ತಮ್ಮ ಅಂತರಾತ್ಮದ ಕರೆಗೆ ಕವಿ ಕುವೆಂಪು “ಕ್ರಾಂತಿಕಾಳಿ” ಎಂಬ ಸಾನೆಟ್ಟಿನಲ್ಲಿ ವಾಗ್ರೂಪವನ್ನು ನೀಡಿದ್ದಾರೆ :

ಕ್ರಾಂತಿಕಾಳಿ ಕಠಾರಿಯಂ ನನ್ನೆದೆಗೆ ಕುರಿತು
ಝಳಪಿಸುತೆ, ಬುದ್ಧಭ್ರುಕುಟಿ ಕೋಪದಲಿ ನಿಂತು,
ದಂಷ್ಟ್ರ ಘಷರ್ಣ ರವಂ ಪೊಣ್ಮೆಗಜರಿದಲಿಂತು:
ದ್ರೋಹಿ ಕವಿಯೆ, ನಿನಗಿತ್ತಾಣತಿಯ ಮರೆತು
ಕ್ಲೀಬತನದಲಿ ಹೆಣ್ಣು ಸೋಬಾನೆಗಳ ಹಾಡಿ
ಪಾಳ್ಗೆಯ್ದೆ
ಕಜ್ಜಮಂ! ಶುಕ, ಪಿ, ವಸಂತ, ಲತೆ
ಮುಂಗುರುಳು, ತಂಗಾಳಿ, ದೊರೆಗಿರೆಗಳಜ್ಜಿ ಕತೆ,
ಬೆಳ್ದಿಂಗಳೆಂಬುವಂ ನೂಕಾಚೆಮ ಹೆಂಬೇಡಿ!
ಬಡತನಂ, ಗೊಬ್ಬರಂ, ಕತ್ತಿ, ಗುದ್ದಲಿ, ಹಾರೆ,
ಬೆವರು ನೆತ್ತರ್ಗಗಳಂ ಗಾನಗೈಪುದು ನಿನ್ನ
ಕರ್ತವ್ಯವಿಂದು. ಹಾ! ಹೊಟ್ಟೆಗಿಲ್ಲದೆ ಅನ್ನ
ಬಡ ಜನರು ಸಾಯುತಿರೆ, ರಸ ಗಂಧವನು ತೋರೆ
ತಣಿವಹುದೆ? ಕ್ರಾಂತಿಕಾಳಿಯು ನಾನು, ಕೈ ಬೀಸಿ
ಕರೆಯೆ, ಬಾ, ಪೂಜೆಗೈ ಹೃದಯ ರಕ್ತವ ಸೂಸಿ!

ಇದು ಕವಿಹೃದಯದ ದನಿಯೂ ಹೌದು, ಸ್ವಾಮಿ ವಿವೇಕಾನಂದರು ಅಂದಿಗೆ ಅರ್ಧ ಶತಮಾನದ ಹಿಂದೆ ಮಾಡಿದ್ದ ಸಿಂಹನಾದದ ಮಾರ್ದನಿಯೂ ಹೌದು :

I call him a traitor who, having been educated, nursed in lusury by the heart’s blood of the downtrodden millions of toiling poor, never even takes a thought for them. Where, in what period of history your rich men, noble men, your priests and potentates took any thought for the poor, the gringing of whose faces is the very life blood of their power?[1]

“ನಿರಂತರವಾಗಿ ಶ್ರಮಿಸುತ್ತಿರುವ, ದಮನಕ್ಕೆ ಒಳಗಾಗಿರುವ ಲಕ್ಷಾಂತರ ಜನರ ಹೃದಯದ ರಕ್ತದಿಂದ ಪೋಷಿತರಾಗಿ, ಭೋಗಜೀವನ ನಡೆಸುತ್ತಿರುವ, ಆದರೆ ಅವರಿಗಾಗಿ ಸ್ವಲ್ಪ ಮಾತ್ರವೂ ಚಿಂತಿಸದಿರುವ ಪ್ರತಿಯೊಬ್ಬನನ್ನೂ ನಾನು ದ್ರೋಹಿ ಎಂದು ಕರೆಯುತ್ತೇನೆ. ಎಲ್ಲಿ ನಿಮ್ಮ ಇತಿಹಾಸದಲ್ಲಿ ಯಾವಾಗ ನಿಮ್ಮ ಶ್ರೀಮಂತರು, ನಿಮ್ಮ ಪುರೋಹಿತಶಾಹಿ, ನಿಮ್ಮ ಯಾವ ಬಲಿಷ್ಠ ರಾಜರು, ಯಾವ ಅರೆಯುವ ಮುಖಗಳೇ ಅವರ ಶಕ್ತಿಯ ಜೀವಧಾತುವಾಗಿತ್ತೋ ಅಂತಹ ಬಡಜನರ ಬಗ್ಗೆ ಒಮ್ಮೆಯಾದರೂ ಯೋಚಿಸಿದ್ದುಂಟೇ, ಹೇಳಿ?”

ಕುವೆಂಪು ಬರಿಯ ಪ್ರಕೃತಿ ವರ್ಣನೆಯ ಮಾನವ ಮತ್ತು ಪ್ರಕೃತಿ ಸೌಂದರ್ಯದ ಆರಾಧನೆಯ, ಸಿಂಹಾಸನ, ಕಿರೀಟ, ಅಡ್ಡಪಲ್ಲಕ್ಕಿಗಳ ವೈಭವದ – ಮೆಚ್ಚುಗೆಯ ಕವಿಯಾಗಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಅವರು ವರ್ತಮಾನ ಭಾರತಕ್ಕೆ ಪ್ರಸ್ತುತರಾದದ್ದು, ಭವಿಷ್ಯ ಭಾರತದ ನಿರ್ಮಾಣಕ್ಕೆ ತೋರುಗಂಬವಾದದ್ದು, ಅವರ ಸಮಸ್ತ ಸಾಹಿತ್ಯವೂ ಭರತಖಂಡದ ಜನಸಾಮಾನ್ಯರ ಸಮಗ್ರ, ಅಮೂಲಾಗ್ರ ಪರಿವರ್ತನೆಯನ್ನು ಗುರಿಯಾಗಿ ಹೊಂದಿದ್ದುದರಿಂದ.

ಭರತ ಖಂಡದ ಸಾವಿರಾರು ವರ್ಷಗಳ ಇತಿಹಾಸದಲ್ಲಿ, ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವರ್ಣ ಮತ್ತು ವರ್ಗ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆಯಲು ಪ್ರಯತ್ನ ನಡೆದಿದ್ದು ಒಮ್ಮೆ ಕ್ರಿ. ಪೂ. ಐದನೆಯ ಶತಮಾನದಲ್ಲಿ ಬುದ್ಧನಿಂದ, ಮತ್ತೊಮ್ಮೆ ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ಶಿವಶರಣರ ನಾಯಕರಾಗಿದ್ದ ಬಸವಣ್ಣನವರಿಂದ ಆದರೆ ಅವರಿಬ್ಬರ ಮಹಾನ್‌ಪ್ರಯತ್ನಗಳು ಸೋಲಿನಲ್ಲಿ ಪರ್ಯವಸಾನವಾದುವು. ಬೌದ್ಧಧರ್ಮ ಭಾರತದ ಮಟ್ಟಿಗಾದರೂ – ಬುದ್ಧನ ಅನಂತರದವರು ಸೃಷ್ಟಿಸಿದ ಕಲ್ಪಗಳ, ಆಚರಣೆಗಳ (rituals)ಉಸುಕಿನಲ್ಲಿ ಸಿಕ್ಕಿಕೊಂಡು ಭಾರತದ ಜನಸಾಮಾನ್ಯರಿಗೆ ಅರ್ಥವಾಗದೇ ಹೋಯಿತು. ವೀರಶೈವ ಧರ್ಮವಾದರೋ, ಜಗತ್ತಿನ ಅತಿದೊಡ್ಡ ಸಾಮಾಜಿಕ ಕ್ರಾಂತಿ ಎಂದು ಘೋಷಿಸುವಾಗಬಹುದಾದದ್ದು ಇಷ್ಟಲಿಂಗಧಾರಣೆ, ವಿಭೂತಿಧಾರಣೆ, ಷಟ್‌ಸ್ಥಳಗಳು ಮುಂತಾದ ಇತಿಮಿತಿಗಳಿಂದ ಜಾತಿಯಾಗಿ ಹರಳುಗೊಂಡು, ಆ ಇತಿಮಿತಿಗಳನ್ನು ಒಪ್ಪಿಕೊಳ್ಳದವರಿಗೆ ದುರ್ಗಮವಾದ ಕೋಟೆಯಾಯಿತು. ಈ ಎರಡು ಧರ್ಮಗಳು ಅಸ್ಪೃಶ್ಯತೆಯನ್ನು ತೊಡೆದೇ ಹಾಕುವ ಮಹಾ ಸಾಮರ್ಥ್ಯವನ್ನು ಗರ್ಭೀಕರಿಸಿಕೊಂಡಿದ್ದುವು. ಒಂದು ನಾನಾ ಕಾರಣಗಳಿಂದ ತಾನು ಹುಟ್ಟಿದ ನೆಲದಲ್ಲೇ ಶುಷ್ಕ ಆಚಾರ ವಿಚಾರಗಳ ಮರುಭೂಮಿಯಲ್ಲಿ ಇಂಗಿ ಹೋಗಿ, ಬೇರೆ ನೆಲಗಳಲ್ಲಿ ಉಕ್ಕಿ ಹರಿಯಿತು. ಮತ್ತೊಂದು ತಾನು ಹುಟ್ಟಿದ ನೆಲದಲ್ಲೇ, ತನ್ನ ಮಹಿಮೆಯನ್ನು ತಾನೇ ಅರಿಯದ ವಿಸ್ತೃತ ಸ್ಥಿತಿಯ ಮಂಪರಿನಲ್ಲಿ ಉಳಿಯಿತು.

ಆದರೆ ಕುವೆಂಪು ಪದ್ಯ, ಗದ್ಯ, ನಾಟಕ ಮುಂತಾದ ತಮ್ಮ ಸೃಜನಶೀಲ ಶಕ್ತಿಯಿಂದ ಹರಿತಗೊಂಡ ವೈಚಾರಿಕತೆಯ ಖಡ್ಗದಿಂದ ಶತಶತಮಾನಗಳಿಂದ ಭಾರತದ ಸಂಸ್ಕೃತಿಗೆ ಕುಠಾರಪ್ರಾಯವಾಗಿರುವ, ಪುರೋಹಿತಶಾಹಿಯಿಂದ ಪೋಷಿತವಾಗಿರುವ ಬಂದಳಿಕೆಗಳನ್ನು ಕತ್ತರಿಸಿ ಎಸೆಯುವ ಧೀರ ಸಾಹಸಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು. ನನಗೆ ತಿಳಿದಂತೆ, ಕುವೆಂಪು ಎಸೆಯುವ ಧೀರ ಸಾಹಸಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡರು. ನನಗೆ ತಿಳಿದಂತೆ, ಕುವೆಂಪು ಅವರಲ್ಲದೆ ಕನ್ನಡದ ಬೇರಾವ ಸಾಹಿತಿಯೂ-ನವೋದಯದವರಾಗಲಿ, ನವ್ಯರಾಗಲಿ, ಭಾರತದ ವರ್ಗ ಮತ್ತು ವರ್ಣ ವ್ಯವಸ್ಥೆಯಲ್ಲಿ ಸ್ಥಿತಿಶೀಲತೆಯನ್ನು – static- ಒಪ್ಪಿಕೊಂಡರೇ ಹೊರತು ಗತಿಶೀಲತೆಯನ್ನು total revolution-ಬಯಸಲಿಲ್ಲ. ಕುವೆಂಪು ಧೈರ್ಯದಿಂದ ತಮ್ಮ ಸೃಜನಶೀಲತೆಯ ಗಣನೀಯವಾದ ಭಾಗವನ್ನು ಸಮಗ್ರಕ್ರಾಂತಿಗೆ, ಸರ್ವೋದಯ ಸಂಸ್ಕೃತಿ ದರ್ಶನಕ್ಕೆ ಮೀಸಲಾಗಿರಿಸಿದರು.

ಈ ಸಂದರ್ಭದಲ್ಲಿ ಅವರ “ಕಲ್ಲಿ” ಎಂಬ ಶಕ್ತಿಪೂರ್ಣವಾದ ಕವನವನ್ನು ಉದ್ಧರಿಸುವುದು ಅಗತ್ಯವಾಗಿದೆ.

ನಿದ್ದೆಯ ಲೋಕದಿ ಕನಸಿನ ಬೀದಿ.
ತಿರುಗಿದೆ, ತೊಳಲಿದೆ, ತಪ್ಪಿತು ಹಾದಿ.
…………..
ನುಗ್ಗಿದೆ ನಾನಾ ಹಳುವಿನಲಿ;
ಕನಸಿನ ಹೆಗ್ಗಾಡಿನಲಿ.
ಅಲ್ಲಿದ್ದುದು ಬೆಳಕೆಂಬುವುದಲ್ಲ.
ಕತ್ತಲು ಅಲ್ಲ;
ಬೆಳಕೋ ಕತ್ತಲೋ ಶಿವನೇ ಬಲ್ಲ
ಶಿವನೇ ಬಲ್ಲ:
………………

ಇಂಥ ಮಂಪರದ ಆವರಣದಲ್ಲಿ ಕವಿ ನಡೆಯುತ್ತಾರೆ. ಮುಂದೊಂದು ಬೆಟ್ಟ ಅದನ್ನು ಹತ್ತಿ ಹತ್ತಿ ಬೆಟ್ಟದ ನೆತ್ತಿಯ ಮೇಲೆ ನಿಲ್ಲುತ್ತಾರೆ. ಅಲ್ಲಿಂದ ನೋಡಿದರೆ ಯಾವುದೋ ಊರು-ಬರಿ ಮಾಯದ ಊರು! ಅಲ್ಲಿ:

ಧನಿಕರ ಮನೆಗಳು ಒಂದೆಡೆ ನಿಂತಿವೆ.
ಬಡವರ ಗುಡಿಸಲು ಒಂದೆಡೆ ನಿಂತಿವೆ.

ಜ್ಯೋತಿಯ ಮಣಿದೀಪಗಳಲ್ಲಿ.
ಕತ್ತಲು ಕಗ್ಗತ್ತಲು ಇಲ್ಲಿ!
ಹಾಡಿನ ನುಣ್ದನಿಯತ್ತ
ಗೋಳಿನ ನೀಳದನಿಯಿತ್ತ

ಕೂಳನು ಹೆಮ್ಮೆಗೆ ಬಿಸುಡುವರಲ್ಲಿ
ಹೊಟ್ಟೆಗೆ ಇಲ್ಲದೆ ಕೊರಗುವರಿಲ್ಲಿ!
ಕಡೆ ಉದ್ಯಾನ
ಕಡೆ ಸ್ಮಶಾನ!
ಪಿತಾಂಬರಗಳ ಹೊದೆಯುವರಲ್ಲಿ,
ಕೌಪೀನಕೆ ಚಿಂದಿಯು ಸಿಗದಿಲ್ಲಿ!
ನೋಡುತ ನೋಡುತ ನೋಡುತ್ತಿದ್ದೆ ;
ನೋಡುತ್ತಿರೆಯಿರೆ ಬೆಚ್ಚಿ ಬಿದ್ದೆ;

ಬಡವರ ಬಡಬಾಗ್ನಿಯು ಎದ್ದು
ಗುಡಿಸಲುಗಳಿಗೇ ಬೆಂಕಿಯು ಬಿದ್ದು
ಧಗಧಗಧಗಧಗ ಹೊತ್ತಿದ್ದು
ಭುಗಿ ಭುಗಿಲೆನ್ನುತ ಮುತ್ತಿದುದು!

ಮುಗಿಲಿನವರೆಗೂ ಬಾನಿನವರೆಗೂ
ದಿಕ್ಕು ದಿಕ್ಕುಗಳ ಜುಟ್ಟಿನವರೆಗೂ
ಬಡವರ ಬೆಂಕಿಯು ನಾಲಿಗೆ ಚಾಚಿ
ಶ್ರೀಮಂತರನ್ನಪ್ಪಿತು ಬಾಚಿ!

ಬಡವರ ಸಿಟ್ಟದು ಏನು ಪಿಶಾಚಿ!
ಬಡಬಾಗ್ನಿಯ ತಲೆತಗ್ಗಿತು ನಾಚಿ!
ಶ್ರೀಮಂತರ ಸೌಧಂಗಳ ನೆತ್ತಿ
ಸೀದುದು ಬಡ ಹೊಟ್ಟೆಯ ಉರಿ ಹೊತ್ತಿ.

ಮುಂದಿನ ವರ್ಣನೆ ರುದ್ರಭಯಂಕರನಾಗಿದೆ. ಕುವೆಂಪು ಅವರ ನಂಬಿಕೆ ಈ ಬಡಬಾಗ್ನಿಯು ಶ್ರೀಮಂತಿಕೆ, ಭೋಗ ಮುಂತಾದವನ್ನೆಲ್ಲ ಸುಟ್ಟು ಹಾಕುತ್ತದೆ ಎಂದು. ಈ ಸಂದರ್ಭದಲ್ಲಿ ಪಾಪದ ದೇಹ, ಪುಣ್ಯದ ದೇಹ, ಗುಡಿ ಗೋಪುರಗಳು ಎಲ್ಲ ರಕ್ತದ ಹೊಳೆಯಲ್ಲಿ ಕೊಚ್ಚಿ ಹೋಗುತ್ತವೆ. ಕಲ್ಲಿ ಅಸ್ಥಿಪಂಜರದ ಕುದುರೆಯನ್ನೇರಿ ಅಸ್ಥಿಪಂಜರ ರೂಪಿಯಾಗಿ ಬರುತ್ತಾನೆ, “ಹಸಿವು, ದಾಹ, ರಕ್ತ, ರಕ್ತಾ” ಎನ್ನುತ್ತಾ ಬಂದು ನೆತ್ತರ ಹೊಳೆಯಲ್ಲಿ ಧುಮುಕುತ್ತಾನೆ. ರಕ್ತವನ್ನು ಮೊಗೆಮೊಗೆದು ಕುಡಿಯುತ್ತಾನೆ. ಕವಿಯೆಡೆಗೆ ಕಲ್ಕಿ ಧಾವಿಸಿ ಬರುತ್ತಿರುವಾಗ

ಕಲ್ಕೀ! ಕಲ್ಕೀ! ಎನ್ನುತ ಚೀರಿ
ಕನಸೊಡೆದೆದ್ದೆ
ಇನ್ನೆಲ್ಲಿಯ ನಿದ್ದೆ!

ಇನ್ನೆಲ್ಲಿಯ ನಿದ್ದೆ ಎನ್ನುವುದು-ಷೇಕ್ಸ್‌ಪಿಯರನ ಮ್ಯಾಕ್‌ಬೆತ್‌ನಾಟಕದಲ್ಲಿ “Macbeth has murdered sleep”-ಎಂಬ ವಾಕ್ಯದಂತೆ ಅಸೀಮವಾದ ಧ್ವನಿ ಪ್ರಪಂಚವನ್ನು ಸೃಷ್ಟಿಸಿದೆ. ಈ ವರ್ಗದ ಅಂತಸ್ತುಗಳು. ಜಾತಿಯ ಮೇಲು ಕೀಳುಗಳು ಸೃಷ್ಟಿಸಿರುವ ಅಸಮಾನತೆಯನ್ನು ನೆನೆಸಿಕೊಂಡರೆ, ಸೂಕ್ಷ್ಮ ಸ್ವಭಾವದ ಯಾರಿಗೇ ಆದರೂ ನಿದ್ದೆ ಶಾಶ್ವತವಾಗಿ ದೂರ ದೂರ ಸರಿದಂತೆಯೇ ತಾನೆ?

ಬಡತನ, ಅಜ್ಞಾನ ಮುಂತಾದವುಗಳಿಗೆ ಪ್ರತಿಕ್ರಿಯಿಸಿರುವಂತೆ ಕುವೆಂಪು ದೇಶವನ್ನು ಕಂಗಾಲು ಮಾಡುತ್ತಿರುವ ಜನಸಂಖ್ಯಾ ಸ್ಫೋಟದ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ‘ಪ್ರೇತಕ್ಕೂ’ ಎಂಬ ಕವನವನ್ನು ರಚಿಸಿದ್ದಾರೆ. ಜನಸಂಖ್ಯೆ ಅತಿಯಾಯಿತು. ಇನ್ನೂ ಮಕ್ಕಳು ಹುಟ್ಟುತ್ತಲೇ ಹೋದರೆ ಈ ದೇಶದಲ್ಲಿ ಅವರಿಗೆ ತಿನ್ನುವುದಕ್ಕೆ ಅನ್ನವಿರುವುದಿಲ್ಲ, ನಿಲ್ಲುವುದಕ್ಕೆ ಜಾಗವಿರುವುದಿಲ್ಲ ಎಂಬುದೆಲ್ಲ ಜನಸಂಖ್ಯಾ ತಜ್ಞರ, ಅರ್ಥಶಾಸ್ತ್ರಜ್ಞರ ವಾದಗಳು. ಈ ವಾದಗಳನ್ನೆಲ್ಲಾ ಗ್ರಹಿಸಿ, ಅನನ್ಯವಾದ ರೀತಿಯಲ್ಲಿ ಇದಕ್ಕಿಂತ ಸುಂದರವಾಗಿ, ಪರಿಣಾಮಕಾರಿಯಾದ ರೀತಿಯಲ್ಲಿ ಮಂಡಿಸಲು ಸಾಧ್ಯವಿಲ್ಲ ಎನ್ನುವಂತೆ, ‘ಪ್ರೇತಕ್ಕೂ’ ಕವನದಲ್ಲಿ ಕಾವ್ಯಮಯವಾಗಿ ಕೊರಗಿ ಜನರ ಅಜ್ಞಾನಕ್ಕಾಗಿ ಮರುಗಿದ್ದಾರೆ. ಅವರಿಗೆ ಹೇಳಿ ಉಪಯೋಗವೋನು? ಈ ಭೂಮಿಗೆ ಅತ್ಯಾತುರದಿಂದ ಮುನ್ನುಗ್ಗಿ ಬರಲು ತವಕಿಸುತ್ತಿರುವ ಜೀವಿಗಳನ್ನೇ ಉದ್ದೇಶಿಸಿ ಕೇಳುತ್ತಾರೆ :

ಯಾಕಿಂತು
ಕ್ಯೂ ನಿಂತು
ನುಗ್ಗುತ್ತಿರುವಿರಿ ಜನ್ಮಧಾರಣೆಗೆ
ನತದೃಷ್ಟ ಜೀವಿಗಳಿರಾ?
ನಿಮಗೆ ಕಾಣುವುದಿಲ್ಲ?
ಭೂಮಿ ತುಂಬೆಲ್ಲ
ಜನಸಂಖ್ಯೆ ಏರಿ ಕಿಕ್ಕಿರಿದು ಮೀರಿ,
ಕಂಕಾಲ ಪಂಕ್ತಿ, ಹೊಟ್ಟೆಗಿಲ್ಲ!
ಏನು ಅವಸರ ನಿಮಗೆ?
ಯಾವ ಗರ್ಭವೋ ಏನೋ
ಯಾರ ಯೋನಿಯೋ ಏನೋ
ಅಂತು ಹುಟ್ಟಿದರಾಯ್ತು
ಭೂಮಿಯಲ್ಲಿ!
ಉಸಿರು ಕಟ್ಟಿಹುದೇನು ನಿಮಗೆ ಅಲ್ಲಿ?

ಧರ್ಮಕ್ಕೆ ಸಂಬಂಧಿಸಿದಂತೆ ಕುವೆಂಪು ಅವರ ನಿಲುವು ಏನು ಎಂಬುದು ಪರಿಶೀಲಿಸಬೇಕಾದ ಪ್ರಶ್ನೆ. ಅವರು ನಾಸ್ತಿಕರಲ್ಲ. ಶ್ರೀ ರಾಮಕೃಷ್ಣ ಪರಮಹಂಸರು ಅವರಿಗೆ ಸಾಕ್ಷಾತ್‌ದೇವರು. ಅವರ ಶಿಷ್ಯರಾದ ಶ್ರೀ ಸ್ವಾಮಿ ಶಿವಾನಂದರು ಇವರಿಗೆ ದೀಕ್ಷಾ ಗುರು. ತಮ್ಮ ಇಂದ್ರಿಯಗಳೆಲ್ಲ ಚೆನ್ನಾಗಿ ಕೆಲಸ ಮಾಡುತ್ತಿರುವವರೆಗೂ ಅವರು ಪ್ರತಿ ದಿನವೂ ಬೆಳಿಗ್ಗೆ ಸಂಜೆ ದೇವರ ಮನೆಯಲ್ಲಿ ಕುಳಿತು, ಗಟ್ಟಿಯಾಗಿ ದೇವರ ಸ್ತೋತ್ರಗಳನ್ನು ಹೇಳಿಕೊಳ್ಳುತ್ತಾ ಜಪಧ್ಯಾನಾದಿಗಳನ್ನು ಮಾಡುತ್ತಿದ್ದರು. ಶ್ರೀರಾಮಕೃಷ್ಣಾಶ್ರಮದ ಪ್ರಾರ್ಥನಾಮಂದಿರವನ್ನು ಬಿಟ್ಟು ಅವರು ಯಾವುದೇ ದೇವಸ್ಥಾನಕ್ಕೂ ಎಂದೂ ಕಾಲಿಟ್ಟವರಲ್ಲ. ಇಂಥ ವಿಷಯಗಳಲ್ಲಿ ಅವರ ಶ್ರದ್ಧೆ ಎಂಥದು ಎಂಬುದನ್ನು ತೋರಿಸುತ್ತವೆ ಪಂಡಿತ ನೆಹರೂರುವರನ್ನು ಕುರಿತ ಅವರ ಮಾತುಗಳು. ಅವು ಅವರ ವೈವಿಧ್ಯಮಯವಾದ ಗದ್ಯಶೈಲಿಗೆ ಒಂದು ಉದಾಹರಣೆಯೂ ಹೌದು.

“(ನೆಹರೂ)” ಜನಿವಾರ ಹಾಕಿಕೊಳ್ಳಲಿಲ್ಲ. ನಾಮ ಹಚ್ಚಿಕೊಳ್ಳಲಿಲ್ಲ. ವಿಭೂತಿ ಬಳಿದುಕೊಳ್ಳಲಿಲ್ಲ. ದೇವಾಲಯಗಳಿಗೆ ಆರಾಧನೆಗಾಗಿ ಹೋಗಲಿಲ್ಲ. ತೀರ್ಥಗಳಿಗೆ ಯಾತ್ರೆ ಹೋಗಿ ಮೀಯಲಿಲ್ಲ. ಪುರೋಹಿತರ ಪಾದ ತೊಳೆದು ನೀರು ಕುಡಿಯಲಿಲ್ಲ. ಪೂಜಾರಿಗಳಿಗೆ ಅಡ್ಡಬೀಳಲಿಲ್ಲ. ಅಡ್ಡಪಲ್ಲಕ್ಕಿಯ ಜಗದ್ಗುರುಗಳಿಗೆ ಕೈ ಮುಗಿದು ಮಾಲೆ ಹಾಕಲಿಲ್ಲ. ರಾಹುಕಾಲ ಗುಳಿಕಕಾಲ ನೋಡಲಿಲ್ಲ. ನಿಮಿತ್ತ ನೋಡಿಸಲಿಲ್ಲ. ಪಂಚಾಂಗ ತೆರೆಯಲಿಲ್ಲ. ಜ್ಯೋತಿಷ್ಯ ನಂಬಲಿಲ್ಲ. ಗ್ರಹಣ ಕಾಲದಲ್ಲಿ ತಂಬಟೆ ಬಡಿದು ಸೂರ್ಯನನ್ನು ರಾಹುವಿನಿಂದ ಪಾರು ಮಾಡುವ ಭಾರತೀಯ ಡಾನ್‌ಕ್ವಿಕ್ಸೋಟು ಆಗಲಿಲ್ಲ-ಇತ್ಯಾದಿಗಳಿಗಾಗಿ ಅವರನ್ನು ನಾಸ್ತಿಕ ಎಂದರೆ-ಅವರಂತಹ ನಾಸ್ತಿಕರೊಡನೆ ನರಕವೂ ಲೇಸು ; ಮೂಢಮತಾಚಾರದ ಮತ್ತಾರೊ ಒಬ್ಬ ಮಠಾಧಿಪತಿ ಸೀನಣ್ಣ ಮುಂತಾದವರು ಇರುವ ಸ್ವರ್ಗವೂ ಹೇಸು-ಎಂದು ಹೇಳಬೇಕಾಗುತ್ತದೆ.”

ಮೇಲಿನ ಎಲ್ಲ ಮಾತುಗಳೂ ಕುವೆಂಪು ಅವರಿಗೂ ಅನ್ವಯಿಸುತ್ತವೆ. ಆದರೆ, ಅವರು ನಿಜವಾಗಿ ನಿಜದ ಅರ್ಥದಲ್ಲಿ ಆಸ್ತಿಕರು. ಎಂದರೆ, ನಮಗೆ ತಿಳಿದಿರುವ ಜಗತ್ತಿನ ಎಲ್ಲ ಶಕ್ತಿಗಳಿಗೂ ಮೀರಿದ ಶಕ್ತಿಯೊಂದಿದೆ ಎಂಬುದು ಅವರ ದೃಢವಾದ ನಂಬಿಕೆ. ಪ್ರಾರ್ಥನೆಯ ಶಕ್ತಿಯಲ್ಲಿ ಅವರಿಗೆ ಗಾಢವಾದ ವಿಶ್ವಾಸ. ದೇವರು ಯಾವ ಲೌಕಿಕ ಪ್ರಯೋಜನಗಳನ್ನಾಗಲಿ ತಮಗೆ ನೀಡುತ್ತಾನೆ ಎಂಬ ಭಾವನೆ ಅವರಿಗಿರಲಿಲ್ಲ. ಆದರೆ ಆತ್ಮಸಾಕ್ಷಾತ್ಕಾರ ಎಂಬುದರಲ್ಲಿ ಅವರಲ್ಲಿ ನಂಬಿಕೆಯುಂಟು. ಉಪನಿಷತ್ತುಗಳ ಆಳವಾದ ಪರಿಚಯ ಅವರಿಗಿತ್ತು. ಭಗವದ್ಗೀತೆಯನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರು. ಯಾವುದೇ ಒಂದು ಧರ್ಮ ಇನ್ನೊಂದು ಧರ್ಮಕ್ಕಿಂತ ಹೆಚ್ಚಾದದ್ದು ಎಂಬ ಭಾವನೆ ಅವರಿಗಿರಲಿಲ್ಲ. ಜಗತ್ತಿನಲ್ಲಿ ಎಷ್ಟು ಕೋಟಿ ಜನರಿದ್ದಾರೆಯೋ ಅಷ್ಟು ಕೋಟಿ ಧರ್ಮಗಳಿವೆ; ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸರಿತೋರಿದಂತೆ, ತನ್ನ ಸಂಸ್ಕಾರಕ್ಕೆ ತಕ್ಕಂತಹ ಧರ್ಮವನ್ನು ಅಳವಡಿಸಿಕೊಳ್ಳಲಿ ಎಂಬ ವಿವೇಕಾನಂದರ ಮಾತಿಗೆ ಇವರ ಪೂರ್ಣ ಸಹಮತಿಯುಂಟು. ತಮ್ಮ ಆರಾಧ್ಯದೈವವಾದ ಶ್ರೀ ರಾಮಕೃಷ್ಣ ಪರಮಹಂಸರ ಮಾತುಕತೆಗಳ ಸಂಗ್ರಹವಾದ “ಶ್ರೀರಾಮಕೃಷ್ಣ ವಚನವೇದ” ಎಂಬ ಗ್ರಂಥಕ್ಕೆ ಅವರು ಅತ್ಯಪೂರ್ವವಾದ ಒಂದು ಮುನ್ನುಡಿ ಬರೆದಿದ್ದಾರೆ. ಅದರ ಒಂದು ಪ್ಯಾರಾ ಓದಿದರೆ ಸಾಕು ಕುವೆಂಪು ಅವರ ಆಸ್ತಿಕ್ಯದ ಸ್ವರೂಪ ಗೊತ್ತಾಗುತ್ತದೆ!

“ಶ್ರೀರಾಮಕೃಷ್ಣ ವಚನವೇದ”ವೆಂದರೆ ಅದೊಂದು ಕರತಲ ದೇವಸ್ಥಾನ, ಕರತಲ ತಪೋರಂಗ, ಕರತಲ ಪುಣ್ಯಕ್ಷೇತ್ರ. ಆದರೆ ದೇವಸ್ಥಾನ ಪುಣ್ಯಕ್ಷೇತ್ರಗಳಂತೆ ತಾನೆಂದಿಗೂ ಕಲುಷಿತನಾಗುವ ಸಂಭವವಿಲ್ಲ, ಶಿಥಿಲವಾಗುವ ಸಂಭವವಿಲ್ಲ. ಯಾವ ಮನೆಯಲ್ಲಿ ಈ ‘ವಚನವೇದ’ ವಿರುತ್ತದೆಯೋ ಅದು ಮಂದಿರವಾಗುತ್ತದೆ. ಯಾರ ಕೈ ಇದನ್ನು ಹಿಡಿದಿರುತ್ತದೆಯೋ ಅದು ಭಗವಂತನ ಪಾದಾರವಿಂದವನ್ನೇ ಧರಿಸಿರುತ್ತದೆ. ಯಾರ ಜಿಹ್ವೆ ಇದನ್ನು ಪಠಿಸುತ್ತದೆಯೋ ಅದು ಅಮೃತವನ್ನು ಈಂಟುತ್ತಿರುತ್ತದೆ. ಇದು ಆನಂದದ ಆಗರ; ಶಾಂತಿಯ ಸಾಗರ; ದಿವ್ಯ ಜ್ಞಾನದ ಓಗರ. ಕಷ್ಟದ ಸಮಯದಲ್ಲಿ ಧೈರ್ಯವೀಯುವ ಸುಖ; ಸುಖದ ಸಮಯದಲ್ಲಿ ಸಮರ್ಪಣ ಭಾವವಿತ್ತು ವಿನಯ ಭಕ್ತಿಗಳನ್ನು ಪ್ರಚೋದಿಸುವ ಗುರು; ಕತ್ತಲಲ್ಲಿ ದೀಪ; ದಾರಿಗೆ ಊರುಗೋಲು, ದಿಕ್ಕುಗೆಡದಂತೆ ಗುರಿದೋರುವ ಧ್ರುವತಾರೆ. ಇಲ್ಲಿ ವೇದ ವೇದಾಂತ ದರ್ಶನಾಧಿ ಸರ್ವಸಾರವಿದೆ. ಓದು ಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಅವಶ್ಯಕತೆಯಿಲ್ಲ ; ಯಾವ ವಿದ್ವತ್‌ಪೂರ್ಣವಾದ ತತ್ವಜ್ಞಾನಿಗೂ ಕೀಳೆಂದೂ ನಾಚಬೇಕಾಗಿಲ್ಲ. ಅದಕ್ಕೆ ಬದಲು ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂತು ನಿರ್ಮಮನಾಗುತ್ತಾನೆ. ಶಾಂತನಾಗುತ್ತಾನೆ. ಪೂರ್ಣನಾಗುತ್ತಾನೆ. ಆತನಿಗೆ ಗಗನದ ವೈಶಾಲ್ಯ, ಹೈಮಾಚಲದ ಔನ್ನತ್ಯ, ಅಂಬುಧಿಯ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತದೆ. ಇಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ, ಇಷ್ಟು ಸರ್ವಸುಲಭ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್‌ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ.”

ದೈವ ತತ್ವವನ್ನು, ದೈವ ವಾಣಿಯನ್ನು ಈ ಮಾತುಗಳು ಪ್ರಕಾಶಗೊಳಿಸಿದ್ದರೆ, ಗುರುತತ್ವವನ್ನು ಗುರುಸತ್ವವನ್ನು ಶಿಷ್ಯನ ತತ್ವಾನುಸಂಧಾನ ಸತ್ವವನ್ನು, ಸಮರ್ಪಣಭಾವದ ಶಿಖರಸ್ವರೂಪವನ್ನು ವರ್ಣಿಸುವ ಕೃತಿ, ಅವರ ಅಮೋಘವಾದ ನಾಟಕ ‘ಬೆರಳ್‌ಗೆ-ಕೊರಳ್‌’. ಇದು ಪ್ರಕಟವಾದದ್ದು ೧೯೪೭ರಲ್ಲಿ ಬಹುಶಃ ಅವರ ನಾಟಕಗಳಲ್ಲೆಲ್ಲ ಅತಿ ಹೆಚ್ಚಿನ ಸಲ ರಂಗಭೂಮಿಯ ಮೇಲೆ ಪ್ರದರ್ಶಿತವಾದ ಹೆಗ್ಗಳಿಕೆ ಇದರದು. ಹಳಗನ್ನಡದಲ್ಲಿದ್ದರೂ ಭಾಷೆಯ ಓಟಕ್ಕೆ ಸ್ವಲ್ಪವೂ ತೊಡಕಾಗಿಲ್ಲ. ಹಾಗಾಗಿಯೇ, ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಈ ನಾಟಕ ಪಾತ್ರವಾಯಿತು. ಇದರಲ್ಲಿನ ಒಂದೇ ಒಂದು ಸಂದರ್ಭವನ್ನು ಮಾತ್ರ ಉದ್ಧರಿಸಿ ಸಮಾಧಾನ ಪಡಬೇಕಾಗಿದೆ.

ಏಕಲವ್ಯನನ್ನು ಪರೀಕ್ಷಿಸಲು ದ್ರೋಣಾಚಾರ್ಯರು ಕಣ್ಣಿಗೆ ಕಾಣಿಸುತ್ತಾ ಇರದಿದ್ದರೂ, ಧ್ವನಿಮಾತ್ರದಿಂದ ತನ್ನ ಅಸ್ತಿತ್ವವನ್ನು ಸಾರುತ್ತಿರುವ ಹಕ್ಕಿಯನ್ನು ಶಬ್ದವೇಧಿ ವಿದ್ಯೆಯಿಂದ ಕೊಲ್ಲುವಂತೆ ಶಿಷ್ಯ ಏಕಲವ್ಯನಿಗೆ ಹೇಳುತ್ತಾರೆ. ಅವರ ಆ ಅಪ್ಪಣೆಯಿಂದ ಬೆದರಿದ ಏಕಲವ್ಯ ಥಟ್ಟನೆ ಉತ್ತರಿಸುತ್ತಾನೆ :

ಅಪರಾಧಮಿಲ್ಲದಾ ಸಾಧುವಂ ಕೊಲಲ್ಕಲ್ತು
ಆಚಾರ್ಯ, ವಿದ್ಯೆಯಂ ನೀನಿತ್ತುದೆನಗೆ.
ಮುನಿಗುಂ ಮಂತ್ರಾಧಿದೇವತೆ ; ಮೇಣ್
ದಿವ್ಯ ವಿದ್ಯಾಬಲದಿ ಪಾಪಕಾರ್ಯವನೆಸಗೆ
ಧರ್ಮಂ ಋತಚ್ಯುತನೆನಗೆ ತಾನುಗ್ರಮಕ್ಕುಂ, ಮೇಣ್
ಆತ್ಮಹಾನಿಯಿಂ ಸರ್ವನಾಶಮಕ್ಕುಂ.
ತಾಮದನೆಲಮಂ ಬಲ್ಲಿರಾದೊಡಂ
ನನಗಿದು ಪರೀಕ್ಷೆಯಲ್ತೆ ಪೊಳ್ತು.!

ದ್ರೋಣರು ಆನಂದದಿಂದ ಏಕಲವ್ಯನನ್ನು ಆಲಂಗಿಸಿಕೊಳ್ಳುತ್ತಾರೆ. “ಪುಣ್ಯವಂತನ್‌ನೀನ್‌, ಏಕಲವ್ಯ! ಬರ್ದುಕಿದಯ್‌. ನೀನ್ ಬರ್ದುಕಿ ನನ್ನನುಂ ಬರ್ದುಕಿಸಿದಯ್‌” ಎಂದು ಕಳಕಳಿಯಿಂದ ಹೇಳುತ್ತಾರೆ. ಏಕಲವ್ಯನೇನಾದರೂ ಧರ್ಮವನ್ನು ಮರೆತು ನಿರಪರಾಧಿಯಾದ ಹಕ್ಕಿಯನ್ನು ಕೊಂದಿದ್ದರೆ ಅವನ ಹೆಬ್ಬೆರಳನ್ನು ಬೇಡಬೇಕಾದ ಪರಿಸ್ಥಿತಿ ಒದಗುತ್ತಿರಲಿಲ್ಲ. ತನ್ನ ನಿಯಮವನ್ನು ಮೀರಿದ ಏಕಲವ್ಯನನ್ನು ಧರ್ಮವೇ ಶಪಿಸುತ್ತಿತ್ತು! ಅಲ್ಲದೆ, ಇಲ್ಲೊಂದುನಾಟಕೀಯ ವ್ಯಂಗ್ಯವೂ ಇದೆ. ‘ಅಪರಾಧಮಿಲ್ಲದಾ ಸಾಧು’ವಾದ ಏಕಲವ್ಯನ ಬಿಲ್ಲಿಗೆ ಬಾಣವನ್ನು ಹೂಡುವ ಶಕ್ತಿಯನ್ನು ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳಿ ಪಡೆಯುವುದರ ಮೂಲಕ ಗುರು ದ್ರೋಣ ಶಿಷ್ಯನನ್ನು ನಾಶಗೈಯುತ್ತಾನೆ. ದಿವ್ಯವಿದ್ಯಾಬಲವುಳ್ಳವನಾಗಿದ್ದ ಗುರು ಹೀಗೆಸಗಿದ್ದ ‘ಪಾಪ ಕಾರ್ಯ’ವೇ ಮಂತ್ರಾಧಿದೇವತೆ ದ್ರೋಣನ ಆ ಕೃತ್ಯಕ್ಕೆ ಏಕಲವ್ಯನ ಅಬ್ಬೆಯ ಉಬ್ಬೆಗದ ರೂಪದಲ್ಲಿ ಮುನಿಯಿತೊ ಎಂಬಂತೆ ಹಿಂದುಮುಂದು ವಿವರ ಅರಿಯದ ಅವಳು ತನ್ನ ಮಗನ ‘ಬೆರಳ್‌’ಗೆ, ಆ ಬೆರಳು ತುಂಡಾಗುವುದಕ್ಕೆ ಕಾರಣನಾದವನ ‘ಕೊರಳ್‌’ ಬಲಿಯಾಗಲೆಂದು ಶಪಿಸುತ್ತಾಳೆ. ಮುಂದೆ ಮಹಾಭಾರತ ಯುದ್ಧಕಾಲದಲ್ಲಿ ಅವನ ಪ್ರಿಯಶಿಷ್ಯನಿಂದಲೇ ಅರ್ಜುನನಿಂದಲೇ-ದ್ರೋಣನ ‘ಕೊರಳ್‌’ ಕತ್ತರಿಸಲ್ಪಡುತ್ತದೆ ನ್ಯಾಯವಲ್ಲದ ಸಂದರ್ಭದಲ್ಲಿ ಗುರುದಕ್ಷಿಣೆಯ ಹೆಸರಿನಲ್ಲಿ ದಿವ್ಯೀಕೃತಗೊಳಿಸಲ್ಪಟ್ಟ ಗುರುವಿನ ಅಲ್ಪತಾಕಾಂಕ್ಷೆ ಬೇರೊಬ್ಬ ಶಿಷ್ಯನ ವೀರೋಚಿತವಲ್ಲದ ಅಲ್ಪಕಾಂಕಷೆಗೆ ಧರ್ಮ ಸಮ್ಮತವಲ್ಲದ ಪಾತಕಕ್ಕೆ ಪ್ರೇರಕವಾಯಿತು. ಈ ಧ್ವನಿ, ನಾಟಕೀಯ ವ್ಯಂಗ್ಯವನ್ನು ಕವಿ ಪ್ರತಿಭೆ ಅನನ್ಯವಾದ ರೀತಿಯಲ್ಲಿ ವ್ಯಂಜಿಸಿರುವುದನ್ನು ಗಮನಿಸಬೇಕು.

ಆಮೇಲಿನದು ಮಾತ್ರ ಏಕಲವ್ಯ ನಿರೀಕ್ಷಿಸದೇ ಹೋದದ್ದು. ಆತನ ತಾಯಿ ಮಗನನ್ನು ಹುಡುಕುತ್ತಾ ಅಲ್ಲಿಗೆ ಬರುತ್ತಾಳೆ. ಏಕಲವ್ಯ ಬೇಗೆ ಬೇಗೆ ದ್ರೋಣನನ್ನು ಬೀಡಿಗೆ ಕಳುಹಿಸುತ್ತಾನೆ. ಆದರೇನು? ತಾಯಿ ನೆತ್ತರನ್ನು ನೋಡುತ್ತಾಳೆ. ಅದರಲ್ಲಿ ಬಿದ್ದಿರುವ ಮಗನ ಹೆಬ್ಬೆರಳನ್ನು ನೋಡಿ ಮಾತೃಹೃದಯ ಬೇಯುತ್ತದೆ. ಆ ಬೆಂದ ಹೃದಯದಿಂದ ರುದ್ರವಾದ ಶಾಪ ಉಕ್ಕುತ್ತದೆ :

ಆರ್ಗೊಬಲಿ ನನ್ನ ಕಂದನ ಬೆರಳ್
ಬಲಿಯಲಿಕ್ಕೆ ಪಾಪಿಯ ಕೊರಳ್‌!

ಮುಂದೆ ದ್ರೋಣರ ತಲೆಯನ್ನು ಕಾಯಬಹುದಾಗಿದ್ದ ಏಕಲವ್ಯನ ಬೆರಳು ಹೋಯಿತು. ದ್ರೋಣರ ಕೊರಳು, ಕಾಯುವವರಿಲ್ಲದೆ ಮಹಾಭಾರತದಲ್ಲಿ ಉರುಳಿತು. ಈ ಎರಡನ್ನೂ ಕಾರ್ಯಕಾರಣ ಸಂಬಂಧವುಳ್ಳ ಒಂದು ಘಟನೆಯಾಗಿ ಹೆಣೆದಿದೆ ಮಹಾಕವಿಯ ನಾಟ್ಯ ಪ್ರತಿಭೆ.

ಇಷ್ಟೆಲ್ಲ ಆದರೂ ಕುವೆಂಪು ಹೋರಾಡುತ್ತಿರುವುದು ಯಾವ ಅವಿದ್ಯಾ ಶಕ್ತಿಯೊಂದಿಗೆ? ಜಾತೀಯತೆ, ವರ್ಣಾಶ್ರಮಗಳ ವಿಂಗಡಣೆ, ಸಾಂಪ್ರದಾಯಿಕವಾದ ಅರ್ಥರಹಿತವಾದ ಆಚರಣೆಗಳು-ಇವೆಲ್ಲವನ್ನು ಒಟ್ಟಾಗಿಸಿ “ಮೌಢ್ಯ” ಎಂದು ಕರೆದರೆ ಅದೇ ಕುವೆಂಪು ಅವರ ಪರಮ ಶತ್ರು. ಅದನ್ನು ಕಳೆದುಕೊಂಡು ವಿಚಾರಮತಿಗಳಾಗಿ, ವಿಜ್ಞಾನಮತಿಗಳಾಗಿ ಎಂದು ಕುವೆಂಪು-ಗದ್ಯ, ಪದ್ಯ, ನಾಟಕ, ಕಾದಂಬರಿ ಈ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ರಚಿಸಿ – ಪದೇ ಪದೇ ಕರೆ ನೀಡಿದ್ದಾರೆ. ಆದರೆ ನಾಮ, ಮುದ್ರೆ, ವಿಭೂತಿ, ತುಳಸೀಮಾಲೆ, ರುದ್ರಾಕ್ಷಿರಸ, ಕ್ರಾಸು, ಶಿಲುಬೆ, ಅರ್ಧಚಂದ್ರ ಇವೇ ಧರ್ಮ ಎಂಬ ಭಾವನೆಯನ್ನು ಬೇರೂರಿಸಿಕೊಂಡಿರುವ ಮಾನವ ಮತಿ ಇದರಾಚೆಗೆ ಚಲಿಸುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಇದನ್ನೆಲ್ಲ ಕಂಡು ಕೊರಗಿ ಕವಿ ಹೇಳಿದರು :

ನಮ್ಮ ದೇಶಕೆ ಏನು ಬಂದರೇನಂತೆ?
ಕೊನೆಗೆ
ಕಮ್ಯೂನಿಜಂ ಬಂದರೂ
ಹಾಕುವೆವು ಅದಕೂ ಮೂರು ನಾಮ!
ಅದರ ಹೆಗಲಿಗೂ ಬೀಳುವುದು ಜನಿವಾರ!
ಅದಕ್ಕೂ ಕಟ್ಟುವೆವು ಲಿಂಗ!
ಕ್ರಾಸು ತಗುಲಿಸಿದರೂ ಆಶ್ಚರ್ಯವಿಲ್ಲ!

ಮೂಢನಂಬಿಕೆಗಳೊಂದಿಗೆ ಕುವೆಂಪು ಅವರ ಹೋರಾಟ ನಿರಂತರದದ್ದಾಗಿದೆ ; ನಿಷ್ಠುರವಾದದ್ದಾಗಿದೆ. ಆ ಹೋರಾಟವನ್ನೂ ಅವರು ತಮ್ಮ ಕಾವ್ಯಶೈಲಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ, ಪ್ರಭಾವಶಾಲಿಯಾಗಿ ತಮ್ಮ ಕೃತಿಗಳಲ್ಲಿ ಹಿಡಿದಿದದ್ದಾರೆ.

ಕುವೆಂಪು ಅನೇಕ ಸಣ್ಣ ಕತೆಗಳನ್ನು ಬರೆದಿದ್ದಾರೆ. ಅವೆಲ್ಲವೂ ಸಾಹಿತ್ಯಕವಾಗಿ ಒಂದೇ ಸಮನಾಗಿ ಒಳ್ಳೆಯ ಗುಣಮಟ್ಟದವು ಎಂದು ಹೇಳುವಂತಿಲ್ಲ. ಆದರೆ, ಅವುಗಳಲ್ಲಿ ಧನ್ವಂತರಿಯ ಚಿಕಿತ್ಸೆ ಎಂಬುದು ಅತ್ಯಂತ ಗಮನಾರ್ಹವಾಗಿದೆ. ಅಷ್ಟೇ ಅಲ್ಲ, ಅದನ್ನು ಬೀದಿ ನಾಟಕವನ್ನಾಗಿಸಿ ಅನೇಕ ಕಡೆಗಳಲ್ಲಿ ಪ್ರದರ್ಶಿಸಲಾಗಿದೆ. ಅದಕ್ಕೆ ಕಾರಣ ಅದರ ವಸ್ತು ಕುವೆಂಪು ಅವರ ಜನಪರ ಕಾಳಜಿಯನ್ನು ಎತ್ತಿ ತೋರಿಸುವಂಥದಾಗಿರುವುದಲ್ಲದೆ ಅದರ ವಸ್ತುವಿನಲ್ಲೇ ನಾಟಕೀಯತೆಯೂ ಹೆಣೆದುಕೊಂಡಿರುವುದು.

ಅದರ ವಸ್ತು ಸಂಕ್ಷೇಪವಾಗಿ ಹೀಗಿದೆ : ಸ್ವರ್ಗದಲ್ಲಿದ್ದ ವಿಶ್ವಾಮಿತ್ರನಿಗೆ ಭೂಲೋಕದಿಂದ ಒಂದು ಹೃದಯವಿದ್ರಾವಕವಾದ ಯಾತನೆಯ ರೋದನ ಧ್ವನಿ ಹಗಲೂ ರಾತ್ರಿ ಕೇಳಿಸುತ್ತದೆ. ಎಷ್ಟು ಪ್ರಯತ್ನಿಸಿದರೂ ಆ ನರಳುವಿಕೆಯ ಮೂಲ ಯಾವುದು ಎಂದು ತಿಳಿಯುವುದಿಲ್ಲ. ವೈಕುಂಠದಲ್ಲಿ ವಸಿಷ್ಠನನ್ನು ವಿಚಾರಿಸಿದಾಗ ಅವನು ತನಗೆ ಆ ನರಳುವಿಕೆ ಕೇಳಿಸುತ್ತಿಲ್ಲವೆಂದೂ, ಅದು ವಿಶ್ವಾಮಿತ್ರನ ಮನೋಭ್ರಾಂತಿಜನ್ಯವಾಗಿರಬೇಕೆಂದೂ ಹೇಳಿ ಅದರ ಪರಿಹಾರಾರ್ಥವಾಗಿ ಒಂದು ಯಜ್ಞವನ್ನು ನೆರವೇರಿಸುವಂತೆ ಬುದ್ಧಿ ಹೇಳಿದನು. ಆದರೆ ವಿಶ್ವಾಮಿತ್ರನಿಗೆ ಹಳೆಯ ಕಂದಾಚಾರಗಳಲ್ಲಿ ನಂಬುಗೆ ತಪ್ಪಿ ಹೋಗಿತ್ತಾದ್ದರಿಂದ ವಸಿಷ್ಠನ ಗೊಡ್ಡು ಬುದ್ಧಿವಾದಕ್ಕೆ ಶರಣಾಗಲಿಲ್ಲ. ವಿಶ್ವಾಮಿತ್ರನಂತೆಯೇ ಅದು ಇನ್ನೊಬ್ಬನೇ ಒಬ್ಬನಿಗೆ ಕೇಳಿಸಿತ್ತು-ಪರಶುರಾಮನಿಗೆ. ಇಬ್ಬರೂ ವೇಷಾಂತರದಿಂದ ಭೂಲೋಕಕ್ಕೆ ಬಂದು ಆ ನರಳುವಿಕೆಯ ಮೂಲವನ್ನು ಹುಡುಕಿಕೊಂಡು ಹೋದರು. ನೆತ್ತರು ಹೆಪ್ಪುಗಟ್ಟುವಂತೆ ಹೊಮ್ಮುತ್ತಿದ್ದ ಆ ಧ್ವನಿ ಬರುತ್ತಿದ್ದುದು ಹಳ್ಳಿಯೊಂದರ ಗುಡಿಸಿಲಿನಿಂದ. ವಿಶ್ವಮಿತ್ರ ಮತ್ತು ಪರಶುರಾಮರಿಬ್ಬರಿಗೂ ಗುಡಿಸಲಿನ ತಡಿಕೆಯ ಕಿಂಡಿಯಿಂದ ನೋಡಿದರು. ಅವರು ಕಂಡದ್ದೇನು ಎಂಬುದನ್ನು ಕತೆಗಾರರ ಮಾತುಗಳೇ ವರ್ಣಿಸಬೇಕು :

“ಗುಡಿಸಿಲಿನ ಒಳಗಡೆ ಮಬ್ಬುಗತ್ತಲೆ ಕವಿದಿತ್ತು. ಸರ್ವತ್ರವೂ ಹೊಗೆ ಹಿಡಿದು ಕರಿ ಬಲೆ ನೇತು ಬಿದ್ದು ಕರ್ರಗಾಗಿತ್ತು. ಹಾರೆ, ಗುದ್ದಲಿ, ಹೆಡಗೆ, ಕುಕ್ಕೆ, ಮಡಕೆ, ನೇಗಿಲು, ಕತ್ತಿ-ಇತ್ಯಾದಿ ಬೇಸಾಯದ ಉಪಕರಣಗಳು ಅಲ್ಲಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದುವು. ನಿರ್ಜೀವವಾದ ಕಸಕಡ್ಡಿಗಳೂ ಸಜೀವವಾದ ನೊಣಗಳೂ ಸ್ವರಾಜ್ಯ ಸಂಪಾದನೆ ಮಾಡಿದಂತಿತ್ತು. ಮಧ್ಯೆ ಹಾಸಿದ್ದ ಕಂಬಳಿಯ ಮೇಲೆ ಕೊಳೆ ಸಿಡಿದ ಸೊಂಟದ ಪಂಚೆಯ ವಿನಾ ಸಂಪೂರ್ಣವಾಗಿ ನಗ್ನನಾಗಿದ್ದ ರೈತನೊಬ್ಬನು ಅಂಗಾತನ ಮಲಗಿ, ಎದೆಯನ್ನು ಎರಡು ಕೈಗಳಿಂದಲೂ ಒತ್ತಿಕೊಳ್ಳುತ್ತಾ ಘೋರವಾಗಿ ನರಳುತ್ತಿದ್ದನು. ಆ ನರಕಯಾತನೆಗೆ ಅವನ ಕರಿ ಮೊರಡು ಮೈ, ತಲೆ ಮಾತ್ರ ಬಂಡೆಯಡಿ ಸಿಕ್ಕಿದ ಹಾವಿನಂತೆ, ಒದ್ದಾಡಿಕೊಳ್ಳುತ್ತಿತ್ತು. ಋಷಿಗಳಿಬ್ಬರೂ ನೋಡುತ್ತಿದ್ದ ಹಾಗೆಯೇ ಮುದ್ದೆ ಮುದ್ದೆಯಾದ ನೆತ್ತರು ಬುಗ್ಗೆ ಬುಗ್ಗೆಯಾಗಿ ಚಿಮ್ಮಿ ಅವನ ಬಾಯಿಂದ ಕಂಪಗೆ ಹೊರಹೊಮ್ಮಿ ನೆಲವನ್ನು ತೊಯ್ಸಿತು! ಆ ರೈತನ ಪಕ್ಕದಲ್ಲಿ ಚಿಂದಿ ಚಿಂದಿಯಾದ ಕೊಳಕಲು ಸೀರೆಯನ್ನು ಮಾನ ಮುಚ್ಚಿಕೊಳ್ಳುವಷ್ಟರ ಮಟ್ಟಿಗೆ ಉಟ್ಟುಕೊಂಡು, ಬಡಕಲಾಗಿದ್ದ ಅವನ ಹೆಂಡತಿ ತಲೆಯ ಮೇಲೆ ಕೈ ಹೊತ್ತು ಕುಳಿತು ಕಣ್ಣೀರು ಸುರಿಸುತ್ತಿದ್ದಳು. ಆ ಹೆಂಗಸಿನ ಹಿಂದೆ ಕೂದಲು ಕೆದರಿ ವಿಕಾರವಾಗಿದ್ದ, ಬತ್ತಲೆಯಾಗಿ ಹೊಟ್ಟೆ ಡೊಳ್ಳಾಗಿ ಮೈ ಸಣಕಲಾಗಿದ್ದ ನಾಲ್ಕೈದು ವರ್ಷದ ಹುಡುಗಿಯೊಬ್ಬಳು ನೆಲದ ಮೇಲೆ ಒರಗಿ ಮೂರ್ಛೆ ಹೋಗಿರುವಂತೆ ನಿದ್ದೆ ಮಾಡುತ್ತಿದ್ದಳು.”

ಮನ ಕರಗಿ, ಕಣ್ಣೀರು ಹರಿಯುತ್ತಿದ್ದ ಇಬ್ಬರು ಋಷಿಗಳೂ ಬಾಗಿಲನ್ನು ಮೆಲ್ಲನೆ ದಬ್ಬಿ ಒಳ ಹೊಕ್ಕು ಆ ರೈತನು ಯಾವ ಕಾಯಿಲೆಯಿಂದ ನರಳುತ್ತಿದ್ದಾನೆಂದು ವಿಚಾರಿಸಿದರು. ಆದರೆ ಯಾತನೆಯ ವಿನಾ, ಬೇರೇನೂ ಅವರಿಗೆ ತಿಳಿದು ಬರಲಿಲ್ಲ. ವೈದ್ಯರು, ಮಂತ್ರವಾದಿ, ಭಟ್ಟರು ಎಲ್ಲರನ್ನೂ ಕರೆಸಿದರೂ ಯಾರಿಂದಲೂ ಕಾರಣ ತಿಳಿಯಲಿಲ್ಲ. ದೇವಲೋಕದಿಂದ ದೇವವೈದ್ಯನಾದ ಧನ್ವಂತರಿಯನ್ನೂ ಕರೆಸಿದರು. ಆತನು ತಂದಿದ್ದ ದಿವ್ಯ ಯಂತ್ರದ ಮೂಲಕ ನೋಡಿದಾಗ ಅವನ ಎದೆನೋವಿನ ಸ್ವರೂಪ ಗೊತ್ತಾಯಿತು :

“ರೈತನ ಎದೆಯ ಮೇಲೆ ಸಮಸ್ತ ಚಕ್ರಾಧಿಪತ್ಯವೂ ಮಹಾ ಪರ್ವತಾಕಾರವಾಗಿ ನಿಂತಿತ್ತು ಋಷಿಗಳು ನೋಡಿಕೊಂಡು ಬಂದಿದ್ದ ಆ ಮುಖ್ಯ ಪಟ್ಟಣ ಅದರ ನೆತ್ತಿಯಲ್ಲಿ ರಾರಾಜಿಸುತ್ತಿದೆ! ಅಲ್ಲಿಯ ದೇವಾಲಯಗಳೂ ವಿಶ್ವವಿದ್ಯಾನಿಲಯಗಳೂ ಕ್ರೀಡಾಮಂದಿರಗಳೂ ಪ್ರಮೋದ ವನಗಳೂ, ಕರ್ಮ ಸೌಧಗಳೂ, ಕಾರ್ಖಾನೆಗಳೂ, ರಾಜ ಪ್ರಸಾದಗಳೂ ತಮ್ಮ ಭಾರವನ್ನೆಲ್ಲಾ ರೈತನ ಎದೆಯ ಮೇಲೆ ಹಾಕಿ, ಸಂಸ್ಕೃತಿ ಮತ್ತು ನಾಗರಿಕತೆ ಎಂಬ ಕೀರ್ತಿಗಳಿಂದ ಮೆರೆಯುತ್ತಿವೆ.

“ಅಯ್ಯೋ ಅಯ್ಯೋ ಅಯ್ಯೋ! ಅವನು ಇದುವರೆಗೆ ಸಾಯದೆ ಬದುಕಿದ್ದುದೆ ಹೆಚ್ಚಳವಪ್ಪ! ಗೋವರ್ಧನ ಪರ್ವತವನ್ನು ಹೊತ್ತ ಕೃಷ್ಣನು ಕೂಡನುಚ್ಚುನೂರಾಗುತ್ತಿದ್ದನಲ್ಲಾ ಈ ರಾಜ್ಯದ ಭಾರ ಅವನ ಎದೆಯ ಮೇಲೆ ಬಿದ್ದಿದ್ದರೆ !” ಎಂದು ಪರಶುರಾಮನು ಕೂಗಿಕೊಂಡನು.

ಸರಿ, ಧನ್ವಂತರಿಯ ಚಿಕಿತ್ಸೆ ಪ್ರಾರಂಭವಾಯಿತು. ಅವನ ಸಲಹೆಯಂತೆ ವಿಶ್ವಾಮಿತ್ರನ ಹೂಂಕಾರದಿಂದ ಮಹಾ ಭಯಂಕರವಾಗಿದ್ದ ಕ್ರಾಂತಿಭೂತಗಳು ಮೈದೋರಿ ನಿಂತು ತಲೆಬಾಗಿ ಕೈ ಮುಗಿದು ಬೆಸನೇನೆಂದು ಬೇಡಿದುವು. “ಹೋಗಿ ಆ ರೈತನ ಎದೆಯ ಮೇಲಿರುವ ಭಾರವನ್ನೆಲ್ಲಾ ನೆಲಕ್ಕುರುಳಿಸಿ” ಎಂದು ಗರ್ಜಿಸಿ ಕೈಬೀಸಿದನು. ಒಡನೆಯ ರಾಜ್ಯದಲ್ಲಿ ಸಿಡಿಲು ಮಳೆ ಬಿರುಗಾಳಿ ಭೂಕಂಪಗಳು ತೋರಿ ಉತ್ಪಾತವಾಯಿತು. ನೋಡುತ್ತಿದ್ದಂತೆ ರಾಜವೇಶ್ಮ ಉರುಳಿತು; ದೇವಾಲಯದ ಗೋಪುರಗಳೂ ಮಹಾರವದಿಂದ ಕೆಳಗೆ ಬಿದ್ದುವು…

ರೈತನ ನರಳುವಿಕೆ ಕ್ರಮೇಣ ಕಡಿಮೆಯಾಗುವಂತೆ ತೋರಿತು. ಶ್ವಾಸೋಚ್ಛ್ವಾಸ ಸಹಜವಾಗತೊಡಗಿತು. ಕಣ್ಣಿನಲ್ಲಿ ಸಂತೋಷದ ಬೆಳಕೂ ಮಿಂಚಿತು… ಮತ್ತೆ… ತುಸು ಹೊತ್ತಿನಲ್ಲಿಯೇ ನೋಡುತ್ತಿದ್ದವರಿಗೆ ಆಶ್ಚರ್ಯವಾಗುವಂತೆ, ನಗುಮೊಗವಾಗಿ ಮೇಲೆದ್ದು ನಿಂತು, ಕೈಮುಗಿದನು ಋಷಿಗಳಿಗೆ.”

ಒಂದು ಪುಟ್ಟ ಕಥೆಯಲ್ಲಿ ಕುವೆಂಪು ಅತಿ ಸಾಮಾನ್ಯ ಶೋಷಿತನ ಚಿತ್ರವನ್ನೂ ಅರಮನೆ ದೇವಾಲಯಗಳು ಅವನ ಎದೆಯ ಮೇಲೆ ಯಮಭಾರವಾಗಿ ಕುಳಿತಿರುವ ರೀತಿಯನ್ನೂ-ಒಂದು ಆಡಳಿತದ ಸಂಕೇತವಾದರೆ ಮತ್ತೊಂದು ಮೌಢ್ಯದ ಸಂಕೇತ-ಎಷ್ಟೊಂದು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಎಂಬುದು ಕಲಾರಾಧಕರಾದ ವಿಚಾರವಂತರ ಮೆಚ್ಚುಗೆಯನ್ನು ಗಳಿಸುತ್ತದೆ.

ಕುವೆಂಪು ಅವರು ಎರಡು ಮಹಾ ಕಾದಂಬರಿಗಳನ್ನು ರಚಿಸಿದ್ದಾರೆ. ಮೊದಲನೆಯದು ಕಾನೂರು ಹೆಗ್ಗಡಿತಿ. ೧೯೩೩ರಲ್ಲಿ ಆರಂಭವಾಗಿ ೧೯೩೬ರಲ್ಲಿ ಮುಗಿದ ಆ ಕಾದಂಬರಿ, ಹತ್ತಿರ ಹತ್ತಿರ ಏಳು ದಶಕಗಳ ಕಾಲ ಕನ್ನಡ ಕಾದಂಬರೀಪ್ರಿಯರ ಕಥಾ ಕುತೂಹಲವನ್ನು ತಣಿಸಿ, ಮಲೆನಾಡಿನಲ್ಲಿ ಇಂದು ಹೆಚ್ಚು ಕಡಿಮೆ ಕಣ್ಮರೆಯಾಗಿರುವ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವಿವರಗಳನ್ನು ಓದುಗರ ಮುಂದೆ ಚಲನಚಿತ್ರದಲ್ಲಿ ಹೇಗೋ ಹಾಗೆ ವರ್ಣಮಯವಾಗಿ ಸುರುಳಿ ಬಿಚ್ಚುತ್ತಾ ಸಾಹಿತ್ಯ ಪ್ರೇಮಿಗಳಿಂದ ಮತ್ತೆ ಮತ್ತೆ ಓದಿಸಿಕೊಳ್ಳುತ್ತಾ ಅನೇಕ ಆವೃತ್ತಿಗಳನ್ನು ಕಂಡಿದೆ. ೧೯-೯-೧೯೩೩ ರ ಅವರ ದಿನಚರಿಯಲ್ಲಿ ಹೀಗೊಂದು ದಾಖಲೆಯಿದೆ : “ಇವೊತ್ತು ಬೆಳಿಗ್ಗೆ ನಾವಲನ್ನು ಪ್ರಾರಂಭಿಸಿದೆ. ಗುರುದೇವನ ಕೃಪೆಯಿಂದ, ಸರಸ್ವತಿಯ ದಯೆಯಿಂದ ಕಲಾಸುಂದರಿಯ ಪ್ರೇಮದಿಂದ ಆ ಕೃತಿಯು ಮಹಾಕೃತಿಯಾಗಲಿ ಎಂದು ಹಾರೈಕೆ.” ಆ ಹಾರೈಕೆ ಫಲಿಸಿತು ಎಂಬುದನ್ನು ಈಗ ಬಲ್ಲೆವು. ಆಗ?

ಅವರು ತಮ್ಮ ಮೊದಲ ಕಾದಂಬರಿ ಕಾನೂರು ಹೆಗ್ಗಡಿತಿಯನ್ನು ರಚಿಸುತ್ತಿದ್ದ ಕಾಲ. ಆಧ್ಯಾತ್ಮಿಕತೆಯೇ ಪುಟ್ಟಪ್ಪನವರ ಬದುಕಿನಲ್ಲಿ ಪ್ರಧಾನ ಶ್ರುತಿಯಾಗಿದ್ದ ವರ್ಷಗಳು. ಕಾದಂಬರಿ ಪ್ರಕಾರವೂ ಸಮರ್ಥವಾದ ಕಲಾಮಾಧ್ಯಮವಾಗಬಹುದು ಎಂಬ ಕಲ್ಪನೆಯೂ ಆಗ ಅವರಿಗೆ ಇರಲಿಲ್ಲ. ಅದು ಆರಾಧಿಸುತ್ತಿದ್ದ ಲೇಖಕರಲ್ಲಿ ರಷ್ಯದ ಮಹಾ ಸಾಹಿತಿ ಕೌಂಟ್ ಲಿಯೋ ಟಾಯ್‌ಸ್ಟಾಯ್‌ಅವರೂ ಒಬ್ಬರು. “ರಿಸರೆಕ್ಷನ್‌” ಎಂಬ ಹೆಸರಿನ ಅವರ ಪ್ರಸಿದ್ಧ ಕಾದಂಬರಿ ‘ಪುಟ್ಟಪ್ಪನವರ ಮೇಲೆ ಆಗಾಧವಾದ ಪ್ರಭಾವವನ್ನು ಬೀರಿ ಅವರನ್ನು ಕಾದಂಬರಿ ರಚನೆಗೆ ಪ್ರೋತ್ಸಾಹಿಸಿತು. ಆ ವೇಳೆಗೆ ಅವರು ಇಂಗ್ಲಿಷಿನ ನೂರಾರು ಕಾದಂಬರಿಗಳನ್ನು ಓದಿದ್ದರು. ಅವರ ಮನಸ್ಸು ಕಾದಂಬರಿ ರಚನೆಗೆ ತೊಡಗಿತು.

ಗಾತ್ರದ ದೃಷ್ಟಿಯಿಂದಲೂ ಸತ್ವದ ದೃಷ್ಟಿಯಿಂದಲೂ ‘ಕಾನೂರು ಹೆಗ್ಗಡಿತಿ’ ಒಂದು ಮಹಾ ಕಾದಂಬರಿ. ಇಷ್ಟು ದೊಡ್ಡ ಗಾತ್ರದ ಸ್ವತಂತ್ರ ಕಾದಂಬರಿ ಅಂದಿಗೆ ಕನ್ನಡದಲ್ಲಂತೂ ರಚಿತವಾಗಿರಲಿಲ್ಲ. ಈ ಕಾದಂಬರಿಯ ವೈಶಿಷ್ಟ್ಯಗಳು ಅನೇಕ. ಈ ಕೃತಿ ರಚನೆಯಾದ ಕಾಲಕ್ಕೆ ಐವತ್ತು ಅರವತ್ತು ವರ್ಷಗಳಷ್ಟು ಹಿಂದಿನ ಮಲೆನಾಡಿನ ಪರ್ವತ ಶ್ರೇಣಿಗಳು, ಈಗ ವೇಗವಾಗಿ ಮರೆಯಾಗುತ್ತಿರುವ ಕಾಡು ಇವುಗಳ ಚಿತ್ರಣ, ಬೇಟೆಯ ವರ್ಣನೆ: ಕನ್ನಡ ನಾಡಿನ ಇತರ ಭಾಗಗಳಿಗಿಂತ ತೀರ ಭಿನ್ನವಾಗಿದ್ದು ಪ್ರದೇಶವೊಂದರ ಜನಜೀವನದ ಆತ್ಮೀಯ ಪರಿಚಯ; ಆಳವಾದ ಜೀವನಾನುಭವದ ರಮ್ಯ ನಿರೂಪಣೆ; ತೀವ್ರವಾದ ರಾಗದ್ವೇಷಗಳ ವರ್ಣರಂಜಿತ ವ್ಯಾಖ್ಯಾನ; ಸಮಯೋಚಿತ ಹಾಸ್ಯ; ಆ ಪ್ರಾಂತಕ್ಕೇ ವಿಶಿಷ್ಟವಾದ ಕನ್ನಡ ಭಾಷೆಯ ಸೊಗಡು; ಕವಿಯು ಅತ್ಯಂತ ಎಚ್ಚರದಿಂದ ಕಾಯ್ದಿರಿಸಿದ ಸಾಮಾಜಿಕ ಪ್ರಜ್ಞೆ ನಿಜವಾದ ಮಣ್ಣಿನ ವಾಸನೆ- ಹೀಗೆ ಹತ್ತು ಹಲವು ವೈಶಿಷ್ಟ್ಯಗಳಿಂದ ಈ ಕಾದಂಬರಿ – ವಾಸ್ತವವಾಗಿ ಈ ಕಾದಂಬರಿಕಾರರ ಎರಡೂ ಕಾದಂಬರಿಗಳು – ಆಧುನಿಕ ಕನ್ನಡ ಕಾದಂಬರಿಗಳಲ್ಲಿ ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿವೆ.

ದಟ್ಟವಾದ, ಹಗಲಿನಲ್ಲೂ ಸೂರ್ಯರಶ್ಮಿ ತೂರುವುದಕ್ಕೂ ಅವಕಾಶ ಕೊಡದ ಕಗ್ಗತ್ತಲೆಯ ನಡುವೆ, ಹೇಗೋ ದಾರಿ ಮಾಡಿಕೊಂಡು ಬೆಳಕಿನ ಕಿರಣಗಳು ತೂರಿ ಬಂದಂತೆ ಶತಮಾನಗಳ ಅನಕ್ಷರತೆ, ಮೌಢ್ಯ, ಅವೈಚಾರಿಕತೆ, ಅವೈಜ್ಞಾನಿಕತೆಗಳನ್ನು ಭೇದಿಸಿಕೊಂಡು ಅಕ್ಷರವಿದ್ಯೆ, ವಿಚಾರ, ವೈಜ್ಞಾನಕತೆಗಳು ಪ್ರವೇಶಿಸುವ ಸಂಕ್ರಮಣ ಕ್ರಿಯೆಯನ್ನು ಕುವೆಂಪು ಕಲಾತ್ಮಕವಾಗಿ ಚಿತ್ರಿಸಿದ್ದಾರೆ ಈ ಕಾದಂಬರಿಯಲ್ಲಿ. ವೈಚಾರಿಕ ಕ್ರಾಂತಿ ಎನ್ನುವುದು ಕ್ಷಿಪ್ರವಾಗಿ ನಡೆಯುವ ದಿಢೀರ್ ಘಟನೆಯಲ್ಲ- ಕ್ರಮಕ್ರಮವಾಗಿ ಬೇರೆ ಬೇರೆ ಘಟ್ಟಗಳಲ್ಲಿ ಬೇರೆ ಬೇರೆ ರೀತಿಯಾಗಿ ಸಂಭವಿಸುವ ವಿಕಾಸ ಕ್ರಿಯೆ ಎಂಬುದನ್ನು ಕುವೆಂಪು ಅನೇಕ ಪಾತ್ರಗಳ ಮೂಲಕ ಅನೇಕ ಘಟನೆಗಳ ಮೂಲಕ ತೋರಿಸಿದ್ದಾರೆ.

ತಮ್ಮ ಬಂಧು ಬಾಂಧವರ, ಆಪ್ತೇಷ್ಟರ ಸಮಾಜವನ್ನು ಚಿತ್ರಿಸುವಾಗಲೂ ಕುವೆಂಪು ಎಷ್ಟು ನಿರ್ಲಿಪ್ತರೂ ವಸ್ತುನಿಷ್ಟರೂ ಆಗಿರಬಲ್ಲರು ಎಂಬುದನ್ನು ಒಂದು ನಿದರ್ಶನವನ್ನು ಈ ಕಾದಂಬರಿಯಿಂದ ಎತ್ತಿ ತೋರಿಸಬಹುದು. ಈ ಸಂದರ್ಭದಲ್ಲಿ ಪುಟ್ಟಪ್ಪನವರ ವರ್ಣನಾ ಕೌಶಲವೂ ಹಾಸ್ಯರಂಜಕ ಶಕ್ತಿಯೂ ಅನನ್ಯವಾದ ರೀತಿಯಲ್ಲಿ ಪ್ರಕಟವಾಗಿವೆ. ಅದ್ಯಾಯದ ಹೆಸರು “ಶೂದ್ರ ಸಂಘದ ಮಹಾಸಭೆಯಲ್ಲಿ!” ಆ ಸಭೆ ಸೇರಿದ್ದುದು ಮದ್ಯಪಾನವನ್ನು ನಿಷೇಧಿಸುವ ನಿರ್ಣಯವನ್ನು ಕೈಗೊಳ್ಳುವುದಕ್ಕೆ. ಅಧ್ಯಕ್ಷರಾದಿಯಾಗಿ ಸಕಲ ಸದಸ್ಯರ ಮೂಗು ಬಾಯಿಗಳಿಂದಲೂ ಹೆಂಡ ಕಳ್ಳು ಸಾರಾಯಿಗಳ ಕಂಪು ಹೊಮ್ಮಿ ಸಭಾಸ್ಥಳದ ವಾಯುಮಂಡಲವನ್ನೆಲ್ಲ ತೀವಿ, ಮದ್ಯಪಾನನಿರೋಧದ ಮಸೂದೆಯನ್ನು ಪರಿಹಾಸ್ಯ ಮಾಡುವಂತಿತ್ತು ! ಬಾಳೂರು ನಿಂಗೇಗೌಡರು ‘ಉಪಣ್ಯಾಸ’ ಮುಗಿಸಿ ಬಾಯಲ್ಲಿ ಜೊಲ್ಲು ಸುರಿಸುತ್ತ ಬಹಳ ಪರಿಶ್ರಮದಿಂದ ತಮ್ಮ ಪೀಠವನ್ನು ತಡವಿ ತಡವಿ ಕುಳಿತುಕೊಂಡ ಮೇಲೆ ಕಾನೂರು ಚಂದ್ರಯ್ಯಗೌಡರು ಮಾತನಾಡಲು ಎದ್ದರು…..ಚಂದ್ರಯ್ಯಗೌಡರು ಏನೇನನ್ನು ಹೇಳಬೇಕೆಂದು ಮಾಡಿದ್ದರೋ ಅದಲ್ಲ ಕೈ ಚಪ್ಪಾಳೆಯ ದೆಸೆಯಿಂದ ಮಿದುಳಿನಲ್ಲಿ ಕದಡಿಹೋಗಿತ್ತು…

“ಎಲ್ಲರಿಗೂ ಕೈ ಮುಗಿತೀನಿ…ನಾನು ಎಲ್ಡು ಮಾತಾಡಿ ಕೂತ್ಕೋಬೇಕು ಅಂತ ಎದ್ದು ನಿಂತೀನಿ…”

“ಗೌಡರಿಗೆ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ತಲೆಯಲ್ಲಿ ಹೆಂಡವು ಮದ್ಯಪಾನ ನಿರೋಧಕ್ಕೆ ವಿರೋಧವಾಗಿ ಚಳುವಳಿ ಹೂಡಿತ್ತು.”

“ಪಕ್ಕದಲ್ಲಿ ನಿಂಗಪ್ಪಗೌಡರು ಪಿಸುಮಾತಿನಲ್ಲಿ ‘ಹೆಂಡ ಕುಡಿಯುವುದು ಕೆಟ್ಟದ್ದು’ ಎಂದು ಉಪನ್ಯಾಸ ಮಾಡಲು ಸೂಚನೆ ಕೊಟ್ಟರು.

“ಆ ಕೊಟ್ಟ ಸೂಚನೆ ತಮಗೆ ಮಾಡಿದ ಉಪದೇಶವೆಂದು ಕೆರಳಿ ಚಂದ್ರಯ್ಯಗೌಡರು ಮೆಳ್ಳಗಣ್ಣು ಮಾಡಿಕೊಂಡು, ದುರು ದುರು ನೋಡುತ್ತ ನಿಂಗಪ್ಪಗೌಡರ ಕಡೆ ತಿರುಗಿ, ಗಟ್ಟಿಯಾಗಿ “ಯಾರೋ….ಯಾರೋ ಹೇಳ್ದೋರು ನಿನಗೆ” ಎಂದು ಕೂಗಿದರು.

“ನಿಮಗಲ್ಲ ಹೇಳಿದ್ದು ಅವರಿಗೆ ಹೇಳಿ ಅಂತ ಹೇಳ್ದೆ ಅಷ್ಟೇ!” ಎಂದು ಮೆಲ್ಲಗೆ ನುಡಿದು ನಿಂಗಪ್ಪಗೌಡರು ಸಮಾಧಾನ ಮಾಡಿದರು.

“ಚಂದ್ರಯ್ಯಗೌಡರು ಮತ್ತೆ ಪ್ರಾರಂಭಿಸಿದರು :

“ಹೆಂಡ ಕುಡಿಯೋದು…. ಬಾಳ ಕೆಟ್ಟದ್ದು… ಕಾಫಿ ಕುಡಿಯೋದು ಅದಕ್ಕಿಂತ ಕೆಟ್ಟದ್ದು! ಹೆಂಡ ಬಿಟ್ಟರೆ…ಮುಂದೇನು ಗತಿ?…ಅಂತಾ ಕೇಳ್ತೀನಿ ನಾನು ! ನಮ್ಮ ಅಪ್ಪಾ ಕುಡಿದಿದ್ದಾ… ನಾವು ಕುಡಿತೀವಿ… ಮಳೆಗಾಲದಾಗ ಕುಡಿದ್ರೆ. ಒಳ್ಳೆ ಕಾವು ಬತ್ತದೆ! ಸಕ್ತಿ… ಸಕ್ತಿ ಬತ್ತದೆ. ಹೆಂಡ ಕುಡಿಯೋದು ಬಹಳ ಕೆಟ್ಟದ್ದು..”

[1] Complete Workls of Swamy Vivekananda Vol VIII, 329-30