ಕುವೆಂಪು ಕನ್ನಡದ ಮಹಾಕವಿಗಳಲ್ಲಿ ಒಬ್ಬರು. ಶ್ರೀ ಅರವಿಂದರು ಆಧುನಿಕ ಭಾರತದ ಮಹಾ ಋಷಿಗಳಲ್ಲಿ ಒಬ್ಬರು, ಅಲ್ಲದೆ ‘ಸಾವಿತ್ರಿ’ ಎಂಬ ಹೆಸರಿನ ಮಹಾಕಾವ್ಯವನ್ನು ಇಂಗ್ಲಿಷ್‌ನಲ್ಲಿ ರಚಿಸಿ ಮಹಾಕವಿ ಎಂಬ ಗೌರವಕ್ಕೂ ಪಾತ್ರರಾದವರು. ಆದರೂ, ಶ್ರೀ ಅರವಿಂದರು ಜಗತ್ತಿನಾದ್ಯಂತ ಮಹರ್ಷಿಯೆಂದೂ, ಮಹಾದಾರ್ಶನಿಕರೆಂದೂ ಪ್ರಸಿದ್ಧರಾಗಿದ್ದಾರೆ.

ಅಧ್ಯಾತ್ಮ ಅನುಭಾವ, ದರ್ಶನ-ಇವುಗಳಲ್ಲಿ ಬಾಲ್ಯದಿಂದಲೂ ಸಹಜವಾದ ಆಸಕ್ತಿಯನ್ನು ಹೊಂದಿದ್ದ ಕುವೆಂಪು ತಮ್ಮ ತಾರುಣ್ಯದ ದಿನಗಳಲ್ಲಿ ದಕ್ಷಿಣೇಶ್ವರದ ಮೇಲೆ ಮಾನವ ಶ್ರೀ ರಾಮಕೃಷ್ಣರಿಂದಲೂ, ಅವರ ಶಿಷ್ಯ ವಿಶ್ವವಿಖ್ಯಾತ ಸನ್ಯಾಸಿ ಸ್ವಾಮಿ ವಿವೇಕಾನಂದರಿಂದಲೂ ಬಹುಮಟ್ಟಿಗೆ ಪ್ರಭಾವಿತರಾದರು. ಅನಂತರ, ಆ ವೇಳೆಗೆ, ಬಾನೆತ್ತರ ಬೆಳೆದು ನಿಂತಿದ್ದ ಮಹರ್ಷಿ ಅರವಿಂದರ ದಾರ್ಶನಿಕ ವ್ಯಕ್ತಿತ್ವವು ಕುವೆಂಪು ಅವರನ್ನು ಅನಿವಾರ್ಯವಾಗಿ ಆಕರ್ಷಿಸಿತು. ಅಷ್ಟು ಹೊತ್ತಿಗಾಗಲೇ ಪೂರ್ವ ಪಶ್ಚಿಮ ದೇಶಗಳ ಪ್ರಮುಖ ದಾರ್ಶನಿಕರ ಕೃತಿಗಳನ್ನು ಕುವೆಂಪು ಅಧ್ಯಯನ ಮಾಡಿ ಅವುಗಳ ಸಾರಭೂತ ತತ್ವಾಂಶಗಳನ್ನು ರಕ್ತಗತ ಮಾಡಿಕೊಂಡಿದ್ದರು. ಇದು ಅರವಿಂದರ ದಾರ್ಶನಿಕ ಕೃತಿಗಳ ಅಧ್ಯಯನಶಕ್ತಿ ಅತ್ಯಗತ್ಯವಾಗಿ ಆಗಲೇ ಬೇಕಾಗಿದ್ದ ಪೂರ್ವ ಸಿದ್ಧತೆಯಾಗಿತ್ತು. ಏಕೆಂದರೆ ಅರವಿಂದರ ತತ್ವಪ್ರತಿಪಾದನೆ ಯಾವ ತತ್ವಶಾಸ್ತ್ರದ ವಿದ್ಯಾರ್ಥಿಗೂ ಬಾಲಪಾಠವಾಗುವುದು ಸಾಧ್ಯವೇ ಇಲ್ಲ. ಏನಿದ್ದರೂ, ಇಂಗ್ಲಿಷ್‌ಭಾಷೆಯಲ್ಲಿಯೂ, ಪೂರ್ವಪಶ್ಚಿಮಗಳ ತತ್ವ ಹಿಮಾಲಯಗಳ ಯಾತ್ರೆಯಲ್ಲಿಯೂ ನಿಪುಣನಾದವನಿಗೆ ಅದು ಪರಿಣತಪಾಠವಾಗಲು ಸಾಧ್ಯ.

ಅಂಥದೊಂದು ಸಿದ್ಧಸ್ಥಿತಿಯಲ್ಲಿದ್ದ ಕುವೆಂಪು ಅವರಿಗೆ ಅರವಿಂದರ ಕೃತಿಗಳ, ಅದರಲ್ಲೂ “ದಿ ಲೈಫ್‌ಡಿವೈನ್‌” ಕೃತಿಯ ಪರಿಚಯವಾದದ್ದು, ಮೇರೆಯರಿದ ಸಾಗರದಲ್ಲಿ, ಸತ್ಯಸಾಕ್ಷಾತ್ಕಾರದ ಕಡೆಗೆ, ಏಕಾಂಗಿಯಾಗಿ ಯಾತ್ರೆ ಹೊರಟಿದ್ದ ಹಾಯಿದೋಣಿಗೆ, ಅತ್ಯಾಧುನಿಕ ಎಂಜಿನನ್ನು ಜೋಡಿಸಿದಂತಾಯಿತು! ಅಂಥದೊಂದು ನೆರವು ತಮಗೆ ದೊರಕಿತು ಎಂಬುದನ್ನು ಕವಿ ‘ಶ್ರೀ ಅರವಿಂದರರಿಗೆ’ ಎಂಬ ತಮ್ಮ ಕವನದಲ್ಲಿ ಹೇಳಿದ್ದಾರೆ :

ಪ್ರಾಚ್ಯ ಪಾಶ್ಚಾತ್ಯ ತತ್ವಜ್ಞಾನ ಖನಿಗಳಲ್ಲಿ
ತೊಳತೊಳಲಿ ಹುಡುಕಿ ಬಹು ವಜ್ರಗಳನಾಯ್ಡು ನಾಂ
ಶ್ರೀಮಂತನಾಗಿರ್ದೊಡಂ, ಹೇ ಪೂರ್ಣಯೋಗೀಂದ್ರ,
ಕೊನೆಗೆ ನಿನ್ನೀ ಮೇರು ಕೃತಿಯ ದರ್ಶನ ಶಿರದ
ಮೇರುವುನ್ನತಮತಿಯ ಮಾನಸ ಸರೋವರದಿ
ಪೂರ್ಣತೃಪ್ತಿಯ ನೀಂಟೆ ಶಾಂತವಾದುದು ನನ್ನ
ಧೀತೃಷ್ಣೆ, ಬುದ್ಧಿ ತಣಿವನ್ನೆಗಂ ಸಿದ್ಧಿ ತಾಂ
ಸಂದಿಗ್ಧವೈನೆ? ಮತಿಯನು ಮತಿಯೆ ಸಾಧನೆಗೆ
ಅಗ್ನಿಸೋಪಾನಂ : ಜ್ಞಾನದಿಂ ಮೇಲಲ್ತೆ, ಪೇಳ್‌,
ದಿವ್ಯ ವಿಜ್ಞಾನ!

ಇನ್ನು ಶ್ರೀ ಅರವಿಂದರ ದರ್ಶನವು ಎಷ್ಟರಮಟ್ಟಿಗೆ ‘ಶ್ರೀ ರಾಮಾಯಣದರ್ಶನಂ’ ಕೃತಿಯ ಮೇಲಾಗಿದೆ ಎಂಬುದನ್ನು ವಿವೇಚಿಸುವುದಕ್ಕೆ ಮುಂಚೆ, ಭಾರತೀಯ ದರ್ಶನ ಪರಂಪರೆಯ ಹಿನ್ನೆಲೆಯಲ್ಲಿ ಅರವಿಂದರ ವಿಶಿಷ್ಟವಾದ ತಾತ್ವಿಕ ನಿಲುವು ಏನು ಎಂಬುದನ್ನು ಸ್ಥೂಲವಾಗಿಯಾದರೂ ಗ್ರಹಿಸುವುದು ಅಗತ್ಯ. ಆದರೆ ಅದನ್ನು ಅತ್ಯಂತ ಸ್ಪಷ್ಟವಾಗಿ, ಇದು ಮಾತ್ರವೇ ಅರವಿಂದರ ವಿಶಿಷ್ಟ ಕೊಡುಗೆ ಎಂದು ನಿರ್ದೇಶಿಸುವುದು ಅತ್ಯಂತ ಕಷ್ಟ ಕೆಲಸ. ಏಕೆಂದರೆ ಅರವಿಂದರು ಸಮಸ್ತ ಭಾರತೀಯ ತತ್ವಪರಂಪರೆಯನ್ನೂ ಮೈಗೂಡಿಸಿಕೊಂಡವರು. ಅನೇಕ ಚಿಂತನ ಧಾರೆಗಳು ಪ್ರವಹಿಸಿ ಆಗಿರುವ ಸಾಗರ ಅವರು. ಅಲ್ಲಿ ಇಂಥ ನದಿಯ ನೀರು ಇಷ್ಟು ಮಾತ್ರ ಹರಿದಿದೆ, ಹರಿಯುತ್ತಿವೆ, ಇಲ್ಲಿ ಅದು ಮುಗಿದು ಮತ್ತೊಂದು ನದಿಯ ನೀರು ಕಾಣಿಸಿಕೊಳ್ಳುತ್ತವೆ ಎಂದು ಗೆರೆಯೆಳೆದು ತೋರಿಸುವುದಕ್ಕಾಗುವುದಿಲ್ಲ. ವೇದ, ಉಪನಿಷತ್ತುಗಳಿಂದ ಪ್ರಾರಂಭವಾಗಿ, ಸಾಂಖ್ಯ, ಯೋಗಾದಿಗಳನ್ನು ಒಳಗೊಂಡು, ಆಧುನಿಕ ಋಷಿ ಪರಂಪರೆಯ ಶ್ರೀ ರಾಮಕೃಷ್ಣ ಪರಮಹಂಸ, ಶ್ರೀ ಸ್ವಾಮಿ ವಿವೇಕಾನಂದ ಮುಂತಾದವರ ದರ್ಶನ ಸಮಸ್ತವೂ ಅವರ ಅನುಭೂತಿಯ ಭಾಗವಾಗಿದೆ, ಅವರ ಅಭಿವ್ಯಕ್ತಿಯ ಅಂಗವಾಗಿದೆ. ಆದರೂ ಅವರು ಯಾವುದನ್ನು ಪೂರ್ಣಯೋಗ ಎಂದು ಕರೆಯುತ್ತಾರೆಯೋ ಅದರ ಲಕ್ಷಣಗಳನ್ನು ಹೀಗೆ ನಿರೂಪಿಸಬಹುದು : ಒಂದು ಅತೀತ ಶಕ್ತಿ ಈ ವ್ಯಕ್ತ ಜಗತ್ತಿನ ಸಮಸ್ತವನ್ನು ವ್ಯಾಪಿಸಿದೆ. ಹಾಗೆ ವ್ಯಾಪಿಸಲು ಅದು ಜಗತ್ತಿಗೆ ಅವತರಿಸಿದೆ. ಅದು ಚೇತನ ಸ್ವರೂಪ. ಜಡದರಲ್ಲಿಯೂ ಅದು ಸ್ಪಂದಿಸುತ್ತಿದೆ. ಹಾಗೆ ನೋಡಿದರೆ ಜಡ ಎಂಬುದು ಇಲ್ಲವೇ ಇಲ್ಲ. ಎಲ್ಲವೂ ಪ್ರಕಟವಾಗಿಯೋ ಅಪ್ರಕಟವಾಗಿಯೋ ಚೈತನ್ಯವೇ ಆಗಿರುವಾಗ ಈ ಜಗತ್ತು ಮಿಥ್ಯೆ ಅಥವಾ ಮಾಯೆಯೆಂದು ನಿರಾಕರಿಸುವುದು ಸಾಧ್ಯವಿಲ್ಲದ ಮಾತು. ಮರ್ತ್ಯವು ಅಮರ್ತ್ಯವಾಗಬೇಕು, ಜಡದಲ್ಲಿ ಅಡಗಿರುವ ಚೈತನ್ಯವು ವ್ಯಕ್ತವಾಗಬೇಕು, ಆಗಿಯೇತೀರುತ್ತದೆ. ಅದಕ್ಕಾಗಿ ಸಮಸ್ತ ಸಾಧಕರ ಸಾಧನೆಯೂ ನಡೆಯುತ್ತಿರಬೇಕು. ಇದು ಅವರ ದರ್ಶನದ ತಿರುಳು ಎಂದು ಹೇಳಬಹುದು. ಇಂಥ ದರ್ಶನದ ಪ್ರಭಾವ ಶ್ರೀ ಕುವೆಂಪು ಅವರ ಮೇಲೆ, ಅವರ ಮೇರು ಕೃತಿಯಾದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದ ಮೇಲೆ ಎಷ್ಟರಮಟ್ಟಿಗೆ ಆಗಿದೆ? ಇದಕ್ಕೆ ಉತ್ತರ ಹೇಳುವುದು ಕಷ್ಟಸಾಧ್ಯವಾದದ್ದೇ. ಏಕೆಂದರೆ ಶ್ರೀ ಅರವಿಂದರು ಯಾವ ದರ್ಶನ ಪರಂಪರೆಯ ಜ್ಞಾನ ರಾಶಿಗೆ ಉತ್ತರಾಧಿಕಾರಿಯಾಗಿದ್ದರೋ ಶ್ರೀ ಕುವೆಂಪು ಅವರೂ ಅದೇ ದರ್ಶನ ಪರಂಪರೆಯ ಜ್ಞಾನ ರಾಶಿಗೆ ಉತ್ತರಾಧಿಕಾರಿಗಳಾಗಿ ಅದರ ಪೂರ್ಣ ಪ್ರಯೋಜನವನ್ನು ಪಡೆದುಕೊಂಡಿದ್ದರು. ಕಳೆದ ನಲವತ್ತೈದು ವರ್ಷಗಳಲ್ಲಿ ಕುವೆಂಪು ಅವರು ಲೆಕ್ಕವಿಲ್ಲದಷ್ಟು ಸಲ ಶ್ರೀ ಅರವಿಂದರ ಕಾವ್ಯವೈಭವವನ್ನೂ ದರ್ಶನದ ಶಿಖರ ಮೌಲ್ಯವನ್ನು ನನಗೆ ವಿವರಿಸಿ ಹೇಳಿದ್ದಾರೆ. ಒಂದು ದಿನವಂತೂ ಹೀಗೆಂದರೆ : “ನೋಡಿ ಶ್ರೀ ರಾಮಕೃಷ್ಣರು ತಮ್ಮ ಅನುಭೂತಿಯನ್ನು ಒಂದು ಸರಳವಾದ ಮಾತಿನಲ್ಲಿ ವರ್ಣಿಸಿರುವುದಕ್ಕೆ ವ್ಯಾಖ್ಯಾನ ರೂಪವಾಗಿರುತ್ತದೆ. ಶ್ರೀ ಅರವಿಂದರ ಮೂವತ್ತು ಪುಟಗಳ ಬರಹ!” ಅನಂತರ ಹೇಳಿದರು, “ಯಾವುದು ನಮಗೆ ಹೃದಯ ಗ್ರಾಹ್ಯವಾಗಿತ್ತೋ ಅದನ್ನು ಅರವಿಂದರು ಬುದ್ಧಿಯಿಂದ ಸಮರ್ಥಿಸಿ ನಮ್ಮ ತಿಳುವಳಿಕೆ ಸರಿಯಾದದ್ದು ಎಂದು ಧೈರ್ಯ ತುಂಬುತ್ತಾನೆ.” ಅರವಿಂದರ ಪ್ರಭಾವ ತಮ್ಮ ಮಹಾಕಾವ್ಯದ ಮೇಲೆ ಆಗಿದೆಯೇ ಎಂಬ ಪ್ರಶ್ನೆ ಕವಿಗೆ ಕೂಡ ಉತ್ತರಿಸುವುದಕ್ಕೆ ಕಷ್ಟದ ಸ್ವರೂಪದ್ದಾಗಿತ್ತು. ಹೌದು ಅಥವಾ ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಏಕೆಂದರೆ ಅವರು ಅರವಿಂದರ ಕೃತಿಗಳನ್ನು ಓದಲು ತೊಡಗಿದ್ದು ೧೯೪೨ರ ಸುಮಾರಿಗೆ. ಆ ವೇಳೆಗೆ ಶ್ರೀರಾಮಾಯಣ ದರ್ಶನಂ ರಚನೆ ಅರ್ಧಕ್ಕಿಂತಲೂ ಹೆಚ್ಚು ಪೂರೈಸಿತ್ತು. ಆದರೂ ತಮ್ಮ ಕೃತಿಯ ಕೆಲವುಸಂದರ್ಭಗಳಿಗೂ ಅರವಿಂದರ ದರ್ಶನದ ಅಂಶಗಳಿಗೂ ಸಾಮ್ಯವಿದೆ ಎಂಬುದನ್ನು ಅವರು ಒಪ್ಪುತ್ತಿದ್ದರು.

ಹಾಗೆ ಸಾಧ್ಯವಿರುವ ಒಂದೆರಡು ಸಂದರ್ಭಗಳನ್ನು ಈಗ ನೋಡೋಣ. ಶ್ರೀ ಅರವಿಂದರ “ಸಾವಿತ್ರಿ” ಮಹಾಕಾವ್ಯವು. ಅವರ “ದಿ ಲೈಫ್‌ಡಿವೈನ್‌” ಅಥವಾ “ದಿವ್ಯ ಜೀವನ” ಎಂಬ ದರ್ಶನ ಕೃತಿಗಳಲ್ಲಿ ವ್ಯಕ್ತವಾಗಿರುವ ಅರವಿಂದರ ತತ್ವ-ಸಿದ್ಧಾಂತಗಳಿಗೆ ಪ್ರತಿಮಾ ರೂಪವನ್ನು ನೀಡಿದ ಕೃತಿಯಾಗಿದೆ. ತಮ್ಮ ಶ್ರೀ ರಾಮಾಯಣ ದರ್ಶನಂ ಕಾವ್ಯವನ್ನು ಕುರಿತು ಕವಿ ಹೇಳುವ ಈ ಮಾತುಗಳನ್ನು ಗಮನಿಸಿ :

ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ
ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ

ಮೇರುಕೃತಿ, ಮೇಣ್‌ಜಗದ್ಭವ್ಯ ರಾಮಾಯಣಂ! ಹೊರಗೆ ನಡೆದ ಘಟನೆಗಳಿಗೆ, ಎಂದರೆ ಐತಿಹಾಸಿಕ ಘಟನೆಗಳಿಗೆ ಕನ್ನಡಿ ಹಿಡಿದು ಅವು ಹೇಗೆ ನಡೆದುವೋ ಹಾಗೆ ತೋರಿಸುವ ಲೌಕಿಕ ಚರಿತ್ರೆ ಅಲ್ಲ ಇದು. ಅಲೌಕಿಕವಾದ, ಎಂದರೆ ಆಧ್ಯಾತ್ಮಿಕವಾದ, ನಿತ್ಯಸತ್ಯಗಳನ್ನು ಪ್ರತಿಮಿಸುವ, ಎಂದರೆ ಅವುಗಳನ್ನು ಪ್ರತಿಮಾ ರೂಪವಾಗಿ ಚಿತ್ರಿಸುವ ಸತ್ಯಸ್ಯ ಸತ್ಯ ಕಥನ ಇದು ಎಂದು ಕವಿ ಹೇಳಿದ್ದಾರೆ. ಅಲ್ಲಿಯೇ ಮುಂದೆ ಕುವೆಂಪು ನಿತ್ಯರಾಮಾಯಣದ ದಿವ್ಯ ಚೇತನಗಳನ್ನು ನಿತ್ಯಶಕ್ತಿಗಳನ್ನು ತಮ್ಮ ಕೃತಿಯಲ್ಲಿ ನೆಲಸಲು ಆಹ್ವಾನಿಸುತ್ತಿರುವ ಭಾಗದಲ್ಲಿ ಅರವಿಂದರ ಅತಿಮನಸ್‌ತತ್ವದ ಸೂಚನೆ ಸ್ಪಷ್ಟವಾಗಿ ದೊರಕುತ್ತದೆ.

ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ಚರಿಸುತನ್ನ ಮಯಕವತರಿಸೆ;
ಶ್ರೀರಾಮನಾ ಲೋಕದಿಂದವತರಿಸಿ ಬಂದು
ಲೋಕ ಸಂಭವೆಯನೆಮ್ಮ ಭೂಜಾತೆಯಿಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋರ್ಚಿಚ್ಛಕ್ತಿಯಂ
ರಾವಣಾವಿದ್ಯೆಯೀ ನಮ್ಮ ಮತ್ಯಪ್ರಜ್ಞೆತಾಂ
ತನ್ನ ತಮದಿಂ ಮಕ್ತಮಪ್ಪುದು ದಿಟಂ, ನಿಮ್ಮ
ದೀಪ್ಯದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್‌!
ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್‌!

ಲೋಕದಲ್ಲಿ ಅತಿಮನಸ್ಸು-Overmind ಅವತರಿಸುತ್ತದೆ, ಜಡದಲ್ಲೂ ಸುಪ್ತವಾಗಿರುವ ಚೇತನವನ್ನು ಅದನ್ನು ಅದು ವಿಕಾಸಗೊಳಿಸುತ್ತದೆ ಎಂಬುದು ಅರವಿಂದರು ಪ್ರತಿಪಾದಿಸುವ ತತ್ವ The Life Divine ತಮ್ಮ ಕೃತಿಯಲ್ಲಿ ಅವರು ಹೇಳಿದ್ದಾರೆ: As life and mind have been released in matter, so too must in their time these greater powers of the concealed Godhead emerge from the involution and their supreme Light descend into us from the involution and their supreme Light descend into us from above-ಪ್ರಾಣಶಕ್ತಿ ಮತ್ತು ಮನಸ್ಸುಗಳು ಹೇಗೆ ಜಡದಿಂದ ಬಿಡುಗಡೆ ಹೊಂದಿವೆಯೋ ಹಾಗೆ, ತೆರೆಯ ಮರೆಯಲ್ಲಿ ಅಡಗಿರುವ ದಿವ್ಯತೆಯು ಸಂಕೋಚನದಿಂದ ಹೊರಹೊಮ್ಮಬೇಕು ಅಲ್ಲದೆ. ಪರಮವಾದ ಬೆಳಕು ಮೇಲಿನಿಂದ ನಮ್ಮಲ್ಲಿಗೆ ಅವತರಿಸಿ ಬರಬೇಕು.” ಅನ್ನಮಯ, ಪ್ರಾಣಮಯ, ಮನೋಮಯಗಳು, ವಿಜ್ಞಾನ ಮತ್ತು ಆನಂದಮಯ ಕೋಶಗಳೊಂದಿಗೆ ಉಪನಿಷತ್ತುಗಳಲ್ಲಿ ವರ್ಣಿತವಾಗಿರುವುಂಥವು. ಅರವಿಂದರು ಮತ್ತು ಕುವೆಂಪು ಇಬ್ಬರೂ ಜೀವವು ಪರಮವಾಗುವ ಪ್ರಕ್ರಿಯೆಯಲ್ಲಿ ಆ ಕೋಶಗಳ ಆವಶ್ಯಕತೆಯನ್ನೂ ಅವು ವಹಿಸುವ ಪಾತ್ರವನ್ನೂ ಒಪ್ಪಿಕೊಂಡಿದ್ದಾರೆ. ಇಲ್ಲ ಕುವೆಂಪು ತಮ್ಮ ಇಡೀ ರಾಮಾಯಣ ಕಥಾ ಪ್ರಪಂಚವು ಹೇಗೆ, ಪರಮವು ಜಡದ ಹೃದಯಕ್ಕೆ ಅವತರಿಸುತ್ತದೆ ಎಂಬುದಕ್ಕೂ, ಜಡವು ಪರಮದ ಸ್ಥಿತಿಗೆ ಏರುತ್ತದೆ ಎಂಬುದಕ್ಕೂ ಪ್ರತಿಮೆಯಾಗಿದೆ ಎಂಬುದನ್ನು ಸೂಚಿಸಿದ್ದಾರೆ.

ವಿಶ್ವದಲ್ಲಿ ನಿತ್ಯಸತ್ಯಗಳಂತೆ ಇರುವ ನಿತ್ಯಶಕ್ತಿಗಳು ಕಥೆಯ ಲೀಲೆಯಲ್ಲಿ ಭಾಗವಹಿಸುತ್ತೇವೆ ಎಂದು ವ್ರತತೊಟ್ಟು ರಸರೂಪದಿಂದ ನಮ್ಮ ಮನೋಮಯಕ್ಕೆ, ಅಲ್ಲಿಂದ ಪ್ರಾಣಮಯ, ಅನ್ನಮಯಕೋಶಗಳಿಗೆ ಅವತರಿಸುವುದಾದರೆ, ಶ್ರೀರಾಮನು ಆ ಲೋಕದಿಂದ ಅವತರಿಸಿ ಬಂದು, ನಮ್ಮ ಭೂಜಾತೆಯಾಸ (ಎಂದರೆ ಜಡದಿಂದ ಉದ್ಭವಿಸಿದ) ಸೀತೆಯನ್ನು ವರಿಸಿ, ಆ ಮೃತ ಶಕ್ತಿಯನ್ನು ನಾಶಗೊಳಿಸಿ, ಚಿತ್‌ಶಕ್ತಿಯನ್ನು ಬೆಳೆಸಿದಂತೆ ಆಗುತ್ತದೆ. ಅಲ್ಲದೆ ನಾವು ಬರಿಯ ಜಡಶಕ್ತಿ ಎಂಬ ರಾವಣಾವಿದ್ಯೆ, ರಾವಣ ಸ್ವರೂಪದ, ರಾವಣ ಪ್ರಮಾಣದ ಅವಿದ್ಯೆ ತನ್ನ ತಮಸ್ಸಿನಿಂದ ಬಿಡುಗಡೆ ಹೊಂದುತ್ತದೆ. ಈ ರೂಪಕ ಪರಂಪರೆ ಅರವಿಂದರ ಪೂರ್ಣಯೋಗದ ತತ್ವದಿಂದ ಪ್ರೇರಿತವಾಗಿ ಮೂಡಿದೆ ಎಂದು ಹೇಳಬಹುದು.

ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಕೆಲವೊಂದು ಪ್ರಸಂಗಗಳಲ್ಲಿ, ಅಲ್ಲಿ ಬರುವ ಅಪರೂಪವೂ, ಸಾರ್ವಕಾಲಿಕ ಮೌಲ್ಯವುಳ್ಳವೂ ಆದ ಅಭಿವ್ಯಕ್ತಿಗಳಲ್ಲಿ ಅರವಿಂದರ ಪೂರ್ಣಯೋಗದ ತತ್ವವು ಪೂರ್ಣ ಪ್ರಮಾಣದಲ್ಲಿ ವ್ಯಕ್ತವಾಗಿದೆ. ಅಂಥದೊಂದು ಪ್ರಸಂಗ ಆಂಜನೇಯನಿಗೆ ದೊರೆತ ರಾಮನ ಸತ್ಯಸ್ವರೂಪದರ್ಶನ. ಅಂದಿನ ಯುದ್ಧದಲ್ಲಿ ಇನ್ನೆಂದೂ ಇಲ್ಲದ ರೀತಿಯಲ್ಲಿ ಸೋತು ‘ಹಿಂಜರಿದ ನೈಸೆ, ರಾಮಂಗೆ ಮೊರೆಯಿಡಲ್‌, ಅಂಜರಿಯದಾಂಜನೇಯಂ, ಆ ಪ್ರಭಂಜನ ಭವಂ, ಮೇಣ್‌ಚಿರಂಜೀವಿ!” ಆದರೆ ರಾಮ ಎಲ್ಲೂ ಕಾಣುತ್ತಿಲ್ಲ. ಬಹಳವಾಗಿ ಹುಡುಕಿದ ಮೇಲೆ ರಾಮನು ದೂರದಲ್ಲಿ, ಒಂದು ಬೆಟ್ಟದ ಮೇಲೋ ಎಂಬಂತೆ ಎತ್ತರದ ಸ್ಥಳದಲ್ಲಿ ನಿಂತಿದ್ದಾನೆ, ಭಯಂಕರವಾದ ತನ್ನ ಬಿಲ್ಲನ್ನು ಆಶ್ರಯಿಸಿ, ಮಾನುಷ ಪ್ರಮಾಣವನ್ನುಮ ರಿ ಬೆಳೆದಿದೆ ಅವನ ಆಕೃತಿ. ಮುಖದಲ್ಲಿ ಕಾಠಿನ್ಯ ಹೆಪ್ಪುಗಟ್ಟಿದೆ. ತಾನು ಯುದ್ಧದಲ್ಲಿ ಭಾಗಿ ಎಂಬ ಭಾವವನ್ನು ತ್ಯಜಿಸಿ, ಲಂಕೆ ಕಿಷ್ಕಿಂಧೆಗಳ ಸೇನಾ ಮಹಾಪರ್ವತಗಳುಂ ಸಂಘಟಿಸುವ ದೃಶ್ಯವನ್ನು ಪ್ರೇಕ್ಷಕನಂತೆ ನೋಡುತ್ತಾ ನಿಂತಿರುವ ರಾಮನ ದಿವ್ಯ ಭವ್ಯ ವಿಗ್ರಹವನ್ನು ಕಂಡ ಆಂಜನೇಯ ಆಶ್ಚರ್ಯ ಚಕಿತನಾದ. ಸ್ವಯಂಯೋಗಿಯಾದ ಆಂಜನೇಯನು ಮಹಾಯೋಗಪುರುಷನಾದ ರಾಮನನ್ನು ಅವನ ಆ ಸ್ಥಿತಿಯಲ್ಲಿ ಕಂಡು ಅವನನ್ನು ಅರ್ಥಮಾಡಿಕೊಂಡೆ.” ನನಗೆ ನಿನ್ನ ನಿಜ ಸ್ವರೂಪವನ್ನು ಇಷ್ಟು ಕಾಲ ತಿಳಿಸಲಿಲ್ಲ, ತೋರಿಸಲಿಲ್ಲ ಏಕೆ ಎಂದು ಗದ್ಗದಿಸಿದ ಆಂಜನೇಯನಿಗೆ ರಾಮ ಹೇಳುತ್ತಾನೆ :

ಏಳ್‌, ಮಹಾವೀರ, ನೀಲ್ಲದನ್ಯರ್ಗಿದು
ಅಗೋಚರಂ, ನಿನಗೊರ್ವನಿಗೆ ಮಾತ್ರವಲ್ಲಯ್‌,
ಪ್ರಸುಪ್ತಮಾಗಿರ್ದುದಿನ್ನೆಗಮೆನಗುವಿಣಾ ನನ್ನ
ದಿವ್ಯ ಗುಹ್ಯ ಸ್ವರೂಪಂ! ನಿನ್ನ ಪೋಲಾನುಂ
ಸುವಿಸ್ಮಿತನೆ ದಲ್‌! ಸಿದ್ಧಿ ಕಾಲಾನುವಶಿ ಕಣಾ
ಲೀಲಾ ಜಗದೊಳದಾರ್ಗಾದೊಡಂ ನನಗಿದೆ
ತಪಸ್ಯೆಯಾದುದು. ಮಂಥರೆಯೊ? ರಾವಣನೊ? ಬರಿ
ನಿಮಿತ್ತ ಮಾತ್ರರ್‌! ನನಗವರ್ಮೇಣವರ್ಗೆ ನಾಂ!

ಹೀಗೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ಇಂತಹ ಅನೇಕ ಪ್ರಸಂಗಗಳಲ್ಲಿ. ಸೂತ್ರಪ್ರಾಯವಾದ ವಾಕ್ಯಗಳಲ್ಲಿ. ಶ್ರೀ ಅರವಿಂದರ ತತ್ವಜಿಜ್ಞಾಸೆಯ, ಅನುಭೂತಿಯ ಪ್ರಭಾವವನ್ನು ಗುರುತಿಸಬಹುದು.