ನಮ್ಮ ಯಾರೊಬ್ಬರಲ್ಲಿರುವುದೂ ಒಂದೇ ವ್ಯಕ್ತಿತ್ವವಲ್ಲ. ಮನುಷ್ಯ ಎಂದರೇನೇ ಅನೇಕ ವ್ಯಕ್ತಿತ್ವಗಳ ಮಿಶ್ರಣ. ಉದಾಹರಣೆಗೆ ನಾನೊಬ್ಬ ಲೇಖಕ ಹಾಗೆಯೇ ನಾನು ಅಧ್ಯಾಪಕ, ತಂದೆ, ಮಗ, ಗಂಡ ವಿಚಾರವಾದಿ. ಹೀಗೆ ಅನೇಕ ವ್ಯಕ್ತಿತ್ವಗಳು ನಾನು ಎಂಬ ಈ ವ್ಯಕ್ತಿಯಲ್ಲಿ ಸಮಾವೇಶಗೊಂಡಿವೆ. ಈ ಮಾತು ಕುವೆಂಪು ಅವರ ವಿಷಯದಲ್ಲೂ ನಿಜ. ಅವರು ಕವಿ, ಅಧ್ಯಾಪಕ, ತಂದೆ ಹೀಗೆ. ತಾದರೆ ಹೆಚ್ಚು ಜನರಲ್ಲಿಲ್ಲದ ಮತ್ತೊಂದ ವಿಶೇಷ ವ್ಯಕ್ತಿತ್ವ ಅವರಲ್ಲಿ ಮೂಡುವುದು ಅನಿವಾರ್ಯವಾಗಿತ್ತು. ಅದು ಸಮಾಜ ಸುಧಾರಕನ ವ್ಯಕ್ತಿತ್ವ.

ಕುವೆಂಪು ಅವರಲ್ಲಿನ ಸಮಾಜ ಸುಧಾರಕ ವ್ಯಕ್ತಿತ್ವ ಅವರ ಕಾಲದ ಪೂರ್ಣ ಸಮಯದ ಸಮಾಜ ಸುಧಾರಕರ ವ್ಯಕ್ತಿತ್ವಕ್ಕಿಂತ ಸ್ವಲ್ಪ ಹೆಚ್ಚು ಸ್ಪಷ್ಟವಾಗಿ ಎದ್ದು ಕಾಣುವಂತೆ ಬೆಳೆದು ನಿಂತಿತ್ತು. ಅದಕ್ಕೆ ಮುಖ್ಯವಾದ ಕಾರಣವೆಂದರೆ ತಾವು ಕವಿ ಎಂಬ ಪ್ರಜ್ಞೆ ಅವರಿಗಿದ್ದದ್ದು. ಕವನ ರಚನೆಯ ಆರಂಭದಲ್ಲಿಯೇ ಅಸಂಖ್ಯಾತ ಶ್ರೋತ್‌ಋಗಳನ್ನು ಪಡೆಯುವ ಭಾಗ್ಯ ಅವರದಾಗಿತ್ತು. ಅದಕ್ಕೆ ಅದರ ಕಾವ್ಯ ಸತ್ವ ಕಾರಣವಾಗಿದ್ದಂತೆಯೇ ನವೋದಯವೆಂಬ ಹೊಸ ರೀತಿಯ ಕಾವ್ಯ ಪ್ರಕಾ?ರಕ್ಕೆ ಕಿವಿದೆರೆಯುವ ಆತುರ ಉತ್ಸಾಹಗಳೂ ಜನರಲ್ಲಿದ್ದುದೂ ಕಾರಣವಾಯಿತು. ಇನ್ನೊಂದು ಮುಖ್ಯ ಅಂಶವನ್ನು ಗಮನಿಸಬೇಕಾಗಿದೆ. ರಸಾನುಭವವನ್ನೂ ನೀಡುವ ಸಾಹಿತ್ಯ ಸಂಪತ್ತನ್ನು ಸೃಷ್ಟಿಸುವ ಸಹಜ ಶಕ್ತಿಯನ್ನು ಪಡೆದಿದ್ದ ಕುವೆಂಪು ಜನರ ವಿಚಾರಶಕ್ತಿಯನ್ನು ಎಚ್ಚರಗೊಳಿಸುವ ಅವಶ್ಯಕರ್ತವ್ಯ ತಮ್ಮದು ಎಂದು ಭಾವಿಸಿದರು. ಪದ್ಯ, ಗದ್ಯ, ನಾಟಕ, ಭಾಷಣ-ಈ ಎಲ್ಲ ಮಾಧ್ಯಮಗಳನ್ನು ಅವರು ವಿಚಾರ ಪ್ರಚೋದನೆಗೆ ಬಳಸಲು ಮೀಸಲಾಗಿಟ್ಟರು.

ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಲು ಅವರಿಗೆ ಅನೇಕ ಅಧಿಕಾರಗಳು ಜನ್ಮಸಿದ್ಧವಾಗಿ ಪ್ರಾಪ್ತವಾದುವು. ಮೊದಲನೆಯದು ಹುಟ್ಟು ಜನ್ಮತಃ ಶೂದ್ರರಾದುದರಿಂದ ಉತ್ತಮ ವರ್ಗದ ಜನಾಂಗವು ತಮ್ಮ ನಡುವೆ ವಿದ್ಯೆ, ಸಂಸ್ಕೃತಿಗಳು ಹರಡದಂತೆ ಹೂಡಿದ್ದ ಹುನ್ನಾರುಗಳೆಲ್ಲಕ್ಕೂ ಅವರು ಬಲಿಯಾಗಿ ಅವುಗಳ ಭೀಕರತೆಯನ್ನು ಸ್ವಂತ ಅನುಭವದಿಂದ ಕಂಡುಕೊಂಡರು. ಎರಡನೆಯದಾಗಿ ಬಾಲ್ಯ ತಾರುಣ್ಯಗಳಲ್ಲಿಯೇ ಜಿಜ್ಞಾಸು ಬುದ್ಧಿಯನ್ನು ಬೆಳೆಸಿಕೊಂಡ ಅವರಿಗೆ ಸಂಪ್ರದಾಯವು ಶತಶತಮಾನಗಳಿಂದ ಸೃಷ್ಟಿಸಿ ಹರಡಿದ್ದ ಮೂಢನಂಬಿಕೆಗಳು ಹೇಗೆ ಜನಾಂಗ ಜನಾಂಗಗಳನ್ನೇ ಮಾನಸಿಕವಾಗಿ ಪಾರ್ಶ್ವವಾಯುಗ್ರಸ್ತರನ್ನಾಗಿ ಮಾಡಬಹುದು ಎಂಬುದನ್ನು ಕಣ್ಣಾರೆ ಕಂಡರು. ಜೊತೆಗೆ ಬೌದ್ಧಿಕವಾಗಿ ದಾಸ್ಯಕ್ಕೆ ಸಿಕ್ಕಿದ್ದ ಒಂದು ಸಮಾಜವು, ಅದರ ಕತ್ತಿನ ಕುಣಿಕೆಯನ್ನು ಬಿಚ್ಚಿಹಾಕಿ, ನಿನಗೆ ಸ್ವಾತಂತ್ರ್ಯ ಬಂದಿದೆ. ನೀನು ಹೋಗು ಎಂದಾಗಿ ನಿನ್ನ ಸ್ವಾತಂತ್ರ್ಯದ ಸ್ವಭಾವವನ್ನು ಗ್ರಹಿಸುವುದಿಲ್ಲ. ಅದು ಸ್ವತಂತ್ರ ಎಂಬುದನ್ನು ಚುಚ್ಚಿ ಚುಚ್ಚಿ ಹೇಳಬೇಕಾಗುತ್ತದೆ. ಈ ಸ್ಥಿತಿಯನ್ನು ಕಣ್ಣಾರೆ ಕಂಡವರು ಕುವೆಂಪು. ಅದನ್ನು ಕಂಡು ಅವರು ಮೊದಲು ಮರುಗಿದರು. ಅನಂತರ ಜೀವಮಾನದ ಕೊನೆಯವರೆಗೂ ಕುದಿದರು.

ಇವೆಲ್ಲದರ ಜೊತೆಗೆ ಅವರಿಗೆ ಸ್ವಾಮಿ ವಿವೇಕಾನಂದರ ಮಿಂಚಿನ ವಾಣಿಯ ಸ್ಫೂರ್ತಿ ಆವೇಶಗಳು ದೊರೆತವು. ಭಾರತದ ಮೌಢ್ಯ ಬಡತನಗಳನ್ನು ಕಂಡು ಕಣ್ಣೀರು ಹರಿಸಿದ ವಿವೇಕಾನಂದರು ಕುವೆಂಪು ಅವರಿಗೆ ಆದರ್ಶವಾದರು.

ಈ ಎಲ್ಲದರಿಂದ ಒಂದು ಜನಾಂಗವನ್ನು ಎಚ್ಚರಿಸುವ, ಮೂಢನಂಬಿಕೆಗಳಿಂದ ಅದನ್ನು ಪಾರುಮಾಡುವ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವವನ್ನು ಅದರಲ್ಲಿ ಬಿತ್ತಿ ಬೆಳೆಸುವ ಜವಾಬ್ದಾರಿತಮ್ಮದು ಎಂದು ಕುವೆಂಪು ಭಾವಿಸಿದರು.

ಇನ್ನು ಕುವೆಂಪು ಸಾಹಿತ್ಯದಲ್ಲಿ ಈ ವೈಚಾರಿಕತೆ ಹೇಗೆ ಹರಳುಗಟ್ಟಿದೆ ಎಂಬುದನ್ನು ಕೆಲವು ನಿದರ್ಶನಗಳಿಂದ ಪರಿಶೀಲಿಸಬಹುದು.

ಎಂತಹ ವಿಚಾರಮತಿಗಳ ಮನಸ್ಸನ್ನೂ ಗೊಂದಲಕ್ಕೆ ನೂಕಿ, ಅವರು ತಾವು ಓದಿದ ವೈಚಾರಿಕ ಸಾಹಿತ್ಯವನ್ನೆಲ್ಲಾ ಮರೆತು, ತಾವು ಬೋಧಿಸುತ್ತಿರುವ ವಿಜ್ಞಾನಕ್ಕೆ ತಿಲಾಂಜಲಿ ಕೊಟ್ಟು ತಮ್ಮನ್ನು ತಮ್ಮ ಶಿಷ್ಯವರ್ಗವನ್ನೂ ಮೌಢ್ಯದ ಕೂಪಕ್ಕೆ ನೂಕುತ್ತಿರುವಂತೆ ಮಾಡಲು ಕಾರಣವಾಗಿರುವ ಒಂದು ಕಪಟ ತಂತ್ರ “ಪವಾಡ”. ಪ್ರಕೃತಿಯಲ್ಲಿ ಒಂದು ಮೂಲಭೂತವಸ್ತು ಮತ್ತೊಂದು ಮೂಲಭೂತ ವಸ್ತುವಾಗುವುದು ಉದಾಹರಣೆಗೆ ಕಬ್ಬಿಣ ಚಿನ್ನವಾಗುವುದು-ಇಲ್ಲವೇ ಶೂನ್ಯದಿಂದ ಏನಾದರೂ ಪ್ರತ್ಯಕ್ಷವಾಗುವುದು ವೈಜ್ಞಾನಿಕವಾಗಿ ಅಸಾಧ್ಯ ಎನ್ನುವುದು ಸಿದ್ಧವಾಗಿದ್ದರೂ, ಅಂತಹವುಗಳನ್ನು ಮಾಡುತ್ತೇವೆ ಎನ್ನುವುದರ ಕಪಟಜಾಲಕ್ಕೆ ತಾವಾಗಿ ಸಿಕ್ಕಿಕೊಳ್ಳುವ ಆತುರ ಅನೇಕರಿಗಿದೆ. ಕುವೆಂಪು ತಮ್ಮ “ಕಿಂಕಿಣಿ” ಎನ್ನುವ ವಚನಕವನಗಳ ಸಂಕಲನದಲ್ಲಿ “ಪವಾಡ ಸಾಕ್ಷಿ” ಎಂಬ ಒಂದು ವಚನಕವನದಲ್ಲಿ ಕೇಳುತ್ತಾರೆ : “ಕಲ್ಲು ಕಲ್ಲಾಗಿರುವುದೇ ಮಹತ್ತರ ಪವಾಡವಲ್ಲವೇನು ?” ಇಂದು ವಿಜ್ಞಾನದ ಬಾಲ ವಿದ್ಯಾರ್ಥಿಗಳಿಗೂ ಈ ವಿಷಯ ಗೊತ್ತು. ಅನೇಕ ಇಲೆಕ್ಟ್ರಾನ್‌, ಪ್ರೋಟಾನ್‌, ನ್ಯೂಟ್ರಾನ್‌ಗಳು, ಜಡವೆಂಬುದುರ ಕಣಕಣದಲ್ಲಿಯೂ ಹೇಗೆ ಚಲಿಸುತ್ತಿದೆ ಎಂಬುದು. ಅವುಗಳ ಚಲನೆಯ ಕ್ರಮವಲ್ಲದ ಕ್ರಮದಲ್ಲೂ ಅತ್ಯಂತ ಕಿಂಚಿತ್ ಬದಲಾವಣೆಯಾದರೂ ಕಲ್ಲು, ತನ್ನ ಕಲ್ಲುತನವನ್ನು ಕಳೆದುಕೊಂಡು ಬೇರೆ ಅಚೇತನವೋ ಅಥವಾ ಸಚೇತನವೋ ಆಗಿಬಿಡುವ ಸಾಧ್ಯತೆ ಇದೆ. ಆದರೆ ಪ್ರಕೃತಿ ತನ್ನ ಶಿಲಾನಿಷ್ಠುರ ನಿಯಮಗಳಿಂದ ವಿನಾಕಾರಣ ಒಂದು ವಸ್ತು ಮತ್ತೊಂದಾಗದಂತೆ ನೋಡಿಕೊಳ್ಳುತ್ತಿದೆ. ಈ ನಿಯಮಗಳ ಪಾಲನೆಯ ಇನ್ನೂ ಕೆಲವು ಉದಾಹರಣೆಗಳನ್ನು ಕವಿ ಅಲ್ಲೇ ನೀಡಿದ್ದಾರೆ :

“ನಿನ್ನ ಕಾಲಡಿಯಲ್ಲಿ ನೋಡಿದರೆ ಅಲ್ಲಿ ಬೆಳೆದು ನಳನಳಿಸುವೆಳೆವುಲ್ಲು ಬಹುಕೋಟಿ ಯೋಜನೆಗಳಾಚೆಯಿರು ಆಧಾರಿಕೆಗೂ…

ಒಂದು ಹಲ್ಲಿಯ ಕಣ್ಣು ಕಂಭವನೊಡೆದು ಮೂಡಿ ಬರುವ
ನೃಸಿಂಹನಿಗೇನು ಕಡಮೆಯ ಪವಾಡವಲ್ಲ!
ನಿನ್ನೊಂದು ಕೈ ಬೆರಳ ಕುಣಿಕೆಯ ರಚನೆ ರವಿಯ ಸುತ್ತಲೂ ಸುತ್ತುತಿಹ
ಗ್ರಹಗಳ ಚಲನೆಗಿಂತಲೇನು ಕೀಳಾದ ಪವಾಡವಲ್ಲ!

ಇಂತಹ ನಿದರ್ಶನಗಳನ್ನು ಕಾವ್ಯಮಯವಾಗಿ ನೀಡಿ ಕುವೆಂಪು ಜನರ ಮನಸ್ಸನ್ನು ವಿಜ್ಞಾನದ ನಿಯಮಗಳತ್ತ ತಿರುಗಿಸಲು ಪ್ರಯತ್ನಿಸಿದರು. ಆದರೆ ಒಂದು ಹಂತದಲ್ಲಿ ಅವರಿಗೆ ಜನರು ತಾವು ಪದ್ಯದಲ್ಲಿ ಹೇಳುತ್ತಿರುವುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬ ಸಂದೇಹ ಬಂದಿತು. “ಸಂಸ್ಕೃತಿಕ್ರಾಂತಿಗೆ ಕಹಳೆನಾಂದಿ” ಎಂದು ಅನಂತರ ಅವರೇ ಹೆಸರು ಕೊಟ್ಟ ಒಂದು ಉಪನ್ಯಾಸದಲ್ಲಿ ಅವರು ಇದನ್ನು ಪ್ರಸ್ತಾಪಿಸಿದ್ದಾರೆ. ಅವರ ಗದ್ಯ, ನಾಟಕ, ಉಪನ್ಯಾಸ ಕೊನೆಗೆ ವಿಮರ್ಶೆ ಇವೆಲ್ಲವೂ ಸಾಹಿತ್ಯವೇ, ಕಾವ್ಯಮಯವೇ. ಆದುದರಿಂದ ಅವರ ಉಪನ್ಯಾಸದಿಂದ ಎತ್ತಿ ಹೇಳುವ ಈ ಭಾಗವೂ ಅವರ ಸಾಹಿತ್ಯವೇ ಆಗಿದ್ದು ನಾವೀಗ ಚರ್ಚಿಸುತ್ತಿರುವ ವಿಷಯದ ಮೇಲೆ ಬೇಕಾದಷ್ಟು ಬೆಳಕು ಚೆಲ್ಲುತ್ತದೆ. ಕುವೆಂಪು ಹೇಳಿದರು :

“ನಾನು ಮೂವತ್ತು, ಮುವತ್ತೈದು ವರ್ಷಗಳ ಹಿಂದೆಯೆ ಮನುಧರ್ಮ ಶಾಸ್ತ್ರದ ವಿಚಾರವನ್ನು ಒಂದು ಪದ್ಯದಲ್ಲಿ ಬರೆದೆ, ಅದು ಚಿನ್ನದ ಖಡ್ಗ ಇದ್ದ ಹಾಗೆ ಎಂದು ತೋರುತ್ತದೆ. ಏನೂ ಕೆಲ್ಸಾನೆ ಮಾಡೊಲ್ಲ ಅಂತ ಕಾಣ್ಸುತ್ತೆ. ಗದ್ಯದಲ್ಲಿ ಬರೆದು ಒರಟಾಗಿ ಹೋದರೆ ಏನಾದರೂ ಕೇಳ್ತಾರೋ ಏನೋ ಪದ್ಯದಲ್ಲಿ ಆದಕೂಡಲೇ ಒಳ್ಳೆ ಸೊಗಸಾಗಿ ಹಾಡಿಬಿಟ್ಟು ಅದನ್ನು ಅನುಸರಿಸೋದೆ ಇಲ್ಲ! ಮೂವತ್ತೈದು ವರ್ಷಗಳ ಹಿಂದೆ!

ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ಅವನ ಕಾಲಕ್ಕೆ ಏನಿತ್ತೊ ಅವನ್ನು ಬರೆದಿಟ್ಟ ಅದನ್ನು ಈ ಹೊತ್ತು “ಪಿಯು” ಎಂತ ತೆಗೆದುಕೊಂಡರೆ ನಾವು ಶುದ್ಧ ಅವಿವೇಕಿಗಳಷ್ಟೆ

ನಿನ್ನದೆಯ ದನಿಯೆ ಋಷಿ! ಮನು ನಿನಗೆ ನೀನು!
ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವುದು
ಶಾಸ್ತ್ರಪ್ರಮಾಣವದಕಿರಲೆಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವುದು
ಶಾಸ್ತ್ರಪ್ರಮಾಣವದಕಿರಲೆಬೇಕೇನು?

ಜನ್ಮಾಂತರ, ದೈವ, ವಿಧಿ-ಇದೆಲ್ಲ ನಮ್ಮ ಬದುಕನ್ನು ನಿಯಂತ್ರಿಸುತ್ತಿದೆಯೆ? ಶತಶತಮಾನಗಳ ಕಾಲ. ಈ ಭಾವನೆಗಳನ್ನೆಲ್ಲ ಪುರೋಹಿತವರ್ಗವು ತಮ್ಮ ತಲೆಯಲ್ಲೂ ತುಂಬಿಕೊಂಡು, ಓದು ಬರಹ ಬಾರದ, ವಿಚಾರಶಕ್ತಿಯೇ ಇಲ್ಲದ ಜನರ ತಲೆಯಲ್ಲೂ ತುಂಬಿ ಎಲ್ಲರ ತಲೆಗಳನ್ನೂ ಗೊಬ್ಬರದ ಗುಂಡಿಗಳನ್ನಾಗಿ ಮಾಡಿದ್ದಾರೆ. ಕಷ್ಟ ಬಂದಾಗ ಇತರರು ಆಕ್ರಮಣ ಮಾಡಿದಾಗ ಮಂತ್ರವನ್ನು ಜಪಿಸುತ್ತಾ ಕುಳಿರೆ ಏನಾಗುತ್ತದೆ ಎಂಬುದನ್ನು ಧ್ರಾಂ ಧ್ರೀ ಧ್ರೂಂ! ಎಂಬ ಕವನದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ. ಘಜನಿಯ ಮಹಮೂದನು ದಂಡೆತ್ತಿ ಬಂದಿದ್ದಾನೆ. ರಾಜಸ್ಥಾನವನ್ನೆಲ್ಲ ಆಕ್ರಮಿಸಿಕೊಂಡು ದೂರದ ಗುಜರಾತಿನ ಕಡೆಗೆ ದೃಷ್ಟಿ ಹಾಯಿಸಿದ. ಅಲ್ಲಿತ್ತು ಸೋಮನಾಥ ದೇವಾಲಯ. ಅತ್ಯಂತ ಶ್ರೀಮಂತವಾಗಿದ್ದ ಆ ದೇವಾಲಯದ ಮೇಲೆ ಮಹಮ್ಮದನ ಸೈನಿಕರ ಆಕ್ರಮಣ ನಡೆಯಿತು. “ಬೆಬ್ಯತ್‌, ಬೆದರಿತು ವೈದಿಕ ಶಾಂತಿ.” ಕತ್ತಿಯನ್ನು ಹರಿತಮಾಡಿಕೊಂಡರೆ, ಇಲ್ಲ. ಯುದ್ಧಕ್ಕಾಗಿ ವ್ಯೂಹರಚನೆ ಮಾಡಿದರೆ. ಅದೂ ಇಲ್ಲ. ಮತ್ತೇನು ಮಾಡಿದರು? “ಮಂತ್ರಗಿಂತ್ರಗಳ ಹೇಳುತಲಿದ್ದರು ಆ ನಿಲಯದ ಪೂಜಾರಿಗಳು, ದೇವರ ಸೋಮಾರಿಗಳು!” “ಅಸ್ತ್ರಶಸ್ತ್ರಗಳ ಸೇರಿಸಲಿಲ್ಲ; ರಣದಾಳುಗಳನ್ನು ಕೂಡಿಸಲಿಲ್ಲ. ಶತ್ರುವಿನಾಶಕ ಮಂತ್ರವನೊಂದನು ಹಗಲಿರುಳೂ ಹುಡುಕಿದರೆಲ್ಲ! ಕಡೆಗೆ ಆ ಮಂತ್ರ ಸಿಕ್ಕಿತಪ “ಧ್ರಾಂ ಧ್ರೀಂ ಧ್ರೂಂ! ಶತ್ರುಗಳು ಬಂದಾಗ ಆ ಮಂತ್ರವನ್ನು ಜಪಿಸಿದರು. ಮಂತ್ರದಿಂದಲೇ ಶಾಪಹಾಕಿದರು. ಗುಡಿ ಹಾಳಾಯಿತು. ವಿಗ್ರಹಗಳೂ ಹಾಳಾದುವು. ಆದರೆ ಮಂತ್ರದ ಮಹಿಳೆ ಖಂಡಿತವಾಗಿಯೂ ಸ್ಥಾಪಿತವಾಯಿತು, ಹೀಗೆ!

ಖಲಮ್ಲೇಚ್ಛರು ಸತ್ತೇ ಸತ್ತರು!
ಬಹುಕಾಲಾನಂತರದಲ್ಲಿ!

ಕುವೆಂಪು ಅವರು ವೈಚಾರಿಕತೆಯನ್ನು ತಮ್ಮದೇ ಐದು ಪಂಕ್ತಿಗಳಲ್ಲಿ ಭಟ್ಟಿಯಿಳಿಸಿ ಹೇಳಿದ್ದಾರೆ :

ಹಳೆಮತದ ಕೊಳೆಯೆಲ್ಲ ಹೊಸ ಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ ; ಬರಲಿ ವಿಜ್ಞಾನ ಬುದ್ಧಿ.
ವೇದ ಪ್ರಮಾಣತೆಯ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ
ತರುಣರಿರ ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ.