Only in the field of political propaganda anticipate with some anxiety folklores future growth” ಎಂದು ಬರೆದಿದ್ದಾರೆ.

ಒಟ್ಟಿನಲ್ಲಿ ದುಂದುಮೆ ಅಥವಾ ಲಾವಣಿ ಪದಗಳು ಅತ್ಯಂತ ಜನಪ್ರಿಯ ಹಾಡುಗಬ್ಬಗಳಾಗಿರುತ್ತವೆ. ಡಾ. ಗದ್ದಗಿಮಠ ಅವರ ಕಮಾರರಾಮನ ದುಂದುಮೆ ಕೃತಿಯಲ್ಲಿ ಆರು ಸಾಲುಗಳುಳ್ಳ ಒಟ್ಟು ೧೩೧ ದುಂದುಮೆ ಪದದ ನುಡಿಗಳಿರುತ್ತವೆ. ಕಂಪಿಲರಾಮನಿಗೆ ಜಂಗಮನ ಪ್ರಸಾದದಿಂದ ಹಿರಿಯಾಲಿಯ ಗರ್ಭದಲ್ಲಿ ಕುಮಾರ ರಾಮನು ಜನಿಸಿದ್ದು; ಹೋಲ್ಕಿಯ ರಾಮ ಹಾಗೂ ಬೊಲ್ಲರ ವಿಚಿತ್ರವಾದ ಜನನ, ಕುಮಾರರಾಮನ ಬಾಲ್ಯ; ಮುತ್ತಿನ ಚೆಂಡಿನಾಟ, ರತ್ನಾಲಿಯು ಕುಮಾರರಾಮನನ್ನು ಮೋಹಿಸಿ ಹರಲಿಯ ಹೊರಿಸಲು ಕುಮಾರರಾಮನಿಗಾಗಿ ಹೋಲ್ಕಿಯ ರಾಮನು ಆಹುತಿಯಾದ ಸನ್ನಿವೇಶಗಳೇ ಈ ಹಾಡುಗಬ್ಬದ ಕಥಾಸಾರದಲ್ಲಿ ಮನಂಬುಗುವಂತೆ ಚಿತ್ರಣಗೊಂಡಿದೆ.