“ಭಾಷಣದ ನಡುವೆ ಚಂದ್ರಯ್ಯಗೌಡರು ಕುಸಿದು ಬಿದ್ದರು.”

ಕುವೆಂಪು ಅವರ ಎರಡನೆಯ ಕಾದಂಬರಿ ಮಲೆಗಳಲ್ಲಿ ಮದುಮಗಳು. ಇದೂ ಕೂಡ ಕನ್ನಡಕ್ಕೆ ಅವರು ನೀಡಿರುವ ಮತ್ತೊಂದು ಅಪೂರ್ವ ಕಾಣಿಕೆ. ಜನಜೀವನವನ್ನು ಅವರು ಅತ್ಯಂತ ಸೂಕ್ಷ್ಮವಾಗಿ ಗಮನಿಸಿರುವ ರೀತಿ, ಅವರ ಬದುಕನ್ನು ವ್ಯಾಖ್ಯಾನಿಸಿರುವ ವಿಧಾನ, ಅತ್ಯಂತ ಸಾಮಾನ್ಯರನ್ನು ಸಮಾಜದಲ್ಲಿ ಅತಿ ನಿಕೃಷ್ಟರು ಎಂದು ಭಾವಿಸಲ್ಪಟ್ಟಿರುವವರಿಗೂ ಅವರು ತೋರಿಸಿರುವ ಗೌರವ… ಹೀಗೆ ಇನ್ನೂ ಹಲವು ಅಂಶಗಳು ಅವರ ಈ ಕೃತಿಗೆ ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಅದ್ವಿತೀಯವಾದ ಸ್ಥಾನವನ್ನು ತಂದುಕೊಟ್ಟಿವೆ. ಓದುಗರಿಗೆ ಎಂದು ಕಾದಂಬರಿಯ ಮೊದಲಲ್ಲಿ ಅವರು ಬರೆದಿರುವ ಕೆಲವು ಪಂಕ್ತಿಗಳು ಅವರ “ದರ್ಶನ”ಕ್ಕೆ ಕೀಲಿಕೈಯಾಗಿವೆ.

ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ
ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆ ಮುಟ್ಟುವುದೂ ಇಲ್ಲ!

ಇಲ್ಲಿ
ಅವಸರವೂ ಸಾಮಾಧಾನದ ಬೆನ್ನೇರಿದೆ:

ಇಲ್ಲಿ
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲ ತೀರ್ಥ!

ಕಾಮ ಅಥವಾ ಲೈಂಗಿಕ ಆಕರ್ಷಣೆ ಈ ಕಾದಂಬರಿಯ ಪ್ರಧಾನ ವಸ್ತು ಎನ್ನಬಹುದು. ಇಲ್ಲಿ “ಕಾಮಕ್ಕೆ” ಲೇಖಕರು ಪೀತಾಂಬರವನ್ನು ಉಡಿಸಿಲ್ಲ; ಇಲ್ಲವೇ ಚಿಂದಿಯಲ್ಲೂ ಇಡಲು ಹಿಂಜರಿದಿಲ್ಲ. ಕಾಮ ಮತ್ತು ಜೀವಕಾಮಗಳು ಅವುಗಳ ಸಹಜ, ಪ್ರಾಕೃತ ಸ್ಥಿತಿಯಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತವೆ. ಇಲ್ಲಿನ ಪಾತ್ರಗಳ ಪ್ರಧಾನ ಲಕ್ಷಣವೆಂದರೆ ಅವುಗಳ ಮುಗ್ಧಸರಳ ಸ್ಥಿತಿ. ಅವು ತಾವು ಏನಾಗಿಲ್ಲವೋ ಅದರಂತೆ ತೋರಿಸಿಕೊಳ್ಳಲು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಅಲ್ಲದೆ ಇಲ್ಲಿನ ಬಹುಪಾಲು ಪಾತ್ರಗಳು ಸಮಾಜದ ಅತ್ಯಂತ ಕೆಳ ವರ್ಗಕ್ಕೆ ಸೇರಿದವು; ಬದುಕನ್ನು ಅದು ಇರುವಂತೆ ಒಪ್ಪಿಕೊಂಡವು. ಈ ಪಾತ್ರಗಳ ವೈಶಿಷ್ಟ್ಯ ಅವುಗಳ ಅಸಹಜತೆ, ಅವುಗಳ ವರ್ತನೆ, ಅವು ವಾಸಿಸುತ್ತಿರುವ ಆವರಣಕ್ಕೆ ತೀರ ಹತ್ತಿರವಾಗಿರುವುದು. ಸಹಜವಾಗಿ ಬದುಕುತ್ತಿರುವ ಐತ-ಪಿಂಚಲು, ಗುತ್ತಿ-ತಿಮ್ಮಿ, ಅಕ್ಕಣಿ-ಪಿಜಿನ ಈ ಸಾಮಾನ್ಯ ಪಾತ್ರಗಳ ಜೋಡಿಗಳು ಒಂದೆಡೆಗಾದರೆ, ಇನ್ನೊಂದು ಕಡೆಗೆ ತಮ್ಮ ವಾತಾವರಣದ ವಿರುದ್ಧ ಹೋರಾಡುವ ಮುಕುಂದಯ್ಯ ಮತ್ತು ಚಿನ್ನಮ್ಮ ಸಂಪೂರ್ಣವಾಗಿ ವೈರುಧ್ಯವನ್ನು ಒಡ್ಡಿರುವಂತೆ ಚಿತ್ರಿತರಾಗಿದ್ದಾರೆ.

***

ಕನ್ನಡಸಾಹಿತ್ಯ ವಿಮರ್ಶೆ ಒಂದು ಶಿಸ್ತು ಕ್ರಮವಾಗಿ ಬೆಳೆದದ್ದೇ ಇಪ್ಪತ್ತನೆಯ ಶತಮಾನದಲ್ಲಿ. ಸೃಜನಶೀಲ ಲೇಖಕರಾದ ಕುವೆಂಪು ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿಯೂ ಹೊಸದಾದ ಹೆದ್ದಾರಿಯನ್ನು ತೆರೆದರು. ಪೂರ್ವ-ಪಶ್ಚಿಮ ದೇಶಗಳಲ್ಲಿ ವಿಫುಲವಾಗಿ ಬೆಳೆದು ಬಂದಿದ್ದ ಕಾವ್ಯಮೀಮಾಂಸೆಯನ್ನೂ ಸಾಹಿತ್ಯ ವಿಮರ್ಶೆಯನ್ನೂ ಆಸ್ಥಯಿಂದ ಅಧ್ಯಯನ ಮಾಡಿದ್ದ ಕುವೆಂಪು ಇತರರು ಸವೆಸಿದ್ದ ಹಾದಿಯನ್ನೇ ತಾವೂ ಸವೆಸದೆ, ತಮ್ಮ ಸೃಜನಶೀಲ ಪ್ರತಿಭಾ ಸಾಮರ್ಥ್ಯದಿಂದ ಸೃಜನಶೀಲ ವಿಮರ್ಶೆ ಎಂದು ನಾವು ಕರೆಯಬಹುದಾದ ವಿಮರ್ಶಾ ಮಾರ್ಗವನ್ನು ಸೃಜಿಸಿದರು. ಹಳೆಯ ಕಾವ್ಯದಲ್ಲಿ ಅವರು ಹೊಸ ಹೊಸದನ್ನು ಕಂಡರು. ಕಾವ್ಯವನ್ನು ಕಾಣುವುದು ಅಂತರಂಗದ, ಪ್ರತಿಭೆ ಸ್ಪರ್ಶಿಸಿದ ದೃಷ್ಟಿಯಿಂದ ಎಂದು ಅವರು ತೋರಿಸಿಕೊಟ್ಟು ನಾವು ‘ದರ್ಶನ ವಿಮರ್ಶೆ’ ಎಂದು ಕರೆಯಬಹುದಾದ ವಿಮರ್ಶಾಪಂಥಕ್ಕೆ ಆದಿಪುರುಷರಾದರು.

ಕುವೆಂಪು ಅವರಲ್ಲಿನ ರಸಾನ್ವೇಷಿಯು ಹಳಗನ್ನಡ, ನಡುಗನ್ನಡ ಕಾವ್ಯಗಳ ರಸಸ್ಥಾನಗಳನ್ನು ಸಂದರ್ಶಿಸಿದ್ದು ಹೇಗೆ ಎಂಬುದಕ್ಕೆ ಅವರ ‘ಮಹಾಶ್ವೇತೆಯ ತಪಸ್ಸು’, ‘ಪಂಪನಲ್ಲಿ ಭವ್ಯತೆ’, ‘ಸರೋವರದ ಸಿರಿಗನ್ನಡಿಯಲ್ಲಿ’, ‘ದ್ರೌಪತಿಯ ಶ್ರೀಮುಡಿ’, ‘ಯಶೋಧರ ಚರಿತೆಯಲ್ಲಿ ಕಾಮವಿಕಾರ ನಿರೂಪಣೆಯ ಉದ್ದೇಶ’ ಮುಂತಾದ ಪ್ರಬಂಧಗಳನ್ನು ನೋಡಬಹುದು. ಕನ್ನಡ ಕಾವ್ಯದಲ್ಲಿ ‘ಮಹೋಪಮೆ’ಯನ್ನು ಮೊದಲಿಗೆ ಬಳಸಿದ ಕವಿ ಕುವೆಂಪು. ಮಹೋಪಮೆಯ ಸ್ವರೂಪವನ್ನು ಅವರು ಅದೇ ಹೆಸರಿನ ತಮ್ಮ ಪ್ರಬಂಧದಲ್ಲಿ ಪಾಶ್ಚಾತ್ಯ ಸಾಹಿತ್ಯದ ಮಹೋಪಮೆಗಳನ್ನು ಉದ್ಧರಿಸಿ ವ್ಯಾಖ್ಯಾನಿಸಿ ತೋರಿಸಿದ್ದಾರೆ.

ಕುವೆಂಪು ಅವರ ವೈಶಿಷ್ಟ್ಯವೆಂದರೆ ತಾವು ಬಳಸಿರುವ ‘ದರ್ಶನ’, ‘ಭವ್ಯತೆ’, ‘ಪ್ರತಿಮಾ’ ಮತ್ತು ‘ಪ್ರತಿಕೃತಿ’, ‘ಮಹೋಪಮೆ’, ‘ಪೂರ್ಣದೃಷ್ಟಿ’ ಮುಂತಾದ ಕಲ್ಪನೆಗಳಿಗೆ ತಾನೇ ವಿವರಣಾತ್ಮಕವಾದ, ನಿದರ್ಶನ ಸಹಿತವಾದ, ಪ್ರಬಂಧಗಳನ್ನು ಬರೆದು ತಮ್ಮ ಕಲ್ಪನೆಗಳನ್ನು ಸ್ಪಷ್ಟಗೊಳಿಸಿರುವುದು. ಇವುಗಳಲ್ಲಿ ‘ದರ್ಶನ’ ಎಂದರೆ ಏನು ಎಂಬುದನ್ನು ಅವರು ವಿವರಿಸಿರುವ ರೀತಿ ಇದು :

“ದರ್ಶನ” ಎಂದರೆ ನಿಯಮಬದ್ಧವಾದ ಅಥವಾ ತರ್ಕಬದ್ಧವಾದ ಆಲೋಚನೆಗಳ ಸಮುದಾಯವಲ್ಲ. ಭಾವ, ಕಲ್ಪನೆ ಮತ್ತು ಆಲೋಚನೆಗಳ ವಿದ್ಯುದಾಲಿಂಗನದಿಂದ ಸಂಭವಿಸುವ ಪ್ರತಿಭಾ ಜ್ಯೋತಿ ಅದರ ಲಕ್ಷಣ. ಅಂತಹ ದರ್ಶನ ಸಂಪಾದನೆ ಕವಿಗೆ ತಪಸ್ಸಿನಿಂದಲೂ, ಅಂತರಂಗದಲ್ಲಿ ತಪಸ್ವಿನಿ… ಭಾವ, ಕಲ್ಪನೆ, ಆಲೋಚನೆ ಎಲ್ಲದರಲ್ಲಿಯೂ ಕವಿಯು ಸಮದೂರನಾಗಿ ಬಹುದೂರ ಮುಂದುವರಿದು ಪ್ರತಿಭಾಶಾಲಿಯಾಗಿ ರಸರುಸಿಯಾಗಬೇಕು. ದರ್ಶನ ಸಂಪಾದನೆ ಮಾಡಬೇಕು.”

***

ಶ್ರೀ ಕುವೆಂಪು ಅವರು ಕನ್ನಡಕ್ಕೆ, ಜಗತ್ತಿನ ಸಾರಸ್ವತ ಲೋಕಕ್ಕೆ ಕಾಣಿಕೆಯಾಗಿ ನೀಡಿರುವ “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯ ಅವರ ಮೇರು ಕೃತಿ. ೧೯೩೬ರ ವರೆಗೆ ಹತ್ತು ವರ್ಷಗಳ ಕಾಲ ಸರಸ್ವತ ಕೈಗೊಂಡ ಅವರು ರಚಿಸಿದ ಹತ್ತಿರ ಹತ್ತಿರ ಇಪ್ಪತ್ತೈದು ಸಾವಿರ ಪಂಕ್ತಿಗಳ ಮಹಾಕಾವ್ಯ ಅದು. ಕುವೆಂಪು ಅವರನ್ನು ಶ್ರೀಕುವೆಂಪುವಾಗಿ ಮಾಡಿದ ಸ್ಪರ್ಶಮಣಿಯಂಥ ಕೃತಿ ಇದು. ಸ್ವಯಂ ಕುವೆಂಪು ಅವರಿಗೆ ಮಾತ್ರವಲ್ಲದೆ ಕನ್ನಡಕ್ಕೂ ಗೌರವವನ್ನು ತಂದುಕೊಟ್ಟ ರಚನೆ ಅದು. ಜ್ಞಾನಪೀಠ ಪ್ರಶಸ್ತಿ ಸ್ಥಾಪಿತವಾದ ಮೇಲೆ ಮೊದಲನೆಯ ವರ್ಷದ ಪ್ರಶಸ್ತಿಯನ್ನು ಈ ಮಹಾಕಾವ್ಯಕ್ಕೆ ಶ್ರೀ ಕುವೆಂಪು ಪಡೆದಿದ್ದಾರೆ.

ಇಪ್ಪತ್ತನೆಯ ಶತಮಾನದಲ್ಲಿ ಒಂದು ಮಹಾಕಾವ್ಯವನ್ನು ರಚಿಸುವ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಅವಶ್ಯಕತೆ ಇದೆ. ಒಂದೊಂದು ಯುಗಕ್ಕೂ ತಾನು ಹೇಳಬೇಕಾದ ಹೊಸ ವಿಷಯ, ಸಾರಬೇಕಾದ ಸಂದೇಶ ಇದ್ದೇ ಇರುತ್ತದೆ. ಅವನ್ನು ನಿರ್ವಹಿಸಲು ಮಹಾಕಾವ್ಯವು ಒಂದು ಸಮರ್ಥ ಮಾಧ್ಯಮವಾಗಬಹುದು ಎಂಬುದನ್ನು “ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯದ ರಚನೆಯ ಮೂಲಕ ಶ್ರೀ ಕುವೆಂಪು ಅವರು ತೋರಿಸಿದ್ದಾರೆ.

ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯವನ್ನು ರಚಿಸಿ ಮೂರೋ ನಾಲ್ಕೋ ಸಾವಿರ ವರ್ಷಗಳಾಗಿವೆ ಎಂದು ಸದ್ಯಕ್ಕೆ ಇಟ್ಟುಕೊಳ್ಳೋಣ. ಈ ಅವಧಿಯಲ್ಲಿ ಧರ್ಮ, ಸಂಸ್ಕೃತಿ, ನಾಗರಿಕತೆ ಮುಂತಾದ ಕ್ಷೇತ್ರಗಳಲ್ಲಿ ಎಷ್ಟೆಲ್ಲ ಕ್ರಾಂತಿಕಾರಕ ಬದಲಾವಣೆಗಳಾಗಿವೆ! ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಜನರ ಬದುಕನ್ನು ತ್ವರಿತಗತಿಯಲ್ಲಿ ಬದಲಾಯಿಸಿವೆ, ಈಗಂತೂ ಮಿಂಚಿನ ವೇಗದಲ್ಲಿ ಬದಲಾಯಿಸುತ್ತಿವೆ. ಬುದ್ಧ, ಯೇಸುಕ್ರಿಸ್ತ, ಬಸವಣ್ಣ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಮುಂತಾದ ದಾರ್ಶನಿಕರು; ಗ್ರೀಕ್‌, ರೋಮನ್‌, ಭಾರತೀಯ ಶಿಲ್ಪಕಲೆ, ಚಿತ್ರಕಲೆಗಳು ; ಹರಪ್ಪ ಮೆಹೆಂಜೋದಾರೊ, ಸಿಂಧು ಸಂಸ್ಕೃತಿಗಳು ; ಚಂದ್ರ ಸೂರ್ಯ ಭೂಮಿ ಇತ್ಯಾದಿ ಗ್ರಹಗಳನ್ನು ಅಳೆದು ತೂಗಿದ್ದು, ಅಣುವನ್ನು ಸಿಡಿಸಿದ್ದು ; ಹೋಮರ್‌, ಡಾಂಟೆ, ಷೇಕ್ಸ್‌ಪೀಯರ್‌, ಮಿಲ್ಟನ್‌, ಕಾಳಿದಾಸ ಮುಂತಾದ ಕವಿಗಳ ಸಾಹಿತ್ಯ ಸೃಷ್ಟಿ; ಒಂದೇ ಎರಡೇ ಈ ಜಗತ್ತು ಕಂಡ ಅದ್ಭುತಗಳ ಪರಂಪರೆ! ಜೊತೆಗೆ ನಮ್ಮ ಸಮಕಾಲೀನರಾಗಿದ್ದು ಸ್ವಾತಂತ್ರ್ಯ ಹೋರಾಟ ನಡೆಸಿ ವಿಜಯಿಗಳಾದ ಸಂತ-ರಾಜಕಾರಣಿ ಮಹಾತ್ಮಗಾಂಧಿ ತೆರೆದ ದಾರಿ, ಅಹಿಂಸಾಸ್ತ್ರವನ್ನು ಸಫಲಗೊಳಿಸಿದ ಪವಾಡ ಇವೆಲ್ಲ ಅಸಾಮಾನ್ಯ ಸಾಧನೆಗಳು. ಇವೆಲ್ಲವನ್ನೂ ಜೊತೆಗೆ ಇಂದಿನ ಜಗತ್ತಿನ ನಾಗರಿಕ ಸಂಸ್ಕೃತಿಗಳನ್ನೂ ಅನುಭವಕ್ಕಾಗಿ ಪರಿವರ್ತಿಸಿಕೊಂಡು, ಅಭಿವ್ಯಕ್ತಿ ನೀಡಲು ಮಹಾಕಾವ್ಯವೊಂದು ಸಮರ್ಥ ಮಾಧ್ಯಮವಾಗಲಾರದೆ? ಇದಕ್ಕೆ ತಕ್ಕ ಸಿದ್ಧತೆಯನ್ನು ಮಾಡಿಕೊಂಡಿದ್ದ ಕವಿ ಕುವೆಂಪು ಅವರು ಸಹಜವಾಗಿಯೇ ಮಹಾಕಾವ್ಯ ರಚನೆಯ ಸಾಹಸಕ್ಕೆ ತೊಡಗಿದರು.

ಹೌದು, ಹಳೆಯ ಕಾವ್ಯವಸ್ತುವೇ ಏಕೆ? ನಿಜವಾಗಿ ನೋಡಿದರೆ ರಾಮಾಯಣದ ವಸ್ತು ಹಳೆಯ ಕಥೆ ಅಲ್ಲವೇ ಅಲ್ಲ. ಭಾರತೀಯ ಚೇತನದ ಮೂಲ ದ್ರವ್ಯವಾಗಿದ್ದೂ ಪ್ರತಿಸಲವೂ ಹೊಸದಾಗಿ ಭಾವಗಳನ್ನು ಮಿಡಿಸುವ ಅದರ ವಸ್ತು ಎಂದೆಂದಿಗೂ ಆಕರ್ಷಣೀಯವಾದದ್ದೇ. ರಾಮ ಕಾಡಿಗೆ ಹೊರಟ ಎಂಬುದನ್ನು ಓದಿದಾಗ ಕಣ್ಣೀರು ಕರೆಯದವರು ಯಾರು? ರಾವಣ ಸೀತೆಯನ್ನು ಅಪಹರಿಸುವಾಗ ಮನಸ್ಸಿನಲ್ಲಾದರೂ ಅವಳನ್ನು ರಕ್ಷಿಸಲು ಮುನ್ನುಗ್ಗದವರು ಯಾರು? ಸೀತೆಯು ಅಗ್ನಿಪ್ರವೇಶ ಮಾಡುವಾಗ ರಾಮನು ಆಡುವ ಮಾತುಗಳನ್ನು ಕೇಳಿ ಕೇಳಿ “ಛೀ, ಅನಾಗರಿಕ, ನೀಚ” ಎಂದು ಬೈಯದವರು ಯಾರು? ರಾಮ ಲಕ್ಷ್ಮಣ ಸೀತೆಯರು ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷೇಕ ನಡೆದಾಗ ಆನಂದ ಬಾಷ್ಪಗಳನ್ನು ಸುರಿಸಿ ಸಂತೋಷ ಪಡದವರು ಯಾರು? ರಾಮಾಯಣವನ್ನು ಎಷ್ಟು ಸಲ ಓದಿದ್ದರೂ, ನಾಸ್ತಿಕನಾಗಲಿ, ಆಸ್ತಿಕನಾಗಲಿ ಈ ಅನುಭವವಗಳನ್ನು ಪಡೆಯುತ್ತಾನೆ.

ಹೀಗೆ ಜನಮಾನಸದಲ್ಲಿ ನೆಲೆಗೊಂಡಿದ್ದ ರಾಮಾಯಣದ ಕಥೆಯ ಸಂಪೂರ್ಣ ಪ್ರಯೋಜನವನ್ನು ಕುವೆಂಪು ಅವರು ತಮಗೆ ತಿಳಿಯದೆಯೇ ಪಡೆದುಕೊಂಡರು. ಅವರನ್ನು ಅಂದು ಯಾರಾದರೂ “ನೀವು ರಾಮಾಯಣದ ಕಥೆಯನ್ನು ಆರಿಸಿಕೊಳ್ಳುತ್ತಿರುವುದು ಏಕೆ?” ಎಂದು ಕೇಳಿದ್ದರೆ ಅವರಿಗೆ, ಸಮರ್ಪಕವಾದ ಉತ್ತರ ಹೊಳೆಯುತ್ತಿರಲಿಲ್ಲ. ಮುಂದೆಯೂ, ಆಯ್ಕೆ ಎಂಬುದು ನಮ್ಮ ಐದು ಇಂದ್ರಿಯಗಳನ್ನೂ ಮೀರಿದ ಆರನೆಯ ಇಂದ್ರಿಯವೊಂದರ ಕೆಲಸ. ನಿಜವಾಗಿ ವಸ್ತುವಿನ ನಿರ್ವಹಣೆಯಲ್ಲಿ ಹೇಗೋ ಹಾಗೆ ಅದರ ಆಯ್ಕೆಯ ಸಮಯದಲ್ಲೂ ಪ್ರತಿಭೆ ಕೆಲಸ ಮಾಡುತ್ತದೆ. ಹೀಗಾಗಿ ಈ ಕಾವ್ಯದ ವಸ್ತು-ವಿನ್ಯಾಸಗಳು ಶುದ್ಧ ಪ್ರತಿಭೆಯ ಆಯ್ಕೆಯಾಗಿವೆ. ಸಂಸ್ಕೃತ, ಕನ್ನಡ ಕಾವ್ಯ ಪರಂಪರೆಯಲ್ಲಿ ರಾಮಾಯಣ ಮಹಾಭಾರತಗಳು ಚಿರಂತರನ ಕಾವ್ಯ ವಸ್ತುಗಳಾಗಿ ಬಂದಿವೆ. ಜೊತೆಗೆ ಗಾಂಧಿ ಯುಗದ ಶ್ರೀರಾಮ ಕಲ್ಪನೆಯಲ್ಲಿ ಹೊಸ ಯುಗದ ಸರ್ವೋದಯ ತತ್ವ, ಅರವಿಂದರ ಪೂರ್ಣದೃಷ್ಟಿ, ರಾಮಕೃಷ್ಣ-ವಿವೇಕಾನಂದರ ಸರ್ವಸಮಾನತಾ ಆಧ್ಯಾತ್ಮದೃಷ್ಟಿ-ಇವುಗಳನ್ನು ರಾಮಕಥೆಯಲ್ಲಿ ಸ್ವೋಪಜ್ಞರೀತಿಯಲ್ಲಿ ಕಸಿಗೊಳಿಸಿ ಯುಗದ ದರ್ಶನವಾಗಿ ಅರಳಿಸುವ ಮಹಾತ್ವಾಕಾಂಕ್ಷೆ-ಇವು ಈ ವಸ್ತುವಿನ ಆಯ್ಕೆಗೆ ಕಾರಣ ಎಂದೂ ಎನ್ನಬಹುದು.

ಕುವೆಂಪು ತಮ್ಮ ಕಾವ್ಯದ ಆರಂಭದಲ್ಲಿ ಮೇಲಿನ ನಮ್ಮ ಪ್ರಶ್ನೆಗೆ ಕೊಡುವ ಉತ್ತರ ಇದು :

ಕಲೆಯನಲ್ಲದೆ ಶಿಲ್ಪಿ ಶಿಲೆಯನೇರಿ ಸೃಷ್ಟಿಪನೆ?
ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ,
ಕಥೆ ನಿನ್ನದಾದೊಡಂ, ನೀನೆ ಮೇಣಾಶೀರ್ವದಿಸಿ
ಮತಿಗೆ ಬೋಧವನಿತ್ತೊಡಂ, ಕೃತಿ ನನ್ನ ದರ್ಶನಂ
ಮೂರ್ತಿವೆತ್ತೊಂದರಮರ ಕಾವ್ಯದಾಕೃತಿಯಲ್ತೆ?
ಪಂಜರದ ಪಳಮೆಯೊಳ್ಪ್ರಾಣ ನವಪಕ್ಷಿಯಂ,
ವಿಗ್ರಹಕೆ ದೇವತಾವಾಹನಂ ಗೆಯ್ವವೋಲ್
ಭಕ್ತಿಯಿಂದಾಹ್ವಾನಿಪೆನ್‌, ಕವಿಗುರುವೆ, ನೀಡೆನಗೆ
ವಾಙ್ಮಂತ್ರಶಕ್ತಿಯಂ.

ಕುವೆಂಪು ಅವರಿಗೆ ವಾಲ್ಮೀಕಿ ಮಹರ್ಷಿಗಳಲ್ಲಿ ಅಪಾರವಾದ ಭಕ್ತಿ ಗೌರವಗಳುಂಟು. ವಾಲ್ಮೀಕಿಯ ಕಾವ್ಯವನ್ನು ಉತ್ತಮಪಡಿಸುತ್ತೇನೆ ಎಂಬ ಭಾವ ಅವರಿಗಿಲ್ಲ. ಬದಲಿಗೆ, ಹೊಸ ದೃಷ್ಟಿಯಿಂದ, ಈ ಯುಗದ ದೃಷ್ಟಿಯಿಂದ, ನಾನು ಕಂಡಂತೆ, ನನ್ನ ‘ದರ್ಶನ’ ದಾರಿತೋರಿಸಿದಂತೆ ಕಾವ್ಯವನ್ನು ರಚಿಸುತ್ತೇನೆ ಎಂಬುದು ಅವರ ಭಾವ.

ಕಥೆ : ಇಲ್ಲಿನ ಕಥೆಯೂ ವಾಲ್ಮೀಕಿ ಮಹರ್ಷಿಗಳು ಹೇಳಿದ ರೀತಿಯಲ್ಲಿಯೇ ಮುಂದುವರಿಯುತ್ತದೆ. ಅಲ್ಲಲ್ಲಿ ಕೆಲವು ಬದಲಾವಣೆಗಳೂ, ಅಗತ್ಯಕ್ಕೆ ತಕ್ಕಂತೆ ಕೆಲವು ಹೊಸ ಪಾತ್ರಗಳ ಸೃಷ್ಟಿಯೂ ನಡೆದಿದೆ. ಆದರೆ ಇವು ಯಾವುವೂ ಮೂಲ ಕಥೆಯ ಆಶಯಕ್ಕಾಗಿ ಸ್ವರೂಪಕ್ಕಾಗಲಿ ಅಪಚಾರವನ್ನು ಮಾಡುವಂಥವಲ್ಲ. ಅಂತಹ ಬದಲಾವಣೆಗಳಲ್ಲಿ ಒಂದೆರಡನ್ನು ಪರಿಶೀಲಿಸಿದರೆ ಮೇಲಿನ ಮಾತಿನ ಸತ್ಯ ಗೊತ್ತಾಗುತ್ತದೆ.

ಮೊದಲನೆಯದು ಮಂಥರೆಯ ವೃತ್ತಾಂತ. ವಾಲ್ಮೀಕಿ ರಾಮಾಯಣದಲ್ಲಿ ಮಂಥರೆಯ ಜನನ, ಬಾಲ್ಯ ಮುಂತಾದ ವಿವರಗಳು ದೊರೆಯುವುದಿಲಲ. ಹಾಗಾಗಿ ಅವಳು ಕೈಕೆ ಭರತರ ವಿನಾ ಉಳಿದವರನ್ನೆಲ್ಲ ಏಕೆ ಅಷ್ಟಾಗಿ ದ್ವೇಷಿಸುತ್ತಾಳೆ ಎಂಬುದು ಗೊತ್ತಾಗುವುದಿಲ್ಲ. ಕೇಕಯ ರಾಜನಿಗೆ ಮಂಥರೆ ಸಿಕ್ಕಿದ ಸಂದರ್ಭವನ್ನು ಕುವೆಂಪು ಸೃಷ್ಟಿಸಿದ್ದಾರೆ. ಬೇಟೆಯಾಡಲು ಕಾಡಿಗೆ ಹೋಗಿದ್ದ ಕೇಕಯ ರಾಜನಿಗೆ ಒಂದು ಮಗುವಿನ ಅಳು ಕೇಳುತ್ತದೆ ಹತ್ತಿರ ಹೋಗಿ ನೋಡಿದರೆ ಮುಳ್ಳು ಮಣ್ಣು ತರಗೆಲೆಯ ಮೇಲೆ ಇರುವೆ ಹತ್ತಿ ಮಲಗಿರುವ ಮಗು ಕಾಣುತ್ತದೆ. ರಾಜ ಆ ದಿಕ್ಕಿಲ್ಲದ ಮಗುವನ್ನು ಎತ್ತಿಕೊಂಡು ಅರಮನೆಗೆ ತರುತ್ತಾನೆ. ಕುರೂಪಿಯಾದ ಆ ಮಗುವನ್ನು ಕಂಡರೆ ಎಲ್ಲರಿಗೂ ತಿರಸ್ಕಾರ. ಎಲ್ಲರೂ ಅದನ್ನು ನಾಯಿಮರಿಗಿಂತ ಕೀಳಾಗಿ ಕಾಣುತ್ತಾರೆ. ಪ್ರೀತಿ ವಿಶ್ವಾಸಗಳನ್ನೇ ಕಾಣದೆ ಬೆಳೆದ ಅವಳಿಗೆ ರಾಜನು ಕೈಕೇಯಿಯ ಶುಶ್ರೂಷೆಯ ಕೆಲಸವನ್ನು ವಹಿಸಿದಾಗ ಮೂರು ಲೋಕವೇ ಸಿಕ್ಕಿದಂತಾಯಿತು. ರಾಜನ ಬಗೆಗೂ ರಾಜನಿಗೆ ತುಂಬ ಪ್ರಿಯಳಾಗಿದ್ದ ಕೈಕೇಯಿಯ ಮತ್ತು ಅವಳ ಮಗ ಭರತನ ಬಗೆಗೂ ಅವಳಿಗೆ ಎಲ್ಲೆ ಮೀರಿದ ಮಮಕಾರ. ಉಳಿದವರ ಬಗೆಗೆ ತನ್ನನ್ನು ಅಷ್ಟು ತಿರಸ್ಕಾರದಿಂದ ಕಂಡದ್ದಕ್ಕೆ ದ್ವೇಷ, ಅವಳು ರಾಮಾಯಣದ ಎಲ್ಲ ಘಟನೆಗಳಿಗೂ ಕಾರಣಳಾದಳು. ರಾಮನನ್ನು ಕಾಡಿಗಟ್ಟಲು ಈಕೆ ಮೂಲ ಕಾರಣ ಎಂದು ತಿಳಿದ ಭರತ ಉಗ್ರವಾಗಿ ಕೋಪಗೊಂಡಾಗ ಮಂಥರೆ ರಾಮನನ್ನು ಕರೆದು ತರುತ್ತೇನೆ ಎಂದು ಕಾಡಿಗೆ ಓಡಿ ಅಲ್ಲಿ ಬೆಂಕಿಯಲ್ಲಿ ಸಿಕ್ಕಿ ಬೆಂದುಹೋಗುತ್ತಾಳೆ. ಇದು ಮತ್ತು ಇಲ್ಲಿನ ಮುಂದಿನದೂ ಕುವೆಂಪು ಸೃಷ್ಟಿ ಈ ಕಾವ್ಯದಲ್ಲಿ ಅವಳು ಮತ್ತೊಮ್ಮೆ ಕಾಣಿಸಿಕೊಳ್ಳುತ್ತಾಳೆ, ಸೂಕ್ಷ್ಮ ತನುರೂಪದಿಂದ. ರಾಮನು ಕಾಡಿನಿಂದ ಕೊಟ್ಟ ಅವಧಿಗೆ ಸರಿಯಾಗಿ ಬಾರದೇ ಹೋದಾಗ ಭರತ ಅಗ್ನಿಪ್ರವೇಶ ಮಾಡಲು ಸಿದ್ಧನಾಗುತ್ತಾನೆ. ಆಗ ಒಂದು ಸುಂದರ ಸೂಕ್ಷ್ಮ ತೇಜದ ಸುರಾಂಗನಾ ಮೂರ್ತಿ ಜ್ವಾಲೆಯಲ್ಲಿಕಾಣಿಸಿಕೊಂಡು:

ಕಂದ. ನಿನ್ನಗ್ರಜಂ
ಇಂದೋ ನಾಳೆಯೋ ದಿಟಂ ಪಿಂದಿರುಗಿ ಬಂದಪನ್‌,

ಎಂದು ಹೇಳಿ ಅಗ್ನಿಪ್ರವೇಶದ ನಿಶ್ಚಯವನ್ನು ತಪ್ಪಿಸುತ್ತದೆ. “ನೀನಾರು?” ಎಂದು ಕೇಳಿದ ಭರತನಿಗೆ ಆಮೂರ್ತಿ : “ಮತ್ತಾರ್‌, ಸದಾ ನಿನ್ನ ಸುಕ್ಷೇಮ ಚಿಂತನೆಯೊಳಿರ್ಪರ್‌ಆ ಮಂಥರೆಯ ವಿನಾ” ಎತ್ತದೆ. ಭರತ “ಮತ್ತೆ ಅವಳ ಹೆಸರನ್ನೇ ಎತ್ತಬೇಡ, ನನ್ನ ಈ ಅವಸ್ಥೆಗೆಲ್ಲ ಆ ಗೂನಿಯೇ ಕಾರಣ” ಎನ್ನುತ್ತಾನೆ. ಆಗ ಆಕೆ ಕೊಡುವ ಉತ್ತರ : “ಮಗೂ ಅವಳು ಕಾರಣಳಲ್ಲ, ಕರಣ (ಸಾಧನ)” ಎನ್ನುವುದು ರಾಮಾಯಣ ದರ್ಶನದ ಇಡೀ ದರ್ಶನಸೂತ್ರಕ್ಕೆ ಅನುಗುಣವಾಗಿದೆ.

ಇನ್ನೊಂದು ಮುಖ್ಯವಾದ ಬದಲಾವಣೆ ಸೀತೆಯು ಅಗ್ನಿಪ್ರವೇಶ ಮಾಡುವ ಸಂದರ್ಭದ್ದು, ಸೀತೆಯ ಶೀಲವನ್ನು ಎಲ್ಲ ಮಾನವ, ದಾನವ, ವಾನರ ಸೈನ್ಯದ ಮುಂದೆ ರಾಮ ಪ್ರಶ್ನಿಸುತ್ತಾನೆ. ಆರ್ಯನಾದವನು ಆಡಬಾರದ ಮಾತುಗಳನ್ನು ಆಡುತ್ತಾನೆ. ಆಗ ಸೀತೆ ಆಡುವ ಮಾತುಗಳು ಇವು :

ರಾಕ್ಷಸಂ ಮುಟ್ಟಿದನೆ? ನಾನಲ್ತು
ದೈವಮಪರಾಧಿ. ಮೈಯ್ಯನಲ್ಲದೆ ಮನವನೇಂ
ದೈವಮಪರಾಧಿ. ಮೈಯ್ಯನಲ್ಲದೆ ಮನವನೇಂ
ಮುಟ್ಟಿದನೆ? ಮುಟ್ಟಲಾರದೆ ಸುಟ್ಟು ಸೀದನಯ್‌,
ನಿನ್ನಲಗಿನೇರ್ಗೆಂತುಟಂತೆ

ರಾಮನಿಗೆ ಇನ್ನೂ ಇಂಥ ಕೆಲವು ಮಾತುಗಳನ್ನು ಹೇಳಿ, ಲಕ್ಷ್ಮಣನತ್ತ ತಿರುಗಿ “ಚಿತೆಯಂ ರಚಿಸು ಸೌಮಿತ್ರಿ” ಎಂದು ಅಪ್ಪಣೆ ಮಾಡುತ್ತಾಳೆ. ಸೀತೆಯ ಶೀಲದ ವಿಷಯದಲ್ಲಿ ರಾಮ ಸಂದೇಹ ಪಡೆಯಬಹುದಾದರೆ ಜನರು ರಾಮನ ಶೀಲದ ವಿಷಯದಲ್ಲೂ ಸಂದೇಹ ಪಡಬಹುದಲ್ಲವೆ? ಆದ್ದರಿಂದ ರಾಮನು

ಚಲಿಸಿದನು ಚಿತೆಗೆ, ನೋಳ್ಪರಾ
ವಿಸ್ಮಯಂ ಚಿಂತೆಗೆ ತಿರುಗುವಂತೆ. ವೋ ವೋ
ಎಂಬನಿತರೊಳೆ ತಾಂ ಪ್ರವೇಶಿಸುತ್ತುಜ್ವಲಿಪ
ಗೋಪುರೋಪಮದಗ್ನಿ ಮಧ್ಯೆ ಮರೆಯಾದನ್ಯೆ
ಜಮದಗ್ನಿ ಜಾತನಂ ಜಯಿಸಿದಾತಂ

ಇದಾದ ಮೇಲೆ ಮುಂದಿನದನನು ಯಾರೂ ಊಹಿಸಬಹುದು :

ಹವ್ಯ ವಾಹನ
ಪವಿತ್ರಂ ತನುವಿಂ ಪೂರ್ಣಿನದು ದಶರಥಾತ್ಮಜಂ
ಜಾನಕೀ ಪಾಣಿಗ್ರಹಣ ಕೃಪಾಲು! ಸೀತೆಯಂ
ಪಾವನಾಗ್ನಿ ಸ್ನಾತೆಯಂ, ಕಿರ್ಚಿನುರಿಯಿಂದೆ
ಕಾಯ್ದೆ ತೆರದಿಂದೆ, ಕರೆತಂದನೊಯ್ಯನೆ ಪೊರಗೆ
ದುರಿತ ವಿರಹಿತ ಸಾನ್ತ ಹರಿತಶಾದ್ವಲ ಚಾರು ಆ

ಗಿರಿಯ ವೇದಿಕೆಗೆ. ಶ್ರೀಮದ್ದಿವ್ಯ ದೇಹದಿಂ
ದಿವ್ಯ ಮಾಲಾಂಬರಗಳಿಂ ದಿವ್ಯ ತೇಜದಿಂ
ಶೋಭಿಸುತ್ತಿರ್ದ ಸೀತಾಸಹಿತಂ ರಾಮನಂ
ಕಂಡು ಹರ್ಷೋನ್ಮಾದಕದ್ದುದು ಕಪಿಧ್ವಜಿನಿ,
ಘೇ ಘೇ ಜಯಧ್ವನಿಗೈವ ರಾಕ್ಷಸಧ್ವಜಿನಿಯಿಂ
ಕೂಡಿ, ಪಯೋನಿಧಿಯ ನಪ್ಪುವೊರ್ಪಾಥೋಧಿಯೋಲ್‌!

ಆಗ ತೀರ ಅನಿರೀಕ್ಷಿತವಾದ ಒಂದು ಘಟನೆ ನಡೆಯಿತು. ವಿಭೀಷಣನ ಮಗಳು ಅನಲೆ, ಈ ಎಲ್ಲ ಕ್ರಿಯೆಗಳಿಗೂ ಸಾಕ್ಷಿಯಾಗಿದ್ದವಳು ಓಡಿ ಬಂದು ರಾಮನ ಪಾದಗಳಿಗೆ ದಿಂಡುರುಳಿದಳು. ಮತ್ತು ಹೇಳಿದಳು :

ಮನ್ನಿಸೈ, ಸ್ವಾಮಿ;
ದೇವಿಯಂ ನಿಂದಿಸಿದ ನಿನ್ನನೆನಿತೆನಿತೊ, ನಾಂ
ಬಯ್ದೆನಯ್‌. ‘ಹದಿಬದೆಯನಗ್ನಿವುಗಿಸುವುದಿರಲಿ,
ತನ್ನಂ ಪರೀಕ್ಷಿಸುವರಾರೋ? ತಾನೇಂ ಪೊರತೊ
ದುರಿತ ದೋಷಕೆಯಎನುತೆ ಶಂಕಿಸಿದೆನಾ ನಿಂದೆ
ಭಸ್ಮವಾಯಿತು ತಂದೆ, ನೀನೊಡ್ಡಿದೀ ಚಿತೆಯ
ಲೋಕಪಾವಕ ಪವನಸಖನಿಂದೆ : ಪೂಜ್ಯೆಯಂ
ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ!
ಲೋಕ ತೃಪ್ತಿಗೆ ಲೋಕ ಮರ್ಯಾದೆಗೊಳಗಾದೆ;
ಸರ್ವಲೋಕಪ್ರಭುವ, ಲೋಕಗುರು ನೀಂ ದಿಟಂ!”

ದರ್ಶನ : ಈ ಇಡೀ ಕಾವ್ಯವನ್ನು ಒಂದು ಸೂತ್ರ ಆಳುತ್ತಿದೆ :

ನೆಯ್ದಾಳುತಿದೆ ಜಗವನೊಂದತಿ ವಿರಾಣ್ಮನಂ,
ಸೂಕ್ಷ್ಮಾತಿಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯಭಾವಮಂ
ನಿಡಿ ಮಂಥರೆ ಸೀತೆ ರಾಮ ರಾವಣರೆಲ್ಲರುಂ
ಸೂತ್ರಗೊಂಬೆಗಳಲ್ತೆ ವಿಧಿಯ ಹಸ್ತದಲಿ?

ಒಂದು ವಿರಾಟ್‌ಮನಸ್ಸು-ಎಂದರೆ ವಿಶ್ವವ್ಯಾಪಿಯೂ ಸರ್ವಶಕ್ತವೂ ಆದ ಮನಸ್ಸು-ಜಗತ್ತನ್ನು ಹಾಸುಹೊಕ್ಕಾಗಿ ನೆಯ್ದು ಆಳುತ್ತಿದೆ. ಅದು ಎಲ್ಲ ಜೀವಿಗಳನ್ನೂ ಸೂಕ್ಷ್ಮಾತಿಸೂಕ್ಷ್ಮವಾದ ತಂತ್ರದಿಂದ ಬಿಗಿದು ಕಟ್ಟಿದೆ. ಜೀವಿಗಳು ಸ್ವತಂತ್ರರಲ್ಲ, ಆದರೂ ಅವರು ಸ್ವತಂತ್ರರು ಎಂಬ ಭಾವನೆಯನ್ನು ಅವರಿಗೆ ಆ ವಿರಾಟ್‌ಮನಸ್ಸು ನೀಡಿದೆ. (ಗೂಟಕ್ಕೆ ಉದ್ಧವಾದ ಹಗ್ಗದಿಂದ ಕಟ್ಟಿದ ಪಶುವಿನಂತೆ ಅದು ಆ ಪರಿಧಿಯಲ್ಲಿ ಸುತ್ತುವಷ್ಟರ ಮಟ್ಟಿಗೆ ಸ್ವತಂತ್ರ. ಆದರಾಚೆಗೆ ಅದು ಹೋಗಲಾರದು. ಆ ಸ್ವಾತಂತ್ರ್ಯ ಅದಕ್ಕಿಲ್ಲ!)ಮಂಥರೆ ಯಾಯಿತು, ಸೀತೆ, ರಾಮ ರಾವಣ ಯಾರೇ ಆಗಲಿ ಆ ವಿಧಿಯ (ವಿರಾಟ್‌ಮನಸ್ಸಿನ) ಹಸ್ತದಲ್ಲಿ ಸೂತ್ರದ ಬೊಂಬೆಗಳು. ಅದು ಕಾಣಿಸಿದಂತೆ ಅವರು ಕುಣಿಯಲೇಬೇಕು.

ಎರಡನೆಯ ಅಂಶ ಪ್ರತಿಯೊಬ್ಬರಿಗೂ ಅವನು ರಾವಣನೇ ಆಗಿರಲಿ-ಉದ್ಧಾರವಿದ್ದೇ ಇದೆ. ಸರ್ವರಿಗೂ ಅಂತಿಮವಾಗಿ ಈ ಎಲ್ಲ ಕಷ್ಟ ಕಾಯಿಲೆಗಳಿಂದ, ಮಾಯೆಯ ಬಂಧನದಿಂದ ಬಿಡುಗಡೆ ಇದ್ದೇ ಇದೆ ಎಂಬುದು ಕವಿಯ ಕಾಣ್ಕೆಯ ಭಾಗ.

ಪಾಪಿಗುದ್ಧಾರವಿಹುದು ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್

ಎಂಥ ಜೀವಿಗೂ ತಣ್ಪುನೀಡುವಂಥ ಅಮೃತವಾಕ್ಯ ಇದು. ಇದಕ್ಕೆ ನಿದರ್ಶನವಾಗಿ ರಾವಣ ಪಾತ್ರವನ್ನು ನೋಡೋಣ.

ಇಲ್ಲಿಯ ರಾವಣನೂ ಮೂಲ ರಾಮಾಯಣದ ರಾವಣನಂತೆ ಮಹಾ ಪರಾಕ್ರಮಿ, ಕಾಮಿ. ಅನೇಕ ಸ್ತ್ರೀಯರು ಅವನ ವೈಭವಕ್ಕೆ, ಶಕ್ತಿಗೆ ಮಾರು ಹೋದಂತೆ ಸೀತೆಯೂ ತನ್ನ ವಶಳಾಗುತ್ತಾಳೆ ಎಂಬುದೇ ಅವನ ಭಾವನೆ. ಸೀತೆ ತನ್ನ ನಿರೀಕ್ಷೆಯಂತೆ ನಡೆಯದೇ ಹೋದಾಗ ಅವನಿಗೆ ನಿರಾಶೆಯಾಗುತ್ತದೆ. ಸೀತೆ ತನ್ನನ್ನು ತಿರಸ್ಕರಿಸಿದಷ್ಟೂ ಅವಳ ವಿಷಯಕ್ಕೆ ಅವನ ಮೋಹ ಹೆಚ್ಚುತ್ತಾ ಹೋಗುತ್ತದೆ. ಆದರೆ ಮಂಡೋದರಿ, ವಿಭೀಷಣ, ಆತನ ಮಗಳು ಅನಲೆ ಈ ಎಲ್ಲರ ಸಾತ್ವಿಕ ಶಕ್ತಿ, ಪ್ರಾರ್ಥನೆಗಳಿಂದ ಅವನ ಮನಸ್ಸು ಕಾಮದ ಉರಿಯಿಂದ ಬೆಳಕಿನ ಕಡೆಗೆ ತಿರುಗುತ್ತದೆ. ಸೀತೆಯನ್ನು ಅತಿಯಾಗಿ ಕಾಮಿಸಿದ ರಾವಣನೇ ಕೊನೆಗೆ ಹೇಳುತ್ತಾನೆ :

ನನಗೆ ದೇವತೆ, ಮಾತೆ. ಶ್ರದ್ಧೆಗೆಟ್ಟರ್ದೆನಗೆ
ಶ್ರದ್ಧೆಯಂ ಮರುಕೊಳಿಸುತಾತ್ಮದುದ್ಧಾರಮಂ
ತಂದ ದೇವತೆ, ಪುಣ್ಯಮಾತೆ!

ಈ ಕಾವ್ಯದ ರಾವಣ ದೊಡ್ಡಸಾಧಕ. ಸೀತೆ ತನ್ನನ್ನು ಗೆದ್ದಳು. ಆದ್ದರಿಂದ ರಾಮನನ್ನು ಗೆದ್ದು ಅವನನ್ನು ಸೀತೆಗೆ ಕಾಣಿಕೆಯಾಗಿ ಕೊಡುತ್ತೇನೆ ಎಂಬುದು ಅವನ ಪ್ರತಿಜ್ಞೆ ಆದರೆ ಅವನ ರಾವಣತ್ವ ಸವೆದು ಕಳೆಯದೆ ರಾಮತ್ವ ಸಿದ್ಧಿಸುವಂತಿಲ್ಲ. ಅದಕ್ಕಾಗಿಯೇ ಅವನು ಪಾಡುಪಟ್ಟದ್ದು, ಇತರರನ್ನು ಪಾಡುಪಡಿಸಿದ್ದು. ಅವನಿಂದಾಗಿ ಎಂತಹ ಕಷ್ಟ ದುಃಖಗಳ ಪರಂಪರೆ ಅವನಿಗೂ ರಾಮ ಸೀತೆ ಲಕ್ಷ್ಮಣರಿಗೂ ಒದಗಿತು! ಮಗ ಇಂದ್ರಜಿತು ಸತ್ತಾಗ ಸೊಸೆ ತಾರಾಕ್ಷಿ ರಾವಣನ ಕಾಲಮೇಲೆ ದಿಂಡುರುಳುತ್ತಾಳೆ. ಆಗ ಕವಿ ವರ್ಣಿಸುತ್ತಾರೆ :

ಬಾಲೆಯಂ ಮೇಲೆತ್ತವೋಗಿ, ಕುಸಿದನು ತಾನೆ ನೆಲಕೆ ನೆಗಹಲಲುಗಾಡಿಸಿದ ಬಾಹುಭೀಮಂ!

ಯುದ್ಧ ಮುಂದುವರಿಯುತ್ತದೆ. ಸೀತೆ ಆ ವೇಳೆಗೆ ಅವನಿಗೆ ತಾಯಿಯಂತೆ ತೋರುತ್ತಿದ್ದಾಳೆ. ದೇವಿ ಅಂಬಿಕೆ ರಾವಣನಿಗೆ ಕರುಣಿಸಿದ ದರ್ಶನದಲ್ಲಿ ಆತ ಕಾಣುತ್ತಾನೆ-ಮರು ಜನ್ಮದಲ್ಲಿ ತಾನೂ, ಕುಂಭಕರ್ಣನೂ ಅವಳಿ ಮಕ್ಕಳಾಗಿ ಸೀತೆಯಿಂದ ವಾತ್ಸಲ್ಯವನ್ನು ಪಡೆಯುತ್ತಾರೆ. ಸೀತೆ ಅವರನ್ನು ಎತ್ತಿ ಮುದ್ದಾಡುತ್ತಾಳೆ. ಹಾಡಿ ಮೂಲೆಯೊಡುತ್ತಾಳೆ. ತೊಡೆಯ ಮೇಲೆ ಮಲಗಿಸಿಕೊಂಡು ಎದೆಗೆ ಅಪ್ಪಿಕೊಳ್ಳುತ್ತಾನೆ.ರಾವಣನು ತನ್ನ ಹೃದಯವನ್ನು ಹೊಕ್ಕ ಅಸ್ತ್ರವನ್ನು ರಾಮನೆಂದೇ ನಂಬಿ ಭದ್ರವಾಗಿ ಹಿಡಿದುಕೊಳ್ಳುತ್ತಾನೆ.

ಸೆರೆ ಸಿಕ್ಕಿದನಲಾ ಶತ್ರು!”

ಎಂದು ಉದ್ಗರಿಸುತ್ತಾನೆ. ಅಷ್ಟೆ ಅಲ್ಲ; ಸಾರಥಿಗೆ ಅಪ್ಪಣೆ ಮಾಡುತ್ತಾನೆ : “ವೈರಿ ಸೆರೆ ಸಿಕ್ಕಿದ್ದಾನೆ. ರಥವನ್ನು ಊರಿಗೆ ಹಿಂದಿರುಗಿಸು” ಊರಿಗೆ ಹಿಂತಿರುಗಿ ಸತಿ ಮಂಡೋದರಿಗೆ ಹೇಳುತ್ತಾನೆ : “ಇದೋ ಈ ಕಪ್ಪವನ್ನು ಸೀತಾಮಾತೆಗೆ ಕಾಣಿಕೆಯಾಗಿ ಕೊಡು.”

“ಶ್ರೀ ರಾಮಾಯಣ ದರ್ಶನಂ” ಕಾವ್ಯದ ಉದ್ದಕ್ಕೂ ಎದ್ದು ಕಾಣುವ “ಕ್ರಿಯಾಶಕ್ತಿಗಳು” ಭಗವತ್‌ಕೃಪೆ ಮತ್ತು ಭಗವದಿಚ್ಛೆ. ಅವೇ ವಿಧಿಶಕ್ತಿಯೂ ಹೌದು. ಇದಕ್ಕೆ ಪೂರಕವಾಗಿ ಕೆಲವು ನಿದರ್ಶನಗಳನ್ನು ನೋಡಬಹುದು. ಜಟಾಯುವಿನ ಅಣ್ಣ ಸಂಪಾತಿ, ಒಮ್ಮೆ ಆಕಾಶದಲ್ಲಿ ಭಾರೀ ಸರ್ಪವೊಂದನ್ನು ಕಚ್ಚಿಕೊಂಡು ಹಾರುತ್ತಿದ್ದಾಗ ಆ ಹಾವು ಕಚ್ಚಿಕೊಂಡಿದ್ದ ತಿಮಿಂಗಿಲ ಕೆಳಗೆ ಬಿದ್ದು ನಿಶಾಕರ ಮುನಿಯ ಪುಣ್ಯಾಶ್ರಮ ನುಚ್ಚು ನೂರಾಯಿತು. ಆಶ್ರಮ ದಲ್ಲಿದ್ದವರೆಲ್ಲ ಸತ್ತರು. ಎಲ್ಲೋ ಹೊರಗೆ ಹೋಗಿದ್ದುದರಿಂದ ನಿಶಾಕರ ಮುನಿ ಉಳಿದುಕೊಂಡ. ಋಷಿ ಸಂಪಾತಿಯನ್ನು ಶಪಿಸುವುದಿಲ್ಲ. ಬದಲಿಗೆ “ನಿನ್ನಿಂದ ಮಹಾತ್ಕಾರ್ಯವಾಗಬೇಕು. ಕರ್ಮಪರಿಹಾರಕ್ಕಾಗಿ ಕಾಯಲೇಬೇಕು ಎನ್ನುತ್ತಾನೆ. ಮತ್ತೊಮ್ಮೆ ಸಂಪಾತಿ ಹಾರುತ್ತಾ ಸೂರ್ಯನನ್ನು ಸಮೀಪಿಸಿದ ತಮ್ಮ ಜಟಾಯುವನ್ನು ರಕ್ಷಿಸಲು ಧಾವಿಸಿ, ಅವನನ್ನು ತನ್ನ ರೆಕ್ಕೆಗಳಿಂದ ರಕ್ಷಿಸುತ್ತಾನೆ. ಆದರೆ ಅವನ ರೆಕ್ಕೆಗಳೇ ಸುಟ್ಟು ಮಹೇಂದ್ರಾಚಲದ ಕೋಡುಗಲ್ಲಿನ ಮೇಲೆ ದೊಪ್ಪನೆ ಉರುಳುತ್ತಾನೆ. ಕಪಿ ಸೈನ್ಯವು ಸೀತೆಯನ್ನು ಹುಡುಕುತ್ತಾ ಮಹೇಂದ್ರಾ ಚಲದವರೆಗೆ ಬರುವವರೆಗೂ ನರಳುತ್ತಾ ಶೋಕ ಮೋಕ್ಷಕ್ಕಾಗಿ ಕಾಯುತ್ತಿರುತ್ತಾನ. ಕಪಿಸೇನೆಯ ಶರಗುಲ್ಮ ಅವನಿಗೆ ಈ ಮಾತುಗಳನ್ನು ಹೇಳುತ್ತಾನೆ :

ಮಾಣ್ಬುದು ನಿರಾಶೆಯಂ, ಹೇ
ವಿಹಂಗಮತಪಸ್ವಿ, ದೈವಕೃಪೆಗೀ ಕ್ಲೇಶಮುಂ
ರೆಂಕೆಯಪ್ಪುದು. ಶಂಕೆಯೇಕೆಶಿವಕೃಪೆಗೆ
ತೃಣಮೆ ಖಡ್ಗಂ ; ಪನಿ ಕಡಲ್‌, ಶ್ರದ್ಧೆತಾಂ
ಸಾಣಿಯಿರೆ ತಾಳ್ಮೆಯೆ ತಪಂನಿಶ್ಶಬ್ದಿಯೈ ಈಶ್ವರ
ತ್ಯಪಾಬ್ಧಿ
ಬರ್ಪುದನರಿಯಲಾರೆವಂತೆಯೆ ಮಹತ್ಕೃತಿ ತಾಂ
ಮಹನ್ಮೌನಿ.

ದಶರಥನು ತನಗೆ ಹಿಂದೆ ಕೊಟ್ಟಿದ್ದ ಮಾತನ್ನು ನೆನಪು ಮಾಡಿ ಕೈಕೆಯು ಅವನಿಂದ ವರವನ್ನು ಬೇಡುವ ಸಂದರ್ಭ. ದಶರಥ ಇಂಥದೊಂದು ವರನೀಡಿ ರಾಮನನ್ನು ಕಾಡಿಗೆ ಕಳುಹಿಸಲು ಇದ್ದ ಗುಪ್ತ ಕಾರಣ :

ಕಬಂಧನ ಮೊರೆಯೊ?
ಶಬರಿಯ ಕರೆಯೊ? ರಾಮನಾತ್ಮಾಭಿಲಾಷಿತಮೊ?
ಪಾತ್ರಗಳಂತರಾಳದಿ ತನ್ನ ಸೂತ್ರಂಗಳಂ
ನಡೆಯಿಪಂತರ್ಯಾಮಿ ಶಕ್ತಿಯ ವಿಲಾಸಿತಮೊ?

ಮುದ್ದು ಮಗನಾದ ರಾಮಚಂದ್ರ ಕಾಡಿಗೆ ಹೋಗುವುದು ಅನಿವಾರ್ಯವಾದಾಗ ತಾಯಿ ಕೌಸಲ್ಯೆ ಹೇಳುವ ಮಾತುಗಳು:

ಜೈಸುಗೆ ವಿಧಿಯ ವಜ್ರೇಚ್ಛೆ!
ಗೆಲ್ಗೆ ನಿರುತಂ ಋತಂ!ಜಗದೀಶ ಕೃಪೆಯೆನಗೆ
ದಯೆಗೆಯ್ಗೆ! ಗೆಲಮಕ್ಕೆ ದೇವರ್ಗಳಲ್ಲರ್ಗೆ!
ಜಯಮಕ್ಕೆ ಮಾತೃವೊಲ್ಮೆಯ ಮಹತ್ಪ್ರಾರ್ಥನೆಗೆ!

ಈ ಯುಗಧರ್ಮವಾದ ಅಹಿಂಸೆಯನ್ನು ಕವಿ ತಮ್ಮ ರಾಮಾಯಣ ದರ್ಶನಂ ಕಾವ್ಯದ ದರ್ಶನದ ಭಾಗವಾಗಿ ಅಳವಡಿಸಿಕೊಂಡಿದ್ದಾರೆ. ಪುತ್ರಸಂತಾನವಾಗಬೇಕೆಂದು ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಜ್ಞವನ್ನು ಮಾಡಲು ಬಯಸಿದಾಗ ಜಾಬಾಲಿ ಋಷಿವರೇಣ್ಯರು ರಾಜನಿಗೆ ಹೇಳಿದ್ದು ಹೀಗೆ :

ಕುಲ ಪುರೋಹಿತರೊರೆದ ಜನ್ನಮಂ ಕೈಗೊಂಡು
ಪಸುಳೆರನ್ನರ ಪಡೆವೆಯದು ದಿಟಂ ಕೇಳಾದೊಡಂ
ನ್ನೊಂದು ಕಾಣ್ಕೆಯಂ. ಪೂರ್ವಪದ್ಧತಿವಿಡಿದು
ಮಾಳ್ಪ ದಿಗ್ವಿಜಯ ಹಯಮೇಧ ಮೊದಲಾದುವಂ
ತೊರೆದು, ಹಿಂಸಾ ಕ್ರೌರ್ಯ ಮಿಲ್ಲದಿಹ ಪ್ರೇಮಕ್ಕೆ
ನೋಂತು, ದೇವರ್ಕಳಂ ಪೂಜಿಸಲ್ಮೆಚ್ಚುವುದು
ಜಗವನಾಳುವ ಋತಂ

ಕುವೆಂಪು ಸಾಹಿತ್ಯಸಮಸ್ತವನ್ನೂ ಸಂಕ್ಷೇಪಿಸುವ ಯಾವುದೇ ಮಹತ್ತಾದ ಪ್ರಯತ್ನವಾದರೂ ವಿಶಾಲವಾದ ಕ್ಷೀರಸಾಗರದ ಸಮುದ್ರ ಸಮಸ್ತವನ್ನೂ ಒಂದು ಬಟ್ಟಲು ಹಾಲಾಗಿ ಇಂಗಿಸಿ, ಕೆನೆಗಟ್ಟಿಸಿ ನೀಡುವ ಪ್ರಯತ್ನದಂತೆಯೇ ಅಸಮರ್ಪಕವೂ, ಸೋಲನ್ನು ಒಪ್ಪಿಕೊಳ್ಳಲೇಬೇಕಾದದ್ದೂ ಆಗುವುದು ಅನಿವಾರ್ಯ. “ವ್ಯಾಸ ಮುನೀಂದ್ರ ರುಂದ್ರ ವಚನಾಮೃತವಾರ್ದಿಯನೀಸುವೆನ್‌ಎಂಬ ಗರ್ವಮೆನಗಿಲ್ಲ” ಎಂದು ಮಹಾಕವಿ ಪಂಪ ಹೇಳಿದ್ದಾನೆ. ಈಗಲೂ ‘ಕುವೆಂಪು ರಸೃಷಿ ರುಂದ್ರ ವಚನಾಮೃತವಾರ್ಧಿಯನೀಸುವೆನ್‌ಎಂಬ ಧೈರ್ಯಮನಗಿಲ್ಲ’ ಎಂದೇ ಹೇಳಬೇಕಾಗಿದೆ. ಸಹೃದಯರನ್ನು ಕುವೆಂಪು ಸಾಹಿತ್ಯ ತಪೋವನ ಯಾತ್ರಿಗಳಾಗುವಂತೆ ಪ್ರೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ನಾನು ಧನ್ಯನೆಂದು ಭಾವಿಸುತ್ತೇನೆ.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯವರು ನಾನು ಸ್ವಲ್ಪಮಟ್ಟಿಗೆ ವಿಸ್ತಾರವಾಗಿಯೇ ಇಂಗ್ಲಿಷಿನಲ್ಲಿ ರಚಿಸಿರುವ “ಕುವೆಂಪು” ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ಅದರ ಮುನ್ನುಡಿಯ ಭಾಗದಲ್ಲೂ, ಗ್ರಂಥದ ಆರಂಭದಲ್ಲೂ ಬರೆದಿರುವ ಕೆಲವು ಇಂಗ್ಲಿಷ್‌ವಾಕ್ಯಗಳನ್ನು ಉದ್ಧರಿಸಿ ಅವುಗಳ ಅನುವಾದವನ್ನು ನೀಡಿ ನನ್ನ ಈ ಲೇಖನವನ್ನು ಮುಗಿಸುತ್ತೇನೆ.

Despite close association over several decades, Sri Kuvempu has always struck me as the Himalayan range. So have his works. The snow-capped peaks of the majestic mountain, the mighty and mysterious ranges that span India from end to end, believed to be the abode of countless deities (Devatatama Kalidasa’s phrase) awe-inspiring ravines and valleys, from whence originate great rivers of India. Crowded by innumerable varieties of flora and fauna rich in colour and sound, varying to the rhythms of day and night, their whiteness intensified in moonlight, their eternal serenity concealed in their changing moods of anger and destruction, all these and more have their counterparts in his works. Over the last sixty years, he has produced work after work of the same serene beauty. Now, in the ripe age of eighty-two, the tall, handsome, majestic figure exuding and calm lastre, capped with silvery hair – is a reare personality among the shapers of modern Kannada literature.

ಶ್ರೀ ಕುವೆಂಪು ಅವರನ್ನು ಅನೇಕ ದಶಕಗಳಿಂದ ನಾನು ಆತ್ಮೀಯವಾಗಿ ಬಲ್ಲೆ. ಆದರೂ ಅವರು ನನಗೆ ಹಿಮಾಲಯ ಪರ್ವತ ಶ್ರೇಣಿಗಳಷ್ಟೇ ನಿಗೂಢವಾಗಿಯೇ ಕಾಣುತ್ತಾರೆ. ಅವರ ಕೃತಿಗಳೂ ಅಷ್ಟೇ ಭವ್ಯವಾದ ಆ ಪರ್ವತ ಶ್ರೇಣಿಯ ಹಿಮಾವೃತ ಶಿಖರಗಳು, ಭಾರತದ ಒಂದು ತುದಿಯಿಂದ ಮತ್ತೊಂದರವರೆಗೆ ಹಬ್ಬಿ ಹರಡಿರುವ ಧೀರ ನಿಗೂಢ ಪರ್ವತ ಶ್ರೇಣಿ-ಅದು ಅಸಂಖ್ಯಾತ ದೇವತೆಗಳನ್ನು ತನ್ನ ಗರ್ಭದಲ್ಲಿರಿಸಿಕೊಂಡಿದೆ ಎನ್ನುತ್ತಾರೆ, (ಕಾಳಿದಾಸ : ದೇವತಾತ್ಮ), ಭಾರತದ ಅನೇಕ ನದಿಗಳಿಗೆ ಮೂಲವಾದ ಭಯಾನಕವಾದ ಕಣಿವೆ ಕಂದರಗಳು, ಅಸಂಖ್ಯಾತ ಜೀವಸಂಕುಲ, ಸಸ್ಯ ಸಂಪತ್ತು, ಹಗಲು ರಾತ್ರಿಗಳಿಗೆ ತಮ್ಮ ಲಯವನ್ನು ಬದಲಿಸುತ್ತಾ ಹಾಡುವ ಪಕ್ಷಿ ಸಂಕುಲ, ಬೆಳದಿಂಗಳಲ್ಲಿ ಉಜ್ವಲವಾದಂತೆ ಕಾಣುವ ಅದರ ಧವಳತೆ, ಕ್ರೋಧ ವಿನಾಶಗಳನ್ನು ಒಳಗೆ ತಾಳಿಕೊಂಡೂ ದಿವ್ಯ ಶಾಂತಿಯನ್ನು ಪ್ರದರ್ಶಿಸುತ್ತಿರುವ ಅದರ ಹೊರಮುಖ –ನೀವು ಇವುಗಳಲ್ಲಿ ಯಾವುದನ್ನೇ ಹೆಸರಿಸಿ-ಅವುಗಳ ಪ್ರತಿರೂಪವನ್ನು ಕುವೆಂಪು ಅವರ ಕೃತಿಗಳಲ್ಲಿ ಕಾಣುತ್ತೀರಿ. ಕಳೆದ ಅರವತ್ತು ವರ್ಷಗಳಲ್ಲಿ ಅವರು ಶಾಂತ ಸುಂದರ ಹೊರರೂಪವುಳ್ಳ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಎಂಬತ್ತೆರಡನೆಯ ಈ ಮಾಗಿದ ಪ್ರಾಯದಲ್ಲಿ, ಎತ್ತರವಾಗಿದ್ದು, ಶಾಂತಕಾಂತಿಯನ್ನು ಬೀರುತ್ತಿರುವ ಬೆಳ್ಳಿ ಕೂದಲಿನ ಈ ಮಹಾನ್‌ಚೇತನ ಆಧುನಿಕ ಕನ್ನಡ ಸಾಹಿತ್ಯ. ನಿರ್ಮಾಪಕರ ಪಂಕ್ತಿಯಲ್ಲಿ ಎದ್ದು ಕಾಣುವ ಅಪರೂಪದ ವ್ಯಕ್ತಿತ್ವ ಉಳ್ಳವರು.

“If there is something great. Boundless, vast, painfully gripping and powerfully promising, which we have been wont to associate with the name of Russia, then it is Gorky whom we must regard as having expressed all that”. This tribute to Gorky by the symbolist poet. Alexander Block. May very well apply to Kuvempu, who as a poet, novelist, dramatist and literary critic, may be said to represent not only Karnataka, but the whole of India as well. If we would choose a single writer who gives powerful expression to the grandeur and the glory, the wealth and the spirituality of this ancient land of ours Kuvempu would be our most natural choice. On the other hand, if we would choose a single writer who would speak with powerful poetic eloquence on the ugliness and the degradation, the squalid poverty and the spiritual bankruptcy of this ancient land of ours, we would again have to read the charming works of Kuvempu himself.”

“ರಷ್ಯಾ ದೇಶದ ಹೆಸರಿನೊಂದಿಗೆ ಸಂಬಂಧಿಸಬಹುದಾದ ಮಹತ್ತಾದುದೂ ಅಸೀಮವಾದುದೂ, ನಮ್ಮ ಮನಸ್ಸನ್ನು ಸೆರೆಹಿಡಿಯಬಹುದಾದದ್ದೂ, ಆಶಾದಾಯಕವಾದದ್ದು ಏನಾದರೂ ಇರುವುದಾದರೆ ಅವನ್ನೆಲ್ಲ ಶಕ್ತಿಪೂರ್ಣವಾಗಿ ಅಭಿವ್ಯಕ್ತಿಗೊಳಿಸಿರುವವನು ಮ್ಯಾಕ್ಸಿಂಗಾರ್ಕಿ ಮಾತ್ರ.” ಈ ನುಡಿನಮನವನ್ನು ನೀಡಿದವನು ಕವಿ ಅಲೆಕ್ಸಾಂಡರ್‌ಬ್ಲಾಕ್‌ಈ ನುಡಿಗೌರವವನ್ನು ಯಾರಾದರೂ ಕನ್ನಡ ಲೇಖಕನಿಗೆ ನೀಡಬಹುದಾದರೆ ಅದು ಕವಿ, ನಾಟಕಕಾರ, ವಿಮರ್ಶಕ ಎಲ್ಲವೂ ಆಗಿರುವ, ಕರ್ನಾಟಕವನ್ನೇಕೆ ಇಡೀ ಭಾರತವನ್ನೇ ಪ್ರತಿನಿಧಿಸುವ ರಾಷ್ಟ್ರಕವಿ ಕುವೆಂಪು ಅವರಿಗೆ. ನಮ್ಮ ಈ ಪುರಾತನ ನಾಡಿನ ವೈಭವಕ್ಕೆ, ಆಧ್ಯಾತ್ಮಿಕತೆಗೆ ಶಕ್ತಿಪೂರ್ಣವಾದ ಉಕ್ತಿಯನ್ನು ನೀಡಿರುವ ಕವಿ ಯಾರು ಎಂದರೆ ನಮಗೆ ಸಹಜವಾಗಿ ನೆನಪಿಗೆ ಬರುವುದು ಕುವೆಂಪು ಅವರು. ಹಾಗೆಯೇ ಈ ದೇಶದ ಕುರೂಪ, ಅವನತಿ, ದಟ್ಟ ದಾರಿದ್ರ್ಯ, ಧಾರ್ಮಿಕ ದಿವಾಳಿತನ ಇವುಗಳಿಗೆ ಶಕ್ತಿಪೂರ್ಣವಾದ ಅಭಿವ್ಯಕ್ತಿ ನೀಡಿರುವ ಒಬ್ಬ ಕವಿಯನ್ನು ಆರಿಸಿಕೊಳ್ಳಬೇಕಾದರೆ ಮತ್ತೆ, ಕುವೆಂಪು ಅವರ ಸಾಹಿತ್ಯರಾಶಿಯತ್ತಲೇ ಕಣ್ಣು ಹಾಯಿಸಬೇಕಾಗುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)