ಒಂದು ಘಟನೆಯಿಂದ ಕುವೆಂಪು ಸಾಹಿತ್ಯ ಸಮೀಕ್ಷೆಯನ್ನು ಪ್ರಾರಂಭಿಸುವ ಇಚ್ಛೆ ನನ್ನದು. ಸುಮಾರು ಹದಿನೈದು ವರ್ಷಗಳ ಹಿಂದೆ ಯೂರೋಪಿನ ನೊಬೆಲ್‌ಪ್ರಶಸ್ತಿ ಪ್ರದಾನ ಸಮಿತಿಯಿಂದ ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಒಂದು ಪತ್ರ ಬಂತು. ಅದರಲ್ಲಿ ಆ ವರ್ಷದ ನೊಬೆಲ್‌ಪ್ರಶಸ್ತಿ ಭಾರತೀಯ ಸಾಹಿತಿಯೊಬ್ಬರನ್ನು ನಾಮಕರಣ ಮಾಡುವಂತೆ ಕೋರಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಒಂದು ಪತ್ರ ಬಂತು. ಅದರಲ್ಲಿ ಆ ವರ್ಷದ ನೊಬೆಲ್‌ಪ್ರಶಸ್ತಿಗೆ ಭಾರತೀಯ ಸಾಹಿತಿಯೊಬ್ಬರನ್ನು ನಾಮಕರಣ ಮಾಡುವಂತೆ ಕೋರಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೆಂದರೆ ಎಲ್ಲ ಭಾರತೀಯ ಭಾಷೆಗಳನ್ನೂ ಪ್ರತಿನಿಧಿಸುವ ಪ್ರಸಿದ್ಧ ಸಾಹಿತಿಗಳೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಪ್ರಥಮ ಬಾರಿಗೆ ನೊಬೆಲ್‌ಪ್ರಶಸ್ತಿ ಪ್ರಧಾನ ಸಮಿತಿಯಿಂದ ಬಂದ ಇಂಥದೊಂದು ಪತ್ರದಿಂದ ಸಹಜವಾಗಿಯೇ ಅಕಾಡೆಮಿಯ ಸದಸ್ಯರೆಲ್ಲರೂ ಹರ್ಷಪುಳಕಿತರಾಗಿದ್ದರು. ಸಮಿತಿಯಲ್ಲಿ ಈ ವಿಷಯ ಚರ್ಚೆಗೆ ಬಂತು. ಆಗ ಸ್ವಲ್ಪ ಮಟ್ಟಿನ ಗೊಂದಲ, ಕಸಿವಿಸಿಗಳು ಪ್ರಾರಂಭವಾದುವು. ಭರತಖಂಡದ ಯಾವ ಭಾಷೆಯ ಸಾಹಿತಿಯನ್ನು ನಾಮಕರಣ ಮಾಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತು. ಭಾರತದ ಪ್ರತಿಯೊಂದು ಭಾಷೆಯಲ್ಲಿಯೂ ಹಿಂದಿನ ಕೆಲವು ವರ್ಷಗಳಲ್ಲಿ ಕಾವ್ಯ, ಕಾದಂಬರಿ, ಸಣ್ಣಕತೆ, ನಾಟಕ, ಸಾಹಿತ್ಯ ವಿಮರ್ಶೆ-ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಮೃದ್ಧವಾದ ಸಾಹಿತ್ಯ ಸೃಷ್ಟಿಯಾಗಿದ್ದದ್ದು ಹೌದು. ಆದರೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಮೌಲಿಕವಾದ ಅನೇಕ ಕೃತಿಗಳನ್ನು ರಚಿಸಿದವರು ಯಾರೂ ಯಾರೊಬ್ಬರ ಶಿಫಾರಸ್ಸಿಗೂ ಅರ್ಹರಾದವರಂತೆ ತೋರಲಿಲ್ಲ. ಕೊನೆಗೆ ಸದಸ್ಯರೆಲ್ಲರೂ ಆಯ್ಕೆಯ ವಿಷಯವನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಿಗೆ ಬಿಟ್ಟರು. ಆಗ ಅಧ್ಯಕ್ಷರಾಗಿದ್ದವರು ಡಾ. ವಿ. ಕೆ. ಗೋಕಾಕರು. ಆಗ ಅವರ ತಾವು ಕನ್ನಡಿಗರಾಗಿದ್ದೂ, ಮಹಾಕಾವ್ಯವನ್ನೂ, ಕವನಗಳನ್ನೂ, ದೊಡ್ಡ ಕಾದಂಬರಿಯನ್ನೂ ರಚಿಸಿದ್ದು ಹೌದಾದರೂ, ನೊಬೆಲ್‌ಬಹುಮಾನಕ್ಕೆ, ಭಾರತೀಯ ಸಾಹಿತಿಗಳಲ್ಲಿ ಅರ್ಹರಾದವರು ಎಂದು ಡಾ. ಕೆ. ವಿ. ಪುಟ್ಟಪ್ಪನವರ ಹೆಸರನ್ನು ಅವರ ಸಾಧನೆಗಳನ್ನು ವಿವರಿಸಿ, ಸೂಚಿಸಿದರು. ಸಭೆ ಅದನ್ನು ಸರ್ವಾನುಮತದಿಂದ ಅನುಮೋದಿಸಿತು. ಅದಕ್ಕೆ ಕಾರಣ, ಡಾ. ಗೋಕಾಕರು ಕುವೆಂಪು ಅವರ ಸಾಧನೆಗಳನ್ನು ಸಭೆಗೆ ನಿವೇದಿಸಿದ ರೀತಿ : ಕನ್ನಡ ಸಾಹಿತ್ಯದಲ್ಲಿ ಮೇರು ಕೃತಿಯಾಗಿ ರಾರಾಜಿಸುತ್ತಿರುವ ಇಪ್ಪತ್ತೈದು ಸಾವಿರ ಪಂಕ್ತಿಗಳ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಜೊತೆಗೆ ಎರಡು ಸಾವಿರ ಪುಟಗಳಷ್ಟು ಕಾವ್ಯ, ಎರಡು ಸಾವಿರ ಪುಟಗಳಷ್ಟು ಗದ್ಯ ಸಾಹಿತ್ಯ- ಇದರಲ್ಲಿ ಸಾಹಿತ್ಯ ಮೀಮಾಂಸೆ, ದರ್ಶನ ವಿಮರ್ಶೆ, ವಿಚಾರ ಸಾಹಿತ್ಯ ಎಲ್ಲ ಸೇರಿವೆ. ಹದಿನಾಲ್ಕು ನಾಟಕಗಳು, ಹತ್ತಿರ ಹತ್ತಿರ ಎರಡು ಸಾವಿರ ಪುಟಗಳಷ್ಟಾಗುವ ಎರಡು ಬೃಹತ್ ಕಾದಂಬರಿಗಳು, ಸಾವಿರ ಪುಟಗಳಷ್ಟು ವಿಸ್ತಾರವಾದ ಆತ್ಮಕಥೆ – ಇತ್ಯಾದಿ ಇತ್ಯಾದಿಗಳನ್ನು ಅಂದರೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃತಿರಚನೆ ಮಾಡರುವ ಏಕೈಕ ಸಾಹಿತಿಯೆಂದರೆ – ಕುವೆಂಪು ಎಂದು ಗೋಕಾಕರು ಸುದೀರ್ಘವಾದ ತಮ್ಮ ನಿವೇದನೆಯಲ್ಲಿ ವರ್ಣಿಸಿದರು. ಅವರ ಕೃತಿಗಳಲ್ಲಿ ಸಾಕಷ್ಟು ಭಾಗ ಇಂಗ್ಲಿಷ್‌ಅನುವಾದದೊಡನೆ ನೊಬೆಲ್‌ಸಮಿತಿಗೆ ಸೇರಿತು. ಆ ಸಂದರ್ಭದಲ್ಲಿ ಅನುವಾದ, ಸಂಗ್ರಹಣೆ, ಕೊನೆಗೆ ಅವನ್ನೆಲ್ಲ ಕೇಂದ್ರ ಅಕಾಡೆಮಿಗೆ ತಲುಪಿಸುವ ಕಾರ್ಯದಲ್ಲಿ ನಾನು ಪಾಲ್ಗೊಂಡಿದ್ದೆನಾಗಿ ಈ ವಿವರಗಳನ್ನೆಲ್ಲ ಕೂಲಂಕಷವಾಗಿ ನನಗೆ ತಿಳಿಯುವುದು ಸಾಧ್ಯವಾಯಿತು.

ತಮ್ಮ ಅನನ್ಯವೂ ಅಮೂಲ್ಯವೂ ಆದ ಕೃತಿಗಳಿಂದ ಬಾನೆತ್ತರಕ್ಕೆ ಬೆಳೆದು ಇಂದು ಇಡೀ ಶತಮಾನವನ್ನು ತುಂಬಿ ನಿಂತ ಸಾಹಿತ್ಯ ಗೊಮ್ಮಟ ಕುವೆಂಪು. ಅವರ ಶಕ್ತಿಮೂಲವನ್ನು ಉಕ್ತಿವೈಧ್ಯವನ್ನೂ ಒಂದು ಗಂಟೆಯ ಕೇಳ್ವಿಕೆಯ ಅವಧಿಗೆ ಅಳವಡಿಸುವುದು ಎಷ್ಟು ಕಷ್ಟ ಎಂಬುದು ಸಹೃದಯರಿಗೆಲ್ಲ ಅರ್ಥವಾಗುವಂಥದು. ಅಂಥ ಸಾಹಸವನ್ನು ಔದಾರ್ಯದಿಂದ ಸಹಿಸುತ್ತೀರಿ ಎಂಬ ನಂಬಿಕೆಯಿಂದ ಮುಂದುವರಿಯುತ್ತಿದ್ದೇನೆ.

ಕುವೆಂಪು ಒಂದು ಕವನದಿಂದ ಪ್ರಾರಂಭಿಸುತ್ತೇನೆ : “ಬಾ ಫಾಲ್ಗುಣ ರವಿ ದರ್ಶನಕೆ” ಎಂಬುದು ಅದು:

ಶಿವ ಮಂದಿರ ಸಮ ವನ ಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ ಬಾ ;
ಬಾ ಫಾಲ್ಗುಣ ರವಿ ದರ್ಶನಕೆ!
ಕುಂಕುಮ ಧೂಳಿಯ ದಿಕ್ತಟ ವೇದಿಯೊಳೋಕುಳಿಯಲಿ ಮಿಂದೇಳುವನು;
ಕೋಟಿವಿಹಂಗಮ ಮಂಗಲರವ ರಸ ನೈವೇದ್ಯಕೆ ಮುದ ತಾಳುವನು;
ಚಿನ್ನದ ಚೆಂಡೆನೆ ಮೂಡುವನು; ಹೊನ್ನನೆ ಹೊಯ್ನೀರು ನೀಡುವನು.
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು!
ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ತುಂಬಿರೆ ಧೂಳೀಸಮಹಿಮ ಬಾನ್ಕೆರೆಗ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ!

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆಸುವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ :
ಸರ್ವೇಂದ್ರಿಯ ಸುಖನಿಧಿ ಅಲ್ಲಿ; ಸರ್ವಾತ್ಮನ ಸನ್ನಿಧಿ ಅಲ್ಲಿ;
ಸಕಲಾರಾಧನ ಸಾಧನಬೋಧನದನುಭವ ರಸ ತಾನಹುದಲ್ಲಿ!”

ಕುವೆಂಪು ಅವರಿಗೆ ಪ್ರಕೃತಿ ದರ್ಶನದಿಂದ ದೊರಕುತ್ತಿದ್ದುದು ಬರಿಯ ಸೌಂದರ್ಯನು ಭೂತಿಯಲ್ಲ, ಆಧ್ಯಾತ್ಮಿಕ ಅನುಭೂತಿಕೂಡ. ಶ್ರೀರಾಮಕೃಷ್ಣ ಪರಮಹಂಸರಿಗೆ, ಬಾಲ್ಯದಲ್ಲೇ ಸಮಾಧಿಯ ಅನುಭವವಾದದ್ದು, ಪ್ರಕೃತಿ ಸೌಂದರ್ಯದ ಮೂಲಕ. ದಟ್ಟವಾದ ಕಪ್ಪು ಮೋಡದ ಹಿನ್ನೆಲೆಯಲ್ಲಿ ಬೆಳ್ಳನೆಯ ಬಲಾಕ ಪಂಕ್ತಿ ಹಾರಿದುದನ್ನು ಕಂಡು, ಮುಂದೆ ರಾಮಕೃಷ್ಣ ಪರಮಹಂಸರಾದ ಬಾಲಕ ಗದಾಧರ ತಾನು ಮೊದಲ ಸಮಾಧಿಯನ್ನು ಪಡೆದುಕೊಂಡುದಾಗಿ ಹೇಳಿದ. ಆ ಸಂದರ್ಭವನ್ನು ವರ್ಣಿಸಿ ರಾಮಕೃಷ್ಣರ ಜೀವನ ಚರಿತ್ರೆಯನ್ನು ಬರೆಯುತ್ತಾ ಕುವೆಂಪು ಹೇಳುತ್ತಾರೆ “ಕಲೆ ನನ್ನಿಯ (= ಸತ್ಯದ) ನೆಲೆಗೆ ಹೆಬ್ಬಾಗಿಲು. ಮುಂದುವರಿದು ಹೇಳುತ್ತಾರೆ : “ಅವ್ಯಕ್ತವೂ ನಿರ್ಗುಣ ನಿರಾಕಾರವೂ ಆಗಿರುವ ಪರತತ್ವವು ಪ್ರಕಾಶವಾಗಬೇಕಾದರೆ ವ್ಯಕ್ತವೂ ಸಗುಣ ಸಾಕಾರವೂ ಆಗಿರುವ ಸೌಂದರ್ಯವಾಗಬೇಕು. ಏಕವೂ ಅಖಂಡವೂ ಆಗಿರುವ ಬೃಹ್ಮವು ಬುದ್ಧಿಯ ದೃಷ್ಟಿಗೆ ಸತ್ಯದಂತೆಯೂ, ಭಾವದ ದೃಷ್ಟಿಗೆ ಸೌಂದರ್ಯದಂತೆಯೂ ತೋರುತ್ತದೆ. ಸತ್ಯ ಸೌಂದರ್ಯಗಳ ಸಂಗಮವೆ ಪರಮಸಿದ್ಧಿ. ಆ ಅನುಭವದಲ್ಲಿ ಸತ್ಯವೇ ಸೌಂದರ್ಯ, ಸೌಂದರ್ಯವೇ ಸತ್ಯ.”[1]

ಮೇಲೆ ಉದ್ದರಿಸಿದ ಪದ್ಯದ ವಿಶ್ಲೇಷಣೆಯನ್ನು ಈ ಮುಂದುವರಿಸೋಣ : ಸೂರ್ಯೋದಯದ ದಿವ್ಯ ಕ್ರಿಯೆ ಯಜ್ಞವೊಂದರ ಮಂಗಳ ಚಿತ್ರವನ್ನು ಮನಸ್ಸಿಗೆ ತರುತ್ತದೆ.” ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯ ಮಾಡುವನು” ಮತ್ತು “ಪ್ರತಿಭೆಯ ಹೋಮಾಗ್ನಿಯ ಮೇಲೆ, ಕವಿ ಮನ ತಾನುರಿದುರಿದೇಳೆ” ಎಂಬ ಪಂಕ್ತಿಗಳೂ “ಸಕಲಾರಾಧನ ಸಾಧನ ಬೋಧನದನುಭವ ರಸ ತಾನಹುದಲ್ಲಿ” ಎಂಬ ಪಂಕ್ತಿಯೂ ಸೂರ್ಯೋದಯದ ದಿವ್ಯ ಕ್ರಿಯೆಯು ಆಧ್ಯಾತ್ಮಿಕತೆಯಲ್ಲಿ ಪರ್ಯವಸಾನವಾಗುವ ಯಜ್ಞ ಕ್ರಿಯೆಯನ್ನು ಸತ್ಯ ಸೌಂದರ್ಯಗಳ ಅನನ್ಯತೆಯನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ. ಕುವೆಂಪು ಸತ್ಯ ಸೌಂದರ್ಯಗಳ ಯಮಳತೆಯನ್ನು ಇನ್ನೂ ವಾಚ್ಯವಾಗಿ ಹೇಳಿರುವ ಕವನ ಪಂಕ್ತಿಗಳೂ ಉಂಟು :

ಆನಂದಮಯ ಜಗ ಹೃದಯ ;
ಏಕತೆ ಭಯ? ಮಾಣೋ!
ಸೂರ್ಯೋದಯ ಚಂದ್ರೋದಯ
ದೇವರ ದಯೆ ಕಾಣೋ!

***

ರವಿ ವದನವೆ ಶಿವ ಸದನವೊ
ಬರಿ ಕಣ್ಣದು ಮಣ್ಣೊ!
ಶಿವನಿಲ್ಲದೆ ಸೌಂದರ್ಯವೆ?
ಶವಮುಖದಾ ಕಣ್ಣೋ![2]

ಕುವೆಂಪು ಅವರ ಚೇತನಕ್ಕೆ ಆಧ್ಯಾತ್ಮಿಕತೆ ಅವತರಿಸಿದ್ದು, ಅಲ್ಲಿ ಅದು ಸ್ಥಾಯಿಯಾಗಿ ನಿಂತಿದ್ದು, ಅನಂತರ ಅದು ಅವರ ಪ್ರಜ್ಞೆಯನ್ನು ಅರಳಿಸಿ ವಿಶ್ವ ಪ್ರಜ್ಞೆಯನ್ನಾಗಿ ಮಾಡಿದ್ದು-ಇವೆಲ್ಲವೂ ಪವಾಡಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದ ಕುವೆಂಪುರವರ ಜೀವನದಲ್ಲಿ ನಡೆದ, ಪವಾಡದಂತೆ ಕಾಣದ ಪವಾಡಗಳು!

೧೯೨೪ನೆಯ ಜನವರಿ ೨೫ರ ಸಂಜೆ ಬೆಂಗಳೂರಿನ ಮಿತ್ರರ ಆಹ್ವಾನದ ಮೇರೆಗೆ ‘ಲೋಟಸ್ ಲೀಫ್‌ಕ್ಲಬ್‌’ನ ಉದ್ಘಾಟನೆಗಾಗಿ ಹೋಗಿದ್ದ ಕುವೆಂಪು ಅಂದು ರಾತ್ರಿ-ಅವರ ಮಾತುಗಳಲ್ಲಿಯೇ ಮುಂದೆ ನಡೆದುದನ್ನು ಕೇಳೋನ : “ರಾತ್ರಿ ಸಮಾರಂಭದ ಕಾರ್ಯಕ್ರಮಗಳೆಲ್ಲ ಮುಗಿದ ಅನಂತರ ನಾನು (ಭೂಪಾಳಂ ಚಂದ್ರಶೇಖರಯ್ಯನವರ ಕೊಠಡಿಯಲ್ಲಿ ತಂಗಿದ್ದವನು) ಅವರ ಮೇಜಿನ ಮೇಲೆ ನನ್ನ ಜೀವನ ನೌಕೆಯ ಕರ್ಣಧಾರ (navigator) ಸ್ವರೂಪವಾಗಲಿದ್ದ ಒಂದು ಮಹಾಪೂಜ್ಯ ಅನರ್ಘ್ಯ ವಸ್ತುವನ್ನು ಸಂದರ್ಶಿಸಿದೆ : (`Life of Sri Ramakrishna’ : Compiled from various Authentic Sources. ಶ್ರೀ ರಾಮಕೃಷ್ಣ ಜೀವನ ಚರಿತ್ರೆ – ಅನೇಕ ಅಧಿಕೃತ ಮೂಲಗಳಿಂದ ಸಂಗ್ರಹಿಸಿದುದು). ….ಡೆಮಿ ಆಕಾರದ ೭೬೫ ಪುಟಗಳ ಬೃಹತ್‌ಗಾತ್ರದ ಹೆಬ್ಬೊತ್ತಗೆ : ನನ್ನ ಪ್ರಜ್ಞೆಗೆ ಅರಿಯದಂತೆಯೇ ಮಹಾದೇವನ ಪುಸ್ತಕ ರೂಪಿ ಕೃಪಾ ಹಸ್ತ ತನ್ನ ಕಂದನನ್ನೆತ್ತಿ ಎದೆಗಪ್ಪಿಕೊಳ್ಳಲು ಕೈಚಾಚಿದಂತಿತ್ತು! ಶ್ರೀ ತಾಯಿಯ ಕರುಣೆ ಮೈದಾಳಿದಂತಿತ್ತು”[3]

ಪರಮಹಂಸರ ವಿಸ್ತಾರವಾದ ಜೀವನ ಚರಿತ್ರೆಯನ್ನು ಓದುವುದಕ್ಕೆ ಮುನ್ನವೇ ಕುವೆಂಪು ಸ್ವಾಮಿ ವಿವೇಕಾನಂದರ ಅಮೋಘವೂ, ಶಕ್ತಿಪೂರ್ಣವೂ ಆದ ಉಪನ್ಯಾಸಗಳಿಂದಲೂ ಬರವಣಿಗೆಗಳಿಂದಲೂ ಪ್ರಭಾವಿತರಾಗಿದ್ದರು. ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀ ರಾಮಕೃಷ್ಣ ಪರಮಹಂಸರೂ, ತಮ್ಮ ವಿದ್ಯುದ್ವಾಣಿಯಿಂದ ತಮನಸ್ಸಿನಲ್ಲಿ ಮುಳುಗಿ ಮೃತಪ್ರಾಯರಾಗಿದ್ದ ಭಾರತೀಯರನ್ನು ಎಚ್ಚರಗೊಳಿಸಿದ ಸ್ವಾಮಿ ವಿವೇಕಾನಂದರೂ ಕುವೆಂಪು ಅವರ ಸಾಹಿತ್ಯ ಸೃಷ್ಟಿಯ, ಪೂರ್ಣದೃಷ್ಟಿಯ ಪ್ರೇರಕ ಶಕ್ತಿಗಳಾಗಿದ್ದರು. ಪರಮಹಂಸರ ಮತ್ತು ಸ್ವಾಮಿಜಿಯ ಶ್ವಾಸೋಚ್ಛ್ವಾಸ ಸ್ವರೂಪಳಾಗಿದ್ದ ದಕ್ಷಿಣೇಶ್ವರದ ಭವತಾರೀಣಿ ದೇವಿ ತಮ್ಮ ಸಲುವಾಗಿಯೇ ದಕ್ಷಿಣಕ್ಕೆ ಬಂದದ್ದು ಎಂಬುದು ಕವಿಯ ನಂಬಿಕೆ. “ವಿಶ್ವವಿದ್ಯಾನಿಲಯ ಭಗವತಿ ಶ್ರೀ ಸರಸ್ವತಿಗೆ”[4] ಎಂಬ ಕವನದಲ್ಲಿ ಅವರು ಹೀಗೆ ಹಾಡಿದ್ದಾರೆ :

ಚಿದ್ರೂಪಿಣಿ ಭವತಾರಿಣಿ ಉತ್ತರೋತ್ತರೆ
ಕವಿಯನೆತ್ತಿ ರಕ್ಷಿಸಲ್ಕೆ
ಬಂದಲಿತ್ತ ದಕ್ಷಿಣಕ್ಕೆ
ಶ್ರೀ ವಿವೇಕ ಪರಮಹಂಸ ದಕ್ಷಿಣೇಶ್ವರ ;

ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ಕುವೆಂಪು ಅವರನ್ನು ವಾಸ್ತವವಾಗಿ, ಅಕ್ಷರಶಃ ಉಳಿಸಿಬಿಟ್ಟ ಸಂಸ್ಥೆ ಶ್ರೀ ರಾಮಕೃಷ್ಣ ಮಹಾಸಂಘ, ಅದೂ ತನ್ನ ಒಬ್ಬ ಅತ್ಯಪರೂಪದ ಸನ್ಯಾಸಿವರೇಣ್ಯರ ಮೂಲಕ. ಈ ಜೀವದಾನದ ಪ್ರಸಂಗವನ್ನು ಕುವೆಂಪು ತಮ್ಮ ಆತ್ಮಕಥೆಯಾದ “ನೆನಪಿನ ದೋಣಿ”ಯಲ್ಲಿ ವಿವರವಾಗಿ ನಿರೂಪಿಸಿದ್ದಾರೆ.[5]

೧೯೨೬ರಲ್ಲಿ ಎಂದರೆ ಕವಿ ೨೨ರ ತಾರುಣರಾಗಿದ್ದಾಗ, ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಆಗ ಅವರು ವಾಸಿಸುತ್ತಿದ್ದುದು ಮೈಸೂರಿನ ಸಂತೇಪೇಟೆಯ ‘ಆನಂದ ಮಂದಿರ’ವೆಂಬ ಹೊಟೇಲಿನಲ್ಲಿ-ಅಲ್ಲಿ ಆನಂದವೂ ಇರಲಿಲ್ಲ, ಅದು ‘ಮಂದಿರ’ವೂ ಆಗಿರಲಿಲ್ಲ ಅತ್ಯಂತ ಕೊಳಕಾದ, ಅವರೇ ಹೇಳಿರುವಂತೆ “ಚಟ್ಟದಷ್ಟಗಲದ” ಕೊಠಡಿಯಲ್ಲಿ! ದಿನವೂ ರಾಮಕೃಷ್ಣಾಶ್ರಮಕ್ಕೆ ಬರುತ್ತಿದ್ದ ತರುಣ ಮೂರು ನಾಲ್ಕು ದಿನ ಬಾರದೆ ಹೋದುದರಿಂದ ಸಹಜವಾಗಿಯೇ ಕಳವಳಗೊಂಡು ತಮ್ಮ ಆಪ್ತರೂ, ಆಶ್ರಮದ ಕಾರ್ಯದರ್ಶಿಯವರೂ, ಮಹಾರಾಜ ಕಾಲೇಜಿನ ಇತಿಹಾಸದ ಅಧ್ಯಾಪಕರೂ ಆಗಿದ್ದ ನಾ. ಕಸ್ತೂರಿಯವರನ್ನು ‘ಅನ್ವೇಷಣೆ’ಗೆಂದು ಕಳುಹಿಸಿದರು. ಅವರು ಬಂದು ನೂರನಾಲ್ಕೋ ನೂರೈದೋ ಡಿಗ್ರಿ ಜ್ವರದಿಂದ ಬೇಯುತ್ತಾ, ಕೊಳಕಾದ ಕೊಠಡಿಯಲ್ಲಿ, ಕೊಳಕಾದ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟಪ್ಪನವರನ್ನು ಆಸ್ಪತ್ರೆಗೆ ಸಾಗಿಸುವ ನಿರ್ಣಯ ಮಾಡಿ ಅದನ್ನು ರೋಗಿಗೂ ತಿಳಿಸಿದರು. ಅವರ ತೀರ್ಮಾನಕ್ಕೆ ಬದ್ಧರಾಗಲು ಸುತರಾಂ ಒಪ್ಪದಿದ್ದ ತರುಣನ್ನು ಹೆಚ್ಚು ಕಡಿಮೆ ಬಲಾತ್ಕಾರದಿಂದಲೇ ಎಂಬಂತೆ, ಆಸ್ಪತ್ರೆಗೆ ಸಾಗಿಸಿದವರು. ಅಲ್ಲಿ ಸ್ವಲ್ಪ ಮಟ್ಟಿಗೆ ಗುಣಮುಖರಾದ ಮೇಲೆ ಮತ್ತೆ, ಒತ್ತಾಯದಿಂದಲೇ ಅವರು ಕೊಠಡಿಗೆ ಹೋಗಲು ಬಿಡದೆ, ಆಶ್ರಮಕ್ಕೇ ಕರೆದುಕೊಂಡು ಹೋಗಿ ಅಲ್ಲಿ ಊಟ ವಸತಿಗಳಿಗೆ ಏರ್ಪಾಟು ಮಾಡಿದರು. ಕೇರಳದ ರಾಜಮನೆತನದಿಂದ ಬಂದಿದ್ದ ಸ್ವಾಮೀಜಿ, ಆಶ್ರಮದ ಬಡಸ್ಥಿತಿಯಿಂದಾಗಿ, ಗುಡಿಸುವ ಕೆಲಸದಿಂದ ಅಡುಗೆಯವರೆಗೆ ಎಲ್ಲವನ್ನೂ ತಾವೇ ಮಾಡುತ್ತಿದ್ದರು. ಆಶ್ರಮದ ಇಂಥ ಸ್ಥಿತಿಯಲ್ಲೂ ತರುಣ ಕವಿಯನ್ನು ರಕ್ಷಿಸಿ ಕನ್ನಡ ಸಾಹಿತ್ಯಕ್ಕೆ ಕಾಣಿಕೆಯಾಗಿ ನೀಡಿದರು. ಪುಟ್ಟಪ್ಪನವರ ಆಶ್ರಮವಾಸ ಸುಮಾರು ಹನ್ನೆರಡು ವರ್ಷಗಳ ಕಾಲ ಮುಂದುವರಿಯಿತು! ಶ್ರೀ ಸ್ವಾಮಿ ಸಿದ್ದೇಶ್ವರಾನಂದರಿಗೆ ಕುವೆಂಪು ಕೃತಜ್ಞತೆಯನ್ನು ಕಾವ್ಯಮಯವಾಗಿ ಹೀಗೆ ಸಲ್ಲಿಸಿದ್ದಾರೆ.

ನಿಮಗೆ ನಾನಾವ ರೀತಿಯೆಂದೆನಿತು ಋಣಿ
ಎಂದು ಕಳೆದ ಕಾಲದ ಪುಸ್ತಕದ ಪುಟಗಳನ್‌,
ಒಂದೊಂದನೆಯ ಮಗುಚಿ ನೋಡಿದರೆ ಪಟಗಳನ್‌,
ಥಳಿಸುವುದು ವಜ್ರ ವೈಡೂರ್ಯಮಯ ನೆನಹು ಗಣಿ,
ಕೃತಜ್ಞತೆಯ ಕಣ್ಕೋರೈಸುವೋಲ್‌! ದೇಹಮಂ
ಕಾಣ್ಕೆಗೈದಿರಿ ದೇವ ಧನ್ವಂತರಿಯ ಗುಡಿಗೆ ;
ಪ್ರಾಣಮಂ ಕೊಂಡೊಯ್ದು ಭಾಗೀರಥಿಯ ತಡಿಗೆ
ಮೀಯಿಸಿದಿರದನು ಗುರುಮಂತ್ರದಿಂ. ಸ್ನೇಹಮಂ
ಸವಿಯೊಡ್ಡಿ, ಶಿವಲಲಾಟಾಕ್ಷಿಯೊಳ್ಅಭೀತಿಯಿಂ
ಚರಿಸುವಂತೆಸಗಿಹಿರಿ. ಸನ್ಯಾಸಯೋಗದಿಂ
ಧರ್ಮಗರ್ವದ ಸೋಂಕು ಸುಳಿಯದಾ ಪ್ರೀತಿಯಂ
ಸಾಮಾನ್ಯತೆಯನಾಂತು, ಕಲೆಗಳನುರಾಗದಿಂ
ರಸಯೋಗಿಯಾಗಿಪ ನೀಮೆ ಶಾಂತಿಯ ಭಟ್ಟಂ
ಮೇಣ್ಆತ್ಮದಾನಂದ ಸಿದ್ದೇಶ್ವರನೆ ದಿಟಂ!”

ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಮತ್ತು ಶ್ರೀರಾಮಕೃಷ್ಣ ಮಹಾಸಂಘ-ಈ ಮೂರರ ಪ್ರಭಾವವು ಮಲೆನಾಡಿನ ಕಿರುಹಳ್ಳಿಯಾದ ಕುಪ್ಪಳಿಯಲ್ಲಿ ಬೆಳೆದ ಬಾಲಕನೊಬ್ಬನು ವಿಶ್ವ ಮಾನವ ಪ್ರಜ್ಞೆಯನ್ನು ಬೆಳೆಸಿಕೊಂಡು, ವಿಶ್ವಮಾನವನಾಗಲು ನೆರವಾಯಿತು. ಕುವೆಂಪು ಮುಂದೆ, ತಮ್ಮ ಜೀವಮಾನದ ಉತ್ತರಾರ್ಧದಲ್ಲಿ ವಿಶ್ವಮಾನವ ಸಂದೇಶವನ್ನು ರೂಪಿಸಿ, ಅದು ಈ ಲೋಕ ಪರಿಸ್ಥಿತಿಯಲ್ಲಿ ಅನುಷ್ಠಾನಯೋಗ್ಯವಲ್ಲ ಎಂದು ಯಾರು ಎಷ್ಟೇ ಹೇಳಿದರೂ, ಕಿವಿಗೊಡದೆ ಜಗತ್ತು ಈ ಸಂದೇಶವನ್ನು ಮೈಗೂಡಿಸಿಕೊಂಡರೆ ಮಾತ್ರ ಅಸ್ತಿತ್ವದಲ್ಲಿರುವುದು ಸಾಧ್ಯ ಎಂದು ಉಗ್ರವಾಗಿ, ಮಾಹೇಶ್ವರ ನಿಷ್ಠೆಯಿಂದ ಅದನ್ನು ಪ್ರಸಾರ ಮಾಡುತ್ತಾ ಹೋದರು. ಅದು ಕಾರ್ಯಯೋಗ್ಯವೋ ಅಲ್ಲವೋ ಆದರೆ ಅದರ ತಿರುಳು ಮಾತ್ರ ತರ್ಕಬದ್ಧವಾದದ್ದು, ಜಗತ್ತಿನ ಉದ್ದಾರಕ್ಕೆ ಅಡಿಗಲ್ಲಾಗಬಹುದು. ಅದನ್ನು ಅವರದೆ ಮಾತುಗಳನ್ನು ಬಳಸಿ ಹೀಗೆ ಸಂಕ್ಷೇಪಿಸಬಹುದು:

ತಮ್ಮ ವಿಶ್ವಮಾನವ ಸಂದೇಶ : ಪಂಚಮಂತ್ರ ಮತ್ತು ಸಪ್ತಸೂತ್ರ ಎಂಬ ಕಿರು ಪುಸ್ತಿಕೆಯ ಆರಂಭದಲ್ಲಿ ಕುವೆಂಪು ಸ್ವಾಮಿ ವಿವೇಕಾನಂದರ ಒಂದು ವಾಣಿಯನ್ನು ಉದ್ಧರಿಸಿದ್ದಾರೆ :

No man is born to any religion ; every man has a religion in his soul. Let there be as many religions as there are human beings.

ಅನಂತರ ಅವರ ಸಂದೇಶ ಹೀಗೆ ಪ್ರಾರಂಭವಾಗುತ್ತದೆ:

“ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು “ಅಲ್ಪಮಾನವ”ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿತವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ!” ಅವರ ಈ ದೃಷ್ಟಿಯನ್ನು-ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ಈ ಪಂಚಮಂತ್ರಗಳ ಸಾರವನ್ನು ಅವರ ಸಾಹಿತ್ಯದ ತುಂಬ ಕಾಣಬಹುದು.

ಕುವೆಂಪು ಅವರು, ಕನ್ನಡ ಸಾಹಿತ್ಯಕ್ಕೆ ಕನ್ನಡ ನಾಡಿಗೆ, ಭಾರತಕ್ಕೆ ವಿಶ್ವಕ್ಕೆ ನೀಡಿದ ಕಾಣಿಕೆಯೇನು ಎಂಬುದನ್ನು ಈಗ ಪರಿಶೀಲಿಸಬಹುದು.

ಕುವೆಂಪು ಅವರ ಸಾಹಿತ್ಯ ಕೃಷಿ ಆರಂಭವಾದದ್ದು ಅವರು ಕವನಗಳನ್ನು ಬರೆಯಲು ಆರಂಭಿಸಿದಾಗಿನಿಂದ. ಆದರೆ ಅವರು ಕವನಗಳನ್ನು ಬರೆದದ್ದು ಇಂಗ್ಲಿಷ್‌ಭಾಷೆಯಲ್ಲಿ, ಅದು ಅವರು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ, ೧೯೨೨ರಲ್ಲಿ, ಹದಿನೆಂಟು ವರ್ಷದ ತರುಣ. ಮಿತ್ರರ ಪ್ರೋತ್ಸಾಹದಿಂದ ತನ್ನ ಏಳು ಕವನಗಳನ್ನು “Beginner’s Muse” ಎಂಬ ಹೆಸರಿನಲ್ಲಿ ಅಚ್ಚು ಮಾಡಿಸಿ ಪರಕಟಿಸಿದರು. ಆ ವೇಳೆಗೇ ಅವರು ಇಂಗ್ಲಿಷ್‌ಸಾಹಿತ್ಯದ ಅನೇಕ ಕೃತಿಗಳನ್ನು ಓದಿದ್ದರು. ಇಂಗ್ಲಿಷ್‌ ಕಾವ್ಯದ ಛಂದೋವಿಧಾನ ಅವರಿಗೆ ಕರಗತವಾಗಿತ್ತು. ಇಂಗ್ಲಿಷ್‌ಭಾಷೆಯ ಮೇಲೆ ಒಳ್ಳೆಯ ಪ್ರಭುತ್ವ ಸಾಧಿತವಾಗಿತ್ತು. ಕನ್ನಡ ನಾಡಿನ ಮಲೆನಾಡು ಒದಗಿಸಿದ್ದ ಲಲಿತ-ರುದ್ರ ಮನೋಹರ ದೃಶ್ಯಗಳಿಂದ ಪ್ರಭಾವಿತರಾಗಿದ್ದ ಕವಿ ನೂರಾರು ಇಂಗ್ಲಿಷ್‌ಕವನಗಳನ್ನು ರಚಿಸಿದ್ದರು.ಅವುಗಳಿಂದ ಆಯ್ದು ಕೆಲವು ಕವನಗಳನ್ನು ಹಿಡಿದುಕೊಂಡು ಹೋಗಿ, ಆಗ ಮೈಸೂರಿಗೆ ಬಂದಿದ್ದ ಐರಿಷ್‌ಕವಿ ಜೇಮ್ಸ್‌ಕಸಿನ್ಸ್‌ಅವರಿಗೆ ತೋರಿಸಿದರು. ಅವರು ಸಜ್ಜನಿಕೆಯಿಂದ ಕವನಗಳನ್ನು ತಿರುವಿ ಹಾಕಿದರು. ಅಂತರ ಪುಟ್ಟಪ್ಪನವರನ್ನು ನಖಶಿಖಾಂತ ನೋಡಿದರು. ಖಾದಿ ವಸ್ತ್ರಧಾರಿಯಾಗಿದ್ದ ಅವರನ್ನು ಉದ್ದೇಶಿಸಿ ಹೇಳಿದರು :

“ಏನಿದೆಲ್ಲ ಕಗ್ಗ? (What is all this stuff?)ನಿಮ್ಮ ಮೈ ಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತ್ರಗಳೇ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?”

ಕಸಿನ್ಸ್‌ಅವರ ಧ್ವನಿಗೂ ಭಂಗಿಗೂ ಮುಳಿದ ತರುಣ ಪುಟ್ಟಪ್ಪ ಉತ್ತರಿಸಿದರು : “ಇಲ್ಲ, ಕನ್ನಡದಲ್ಲಿ ಇಂಗ್ಲಿಷ್‌ನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ ಅದರಲ್ಲಿರುವ ಛಂದಸ್ಸೂ ಹಳೆಯ ಕಂದಾಚಾರದ ಛಂದಸ್ಸು, ವೃತ್ತ, ಕಂದ ಇತ್ಯಾದಿ. ಇಂಗ್ಲಿಷ್‌ನಲ್ಲಿರುವ ಛಂದೋವೈವಿಧ್ಯ ಇಲ್ಲವೇ ಇಲ್ಲ.”

ಕುವೆಂಪು ತಮ್ಮ ಈ ಸಂದರ್ಶನವನ್ನು ದಾಖಲು ಮಾಡುತ್ತಾ ಹೇಳುತ್ತಾರೆ: “ಈಗ ನನಗೆ ಅತ್ಯಂತ ಅವಿವೇಕವಾಗಿಯೂ ಹಾಸ್ಯಾಸ್ಪದವಾಗಿಯೂ ಧೂರ್ತವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ವಯಸ್ಸಿನವರೂ ಅನುಭವಶಾಲಿಯೂ ಆಗಿದ್ದ ಅವರು ಸೌಮ್ಯ ಸಾಂತ್ವನಕರ ಧ್ವನಿಯಿಂದ ಹೇಳಿದರು : “ಹಾಗಲ್ಲ, ಯಾವ ಭಾವನೆಯೂ ತನಗೆ ತಾನೇ ಅಸಮರ್ಥವಲ್ಲ, ಸಮರ್ಥನೊಬ್ಬನು ಬರುವ ತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲುದು. ಈಗ ನೋಡಿ, ಬಂಗಾಳಿ ಭಾಷೆ ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆ ಅಂದೂ ಇತ್ತು. ರವೀಂದ್ರನಾಥ ಠಾಕೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೇ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಗಳನ್ನು ಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿ ಮಾಡಬೇಕು. ನೀವು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವೆಂದು ತೋರಿಬಂದರೆ ನಾವು ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸಿಕೊಳ್ಳುತ್ತೇವೆ, ರವೀಂದ್ರರ ಸಾಹಿತ್ಯ ಇಂಗ್ಲಿಷ್‌ಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲಿಷ್‌ನಲ್ಲಿ ಸೃಜನ ಸಾಹಿತ್ಯ ಸೃಷ್ಟಿಮಾಡಲಾರಿರಿ. ಅದು ನಿಮಗೆ ಪರಭಾಷೆ, ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನಸಾಹಿತ್ಯ ಸೃಷ್ಟಿಯಾಗಬಲ್ಲುದು. ಅದರಲ್ಲೂ ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ಅದನ್ನು ಓದುವ ನಮಗೆ ಗೊತ್ತಾಗುತ್ತದೆ, ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.”

ಪುಟ್ಟಪ್ಪನವರ ಚೇತನದ ಹೊರಭಾಗ ಕಸಿನ್ಸ್‌ಅವರ ಉಪದೇಶವನ್ನು ತಿರಸ್ಕರಿಸಿತು. ಆದರೆ ಅವರ ಮಾತು ಇವರ ಹೃದಯವನ್ನು ತಟ್ಟಿತ್ತು. ಅಂತರಂಗದಲ್ಲಿ ಒಂದು ಗೊಂದಲ ತಲೆದೋರಿತ್ತು. “ಕನ್ನಡದಲ್ಲಿ ಬರೆಯುವುದೇ? ಯಾವ ಕನ್ನಡದಲ್ಲಿ ? ಹಳಗನ್ನಡ? ನಡುಗನ್ನಡ? ಮಲೆನಾಡಿನ ಆಡುಕನ್ನಡ? ಛೆ, ಛೆ ಎಲ್ಲಾದರೂ ಸಾಧ್ಯವೇ? ಛಂದಸ್ಸು? ವೃತ್ತವೇ? ಕಂದವೇ? ರಗಳೆಯೇ? ಷಟ್ಪದಿಯೆ ? ಸಾಂಗತ್ಯವೇ? ತ್ರಿಪದಿಯೇ?-ಸಾಧ್ಯವೇ ಇಲ್ಲ. ಶಬ್ದ ಸಂಪತ್ತು ಮತ್ತು ಛಂದಸ್ಸಿನ ದೃಷ್ಟಿಯಿಂದ ಇಂಗ್ಲಿಷ್‌ಎಲ್ಲಿ, ಕನ್ನಡ ಎಲ್ಲಿ?”

ಕವಿಯ ಇಂಗ್ಲಿಷ್‌ಓದು ಹೀಗೆ ವಾದ ಮಾಡುತ್ತಿದ್ದರೂ ಕವಿಯ ಮೂಲಭೂತ ಪ್ರತಿಭೆ ಕನ್ನಡದಲ್ಲಿ ಕವನ ರಚನೆಯನ್ನು ಪ್ರಾರಂಭಿಸಿಯೇ ಬಿಟ್ಟಿತು. ಇಂಗ್ಲಿಷಿನಲ್ಲಿ ತಾವೇ ರಚಿಸಿದ್ದ “ಏಪ್ರಿಲ್‌” ಎಂಬ ಕವನವನ್ನು ಕನ್ನಡಕ್ಕೆ ಅನುವಾದಿಸಿದರು. ಇಂಗ್ಲಿಷ್‌ಕಾವ್ಯಾಭಿಮುಖಿಯಾಗಿದ್ದ ಕುವೆಂಪು ಪ್ರತಿಭೆ ಕನ್ನಡ ಕಾವ್ಯಾಭಿಮುಖಿಯಾಯಿತು.

ಕುವೆಂಪು ಕನ್ನಡದಲ್ಲಿ ಕಾವ್ಯರಚನೆಗೆ ತೊಡಗಿ ಕನ್ನಡದ ಮೇರು ಸಾಹಿತಿಯಾಗಿ ಬೆಳೆದದ್ದು ಏಕಮುಖ ಕ್ರಿಯೆ ಅಲ್ಲ. ತಾವು ಬೆಳೆಯುತ್ತಾ, ಜೊತೆ ಜೊತೆ ಕನ್ನಡವನ್ನು ಬೆಳೆಸಿದ ಯಮಳ ಕ್ರಿಯೆ ನಡೆದದ್ದು ಸಾಹಿತ್ಯ ಲೋಕದ ಸೋಜಿಗಗಳಲ್ಲಿ ಒಂದು. ಅವರಂತೂ ಪೂರ್ಣ ಪ್ರಮಾಣದ, ವೈವಿಧ್ಯಪೂರ್ಣ ಪ್ರಮಾಣದ, ವೈವಿಧ್ಯಪೂರ್ಣವಾದ, ಅತ್ಯಂತ ಶ್ರೀಮಂತವಾದ ಸಾಹಿತ್ಯವನ್ನು ಸೃಷ್ಟಿಸಿದರು. ಹೀಗಾಗಿ ಅವರು ಸಾಹಿತ್ಯ ಜಗತ್ತಿನ ಗೊಮ್ಮಟನಾಗಿ ಬೆಳೆದರು. ಅವರು ರಚಿಸಿದ ಕೃತಿಗಳಿಂದ ಕನ್ನಡ ಸಾಹಿತ್ಯ ಗೌರವದ ಸ್ಥಾನಗಳಿಸಿತು. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಕುವೆಂಪು ಪ್ರಜ್ಞಾಪೂರ್ವಕವಾಗಿ ಕನ್ನಡದ ಭವ್ಯ ಭವನದ ನಿರ್ಮಾಣ ಕಾರ್ಯವನ್ನು ಕೈಗೊಂಡರು. ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ, ಅನಂತರ ಅನೇಕ ವರ್ಷಗಳ ಕಾಲ ಆ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಪ್ರಕಟಣ ಸಮಿತಿಯ ಅಧ್ಯಕ್ಷರಾಗಿ-ಬರಿಯ ಸಾಹಿತ್ಯಕ ಅಲ್ಲ, ವಿಜ್ಞಾನ, ತಂತ್ರಜ್ಞಾನ, ಮಾನವಿಕ ಶಾಸ್ತ್ರಗಳು-ಮುಂತಾದುವನ್ನು ಕುರಿತಂತೆ ಅಕ್ಷರಶಃ ಸಾವಿರಾರು ಪುಸ್ತಕಗಳ ಪ್ರಕಟಣೆಗೆ ಕಾರಣರಾದರು. ಹೀಗಾಗಿ ಕುವೆಂಪು ನಿಜವಾದ ಅರ್ಥದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡಿದರು.

ಅವರ ಕನ್ನಡ ಪ್ರೇಮವನ್ನು, “ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎಂದು ಅವರು ಘೋಷಿಸಿದುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ಎಂಬ ನಿಚ್ಚಳವಾದ ನಿಲುವನ್ನು ತಳೆದ ಅವರು ತಮ್ಮ ಆ ನಿಲುವನ್ನು ಎಂದೂ ಯಾವ ಕಾರಣಕ್ಕೂ ಬದಲಾಯಿಸಲಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್‌ಈ ಭಾಷೆಗಳ ಸ್ಥಾನಮಾನಗಳೇನು, ಅವುಗಳ ಅವಶ್ಯಕತೆ ಎಷ್ಟು ಎಂಬುದನ್ನು ಕುವೆಂಪು ಸ್ಪಷ್ಟವಾಗಿ ಹೇಳಿದ್ದಾರೆ :

“ಆಯಾ ಪ್ರಾಂತಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗೆ ಪ್ರಥಮ ಸ್ಥಾನ ಸಲ್ಲಬೇಕು. ಅಂತರ ಪ್ರಾಂತೀಯ ವ್ಯವಹಾರ ದೃಷ್ಟಿಯಿಂದ ಮತ್ತು ಕೇಂದ್ರದ ಆಡಳಿತ ದೃಷ್ಟಿಯಿಂದ ಅಖಿಲ ಭಾರತೀಯವಾದ ಸಂಯುಕ್ತ ಭಾಷೆಗೆ ಎರಡನೇ ಸ್ಥಾನ ಕೊಡಬೇಕು. ಅಂತರರಾಷ್ಟ್ರೀಯವಾದ ಭಾಷೆಗೆ ಅಥವಾ ಭಾಷೆಗಳಿಗೆ ಐಚ್ಛಿಕ ಸ್ಥಾನ ಕೊಡಬೇಕು. ಆಯಾ ಪ್ರಾಂತಗಳಲ್ಲಿ ಆಯಾ ದೇಶಭಾಷೆಗಳೇ ಆಡಳಿತ ಭಾಷೆಗಳಾಗಿರಬೇಕು. ಅಲ್ಲಿಯ ಶಿಕ್ಷಣವೆಲ್ಲ, ಎಲ್ಲ ಮಟ್ಟಗಳಲ್ಲಿಯೂ ದೇಶಭಾಷಾಮಾಧ್ಯಮದಲ್ಲಿಯೇ ಸಾಗಬೇಕು. ಅಲ್ಲಿಯ ಶಿಕ್ಷಣವೆಲ್ಲ, ಎಲ್ಲಮಟ್ಟಗಳಲ್ಲಿಯೂ ದೇಶ ಭಾಷಾಮಾಧ್ಯಮದಲ್ಲಿಯೇ ಸಾಗಬೇಕು. ಕನ್ನಡಕ್ಕೆ ಪ್ರಪಂಚದಲ್ಲಿ ಎಲ್ಲಾದರೂ ಸ್ಥಾನಮಾನ ದೊರಕಬೇಕಾದರೆ ಅದ ಇಲ್ಲೇ ಕರ್ನಾಟಕದಲ್ಲೇ, ಇನ್ನೆಲ್ಲಿಯೂ ಅಲ್ಲ… ಅಂದ ಮಾತ್ರಕ್ಕೆ ನಾನು ಕನ್ನಡವನ್ನು ಬಲಾತ್ಕಾರ ಭಾಷೆಯನ್ನಾಗಿ ಮಾಡಲು ಹೇಳುತ್ತಿಲ್ಲ. ಅದು ಪ್ರಥಮ ಭಾಷೆಯಾಗಿರಲಿ. ಮಾತೃಭಾಷೆಗೆ ಸಿಕ್ಕಬೇಕಾದ ಎಲ್ಲ ಗೌರವವೂ ಅದಕ್ಕೆ ದೊರೆಯಲಿ ಎಂಬುದಷ್ಟೇ ನನ್ನ ಅಭಿಪ್ರಾಯ.”

ಕುವೆಂಪು ಇಂಗ್ಲಿಷ್‌ದ್ವೇಷಿಯಲ್ಲ. ಕನ್ನಡ ಅಧ್ಯಾಪಕ ವರ್ಗದಲ್ಲಿ ಪಾಶ್ಚಾತ್ಯ ಸಾಹಿತ್ಯದಲ್ಲಿ ಅವರಿಗಿದ್ದಷ್ಟು ಆಳವೂ ವಿಶಾಲವೂ ಆದ ಓದನ್ನು ನಡೆಸಿದವರು ಅತಿ ವಿರಳ, ಇಲ್ಲವೆಂದರೂ ಸಲ್ಲುತ್ತದೆ. ಅವರೇ ಒಂದು ಕಡೆ ಹೇಳಿದ್ದಾರೆ. “ನಾನೇನು ಇಂಗ್ಲಿಷ್‌ಭಾಷೆಯ ದ್ವೇಷಿಯಲ್ಲಿ…. ಪರಮಾರಾಧಕ. ಕನ್ನಡದ ಹತ್ತು ಪಟ್ಟು ಇಂಗ್ಲಿಷ್‌ಗ್ರಂಥಗಳನ್ನು ಓದುತ್ತಿದ್ದೇನೆ. ಸ್ವಂತವಾಗಿ ಆರಿಸಿಕೊಂಡು ಇಂಗ್ಲಿಷ್‌ಕಲಿತವನಾದರೆ ಅವನಿಂದ ದೇಶಕ್ಕೆ ಉಪಕಾರ….”

ಕುವೆಂಪು ಅವರ ಆಕ್ಷೇಪಣೆಯೇನಿದ್ದರೂ, ಬಲಾತ್ಕಾರವಾಗಿ ಇಂಗ್ಲಿಷನ್ನು ಲಕ್ಷಾಂತರ, ಕೋಟ್ಯಾಂತರ ವಿದ್ಯಾರ್ಥಿಗಳ ಮೇಲೆ ಹೇರುವುದಕ್ಕೆ ಸಹಸ್ರಾರು ಗ್ರಾಮೀಣ ಪ್ರತಿಭೆಗಳು, ಇಂಗ್ಲಿಷ್‌ಕಲಿಯಲಾರದೆ, ವಿದ್ಯಾಭ್ಯಾಸವನ್ನು ಎಲ್ಲಿಗೆಂದರಲ್ಲಿಗೆ ನಿಲ್ಲಿಸಿ ಮುರುಟಿ ಹೋಗಿರುವುದನ್ನು ಕಂಡು ಅವರು ಕಣ್ಣೀರು ಸುರಿಸಿದ್ದಾರೆ. ನಮಗೆ ಎಂಥ ಇಂಗ್ಲಿಷ್‌ಬೇಕು, ಎಷ್ಟು ಬೇಕು, ಯಾರಿಗೆ ಬೇಕು ಎಂಬುದನ್ನು ಕುರಿತು ಅವರು ಆಳವಾಗಿ ಚಿಂತಿಸಿದ್ದಾರೆ. ಒಂದೆಡೆ ಅವರು ಅದನ್ನು ವಿವರಿಸಿದ್ದಾರೆ.

“ಇನ್ನು ಮುಂದೆ ಇಂಗ್ಲಿಷ್‌ಹಲವರು ಕಲಿಯುವ ಭಾಷೆಯಲ್ಲ; ಕೆಲವರು ಕಲಿಯಬೇಕಾದ ಭಾಷೆ, ಅನೇಕರಿಗೆ ಬೇಕಾದ ಇಂಗ್ಲಿಷಿನ ಮಟ್ಟವೆಂದರೆ ಅದನ್ನೋದಿ ಅರ್ಥಮಾಡಿಕೊಳ್ಳುವಷ್ಟೇ ಹೊರತು ಅದರಲ್ಲಿ ಸಂಭಾಷಿಸುವುದಾಗಲಿ, ಭಾಷಣ ಮಾಡುವುದಾಗಲಿ, ಬರೆಯುವುದಾಗಲಿ ಅಲ್ಲ.. ಇನ್ನು ಮುಂದೆ ಇಂಗ್ಲಿಷಿನ ಈ ನೀರು ನೀರು ಸಮಾರಾಧನ ನಿಲ್ಲಬೇಕು. ಅದಕ್ಕೆ ಬದಲಾಗಿ ಆಯ್ದ ಕೆಲವರಿಗೆ ಮಾತ್ರ ಗಟ್ಟಿ ಇಂಗ್ಲಿಷಿನ ಪುಷ್ಟಿಯೊದಗುವಂತೆ ನಮ್ಮ ವಿದ್ಯಾಭ್ಯಾಸ ಕ್ರಮದಲ್ಲಿ ಭಾಷೆಗಳ ಸ್ಥಾನ ನಿರ್ಣಯವಾಗಬೇಕು ; ಕೆಲವರಿಗೆ ಮಾತ್ರ ಇಂಗ್ಲಿಷ್‌ಚೆನ್ನಾಗಿಯೇ ಬೇಕು.”

ಇನ್ನು ಕುವೆಂಪುರವರ ಕವನಗಳ ಕೆಲವು ಕವನಗಳನ್ನು ಭಾಗಃಶವಾಗಿಯಾದರೂ ಪರಿಚಯಿಸಬಹುದು.

ಅವರ ಆಸಕ್ತಿ ವೈವಿದ್ಯವನ್ನು, ಭಾಷೆಯ ಸರಳತೆ-ಜಟಿಲತೆಗಳನ್ನು, ಉಕ್ತಿ ಸೌಂದರ್ಯವನ್ನು ಪರಿಚಯಿಸುವ ಸಲುವಾಗಿ, ಅವರ ಪ್ರಕೃತಿ ಗೀತೆಗಳಲ್ಲಿ ಕೆಲವು :

ಅಡಿಯ ಗೆಜ್ಜೆನಡುಗೆ ಹೆಜ್ಜೆಯಿಡುತ ಸುಗ್ಗಿ ಬರುತಿದೆ!
ಸುಗ್ಗಿ ಬರೆ ಹಿಗ್ಗಿತಿರೆ ಸಗ್ಗಸೊಗವ ತರುತಿದೆ!
ಕಣಿವೆಯಿಳಿದು, ತೆಮರನೇರಿ
ತರುಗಳಲ್ಲಿ ತಳಿರ ಹೇರಿ
ಹೊಸತು ಜೀವ ಕಳೆಯ ಬೀರಿ
ಸುಗ್ಗಿ ಮೂಡುತಿರುವುದು.

***

ಮೇರೆಯರಿಹದಿಹ ನೀಲಿಯಾಗಸವ
ಮುಡಿದಿಹ ಪರ್ವತ ಶೃಂಗವಿದು;
ಮಳೆಯ ಮೋಡಗಳು ಹಾರಿ ಬಂದಿಲ್ಲಿ
ತಾಂಡವಾಡುವ ರಂಗವಿದು.
ಗುಡುಗು ಮಿಂಚುಗಳು ಸರಸವಾಡುತ್ತ
ಸಿಡಿಲನು ಹಡೆಯುವ ತಾಣವಿದು:
ನೇಸರಿಂದುಗಳು ನಿಚ್ಚ ಪಯಣದಲಿ
ವಿಶ್ರಮಿಸುವ ನಿಲ್ದಾಣವಿದು.

ನವೋದಯ ಯುಗದ ಎಲ್ಲ ಪ್ರಮುಖ ಕವಿಗಳಲ್ಲಿ – ಅದರಲ್ಲೂ ಕುವೆಂಪು, ಬೇಂದ್ರೆ ಮತ್ತು ಪು. ತಿ. ನರಸಿಂಹಾಚಾರ್ಯ- ಈ ಮೂವರಲ್ಲಿ ಆಧ್ಯಾತ್ಮಿಕತೆ ಮತ್ತು ಲೌಕಿಕತೆಗಳು ಹಾಸುಹೊಕ್ಕಾಗಿರುವುದನ್ನು ಗಮನಿಸುತ್ತೇವೆ. ಆದಿಕವಿ ಪಂಪನಿಂದ ನವೋದಯ ಯುಗದ ಕವಿಗಳವರೆಗೆ ಅಧ್ಯಾತ್ಮ-ಲೌಕಿಕಗಳ ಬಗೆಗೆ ದೃಷ್ಟಿ ಬದಲಾಗುತ್ತ ಬಂದಿರುವುದು ಕಾಣುತ್ತದೆ. ಹತ್ತನೆಯ ಶತಮಾನದ ಪಂಪನಿಗೆ ಲೌಕಿಕ – ಅಧ್ಯಾತ್ಮಗಳು ಬೇರೆ ಬೇರೆಯಾಗಿ ಕಂಡವು. ಆದ್ದರಿಂದಲೇ ಲೌಕಿಕಕ್ಕೆ ಒಂದು ಕಾವ್ಯ, ಅಧ್ಯಾತ್ಮಕ್ಕೆ ಒಂದು ಕಾವ್ಯ ಎಂದು ಆತ ಮೀಸಲಾಗಿಟ್ಟ ಹದಿಮೂರನೆಯ ಶತಮಾನದಲ್ಲಿ ಹರಿಹರ ಇದನ್ನೊಂದು ಅತಿರೇಕಕ್ಕೆ ಒಯ್ದು, ಮನುಷ್ಯರ ಮೇಲೆ, ಸಾಯುವವರ ಮೇಲೆ ಕಾವ್ಯ ಬರೆಯುವುದೇ? ಬರೆಯುವುದಾದರೆ ಹರನನ್ನು ಕುರಿತು, ಹರಭಕ್ತರನ್ನು ಕುರಿತು ಬರೆಯಬೇಕು ಎಂದು ಒಂದು ರೀತಿಯ ಉಗ್ರವಾದಿಯಾದ. (ಇದರ ವಿಷಯದಲ್ಲಿ ಆತ ಎಷ್ಟು ನಿರ್ದಾಕ್ಷಿಣ್ಯನಾಗಿದ್ದ ಎಂಬುದನ್ನು ಅವನ ಸೋದರಳಿಯನಾದ ರಾಘವಾಂಕ ಕವಿ ಹೇಳಬಲ್ಲ-ಹರಿಶ್ಚಂದ್ರ ಕಾವ್ಯ ಬರೆದ ಎಂಬ ಕೋಪಕ್ಕೆ ಹರಿಹರ ಸೋದರಳಿಯನ ಹಲ್ಲುಗಳೆಲ್ಲವನ್ನೂ ಉದುರಿಸಿದ ಎಂದು ‘ದಂತಕಥೆ’ಯೇ!) ಶ್ರೇಷ್ಠ ಭಕ್ತ ಕವಿಯಾದ ಕುಮಾರವ್ಯಾಸನಿಗೆ ಲೌಕಿಕ ಆಧ್ಯಾತ್ಮಿಕತೆಗಳ ನಡುವೆ ವ್ಯತ್ಯಾಸ ಕಾಣಲಿಲ್ಲ. ರತ್ನಾಕರವರ್ಣಿ ತನ್ನ ಭರತೇಶ ವೈಭವದಲ್ಲಿ ಯೋಗ ಭೋಗಗಳ ಸಮನ್ವಯ ನಡೆಸಲು ಪ್ರಯತ್ನ ಪಟ್ಟಿದ್ದಾನೆಯಾದರೂ ಅವನ ಕಾವ್ಯ ನಾಕ ಪ್ರಪ್ರಥಮವಾಗಿ ‘ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ’ ಅಧ್ಯಾತ್ಮಪುರುಷ.

“ಋತ ಚಿನ್ಮಯೀ ಜಗನ್ಮಾತೆಗೆ” ಎಂಬ ಕವನದಲ್ಲಿ ಜೀವರಸವು ವಿವಿಧ ಕ್ರಿಯೆಗಳಲ್ಲಿ ವ್ಯಕ್ತವಾಗುವ ಸಂದರ್ಭಗಳಲ್ಲಿ ಆದಿಶಕ್ತಿಯ ರಸಾಸ್ವಾದನೆ ಮಾಡುತ್ತಿರುವುದನ್ನು ಕುವೆಂಪು ಕಂಡಿದ್ದಾರೆ :

ಹುಲ್ಲು ಬೆಳೆವಲ್ಲಿ, ನೆಲ್ಲು ಮೊಳೆವಲ್ಲಿ, ಕಾಯಿ ಪಣ್ಣುವಲ್ಲಿ
ಗೂಡು ಕಟ್ಟಿತಾಯ್ಮೊಟ್ಟಿಯಿಟ್ಟು ಮರಿ ಮಾಡಿ ಸಲಹುವಲ್ಲಿ
ಮಮತೆಯಂತೆ ಮೇಣ್ಕಾಮದಂತೆ ಮೇಣ್ ಪ್ರೇಮ ಭಾವದಲ್ಲಿ
ನಿನ್ನ ಚಿಚ್ಛಕ್ತಿ ತನ್ನ ನಿತ್ಯ ಸದ್ರಸವ ಸವಿವುದಿಲ್ಲಿ!

ಪ್ರಕೃತಿ ಕ್ರಿಯೆಯಲ್ಲಿ ಮಾತ್ರವಲ್ಲ, ಶೃಂಗಾರ ಕ್ರಿಯೆಯೂ ಆಧ್ಯಾತ್ಮಿಕತೆ ಹಾಸು ಹೊಕ್ಕಾಗಿರಬಲ್ಲದುದು ಎಂಬುದನ್ನೂ ಸೂಚಿಸುವ ಈ ಪಂಕ್ತಿಗಳನ್ನು ಗಮನಿಸಬಹುದು :

ಚಿರವಾಗಲಿ, ಚಿರವಾಗಲಿ, ಚಿರವಾಗಲಿ
ನಿನ್ನ ನೆನಹು ನನ್ನ ಮನದಿ, ಹೇ, ಗುರೂ!
ಶಿಶಿರ ಋತುವು ಗರಿಸುತಿರಲಿ
ವಿಪಿನದಂತರಂಗದಲ್ಲಿ
ಹೊಸ ವಸಂತನುಸಿರು ಹಸರಿ
ನಲಿಯುವಂತೆ ಕಾನನ
ನವೀನ ಜೀವನ

ಚಿರವಾಗಲಿ, ಚಿರವಾಗಲಿ, ಚಿರವಾಗಲಿ
ನಿನ್ನ ನೆನಹು ನನ್ನ ಮನದಿ ಹೇ ಗುರೂ!

ಚೆಲುವೆಯೊಮ್ಮ ಸುಳಿದು ಕಣ್ಗೆ
ಒಲುಮೆ ಕಿಡಿಯ ಸೂಸಲೆದೆಗೆ
ಕಿಚ್ಚು ಬಾಳನೆಲ್ಲ ಮುಚ್ಚಿ
ಹುಚ್ಚುಗೈವ ತೆರದಲಿ
ಪ್ರೇಮ ಭರದಲಿ!

ಕುವೆಂಪು ಹೂವು, ಹಸಿರು, ಸೂರ್ಯೋದಯ, ಸೂರ್ಯಾಸ್ತ, ಬಯಲು, ಬೆಳದಿಂಗಳು, ಆತ್ಮ ಪರಮಾತ್ಮ ಇವನ್ನೇ ವರ್ಣಿಸುತ್ತಾ ವಿರಮಿಸಿದ್ದರೆ ಅವರು ಯುಗದ ಕವಿಯಾಗಿ ಕೋಟ್ಯಂತರ ಜನರ ಗೌರವ, ಸ್ತುತಿ, ಕೃತಜ್ಞತೆಗಳಿಗೆ ಪಾತ್ರರಾಗುತ್ತಿರಲಿಲ್ಲ, ರಾಷ್ಟ್ರಕವಿ ಎಂಬ ಅತ್ಯಂತ ಹೆಮ್ಮೆಯ ಪ್ರಶಸ್ತಿಯೂ ಅವರಿಗೆ ದೊರಕುತ್ತಿರಲಿಲ್ಲ. ಮೇಲೆ ಹೇಳಿದವನ್ನೆಲ್ಲ ವರ್ಣಿಸುವುದರಲ್ಲಿ ತಲ್ಲೀನರಾಗಿದ್ದಾಗಲೇ, ನಮ್ಮ ಜನ್ಮೋದ್ದೇಶ ಏನು, ಭರತ ಖಂಡದ ಅಂದಿನ ಪರಿಸ್ಥಿತಿಯಲ್ಲಿ ತಾವು ವಹಿಸಬೇಕಾದ ಮಾತ್ರ ಕೇಳಿಸಿಕೊಂಡಿದ್ದು ಮತ್ತು ಅದಕ್ಕೆ ತಮ್ಮ ಜೀವನವನ್ನು ಶ್ರುತಿಗೊಳಿಸಿಕೊಂಡಿದ್ದು ಕನ್ನಡ ಸಾಹಿತ್ಯದ ಅಷ್ಟೇ ಅಲ್ಲ, ಸಾಮಾಜಿಕ ಚರಿತ್ರೆಯ ಅತಿ ಮುಖ್ಯವಾದ ಘಟನೆಯೂ ಆಯಿತು. ಒಂದು ಸಾವಿರ ವರ್ಷಗಳ ತನ್ನ ಇತಿಹಾಸದಲ್ಲಿ ಕನ್ನಡ ಸಾಹಿತ್ಯವು ವಿವಿಧ ಧರ್ಮಗಳಿಂದ ಪೋಷಕ ಸತ್ವವನ್ನು ಸ್ವೀಕರಿಸಿದೆ. ಜೈನ, ವೀರಶೈವ, ವೈದಿಕ-ಈ ಧರ್ಮದ ಕವಿಗಳು ಮಹಾ ಕಾವ್ಯಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ ಈ ಮಹಾಪ್ರತಿಭಾ ಪ್ರದರ್ಶನದ ಮೆರವಣಿಗೆಯಲ್ಲಿ ಒಬ್ಬನೇ ಒಬ್ಬನಾದರೂ ಶೂದ್ರನಾಗಲಿ, ಇತರ ಶೋಷಿತ ವರ್ಗದವನಾಗಲಿ ಇಲ್ಲದಿರುವುದು ಭರತಖಂಡದ ವರ್ಣವ್ಯವಸ್ಥೆಯ ಕರಾಳ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಅನೇಕ ಜನ ಹಿಂದುಳಿದ ವರ್ಗದ, ಕಷ್ಟ ಕಾಯಕದ ಜನ ವಚನಗಳನ್ನು ರಚಿಸಿದರು. ಐತಿಹಾಸಿಕ ದುರಂತದ ಭಾಗವಾಗ ಹೋದರು. ದಾಸ ಪಂಥದವರಲ್ಲಿ ಅತಿ ಕೆಳಸ್ತರದಿಂದ ಬಂದ ಕನಕದಾಸರು ತಮ್ಮ ರಚನೆಗಳಿಂದ ಆ ಪಂಥದಲ್ಲಿ ಭದ್ರವಾದ ಸ್ಥಾನವನ್ನು ಗಳಿಸಿದರು. ಆದರೂ ಅದು ಭಕ್ತಿ ಪ್ರವಾಹಕ್ಕೆ ಸೇರಿಕೊಂಡ ಒಂದು ಉಪವಾಹಿನಿಯೆಂದೇ ಗಣಿಸಲ್ಪಟ್ಟ ಕ್ರಿಯೆಯಾಯಿತು. ಮುಂದೆ ಇಪ್ಪತ್ತನೆಯ ಶತಮಾನದಲ್ಲಿ ಶ್ರೀಕಂಠೇಶಗೌಡರೆಂಬುವರು ಷೇಕ್ಸ್‌ಪಿಯರ್‌ನ ನಾಟಕಗಳನ್ನು ಸೊಗಸಾಗಿ ಅನುವಾದಿಸಿ ಹೆಸರು ಗಳಿಸಿದ್ದೇನೋ ಇದೆ.
ಈ ಹಿನ್ನೆಲೆಯಲ್ಲಿ ವರ್ಣವ್ಯವಸ್ಥೆಯ ಮೇಲಿನ ಮೂರು ವರ್ಣಗಳಿಂದ ಶೂದ್ರರೆಂದು ಕರೆಯಲ್ಪಡುತ್ತಿದ್ದ ಒಂದು ವರ್ಣದಿಂದ ಮೈ ಕೊಡವಿಕೊಂಡು ಮೇಲೆದ್ದ ಕವಿ ಒಂದು ಶತಮಾನವನ್ನೆಲ್ಲ ತುಂಬಿ ಸಾಹಿತ್ಯ ಕ್ಷೇತ್ರದ ‘ಗೊಮ್ಮಟೇಶ್ವರ ಪ್ರತಿಭೆ’ಯಾಗಿ ಅಂದರೆ “ಅಧ್ಯಾತ್ಮ ಔನ್ನತ್ಯ, ಕಲಾವೈಭವ ಈ ಮೂರು ಮಹತ್ತು, ಬೃಹತ್ತುಗಳು ಮೇಳವಿಸಿದ ಪ್ರತಿಭೆಯಾಗಿ ಬೆಳೆದದ್ದು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಅಪೂರ್ವ ಘಟನೆಯಾಗಿ ಎದ್ದು ಕಾಣುವಂತಾಗಿದೆ.

[1] ಶ್ರೀ ರಾಮಕೃಷ್ಣ ಪರಮಹಂಸ, ಸಂ. ೧. ಪು.೧೮-೧೯, ಶ್ರೀರಾಮಕೃಷ್ಣಾಶ್ರಮ, ಮೈಸೂರು ೧೯೯೬.

[2] ಕುವೆಂಪು ಸಮಗ್ರ ಕಾವ್ಯ, ಸಂ. ೧ ಪು. ೬೨೮.

[3] ನೆನಪಿನ ದೋಣಿಯಲ್ಲಿ ಪು. ೪೫೮-೯.

[4] ಕುವೆಂಪು ಸಮಗ್ರ ಕಾವ್ಯ, ಸಂಪುಟ೨, ಪು. ೧೧೫

[5] ನೆನಪಿನ ದೋಣಿಯಲ್ಲಿ, ಉದಯಕವಿ ಪ್ರಕಾಶನ, ೧೯೯೮ (ನಾಲ್ಕನೆಯ ಮುದ್ರಣ) ಪುಟಗಳು-೬೯೮-೭೧೮.