೧. ನಾಲ್ಕು ನಾಡಪದಗಳು:

ನಾಲ್ಕು ನಾಡಪದಗಳು ಕೃತಿಯು ಗೀತಸಂಕಲನವಾಗಿರುತ್ತದೆ. ಬಿಜ್ಜು ಮಹಾದೇವಿ, ಬೇಡರ ಕಣ್ಣಯ್ಯ, ಕೋಳೂರು ಕೊಡಗೂಸು ಮತ್ತು ಗೊಲ್ಲಾಳ ಈ ನಾಲ್ಕು ಶಿವಭಕ್ತರ ಮುಗ್ಧಶಿವಶರಣರ ಮಹಿಮೆಯನ್ನು ಬಣ್ಣಿಸುವ ಕೃತಿಯಿದು. ಇದು ತ್ರಿಪದಿಗಳ ಸಂಗ್ರಹವಾಗಿರುತ್ತದೆ.

ಗೊಲ್ಲಾಳನ ತಂದೆ ಕಲ್ಲೆದೆಯ ಭಂಟನವ
ಹೊಲ್ಲ ಬಡತನವ ಬಹುಸೋಸಿ ಇತ್ತೀಚೆ
ಎಲ್ಲ ಸಂಪತ್ತು ಗಳಿಸಿದ್ದ
ಗೊಲ್ಲಾಳ

ಈ ಕೃತಿಯ ಪ್ರತಿಯೊಂದು ತ್ರಿಪದಿಯಲ್ಲಿ ಆದಿಪ್ರಾಸ ತುಂಬಾ ನಿಯತವಾಗಿ ಬಂದಿದೆ, ಮಾತ್ರಾಗಣದ ಲಯ ಪ್ರಧಾನವಾಗಿ ಸರ್ವಜ್ಞನ ತ್ರಿಪದಿಗಳನ್ನು ನೆನಪಿಗೆ ತರುತ್ತವೆ. ಶಿಷ್ಟ ಕವಿಯು ಪ್ರಭಾವ ಬೀರಿದಂತೆ ಕಂಡುಬರುತ್ತದೆ. ಒಟ್ಟು ೩೨೭ ತ್ರಿಪದಿಗಳ ಸಂಗ್ರಹವಾಗಿದೆ. ಈ ತ್ರಿಪದಿಗಳನ್ನು ‘ನೂರೊಂದು ಧಾಟಿಯಲ್ಲಿ’ ಹಾಡಬಹುದು. ಇವುಗಳನ್ನು ರಚಿಸಿದ ಕವಿ ನಿರಕ್ಷರಿಯಾಗಿದ್ದರೂ ಛಂದಸ್ಸಿನಲ್ಲಿ ದೋಷಗಳಿಲ್ಲದಿರುವುದು ಅಚ್ಚರಿಯ ಸಂಗತಿ, ಛಂದಸ್ಸು ಮತ್ತು ಭಾಷೆಯ  ಮೇಲಿನ ಪ್ರಭುತ್ವವು ನಿಸರ್ಗದತ್ತವಾದ ಕೊಡುಗೆ ಎಂಬುದರಲ್ಲಿ ಸಂದೇಹವೆ ಇಲ್ಲ.

ಈ ಕೃತಿಯಲ್ಲಿರುವ ತ್ರಿಪದಿಗಳು ಬದಾಮಿ ಸಮೀಪದ ಕೆರೂರು ಗ್ರಾಮದಲ್ಲಿ ರಚಿಸಿರುವ ಸಂಗ್ರಹಗಳಾಗಿವೆ. ನೃಪತುಂಗನು ತಿರುಳ್ಗನ್ನಡ ನಾಡಿನ ಸೀಮೆಯನ್ನು ಹೇಳುವಾಗ ಉಲ್ಲೇಖಿಸಿದ ಕಿಸುವೊವಿಲ್‌ಅಂದರೆ ಪಟ್ಟದಕಲ್ಲಿಗೆ ಕೆರೂರ ಗ್ರಾಮ ತೀರ ಸಮೀಪವಾದುದು, ಆದಕಾರಣ ಈ ಕೃತಿಯಲ್ಲಿರುವ ತ್ರಿಪದಿಗಳ ಭಾಷೆಯು ಕೂಡಾ ತಿರುಳ್ಗನ್ನಡದ ಭಾಷೆಯಾಗಿರುತ್ತದೆ. ಇಲ್ಲಿಯ ಕೆಲವೊಂದು ಶಬ್ದಗಳು ವಾಕ್ಪ್ರಚಾರಗಳೂ ಕರ್ನಾಟಕದ ಎಲ್ಲ ಭಾಗಗಳಲ್ಲಿ ತಕ್ಷಣ ತಿಳಿಯುವದು ಕಷ್ಟಸಾಧ್ಯ. ಏಕೆಂದರೆ ಒಂದು ಭಾಗದ ದೇಸಿ ಮತ್ತೊಂದು ಭಾಗದವರಿಗೆ ತಿಳಿದುಕೊಳ್ಳಲು ಕಠಿಣವೆನಿಸುತ್ತದೆ. ಈ ಹಾಡುಗಳಲ್ಲಿ ಕೆಲವೊಂದು ಶಬ್ದಗಳು ಪ್ರೌಢಭಾಷೆಯಂತೆಯೂ ಇನ್ನು ಹಲವು ತೀರ ಹಳ್ಳಿಗಾಡಿನ ಶಬ್ದಗಳಂತೆಯೂ ಭಾಸವಾಗುತ್ತದೆ. ನಮ್ಮ ಉತ್ತರ ಕನ್ನಡ ಹಳ್ಳಿಯವರೊಂದಿಗೆ ಸಂಪರ್ಕ ಇಟ್ಟುಕೊಂಡವರಿಗೆ ಅವರ ಸಹಜ ಭಾಷೆಯ ಇಂತಹದು ಎಂಬುದು ತಿಳಿಯುತ್ತದೆ.

ಕರಿಗೊರಲ ಭೂಷಣನೆ ಕರಿದೊಗಲಹೊದ್ದವನೆ
ಹರಹರನೆ ಶಿವನೆ ಭಜಿಸುವೆನು| ಕಾಳತ್ತಿ
ಗುರುದೇವ ಮೆಚ್ಚಿ ನೀವರಿಸು||
ಬೇಡರ ಕನ್ನಯ್ಯ.

ಈ ಪದ್ಯದ ಭಾಷೆ ವ್ಯಾಕರಣ ದೃಷ್ಟಿಯಿಂದ ಪರಿಶುದ್ಧವಾಗಿದೆ. ಗ್ರಂಥಸ್ಥ ಸಾಹಿತ್ಯದ ಯಾವ ಕವಿಯಾದರೂ ಈ ರೀತಿ ಬರೆಯಬಹುದು. ಹೀಗೆ ಭಾಷೆ ಒಂದೇ ಸಮನಾಗಿ ಇಲ್ಲದಿರುವುದಕ್ಕೆ ನಾವಾಡುವ ಭಾಷೆಯೇ ಈ ರೀತಿಯಾಗಿದೆಯೆಂದು ಸಮಾಧಾನ ಮಾಡಿಕೊಳ್ಳಬಹುದು. ನಿಜವಾದ ಕವಿಯು ತಾನು ಅನುಭವಿಸಿದ್ದನ್ನು, ಕೇಳಿರುವುದನ್ನು, ಕಂಡಿರುವುದನ್ನು ಅರ್ಥೈಸಿಕೊಂಡು ತನ್ನ ಕಾವ್ಯಕ್ಕಾಗಿ ಭಾಷೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆ ಎನ್ನುವುದಕ್ಕೆ ಈ ಪದ್ಯವು ನಿದರ್ಶನವಾಗಿದೆ.

ಕಾವ್ಯದ ದೃಷ್ಟಿಯಿಂದ ಇವುಗಳನ್ನು ವಿವೇಚಿಸಿದಾಗ ಕವಿಗಳು ಕಾವ್ಯಗಳಲ್ಲಿ ಹದಿನೆಂಟು ವಿಧದ ವರ್ಣನೆಗಳು ಅವಶ್ಯವಾಗಿ ಬರಲೇಬೇಕೆಂಬ ನಿಯಮ ಇರುವುದರಿಂದ ಈ ಎಲ್ಲ ವರ್ಣನೆಗಳನ್ನು ಪ್ರಸಂಗಕ್ಕನುಸಾರವಾಗಿ ಅಥವಾ ಒಮ್ಮೊಮ್ಮೆ ಅಪ್ರಾಸಂಗಿಕವಾಗಿಯಾಗಲಿ ವರ್ಣಿಸುತ್ತಿದ್ದರು. ಆದರೆ ಜನಪದ ಕವಿಗಳಲ್ಲಿ ಮಾತ್ರ ನಿಸರ್ಗ ಸೌಂದರ್ಯದಂತೆ ಸಹಜ ಪ್ರತಿಭೆಯಿದೆ, ಹಾಗೂ ಅದನ್ನು ಮನಸೆಳೆಯುವ ರೀತಿಯಲ್ಲಿ ಹೇಳುವ ಶಕ್ತಿಯೂ ಇದೆ.

ಕಸುಕಾದ ದಾಳಿಂಬ ರಸಂತುಂಬಿ ಒಡೆದಂತೆ
ನಸುಗೆಂಪು ಒಡೆದು ಮೂಡಲವು | ಶಿವಭಕ್ತಿ
ಹಸುಗಂಪು ಹರಿದು ಜಗತುಂಬಿ ||
ಬಿಜ್ಜಮಹಾದೇವಿ.

ಸೂರ್ಯೋದಯದ ರಮಣೀಯ ಭವ್ಯ ಚಿತ್ರಣವನ್ನು ಕವಿ ಹೃದಯ ಸ್ಪರ್ಶಿಯಾಗುವಂತೆ ಬಣ್ಣಿಸಿದ್ದಾರೆ. ಈ ದೃಶ್ಯ ಪರಂಪರೆ ಬೇಂದ್ರೆ, ಕುವೆಂಪು ಮೊದಲಾದ ಕವಿಶ್ರೇಷ್ಠರಲ್ಲಿ ಭಿನ್ನ ವಿಭಿನ್ನವಾಗಿ ವರ್ಣಿಸಲ್ಪಟ್ಟಿರುವದು ಸರ್ವರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಇಲ್ಲಿ ಬರುವ ಸಹಜ ಅಲಂಕಾರ ನಿತ್ಯ ನೂತನವಾದುದು ಅಷ್ಟೇ ಹೃದಯಂಗಮವಾದುದು ಆಗಿದೆ ಎಂಬುದು ಅತ್ಯಂತ ಮಹತ್ವದ್ದು.

ಕಸುಕಾದ ದಾಳಿಂಬ ರಸತುಂಬಿ ಒಡೆದಂತೆ
ನಸುಗೆಂಪು ಒಡೆದು ಮೂಡಲವು

ಎನ್ನುವಲ್ಲಿ ಕವಿಯ ಹೃದಯ ಸೌಂದರ್ಯ ದೃಷಟಿ, ಅದನ್ನು ಶಬ್ದ ಚಿತ್ರಗಳಲ್ಲಿ ಸೃಷ್ಟಿಸುವ ಶೈಲಿ ಅಸಾಧಾರಣವಾದುದು! ಇಂಥ ಒಂದೆರಡು ಸೌಂದರ್ಯ ಲಹರಿಗಳನ್ನು ಹರಿಯಿಸಬಲ್ಲ ಕವಿಯು ನಿಜವಾಗಿ ಧನ್ಯನು. ಕಿರಿದರಲ್ಲಿ ಪರಿದರ್ಥವ ಬಿಂಬಿಸುವ ಕವಿಯ ಕೌಶಲ್ಯ ಮೆಚ್ಚುವಂತಹದು. ಕಥೆಯನ್ನು ನಿರೂಪಿಸುವ ವೈಶಿಷ್ಟ್ಯ ಹಾಗೂ ವರ್ಣನಾ ವೈಖರಿ ಸಹಜ ಸುಂದರವಾಗಿದೆ.

ಬೇಡರ ಕನ್ನಯ್ಯನ ಕಥೆಯು ಕೇವಲ ೮೯ ಪದ್ಯಗಳಲ್ಲಿ ರಚನೆಯಾಗಿದೆ. ಇಲ್ಲಿನ ಭಾಷೆಯ ಬೆಡಗು, ನವೀನ ಅಲಂಕಾರಗಳ ಪ್ರಯೋಗ, ಸಾಂಗವಾಗಿ ಕಥೆ ನಿರರ್ಗಳವಾಗಿ ಓಡುವ ಚಿತ್ರಣಶಕ್ತಿ, ಹಿತಮಿತವಾದ ವರ್ಣನೆ, ನಿರೂಪಣಾ ಸಾಮರ್ಥ್ಯ, ಭಕ್ತಿಯ ಆವೇಶ, ಭಾವಭಾಷೆಗಳ ಹೊಂದಿಕೆ, ಮಾನವನ ಮನೋ ವ್ಯಾಪಾರದ ಪರಿಜ್ಞಾನ ಈ ಮೊದಲಾದ ಅಂಶಗಳು ಕಾವ್ಯದುದ್ದಕ್ಕೂ ಸಹಜವಾಗಿ ಮೂಡಿವೆ. ಅತ್ಯಂತ ಹೃದಯಂಗಮವಾದ ವರ್ಣನೆಯ ಇನ್ನೊಂದು ಚಿತ್ರವನ್ನು ಕವಿಯು ಸಹೃದಯರು ರೋಮಂಚನಗೊಳ್ಳುವಂತೆ ಚಿತ್ರಿಸಿದ್ದಾನೆ.

ಗೋ! ಹಾರಿದೆನು ಶಿವನೆ, ಛಿ! ಹೊಗಲಿಜೀವ
ಭೋ! ಹೇಳೆಂದು ಉಪ್ಪರಗಿ | ಮೇಲಿಂದ
ಹಾ! ಹೋಕಾಳವೆ ಶಿವಲಿಂಗ ||
ಬಿಜ್ಜಮಹಾದೇವಿ.

ಬಿಜ್ಜಮಹಾದೇವಿ ತನ್ನ “ಶಿವಗೂಸು” ರೋಗದಿಂದ ನೆಟ್ಟಗಾಗುವುದಿಲ್ಲ ಎಂದು ತಿಳಿದು ಹೌಹಾರಿ ಉಪ್ಪರಿಗೆಯ ಮೇಲಿಂದ ಹಾರಿಕೊಳ್ಳುವ ಸನ್ನಿವೇಶವನ್ನು ಕವಿ ಹೇಳುವಾಗ ಗೋ! ಛೀ! ಭೋ! ಹಾ! ಎಂದು ಉದ್ಗಾರಗಳನ್ನು ಎಷ್ಟು ಸಹಜವಾಗಿ ಉಪಯೋಗಿಸಿದ್ದಾನೆಂಬುದು ಗಮನಾರ್ಹವಾದುದು. ಈ ಒಂದು ನುಡಿಯಲ್ಲಿ ಆ ತಾಯಿ ಶರಣೆಯ ಉದ್ವಿಗ್ನತೆ ಮತ್ತು ಗಾಬರಿಯ ಚಿತ್ರಣ ಹೃದಯವನ್ನು ಚುಚ್ಚಿ ಸರ್ವರ ಮನಸ್ಸನ್ನು ತಟ್ಟುತ್ತದೆ. ಈ ಕೃತಿಯ ಪ್ರತಿಯೊಂದು ಪದ್ಯವು ವಿಫುಲವಾದ ಕಾವ್ಯಗುಣಗಳನ್ನು ಒಳಗೊಂಡಿವೆ. ಅಲ್ಲದೆ ಉತ್ತರ ಕನ್ನಡದ ಒಕ್ಕಲಿಗರ ಜೀವನಕ್ಕೆ ಸಂಬಂಧಿಸಿದ ಅನೇಕ ಅಂಶಗಳು ಉಲ್ಲೇಖಿತವಾಗಿವೆ. ಹರಿಶ್ಚಂದ್ರ ಗಾಳಿ, ರಾಶಿಗಾಳಿ, ಕೋಳೂರ ಕಡೆಯಗಾಳಿ, ಕಣಕದ ರಾಸಿ, ಕಡೆರಾಶಿ, ಸುಂಕರಾಶಿ, ಜಂತೆಗುಂಟೆ, ಹಂತಿ ಹುಲುಸು ಹುಲ್ಲುಲ್ಲಿಗೆ ಮೊದಲಾದ ಒಕ್ಕುಲುತನಕ್ಕೆ ಸಂಬಂಧಪಟ್ಟ ವಿಷಯಗಳು ಮೇಲಿಂದ ಮೇಲೆ ಬಂದು ಕಾವ್ಯಕ್ಕೆ ಹೆಚ್ಚು ಶೋಭೆಯನ್ನುಂಟು ಮಾಡಿವೆ. ಇಂತಹ ಸುಮಧುರವಾದ ಗೀತೆಗಳನ್ನು ಸಂಗ್ರಹಿಸಿ ಕನ್ನಡ ನಾಡಿಗೆ ಕೊಡುಗೆಯಾಗಿ ಕೊಟ್ಟಿರುವ ಕೀರ್ತಿಶಾಲಿಗಳು ವಿಶಿಷ್ಟ ವ್ಯಕ್ತಿತ್ವ ಸಂಪನ್ನರು ಡಾ. ಗದ್ದಗಿಮಠರು, ಅತ್ಯಂತ ಕಠಿಣವಾದ ಈ ಕಾರ್ಯವನ್ನು ಅಷ್ಟೇ ಪರಿಶ್ರಮವಹಿಸಿ ಸಂಗ್ರಹಿಸಿ ಕನ್ನಡಿಗರಿಗೆ ಅಮೂಲ್ಯ ಸಾಹಿತ್ಯವನ್ನು ಕಾಣಿಕೆಯಾಗಿ ಕೊಟ್ಟಿರುವದು ಸ್ತುತ್ಯಾರ್ಹವಾದುದು.