ವರ್ಡ್ಸ್‌ವರ್ತ್‌ನಂತೆಯೇ ಪ್ರಕೃತಿಯಿಂದ ಉನ್ಮಾದವನ್ನು ಪಡೆದಿರುವ, ಪ್ರಕೃತಿಗಾಗಿ ಹುಚ್ಚಾಗುವ, ಆದರೆ ಅದರ ಆಸ್ವಾದನೆ ಆರಾಧನೆಗಳೆರಡಲ್ಲಿಯೂ ಅವನನ್ನು ಬಹು ಹಿಂದೆ ಬಿಟ್ಟು ಮುಂದುವರಿದಿರುವ ಕುವೆಂಪು ತಮ್ಮ ಪ್ರಕೃತಿಯು ಆರಾಧನೆಯ ಹಿಂದಿರುವ ಮನೋಭಾವವನ್ನು ಹೀಗೆ ಚಿತ್ರಿಸಿದ್ದಾರೆ :

ಬಿಳಿ ಮಳಲ ರಾಶಿ ವನಪರ್ಣ ವಾರಾಶಿ
ನರ್ತಿಸುತ ಪ್ರವಹಿಸುವ ನೀಲಾಭ ಜಲರಾಶಿ
ನೀಲನೀರವ ಶಕುನದಂತಿರುವ ಆಕಾಶ.
ಎಲ್ಲವೂ ನನ್ನ ದೃಷ್ಟಿಗೆ ಆತ್ಮದಾವೇಶ
ಭಾವಗಳು, ಜಡವಲ್ಲ; ಸ್ಥೂಲವಸ್ತುಗಳಲ್ಲ
ಮೃತನಿಸರ್ಗದ ಚೇತನ ವಿಹೀನ ಶವವಲ್ಲ,
ಈಶ್ವರ ಶರೀರದಲಿ ಚಿನ್ಮಯ ಮಹಾಂಗಗಳು
ಬ್ರಹ್ಮದ ಮಹಾ ಚಿತ್ತ ಶರಧಿಯ ತರಂಗಗಳು
ಚಿಂತನೆಗಳು ನನ್ನ ಮನದಲಿ, ನನ್ನ ನಾಡಿಯಲಿ
ರಕ್ತಬಿಂದುಗಳು, ನಾನುಸಿರೆಳೆಯೆ ಮೋಡದಲಿ
ಶ್ವಾಸವಾಡುವುದು, ಅದು ಕಾರಣದಿ ಬಾಲ್ಯದಲಿ
ಮೊದಲ್ಗೊಂಡು ನಾನಿಂದುವರೆಗೂ ನಿತ್ಯದಲಿ.
ಪ್ರಕೃತಿಯಾರಾಧನೆಯ ಪರಮನಾರಾಧನೆ
ಪ್ರಕೃತಿಯೊಲ್ಮೆಯೆ ಮುಕ್ತಿಯಾನಂದ ಸಾಧನೆ;
ಎಂದರಿತು ಉದಯಾಸ್ತಗಳಲಿ, ವನಗಿರಿಗಳಲಿ, ತೆಂಗಾಳಿಯಲಿ
ರುದ್ರವರ್ಷದಲಿ, ತಿಂಗಳಲಿ
ಎಳ ಹಸುರಮೇಲೆ ಮಿರುಗುವ ಹಿಮದ ಮಣಿಗಳಲಿ
ಕಾಜಾಣ, ಕಾಮಳ್ಳಿ, ಕೋಗಿಲೆಯೆ, ಗಿಳಿಗಳಲಿ,
ಮಾನವರ ಸೌಂದರ್ಯ ಒಲುಮೆ ನೇಹಂಗಳಲಿ
ನನ್ನಿಷ್ಟದೇವತೆಯ ಗರ್ಭದ ಗುಡಿಯನು ಕಟ್ಟಿ
ತಲ್ಲೀನನಾಗಿಹೆನು ಪೂಜೆಯಲಿ
(
ತುಂಗೆಕಲಾಸುಂದರಿ)

ಶ್ರೀ ಕುವೆಂಪು ಅವರನ್ನು ಶ್ರೀ ಬೇಂದ್ರೆ, ಶ್ರೀ ಪುತಿನ ಮುಂತಾದವರೊಡನೆ ರೊಮಾಂಟಿಕ್‌ಕವಿಗಳು ಎಂದು ಕೆಲವು ಕಡೆ ಕರೆಯಲಾಗಿದೆ. ವರ್ಡ್ಸ್‌ವರ್ತ್‌, ಷೆಲ್ಲಿ, ಕೀಟ್ಸ್‌ಮುಂತಾದ ರೊಮಾಂಟಿಕ್‌ಕವಿಗಳು ಬರೆದಂತಹ ಕವನಗಳನ್ನು ಇವರೂ ರಚಿಸಿದ್ದಾರೆ ಎನ್ನುವ ಅರ್ಥದಲ್ಲಿ ಮಾತ್ರ ಇವರನ್ನು ರೋಮಾಂಟಿಕ್‌ಕವಿಗಳು ಎಂದು ನಿರ್ದೇಶಿಸಬಹುದೇ ಹೊರತು ಇನ್ನಾವ ರೀತಿಯಲ್ಲೂ ಇವರನ್ನು ರೊಮಾಂಟಿಕ್‌ಕವಿಗಳು ಎಂದು ಕರೆಯುವಂತಿಲ್ಲ. ಈ ‘ರೊಮಾಂಟಿಕ್‌’ ಎಂಬ ಪದವೇ ತೀರ ಸಂದಿಗ್ಧವೂ ಪರಸ್ಪರ ವಿರೋಧಿಯೂ ಆದ ಅರ್ಥಗಳನ್ನು ಕೊಡುವುದುದರಿಂದ ‘ರೊಮಾಂಟಿಕ್‌’ ಕಾವ್ಯ ಎಂದರೇನು ಎಂಬುದನ್ನು ವಿಚಾರಿಸುವುದು ಅಗತ್ಯವಾಗಿದೆ. ಸಾಹಿತ್ಯ ವಿಮರ್ಶೆಯ ಜಗತ್ತಿನಲ್ಲಿ ಇದರಷ್ಟು ಅಪಾರ್ಥವನ್ನೂ ಅಖ್ಯಾತಿಯನ್ನೂ ಗಳಿಸಿಕೊಂಡಿರುವ ಪದ ಬೇರೊಂದಿಲ್ಲ. ೧೯೪೧ರಲ್ಲಿ ಕೆನ್ಯನ್‌ರೆವ್ಯು (Kenyon Review) ಎಂಬ ಪತ್ರಿಕೆಯಲ್ಲಿ ಇ.ಬಿ. ಬರ್ಗಮ್ (E.B Burgum) ಒಂದು ಎಚ್ಚರಿಕೆಯನ್ನು ನೀಡಿದ : “ರೊಮಾಂಟಿಸಿಸಂ ಎಂಬುದಕ್ಕೆ ಲಕ್ಷಣ ನಿರೂಪಣೆ ಮಾಡಹೊರಟವನು ಒಂದು ಸಾಹಸ ಕಾರ್ಯದಲ್ಲಿ ತೊಡಗುತ್ತಾನೆ. ಆ ಸಾಹಸವು ಈಗಾಗಲೇ ಅನೇಕ ಬಲಿಗಳನ್ನು ತಗೆದುಕೊಂಡಿದೆ.” ಆದರೆ ಅವನ ಎಚ್ಚರಿಕೆಗೆ ಹೆದರಿ ಯಾರೂ ಆ ಸಾಹಸ್ಕೆ ಕೈ ಹಾಕುವುದನ್ನೇ ನಿಲ್ಲಿಸಲಿಲ್ಲ. ಇದನ್ನು ಕುರಿತ ಜಿಜ್ಞಾಸೆ ಒಂದು ಶತಮಾನಕ್ಕೂ ಹೆಚ್ಚುಕಾಲ ನಡೆದಿದೆ. ಈ ಪದಕ್ಕೆ ನಿಷ್ಕೃಷ್ಟವಾಗಿ ಲಕ್ಷಣ ನಿರೂಪಣೆ ನೀಡುವುದನ್ನು ಸಾಧ್ಯವೇ ಇಲ್ಲ ಎಂಬ ಘಟ್ಟವೂ ಬಂದಾಯಿತು.“ಇಂಗ್ಲಿಷ್ ರೊಮಾಂಟಿಕ್‌ಪೊಯಟ್ಸ್‌” ಎಂಬ ಪುಸ್ತಕದಲ್ಲಿ ‘ಲವ್ ಜಾಯ್‌’ ಎನ್ನುವವನು “ರೊಮಾಂಟಿಕ್‌ಎಂಬುದಕ್ಕೆ ಎಷ್ಟು ಅರ್ಥಗಳು ಕೂಡಿಕೊಂಡಿದೆ ಎಂದರೆ ತನ್ನಷ್ಟಕ್ಕೆ ಆ ಪದಕ್ಕೆ ಯಾವ ಅರ್ಥವೂ ಇಲ್ಲವೇ ಇಲ್ಲ” ಎಂದು ಬರೆದ.೩ ಆ ಪದಕ್ಕಿರುವ ಅಸಂಖ್ಯಾತವಾದ ಅರ್ಥಗಳಲ್ಲಿ ಇವು ಕೆಲವು : ಆಕರ್ಷಕ, ಅಸ್ವಾರ್ಥ, ಸಮೃದ್ಧ, ಅಲಂಕಾರಿಕ, ಅವಾಸ್ತವ, ಅತಾರ್ಕಿಕ, ಐಹಿಕ, ವ್ಯರ್ಥ, ವೀರ, ರಹಸ್ಯಮಯ ಮತ್ತು ಭಾವಮಯ, ಗಮನೀಯ ಸಂಪ್ರದಾಯ ಪಾಲಕ, ಕ್ರಾಂತಿಕಾರಿ, ಶಬ್ದಾಡಂಬರ, ಚಿತ್ರಮಯ, ರೂಪರಹಿತ, ಸಂಪ್ರದಾಯಬದ್ಧ, ಭಾವಪೂರ್ಣ, ಕಲ್ಪನಾಮಯ, ದಡ್ಡ – ಇತ್ಯಾದಿ.[1]

ಇದು ಹೋಗಲಿ ಎಂದರೆ ಪಶ್ಚಿಮದಲ್ಲೂ ರೊಮಾಂಟಿಕರು ಎಂದರೆ ಒಂದೇ ವರ್ಗದ, ಒಂದೇ ದೇಶದ ಕವಿಗಳಲ್ಲ. ಜರ್ಮನ್, ಫ್ರೆಂಚ್ ಮತ್ತು ಇಂಗ್ಲಿಷ್ ರೊಮಾಂಟಿಕ್ ಕವಿಗಳಿದ್ದಾರೆ. ವಿಮರ್ಶಕರು ಉಂಟುಮಾಡಿರುವ ಗೊಂದಲಕ್ಕೆ ಈ ರೊಮಾಂಟಿಕರೆಂದು ಹೇಳುವ ಕವಿಗಳೂ ತಮ್ಮ ಕಾಣಿಕೆಯನ್ನೂ ಯಥೇಚ್ಛವಾಗಿ ನೀಡಿದ್ದಾರೆ. ಹೆಚ್ಚಿನ ವಿವರಗಳಿಗೆ ಹೋಗದೆ ಸ್ಥೂಲವಾಗಿ ಈ ಕಾವ್ಯದ ಲಕ್ಷಣಗಳೇನು ಎಂಬುದನ್ನು ತಿಳಿದುಕೊಳ್ಳಬಹುದು.

೧೭೯೭ರಲ್ಲಿ ರೊಮಾಂಟಿಕ್ (romantisch)ಎಂಬುದನ್ನು ಮೊದಲ ಸಲಕ್ಕೆ ಸಾಹಿತ್ಯಕ ಸನ್ನಿವೇಶದಲ್ಲಿ ಬಳಸಿದ ಎಂಬ ಖ್ಯಾತಿಗೆ ಒಳಗಾಗಿರುವ ಫ್ರೆಡರಿಕ್‌ಷ್ಲೆಗಲ್‌(fredrich schlegel) (ಈ ಪುಣ್ಯಾತ್ಮ ರೊಮಾಂಟಿಕ್‌ಎಂದರೇನು ಎಂಬುದನ್ನು ಸುಮಾರು ೧೨೭ ಪುಟಗಳಲ್ಲಿ ವಿವರಿಸಿದ್ದೇನೆ ಎಣದು ಹೇಳಿಕೊಂಡಿದ್ದಾನೆ) ಪ್ರಕಾರ ರೊಮಾಂಟಿಕ್‌ಕಾವ್ಯ ಎಂದರೆ -ಭಾವಪೂರ್ಣವಾದ ವಸ್ತುವನ್ನು ಕಲ್ಪನಾತ್ಮಕವಾಗಿ ವರ್ಣಿಸುವಂಥದು.[2] ಆದರೆ ಮುಂದೆ ಅವನೇ ಕ್ರೈಸ್ತಮತಕ್ಕೆ ಪರಿವರ್ತನೆ ಹೊಂದಿದ ಮೇಲೆ ‘ರೊಮಾಂಟಿಕ್ ಮತ್ತು ಕ್ರೈಸ್ತ’ ಎರಡು ಒಂದೇ ಎಂದು ಬರೆದ.

ಫ್ರಾನ್ಸ್ ದೇಶದಲ್ಲೂ ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಸೌಂದರ್ಯ ಮೀಮಾಂಸೆಗೆ ಸಂಬಂಧಿಸಿದಂತೆ ದೊಡ್ಡ ಚರ್ಚೆಗಳು ನಡೆಯುತ್ತಿದ್ದಾಗ ‘ರೊಮಾಂಟಿಕ್‌’ ಎಂಬುದಕ್ಕೆ ಬಗೆ ಬಗೆಯ ಅರ್ಥಗಳು ಸೇರಿಕೊಂಡವು. ಸ್ಟೆಂಡ್ಹಲ್‌(Stendhal)ನಿಗೆ ರೊಮಾಂಟಿಕ್‌ಎಂಬುದು ಆಧುನಿಕ ಸಮಕಾಲೀನ ಎಂಬುವುಗಳಿಗೆ ಸಮಾನಾರ್ಥಕವಾಯಿತು. ಅವನ ಪ್ರಸಿದ್ಧ ವಾಕ್ಯವೊಂದುಂಟು : “ಎಲ್ಲ ಮಹಾ ಲೇಖಕರೂ ತಮ್ಮ ಕಾಲದಲ್ಲಿ ರೊಮಾಂಟಿಕರೇ.” ಅವರು ನೀಡುವ ಲಕ್ಷಣ : ಇಂದಿನ ಕಾಲದ ಆಚಾರ ನಂಬಿಕೆಗಳನ್ನು ಗಮನಿಸಿ ಜನರಿಗೆ ಅತಿ ಹೆಚ್ಚಿನ ಸಂತೋಷವನ್ನು ನೀಡುವ ಸಾಧ್ಯತೆಯಿರುವ ಸಾಹಿತ್ಯ ಕೃತಿಗಳನ್ನು ನೀಡುವ ಸಾಹಿತ್ಯ ವಿಧಾನ ರೊಮಾಂಟಿಸಿಸಂ. ಇದಕ್ಕೆ ಬದಲಾಗಿ ಇಂದಿನ ಜನರ ತಾತ-ಮುತ್ತಾತಂದಿರಿಗೆ ಅತಿ ಹೆಚ್ಚಿನ ಸಂತೋಷವನ್ನು ನೀಡುವ ಸಾಹಿತ್ಯ ರೂಪ ಕ್ಲಾಸಿಸಿಸಂ.”[3]

ಹಾಗೆ ನೋಡಿದರೆ ಈ ಪದದ ಬಗ್ಗೆ ಚರ್ಚೆ ನಡೆಸದೆ ಪಕ್ಕದಿಂದ ಹಾದು ಹೋದದ್ದು ಎಂದರೆ ಇಂಗ್ಲೆಂಡೇ. ವರ್ಡ್ಸ್‌ವರ್ತ್‌ಒಂದು ಹೊಸ ಕಾವ್ಯ ರೂಪವನ್ನು ಕುರಿತು ಹೇಳುತ್ತಿದ್ದರೂ ಲಿರಿಕಲ್‌ಬ್ಯಾಲಡ್ಸ್‌ಮುನ್ನುಡಿಯಲ್ಲಿ ಅದನ್ನು ‘ರೊಮಾಂಟಿಕ್’ ಎಂದು ಕರೆದಿಲ್ಲ. ಷೆಲ್ಲಿಯ ಡಿಫೆನ್ಸ್‌ಆಫ್‌ಪೊಯಟ್ರಿಯಲ್ಲಾಗಲೀ, ಕೋಲ್‌ರಿಜ್‌ನ ಬೈಯಗ್ರಾಫಿಯಾ ಲಿಟರೇರಿಯಾದಲ್ಲಾಗಲೀ ರೊಮಾಂಟಿಕ್‌ಎಂಬ ಮಾತಿನ ಬಳಕೆಯಿಲ್ಲ. ಕೀಟ್ಸ್‌೧೮೧೮ರಲ್ಲಿ ತನ್ನ ಸೋದರ ಜಾರ್ಜಿಗೆ ಬರೆದ ಕಾಗದದಲ್ಲಿ ಈ ಪದ ಇದೆ. ಆದರೆ ಅದಕ್ಕೆ ಸಾಹಿತ್ಯಕ ಸಂಬಂಧ ಇಲ್ಲ. (The names of romantic misses on the inn windowpanes) ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗದಲ್ಲಂತೂ ಇಂಗ್ಲೆಂಡಿನಲ್ಲಿ ಇದರ ಬಗ್ಗೆ ಚರ್ಚೆ ನಡೆಯಲೇ ಇಲ್ಲ. ೧೮೩೧ರಲ್ಲಿ ಕಾರ್ಲೈಲ್‌ಬರೆದ : ನಮ್ಮಲ್ಲಂತೂ ಈ ರೊಮಾಂಟಿಸಿಸಿಂ ಮತ್ತು ಕ್ಲಾಸಿಸಿಂ ಎಂಬುದರ ಬಗ್ಗೆ ಚರ್ಚೆಯ ತಂಟೆ ತಕರಾರೇ ಇಲ್ಲ. (Carlyle : Miscellanies, 1890. Vol. III p.71)

ಹೆಚ್ಚಿನ ವಿವರಗಳಿಗೆ ಹೋಗದೆ ರೊಮಾಂಟಿಕ್‌ಕಾವ್ಯದ – ಅಂಥದೊಂದನ್ನು ಸ್ಥೂಲವಾಗಿ ವರ್ಗೀಕರಿಸುವುದು ಸಾಧ್ಯವಾದರೆ-ಲಕ್ಷಣಗಳು ಯಾವುವು ಎಂಬುದನ್ನು ಹೀಗೆ ಸೂಚಿಸಹುಬುದು.

೧. ‘ಕಲ್ಪನೆ’ಯನ್ನು ಕುರಿತಂತೆ ವಿಕಾಸ (evolution of the imagination)

ಸಿ. ಎಂ. ಬೌರ ತನ್ನ ‘ದಿ ರೊಮಾಂಟಿಕ್‌ಇಮೇಜಿನೇಷನ್‌’ ಗ್ರಂಥದಲ್ಲಿ ಮೊದಲಿಗೆ ಹೀಗೆ ಹೇಳುತ್ತಾನೆ : “ಇಂಗ್ಲಿಷ್‌ರೊಮಾಂಟಿಕ್‌ರನ್ನು ಹದಿನೆಂಟನೆಯ ಶತಮಾನದ ಕವಿಗಳಿಂದ ಭಿನ್ನ ಎಂದು ತೋರಿಸುವ ಒಂದು ಲಕ್ಷಣ ಈ ಕವಿಗಳು ‘ಕಲ್ಪನೆ’ಗೆ ನೀಡಿದ ಪ್ರಾಧಾನ್ಯ ಮತ್ತು ಅವರು ಅದನ್ನು ನೋಡಿದ ವಿಶೇಷ ದೃಷ್ಟಿ” (The Romantic Imagination : Sir Maurice Bowra).

ಫಿಕ್ಟೆಯ ವಸ್ತುನಿಷ್ಠ ತಾತ್ವಿಕತೆ (The subjective philosophy of Fichte) ಪಶ್ಚಿಮದ ರೊಮಾಂಟಿಕ್‌ಕವಿಗಳ ಮೇಲೆ ಪ್ರಭಾವ ಬೀರಿತ್ತು. ಜಗತ್ತಿನ ಅಸ್ತಿತ್ವ ಮತ್ತು ಆಕಾರ ಸಂಪೂರ್ಣವಾಗಿ ವ್ಯಕ್ತಿಗತ ಕಲ್ಪನೆಯ ದೃಷ್ಟಿ ಅಥವಾ ಕಾಣ್ಕೆಯನ್ನು ಅವಲಂಬಿಸಿದೆ ಎಂಬುದು ಫಿಕ್ಟೆಯ ತಾತ್ವಿಕತೆಯ ತಿರುಳು. ಬ್ಲೇಕ್‌ಕವಿ ಪ್ರಶ್ನಿಸಿದ : ಸೂರ್ಯ ಉದಯಿಸುವಾಗ ‘ಗಿನಿ’ಯಂತಹ ಬೆಂಕಿಯ ಗೋಳ ನಿನಗೆ ಕಾಣಿಸದೆ? ಅದಕ್ಕೆ ಉತ್ತರ : ಇಲ್ಲ ಇಲ್ಲ, ಅಸಂಖ್ಯಾತ ಗಗನ ಚರರ ಗುಂಪು-‘ದಿವ್ಯ, ದಿವ್ಯ, ದಿವ್ಯ-ಆ ಸರ್ವಶಕ್ತಿ ಜಗದೀಶ್ವರ ಎಂದು ಘೋಷಿಸುತ್ತಿದ್ದಾರೆ : ‘ಹೀಗೆ ಅದು ನನಗೆ ಕಾಣುತ್ತಿದೆ.’ [When the Sun rises, do you not see a round disc of fire somewhat like a guinea ? O, No, No-I see an innumerable company of the Heavenly host crying “Holy, Holy, Holy is the Lord God Almighty”-Vision of the Last Judgement].

ಕುವೆಂಪುರವರ ಪಂಕ್ತಿಯನ್ನು ಬ್ಲೇಕನ ಪಂಕ್ತಿಯೊಂದಿಗೆ ಹೋಲಿಸಿ.

(ರವಿ) : ಚಿನ್ನದ ಚೆಂಡೆನೆ ಮೂಡುವನು ; ಹೊನ್ನನೆ ಹೊಯ್ನೀರೆ ನೀಡುವನು ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯಮಾಡುವನು.

ಫುಲ್ಲ ಕುಸುಮ ಫಣಾ ಜಟಿ
ಪವನ ಲೀಲಾಲೋಲ ಕಟಿ
ಕುಣಿಯುತಿಹಳೊ ಲತಾನಟಿ
ಪ್ರೇಮ ಮಧೂನ್ಮಾದಿನಿ
ನೆನೆ ರತಿಯಂ : ಲಾಸ್ಯದ ಸತಿ
ನೆನೆ ಶಿವನಂ : ತಾಂಡವ ಯತಿ;
ಮತಿಯಂತೆಯೆ ಮರೆವುದೊ ಗತಿ
ನಿಖಿಲ ರಸಾಹ್ಲಾದಿನಿ

ಪ್ರತಿಭೆಯ ಪರಮ ಪ್ರಾಮಾಣ್ಯವನ್ನು-ರೊಮಾಂಟಿಕರಂತೆಯೇ ಕುವೆಂಪು ಒಪ್ಪಿದವರು. ಹೀಗೆಂದ ಮಾತ್ರಕ್ಕೆ ಅವರು ಈ ಅಂಶದಲ್ಲಿ ರೊಮಾಂಟಿಕರಿಂದ ಪ್ರಭಾವಿತರಾದವರು ಎಂದಾಗುವುದಿಲ್ಲವಷ್ಟೆ-ನಮ್ಮ ಕಾವ್ಯಮೀಮಾಂಸಕರು ಪ್ರತಿಭೆಗೆ ಕೊಟ್ಟ ಸ್ಥಾನವನ್ನು ಮತ್ತೆ ನಿರೂಪಿಸುವ ಅವಶ್ಯಕತೆಯಿಲ್ಲ.

ಬ್ಲೇಕ್‌ಇದಕ್ಕೆ ತಾನೇ ವ್ಯಾಖ್ಯಾನ ಮಾಡಿದ್ದಾನೆ. “ಒಂದು ದೃಶ್ಯವನ್ನು ಕುರಿತಂತೆ ಒಂದು ಕಿಟಕಿಯನ್ನು ನಾನು ಹೇಗೆ ಪ್ರಶ್ನಿಸುವುದಿಲ್ಲವೋ ಹಾಗೆಯೇ ಈ ನನ್ನ ಭೌತಿಕವಾದ ಕಣ್ಣನ್ನು ಪ್ರಶ್ನಿಸುವುದಿಲ್ಲ. ನಾನು ಅದರ ಮೂಲಕ ನೋಡುತ್ತೇನೆಯೇ ಹೊರತು ಅದರಿಂದ ನೋಡುವುದಿಲ್ಲ. (I question not my corporeal or vegetative eye anymore than I would question a window concerning a sight. I look though it and not with it.)

ಹಾಗಾದರೆ ಈ ಕವಿಗಳು ನೋಡಿದ್ದು ಯಾವುದರಿಂದ- ಎಂದರೆ ಯಾವುದರ ನೆರವಿನಿಂದ? ಪ್ರತಿಭೆಯ ಕಣ್ಣಿನ ನೆರವಿನಿಂದ. ಇದರಿಂದ ಅವರು ವಸ್ತುವಿನ ಹೊರ ಮೈಯ ಆಚೆಗೆ ಅಥವಾ ಒಳಗೆ ಇರುವ, ಅಂತಸ್ಥವಾದ ಭಾವನಾಸ್ವರೂಪವನ್ನು ಕಾಣಬಲ್ಲವರಾದರೂ. ಬದಲಾಗುತ್ತಿರುವ, ತೋರಿಕೆಯ ನಮ್ಮ ವ್ಯಾವಹಾರಿಕ ಜಗತ್ತಿಗೂ ಬದಲಾಗದ ಅನಂತವಾದ ಸತ್ಯ ಮತ್ತು ಸೌಂದರ್ಯಗಳ ಸೀಮೆಗೂ ಇರುವ ಅಂತರವನ್ನು ಅವರು ಅರಿತರು. ಮಾನವನೇ ಅದನ್ನು ಕಲ್ಪನೆಯ (ಪ್ರತಿಭೆಯ) ಮೂಲಕ ಕಾಣಬಲ್ಲ ಎಂದರು. (Romanticism : Lilian R. Furst).

Dejection odeನಲ್ಲಿ ಕೋಲ್ರೀಜ್
Ah ! from the soul itself must issue forth
A light, a glory, a fair luminous cloud.
ಎಂದಾಗ ಅವನ ಮನಸ್ಸಿನಲ್ಲಿದ್ದದ್ದು ಮುಂದಿನ ಪದ್ಯದಲ್ಲಿ ಬರುವ
My shaping spirit of imagination.

ಇದೇ- ಜಡ ಶೀತಲ ಜಗತ್ತಿಗೆ ಅರ್ಥವನ್ನು ಹರಿಯಿಸುವಂಥದು. ಕೋಲ್‌ರಿಜ್‌ನ ಬೈಯಗ್ರಾಫಿಯಾ ಲಿಟರೇರಿಯಾದ ಮುಖ್ಯ ವಸ್ತು ಈ ‘ಪ್ರತಿಭೆ’ ಷೆಲ್ಲಿಯ ಡಿಫೆನ್ಸ್‌ಆಫ್‌ಪೊಯಟ್ರಿ ಕುರಿತು ಹೇಳುವುದೂ ಇದನ್ನೇ. ಅಲ್ಲಿ ಷೆಲ್ಲಿ ಕಾವ್ಯವು ಪ್ರತಿಭೆಯ ಅಭಿವ್ಯಕ್ತಿ- The expression of the imagination ಎನ್ನುತ್ತಾನೆ.

ಹಾಗೆಯೇ ವರ್ಡ್ಸ್‌ವರ್ತ್‌ಕಾವ್ಯವು ‘ಪ್ರತಿಭೆ ಮತ್ತು (ರಸ) ಭಾವಗಳ ಕ್ರಿಯೆ’ ಎನ್ನುತ್ತಾನಷ್ಟೆ ಹೀಗೆ ಸೃಜನಶೀಲ ಪ್ರತಿಭೆಯ (Creative Imagination) ಕಲ್ಪನೆ ರೊಮಾಂಟಿಕ್‌ಕವಿಗಳನ್ನು ಇತರರಿಂದ ಬೇರ್ಪಡಿಸುವ ಸ್ಪಷ್ಟವಾದ ಅಂಶ. ಇದು ಎಲ್ಲರಿಗೂ ಸಮಾನವಾದ ಅಂಶ. ಆದರೆ ಪಶ್ಚಿಮದಲ್ಲಿ ‘ರೊಮಾಂಟಿಕ್‌ಕವಿಗಳು’ ಎಂದರೆ ಎಲ್ಲರನ್ನೂ ಒಂದೇ ಗುಂಪಿನಲ್ಲಿ ಸಾರಾಸಗಟಾಗಿ ಸೇರಿಸುವುದಕ್ಕೆ ಬರುವುದಿಲ್ಲ. ಅವರ ಕಾವ್ಯದ ಲಕ್ಷಣಗಳೂ ಯಾವಾಗಲೂ ಒಂದೇ ಅಲ್ಲ. ಅವರ ಗುಂಪುಗಳು ಹೀಗಿವೆ ;

ಜರ್ಮನ್‌ರೊಮಾಂಟಿಕರು ; ಅವರಲ್ಲಿ ಎರಡು ಗುಂಪು. (Fruh romantic (The Early Romantics) ಮತ್ತು Hochromantic (The High Romantics) ಮೊದಲನೆಯದುor die Jungere Romantik (The Younger Romantics) ಮೊದಲನೆಯದು ಪ್ರಪ್ರಥಮ ಯೂರೋಪಿಯನ್‌ರೊಮಾಂಟಿಕ್‌ರ ಗುಂಪು. ೧೭೯೭ರಿಂದ ಹತ್ತೊಂಬತ್ತನೆಯ ಶತಮಾನದ ಮೊದಲ ವರ್ಷಗಳವರೆಗೆ-ಎರಡನೆಯ ಗುಂಪಿನವರ ಅವಧಿ ೧೮೧೦-೨೦.

ಫ್ರೆಡ್ರಿಕ್‌ಷ್ಲೆಗೆಲ್‌ಮತ್ತು ಆಗಸ್ಟ್‌ವಿಲ್ಹೆಂ- ಈ ಸೋದರರನ್ನು ಕೇಂದ್ರವಾಗಿ ಉಳ್ಳ ಮೊದಲನೆಯ ಗುಂಪು-ತಾವು ಒಂದು ಗುಂಪಾಗಿ ಕಲಾಕೃತಿಗಳನ್ನು ರಚಿಸುತ್ತಿದ್ದೇವೆ ಎಂಬ ಅರಿವಿದ್ದದ್ದು. ಅವರ ದೃಷ್ಟಿಯ ಮುಖ್ಯ ಲಕ್ಷಣಗಳು : ವ್ಯಕ್ತಿ ಮುಖ್ಯ, ವ್ಯಕ್ತಿಯನ್ನು ಸ್ನೇಹದ ಮೂಲಕ ಸಮೀಪಿಸಬಹುದು. ಅವರ ಆಸಕ್ತಿ ತತ್ವಶಾಸ್ತ್ರ, ಕಾವ್ಯ, ಮತಧರ್ಮ, ರಾಜನೀತಿ ಮತ್ತು ಪ್ರಕೃತಿವಿಜ್ಞಾನ ಇತ್ಯಾದಿ. ಪುರೋಮಾಂಟಿಕರು – ಮುಂಜಾವಿನಲ್ಲಿ ಎಷ್ಟು ಕಪ್ಪೆಗಳನನು ಹಿಡಿಯಲು ಹೋಗಿ, ಹಿಡಿದು ತಂದು ತಮ್ಮ ಗುಂಪಿನ ವಿಜ್ಞಾನಿ ಸದಸ್ಯರಿಗೆ ಕೊಡುತ್ತಿದ್ದರಂತೆ, ಅವರ ಪ್ರಯೋಗಗಳಿಗೆ ಸಾಮಗ್ರಿಯಾಗಿ. ಈ ಗುಂಪಿನಲ್ಲಿದ್ದವರು ವಾಕಿನ್‌ರಾಡರ್‌, ಲೀಕ್‌ಮತ್ತು ನುವಾಲಿಸ್‌ಮೊದಲಾದ ಕವಿಗಳಷ್ಟೇ ಅಲ್ಲ ಷಷ್ಲೀಲೆಯರ್‌ಮಾಕರ್‌ಎಂಬ ಧರ್ಮಚಿಂತಕ, ಷೆಲ್ಲಿಂಗ್‌ಮತ್ತು ಮಾಡರ್‌ಮುಂತಾದ Natural Philosophers ಮತ್ತು ರಿಟರ್‌ನಂತಹ ಭೌತಶಾಸ್ತ್ರಜ್ಞರೂ ಕೂಡ ಜರ್ಮನರಿಗಿದ್ದ ಸಾಂಪ್ರದಾಯಿಕವಾದ ಸಂಸ್ಕೃತಿ ಗೀಳು – (traditional German mania for culture) ಮಾತ್ರವೇ ಈ ಗುಂಪಿನ ಸದಸ್ಯರ ಸಮಾನ ಪ್ರವೃತ್ತಿ ಅಲ್ಲ- ರೊಮಾಂಟಿಸಿಸಂ ಎಂದರೆ-ಕಾವ್ಯದಿಂದ ಹೊಮ್ಮಿ-ಎಂದರೆ ಕಾವ್ಯದ ಮೂಲಕವಾಗಿ ಇಡೀ ಜಗತ್ತನ್ನೇ ಪರಿವರ್ತಿಸುವ (ಅವರ ಮಾತಿನಲ್ಲಿ ಎಂದರೆ ಕಾವ್ಯೀಕರಿಸುವ) ಪೂರ್ಣ ಅಸ್ತಿತ್ವವಾದ ಮೂಲವಾದ ಪುನರೆ ಮೌಲ್ಯೀಕರಣ (It stemmed from a view of Romanticism as a total existentialist revolution that was to radiate outwards from poetry to transform. (Poeticize was their word) the whole world – Romanticism : Lilian R. Furst)

ಕುವೆಂಪು ಅವರ ಕೃತಿಗಳಲ್ಲಿ ಈ ಎರಡು ಅಂಶಗಳೂ ಉಂಟು. ಭರತ ಖಂಡದ ಸಂಸ್ಕೃತಿಯ ಬಗ್ಗೆ ಅವರಿಗೆ ಅತೀವ ಪರೇಮ-ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಅರ್ಧದಲ್ಲಿ ಭಾರತವನ್ನೆಲ್ಲ ವ್ಯಾಪಿಸಿದ್ದ ಈ ಸಂಸ್ಕೃತಿ ಮೋಹ-ವ್ಯಾಧಿಯ ಮಟ್ಟಕ್ಕೆ ಏರಿದ್ದು ಅದರಿಂದ ಕುವೆಂಪು ಮಾತ್ರ ಪಾರಾಗುವುದು ಸಾಧ್ಯವಿರಲಿಲ್ಲ ; ಅವರ ಗಣೇಶ ಗಾಥಾ (ಅಗ್ನಿಹಂಸ) ಕವನದ ಪಂಕ್ತಿಗಳು ಇವು :

ಬೇರೆ ನಾಡುಗಳಿಗೆಲ್ಲಿಗೆ ಹೋಗು
ವಂಚನೆ ಕೋಟಲೆ ಹಿಂಸೆಯ ಕೂಗು
ಇನ್ನುಳಿದಾರೊಳೆ ವೇದ ಉಪನಿಷತ್
ಭಾರತ ರಾಮಾಯಣಗಳ ರಸ ಸತ್‌?

ಕಾವ್ಯದ ಮೂಲಕ-ಸೌಂದರ್ಯದ ಆರಾಧನೆಯ ಮೂಲಕ, ಇಡೀ ಜಗತ್ತಿನ ಅಲ್ಲವಾದರೂ ಸ್ವಲ್ಪ ಜನರ ಮನಸ್ಸಾದರೂ ಬದಲಾವಣೆಯಾಗಬಹುದು ಎಂಬ ನಂಬಿಕೆ ಕುವೆಂಪು ಅವರಿಗಿದೆ.

ಲೋಕದಲಿ ದುಃಖವಿರೆ
ದುಃಖದೊಳಗರ್ಧ ಹೃದಯ ದಾರಿದ್ರ್ಯದಿಂ
ಬಂದಿಹುದು ಹೀನ ದೀನ ದಾರಿದ್ರ್ಯಮಂ
ಪರಿಹರಿಸಿದರ್ಶನ ದಯೆಗೈಯ ಕಲೆಯಿಹುದು
ಕಲೆಯಿಂದ ಜಡವು ಚೇತನವಾಗಿ, ಜೀವನದ
ನೀರಸತೆ ಕಿಡಿಯಾಗಿ, ಪ್ರವಹಿಸುವುದು ನೂತನದ
ಚಿರವಾಗಿಭುವನ ಕವಿವರ ಕವನವೀ ಸೃಷ್ಟಿ ;
ಭವನ ಶಿಲ್ಪಿಯ ಚಿತ್ರ ಕೃತಿ ಭುವನ ಗಾಯಕನ
ಸುಮಧುರ ಮಹಾಗಾನ ಸವಿಯದಿರೆ. ನೋಡದಿರೆ
ಕೇಳದಿರೆ, ಬದುಕಿದ್ದರೂ ನಾವು ಸತ್ತಂತೆ
(
ಪ್ರಕೃತಿ ಉಪಾಸನೆ : ಪಕ್ಷಿಕಾಶಿ)

ಇಂಗ್ಲಿಷ್‌ರೊಮಾಂಟಿಕ್‌ಕವಿಗಳು :- ಇವರನ್ನು ಒಂದು ವರ್ಗಕ್ಕೆ ಸೇರಿಸುವುದು ಕಷ್ಟದ ಕೆಲಸ. ವರ್ಡ್ಸ್‌ವರ್ತ್‌ನ ಗುಂಪು (೧೭೯೮-೧೮೦೬)- ವರ್ಡ್ಸ್‌ವರ್ತ್‌, ಸ್ಟೊವೆ, ಗ್ರಾಸೆಮಿಯರ್‌, ಕೋಲ್‌ರಿಜ್‌, ಕ್ರ್ಯಾಬ್‌ಮತ್ತು ಕ್ಲಾರೆ. ಎರಡನೆಯದು ಸ್ಯಾಬ್‌ಗುಂಪು: (೧೮೦೫-೧೮೧೦)-ಕ್ಯಾಂಪಬೆಲ್‌, ಮೂರ್‌, ಸದೆ-ಇವರದು ಸಂಪ್ರದಾಯನಿಷ್ಠ ಕಥನ ಕಾವ್ಯ. ಮೂರನೆಯದು ಷೆಲ್ಲಿ ಗುಂಪು. (೧೮೧೮-೨೨) ಬೈರನ್‌ಕೀಟ್ಸ್‌ಇವರದು ಸ್ವಾತಂತ್ರ್ಯ, ಸೌಂದರ್ಯಗಳ ಮಹಿಮೆಯ ಕೊಂಡಾಟ-ಈ ರೀತಿ ವರ್ಗೀಕರಣ.

ಇಂಗ್ಲಿಷ್‌ರೊಮಾಂಟಿಕ್‌ಕಾವ್ಯದ ಪ್ರಧಾನ ಲಕ್ಷಣ-ವ್ಯಕ್ತಿವಾದ- individualism-ಅದರಿಂದಲೇ ಅದರ ವೈವಿಧ್ಯ ; ಶಕ್ತಿ, ನೂತನತೆಗಳು. ಜರ್ಮನರ ಗುಂಪು ಯತ್ನಕ್ಕಿಂತ ಇದು ಭಿನ್ನವಾದದ್ದು. (Group effort)-ಏಕೆ? –ಇಂಗ್ಲಿಷ್‌ ಮನಸ್ಸು ಬೇರೆಯಾಗಿದ್ದದು ಇದಕ್ಕೆ ಕಾರಣ. ಫ್ರೆಂಚರು ನಿಯೋಕ್ಲಾಸಿಸಂ ವಿರುದ್ಧ ನಡೆಸಿದ ಹೋರಾಟದ ಅಗತ್ಯವಾಗಲೀ ಇಂಗ್ಲಿಷ್‌ಕವಿಗಳಿಗೆ ಇರಲಿಲ್ಲ. ಆದ್ದರಿಂದಲೇ ಇಂಗ್ಲಿಷ್‌ರೊಮಾಂಟಿಸಿಸಂ ನಿಧಾನವಾಗಿ ವಿಕಾಸವಾಯಿತು ಎಂದು ಹೇಳುವುದು. ಜರ್ಮನ್‌ಅಥವಾ ಫ್ರೆಂಚ್‌ಕವಿಗಳಿಗಿದ್ದ ತೀವ್ರ ಪ್ರತಿಭಟನಾ ಮನೋಭಾವ ಇಂಗ್ಲಿಷ್‌ಕವಿಗಳಲ್ಲಿ ಸಾಮಾನ್ಯವಾಗಿ ಕಾಣುವುದಿಲ್ಲ. ಎನ್‌. ಫ್ರೈ (N. Frye : English Romantic Poets. P.65) ಹೇಳುವಂತೆ ಇಂಗ್ಲಿಷ್‌ಕವಿಗಳಿಗೆ ನಾವು ಈ ದೇಶದ ಪರಂಪರೆಗೆ ಸೇರಿದವರು, ಇದನ್ನು ಉಳಿಸಿ ಬೆಳೆಸಬೇಕಾದವರು ಎಂಬ ಭಾವನೆಯಿದೆ.

ಕಾವ್ಯ ಎಂಬುದರ ಬಗೆಗೂ ಅವರಿಗೆ ಇರುವ ಕಲ್ಪನೆ ಉದಾತ್ತವಾದದ್ದು. ಕಲ್ಪನೆ ಅಥವಾ ಪ್ರತಿಭೆಯ ಶಕ್ತಿ ಸಾಮರ್ಥ್ಯಗಳನ್ನು ಕುರಿತಂತೆ ಅವರಿಗೆ ಅಪಾರವಾದ ನಂಬಿಕೆಯುಂಟು. ಕಾವ್ಯ ಶೈಲಿಯ ಬಗೆಗೆ ಅವರ ತೀವ್ರ ಕಾಳಜಿಯುಂಟು. ವಾಸ್ತವ ಮತ್ತು ಭಾವನೆ (ಆದರ್ಶ) Real and the ideal ಇವುಗಳ ಸಂಬಂಧವೂ ಅವರಿಗೆ ಸ್ಪಷ್ಟವಾಗಿ ಉಂಟು. ಆದರೆ ಇವೆಲ್ಲ ಸಾಮೂಹಿಕ ಭಾವನೆಗಳಲ್ಲಿ ವ್ಯಕ್ತಿಗೆ ನೇರವಾಗಿ ಸಂಬಂಧಿಸಿದ್ದು.

“ಹೀಗೆ ಇಂಗ್ಲಿಷ್‌ರೊಮಾಂಟಿಕ್‌ತತ್ವವು ವರ್ಡ್ಸ್‌ವರ್ತ್‌ನ ಪ್ರಕೃತಿ ಸಾಮೀಪ್ಯದ ವಾಸ್ತವಿಕತೆಯನ್ನೂ ಷೆಲ್ಲಿಯ ದಾರ್ಶನಿಕ ಅತೀತತ್ವವನ್ನೂ ಒಳಗೊಳ್ಳಬಲ್ಲದ್ದಾಗಿದೆ. ತನ್ನ ಸ್ವಾತಂತ್ರ್ಯ ಪ್ರವೃತ್ತಿಯಿಂದಾಗಿ ಅದು ಅನೇಕ ಧ್ವನಿಪೂರ್ಣ ವಿಮರ್ಶಾ ಭಾವನೆಗಳನ್ನೂ ಶ್ರೀಮಂತವಾದ ಕಾವ್ಯ ಸಮೃದ್ಧಿಯನ್ನೂ ಸೃಷ್ಟಿಸಲು ಸಮರ್ಥವಾಯಿತು”[4]

ಕುವೆಂಪು ಅವರ ಕೃತಿಗಳಲ್ಲಿ ಇಂಗ್ಲಿಷ್‌ರೊಮಾಂಟಿಕ್‌ಕವಿಗಳ ಈ ಎಲ್ಲ ಅಂಶಗಳೂ ಕಾಣಸಿಗುತ್ತವೆ. ‘ವ್ಯಕ್ತಿ’ ಅಥವಾ ‘ಕವಿ’ ‘ನಾನು’ ಅವರ ಭಾವಗೀತೆಗಳಲ್ಲಿನಂತೆ ಬೇರೆ ಕನ್ನಡ ಕವಿಗಳ ಕಾವ್ಯದಲ್ಲಿ ಎದ್ದು ಕಾಣುವುದು ನಮ್ಮ ಗಮನಕ್ಕೆ ಬಂದಿಲ್ಲ. ಪ್ರಕೃತಿ ಪ್ರೇಮ, ದಾರ್ಶನಿಕತೆ, ಕಲ್ಪನೆ ಅಥವಾ ಪ್ರತಿಭೆಯ ಪರಮೋಚ್ಛಸ್ಥಾನದ ಬಗ್ಗೆ ನಂಬಿಕೆ ಇವುಗಳಿಗೆ ನಿದರ್ಶನ ನೀಡುವ ಅಗತ್ಯ ಇಲ್ಲ.

ಫ್ರೆಂಚ್ ರೊಮಾಂಟಿಕರು : ಕಾಲದ ದೃಷ್ಟಿಯಿಂದ ಇದು ಕೊನೆಗೆ ಬರುವ ವರ್ಗ ಇವರಲ್ಲಿ ಮೊದಲನೆಯ ಕವನ ಸಂಕಲನ ಪ್ರಕಟವಾಗದದ್ದು ೧೮೨೦ರಲ್ಲಿ. Lamertine Na Meditations Poetique.

ಫ್ರಾನ್ಸಿನ ಕ್ರಾಂತಿ ನಡೆದದ್ದು ೧೭೮೯ರಲ್ಲಿ ಅವರ ರೊಮಾಂಟಿಕ್‌ಕಾವ್ಯ ಇದರೊಂದಿಗೆ ಹೆಣೆದುಕೊಂಡಿದೆ. ‘ಹೊಸ ಸಮಾಜಕ್ಕಾಗಿ ಹೊಸ ಕಾವ್ಯ’ (For a new society, a new literature) ಎಂಬ ಘೋಷಣೆಯೊಂದು ಪ್ರಚಲಿತವಾಗಿತ್ತು.

ಇಂಥಿಂಥ ಕಡೆ – ಈ ಕೆಲವು ಪಂಕ್ತಿಗಳಿಗೂ ಕುವೆಂಪು ಅವರ ಇಂಥ ಪಂಕ್ತಿಗಳಿಗೂ ಸಾಮ್ಯವಿದೆ ಎಂದು ಈಗಾಗಲೇ ವಿಮರ್ಶಕರು ತೋರಿಸಿದ್ದಾರೆ. ಕುವೆಂಪು ಅವರ ಕಾಲಕ್ಕೆ ಇಂಗ್ಲಿಷ್‌ಮೂಲಕವಾಗಿ ದೊರೆಯಬಹುದಾಗಿದ್ದ ಪಶ್ಚಿಮದ ಶ್ರೇಷ್ಠ ಕೃತಿಗಳಲ್ಲಿ ಬಹುಭಾಗವನ್ನು ಇಂಗ್ಲಿಷಿನ ಶ್ರೇಷ್ಠ ಸಾಹಿತ್ಯದ ಬಹು ಭಾಗದಂತೆಯೇ ಓದಿದ್ದವರು. ಅವರ ಕಾವ್ಯಗಳಲ್ಲಿ ಪಶ್ಚಿಮದ ಕವಿಗಳ ಪ್ರಭಾವ ಇರುವುದು ಅನಿವಾರ್ಯ, ಆದರೆ ಅತ್ಯಲ್ಪ ಅವರ ಸತ್ವಶಾಲಿಯಾದ ಬರವಣಿಗೆ ಸರ್ವತಂತ್ರ ಸ್ವತಂತ್ರವಾದದ್ದು, ಪ್ರಕೃತಿ ಪ್ರೇಮದ ವಿಷಯದಲ್ಲಿ ಅವರ ಮನಸ್ಸು ಪಶ್ಚಿಮದ ಕಾವ್ಯಗಳನ್ನು ಒದುವುದಕ್ಕೆ ಮುಂಚೆಯೇ ರೂಪಿತವಾದದ್ದು ಎಂದು ಸೂಚಿಸಿದ್ದಾಗಿದೆ. ಇನ್ನು ಅಧ್ಯಾತ್ಮದ ವಿಷಯದಲ್ಲಿ ಅವರು ಪಶ್ಚಿಮದಿಂದ ಕಲಿಯಬೇಕಾದದ್ದೂ ಏನೂ ಇರಲಾರದು ಎಂದು ಸ್ಪಷ್ಟವಾಗಿ ಹೇಳಬಹುದು.[5]

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] Burgum : Classic, Romantic and Modern. Samplings of Modern Usage.

[2] (e)ist eben das romantische, was uns einen sentimentalen staff in einer phantastichen form darotelt = that is romantic which depicts emotional matter in an imaginative form.

[3] All the great writers were romantic in their day.

[4] Romanticism is the art of offering people the literary works likely to give them the greatest possible pleasure, to their great grand parents. (Racine et shakesphere. P. 45)

[5] Thus English Romanticism can embrance both the relism of Wordsworth’s adherence to nature and the idealism of Shelley’s visionary transcendentalism. Because of its very freedom it produced a large number of critical ideas as well as a Wealth of fine poetry.-Romaticism : Lilian R Frust. P.49.